ಬೆಂಗಳೂರಿನ ಸಾಂಸ್ಕೃತಿಕ ಲೋಕದ ಕೇಂದ್ರಸ್ಥಳವಾದ ಕರ್ನಾಟಕದ ಹೆಮ್ಮೆಯ ರಂಗಮಂದಿರ ‘ರವೀಂದ್ರ ಕಲಾಕ್ಷೇತ್ರ’ ಕ್ಕೆ ಸುವರ್ಣ ಸಂಭ್ರಮ. ಕಳೆದ ಅರ್ಧ ದಶಕದಲ್ಲಿ ಈ ರಂಗಮಂದಿರದಲ್ಲಿ ಪ್ರದರ್ಶನಗೊಂಡ ನಾಟಕಗಳೆಷ್ಟೋ, ಆಯೋಜನೆಗೊಂಡ ನಾಟಕೋತ್ಸವಗಳೆಷ್ಟೋ, ರಂಗಕರ್ಮಿ-ಕಲಾವಿದರ ಸಂಭ್ರಮದ ಕ್ಷಣಗಳೆಷ್ಟೋ, ರಂಗಾಸಕ್ತ ಪ್ರೇಕ್ಷಕರ ಅನನ್ಯ ಅನುಭವಗಳೆಷ್ಟೋ.... ಲೆಕ್ಕ ಇಟ್ಟವರಾರು? ಈ ಕಲಾಕ್ಷೇತ್ರದ ವೇದಿಕೆಯ ಮೇಲೆ ಮೆರೆದವರೆಷ್ಟೋ, ಮಿಂಚಿ ಮರೆಯಾದವರೆಷ್ಟೋ, ರಂಗಕಲೆಗೆ ಬದುಕನ್ನು ಸವೆಸಿದವರೆಷ್ಟೋ, ನಾಟಕಗಳ ನೆಪದಲ್ಲಿ
ಬದುಕು ಕಟ್ಟಿಕೊಂಡವರೆಷ್ಟೋ... ಕರಾರುವಕ್ಕಾಗಿ ಹೇಳುವವರಾರು? ರವೀಂದ್ರ ಕಲಾಕ್ಷೇತ್ರದಲ್ಲಿ ಹುಟ್ಟಿಕೊಂಡ ರಂಗತಂಡಗಳೆಷ್ಟು.... ಒಡೆದುಹೋದ ತಂಡಗಳೆಷ್ಟು... ಬೆಳೆದ-ಅಳಿದ-ಉಳಿದ ರಂಗತಂಡಗಳೆಷ್ಟು.... ಸರಿಯಾಗಿ ತಿಳಿದವರಾರು? ಈ ರಂಗದಂಗಳದಲ್ಲಿ
ಕನಸು ಕಟ್ಟಿದವರೆಷ್ಟೋ... ಮನಸು ಕಟ್ಟಿಕೊಂಡವರೆಷ್ಟೋ... ಜಾತಿ ಧರ್ಮಗಳಾಚೆ ಬೆಸೆದ ಸಂಬಂಧಗಳೆಷ್ಟೋ... ರಂಗಕಲೆಯನ್ನು ಮೆಟ್ಟಲು ಮಾಡಿಕೊಂಡು ಸಾಧನೆಯ ಏಣಿ ಹತ್ತಿದವರೆಷ್ಟೋ... ಸರಿಯಾಗಿ ಹೇಳುವವರು ಯಾರು?...
ಆದರೆ... ಈ ಎಲ್ಲಾ ಲೆಕ್ಕಾಚಾರಗಳನ್ನು ಮೀರಿ ಈ ರವೀಂದ್ರ ಕಲಾಕ್ಷೇತ್ರದ ಜೊತೆಗೆ ಯಾವುಯಾವುದೋ ರೀತಿ ಒಡನಾಡಿದವರಿಗೆ ಆ ನವೀರಾದ ನೆನಪುಗಳು ಮರೆಯಲಾರದ ಅನುಭವಗಳಾಗಿವೆ. ಕಲಾಕ್ಷೇತ್ರ ಎನ್ನುವುದು ರಂಗಕರ್ಮಿ-ಕಲಾವಿದರ ಪಾಲಿಗೆ ಕುರುಕ್ಷೇತ್ರವಾಗಿದೆ. ಯುದ್ದೋಪಾದಿಯಲ್ಲಿ ರಂಗಸಿದ್ದತೆಗಳಾಗಿವೆ, ಪೈಪೋಟಿಯಲ್ಲಿ ರಂಗಪ್ರದರ್ಶನಗಳಾಗಿವೆ. ಕೆಲವರ ಬದುಕಲ್ಲಂತೂ ಈ ಕಲಾಕ್ಷೇತ್ರವೆಂಬ ರಂಗಭೂಮಿ ಕರ್ಮಭೂಮಿಯಾಗಿದೆ. ಒಟ್ಟಾರೆಯಾಗಿ ಕನ್ನಡ ರಂಗಭೂಮಿಗೆ ‘ರವೀಂದ್ರ ಕಲಾಕ್ಷೇತ್ರ’ ಎನ್ನುವುದು ಇಡೀ ರಾಜ್ಯದ ಸಾಂಸ್ಕೃತಿಕ ಕೇಂದ್ರವಾಗಿದೆ.
ರವೀಂದ್ರ ಕಲಾಕ್ಷೇತ್ರವು ಹಲವಾರು ಸಾಹಿತ್ಯ-ಸಂಗೀತ-ನೃತ್ಯ.... ಅಷ್ಟೇ ಯಾಕೆ
ಸಾಂಸ್ಕೃತಿಕೇತರ
ಕಾರ್ಯಕ್ರಮಗಳಿಗೆ ಆಸರೆಯಾಗಿದೆಯಾದರೂ ಆ ಎಲ್ಲಾ ಕಾರ್ಯಕ್ರಮದ ಆಯೋಜಕರು-ಪ್ರಾಯೋಜಕರು ಅತಿಥಿಗಳ ರೂಪದಲ್ಲಿ ಬಂದು ಕಲಾಕ್ಷೇತ್ರದಲ್ಲಿ ತಮ್ಮ ಕಾರ್ಯಕ್ರಮಗಳನ್ನು ಕೊಟ್ಟು ಹೋದವರು. ಆದರೆ ರಂಗಕರ್ಮಿಗಳು ಮಾತ್ರ ಈ ಕಲಾಕ್ಷೇತ್ರದ ಜೊತೆಗೆ ಹೊಕ್ಕಳು ಬಳ್ಳಿ ಸಂಬಂಧವನ್ನು ಹೊಂದಿದವರು. ಅವರೆಲ್ಲರ ಮೈ-ಮನಸ್ಸು ಬುದ್ದಿ-ಭಾವ ಕಲಾಕ್ಷೇತ್ರದ ಜೊತೆಗೆ ಮಿಳಿತಗೊಂಡಿದೆ. ತನ್ನ ಸೆಳೆತಕ್ಕೆ ಬಂದ ಬಹುತೇಕರನ್ನು ಭಾವನಾತ್ಮಕವಾಗಿ ಬೆಸೆಯುವ ಅದಮ್ಯ ಚೇತನವಾಗಿ ಕಲಾಕ್ಷೇತ್ರ ಎದ್ದು ನಿಂತಿದೆ.
ಇಂತಹ ಸಾಂಸ್ಕೃತಿಕ ಸೌಧ ಉದ್ಘಾಟನೆಗೊಂಡು 2013 ಮಾರ್ಚ 9 ಕ್ಕೆ ಸರಿಯಾಗಿ 50 ವರ್ಷ ತುಂಬಿತು. ಈ ಸುವರ್ಣ ಸಂಭ್ರಮವನ್ನು ಮಾರ್ಚ ತಿಂಗಳಲ್ಲಿ ಆಚರಿಸಿದ್ದರೆ ಸೂಕ್ತವೆನಿಸುತ್ತಿತ್ತು. ಹೇಳಿ ಕೇಳಿ ಇದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೆಂಬ ಸರಕಾರಿ ಸ್ವಾಮ್ಯದ ಉಸ್ತುವಾರಿಯಲ್ಲಿರುವ ಕಲಾಕ್ಷೇತ್ರ. ಈ ಸರಕಾರಿ ಅಧಿಕಾರಿಗಳಿಗೆ ಯಾವಾಗ ಏನು ಮಾಡಬೇಕು ಎನ್ನುವುದರ ಅರಿವು ಮತ್ತು ಯಾವಾಗ ಯಾವುದನ್ನು ಮಾಡಿದರೆ ಸೂಕ್ತ ಎನ್ನುವುದರ ಪರಿವು ಎರಡೂ ಇರುವುದಿಲ್ಲ. ಹೀಗಾಗಿ 2013ರ ಮಾರ್ಚ ತಿಂಗಳಲ್ಲಿ ಆಚರಿಸಬೇಕಾದ ಸುವರ್ಣ ಸಂಭ್ರಮದ ಆಚರಣೆಯನ್ನು
ಡಿಸೆಂಬರ್ ತಿಂಗಳಿನಿಂದ ಆಚರಿಸುತ್ತಿದ್ದಾರೆ. ಬರೊಬ್ಬರಿ 9 ತಿಂಗಳ ನಂತರ. ಯಾಕೆ ಹೀಗೆ ಎಂದು ಕೇಳುವವರೂ ಇಲ್ಲಾ, ಕೇಳಿದರೂ ಕಿವುಡು ಅಧಿಕಾರಿಗಳಿಗದು ಕೇಳುವುದೂ ಇಲ್ಲ. ಸಧ್ಯ ಇದೇ ವರ್ಷದ ಕೊನೆಯಲ್ಲಾದರೂ ಸುವರ್ಣ ಸಂಭ್ರಮ ಆಚರಣೆಯನ್ನು ಶುರು ಮಾಡಿದರಲ್ಲಾ ಎನ್ನುವುದೇ ಕಲಾಕ್ಷೇತ್ರದ ಸೌಭಾಗ್ಯ. ಅದೂ ಈ ಸರಕಾರಿ ಅಧಿಕಾರಿಗಳಿಗೆ ಸುವರ್ಣ ಸಂಭ್ರಮವನ್ನು ನೆನಪಿಸಿದ್ದು ‘ನಾಟಕ ಬೆಂಗಳೂರು’ ನಾಟಕೋತ್ಸವದ ಆಯೋಜಕರು.
ಕಳೆದ ಐದು ವರ್ಷಗಳಿಂದ ಪ್ರತಿ ವರ್ಷ ಬೆಂಗಳೂರಿನ ಕೆಲವು ರಂಗತಂಡಗಳು ಒಟ್ಟಾಗಿ ‘ನಾಟಕ ಬೆಂಗಳೂರು’ ಎನ್ನುವ ನಾಟಕೋತ್ಸವವನ್ನು ಸಹಕಾರಿ ತತ್ವದಲ್ಲಿ ಆಯೋಜಿಸುತ್ತಾ ಬಂದಿವೆ. ಈ ನಾಟಕೋತ್ಸವದಲ್ಲಿ ನಾಟಕ ಪ್ರದರ್ಶಿಸುವ
ಪ್ರತಿಯೊಂದು ನಾಟಕಕ್ಕೂ ಪ್ರತಿ ವರ್ಷ ಅನುದಾನ ಕೊಡಬೇಕೆಂದು ‘ನಾಟಕ ಬೆಂಗಳೂರು’ ಕೇಳುತ್ತಲೇ ಇದೆ. ಯಾವ ವರ್ಷವೂ ಸರಿಯಾಗಿ ಹಣ ಬಿಡುಗಡೆ ಮಾಡದೇ ಸತಾಯಿಸುವ ಈ ಸಂಸ್ಕೃತಿ ಇಲಾಖೆ ಈ ವರ್ಷ ಇದೇ ‘ನಾಟಕ ಬೆಂಗಳೂರು’ ಆಯೋಜಕರಿಗೆ ರವೀಂದ್ರ ಕಲಾಕ್ಷೇತ್ರ-50 ಸುವರ್ಣ ಸಂಭ್ರಮದ ಆಚರಣೆಯ ಹೊಣೆಯನ್ನು ಹೊರೆಸಿದೆ. ಒಂದು ರೀತಿಯಲ್ಲಿ ಇದು ಕಾರ್ಪೊರೇಟ್ ಜಗತ್ತಿನ ಹೊರಗುತ್ತಿಗೆ ತಂತ್ರಗಾರಿಕೆ. ‘ನಾನು ಹಣ ಕೊಡ್ತೇನೆ ನೀವು ಸಂಭ್ರಮಾಚರಣೆ ಆಯೋಜಿಸಿರಿ’ ಎಂದು ತನ್ನ ಜವಾಬ್ದಾರಿಯನ್ನು ಸಂಸ್ಕೃತಿ ಇಲಾಖೆಯು ‘ನಾಟಕ ಬೆಂಗಳೂರು’ ಆಯೋಜಕರಿಗೆ ವಹಿಸಿ ತಾನು ಕೇವಲ ಪ್ರಾಯೋಜಕರಾಗಿ ಉಳಿಯಿತು.
2013, ಡಿಸೆಂಬರ್ 1 ರಂದು ‘ರವೀಂದ್ರ ಕಲಾಕ್ಷೇತ್ರ-50 ಸುವರ್ಣ ಸಂಭ್ರಮ’ ದ ಉದ್ಘಾಟನೆ ನಡೆಯಿತು. ಉದ್ಘಾಟನೆಯ ಮುಂಚೆಯೂ ಸಹ ಸಂಸ್ಕೃತಿ ಇಲಾಖೆಯ ಬೇಜವಾಬ್ದಾರಿ ಬಯಲಾಯಿತು. ಸೆಪ್ಟೆಂಬರ್ 27 ರಂದು ಉದ್ಘಾಟನೆ ಮಾಡುವುದೆಂದು ತೀರ್ಮಾನಿಸಿ ಬ್ರೋಷರ್ಗಳನ್ನು
ಮುದ್ರಿಸಲಾಯಿತು. ಆದರೆ ಅದೇನಾಯಿತೋ ಗೊತ್ತಿಲ್ಲ ಅದು ಡಿಸೆಂಬರ್ 1 ಕ್ಕೆ ಮುಂದೂಡಲಾಯಿತು ಹಾಗೂ ಸದರಿ ಉದ್ಘಾಟನೆಯನ್ನು ‘ಸಂಸ ಬಯಲು ರಂಗ ಮಂದಿರ’ದಲ್ಲಿ ಏರ್ಪಡಿಸಲಾಗಿತ್ತು. ಆಹ್ವಾನ ಪತ್ರದಲ್ಲೂ ಮುದ್ರಿಸಲಾಗಿತ್ತು. ವಿಪರ್ಯಾಸ ನೋಡಿ, ಅದೇ ದಿನದಂದು ‘ಸಂಸ’ದಲ್ಲಿ ಬೇರೆ ಸಂಗೀತ ಕಾರ್ಯಕ್ರಮ ನಡೆಸಲು ಅನುಮತಿಯನ್ನೂ ಕೊಡಲಾಗಿತ್ತು. ಸಂಸ್ಕೃತಿ ಇಲಾಖೆ ಮಾಡಿದ ಈ ಅವಘಡದಿಂದಾಗಿ ಉದ್ಘಾಟನೆ ಕಾರ್ಯಕ್ರಮವನ್ನು
ಎಲ್ಲಿ ಮಾಡುವುದು ಎನ್ನುವುದೇ ಸಮಸ್ಯೆಯಾಯಿತು. ಕೊನೆಯ ಹಂತದಲ್ಲಿ ರಂಗಕರ್ಮಿಗಳು ಸೂಚಿಸಿದ್ದು ಕಲಾಕ್ಷೇತ್ರದ ಪಕ್ಕದಲ್ಲಿರುವ ಶಿಲ್ಪ ಉದ್ಯಾನವನವನ್ನು. ಕೊನೆಗೂ ತರಾತುರಿಯಲ್ಲಿ ಈ ಉದ್ಯಾನವನದಲ್ಲಿ ತಾತ್ಕಾಲಿಕ ವೇದಿಕೆಯೊಂದನ್ನು ನಿರ್ಮಿಸಿ ಅನಾನೂಕೂಲತೆಗಳ ನಡುವೆ ಹೇಗೋ ‘ಸುವರ್ಣ ಸಂಭ್ರಮ’ದ ಉದ್ಘಾಟನೆ ರಂಗಕರ್ಮಿ ‘ಪ್ರಸನ್ನ’ರವರಿಂದ ನೆರವೇರಿತು. ಸಂಸ್ಕೃತಿ ಇಲಾಖೆಯ ಆಯುಕ್ತರು ನಿಟ್ಟಿಸುರುಬಿಟ್ಟರು.
ರವೀಂದ್ರ ಕಲಾಕ್ಷೇತ್ರಕ್ಕೆ 50 ವರ್ಷ ತುಂಬಿದ್ದರಿಂದ ಇದನ್ನು ಸಾರ್ಥಕವಾಗಿ ಆಚರಿಸಲು 50 ನಾಟಕಗಳನ್ನು ಪ್ರದರ್ಶಿಸಲು ಸಂಸ್ಕೃತಿ ಇಲಾಖೆಯ ಸಭೆಯಲ್ಲಿ ರಂಗಕರ್ಮಿಗಳು ನಿರ್ಧರಿಸಿತು. ಆದರೆ 50 ದಿನ ರವೀಂದ್ರ ಕಲಾಕ್ಷೇತ್ರವನ್ನು ನಿರಂತರವಾಗಿ ಕಾಯ್ದಿರಿಸುವುದು ಆಗದ ಕೆಲಸ. 50 ನಾಟಕಗಳ ನಿರ್ಮಾಣ ಅಥವಾ ಮರುನಿರ್ಮಾಣ ಸುಲಭದ ಕೆಲಸವಲ್ಲ. ಹೀಗಾಗಿ ೫೦ ನಾಟಕಗಳನ್ನು ನಾಲ್ಕು ಕಂತುಗಳಾಗಿ ವಿಂಗಡಿಸಲಾಯಿತು. ಡಿಸೆಂಬರ್ 2 ರಿಂದ 11 ರವರೆಗೆ ಮೊದಲ ಕಂತಿನಲ್ಲಿ 10 ನಾಟಕಗಳು ಹಾಗೂ 2004, ಜನೆವರಿ 1 ರಿಂದ 10ರವರೆಗೆ ಬೆಳಿಗ್ಗೆ ಹತ್ತು ಹಾಗೂ ಸಂಜೆ ಹತ್ತು ಒಟ್ಟು ಇಪ್ಪತ್ತು ನಾಟಕಗಳು, ಮತ್ತು ಫೆಬ್ರುವರಿ ಹಾಗೂ ಮಾರ್ಚ ತಿಂಗಳಲ್ಲಿ ತಲಾ ಹತ್ತತ್ತು
ನಾಟಕಗಳು... ಹೀಗೆ ಒಟ್ಟು 50 ನಾಟಕಗಳ ಪ್ರದರ್ಶನಗಳನ್ನು ಮಾಡುವುದರ ಮೂಲಕ ‘ರವೀಂದ್ರ ಕಲಾಕ್ಷೇತ್ರ-50 ಸುವರ್ಣ ಸಂಭ್ರಮ’ವನ್ನು ಆಚರಿಸಲು ನಿರ್ಧರಿಸಲಾಯಿತು. ಜೊತೆಗೆ ರಂಗ ಕಾರ್ಯಾಗಾರ, ‘ಕಲಾಕ್ಷೇತ್ರ ಮತ್ತು ನಾನು’ ಎನ್ನುವ ಸ್ವಗತ ಸರಣಿ, ವಿಚಾರ ಸಂಕಿರಣ, ನಾಟಕ ರಚನಾ ಸ್ಪರ್ಧೆ ಮುಂತಾದ ರಂಗ ಸಂಭಂದಿತ ಚಟುವಟಿಕೆಗಳನ್ನೂ ಹಮ್ಮಿಕೊಳ್ಳಲಾಗಿದೆ. ಈಗಾಗಲೆ ಮೊದಲ ಕಂತಿನ ನಾಟಕಗಳ ಪ್ರದರ್ಶನ ಮುಗಿದಿದೆ. ಇನ್ನೊಂದು ಕಂತಿನ ಪ್ರದರ್ಶನಗಳಿಗೆ ರಂಗತಂಡಗಳು ಸಿದ್ದತೆ ಮಾಡಿಕೊಳ್ಳುತ್ತಿವೆ.
ಒಟ್ಟಾರೆಯಾಗಿ ಸುವರ್ಣ ಸಂಭ್ರಮದ ನೆಪದಲ್ಲಿ ಬೆಂಗಳೂರಿನ ರಂಗಭೂಮಿಯ ಚಟುವಟಿಕೆಗಳು ಗರಿಗೆದರಿವೆ. ಈ ಸಂಭ್ರಮಾಚರಣೆ ನಿಷ್ಕ್ರೀಯಗೊಂಡಿದ್ದ ಕೆಲವು ರಂಗತಂಡಗಳನ್ನೂ ಸಹ ಮತ್ತೆ ನಾಟಕ ಪ್ರದರ್ಶನಕ್ಕಿಳಿಯುವಂತೆ ಮಾಡಿದೆ. ಇತಿಹಾಸ ಕಂಡ ಅಪರೂಪದ ನಾಟಕಗಳ ಮರುಪ್ರದರ್ಶನಕ್ಕೆ ಸುವರ್ಣ ಸಂಭ್ರಮ ಮತ್ತೆ ವೇದಿಕೆಯಾಗಿದೆ. ತಮ್ಮದೇ ಕೆಲಸಗಳಲ್ಲಿ ತೊಡಗಿಕೊಂಡಿದ್ದ ಹಲವಾರು ರಂಗಕರ್ಮಿಗಳನ್ನು ಮತ್ತೆ ಒಂದು ವೇದಿಕೆಗೆ ತರುವಲ್ಲಿ ಯಶಸ್ವಿಯಾಗಿದೆ. ಈ ಉತ್ಸಾಹ ಹೀಗೆ ಮುಂದುವರೆದು ನಿರಂತರವಾಗಿ ನಾಟಕಗಳನ್ನು ಈ ಎಲ್ಲಾ ತಂಡಗಳು ಪ್ರದರ್ಶಿಸುತ್ತಾ ಹೋದರೆ ರಂಗಭೂಮಿ ಕಳೆದುಕೊಂಡಿರುವ ಹೊಳಪನ್ನು ಮತ್ತೆ ಪಡೆಯಬಹುದಾಗಿದೆ. ಮತ್ತೆ 70ರ ದಶಕದ ರಂಗಸಂಭ್ರಮದ ದಿನಗಳು ಮರುಕಳಿಸಬಹುದಾಗಿದೆ. ರಂಗಭೂಮಿ ಮತ್ತೊಮ್ಮೆ ಪೊರೆ ಕಳಚಿಕೊಂಡು ಹೊಸಹುಟ್ಟು ಪಡೆದು ವಿಜ್ರಂಭಿಸಬೇಕಿದೆ. ಅಂತಹ ಅಭೂತಪೂರ್ವ ಕೆಲಸಕ್ಕೆ ‘ರವೀಂದ್ರ ಕಲಾಕ್ಷೇತ್ರ-50 ಸುವರ್ಣ ಸಂಭ್ರಮ’ ಪ್ರೇರಣೆಯಾಗಲಿ, ಇಡೀ ಕಾರ್ಯಕ್ರಮ ಯಶಸ್ವಿಯಾಗಲಿ ಎನ್ನುವುದು ರಂಗಾಸಕ್ತರ ಆಶಯವಾಗಿದೆ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ