ಮಂಗಳವಾರ, ಡಿಸೆಂಬರ್ 10, 2013

ಕಲಾಕ್ಷೇತ್ರದ ಸುವರ್ಣ ಸಂಭ್ರಮದಲ್ಲಿ ರವೀಂದ್ರನಾಥ ಠಾಗೂರರ ‘ಗೋರ’



                                              ನಾಟಕ ವಿಮರ್ಶೆ: 

                                                                                     

  

     ರವೀಂದ್ರ ಕಲಾಕ್ಷೇತ್ರಕ್ಕೆ 50ವರ್ಷ ತುಂಬಿದ ಸಂದರ್ಭದಲ್ಲಿ ಆಚರಿಸುತ್ತಿರುವ ಸುವರ್ಣ ಸಂಭ್ರಮ-೫೦ ನಾಟಕೋತ್ಸವದಲ್ಲಿ ರವೀಂದ್ರನಾಥ ಠಾಗೂರರ ಕಾದಂಬರಿ ಆಧಾರಿತ ಗೋರ ನಾಟಕವನ್ನು ಅಭಿನಯ ತರಂಗ ಅಭಿನಯಿಸಿದ್ದು ತುಂಬಾ ಸೂಕ್ತವಾಗಿದೆ. ಯಾವಾಗಲೂ ಸಂದರ್ಭಕ್ಕೆ ತಕ್ಕ ಹಾಗೆ ನಾಟಕ-ಬೀದಿನಾಟಕಗಳ ಮೂಲಕ ಪ್ರತಿಕ್ರಿಯಿಸುವ ಸ್ತುತ್ಯಾರ್ಹ ರಂಗಕಾರ್ಯವನ್ನು .ಎಸ್.ಮೂರ್ತಿಯವರು ಹಾಕಿಕೊಟ್ಟರು. ಅವರ ನಂತರವೂ ಅಭಿನಯ ತರಂಗವು ಗೌರಿದತ್ತುರವರ ಮಾರ್ಗದರ್ಶನದಲ್ಲಿ ಮೂರ್ತಿಗಳ ಆಶಯದಂತೆ ಸಮಕಾಲೀನತೆ ಮತ್ತು ಸಂದರ್ಭಕ್ಕೆ ಪೂರಕವಾಗಿ ಸ್ಪಂದಿಸುತ್ತಿರುವುದು ಮಾದರಿಯಾಗಿದೆ. ಹೆಚ್.ವಿ.ಸಾವಿತ್ರಮ್ಮ ರವರು ಅನುವಾದಿಸಿದ ಠಾಗೋರರ ಗೋರ ಕಾದಂಬರಿಯನ್ನು  ಪ್ರಕಾಶ ಬೆಳವಾಡಿಯವರು ರಂಗರೂಪಾಂತರಗೊಳಿಸಿ ಅಭಿನಯ ತರಂಗದ ಕಲಾವಿದರಿಗೆ ನಿರ್ದೇಶಿಸಿದ್ದಾರೆ. 2013, ಡಿಸೆಂಬರ್ 9 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕವು ಪ್ರದರ್ಶನಗೊಂಡಿತು.
          ಬ್ರಹತ್ ಕಾದಂಬರಿಯೊಂದನ್ನು ರಂಗಕ್ಕಳಿವಡಿಸುವುದು ಕಷ್ಟಸಾಧ್ಯವಾದ ಕೆಲಸ. ಸಮಯದ ಮಿತಿ, ದೃಶ್ಯಸೃಷ್ಟಿಯ ಮಿತಿಗಳಿಂದಾಗಿ ಯಾವುದೇ ಕಾದಂಬರಿಗೆ ಪೂರ್ಣಪ್ರಮಾಣದಲ್ಲಿ ನ್ಯಾಯವದಗಿಸಲು ಸಾಧ್ಯವಾಗುವುದಿಲ್ಲ, ಯಾಕೆಂದರೆ ಅಕ್ಷರ ಮಾಧ್ಯಮ ಮತ್ತು ದೃಶ್ಯಮಾಧ್ಯಮಗಳು ಭಿನ್ನವಾಗಿದ್ದು ತಮ್ಮದೆ ಆದ ಶಕ್ತಿ ಮತ್ತು ಮಿತಿಗಳನ್ನು ಹೊಂದಿವೆ. ಎರಡೂ ಮಾಧ್ಯಮಗಳು ಉಂಟು ಮಾಡುವ ಅನುಭಾವವೇ ಬೇರೆ ಬಗೆಯದು. ಓದುವ ಸಂಸ್ಕೃತಿಯೇ ಸೊರಗಿ ಕೇವಲ ನೋಡುವ ಸಂಸ್ಕೃತಿಯೇ ಪ್ರಧಾನವಾಗುತ್ತಿರುವ ಜಾಗತೀಕರಣದ ಕಾಲಘಟ್ಟದಲ್ಲಿ ಕಾದಂಬರಿ ಓದಲಾಗದವರಿಗೂ ಸಹ ಕಾದಂಬರಿಯ ವಸ್ತು ವಿಷಯವನ್ನು ಎರಡು ಗಂಟೆಯಲ್ಲಿ ನಾಟಕವಾಗಿ ತೋರಿಸುವ ಕೆಲಸ ನಿಜಕ್ಕೂ ಅಭಿನಂದನಾರ್ಹ.
          ಠಾಗೂರರ ಗೋರ ಕಾದಂಬರಿಯು ತುಂಬಾ ಗಂಭಿರವಾದ ವಿಷಯವನ್ನು ಚರ್ಚಿಸುತ್ತದೆ. ಧರ್ಮ ಜಾತಿ ಸಮಾಜ ಮಾನವೀಯತೆ ನಂಬಿಕೆ ಮುಂತಾದ ವಿಷಯಗಳು ಹಾಸುಹೊಕ್ಕಾಗಿರುವ ಕಾದಂಬರಿಯನ್ನು ನಾಟಕವಾಗಿಸುವುದು ಸವಾಲಿನ ಕೆಲಸವಾಗಿದೆ. ನಿಟ್ಟಿನಲ್ಲಿ ಪ್ರಕಾಶ ಬೆಳವಾಡಿಯವರ ಪ್ರಯತ್ನ ಮೆಚ್ಚಲೇಬೆಕಾದದ್ದು. ಕಥೆ ನಡೆಯುವುದು ಬೆಂಗಾಲದ ಕಲ್ಕತ್ತಾ ನಗರದಲ್ಲಿ, ಸ್ವಾತಂತ್ರ್ಯ ಪೂರ್ವದಲ್ಲಿ.  ನಾಟಕದ ಸಂಕ್ಷಿಪ್ತ ಕಥೆ ಹೀಗಿದೆ.
          ವೈದಿಕರಾದ ಕೃಷ್ಣದಯಾಳ ತನ್ನ ಯೌವನದಲ್ಲಿ ವೈದಿಕ ವಿರೋಧಿ ಬ್ರಹ್ಮಸಮಾಜದತ್ತ ಆಕರ್ಷಿತರಾಗಿದ್ದರು. ಮೊದಲ ಹೆಂಡತಿ ತೀರಿಕೊಂಡ ನಂತರ ಮತ್ತೆ ವೈದಿಕ ಸಂಸ್ಕೃತಿಗೆ ಮರಳಿದರು. ಆನಂದಮಯಿ ಎನ್ನುವ ಬ್ರಾಹ್ಮಣ ಕನ್ಯೆಯನ್ನು ಮದುವೆಯಾದರು. ದಂಪತಿಗಳಿಗೆ ಮಕ್ಕಳಾಗಲಿಲ್ಲ. ಸಿಪಾಯಿದಂಗೆ ತೀವ್ರಗೊಂಡಾಗ ಕೆಲವು ವಿದೇಶಿಯರು ಹಲ್ಲೆಗೊಳಗಾದರು. ಆಗ ದಂಗೆಕೋರರಿಂದ ತಪ್ಪಿಸಿಕೊಂಡು ಬಂದ ತುಂಬು ಬಸುರಿಯಾದ ಐರ್ಲೆಂಡಿನ ಮಹಿಳೆಗೆ ಆನಂದಮಯಿ ಆಶ್ರಯಕೊಡುತ್ತಾಳೆ. ಮಗು ಹೆತ್ತ ವಿದೇಶಿ ಮಹಿಳೆ ಸಾಯುತ್ತಾಳೆ. ಮಗುವಿಗೆ ಗೌರಮೊಹನಬಾಬು ಎಂದು ಹೆಸರಿಟ್ಟು ಸಾಕಲಾಗುತ್ತದೆ. ಆತನ ಜನ್ಮರಹಸ್ಯವನ್ನು ಗುಟ್ಟಾಗಿಡಲಾಗುತ್ತದೆ. ಎಲ್ಲರೂ ಗೋರ ಎಂದೇ ಕರೆಯುತ್ತಾರೆ. ಬೆಳೆಯುತ್ತಾ ಗೋರ ಹಿಂದೂ ಮತಾಂಧನಾಗುತ್ತಾನೆ. ಹಿಂದೂ ದೇಶಭಕ್ತ ಸಭೆಗೆ ಅಧ್ಯಕ್ಷನಾಗುತ್ತಾನೆ. ತಾಯಿ ಆನಂದಮಯಿ ಮನೆಯಲ್ಲಿರಿಸಿಕೊಂಡ ಸಹಾಯಕಿ ಲಕ್ಷ್ಮೀ ಕ್ರಿಶ್ಚಿಯನ್ ಎನ್ನುವ ಕಾರಣಕ್ಕೆ ಆಕೆ ಮಾಡಿದ ಅಡುಗೆಯನ್ನೂ ತಿನ್ನಲು ನಿರಾಕರಿಸುತ್ತಾನೆ. ಗೋರನ ಜೊತೆಗೆ ಬೆಳೆದ ಅನಾಥ ಸ್ನೇಹಿತ ವಿನಯ್ನನ್ನೂ ಸಹ ಆನಂದಮಯಿ ಸಾಕುತ್ತಾಳೆ. ಬ್ರಹ್ಮಸಮಾಜದ ಪ್ರಮುಖ ಪರೇಶಬಾಬುರವರಿಗೆ ಮೂವರು ಹೆಣ್ಣುಮಕ್ಕಳು.  ಒಬ್ಬ ಮಗಳು ಲಲಿತೆಯತ್ತ ವಿನಯ್ ಆಕರ್ಷಿತನಾಗುತ್ತಾನೆ. ಗೋರ ಅದನ್ನು ವಿರೋಧಿಸುತ್ತಾನೆ. ಇನ್ನೊಬ್ಬ ಮಗಳು ಸುಚರಿತೆಗೆ ಹರಣಬಾಬು ಎನ್ನುವ ಬ್ರಹ್ಮಸಮಾಜದ ಯುವಕನಿಗೆ ಕೊಟ್ಟು ಮದುವೆ ಮಾಡುವ ಮಾತಾಗಿರುತ್ತದೆ. ಗೋರ ಯಾತ್ರೆಗೆ ಹೋರಡುತ್ತಾನೆ.
          ದಾರಿಯಲ್ಲಿ ಮಹಮದೀಯರೇ ಹೆಚ್ಚಾಗಿರುವ ಗೋಶಪಾಡ್ ಎನ್ನುವ ಗ್ರಾಮಕ್ಕೆ ಬೇಟಿಕೊಡುತ್ತಾನೆ. ಇಂಡಿಗೋ ಕಂಪನಿ ಹೇಳಿದ ಬೆಳೆಯನ್ನು ಬೆಳೆಯಲಿಲ್ಲ ಎನ್ನುವ ಕಾರಣಕ್ಕೆ ಹಳ್ಳಿಗರ ಮೇಲೆ ಪೊಲೀಸರ ದೌರ್ಜನ್ಯ ಮೇರೆಮೀರಿರುತ್ತದೆ.  ಊರಿನ ಗಂಡಸರನ್ನೆಲ್ಲಾ ಜೈಲಿಗಟ್ಟಲಾಗಿರುತ್ತದೆ. ಅನ್ಯಾಯವನ್ನು ಗೋರ ವಿರೋಧಿಸುತ್ತಾನೆ. ಬ್ರಾಹ್ಮಣನೊಬ್ಬ ಬ್ರಿಟೀಷರ ಪರವಾಗಿ ನಿಂತು ರೈತರ ಮೇಲೆ ದೌರ್ಜನ್ಯಕ್ಕೆ ಕುಮ್ಮಕ್ಕು ಕೊಡುವುದನ್ನು ಪ್ರತಿಭಟಿಸುತ್ತಾನೆ. ನ್ಯಾಯಾಧೀಶನ ಮನೆಗೆ ಹೋಗಿ ರೈತರನ್ನು ಬಿಡುಗಡೆಮಾಡಲು ಒತ್ತಾಯಿಸುತ್ತಾನೆ. ನ್ಯಾಯಾಧೀಶ ಸಿಟ್ಟಿಗೆದ್ದು  ಕೆರೆಯ ನೀರನ್ನು ಅಪವಿತ್ರ ಮಾಡಿದ ಕೇಸಿನಲ್ಲಿ ಗೋರನನ್ನು ಸಿಲುಕಿಸಿ ಒಂದು ತಿಂಗಳು ಜೈಲು ಶಿಕ್ಷೆಯನ್ನು ವಿಧಿಸುತ್ತಾನೆ. ಗೋರನಿಗಾದ ಶಿಕ್ಷೆಯನ್ನು ಪರೇಶಬಾಬು ಮಗಳು ಲಲಿತೆ ವಿರೋಧಿಸಿ ಬ್ರಿಟೀಷ್ ಅಧಿಕಾರಿ ಗ್ರೌನ್ಲೋ ಮನೆಯಲ್ಲಿ ಆಯೋಜಿಸಿದ ಮನರಂಜನೆ ಪಾರ್ಟಿಯಲ್ಲಿ ಭಾಗವಹಿಸಲು ನಿರಾಕರಿಸಿ ವಿನಯ್ನೊಂದಿಗೆ  ಕಲ್ಕತ್ತೆಗೆ ಮರಳುತ್ತಾಳೆ. ಇದರಿಂದ ಹರಣಬಾಬು ಸಿಟ್ಟಿಗೇಳುತ್ತಾನೆ. ವಿನಯ್ ಎನ್ನುವ ವೈದಿಕನ ಜೊತೆಗೆ ಲಲಿತೆ ಮದುವೆಯಾಗುತ್ತಿರುವುರಿಂದ ಬ್ರಹ್ಮಸಮಾಜಕ್ಕೆ ಅವಮಾನ ಆಗುತ್ತದೆಂದು ಪತ್ರಿಕೆಗಳಲ್ಲಿ ಲೇಖನ ಬರೆಯುತ್ತಾನೆ. ಸುಚರಿತೆಗೆ ಬೇಸರವಾಗಿ ಹರಣಬಾಬುವನ್ನು ಮದುವೆಯಾಗಲು ನಿರಾಕರಿಸಿ ಆನಂದಮಿಯಿ ಮನೆಗೆ ಬಂದು ವಿನಯ್ ಮತ್ತು ಲಲಿತಳ ಮದುವೆ ವಿಷಯ ಮಾತಾಡುತ್ತಾಳೆ. ಆನಂದಮಯಿ ಸಂತೋಷದಿಂದ ಒಪ್ಪುತ್ತಾಳೆ. ಕೊನೆಗೆ ಗೋರ ಜೈಲಿನಿಂದ ಮನೆಗೆ ಹಿಂತಿರುಗುತ್ತಾನೆ. ಸುಚರಿತೆಯು ಆತನ ದೇಶಭಕ್ತಿಗೆ ಮೆಚ್ಚಿ ಅವನನ್ನು ಗುರುವೆಂದು ಆರಾಧಿಸುತ್ತಾಳೆ. ಜೈಲಿನಲ್ಲಿದ್ದು ತನಗೆ ಮೈಲಿಗೆಯಾಗಿದೆ ಎಂದುಕೊಂಡು ಪಶ್ಚಾತ್ತಾಪ ಮಾಡಿಕೊಳ್ಳಲು ದೇವರ ಮನೆಗೆ ಗೋರ ಪೂಜೆಗೆ ಹೊರಡುತ್ತಾನೆ. ತಂದೆ ಕೃಷ್ಣದಯಾಳ್ ಅದನ್ನು ವಿರೋಧಿಸಿ ಗೋರನ ಜನ್ಮರಹಸ್ಯವನ್ನು ಹೇಳುತ್ತಾನೆ. ತಾನು ಬ್ರಾಹ್ಮಣನಲ್ಲ ವಿದೇಶಿಯೊಬ್ಬಳ ಮಗನೆಂದು ತಿಳಿದ ಗೋರ ಬ್ರಾಹ್ಮಣ್ಯದ ಕುರುಹುಗಳನ್ನೆಲ್ಲಾ ತೆಗೆದುಹಾಕಿ ಮನುಷ್ಯನಾಗುತ್ತಾನೆ. ನನಗೀಗ ಯಾವ ಬಂಧನಗಳಿಲ್ಲ ನಾನೀಗ ಸ್ವತಂತ್ರ ಎನ್ನುತ್ತಾ ಗೋರ ಜಾತಿ ಸೂತಕವನ್ನು ಕಳೆದುಕೊಂಡು ಹಿರಿಯರ ಆಶೀರ್ವಾದ ಪಡೆದು ಸುಚರಿತೆಯ ಜೊತೆಗೆ ಹೊರಡುತ್ತಾನೆ.
          




       ಈ ನಾಟಕದ ನಾಯಕ ಗೋರನ ವ್ಯಕ್ತಿತ್ವವೇ ಗೊಂದಲಕಾರಿಯಾದದ್ದು. ಒಂದು ಕಡೆ ಕರ್ಮಠ ಬ್ರಾಹ್ಮಣನಾಗುತ್ತಾನೆ. ಮನೆಯಲ್ಲಿರುವ ಕ್ರಿಶ್ಚಿಯನ್ ಸಹಾಯಕಿಯನ್ನು ಮುಟ್ಟುವುದು ಹೋಗಲಿ ಕೊಟ್ಟ ನೀರನ್ನೂ ಕುಡಿಯದಷ್ಟು ವೈದಿಕನಿಷ್ಟನಾಗಿರುತ್ತಾನೆ. ಮತ್ತೊಂದು ಕಡೆ ಕೆಳಗೆ ಬಿದ್ದ ಮುಸ್ಲಿಂ ವ್ಯಕ್ತಿಯನ್ನು ಮುಟ್ಟಿ ಸಹಾಯವನ್ನೂ ಮಾಡುತ್ತಾನೆ. ಮಾನವ ಪ್ರೀತಿಯ ಬಗ್ಗೆ ಮಾತನಾಡುತ್ತಾನೆ ಜೊತೆಗೆ ಜಾತೀಯತೆಯನ್ನು ಉಗ್ರವಾಗಿಯೇ ಆಚರಿಸುತ್ತಾನೆ. ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಹೇಳುತ್ತಾನೆ, ಬ್ರಹ್ಮಸಮಾಜದವರ ಜೊತೆಗೆ ಬೆರೆಯುವ ಸ್ವಾತಂತ್ರ್ಯವನ್ನು ವಿರೋಧಿಸುತ್ತಾನೆ. ಬ್ರಾಹ್ಮಣ ಯುವಕ ವಿನಯ್ ಬ್ರಹ್ಮಸಮಾಜದ ಹುಡುಗಿಯನ್ನು ಮದುವೆಯಾಗುವುದನ್ನು ವಿರೋಧಿಸುತ್ತಾನೆ, ಕೊನೆಗೆ ತಾನೇ ಬ್ರಹ್ಮಸಮಾಜದ ಹುಡುಗಿಯನ್ನು ಇಷ್ಟಪಡುತ್ತಾನೆ. ಮಾನವೀಯತೆ ಬಗ್ಗೆ ಭಾಷಣ ಕೊಡುತ್ತಾನೆ ಜೊತೆಗೆ ಮಡಿ ಮೈಲಿಗೆಗಳನ್ನು ಆಚರಿಸುತ್ತಾನೆ.... ಹೀಗೆ ಅನೇಕ ವಿರೋಧಾಬಾಸಗಳ ವ್ಯಕ್ತಿಯಾಗಿ ಗೋರ ಕಂಡುಬರುತ್ತಾನೆ. ಬಹುಷಃ ಆತ ಜನ್ಮದಿಂದ ಕ್ರಿಶ್ಚಿಯನ್ ಕರ್ಮದಿಂದ ಬ್ರಾಹ್ಮಣನಾಗಿದ್ದಕ್ಕೆ ವೈರುದ್ಯಗಳು ಸೃಷ್ಟಿಯಾದಂತಿವೆ. ಯಾವಾಗ ತಾನು ಬ್ರಾಹ್ಮಣನಲ್ಲ ಎಂದು ತಿಳಿದ ತಕ್ಷಣ ಬ್ರಾಹ್ಮಣ್ಯವನ್ನು ಕಳಚಿಕೊಳ್ಳುವುದು ಅಚ್ಚರಿಎನಿಸುತ್ತದೆ.
          ಜಾತಿಯತೆಯ ಆಯಾಮಗಳನ್ನು ನಾಟಕ ಅನಾವರಣಗೊಳಿಸುತ್ತದೆ. ಪ್ರಮುಖವಾಗಿ ಇಲ್ಲಿ ಎರಡು ಜಾತಿಗಳ ಪ್ರಸ್ತಾಪವಿದೆ. ಒಂದು ಕರ್ಮಠ ವೈದಿಕ ಬ್ರಾಹ್ಮಣರು, ಇನ್ನೊಂದು ಕಡೆ ವೈದಿಕ ಪರಂಪರೆಯನ್ನು ವಿರೋಧಿಸುವ ಬ್ರಹ್ಮಸಮಾಜದ ಉದಾರವಾದಿಗಳು. ಆದರೆ ಎರಡೂ ಜಾತಿಯಲ್ಲಿರುವ ವೈಚಾರಿಕತೆ ಮತ್ತು ವಿಕಾರತೆಗಳನ್ನು ನಾಟಕ ಚರ್ಚಿಸುತ್ತದೆ. ಧರ್ಮಾಧತೆ ಎನ್ನುವುದು ಎರಡೂ ಜಾತಿಯಲ್ಲೂ ಹಾಸುಹೊಕ್ಕಾಗಿವೆ. ಬ್ರಾಹ್ಮಣ ಪಂಡಿತರ ಮಗಳಾಗಿ ಬ್ರಾಹ್ಮಣನೊಬ್ಬನ ಮಡದಿಯಾದ ಆನಂದಮಯಿ ಮತಾಂಧತೆಯನ್ನು ವಿರೋಧಿಸಿ ಮಾನವೀಯತೆಯನ್ನು ಮೆರೆಯುತ್ತಾಳೆ. ವಿದೇಶಿ ಮಹಿಳೆಗೆ ಹುಟ್ಟಿದ ಕೂಸನ್ನು ತನ್ನ ಮಗನಂತೆ ಸಾಕುತ್ತಾಳೆ. ಕ್ರಿಶ್ಚಿಯನ್ ಹೆಂಗಸನ್ನು ತನ್ನ ಮನೆಯಲ್ಲೇ ಇರಿಸಿಕೊಳ್ಳುತ್ತಾಳೆ. ತನ್ನ ಗಂಡನ ಕರ್ಮಠತನವನ್ನು ವಿರೋಧಿಸುತ್ತಾಳೆ. ಬ್ರಾಹ್ಮಣ್ಯದೊಳಗಿದ್ದು ಮಾನವೀತೆಯನ್ನು  ಮೆರೆಯುತ್ತಾಳೆ. ಆದರೆ ಅವಳೇ ಸಾಕಿ ಸ್ವಂತ ಮಗನಂತೆ ಬೆಳೆಸಿದ ಗೋರ ಮತಾಂಧನಾಗುತ್ತಾನೆ. ಬ್ರಿಟೀಷರನ್ನು ಓಡಿಸಿ ಹಿಂದೂ ಮತಾಂಧ ಸಾಮ್ರಾಜ್ಯ ಸ್ಥಾಪಿಸುವ ಆಶಯ ಹೊಂದಿರುತ್ತಾನೆ. ಇತ್ತ ಬ್ರಹ್ಮಸಮಾಜದಲ್ಲಿ ಪರೇಶಬಾಬು ಮತ್ತು ಕುಟುಂಬ ವೈಚಾರಿಕ ನೆಲೆಗಟ್ಟಿನವರಾದರೆ ಅದೇ ಸಮಾಜದ ಹರಣ್ ಬಾಬುನಂತವರು ಬ್ರಹ್ಮಸಮಾಜದಲ್ಲೂ ಮತಾಂಧತೆಯನ್ನು ಬಿತ್ತುತ್ತಿರುತ್ತಾರೆ. ಒಟ್ಟಾರೆಯಾಗಿ ಜಾತಿ ಯಾವುದಾದರೇನು ಮಾನವೀಯತೆ ಮತ್ತು ಮತಾಂಧತೆಯ ವ್ಯಕ್ತಿಗಳು ಇದ್ದೇ ಇರುತ್ತಾರೆ ಎನ್ನುವುದನ್ನು ನಾಟಕ ಸಾಬೀತುಪಡಿಸುವಂತೆ ಮೂಡಿಬಂದಿದೆ.
          ನಾಟಕದ ಸ್ತ್ರೀ ಪಾತ್ರಗಳ ದಿಟ್ಟತನ ಗಮನಾರ್ಹವಾಗಿದೆ. ಸಂಪ್ರದಾಯದ ಕರ್ಮಠತನವನ್ನು ಎದುರಿಸಿ ನಿಲ್ಲುವ ಆನಂದಮಯಿ ಮನವೀಯತೆಯ ಪ್ರತೀಕವಾಗುತ್ತಾಳೆ. ತಮ್ಮಿಷ್ಟದಂತೆ ಬದುಕಲು ಬಯಸುವ ಲಲತೆ ಮತ್ತು ಸುಚರಿತೆ ಇಬ್ಬರೂ ಜಾತಿಯನ್ನು ಮೀರಿ ತಮ್ಮ ವ್ಯಕ್ತಿ ಸ್ವಾತಂತ್ರ್ಯ ರೂಪಿಸಿಕೊಳ್ಳುತ್ತಾರೆ.   ಬ್ರಹ್ಮಸಮಾಜದೊಳಗಿನ ಧರ್ಮಾಂಧತೆಯನ್ನು ವಿರೋಧಿಸಿ ವೈದಿಕ ಹುಡುಗರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ವಿನಯ್ ಮತ್ತು ಪರೇಶಬಾಬುವನ್ನು ಹೊರತು ಪಡಿಸಿ ಎಲ್ಲಾ ಪುರಷ ಪಾತ್ರಗಳೂ ಜಾತಿವಾದಿಗಳೇ ಆಗಿವೆ. ನಾಟಕದ ನಾಯಕ ಗೋರನಂತೂ ಆಶಯದಲ್ಲಿ ಮಾನವೀಯತೆಯನ್ನು ಹೊಂದಿದ್ದರೂ ಆಚರಣೆಯಲ್ಲಿ  ಕೋಮುವಾದಿಯಾಗಿದ್ದಾನೆ. ಹೀಗೆ.... ಠಾಗೂರ್ರು ಮಹಿಳಾ ಪಾತ್ರದ ಪೋಷಣೆಯಲ್ಲಿ ಮಾನವೀಯ ಅಂಶಗಳನ್ನು ಸೇರಿಸಿದ್ದು ಅನನ್ಯವಾಗಿದೆ.
          ಇಡೀ ನಾಟಕ ಗಂಭೀರವಾದ ಸಂಭಾಷಣೆಗಳಲ್ಲಿ, ವೈಚಾರಿಕತೆ ಮತ್ತು ಮತಾಂಧತೆಯ ತಾಕಲಾಟದಲ್ಲಿ ನಡೆಯುತ್ತದೆ. ಆದರೆ ನಾಟಕದ ಅಂತ್ಯಮಾತ್ರ ವಿಚಾರ ಪೂರ್ಣವಾಗಿದೆ. ಅನುಕರಣಿಯವಾಗಿದೆ. ಯಾಕೆಂದರೆ ಯಾರು ಜಾತಿ ಧರ್ಮಗಳ ಹಂಗನ್ನು ಹರಿದುಕೊಳ್ಳುತ್ತಾರೋ ಅವರು ನಿಜವಾದ ಸ್ವಾತಂತ್ರ್ಯವನ್ನು ಹೊಂದುತ್ತಾರೆ ಎನ್ನುವುದನ್ನು ಗೋರನ ಮನಪರಿವರ್ತನೆಯ ಮೂಲಕ ತೋರಿಸಲಾಗಿದೆ. ಅಂದರೆ ವ್ಯಕ್ತಿ ಬಂಧನದಿಂದ ಮುಕ್ತನಾಗಬೇಕೆಂದರೆ ಮೊದಲು ಜಾತಿಯಿಂದ ಮುಕ್ತನಾಗಬೇಕು, ಜಾತ್ಯಾತೀತನಾಗಬೇಕು. ಭವಿಷ್ಯದ ಭೀತಿಯಿಂದ ಹೊರಬರಬೇಕಾದರೆ ಧರ್ಮದ ಬೀತಿಯಿಂದ ಹೊರಬಂದು ಧರ್ಮಾತೀತನಾಗಬೇಕು. ವಿಶಾಲ ಬಯಲು ಸಿಗಬೇಕೆಂದರೆ ಎಲ್ಲಾ ಜಾತಿಸೂಚಕಗಳನ್ನು ತೊರೆದು ಬೆತ್ತಲಾಗಬೇಕು ಎನ್ನುವ ಸಾರ್ವತ್ರಿಕ ಸತ್ಯವನ್ನು ಗೋರ ನಾಟಕ ಹೇಳುತ್ತದೆ. ರವೀಂದ್ರನಾಥ ಠಾಗೂರರ ನಿಜವಾದ ಆಶಯವೇ ಇದಾಗಿದೆ.
         

       ಕಾದಂಬರಿಯಾಗಿ ಯಶಸ್ವಿಯಾದ ಗೋರ ನಾಟಕವಾಗಿ ಯಶಸ್ವಿಯಾಯಿತಾ? ಎಂದರೆ ನಿಟ್ಟಿನಲ್ಲಿ ಒಂದು ಉತ್ತಮ ಪ್ರಯತ್ನ ಎನ್ನಬಹುದಾಗಿದೆ. ನಾಟಕ ಎಂದರೆ ರಂಜನೆಯ ಮೂಲಕ ಬೋದನೆಯನ್ನು ಮಾಡುವುದು ಎಂದು ಭರತಮುನಿ ಹೇಳುತ್ತಾನೆ. ಹಾಗೆಯೇ ನಾವು ನಂಬಿಕೊಂಡಿದ್ದೇವೆ. ಆದರೆ ನಾಟಕದಲ್ಲಿ ವೈಚಾರಿಕ ಹಿನ್ನೆಲೆಯಲ್ಲಿ ಜಾತಿ ಧರ್ಮಗಳ ಶುಷ್ಕತೆಯನ್ನು ವಿಶ್ಲೇಷಿಸುವ ಮೂಲಕ ಬಂಧನದಿಂದ ಮುಕ್ತರಾಗಲು ಜಾತಿಬಿಡಬೇಕು ಎನ್ನುವ ಬೋದನೆಯನ್ನು ಮಾಡಲಾಗಿದೆ. ಇದರಿಂದಾಗಿ ಸಾಮಾನ್ಯ ಪ್ರೇಕ್ಷಕರಿಗೆ ನಾಟಕ ಸಂವಹನವಾಗುವುದು ಸುಲಭದ ಮಾತಲ್ಲ. ಒಂದು ರೀತಿಯಲ್ಲಿ ಕಬ್ಬಿಣದ ಕಡಲೆಯಾಗಿದೆ. ದೃಶ್ಯಗಳ ಮೂಲಕ ಕಥೆಯನ್ನು ಕಟ್ಟಿಕೊಡುವಲ್ಲಿ ವಿಫಲವಾದ ನಾಟಕ ಒಂದು ರೀತಿಯಲ್ಲಿ ರೇಡಿಯೋ ನಾಟಕದ ಮಾದರಿಯಲ್ಲಿದೆ. ಸಂಭಾಷಣೆಗಳೇನೋ ಕೇಳುತ್ತವೆ  ಆದರೆ ಕಾಣುವುದಿಲ್ಲ ಯಾಕೆಂದರೆ ಕಂಡದ್ದೆಲ್ಲಾ ಕುತೂಹಲಕಾರಿಯಾಗಿಲ್ಲ. ಮೊದಲನೆಯದಾಗಿ ನಾಟಕದ ಕಥೆಯೇ ಸಂಪೂರ್ಣವಾಗಿ ಅರ್ಥವಾಗುವಂತಿಲ್ಲ. ಎಲ್ಲೆಲ್ಲೋ ಲಿಂಕ್ಗಳು ಮಿಸ್ ಆದಂತಿವೆ. ಕೆಲವೊಂದು ಪಾತ್ರಗಳ ನಡುವಿನ ಸಂಬಂಧಗಳು ಅಸ್ಪಷ್ಟವಾಗಿವೆ. ಅದ್ಯಾಕೆ ಕ್ರಿಶ್ಚಿಯನ್ ಮಹಿಳೆಗೆ ಇಲ್ಲಿ ಲಕ್ಷ್ಮೀ ಎಂದು ಕರೆದರೋ ಗೊತ್ತಿಲ್ಲ. ಇದು ಹಿಂದೂ ಹೆಸರಾಗಿದೆ.  ಮೂಲ ಕಾದಂಬರಿಯಲ್ಲಿ ಲಚುಮಿಯಾ ಅಂತಾ ಹೆಸರಿದೆ. 
          ಇದೆಲ್ಲದಕ್ಕಿಂತ ಹೆಚ್ಚಾಗಿ ಕಲಾವಿದರು ಕಾದಂಬರಿಯನ್ನು ಹಾಗೂ ಅಲ್ಲಿರುವ ಪಾತ್ರಗಳನ್ನು ಅರ್ಥೈಸಿಕೊಂಡು ಅಭಿನಯಿಸಿದ್ದರೆ ಚೆನ್ನಾಗಿತ್ತೇನೋ. ಹೀಗಾಗಿ ಪಾತ್ರದೊಳಗೆ ಪ್ರವೇಶ ಮಾಡಲು ಕಲಾವಿದರಿಗೆ ಸಾಧ್ಯವೇ ಅಗಿಲ್ಲವೆನಿಸುತ್ತದೆ. ವೈದಿಕಶಾಹಿಗಳಲ್ಲಿರುವ ಕಠೋರತೆಯನ್ನೂ ವಿನಯದ ಮೂಲಕ ಹೇಳುವಂತಹ  ಚಾಕಚಕ್ಯತೆಯನ್ನು ಗೋರ ಪಾತ್ರದಾರಿ ವೆಂಕಟೇಶ ಪ್ರಸಾದ ತೋರಿಸಬೇಕಿತ್ತು. ಆರಂಭದಿಂದ ಅಂತ್ಯದವರೆಗೂ ಗಂಭೀರವಾಗಿರುವುದನ್ನು ಹಾಗೂ ಒರಟಾಗಿ ಮಾತಾಡುವುದನ್ನು ಪಾತ್ರದಾರಿ ರೂಢಿಸಿಕೊಂಡಿದ್ದು ನೋಡುಗರಿಗೆ ಅಸಹನೀಯವೆನಿಸಿತು. ಕೃಷ್ಣದಯಾಳ ಪಾತ್ರದಾರಿ ನಾಗರಾಜ ಆಚಾರಿ ತನ್ನ ಪಾತ್ರದ ಔಚಿತ್ಯವನ್ನರಿತಿದ್ದರೆ ಪಾತ್ರ ಕಳೆಗಟ್ಟುತ್ತಿತ್ತು. ವಿನಯ್ ಪಾತ್ರವಾಗಿ ಮತ್ತು ನಿರೂಪಕನಾಗಿ ರತನ್ ರಾಂ ನಟನೆಯನ್ನು ತೂಗಿಸಿಕೊಂಡು ಹೋಗಿದ್ದಾರೆ. ಪರೇಶಬಾಬುವಾಗಿ ಸಿಹಿಕಹಿಚಂದ್ರು ಅಗತ್ಯಕ್ಕೆ ತಕ್ಕಷ್ಟೆ ನಟಿಸಿದ್ದಾರಾದರೂ ನಟನೆಯಲ್ಲಿ ಪೋರ್ಸ ಇಲ್ಲವಾಗಿದೆ. ಆದರೆ ಆನಂದಮಯಿಯಾಗಿ ಅರ್ಚನಾ, ಲಲಿತೆಯಾಗಿ ನಭಾ ನಟೇಶ್ ಮತ್ತು ಸುಚರಿತೆಯಾಗಿ ಸಿರಿ ಮತ್ತು ವರದಸುಂದರಿಯಾಗಿ ಶ್ವೇತ ಎಲ್ಲಾ ಮಹಿಳಾ ಪಾತ್ರದಾರಿಗಳು ತುಂಬಾ ಸೊಗಸಾಗಿ ಲೀಲಾಜಾಲವಾಗಿ ಅಭಿನಯಿಸಿದ್ದಾರೆ.     
          ಎಲ್ಲರ ಗಮನ ಸೆಳೆದದ್ದು ರಂಗವಿನ್ಯಾಸ. ಮುಂಭಾಗದಲ್ಲಿ ಅಭಿನಯಕ್ಕೆ ಜಾಗವನ್ನು ಬಿಟ್ಟು ಹಿಂಬಾಗದಲ್ಲಿ ಅಟ್ಟವನ್ನು ಕಟ್ಟಿ ಮಾಳಿಗೆಯಂತೆ ನಿರ್ಮಿಸಿದ್ದು ತುಂಬಾ ಚೆನ್ನಾಗಿ ಮೂಡಿಬಂದಿದೆ. ಮಾಳಿಗೆಯ ಮೇಲೆ ದೃಶ್ಯಗಳು ನಡೆಯುತ್ತಿದ್ದರೆ ನೊಡುಗರಿಗೆ ಸಿನೆಮಾ ನೋಡಿದಂತಹ ಅನುಭವವನ್ನು ಕೊಟ್ಟಿತು. ಜೊತೆಗೆ  ಬೆಳಕಿನ ವಿನ್ಯಾಸವು ನಾಟಕಕ್ಕೆ ಮೂರನೆಯ ಆಯಾಮವನ್ನು (೩ಡಿ) ವದಗಿಸಿದಂತಿತ್ತು. ನಾಟಕದ ನಿರೂಪಣೆಗಿಂತಾ ಪ್ರಕಾಶ ಬೆಳವಾಡಿಯವರು ರಂಗಸಜ್ಜಿಕೆಯ ವಿನ್ಯಾಸ ಹಾಗೂ ಬೆಳಕಿನ ವಿನ್ಯಾಸದಲ್ಲಿ ಗೆದ್ದಿದ್ದಾರೆ. ರಾಮಕೃಷ್ಣ ಕನ್ನರಪಾಡಿಯವರ ಪ್ರಸಾದನ ತುಂಬಾ ಸೊಗಸಾಗಿದ್ದು ಪ್ರತಿ ಪಾತ್ರಗಳ ಬೆಂಗಾಲಿ ಮೂಲದ ಉಡುಗೆ ತೊಡುಗೆಗಳು ನಿಜಕ್ಕೂ ಗಮನಸೆಳೆದವು. ಬೆಂಗಾಲಿ ಭಾಷೆಯ ಹಾಡು ಅನಗತ್ಯವಾಗಿತ್ತು, ಹಿನ್ನೆಲೆ ಸಂಗೀತ ಹಿತವಾಗಿತ್ತು



ಒಂದು ದೃಶ್ಯ ಇನ್ನೂ ಪೂರ್ಣಗೊಳ್ಳುವ ಮೊದಲೇ ಇನ್ನೊಂದು ದೃಶ್ಯ ಆರಂಭವಾಗುವಂತಹ  ರಂಗತಂತ್ರದ ಬಳಕೆ ಈ ನಾಟಕದ ವೈಶಿಷ್ಟ್ಯತೆಯಾಗಿದೆ. ಸಿನೆಮಾದಲ್ಲಿ ಈ ಡಿಸಾಲ್ವ್ ಎಫೆಕ್ಟನ್ನು ಬಳಸುತ್ತಾರೆ.  ಇದರಿಂದಾಗಿ ಬ್ಲಾಕ್ ಔಟಗಳಲ್ಲಿ ಪ್ರೇಕ್ಷಕರ ಗಮನ ಬೇರೆಕಡೆ ಹೋಗುವುದು ತಪ್ಪುತ್ತದೆ. ಯಾವುದೇ ಕಾರಣಕ್ಕೂ ಪ್ರೇಕ್ಷಕರ  ಏಕಾಗ್ರತೆಗೆ ಭಂಗ ಬಾರದಂತೆ ಈ ಎಫೆಕ್ಟ ಬಳಸಿದ್ದರಿಂದ ಗಂಭೀರವಾದ ನಾಟಕ ನೋಡಿಸಿಕೊಂಡುಹೋಗುತ್ತದೆ. ನಾಟಕ ಸ್ವಲ್ಪ ಬೋರಾದರೂ ಬ್ಲಾಕೌಟ್ ಗಳಲ್ಲಿ ರಂಗಮಂದಿರದಿಂದ ಹೊರಹೋಗುವ ಕೆಲವು ಪ್ರೇಕ್ಷಕರನ್ನು ಈ ರಂಗತಂತ್ರ ಹಿಡಿದಿಟ್ಟಿದೆ.
 
        ಒಟ್ಟಾರೆಯಾಗಿ ರವೀಂದ್ರನಾಥ ಠಾಗೂರರ ಕಾದಂಬರಿಯನ್ನು ಓದಲಾಗದವರಿಗೆ ನಾಟಕ ಒಂದು ವರದಾನದಂತೆ ಮೂಡಿ ಬಂದಿದೆ. ಎರಡು ದಿನಗಳಲ್ಲಿ ಓದಬಹುದಾದ ಕಾದಂಬರಿಯನ್ನು ಎರಡು ಗಂಟೆಯಲ್ಲಿ ನಾಟಕ ಹೇಳುತ್ತದೆ. ಕಾದಂಬರಿಯ ಅನುಭೂತಿಯನ್ನು ಕೊಡದೇ ಹೋದರೂ ಕಾದಂಬರಿಯ ವಸ್ತು ವಿಷಯ ಮತ್ತು ಆಶಯವನ್ನು ಮನದಟ್ಟು ಮಾಡಿಸುವಲ್ಲಿ ಗೋರ ನಾಟಕ ಸಫಲವಾಗಿದೆ. ರವೀಂದ್ರನಾಥ ಠಾಗೂರರಂತಹ ಹೆಮ್ಮೆಯ ರಾಷ್ಟ್ರಕವಿಯ ನೆನಪಿನಲ್ಲಿ ಹೇಗೆ ಭಾರತದಲ್ಲೇ ಭವ್ಯವಾದ ರವೀಂದ್ರ ಕಲಾಕ್ಷೇತ್ರವನ್ನು ಕಟ್ಟಿ ಮಹಾಚೇತನಕ್ಕೆ ಸರಕಾರ ಗೌರವ ಸಲ್ಲಿಸಲಾಗಿದೆಯೋ ಹಾಗೆಯೇ ರವೀಂದ್ರ ಕಲಾಕ್ಷೇತ್ರದ ೫೦ನೇ ವರ್ಷದ ಸುವರ್ಣ ಸಂಭ್ರಮದ ಉತ್ಸವದಲ್ಲಿ ರವೀಂದ್ರನಾಥ ಠಾಗೂರರ ಕಾದಂಬರಿಯಾಧರಿಸಿದ ಗೋರ ನಾಟಕವನ್ನು ಪ್ರಸ್ತುತ ಪಡಿಸುವ ಮೂಲಕ ಅಭಿನಯ ತರಂಗವು ರವೀಂದ್ರನಾಥ ಠಾಕೂರರಿಗೆ ಮತ್ತು ರವೀಂದ್ರ ಕಲಾಕ್ಷೇತ್ರಕ್ಕೆ  ರಂಗಗೌರವವನ್ನು ಅರ್ಪಿಸಿದೆ. 


                                                                       -ಶಶಿಕಾಂತ ಯಡಹಳ್ಳಿ
           
             


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ