ಬುಧವಾರ, ಏಪ್ರಿಲ್ 13, 2016

ಮಹಿಳಾ ಸಂವೇದನೆಯ ಆಸ್ಸಾಮಿ ರಂಗಪ್ರಯೋಗ “ಜಾತ್ರಾ” :


ಜಾತ್ರಾದಲ್ಲಿ ದಮನಿತ ಮಹಿಳೆಯ ಯಾತ್ರೆ :


ಅಲ್ಪಸಂಖ್ಯಾತ ಸಮುದಾಯದೊಳಗಿರುವ ಪುರುಷಾಧಿಕಾರ ಹಾಗೂ ಧರ್ಮಗಳ ಹಿಡಿತದಿಂದ ನಲುಗಿರುವ ಮಹಿಳೆಯರ ಸಂಕಟಗಳೆನ್ನೆಲ್ಲಾ ತೆರೆದಿಡುವ ಪ್ರಯತ್ನವನ್ನು ಮಾಡುವ ನಾಟಕ ಜಾತ್ರಾ.. ಧರ್ಮಗಳ ಕಟ್ಟುಪಾಡುಗಳು ಅದು ಹೇಗೆ ಮನುಷ್ಯರನ್ನು ನಿಯಂತ್ರಿಸಿ ಮಹಿಳೆಯರ ಸ್ವಾತಂತ್ರ್ಯ ಹಾಗೂ ಬದುಕುವ ಹಕ್ಕುಗಳನ್ನು ಕಿತ್ತುಕೊಳ್ಳುತ್ತವೆ ಎನ್ನುವುದನ್ನು ಈ ನಾಟಕ ಸಮರ್ಥವಾಗಿ ಹೇಳುತ್ತದೆ. ಧರ್ಮಾಧಾರಿತ  ಪುರುಷಪ್ರಧಾನ ವ್ಯವಸ್ಥೆಯಲ್ಲಿ  ಮಹಿಳೆಯರ ಬದುಕು ಹೇಗೆ ಸಂಕಷ್ಟಗೊಳಗಾಗುತ್ತದೆನ್ನುವುದನ್ನು ಜಾತ್ರಾ ನಾಟಕವು ದೃಶ್ಯಗಳ ಮೂಲಕ ಅನಾವರಣಗೊಳಿಸುತ್ತದೆ. ಆಸ್ಸಾಮಿ ಭಾಷೆಯ ಈ ನಾಟಕವನ್ನು  ರಂಗನಿರಂತರ ವು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ  ಸಿಜಿಕೆ ರಾಷ್ಟ್ರೀಯ ರಂಗೋತ್ಸವದಲ್ಲಿ 2016 ಎಪ್ರಿಲ್ 13 ರಂದು ಪ್ರದರ್ಶಿಸಲಾಯಿತು. ಕರ್ನಾಟಕದಿಂದ ಹೋಗಿ ಆಸ್ಸಾಮಿನಲ್ಲಿ ನೆಲೆಸಿರುವ ರಂಗನಟಿ ಭಾಗೀರತಿಭಾಯಿ ಕದಂರವರ  ಸೀಗಲ್ ಥಿಯೇಟರ್ ತಂಡದ ಕಲಾವಿದರಿಗೆ  ಬಹುರುಲ್ ಇಸ್ಲಾಂರವರು ಜಾತ್ರಾವನ್ನು ನಿರ್ದೇಶಿಸಿದ್ದಾರೆ. ಇಮ್ರಾನ್ ಹುಸೇನ್‌ರವರ ಸಣ್ಣ ಕಥೆ ಆಧರಿಸಿ ಬಹುರುಲ್ ಇಸ್ಲಾಂರವರು ರಂಗರೂಪಗೊಳಿಸಿದ್ದಾರೆ.  ಆಸ್ಸಾಮಿ ಭಾಷೆಯಲ್ಲಿ ಜಾತ್ರಾ ಎಂದರೆ ಯಾತ್ರಾ ಎನ್ನುವ ಅರ್ಥ. ಆ ಭಾಷೆಯಲ್ಲಿ ಯಾ ಅನ್ನುವ ಅಕ್ಷರಕ್ಕೆ ಜಾ ಎನ್ನುವುದರಿಂದ ಈ ರೀತಿಯ ಹೇಳಲಾಗುತ್ತದಂತೆ. ಧರ್ಮಾವಲಂಬಿ ಸಮಾಜದಲ್ಲಿ ಮಹಿಳೆಯ ಬದುಕಿನ ಯಾತನೆಯ ಯಾತ್ರೆಯನ್ನು ಈ ಜಾತ್ರಾ ನಾಟಕ ತೋರಿಸುತ್ತದೆ.  

ಎಲ್ಲಾ ಧರ್ಮಗಳಂತೆಯೇ ಮುಸ್ಲಿಂ ಧಾರ್ಮಿಕ ಸಮುದಾಯದೊಳಗಿರಬಹುದಾದ ಲಿಂಗ ಅಸಮಾನತೆ ಹಾಗೂ ಮಹಿಳಾ ವಿರೋಧಿತನವನ್ನು ಹೇಳುವ ಜಾತ್ರಾ ನಾಟಕವು ಗಂಡಸರ ಅಟ್ಟಹಾಸ ಹಾಗೂ ಧರ್ಮದ ನಿಯಮಗಳ ಇಕ್ಕಳದಲ್ಲಿ ಸಿಕ್ಕು ನರಳುವ ಮಹಿಳೆಯರ ಗೋಳನ್ನು ಪ್ರೇಕ್ಷಕರ ಮನಮಿಡಿಯುವಂತೆ ರಂಗದಂಗಳದಲ್ಲಿ ತೋರಿಸುವಲ್ಲಿ ಸಫಲವಾಗಿದೆ. ಬಹುಪತ್ನಿತ್ವ ಹಾಗೂ ತಲಾಖ್ ಎನ್ನುವುದು ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಪ್ರಾಣಸಂಕಟವಾದರೆ, ಕೆಲವು ಪುರುಷರಿಗೆ ಚೆಲ್ಲಾಟವಾಗಿದೆ. ಯಾವುದೋ ಕಾಲದ ಅನಿವಾರ್ಯತೆಗೊಳಗಾಗಿ ಮಾಡಲಾದ ಇಂತಹ ಆಚರಣೆಗಳು ತದನಂತರದ ಕಾಲದ ಮಹಿಳೆಯರ ತಲೆಯ ಮೇಲೆ ತೂಗುವ ಕತ್ತಿಯಾಗಿವೆ. ಮಹಿಳೆಯರನ್ನು ಸದಾ ಅತಂತ್ರವಾಗಿಯೇ ಇಟ್ಟು ಶೋಷಿಸುವ ಪಿತೃಸಮಾಜದ ಹುನ್ನಾರದ ಭಾಗವಾಗಿಯೇ ಈಗಲೂ ಆಚರಣೆಯಲ್ಲಿವೆ. ಸಮುದಾಯದ ಒಳಿತಿಗಾಗಿ ಆಯಾ ಕಾಲದ ಧಾರ್ಮಿಕ ನಿರ್ಣಯಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಪುರುಷರು ಹಾಗೂ ಧಾರ್ಮಿಕ ಗುರುಗಳು ತಮ್ಮ ಹಿತಾಸಕ್ತಿಗನುಗುಣವಾಗಿ ಮಹಿಳೆಯರನ್ನು ಶೋಷಿಸುವ ಜೀವ ವಿರೋಧಿತನವನ್ನು ನಿರಂತರಗೊಳಿಸಿರುವುದನ್ನು ಬಹುತೇಕ ಧರ್ಮಗಳಲ್ಲಿ ನೋಡಬಹುದಾಗಿದೆ.

ರಾಬಿಯಾ ತನ್ನ ಮನೆಗೆ ಕುರಾನ್ ಪಠನಕ್ಕೆ ಬಂದ ಮುದುಕ ಮೌಲ್ವಿಯೊಡನೆ ಮಾತಾಡಿದ್ದನ್ನೇ ನೆಪ ಮಾಡಿಕೊಂಡು ಆಕೆಯ ಗಂಡ ಹನಾನ್ ತನ್ನ ಹೆಂಡತಿಯ ಮೇಲೆ ಹಲ್ಲೆ ಮಾಡಿ ತವರಿಗೆ ಹೋಗಲು ಒತ್ತಾಯಿಸುತ್ತಾನೆ. ಅದಕ್ಕೊಪ್ಪದ ರಬಿಯಾಳಿಗೆ ತಲ್ಲಾಕ್ ಹೇಳಿ ಇನ್ನೊಬ್ಬ ಹದಿಹರೆಯದ ಹುಡುಗಿಯನ್ನು ನಿಖಾ (ಮದುವೆ) ಆಗುತ್ತಾನೆ. ದೈಹಿಕ ಸುಖ ನೀಡಲು ಅಸಮರ್ಥನಾದ ಹನಾನ್‌ನನ್ನು ಹೊಸ ಹೆಂಡತಿ ತೊರೆದು ಬೇರೊಬ್ಬನೊಡನೆ ಓಡಿಹೋಗುತ್ತಾಳೆ. ಕಟ್ಟಿಗೆ ಮಾರಿ ಜೀವನ ನಡೆಸುವ ರಬಿಯಾ ದಿಟ್ಟತನದಿಂದ ಬದುಕನ್ನು ಕಟ್ಟಿಕೊಳ್ಳುತ್ತಾಳೆ. ಹತಾಶೆಗೊಂಡ ಹನಾನ್ ಮತ್ತೆ ಹಳೆಯ ಹೆಂಡತಿ ರಾಬಿಯಾಳನ್ನು ಮದುವೆಯಾಗಲು ಒತ್ತಾಯಿಸುತ್ತಾನೆ. ನಿರಾಕರಿಸಿದ ಆಕೆಯ ಕಾಲಿಗೆ ಬಿದ್ದು ಒಪ್ಪಿಸುತ್ತಾನೆ. ಮರುಮದುವೆಗೆ ಒಪ್ಪಿಕೊಂಡ ಈ ಇಬ್ಬರ ನಡುವೆ ಧರ್ಮದ ಆಚರಣೆ ಅಡ್ಡಿಯಾಗುತ್ತದೆ. ಧರ್ಮದ ಪ್ರಕಾರ ಒಮ್ಮೆ  ತಲಾಖ್ ಕೊಟ್ಟವಳನ್ನು ಮರುಮದುವೆಯಾಗಬೇಕಾದರೆ ಆಕೆ ಇನ್ನೊಬ್ಬನನ್ನು ಮದುವೆಯಾಗಿ ಮೂರು ತಿಂಗಳು ಬಾಳ್ವೇ ಮಾಡಿದ ನಂತರ ಆತನಿಂದ ತಲ್ಲಾಖ್ ಪಡೆದು ಮೊದಲ ಗಂಡನೊಂದಿಗೆ ಮರುಮದುವೆಯಾಗಬೇಕಾಗುತ್ತದೆ. ತನ್ನಿಂದ ವಿಚ್ಚೇದಿತಗೊಂಡ ಹೆಂಡತಿಯನ್ನು ಮೌಲ್ವಿಯೊಂದಿಗೆ ತಾತ್ಕಾಲಿಕ ಮದುವೆ ಮಾಡಲು ಹನಾನ್ ರಾಬಿಯಾಳನ್ನು ಪರಿಪರಿಯಾಗಿ ಕೇಳಿಕೊಳ್ಳುತ್ತಾನೆ. ಆದರೆ ಮೌಲ್ವಿಯ ಮುಖಕ್ಕೆ ಉಗಿಯುವ ರಾಬಿಯಾ ಮಾಜಿ ಗಂಡನ ಕೆನ್ನೆಗೆ ಬಾರಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಾಳೆ. ಇದು ಜಾತ್ರಾ ನಾಟಕದ ಸಾರಾಂಶವಾಗಿದ್ದು ಜೀವವಿರೋಧಿ ಆಚರಣೆಗಳಿಗೆ ಪ್ರತಿಭಟನೆಯೂ ಆಗಿದೆ.

ಪುರುಷರು ಮಹಿಳೆಯನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಅದೆಷ್ಟೇ ಪ್ರಯತ್ನಿಸಿದರೂ ಮಹಿಳೆ ತನ್ನದೇ ಆದ ರೀತಿಯಲ್ಲಿ ಪ್ರತಿಭಟಿಸಿ  ಹನಾನ್‌ನಂತವರಿಗೆ ಮರ್ಮಾಘಾತವನ್ನು ನೀಡುತ್ತಾಳೆ ಎನ್ನುವುದಕ್ಕೆ ಈ ನಾಟಕವೇ ಸಾಕ್ಷಿಯಾಗಿದೆ. ತನ್ನ ಬಯಕೆಯನ್ನು ತಣಿಸಲು ಅಸಮರ್ಥನಾದ ಗಂಡನ ಮೇಲೆ ಹಲ್ಲೆ ಮಾಡಿ ಆತನನ್ನು ನಿರಾಕರಿಸಿ ಹೋಗುವ ಹೊಸ ಹೆಂಡತಿ ಬೇರೆ ಕಡೆ ತನ್ನ ಬದುಕನ್ನು ಕಂಡುಕೊಳ್ಳಬಯಸಿದರೆ... ಗಂಡನಿಂದ ಅವಮಾನಿತಳಾಗಿ ತಲ್ಲಾಖ್ ಶಿಕ್ಷೆಗೊಳಗಾದ ರಬಿಯಾ ತನ್ನದೇ ಆದ ಬದುಕನ್ನು ಕಟ್ಟಿಕೊಳ್ಳುವ ಮೂಲಕ ಸ್ವತಂತ್ರ ಬದುಕನ್ನು ಕಟ್ಟಿಕೊಳ್ಳಬಲ್ಲೆ ಎನ್ನುವುದನ್ನು ಸಾಬೀತುಪಡಿಸಿ ಪುರುಷಹಂಕಾರಕ್ಕೆ ಆಘಾತವನ್ನು ನೀಡುತ್ತಾಳೆ. ಮರಳಿ ಬಂದು ಮರುಮದುವೆಯಾಗಲು ಕಾಡಿ ಬೇಡುವ ಗಂಡನನ್ನು  ನಿರ್ಧಾಕ್ಷಿಣ್ಯವಾಗಿ ನಿರಾಕರಿಸುವ ಮೂಲಕ ಗಂಡನಿಲ್ಲದಿದ್ದರೂ ಬದುಕಬಲ್ಲೆ ಎನ್ನುವ ದಿಟ್ಟತನವನ್ನು ರಬಿಯಾ ತೋರಿಸುತ್ತಾಳೆ.

ಈ ನಾಟಕದಲ್ಲಿ ಹಳೆ ಹೆಂಡತಿ ಹಾಗೂ ಹೊಸ ಹೆಂಡತಿ ಈ ಎರಡೂ ಪಾತ್ರಗಳೂ ಪ್ರತಿಭಟನೆಯ ಸಂಕೇತಗಳಾಗಿಯೇ ರೂಪತಳೆಯುತ್ತವೆ. ಪುರುಷ ಶೋಷಣೆಯನ್ನು ತಮ್ಮದೇ ಆದ ರೀತಿಯಲ್ಲಿ ದಿಕ್ಕರಿಸುತ್ತವೆ. ಹಳೆಯ ಹೆಂಡತಿ ರಬಿಯಾ ಹಳೆಯ ಕಾಲದವಳಾಗಿದ್ದರಿಂದ ಗಂಡ ಬಿಟ್ಟರೂ ದುಡಿದು ಬದುಕುವ ಛಲವನ್ನು ತೋರಿದರೆ.. ಹೊಸ ಹೆಂಡತಿ ಅಸಮರ್ಥ ಗಂಡನನ್ನು ತೊರೆದು ಬೇರೊಬ್ಬನೊಂದಿಗೆ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಮದುವೆಯ ವ್ಯವಸ್ಥೆಯನ್ನೇ ದಿಕ್ಕರಿಸುತ್ತಾಳೆ. ಇದು ಪಾರಂಪರಿಕ ಪುರುಷ ಪ್ರಧಾನತೆಯ ಬೇರಿಗೆ ಕೊಡಲಿಪೆಟ್ಟು ಕೊಟ್ಟಂತಾಗಿದೆ. ಧರ್ಮದ ಬಲ ಹಾಗೂ ಗಂಡಸೆಂಬ ದುರಹಂಕಾರದಿಂದ ಹೆಣ್ಣನ್ನು ಹತೋಟಿಯಲ್ಲಿಡಬಲ್ಲೆ ಎನ್ನುವ ಪುರುಷಹಂಕಾರಕ್ಕೆ ಈ ನಾಟಕ ಮರ್ಮಾಘಾತವನ್ನುಂಟು ಮಾಡಿದ್ದಂತೂ ಸುಳ್ಳಲ್ಲ. ಹೆಣ್ಣನ್ನು ಕೇವಲ ಭೋಗದ ವಸ್ತುವೆಂದು ಇಲ್ಲವೇ ಹೇಳಿದ್ದನ್ನು ಮರುಮಾತಿಲ್ಲದೇ ಮಾಡುವ ದುಡಿಯುವ ಯಂತ್ರವೆಂದು ಪರಿಗಣಿಸುವ ಪುರುಷರು ಮತ್ತೊಮ್ಮೆ ಯೋಚಿಸುವಂತೆ ಪ್ರೇರೇಪಿಸುವ ಈ ನಾಟಕವು ಪುರುಷ ದೌರ್ಜನ್ಯವನ್ನು ಧಿಕ್ಕರಿಸಿ ಬದುಕಬಹುದಾದ ಸಾಧ್ಯತೆಯನ್ನು ಮಹಿಳೆಯರಿಗೆ ತೋರಿಸುತ್ತದೆ.

ಸಮುದಾಯದಲ್ಲಿ ಧರ್ಮದ ಹೆಸರಲ್ಲಿ ಮೌಡ್ಯದ ಬೀಜ ಬಿತ್ತಿ ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಪುರೋಹಿತಶಾಹಿಗಳ  ಹುನ್ನಾರವನ್ನೂ ಜಾತ್ರಾ ನಾಟಕ ಬೆತ್ತಲುಗೊಳಿಸುತ್ತದೆ. ಇಲ್ಲಿಯ ಹೆಂಗಸರು ಬರೀ ರಕ್ತ ಮಾಂಸ ತುಂಬಿದವರು ಭಕ್ತಿಯಿಂದ ನಮಾಜ್ ಮಾಡಿ ದೇವರನ್ನು ಒಲಿಸಿಕೊಂಡರೆ ಸತ್ತ ಮೇಲೆ ಸ್ವರ್ಗ(ಜನ್ನತ್) ಸಿಕ್ಕುತ್ತದೆ, ಅಲ್ಲಿ ಸುರಸುಂದರಿ ಅಪ್ಸರೆಯರು ನಿಮಗಾಗಿ ಕಾಯುತ್ತಿರುತ್ತಾರೆ. ನಿಷ್ಟೆಯಿಂದ ಪ್ರಾರ್ಥನೆ ಮಾಡಿ.. ಎಂದು ಮೌಲ್ವಿ ಹಾಡುವ ಮೂಲಕ ಭ್ರಮೆಗಳನ್ನು ತುಂಬುತ್ತಾನೆ. ಅದೇ ಮೌಲ್ವಿ ಧರ್ಮದ ಹೆಸರಲ್ಲಿ ರಬಿಯಾಳನ್ನು ತಾತ್ಕಾಲಿಕವಾಗಿ ಮದುವೆಯಾಗಿ ಬಳಸಿಕೊಳ್ಳಲೂ ನೋಡುತ್ತಾನೆ.  ಧರ್ಮದ ಹೆಸರಲ್ಲಿ ನಂಬಿಕೆಗಳನ್ನು ಹುಟ್ಟಿಸಿ ಜನರನ್ನು ಭ್ರಮೆಯಲ್ಲಿರಿಸುವ ಹಾಗೂ ಮಹಿಳೆಯರನ್ನು ಶೋಷಿಸುವ ಹುನ್ನಾರಗಳು ಬಹುತೇಕ  ಧರ್ಮಗಳಲ್ಲಿ ಕಾಣಬಹುದಾಗಿದೆ. ಧರ್ಮವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸುವ ಧರ್ಮಗುರುಗಳ ಬಗ್ಗೆ ಈ ನಾಟಕ ಎಚ್ಚರಿಸುವಂತೆ ಮೂಡಿಬಂದಿದೆ. ಎಲ್ಲಿಯೂ ನೇರವಾಗಿ ಧರ್ಮಾಚರಣೆಯ ಜೀವವಿರೋಧಿತನದ ಬಗ್ಗೆಯಾಗಲೀ ಇಲ್ಲವೇ ಧರ್ಮಗುರುಗಳ ಶೋಷಣೆಯ ಬಗ್ಗೆಯಾಗಲೀ ಹೇಳದೇ.. ದೃಶ್ಯಗಳ ಮೂಲಕ ಪರೋಕ್ಷವಾಗಿ ಧರ್ಮಾನುಯಾಯಿಗಳ ಮಹಿಳಾ ವಿರೋಧಿತನವನ್ನು ತೋರಿಸುವಲ್ಲಿ ಈ ನಾಟಕ ಸಫಲವಾಗಿದೆ.

ಮಹಿಳೆಯರ ಶೋಷಣೆಗೆ ಪುರುಷರು ಕಾರಣರಾದಷ್ಟೇ ಮಹಿಳೆಯರೂ ಸಹ ಅದಕ್ಕೆ ಪೂರಕವಾಗಿ ಸಕರಿಸುವಂತಹ ವಾತಾವರಣವನ್ನು ಪುರುಷ ಪ್ರಧಾನ ವ್ಯವಸ್ಥೆ ರೂಢಿಸಿಕೊಂಡು ಬಂದಿದ್ದನ್ನೂ ಈ ನಾಟಕದಲ್ಲಿ ಕಾಣಬಹುದಾಗಿದೆ. ತಲ್ಲಾಖಿಗೊಳಗಾಗಿ ನೊಂದ ರಾಬಿಯಾಳನ್ನು ಆಕೆಯ ಸಹವರ್ತಿ ಮಹಿಳೆಯರೇ ಗಂಡಬಿಟ್ಟವಳು ಎಂದು ದೂಷಿಸಿ ಮಾನಸಿಕವಾಗಿ ಹಿಂಸಿಸುತ್ತಾರೆ. ರಾಬಿಯಾ ಹಲ್ಲೆಗೊಳಗಾಗಿದ್ದನ್ನು ಕಣ್ಣಾರೆ ಕಂಡೂ ಸಹ ಇನ್ನೊಬ್ಬ ಹುಡುಗಿ ಅವಳ ಗಂಡನನ್ನು ಮದುವೆಯಾಗಲು ಒಪ್ಪಿ ರೂಬಿಯಾಳಿಗೆ ಅನ್ಯಾಯ ಮಾಡುತ್ತಾಳೆ. ವಿಚ್ಚೇದನದಿಂದ ನೊಂದ ರಾಬಿಯಾಳನ್ನು ಸಂತೈಸುವ ಬದಲು ಸಹವರ್ತಿ ಮಹಿಳೆಯರು ಆಕೆಯ ಗಂಡನ ಮರುಮದುವೆಯ ಸಿದ್ಧತೆಯಲ್ಲಿ ತೊಡಗುತ್ತಾರೆ. ಮಹಿಳೆಯೊಬ್ಬಳು ತುಳಿತಕ್ಕೊಳಗಾದರೆ ಆಕೆಯ ನೋವಿಗೆ ಕನಿಷ್ಟ ಸಾಂತ್ವನವಾದರೂ ಆಗಬೇಕಾದ ಬಾಕಿ ಮಹಿಳೆಯರು ನೊಂದವಳ ಶೋಷಣೆಯನ್ನು ಇನ್ನೂ ಹೆಚ್ಚಿಸುವ ರೀತಿಯಲ್ಲಿ ವರ್ತಿಸುತ್ತಾ ಮಹಿಳೆಗೆ ಮಹಿಳೆಯೇ ಶತ್ರು ಎನ್ನುವ ಪುರುಷರ ಹುಸಿ ವ್ಯಾಖ್ಯಾನಕ್ಕೆ ಸ್ಪಂದಿಸುತ್ತಾರೆ. ಯಾರೆಷ್ಟೇ ನೋಯಿಸಿದರೂ.. ಅವಮಾನಿಸಿದರೂ... ಎಲ್ಲವನ್ನೂ ಎದುರಿಸಿ ಸ್ವಾವಲಂಬಿಯಾಗಿ ಬದುಕಬಲ್ಲೆ ಎಂದು ಸಾಬೀತುಪಡಿಸುವ ಈ ನಾಟಕದ ರಾಬಿಯಾ ಪಾತ್ರ ಮಾತ್ರ ಶೋಷಿತ ಮಹಿಳೆಯರಿಗೆ ಮಾದರಿಯಾಗಿದೆ..

ನಾಟಕದ ವಸ್ತು ವಿಷಯ ಹಾಗೂ ಆಶಯಗಳು ಈ ಜಾತ್ರಾ ನಾಟಕವನ್ನು ವಿಶಿಷ್ಟವಾಗಿಸಿವೆ.  ಆದರೆ.. ಅದನ್ನು ಹೇಳಲು ಬಳಸಿಕೊಂಡ ರಂಗ ತಂತ್ರಗಳಲ್ಲಿ ಅಂತಹ ವಿಶೇಷತೆಗಳಿಲ್ಲವಾಗಿವೆ. ಬ್ಲಾಕಿಂಗ್ ಹಾಗೂ ಮೂವಮೆಂಟಗಳೂ ಸಹ ಮಾಮೂಲಿ ಎನ್ನಿಸುವಂತಿವೆ. ಎಪ್ಪತ್ತರ ದಶಕದ ರಂಗ ಪ್ರದರ್ಶನದ ರೀತಿಯಲ್ಲಿ ಮೂಡಿಬಂದಿರುವ ಈ ಪ್ರಯೋಗವು ಆಧುನಿಕ ರಂಗತಂತ್ರಗಳನ್ನು ಅಳವಡಿಸಿಕೊಂಡಿದ್ದರೆ ಇನ್ನೂ ಆಕರ್ಷಣೀಯವಾಗಿಸಿ ನೋಡುಗರಿಗೆ ಬೋರಾಗುವುದನ್ನು ತಪ್ಪಿಸಬಹುದಾಗಿತ್ತು. ರಂಗವಿನ್ಯಾಸದಲ್ಲೂ ಸಹ ಗಮನಾರ್ಹ ಎನ್ನುವಂತಹುದೇನಿಲ್ಲ. ಹಿಂದೆ ಬಿದಿರಿನ ಬಂಬೂಗಳನ್ನು ಬಳಸಿ ಮಾಡಲಾದ ಪ್ರವೇಶದ್ವಾರ ನಾಟಕದಾದ್ಯಂತ ಸ್ಥಿರವಾಗಿದ್ದು.. ಮನೆ, ಬೀದಿ, ರೈಲು ನಿಲ್ದಾಣ.. ಹೀಗೆ ಎಲ್ಲಾ ಸನ್ನಿವೇಶದಲ್ಲೂ ತನ್ನ ಅಸ್ತಿತ್ವವನ್ನು ಅನಗತ್ಯವಾಗಿ ಉಳಿಸಿಕೊಂಡಿದೆ. ಮೂಡ್ ಸೃಷ್ಟಿಸಲು ವಿನ್ಯಾಸಗೊಳಿಸಬೇಕಾದ ಬೆಳಕು ಕೇವಲ ದೃಶ್ಯಗಳನ್ನು ಬೆಳಗಲು ಬಳಕೆಯಾಗಿದೆ. ಈಗ ರಂಗಪ್ರಯೋಗಗಳಲ್ಲಿ ಹವರು ಬದಲಾವಣೆಗಳಾಗಿವೆ. ನಾಟಕವೆಂದರೆ ಕೇವಲ ಸನ್ನಿವೇಶಗಳ ಪ್ರಸ್ತುತಿಯಲ್ಲ. ಅದೊಂದು ಕಲಾತ್ಮಕ ಮಾಧ್ಯಮ. ಆದರೆ ಈ ನಾಟಕದ ದೃಶ್ಯ ಸೃಷ್ಟಿಯಲ್ಲಿ ಕಲಾತ್ಮಕತೆಗಿಂತಾ ವಿಷಯ ಪ್ರಸ್ತಾವಣೆಗೆ ಹೆಚ್ಚು ಗಮನಕೊಡಲಾಗಿದೆ. ಹೀಗಾಗಿ ಇಡೀ ನಾಟಕ ನೋಡುಗರ ಬುದ್ದಿಗೆ ದಕ್ಕುವಷ್ಟು ಭಾವನೆಗೆ ಸಿಕ್ಕುವುದಿಲ್ಲ.

ಆದರೆ... ನಾಟಕವನ್ನು ಸಹ್ಯವಾಗಿಸಿದ್ದು ಕಲಾವಿದರ ಅಭಿನಯ. ನಿರ್ದೇಶಕರು ರಂಗತಂತ್ರಗಳಿಗಿಂತಾ ಕಲಾವಿದರ ಅಭಿನಯದ ಮೇಲೆ ಹೆಚ್ಚು ಪರಿಶ್ರಮವಹಿಸಿದ್ದು ನಟರ ಮೂಲಕವೇ ನಾಟಕವನ್ನು ಗೆಲ್ಲಿಸುವ ಪ್ರಯತ್ನ ಮಾಡಿದ್ದಾರೆ. ನಾಟಕದ ಕೇಂದ್ರವಾದ ರಾಬಿಯಾ ಪಾತ್ರದಲ್ಲಿ ಭಾಗೀರತಿಬಾಯಿ ಕದಂರವರು ಮನದುಂಬಿ ಅಭಿನಯಿಸಿದ್ದು ಇಡೀ ನಾಟಕವನ್ನು ತಮ್ಮ ಅಭಿನಯದ ಮೂಲಕವೇ ಗೆಲ್ಲಿಸಿದ್ದಾರೆ. ತಮ್ಮ ಗಡಸು ದ್ವನಿಯಲ್ಲಿ ದಿಟ್ಟವಾದ ಪಾತ್ರವನ್ನು ಗಟ್ಟಿಯಾಗಿ ಕಟ್ಟಿಕೊಟ್ಟಿದ್ದಾರೆ. ಭಾಗೀರತಿಯವರು ರಾಬಿಯಾಳ ತಲ್ಲಣ ತಳಮಳಗಳನ್ನು ತೋರಿಸಿದ ರೀತಿಯನ್ನು ನಾಟಕ ನೋಡಿಯೇ ಅನುಭವಿಸಬೇಕು. ಜೊತೆಗೆ ದೀಪಾ ಮಿಶ್ರಾ, ಇಮಾಮುಲ್, ಮೈನಾಲ್ ಕುಮಾತ್, ಪಾಕೀಜಾ, ಫರ್ಸಿಸ್ ಮುಂತಾದವರ ಪಾತ್ರೋಚಿತ ನಟನೆಯೂ ಗಮನಾರ್ಹವಾಗಿತ್ತು. ನಾಟಕದ ಯಶಸ್ಸಿನಲ್ಲಿ ಹಾಡು ಮತ್ತು ಸಂಗೀತಗಳ ಪಾಲು ಬಹಳವಾಗಿತ್ತು. ಕನ್ನಡ ಪ್ರೇಕ್ಷಕರಿಗೆ ಹಾಡುಗಳು ಅರ್ಥವಾಗದಿದ್ದರೂ ಆಸ್ಸಾಮಿ ಜಾನಪದ ಸಂಗೀತದ ಟ್ಯೂನ್‌ಗಳು ಖುಷಿಕೊಟ್ಟವು.

ಚಂದ್ರಗಿರಿಯ ತೀರದಲ್ಲಿ ನಾಟಕದ ಪೊಟೋ
ಸಿಜಿಕೆ ರಾಷ್ಟ್ರೀಯ ರಂಗೋತ್ಸವದಲ್ಲಿ ಪ್ರದರ್ಶನಗೊಂಡ ಈ ಜಾತ್ರಾ ನಾಟಕವನ್ನು ನೋಡಿದಾಗ ಇದಕ್ಕಿಂತ ಅತ್ಯುತ್ತಮವಾಗಿ ಮೂಡಿ ಬಂದ ಕನ್ನಡದ ನಾಟಕ ಚಂದ್ರಗಿರಿಯ ತೀರದಲ್ಲಿ ನೆನಪಾಗುತ್ತದೆ. ಸಾರಾ ಅಬೂಬಕರ್ ರವರು ಬರೆದ ಕಾದಂಬರಿ ಆಧರಿಸಿ ರಂಗಪಯಣ ತಂಡವು ನಯನ ಸೂಡಾರವರ ನಿರ್ದೇಶನದಲ್ಲಿ ನಾಲ್ಕು ತಿಂಗಳ ಹಿಂದೆ ಚಂದ್ರಗಿರಿಯ ತೀರದಲ್ಲಿ ನಾಟಕ ಪ್ರದರ್ಶನಗಳನ್ನು ಶುರುಮಾಡಿತ್ತು. ಕಾಕತಾಳೀಯವೆನ್ನುವಂತೆ ಜಾತ್ರಾ ಹಾಗೂ ....ತೀರದಲ್ಲಿ ಈ ಎರಡೂ ನಾಟಕಗಳ ಆಶಯ ಒಂದೇ ಆಗಿದೆ. ಪಾತ್ರದ ಹೆಸರುಗಳು ಹಾಗೂ ಕೆಲವು ಸನ್ನಿವೇಶಗಳು ಭಿನ್ನವಾಗಿದ್ದರೂ ಈ ನಾಟಕಗಳೆರಡೂ ತಲ್ಲಾಖ್ ಎನ್ನವ ಅಸ್ತ್ರವನ್ನು ಹಿಡಿದ ಧರ್ಮಾನುಯಾಯಿಗಳು ಮಹಿಳೆಯನ್ನು ಶೋಷಿಸುವ ರೀತಿಯನ್ನೇ ಹೇಳುತ್ತವೆ. ಪರಿಸ್ಥಿತಿಯ ಪರಿಣಾಮಗಳಿಂದ ವಿಚ್ಚೇದನೆಗೊಂಡ ಜೋಡಿಗಳು ಮತ್ತೆ ಮರುಮದುವೆಯಾಗಲು ಬಯಸಿದರೆ ಧರ್ಮ ಎನ್ನುವುದು ಅದೆಷ್ಟು ಅಮಾನವೀಯವಾಗಿ ಮಹಿಳೆಯರ ಸ್ವಾತಂತ್ರ್ಯವನ್ನು ಹರಣ ಮಾಡುತ್ತದೆ ಹಾಗೂ ಮಹಿಳೆ ತನ್ನ ಇಷ್ಟಕ್ಕೆ ವಿರುದ್ಧವಾಗಿ ಪರಪುರುಷನೊಂದಿಗೆ ದೇಹ ಹಂಚಿಕೊಳ್ಳಲೇಬೇಕಾದ ಅಮಾನವೀಯ ಅನಿವಾರ್ಯತೆಯನ್ನು ಸೃಷ್ಟಿಸಲಾಗಿದೆ ಎನ್ನುವುದನ್ನು ಈ ಎರಡೂ ನಾಟಕಗಳೂ ಚರ್ಚಿಸುತ್ತವೆ. ಆದರೆ.. ಪ್ರದರ್ಶನದ ದೃಷ್ಟಿಯಿಂದ ನೋಡಿದರೆ ನಯನರವರ ಚಂದ್ರಗಿರಿಯ ತೀರದಲ್ಲಿ ನಾಟಕವು ರಂಗತಂತ್ರಗಳನ್ನು ಬಳಸಿಕೊಂಡು ಅಗತ್ಯ ಮೂಡನ್ನು ಸೃಷ್ಟಿಸಿ ಉತ್ತಮ ನಾಟಕವಾಗಿದೆ. ಆದರೆ ಭಿನ್ನತೆ ಇರುವುದು ನಾಟಕದ ಅಂತ್ಯದಲ್ಲಿ. ಚಂದ್ರಗಿರಿಯ ತೀರದಲ್ಲಿ ನಾಟಕದಲ್ಲಿ ತನ್ನ ಮನಸ್ಸಿನ ವಿರುದ್ಧವಾಗಿ ಮತ್ತೊಬ್ಬನೊಂದಿಗೆ ಮೈ ಹಂಚಿಕೊಳ್ಳುವುದನ್ನು ವಿರೋಧಿಸಿದ ನಾದಿರಾ ಆತ್ಮಹತ್ಯೆಯಂತಹ ವಿಪರೀತ ನಿರ್ಧಾರ ಮಾಡಿ ನೊಂದ ಮಹಿಳೆಯರಿಗೆ ನಕಾರಾತ್ಮಕ ಸಂದೇಶವನ್ನು ಕೊಡುತ್ತಾಳೆ. ಆದರೆ ಜಾತ್ರಾ ನಾಟಕದಲ್ಲಿ ರಾಬಿಯಾ ಧರ್ಮ ಗುರುವಿನ ಮುಖಕ್ಕೆ ಉಗಿದು, ಗಂಡನ ಕೆನ್ನೆಗೆ ಬಾರಿಸಿ ಆ ಅನಿಷ್ಟ ಪದ್ದತಿಗೆ ತನ್ನ ಉಗ್ರ ಪ್ರತಿಭಟನೆಯನ್ನು ತೋರಿಸಿ ಶೋಷಿತ ಮಹಿಳೆಯರಿಗೆ ಮಾದರಿಯಾಗುತ್ತಾಳೆ. ಹೀಗಾಗಿ.. ಚಂದ್ರಗಿರಿಯ ತೀರದಲ್ಲಿ ತನ್ನ ರಂಗತಂತ್ರ ಬಳಕೆ ಹಾಗೂ ದೃಶ್ಯ ಸಂಯೋಜನೆಗಳಿಂದ ಗಮನ ಸೆಳೆದು ಉತ್ತಮ ನಾಟಕವಾಗಿ ಪ್ರದರ್ಶನಗೊಂಡರೆ... ಪ್ರತಿಭಟನಾತ್ಮಕ ನೆಲೆಯಲ್ಲಿ ಜಾತ್ರಾ ಗಮನಸೆಳೆಯುತ್ತದೆ. ಚಂದ್ರಗಿರಿಯ ತೀರದಲ್ಲಿ ನಾಟಕ ನಾದಿರಾ ಜಾತ್ರಾ ನಾಟಕದ ರಾಬಿಯಾಳ ಪ್ರತಿಭಟನಾತ್ಮಕ ನಿರ್ಧಾರವನ್ನು ತೆಗೆದುಕೊಂಡರೆ.. ಹಾಗೂ ಜಾತ್ರಾ ನಾಟಕವು ಚಂದ್ರಗಿರಿಯ ತೀರದಲ್ಲಿ ನಾಟಕದಂತೆ ರಂಗತಂತ್ರಗಳನ್ನು ಸಮರ್ಥವಾಗಿ ಬಳಸಿಕೊಂಡರೆ ಈ ಎರಡೂ ನಾಟಕಗಳೂ ಅನನ್ಯವೆನಿಸುತ್ತವೆ. ಏನೇ ಆದರು ಚಂದ್ರಗಿರಿಯ ತೀರದಲ್ಲಿ ನಾಟಕದಲ್ಲಿ ನಾದಿರಾ ಆಗಿ ನಯನ ಸೂಡಾರವರ ನಟನೆ, ಹಾಗೂ ಜಾತ್ರಾ ನಾಟಕದ ರಾಬಿಯಾ ಪಾತ್ರದಲ್ಲಿ ಭಾಗೀರತಿಬಾಯಿ ಕದಂರವರ ಅಭಿನಯ ಮಾತ್ರ ಮನನೀಯ ಹಾಗೂ ಗಮನಾರ್ಹ.   

ಇಸ್ಲಾಂ ಧರ್ಮದೊಳಗಿನ ಬಹುಪತ್ನಿತ್ವ ಹಾಗೂ ತಲಾಖ್‌ಗಳನ್ನು ಕೇಂದ್ರವಾಗಿಟ್ಟುಕೊಂಡು ಲಿಂಗತಾರತಮ್ಯವನ್ನು ಹೇಳುತ್ತಲೇ ಗಂಡಸರ ಅಟ್ಟಹಾಸ ಹಾಗೂ ಧಾರ್ಮಿಕ ಗುರುಗಳೆನ್ನಿಸಿಕೊಂಡವರ ಶೋಷಣೆಯನ್ನು ನಾಟಕದ ಮೂಲಕ ಹೇಳುವ ದಿಟ್ಟತನದ ಪ್ರಯತ್ನವನ್ನು ಸೀಗಲ್ ಥಿಯೇಟರ್ ತಂಡವು ಮಾಡಿದ್ದಕ್ಕೆ ಅಭಿನಂದಿಸಲೇಬೇಕಿದೆ. ಧಾರ್ಮಿಕ ಮೂಲಭೂತವಾದದ ಬೇರುಗಳನ್ನು ಅಲ್ಲಾಡಿಸಲು ಪ್ರಯತ್ನಿಸಿದರೆ ಮುಂದಾಗುವ ಪರಿಣಾಮಗಳನ್ನೂ ಲೆಕ್ಕಿಸದೇ ಗಟ್ಟಿ ದ್ವನಿಯಲ್ಲಿ ಸಮುದಾಯದೊಳಗಿನ ನ್ಯೂನ್ಯತೆಯನ್ನು ಎತ್ತಿ ತೋರಿಸುವಂತಹ ನಾಟಕ ಮಾಡಿದ್ದಕ್ಕೆ ಭಾಗೀರತಿಬಾಯಿ ಕದಂ ಹಾಗೂ ಬಹಾರುಲ್ ಇಸ್ಲಾಂರವರನ್ನು ಮೆಚ್ಚಲೇಬೇಕಿದೆ. ಈ ನಾಟಕವು ಮುಖ್ಯವಾಗಿ ತಲುಪಬೇಕಾದವರಿಗೆ ತಲುಪಿಸುವ ಅಗತ್ಯತೆ ಇದೆ. ಆದರೆ ಧಾರ್ಮಿಕ ಮೂಲಭೂತವಾದಿಗಳು ಹಲವಾರು ಕಡೆ ಈ ನಾಟಕ ಪ್ರದರ್ಶನವಾಗದಂತೆ ನೋಡಿಕೊಂಡಿರುವುದು ನಿಜವಾಗಿಯೂ ಶೋಷಿತರಾಗಿರುವ ಮುಸ್ಲಿಂ ಮಹಿಳೆಯರಿಗೆ ತಲುಪದಂತಾಗಿದೆ. ಸಾಂಪ್ರದಾಯಿಕ ಮೂಲಭೂತವಾದದಿಂದ ಶೋಷಿತರಾದ ಮಹಿಳೆಯರಿಗೆ ಈ ನಾಟಕ ತಲುಪುವ ಮೂಲಕ ಮಹಿಳಾ ಜಾಗೃತಿಗೆ ಪ್ರೇರಕವಾಗಬೇಕಿದೆ. ಜಾತ್ರಾ ನಾಟಕವು ದೇಶಾದ್ಯಂತ ಪ್ರದರ್ಶನಗೊಂಡು ಅದು ಪ್ರತಿನಿಧಿಸುವ ಜನಸಮುದಾಯವನ್ನು ಮುಟ್ಟಬೇಕಿದೆ.

                     -    ಶಶಿಕಾಂತ ಯಡಹಳ್ಳಿ              



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ