ಶುಕ್ರವಾರ, ಏಪ್ರಿಲ್ 29, 2016

ರಂಗಾಯಣ ಬೆತ್ತಲುಗೊಳಿಸಿ ‘ಬಾಂಬೆ’ ತೋರಿಸಿದ “ತಮಾಶ” :


ತಮಾಶ ತುಂಬಾ ಬರೀ ತಮಾಶಾ; ಏನೂ ಇಲ್ಲಾ ಬಾಕಿ ವಿಷ್ಯಾ :



17ನೇ ಶತಮಾನದಿಂದಲೂ ಮರಾಠಿಯಲ್ಲಿ ಬಲು ಜನಪ್ರೀಯವಾದ ಜಾನಪದ ರಂಗಪ್ರಕಾರ ತಮಾಶಾ. ಬರುಬರುತ್ತಾ ವೃತ್ತಿ ಕಂಪನಿ ಶೈಲಿಯನ್ನೂ ಮೈಗೂಡಿಸಿಕೊಂಡು ಮಹಾರಾಷ್ಟ್ರದಲ್ಲಿ ಸಮೃದ್ಧವಾಗಿ ಬೆಳೆದ ಈ ಪ್ರಕಾರದ ನಾಟಕವನ್ನು ಮೊದಲ ಬಾರಿಗೆ ಕನ್ನಡದಲ್ಲಿ ಪ್ರಯೋಗಿಸುವ ಸಾಹಸವನ್ನು ಧಾರವಾಡದ ರಂಗಾಯಣವು ಮಾಡಿದೆ. ಮನರಂಜನೆಯನ್ನೇ ಉದ್ದೇಶವಾಗಿಟ್ಟುಕೊಂಡು ಪ್ರಸ್ತುತಗೊಂಡಿರುವ ತಮಾಶ ನೋಡುಗರನ್ನು ನಗಿಸುವ ಪ್ರಯತ್ನವನ್ನು ಮಾಡುತ್ತದೆ. 

ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ಬೆಂಗಳೂರು ಕೇಂದ್ರವು ಗುರುನಾನಕ್ ಭವನದಲ್ಲಿ 2016, ಎಪ್ರಿಲ್ 20 ರಿಂದ 29 ರವರೆಗೆ ಆಯೋಜಿಸಿದ ದಕ್ಷಿಣ ಭಾರತ ರಂಗೋತ್ಸವ ದಲ್ಲಿ ತಮಾಶ ನಾಟಕವು ಎಪ್ರಿಲ್ 23ರಂದು ಪ್ರಯೋಗಗೊಂಡಿತು. ಮರಾಠಿ ಭಾಷೆಯಲ್ಲಿ ತಮಾಶ ನಾಟಕವನ್ನು ಬರೆದು ನಿರ್ದೇಶಿಸಿದ್ದ ಬಾಂಬೆಯ ಪ್ರೊ ಗಣೇಶ್ ಚಂದನ್ ಶಿವೆಯವರನ್ನೇ ಕನ್ನಡ ಭಾಷೆಯಲ್ಲಿ ನಾಟಕ ನಿರ್ದೇಶಿಸಿಲು ಧಾರವಾಡಕ್ಕೆ ಆಹ್ವಾನಿಸಿದ ರಂಗಾಯಣವು ತಮಾಶ ನಾಟಕವನ್ನು ನಿರ್ಮಿಸಿದೆ. ಈ ನಾಟಕವನ್ನು ಡಿ.ಎಸ್.ಚೌಗಲೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ

ಹಾಡು, ಸಂಗೀತ, ನೃತ್ಯದ ಜೊತೆಗೆ ಹಾಸ್ಯ... ಇವುಗಳನ್ನೆಲ್ಲಾ ಸೇರಿಸಿ ಹೊಸೆದಿರುವ ಈ ನಾಟಕವೆಂಬ ನಾಟಕವು ಏನಾದರೂ ಮಾಡಿ ಜನರ ಮನ ರಂಜಿಸಬೇಕು ಎನ್ನುವ ತನ್ನ ಉದ್ದೇಶದಲ್ಲಿ ಭಾಗಶಃ ಸಫಲವಾಗಿದೆ. ಈ ನಾಟಕಕ್ಕೆ ಕಥೆಯ ಚೌಕಟ್ಟಿನ ಹಂಗಿಲ್ಲ, ನಾಟಕದಲ್ಲಿ ನಾಟಕೀಯತೆ ಇಲ್ಲ,  ದೃಶ್ಯದಿಂದ ದೃಶ್ಯಕ್ಕೆ ಯಾವುದೇ ಸಂಬಂಧಗಳಿಲ್ಲ, ಚಿತ್ತ ಬಂದತ್ತ ಹರಿದಾಡುವ ಈ ನಾಟಕವು ನಾಟಕವೇ ಅಲ್ಲ. ಗಾನವಿನೋದಿನಿಯಂತಹ ಹಾಸ್ಯರಸಮಂಜರಿ ತಂಡದವರು ಜನರನ್ನು ನಗಿಸಲು ಹಾಡು, ಸಂಗೀತ, ನೃತ್ಯಗಳ ಜೊತೆಗೆ ಕಾಮಿಡಿ ದೃಶ್ಯಗಳನ್ನು ಅಭಿನಯಿಸಿ ತೋರಿಸುತ್ತಾರಲ್ಲಾ ಹೆಚ್ಚು ಕಡಿಮೆ ಈ ತಮಾಶ ಸಹ ಹಾಗೆಯೇ ಮೂಡಿಬಂದಿದೆ.

ಯಾವುದನ್ನೂ ಕ್ರಮಬದ್ಧವಾಗಿ ನೆಟ್ಟಗೆ ಹೇಳದೇ ಎಲ್ಲವನ್ನೂ ಕಲಸುಮೇಲೋಗರ ಮಾಡಲಾಗಿದ್ದು, ರಂಜನೆಗಾಗಿ ಹಸಿದ ಪ್ರೇಕ್ಷಕರಿಗೆ ಹಾಸ್ಯರಸಾಯನದ ಬದಲು ಬೇರೆ ಭಾಷೆಯಿಂದ ಕಡತಂದ ಹಳಸಲು ಚಿತ್ರಾನ್ನವನ್ನು ಬಡಿಸಲಾಗಿದೆ.  ವಿಷಯವೇ ಇಲ್ಲದ ನಾಟಕದಾದ್ಯಂತ ಬರೀ ವಿಷಯಾಂತರಗಳೇ ತುಂಬಿವೆ. ಸುದೀರ್ಘವಾದ ಸಂಗೀತ, ನಾಂದಿ ಹಾಡು ಹಾಗೂ ನೃತ್ಯದ ನಂತರ ಮಥುರೆಯ ಗೊಲ್ಲತಿಯರನ್ನು ಕಾಡುವ ಆಧುನಿಕ ಕೃಷ್ಣನ ದೃಶ್ಯದೊಂದಿಗೆ ಆರಂಭವಾದ ನಾಟಕವು ನಂತರ ಆ ವಿಷಯವನ್ನು ಅಲ್ಲಿಯೇ ಬಿಟ್ಟು ನಾಲ್ಕೈದು ಜನ ವಿದೂಷಕರಂತವರಿಂದ ಹಳೆಯ ಬಾಲಿಷ ಜೋಕುಗಳ ಅಭಿನಯ ಆರಂಭಿಸಲಾಗುತ್ತದೆ. ಈ ಅಸಂಬದ್ಧ ಸ್ಟ್ಯಾಂಡಪ್ ಕಾಮಿಡಿ ಶೋ ಮುಗಿಯುವಷ್ಟರಲ್ಲಿ ನಾಟಕದ ಪೂರ್ವಾರ್ಧ ಮುಗಿದು ಉತ್ತರಾರ್ಧ ಆರಂಭವಾಗುತ್ತದೆ. ಹುಚ್ಚು ರಾಜ, ತಿಕ್ಕಲು ಮಂತ್ರಿ, ಅಧಿಕಪ್ರಸಂಗಿ ಸಿಪಾಯಿಗಳು ಮಾಡುವ ಮತ್ತೊಂದು ಸುತ್ತು ಹಾಸ್ಯ ದೃಶ್ಯಗಳು ಆರಂಭಗೊಂಡು ನಡುವೆ ರೈತನೊಬ್ಬ ಗೋಳು ತೋಡಿಕೊಂಡು ಮುಗಿಯುವಷ್ಟರಲ್ಲಿ ನಾರದನ ಪ್ರವೇಶ. ಇಲ್ಲಿಗೆ ನಾಟಕ ಮುಕ್ಕಾಲು ಭಾಗ ಮುಗಿದು ಇನ್ನುಳಿದ ಕಾಲು ಭಾಗದಲ್ಲಿ ಅಸಲಿ ಜಾನಪದ ಮಾದರಿಯ ದೃಶ್ಯವೊಂದು ಶುರುವಾಗುತ್ತದೆ. ಖಂಡೋಬ ದೇವನ ಹೆಂಡತಿಯ ತಲೆಯಲ್ಲಿ ಅನುಮಾನದ ಬೀಜ ಬಿತ್ತುವ ನಾರದನ ತಂತ್ರ ಫಲಿಸಿ ಪಗಡೆಯಲ್ಲಿ ಸೋತ ಖಂಡೋಬ ಹನ್ನೆರಡು ವರ್ಷ ವನವಾಸಕ್ಕೆ ಹೋಗುತ್ತಾನೆ. ಚಂದನಪುರಕ್ಕೆ ತೆರಳಿ ಕುರುಬಳಲ್ಲಿ ಅನುರಕ್ತನಾಗಿ ಮದುವೆಯಾಗುತ್ತಾನೆ. ಕೊನೆಗೆ ನಾಟಕಕ್ಕೆ ಸಂಬಂಧವೇ ಇಲ್ಲದ ಸಂದೇಶವನ್ನು ಕಲಾವಿದರಿಂದ ಹೇಳಿಸುವ ಮೂಲಕ ತಮಾಶ ನಾಟಕ ಪರಿಸಮಾಪ್ತಿಯಾಗುತ್ತದೆ. ಇದನ್ನೊಂದು ನಾಟಕ ಎಂದು ಒಪ್ಪಿಕೊಳ್ಳುವುದೇ ತಮಾಶೆಯ ವಿಷಯವಾಗಿ ನೋಡುಗರಿಗೆ ಕಾಡುತ್ತದೆ.

ತಮ+ಆಶಾ=ತಮಾಶಾ. ಅಂದರೆ ಕತ್ತಲೆಯಿಂದ ಬೆಳಕಿನತ್ತ ಕೊಂಡೊಯ್ಯುವುದು ಎಂದರ್ಥ. ತಮಾಶಾ ಎಂದರೆ ತಮಾಶೆ ಮಾಡುವುದೊಂದೇ ಎಂದು ತಪ್ಪಾಗಿ ಅರ್ಥೈಸಿಕೊಂಡಂತಿರುವ ಧಾರವಾಡ ರಂಗಾಯಣದ ನಿರ್ದೇಶಕರಾದ ಪ್ರಕಾಶ ಗರುಡರವರು ಚೌಗಲೆಯವರ ಆತ್ಮೀಯತೆಯ ಒತ್ತಡದಿಂದಾಗಿ ತಮಾಶ ನಾಟಕವನ್ನು ತೆಗೆದುಕೊಂಡಿದ್ದಾರೆ. ಇಡೀ ನಾಟಕವನ್ನು ಜಾಲಾಡಿದರೂ ಎಲ್ಲಿಯೂ ಪ್ರೇಕ್ಷಕರನ್ನು ಆಲೋಚನೆಗೆ ಪ್ರೇರೇಪಿಸುವ ಅಂಶಗಳಿಲ್ಲ. ಪ್ರಸ್ತುತ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನಗಳಿಲ್ಲ, ಕತ್ತಲೆಯಿಂದ ಬೆಳಕಿಗೆ ಪ್ರೇಕ್ಷಕರ ಆಲೋಚನೆಯನ್ನು ತೆಗೆದುಕೊಂಡು ಹೋಗುವುದು ಈ ನಾಟಕದ ಉದ್ದೇಶವೂ ಅಲ್ಲ. ಹೋಗಲಿ ತತ್ವ ತರ್ಕಗಳೆಲ್ಲವನು ಬದಿಗಿಟ್ಟು ಶುದ್ಧ ಮನರಂಜನೆಯಾದರೂ ದಕ್ಕಿತಾ ಎಂದರೆ ಅದೂ ಆಗಲಿಲ್ಲ. ಮನರಂಜನೆ ಎಂದರೆ ನೋಡುಗರ ಮನಸ್ಸನ್ನು ರಂಜಿಸುವುದು ಎಂಬುದು ಸರಳಾರ್ಥ. ಆದರೆ ಪ್ರೇಕ್ಷಕರ ಮನಸ್ಸನ್ನು ರಂಜಿಸುವ ಬದಲು ವಿಕೃತಗೊಳಿಸಿದರೆ ಅದಕ್ಕೆ ಮನರಂಜನೆ ಎನ್ನುವುದಾದರೂ ಹೇಗೆ? ದ್ವಂದ್ವಾರ್ಥ ಸಂಭಾಷಣೆಗಳು ಹಾಗೂ ಹಾಸ್ಯತುಣುಕುಗಳು ನೋಡುಗರ ಮನಸಲ್ಲಿ ವಿಕೃತಾನಂದವನ್ನು ಹುಟ್ಟಿಸಿದರೆ ಅದು ಮನರಂಜನೆ ಹೇಗಾದೀತು?

ಈ ನಾಟಕವನ್ನು ಬೇರೆ ಯಾವುದಾದರೂ ರಂಗತಂಡ ಬರೀ ಮನರಂಜನೆಯ ಉದ್ದೇಶದಿಂದ ಮಾಡಿದ್ದರೆ ಸಿಕ್ಕಷ್ಟು ನಗುವನ್ನು ದಕ್ಕಿಸಿಕೊಂಡು ಸುಮ್ಮನಿರಬಹುದಾಗಿತ್ತು.  ಆದರೆ ಈ ನಾಟಕವನ್ನು ಮಾಡಿದ್ದು ಸರಕಾರಿ ಕೃಪಾಪೋಷಿತ ಧಾರವಾಡ ರಂಗಾಯಣ. ಲಕ್ಷಾಂತರ ರೂಪಾಯಿ ಜನತೆಯ ಹಣವನ್ನು ಖರ್ಚು ಮಾಡಿ ಅಪಹಾಸ್ಯ ಪ್ರಧಾನವಾದ ನಾಟಕವನ್ನು ಮಾಡಿದ್ದಾದರೂ ಯಾಕೆ ಎನ್ನುವ ಪ್ರಶ್ನೆ ಪ್ರಜ್ಞಾವಂತ ನೋಡುಗರನ್ನು ಕಾಡದೇ ಇರದು. ನಾಟಕದ ಪೂರ್ವಾರ್ಧದಲ್ಲಿ ಬೇಕಾದಷ್ಟು ದ್ವಂದ್ವಾರ್ಥ ಸಂಭಾಷಣೆ ಹಾಗೂ ದೃಶ್ಯಗಳು ತುಂಬಿವೆ. ರಂಗಾಯಣದ ಇತಿಹಾಸದಲ್ಲೇ ಯಾರೂ ಇಂತಹ ದ್ವಂದ್ವಾರ್ಥದ ನಾಟಕವನ್ನು ಮಾಡಿಸಿಲ್ಲ. ಹಳೆಯ ಜೋಕ್ಸ್‌ಗಳನ್ನೇ ಕ್ರ್ಯಾಕ್ ಮಾಡಿ ಅದಕ್ಕೊಂದಿಷ್ಟು ಹಾಡು ನೃತ್ಯ ಸೇರಿಸಿ ನಾಟಕವೆಂದು ಕಟ್ಟಿಕೊಟ್ಟಿಲ್ಲ. ಬಿ.ವಿ.ಕಾರಂತರು ಕಟ್ಟಿದ ರಂಗಾಯಣಕ್ಕೆ ತನ್ನದೇ ಆದ ಘನತೆ ಗೌರವ ಇದೆ. ಅದು ಮಾಡುವ ನಾಟಕಗಳಲ್ಲಿ ಮನರಂಜನೆಯ ಜೊತೆಗೆ ಸಾಮಾಜಿಕ ಕಳಕಳಿ ಮತ್ತು ಬದ್ಧತೆ ಇರುತ್ತದೆ ಹಾಗೂ ಇರಬೇಕು. ರಂಜನೆಯ ಮೂಲಕ ಬೋಧನೆಯನ್ನು ಮಾಡುವ ಉದ್ದೇಶದಿಂದ ರಂಗಾಯಣ ಹುಟ್ಟಿದೆ. ಅಂತಹುದರಲ್ಲಿ ದ್ವಂದ್ವಾರ್ಥಗಳ ನಾಟಕವನ್ನು ಮಾಡಿ ಅಪಹಾಸ್ಯ ತುಣುಕಗಳನ್ನು ಸೇರಿಸಿ ಇದನ್ನೇ ನಾಟಕವೆಂದು ತೋರಿಸುವುದು ರಂಗಭೂಮಿಯಲ್ಲಿ ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದಾಗಿದೆ. ರಾಜ್ಯಸರಕಾರದ ಅನುದಾನಿತ ರಂಗಾಯಣ ಇಂತಹ ನಾಟಕ ಮಾಡಬಾರದಿತ್ತು ಮಾಡಿದೆ.. ಆದರೆ ಕೇಂದ್ರ ಸರಕಾರದ ಕೃಪಾ ಪೋಷಿತ ಎನ್‌ಎಸ್‌ಡಿ ಬೆಂಗಳೂರು ವಿಭಾಗಕ್ಕೆ ಏನಾಗಿತ್ತು. ದಕ್ಷಿಣ ಭಾರತದ ರಂಗೋತ್ಸವಕ್ಕೆ ಆಯ್ಕೆ ಮಾಡಿ ಒಂದು ಲಕ್ಷ ರೂಪಾಯಿ ಜನತೆಯ ಹಣವನ್ನು ಈ ನಾಟಕ ಪ್ರದರ್ಶನಕ್ಕೆ ಕೊಟ್ಟಿದ್ದಾದರೂ ಯಾಕೆ? ಎನ್ನುವ ಪ್ರಶ್ನೆಯನ್ನು ಈ ನಾಟಕ ಹುಟ್ಟುಹಾಕುತ್ತದೆ.

ಇಂತಹುದೇ ನಕಾರಾತ್ಮಕ ಕಾರಣಗಳಿಂದಾಗಿ ವೃತ್ತಿ ಕಂಪನಿ ರಂಗಭೂಮಿ ತನ್ನ ಪ್ರಭಾವವನ್ನು ಕಡಿಮೆಗೊಳಿಸಿಕೊಂಡಿತು. ವೃತ್ತಿ  ಕಂಪನಿಯ ದೌರ್ಬಲ್ಯಗಳನ್ನು ಕಿತ್ತು ಹಾಕಿ, ಉತ್ತಮ ಅಂಶಗಳನ್ನು ಎತ್ತಿಕೊಂಡು ಅದ್ಭುತವಾದ ನಾಟಕಗಳನ್ನು ಬಿ.ವಿ.ಕಾರಂತರು ಕಟ್ಟಿಕೊಟ್ಟಿದ್ದರು. ಅದೇ ವೃತ್ತಿ ರಂಗಭೂಮಿಯ ದೌರ್ಬಲ್ಯಗಳನ್ನೇ ಪ್ರಮುಖ ವಾಗಿಟ್ಟುಕೊಂಡು ಧಾರವಾಡ ರಂಗಾಯಣವು ನಾಟಕವನ್ನು ನಿರ್ಮಿಸಿದೆ ಎಂದರೆ ಇದು ಕಾರಂತರಿಗೆ ಮಾಡುವ ಅವಮರ್ಯಾದೆಯಾಗಿದೆ. ರಂಗಾಯಣವನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸಲೆಂದೇ ಇರುವ ರಂಗಸಮಾಜದ ಸದಸ್ಯರಾಗಿರುವ ಡಿ.ಎಸ್.ಚೌಗಲೆಯವರೇ ಇಂತಹ ದ್ವಂದ್ವಾರ್ಥಮಯ ಅಪಹಾಸ್ಯದ ನಾಟಕವನ್ನು ಅನುವಾದ ಮಾಡಿ ನಿರ್ಮಾಣ ಮಾಡಲು ಧಾರವಾಡ ರಂಗಾಯಣದ ನಿರ್ದೇಶಕರಾದ ಪ್ರಕಾಶ ಗರೂಡರವರಿಗೆ ಒತ್ತಾಯಿಸಿದ್ದು ವಿಪರ್ಯಾಸಕರವಾಗಿದೆ.

ತಮಾಶ ನಾಟಕದಲ್ಲಿ ಭಾಷೆಯ ಕಲಬೆರಕೆ ಬೇಕಾದಷ್ಟಿದೆ. ನಾಟಕದಾದ್ಯಂತ ಇಂಗ್ಲೀಷ್, ಹಿಂದಿ, ತಮಿಳು, ತೆಲುಗು, ಮರಾಠಿ ಭಾಷೆಯ ಬಳಕೆ ವ್ಯಾಪಕವಾಗಿವೆ. ಅಷ್ಟೇ ಯಾಕೆ ತಮಿಳು ತೆಲುಗು ಸಿನೆಮಾದ ಜನಪ್ರೀಯ ಡೈಲಾಗ್‌ಗಳನ್ನು ಪಾತ್ರಗಳಿಂದ ಹೇಳಿಸಲಾಗಿದೆ. ಹೀಗಾಗಿ ಇದೊಂದು ಬಹುಭಾಷಾ ನಾಟಕ ಎನ್ನುವಂತಾಗಿದೆ. ಕನ್ನಡ ನಾಟಕ ಎಂದು ಹೇಳಿದರೂ ಆರಂಭದ ನಾಚತರಂಗಿಣಿ ನಾಂದಿ ಗೀತೆಯಿಂದ ಹಿಡಿದು ಕೊನೆವರೆಗೂ ಮೂರ‍್ನಾಲ್ಕು ಮರಾಠಿ ಹಾಡುಗಳನ್ನು ಮೂಲ ಭಾಷೆಯ ನಾಟಕದಿಂದ ಯಥಾವತ್ತಾಗಿ ಹಾಡಲಾಗಿದೆ. ಈ ಕನ್ನಡ ನಾಟಕದಲ್ಲಿ ಭಾಷೆಯನ್ನು ಅದೆಷ್ಟು  ಕಲಬೆರಕೆ ಮಾಡಬೇಕೋ ಅಷ್ಟೆಲ್ಲಾ ಮಾಡಲಾಗಿದೆ. ಇಲ್ಲಿ ಪೌರಾಣಿಕ ಪಾತ್ರಗಳೂ ಇಂಗ್ಲೀಷ್ ಶಬ್ಧಗಳನ್ನು ಬಳಸುತ್ತವೆ.  ಭಾಷೆಯ ಬಳಕೆಗೆ ಕಾಲಘಟ್ಟಕ್ಕೂ ಸಂಬಂಧವೇ ಇಲ್ಲದಂತಾಗಿದೆ.

ನಾಟಕದ ವಸ್ತು ವಿಷಯ ಹಾಗೂ ಪ್ರಸ್ತುತಿಯ ಬಗ್ಗೆ ಭಿನ್ನಾಭಿಪ್ರಾಯವಿದ್ದರೂ ಅಭಿನಯ ವಿಭಾಗ ಮಾತ್ರ ಇಡೀ ನಾಟಕದ ಜೀವಾಳವಾಗಿದೆ. ನಗೆ ನಾಟಕಗಳಿಗೆ ಡೈಲಾಗ್ ಪಂಚ್ ಹಾಗೂ ಟೈಮಿಂಗ್ ಬಹಳ ಮುಖ್ಯವಾಗುತ್ತದೆ. ಪ್ರತಿಯೊಬ್ಬ ನಟ ನಟಿಯರೂ ವಾಚಿಕ ಹಾಗೂ ಆಂಗಿಕಾಭಿನಯದಲ್ಲಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ನಟನೆಯಲ್ಲಿ ಪೋರ್ಸ ಇದೆ. ಮಾತಿನ ಶೈಲಿಯಲ್ಲಿ ತಾಕತ್ತಿದೆ. ಹೀಗಾಗಿ ಈ ನಾಟಕ ನೋಡುಗರನ್ನು ನಗಿಸುವ ತನ್ನ ಉದ್ದೇಶದಲ್ಲಿ ಸಫಲವಾಗಿದೆ.  ನಿರ್ದೇಶಕರು ನಟರನ್ನು ಪಾತ್ರವಾಗಿ ಪಳಗಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ನಾಲ್ಕು ನಟಿಯರಿಗೆ ಮರಾಠಿಯ ತಮಾಶಾ ಶೈಲಿಯ ನೃತ್ಯವನ್ನು ಅದ್ಭುತವಾಗಿ ಸಂಯೋಜನೆ ಮಾಡಲಾಗಿದೆ. ಇಡೀ ನಾಟಕದಲ್ಲಿ ಜೋಕು ಮಾರರನ್ನು ಹೊರತುಪಡಿಸಿ ನೋಡಲೇ ಬೇಕಾದದ್ದು ಏನಾದರೂ ಇದ್ದರೆ ಅದು ನೃತ್ಯವೊಂದೇ. ಕೇಳಲೇ ಬೇಕಾದದ್ದು ಏನಾದರೂ ಇದ್ದರೆ ಅದು ಮರಾಠಿ ವೃತ್ತಿಕಂಪನಿ ಮಾದರಿಯ ಸಂಗೀತವಷ್ಟೇ. ವ್ಯಾಪಕವಾಗಿ ಹಾಡು ಸಂಗೀತವನ್ನು ಬಳಸಲಾಗಿದೆ. ಆದರೆ.. ಕೆಲವೊಮ್ಮೆ ಡೋಲಕ್ಕಿನ ಅಬ್ಬರದಲ್ಲಿ ನಟರ ಮಾತುಗಳೇ ಸಪ್ಪೆಯೆನಿಸುವಂತಿವೆ.

ಮರಾಠಿ ಹಾಡುಗಳನ್ನು ಕನ್ನಡಕ್ಕೆ ಅನುವಾದ ಮಾಡಿದ ರೀತಿ ಊಟದಲ್ಲಿ ಕಲ್ಲು ಬಂದಂತೆ ಭಾಸವಾಗುತ್ತದೆ. ಕಾವ್ಯಮಯವಾಗಿರಬೇಕಾದ ಕೆಲವಾರು ಹಾಡುಗಳು ಗದ್ಯಮಯವಾಗಿದ್ದು ಕೆಟ್ಟದಾದ ರೀತಿಯಲ್ಲಿ ಅನುವಾದ ಮಾಡಲಾಗಿದೆ.  ಉದಾಹರಣೆಗೆ, ಬೆಳಕು ಹರಿದು ಸೂರ್ಯ ನೆತ್ತಿಗೆರ‍್ಯಾನೋ, ಸಂತಿ ಸರ ಸರ ಮುಂದೆ ಹೋತೊ...ಕಿರಿ ಮೈದುನ ಹೊತಗೊಂಡು ಮಲಗಾಯ್ತು, ಹಸಿದ ಕೂಸಿಗ ತೊಟ್ಟಿಲಾಗ ಹಾಕೇನಿ... ಇವು ಪಕ್ಕಾ ಗದ್ಯಮಯ ಮಾತುಗಳು. ಇವನ್ನೇ ಪದ್ಯ ಮಾಡಿದ್ರೆ ಕೇಳಿದವರಿಗೆ ತಿನ್ನುವ ಚಿತ್ರಾನದಲ್ಲೂ ಕಲ್ಲು ಬಂದಂತಾನುಭವ.

ನಾಲ್ಕು ಜನ ಯುವತಿಯರ ವೇಷಭೂಷಣ ನೃತ್ಯ ಒನಪು ವಯ್ಯಾರ ನೋಡುವುದೇ ಒಂದು ಚೆಂದ. ಆದರೆ ಮಹಿಳೆಯರೆಂದರೆ ಪುರುಷರಿಗೆ ಆಕರ್ಷಿಸುವ ಗೊಂಬೆಯಾಗಿಯೇ ಕಾಣುವಂತೆ ಚಿತ್ರಿಸಲಾಗಿದೆ. ನಾಟಕದ ಸ್ಟ್ಯಾಂಡಪ್ ಕಾಮೆಡಿ ವಿಭಾಗದಲ್ಲಿ ತಮಾಶಾ ಕಲಾವಿದೆಯನ್ನು ಮುಟ್ಟಲು, ಇಂಪ್ರೆಸ್ ಮಾಡಲು ಗಂಡು ಪಾತ್ರಗಳೆಲ್ಲಾ ಪರದಾಡುವ ರೀತಿಯೇ ಹಾಗಿದೆ. ಈ ನಾಟಕದ ಕೊನೆಗೆ ಸ್ವತಃ ಖಂಡೋಬ ದೇವರೇ ಬಂಗಾರದಂತಾ ಹೆಂಡತಿ ಇದ್ದರೂ ಇನ್ನೊಬ್ಬಳನ್ನು ಮದುವೆಯಾಗುವ ದೃಶ್ಯವನ್ನು ತೋರಿಸಲಾಗಿದೆ. ದೇವರೆ ಇಷ್ಟಾ ಬಂದಂಗೆ ಮದುವೆಯಾಗುವಾಗ ಹುಲುಮಾನವರಾದ ನಾವು ದೇವರನ್ನು ಅನುಸರಿಸಿದರೆ ತಪ್ಪೇನು ಎನ್ನುವ ತಪ್ಪು ಸಂದೇಶ ಪ್ರೇಕ್ಷಕರಿಗೆ ಬಾರದೇ ಇರದು. ಪುರುಷ ಜನನೇಂದ್ರಿಯವನ್ನು ಬಾಂಬೆಗೆ ಹೋಲಿಸಿ ಮಾಡುವಂತಹ ಬಾಲಿಷವಾದ ಹಾಸ್ಯ ತುಣುಕುಗಳು, ದುರ್ಭಲವಾದ ಅವಾಸ್ತವ ದೃಶ್ಯಗಳು, ಪುಕ್ಕಲು ರಾಜ ತಿಕ್ಕಲು ಸಿಪಾಯಿಗಳ ಅತಿರೇಕದ ಸಂದರ್ಭಗಳು ಇಡೀ ನಾಟಕವನ್ನು ಡೈಲ್ಯೂಟ್ ಮಾಡಿಬಿಟ್ಟಿವೆ. ನಾಟಕದ ಮಧ್ಯದಲ್ಲಿ ರೈತನೊಬ್ಬ ಬಂದು ರಾಜನಲ್ಲಿ ತಮ್ಮ ಗೋಳು ಹೇಳಿಕೊಳ್ಳುವುದು ನಾಟಕದ ಭಾಗವಾಗದೇ ಒತ್ತಾಯದಿಂದ ಆ ದೃಶ್ಯ ತುರುಕಿದಂತಿದೆ.

ಒಂದಿಷ್ಟು ಶೃದ್ದೆ ಸಹನೆ ವಹಿಸಿದ್ದರೆ ತಮಾಶ ನಾಟಕದ ನೃತ್ಯ ಸಂಗೀತ ಶೈಲಿಯನ್ನೇ ಬಳಸಿಕೊಂಡು ಉತ್ತಮ ವಸ್ತುವಿನ್ಯಾಸದ ನಾಟಕವೊಂದನ್ನು ಕಟ್ಟಿ ಕೊಡಬಹುದಾಗಿತ್ತು. ಮನರಂಜನೆಯನ್ನೇ ಪ್ರಮುಖ ವಾಗಿಟ್ಟುಕೊಂಡರೂ ಅದರ ಮೂಲಕವೇ ಸಂದೇಶವನ್ನೂ ಕೊಡಬಹುದಾಗಿತ್ತು. ವೃತ್ತಿ ಕಂಪನಿ ನಾಟಕಗಳು ಅದೆಷ್ಟೇ ಹಾಸ್ಯಮಯವಾಗಿದ್ದರೂ ಅಂತಹ ನಾಟಕದೊಳಗೂ ಸಹ ಸಮಾಜಕ್ಕೆ ಒಂದು ಪ್ರಯೋಜನಕಾರಿ ಸಂದೇಶ ಇದ್ದೇ ಇರುತ್ತಿತ್ತು. ಅದೇ ರೀತಿ ರಂಜನೆಯ ಮೂಲಕವೇ ಆಳುವ ವ್ಯವಸ್ಥೆಯನ್ನು ವಿಡಂಬನಾತ್ಮಕವಾಗಿ ತೋರಿಸಬಹುದಾದ ಎಲ್ಲಾ ಸಾಧ್ಯತೆಗಳೂ ತಮಾಶದಲ್ಲಿ ಇದ್ದವು. ಆದರೆ.. ಅದೂ ಆಗಲಿಲ್ಲ. ಈಗಲೂ ಏನೂ ಆಗಿಲ್ಲ. ನಾಟಕದಾದ್ಯಂತ ಇರುವ ದ್ವಂದ್ವಾರ್ಥ ಸಂಭಾಷಣೆಗಳನ್ನು ತೆಗೆದು ಹಾಕಿ, ಹಾಸ್ಯಕ್ಕಾಗಿಯೇ ಹಾಸ್ಯ ಎನ್ನುವಂತಹ ಹಾಸ್ಯ ತುಣುಕಗಳನ್ನೆಲ್ಲಾ ಬದಿಗಿಟ್ಟು, ನಾಟಕದೊಳಗೆ ಯಾವುದಾದರೂ ವಿಷಯದ ಎಳೆಯನ್ನು ಇಟ್ಟುಕೊಂಡು ದೃಶ್ಯಗಳನ್ನು ಕಟ್ಟುತ್ತಾ ಹೋದರೆ ಒಳ್ಳೆಯ ನಾಟಕವನ್ನು ಕೊಡಬಹುದಾಗಿದೆ. ದೃಶ್ಯಗಳ ನಡುವೆ ಇರುವ ಮಿಸ್ಸಿಂಗ್ ಲಿಂಕ್‌ಗಳನ್ನು ಸರಿಪಡಿಸಿದರೆ, ಅನಗತ್ಯವಾಗಿ ವಿಷಯಾಂತರವಾಗುವುದನ್ನು ತಡೆದರೆ, ಅಸಂಬದ್ದ ಸನ್ನಿವೇಶಗಳನ್ನು ಸುಸಂಬದ್ದಗೊಳಿಸಿದರೆ, ಸಾಧ್ಯವಾದಷ್ಟೂ ಕನ್ನಡ ಭಾಷೆಯ ಬಳಕೆಗೆ ಹೆಚ್ಚು ಒತ್ತುಕೊಟ್ಟರೆ ತಮಾಶ ನಾಟಕವು ರಂಗಾಯಣದ ಆಶಯಕ್ಕೆ ತಕ್ಕಂತೆ ಪ್ರದರ್ಶನಯೋಗ್ಯಗೊಳ್ಳುವುದರಲ್ಲಿ ಸಂದೇಹವಿಲ್ಲ. 

                                                              -  ಶಶಿಕಾಂತ ಯಡಹಳ್ಳಿ      
 




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ