ಭಾನುವಾರ, ಜನವರಿ 12, 2014

ಸಿಜಿಕೆ ರಾಷ್ಟ್ರೀಯ ನಾಟಕೋತ್ಸವ “ರಂಗ ಬೆಳದಿಂಗಳು”

  

      ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ, ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ಪೂರ್ವತಯಾರಿಯೊಂದಿಗೆ ಅಚ್ಚುಕಟ್ಟಾಗಿ ರಾಷ್ಟ್ರೀಯ ನಾಟಕೋತ್ಸವವೊಂದನ್ನು  ಆಯೋಜಿಸಿದ ಹವ್ಯಾಸಿ ರಂಗತಂಡ ಬೇರೊಂದು ಇರಲಿಕ್ಕಿಲ್ಲ. ರಂಗನಿರಂತರ ಅಂತಹ ಕೆಲಸವನ್ನು ಅತ್ಯಂತ ಶ್ರದ್ದೆಯಿಂದ, ಶಿಸ್ತಿನಿಂದ ಮಾಡಿದೆ. ನಿಜಕ್ಕೂ ಇದು ಮಾದರಿ ಕೆಲಸವಾಗಿದೆ.

      2014, ಸಿಜಿಕೆ ಕಟ್ಟಿ ಬೆಳೆಸಿದ ರಂಗನಿರಂತರ ತಂಡದ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ವರ್ಷ. ಸಮುದಾಯ ಸಂಘಟನೆಯಿಂದ ಹೊರಬಂದ ನಂತರ ಸಿಜಿ ಕೃಷ್ಣಸ್ವಾಮಿಯವರು ಇಪ್ಪತೈದು ವರ್ಷಗಳ ಹಿಂದೆ ಕಟ್ಟಿದ ರಂಗತಂಡ ರಂಗನಿರಂತರ. ಸಿಜಿಕೆ ಕೇವಲ ಎಲ್ಲರ ಹಾಗೆ ರಂಗತಂಡವೊಂದನ್ನು ಕಟ್ಟಿ ಕೆಲವು ನಾಟಕ ಪ್ರದರ್ಶನಕ್ಕೆ ಮಾತ್ರ ಮೀಸಲಾಗದೇ ತಂಡದ ಜೊತೆಗೆ ಹಲವಾರು ರಂಗ ಕಲಾವಿದರನ್ನು, ರಂಗ ತಂತ್ರಜ್ಞರನ್ನು ಜೊತೆಜೊತೆಗೆ ಬೆಳೆಸಿದರು. ಹಾಗೆ ಸಿಜಿಕೆ ಗರಡಿಯಲ್ಲಿ ಬೆಳೆದ ರಂಗಕರ್ಮಿ-ಕಲಾವಿದರೆಲ್ಲ್ಲಾ ಸೇರಿ ಸಿಜಿಕೆಯವರ ದೈಹಿಕ ಅನುಪಸ್ಥಿತಿಯಲ್ಲಿ ತುಂಬಾ ವ್ಯವಸ್ಥಿತವಾಗಿ ರಂಗ ಬೆಳದಿಂಗಳು ಎನ್ನುವ ಹೆಸರಲ್ಲಿ ರಾಷ್ಟ್ರೀಯ ನಾಟಕೋತ್ಸವವೊಂದನ್ನು ಆಯೋಜಿಸಿದ್ದಾರೆ. 2014, ಜನವರಿ 11 ರಿಂದ 17ರವರೆಗಿನ ಒಂದು ವಾರಗಳ ಕಾಲ ಮಹತ್ವಾಂಕಾಂಕ್ಷಿ ನಾಟಕೋತ್ಸವ ನಡೆಯುತ್ತಿದ್ದು ದೇಶದ ಐದು ಭಾಷೆಗಳ ಐದು ನಾಟಕಗಳು ಪ್ರದರ್ಶನಗೊಳ್ಳುತ್ತಿವೆ. ಜೊತೆಗೆ ಏಕವ್ಯಕ್ತಿ ಪ್ರದರ್ಶನ, ಸೂಫಿ ಗಾಯನ, ಪ್ರತಿದಿನ ಜಾನಪದ ಕಲಾಪ್ರದರ್ಶನ.... ದಿನವೂ ಪ್ರದರ್ಶನಗೊಂಡ ನಾಟಕಗಳ ಕುರಿತು ಸಂವಾದ.... ಹೀಗೆ ಹತ್ತು ಹಲವು ಮಾದರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶಶಿಧರ್ ಅಡಪರವರ ಮಾರ್ಗದರ್ಶನದಲ್ಲಿ ಸಾಂಸ್ಕೃತಿಕ ಸಂಭ್ರಮದ ವಾತಾವರಣವನ್ನೇ ನಿರ್ಮಿಸಲಾಗಿದೆ. 

          ಕಳೆದ ಮೂರು ತಿಂಗಳಿಂದ ಐವತ್ತಕ್ಕೂ ಹೆಚ್ಚು ಯುವರಂಗಕರ್ಮಿಗಳು ತಮ್ಮೆಲ್ಲಾ ವ್ಯಯಕ್ತಿಕ ಕೆಲಸಗಳನ್ನು ಬದಿಗಿಟ್ಟು ನಾಟಕೋತ್ಸವದ ಪೂರ್ವ ತಯಾರಿಗೆ ಶ್ರಮಿಸಿದ್ದಾರೆ. ಸಹಸ್ರಾರು ರಂಗಕರ್ಮಿ/ರಂಗಪ್ರೇಕ್ಷಕರ ವಿಳಾಸಗಳನ್ನು ಕಲೆಹಾಕಿದ್ದಾರೆ, ಅವರಿಗೆಲ್ಲಾ ರಂಗೋತ್ಸವ ಕುರಿತು ಮಾಹಿತಿ-ಆಹ್ವಾನ ಪತ್ರಿಕೆಗಳನ್ನು ತಲುಪಿಸಿದ್ದಾರೆ. ಪ್ರೇಕ್ಷಕರ ಕೊರತೆಯಿಂದ ಎಲ್ಲಾ ನಮೂನಿಯ ನಾಟಕೋತ್ಸವಗಳೂ ವಿಫಲವಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಪ್ರೇಕ್ಷಕರನ್ನು ಮತ್ತೆ ಕಲಾಕ್ಷೇತ್ರದತ್ತ ಕರೆತರುವ ಪ್ರಯತ್ನ ಅಭಿನಂದನೀಯವಾಗಿದೆ. 

          ಇಡೀ ನಾಟಕೋತ್ಸವ ಯಶಸ್ವಿಯಾಲೇಬೇಕಿದೆ. ಅಪರೂಪದ ನಾಟಕಗಳು ಹೆಚ್ಚೆಚ್ಚು ಪ್ರೇಕ್ಷಕರನ್ನು ತಲುಪಬೇಕಾಗಿದೆ. ಸಿಜಿಕೆ ಕನಸಿನ ರಂಗಭೂಮಿ ಊರ್ಧ್ವಮುಖಿಯಾಗಿ ಉನ್ನತಿಪಡೆಯಬೇಕಿದೆ. 

                                 -ಶಶಿಕಾಂತ ಯಡಹಳ್ಳಿ 


 
               



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ