ಮಂಗಳವಾರ, ಜನವರಿ 21, 2014

ಹಲವು ಕಲಾಪ್ರಕಾರಗಳ ದೃಶ್ಯವಿಸ್ಮಯ “ಊರುಭಂಗಂ”:




   ಮಹಾಭಾರತ ಎನ್ನುವುದು ಕಥೆ-ಉಪಕಥೆಗಳ ಮಹಾಕಾವ್ಯ. ಮನುಷ್ಯನ ದೌರ್ಬಲ್ಯ, ದುರಹಂಕಾರ, ಅಧಿಕಾರದಾಹ, ತಂತ್ರ-ಕುತಂತ್ರಗಳನ್ನೆಲ್ಲಾ ಮಾರ್ಮಿಕವಾಗಿ ಮಹಾಭಾರತದಲ್ಲಿ ಕಟ್ಟಿಕೊಡಲಾಗಿದೆ. ಮಹಾಭಾರತದ ಕುರುಕ್ಷೇತ್ರ ಯುದ್ಧದ ಕೊನೆಯ ಘಟ್ಟವಾದ ದುರ್ಯೋಧನನ ಪತನವನ್ನು ಹೇಳುತ್ತಾ ಮಹಾಭಾರತದ ಘಟನೆಗಳನ್ನು ಪ್ಲಾಷ್ಬ್ಯಾಕ್ನಲ್ಲಿ ತೋರಿಸುತ್ತಾ ಮಾನವೀಯ ನೆಲೆಯಲ್ಲಿ ಭಾಸಭಟ್ಟನು ಸಂಸ್ಕೃತದಲ್ಲಿ ಊರುಭಂಗ ನಾಟಕವನ್ನು ರಚಿಸಿದ್ದಾನೆ.  ವ್ಯಾಸ ಮತ್ತು ಭಾಸನ ಕೃತಿಗಳನ್ನು ಆಧರಿಸಿ, ಜೊತೆಗೆ ಕವಿ ರವೀಂದ್ರನಾಥ ಟಾಗೋರರ ಕರ್ಣ-ಕುಂತಿ ಸಂವಾದ ಹಾಗೂ ಬುದ್ಧದೇವ ಬೋಸ್ರವರ ಸಂಕ್ರಾಂತಿ ಪ್ರೇರಣೆಯಿಂದ ಊರುಭಂಗಂ ಎನ್ನುವ ಹೆಸರಲ್ಲಿ ಬೆಂಗಾಲಿ ಭಾಷೆಯಲ್ಲಿ ರೂಪಾಂತರಿಸಿದ ಮನಿಷ್ ಮಿತ್ರರವರು ತಮ್ಮದೇ ಆದ ರೀತಿಯಲ್ಲಿ ಕೋಲ್ಕತ್ತಾದ ಕೋಯಿಷ್ಬ ಆರ್ಘ್ಯ ರಂಗತಂಡದ ಕಲಾವಿದರಿಗೆ ನಾಟಕವನ್ನು ನಿರ್ದೇಶಿಸಿದ್ದಾರೆ.

          ರಂಗನಿರಂತರ ರಂಗತಂಡವು ರಜತ ಮಹೋತ್ಸವದ ಅಂಗವಾಗಿ ಸಿಜಿಕೆ ನೆನಪಿನಲ್ಲಿ ಏರ್ಪಡಿಸಲಾಗಿರುವ ಸಿಜಿಕೆ ರಾಷ್ಟ್ರೀಯ ನಾಟಕೋತ್ಸವದಲ್ಲಿ 2014, ಜನವರಿ 14ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡ ಬೆಂಗಾಲಿ ಭಾಷೆಯ ಊರುಭಂಗಂ ರಂಗದಂಗಳದಲ್ಲಿ ದೃಶ್ಯ ವಿಸ್ಮಯಗಳನ್ನು ಸೃಷ್ಟಿಸಿತು.

  ನಾಟಕದ ವಿಶೇಷತೆ ಏನೆಂದರೆ ಭಾರತೀಯ ಭಿನ್ನ ಭಾಷೆಗಳ ಬಹುಸಂಸ್ಕೃತಿಯನ್ನು ನಾಟಕದಲ್ಲಿ ಬಿಂಬಿಸಿರುವುದು. ಛತ್ತೀಸ್ಗಡ್, ಉತ್ತರಪ್ರದೇಶ, ಆಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಕೇರಳ-ಕರ್ನಾಟಕಗಳ ಪಾರಂಪರಿಕ ಸಂಗೀತ ಹಾಗೂ ನೃತ್ಯಾಭಿನಯ ಶೈಲಿಗಳನ್ನು ವಿನೂತನವಾಗಿ ಬಳಸಿ ಹೊಸ ರಂಗಭಾಷೆಯನ್ನು ಹುಟ್ಟುಹಾಕುವ ಒಂದು ಸಾರ್ಥಕ ಪ್ರಯತ್ನ ಊರುಭಂಗಂ ನಾಟಕದಲ್ಲಿ ಮಾಡಲಾಗಿದೆ. ಮಹಾಭಾರತದ ಸ್ಥಿತ್ಯಂತರಗಳನ್ನು ನಾಟಕದುದ್ದಕ್ಕೂ ಪಲ್ಲಟಗೊಳಿಸುತ್ತಾ, ಪೌರಾಣಿಕ ಸಂದರ್ಭಗಳನ್ನು ಬಿಡಿಬಿಡಿಯಾಗಿ ಕಟ್ಟಿಕೊಡುತ್ತಾ ಒಟ್ಟಂದದಲ್ಲಿ ದೃಶ್ಯಕಾವ್ಯವೊಂದನ್ನು ಸೃಷ್ಟಿಸಲಾಗಿದೆ. ಸೌಂದರ್ಯಪ್ರಜ್ಞೆ ಎನ್ನುವುದು ರಂಗಪ್ರಯೋಗದಾದ್ಯಂತ ಪ್ರತಿಫಲನಗೊಂಡಿದೆ. ಒಮ್ಮೆಯಾದರೂ ಇಂತಹ ನಾಟಕವನ್ನು ನೋಡಿ ಸವಿಯಲೇಬೇಕು ಎನ್ನುವಷ್ಟು ನಾಟಕ ಅದ್ಬುತವಾಗಿ ಮೂಡಿಬಂದಿದೆಅರ್ಧ ವಾಚಿಕ ನಿರೂಪನೆ ಇನ್ನರ್ಧ ದೈಹಿಕ ಅಭಿನಯ ಶೈಲಿಯಲ್ಲಿ ಪ್ರದರ್ಶನಗೊಳ್ಳುವ ನಾಟಕವು ಬ್ರೆಕ್ಟನ ಎಫಿಕ್ ಸಿದ್ದಾಂತವನ್ನೊಳಗೊಂಡಿದೆ.


       ಮೂಲದಲ್ಲಿ ಒಂದಲ್ಲಾ ಎರಡಲ್ಲಾ ಒಟ್ಟು ಆರು ಗಂಟೆಯ ನಾಟಕವಿದು. ಆದರೆ.. ಪ್ರಸ್ತುತ ರಂಗಪ್ರಯೋಗದ ಅವಧಿಯನ್ನು ಅರ್ಧದಷ್ಟು ಕಡಿತಗೊಳಿಸಿ ಮೂರು ಗಂಟೆಯಲ್ಲಿ ಇಡೀ ನಾಟಕವನ್ನು ಪ್ರಸ್ತುತಗೊಳಿಸಲಾಯಿತು. ಅರ್ಧದಷ್ಟು ಎಡಿಟ್ ಮಾಡಿದ್ದರಿಂದಲೋ ಏನೋ ನಾಟಕ ಅಪೂರ್ಣವೆನ್ನಿಸಿದ್ದಂತೂ ಸುಳ್ಳಲ್ಲ. ಕೇವಲ ಮಹಾಭಾರತದ ಬಿಡಿಬಿಡಿ ದೃಶ್ಯಗಳನ್ನು ನೋಡಿದಂತೆನಿಸಿತಷ್ಟೇ. ದುಶ್ಯಂತ-ಶಕುಂತಲೆಯರ ಕಂದ ಭರತನಿಂದ ಆರಂಭಗೊಂಡ ಮಹಾಭಾರತ ದುರ್ಯ್ಯೊಧನನ ಪತನದಲ್ಲಿ ಕೊನೆಯಾಗುತ್ತದೆ. ಇಷ್ಟೆಲ್ಲಾ ಖಂಡಕಾವ್ಯಕಥೆಯನ್ನು ನಾಟಕದಲ್ಲಿ ಸಾಂಕೇತಿಕವಾಗಿ ಹೇಳಲಾಗಿದೆ. ಮಹಾಭಾರತ ಸಂಪೂರ್ಣವಾಗಿ ಪ್ರೇಕ್ಷಕರಿಗೆ ದಕ್ಕದೇ ಹೋದರೂ, ಅದರ ಯಾವುದೇ ಒಂದು ಭಾಗವಾದರೂ ಸರಿಯಾಗಿ ಕಟ್ಟಿಕೊಡದೇ ಹೋದರೂ..... ಎಷ್ಟನ್ನು ತೋರಿಸಲಾಗಿದೆಯೋ ಅಷ್ಟೂ ಸಹ ನೋಡುಗರನ್ನು ರೋಮಾಂಚನಗೊಳಿಸಿದ್ದಂತೂ ಸತ್ಯ.

  ನಟರ ಅಭಿನಯ ಸಾಮರ್ಥ್ಯದ ಮೇಲೆಯೇ ಇಡೀ ನಾಟಕವನ್ನು ಕಟ್ಟಲಾಗಿದೆ. ನಟನೆಗೆ ಪೂರಕವಾಗಿ ರಂಗತಂತ್ರಗಳನ್ನು ಬಳಸಲಾಗಿದೆ. ಮೂಲಕ ರಂಗಭೂಮಿ ನಟರ ಮಾಧ್ಯಮ ಎನ್ನುವುದನ್ನೂ ನಾಟಕ ಪ್ರಭಲವಾಗಿ ಸಾಬೀತುಪಡಿಸುತ್ತದೆ. ನಾಟಕದಲ್ಲಿ ಗಮನಾರ್ಹವಾಗಿದ್ದು ನಟರ ದೇಹಭಾಷೆ. ಒಂದೊಂದು ದೃಶ್ಯವನ್ನೂ ಕಲಾವಿದರು ತಮ್ಮ ಅಭಿನಯದ ಮೂಲಕ ಕಟ್ಟಿಕೊಟ್ಟ ರೀತಿ ಅತ್ಯದ್ಬುತ. ದುರ್ಯೋಧನ ಮತ್ತು ಶಕುನಿಯ ಪಗಡೆಯಾಟವನ್ನು ಒಬ್ಬನೇ ನಟ ಏಕವ್ಯಕ್ತಿ ಅಭಿನಯದ ಮೂಲಕ ನಟಿಸಿ ತೋರಿಸಿದ್ದನ್ನು ಶಬ್ದಗಳಲ್ಲಿ ಹೇಳಲಸಾಧ್ಯ. ಅದನ್ನು ನೋಡಿಯೇ ಸವಿಯಬೇಕು. ಒಂದು ರೀತಿಯಲ್ಲಿ ನಾಟಕದ ಕೆಲವು ಪ್ರಮುಖ ದೃಶ್ಯಗಳನ್ನು ಏಕವ್ಯಕ್ತಿಪ್ರಯೋಗದ ಮಾದರಿಯಲ್ಲೇ ತೋರಿಸಲಾಗಿದೆ. ಕಲಾವಿದರ ಅಭಿನಯ ಸಾಮರ್ಥ್ಯವನ್ನು ಸಂಪೂರ್ಣವಾಗಿ ಹೊರಹೊಮ್ಮಿಸಲಾಗಿದೆ. ಕೆಲವೊಮ್ಮೆ ಹೆಣ್ಣು ಪಾತ್ರಗಳನ್ನೂ ಗಡ್ಡ ಮೀಸೆ ಬಿಟ್ಟ ಗಂಡಸರೇ ಸಹಜವೆಂಬಂತೆ ಅಭಿನಯಿಸಿದ್ದಾರೆ. ಆದರೆ ನೋಡುಗರಿಗೆ ಅಲ್ಲಿ ನಟಿಸುತ್ತಿರುವುದು ಗಂಡೋ ಹೆಣ್ಣೋ ಅನ್ನುವುದಕ್ಕಿಂತಲೂ ನಟ ಪಾತ್ರಕ್ಕೆ ನ್ಯಾಯವದಗಿಸುತ್ತಾನಾ ಎನ್ನುವುದು ಪ್ರಮುಖವಾಗುತ್ತದೆ. ನಿಟ್ಟಿನಲ್ಲಿ ನಟರು ಗೆದ್ದಿದ್ದಾರೆ. ನಟರ ಗೆಲುವಿನಲ್ಲಿ ನಿರ್ದೇಶಕನ ಗೆಲುವಿದೆ. ಕೊನೆಯವರೆಗೂ ನಟರು ತಮ್ಮ ಅಭಿನಯ ಮತ್ತು ಸಂಭಾಷಣೆಯಲ್ಲಿ ಎನರ್ಜಿಯನ್ನು ಕಾಪಾಡಿಕೊಂಡುಬಂದಿರುವುದು ಅವರ ನಟನಾ ಸಾಮರ್ಥ್ಯಕ್ಕೆ ಸಾಕ್ಷಿ.
 
     ನಾಟಕದಲ್ಲಿ ಗಂಡು ಹೆಣ್ಣಿನ ಮಿಲನವಿದೆ ಎಲ್ಲೂ ಅಶ್ಲೀಲ ಎನ್ನಿಸುವುದಿಲ್ಲ. ಸುರತದ ಸನ್ನಿವೇಶಗಳಿವೆ ಒಂದಿಷ್ಟೂ ಮುಜಗರ ತರಿಸುವುದಿಲ್ಲ, ಒಂದೊಂದು ಬಾಣಕ್ಕೂ ದ್ರೌಪತಿ ಮಾಲೆಹಾಕಿ ಮದುವೆಯಾಗಿ ಮಿಲನಮಹೋತ್ಸವದಲ್ಲಿ ಸಂಭ್ರಮಿಸುತ್ತಾಳೆ ಎಲ್ಲೂ ಪೋಲಿತನ ಎನ್ನಿಸುವುದಿಲ್ಲ.... ಹೊಡೆದಾಟದ ದೃಶ್ಯಗಳಿವೆ ಕ್ರೌರ್ಯ ಎನ್ನಿಸುವುದಿಲ್ಲ... ಎಲ್ಲಾ ಬಗೆಯ ರಸಗಳಲ್ಲಿ ಅಭಿನಯಿಸಲಾಗಿದೆಯಾದರೂ ಎಲ್ಲೂ ಅತಿರೇಕ ಎನ್ನಿಸುವುದೇ ಇಲ್ಲ. ಅಭಿನಯ ಪ್ರಧಾನ ನಾಟಕ ಮೊದಲು ನೋಡುಗರ ಮನದಾಳಕ್ಕಿಳಿದು ನಂತರ ಮೆದುಳಿನ ಜೊತೆಗೆ ಸಂವಾದಿಸುವಂತೆ ಮೂಡಿಬಂದಿದೆ. ಪ್ರೇಕ್ಷಕರಿಗೆ ನಿಜಕ್ಕೂ ಮೋಡಿಮಾಡಿದೆ. ಇಡೀ ಸಿಜಿಕೆ ರಾಷ್ಟ್ರೀಯ ನಾಟಕೋತ್ಸವದಲ್ಲಿ ಅದ್ಬುತ ಎನ್ನಬಹುದಾದ ನಾಟಕವಿದು


     ಯಾಕೆಂದರೆ ನಾಟಕದ ಹಿಂದೆ ಒಂದಲ್ಲ ಎರಡಲ್ಲ ನಾಲ್ಕೂವರೆ ವರ್ಷದ ಶ್ರಮವಿದೆ. ನಾಟಕದ ನಿರ್ದೇಶಕ ಮನೀಶ್ ಮಿತ್ರರವರು ಕಲಾಪ್ರಕಾರಗಳಿಗಾಗಿ ಭಾರತದಾದ್ಯಂತ ಅಲೆದಾಡಿದ್ದಾರೆ. ಕಲ್ಕತ್ತಾದಿಂದ ಕೇರಳಕ್ಕೆ ಬಂದು ಕಲರಿ ಮತ್ತು ಕೂಡಿಯಾಟಂಗಳ ಶೈಲಿಗಳ ಕುರಿತು ಅಧ್ಯಯನ ಮಾಡಿದ್ದಾರೆ, ಕರ್ನಾಟಕಕ್ಕೆ ಬಂದು 6 ತಿಂಗಳು ಕರಾವಳಿ ಭಾಗದಲ್ಲಿದ್ದು ಯಕ್ಷಗಾನ ಪ್ರಕಾರದಿಂದ ಸಾಕಷ್ಟು ಕಲಿತಿದ್ದಾರೆ. ಸಂಗೀತ ಹಾಗೂ ನೃತ್ಯಪ್ರಕಾರಗಳಿಂದ ಪ್ರಭಾವಿತರಾಗಿದ್ದಾರೆ. ತಾನು ನೋಡಿ ಕಲಿತದ್ದನ್ನು ತನ್ನ ನಟರ ದೇಹಭಾಷೆಗೆ ಒಗ್ಗಿಸಿದ್ದಾರೆ. ಕಲ್ಕತ್ತದಲ್ಲಿ ನಾಟಕದ ಮೊದಲ ಪ್ರದರ್ಶನವಾಗುವ ಮುಂಚೆ ಒಂದೂವರೆ ತಿಂಗಳು ಸತತವಾಗಿ ಹಗಲು ರಾತ್ರಿಯೆನ್ನದೇ ತಾಲಿಂ ಮಾಡಿದ್ದಾರೆ. ಆರು ಗಂಟೆಯ ಅದ್ಬುತ ಅಭಿನಯ-ನೃತ್ಯ-ಸಂಗೀತ ಪ್ರಧಾನ ನಾಟಕವೊಂದನ್ನು ಸಮರ್ಥವಾಗಿ ಸೃಷ್ಟಿಸಿ ತೋರಿಸಿದ್ದಾರೆ. ನಾಟಕದ ತಯಾರಿ ಎಂದರೆ ಹೀಗಿರಬೇಕು. ನಾಟಕದ ಪ್ರಯೋಗವೆಂದರೆ ಇಷ್ಟೊಂದು ಪರಿಶ್ರಮವಿರಬೇಕು ಎನ್ನುವುದಕ್ಕೆ ನಾಟಕದ ನಿರ್ದೇಶಕ ಮಾದರಿಯಾಗಿದ್ದಾರೆ. ನಾಟಕದಾದ್ಯಂತ ಅವರ ಪರಿಶ್ರಮ ಎದ್ದು ಕಾಣುತ್ತದೆ. ಎನ್ಎಸ್ಡಿ ಯಂತಹ ಯಾವುದೇ ಅಕಾಡೆಮಿಕ್ ತರಬೇತಿಯನ್ನು ಪಡೆಯದ ಮನೀಷ್ ಮಿತ್ರ ಕಲಿತದ್ದು ಭೌತಶಾಸ್ತ್ರ. ಆಸಕ್ತಿಯಿಂದ ರಚಿಸಿದ್ದು ನಾಟಕಗಳನ್ನು. ಕಟ್ಟಿದ್ದು ಆರ್ಘ್ಯ ರಂಗತಂಡವನ್ನು. ವೃತ್ತಿಪರರನ್ನೂ ಮೀರಿಸುವಂತೆ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಅಕಾಡೆಮಿಕ್ ತರಬೇತಿ ಇಲ್ಲದ್ದರಿಂದಲೇ ನಟರನ್ನು ಮಾತ್ರ ಬಳಸಿ ಇಂತಹ ದೃಶ್ಯಕಾವ್ಯವನ್ನು ಕಟ್ಟಲು ಮನೀಷ್ ರವರಿಗೆ ಸಾಧ್ಯವಾಯಿತು ಎನ್ನುವ ಮಾತು ಇತ್ತೀಚಿನ ಎನ್ಎಸ್ಡಿ ಪದವೀದರರ ರಂಗತಂತ್ರವೈಭವದ ನಾಟಕಗಳಿಗೆ ಹೋಲಿಸಿ ನೋಡಿದರೆ ಸತ್ಯ ಎನ್ನಿಸುತ್ತದೆ.

    ದೃಶ್ಯಗಳನ್ನು ಮನಮೋಹಕವಾಗಿ ನಿರ್ದೇಕರು ಕಟ್ಟಿಕೊಟ್ಟಿದ್ದಾರಾದರೂ ಕೆಲವೊಂದು ತಾತ್ವಿಕ ಪ್ರಶ್ನೆಗಳನ್ನು ಹುಟ್ಟುವಂತೆ ಮಾಡುತ್ತಾರೆ. ಮಹಾಕಾವ್ಯ ಮಹಾಭಾರತ ಎನ್ನುವುದೇ ಒಂದು ಭಾಷೆ. ಅದು ಕಾಲಕಾಲಕ್ಕೆ ಬೆಳೆಯುತ್ತಾ, ಆಯಾ ಸಮಕಾಲೀನ ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುತ್ತಾ ತನ್ನ ನಿರಂತರತೆಯನ್ನು ಕಾಪಾಡಿಕೊಳ್ಳುತ್ತಾ ಶತಮಾನಗಳಿಂದ ಜೀವಂತವಾಗಿದೆ. ವ್ಯಾಸ ತನ್ನ ಕಾಲದ ಸಾಮಾಜಿಕ ತಲ್ಲಣಗಳಿಗನುಗುಣವಾಗಿ ಮಹಾಭಾರತವನ್ನು ಕಾವ್ಯದಲ್ಲಿ ಕಟ್ಟಿಕೊಟ್ಟರೆ, ಭಾಸ ತನ್ನ ಕಾಲಮಾನಕ್ಕೆ ಮಹಾಭಾರತವನ್ನು ಒಗ್ಗಿಸಿ ನಾಟಕ ರಚಿಸಿದ. ಆದಿಕವಿ ಪಂಪನಿಂದ ನಮ್ಮ ಕುವೆಂಪುರವರವರೆಗೂ ಮಹಾಭಾರತ ಆಯಾ ಕಾಲಘಟ್ಟಕ್ಕೆ ಪೂರಕವಾಗಿ ಪರಿವರ್ತನೆ ಹೊಂದುತ್ತಲೇ ಬಂದಿದೆ. ಆದರೆ.... ಮನೀಷ್ ಮಿತ್ರರವರ ಊರುಭಂಗಂ ನಾಟಕದಲ್ಲಿ ಮಹಾಭಾರತದ ಕೆಲವು ಆಯ್ದ ಸನ್ನಿವೇಶಗಳನ್ನು ದೃಶ್ಯಕಾವ್ಯದಲ್ಲಿ ಮರುಸೃಷ್ಟಿಸಲು ಪ್ರಯತ್ನಿಸಲಾಗಿದೆಯೇ ಹೊರತು ಸಮಕಾಲೀನಗೊಳಿಸುವ ಪ್ರಯತ್ನವನ್ನು ಮಾಡಲಾಗಿಲ್ಲ. ಮಹಾಭಾರತ ಎನ್ನುವ ಪುರಾಣ ಪರಿಕಲ್ಪನೆಗೆ ಹೊಸ ವ್ಯಾಖ್ಯಾನವನ್ನು ಕೊಡಲು ಸಾಧ್ಯವಾಗಿಲ್ಲ. ಇದು ನಾಟಕದ ಮಿತಿಯಾಗಿದೆ.

      ಆದರೆ... ನಾಟಕದ ನಡುವಿನ ವಿರಾಮವೇಳೆಯಲ್ಲಿ ರಂಗವೇದಿಕೆಯ ಆಚೆಗೆ ನಡೆದ ದ್ರೌಪತಿಯ ಕುರಿತಾದ ಪಾಂಡವಾನಿ ಶೈಲಿಯ ಹರಿಕತೆ ಪ್ರಸ್ತಾಪದಲ್ಲಿ ಮಾತ್ರ ಸಮಕಾಲೀನ ಪ್ರಶ್ನೆಗಳನ್ನು ದ್ರೌಪತಿಯ ವಸ್ತ್ರಾಪಹರಣಕ್ಕೆ ರಿಲೇಟ್ ಮಾಡಿದ್ದು ಸ್ವಾಗತಾರ್ಹ ಕ್ರಮ. ದ್ರೌಪತಿಯನ್ನು ನಗ್ನಗೊಳಿಸುವಾಗ ಕೃಷ್ಣ ಬಂದು ವಸ್ತ್ರವನ್ನಿತ್ತು ಮಾನ ಕಾಪಾಡಿದ. ಆದರೆ ಡೆಲ್ಲಿಯಲ್ಲಿ ದಾಮಿನಿಯ ಮೇಲೆ ಅತ್ಯಾಚಾರ ನಡೆದು ಕೊಲೆಮಾಡಲಾದಾಗ ಯಾಕೆ ಕೃಷ್ಣ ಸಹಾಯಕ್ಕೆ ಬರಲಿಲ್ಲ. ಅದೆಷ್ಟೋ ಮಹಿಳೆಯರು ಪ್ರತಿನಿತ್ಯ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಅದ್ಯಾಕೆ ಕೃಷ್ಣ ಬಂದು ಒಬ್ಬರ ಮಾನವನ್ನೂ ಕಾಪಾಡುತ್ತಿಲ್ಲ? ಎಂಬ ಮೂಲಭೂತ ಪ್ರಶ್ನೆಯನ್ನು ಹುಟ್ಟುಹಾಕಿ ಕೃಷ್ಣನ ಅಸ್ತಿತ್ವವನ್ನೇ ಲೇವಡಿ ಮಾಡಲಾಗಿದೆ.  ಜೊತೆಗೆ ಒಂದು ವಿಚಿತ್ರ ವಾದಮಂಡನೆಯನ್ನು ನಾಟಕದಲ್ಲಿ ಮಾಡಲಾಗಿದೆ. ವಯೋವೃದ್ದ ಭೀಷ್ಮ ಬ್ರಹ್ಮಚಾರಿಯಾಗಿದ್ದು ದ್ರೌಪತಿಯ ನಗ್ನ ದೇಹವನ್ನು ನೋಡುವ ಆಸೆಯಿಂದ ವಸ್ತ್ರಾಪಹರಣ ತಡೆಯಲಿಲ್ಲ ಎಂದು ಆರೋಪಿಸಲಾಗಿದೆ. ಇದು ತರ್ಕಾತೀತ ಆರೋಪವೆನಿಸುತ್ತದೆ


    ಭಾಸಕವಿಯ ಊರುಭಂಗ ನಾಟಕಕ್ಕೂ ಹಾಗೂ ಮನೀಷ್ ಮಿತ್ರರವರ ಊರುಭಂಗಂ ಎಂದು ಆರೋಪಿಸಲಾದ ನಾಟಕಕ್ಕೂ ಬಹುತೇಕ ಸಾಮ್ಯತೆಗಳಿಲ್ಲ. ಭಾಸನ ನಾಟಕದಲ್ಲಿ ದುರ್ಯೊಧನನ ಊರುಭಂಗವನ್ನೇ ಪ್ರಧಾನವಾಗಿಟ್ಟುಕೊಂಡು ಮಹಾಭಾರತ ಯದ್ಧವನ್ನು, ಕೃಷ್ಣನ ತಂತ್ರವನ್ನು ಹೇಳಲಾಗಿದೆ. ಆದರೆ ಮನೀಷ್ರವರ ನಾಟಕ ಇಡೀ ಮಹಾಭಾರತವನ್ನೇ ಆರಂಭದಿಂದ ಅಂತ್ಯದವರೆಗೂ ಸಣ್ಣ ಸಣ್ಣ ಕಂತುಗಳ ದೃಶ್ಯಗಳ ಮೂಲಕ ತೋರಿಸಲು ಪ್ರಯತ್ನಿಸಲಾಗಿದೆ. ಹೀಗಾಗಿ ಭಾಸನ ಹೆಸರನ್ನು ಬಳಸಿದ್ದೇ ಅಸಮಂಜಸ, ಜೊತೆಗೆ ಊರುಭಂಗಂ ಹೆಸರೇ ನಾಟಕಕ್ಕೆ ಅತಾರ್ಕಿಕ.

  ಪಾವರ್-ಪಾಲಿಟಿಕ್ಸ್-ಸೆಕ್ಸ ಮತ್ತು ವೈಲನ್ಸಗಳನ್ನು ನಾಟಕದಲ್ಲಿ ಸೊಗಸಾಗಿ ದೃಶ್ಯಗಳ ಮೂಲಕ ತೋರಿಸಲಾಗಿದೆ. ಲವ್-ಲೈಪ್-ಪಾವರ್ ಕುರಿತ ಕಥೆಯೇ ಮಹಾಭಾರತವೆಂದು ಬಿಂಬಿಸಲು ನಾಟಕ ಪ್ರಯತ್ನಿಸುತ್ತದೆ. ಅದರಲ್ಲೂ ಮಹಾಭಾರತದಲ್ಲಿ ಮೌನಕ್ಕೆ ಹಲವು ಅರ್ಥಗಳಿವೆ. ಅದನ್ನೇ ಸೇಪ್ಟಿ ಆಪ್ ಸೈಲೆನ್ಸ ಎನ್ನುವಂತೆ ನಾಟಕ ಆಗಾಗ ನೆನಪಿಸಿಕೊಡುತ್ತದೆ. ಪಗಡೆಯಾಟಕ್ಕೆ ದೃತರಾಷ್ಟ್ರನ ಮೌನ ಒಪ್ಪಿಗೆ, ದ್ರೌಪತಿಯ ವಸ್ತ್ರಾಪಹರಣವಾಗುವಾಗ ಭೀಷ್ಮ ದ್ರೋಣ ದೃತರಾಷ್ಟರಾದಿಯಾಗಿ  ಎಲ್ಲರೂ ಮೌನವಹಿಸಿದ್ದು, ಕರ್ಣನ ಹುಟ್ಟಿನ ರಹಸ್ಯ ಗೊತ್ತಿದ್ದವರೆಲ್ಲಾ ಮೌನವಾಗಿರುವುದು, ಚಕ್ರವ್ಯೂಹದಲ್ಲಿ ಅಭಿಮನ್ಯುವಿನ ಅಂತ್ಯದ ಬಗ್ಗೆ ಗೊತ್ತಿದ್ದರೂ ಕೃಷ್ಣ ಮೌನಕ್ಕೆ ಶರಣಾಗಿದ್ದು..... ಹೀಗೆ ಮಹಾಭಾರತದಾದ್ಯಂತ ಜಾಣ ಮೌನ ಅವರವರ ಹಿತಾಸಕ್ತಿ ಕಾಪಾಡಿಕೊಳ್ಳಲು ಸಂದರ್ಭಾನುಸಾರ ರಕ್ಷಣಾತ್ಮಕವಾಗಿ ಬಳಕೆಯಾಗಿದೆ. ಮೌನವನ್ನೇ ಅಂದರೆ ಸೇಪ್ಟಿ ಆಪ್ ಸೈಲನ್ಸನ್ನು ವಿಡಂಬನಾತ್ಮಕವಾಗಿ ತೋರಿಸುವದನ್ನೇ  ಊರುಭಂಗಂ ನಾಟಕ ತನ್ನ ಮೂಲ ಆಶಯವಾಗಿಸಿಕೊಂಡಿದೆ. ಜೊತೆಗೆ ಆಗಾಗ ಆಂಗ್ಲ ವಾಕ್ಯವನ್ನು ಪಾತ್ರಗಳ ಮೂಲಕ ಹೇಳಿಸುತ್ತಾ ಪ್ರೇಕ್ಷಕರಿಗೆ ಮಹಾಕಾವ್ಯದ ರಕ್ಷಣಾತ್ಮಕ ಮೌನದ ಕುರಿತು ಎಚ್ಚರಿಸುವ ಕೆಲಸವನ್ನು   ನಾಟಕ ಮಾಡುತ್ತದೆ. ವಾಕ್ಯದ ಆಶಯಕ್ಕೆ ಪೂರಕವಾಗಿ ನಾಟಕದಾದ್ಯಂತ ಕೃಷ್ಣನ ಪಾತ್ರವನ್ನು ತೋರಿಸಲಾಗಿದೆ. ಕೃಷ್ಣನು ಮಹಾಭಾರತದ ಮೌನ ಪ್ರೇಕ್ಷಕನಾಗಿ ನೇಪತ್ಯದಲ್ಲಿದ್ದುಕೊಂಡೇ ಎಲ್ಲಾ ಪಾತ್ರಗಳನ್ನು ಆಡಿಸುವಂತೆ ಪಾತ್ರವನ್ನು ಸೃಷ್ಟಿಸುವ ಮೂಲಕ ಶ್ರೀಕ್ಷಷ್ಣನನ್ನು ಮೌನವಾಗಿಯೇ ವಿಡಂಬನೆ ಮಾಡಲಾಗಿದೆ.

     ನಾಟಕದಲ್ಲಿ ಭಾಷಾ ಬಳಕೆಯೂ ಒಂದಿಷ್ಟು ಗೊಂದಲಕಾರಿಯಾಗಿದೆ. ಬೆಂಗಾಲಿ ಭಾಷೆಯ ನಾಟಕದಲ್ಲಿ ಆಗಾಗ ಹಿಂದಿಯನ್ನೂ ಬಳಸಲಾಗಿದೆ. ಇರಲಿ ಬಿಡು ಅದೂ ನಮ್ಮದೇ ದೇಶದ ಭಾಷೆ ಎನ್ನಬಹುದು. ಆದರೆ ಪೌರಾಣಿಕ ನಾಟಕದಲ್ಲಿ ಆಗಾಗ ಆಂಗ್ಲ ಭಾಷೆಯ ವಾಖ್ಯಗಳನ್ನೂ ಸಹ ಬಳಸಿದ್ದು ಆಭಾಸಕಾರಿಯಾಗಿದೆ. ಪ್ರಾತ್ರಗಳ ವೇಷಕ್ಕೂ, ಕಾಲಕ್ಕೂ, ಸನ್ನಿವೇಶಕ್ಕೂ ಹಾಗೂ ಇಂಗ್ಲೀಷ್ ಭಾಷೆಗೂ ಎಲ್ಲೂ ಹೊಂದಾಣಿಕೆ ಆಗಲೇ ಇಲ್ಲ. ಒತ್ತಾಯ ಪೂರ್ವಕವಾಗಿ ಅನ್ಯ ಭಾಷೆಯನ್ನು ಸೇರಿಸಿದಂತಿದೆ.


       ನಾಟಕದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಟ್ಯೂನ್ ಗಳನ್ನೂ ಹಾಗೂ ಕೆಲವು ಹಿಂದಿ ಸಿನೆಮಾ ಟ್ಯೂನ್ ಗಳನ್ನು ಬಳಸಲಾಗಿದೆ. ಇವುಗಳ ಬದಲು ಹೊಸ ಟ್ಯೂನ್ಗಳನ್ನು ಸೃಷ್ಟಿಸಿದ್ದರೆ ಸೊಗಸಿತ್ತು. ನಾಟಕದ ಸೆಟ್ ತುಂಬಾ ಸರಳವಾಗಿದ್ದು ಸಾಂಕೇತಿಕವಾಗಿತ್ತು. ಹಿಂದೆ ಮೇಲಿಂದ ಇಳಿಬಿಟ್ಟ ದೊಡ್ಡದಾದ ತೇಪೆಗಳುಳ್ಳ ಕೌದಿಯಂತಹ ಪರದೆ ಮಹಾಭಾರತದ ಛಿದ್ರತೆಯನ್ನು, ಯುದ್ದಗಳಿಂದ ಗಾಯಗೊಂಡ ದೇಶದ ದುಸ್ತಿತಿಯನ್ನು ಸಾಂಕೇತಿಕವಾಗಿ ಹೇಳುವಂತಿತ್ತು. ಅದು ಬಿಟ್ಟರೆ ಮಧ್ಯಭಾಗದಲ್ಲಿ ಒಂದೆರಡು ಮೆಟ್ಟಲುಗಳಿರುವ ಪ್ಲಾಟ್ಪಾರಂ ಇಷ್ಟೇ ಸೆಟ್. ನಡುವೆ ಎಡಬಲಕ್ಕೆ ಹಾಡು-ಸಂಗೀತದ ಮೇಳದವರು. ಮುಂಭಾಗದಲ್ಲಿ ಆಕ್ಟಿಂಗ್ ಸ್ಪೇಸ್. ಅತ್ಯಂತ ಸರಳ ರಂಗಸಜ್ಜಿಕೆಯಲ್ಲಿ ಅದ್ಬುತ ನಾಟಕವೊಂದನ್ನು ಸೃಷ್ಟಿಸಿದ್ದು ನಿರ್ದೇಶಕರ ಕ್ರಿಯಾಶೀಲತೆಗೆ ಪುರಾವೆಯಾಗಿದೆ. ಆದರೆ ಒಂದೇ ಸಮಸ್ಯೆ ಏನೆಂದರೆ ಆಧುನಿಕ ತಾಂತ್ರಿಕತೆಯ ಉಪಯೋಗದಿಂದಾಗಿ ಕೇಳುಗರು ಆಗಾಗ ಕಿರಿಕಿರಿಯನ್ನನುಭವಿಸಬೇಕಾಯಿತು. ಯಾಕೆಂದರೆ ಮಾಮೂಲು ಮೈಕಿನ ಬದಲು ಆಧುನಿಕ ಕಾಲರ್ ಮೈಕನ್ನು ಎಲ್ಲಾ ಕಲಾವಿದರೂ ಬಳಸಿದ್ದರಿಂದ ಅವರ ಸಂಭಾಷಣೆಯಲ್ಲಿ  ಅನಗತ್ಯ ಏರುಪೇರಾಗಿ ಆಭಾಸಉಂಟಾಯಿತು. ಕೆಲವೊಮ್ಮೆ ನಟರು ಮಾತಾಡಿದರೆ ಕಿರುಚಿದಂತಾಗುತ್ತಿತ್ತು. ಇದರಿಂದಾಗಿ ನಟರ ಭಾವಾಭಿವ್ಯಕ್ತಿ ಸಮರ್ಥವಾಗಿ ಪ್ರೇಕ್ಷಕರಿಗೆ ಮುಟ್ಟುವಲ್ಲಿ ವ್ಯತ್ಯಯವಾಯಿತು.  ಇನ್ನೂ ರೀತಿಯ ಕಾಲರ್ ಮೈಕ್ ಬಳಕೆಯಲ್ಲಿ ನಟರು ತರಬೇತಿ ಪಡೆಯಬೇಕಿತ್ತು. ಚಂದನ್ ದಾಸ್ ರವರ ಬೆಳಕಿನ ವಿನ್ಯಾಸ ಇಡೀ ನಾಟಕದ ಪ್ರತಿ ದೃಶ್ಯಕ್ಕೂ ಅಗತ್ಯ ಮೂಡ್ ಸೃಷ್ಟಿಸಿತು.

    ಬೆಂಗಾಲಿ ಭಾಷೆ ಕನ್ನಡಿಗರಿಗೆ ಏನೇನೂ ಅರ್ಥವಾಗದಿದ್ದರೂ, ಬೆಂಗಾಲಿಗಳ ಭಾಷಾ ಉಚ್ಚಾರಣೆ ಕನ್ನಡದ ಉಚ್ಚಾರಣೆಗಿಂತಲೂ ಕ್ಲಿಷ್ಟ ಹಾಗೂ ಭಿನ್ನವಾಗಿದ್ದರೂ ನಟರ ದೇಹಭಾಷೆಯಿಂದಾಗಿ ನಾಟಕ ಕನ್ನಡದ ಪ್ರೇಕ್ಷಕರಿಗೆ ಸಂಹವನ ಮಾಡುವಲ್ಲಿ ಸಫಲವಾಯಿತು. ಮತ್ತು ಮಹಾಭಾರತದ ಕಥೆ ಬಹುತೇಕ ಪ್ರೇಕ್ಷಕರಿಗೆ ಮೊದಲೆ ಗೊತ್ತಿದ್ದರಿಂದ ನಾಟಕದ ದೃಶ್ಯಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಸುಲಭವೆನಿಸಿತು. ಮಹಾಭಾರತವನ್ನು ಪೀಟರ್ ಬ್ರೂಕ್ ರಂಗದ ಮೇಲೆ ತಂದು ಒಂದು ರೀತಿಯ ಅಚ್ಚರಿಯನ್ನು ಸೃಷ್ಟಿಸಿದರೆ, ಬೆಂಗಾಲಿ ಬಾಬು ಮನೀಷ್ ಮಿತ್ರ ಇನ್ನೊಂದು ರೀತಿಯಲ್ಲಿ ಮಹಾಭಾರತವನ್ನು ರಂಗದಂಗಳದಲ್ಲಿ  ಸೃಷ್ಟಿಸಿ ವಿಸ್ಮಯವನ್ನು ಹುಟ್ಟ್ಟಿಸಿದರು


   ತಾವು ಮಾಡಿದ್ದೇ ಶ್ರೇಷ್ಠ ಎನ್ನುವ ಕೆಲವು ಕನ್ನಡದ ಅಕಾಡೆಮಿಕ್ ರಂಗನಿರ್ದೇಶಕರು ನಾಟಕದಿಂದ ಕಲಿಯಬೇಕಾದದ್ದು ಬಹಳವಿದೆ. ನಿರ್ದೇಶಕನ ಪೂರ್ವಭಾವಿ ಪರಿಶ್ರಮ, ನಟರ ದೇಹಭಾಷೆಯನ್ನು ಸಮರ್ಥವಾಗಿ ಬಳಸಿಕೊಳ್ಳುವ ರೀತಿ, ನೃತ್ಯ-ಸಂಗೀತಗಳ ಸಶಕ್ತವಾಗಿ ಅಳವಡಿಸುವ ಕ್ರಮ, ಸರಳ ರಂಗತಂತ್ರಗಳನ್ನು ಬಳಸಿ ಅದ್ಬುತವಾಗಿ ದೃಶ್ಯಗಳನ್ನು ಕಟ್ಟುವ ಪರಿ..... ಸಿದ್ದ ಪಠ್ಯವನ್ನು ವಿಭಿನ್ನವಾಗಿ ವ್ಯಾಖ್ಯಾನಿಸುವ ಬಗೆ..... ಇವುಗಳ ಕುರಿತು ನಾಟಕದಿಂದ ಪಾಠ ಕಲಿಯಬೇಕಿದೆ. ಬಹಳ ಪ್ರಮುಖವಾಗಿ ವ್ಯಾಪಾರಿ ವೃತ್ತಿ ಮನೋಭಾವನೆಯನ್ನು ಬದಿಗಿಟ್ಟು ವೃತ್ತಿಪರತೆಯನ್ನು ರೂಢಿಸಿಕೊಳ್ಳಬೇಕಾಗಿದೆ. ಬೆಂಗಾಲಿ ಬಾಬುಗಳನ್ನು ಮೀರಿಸುವಂತಹ ನಾಟಕಗಳು ಕನ್ನಡದಲ್ಲಿ ಬರಬೇಕಿವೆ. ಹಾಗೆಯೇ ಊರುಭಂಗಂ ನಾಟಕ ನೋಡಿ ಕನ್ನಡದ ಅಭಿನಯ ಕಲಾವಿದರು ಕಲಿಯುವುದು ತುಂಬಾ ಇದೆ. ನಾಟಕದ ನಟರ ಶ್ರದ್ದೆ, ಸಾಮರ್ಥ್ಯ, ತದಾತ್ಮಕತೆ, ದೇಹಭಾಷೆಯ ಬಳಕೆಗಳು ನಮ್ಮ ನಟರಿಗೆ ಮಾದರಿಯಾಗಿವೆ. ನಾಟಕ ನೋಡಲು ಸಾಧ್ಯವಾಗಿದ್ದವರು ಅದರ ಡಿವಿಡಿಯನ್ನಾದರೂ ನೋಡಿ ನಟನೆಯ ಪಾಠಗಳನ್ನು ಕಲಿಯುವುದುತ್ತಮ.
   
ಮನಿಷ್ ಮಿತ್ರ
    ಒಟ್ಟಾರೆಯಾಗಿ ಕೆಲವು ತಾತ್ವಿಕ ಭಿನ್ನಾಭಿಪ್ರಾಯಗಳು, ಹಾಗೂ ಕಾಲರ್ ಮೈಕ್ನಂತಹ ತಾಂತ್ರಿಕ ಸಮಸ್ಯೆಯನ್ನು ಬದಿಗಿಟ್ಟು ನೋಡಿದರೆ ಇಡೀ ಊರುಭಂಗಂ ನಾಟಕ ನಿಜಕ್ಕೂ ಅದ್ಬುತ ನಾಟಕವಾಗಿದೆ. ಹಲವಾರು ಕಲಾಪ್ರಕಾರಗಳನ್ನು ಬಳಸಿ ನಿರ್ಮಿಸಿದ ಒಂದು ಕಲಾಕೃತಿಯಾಗಿದೆ. ಇಂತಹ ನಾಟಕವೊಂದನ್ನು ಬೆಂಗಳೂರಿಗೆ ಕರೆತಂದು ತೋರಿಸಿದ್ದಕ್ಕೆ ಸಿಜಿಕೆ ರಾಷ್ಟ್ರೀಯ ರಂಗೋತ್ಸವದ ನಿರ್ದೇಶಕ ಸಿ.ಬಸವಲಿಂಗಯ್ಯನವರು ಅಭಿನಂದನಾರ್ಹರು. ರಂಗನಿರಂತರಕ್ಕೆ ನೂರು ನಮನಗಳು. 




                                      -ಶಶಿಕಾಂತ ಯಡಹಳ್ಳಿ

  
         


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ