ಮಂಗಳವಾರ, ಜನವರಿ 7, 2014

“ತದ್ರೂಪಿ”ಯ ಹಾಸ್ಯದಲ್ಲಿ ಮರೆಯಾದ ಆಶಯ



       

    
        ಸರ್ವಾಧಿಕಾರಿಯ ಹಲವು ಆಯಾಮಗಳನ್ನು ವಿಡಂಬಣಾತ್ಮಕವಾಗಿ ಹೇಳುವ ಪ್ರಯತ್ನವೇ ತದ್ರೂಪಿ ನಾಟಕ. ಪ್ರಸನ್ನನವರು ರಚಿಸಿದ ನಾಟಕವನ್ನು ಜೊಸೆಪ್ರವರು ಸಂಚಯ; ತಂಡದ ಕಲಾವಿದರಿಗೆ ನಿರ್ದೇಶಿಸಿದ್ದಾರೆ. ರವೀಂದ್ರ ಕಲಾಕ್ಷೇತ್ರ-50 ಸುವರ್ಣ ಸಂಭ್ರಮದಲ್ಲಿ ನಾಟಕ ಬೆಂಗಳೂರು ಆಯೋಜಿಸಿದ ಎರಡನೇ ಕಂತಿನ ನಾಟಕೋತ್ಸವದಲ್ಲಿ 2014, ಜನವರಿ 7 ರಂದು ತದ್ರೂಪಿ ನಾಟಕವು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡಿತು.

      ನಾಟಕದ ಸಂಕ್ಷಿಪ್ತ ಕಥೆ ಹೀಗಿದೆ. ಆತ ಬೊಪಟ್ರಾಜ. ಯಾವುದೋ ಒಂದು ದೇಶದ ಸರ್ವಾಧಿಕಾರಿ ಜನರಲ್. ತಾನು ಸರ್ವಶಕ್ತ ಎಂದು ತೋರಲು ಎಲ್ಲಾ ತಂತ್ರಗಳನ್ನು ಬಳಸುತ್ತಾನೆ. ಆತನ ಜನವಿರೋಧಿತನಕ್ಕೆ ಬೇಸತ್ತವರು ಆತನನ್ನು ಹತ್ಯೆ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಲೇ ಇರುತ್ತಾರೆ. ಎಲ್ಲ ಪಿತೂರಿಗಳನ್ನು ತನ್ನ ಚಾಣಾಕ್ಷತನದಿಂದ ಹುಸಿಗೊಳಿಸುವ ಬೊಪಟ್ ತನ್ನ ವಿಕ್ಷಪ್ತತೆಯಿಂದಾಗಿ ಹೆಸರುವಾಸಿಯಾಗುತ್ತಾನೆ. ಬೋಪಟ್ನಂತೆಯೇ ಇರುವ ತದ್ರೂಪಿ ಎನ್ನುವ ಹಜಾಮನನ್ನು ಬಳಸಿಕೊಂಡ ದುಷ್ಟ ಗುಂಪೊಂದು ಅಮಾಯಕ ತದ್ರೂಪಿಗೆ ಜನರಲ್ ವೇಷ ತೊಡಿಸಿ ಹಣ ವಸೂಲಿ ಮಾಡುತ್ತಿರುತ್ತದೆ. ಇದು ಗೊತ್ತಾದ ಬೊಪಟ್ ತನ್ನ ಕರ್ನಲ್ನನ್ನು ಕಳುಹಿಸಿ ತದ್ರೂಪಿಯನ್ನು ಬಂಧಿಸಿ ಕರೆತರಿಸುತ್ತಾನೆ. ಯಾರು ತನ್ನನ್ನು ಕೊಲ್ಲಲು ಪಿತೂರಿ ಮಾಡಿದ್ದಾರೆಂದು ತಿಳಿಯಲು ಸಭೆಯೊಂದಕ್ಕೆ ತನ್ನ ಬದಲಾಗಿ ತದ್ರೂಪಿಯನ್ನು ಕಳುಹಿಸುತ್ತಾನೆ. ಜನರಲ್ ಎಂದು ತಿಳಿದು ಪಿತೂರಿಗಾರರು ತದ್ರೂಪಿಯನ್ನು ಕೊಲ್ಲುತ್ತಾರೆ. ರಾಜರಕ್ಷಣೆ ಇಂತಹ ಬಲಿ ಕೇಳುತ್ತದೆ ಎನ್ನುವ ಮಾತಿನೊಂದಿಗೆ ನಾಟಕ ಕೊನೆಯಾಗುತ್ತದೆ. 
 
         ಕಾಲ-ದೇಶ-ಭಾಷೆಗಳನ್ನು ಮೀರಿ ಸರ್ವಾಧಿಕಾರ ಎನ್ನುವುದು ಯಾವುಯಾವುದೋ ರೂಪದಲ್ಲಿ ವ್ಯವಸ್ಥೆಯನ್ನು ನಿಯಂತ್ರಿಸುತ್ತಿರುತ್ತದೆ. ತಂತ್ರ-ಕುತಂತ್ರಗಳ ಮೂಲಕ ಜನರನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಳ್ಳುವ ಸರ್ವಾಧಿಕಾರಿ ಪ್ರಶ್ನಿಸಿದವರನ್ನು ಶಿಕ್ಷೆಗೊಳಪಡಿಸುತ್ತಲೇ ತನ್ನ ದುರಾಡಳಿತವನ್ನು ಖಾಯಂಮಾಡಿಕೊಳ್ಳಲು ಹವಣಿಸುತ್ತಾನೆ. ಅದು ರಾಜಪ್ರಭುತ್ವವಾಗಿರಲಿ, ಸರ್ವಾಧಿಕಾರ ವ್ಯವಸ್ಥೆಯೇ ಆಗಿರಲಿ ಅಥವಾ ನಮ್ಮ ಬಂಡವಾಳಶಾಹಿ ಪ್ರಜಾಪ್ರಭುತ್ವವೇ ಆಗಿರಲಿ.... ಅಧಿಕಾರದಾಹ ಎನ್ನುವುದು ಜನಪರ ಎಂದು ತೋರಿಸಿಕೊಳ್ಳುತ್ತಲೇ ಜನವಿರೋಧಿತನವನ್ನು ರೂಢಿಸಿಕೊಂಡಿರುತ್ತದೆ ಹಾಗೂ ತನ್ನ ದುರುಳತನದಿಂದಾಗಿ ಆಂತರಿಕವಾಗಿ ಕುಸಿಯುತ್ತಿರುತ್ತದೆ. ಇಂತಹ ಆಳುವ ವ್ಯವಸ್ಥೆಗಳ ಆಂತರ್ಯವನ್ನು ಹಾಗೂ ಅತಿರೇಕಗಳನ್ನು ಲೇವಡಿ ಮಾಡುವಲ್ಲಿ ತದ್ರೂಪಿ ನಾಟಕ ಯಶಸ್ವಿಯಾಗಿದೆ.

        ಪ್ರಸನ್ನರವರು ಗಂಭೀರ ವಸ್ತುವೊಂದನ್ನು ಇಟ್ಟುಕೊಂಡು ನವೀರಾದ ವ್ಯಂಗ್ಯದ ಮೂಲಕ ಇಡೀ ಸರ್ವಾಧಿಕಾರಿ ವ್ಯವಸ್ಥೆಯನ್ನು ನಾಟಕದಲ್ಲಿ ವಿಶ್ಲೇಷಿಸಿದ್ದಾರೆ. ಆದರೆ ಜೊಸೆಪ್ರವರು ನಾಟಕದೊಳಗಿನ ಗಂಭಿರತೆಯನ್ನು ಮತ್ತು ನಾಟಕ ಹುಟ್ಟಿಸುವ ವಿಷಾದವನ್ನು ಪಕ್ಕಕ್ಕಿಟ್ಟು ಕೇವಲ ವ್ಯಂಗ್ಯವನ್ನು ಮಾತ್ರ ಹೆಕ್ಕಿ ತೆಗೆದು ಅದಕ್ಕಿನ್ನೊಂದಿಷ್ಟು ಹಾಸ್ಯರಸಾಯಣವನ್ನು ಸೇರಿಸಿ ಪ್ರಸನ್ನನವರ ಆಶಯಕ್ಕೆ ಹಿನ್ನಡೆಯನ್ನುಂಟುಮಾಡಿದ್ದಾರೆ ಎಂದು ಪ್ರೇಕ್ಷಕರಿಗೆ ಅನ್ನಿಸದೇ ಇರದು


          ನಾಟಕವನ್ನು ನೋಡಿದವರಿಗೆ ಚಾರ್ಲಿ ಚಾಪ್ಲಿನ್ರವರ ದಿ ಗ್ರೇಟ್ ಡಿಕ್ಟೇಟರ್ ಸಿನೆಮಾ ನೆನಪಾಗದೇ ಇರುವುದಿಲ್ಲ. ಹಿಟ್ಲರನ ವಿಕ್ಷಿಪ್ತತೆ ಮತ್ತು ಕ್ರೌರ್ಯವನ್ನು ಹಾಸ್ಯದ ಮೂಲಕ ತೋರಿಸುವ ಅನನ್ಯ ಪ್ರಯತ್ನ ಸಿನೆಮಾದಲ್ಲಿದೆ. ಸಿನೆಮಾವನ್ನೇ ಬಹುತೇಕ ಹೋಲುವ ತದ್ರೂಪಿ ನಾಟಕ ಅದ್ಯಾಕೋ ನೋಡುಗರ ಮನಸ್ಸನ್ನು ಆವರಿಸಿಕೊಳ್ಳಲಿಲ್ಲ. ಕೇವಲ ಮನರಂಜನೆಯನ್ನು ಬಯಸುವವರಿಗೆ ನಿರಾಶೆಯನ್ನುಂಟು ಮಾಡುವುದಿಲ್ಲ.

      ಗಂಡು ಹೆಣ್ಣುಗಳನ್ನು ಜೈಲಿನ ಒಂದೇ ಕೊಠಡಿಯಲ್ಲಿ ಬಂಧಿಸಿರುವುದನ್ನು,  ಸರ್ವಾಧಿಕಾರಿಯ ಜನತಾದರ್ಶನದಲ್ಲಿ ಕ್ರೂರ ರಾಜನಿಗೆ ಜೋರುಮಾಡುವಂತಹ ಪ್ರಜೆಯನ್ನು, ರಾಜನನ್ನು ಕೊಲೆಮಾಡುವ ಸನ್ನಿವೇಶದ ಅಸಂಗತ ನಾಟಕೀಯತೆಯನ್ನು, ವಿಚಿತ್ರವಾಗಿ ತಮಿಳಿನಲ್ಲಿ ಮಾತಾಡುವ ಸೈನ್ಯಾಧಿಕಾರಿಯೊಬ್ಬ ಸಿಕ್ಕ ರಾಜದ್ರೋಹಿಗಳನ್ನು ಹಣಸಮೇತ ಹೋಗಲು ಬಿಟ್ಟಿದ್ದನ್ನು.....  ನಾಟಕದಲ್ಲಿ ಮಾತ್ರ ನೋಡಲು ಸಾಧ್ಯ. ಇದೆಲ್ಲಾ ಕೇವಲ ಹಾಸ್ಯಕ್ಕಾಗಿ ಎನ್ನಬಹುದಾದರೂ ನಂಬಲು ಅಸಾಧ್ಯ.

          ಎಲ್ಲೂ ಯಾವೊಂದು ದೃಶ್ಯವೂ ತರ್ಕಕ್ಕೆ ಪೂರಕವಾಗಿಲ್ಲ. ಇಡೀ ನಾಟಕವನ್ನು ಸಿನಮೀಯಗೊಳಿಸಲಾಗಿದೆ. ಆಗಾಗ ಸಿನೆಮಾ ಹಾಡುಗಳ ಬಳಕೆ,  ಸಿನೆಮಾ ನಟ ಸಾಯಿಕುಮಾರನನ್ನು ನಕಲು ಮಾಡುವ ಕರ್ನಲ್ ಪಾತ್ರ, ಸಿನಮೀಯ ಸನ್ನಿವೇಶಗಳ ಸೃಷ್ಟಿ..... ಹೆಚ್ಚು ಕಡಿಮೆ ರಂಗದಂಗಳದಲ್ಲಿ ಹಾಸ್ಯ ಸಿನೆಮಾ ಒಂದನ್ನು ನೋಡಿದ ಅನುಭವ ಕಟ್ಟಿಕೊಡುವಲ್ಲಿ ತದ್ರೂಪಿ ನಾಟಕ ಸಫಲವಾಗಿದೆ.

    ಯಾವ ನಾಟಕ ಸರ್ವಾಧಿಕಾರಿಯ ಕ್ರೌರ್ಯ ಮತ್ತು  ಜನವಿರೋಧಿತನವನ್ನು ವಿಡಂಬಣೆಯ ಮೂಲಕ ತೋರಿಸಬೇಕಾಗಿತ್ತೋ, ಅದರ ಬದಲು ಆತನ ಎಡಬಿಡಂಗಿತನವನ್ನು ಮಾತ್ರ ಹೈಲೈಟ್ ಮಾಡಿ ಇದ್ದರೆ ಇಂತಹ ಸರ್ವಾಧಿಕಾರಿ ಇರಬೇಕು ಎನ್ನುವಂತೆ ನಿರೂಪಿಸಲಾಗಿದೆ. ಯಾಕೆಂದರೆ ಲೇವಡಿ ಮಾಡುವ ಹಪಾಹಪಿಗೆ ಬಿದ್ದ ನಿರ್ದೇಶಕರು ಎಲ್ಲವನ್ನೂ ಇಲ್ಲಿ ಹಾಸ್ಯದ ದೃಷ್ಟಿಕೋನದಿಂದಲೇ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಇಲ್ಲಿ ಎಲ್ಲಾ ಪತ್ರಕರ್ತರನ್ನು ಭ್ರಷ್ಟರು ಎಂದು ತೋರಿಸಲಾಗಿದೆ. ಇದ್ದರೂ ಇರಬಹುದೆಂದುಕೊಂಡರೂ ಸರ್ವಾಧಿಕಾರವನ್ನು ತೊಲಗಿಸಿ ಸ್ವಾತಂತ್ರ್ಯವನ್ನು ಪಡೆಯಲು ಬಯಸುವ ಕ್ರಾಂತಿಕಾರಿಗಳನ್ನೂ ಸಹ ಲೇವಡಿಮಾಡುವ ಮೂಲಕ ಪ್ರತಿರೋಧವನ್ನು ಅಪಹಾಸ್ಯಮಾಡಲಾಗಿದೆ. ಸರ್ವಾಧಿಕಾರಿಗಿರುವ ತಾಯಿ ಸೆಂಟಿಮೆಂಟನ್ನು ತೋರಿಸುತ್ತಲೇ ಆತನ ಮೇಲೆ ನೋಡುಗರ ಸಿಂಪಥಿ ಸಿಗುವ ಹಾಗೆ ಮಾಡಲಾಗಿದೆ. ಕೊನೆಗೂ ದುಷ್ಟ ಶಕ್ತಿಗೇ ವಿಜಯವಾಗುತ್ತದೆ. ಸರ್ವಾಧಿಕಾರಿಯೇ ಗೆಲ್ಲುತ್ತಾನೆ. ಒಟ್ಟಾರೆಯಾಗಿ ನಾಟಕದ ಉದ್ದೇಶವಾದರು ಏನು? ಸಮಾಜಕ್ಕೆ ಏನನ್ನು ಹೇಳುತ್ತದೆ? ನಿರ್ದೇಶಕರಿಗೆ ಸ್ಪಷ್ಟತೆ ಇಲ್ಲದಂತಾಗಿದೆ. ಹಾಸ್ಯವನ್ನು ಹೊರತು ಪಡಿಸಿ ಅವರಿಗೆ ನಾಟಕದ ಬೇರೆ ಆಯಾಮಗಳು ಅರ್ಥವಾಗಿಯೇ ಇಲ್ಲವೆನಿಸುತ್ತದೆ



     ನಿರ್ದೇಶಕರ ಚಿತ್ತ ಬಂದತ್ತ ಸಾಗುವ ನಾಟಕದಲ್ಲಿ ಕೆಲವೊಂದು ಅತಿರೇಕವೆನಿಸುವ ಸಂಕೇತಗಳನ್ನು ಬಳಸಲಾಗಿದೆ. ಒಂದಿಷ್ಟು ಅಶ್ಲೀಲ ಎನ್ನಿಸಿದರೂ ಸಂಪ್ರದಾಯವಾದಿಗಳು ಸಹಿಸಿಕೊಳ್ಳಲೇ ಬೇಕು. ಅಸಂಪ್ರದಾಯವಾದಿಗಳು ಮೂಗು ಮುಚ್ಚಿಕೊಳ್ಳಲೇ ಬೇಕು. ಇಲ್ಲಿ ಸರ್ವಾಧಿಕಾರಿ ಸಿಂಹಾಸನದ ಬದಲು ಟಾಯ್ಲೆಟ್ ಕಮೋಡನ್ನು ಬಳಸಲಾಗಿದೆ. ಅದರಿಂದ ಬರುವ ವಾಸನೆಯನ್ನು ಸಹನಟನ ಮೂಲಕ ತೋರಿಸಲಾಗಿದೆ. ಸರ್ವಾಧಿಕಾರ ಎನ್ನುವುದು ಎಷ್ಟು ಹೊಲಸೆದ್ದು ಹೋಗಿದೆ ಎನ್ನುವುದನ್ನು ತೋರಲು ರೂಪಕವಾಗಿ ಕಮೋಡ್ ಬಳಸಲಾಗಿದೆಯಾದರೂ ಅದು ಯಾಕೋ ಒಂದಿಷ್ಟು ಅತಿರೇಕವಾಗಿದೆ. ಯಾಕೆಂದರೆ ಹೊಲಸು ನಾರುತ್ತಿರುವುದು ಕೂಡುವ ಖುರ್ಚಿಯಲ್ಲ ಅದು ಕೂಡುವವನ ಮನಸ್ಥಿತಿ ಎನ್ನುವುದು ಸತ್ಯ. ಹಾಗೆಯೇ ಹೂಸು ಎನ್ನುವುದು ನಾಟಕದಲ್ಲಿ ಹಲವು ಬಾರಿ ಬಳಸಲಾಗಿದೆ. ಅದಕ್ಕೆ ಸೌಂಡ್ ಎಫೆಕ್ಟನ್ನೂ ಕೊಡಲಾಗಿದೆ. ಕೇವಲ ನಗಿಸುವುದಕ್ಕಾಗಿಯೇ ಇಂತಹ ಚೀಪ್ ಗಿಮಿಕ್ ಬೇಕಾಗಿತ್ತಾ? ಎನ್ನುವ ಪ್ರಶ್ನೆ ವಿಚಾರವಂತರಲ್ಲಿ ಹುಟ್ಟುತ್ತದೆ. ಸೂ....ಮಗ ಎನ್ನುವ ಬೈಗಳೂ ಆಗಾಗ ಸಲೀಸಾಗಿ ಪಾತ್ರಗಳ ಬಾಯಲ್ಲಿ ಬರುತ್ತದೆ. ಇದೊಂದು ರೀತಿಯಲ್ಲಿ ಟಾಯ್ಲೆಟ್ ನಾಟಕ ಎಂದು ಒಂದೆಳೆ ವಿಮರ್ಶೆಯನ್ನು ಹಿರಿಯ ಪ್ರೇಕ್ಷಕರೊಬ್ಬರು ನಾಟಕದ ನಂತರ ಹೇಳಿದ್ದರಲ್ಲಿ ಒಂದಿಷ್ಟು ಸತ್ಯ ಇದೆ ಎನ್ನಿಸುತ್ತದೆ. ಇಡೀ ನಾಟಕಕ್ಕೆ ಮಾತನ್ನು ಅನ್ವಯಿಸುವುದು ತಪ್ಪಾಗುತ್ತದೆ. ಕೇವಲ ಕಮೋಡ್ ಮತ್ತು ಗ್ಯಾಸ್ ಸಂಬಂಧಿತ ಅನಗತ್ಯ ದೃಶ್ಯಗಳಿಗೆ ಮಾತ್ರ ಮಾತು ಅನ್ವಯವಾಗುತ್ತದೆ.

 ಆದರೆ.... ಜೋಸೆಪ್ರವರ ನಿರ್ದೇಶನದ ತಾಕತ್ತಿರುವುದು ಯಾವುದೇ ವಿಷಯವನ್ನು ಸಮಕಾಲೀನಗೊಳಿಸುವುದರಲ್ಲಿ. ಯಾವುದೋ ಕಾಲದ, ಯಾವುದೋ ದೇಶದ, ಯಾವುದೋ ಏಕವ್ಯಕ್ತಿ ಸರ್ವಾಧಿಕಾರಿಯ ವಿಷಯವನ್ನು ಹೊಂದಿರುವ ನಾಟಕವನ್ನು ಈಗಿನ ಪ್ರಸ್ತುತ ಕಾಲಕ್ಕೆ- ದೇಶಕ್ಕೆ- ಸರ್ವಕಾಲಕ್ಕೆ ಸೂಕ್ತವಾಗುವಂತೆ ನಿರೂಪಿಸಿರುವುದು ಅವರ ಕೌಶಲ್ಯಕ್ಕೆ ಸಾಕ್ಷಿಯಾಗಿದೆ.   ತದ್ರೂಪಿ ನಾಟಕದಲ್ಲಿ ಸರ್ವಾಧಿಕಾರಿಯನ್ನು ಕೇಂದ್ರವಾಗಿಟ್ಟುಕೊಂಡು ಇಡೀ ವ್ಯವಸ್ಥೆಯನ್ನು ಲೇವಡಿ ಮಾಡಲಾಗಿದೆ. ನೈಸ್ ರಸ್ತೆಯ ತಿಮಿಂಗಿಲು ಖೇಣಿಯನ್ನೇ ಪಾತ್ರವಾಗಿಸಲಾಗಿದೆ. ನಿದ್ದೆ-ಮುದ್ದೆ ಮಾತಿನಿಂದ ದೇವೇಗೌಡರನ್ನೇ ಪರೋಕ್ಷವಾಗಿ ಪ್ರಸ್ತಾಪಿಸಲಾಗಿದೆ. ಸಿಎಂ ಸಿದ್ದರಾಮ, ಡಿ.ಕೆ.ಶಿವಕುಮಾರರೂ ಮಾತಿನ ನಡುವೆ ಬಂದುಹೋಗುತ್ತಾರೆ. ರಾಜಕಾರಣಿಗಳು ಅದು ಹೇಗೆ ಹಣ, ಕಾರು, ಸೈಟು ಕೊಟ್ಟು ಪತ್ರಕರ್ತರನ್ನು ಕೊಂಡುಕೊಳ್ಳುತ್ತಾರೆ ಎನ್ನುವುದೂ ಇಲ್ಲಿ ಮಾರ್ಮಿಕವಾಗಿ ಪ್ರಸ್ತಾಪವಾಗಿದೆ. ಎಲ್ಲೆಲ್ಲಿ ನಾಟಕದಲ್ಲಿ ಅವಕಾಶವಿದೆಯೋ ಅಲ್ಲೆಲ್ಲಾ ಪ್ರಸ್ತುತ ನಮ್ಮ ರಾಜ್ಯದ ರಾಜಕಾರಣವನ್ನು ಲೇವಡಿ ಮಾಡುವ ಪ್ರಯತ್ನ ಮಾಡಲಾಗಿದೆ.

          ನಾಟಕದ ನಿರೂಪಣಾ ಶೈಲಿ ವಿಶಿಷ್ಟವಾಗಿದೆ. ದೃಶ್ಯ ನಡೆಯುತ್ತಿರುವಾಗಲೆ ಆಗಾಗ ಹಾಡು ನೃತ್ಯಗಳನ್ನು ಜೋಡಿಸಲಾಗಿದೆ.  ಇಡೀ  ನಾಟಕದ ರಂಗವಿನ್ಯಾಸ ತುಂಬಾ ಅರ್ಥಪೂರ್ಣವಾಗಿದೆ. ಹಿಂದೆ ಅರಮನೆ ನೆನಪಿಸುವ ಪರದೆ ಇದ್ದರೆ ನಡುವೆ ಮಿಲಿಟರಿ ಬಟ್ಟೆ ತೊಟ್ಟ ಪ್ಲಾಟಪಾರಂ-ಮೆಟ್ಟಲುಗಳಿವೆ. ಇವು ವೈಭವ ಮತ್ತು ಸರ್ವಾಧಿಕಾರ ಎರಡನ್ನೂ ಸಂಕೇತಿಸುವಂತಿವೆ. ನಾಟಕದ ಚಾಲೆಂಜಿಂಗ್ ವಿಷಯವೇನೆಂದರೆ ದ್ವಿಪಾತ್ರವನ್ನು ಸೃಷ್ಟಿಸುವುದಾಗಿದೆ. ಜನರಲ್ ಮತ್ತು ತದ್ರೂಪಿ ಎರಡೂ ಪಾತ್ರಗಳಿಗೆ ಒಂದೇ ರೀತಿಯಲ್ಲಿರುವ ಇಬ್ಬರು ವ್ಯಕ್ತಿಗಳನ್ನು ಎಲ್ಲಿಂದ ತರುವುದು. ಆದರೆ ಸವಾಲನ್ನು ನಿರ್ದೇಶಕರು ಸಮರ್ಥವಾಗಿ ನಿರ್ವಹಿಸಿದ್ದಾರೆ. ಇದಕ್ಕೆ ಸಂಚಯ ತಂಡದ ಕೃಷ್ಣ ಮತ್ತು ಕೀರ್ತಿಭಾನು ಇಬ್ಬರೂ ತದ್ರೂಪಿಗಳಾಗಿ ಕಾಣಿಸಿಕೊಂಡಿದ್ದಾರೆ. ದ್ವಿಪಾತ್ರದಾರಿಗಳಿಗೆ ಹಾಕಲಾದ ಉಡುಗೆ, ಮಾಡಲಾದ ಮೇಕಪ್ಗಳಿಂದಾಗಿ ಅವಳಿ-ಜವಳಿಗಳಂತೆ ಪಾತ್ರಗಳು ರೂಪುಗೊಂಡಿವೆ. ಹಾಗೂ ಎರಡೂ ಪ್ರಮುಖ ಪಾತ್ರಗಳನ್ನು ಅತ್ಯಂತ ಲೀಲಾಜಾಲವಾಗಿ ಇಬ್ಬರೂ ಅನುಭವಿ ನಟರು ಸೊಗಸಾಗಿ ಅಭಿನಯಿಸಿ ನೋಡುಗರಿಗೆ ಸಿಕ್ಕಾಪಟ್ಟೆ ಮನರಂಜನೆಯನ್ನೊದಗಿಸಿದ್ದಾರೆ. ಅತಿರೇಕವನ್ನೇ ನಾಟಕದ ಮೂಲ ದ್ರವ್ಯವನ್ನಾಗಿಸುವ ನಿರ್ದೇಶಕರ ಆಶಯಕ್ಕೆ ಪೂರಕವಾಗಿ ಎಲ್ಲಾ ಪಾತ್ರಗಳೂ ತುಸು ಹೆಚ್ಚಾಗಿಯೇ ಸ್ವಂದಿಸಿವೆ



   ಎಸ್.ಆರ್.ರಾಮಕೃಷ್ಣರವರು ಸಂಗೀತ ನಿರ್ದೇಶನ ಮಾಡಿದ್ದು ಪೂರ್ವಭಾವಿ ರೆಕಾರ್ಡೆಡ್ ಹಾಡು-ಸಂಗೀತಗಳು ಅದ್ಯಾಕೋ ದೃಶ್ಯಕ್ಕೆ ಮ್ಯಾಚ್ ಆಗಲಿಲ್ಲ. ..ರಮೇಶರವರು ಮಾಡಿದ್ದ ಬೆಳಕಿನ ವಿನ್ಯಾಸವನ್ನು ರುದ್ರಯ್ಯನವರು ಸಮರ್ಥವಾಗಿ ನಿರ್ವಹಿಸಿ ನಾಟಕಕ್ಕೆ ಸೊಗಸನ್ನು ತಂದುಕೊಟ್ಟರು. ರಾಮಕೃಷ್ಣ ಕನ್ನರಪಾಡಿಯವರ ಮೇಕಪ್ ಕೌಶಲ್ಯ ವ್ಯಕ್ತಿಗಳನ್ನು ಪಾತ್ರಗಳನ್ನಾಗಿಸಿತು.

       ಅಪಹಾಸ್ಯವನ್ನು ಕಡಿಮೆ ಮಾಡಿ ನವೀರಾದ ಹಾಸ್ಯವನ್ನು ಬಳಸಿದ್ದರೆ, ನಾಟಕದ ಆಶಯಕ್ಕೆ ಪೂರಕವಾಗಿ ಹಾಸ್ಯ ದೃಶ್ಯಗಳನ್ನು ಸೃಷ್ಟಿಸಿದ್ದರೆ, ಮುಜುಗರದ ಶಬ್ದ ಮತ್ತು ಸನ್ನಿವೇಶಗಳನ್ನು ಕೈಬಿಟ್ಟಿದ್ದರೆ, ಸರ್ವಾಧಿಕಾರಿ ವಿರೋಧಿ ಹೋರಾಟಗಾರರಿಗೊಂದಿಷ್ಟು ಗಂಭಿರತೆಯನ್ನು ತಂದುಕೊಟ್ಟಿದ್ದರೆ, ಸಿನೆಮಾ ಹಾಡುಗಳು ಮತ್ತು ಸಿನೆಮಾ ನಟರ ಅನುಕರಣೆಯನ್ನು ನಿರ್ಭಂಧಿಸಿದ್ದರೆ.... ಸಡಿಲುಬಿಟ್ಟ ನಿರೂಪಣೆಯನ್ನು ಇನ್ನೂ ಸ್ವಲ್ಪ ಬಿಗಿಗೊಳಿಸಿದ್ದರೆ, ಕ್ಲೀಷೆ ಎನ್ನಿಸುವಂತಹ ಅನಗತ್ಯ ಮಾತು ಮತ್ತು ದೃಶ್ಯಗಳನ್ನು ಎಡಿಟ್ ಮಾಡಿದ್ದರೆ.... ನಿಜಕ್ಕೂ ನಾಟಕ ಅತ್ಯುತ್ತಮವಾಗಬಹುದಾಗಿತ್ತು. ಪ್ರಸನ್ನರವರ ನಾಟಕದ ಆಶಯಕ್ಕೆ ನ್ಯಾಯಸಲ್ಲಿಸಬಹುದಾಗಿತ್ತು. ಪ್ರಜ್ಞಾವಂತ ಪ್ರೇಕ್ಷಕರಿಗೆ ವೈಚಾರಿಕ ವಿಡಂಬಣೆ ಮೂಲಕ ತೃಪ್ತಿಕೊಡಬಹುದಾಗಿತ್ತು

                                                        -ಶಶಿಕಾಂತ ಯಡಹಳ್ಳಿ, 
     
           
                
               
              
               


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ