ಗುರುವಾರ, ಜನವರಿ 2, 2014

ಸಂಕೀರ್ಣ ನಿರೂಪಣೆಯಲ್ಲಿ “ವಿದ್ವಂಸಕ ಶಾಂತಿ ಕೇಂದ್ರ”



         


ಸರಳವಾದ ವಿಷಯವೊಂದನ್ನು ಸಂಕೀರ್ಣವಾಗಿ ಹೇಗೆಲ್ಲಾ ಹೇಳಬಹುದು ಎನ್ನುವುದಕ್ಕೆ ಸಾಕ್ಷಿ ವಿಶಾಕೇ. ಹೆಸರು ಎಷ್ಟು ವಿಚಿತ್ರವೂ ನಾಟಕವೂ ಅಷ್ಟೇ ವಿಕ್ಷಿಪ್ತವಾಗಿದೆ. ಹಾಗೆಯೇ ನಾಟಕದ ವಸ್ತು ಅಷ್ಟೇ ವಿಶಿಷ್ಟವಾಗಿದೆ. ಇಂತಹ ವಿನೂತನ ಮಾದರಿಯ ನಾಟಕವನ್ನು ಮೌನೇಶ ಬಡಿಗೇರ್ ರವರು ರಚಿಸಿದ್ದು ಮಂಜುನಾಥ ಬಡಿಗೇರ್ರವರು ಸಮಷ್ಟಿ ರಂಗತಂಡದ ಕಲಾವಿದರಿಗೆ ನಿರ್ದೇಶಿಸಿದ್ದಾರೆ.  ರವೀಂದ್ರ ಕಲಾಕ್ಷೇತ್ರ-50 ಸುವರ್ಣ ಸಂಭ್ರಮದಲ್ಲಿ ನಾಟಕ ಬೆಂಗಳೂರು ಆಯೋಜಿಸಿದ ಎರಡನೇ ಕಂತಿನ ನಾಟಕೋತ್ಸವದಲ್ಲಿ 2014, ಜನವರಿ 2ರಂದು ವಿಶಾಕೇ ನಾಟಕವು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡಿತು

      ಜಾಗತೀಕರಣದಿಂದಾಗಿ ನಗರಕೇಂದ್ರಿತ ಜನರ ಬದುಕು ಯಾಂತ್ರಿಕವಾಗಿದೆ. ತಮ್ಮ ವ್ಯಯಕ್ತಿಕ ಅಗತ್ಯತೆಗಳನ್ನು ಕಡೆಗಣಿಸಿದ ಬಹುತೇಕ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಜನತೆ ಹಗಲು ರಾತ್ರಿ ಎನ್ನದೇ ಹಣ ಸಂಪಾದನೆಯನ್ನೇ ಬದುಕಿನ ಏಕೈಕ ಗುರಿಯನ್ನಾಗಿರಿಸಿಕೊಂಡಿದೆ. ಸುಖದ ಬದುಕಿಗಾಗಿ ಸಂಪತ್ತಿನ ಸಂಗ್ರಹವೆನ್ನುವ ಮರೀಚಿಕೆಯ ಹಿಂದೆ ಬಿದ್ದ ಜನರ ಕೌಟುಂಬಿಕ ನೆಮ್ಮದಿ ಚಿದ್ರಗೊಳ್ಳುತ್ತಿದೆ, ಮಾನಸಿಕ ಶಾಂತಿ ಭಗ್ನಗೊಂಡಿದೆ. ಹೀಗೆ ತಾವೇ ಕಳೆದುಕೊಂಡ ಶಾಂತಿ-ನೆಮ್ಮದಿಗಾಗಿ ಹಾತೊರೆಯುತ್ತಿರುವವರಿಗೆ ಸಾಂತ್ವನ ಹೇಳಲೆಂದೇ ಯೋಗ ಕೇಂದ್ರಗಳು, ಆಧ್ಯಾತ್ಮಿಕ ಕೇಂದ್ರಗಳು, ಆರ್ಟ ಆಪ್ ಲಿವಿಂಗ್ ಕೇಂದ್ರಗಳು.. ನಗರದಾದ್ಯಂತ ತಮ್ಮ ಶಾಖೆ ಉಪಶಾಖೆಗಳನ್ನು ತೆಗೆದು ವ್ಯಾಪಾರೀ ಕೆಂದ್ರಗಳನ್ನು ಆರಂಭಿಸಿವೆ. ಮೊದಲು ನೆಮ್ಮದಿಯನ್ನರಸಿ ದೇವಸ್ಥಾನಗಳಿಗೆ ಹೋಗುತ್ತಿದ್ದ ಜನರು ಅಲ್ಲಿಯೂ ಕೂಡಾ ಶಾಂತಿ ಸಿಗದೇ ಭ್ರಮನಿರಸನಗೊಂಡು ಈಗ ರೀತಿಯ ಶಾಂತಿಯ ಲೇವಾದೇವಿ ಕೇಂದ್ರಗಳಿಗೆ ಲಗ್ಗೆ ಇಡುತ್ತಿದ್ದಾರೆ. ಅಲ್ಲಿಯೂ ಶಾಂತಿ ನೆಮ್ಮದಿ ಸಿಗದೇ ಮತ್ತೆ ಭ್ರಮನಿರಸನಗೊಂಡವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದು ಇಂದಿನ ಆಧುನಿಕ ಯುಗದ ವಿಪರ್ಯಾಸವಾಗಿದೆ

       ಹಣ ಸಂಪಾದನೆಯ ದಾವಂತದಲ್ಲಿ ಕಳೆದುಕೊಂಡ ನೆಮ್ಮದಿಯನ್ನು ಹುಡುಕುವವರ ಹುಳುಕುಗಳು ಮತ್ತು ಕಳೆದುಕೊಂಡ ನೆಮ್ಮದಿಯನ್ನು ಮರಳಿ ಹುಡುಕಿಕೊಡುತ್ತೇವೆ ಎಂದು ಹೇಳಿಕೊಳ್ಳುವ ವ್ಯಾಪಾರಿ ಕೇಂದ್ರಗಳ ಹುನ್ನಾರಗಳನ್ನು ರಂಗದಂಗಳದಲ್ಲಿ ವಿಡಂಬನಾತ್ಮಕವಾಗಿ ತೋರಿಸುವ ಪ್ರಯತ್ನವೇ ವಿಶಾಕೆ ನಾಟಕ. ನಾಟಕದ ಕಥೆ ಹೀಗಿದೆ,

          ಆತ ಮನೋಜ, ಸಾಪ್ಟವೇರ್ ಕಂಪನಿಯಲ್ಲಿ ಒತ್ತಡದ ಕೆಲಸ, ಆತನ ಹೆಂಡತಿ ಶಾಲಿನಿ ಕೂಡಾ ಮನೆಗೆಲಸದ ಜೊತೆಗೆ ನೌಕರಿಯನ್ನೂ ನಿಭಾಯಿಸುವವಳು. ಇಬ್ಬರಿಗೂ ಸಂಪಾದನೆಯ ದಾವಂತ. ವಿಪರೀತ ಕೆಲಸದ ಒತ್ತಡ. ಮಕ್ಕಳನ್ನು ಮಾಡಿಕೊಳ್ಳಲೂ ಸಮಯವಿಲ್ಲದಂತಹ ಬದುಕು ನರಕಸದೃಶ. ದಿನವೂ ಜಗಳ, ಮನಸ್ಥಾಪ. ಇದರಿಂದ ರೋಸಿಹೋದ ಮನೋಜ್ ಕೆಲಸ ಮತ್ತು ಕುಟುಂಬದ ಒತ್ತಡ ನಿರ್ವಹಣೆಗಾಗಿ ಹೋಗಿ ಸೇರಿದ್ದು ವಿದ್ವಂಸಕ ಶಾಂತಿ ಕೇಂದ್ರ (ವಿಶಾಕೇ) ವನ್ನು. ಅದರ ಸ್ಥಾಪಕ ಪ್ರಳಯ ನಂಜುಂಡ ಎನ್ನುವ ಪ್ರಳಯಾಂತಕ. ಸುಂದರ ಹುಡುಗಿಯರನ್ನು ಕೆಲಸಕ್ಕೆ ನಿಯಮಿಸಿಕೊಂಡಿರುತ್ತಾನೆ. ಮೂರ್ತಿ ಎನ್ನುವ ದೇವಸ್ಥಾನದ ಶಾಸ್ತ್ರಿಯ ಮಗನನ್ನು ತನ್ನ ಮ್ಯಾನೇಜರನನ್ನಾಗಿ ಮಾಡಿಕೊಂಡು ಆತನ ಸಹಾಯದಿಂದ ವಿದ್ವಂಸಕ ಕೇಂದ್ರವನ್ನು ಬೆಳೆಸುತ್ತಾನೆ. ಒತ್ತಡದ ಬದುಕಿನಿಂದಾಗಿ ಹುಟ್ಟಿದ ಆಕ್ರೋಶವನ್ನು ಕಡಿಮೆಗೊಳಿಸಿಕೊಳ್ಳಲು ವಸ್ತುಗಳನ್ನು ದ್ವಂಸಗೊಳಿಸುವ ಮೂಲಕ ಶಾಂತಿಯನ್ನು ಪಡೆಯುವ ವಿನೂತನ ಮಾರ್ಗವನ್ನು ನಂಜುಂಡ ಪ್ರಖ್ಯಾತಗೊಳಿಸುತ್ತಾನೆ. ವಿಶಾಕೇ ಬರುಬರುತ್ತ ಜನಪ್ರೀಯವಾಗುತ್ತದೆ. ನೆಮ್ಮದಿ ಕಳೆದುಕೊಂಡ ಜನರು ಮಾನಸಿಕ ಶಾಂತಿಯನ್ನು ಪಡೆಯಲು ಕೇಂದ್ರದಲ್ಲಿ ಸಾಲುಗಟ್ಟುತ್ತಾರೆ. ಟಿವಿ ಮಾಧ್ಯಮದವರು ಪ್ರಚಾರ ಕೊಡುತ್ತಾರೆ. ಕೊನೆಗೆ ಮನೋಜನಿಗೆ ತನ್ನ ಹೆಂಡತೀಯೂ ಕೇಂದ್ರಕ್ಕೆ ಶಾಂತಿ ಅರಸಿ ಬಂದಿದ್ದಾಳೆಂಬುದರ ಸುಳಿವು ಸಿಕ್ಕಿ ಆತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಜನತೆ ಆಕ್ರೋಶಗೊಂಡು ಕೇಂದ್ರವನ್ನೇ ದ್ವಂಸ ಮಾಡುತ್ತಾರೆ. ಅಲ್ಲಿ ಮ್ಯಾನೇಜರ ಆಗಿದ್ದ ಮೂರ್ತಿಯನ್ನು ಹೊಡೆದು ಸಾಯಿಸುತ್ತಾರೆ. ನಂಜುಂಡ ತಲೆಮರೆಸಿಕೊಳ್ಳುತ್ತಾನೆ

          ಇದು ನಾಟಕದ ಸರಳ ಕಥೆ. ಆದರೆ ನಾಟಕದ ನಿರೂಪನೆ ಇಷ್ಟೊಂದು ಸರಳವಾಗಿಲ್ಲ. ಸಿಕ್ಕಾಪಟ್ಟೆ ಸಂಕೀರ್ಣವಾಗಿದೆ. ಕಥೆಗೆ ಪೂರಕವಾಗಿ ಆರಂಭದಲ್ಲಿ ಪೂರ್ವರಂಗವನ್ನು ಸೃಷ್ಟಿಸುವ ಮೂಲಕ ಕುತೂಹಲವನ್ನು ಹುಟ್ಟಿಸಿ, ಕೊನೆಗೆ ಉತ್ತರರಂಗದಲ್ಲಿ ಅದಕ್ಕೆ ಲಿಂಕ್ ಒದಗಿಸಲಾಗಿದೆ. ಅದು ಹೀಗಿದೆ. ನಾಟಕ ಕಂಪನಿಯ ನಟರು ನಾಟಕವೊಂದನ್ನು ಶುರುಮಾಡಬಯಸುತ್ತಾರೆ.  ಆದರೆ ಸೂತ್ರದಾರ ನಾಪತ್ತೆಯಾಗಿರುತ್ತಾನೆ. ನಾಪತ್ತೆಯಾದ ಸೂತ್ರದಾರನನ್ನು ಟಾರ್ಚ ಹಿಡಿದು ಹುಡುಕಲು ಎಲ್ಲಾ ನಟರು ರಂಗವೇದಿಕೆಯಿಂದ ನಿರ್ಗಮಿಸುತ್ತಾರೆ. ನಂತರ ಮೇಲೆ ಹೇಳಿದ ಕಥೆ ಅನಾವರಣಗೊಳ್ಳುತ್ತದೆ. ಹಾಗೆ ಸೂತ್ರದಾರನನ್ನು ಹುಡುಕಲು ಹೊರಟ ಎಲ್ಲ ನಟರೂ ತಮ್ಮ ಅಸಲಿ ಗುರುತುಗಳನ್ನು ಮರೆತು ಮುಖ್ಯ ಕಥೆಯಲ್ಲಿ ಪಾತ್ರಗಳಾಗಿರುತ್ತಾರೆ. ಕೊನೆಗೆ ಅವರೆಲ್ಲಾ ಜೋಪಾನವಾಗಿ ತಮ್ಮಲ್ಲಿ ಕಾಯ್ದಿಟ್ಟ ಟಾರ್ಚಗಳಿಂದಾಗಿ ಪರಸ್ಪರ ಗುರುತಿಸಿಕೊಳ್ಳುತ್ತಾರೆ. ಆದರೆ ನಾಪತ್ತೆಯಾದ ಸೂತ್ರದಾರ ಯಾರಿಗೂ ಸಿಗಲಿಲ್ಲ ಎನ್ನುವ ನಿರಾಸೆಯಿಂದ ಹೊರಬಂದು ಮತ್ತೊಂದು ನಾಟಕವಾಡಲು ನಿರ್ಧರಿಸುವುದರೊಂದಿಗೆ ವಿಶಾಕೇ ನಾಟಕ ಮುಗಿಯುತ್ತದೆ. ಆದರೆ ಎಲ್ಲದರ ನಿಜವಾದ ಸೂತ್ರದಾರರಾದ ಮೌನೇಶ್ ಬಡಿಗೇರ್ ಮೌನವಾಗಿದ್ದರೆ, ಮಂಜುನಾಥ ಬಡಿಗೇರ್ ಪ್ರೇಕ್ಷಕರ ಮೆದುಳಲ್ಲಿ ಹುಳುಬಿಡುವುದರಲ್ಲಿ ಹಾಗು ನೋಡುಗರ ಗೃಹಿಕೆಯಲ್ಲಿ ಗೊಂದಲಗಳನ್ನುಂಟುಮಾಡುವಲ್ಲಿ ಯಶಸ್ವಿಯಾಗಿದ್ದಾರೆ

    ಸಂಗತ ವಸ್ತು-ವಿಷಯವನ್ನು ಅಸಂಗತ ಮಾದರಿಯಲ್ಲಿ ನಿರೂಪಿಸಿರುವುದೇ ರೀತಿಯ ಗೋಜಲಿಗೆ ಕಾರಣವಾಗಿದೆ. ವೇಟಿಂಗ್ ಪಾರ್ ಗಾಡೋ ಎನ್ನುವ ಅಸಂಗತ ನಾಟಕದಲ್ಲಿ ಬರುವ ಮೂರು ಪಾತ್ರಗಳು ಬಾರದ ಗಾಡೋನಿಗಾಗಿ ಕಾಯುತ್ತಲೇ ವಿಕ್ಷಿಪ್ತವಾಗಿ ನಟಿಸುತ್ತವೆ. ಅದರ ಮುಂದುವರಿಕೆಯಾಗಿರುವ ವಿಶಾಕೇ ಯಲ್ಲಿ ಕೂಡಾ ಒಂದು ನಾಟಕ ಕಂಪನಿಯ ನಟರೂ ಸಹ ಸಿಗದೇ ಇರುವ ಸೂತ್ರದಾರನಿಗಾಗಿ ಹುಡುಕುತ್ತಲೇ ಒಂದು ವಿಚಿತ್ರ ನಾಟಕವನ್ನೇ ಕಟ್ಟಿಕೊಡುತ್ತಾರೆ. ಇಲ್ಲಿ ಎಲ್ಲವೂ ಅತಿರೇಕಗಳೇ. ವಿಡಂಬಣೆ ಎನ್ನುವುದು ವಾಸ್ತವದ ನೆಲೆಗಟ್ಟಿನಲ್ಲಿದ್ದರೆ ಜನರನ್ನು ನೇರವಾಗಿ ಮುಟ್ಟುತ್ತವೆ. ಆದರೆ ಯಾವಾಗ ಅದು ಅತಿರೇಕವಾಗುತ್ತದೆಯೋ ಆಗ ಅಂತಹ ಪ್ರಸ್ತುತತೆಗಳು ಪ್ಯಾಂಟಸಿಗಳಾಗಿ ಜನರ ಮನಸ್ಸನ್ನು ತಟ್ಟದೇ ಕೇವಲ ಬೌದ್ದಿಕ ಮಿತಿಯಲ್ಲೇ ಉಳಿದುಬಿಡುತ್ತವೆ

    ವಿಡಂಬನಾತ್ಮಕ ಪ್ರಸಂಗಗಳು ವಿನೋದದಿಂದ ವಿಷಾದದತ್ತ ಪ್ರೇಕ್ಷಕರನ್ನು ಕರೆದೊಯ್ಯುತ್ತವೆ. ಚಾರ್ಲಿಚಾಪ್ಲಿನ್ ಸಿನೆಮಾಗಳು ಇದಕ್ಕೆ ಉತ್ತಮ ಉದಾಹರಣೆ. ಆದರೆ ವಿಶಾಕೆ ನಾಟಕವನ್ನು ಹಾಸ್ಯಮಯವಾಗಿಯೇ ಕಟ್ಟಲಾಗಿದೆಯಾದರೂ ಅದು ನೋಡುಗರನ್ನು ನಗೆಗಡಲಲ್ಲಿ ತೇಲಿಸಲಿಲ್ಲ. ಪಂಚ್ ಸಂಭಾಷಣೆಗಳಿವೆಯಾದರೂ ಅವು ನಗೆ ಹುಟ್ಟಿಸಲಿಲ್ಲ. ಪ್ರಸ್ತುತ ವಿಚಾರ ಇದೆಯಾದರೂ ಅದು ಪ್ರೇಕ್ಷಕರನ್ನು ಕಾಡಲಿಲ್ಲ, ಯಾಕೆಂದರೆ ಸರಳವಾದ ವಿಷಯವನ್ನು ಸಂಕೀರ್ಣವಾಗಿ ತೋರಿಸುವ ರೀತಿಯಿಂದಾಗಿ, ಸಾಮಾನ್ಯ ಪ್ರೇಕ್ಷಕರ ಗ್ರಹಿಕೆಯ ಸಾಮರ್ಥ್ಯಕ್ಕೆ ಮೀರಿದ  ಗೋಜಲುಗಳನ್ನು ತುಂಬಿದ ಪರಿಣಾಮವಾಗಿ ಇಡೀ ನಾಟಕ ಪ್ರೇಕ್ಷಕನ ಮನಸ್ಸನ್ನು ತಟ್ಟದೇ ಹೋಯಿತು. ವಿಶಿಷ್ಟ ವಿಷಯಾಧಾರಿತ ನಾಟಕವೊಂದು ವಿಕ್ಷಿಪ್ತ ನಿರೂಪನಾ ಶೈಲಿಯಿಂದಾಗಿ ನೋಡುಗರ ಹೃದಯವನ್ನು ತಟ್ಟದೇ ಹೋಯಿತು. ಹಾಸ್ಯರಸವಿದ್ದೂ ನಾಟಕ ಮನರಂಜಿಸುವಲ್ಲಿ ಸಫಲವಾಗದೇ ಹೋಯಿತು. ರಂಗ ನಿರೂಪನಾ ತಂತ್ರಗಳ ಭಾರಕ್ಕೆ ನಾಟಕದ ಕಥೆಯ ನಿಜವಾದ ಆಶಯವೇ ಗೌಣವಾಯಿತು.



   ನಾಟಕದ ರೂವಾರಿಗಳು ಪುರುಷರಾಗಿದ್ದರಿಂದಲೋ ಏನೋ ಮಹಿಳೆಯರನ್ನು ಗಯ್ಯಾಳಿಗಳಾಗಿ, ಮೋಸಗಾತಿಯರನ್ನಾಗಿ ಚಿತ್ರಿಸಲಾಗಿದೆ. ಶಾಲಿನಿ ಪಾತ್ರ ಇಲ್ಲಿ ಅತಿಯಾಗಿ ರಿಯಾಕ್ಟ ಮಾಡಿದ್ದರಿಂದಾಗಿ ಆಕೆಯ ಗಂಡನ ಪಾತ್ರದ ಮೇಲೆ ಪ್ರೇಕ್ಷಕರ ಅನುಕಂಪ ಬರುವ ಹಾಗಿದೆ. ಹಾಗೆಯೇ ಹುಡುಗಿಯಿಂದ ಪರಿತ್ಯಕ್ತನಾದ ಯುವಕ ಎಲ್ಲಾ ಹೆಣ್ಣುಗಳನ್ನು ಮೋಸಗಾತಿಯರು ಎಂದು ದೂರುತ್ತಾ ಮಾನಸಿಕ ಸ್ಥಿಮಿತತೆ ಕಳೆದುಕೊಂಡು ಹುಡುಗಿಯರೆಂದರೆ ಹೀಗೆ ಎನ್ನುವ ರೀತಿಯಲ್ಲಿ ವಿಕ್ಷಿಪ್ತವಾಗಿ ಪ್ರತಿಕ್ರಿಯಿಸಿದ್ದೂ ಸಹ ಪುರುಷ ಲೋಕದಲ್ಲಿ ಹೆಣ್ಣಿನ ಬಗ್ಗೆ ಇರುವ ಅಸಹನೆಗೆ ಪ್ರತೀಕವಾಗಿದೆ. ಎಲ್ಲಾ ಮಾನಸಿಕ ಕ್ಷೆಭೆಗೆ ಮಹಿಳೆಯರೇ ಕಾರಣ ಎಂದು ಅರ್ಥಬರುವ ಹಾಗೆ ಪರೋಕ್ಷವಾಗಿ ಆರೋಪಿಸಿರುವುದು ಅತಿರೇಕವೆನಿಸುತ್ತದೆ. ಅಯ್ಯೋ ಇದೇನ್ರಿ ಮನೆಯಲ್ಲಿ ಹೆಂಡತಿಯ ಜಗಳದಿಂದ ಬೇಸತ್ತು ನಾಟಕಕ್ಕೆ ಬಂದರೆ ಇಲ್ಲಿಯೂ ಅದೇ ಗಂಡಹೆಂಡಿರ ಜಗಳವೇ ಇದೆಯಲ್ಲಾ.. ಎಂದು ನಾಟಕದ ನಂತರ ಪ್ರೇಕ್ಷಕನೊಬ್ಬ ಹೇಳಿದ್ದು ಹಾಗೂ ನಾಟಕ ಮುಗಿದ ನಂತರ ಹಿರಿಯ ನಾಗರಿಕರೊಬ್ಬರು ಮೌನೇಶ ಬಡಿಗೇರರನ್ನೇ ಅಡ್ಡಗಟ್ಟಿ ಇದ್ಯಾಕ್ರಿ ಅರ್ಥವಾಗದ ರೀತಿ ನಾಟಕ ಮಾಡ್ಸಿದ್ದೀರಿ... ಎಂದು ಆಕ್ರೋಶದಿಂದ ಆರೋಪಿಸಿದ್ದು ನಾಟಕದ ಒನ್ಲೈನ್ ವಿಮರ್ಶೆಯಾಗಿದೆ.

     ನಾಟಕದಲ್ಲಿ ಅನಗತ್ಯವಾಗಿ ಮಧ್ಯಪಾನ ಹಾಗೂ ಧೂಮಪಾನಗಳನ್ನು ಬಳಸಲಾಗಿದೆ. ಅವು ಸಾಂಕೇತಿಕವಾಗಿದ್ದರೆ ಚೆನ್ನಾಗಿತ್ತು ಆದರೆ ಅತಿಯಾದಾಗ ದುರಭ್ಯಾಸಗಳು ಕೆಲವರಿಗೆ ಪ್ರೇರಕವೂ ಆಗಬಹುದು ಇಲ್ಲವೇ ದುರಭ್ಯಾಸರಹಿತರಿಗೆ ಕಿರಿಕಿರಿಯೂ ಆಗಬಹುದಾಗಿದೆ. ಸಿನೆಮಾದಲ್ಲೇ ಇವುಗಳನ್ನು ಬ್ಯಾನ್ ಮಾಡಲಾಗಿದೆ. ನಾಟಕದಲ್ಲೂ ದುರಭ್ಯಾಸಗಳ ವೈಭವೀಕರಣ ನಿಲ್ಲಿಸುವುದು ಸಾಮಾಜಿಕ ಒಳಿತಿನ ದೃಷ್ಟಿಯಲ್ಲಿ ಕ್ಷೇಮಕರವಾಗಿದೆ. ಹಾಗೂ ಅದು ರಂಗಭೂಮಿಯ ಸಾಮಾಜಿಕ ಜವಾಬ್ದಾರಿಯೂ ಆಗಿದೆ.   

          ನಿರೂಪಣಾ ತಂತ್ರ ಹಾಗೂ ತಾತ್ವಿಕ ಅಂಶಗಳನ್ನು ಬದಿಗಿಟ್ಟು ನೋಡಿದರೆ ಇಡೀ ನಾಟಕದಲ್ಲಿ ನಟರನ್ನು ಪಾತ್ರಗಳಾಗಿ ಸಿದ್ದಗೊಳಿಸಿದ ರೀತಿ ಉತ್ತಮವಾಗಿದೆ. ವರ್ತಮಾನದ ಕಥೆಯೊಳಗೆ ಬರುವ ಪ್ರಮುಖ ಪಾತ್ರಗಳಿಗೆ ಅವಾಸ್ತವಿಕ ಶೈಲೀಕೃತ ನಟನೆಯನ್ನು ಅಳವಡಿಸಲಾಗಿದ್ದು, ಅದಕ್ಕೆ ಪೂರಕವಾಗಿ ನಟರನ್ನು ತರಬೇತುಗೊಳಿಸಲಾಗಿದೆ. ಮನೋಜ ಪಾತ್ರದಲ್ಲಿ ಪರಮೇಶ್ವರ ಅಭಿನಯ ಮನೋಜ್ಞವಾಗಿದೆ. ವಿದೂಷಕ ಹಾಗೂ ನಂಜುಂಡ ಪಾತ್ರಗಳ ನಟನೆಯಲ್ಲಿ ಪದ್ಮಪ್ರಸಾದ್ ಜೈನ್ರವರ ನಟನೆ ಗಮನಸೆಳೆಯಿತು. ಶಾಲಿನಿಯಾಗಿ ರೂಪಾ ರೈ ಹಾಗೂ  ಟಿವಿ ನಿರೂಪಕಿಯಾಗಿ ಧನ್ಯ ಬಡಿಗೇರ್ ಅಭಿನಯದಲ್ಲಿ ಪೋರ್ಸ ಇದೆ. ಮಿಕ್ಕೆಲ್ಲಾ ನಟರೂ ತಮ್ಮ ಪಾತ್ರಗಳಿಗೆ ಜೀವತುಂಬಿ ಅಭಿನಯಿಸಿದ್ದಾರೆ.  ಬ್ಲಾಕಿಂಗ್, ಮೂವಮೆಂಟ್ಗಳು ನಾಟಕದ ಸೊಗಸನ್ನು ಹೆಚ್ಚಿಸಿವೆ



      ಕೇವಲ ದಿನಬಳಕೆ ವಸ್ತು-ಯಂತ್ರಗಳ ಡಬ್ಬಗಳನ್ನೇ ಬಹುತೇಕ ಬಳಸಿ ನಿರ್ಮಿಸಲಾದ ಸೆಟ್ ಅರ್ಥಪೂರ್ಣವಾಗಿದೆ. ಎಲ್ಲಾ ದೃಶ್ಯಗಳಲ್ಲೂ ನೆಲದ ಮೇಲೆ ಎಲ್ಲೆಂದರಲ್ಲಿ ಹರಡಿಕೊಂಡ ಡಬ್ಬಗಳು ನೋಡುಗರಿಗೆ ಒಂದಿಷ್ಟು ಕಿರಿಕಿರಿ ಅನ್ನಿಸಿದರೂ ಮನುಷ್ಯನನ್ನೇ ಪರಾವಲಂಬಿಯಾಗಿಸುವ ಪ್ರೊಡಕ್ಟಗಳ ಡಬ್ಬಗಳನ್ನು ಸಾಂಕೇತಿಕವಾಗಿ ಉಪಯೋಗಿಸಿದ್ದು, ಅಂತಹ ಡಬ್ಬಗಳನ್ನೇ ಬಳಸಿ ದೇವಸ್ಥಾನದ ಮುಂಭಾಗ ನಿರ್ಮಿಸಿದ್ದು ನಮ್ಮ ನಾಗರೀಕತೆಯ ಸರಕು ಸಂಸ್ಕೃತಿಯನ್ನು ಬಿಡಂಬಣೆಗೊಳಪಡಿಸಿದಂತಿದೆ

          ವಸ್ತ್ರವಿನ್ಯಾಸ (ತನುಜಾ), ವರ್ಣಾಲಂಕಾರ (ರಾಘವೇಂದ್ರ ಪ್ರಸಾದ್) ಹಾಗೂ ರಂಗವಿನ್ಯಾಸ (ಮಂಜುನಾಥ ಬಡಿಗೇರ್) ಗಳು ನಾಟಕಕ್ಕೆ ಶ್ರೀಮಂತಿಕೆಯನ್ನು ತಂದಿವೆ. ರವೀಂದ್ರ ಪೂಜಾರರ ನೆರಳು ಮಿಶ್ರಿತ ಬೆಳಕಿನ ವಿನ್ಯಾಸ ನಾಟಕದ ಹೈಲೈಟ್ ಆಗಿ ಮೂಡಿಬಂದಿದೆ. ನಾಟಕದಲ್ಲಿ ಬಳಸಿದ ಹಾಡುಗಳು ಮತ್ತು ವಚನ ಚಿದಾನಂದ ಕುಲಕರ್ಣಿಯವರ ನಿರ್ದೇಶನದಲ್ಲಿ ತುಂಬಾ ಸೊಗಸಾಗಿ ಮೂಡಿಬಂದಿವೆಯಾದರೂ ರಿಕಾರ್ಡೆಡ್ ಮೂಸಿಕ್ ಆಗಿದ್ದರಿಂದ, ಕಲಾಕ್ಷೇತ್ರದ ಮೈಕ್ ಸಿಸ್ಟಂ ಸರಿಇಲ್ಲದ್ದರಿಂದ, ಹಾಡು ಮತ್ತು ಸಂಗೀತ ಸರಿಯಾಗಿ  ದೃಶ್ಯಗಳಿಗೆ ಹೊಂದಾಣಿಕೆ ಆಗದೇ ಪ್ರತ್ಯೇಕವಾಗಿಯೇ ಉಳಿದಂತಾಯಿತು. ಮೂಡ್ ಹುಟ್ಟಿಸುವಲ್ಲಿ ವಿಫಲವಾಯಿತು. 
      
        ಹಿಂಸೆಯನ್ನು ಅಹಿಂಸೆಯಿಂದ ಶಮನಗೊಳಿಸುವ ತತ್ವಕ್ಕೆ ವಿರುದ್ಧವಾಗಿ ಹಿಂಸೆಯಿಂದಲೇ ಹಿಂಸೆಯನ್ನು ಹೀಲಿಂಗ್ ಮಾಡುವಂತಹ ಪ್ರಯತ್ನದ ವಿಪರ್ಯಾಸಗಳನ್ನು ತೋರಿಸುವ ರಂಗಪ್ರಯೋಗವು ವಿಘ್ನಕೆ ವಿಘ್ನ, ಭಗ್ನಕೆ ಭಗ್ನ ಎನ್ನುವ ಹಿಂಸಾರತಿ ಸಂಸ್ಕೃತಿಯನ್ನು ರಂಗದಂಗಳದಲ್ಲಿ ಲೇವಡಿ ಮಾಡುವಲ್ಲಿ ಯಶಸ್ವಿಯಾಗಿದೆ. ನಿರೂಪಣೆಯಲ್ಲಿ ಸ್ಪಷ್ಟತೆ ತಂದರೆ, ಕೊನೆಯಲ್ಲಿ ವಿದೂಷಕ ಮತ್ತು ಮುಖ್ಯ ನಟ ಯಾರು ಎನ್ನುವ ಅನಗತ್ಯ ವಿವಾದವನ್ನು ಕೈಬಿಟ್ಟಿದ್ದರೆ, ವಿನೋದದ ಮೂಲಕ ವಿಷಾದವನ್ನು ಮೂಡಿಸುವಂತೆ ದೃಶ್ಯಗಳನ್ನು ಕಟ್ಟಿಕೊಟ್ಟಿದ್ದರೆ ನಿಜಕ್ಕೂ ಕನ್ನಡ ರಂಗಭೂಮಿಗೆ ವಿಶಾಕೇ ಒಂದು ಉತ್ತಮ ನಾಟಕವಾಗಿ ದಕ್ಕಬಹುದಾಗಿದೆ. ವಿದ್ವಂಸಕ ಶಾಂತಿ ಕೇಂದ್ರವು ಪ್ರೇಕ್ಷಕರ ಮನಸ್ಥಿತಿಯನ್ನು ದ್ವಂಸಮಾಡದೇ ಅರ್ಥಪೂರ್ಣ ಮನರಂಜನೆಯನ್ನು ಕೊಡಬಹುದಾಗಿದೆ.     

                                                     -ಶಶಿಕಾಂತ ಯಡಹಳ್ಳಿ          
       


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ