ಮಂದಿರ್ ಬಿ ಲೇಲೋ, ಮಸ್ಜಿದ್ ಬಿ ಲೇಲೋ
ಮಗರ್ ಹಮಾರಾ ಲಹೂ ಸೆ ಮತ್ ಖೆಲೋ...
ಎನ್ನುವ ಶಿರ್ಷಿಕೆ ಹಾಡು ‘ಸೆವೆಂಟೀನ್ತ ಜುಲೈ’ ನಾಟಕದ ಆಶಯವಾಗಿದೆ. ಬಹುಷಃ ಎಲ್ಲಾ ಸೆಕ್ಯೂಲರ್ ಜನರ ಬಯಕೆಯೂ ಆಗಿದೆ. ಕೋಮುವಾದಿ ಧರ್ಮಾಂಧರಿಗೆ ಎಚ್ಚರಿಕೆಯೂ ಆಗಿದೆ. ‘ನಿಮ್ಮ ದೇವಸ್ಥಾನ ಧರ್ಮಗಳಿಗಿಂತ ಬದುಕು ಮುಖ್ಯ’ ಎಂದು ಹೇಳುವುದು ಈ ಹಾಡಿನ ನಿಜವಾದ ಉದ್ದೇಶವಾಗಿದೆ.
ಇದೊಂದು ಹೈಲಿ ಪಾಲಿಟಿಕಲ್ ಡ್ರಾಮಾ. ಸಮಕಾಲೀನ ಕೋಮುವಾದಿ ರಾಜಕಾರಣ ಹಾಗೂ ಸಾಮಾಜಿಕ ವೈರುಧ್ಯಗಳನ್ನು ನಾಟಕೀಯವಾಗಿ ತೋರಿಸುವ ಒಂದು ಸಾರ್ಥಕ ಪ್ರಯತ್ನ. ಧರ್ಮ ಎನ್ನುವುದು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ರಾಜಕೀಯವನ್ನು ಬಳಸಿಕೊಂಡರೆ, ರಾಜಕೀಯ ಎನ್ನುವುದು ಧರ್ಮವನ್ನು ತನ್ನ ಹಿತಾಸಕ್ತಿ ಕಾಪಾಡಿಕೊಳ್ಳಲು ಉಪಯೋಗಿಸುತ್ತಿದೆ. ಧರ್ಮ ಮತ್ತು ರಾಜಕೀಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈ ಧರ್ಮಾಂಧತೆ ಮತ್ತು ಸ್ವಾರ್ಥ ರಾಜಕೀಯತೆಯ ತಂತ್ರಗಾರಿಕೆಗೆ ಜನಸಾಮಾನ್ಯ ಅಮಾಯಕರು ಅದು ಹೇಗೆ ಬಲಿಯಾಗುತ್ತಾರೆ ಎನ್ನುವುದನ್ನು ಅತ್ಯಂತ ಮಾರ್ಮಿಕವಾಗಿ ರಂಗವೇದಿಕೆಯ ಮೇಲೆ ತೋರಿಸುವ ಮೂಲಕ ಕೋಮುವಾದಿಕರಣದ ಹಲವು ಆಯಾಮಗಳನ್ನು ‘ಸೆವೆಂಟೀನ್ತ ಜುಲೈ’ ಅನಾವರಣಗೊಳಿಸುತ್ತದೆ.
‘ರಂಗನಿರಂತರ’ ರಂಗತಂಡವು ತನ್ನ ರಜತ ಮಹೋತ್ಸವದ ಅಂಗವಾಗಿ ಸಿಜಿಕೆ ನೆನಪಿನಲ್ಲಿ ಏರ್ಪಡಿಸಲಾಗಿರುವ ‘ಸಿಜಿಕೆ ರಾಷ್ಟ್ರೀಯ ನಾಟಕೋತ್ಸವ’ದಲ್ಲಿ 2014, ಜನವರಿ 16ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಈ ಹಿಂದಿ ಭಾಷೆಯ ‘ಸೆವೆಂಟೀನ್ತ ಜುಲೈ’ ಪ್ರದರ್ಶನಗೊಂಡಿತು. ಉತ್ಪಲ್ ದತ್ರವರ ‘ದೇಶಲ್ ನಾಟಡೈ’ ಹಾಗೂ ‘ಮನುಷರ್ ಅಧಿಕಾರ್’ ಎನ್ನುವ ಎರಡು ಬೆಂಗಾಲಿ ನಾಟಕಗಳ ಸ್ಪೂರ್ತಿಯಿಂದ ‘ಸೆವೆಂಟೀನ್ತ ಜುಲೈ’ ನಾಟಕವನ್ನು ಬಾಪಿ ಬೊಸ್ ರವರು ರಚಿಸಿ ತಮ್ಮ ‘ಸರ್ಕಲ್ ಥಿಯೇಟರ್ ಕಂಪನಿ’ ರಂಗತಂಡಕ್ಕೆ ನಿರ್ದೇಶಿಸಿದ್ದಾರೆ.
ಗುಜರಾತಿನ ‘ಈರೋಲ್’ ಎಂಬ ಊರಲ್ಲಿ ಕೆಲವು ಮುಸ್ಲಿಂ ಯುವಕರ ಮೇಲೆ ಸುಳ್ಳು ಅತ್ಯಾಚಾರದ ಅರೋಪ ಹೊರೆಸಿ, ಕೋರ್ಟನಲ್ಲಿ ಕೋಮುಪ್ರೇರಿತವಾಗಿ ವಿಚಾರಣೆ ಎಂಬ ಹುಸಿ ನಾಟಕ ನಡೆಸಿ ಅಮಾಯಕರಿಗೆ ಗಲ್ಲು ಶಿಕ್ಷೆ ಕೊಡುವಂತಹ ಅಮಾನವೀಯತೆಯನ್ನು ಈ ನಾಟಕದಲ್ಲಿ ತೋರಿಸಲಾಗಿದೆ. ಮತೀಯ ಸಂಘರ್ಷ, ರಾಜಕೀಯ ಕುತಂತ್ರ. ಪೊಲೀಸರ ಅಸಹಾಯಕತೆ ಹಾಗೂ ನ್ಯಾಯಾಂಗದೊಳಗಿನ ಕೋಮುವಾದೀಕರಣವನ್ನು ದೃಶ್ಯಗಳ ಮೂಲಕ ತೋರಿಸುತ್ತಾ ಸೈದ್ದಾಂತಿಕವಾಗಿ ನಾಟಕದಾದ್ಯಂತ ಚರ್ಚಿಸಲಾಗಿದೆ.
ಈ ನಾಟಕ ನೋಡುವ ಪ್ರೇಕ್ಷಕರನ್ನು ಪುಳಕಿತಗೊಳಿಸಿದ್ದು ಸುಮಾರು 30 ಅಡಿ ಉದ್ದದ ದೊಡ್ಡದಾದ ಡ್ರ್ಯಾಗನ್ ಮಾದರಿಯ ವಿಷಸರ್ಪ. ಅದು ರಂಗವೇದಿಕೆಯಿಂದಿಳಿದು ಪ್ರೇಕ್ಷಾಗ್ರಹದಲ್ಲೆಲ್ಲಾ ಹರಿದಾಡಿ ನೋಡುಗರಲ್ಲಿ ಒಂದು ರೀತಿಯ ಥ್ರಿಲ್ ಅನುಭವವನ್ನು ನೀಡಿತು. ಕಲಾಕ್ಷೇತ್ರದೊಳಗೆ ಎಲ್ಲಾ ದಿಕ್ಕಿನಲ್ಲೂ ಅಳವಡಿಸಿದ್ದ ಅಲ್ಟ್ರಾ ವೈಲೆಟ್ ಲೈಟ್ಗಳು ಕತ್ತಲೆಯಲ್ಲಿ ಆ ಮಹಾಸರ್ಪವನ್ನು ಭಯಂಕರವಾಗಿ ಕಾಣುವಂತೆ ಮಾಡಿದವು. ಆದರ ಚಲನೆ ಮತ್ತು ನೋಟದಿಂದಾಗಿ ಜೀವಂತವಾದ ಅನಕೊಂಡ ಮಾದರಿಯ ಹಾವೇ ಹರಿದಾಡಿದಂತೆನಿಸಿತು. ಇಡೀ ಪ್ರೇಕ್ಷಾಗ್ರಹವನ್ನು ಭಯಬೀತಗೊಳಿಸಿದ ಈ ಕೇಸರಿ ಬಣ್ಣದ ವಿಷಸರ್ಪ ಕೋಮುವಾದದ ಸಂಕೇತವಾಗಿ, ಗುಜರಾತಿನಲ್ಲಿ ಮಾರಣಹೋಮ ನಡೆಸಿದ ಮತಾಂಧ ಶಕ್ತಿಗಳಿಗೆ ಪ್ರತೀಕವಾಗಿ ಮೂಡಿಬಂದಿದ್ದು ಇನ್ನೊಂದು ವಿಶೇಷ. ಈ ವಿಷಸರ್ಪವನ್ನು ರೂಪಕವಾಗಿ ತೋರಿಸುತ್ತಾ ನಾಟಕದಾದ್ಯಂತ ಈ ಕೋಮು ಸರ್ಪದ ಮನುಷ್ಯರೂಪಿ ಸಂತಾನಗಳ ಧರ್ಮಾಂಧತೆಯನ್ನು ಬಯಲುಗೊಳಿಸುವ ಪ್ರಯತ್ನ ಮಾರ್ಮಿಕವಾಗಿ ಮೂಡಿ ಬಂದಿದೆ.
ಈ ನಾಟಕದ ಇನ್ನೊಂದು ವಿಶೇಷತೆ ಏನೆಂದರೆ ನ್ಯಾಯಾಂಗವನ್ನೇ ತೀಕ್ಷ್ಣವಾಗಿ ವಿಶ್ಲೇಷಿಸಿರುವುದು. ಶಾಸಕಾಂಗ ಮತ್ತು ಕಾರ್ಯಾಂಗವನ್ನು ಎಷ್ಟು ಬೇಕಾದರೂ ವಿರೋಧಿಸಿ ನಾಟಕ ಮಾಡಬಹುದು. ಆದರೆ ಹೀಗೆ ನೇರವಾಗಿ ನ್ಯಾಯಾಲಯದಲ್ಲಾಗುವ ಕೋಮುವಾದಿಕರಣವನ್ನು, ನ್ಯಾಯವಾದಿಗಳ ಧರ್ಮಾಧತೆಯನ್ನು, ನ್ಯಾಯಾಧೀಶರ ಮತಾಂಧತೆಯನ್ನು ಹೇಳುವಂತಹ ನಾಟಕ ಭಾರತದಲ್ಲಿ ಬಹುಷಃ ಇದೇ ಮೊದಲಿರಬೇಕು. ಇದಕ್ಕೆಂದೆ ಈ ನಾಟಕದ ಪ್ರದರ್ಶನಕ್ಕೆ ಹಲವಾರು ಅಡೆತಡೆಗಳು ಬಂದವು. ಎನ್ ಎಸ್ ಡಿ ಆಯೋಜಿಸಿದ ಭಾರತ್ ಮಹೋತ್ಸವದಲ್ಲಿ ಪ್ರದರ್ಶಿಸಲು ಈ ನಾಟಕವನ್ನು ತಿರಸ್ಕರಿಸಲಾಗಿತ್ತು. ಇಡೀ ನಾಟಕವನ್ನು ಬ್ಯಾನ್ ಮಾಡಲು ಒತ್ತಡಗಳು ಕೋಮುವಾದಿಗಳಿಂದ ಬರತೊಡಗಿತು. ಸಧ್ಯ ಪಶ್ಚಿಮ ಬಂಗಾಳ ಹಾಗೂ
ದೆಲ್ಲಿಯಲ್ಲಿ ಬಿಜೆಪಿ ಅಥವಾ ಸಂಘಪರಿವಾರ ಹೆಚ್ಚು ಪ್ರಭಾವಶಾಲಿಯಾಗಿಲ್ಲದೇ ಇರುವುದರಿಂದ ಹಾಗೂ ಅವರ ಸರಕಾರ ಇಲ್ಲದಿರುವುದರಿಂದ ಹೇಗೋ ಈ ನಾಟಕ ಪ್ರದರ್ಶನಗಳು ನಡೆಯುತ್ತಿವೆ. ಆದರೆ ಧರ್ಮಾಂಧರ ವಿರೋಧವಂತೂ ಇದ್ದೇ ಇದೆ. ಈ ರೀತಿಯ ನಾಟಕ ಪ್ರದರ್ಶಿಸಲು ಅಸಾಧ್ಯ ಧೈರ್ಯ ತೋರಿಸಿದ್ದಕ್ಕೆ, ರಂಗದಂಗಳದಲ್ಲಿ ಕೋರ್ಟಿನೊಳಗಿನ ಕೋಮುವಾದಿತನವನ್ನು ಬಯಲುಗೊಳಿಸಿದ್ದಕ್ಕೆ ಬಾಪಿ ಬಸುರವರು ನಿಜಕ್ಕೂ ಅಭಿನಂದನಾರ್ಹರು.
‘ಎಲ್ಲಾ ಅವಘಡಗಳಿಗೂ ಶನೀಶ್ವರನೇ ಕಾರಣ’ ಎನ್ನುವ ಹಾಗೆ ಈ ದೇಶದ ಎಲ್ಲಾ ಮೋಸ, ವಂಚನೆ, ಅತ್ಯಾಚಾರ, ಆತಂಕವಾದಕ್ಕೆ ಮುಸ್ಲಿಮರೆ ಕಾರಣ ಎನ್ನುವ ವಾತಾವರಣವೊಂದನ್ನು ಹಿಂದೂ ಸಂಘಪರಿವಾರ ವ್ಯವಸ್ಥಿತವಾಗಿ ಪ್ರಚಾರಗೊಳಿಸುತ್ತಿದೆ. ಮುಸ್ಲಿಂ ವಿರೋಧಿತನವನ್ನೇ ತನ್ನ ಹಿತಾಸಕ್ತಿ ಕಾಪಾಡಿಕೊಳ್ಳಲು ಇರುವ ಪ್ರಮುಖ ಅಸ್ತ್ರವನ್ನಾಗಿಸಿಕೊಂಡ ಧರ್ಮಾಂಧರು ಶತಮಾನಗಳ ಕೋಮುಸೌಹಾರ್ಧತೆಯನ್ನು ಒಡೆದುಹಾಕಿ ಕೋಮುಗಲಭೆಗಳನ್ನು ಹುಟ್ಟುಹಾಕಿ ರಾಜಕೀಯ ಮಾಡುತ್ತಲೇ ಬಂದಿದ್ದಾರೆ. ಇಂತಹುದೇ ಒಂದು ಶಡ್ಯಂತ್ರವನ್ನು ಈ ‘ಸೆವೆಂಟೀನ್ತ ಜುಲೈ’ ನಾಟಕ ಬಯಲುಗೊಳಿಸುತ್ತದೆ.
ಒಬ್ಬ ಧರ್ಮಾಂಧ ರಾಜಕಾರಣಿಯೊಬ್ಬ ಚುನಾವಣಾ ಪೂರ್ವದಲ್ಲಿ ಕೋಮುಗಲಭೆ ಪ್ರಚೋದಿಸಲು ಮುಸ್ಲಿಂ ಯುವಕರ ಗುಂಪು ಹಿಂದೂ ಯುವತಿಯರಿಬ್ಬರ ಮೇಲೆ 2014, ಸೆವೆಂಟೀನ್ತ ಜುಲೈನಂದು ಅತ್ಯಾಚಾರ ಮಾಡಿದರೆಂದು ವೇಶ್ಯೆಯರಿಂದ ಸುಳ್ಳು ಕಂಪ್ಲೇಂಟ್ ಕೊಡಿಸುತ್ತಾನೆ. ಕೋಮುವಾದಿ ಸಂಘಟನೆಗಳು ಈ ಸುಳ್ಳು ಘಟನೆಯನ್ನೇ ದೊಡ್ಡದು ಮಾಡಿ ಗಲಾಟೆಯನ್ನೆಬ್ಬಿಸಿ ಆ ಯುವಕರನ್ನು ಕೊಲ್ಲಲು ಬಯಸುತ್ತಾರೆ. ಪೋಲೀಸರ ಪ್ರಜ್ಞಾವಂತಿಕೆಯಿಂದಾಗಿ ಬಂಧಿತರಾಗಿ ಬಚಾವಾದ ಯುವಕರು ನ್ಯಾಯಾಲಯದಲ್ಲಿ ವಿಚಾರಣೆಗೊಳಗಾಗುತ್ತಾರೆ. ಅಲ್ಲಿ ಕೋಮುವಾದಿ ಪರ ವಕೀಲನೊಬ್ಬ ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ನಿರಪರಾಧಿಗಳಿಗೆ ಗಲ್ಲು ಶಿಕ್ಷೆ ಕೊಡಿಸಲು ಎಲ್ಲಾ ಕುತಂತ್ರಗಳನ್ನು ಮಾಡುತ್ತಾನೆ. ಆತನ ಸವಾಲಿಗೆ ಪ್ರತಿಸವಾಲು ಒಡ್ಡುವ ಪ್ರಗತಿಪರ ನಿಲುವಿನ ಬೆಂಗಾಲಿ ವಕೀಲ ಅತ್ಯಾಚಾರ ಘಟನೆ ಸುಳ್ಳೆಂದು ಸಾಬೀತು ಪಡಿಸುತ್ತಾನೆ. ಆದರೂ ಹಿಂದುತ್ವವಾದಿಯಾದ ನ್ಯಾಯಾಧೀಶ ಅಮಾಯಕ ಯುವಕರಿಗೆ ಗಲ್ಲು ಶಿಕ್ಷೆ ತೀರ್ಪು ನೀಡಿ ತನ್ನ ಕೋಮುವಾದಿತನವನ್ನು ಬಹಿರಂಗಪಡಿಸಿಕೊಳ್ಳುತ್ತಾನೆ. ಗುಜರಾತಿನಲ್ಲಿ ಹೇಗೆ ಇಡೀ ಆಳುವ ವ್ಯವಸ್ಥೆ ಕೋಮುವಾದಿಕರಣಗೊಂಡಿದೆ ಎನ್ನುವುದನ್ನು ಈ ನಾಟಕವು ಒಂದು ಸುಳ್ಳು ಅತ್ಯಾಚಾರದ ಘಟನೆಯ ಮೂಲಕ ಹೇಳುವಲ್ಲಿ ಸಫಲವಾಗಿದೆ.
ಕೋಮುವಾದಿ ಕುತಂತ್ರಗಳನ್ನು ಬಯಲಿಗೆಳೆಯುವ ದಾವಂತದಲ್ಲಿ ನಿರ್ದೇಶಕರು ಕೆಲವೊಂದು ಅತಿರೇಕಗಳನ್ನು ಸೃಷ್ಟಿಸಿದ್ದಾರೆ. ಸಾಕ್ಷಿಗೆಂದು ಕರೆಸಲಾದ ವೇಶ್ಯೆಯೊಬ್ಬಳು ಕೋರ್ಟಿನೊಳಗೆ ಅತೀ ಚೆಲ್ಲುಚೆಲ್ಲಾಗಿ ವರ್ತಿಸುವುದು, ಬಸ್ ಡ್ರೈವರ್ ಮತ್ತು ಕಂಡಕ್ಟರ್ನಂತಹ ಸಾಕ್ಷಿಗಳು ಲಾಯರ್ ಮೇಲೆ ರೋಪ್ ಹಾಕುವುದು, ಲಾಯರ್ ಎನ್ನುವವನು ನ್ಯಾಯಾಧೀಶನಿಗೆ ಜೋರುಮಾಡುವುದು, ಕೋಮುವಾದಿಯೊಬ್ಬ ಪಿಸ್ತೂಲ್ ಹಿಡಿದು ಕೋರ್ಟನಲ್ಲೇ ಕೊಲೆಮಾಡಲು ಪ್ರಯತ್ನಿಸುವುದು, ಕೋರ್ಟಿನ ವಿಚಾರಣೆಯಾದ್ಯಂತ ಕೆಲವರು ಕೆಟ್ಟದಾಗಿ ಘೋಷಣೆ ಕೂಗುತ್ತಲೇ ಇರುವುದು.... ಹೀಗೆ ಹಲವಾರು ವಿಚಾರಗಳು ವಾಸ್ತವಕ್ಕೆ ವಿರುದ್ಧವಾಗಿವೆ. ಹೇಳಬೇಕಾದುದ್ದನ್ನು ಅತೀ ಅರ್ಭಟಗಳಿಲ್ಲದೆ, ಕೋರ್ಟಿನ ಶಿಷ್ಟಾಚಾರಕ್ಕೆ ದಕ್ಕೆ ಬಾರದಂತೆ ಹೇಳಬಹುದಾದ ಸಾಧ್ಯತೆಗಳು ನಾಟಕದಲ್ಲೇ ಇವೆ. ಆದರೆ ಸೂಚ್ಯವಾಗಿ ಹೇಳಬಹುದಾದ್ದನ್ನು ಇಷ್ಟೊಂದು ವಾಚ್ಯವಾಗಿ ಹೇಳಬೇಕಾಗಿತ್ತಾ? ಪ್ರೇಕ್ಷಾಗ್ರಹದಲ್ಲೇ ಕೆಲವರನ್ನು ಕೂರಿಸಿ ಹಲವಾರು ಬಾರಿ ಕೂಗಾಡಿಸಿ ಗದ್ದಲ ಎಬ್ಬಿಸಿ ನಿಜವಾದ ಪ್ರೇಕ್ಷಕರಿಗೆ ಮುಜುಗರ ಮಾಡುವುದು ಅಗತ್ಯವಿತ್ತಾ? ಎನ್ನುವ ಪ್ರಶ್ನೆಯನ್ನು ಈ ನಾಟಕ ಹುಟ್ಟಿಸುತ್ತದೆ. ಇಡೀ ನಾಟಕ ಒಂದು ರೀತಿಯಲ್ಲಿ ನಮ್ಮ ಟಿ.ಎನ್.ಸೀತಾರಾಂರವರ ಮುಕ್ತ ಮುಕ್ತ ಧಾರಾವಾಹಿಯ ಕೋರ್ಟ್ ಸೀನನ್ನು ನೋಡಿದಂತೆನಿಸಿದ್ದಂತೂ ಸುಳ್ಳಲ್ಲ. ವ್ಯತ್ಯಾಸ ಇಷ್ಟೇ
ಆ ಧಾರಾವಾಹಿಯಲ್ಲಿ ಈ ನಾಟಕದಷ್ಟು ಅಬ್ಬರ ಇರುವುದಿಲ್ಲ. ಘೋಷಣಾತ್ಮಕತೆ, ಅತೀ ಅಬ್ಬರ, ಸೈದ್ದಾಂತಿಕ ಚರ್ಚೆ ಇರಬೇಕಾದದ್ದು ಬೀದಿನಾಟಕಗಳಲ್ಲಿ, ರಂಗನಾಟಕಗಳಲ್ಲಿ ಎಷ್ಟೇ ಪ್ರಖರ ವಿಚಾರವಿದ್ದರೂ ಅದನ್ನು ಸೂಚ್ಯವಾಗಿ, ವಿಡಂಬಣಾತ್ಮಕವಾಗಿ ಹೇಳಿದರೆ ಪ್ರೇಕ್ಷಕರ ಹೃದಯವನ್ನು ತಟ್ಟಲು ಸಾಧ್ಯವಾಗುತ್ತದೆ. ಇಲ್ಲವಾದರೆ ಕೇವಲ ಬೌದ್ಧಿಕ ಕಸರತ್ತಾಗಿ ಪ್ರೇಕ್ಷಕರ ಮೆದುಳನ್ನು ಮಾತ್ರ ಮುಟ್ಟಿ ನಾಟಕ ಅಲ್ಪಾಯುವಾಗುತ್ತದೆ. ಈ ಸಾಧ್ಯತೆಗಳ ಕುರಿತು ಎನ್ಎಸ್ಡಿ ನಿರ್ದೇಶಕ ಬಾಪಿ ಬಸುರವರು ಗಮನ ಹರಿಸುವುದು ಉತ್ತಮ.
ನಾಟಕದಲ್ಲಿ ಕೆಲವು ಅತಾರ್ಕಿಕ ಮತ್ತು ಆಭಾಸಕಾರಿ ಸನ್ನಿವೇಶಗಳನ್ನು ಸರಿಪಡಿಸಬಹುದಾಗಿತ್ತು. ತನಗಿಂತಲೂ ಮೇಲಿನ ಪೊಲೀಸ್ ಅಧಿಕಾರಿ (ಎಸ್ಪಿ) ಬಂದಾಗ ಅವರನ್ನು ನಿಲ್ಲಿಸಿ ತಾನು ಸೋಪಾದಲ್ಲಿ ಕೂತು ಮತಾಡುವ ಇನ್ಸಫೆಕ್ಟರ್ ನಡುವಳಿಕೆ ಪಾತ್ರೋಚಿತ ಎನ್ನಿಸಲಿಲ್ಲ. ಆರು ಜನ ಮುಸ್ಲಿಂ ಯುವಕರು ರೇಪ್ ಕೇಸನಲ್ಲಿ ಆರೆಸ್ಟ್ ಆಗಿದ್ದರೂ ಒಬ್ಬನಿಗೆ ಮಾತ್ರ ಗಲ್ಲು ಶಿಕ್ಷೆ ಪ್ರಕಟಿಸಿದ ನ್ಯಾಯಾಧೀಶ ಮಿಕ್ಕವರ ಕುರಿತು ಪ್ರಸ್ತಾವನೆಯನ್ನೇ ಮಾಡದಿರುವುದು ಅವಾಸ್ತವಿಕವಾಗಿತ್ತು. ಕೋಮುವಾದಿಗಳನ್ನು ವಿರೋಧಿಸುವ ಈ ನಾಟಕದಲ್ಲಿ ಒಬ್ಬ ಆರ್ಎಸ್ಎಸ್ ಕಾರ್ಯಕರ್ತ ಬಂದು ಸಾಕ್ಷಿ ನುಡಿದು ‘ತಾನು ಸಂಘದವನು ಸುಳ್ಳು ಹೇಳುವುದಿಲ್ಲ’ ಎನ್ನುತ್ತಲೇ ಸತ್ಯವನ್ನು ಹೇಳುತ್ತಾನೆ. ಒಂದುಕಡೆ ಸಂಘಪರಿವಾರದವರನ್ನು ಕೋಮುವಾದಿ ರಕ್ಕಸರು ಎಂದು ಹೇಳುವ ಈ ನಾಟಕವು ಇನ್ನೊಂದು ಕಡೆ ಆರ್ಎಸ್ಎಸ್ ನವರು ಸತ್ಯವಂತರು ಎಂದೂ ಸಾಬೀತುಪಡಿಸುವುದು ವಿರೋಧಾಭಾಸವೆನಿಸುತ್ತದೆ. ಜೊತೆಗೆ ವೇಶ್ಯೆಯೊಬ್ಬಳಿಗೆ ಸತ್ಯವನ್ನು ಹೇಳು ಎಂದು ರಾಮಮಂದಿರ ನಿರ್ಮಾಣ ಮಂಚ್ದ ಅಧ್ಯಕ್ಷರಾದ ಪರಮಹಂಸ ಸರಸ್ವತಿ ಎನ್ನುವ ಹಿಂದೂ ಮಠಾಧೀಶರು ಪ್ರೇರೇಪಿಸಿದರು ಎಂದು ಆಕೆಯೇ ಹೇಳುತ್ತಾಳೆ. ಮುಸ್ಲಿಂರ ವಿರುದ್ಧ ಯಾವಾಗಲೂ ಹರಿಹಾಯುವ ಈ ಹಿಂದೂತ್ವದ ಉಗ್ರ ಪ್ರತಿಪಾದಕರು ಹಿಂದೂ ಯುವತಿಯರ ಮೇಲೆ ಅತ್ಯಾಚಾರಮಾಡಿದವರ ಮೇಲೆ ಕರುಣೆಯಿಟ್ಟು ಶಿಕ್ಷೆಯಿಂದ ಪಾರುಮಾಡುವಂತೆ ಸಾಕ್ಷಿಯನ್ನು ಪ್ರೇರೇಪಿಸುವುದನ್ನು ನಂಬಲು ಸಾಧ್ಯವೇ? ಇಂತಹ ಅನೇಕ ತಾರ್ಕಿಕ ಪ್ರಶ್ನಿಗಳಿಗೆ ಈ ನಾಟಕದಲ್ಲಿ ಸಮರ್ಪಕ ಉತ್ತರಗಳಿಲ್ಲ.
ಕೆಲವು ಎನ್ಎಸ್ಡಿ ನಿರ್ದೇಶಕರ ಮೇಲಿರುವ ಆರೋಪವೇನೆಂದರೆ ಅವರು ಎಲ್ಲವನ್ನೂ ವೈಭವೀಕರಿಸುತ್ತಾರೆ, ರಂಗ ವೇದಿಕೆಗೆ ಭಾರವೆನ್ನಿಸುವಂತಹ ದೊಡ್ಡ ದೊಡ್ಡ ಸೆಟ್ಗಳನ್ನು ಅನಗತ್ಯವಾಗಿ ವಿನ್ಯಾಸಗೊಳಿಸುತ್ತಾರೆ. ನಟರ ಅಭಿನಯಕ್ಕಿಂತ ರಂಗ ತಂತ್ರಗಳಿಗೆ ಅತೀ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ನಾಟಕದಾದ್ಯಂತ ನಿರ್ದೇಶಕನ ಅಸ್ತಿತ್ವವನ್ನು ಪ್ರೇಕ್ಷಕರಿಗೆ ತೋರಿಸುವುದನ್ನೇ ತಮ್ಮ ಧ್ಯೇಯವಾಗಿಸಿಕೊಂಡಿದ್ದಾರೆ ಎನ್ನುವುದು. ಇಂತಹ ಆರೋಪಗಳಿಗೆ ಪೂರಕವಾಗಿ ಈ ನಾಟಕ ಮೂಡಿಬಂದಿದೆ. ರಂಗವೇದಿಕೆಯ ಎಡ ಬಲಗಳಲ್ಲಿ ದೊಡ್ಡದಾದ ಬಿತ್ತಿಚಿತ್ರಗಳು. ವೇದಿಕೆಯಲ್ಲಿ ದೊಡ್ಡದಾದ ಜಡ್ಜ್ ಟೇಬಲ್...
ರಂಗವಿನ್ಯಾಸಕಾರರೂ ಆದ ಬಾಪಿ ಬಸುರವರ ಕೋರ್ಟ ದೃಶ್ಯದ ರಂಗವಿನ್ಯಾಸವಂತೂ ವಿಚಿತ್ರವಾಗಿತ್ತು. ಮೂಲೆಯೊಂದರಲ್ಲಿ ಜಡ್ಜ್ ಸಾಹೇಬರನ್ನು ಕೂಡಿಸಿ ರಂಗದ ನಟ್ಟನಡುವೆ ಕಟೆಕಟೆಯನ್ನು ಇಡಲಾಗಿತ್ತು. ವೇದಿಕೆಯ ಎಡಭಾಗದಲ್ಲಿ ಲಾಯರ್ಗಳ ಆಸನ. ಜಡ್ಜ್ಗೆ ಲಾಯರ್ಗಳು ಕಾಣಿಸೋದಿಲ್ಲ. ಲಾಯರ್ಗಳಿಗೆ ಜಡ್ಜ್ ನೇರವಾಗಿ ಕಾಣಿಸುವುದಿಲ್ಲ. ಲಾಯರಗಳು ಎದ್ದು ವಾದಮಂಡಿಸಲು ಹೋಗಬೇಕೆಂದರೆ ನಡುವೆ ಕಟಕಟೆಯ ಅಡೆತಡೆ. ಇಂತಹ ವಿಚಿತ್ರವಾದ, ನ್ಯಾಯವಾಧಿಗಳ ಚಲನೆಗೆ ಅನಾನುಕೂಲವನ್ನು ಉಂಟುಮಾಡುವಂತಹ ಕೋರ್ಟ ವಿನ್ಯಾಸ ಈ ನಾಟಕವನ್ನು ಹೊರತು ಪಡಿಸಿ ಜಗತ್ತಿನಲ್ಲೆಲ್ಲೂ ಇರಲಿಕ್ಕಿಲ್ಲ.
ನಟರ ಅಭಿನಯದ ಫೋರ್ಸ ಮತ್ತು ಸಂಭಾಷಣೆಯ ಟೈಮಿಂಗ್ ಅದ್ಬುತವಾಗಿತ್ತು. ಆದರೆ ಮಾತಿನ ನಡುವೆ ಪಾಜ್ಗಳನ್ನು ಕೊಡದೇ ಓತಪ್ರೋತವಾಗಿ ಹರಿಯುವ ಸಂಭಾಷಣೆಗಳನ್ನು ಅರಿಯಲು ಕೇಳುಗರು ಪರದಾಡುವಂತಾಯಿತು. ಅಭಿನಯದಲ್ಲಿ ಕ್ಲಾರಿಟಿ ಇರಲಿಲ್ಲ, ಸಂಭಾಷಣೆಯಲ್ಲಿ ನಿಯಂತ್ರಣ ಇರಲಿಲ್ಲ.
ಕಲಾತ್ಮಕತೆ ಎನ್ನುವುದು ಮೊದಲೆ ಇರಲಿಲ್ಲ. ಅದರಿಂದಾಗಿ ಪ್ರೇಕ್ಷಕರನ್ನು ಈ ನಾಟಕ ತೀವ್ರವಾಗಿ ತಟ್ಟಲಿಲ್ಲ. ನಾಟಕದ ಬ್ಲಾಕ್ಔಟ್ಗಳಲ್ಲೆಲ್ಲಾ ಗುಜರಾತ್ ಹತ್ಯಾಕಾಂಡದ ಕುರಿತ ಕೆಲವು ದೃಶ್ಯಗಳ ವಿಡಿಯೋ ಕ್ಲಿಪ್ಪಿಂಗ್ಸಗಳನ್ನು ತೋರಿಸಿರುವುದು ಕೋಮುವಾದಿಗಳ ಅಟ್ಟಹಾಸವನ್ನು ಪ್ರೇಕ್ಷಕರಿಗೆ ಮನಗಾಣಿಸುವಂತಿತ್ತು.
ಹನ್ನೊಂದು ಲಕ್ಷ ಭಾರಿ ಬಜೆಟ್ಟಿನ ಈ ಕಾಂಟ್ರವರ್ಸಿ ನಾಟಕವನ್ನು ದೆಲ್ಲಿ ಸರಕಾರ ಲಾ ಆಂಡ್ ಆರ್ಡರ್ ಸಮಸ್ಯೆ ಆಗುತ್ತದೆ ಎಂದು ತಡೆಹಿಡಿಯುವ ಪ್ರಯತ್ನವನ್ನೂ ಮಾಡಿತ್ತು. ಎರಡು ವರ್ಷಗಳ ಕಾಲ ಈ ನಾಟಕದ ತಯಾರಿ ನಡೆದಿದ್ದು ೪೫ ದಿನಗಳ ಕಾಲ ಪೂರ್ಣ ಪ್ರಮಾಣದ ತಾಲಿಂನಲ್ಲಿ ಈ ನಾಟಕವನ್ನು ಕಟ್ಟಲಾಗಿದೆ. ಇಡೀ ನಾಟಕಾದಾದ್ಯಂತ ನಿರ್ದೇಶಕರ ಪರಿಶ್ರಮ ಕಾಣುವಂತಿದೆ. ಆದರೆ ಪ್ರೇಕ್ಷಕರಿಗೆ ಮನಗಾಣಿಸುವಲ್ಲಿ ಈ ನಾಟಕ ಇನ್ನೂ ಪ್ರಯತ್ನಿಸಬೇಕಿದೆ.
ಬಾಪಿ ಬೊಸ್ |
ಈ ಎಡಪಂಥೀಯ ವಿಚಾರಧಾರೆಯ ನಿರ್ದೇಶಕರು ತಮ್ಮ ಸದಾಶಯವನ್ನು ಪ್ರೇಕ್ಷಕರ ಮೇಲೆ ಘೋಷಣಾತ್ಮಕವಾಗಿ ಹೇರುವ ಪ್ರಯತ್ನವನ್ನು ನಿಲ್ಲಿಸಿ, ಕಲಾತ್ಮಕವಾಗಿ, ವಿಡಂಬನಾತ್ಮಕವಾಗಿ ನಾಟಕ ರೂಪದಲ್ಲಿ ತೋರಿಸಿದರೆ ಜನರ ಜೊತೆ ಸ್ಪಂದಿಸಲು ಸಾಧ್ಯ. ಇಲ್ಲದೇ ಹೋದರೆ ಕೇವಲ ಅದು ಬೌದ್ದಿಕ ಕಸರತ್ತಾಗಿ ನೋಡುಗರ ಮನಸ್ಸನ್ನು ತಟ್ಟಲು ವಿಫಲವಾಗುತ್ತದೆ ಎಂಬುದಕ್ಕೆ ಈ ನಾಟಕವೇ ಸಾಕ್ಷಿ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ