ಗುರುವಾರ, ಏಪ್ರಿಲ್ 28, 2016

ಬರ ಬಂತು ಬರ ..! ಬೀದಿನಾಟಕ ಪ್ರಹಸನ


                      
ದೃಶ್ಯ - 1

(ಎಲ್ಲಾ ಕಲಾವಿದರೂ ಯಾತಕ್ಕೆ ಮಳೆ ಹೋದವೋ ಶಿವಾ ಶಿವಾ ಲೋಕಾ ತಲ್ಲಣಿಸುತಾವೋ ಹಾಡುತ್ತಾರೆ)

ಪುಡಾರಿ :         ಎಲ್ಲರೂ ಕಿವಿಗೊಟ್ಟು ಕೇಳ್ರಿ. ಹಿಂದೆಂದೂ ಬರದಂತಾ ಬರಗಾಲ ಈ ಸಲ ಬಂದೈತೆ. ಬಿಸಿಲು ಕೆಂಡಾ ಕಾರತಿದೆ. ಕುಡಿಯೋದಕ್ಕೆ ನೀರಿಲ್ಲ, ದನಕರುಗಳಿಗೆ ಮೇವಿಲ್ಲ. ಇದೆಲ್ಲಾ ಸರಕಾರಕ್ಕೆ ಗೊತ್ತಾಗಿ ಇನ್ನೂರೈವತ್ತು ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ. ಟ್ಯಾಂಕರನಿಂದಾ ನೀರು ಕೊಡ್ತಾರೆ, ಜಾನುವಾರುಗಳಿಗೆ ಮೇವು ಕೊಡ್ತಾರೆ. ನರೇಗಾ ಯೋಜನೆಯೊಳಗ ಕೆಲಸಾನೂ ಕೊಡ್ತಾರೆ....

ಒಬ್ಬ     :         ಕೆಲಸಾನಾ...? ರೀ ಸ್ವಾಮಿ... ಈಗಾಗಲೇ ಮಾಡಿದ ಕೆಲಸಕ್ಕೆ ಕೂಲಿ ಕೊಟ್ಟಿಲ್ಲಾ.. ಪುಕ್ಸಟ್ಟೆ
                   ದುಡೀಬೇಕೇನು.

ಪುಡಾರಿ  :        ಬರುತ್ತೆ ಬರುತ್ತೆ.. ಬಾಕಿ ಹಣ ಎಲ್ಲಾ ಸಿಗುತ್ತೆ... ಸರಕಾರ ಮನಸ್ ಮಾಡಿದ್ರೆ ಎಲ್ಲಾ ಪರಿಹಾರ
                   ಆಗುತ್ತೆ.

ಮತ್ತೊಬ್ಬ :       ನೀರು ಬೇಕು ನೀರು... ಮನಿಮಂದಿಯೆಲ್ಲಾ ಸ್ನಾನಾ ಮಾಡದ ನಾಲ್ಕು ದಿನಾ ಆಯ್ತು.

ಒಬ್ಬ  :           ಸ್ನಾನಾ ಮಾಡ್ತಾನಂತ ಸ್ನಾನಾ... ಥೂ. ವಾಸನೆ... ಸರಿ ಆಚೆ.. ನಮಗಿಲ್ಲಿ ತೊಳಕೊಳ್ಳಾಕೂ
                   ನೀರಿಲ್ಲಾ.. ಕಲ್ಲಿಂದಾ ವರಿಸಿಕೊಳ್ತಿದ್ದೀವಿ..

ಪುಡಾರಿ :         ಹಾಂ.. ಹಾಂ.. ನಿಮ್ಮ ಸಂಕಟಗಳನ್ನೆಲ್ಲಾ ಕೇಳಿ ಪರಿಹಾರ ಮಾಡ್ಬೇಕಂತಾ ಸ್ವತಃ ನಮ್ಮ ಮಾನ್ಯ
 ಮುಖ್ಯಮಂತ್ರಿಗಳೇ ನಾಳೆ ನಮ್ಮೂರಿಗೆ ಬರ‍್ತಿದ್ದಾರೆ..

ಒಬ್ಬ    :          ಮುಖ್ಯ ಮಂತ್ರಿಗಳು ಬರ‍್ತಾರಾ.. (ಎಲ್ಲರೂ ಅದನ್ನೇ ರಿಪೀಟ್ ಮಾಡಿ ಹೇಳ್ತಾರೆ)

ಪುಡಾರಿ :         ಹೌದು.. ಬನ್ನಿ.. ಎಲ್ಲರೂ ಊರನ್ನ ಸಿಂಗರಿಸೋಣ, ಮುಖ್ಯಮಂತ್ರಿಗಳನ್ನ ಅದ್ದೂರಿಯಿಂದಾ
ಸ್ವಾಗತಿಸೋಣ. ನಮ್ಮ ತಾಪತ್ರಯಗಳನ್ನೆಲ್ಲಾ ಹೇಳಿಕೊಳ್ಳೋಣ. ಏಳ್ರಪ್ಪೋ ಏಳ್ರಿ.. ಟೈಂ ಬಾಳಾ ಕಡಿಮೆ ಐತೆ... ಏಳಿ..;

(ಎಲ್ಲರೂ ಖಷಿಯಿಂದ ಹಾಡಿ ಕುಣಿಯುತ್ತಾ ಊರು ಕೇರಿ ಸಿಂಗರಿಸತೊಡಗುತ್ತಾರೆ)

ದೃಶ್ಯ - 2

(ಅಧಿಕಾರಿಯ ಕಛೇರಿಯಲ್ಲಿ ಗುತ್ತಿಗೆದಾರರ ಸಭೆ )

ಗುತ್ತಿಗೆದಾರ :     ಸಧ್ಯ ಬರ ಬಂತಲ್ಲಾ.. ಆ ದೇವರು ದೊಡ್ಡವನು... ಜೆಸಿಬಿ ಕೊಂಡಕೊಳ್ಳಲಿಕ್ಕೆ  ಮಾಡಿದ ಸಾಲಾ
 ತೀರಿಸಿ ಅಟೋಮ್ಯಾಟಿಕ್ ಬೋರ‍್ವೆಲ್ ಗಾಡಿ ಪರ್ಚೆಸ್ ಮಾಡಬೇಕಂತಾ ಮಾಡೇನಿ ಸಾಹೇಬ್ರೆ..

ಅಧಿಕಾರಿ  :       ಬರಕ್ಕೂ ನಿಮ್ಮ ಸಾಲಕ್ಕೂ ಏನ್ರಿ ಸಂಬಂಧ.

ಗುತ್ತಿಗೆದಾರ :     ಐತೆ.. ಸಂಬಂಧ ಐತೆ... ಬರ ಅಂದ್ರೆ ಜನರಿಗೆ ಶಾಪ ಆದ್ರೆ ನಮ್ಮನಿಮ್ಮಂತೋರಿಗೆ ವರ...
ದೇವ್ರ ಕೊಟ್ಟ ವರ.

ಅಧಿಕಾರಿ  :       ಜನಾ ಕೂಳು ನೀರಿಲ್ಲದೇ ಸಾಯ್ತಿದ್ದಾರೆ. ಇಂತಾದ್ದರಲ್ಲಿ ಇವರಿಗೆ ವರಾ ಅಂತೆ.. ಕೇಳಿದವರು
 ನಗಬಾರದ ಜಾಗದಿಂದ ನಗ್ತಾರೆ.

ಗುತ್ತಿಗೆದಾರ:     ಸಾಯೋವ್ರನ್ನ ಯಾರಾದ್ರು ಬ್ಯಾಡಾ ಅನ್ನೋಕಾಗುತ್ತೇನ್ರಿ. ಮೊದಲು ನಾವು ಬದ್ಕೋ ದಾರಿ
ಕಂಡ್ಕೋಬೇಕ್ರಿ. ಒಬ್ಬರನ್ನ ತುಳ್ದು ಇನ್ನೊಬ್ಬರು ಬದುಕೋದು ಪ್ರಕೃತಿ ಧರ್ಮ ಐತ್ರಿ ಸಾಹೇಬರ. ಗಾಳಿ ಬಿಟ್ಟಾಗ ತೂರಿಕೊಂಡವ್ನ ಜಾಣ ಅಂತಾ ಗಾದಿ ಮಾತು ಕೇಳಿರಿಲ್ರಿ.  ಅಷ್ಟಕ್ಕೂ ಬರಾ ಏನು ವರ್ಷಾ ವರ್ಷಾ ಬರತೈತಾ. ನೀವು ಹೂಂ ಅಂದ್ರ ನಾನು ನೀವು ನಮ್ಮಂತವರೆಲ್ಲಾ ಬದುಕಬಹುದು. ಬರಾ ಅನ್ನೋ ಶಾಪಾನಾ ವರಾ ಮಾಡ್ಕೋಬೋಹ್ದು.

ಅಧಿಕಾರಿ :        ಇವಾಗೇನು ಮಾಡ್ಬೇಕು ಅದನ್ನ ಮೊದಲು ಹೇಳಿ...

ಗುತ್ತಿಗೆದಾರ:     ಹೆ...ಹ್ಹೆ...ಹ್ಹೆ... ಅಂತಾದ್ದೇನಿಲ್ಲ.... ಸರಕಾರ ಬರ ನಿರ್ವಹಣೆಗೆ ಬೇಕಾದಷ್ಟು ಹಣ ಬಿಡುಗಡೆ ಮಾಡಿದೆ.
ಜನರಿಗೆ ಅರ್ಜೆಂಟಾಗಿ ನೀರು, ಜಾನುವಾರುಗಳಿಗೆ ಮೇವು ಒದಗಿಸದಿದ್ದರೆ ಸರಕಾರಕ್ಕೆ ಕೆಟ್ಟ ಹೆಸರು. ಅದಕ್ಕೆ... ಈ ನೀರು ಮೇವು ಸಪ್ಲೈ ಮಾಡೋ ಗುತ್ತಿಗೆ ನನಗೆ ಕೊಡಬೇಕು. ಒಂದಕ್ಕೆರಡು ಪಟ್ಟು ಬಿಲ್ ಬರೀಬೇಕು.. ಒಟ್ಟಾರೆಯಾಗಿ ನಾವು ನೀವು ಸಂದರ್ಭದ ಪಾಯಿದೆ ಪಡೀಬೇಕು.

ಅಧಿಕಾರಿ :        ಆಯ್ತು ಗೊತ್ತಾಯ್ತು.. ನಿಮಗೆ ಹತ್ತು ಹಳ್ಳಿಗೆ ನೀರು ಮೇವು ಸಪ್ಲೈ ಮಾಡೋ ಗುತ್ತಿಗೆ ಕೊಡ್ತೇನೆ.
ಆದರೆ.. ನಮ್ಮ ಪರ್ಸಂಟೇಸ್ ಗೊತ್ತಲ್ಲಾ.. ಯಾಕೆಂದರೆ ಹಣ ಮೇಲಿಂದಾ ಕೆಳಗಿನವರೆಗೂ ಹೆಂಗ ಬರುತ್ತೋ ಹಾಗೇ ವಾಪಸ್ ಕೆಳಗಿನಿಂದ ಮೇಲಿನವರೆಗೂ ಹೋಗಬೇಕು. ಎಲ್ಲಾ ದೇವರಗಳಿಗೂ ಪ್ರಸಾದ ಕೊಟ್ಟು ಪ್ರಸನ್ನಗೊಳಿಸಬೇಕು.

ಗುತ್ತಿಗೆದಾರ :     ಆಯ್ತ್ರೀ ಸರ್.. ಅದೆಲ್ಲಾ ಗೊತ್ತಿರೋದೆ... ಆದರೆ.. ನಮ್ಮ ಬಾವಮೈದನಿಗೂ ಗುತ್ತಿಗೆ ಕೊಡಸಿದ್ರೆ....

ಅಧಿಕಾರಿ :        ನಮಗೆ ಕೊಡೂದು ಕೊಟ್ರೆ ಯಾರಿಗೆ ಬೇಕಾದರೂ ಗುತ್ತಿಗೆ ಕೊಡೋಣ. ಎಲ್ರೂ ಬದುಕೋದು
 ಮುಖ್ಯಾ...

ಗುತ್ತಿಗೆದಾರ :     ಅದಕ್ಕೆ ಹೇಳೂದು ಸಾರ್.. ಸರಕಾರಿ ಕೆಲಸ ದೇವರ ಕೆಲಸಾ ಅಂತಾ. ಎಲ್ಲರೂ ಹರಿದು
                   ಹಂಚಿಕೊಂಡು ತಿನ್ನಬೇಕು ದೇವರು ಕೊಟ್ಟ ವರಪ್ರಸಾದಾನ.

ಅಧಿಕಾರಿ :        ಆಯ್ತು... ನಾಳೆ ಸಿಎಂ ಸಾಹೇಬರು ಬರವೀಕ್ಷಣೆಗೆ ಬರ‍್ತಿದ್ದಾರೆ.. ನಿಮ್ಮ ನೀರಿನ ಟ್ಯಾಂಕರ‍್ಗಳೆಲ್ಲಾ ನೀರು
ತುಂಬಿಕೊಂಡು ಊರು ಕೇರಿಗಳಲ್ಲಿ ಸಿದ್ದವಾಗಿರಬೇಕು. ಮೇವಿನ ಲಾರಿಗಳು ಬಂದು ನಿಂತಿರಿಬೇಕು. ಹಾಂ.. ನರೇಗಾ ಕಾಮಗಾರಿ ಕೆಲಸಾ ಆಗ್ತಿದೆ ಅಂತಾ ತೋರಿಸೋಕೆ ಒಂದಿನ್ನೂರು ಜನ ಕೂಲಿಯಾಳುಗಳನ್ನು ಒಂದು ದಿನದ ಮಟ್ಟಿಗೆ ಕರ‍್ಕೊಂಡು ಬನ್ನಿ... ಸಿ.ಎಂ ಆ ಕಡೆ ಹೋಗೋವರೆಗೂ ಸುಮ್ನೆ ಕೆಲಸಾ ಮಾಡ್ತಿದ್ದಾರೆ ಅಂತಾ ತೋರಿಸಿದ್ರಾಯ್ತು. ನಮ್ದು ನೌಕರಿ ಉಳೀಬೇಕಲ್ರೀ.

ಗುತ್ತಿಗೆದಾರ :     ಅದರ ಚಿಂತಿ ಬಿಡ್ರಿ ಸಾಹೇಬರೆ... ನಾಳೆ ಎಲ್ಲಾ ಸಿದ್ದತೆ ಮಾಡಿರ‍್ತೇನೆ. ಆರಾಮಾಗಿ  ಬನ್ರಿ...


ದೃಶ್ಯ 3

ಪುಡಾರಿ  :        ಮುಖ್ಯ ಮಂತ್ರಿಗಳಿಗೆ

ಎಲ್ಲರೂ  :        ಜೈ  (ಜೈಕಾರಗಳು ಮುಂದುವರೆಯುತ್ತವೆ)

ಸಿಎಂ  :           ನನ್ನ ಪ್ರೀತಿಯ ಮಹಾಜನಗಳೇ. ನೀರು ಆಹಾರ ಕೆಲಸ ಇಲ್ಲದೇ ನೀವೆಲ್ಲಾ ಅನುಭವಿಸುತ್ತಿರುವ
ಸಂಕಟಾ ತಿಳಿದು ನನಗ್ ಬಾಳಾ ಸಂಕಟಾ ಆಯ್ತು. ಅದಕ್ಕೆ ಬೆಳಿಗ್ಗೆ ತಿಂಡೀನೂ ತಿನ್ನದೇ ಹೆಲಿಕ್ಯಾಪ್ಟರಲ್ಲಿ ನಿಮ್ಮನ್ನ ನೋಡಬೇಕು ಅಂತಾ ಓಡೋಡಿ ಬಂದೆ.. ಏನು ಮಾಡೋಕಾಗುತ್ತೆ.. ನಮ್ಮ ಕೈಲಿ ಏನಿದೆ. ಬಂದಿರೋ ಬರಾ ನಿಲ್ಲಿಸೋಕಂತೂ ಆಗೋದಿಲ್ಲ. ಉರಿಯೋ ಸೂರ್ಯಾನ ತಡಿಯೋಕಂತೋ ಬರೋದಿಲ್ಲ. ಆದರ... ಮುಖ್ಯಮಂತ್ರಿಯಾಗಿ ನಿಮಗೆ ನೀರು ಕೆಲಸ ಕೊಡಬಲ್ಲೆ, ನಿಮ್ಮ ಜಾನುವಾರುಗಳಿಗೆ ಮೇವು ಕೊಡಬಲ್ಲೆ. ಈಗಾಗಲೇ ಇದಕ್ಕೆಲ್ಲಾ ವ್ಯವಸ್ಥೆ ಮಾಡಿದ್ದೇನೆ. ನಿಮ್ಮೆಲ್ಲರ ಕೃಪೆ ಆ ದೇವರ ಕರುಣೆ ನಮ್ಮ ಮೇಲಿರುವವರೆಗೂ ಯಾರೂ ನನ್ನ ಅಲ್ಲಾಡಿಸೋಕಾಗೋದಿಲ್ಲ.

ಎಲ್ಲರೂ :         (ಚಪ್ಪಾಳೆ ಹೊಡೆಯುತ್ತಾರೆ. ಖಾಲಿ ಕೊಡ ಹಿಡಿದು ಬಂದ ಹೆಂಗಸರು_

ಮಹಿಳೆ :          ನಮಗೆ ನೀರು ಬೇಕು ನೀರು.. (ಎಲ್ಲರೂ ಬೇಕೆ ಬೇಕು ನೀರು)

ಪುಡಾರಿ :         ಹಾಂ.. ಶಾಂತಿ.. ನೋಡಿ ಅಲ್ಲಿ ನಿಂತಿದೆ ಅಲ್ಲಾ ಟ್ಯಾಂಕರ್ ಅದರಲ್ಲಿದೆ ಬೇಕಾದಷ್ಟು ನೀರು.
ಎಲ್ಲಾ ಉಚಿತ.. ಮುಖ್ಯಮಂತ್ರಿಗೆ .. (ಎಲ್ಲರೂ ಜೈ)

ಒಬ್ಬ   :           ನಮ್ಮ ದನಕರುಗಳಿಗೆ ಮೇವಿಲ್ಲದೇ ಸಾಯ್ತಿದ್ದಾವೆ ಸ್ವಾಮಿ.. ಮೇವು ಬೇಕು ಮೇವು...
(ಎಲ್ಲರೂ ಮೇವು ಬೇಕು ಮೇವು)

ಪುಡಾರಿ :         ಅಲ್ಲಿ ಲಾರಿಗಳಲ್ಲಿ ಬೇಕಾದಷ್ಟು ಮೇವಿದೆ ಹೋಗಿ ತೆಗೆದುಕೊಳ್ಳಿ. ಎಲ್ಲಾ ಪ್ರೀ.. ಪ್ರೀ.. ಮುಖ್ಯಮಂತ್ರಿಗೆ

ಇನ್ನೊಬ್ಬ :    ಮಾಡೋದಿಕ್ಕೆ ಕೆಲಸಾ ಇಲ್ಲಾ ಸ್ವಾಮಿ.. ಊಟಕ್ಕೇನು ಮಾಡೋದು... ಮಕ್ಕಳು ಮರಿ ಉಪವಾಸ ಇದ್ದಾರೆ....ಕೆಲಸಾ ಬೇಕು ಕೆಲಸಾ.. (ಎಲ್ಲರೂ ಕೆಲಸಾ ಬೇಕು ಕೆಲಸಾ)

ಪುಡಾರಿ :      ಅದಕ್ಯಾಕೆ ಚಿಂತೆ ಮಾಡ್ತೀರಿ.. ಅಲ್ಲಿದೆ ಸರಕಾರಿ ಕಾಮಗಾರಿ.. ಹೋಗಿ.. ನಿಮ್ಮ ಕೈಲಾದಷ್ಟು ಕೆಲಸಾ ಮಾಡಿ. ಸರಕಾರ ಕೂಲಿ ಕೊಡುತ್ತೆ...  ಮಾನ್ಯ ಮುಖ್ಯಮಂತ್ರಿಗೆ (ಎಲ್ಲರೂ ಜೈ)

ಮುಖ್ಯಮಂತ್ರಿ :   ಅಕ್ಕ ತಂಗಿಯರೇ , ಅಣ್ಣ ತಮ್ಮಂದಿರೆ.... ನಿಮ್ಮೆಲ್ಲಾ ಕೋರಿಕೆಗಳನ್ನ ಈಡೇರಿಸಲಾಗಿದೆ. ಇನ್ನಾದರೂ
ನೆಮ್ಮದಿಯಾಗಿರಿ. ನಮ್ಮ ಸರಾಕಾರ ಬಡವರ ಪರ ಸರಕಾರ, ನಮ್ಮ ಪಕ್ಷ ರೈತರ ಪರವಾದ ಪಕ್ಷ. ನಿಮ್ಮ ಕಷ್ಟಗಳ ಪರಿಹಾರಕ್ಕೆ ನಾನು ಹಗಲು ರಾತ್ರಿ  ಶ್ರಮಿಸುತ್ತಿರುವೆ. ವಿರೋಧಪಕ್ಷಗಳು ಹೇಳ್ತಾವೆ ನಮ್ಮದು ನಿಷ್ಕ್ರೀಯ ಸರಕಾರ ಎಂದು. ಎಲ್ಲಾ ಸುಳ್ಳು ನೀವೆ ನೋಡಿದ್ರಲ್ಲಾ.. ನಾನೇ ಖುದ್ದಾಗಿ ಬಂದು ನಿಮ್ಮ ಸಮಸ್ಯೆಗಳನ್ನೆಲ್ಲಾ ಬಗೆಹರಿಸಿದೆ. ಕೇಂದ್ರ ಸರಕಾರ ಹಣ ಕೊಡುತ್ತಿಲ್ಲ. ನಾನು ಸರಕಾರದ ವತಿಯಿಂದ ಎಲ್ಲೆಲ್ಲೋ ಸಾಲಾ ಸೋಲಾ ಮಾಡಿ ಹಣ ತಂದು ಜನರ ಬರ ನೀಗಿಸುತ್ತಿದ್ದೇನೆ. ನಿಮ್ಮೆಲ್ಲರ ಬೆಂಬಲ ನಮಗಿರಲಿ. ಬರ ಅಧ್ಯಯನ ಮಾಡಲೆಂದು ಒಂದು ಕಮಿಟಿ ಮಾಡಿದ್ದೇನೆ. ಇಷ್ಟರಲ್ಲೇ ಅದು ವರದಿ ಕೊಡುತ್ತದೆ. ಅದನ್ನು ಜನಹಿತಕ್ಕಾಗಿ ಜಾರಿಗೆ ತರುತ್ತೆನೆಂದು ನಿಮಗೆ ಮಾತುಕೊಡುತ್ತೇನೆ. ಜೈ ಕರ್ನಾಟಕ.

ಅಧಿಕಾರಿ  :       (ಕಿವಿಯಲ್ಲಿ) ಸರ್.. ಬರ ವೀಕ್ಷಣೆ ಮಾಡಬೇಕು.. ರೈತರ ಹೊಲಗಳತ್ತ ಹೋಗೋಣವೇ..

ಮುಖ್ಯಮಂತ್ರಿ:   ರೀ ಇನ್ನೂ ಬೇಕಾದಷ್ಟು ಊರುಗಳಿಗೆ ಬೇಟಿಕೊಡಬೇಕಿದೆ. ಈ ವಿರೋಧ ಪಕ್ಷದವರು ಗಲಾಟೆ
ಮಾಡ್ತಿದ್ದಾರಂತಾ ಈ ಉರಿಬಿಸಲಲ್ಲಿ ಊರು ಕೇರಿ ಸುತ್ತಬೇಕಾಯ್ತು. ಸುಮ್ಕೆ ನಡೀರಿ ಸಂಜೆವೊಳಗೆ ಇನ್ನೂ ಇಪ್ಪತ್ತು ಕಡೆ ಮುಖತೋರಿಸಿ ರಾತ್ರಿ ಡೆಲ್ಲಿಗೆ ಹೈಕಮಾಂಡ್ ನೋಡಲು ಹೋಗಬೇಕು.

ಅಧಿಕಾರಿ :        ಆಯ್ತು ಸರ್... ನಡೀರಿ ಮುಂದಿನ ಊರಿಗೆ.... (ಹಿಂದಿನಿಂದ ಮುಖ್ಯಮಂತ್ರಿಗೆ ಜೈಕಾರದ ಘೋಷಣೆ)


ದೃಶ್ಯ 4

(ಒಂದು ಕಡೆ ಕೆಲವರು ಖಾಲಿ ಕೊಡಗಳನ್ನು ಹಿಡಿದುಕೊಂಡು ಕುಳಿತಿದ್ದಾರೆ. ಇನ್ನು ಕೆಲವರು ಮೇವು ಕೊಂಡಯ್ಯಲು ಬಂದಿದ್ದಾರೆ.ಮತ್ತೆ ಹಲವರು ಕೆಲಸಕ್ಕೆ ಹೋಗಲು ಕಾಯ್ತಿದ್ದಾರೆ. ಇನ್ನೊಂದು ಕಡೆಗೆ ಅಧಿಕಾರಿ, ಪುಡಾರಿ ಗುತ್ತಿಗೆದಾರರು ಬೀರು ಹೀರುತ್ತಾ ಮಾತಾಡುತ್ತಿದ್ದಾರೆ. ಇವೆರಡೂ ದೃಶ್ಯಗಳನ್ನು ಮಾಂಟೇಜ್ ಮಾದರಿಯಲ್ಲಿ ತೋರಿಸಬೇಕು.)

ಒಬ್ಬ     :         (ಈ ಕಡೆ ) ಏನಕ್ಕಾ ನಿನ್ನೆ ತುಂಬಿಕೊಂಡ ನೀರು ಖಾಲಿ ಆಯ್ತಾ.

ಅಧಿಕಾರಿ : ( ಆ ಕಡೆ) ನೀರು ನೀರು ಅಂದ್ರೆ ಎಲ್ಲರಿಗೂ ಎಲ್ಲಿಂದಾ ತಂದುಕೊಡೋದು. ಈ ಜನದ್ದೊಂದು ಒಳ್ಳೇ ಗೋಳು ಕಣ್ರಿ.....

ಮಹಿಳೆ   :        ಹೌದಣ್ಣಾ... ಮತ್ತೆ ನೀರಿನ ಟ್ಯಾಂಕರ್ ಬರುತ್ತೆ ಅಂತಾ ಹೊತ್ತಾರೆಯಿಂದಾ ಕಾಯ್ತಿದ್ದೀನಿ.

ಗುತ್ತಿಗೆದಾರ : ನಾನು ಬಿಲ್ ಪಾಸ್ ಆಗೋದನ್ನೇ ಕಾಯ್ತಿದ್ದೀನೆ. ಸಾಹೇಬರೆ.. ಮೊದಲು ನನ್ನ ನೀರಿನ ಟ್ಯಾಂಕರ್ ಬಿಲ್, ಮೇವಿನ ಲಾರಿ ಬಿಲ್ ರಿಲೀಸ್ ಮಾಡ್ಬಿಡಿ ಸಾಹೇಬರೆ..

ಇನ್ನೊಬ್ಬ  :       ಏನ್ಲಾ ಬಸ್ಯಾ ದೊಡ್ಡ ಹಗ್ಗಾನೇ ತಂದಿದ್ದೀ....

ಅಧಿಕಾರಿ : ಅದೇನಿದು ಇಷ್ಟು ದೊಡ್ಡ ಬಿಲ್ ತಗೊಂಡು ಬದ್ದಿದ್ದೀರಿ. ಆದರೆ ಸಪ್ಲೈ ಮಾಡಿದ್ದು ಕಡಿಮೆ.. ಬಿಲ್ಲಲ್ಲಿ ಮಾತ್ರ ಸಿಕ್ಕಾಪಟ್ಟೆ ಲೆಕ್ಕಾ ತೋರ‍್ಸಿದ್ದೀರಲ್ರಿ...

ಮತ್ತೊಬ್ಬ  :      ಹೌದು ಕಣ್ಲಾ ನಿನ್ನೆ ಮೇವು ಸ್ವಲ್ಪಾನೇ ತಕ್ಕೊಂಡೋದೆ. ಇವತ್ತು ಜಾಸ್ತಿ ಕಟ್ಟಕೊಂಡು ಹೋಗೋಣಾ ಅಂತಾ ಹಗ್ಗಾ ದೊಡ್ಡದೇ ತಂದೀವ್ನಿ...

ಗುತ್ತಿಗೆದಾರ : ನೀವೆ ಹೇಳದ್ರಲ್ಲಾ ಸಾಹೇಬ್ರೆ... ಮೇಲಿಂದ ಕೆಳಗೆ ಬಂದ ಸರಕಾರಿ ಹಣಾ ಮತ್ತೆ ಕೆಳಗಿಂದ ಮೇಲಿನವರೆಗೂ ಹೋಗಬೇಕಂತಾ. ಅದಕ್ಕೆ ದೊಡ್ಡ ಬಿಲ್ಲೇ ತಂದೀನಿ. ನಿಮ್ಮ ಪಾಲು ಸೇರಿಸಿ...

ಒಬ್ಬ    :          ಏನ್ರಪಾ ಗುದ್ದಲಿ ಸನಿಕಿ ತಗೊಂಡು ಎಲ್ಲಿಗೆ ಹೊಂಟ್ರಿ.

ಪುಡಾರಿ : ಎಲ್ಲಿಗೆ ಹೋಗ್ರಿದ್ದೀರಿ ಇರಿ ಸಾಹೇಬರೆ.. ಸರಕಾರಿ ಕಾಮಗಾರಿ ಬಿಲ್ ಪಾಸ್ ಮಾಡಿ ಹೋಗಿ...

ಮತ್ತೊಬ್ಬ :     ಅದೇ ಸರಕಾರಿ ಕಾಮಗಾರಿ ಕೆಲಸಕ್ಕಪ್ಪೋ. ಸುಮ್ಮನೆ ಕೂತೇನು ಮಾಡೋದು.. ಬರೋವಷ್ಟಾದ್ರೂ ರೊಕ್ಕ ಬರ‍್ಲಿ ಅಂತಾ.

ಅಧಿಕಾರಿ : ನಿಮ್ಮ ರೊಕ್ಕ ಸಿಕ್ಕುತ್ತೆ. ಚಿಂತೆ ಮಾಡಬಾಡ್ರಿ.. ನಾವಿರೋದಿನ್ಯಾಕೆ..  ಮೊದಲು ಬೀರ್ ಕುಡೀರಿ ಆಮೇಲೆ ನೀರು ಮೇವು ಕಾಮಗಾರಿ ಬಿಲ್ ಬಗ್ಗೆ ಮಾತಾಡೋಣ, ಇರಿ ಟೀವಿಯಲ್ಲಿ ಏನೋ ಸುದ್ದಿ ಬರ‍್ತಿದೆ...

ಇನ್ನೊಬ್ಬ :      ಏನ್ಲಾ ಅದು ರಾಮ್ಯಾ... ರೇಡಿಯೋ ಜೋರು ಮಾಡು.. ಏನೋ ವಾರ್ತಾ ಬರ‍್ತಿದೆಯಲ್ಲಾ ಕೇಳು... ಪರಿಹಾರ ಗಿರಿಹಾರ ತಗೊಂಡು ಬರ‍್ತಾರೇನೋ ಕೇಳೋಣ...

ರೇಡಿಯೋ ವಾರ್ತೆ : ಬರ ಅಧ್ಯಯನ ಸಚಿವ ಸಂಪುಟ ಉಪಸಮಿತಿಯು ತನ್ನ ವರದಿಯನ್ನು ಸರಕಾರಕ್ಕೆ ಕೊಟ್ಟಿದ್ದು
ರಾಜ್ಯದಲ್ಲಿ ಬರವೆಂಬುದು ಇಲ್ಲವೆಂದು ಹೇಳಲಾಗಿದೆ. ಒಂದಿಷ್ಟು ಬಿಸಿಲು ಮಾತ್ರ ಹೆಚ್ಚಾಗಿದೆ.. ಬೇಸಿಗೆ ಎಂದ ಮೇಲೆ ಬಿಸಿಲು ಝಳ ಇದ್ದೇ ಇರುತ್ತದೆ.. ಇದಕ್ಕೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ದಿ ಮಂತ್ರಿಗಳು ಬರ ಎನ್ನುವುದೆಲ್ಲಾ ಸುಳ್ಳು.. ಬಿಸಿಲನ್ನೇ ಬರ ಎಂದುಕೊಂಡು ವಿರೋಧಪಕ್ಷದವರು ಹುಯಿಲೆಬ್ಬಿಸುತ್ತಿದ್ದಾರೆಂದು ಸ್ಪಷ್ಟೀಕರಣ ನೀಡಿದ್ದಾರೆ...

ಗುತ್ತಿಗೆದಾರ : ಏನ್ರಿ ಸಾಹೇಬರ.. ಬರಾನೇ ಇಲ್ಲಾ ಅಂತಾ ವರದಿ ಕೊಟ್ಟಿದ್ದಾರೆ.. ನಮ್ಮ ಹೊಟ್ಟಿ ಮ್ಯಾಲೆ ಹೊಡೀತಿದ್ದಾರೆ. ಬರಾ ಇಲ್ಲಾ ಅಂದ್ರೆ ಅದನ್ನೇ ನಂಬಿಕೊಂಡ ನಮ್ಮಂತಾ ಗುತ್ತಿಗೆದಾರರು ಎಲ್ಲಿ ಹೋಗಿ ಸಾಯ್ಬೇಕು..

ಒಬ್ಬ    :          ಯಾವನ್ಲಾ ಅವನು ಅಡ್ಡಕಸಬಿನನ್ನ ಮಗಾ, ನಾವಿಲ್ಲಿ ನೀರು ಊಟಾ ಇಲ್ಲದೇ ಸಾಯ್ತಿದ್ದೀವಿ. ನಮ್ಮ
                   ಕಣ್ಣ ಮುಂದೆ ನಮ್ಮ ದನಗಳು ಸೊರಗಿ ಹಂಚಿಕಡ್ಡಿ ಆಗ್ತಿದ್ದಾವೆ. ಬರಾ ಇಲ್ಲಂತೆ ಬರಾ...

ಅಧಿಕಾರಿ : ಬರಾ ಇಲ್ಲಾ ಅನ್ನೋದು ರಾಜಕೀಯ ಸ್ಪಂಟ್ ಅಷ್ಟೇ. ವಿರೋಧಪಕ್ಷದವರ ಬಾಯಿ ಮುಚ್ಚಿಸಬೇಕಲ್ಲಾ ಅದಕ್ಕೆ ಈ  ಎಲ್ಲಾ ನಾಟಕ ನೀವೇನು ಚಿಂತೆ ಮಾಡ್ಬೇಡಿ ನಿಮ್ಮ ಬಿಲ್ ಪಾಸ್ ಮಾಡಿಸ್ತೇನೆ.

ಇನ್ನೊಬ್ಬ :        ಎಸಿ ಕಾರು, ಎಸಿ ರೂಮ್‌ನಲ್ಲಿ ಇರೋ ಜನರಿಗೆ ಬರ ಅದೆಂಗೆ ಕಾಣ್ತದೋ ಮಾವಾ.. ಇನ್ನೂ ಈ ನೀರಿನ ಟ್ಯಾಂಕರ್ , ಮೇವಿನ ಲಾರಿ ಯಾಕ ಬರಲಿಲ್ಲಾ... ಕಾಮಗಾರಿ ನಡೆಸೋರು ಬಂದಿಲ್ಲಾ...

ಪುಡಾರಿ : ಏನಾದರೂ ಮಾಡ್ರಿ ಸಾಹೇಬರ.. ಕಾಮಗಾರಿ  ಬಿಲ್ ಪಾಸ್ ಮಾಡ್ರಿ. ಹಗಲು ರಾತ್ರಿ  ನಮ್ಮ ಜೆಸಿಬಿಗಳು ಕೆಲಸ ಮಾಡಿ ಕೆರೆ ಹೂಳೆತ್ತಿದ್ದಾವೆ. ಕೂಲಿ ಕೆಲಸಾ ಮಾಡೋರನ್ನ ನಾನು ನೋಡ್ಕೋತೇನೆ...

ವ್ಯಕ್ತಿ    :           ನೀವಿಲ್ಲಿ ಕಾಯ್ತಾ ಕೂತಿದ್ದೀರಿ. ಆದರೆ.. ಮುಂದಿನ ಊರಲ್ಲಿ ವಿರೋಧ ಪಕ್ಷದ ನಾಯಕರು ಬರವೀಕ್ಷಣೆಗೆ
ಬಂದಿದ್ದಾರಂತೆ ಕಣ್ರನ್ನಾ. ಟಾಂಕರ್‌ಗಳು ಲಾರಿಗಳು ಅಲ್ಲಿಗೆ ಹೋಗಿದ್ದಾವಂತೆ.. ಇನ್ನೆಲ್ಲಿ ನೀರು.. ಇನ್ನೆಲ್ಲಿ ಮೇವು...

                    ಅಧಿಕಾರಿ : ಆಯ್ತು... ನಿಮ್ಮ ಬಿಲ್ ಪಾಸ್ ಆಗುತ್ತೆ.. ನಾಳೆಯಿಂದ ವಿರೋಧ ಪಕ್ಷದ ನಾಯಕರ
ಬರವೀಕ್ಷಣೆ ಶುರುವಾಗ್ತಿದೆ. ಅವರು ಎಲ್ಲೆಲ್ಲಿ ಹೋಗ್ತಾರೋ ಅದಕ್ಕಿಂತಾ ಮೊದಲು ನೀವು ಹೋಗಿ ನೀರು, ಮೇವು, ಕೆಲಸ ರೆಡಿ ಮಾಡಿರ‍್ಬೇಕು... ಹಣದ ಚಿಂತಿ ಬ್ಯಾಡಾ... ವಿರೋಧ ಪಕ್ಷದವರ ಬಾಯಿ ಮುಚ್ಚಿಸ್ಬೇಕು..

ಮಹಿಳೆ :         ಇವರ್ ಮನೆ ಹಾಳಾಗಾ... ಇವರಿಗೆ ಬರಬಾರದ್ ಬರಾ... ನೀರು ಬರ‍್ತದೆ ಅಂತಾ ಮನೇಲಿರೋ ನೀರನ್ನೆಲ್ಲ ಬಳಕೆ ಮಾಡಿದ್ದಾಯ್ತು. ಅಯ್ಯೋ ಶಿವನೆ... ಕೂಸುಕಂದಮ್ಮಗಳಿಗೆ ಕುಡಿಯೋದಕ್ಕೂ ನೀರಿಲ್ಲವಲ್ಲೋ ಶಿವನೇ....

ಗುತ್ತಿಗೆದಾರ : ನೀರು ಮೇವಿನ ಚಿಂತಿ ಬಿಡಿ ಸಾಹೇಬ್ರೆ... ಇಂತಾದ್ದೆಲ್ಲಾ ನಮಗೆ ನೀವು ಹೇಳಿಕೊಡಬೇಕಾ... ನಡೀರಿ ಹೋಗೋಣು... ಹುಚ್ಚು ಮುಂಡೆ ಮದುವೇಲಿ ಉಂಡೋಣೆ ಜಾಣ ಅನ್ನೂದನ್ನ ನಿಜಾ ಮಾಡೋಣು. 

ಒಬ್ಬ   :           ಮೇವಿಲ್ಲದೇ ಆಕಳು ಅಂಬೋ ಅಂತಿದ್ದಾವೆ..ಅವುಗಳ ಗೋಳು ನೋಡೋಕಾಗ್ತಿಲ್ಲ. ಇವತ್ತು
                   ತಗೊಂಡೋಗಿ ಸಂತೇಲಿ ಮಾರಿಬರ‍್ತೀನಿ...

ಇನ್ನೊಬ್ಬ :        ನೀನೇನೋ ಮಾರ‍್ತಿಯಾ.. ಆದರೆ ತಗೋಳ್ಳೋರು ಯಾರು? ಎಲ್ಲಾ ರೈತರು ನಮ್ಮಂಗೆ ಕಂಗಾಲಾಗವ್ರೆ. ಕಟಕರು ಸಹ ಗೋವು ಕೊಂಡುಕೊಳ್ಳೋದಿಲ್ಲ. ಗೋಹತ್ಯೆ ಮಾಡ್ತಾರೆ ಅಂತಾ ಹೇಳಿ ಕೊಂಡುಕೊಂಡವರನ್ನೇ ಸಾಯಿಸೋ ಜನಾ ಹುಟ್ಟಿಕೊಂಡವ್ರೇ.

ಮತ್ತೊಬ್ಬ :       ಏನಪ್ಪಾ ಮಾಡೋದು ಶಿವನೇ... ಯಾರನ್ನ ನಂಬೋದು.... ಯಾರನ್ನ ಬಿಡೋದು...

ತಾತ    :         ನೀರು... ನೀರು.. ( ಎನ್ನುತ್ತಾ ಬಸವಳಿದು ಕೆಳಗೆ ಬೀಳುತ್ತಾನೆ)

ಒಬ್ಬ    :          ಯಾರಾದ್ರೂ ಅಜ್ಜನಿಗೆ ಕುಡಿಯೋ ನೀರು ಕೊಡ್ರಪ್ಪಾ...

ಇನ್ನೊಬ್ಬ :     ನೀರು ಯಾರತ್ರ ಇದೆ ಕಾಕಾ... ಟ್ಯಾಂಕರ್ ಬರುತ್ತೆ ಅಂತಾ ಎಲ್ರೂ ನೀರು ಬಳಕೆ ಮಾಡಿ ಖಾಲಿ ಕೊಡಗಳನ್ನ ತಂದಿದ್ದಾರೆ ನೋಡು.

ತಾತ    :         ನೀರು... ನೀರು.... (ಅನ್ನುತ್ತಲೇ ಅಸುನೀಗುತ್ತಾನೆ.)

(ಕೆಲವರು ಆತನನ್ನು ಹೊತ್ತುಕೊಂಡು ಒಂದು ಸುತ್ತು ಹಾಕುತ್ತಾರೆ. ಕಾಲಿ ಕೊಡಗಳು ಹಿಂಬಾಲಿಸುತ್ತವೆ.
ಬಾಕಿಯವರೆಲ್ಲಾ ಯಾತಕ್ಕೆ ಮಳೆ ಹೋದವೋ ಶಿವ ಶಿವಾ ಲೋಕ ತಲ್ಲಣಿಸುತಾವೆ.. ಎಂದು ಹಾಡು ಹಾಡುತ್ತಾ
ನೋವಿನಿಂದ ಹೋಗುತ್ತಾರೆ. ನಾಟಕ ಮುಗಿಯುತ್ತದೆ)

                         - ಶಶಿಕಾಂತ ಯಡಹಳ್ಳಿ
 
  





         








ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ