ಬುಧವಾರ, ಡಿಸೆಂಬರ್ 11, 2013

"ಅನಭಿಜ್ಞ ಶಾಕುಂತಲ" ; ಬೌದ್ದಿಕ ನೆಲೆಯಲ್ಲಿ ಅರಳಿದ ದೃಶ್ಯಕಾವ್ಯ.



ನಾಟಕ ವಿಮರ್ಶೆ


                                 
       


                "ಕನ್ನಡಿಯೇ....  ಮಾಯಾ ಕನ್ನಡಿಯೇ
               ಚಿತ್ರದ ಒಳಗಿನ ಚಿತ್ತಾರವೇ ವಿಚಿತ್ರವೇ
               ಮಾತಿನ ಒಳಗಿನ ಲೋಕವೇ ಮಾಯಾ ಲೋಕವೇ...."

ಇದು "ಅನಭಿಜ್ಞ ಶಾಕುಂತಲ" ನಾಟಕದ ಟೈಟಲ್ ಸಾಂಗ್. ಇಡೀ ನಾಟಕದ ಆಶಯವೇ ಹಾಡಿನೊಳಗೆ ಅಡಗಿದೆ. ಕನ್ನಡಿಯಿಂದ ಆರಂಭವಾಗುವ ನಾಟಕ ಕನ್ನಡಿಯಿಂದಲೇ ಅಂತ್ಯವಾಗಿ, ಪಾತ್ರಗಳು ಗಾಜಿನ ಒಳಗಿನ ಬಿಂಬವಾಗಿ ಅನಾವರಣಗೊಳ್ಳುತ್ತಾ, ಮಾತಿನ ಒಳಗಡೆ ಮಾಯಾಲೋಕವನ್ನು ಸೃಷ್ಟಿಸಿವೆ. 'ಅನಭಿಜ್ಞ ಶಾಕುಂತಲ' ನಾಟಕವು ರಂಗದಂಗಳದಲ್ಲಿ ಚಿತ್ತಾರಗಳನ್ನು ಚಿತ್ರಿಸುತ್ತಲೇ ಹಲವು ವಿಚಿತ್ರಗಳನ್ನು ಹುಟ್ಟಿಸಿದೆ. ಬೆರಗಿನ ಜೊತೆಗೆ ಭ್ರಮೆಯನ್ನು, ಸಂಗತ ಮೀರಿದ ಅಸಂಗತವನ್ನು ಅನಾವರಣಗೊಳಿಸುವಲ್ಲಿ "ಅನಭಿಜ್ಞ ಶಾಕುಂತಲ" ಯಶಸ್ವಿಯಾಗಿದೆ

ಡಾ.ಕೆ.ವೈ.ನಾರಾಯಣಸ್ವಾಮಿಯವರು ರಚಿಸಿದ "ಅನಭಿಜ್ಞ ಶಾಕುಂತಲ" ನಾಟಕವನ್ನು "ಪ್ರಸಂಗ" ತಂಡದ ಕಲಾವಿದರು ಪ್ರಕಾಶ ಶೆಟ್ಟಿಯವರ ನಿರ್ದೇಶನದಲ್ಲಿ  ರವೀಂದ್ರ ಕಲಾಕ್ಷೇತ್ರ-50 ಸುವರ್ಣ ಸಂಭ್ರಮ ರಂಗಉತ್ಸವದ ಮೊದಲ ಕಂತಿನ ಕೊನೆಯ ನಾಟಕವಾಗಿ 2013, ಡಿಸೆಂಬರ್ 11ರಂದು 'ರವೀಂದ್ರ ಕಲಾಕ್ಚೇತ್ರ'ದಲ್ಲಿ ಪ್ರದರ್ಶಿಸಲಾಯಿತು. 
 
ನಾಟಕದ ಕಥಾ ಸಾರಾಂಶ ಹೀಗಿದೆ. ನಾಗಸಾಣಿ (ವೇಶ್ಯೆ) ಮನೆಯಲ್ಲಿ ಶಾಕುಂತಲ ನಾಟಕದ ವಾಚನವನ್ನು ಮಾಡುತ್ತಿದ್ದ ಕವಿ ಕಾಳಿದಾಸನ ಹತ್ಯೆಯಾಗುತ್ತದೆ. ಕೊಲೆ ಆರೋಪಿಯಾದ ಹೆಂಗಸಿನ ವಿಚಾರಣೆಯನ್ನು ನ್ಯಾಯಾಧೀಶ (ಸೂತ್ರದಾರ) ಸೆರೆಮನೆಯಲ್ಲಿ ನಡೆಸುತ್ತಿರುವಾಗ ಇನ್ನಿಬ್ಬರು ಮಹಿಳೆಯರನ್ನು ಭಟರು ಕರೆತರುತ್ತಾರೆ. ಮೂವರು ಹೆಂಗಸರು ಒಬ್ಬೊಬ್ಬರಾಗಿ ತಮ್ಮ ಹಾಗೂ ಕಾಳಿದಾಸನ ಜೊತೆಗಿರುವ ಸಂಬಂಧಗಳ ಕಥೆಯನ್ನು ಹೇಳತೊಡಗುತ್ತಾರೆ. ಆಕೆ ಮಲ್ಲಿಕಾ, ಕಾಶ್ವೀರದ ಕಣಿವೆಯ ಹಾಡಿಯ ಹುಡುಗಿ. ಕಾಳಿದಾಸನಿಗೆ ಮರುಳಾಗಿ ಪ್ರೀತಿಸಿ ಅವನಿಂದ ಪರಿತ್ಯಕ್ತಳಾದವಳು. ಇನ್ನೊಬ್ಬಳು ಹಾಡಿಯ ನಾಯಕನ ಮನೆ ಸೊಸೆ ಮದುವೆಯಾದ 6ನೇ ದಿನದ ರಾತ್ರಿ ಕಾಳಿದಾಸನಿಗೆ ಮೋಹಗೊಂಡು ಹಿಂಬಾಲಿಸಿದಳು. ಇಬ್ಬರೂ ಹುಣ್ಣಿಮೆಯ ರಾತ್ರಿ ಬೆಟ್ಟಿಯಾದರು, ಆತ ಆಕೆಯನ್ನು ಗಂಧರ್ವ ಕನ್ಯೆ ಎಂದುಕೊಂಡರೆ, ಆಕೆ ಆತನನ್ನು ಗಂಧರ್ವ ಎಂದುಕೊಂಡು ಇಬ್ಬರೂ ರಾತ್ರಿ ಜೊತೆ ಸೇರಿದರು. ನೆನಪಿಗಾಗಿ ಆಕೆ ಅವನಿಗೆ ತನ್ನ ಉಂಗುರವನ್ನು ಕೊಟ್ಟಳು. ರಾಜಧನದ ವಸೂಲಿಗೆ ಬಂದ ರಾಜಪಾರಿಚಾರಿಕ ಕಾಳಿಯ ಹಾಡಿಗೆ ಮನಸೋತು ಕವಿಯನ್ನು ಉಜ್ಜಯನಿಗೆ ಭೋಜರಾಜನ ಆಸ್ಥಾನಕ್ಕೆ ಕರೆದೊಯ್ಯುತ್ತಾನೆ. ಅಲ್ಲಿ ಕಾಳಿದಾಸನ ಪ್ರತಿಭೆಗೆ ಮಾರುಹೋದ ರಾಜನ ಪುತ್ರಿ ರಾಜಕುಮಾರಿ ಮಂಜರಿಯು ಆತನನ್ನು ಪ್ರೀತಿಸಿ ಮದುವೆ ಆಗಲು ಬಯಸಿ ನಿರಾಸೆಗೊಂಡು ಆತನನ್ನು ಬಂಧನದಲ್ಲಿಡುತ್ತಾಳೆ. ಮೂರು ಹುಣ್ಣಿಮೆಯೊಳಗೆ ಬರುತ್ತೇನೆಂದು ಹೋದವನು ಬಾರದಾದಾಗ ಹಾಡಿಯ ನಾಯಕನ ಸೊಸೆ (ಗಂಧರ್ವೆ) ನಿರಾಶಳಾಗುತ್ತಾಳೆ. ಆಕೆಯ ಗರ್ಭದಲ್ಲಿ ಕಾಳಿದಾಸನ ಮಗು ಬೆಳೆಯುತ್ತಿರುತ್ತದೆ. ಆಕೆಯ ಗಂಡ ಮತ್ತು ಮಾವ ಆಕೆಯನ್ನು ಮನೆಯಿಂದ ಹೊರಗಟ್ಟುತ್ತಾರೆ. ದಾರಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಆಕೆಯನ್ನು ನಾಗಸಾಣಿಯರು ಉತ್ತರದ ಕಾಶ್ಮೀರದಿಂದ ದಕ್ಷಿಣದ ಕೊಲೊಂಬೊಕ್ಕೆ ತಮ್ಮ ಜೊತೆಗೆ ಕರೆದೊಯ್ಯುತ್ತಾರೆ. ಇತ್ತ 2 ವರ್ಷಗಳ ಕಾಲ ಬಂಧನದಲ್ಲಿಟ್ಟರೂ ಕಾಳಿದಾಸ ಮದುವೆಗೆ ನಿರಾಕರಿಸಿದಾಗ ನಿರಾಸೆಗೊಂಡ ರಾಜಕುಮಾರಿ ಅವನನ್ನು ಬಿಡುಗಡೆಗೊಳಿಸುತ್ತಾಳೆ. ಗಂಧರ್ವ ಕನ್ಯೆಯನ್ನು ಹುಡುಕಿ ಹತಾಶನಾದ ಕಾಳಿದಾಸನಿಗೆ ನಾಗಸಾಣಿಯರು ಆಕೆಯನ್ನು ಕರೆದೊಯ್ದದ್ದು ತಿಳಿಯುತ್ತದೆ. ವೇಶ್ಯಾಗ್ರಹಗಳಲ್ಲಿ ಆತ ಆಕೆಗಾಗಿ ಹುಡುಕುತ್ತಿರುತ್ತಾನೆ. ಒಂದು ದಿನ ಆತನ ಗಂಧರ್ವ ಕನ್ಯೆ ಇರುವ ವೇಶ್ಯಾಗೃಹದಲ್ಲಿ "ಅಭಿಜ್ಞಾನ ಶಾಕುಂತಲ" ನಾಟಕ ವಾಚಿಸುವಾಗ ತನ್ನ ಮಗನಿಂದಲೇ ಕಾಳಿದಾಸನ ಕೊಲೆಯಾಗುತ್ತದೆ. ಕೊನೆಗೆ ಶಿಕ್ಷೆಗೆ ಒಳಪಟ್ಟ ಕೊಲೆ ಆರೋಪಿ (ಗಂಧರ್ವೆ)ಯನ್ನು ಬಿಟ್ಟು ಎಲ್ಲರೂ ಹೊರಡುತ್ತಾರೆ. ಅಸಹಾಯಕನಾದ ನ್ಯಾಯಾಧೀಶನೂ ಹೊರಡುತ್ತಾನೆ. ಇಲ್ಲಿಗೆ ನಾಟಕವೇನೋ ಮುಗಿಯುತ್ತದೆ. ನಾಟಕದ ನಂತರವೂ ಪ್ರೇಕ್ಷಕರನ್ನು ಕಾಡುತ್ತದೆ.

   
ನಾಟಕವನ್ನು ವಾಚಿಸಲು ವೇಶ್ಯೆಯ ಮನೆಗೆ ಕಾಳಿದಾಸ ಯಾಕೆ ಹೋದ? ಹೋಗಲಿ ಅತ್ಯಂತ ಖಾಸಗಿ ಪ್ರದೇಶವಾದ ವೇಶ್ಯೆಯ ಮನೆಯಲ್ಲಿ ಸಾರ್ವಜನಿಕರು ಬಂದು ನಾಟಕ ವಾಚನ ಕೇಳಲು ಸೇರಿದ್ದು ಸಮರ್ಥನೀಯವೇ?  ಕಾಳಿದಾಸನನ್ನು ಪ್ರೀತಿಸಿದ್ದ ಹೆಂಗಸು (ಕಾಳಿದಾಸನ ಗಂಧರ್ವಕನ್ಯೆ) ನಾಗಸಾಣಿ ಮನೆಯಲ್ಲೇ ಇದ್ದರೂ ಯಾಕೆ ತನ್ನ ಗುರುತನ್ನು ಕಾಳಿದಾಸನಿಗೆ ಹೇಳಲಿಲ್ಲ. ಹತ್ತಾರು ಪುಟ್ಟ ಗುಡಿಸಲುಗಳಿರುವ ಚಿಕ್ಕಪುಟ್ಟ ಬುಡಕಟ್ಟಿನ ಕಾಡಿನ ಹಾಡಿಗಳಿಗೆ ರಾಜಪ್ರಮುಖರು ರಾಜಧನ ಮಸೂಲಿಗೆ ಬರುತ್ತಾರೆಂದರೆ ನಂಬಬಹುದೇ?  ಹೋಗಲಿ ಒಬ್ಬ ಹಾಡುಗಾರನ ಬದಲಿಗೆ ರಾಜಧನವನ್ನೇ ಬಿಟ್ಟು ಬಿಡುವ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರ ವಸೂಲಿ ಮಾಡುವವರಿಗೆ ಇರುತ್ತದಾ? ಕಾಳಿದಾಸ ಊರು ಬಿಟ್ಟು ರಾಜಧಾನಿ ಸೇರಿ ಕಾವ್ಯ ರಚಿಸುವುದಕ್ಕೆ 3 ತಿಂಗಳು ಹಾಗೂ ನಂತರ ರಾಜಕುಮಾರಿಯ ಬಂಧನದಲ್ಲಿದ್ದ 2 ವರ್ಷ, ಜೊತೆಗೆ ಗಂಧರ್ವಕನ್ಯೆಯ ಹುಡುಕಾಟಕ್ಕೆ ಒಂದೆರಡು ವರ್ಷ ಎಂದುಕೊಂಡರೂ ಹೀಗೆ ಅತ್ಯಂತ ಕಡಿಮೆ ಸಮಯದಲ್ಲಿ ಕಾಳಿದಾಸನನ್ನೇ ಕೊಲೆಮಾಡುವಷ್ಟು ಮಗ ದೊಡ್ಡವನಾಗಿ ಬೆಳೆದು ನಿಂತಿದ್ದನಾ? ಕಾಳಿದಾಸ ಕೊಲೆಯಾದ ದಿನ ನಾಗಸಾಣಿ ಮನೆಯಲ್ಲಿ ಇನ್ನೂ ಯುವತಿಯ ಹಾಗಿದ್ದ ಗಂಧರ್ವೆ ಕೊಲೆ ಆರೋಪಿಯಾಗಿ ಬಂಧಿಯಾಗಿ ಸೆರೆಮನೆ ಸೇರಿದ ಒಂದೇ ದಿನಕ್ಕೆ ಇದ್ದಕ್ಕಿದ್ದಂತೆ ಮಧ್ಯವಯಸ್ಕಳಾಗಿ ಬದಲಾಗಲು ಸಾಧ್ಯವೇ? ಒಂದು ದೇಶದ ರಾಜಕುಮಾರಿ ಮಂಜರಿಯು ಕಾಳಿದಾಸನ ಕೊಲೆಗಾರ್ತಿಯನ್ನು ನೋಡಲು ರಾಜಾರೋಷವಾಗಿಯೇ ಬರುವುದನ್ನು ಬಿಟ್ಟು ಮುಸುಕು ಹಾಕಿಕೊಂಡು ಕಳ್ಳತನದಿಂದ ಬರುವ ಅವಶ್ಯಕತೆ ಏನಿತ್ತು?. ಒಂದೇ ಹಾಡಿಯ ನಿವಾಸಿಗಳಾದ ಮಲ್ಲಿಕಾ ಮತ್ತು ಹಾಡಿಯ ನಾಯಕನ ಸೊಸೆ ಇಬ್ಬರೂ ಸೆರೆಮನೆಯಲ್ಲಿ ಬೆಟ್ಟಿಯಾದಾಗ ಕೊನೆವರೆಗೂ ಅಪರಿಚಿತರಂತೆ ಇದ್ದದ್ದಾದರೂ ಯಾಕೆ? ಚಿಕ್ಕದಾದ ಬುಡಕಟ್ಟಿನ ನಾಯಕನ ಮನೆಗೆ ಸೊಸೆಯಾಗಿ ಬಂದವಳ ಪರಿಚಯ ಕಾಳಿಗೆ ಇರಲಿಲ್ಲವೇ, ಕಾಳಿಯ ಹಾಡು ಕೇಳಿ ಮೆಚ್ಚಿಕೊಂಡವಳಿಗೆ ಕಾಳಿಯ ಪರಿಚಯವಿರಲ್ಲವೇ? ಅಮವಾಸ್ಯೆಯಾದರೆ ಕಟ್ಟುಕತೆ ನಂಬಬಹುದೇನೋ, ಆದರೆ ಕಾಡಿನಲ್ಲಿ ಹುಣ್ಣಿಮೆಯ ಬೆಳಕಿನಲ್ಲಿ ಇಬ್ಬರಿಗೂ ಪ್ರಣಯ ಸುಖದ ಅಮಲಿನಲ್ಲಿ ಮುಖ ಪರಿಚಯ ಗೊತ್ತಾಗದೇ ಗಂಧರ್ವರು ಎಂದು ತಿಳಿದುಕೊಂಡು ಇನ್ಸ್ಟಂಟ್ ಪ್ರೀತಿ ಹುಟ್ಟಿ ಜೊತೆ ಸೇರಿದರೆಂದರೆ ನಂಬಬಹುದೇ? ದಕ್ಷಿಣದ ಕೊಲೊಂಬೊದಲ್ಲಿ ಸತ್ತ ಕಾಳಿದಾಸನ ಸಾವಿನ ಸುದ್ದಿ ಉತ್ತರದ ಕಾಶ್ಮೀರದ ಗುಡ್ಡುಗಾಡಿನ ಹಾಡಿಗೆ ಮುಟ್ಟಿದ್ದಾದರೂ ಹೇಗೆ? ಅಲ್ಲಿಂದ ಅದ್ಯಾವ ವೇಗದಲ್ಲಿ ಮಲ್ಲಿಕಾ ಸೆರೆಮನೆಗೆ ಕೊಲೆಪಾತಕಿಯನ್ನು ಹುಡುಕಿ ಬಂದಳು?

ಹೀಗೆ.... ಒಂದಾ.... ಎರಡಾ... ಹಲವಾರು ತರ್ಕಕ್ಕೆ ಸಿಗದ ಅಸಂಗತಗಳು ನಾಟಕದ ತುಂಬಾ ಹಾಸುಹೊಕ್ಕಾಗಿವೆ. ಸಂಕೀರ್ಣ ಕಥಾವಸ್ತುಉಳ್ಳ ನಾಟಕವನ್ನು ಸರಳವಾಗಿ ಸಂವಹನಗೊಳಿಸಬಹುದಾದ ಸಾಧ್ಯತೆಗಳನ್ನು ಆಳಿಸಿಹಾಕಿ ಪ್ರೇಕ್ಷಕರಲ್ಲಿ ಗೊಂದಲಗಳನ್ನು ಹುಟ್ಟುಹಾಕುವಲ್ಲಿ ನಾಟಕ ಯಶಸ್ವಿಯಾಗಿದೆ. ನಾಟಕ ತಲುಪಬೇಕಾದ ಗುರಿಯನ್ನು ಮಾತ್ರ ನಿರ್ಧರಿಸಿದ ನಾಟಕಕಾರರು ಗುರಿ ಮುಟ್ಟುವಾಗ ಗಮನಿಸಬೇಕಾದ ದಾರಿ ದಿಕ್ಕುಗಳನ್ನು ತಪ್ಪಿದ್ದಾರೆ. ಮೂರು ಪ್ರಮುಖ ಮಹಿಳಾ ಪಾತ್ರಗಳನ್ನು ಆರು ಪಾತ್ರಧಾರಿಗಳಿಂದ ನಿರ್ವಹಿಸಿ ನಿರ್ದೇಶಕರು ತಮ್ಮ ಕ್ರಿಯಾಶೀಲತೆ ಮೆರೆದಿದ್ದಾರಾದರೂ ಪಾತ್ರದಾರಿಗಳ ವಯಸ್ಸಿನ ಅಂತರಗಳನ್ನು ಹೆಚ್ಚು ಕಡಿಮೆ ಮಾಡಿದ್ದರಿಂದ ಗೊಂದಲ ಇನ್ನೂ ಹೆಚ್ಚಾಗಿದೆ. ಸಾಮಾನ್ಯ  ಪ್ರೇಕ್ಷಕನಿಗೆ ಅದರಲ್ಲೂ ಕಾಳಿದಾಸ ಮತ್ತು ಆತನ ನಾಟಕಗಳ ಅರಿವಿಲ್ಲದವರಿಗೆ ನಾಟಕದ ತಲೆಬುಡ ಅರ್ಥವಾಗದಂತಾಗಿದ್ದಂತೂ ಸುಳ್ಳಲ್ಲ. ...... ಹಾಡಿನ ಎಳೆಯೊಂದನ್ನು ಆಯ್ದುಕೊಂಡು ಅದಕ್ಕೆ ಪೂರಕವಾಗಿ ದೃಶ್ಯಗಳನ್ನು ಜೋಡಿಸುವಾಗ ತಾರ್ಕಿಕವಾಗಿ ಯೋಚಿಸದೇ ಇರುವುದರಿಂದ ಎಲ್ಲಾ ಗೊಂದಲಗಳು ಉಂಟಾಗಿವೆ.



ವೇಶ್ಯೆಯರ ಮನೆಯಲ್ಲಿ ಬೆಳೆದ ಬೇನಾಮಿ ಹುಡುಗ ಗಂಡಸರ ಬಗ್ಗೆ ಅಸಹನೆ ಹೊಂದಿರುತ್ತಾನೆ, ಹಾಗೂ ನಾಟಕದ ಓದಿನಲ್ಲಿ ಶಕುಂತಲೆಯನ್ನು ನಿರಾಕರಿಸುವ ದುಶ್ಯಂತನ ಪಾತ್ರದಾರಿಯನ್ನು ವೃತ್ತಿಪರ ಕೊಲೆಗಾರರಂತೆ ಗುರಿಯಿಟ್ಟು ಕೊಲೆಮಾಡುವಷ್ಟು ಕಟುಕನೂ ಮತಿಹೀನನೂ ಆಗಿರುತ್ತಾನೆ ಎನ್ನುವಂತಹ ಇನ್ನೊಂದು ವಿಚಿತ್ರವಾದ ಪರಿಕಲ್ಪನೆ ನಾಟಕದ ಕ್ಲೈಮಾಕ್ಸನಲ್ಲಿದೆ. ಇದು ನಂಬಲಸಾಧ್ಯವಾದರೂ ನಾಟಕದಲ್ಲಿ ಸಾಧ್ಯವಾಗಿದೆ. ನಾಟಕದ ದುರಂತನಾಯಕಿಯನ್ನು ಅಮರಗೊಳಿಸಲು ಆಕೆಯ ಮಗನನ್ನು ಕೊಲೆಗಾರನನ್ನಾಗಿಸಿ ಅದಕ್ಕೊಂದು ಅತಾರ್ಕಿಕ ನೆಲೆಯಲ್ಲಿ ತಾತ್ವಿಕ ನೆಲೆಗಟ್ಟನ್ನು ಕೊಡುವ ಪ್ರಯತ್ನ ಮಾಡಲಾಗಿದೆ. ಜೊತೆಗೆ ತನ್ನ ಮಗ ಮಾಡಿದ ಕೊಲೆಯನ್ನು ತನ್ನ ಮೇಲೆಳೆದುಕೊಂಡ ತಾಯಿಯ ತ್ಯಾಗವನ್ನು ವೈಭವೀಕರಿಸಿ ಪಾತ್ರಕ್ಕೆ ಪ್ರೇಕ್ಷಕರ ಸಿಂಪಥಿ ಗಿಟ್ಟಿಸಿಕೊಡುವ ಪ್ರಯತ್ನ ಇದಾಗಿದೆ.  

ನಾಟಕದ ಕತೆ ಅದೆಷ್ಟು ವಿಚಿತ್ರವಾಗಿದೆಯೋ, ಅದನ್ನು ನಿರೂಪಿಸಲು ಬಳಸಲಾದ ತಂತ್ರಗಾರಿಕೆ ತುಂಬಾ ವಿಶಿಷ್ಟವಾಗಿದೆ. ಕಥಾ ನಿರೂಪನೆಯಲ್ಲಿ ಪ್ರಮುಖಪಾತ್ರ ವಹಿಸುವ ಪ್ಲಾಶ್ಬ್ಯಾಕ್ ಮತ್ತು ಇಮ್ಯಾಜಿನೇಶನ್ ತಂತ್ರಗಳು ನಾಟಕದಲ್ಲಿ ಸೊಗಸಾಗಿ ಬಳಸಿಕೊಳ್ಳಲಾಗಿದೆ. ಮೂಲಕ ಕೊನೆಯವರೆಗೂ ಕುತೂಹಲವನ್ನು ಕಾಯ್ದುಕೊಳ್ಳಲಾಗಿದೆ. ಸಿನೆಮಾಗಳಲ್ಲಿ ಹೆಚ್ಚಾಗಿ ಬಳಸಲಾಗುವ ವಿಶಿಷ್ಟ ರೀತಿಯ ತಂತ್ರಗಾರಿಕೆಯ ಸಮರ್ಥ ಬಳಕೆಯಿಂದಾಗಿ ನಾಟಕ ತಾಂತ್ರಿಕವಾಗಿ ಶ್ರೀಮಂತವಾಗಿದೆ

ತನಗೆ ಪೂಜೆ ಸಲ್ಲಿಸದೇ ನಾಟಕ ಆರಂಭಿಸಿದ್ದಕ್ಕೆ ಕೋಪಗೊಂಡ ಗಣಪತಿಯೇ ಓಡಿ ಬಂದು ಅಗ್ರ ಪೂಜೆಗೆ ಆಗ್ರಹಿಸಿದ್ದು. ನಟರು ಮಾಡಿದ್ದು ತನ್ನ ವಂದನೆಯೋ ಇಲ್ಲಾ ನಿಂದನೆಯೋ ಎನ್ನುವ ಗೊಂದಲದಲ್ಲಿ ಗಣೇಶ ಕೋಪಿಸಿಕೊಂಡು ನಿರ್ಗಮಿಸಿದ್ದು, ಗಣೇಶನ ಕೋಪಕ್ಕೋ ಏನೋ ನಾಟಕದೊಳಗಿನ ನಾಟಕ ಆರಂಭವಾಗುವುದಕ್ಕೆ ಮುಂಚೆಯೇ ಕಾಳಿದಾಸನ ಸಾವಿನ ಸುದ್ದಿ ಎಂಬ ವಿಘ್ನ ಬಂದು ನಾಟಕ ನಿಂತಿದ್ದು.... ಇಂತಹ ಆರಂಭದ ದೃಶ್ಯ ಕಲ್ಪನೆ ನಿಜಕ್ಕೂ ಕನ್ನಡ ರಂಗಭೂಮಿಗೆ ಹೊಸದು. ಕನ್ನಡಿಯೊಳಗಿಂದ ಸೂತ್ರದಾರ ಹಾಗೂ ನಟನ ಆಗಮನವಾಗಿದ್ದು, ಸೂತ್ರದಾರನೇ ನ್ಯಾಯಾಧೀಶನಾಗಿ ಇಡೀ ನಾಟಕವನ್ನು ನಡೆಸಿಕೊಟ್ಟು ಕೊನೆಗೆ ಮತ್ತೆ ವೇಷ ಕಳಚಿ ಕನ್ನಡಿಯೊಳಗೇ ಲೀನವಾಗಿದ್ದು ಅದ್ಬುತವಾದ ಪರಿಕಲ್ಪನೆ.

ಕಾಳಿದಾಸನ ಕೊಲೆಯನ್ನು ಕೇಂದ್ರವಾಗಿಟ್ಟುಕೊಂಡು ಪರಿಧಿಯಲ್ಲಿ ಕಾಳಿದಾಸನನ್ನು ಪ್ರೇಮಿಸುತ್ತಿದ್ದ ಮೂವರು ಯುವತಿಯರ ಪಾತ್ರಗಳನ್ನು ಪರಿಭ್ರಮಣಗೊಳಿಸಿದ್ದು ಹಾಗೂ ಒಬ್ಬೊಬ್ಬರಾಗಿ ಮೂರು ಪಾತ್ರಗಳ ಕಥಾನಕವನ್ನು ಪ್ಲಾಶ್ಬ್ಯಾಕ್ ತಂತ್ರದಲ್ಲಿ ಅನಾವರಣಗೊಳಿಸುತ್ತಲೇ ಎಲ್ಲಾ ಪಾತ್ರಗಳನ್ನು ಒಂದಕ್ಕೊಂದು ತಳಕು ಹಾಕಿದ್ದು ನಾಟಕದ ಇನ್ನೊಂದು ಸಂಕೀರ್ಣವಾದ ತಂತ್ರಗಾರಿಕೆಯಾಗಿದೆ

ಸಾಂಕೇತಿಕತೆ ಮತ್ತು ಸಂಕೀರ್ಣತೆಗಳು "ಅನಭಿಜ್ಞ ಶಾಕುಂತಲೆ"ಯನ್ನು ಬೌದ್ಧಿಕ ನೆಲೆಯಲ್ಲಿ ಅನಾವರಣಗೊಳಿಸಿದ್ದರಿಂದ ಜನಸಾಮಾನ್ಯ ಪ್ರೇಕ್ಷಕನಿಗೆ ಕಬ್ಬಿಣದ ಕಡಲೆ ತಿನ್ನಿಸಿದಂತಾಗಿದೆ. ’ನಾಟಕವೆಂದರೆ ಸರಳವಾಗಿರಬೇಕು, ಸುಲಭಕ್ಕೆ ನೋಡುಗರಿಗೆ ಅರ್ಥವಾಗಬೇಕು, ತರ್ಕಬದ್ದವಾಗಿರಬೇಕುಎನ್ನುವ ಜನಸಾಮಾನ್ಯ ರಂಗಾಸಕ್ತರ ಆಶಯವನ್ನು ಮೀರಿ ಬುದ್ದಿಜೀವಿಗಳ ಬೌದ್ದಿಕ ಎತ್ತರಕ್ಕೆ ಬೆಳೆದು ವಿಜ್ರಂಭಿಸುವ ನಾಟಕದ ಪರಿಯನ್ನು ನೋಡಿಯೇ ಸವಿಯಬೇಕು. ಅರ್ಥವಾಗದವರು ಬುದ್ಧಿಜೀವಿಗಳಾಗಬೇಕು

ನಾಟಕದ ಕಥೆ ಹಾಗೂ ನಾಟಕೀಯ ತಿರುವುಗಳು ಯಾರ್ಯಾರಿಗೆ ಎಷ್ಟೆಷ್ಟು ದಕ್ಕಿತೋ ಅದು ಅವರವರ ಗ್ರಹಣ ಶಕ್ತಿಗೆ ಬಿಟ್ಟಿದ್ದು. ಕಥೆಯೊಳಗಿನ ಗೊಂದಲಗಳನ್ನು ಪಕ್ಕಕ್ಕಿಟ್ಟು ನೋಡಿದರೆ, ಇಡೀ ನಾಟಕ ತನ್ನ ದೃಶ್ಯವೈಭವದಿಂದಾಗಿ ಪ್ರೇಕ್ಷಕರನ್ನು ಭಾವಪರವಶವಾಗಿಸಿದ್ದಂತೂ ಸುಳ್ಳಲ್ಲ. ಸಂಭಾಷಣೆಯಲ್ಲಿರುವ ಕಾವ್ಯಾತ್ಮಕತೆ, ಪ್ರತಿ ಮಾತುಗಳಲ್ಲಿರುವ ಮಾರ್ಮಿಕತೆಗಳು ನಾಟಕದ ಸೊಗಸನ್ನು ಹೆಚ್ಚಿಸಿವೆ. ನಾರಾಯಣ ರಾಯಚೂರರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ "ಕಾಡಿನ ಬಿದಿರೊಂದು ಕೊಳಲಾಯಿತೋ, ಕಣ್ಣೀರ ಹನಿಯೊಂದು ಕಡಲಾಯಿತೋ..." ಎನ್ನುವಂತಹ ಹಲವು ಅಪರೂಪದ ಹಾಡುಗಳ ಅಳವಡಿಕೆ ಕೇಳುಗರೆದೆಯಲ್ಲಿ ಮಿಂಚಿನ ಸಂಚಾರವನ್ನುಂಟು ಮಾಡುವಂತಿದೆ. ಮಂಗಳಾರವರು ವಿನ್ಯಾಸಗೊಳಿಸಿದ ಕಾಶ್ಮೀರದ ಸಂಸ್ಕೃತಿಯನ್ನು ಬಿಂಬಿಸುವ ವಸ್ತ್ರವಿನ್ಯಾಸ ನೋಡುಗರ ಕಣ್ಮನ ಸೆಳೆಯುವಂತಿವೆ. ಅಪ್ಪಯ್ಯ ಮತ್ತು ಪ್ರಕಾಶ ಶೆಟ್ಟಿಯವರ ಪರಿಕಲ್ಪನೆಯಲ್ಲಿ ಮೂಡಿಬಂದ ಸರಳ ಹಾಗೂ ಸುಂದರವಾದ ರಂಗವಿನ್ಯಾಸ ನಾಟಕಕ್ಕೆ ವಿಶೇಷ ಕಳೆತಂದುಕೊಟ್ಟಿದೆ. ನಂದಕಿಶೋರರ ಬೆಳಕು ವಿನ್ಯಾಸದ ಬಗ್ಗೆ ಹೇಳುವ ಬದಲು ನೋಡಿಯೇ ಆನಂದಿಸಬೇಕು. ಬೆಳಕಿನ ರಂಗಿನೋಕಳಿಯ ಮೋಹಕತೆಯಲ್ಲಿ ಪ್ರೇಕ್ಷಕರು ಪರವಶರಾಗುವ ಪರಿ ನಿಜಕ್ಕೂ ಅನನ್ಯ. ಇವೆಲ್ಲಕ್ಕಿಂತಲೂ ಹೆಚ್ಚಾಗಿ ನಾಟಕದಾದ್ಯಂತ ಮಾಂತ್ರಿಕ ಸ್ಪರ್ಷವನ್ನು ಸೃಷ್ಟಿಸಿ ದೃಶ್ಯಕಾವ್ಯವೊಂದನ್ನು ಕಟ್ಟಿಕೊಟ್ಟ ನಾಟಕದ ನಿರ್ದೇಶಕ ಪ್ರಕಾಶ ಶೆಟ್ಟಿರವರನ್ನು ಅಭಿನಂದಿಸಲೇಬೇಕು. ಬಹುತೇಕ ಹೊಸ ಕಲಾವಿದರೊಳಗಿನ ಪ್ರತಿಭೆಯನ್ನು ನಾಟಕದಲ್ಲಿ ಹೊರತಂದ ರೀತಿ ಹಾಗೂ ನಾಟಕದಾದ್ಯಂತ ಗಮನಾರ್ಹವಾಗಿ ಕಂಡುಬಂದ ರಂಗಶಿಸ್ತು ನಿರ್ದೇಶಕರ ಕೌಶಲ್ಯಕ್ಕೆ ಸಾಕ್ಷಿಗಳಾಗಿವೆ.  ೪೦ಕ್ಕೂ ಹೆಚ್ಚು ಕಲಾವಿದರು ಮತ್ತು ತಂತ್ರಜ್ಞರನ್ನು ಒಟ್ಟುಗೂಡಿಸಿ ನಾಟಕವೊಂದನ್ನು ಕಟ್ಟಿ ಕೊಡುವುದು ಹಾಗೂ ಕೇವಲ ಒಂದೂವರೆ ವರ್ಷದಲ್ಲಿ ೩೫ಕ್ಕೂ ಹೆಚ್ಚು ರಿಪೀಟ್ ಶೋಗಳನ್ನು ಮಾಡುವುದು ಪ್ರಸ್ತುತ ರಂಗಭೂಮಿಯ ಪರಿಸ್ಥಿತಿಯಲ್ಲಿ ಕಷ್ಟಸಾಧ್ಯ. ಅಂತಹ ಸುಲಭಸಾಧ್ಯವಲ್ಲದ ರಂಗಸಂಘಟನೆಯನ್ನು ಮಾಡಿದ "ಪ್ರಸಂಗ" ತಂಡದ ಕೃಷ್ಣಾ ರಾಯಚೂರರ ಶ್ರಮ ಸಾರ್ಥಕವಾಗಿದೆ. ಪ್ರಯೋಗದ ದೃಷ್ಟಿಯಿಂದ ಕನ್ನಡ ರಂಗಭೂಮಿಗೆ ಮೈಲುಗಲ್ಲಾಗುವಂತಹ ನಾಟಕ "ಅನಭಿಜ್ಞ ಶಾಕುಂತಲ". 

ಅನಭಿಜ್ಞದಲ್ಲಿ ಉಪೇಂದ್ರದ ತಂತ್ರಗಾರಿಕೆ? : ಇದೊಂದು ವಿಚಿತ್ರ, ವಿಶಿಷ್ಟ ಮತ್ತು ಸಂಕೀರ್ಣ ಕಥಾಹಂದರವುಳ್ಳ ನಾಟಕ. ಒಬ್ಬನನ್ನು ಮೂವರು ಯುವತಿಯರು ಪ್ರೀತಿಸಿ ಕೊನೆಗೆ ಯಾರಿಗೂ ಆತ ದಕ್ಕದೇ ಕೊಲೆಯಾಗಿ ಹೋದ ದುರಂತ ಕಥೆ. ಇದೊಂದು ರೀತಿ "ಉಪೇಂದ್ರಸಿನೆಮಾ ಕಥೆಯ ಉಲ್ಟಾ ರೂಪ. ಸಿನೆಮಾದಲ್ಲಿ ನಾಯಕ ಪ್ರೀತಿಗಾಗಿ ಒಬ್ಬಳು, ಮದುವೆಗೆ
    ಉಪೇಂದ್ರ
ಮತ್ತೊಬ್ಬಳು, ಹಾಗೂ ಸಂಪತ್ತಿಗಾಗಿ ಇನ್ನೊಬ್ಬಳನ್ನು ಬಯಸಿ ಕೊನೆಗೆ ಮೂವರಿಂದಲೇ ಹಲ್ಲೆಗೊಳಗಾಗುತ್ತಾನೆ. ನಾಟಕದ ಕಥೆ ಸ್ವಲ್ಪ ಉಲ್ಟಾ. ಪ್ರೀತಿಸಿದವಳು ಗೃಹಿಣಿ, ಮದುವೆಯಾಗಬಯಸಿದವಳು ಬಡವಿ, ಬಲವಂತದಿಂದ ಅವನನ್ನು ಪಡೆಯಲು ಬಯಸಿದವಳು ಸಿರಿವಂತ ರಾಜಕುಮಾರಿ. ಮೂವರ ಪ್ರೇಮ, ವಿರಹಗಳಲ್ಲಿ ಕೊನೆಗೂ ಬಲಿಯಾಗಿದ್ದು ನಾಟಕದ ನಾಯಕ ಕವಿ ಕಾಳಿದಾಸ. ಸಿನೆಮಾ ಮತ್ತು ನಾಟಕ ಎರಡರಲ್ಲೂ ಆಯಾ ಕಾಲದ ಸಾಮಾಜಿಕ ನೈತಿಕತೆಯ ಎಲ್ಲೆ ಮೀರಿ ಪ್ರೇಮ ಎನ್ನುವುದು ಅನಾವರಣಗೊಂಡಿದೆ. ಪ್ರೇಮ ಎನ್ನುವ ಮೋಹಕ್ಕೆ ಸಾಮಾಜಿಕ ಕಟ್ಟುಪಾಡುಗಳ ಹಂಗಿಲ್ಲ ಹಾಗೂ ಕಟ್ಟುಪಾಡುಗಳಿಗೆ ಹೊರತಾದ ಸಂಬಂಧಗಳು ದುರಂತಗಳಲ್ಲಿ ಕೊನೆಯಾಗುತ್ತವೆ ಎಂಬುದನ್ನು ಉಪೇಂದ್ರ ಸಿನೆಮಾ ಮತ್ತು ಅನಭಿಜ್ಞ ಶಾಕುಂತಲಗಳು ತೋರಿಸಿಕೊಟ್ಟಿವೆ. ಉಪೇಂದ್ರ ಸಿನೆಮಾದಲ್ಲಿ ಪ್ಲಾಶ್ಬ್ಯಾಕ್ ಮತ್ತು ಇಮ್ಯಾಜಿನೇಶನ್ ತಂತ್ರಗಳನ್ನು ತುಂಬಾ ಬಳಸಿ ಪ್ರೇಕ್ಷಕರಲ್ಲಿ ಗೊಂದಲವನ್ನು ಹುಟ್ಟಿಸಿ, ಕುತೂಹಲವನ್ನು ಕೊನೆಯವರೆಗೂ ಕಾಯ್ದಿರಿಸುವ ಪ್ರಯತ್ನದಂತೆಯೇ ಅನಭಿಜ್ಞ ಶಾಕುಂತಲದಲ್ಲೂ ಅಂತಹುದೇ ತಂತ್ರಗಳನ್ನು ಬಳಸಲಾಗಿದೆ. ಸಿನೆಮಾದ ಸಬ್ ಕ್ಯಾಪ್ಶನ್ "ಬುದ್ದಿವಂತರಿಗೆ ಮಾತ್ರ" ಎನ್ನುವುದು ನಾಟಕಕ್ಕೂ ಸರಿಹೋಗುವುದು ಕಾಕತಾಳಿಯವಾ?


ಅನಭಿಜ್ಞ ಎಂದರೆ ಏನು? : ಅಭಿಜ್ಞಾನ ಎಂದರೆ "ಗುರುತು" ಎಂದರ್ಥ. ಕಾಳಿದಾಸನ ಸಂಸ್ಕೃತ ನಾಟಕ ಅಭಿಜ್ಞಾನ ಶಾಕುಂತಲೆಯಲ್ಲಿ ದುಶ್ಯಂತ ಮಹಾರಾಜ ತನ್ನ ಪ್ರೇಮದ ಕುರುಹಾಗಿ ಕೊಟ್ಟ ಮುದ್ರೆಯುಂಗರ ಇಡೀ ನಾಟಕದ ಕೇಂದ್ರಬಿಂದುವಾಗಿದೆ. ಪ್ರಮುಖ ಗುರುತನ್ನೇ ಕಳೆದುಕೊಂಡ ಶಾಕುಂತಲೆ ದುಶ್ಯಂತನಿಂದ ತ್ಯಜಿಸಲ್ಪಡುತ್ತಾಳೆ. ಹಾಗೇನೇ ಪ್ರತ್ಯಭಿಜ್ಞಾನ ಎನ್ನುವ ಶಬ್ದ ಕಾಶ್ಮೀರಿ ಶೈವದರ್ಶನ ಸಿದ್ದಾಂತದಲ್ಲಿ ಬಳಸಲಾಗಿದೆ. ಪ್ರತ್ಯಭಿಜ್ಙಾನ ಎಂದರೆ ಮರೆತುಹೋದ ಗುರುತು ಮತ್ತೆ ನೆನಪಿಗೆ ಬರುವುದು ಎಂದರ್ಥ. ಯಾವಾಗ ಮೀನುಗಾರ ತಂದುಕೊಟ್ಟ ಮುದ್ರೆಯುಂಗರವನ್ನು ದುಶ್ಯಂತ ನೋಡಿದನೋ ಆಗ ಆತನಿಗೆ ಶಕುಂತಲೆ ನೆನಪಿಗೆ ಬರುತ್ತಾಳೆ. ಅಂದರೆ ಪ್ರತ್ಯಭಿಜ್ಞಾನ ಉಂಟಾಗುತ್ತದೆ. ಇದೆಲ್ಲಾ ಸರಿ ಆದರೆ "ಅನಭಿಜ್ಞ " ಅಂದರೇನು? ಎನ್ನುವುದು "ಅನಭಿಜ್ಞ ಶಾಕುಂತಲ" ನಾಟಕ ನೋಡಿದವರಿಗೆ ಕಾಡುವ ಪ್ರಶ್ನೆ. ವಿಶಿಷ್ಟ ಶಬ್ದ ನಾಟಕಕಾರ ಕೆ.ವೈ.ನಾರಾಯಣಸ್ವಾಮಿಯವರ ಪರಿಕಲ್ಪನೆಯ ಸೃಷ್ಟಿ. ಅನಭಿಜ್ಞ ಎಂದರೆ... ಮತ್ತೆ ನೆನಪಿಗೆ ಬಾರದಂತಹುದು. ಸಂಪೂರ್ಣವಾಗಿ ಮರೆಯಲ್ಪಟ್ಟಿರುವಂತಹುದು. ಅಂದರೆ ಕೆವೈಎನ್ ತಮ್ಮ ನಾಟಕದಲ್ಲಿ ಸೃಷ್ಟಿಸಿದ ಕಾಲ್ಪನಿಕ ಶಾಕುಂತಲೆ ಯಾರ ಗಮನಕ್ಕೂ ಬಾರದಂತಹ ಪಾತ್ರ. ಅದಕ್ಕಾಗಿ ಉದ್ದೇಶಪೂರ್ವಕವಾಗಿಯೇ ಪಾತ್ರಕ್ಕೆ ನಾಟಕಕಾರ ಯಾವ ಹೆಸರನ್ನೂ ಕೊಟ್ಟಿಲ್ಲ. ಹಾಡಿಯ ನಾಯಕನ ಸೊಸೆ ಎಂದೆನೆಸಿಕೊಳ್ಳುವ ಆಕೆಗೆ ತನ್ನದೇ ಆದ ಒಂದು ಹೆಸರೂ ಇಲ್ಲದಷ್ಟು  ನಗಣ್ಯವಾಗಿದೆ. ಅವಳೇ ಅನಭಿಜ್ಞ ಶಾಕುಂತಲ. ನಾಟಕದ ದುರಂತ ನಾಯಕಿ. ಗುರುತಿಲ್ಲದವಳು.

ನಾರಾಯಣ ರಾಯಚೂರ
ಹಾಡೇ ನಾಟಕಕ್ಕೆ ಹಾದಿಯ ತೋರಿತು : ಇಡೀ ನಾಟಕದ ಅಂತಃಸತ್ವವಾಗಿ ಹಾಡುಗಳು ಮೂಡಿಬಂದಿವೆ. ಬೇಂದ್ರೆಯವರ ಮೇಘದೂತ ಪದ್ಯದ "ತಾನು ಉಂಡ ಎದೆಯೊಲಮೆ.." ಸಾಲುಗಳನ್ನು ಸಂದರ್ಭೋಚಿತವಾಗಿ ಬಳಸಲಾಗಿದೆ.  ಚುರುಮರಿ ಶೇಷಗಿರಿರಾಯರ ಶಕುಂತಲಾ ನಾಟಕದಿಂದ "ಮರೆವರೇನೋ ಮಂಜರಿಯಾ..." ಹಾಡನ್ನು ಸಮರ್ಥವಾಗಿ ಬಸಿಕೊಳ್ಳಲಾಗಿದೆ. ಹಾಗೆಯೇ ನಾಟಕದ ಶೀರ್ಷಿಕೆ ಹಾಡು "ಕನ್ನಡಿಯೇ....  ಮಾಯಾ ಕನ್ನಡಿಯೇ..." ಹಾಗೂ "ಕಾಡಿನ ಬಿದಿರೊಂದು ಕೊಳಲಾಯಿತೋ.." ಮತ್ತು ಇತರ ಹಾಡುಗಳನ್ನು ಕೆ.ವೈ.ಎನ್ ರವರೇ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ನಾರಾಯಣ ರಾಯಚೂರವರ ಸಂಗೀತ ಸಂಯೋಜನೆ ಹಾಡುಗಳನ್ನು ಪ್ರೇಕ್ಷಕರ ಮನಮುಟ್ಟಿಸಿದೆ. ರಾಮಚಂದ್ರ ಹಡಪದ ಹಾಗೂ ರೇಖಾ ಶ್ರೀವತ್ಸರವರ ಹಾಡುಗಾರಿಕೆ ಕೇಳುಗರಲ್ಲಿ ರೋಮಾಂಚನವನ್ನುಂಟು ಮಾಡಿತು. ಒಟ್ಟಾರೆಯಾಗಿ ಹಾಡು ಮತ್ತು ಸಂಗೀತ ನಾಟಕದ ಯಶಸ್ಸಲ್ಲಿ ದೊಡ್ಡ ಪಾಲು ಕೇಳುವಂತೆ ಮೂಡಿಬಂದಿದೆ.  ರಾಧಾಕೃಷ್ಣ ಉರಾಳರವರ ನೃತ್ಯ ಸಂಯೋಜನೆ ನಾಟಕಕ್ಕೆ ವಿಶೇಷ ಜೀವಂತ ಕಳೆ ತಂದುಕೊಟ್ಟಿದೆ.

ನಾಟಕದ ಹುಟ್ಟಿನ ಗುಟ್ಟು : ಕಾಳಿದಾಸನ "ಅಭಿಜ್ಞಾನ ಶಾಕುಂತಲೆ"ಗೂ ಕೆವೈಎನ್ರವರ "ಅನಭಿಜ್ಞ ಶಾಕುಂತಲೆ"ಗೂ ಎತ್ತನಿಂದೆತ್ತಲೂ ಸಂಬಂಧವಿಲ್ಲ ಎಂದು ನಾಟಕಕಾರ ನಾರಾಯಣಸ್ವಾಮಿಯವರೇ ಹೇಳಿಕೊಂಡಿದ್ದಾರೆ. ಹಾಗಾದರೆ ಅನಭಿಜ್ಞ ಶಾಕುಂತಲೆ ಹುಟ್ಟಿದ್ದಾದರೂ ಎಲ್ಲಿಂದ?. ಜಾನಪದ ಕೋಲಾಟದ ಹಾಡಿನಿಂದ. ಅಚ್ಚರಿಯಾದರೂ ಇದು ಸತ್ಯ. ಕೋಲಾರ ಜಿಲ್ಲೆಯಲ್ಲಿ ತೆಲಗು ಭಾಷೆಯ "ನ್ಯಾಸ್ತುಡಾ ನೆಲಬಾಲುಡಾ.." ಎನ್ನುವ ಜಾನಪದ ಹಾಡೊಂದು ಕೋಲಾಟದಲ್ಲಿ ಬಳಕೆಯಾಗುತ್ತಾ ಬಂದಿದೆ. ಅದನ್ನು ಕೆವೈಎನ್ ಕೇಳುತ್ತಾ ಬೆಳೆದಿದ್ದಾರೆ. ಹಾಡು ಅವರನ್ನು ದಶಕಗಳಿಂದ ಬಹುವಾಗಿ
ಕೆವೈಎನ್
ಕಾಡುತ್ತಲೇ ಬಂದಿದೆ. ಹಾಡಿನ ಅರ್ಥ ಹೀಗಿದೆ. ಒಬ್ಬ ಮದುವೆಯಾದ ಮಹಿಳೆ ತನ್ನ ಗಂಡ ಕೊಟ್ಟಂತಹ ಉಂಗುರವನ್ನು ನೀರಿನಲ್ಲಿ ಕಳೆದುಕೊಳ್ಳುತ್ತಾಳೆ. ಉಂಗುರ ಕೈಯಿಂದ ಜಾರಿ ಬಿದ್ದಾಗ ನೀರೊಳಗಿನ ಮೀನುಗಳು ನಿದ್ದೆಮಾಡುತ್ತಿರುತ್ತವಂತೆ. ಉಂಗುರ ತಳ ಸೇರಿ ಮಣ್ಣಲ್ಲಿ ಕರಗಿಹೋಗುತ್ತದೆ. ಇನ್ನು ತನ್ನ ಗಂಡನಿಗೆ ಹಾಗೂ ಅತ್ತೆ ಮಾವನಿಗೆ ಏನು ಹೇಳುವುದು ಅನ್ನುವ ತನ್ನ ಸಂಕಟವನ್ನು ಮಹಿಳೆ ಆಕಾಶದಲ್ಲಿರುವ ಚಂದ್ರನ ಜೊತೆಗೆ ಹಂಚಿಕೊಳ್ಳುತ್ತಾಳೆ. ಹಾಡಿನೊಳಗಿರುವ ಉಂಗುರವನ್ನೇ ಪ್ರಮುಖವಾಗಿಟ್ಟುಕೊಂಡು  ಅಭಿಜ್ಞಾನ ಶಾಕುಂತಲೆ ನಾಟಕದ ಉಂಗುರದ ಪ್ರಕರಣವನ್ನು ಹೋಲಿಕೆಯಾಗಿಟ್ಟುಕೊಂಡು ಕಾಳಿದಾಸನನ್ನೇ ಕಾರಣವಾಗಿಟ್ಟುಕೊಂಡು ಕೆ.ವೈ.ನಾರಾಯಣಸ್ವಾಮಿಯವರು ತಮ್ಮದೇ ಆದ ಪರಿಕಲ್ಪನೆಯಲ್ಲಿ ಮೂರು ವರ್ಷಗಳ ಕಾಲ ಪರಿಶ್ರಮ ವಹಿಸಿ "ಅನಭಿಜ್ಞ ಶಾಕುಂತಲೆ ನಾಟಕವನ್ನು ಕಟ್ಟಿ ಕೊಟ್ಟಿದ್ದಾರೆ. ಒಂದು ಹಾಡು ಕೂಡಾ ಒಂದು ನಾಟಕಕ್ಕೆ ಪ್ರೇರಣೆಯಾಗಬಹುದು ಎನ್ನುವುದನ್ನು ಸಾಬೀತುಗೊಳಿಸಿದ್ದಾರೆ.

ಪ್ರಕಾಶ್. ಪಿ ಶೆಟ್ಟಿ
ರಂಗನಂಟಿಗೆ ಬಂದ ದಿನಗಳಿಂದಲು ಪ್ರಕಾಶ್. ಪಿ. ಶೆಟ್ಟಿ ನಾಟಕದ ವಿವಿಧ ಆಯಾಮಗಳಲ್ಲಿ  ತಮ್ಮನ್ನು ಒರೆಗೆ ಹಚ್ಚಿಕೊಂಡವರು. ವೃತ್ತಿ-ಪ್ರವೃತ್ತಿಗಳ ಪ್ರಭೇದಗಳ ಹಂಗಿಲ್ಲದ ಇವರು ನಟ, ಗಾಯಕ, ನೇಪಥ್ಯ, ಕಲಾನಿರ್ದೇಶಕ, ಸಂಘಟಕನಾಗಿ ರೂಪುಗೊಂಡ ಬಗೆ ಹಲವು ಅಚ್ಚರಿಗಳನ್ನು ಮೂಡಿಸಿದೆ. ಇವರ ನಿಷ್ಠೆ-ಬದ್ದತೆ ಪ್ರಶ್ನಾತೀಥವಾದದ್ದು. ಇತ್ತೀಚಿಗೆ ನೇಪಥ್ಯದ ಗೆಳೆಯರೊಡಗೂಡಿ ಕಟ್ಟಿದರಂಗಮಂಟಪ ಇಂದು ರಂಗಭೂಮಿಯಲ್ಲೊಂದು ಹೊಸ ಸಂಚಾರಕ್ಕೆ ಸಾಕ್ಷಿಯಾಗಿದೆ. ‘ಗಾಂಧಿಬಂದ ನಾಟಕದ ನಿರ್ಮಾಣ ರಂಗಭೂಮಿಗೆ ಹೊಸ ಚೈತನ್ಯವನ್ನು ನೀಡಿದೆ

ಪ್ರಸಂಗ ತಂಡದ ಹೊಸ ಕನಸಿಗೆ ಕೆ.ವೈ. ನಾರಾಯಣಸ್ವಾಮಿ ಅವರಅನಭಿಜ್ಞ ಶಾಕುಂತಲ ಕ್ಕೆ ಸೊಗಸಾದ ವಿನ್ಯಾಸವನ್ನು ರೂಪಿಸಿ ನಿರ್ದೇಶಿಸಿರುವ ಪ್ರಕಾಶ್ ಶೆಟ್ಟಿ ರಂಗನಿರ್ದೇಶಕರಾಗಿ ತಮ್ಮ ಮೊದಲ ನಾಟಕದಲ್ಲೇ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ

                                                                -ಶಶಿಕಾಂತ ಯಡಹಳ್ಳಿ
   




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ