ಅಚ್ಚೇ ದಿನ್ ಎಲ್ಲಿ ಬೀದಿ ನಾಟಕದ ದೃಶ್ಯ |
ರಂಗಭೂಮಿ ಎನ್ನುವುದು ಮೂಲಭೂತವಾಗಿ ಪ್ರತಿಭಟನಾ
ಮಾಧ್ಯಮ. ಮನರಂಜನೆಯ ಜೊತೆ ಜೊತೆಗೆ ಸಾಮಾಜಿಕ ಸಮಸ್ಯೆಗಳಿಗೆ ತನ್ನದೇ ಆದ ಪ್ರತಿರೋಧವನ್ನು ತೋರಿಸುತ್ತಾ ಜನರನ್ನು ಜಾಗೃತಿಗೊಳಿಸುವ ಕೆಲಸವನ್ನು ರಂಗಭೂಮಿ
ಕಾಲಕಾಲಕ್ಕೆ ಮಾಡುತ್ತಲೇ ಬಂದಿದೆ. ಬ್ರಿಟಿಷ್ ಆಡಳಿತದ ಸರ್ವಾಧಿಕಾರ ಇದ್ದಾಗಲೂ ಸಹ ಸ್ವಾತಂತ್ರ್ಯದ
ಕುರಿತು ಅರಿವನ್ನು ಹಾಗೂ ಸಾಮ್ರಾಜ್ಯಶಾಹಿಗಳ ಶೋಷಣೆಯನ್ನು ನಾಟಕದ ಭಾಗವಾಗಿ ವೃತ್ತಿ ಕಂಪನಿ ನಾಟಕಗಳು
ತೋರಿಸುತ್ತಿದ್ದವು. ನಾಟಕದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬ್ರಿಟೀಷ್ ಆಡಳಿತ ಸಂಪೂರ್ಣವಾಗಿ ಕಿತ್ತುಕೊಂಡು
ವೃತ್ತಿ ಕಂಪನಿ ನಾಟಕಗಳ ಮೇಲೆ ಅನೇಕಾನೇಕ ನಿರ್ಬಂಧಗಳನ್ನು ಹೇರಿತ್ತು. ಆದರೂ ಕೆಲವು ದೇಶಾಭಿಮಾನಿಯಾಗಿದ್ದ
ನಾಟಕ ಕಂಪನಿಗಳ ಮಾಲೀಕರುಗಳು ಸ್ವಾತಂತ್ರ್ಯ ಹೋರಾಟಕ್ಕೆ ಪ್ರೆರೇಪಣೆಯಾಗುವಂತಹ ದೃಶ್ಯಗಳನ್ನು ಹಾಗೂ
ದೇಶಪ್ರೇಮದ ಸಂಭಾಷಣೆಗಳನ್ನು ತಮ್ಮ ನಾಟಕಗಳಲ್ಲಿ ಸೇರಿಸುತ್ತಿದ್ದರು. ಇದನ್ನು ತಮ್ಮ ಗೂಢಚಾರರಿಂದ
ತಿಳಿದ ಬ್ರಿಟೀಷ್ ಪರ ಅಧಿಕಾರಿಗಳು ಕೆಲವಾರು ನಾಟಕ ಕಂಪನಿಗಳ ಪ್ರದರ್ಶನಾ ಪರವಾನಿಗೆಯನ್ನೇ ರದ್ದುಪಡಿಸಿ
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಪ್ರಯತ್ನಿಸಿದ್ದು ಭಾರತದ ಸ್ವಾತಂತ್ರ್ಯಪೂರ್ವ ಚರಿತ್ರೆಯಲ್ಲಿ
ದಾಖಲಾಗಿವೆ.
ಆಂಗ್ಲರ ವಸಾಹತುಶಾಹಿ ಆಡಳಿತ ಕೊನೆಗೊಂಡು ಭಾರತೀಯರ
ಆಳ್ವಿಕೆಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯೊಂದು ಅಸ್ತಿತ್ವಕ್ಕೆ ಬಂದರೂ ಆಳುವ ವರ್ಗಗಳು ಕಾಲಕಾಲಕ್ಕೆ
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಲೇ ಬಂದಿವೆ. ಆಡಳಿತ ವಿರೋಧಿ ಪ್ರತಿಭಟನಾತ್ಮಕ ರಂಗಚಟುವಟಿಕೆಗಳನ್ನು
ಮಟ್ಟಹಾಕಲು ಪ್ರಯತ್ನಿಸುತ್ತಲೇ ಬಂದಿವೆ. ಕಾಂಗ್ರೆಸ್ ಪಕ್ಷದ ಗೂಂಡಾ ಪಡೆ 1989 ಜನವರಿ 2 ರಂದು ರಂಗಕರ್ಮಿ
ಸಪ್ದರ್ ಹಷ್ಮಿಯವರನ್ನು ಬೀದಿನಾಟಕ ಮಾಡುತ್ತಿರುವಾಗಲೇ ಮಾರಣಾಂತಿಕ ಹಲ್ಲೆ ಮಾಡಿ ನಡುಬೀದಿಯಲ್ಲೇ ಕೊಂದು
ಹಾಕಿದರು. ಪ್ರಸನ್ನನವರ ನಿರ್ದೇಶನದಲ್ಲಿ ಸಮುದಾಯ ಸಂಘಟನೆಯು ಬೆಂಗಳೂರಿನ ಜಯನಗರದ ಕಾಂಪ್ಲೆಕ್ಸಲ್ಲಿ “ಇಂದಿರಾಗಾಂಧಿ
ಕೃಪಾಪೋಷಿತ ನಾಟಕ ಮಂಡಳಿ” ಎನ್ನುವ ಬೀದಿ
ನಾಟಕ ಮಾಡುವಾಗ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮೈಕ್ ಕಿತ್ತೆಸೆದು ದೊಡ್ಡ ಗಲಾಟೆ ಮಾಡಿ ನಾಟಕ ನಿಲ್ಲಿಸಿದ್ದರು.
ಚಂದ್ರಶೇಖರ್ ಪಾಟೀಲರವರ “ಜಗನ್ಮಾತೆ...” ಬೀದಿನಾಟಕಕ್ಕೆ ಬೇಕಾದಷ್ಟು ಪ್ರತಿರೋಧಗಳು ಬಂದವು.
ಎಸ್. ಮಾಲತಿಯವರು ತಮ್ಮ ನಾಟಕ ಪ್ರದರ್ಶನದ ಮುನ್ನ ಭಾಷಣ ಮಾಡುವಾಗ ಕಲ್ಲುಗಳು ತೂರಿಬಂದವು. ಸ್ಥಾಪಿತ
ಹಿತಾಸಕ್ತಿಗಳಿಂದಾಗಿ ಒಂದಲ್ಲ ಎರಡಲ್ಲಾ ಇಂತಹ ಅನೇಕ ಘಟನೆಗಳು ನಡೆದಿವೆ.
ಆಳುವ ವರ್ಗದ ಶೋಷಣೆಯ ವಿರುದ್ಧ ಜನಜಾಗೃತಿಯಲ್ಲಿ
ತೊಡಗಿದ ಬಹುತೇಕ ರಂಗಸಂಘಟನೆಗಳು ಆಳುವ ಪಕ್ಷಗಳ ದಬ್ಬಾಳಿಕೆಯನ್ನು ಎದುರಿಸಿಕೊಂಡೇ ಬಂದಿವೆ. ಸಾಹಿತಿ
ಕಲಾವಿದರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡುವಲ್ಲಿ ಎಲ್ಲಾ ಪಕ್ಷಗಳ ಹಾಗೂ ಮತೀಯ ಶಕ್ತಿಗಳ
ಕೊಡುಗೆಯೂ ಬೇಕಾದಷ್ಟಿದೆ. ಮತೀಯವಾದಿ ಶಕ್ತಿಗಳು ಹಲವಾರು ಬಾರಿ ‘ಸಮುದಾಯ’ ಸಾಂಸ್ಕೃತಿಕ ಸಂಘಟನೆ ಬೀದಿ ನಾಟಕ ಮಾಡುವಾಗ ಗಲಾಟೆ ಮಾಡಿವೆ. ಆನೇಕಲ್ಲಿನಲ್ಲಿ 1998ರಲ್ಲಿ ‘ಸಮುದಾಯ’ದ ಕಲಾವಿದರು ಟಿಪು ಜನ್ಮಶತಮಾನೋತ್ಸವ ಜಯಂತಿ ಜಾತಾದ
ಭಾಗವಾಗಿ ಬೀದಿನಾಟಕ ಪ್ರದರ್ಶನ ಹಮ್ಮಿಕೊಂಡಾಗ ಲೋಕಲ್
ಆರ್‌ಎಸ್‌ಎಸ್ ಸಂಘಟನೆಯ ಕೆಲವಾರು ಗೂಂಡಾಗಳು ಕಲಾವಿದರುಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದರು. ಸಮುದಾಯದ
ಗುಂಡಣ್ಣನವರ ವೇಷ ಹಾಗೂ ದಾಡಿ ನೋಡಿ ಅವರನ್ನು ಮುಸ್ಲಿಂ ಎಂದುಕೊಂಡು ಚಾಕುವಿನಿಂದ ತೀವ್ರವಾಗಿ ಹಲ್ಲೆ
ಮಾಡಿ ಕೊಲ್ಲಲು ಪ್ರಯತ್ನಿಸಿದ್ದರು. ತಲೆ ಸೀಳಿ ದೇಹವೆಲ್ಲಾ
ತೀವ್ರವಾಗಿ ರಕ್ತ ಹರಿಯುತ್ತಿದ್ದರೂ ಕೊನೆಯ ಕ್ಷಣದ ಸಮಯಪ್ರಜ್ಞೆಯಿಂದ ಗುಂಡಣ್ಣನವರು ಅದು ಹೇಗೋ ತಪ್ಪಿಸಿಕೊಂಡು
ಜೀವ ಉಳಿಸಿಕೊಂಡರು. ಒಂಚೂರು ಹೆಚ್ಚುಕಡಿಮೆ ಯಾಗಿದ್ದರೂ ಗುಂಡಣ್ಣ ಕರ್ನಾಟಕದ ಸಫ್ದರ್ ಹಷ್ಮಿಯಾಗಿ ಹುತಾತ್ಮರಾಗಿಬಿಡುತ್ತಿದ್ದರು. ಹಲ್ಲೆ ನಡೆದ ಒಂದೆರಡು ದಿನಗಳ ನಂತರ ಗಿರೀಶ್ ಕಾರ್ನಾಡಾದಿಯಾಗಿ
ಬೆಂಗಳೂರಿನ ಹಲವಾರು ರಂಗಕರ್ಮಿಗಳು ಹಲ್ಲೆ ನಡೆದ ಜಾಗಕ್ಕೆ ಹೋಗಿ ಬಹಿರಂಗ ಸಭೆಯನ್ನು ಮಾಡಿ ಅದೇ ಬೀದಿ
ನಾಟಕವನ್ನು ಪ್ರದರ್ಶಿಸಿ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡಲು ಬಯಸಿದ ಗೂಂಡಾ ಪಡೆಗಳಿಗೆ ಸಂಘಟಿತ
ಪ್ರತಿಭಟನೆಯನ್ನು ಸಲ್ಲಿಸಿದ್ದರು. ಆಳುವ ರಾಜಕೀಯ ಪಕ್ಷಗಳು ಹಾಗೂ ಕೋಮುಶಕ್ತಿಗಳಿಂದ ಅನೇಕ ಬಾರಿ ರಂಗಭೂಮಿ
ಆಘಾತವನ್ನು ಅನುಭವಿಸಿದೆ ಮತ್ತು ಒಂದಾಗಿ ನಿಂತು ದುಷ್ಟ ಶಕ್ತಿಗಳ ವಿರುದ್ಧ ತೀವ್ರ ಪ್ರತಿಭಟನೆಯನ್ನು
ವ್ಯಕ್ತಪಡಿಸಿದೆ. ೆ
ಎಂಬತ್ತರ ದಶಕದಲ್ಲಿ ಧಾರವಾಡದಲ್ಲಿ ಸಮುದಾಯ ನಿರ್ಮಿಸಿ ಶಿವಪ್ರರಕಾಶರವರು ರಚಿಸಿದ ಮಹಾಚೈತ್ರ ನಾಟಕದ ಪ್ರದರ್ಶನವನ್ನು ಆಯೋಜಿಸಿದ್ದರು. ಅದು ಆರಂಭವಾಗುವ ಸಮಯಕ್ಕೆ ಸರಿಯಾಗಿ ಎರಡು ಸಾವಿರಕ್ಕೂ ಮಿಕ್ಕಿ ಬಸವಪೀಠದ ಭಕ್ತರು ರಂಗಮಂದಿರದ ಮೇಲೆ ಸಂಘಟಿತ ದಾಳಿ ಮಾಡಿದರು. ಈ ನಾಟಕದ ನಿರ್ದೇಶಕರಾದ ವಾಲ್ಟರ್ ಡಿಸೋಜಾರವರನ್ನೂ ಸೇರಿದಂತೆ ಕಲಾವಿದರ ಮೇಲೆ ಹಲ್ಲೆಮಾಡಿ ನಾಟಕ ಪ್ರದರ್ಶನವನ್ನು ಬಲವಂತವಾಗಿ ನಿಲ್ಲಿಸಿ ರಂಗಾಭಿವ್ಯಕ್ತಿಯ ಕೊಲೆ ಮಾಡಿದರು. ಮರುದಿನ ಪ್ರಸನ್ನರವರ ನೇತೃತ್ವದಲ್ಲಿ ಧಾರವಾಡದಲ್ಲಿ ಬ್ರಹತ್ ಪ್ರತಿಭಟನೆ ಆಯೋಜಿಸಿ ಲಿಂಗಾಯತ ಕೋಮಿನ ಮೂಲಭೂತವಾದಿಗಳ ಮುಖವಾಡವನ್ನು ಬೆತ್ತಲುಗೊಳಿಸಲು ಪ್ರಯತ್ನಿಸಲಾಯಿತು.
ಎಂಬತ್ತರ ದಶಕದಲ್ಲಿ ಧಾರವಾಡದಲ್ಲಿ ಸಮುದಾಯ ನಿರ್ಮಿಸಿ ಶಿವಪ್ರರಕಾಶರವರು ರಚಿಸಿದ ಮಹಾಚೈತ್ರ ನಾಟಕದ ಪ್ರದರ್ಶನವನ್ನು ಆಯೋಜಿಸಿದ್ದರು. ಅದು ಆರಂಭವಾಗುವ ಸಮಯಕ್ಕೆ ಸರಿಯಾಗಿ ಎರಡು ಸಾವಿರಕ್ಕೂ ಮಿಕ್ಕಿ ಬಸವಪೀಠದ ಭಕ್ತರು ರಂಗಮಂದಿರದ ಮೇಲೆ ಸಂಘಟಿತ ದಾಳಿ ಮಾಡಿದರು. ಈ ನಾಟಕದ ನಿರ್ದೇಶಕರಾದ ವಾಲ್ಟರ್ ಡಿಸೋಜಾರವರನ್ನೂ ಸೇರಿದಂತೆ ಕಲಾವಿದರ ಮೇಲೆ ಹಲ್ಲೆಮಾಡಿ ನಾಟಕ ಪ್ರದರ್ಶನವನ್ನು ಬಲವಂತವಾಗಿ ನಿಲ್ಲಿಸಿ ರಂಗಾಭಿವ್ಯಕ್ತಿಯ ಕೊಲೆ ಮಾಡಿದರು. ಮರುದಿನ ಪ್ರಸನ್ನರವರ ನೇತೃತ್ವದಲ್ಲಿ ಧಾರವಾಡದಲ್ಲಿ ಬ್ರಹತ್ ಪ್ರತಿಭಟನೆ ಆಯೋಜಿಸಿ ಲಿಂಗಾಯತ ಕೋಮಿನ ಮೂಲಭೂತವಾದಿಗಳ ಮುಖವಾಡವನ್ನು ಬೆತ್ತಲುಗೊಳಿಸಲು ಪ್ರಯತ್ನಿಸಲಾಯಿತು.
ಆಳುವ ವರ್ಗಗಳು, ರಾಜಕೀಯ ಪಕ್ಷಗಳು, ಜಾತಿ ಹಾಗೂ
ಧರ್ಮಗಳ ಅಂಧಾನುಯಾಯಿಗಳು ನಾಟಕ ಹಾಗೂ ಬೀದಿನಾಟಕಗಳ ಮೇಲೆ ಹಲ್ಲೆ ಮಾಡಿ ರಂಗಾಭಿವ್ಯಕ್ತಿಯನ್ನು ದಮನಿಸಲು
ಪ್ರಯತ್ನಿಸಿದ್ದಕ್ಕೆ ರಂಗಭೂಮಿ ಸಾಕ್ಷಿಯಾಗಿದೆ. ಹೂಲಿ ಶೇಖರವರು ರಚಿಸಿ ನಿರ್ದೇಶಿಸಿದ್ದ ‘ಕಲ್ಯಾಣ ಕ್ರಾಂತಿ’ ನಾಟಕ ಪ್ರದರ್ಶನ ನಿಲ್ಲಿಸಲು ಲಿಂಗಾಯತ ಸಮುದಾಯದ ಕೆಲವರು ಧಾರವಾಡದಿಂದ ಬೆಂಗಳೂರಿನ ರವೀಂದ್ರ
ಕಲಾಕ್ಷೇತ್ರಕ್ಕೆ ಬಂದು ಲಗ್ಗೆ ಹಾಕಲು ಪ್ರಯತ್ನಿಸಿದರು. ಆಗ ಸ್ವತಃ ಲಂಕೇಶರವರು ಹಾಗೂ ರಂಗಸಂಪದದ
ಜೆ.ಲೊಕೇಶರವರು ಕಲಾಕ್ಷೇತ್ರದ ಮುಖ್ಯ ಬಾಗಿಲಿಗೆ ಕಾವಲಾಗಿ ನಿಂತು ಉದ್ರಿಕ್ತರನ್ನು ಒಳಗೆ ಹೋಗದಂತೆ
ತಡೆದಿದ್ದರು. ಎರಡು ತಿಂಗಳ ಹಿಂದೆಯೇ ಬಿಜಾಪುರದಲ್ಲಿ ಹೂಲಿ ಶೇಖರರವರು ರಚಿಸಿದ ‘ಬೆಕುವಾ’ ನಾಟಕವನ್ನು ಚೆನ್ನವೀರ ಜಳಕಿಯವರು ನಿರ್ದೇಶಿಸಿ ಪ್ರದರ್ಶಿಸುತ್ತಿದ್ದಾಗ
ರಾಜಕೀಯ ಪ್ರೇರಿತರು ಗುಂಪು ಕಟ್ಟಿಕೊಂಡು ಬಂದು ನಾಟಕವಾಗದಂತೆ ತಡೆದರು. ಆ ನಾಟಕ ಮತ್ತೆ ಮರುಪ್ರದರ್ಶನವಾಗಲೇ
ಇಲ್ಲ. ಇಂತಹ ಅನೇಕ ರಂಗವಿರೋಧಿ ಘಟನೆಗಳನ್ನು ಪಟ್ಟಿಮಾಡಬಹುದಾಗಿದೆ. ವಿರೋಧಿಗಳು ಅದೆಷ್ಟೇ ಪ್ರಯತ್ನಿಸಿದರೂ
ರಂಗಭೂಮಿ ಮಾತ್ರ ಸಮಾಜದ ಭ್ರಷ್ಟತೆ, ಅನಿಷ್ಟತೆ ಹಾಗೂ ಮೂಲಭೂತವಾದಕ್ಕೆ ಕನ್ನಡಿ ಹಿಡಿಯುತ್ತಲೇ ಬಂದಿದೆ.
ಆಳುವ ವರ್ಗಗಳು ಯಾರೇ ಇರಲಿ ವಿರೋಧ ಪಕ್ಷಗಳಂತೆ ಕೆಲಸಮಾಡುತ್ತಲೇ ಬಂದಿದೆ. ಪುರಾಣೇತಿಹಾಸಗಳನ್ನು ಮತ್ತೆ
ಮತ್ತೆ ಮುರಿದು ಕಟ್ಟುತ್ತಾ ಭ್ರಮೆಗಳನ್ನು ಕಳಚುತ್ತಾ ಬಂದಿದೆ. ಜನವಿರೋಧಿಗಳ ಮುಖವಾಡವನ್ನು ಕಾಲಕಾಲಕ್ಕೆ
ಬಯಲು ಮಾಡಿದೆ.
ಸಂಘಪರಿವಾರ ಬೆಂಬಲಿತ ಬಿಜೆಪಿ ಸರಕಾರ ಯಾವಾಗ ಕೇಂದ್ರದಲ್ಲಿ
ಅಧಿಕಾರಕ್ಕೆ ಬಂದಿತೋ ಆಗಿನಿಂದ ಅಭಿವ್ಯಕ್ತಿ ಎನ್ನುವುದು ದೇಶದ್ರೋಹವಾಗಿ ಬದಲಾಯಿತು. ಯಾರು ಸಂಘ ಪರಿವಾರದ
ವಿರುದ್ಧವಾಗಿ ಮಾತನಾಡುತ್ತಾರೋ, ಸರಕಾರದ ವಿರುದ್ಧ ಟೀಕಿಸುತ್ತಾರೋ, ನಾಟಕಗಳನ್ನು ಮಾಡುತ್ತಾರೋ ಅಂತವರೆಲ್ಲಾ
ಸಂಘಿಗಳ ಲೆಕ್ಕದಲ್ಲಿ ದೇಶದ್ರೋಹಿಗಳಾಗಿ ಕಾಣಿಸಿಕೊಳ್ಳತೊಡಗಿದರು. ಎಂ.ಎಂ.ಕಲಬುರ್ಗಿ, ದಾಬೋಲ್ಕರ್,
ಪೆನ್ಸಾರೆ.. ಮುಂತಾದ ವಿಚಾರವಾದಿಗಳನ್ನು ಕೋಮುವ್ಯಾಧಿ ಪೀಡಿತರು ಕೊಂದು ಹಾಕಿ ಅಭಿವ್ಯಕ್ತಿ ಸ್ವಾತಂತ್ರ್ಯದ
ಹರಣವನು ಹಾಡುಹಗಲೇ ಮಾಡಿದರು. ಗಿರೀಶ್ ಕಾರ್ನಾಡರು ‘ಟಿಪ್ಪು
ಹೆಸರನ್ನು ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಟ್ಟಿದ್ದರೆ ಚೆನ್ನಾಗಿತ್ತು’ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದನ್ನೇ
ನೆಪವಾಗಿಟ್ಟುಕೊಂಡ ಮತೀಯವಾದಿಗಳು ಅವರನ್ನೊಬ್ಬ ಹಿಂದೂವಿರೋಧಿ ಎಂದು ಬಿಂಬಿಸಿ ಗಲಾಟೆ ಎಬ್ಬಿಸಿದರು. ಬ್ರಾಹ್ಮಣ್ಯದ ಮುಖವಾಡಗಳನ್ನು
ತಮ್ಮ ‘ಸಂಸ್ಕಾರ’ ಕಾದಂಬರಿ, ನಾಟಕ ಹಾಗೂ ಸಿನೆಮಾದಲ್ಲಿ ಬಿಚ್ಚಿಟ್ಟ ಡಾ.ಅನಂತಮೂರ್ತಿಯವರನ್ನು
ಕೋಮುಪೀಡಿತರು ಸಾಯುವವರೆಗೂ ಬಿಡದೇ ಕಾಡಿ ಸತ್ತ ಮೇಲೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಂಘಪರಿವಾರದ
ರಾಜಕೀಯ ಪಕ್ಷ ಯಾವಾಗ ದೇಶದ ಚುಕ್ಕಾಣಿಯನ್ನು ಹಿಡಿಯಿತೋ ಆಗಿನಿಂದ ಮತೀಯವಾದಿಗಳ ಅಟ್ಟಹಾಸ ಹೆಚ್ಚತೊಡಗಿತು.
ವಿರೋಧಿಸಿದವರನ್ನು ನಿಂದಿಸುವುದು, ಭಿನ್ನಾಭಿಪ್ರಾಯ
ವ್ಯಕ್ತ ಪಡಿಸಿದವರ ಮೇಲೆ ದಾದಾಗಿರಿ ಮಾಡಿ ಹಲ್ಲೆ ಮಾಡುವುದು, ಅಭಿಪ್ರಾಯಬೇದ ಇದ್ದವರನ್ನು ಹೆದರಿಸಿ
ಹಿಂಸಿಸುವುದು ಈಗ ದೇಶಾದ್ಯಂತ ನಿತ್ಯ ನಿರಂತರವಾಗಿದೆ. ಭಿನ್ನಾಭಿಪ್ರಾಯವನ್ನು ದೇಶದ್ರೋಹ ಧರ್ಮದ್ರೋಹ
ಎಂದು ಆರೋಪಿಸಿ ಶಿಕ್ಷೆಯನ್ನೂ ಕೊಡುವ ನಕಲಿ ದೇಶಭಕ್ತರ ಪಡೆಯೇ ಹುಟ್ಟಿಕೊಂಡಿದೆ. ವಿಚಾರವಾದವನ್ನು
ವಿಚಾರದಿಂದಲೇ ಎದುರಿಸುವ ಸಾಮರ್ಥ್ಯ ಮತ್ತು ಸತ್ವ ಇಲ್ಲದ ಈ ಹಿಂದೂವಾದಿಗಳು ವಿಚಾರವಾದವನ್ನು ಹಿಂಸಾವಾದದಿಂದ
ದಮನಿಸಲು ಸರ್ವಪ್ರಯತ್ನವನ್ನು ಮಾಡುತ್ತಲೇ ಇದ್ದಾರೆ. ಇದಕ್ಕೆ ರಂಗಭೂಮಿಯೂ ಇವರಿಗೆ ಹೊರತಲ್ಲ.
ಇತ್ತೀಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ
ಸಿಜಿಕೆ ರಾಷ್ಟ್ರೀಯ ನಾಟಕೋತ್ಸವದಲ್ಲಿ ಎಪ್ರಿಲ್ 12 ರಂದು ‘ರಾವಣಲೀಲಾ’ ಎನ್ನುವ ಹಿಂದಿ ನಾಟಕವನ್ನು ಪ್ರದರ್ಶಿಸಲಾಯಿತು. ಈ ನಾಟಕದಲ್ಲಿ ರಾವಣನನ್ನು
ನಾಯಕನನ್ನಾಗಿಸಿ ರಾಮನನ್ನು ಖಳನಾಯಕನನ್ನಾಗಿ ತೋರಿಸಲಾಗುತ್ತದೆ. ಇದನ್ನು ಸಹಿಸದ ಹಿಂದೂಪರ ಸಂಘಟನೆಯ
ಕಾರ್ಯಕರ್ತರು ರಂಗವೇದಿಕೆಗೆ ನುಗ್ಗಿ ಚಾಕು ತೋರಿಸಿ ಕಲಾವಿದರನ್ನು ಹೆದರಿಸಿ ಹಿಂಸಿಸುತ್ತಾರೆ. ರಾಮಾಯಣದಲ್ಲಿ
ನಡೆದ ಅಂತಿಮ ಯುದ್ಧದಲ್ಲಿ ವಿಭೀಷಣನ ದ್ರೋಹದಿಂದಾಗಿ ರಾವಣ ಸತ್ತನಾದರೂ ಈಗ ರಾವಣನ ವಂಶಸ್ತರು ಎಲ್ಲಾ
ಕಡೆ ವ್ಯಾಪಿಸಿ ಈ ರೀತಿ ಹಿಂಸೆಯಲ್ಲಿ ತೊಡಗಿದ್ದಾರೆ ಎನ್ನುವುದನ್ನು “ರಾವಣಲೀಲಾ” ನಾಟಕ ಹೇಳುತ್ತದೆ. ನಾಟಕದ ಭಾಗವಾಗಿಯೇ ಇಲ್ಲಿ ರಾಮಭಕ್ತರು ಗಲಾಟೆ ಮಾಡುತ್ತಾ
ಮತೀಯವಾದಿಗಳ ಅಸಹಿಷ್ಣುತತೆಯನ್ನು ನಾಟಕದಲ್ಲಿ ತೋರಿಸಲಾಯ್ತು. ಈ ನಾಟಕ ಪ್ರದರ್ಶನದ ಹಿಂದಿನ ದಿನ ನಾನು
ನಿರ್ದೇಶಿಸಿದ “ಅಚ್ಚೆ ದಿನ್ ಎಲ್ಲಿ” ಎನ್ನುವ ಬೀದಿನಾಟಕದ ಪ್ರದರ್ಶನ ಇದೇ ಸಿಜಿಕೆ ರಾಷ್ಟ್ರೀಯ
ರಂಗೋತ್ಸವದಲ್ಲಿ ಪ್ರದರ್ಶನಗೊಂಡಿತ್ತು. ಆಗ ಅಲ್ಲಿ ನೆರೆದ ಪ್ರೇಕ್ಷಕರಲ್ಲಿ ಬಹುತೇಕರು ರಂಗಭೂಮಿಯವರು
ಮತ್ತು ವಿಚಾರವಂತರೂ ಆಗಿದ್ದರಿಂದ ಬೀದಿನಾಟಕ ಯಾವುದೇ ತೊಂದರೆ ಇಲ್ಲದೇ ನಡೆಯಿತು. ಯಾವಾಗ ಇದೇ ಬೀದಿನಾಟಕವನ್ನು
ಎಪ್ರಿಲ್ ೧೭ ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ‘ವಿಜಯನಗರ
ಬಿಂಬ’ವು ಆಯೋಜಿಸಿದ ಬೀದಿನಾಟಕೋತ್ಸವದಲ್ಲಿ ಮರುಪ್ರದರ್ಶನ
ಮಾಡಲಾಯಿತೋ ಆಗ ಕೆಲವು ಮತೀಯವಾದಿ ಭಕ್ತರ ಅನಾರೋಗ್ಯಪೀಡಿತ ಮನಸುಗಳಲ್ಲಿ ಅಸಹಿಷ್ಣುತತೆ ಬುಗಿಲೆದ್ದಿತು. ಪೂರ್ತಿ ಬೀದಿನಾಟಕ ನೋಡಿ ಪ್ರತಿಕ್ರಿಯಿಸುವಷ್ಟೂ ವ್ಯವಧಾನವಿಲ್ಲದ ಈ ಕೋಮುಪೀಡಿತರು ನಾಟಕ ನಿಲ್ಲಿಸಲು ಗಲಾಟೆ
ಮಾಡತೊಡಗಿದರು. ನಾಟಕ ನಿಲ್ಲಲಿಲ್ಲ. ಕಲಾವಿದರು ಇನ್ನೂ ಜೋರಾಗಿ ‘ಆಜಾದಿ ಆಜಾದಿ ಬೇಕೆ ಬೇಕು ಆಜಾದಿ’ ಎಂದು ಘೋಷಣೆಗಳನ್ನು ಕೂಗುತ್ತಾ ‘ಮನುವಾದದಿಂದ, ಜಾತಿವಾದದಿಂದ, ಕೋಮುವಾದದಿಂದ ಸ್ವಾತಂತ್ರ್ಯ
ಬೇಕು’ ಎಂದು ಹಾಡುತ್ತಾ ಸೇರಿದ್ದ ಪ್ರೇಕ್ಷಕರಲ್ಲಿ ಜಾಗೃತಿ
ಮೂಡಿಸುವಂತೆ ನಟಿಸಿದರು. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಆಗುಂತಕರು ನಾಟಕ ಮುಗಿದ ನಂತರವು ಇನ್ನೂ
ಒಂದಿಬ್ಬರನ್ನು ಸೇರಿಸಿಕೊಂಡು ಬಂದು ತೀವ್ರವಾಗಿ ವಾದಕ್ಕೆ ಇಳಿದರು. ಗಲಾಟೆ ಜೋರಾಯಿತು. ಇನ್ನೇನು
ಹೊಡೆದಾಟ ಆರಂಭವಾಗಬೇಕು ಆಗ ಪ್ರೇಕ್ಷಕರೇ ಅವರ ಬಾಯಿಮುಚ್ಚಿಸಿದರು.
ಬೀದಿನಾಟಕದ ಪ್ರದರ್ಶನ ವಿರೋಧಿಸಿ ಗಲಾಟೆ ಮಾಡಿದವರು |
‘ರಾವಣಲೀಲಾ’ ನಾಟಕದಲ್ಲಿ ಪ್ರವೇಶ ಪಡೆದ ಕೋಮುವಾದಿಗಳ ಪಾತ್ರವಹಿಸಿದವರು ಪ್ರೇಕ್ಷಕರೊಳಗಿಂದಲೇ
ಬಂದು ಪ್ರೇಕ್ಷಕರನ್ನೇ ನಿಂದಿಸುತ್ತಾರೆ. ಪ್ರೇಕ್ಷಕರ ಪರವಾಗಿಯೇ ಒಬ್ಬ ಕಲಾವಿದನನ್ನು ವೇದಿಕೆಗೆ ಕರೆದು
ಅಯೋಗ್ಯರು ನೀವು ಎಂದು ನಿಂದಿಸುತ್ತಾರೆ. ಅಂದರೆ “ಮತೀಯವಾದಿಗಳು ಏನೇ ಮಾಡಿದರೂ ನೋಡಿ ಚಪ್ಪಾಳೆ ತಟ್ಟುವುದಷ್ಟೇ
ಜನರ ಕೆಲಸ. ಎದುರಿಸುವ ತಾಕತ್ತು ಯಾರಿಗೂ ಇಲ್ಲಾ “
ಎನ್ನುವುದನ್ನು ಈ ನಾಟಕವು ಹೇಳುತ್ತದೆ. ಪ್ರೇಕ್ಷಕರನ್ನು
ಅಯೋಗ್ಯರು, ಅಸಮರ್ಥರು ಎಂದೆಲ್ಲಾ ನಿಂದಿಸುವ ಈ ನಾಟಕದ ಉದ್ದೇಶಕ್ಕೆ ವಿರುದ್ಧವಾಗಿ “ಅಚ್ಚೇ ದಿನ್...’” ಬೀದಿನಾಟಕ ನೋಡಿದ ಪ್ರೇಕ್ಷಕರು ಸ್ವಯಂಪ್ರೇರಣೆಯಿಂದ
ಪ್ರತಿಕ್ರಿಯಿಸಿದರು. ನಾವು ಸತ್ತ ಪ್ರೇಕ್ಷಕರಲ್ಲ ಅನ್ಯಾಯವನ್ನು ಎದುರಿಸಬಲ್ಲವರು ಎಂಬುದನ್ನು ಸಾಬೀತು
ಪಡಿಸಿದರು. ಇದು ಹೇಗಾಯಿತೆಂದರೆ.. ಬೀದಿನಾಟಕ ನಡೆಯುತ್ತಿರುವಾಗಲೇ ನಾಟಕದ ಬಗ್ಗೆ ನಿಂದಿಸುತ್ತಾ, ನಿರ್ದೇಶಕರಿಗೆ ತಲೆ ಕೆಟ್ಟಿದೆ
ಎಂದು ಬೈಯುತ್ತಾ ನಾಟಕದ ಪ್ರದರ್ಶನ ನಿಲ್ಲಿಸಲು ಕೋಮುವಾದಿ
ಪ್ರೇರಿತರು ಯಾವಾಗ ದಾದಾಗಿರಿ ಶುರುಮಾಡಿದರೋ ಆಗ ತಬ್ಬಿಬ್ಬಾದ ಕಲಾವಿದರುಗಳು ಎರಡು ನಿಮಿಷ ನಾಟಕ ನಿಲ್ಲಿಸಿದರು.
ಆದರೆ ಪ್ರೇಕ್ಷಕರು ನಾಟಕದ ಹೊರಗಿನ ಈ ಭಕ್ತರ ಹುಚ್ಚಾಟವನ್ನು ಸಮರ್ಥವಾಗಿ ನಿಭಾಯಿಸಿದರು. ನಾಟಕ ನೋಡಲು
ಬಂದ ಕೆಲವು ಯುವಕರು ನಿಂದಿಸುವವರನ್ನು ಅನಾಮತ್ತು ಎತ್ತಿಕೊಂಡು ದೂರಕ್ಕೆ ಹೋಗಿ ಬಾಯಿಮುಚ್ಚಿಸಿದರು.
ಇನ್ನು ಕೆಲವು ಪ್ರೇಕ್ಷಕರುಗಳು ನಾಟಕ ಮುಂದುವರೆಯಲಿ ಎಂದು ಕಲಾವಿದರನ್ನು ಹುರುದುಂಬಿಸಿದರು. ಈ ಘಟನೆಯ
ನಂತರ ಪ್ರತಿಯೊಂದು ಸಂಭಾಷಣೆಗೂ ಚಪ್ಪಾಳೆಯ ಮೂಲಕ ತಮ್ಮ ಸಹಮತ ವ್ಯಕ್ತಪಡಿಸಿದರು. ಇನ್ನೂ ಬಹುಸಂಖ್ಯಾತ
ಜನತೆ ಕೋಮುವ್ಯಾಧಿಗೆ ತುತ್ತಾಗಿಲ್ಲ,॒ ಇನ್ನೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸುವ
ಜನತೆ ಬೇಕಾದಷ್ಟಿದ್ದಾರೆ ಹಾಗೂ ಪ್ರೇಕ್ಷಕರು ಮೂಕರಲ್ಲ ಮಾತಾಡಬಲ್ಲವರು ಎನ್ನುವುದನ್ನು ಈ ಘಟನೆ ಸಾಬೀತು
ಪಡಿಸಿತು. ನಾಟಕದ ನಂತರವೂ ಮರಳಿ ಬಂದ ಕೋಮುವಾದಿ ಪಿತ್ತ ನೆತ್ತಿಗೇರಿದವರನ್ನು ತರಾಟೆಗೆ ತೆಗೆದುಕೊಂಡವರೇ
ಪ್ರೇಕ್ಷಕರುಗಳು. ಯಾವಾಗ ಗಲಾಟೆ ಎಬ್ಬಿಸಿದವರಿಗೆ ತಮ್ಮ ಸಮರ್ಥಕರಿಗಿಂತ ವಿರೋದಿಸುವವರೇ ಸುತ್ತಲೂ
ಇದ್ದಾರೆಂಬುದು ಅರಿವಾಯಿತೋ ಆಗ “ಈ
ನಾಟಕವನ್ನು ಇನ್ನೊಮ್ಮೆ ಪ್ರದರ್ಶಿಸಿದರೆ ಪರಿಣಾಮ ನೆಟ್ಟಗಿರೋದಿಲ್ಲ” ಎಂದು ದಮಕಿ ಹಾಕಿ ಮೆತ್ತಗೇ ಅಲ್ಲಿಂದ ಕಾಲುಕಿತ್ತರು.
ಇದು ನಾಟಕ ಮಾಡಿದವರಿಗಿಂತಾ, ಮಾಡಿಸಿದವರಿಗಿಂತಾ ಜ್ಯಾತ್ಯಾತೀತ ಪ್ರೇಕ್ಷಕರಿಗೆ ಸಲ್ಲಬೇಕಾದ ವಿಜಯವಾಗಿದೆ.
ಇಷ್ಟಕ್ಕೂ ಈ ಮತೀಯವಾದಿಗಳ ಮನಸಲ್ಲಿ ಅಸಾಧ್ಯ ತಲ್ಲಣ
ಹುಟ್ಟಿಸುವಂತಹುದು ಈ ಬೀದಿ ನಾಟಕದಲ್ಲೇನಿತ್ತು? ಈಗ ದೇಶದಲ್ಲಿ ಏನಾಗುತ್ತಿದೆಯೋ ಅದೇ ಅಲ್ಲಿ ಪ್ರತಿದ್ವನಿಸಿತ್ತು.
ನಾಟಕದ ಕಥಾವಸ್ತು ಹೀಗಿದೆ. ಹೂವಿನ ಪಕ್ಷವೊಂದು ಭಾರೀ ಬಹುಮತದಿಂದ ಆರಿಸಿ ಬಂದಾಗ ಅಚ್ಚೇ ದಿನ್ ಬಂದಿತು
ಎನ್ನುವ ಸಂತಸದಲ್ಲಿ ಶೇಷಪ್ಪ ಎನ್ನುವ ಪಕ್ಷದ ನಿಷ್ಟಾವಂತ ಕಾರ್ಯಕರ್ತ ಭಾವಾತಿರೇಕದಿಂದ ಕೋಮಾ ಸ್ಥಿತಿಗೆ
ಹೋಗುತ್ತಾನೆ. ಮನೋವೈದ್ಯರ ಚಿಕಿತ್ಸೆಯಿಂದಾಗಿ ಎರಡು ವರ್ಷಗಳ ನಂತರ ಎಚ್ಚರಗೊಳ್ಳುವ ಶೇಷಪ್ಪ ಅಚ್ಚೆ
ದಿನ್ ಬಂದಿದೆಯೆಂದು ಹುಡುಕಿಕೊಂಡು ಹೊರಗೆ ಬಂದರೆ ಪರಿಸ್ಥಿತಿಯೇ ಭಿನ್ನವಾಗಿರುತ್ತದೆ. ತಿನ್ನಲು ಮನೆಯಲ್ಲಿಟ್ಟಿದ್ದ
ದನದ ಮಾಂಸವನ್ನು ಗೋಮಾಂಸವೆಂದು ಸುಳ್ಳು ಸುದ್ದಿ ಹಬ್ಬಿಸಿ ಮುಸ್ಲಿಂ ವ್ಯಕ್ತಿಯನ್ನು ಮತೀಯವಾದಿಗಳು
ಕೊಂದು ಹಾಕಿದ್ದು, ಬಿಜೆಪಿ ಸಂಸದನೊಬ್ಬ ಭಾರತ್ ಮಾತಾಕಿ ಜೈ ಅನ್ನದವರು ಈ ದೇಶದಲ್ಲಿರಲು ಅರ್ಹರಲ್ಲ
ಎಂದು ಭಾಷಣ ಮಾಡಿದ್ದು, ಇನ್ನೊಬ್ಬ ಮುಸ್ಲಿಂ ಸಂಸದ ಸತ್ತರೂ ನಾನು ಭಾರತ್ ಮಾತಾಕಿ ಜೈ ಎನ್ನುವುದಿಲ್ಲವೆಂದಿದ್ದು,
ಸಂವಿಧಾನ ಅಡ್ಡಿಬರದಿದ್ದರೆ ಜೈಕಾರ ಹಾಕದವರನ್ನು ಸಾಯಿಸುತ್ತಿದ್ದೇವೆಂದು ಬಾಬಾ ರಾಂದೇವ್ ಹೇಳಿದ್ದು,
ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ದೇಶದ್ರೋಹಿಯೆಂದು ಆರೋಪಿಸಿ ಕನ್ನಯ್ಯಕುಮಾರನನ್ನು ಬಂಧಿಸಿದ್ದು,
ನ್ಯಾಯಾಲಯದ ಮೆಟ್ಟಲುಗಳ ಮೇಲೆ ನ್ಯಾಯವಾಧಿಗಳೇ ಹಲ್ಲೆ ಮಾಡಿದಂತಹ ಅನೇಕ ಘಟನೆಗಳನ್ನು ನೋಡಿ ನೊಂದುಕೊಂಡ ಶೇಷಪ್ಪ ಹತಾಶನಾಗುತ್ತಾನೆ. ಕಣ್ಣಯ್ಯ ಆಜಾದಿ ಕುರಿತು ಭಾಷಣ ಮಾಡಿದ್ದು ಕೇಳಿ ಪುಳಕಗೊಳ್ಳುತ್ತಾನೆ.
ಮತೀಯವಾದಿ ಶಕ್ತಿಗಳ ಹಿಂಸಾಪಾತವನ್ನು ನೋಡಿ ಅನುಭವಿಸಿ ದೇಶವೆಂದರೆ ಮಾತೆ, ದೇವತೆ, ಕಲ್ಲು ಮಣ್ಣಲ್ಲ
ಅಲ್ಲಿ ವಾಸಿಸುವ ಸಕಲ ಜೀವ ಸಂಕುಲ ಜನಗಳು, ಎಲ್ಲರೂ ಹೊಂದಿಕೊಂಡು ಬಾಳಬೇಕು” ಎಂದು ಹೇಳಿ ಕೋಮುವಾದಿಗಳ ಹಲ್ಲೆಗೆ ಬಲಿಯಾಗಿ ಹತನಾಗುತ್ತಾನೆ.
ಮುಂದೆ ಕಣ್ಣಯ್ಯನ ಆಜಾದಿ ಪರ ಘೋಷಣೆ ಹಾಗೂ ನಂತರ ‘ಸ್ವಾತಂತ್ರ್ಯ
ಸ್ವಾತಂತ್ರ್ಯ ಬೇಕು ನಮಗೆ ಸ್ವಾತಂತ್ರ್ಯ’
ಹಾಡಿನೊಂದಿಗೆ ಬೀದಿ ನಾಟಕ ಅಂತ್ಯಗೊಳ್ಳುತ್ತದೆ.
ನಾಟಕ ನೋಡಿದ ನಕಲಿ ದೇಶಭಕ್ತರ ಎದೆಯೊಳಗೆ ಉರಿ ತಾಳಲಾಗದಷ್ಟು
ಬೇಗೆಯಾಗುತ್ತದೆ. ಇದ್ದದ್ದನ್ನು ಇದ್ದಂಗೆ ಹೇಳುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸುವ ನಿಟ್ಟಿನಲ್ಲಿ
ಹಿಂದುತ್ವವಾದಿಗಳು ಕ್ರಿಯಾಶೀಲರಾದರು. ಇಲ್ಲದ್ದನ್ನು ಹೇಳಿದ್ದರೆ, ಇಲ್ಲವೇ ಊಹಿಸಿಕೊಂಡು ದೃಶ್ಯ ಕಟ್ಟಿದ್ದರೆ
ಈ ದೇಶಭಕ್ತರ ವಿರೋಧಕ್ಕೆ ಒಂದು ಅರ್ಥ ಇರುತ್ತಿತ್ತು. ಆದರೆ ಇಡೀ ನಾಟಕದಲ್ಲಿ ಶೇಷಪ್ಪ ಎನ್ನುವ ಪಾತ್ರವನ್ನು ಮಾತ್ರ ಊಹಿಸಿ
ಸೃಷ್ಟಿಸಿ ಆ ಪಾತ್ರದ ಮೂಲಕ ದೇಶದಲ್ಲಿ ಆಗುತ್ತಿರುವ ಮತೀಯವಾದದ ಅತಿರೇಕಗಳನ್ನು ತೋರಿಸುವ ಪ್ರಯತ್ನವನ್ನು
ಈ ಬೀದಿನಾಟಕ ಮಾಡುತ್ತದೆ. ಕೋಮುವಾದಿ ಹುನ್ನಾರಗಳನ್ನು ಹಾಗೂ ನಕಲಿ ದೇಶಭಕ್ತರ ಮುಖವಾಡಗಳನ್ನು ಬೀದಿಯಲ್ಲಿ
ನಿಂತು ಈ ಬೀದಿನಾಟಕವು ಬೆತ್ತಲೆಗೊಳಿಸಿದ್ದಕ್ಕೆ ಬೆಚ್ಚಿಬಿದ್ದ
ಮತೀಯವಾದಿ ಪಡೆ ಬಲವಂತವಾಗಿ ನಾಟಕವನ್ನೇ ನಿಲ್ಲಿಸಲು ಪ್ರಯತ್ನಿಸಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯದ
ಕತ್ತು ಹಿಚುಕುವ.. ಪ್ರಶ್ನಿಸುವ ಬಾಯಿಗಳನ್ನು ಮುಚ್ಚುವ ಕುತಂತ್ರವಾಗಿದೆ. ಸಮಾಜದಲ್ಲಿ ನಡೆಯುತ್ತಿರುವ
ಘಟನೆಗಳನ್ನು ನಾಟಕದ ಮೂಲಕ ಹೇಳುವಂತಹ ರಂಗಾಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಯನ್ನುಂಟುಮಾಡುವ
ಹಾಗೂ ಜನವಿರೋಧಿತನದ ವಿರುದ್ಧ ಜನಜಾಗೃತಿ ಮಾಡುವಂತಹ
ರಂಗಪ್ರತಿರೋಧವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ನಡೆಯುತ್ತಿರುವ ನಾಟಕವನ್ನು ನಿಲ್ಲಿಸಿ ಗಲಾಟೆ ಎಬ್ಬಿಸಿ
ನಾಟಕ ಪ್ರದರ್ಶನಕ್ಕೆ ಅಡ್ಡಿಯನ್ನುಂಟು ಮಾಡಿರುವುದು ರಂಗವಿರೋಧಿ ಕೃತ್ಯವಾಗಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡುತ್ತಿರುವ
ಇಂತಹ ನಕಲಿ ದೇಶಭಕ್ತರ ಗೂಂಡಾಗಿರಿಯನ್ನು ಎಲ್ಲಾ ಕಲಾವಿದರು, ರಂಗಕರ್ಮಿಗಳು ಹಾಗೂ ಪ್ರಜ್ಞಾವಂತರುಗಳು
ವಿರೋಧಿಸಲೇಬೇಕಿದೆ. ಅಸಂವಿಧಾನಿಕ ಸಾಂಸ್ಕೃತಿಕ ದಾದಾಗಿರಿಯನ್ನು ಸ್ವಸ್ಥ ಸಮಾಜದ ಹಿತದೃಷ್ಟಿಯಿಂದ
ಎಲ್ಲಾ ಮಾನವತಾವಾದಿಗಳೂ ಪ್ರತಿರೋಧಿಸಲೇಬೇಕಿದೆ. ಭಿನ್ನಾಭಿಪ್ರಾಯಗಳನ್ನು ಗೌರವಿಸುತ್ತಲೇ ತಮ್ಮ ಅಭಿಪ್ರಾಯಗಳನ್ನು
ಮಂಡಿಸಬೇಕೆನ್ನುವ ಕನಿಷ್ಟ ಸೌಜನ್ಯವೂ ಇಲ್ಲದ ಕೋಮುವ್ಯಾಧಿ
ಪೀಡಿತರನ್ನು ಜ್ಯಾತ್ಯಾತೀತ ಪರಂಪರೆಯ ರಂಗಭೂಮಿ ಸಾಮೂಹಿಕವಾಗಿ ಒಂದಾಗಿ ಖಂಡಿಸಲೇಬೇಕಿದೆ.
ಕಲಾಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಲು
ಹಾಗೂ ರಂಗಭೂಮಿಯ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳಲು ಎಲ್ಲಾ ಕಲಾವಿದರುಗಳು, ರಂಗಸಂಘಟಕರು, ಅಕಾಡೆಮಿಗಳು
ಹಾಗೂ ಮಾಧ್ಯಮಗಳು ಕೋಮುವಾದಿಗಳ ಜನವಿರೋಧಿತನದ ಈ ದೃಷ್ಕೃತ್ಯವನ್ನು ಖಂಡಿಸುತ್ತಾ ಮತೀಯ ಶಕ್ತಿಗಳಿಗೆ
ಎಚ್ಚರಿಕೆಯನ್ನು ತಮ್ಮ ತಮ್ಮ ಮಾಧ್ಯಮಗಳ ಮೂಲಕ ಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಜ್ಯಾತ್ಯಾತೀತ ಮೌಲ್ಯಗಳಲ್ಲಿ
ನಂಬಿಕೆ ಇರುವ.. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುವ ಎಲ್ಲರೂ ಕಲಾಭಿವ್ಯಕ್ತಿ ವಿರೋಧಿಗಳ
ದಾದಾಗಿರಿಯನ್ನು ಹಿಮ್ಮೆಟ್ಟಿಸಬೇಕಿದೆ.
ಇದು ಕೇವಲ ಒಂದು ಬೀದಿನಾಟಕದ ಕುರಿತ ವಿರೋಧದ ಪ್ರಶ್ನೆಯಲ್ಲ.
ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ. ತಮ್ಮನ್ನು ವಿರೋಧಿಸುವ ಎಲ್ಲವನ್ನೂ ಎಲ್ಲರನ್ನೂ ಸಾಮ ಬೇಧ
ದಂಡಾದಿಗಳನ್ನು ಬಳಸಿ ಮಟ್ಟಹಾಕಲು ಪ್ರಯತ್ನಿಸುವ ಸಮಾಜದ್ರೋಹಿ ದುಷ್ಟ ಶಕ್ತಿಗಳಿಗೆ ಪ್ರಭಲವಾದ ಪ್ರತಿರೋಧವನ್ನು
ಒಡ್ಡಲೇಬೇಕಿದೆ. ವೈಚಾರಿಕ ಅಭಿವ್ಯಕ್ತಿ ಸ್ವಾತಂತ್ರ್ಯ ನಮ್ಮ ಹಕ್ಕು ಹಾಗೂ ಅನ್ಯಾಯವನ್ನು ಪ್ರಶ್ನಿಸುವುದು
ನಮ್ಮ ಕರ್ತವ್ಯ ಎಂಬುದನ್ನು ಎಲ್ಲಾ ಪ್ರಜ್ಞಾವಂತರೂ ತೋರಿಸಿ ಕೊಡಬೇಕಿದೆ. ವೈರಾಣುಗಳಿಗೆ ಪ್ರತಿರೋಧವನ್ನು
ಕಳೆದುಕೊಂಡ ದೇಹ ನಶಿಸಿಹೋಗುತ್ತದೆ. ಅನ್ಯಾಯಗಳಿಗೆ ಪ್ರತಿರೋಧಿಸದ ದೇಶ ಸರ್ವನಾಶವಾಗುತ್ತದೆ. ಇದಕ್ಕೆ
ಹಿಟ್ಲರ್‌ನ ಪ್ಯಾಸಿಸ್ಟ್ ದುರಾಡಳಿತ ಅತಿ ದೊಡ್ಡ ಚಾರಿತ್ರಿಕ ಉದಾಹರಣೆಯಾಗಿದೆ.. ಪ್ಯಾಸಿಸಂ ಮತ್ತೆ
ಈ ದೇಶವನ್ನು ಆವರಿಸಿ ಆಕ್ರಮಿಸಿ ಆಪೋಷಣ ತೆಗೆದುಕೊಳ್ಳುವ ಮೊದಲು ಎಲ್ಲಾ ಕಲಾವಿದರು, ಸಾಹಿತಿಗಳು,
ಬುದ್ದಿಜೀವಿಗಳು, ಹೋರಾಟಗಾರರು ಒಂದಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿಗಾಗಿ ಸಾಧ್ಯವಾದ ಎಲ್ಲವನ್ನೂ
ಮಾಡಬೇಕಿದೆ. ಮತ್ತೆ ಈ ದೇಶ ಸರ್ವಾಧಿಕಾರಿಗಳ ಪಾಲಾಗದಂತೆ ಕಾಪಾಡಬೇಕಿದೆ. ರಂಗಭೂಮಿಯ ಸ್ವಾಭಿಮಾನವನ್ನು
ಎತ್ತಿ ಹಿಡಿಯಬೇಕಿದೆ.
ಈ ನಿಟ್ಟಿನಲ್ಲಿ ಉಮಾಶ್ರೀಯವರು ತೀವ್ರವಾಗಿ ಪ್ರತಿಕ್ರಿಯಿಸಿ
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡುವವರಿಗೆ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಎಪ್ರಿಲ್ ೨೦
ರಂದು ಎನ್ ಎಸ್‌ಡಿ ನಾಟಕೋತ್ಸವದ ಉದ್ಘಾಟನೆಯಲ್ಲಿ ಭಾಗವಹಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ
ಉಮಾಶ್ರೀಯವರು “ರವೀಂದ್ರ ಕಲಾಕ್ಷೇತ್ರದಲ್ಲಿ
ನಡೆದ “ಅಚ್ಚೇ ದಿನ್ ಎಲ್ಲಿ” ಬೀದಿನಾಟಕ ಪ್ರದರ್ಶನಕ್ಕೆ ಅಡ್ಡಿ ಪಡಿಸಿದವರು
ದುಷ್ಟರು. ಇಂತಹ ದಬ್ಬಾಳಿಕೆಗೆ ರಂಗಭೂಮಿ ಅಲುಗಾಡದು. ಯಾವುದೇ ಅಳುಕಿಲ್ಲದೇ ಸಮಾಜದ ಓರೆಕೋರೆಗಳನ್ನು
ಹೇಳುವ ಏಕೈಕ ಮಾಧ್ಮ ರಂಗಭೂಮಿ. ಸಾಂಸ್ಕೃತಿಕ ದಬ್ಬಾಳಿಕೆಯ ಮೂಲಕ ಅದರ ದ್ವನಿ ಅಡಗಿಸಲು ಸಾಧ್ಯವೇ ಇಲ್ಲ.
ನಾಟಕ ತಡೆಯಲು ನಡೆಸಿದ ಪ್ರಯತ್ನವನ್ನು ರಂಗಕಲಾವಿದೆಯಾಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ
ಸಚಿವೆಯಾಗಿ ಖಂಡಿಸುತ್ತೇನೆ” ಎಂದು ಹೇಳಿ ಮತೀಯವಾದಿ
ದುಷ್ಟಶಕ್ತಿಗಳಿಗೆ ಬಿಸಿಮುಟ್ಟಿಸಿದರು. ಹಾಗೆಯೇ ಜೆ.ಲೊಕೇಶ್, ಡಾ.ಮರುಳಸಿದ್ದಪ್ಪ, ಜಿ.ಕೆ.ಗೋವಿಂದರಾವ್,
ಡಾ.ಕೆ.ವೈ.ನಾರಾಯಣಸ್ವಾಮಿ, ನಾಗರಾಜಮೂರ್ತಿ, ಶಶಿಧರ್ ಅಡಪ... ಮುಂತಾದ ರಂಗಕರ್ಮಿಗಳು ರಂಗಾಭಿವ್ಯಕ್ತಿ
ಸ್ವಾತಂತ್ರ್ಯದ ದಮನದ ವಿರುದ್ಧ ದ್ವನಿ ಎತ್ತಿದರು. ಪತ್ರಿಕಾ ಹೇಳಿಕೆ ನೀಡುವ ಮೂಲಕ ತಮ್ಮ ಪ್ರತಿರೋಧವನ್ನು
ವ್ಯಕ್ತಪಡಿಸಿದರು.
ಆದರೆ.. ರಂಗಪ್ರದರ್ಶನದ ಅಭಿವ್ಯಕ್ತಿ ಸ್ವಾತಂತ್ರ್ಯದ
ಪರವಾಗಿ ನಿಂತು, ಕೋಮುಶಕ್ತಿಗಳ ಗೂಂಡಾಗಿರಿಯನ್ನು ವಿರೋಧಿಸಿ ಪ್ರತಿಭಟಿಸುವ ಕೆಲಸವನ್ನು ರಂಗಭೂಮಿಯ
ಪ್ರಾತಿನಿಧಿಕ ಸರಕಾರಿ ಸಂಸ್ಥೆಯಾದ “ಕರ್ನಾಟಕ
ನಾಟಕ ಅಕಾಡೆಮಿ” ಮಾಡಬೇಕಿತ್ತು.
ಆದರೆ ಅದ್ಯಾಕೋ ಅದರ ಅಧ್ಯಕ್ಷರು ಹಾಗೂ ಸದಸ್ಯರುಗಳು ದಿವ್ಯ ಮೌನವನ್ನು ವಹಿಸಿದರು. ಜೊತೆಗೆ ಕಲೆ ಸಾಹಿತ್ಯ
ಜಾನಪದಕ್ಕೆ ಸಂಬಂಧಿಸಿದ ಅಕಾಡೆಮಿ ಪ್ರಾಧಿಕಾರಗಳ ಅಧ್ಯಕ್ಷರುಗಳು ಹಿಂದುತ್ವವಾದಿಗಳ ಸಾಂಸ್ಕೃತಿಕ ವಿರೋಧಿತನವನ್ನು
ಖಂಡಿಸಬೇಕಿದೆ. ಏನೇ ಆಗಲಿ ಅಭಿವ್ಯಕ್ತಿ ಸ್ವಾತಂತ್ರ್ಯ
ಕಲಾವಿದರ ಹಕ್ಕು. ಅದನ್ನು ಉಳಿಸಿಕೊಳ್ಳಲು ಪ್ರಜ್ಞಾವಂತರೆಲ್ಲರೂ ಒಂದಾಗಲೇಬೇಕಿದೆ. ಇಂದು ಬೀದಿನಾಟಕಕ್ಕೆ
ಅಡ್ಡಿಪಡಿಸಿದವರು, ಸಾಗರದಲ್ಲಿ ಡಾ.ಮೇಟಿಯವರ ಮಾತನ್ನು ಅಪಾರ್ಥಮಾಡಿಕೊಂಡು ಮುಗಿಬಿದ್ದವರು ನಾಳೆ ವ್ಯವಸ್ಥೆಯ
ಅವ್ಯವಸ್ಥೆಯನ್ನು ಪ್ರಶ್ನಿಸಿದವರೆಲ್ಲರ ಮೇಲೆ ಹರಿಹಾಯ್ದು ಹಲ್ಲೆಮಾಡುವುದರಲ್ಲಿ ಸಂದೇಹವೇ ಇಲ್ಲ.
ಭವಿಷ್ಯದಲ್ಲಿ ಬರಬಹುದಾದ ಪ್ಯಾಸಿಸ್ಟ್ ಆಡಳಿತದ ಮೊಳಕೆಗಳನ್ನು ಸಣ್ಣದರಲ್ಲೇ ಚಿವುಟಬೇಕು. ಇಲ್ಲವಾದರೆ
ಈ ದೇಶವನ್ನು ಹಿಟ್ಲರ್ ಮಾದರಿಯ ಸರ್ವಾಧಿಕಾರಿ ಕೋಮು ಉನ್ಮಾದದ ಆಡಳಿತಕ್ಕೆ ಈಡುಮಾಡಿದಂತಾಗುತ್ತದೆ.
ಮುಂದಿನ ತಲೆಮಾರಿಗೆ ಉತ್ತರದಾಯಿತ್ವ ಹೊಂದಿರುವ ಪ್ರಜ್ಞಾವಂತ ಪ್ರಗತಿಪರರೆಲ್ಲಾ ಮೌನವನ್ನು ಮುರಿದು
ಕೋಮುವಾದಿ ಪಡೆಯ ಸಾಂಸ್ಕೃತಿಕ ದಾದಾಗಿರಿಗೆ ತೀವ್ರವಾದ ಪ್ರತಿರೋಧವನ್ನು ತೋರಬೇಕಿದೆ. ರಂಗಕರ್ಮಿಗಳು
ಇತರ ಕ್ಷೇತ್ರಗಳ ಜನಪರ ಮನಸುಗಳನ್ನು ಸೇರಿಸಿಕೊಂಡು ‘ಅಭಿವ್ಯಕ್ತಿ
ಸ್ವಾತಂತ್ರ್ಯ ಉಳಿಸಿ’ ಆಂದೋಲನವನ್ನು
ಶುರುಮಾಡಬೇಕಿದೆ. ಈ ನಿಟ್ಟಿನಲ್ಲಿ ಉಮಾಶ್ರೀಯವರ ದಿಟ್ಟವಾದ ಹೇಳಿಕೆ ಮಾದರಿಯಾಗಿದೆ.
- ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ