ಶನಿವಾರ, ಜನವರಿ 11, 2014

ಭಾಷಾಭಿಮಾನದ ಪಾಠ ಹೇಳುವ “ಶುದ್ಧಗೆ”



         ಕಳೆದ 18 ವರ್ಷಗಳಿಂದ ವಿಜಯನಗರ ಬಿಂಬ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ತರಬೇತುಗೊಳಿಸಿ, ರಂಗಪ್ರದರ್ಶನಗಳ ಮೂಲಕ ಮಕ್ಕಳಲ್ಲಿ ಆತ್ಮಸ್ತೈರ್ಯವನ್ನು ಮೂಡಿಸುತ್ತಿರುವುದು ಸ್ತುತ್ಯಾರ್ಹವಾಗಿದೆ. ಜಾಗತೀಕರಣದಿಂದ ನಾಶವಾಗುತ್ತಿರುವ ನಮ್ಮ ಭಾಷೆ-ಕಲೆ-ಸಂಸ್ಕೃತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಂಗಭೀಷ್ಮ .ಎಸ್.ಮೂರ್ತಿಯವರ ಮಹತ್ವಾಂಕಾಂಕ್ಷೆಯ ಬಿಂಬ ಉತ್ತಮ ಸಾಂಸ್ಕೃತಿಕ ಕೆಲಸವನ್ನು  ಮಾಡುತ್ತಿದೆ.  ನಾಳಿನ ನಾಗರೀಕರಾದ ಮಕ್ಕಳೇ ನಮ್ಮ ನಾಡಿನ ಆಶಾಕಿರಣ, ಮಕ್ಕಳಿಗೆ ಕಲೆ -ಸಂಸ್ಕೃತಿ ಕುರಿತು ತರಬೇತಿ, ಮಾರ್ಗದರ್ಶನ ಕೊಡುತ್ತಿರುವ ಬಿಂಬ ಕೆಲಸ ಮಾದರಿಯಾಗಿದೆ. ಶುದ್ಧಗೆಯಂತಹ ನಾಟಕಗಳೇ ಉದಾಹರಣೆಯಾಗಿವೆ.

     ಕನ್ನಡದ ಅಕ್ಷರ, ಒತ್ತಕ್ಷರಗಳೇ ಪಾತ್ರಗಳಾಗಿ ರಂಗದಂಗಳದಲ್ಲಿ ಮೈದೆಳೆದು, ಪುಟ್ಟ ಮಕ್ಕಳಲ್ಲಿ ಪರಕಾಯ ಪ್ರಮೇಶ ಮಾಡಿ, ತಮ್ಮ ಈಗಿನ ದುರಾವಸ್ಥೆಗೆ ಕಾರಣವನ್ನು ಹೇಳುತ್ತವೆ.  ಇಂತಹ ಶುದ್ಧಗೆ ಎನ್ನುವ ಮಕ್ಕಳ ನಾಟಕವನ್ನು ಡಾ. ಎಸ್.ವಿ.ಕಶ್ಯಪ್ರವರು ರಚಿಸಿದ್ದು, ಪ್ರತಿಭಾವಂತ ನಿರ್ದೇಶಕಿ ಎಸ್.ವಿ. ಸುಷ್ಮಾ ವಿಜಯನಗರದ ಬಿಂಬದ ಮಕ್ಕಳಿಗೆ ನಿರ್ದೇಶಿಸಿದ್ದಾರೆ.  ರವೀಂದ್ರ ಕಲಾಕ್ಷೇತ್ರ-50 ಸುವರ್ಣ ಸಂಭ್ರಮದಲ್ಲಿ ನಾಟಕ ಬೆಂಗಳೂರು ಆಯೋಜಿಸಿದ ಎರಡನೇ ಕಂತಿನ ನಾಟಕೋತ್ಸವದಲ್ಲಿ 2014, ಜನವರಿ 5ರಂದು ಶುದ್ಧಗೆ ನಾಟಕವು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡಿತು.


       ಕನ್ನಡ ಭಾಷಾ ಚರಿತ್ರೆಯ ಸೂಕ್ಷ್ಮ ಎಳೆಗಳನ್ನು ಚರ್ಚಿಸುವುದು ಪಂಡಿತರ ಕೆಲಸವೆಂದೇ ಎಲ್ಲರ ಅಭಿಪ್ರಾಯ. ಆದರೆ ಅಂತಹ ಕ್ಲಿಷ್ಟಕರವಾದ ವಿಷಯವನ್ನು ಪುಟ್ಟ ಮಕ್ಕಳ ಮೂಲಕ ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ನಾಟಕದಲ್ಲಿ ಹೇಳುವುದು ಸವಾಲಿನ ಕೆಲಸ. ಕಬ್ಬಿಣದ ಕಡಲೆಯಂತಹ ವಿಷಯವನ್ನು ಸುಲಿದ ಬಾಳೆಹಣ್ಣಿನಂದದಲಿ ರೂಪಕವಾಗಿ ಮಾರ್ಪಡಿಸಿದ ಡಾ. ಕಶ್ಯಪ್ ಹಾಗೂ ಎರಡು ಸಾವಿರ ವರ್ಷಗಳ ಕನ್ನಡ ಭಾಷಾ ಚರಿತ್ರೆಯನ್ನು ಸಂಕ್ಷಿಪ್ತವಾಗಿ ಒಂದೂಕಾಲು ಗಂಟೆಗಳ ನಾಟಕದಲ್ಲಿ ಎಲ್ಲಿಯೂ ಬೋರಾಗದಂತೆ ನಿರ್ದೇಶಿಸಿದ ಸುಷ್ಮಾರವರು ಅಭಿನಂದನಾರ್ಹರು.

        ಎಲ್ಲಾ ಭಾಷೆಗಳ ಮೂಲ ಸಂಸ್ಕೃತ ಎಂದು ಪುರೋಹಿತಶಾಹಿಗಳು ಹುಟ್ಟಿಸಿದ ಭ್ರಮೆಯನ್ನು ಒಡೆದು ಹಾಕಿ, ನಮ್ಮ ಭಾಷೆಯ ಮೂಲ ದ್ವಾವಿಢ ಎನ್ನುವ ಐತಿಹಾಸಿಕ ಸತ್ಯವನ್ನು ನಾಟಕ ಬಹಿರಂಗ ಪಡಿಸುತ್ತದೆ. ಆಳುವ ವರ್ಗಗಳು ಸಾಮ್ರಾಜ್ಯಶಾಹಿ ಶಕ್ತಿಗಳಿಗೆ ಮಣಿದು ಇಂಗ್ಲೀಷನ್ನು ಈವತ್ತಿಗೂ ಅನಧೀಕೃತವಾಗಿ ಆಡಳಿತ ಭಾಷೆಯಾಗಿ ಬಳಸುತ್ತಿರುವುದನ್ನು ನಾಟಕದಲ್ಲಿ ಲೇವಡಿ ಮಾಡಲಾಗಿದೆ. ದೇಶಾದ್ಯಂತ ಇಂಗ್ಲೀಷನ್ನು  ಖಾಯಂಗೊಳಿಸಿ ತಮ್ಮ ವ್ಯಾಪಾರೀಕರಣದ ಲೂಟಿಗೆ ಅನುಕೂಲಕರ ವಾತಾವರಣ ಸೃಷ್ಟಿಸಲು ಬಹುರಾಷ್ಟ್ರೀಯ ಶಕ್ತಿಗಳ ಸಂಚನ್ನು  ಪರೋಕ್ಷವಾಗಿ ಬಯಲಿಗೆಳೆದು ತೋರಿಸಲಾಗಿದೆ.

       ಒಟ್ಟಿನ ಮೇಲೆ ಪರಭಾಷೆಯ ಅತಿಕ್ರಮಣ, ಆಂಗ್ಲ ಭಾಷೆಯ ಆಕ್ರಮಣ, ಆಳುವ ದಲ್ಲಾಳಿ ವರ್ಗಗಳ ಪೊಳ್ಳುತನ ಹಾಗೂ ಕನ್ನಡಿಗರ ಉದಾರಿತನಗಳೆಲ್ಲವನ್ನೂ ಸಾಕಷ್ಟು ವಿಡಂಬನೆ ಮಾಡುವ ಶುದ್ಧಗೆ ಪ್ರೇಕ್ಷಕರ ಆತ್ಮಸಾಕ್ಷಿಯನ್ನು ಕೆಣಕುತ್ತದೆ. ಇಂಗ್ಲೀಷ್ ವ್ಯಾಮೋಹಕ್ಕೆ ಬಿದ್ದು ಮಾತೃಭಾಷೆಯನ್ನು ಉಪೇಕ್ಷಿಸುತ್ತಿರುವ ಪೋಷಕರಿಗೆ ವಿಚಾರಮಾಡಲು ಪ್ರೇರೇಪಿಸುವಂತಿದೆ. ರಂಜನೆಯ ಜೊತೆಗೆ ವೈಚಾರಿಕತನವನ್ನೂ ಮೈಗೂಡಿಸಿಕೊಂಡಿದ್ದರಿಂದಲೇ ನಾಟಕ ವಿಶಿಷ್ಟವಾಗಿದೆ


     ಶುದ್ಧಗೆ ಯಲ್ಲಿ ಕನ್ನಡದ ಮೇಲೆ ಬೇರೆ ದ್ರಾವಿಢ ಭಾಷೆಗಳ ಅತಿಕ್ರಮಣವನ್ನು ಹಾಗೂ ಅಂತರಾಷ್ಟ್ರೀಯ ಆಂಗ್ಲ ಭಾಷೆಯ ದುರಾಕ್ರಮಣವನ್ನು ಅನಾವರಣಗೊಳಿಸಿದ್ದು ಸರಿಯಾಗಿದೆ. ಆದರೆ ಸಹೋದರ ಭಾಷೆಗಳಿಗಿಂತ ಅಪಾಯಕಾರಿಯಾಗಿರುವ ಹಿಂದಿ ಭಾಷೆಯ ಆಕ್ರಮಣವನ್ನು ಅದ್ಯಾಕೋ ಮರೆಯಲಾಗಿದೆ. ತ್ರಿಭಾಷಾ ಸೂತ್ರದಲ್ಲಿ ಕನ್ನಡಿಗರನ್ನು ಮೊದಲಿನಿಂದಲೂ ಬಂಧಿಸಲಾಗಿದೆ. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಆರೋಪಿಸಿ ಕನ್ನಡಿಗರ ಮೇಲೆ ಹೇರಲಾಗಿದೆ. ಇತ್ತೀಚೆಗಂತೂ ಐಟಿ-ಬಿಟಿಗಳ ಹಾವಳಿಯಿಂದಾಗಿ ಉತ್ತರಭಾರತದಿಂದ ಯುವಕರು ಕೆಲಸಕ್ಕಾಗಿ ಬೆಂಗಳೂರಿಗೆ ಗುಳೆ ಬರುತ್ತಿದ್ದಾರೆ. ಅವರು ಬಂದು ಕನ್ನಡ ಕಲಿಯುವ ಬದಲು ಕನ್ನಡಿಗರ ಮೇಲೆಯೇ ಹಿಂದಿಯನ್ನೂ ಹೇರುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಉರ್ದು, ತೆಲಗು, ತಮಿಳಿಗಿಂತ ಅತೀ ಹೆಚ್ಚು ಅಪಾಯಕಾರಿಯಾದ ಹಿಂದಿ ಹಾಗೂ ಇಂಗ್ಲೀಷ್ ಭಾಷಾ ಹೇರಿಕೆಯನ್ನು ವಿರೋಧಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಹಿಂದಿ ಹೇರಿಕೆಯನ್ನು ವಿರೋಧಿಸುವಲ್ಲಿ ವಿಫಲವಾಗಿರುವ ನಾಟಕವು ಅಪೂರ್ಣವೆನ್ನಿಸುತ್ತದೆ. ನಿಟ್ಟಿನಲ್ಲಿ ನಿರ್ದೇಶಕರು ಆಲೋಚಿಸಿ ಮುಂದಿನ ಪ್ರಯೋಗದಲ್ಲಿ ಸೂಕ್ತ ಬದಲಾವಣೆ ಮಾಡುವ ಮೂಲಕ ಪರಿಪೂರ್ಣ ನಾಟಕ ಕೊಡಬಹುದಾಗಿದೆ

 
        ಪುಟ್ಟ ಮಕ್ಕಳ ದೇಹಭಾಷೆ, ಮುಗ್ಧ ಅಭಿನಯ, ಮಿಂಚಿನ ಚಲನೆ, ನಿಂತಲ್ಲಿ ನಿಲ್ಲದ ನಡೆಗಳು ನೋಡುಗರಲ್ಲಿ ಬೆರಗು ಹುಟ್ಟಿಸುವಂತಿವೆ. ಡಂಗುರದವರು, ಬಹುಪರಾಕು ಹೇಳುವ ಮಕ್ಕಳ ಕಂಚಿನ ಕಂಠ, ಮಿಕ್ಕೆಲ್ಲಾ ಪಾತ್ರಗಳ ಕರಾರುವಕ್ಕಾದ ಸಂಭಾಷಣೆಗಳು ದೊಡ್ಡವರನ್ನು ನಾಚಿಸುವಂತಿವೆ. ಮಕ್ಕಳ ನಾಟಕಕ್ಕೆ ಬೆಳಕು ಸಂಯೋಜಿಸುವುದು ಸವಾಲಿನ ಕೆಲಸ. ವೇದಿಕೆಯಾದ್ಯಂತ ಪಾತ್ರಗಳು ಕೆಲವೊಮ್ಮೆ ಅನಿರೀಕ್ಷಿತವಾಗಿ ಓಡಾಡುವ ವೇಗಕ್ಕೆ ತಕ್ಕಂತೆ ಕ್ಷಣಮಾತ್ರದಲ್ಲಿ ಬೆಳಗಿನ ಸ್ಥಳ ಬದಲಾವಣೆ ಮಾಡಿದ ಟಿ.ಎಂ.ನಾಗರಾಜ್ ಬೆಳಕಿನ ನಿಯಂತ್ರಣ ಕೌಶಲ್ಯ ಮಾಂತ್ರಿಕತೆ ಸೃಷ್ಟಿಸಿದೆ. ಎಲ್ಲಕ್ಕಿಂತ ಹೆಚ್ಚು ಗಮನ ಸೆಳೆದು ರಂಗವೇದಿಕೆ ಮೇಲೆ ರಂಗನ್ನು ಹರಿಸಿದ್ದು ಶೋಭಾ ವೆಂಕಟೇಶ್ರವರ ಬಣ್ಣ ಬಣ್ಣದ ವಸ್ತ್ರವಿನ್ಯಾಸ. ಮಾಲತೇಶ್ ಬಡಿಗೇರ್ ರಂಗಸಜ್ಜಿಕೆ ನಾಟಕಕ್ಕೆ ಹೆಚ್ಚು ಕಳೆಕಟ್ಟಿತು. ಪ್ರವೀಣ್ ರಾವ್ ರವರ ಸಂಗೀತ ಹಾಗೂ ಸುಷ್ಮಾರವರ ನೃತ್ಯ ಸಂಯೋಜನೆಗಳು ನಾಟಕದ ಯಶಸ್ಸಿನಲ್ಲಿ ಪಾಲು ಕೇಳುವಂತಿದ್ದವು. ಒಟ್ಟಾರೆಯಾಗಿ ಶುದ್ಧಗೆಯು ಮನರಂಜನೆಯ ಜೊತೆಗೆ ನಿರಭಿಮಾನಿ ಕನ್ನಡಿಗರ ದೌರ್ಬಲ್ಯವನ್ನು ಹೇಳುತ್ತಲೇ ಕನ್ನಡ ಭಾಷೆಯ ದುರಂತವನ್ನು ರಂಗದ ಮೇಲೆ ಅನಾವರಣಗೊಳಿಸುವಲ್ಲಿ ಸಫಲವಾಯಿತು
 
ಎಸ್.ವಿ.ಸುಷ್ಮಾ
ಕನ್ನಡ ಸಂಘಟನೆಗಳು ನಾಟಕವನ್ನು ನಾಡಿನಾದ್ಯಂತ ಆಯೋಜಿಸಿದರೆ ಅದೇ ಕನ್ನಡಿಗರ ಜಾಗೃತಿಗೆ ಕಾರಣವಾಗಬಹುದಾಗಿದೆ. ನಿಟ್ಟಿನಲ್ಲಿ ಕನ್ನಡ ಪ್ರಾಧಿಕಾರ, ಅಕಾಡೆಮಿ, ಪರಿಷತ್ತು ಮತ್ತು  ಸಂಘಟನೆಗಳು ಆಲೋಚಿಸುವುದುತ್ತಮ. ಬರೀ ಭಾಷಣ, ಧರಣಿ, ಹೋರಾಟಗಳಿಗಿಂತಲೂ ಕನ್ನಡಿಗರ ಸ್ವಾಭಿಮಾನ ಕೆಣಕುವಂತಹ ಇಂತಹ ನಾಟಕಗಳು ಹೆಚ್ಚು ಪರಿಣಾಮಕಾರಿಯಾಗಬಹುದಾಗಿದೆ.

                            -ಶಶಿಕಾಂತ ಯಡಹಳ್ಳಿ

                







ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ