ಶನಿವಾರ, ಜನವರಿ 18, 2014

ಯಶಸ್ವಿಯಾದ ‘ಸಿಜಿಕೆ ರಾಷ್ಟ್ರೀಯ ನಾಟಕೋತ್ಸವ’; ಕನ್ನಡ ರಂಗಭೂಮಿಯಲ್ಲಿ ಹೊಸ ಮನ್ವಂತರ.



      
                                         
     ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ, ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ಪೂರ್ವತಯಾರಿಯೊಂದಿಗೆ ಅಚ್ಚುಕಟ್ಟಾಗಿ ರಾಷ್ಟ್ರೀಯ ನಾಟಕೋತ್ಸವವೊಂದನ್ನು ಆಯೋಜಿಸಿದ ಹವ್ಯಾಸಿ ರಂಗಸಂಸ್ಥೆ ಬೇರೊಂದು ಇರಲಿಕ್ಕಿಲ್ಲ. ರಂಗನಿರಂತರ ಅಂತಹ ಕೆಲಸವನ್ನು ಅತ್ಯಂತ ಶ್ರದ್ದೆಯಿಂದ, ಶಿಸ್ತಿನಿಂದ ಮಾಡಿದೆ. ನಿಜಕ್ಕೂ ಇದು ಮಾದರಿ ಕೆಲಸವಾಗಿದೆ.  
    
  2014, ಸಿಜಿಕೆ ಕಟ್ಟಿ ಬೆಳೆಸಿದ ರಂಗನಿರಂತರ ತಂಡದ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ವರ್ಷ. ಹಾಗೂ ಜನವರಿ 12 ಸಿಜಿಕೆ ಯವರ ಸಂಸ್ಮರಣೆಯ ದಿನ. ಸಮುದಾಯ ಸಂಘಟನೆಯಿಂದ ಹೊರಬಂದ ನಂತರ ಸಿಜಿ ಕೃಷ್ಣಸ್ವಾಮಿಯವರು ಇಪ್ಪತೈದು ವರ್ಷಗಳ ಹಿಂದೆ ಕಟ್ಟಿದ ರಂಗತಂಡ ರಂಗನಿರಂತರ. ಸಿಜಿಕೆ ಕೇವಲ ಎಲ್ಲರ ಹಾಗೆ ರಂಗತಂಡವೊಂದನ್ನು ಕಟ್ಟಿ ಕೆಲವು ನಾಟಕ ಪ್ರದರ್ಶನಕ್ಕೆ ಮಾತ್ರ ಮೀಸಲಾಗದೇ ತಂಡದ ಜೊತೆಗೆ ಹಲವಾರು ರಂಗ ಕಲಾವಿದರನ್ನು, ರಂಗ ತಂತ್ರಜ್ಞರನ್ನು ಜೊತೆಜೊತೆಗೆ ಬೆಳೆಸಿದರು. ಹಾಗೆ ಸಿಜಿಕೆ ಗರಡಿಯಲ್ಲಿ ಬೆಳೆದ ರಂಗಕರ್ಮಿ-ಕಲಾವಿದರೆಲ್ಲ್ಲಾ ಸೇರಿ ಸಿಜಿಕೆಯವರ ದೈಹಿಕ ಅನುಪಸ್ಥಿತಿಯಲ್ಲಿ ತುಂಬಾ ವ್ಯವಸ್ಥಿತವಾಗಿ ರಂಗ ಬೆಳದಿಂಗಳು ಎನ್ನುವ ಹೆಸರಲ್ಲಿ ರಾಷ್ಟ್ರೀಯ ನಾಟಕೋತ್ಸವವೊಂದನ್ನು ಆಯೋಜಿಸಿದರು


    2014, ಜನವರಿ 11 ರಿಂದ 17ರವರೆಗಿನ ಒಂದು ವಾರಗಳ ಕಾಲ ಮಹತ್ವಾಂಕಾಂಕ್ಷಿ ನಾಟಕೋತ್ಸವ
ಶಶಿಧರ್ ಅಡಪ
ನಡೆಯಿತು. ದೇಶದ ಐದು ಪ್ರಾದೇಶಿಕ ಭಾಷೆಗಳ ಐದು ವಿಶಿಷ್ಟ ನಾಟಕಗಳು ಪ್ರದರ್ಶನಗೊಂಡವು. ಜೊತೆಗೆ ಏಕವ್ಯಕ್ತಿ ಪ್ರದರ್ಶನ, ಸೂಫಿ ಗಾಯನ, ಪ್ರತಿದಿನ ಜಾನಪದ ಕಲಾಪ್ರದರ್ಶನಗಳಾದ ನೀಲಗಾರರ ಹಾಡು, ಚೌಡಿಕೆ ಪದ, ತತ್ವಪದ, ಗೀಗೀಪದ, ರಂಗಗೀತೆಗಳ ಸಂಭ್ರಮ ಕಲಾಕ್ಷೇತ್ರದ ಆವರಣದಲ್ಲಿ ಅನುರಣಿಸಿತು. ದಿನವೂ ಪ್ರದರ್ಶನಗೊಂಡ ನಾಟಕಗಳ ಕುರಿತು ಸಾರ್ಥಕ ಸಂವಾದ.... ಹೀಗೆ ಹತ್ತು ಹಲವು ಮಾದರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಡಿ.ಕೆ.ಚೌಟರ ಮಾರ್ಗದರ್ಶನ ಹಾಗೂ ಶಶಿಧರ್ ಅಡಪರವರ ನಾಯಕತ್ವದಲ್ಲ್ಲಿ ಸಾಂಸ್ಕೃತಿಕ ಸಂಭ್ರಮದ ವಾತಾವರಣವನ್ನೇ ನಿರ್ಮಿಸಲಾಗಿತ್ತು.  

   ಕಳೆದ ಮೂರು ತಿಂಗಳಿಂದ ಐವತ್ತಕ್ಕೂ ಹೆಚ್ಚು ಯುವರಂಗಕರ್ಮಿಗಳು ತಮ್ಮೆಲ್ಲಾ ವ್ಯಯಕ್ತಿಕ ಕೆಲಸಗಳನ್ನು ಬದಿಗಿಟ್ಟು ನಾಟಕೋತ್ಸವದ ಪೂರ್ವ ತಯಾರಿಗೆ ಶ್ರಮಿಸಿದ್ದಾರೆ. ಸಹಸ್ರಾರು ರಂಗಕರ್ಮಿ/ರಂಗಪ್ರೇಕ್ಷಕರ ವಿಳಾಸಗಳನ್ನು ಕಲೆಹಾಕಿದ್ದಾರೆ, ಅವರಿಗೆಲ್ಲಾ ರಂಗೋತ್ಸವ ಕುರಿತು ಮಾಹಿತಿ-ಆಹ್ವಾನ ಪತ್ರಿಕೆಗಳನ್ನು ತಲುಪಿಸಿದ್ದಾರೆ. ಪ್ರೇಕ್ಷಕರ ಕೊರತೆಯಿಂದ ಎಲ್ಲಾ ನಮೂನಿಯ ನಾಟಕೋತ್ಸವಗಳೂ ವಿಫಲವಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಪ್ರೇಕ್ಷಕರನ್ನು ಮತ್ತೆ ಕಲಾಕ್ಷೇತ್ರದತ್ತ ಕರೆತರುವ ರಂಗನಿರಂತರ ಪ್ರಯತ್ನ ಅಭಿನಂದನೀಯವಾಗಿದೆ. 

     ಕೇವಲ ಬೆಂಗಳೂರಿನ ರಂಗಪ್ರೇಮಿಗಳಿಗೆ ಮಾತ್ರ ನಾಟಕೋತ್ಸವ ತಲುಪಬಾರದು, ಅದು ಕರ್ನಾಟಕದ ರಂಗಾಸಕ್ತರಿಗೂ ಸಲ್ಲಬೇಕು ಎನ್ನುವ ಸದಾಶಯದಿಂದ ಕರ್ನಾಟಕದಾದ್ಯಂತ ನೂರಕ್ಕೂ ಹೆಚ್ಚು ಕಲಾವಿದರನ್ನು ಆಹ್ವಾನಿಸಲಾಗಿತ್ತು. ಜೊತೆಗೆ ಆಯ್ದ ೨೫ ರಂಗಕರ್ಮಿಗಳನ್ನು ಕರ್ನಾಟಕದ ಮೂಲೆ ಮೂಲೆಗಳಿಂದ ಕರೆಯಿಸಿ ಆತ್ಮೀಯ ಆತಿಥ್ಯವನ್ನು ಕೊಟ್ಟು ಇಡೀ ರಂಗೋತ್ಸವದ ಸವಿಯನ್ನು ಅನುಭವಿಸಲು ಅನುಕೂಲಮಾಡಿಕೊಟ್ಟಿರುವುದು ರಂಗೋತ್ಸವದ ವ್ಯಾಪ್ತಿಯನ್ನು ವಿಸ್ತರಿಸಿತು.

     ಸಿಜಿಕೆ ರಾಷ್ಟ್ರೀಯ ರಂಗೋತ್ಸವದ ನಿರ್ದೇಶಕರಾದ ಸಿ.ಬಸವಲಿಂಗಯ್ಯನವರು ಭಾರತದ ನಾಲ್ಕು ಭಾಷೆಗಳಿಂದ ನಾಲ್ಕು ವಿಭಿನ್ನ ನಾಟಕಗಳನ್ನು ಆಯ್ಕೆ ಮಾಡಿ ಆಹ್ವಾನಿಸಿ ಕನ್ನಡ ರಂಗರಸಿಕರಿಗೆ ತೋರಿಸಿದ್ದು ಅನನ್ಯವಾದ ಅನುಭವವನ್ನು ಕಟ್ಟಿಕೊಟ್ಟಿದ್ದಂತೂ ಸತ್ಯ. ಕನ್ನಡದ ನಾಟಕಗಳೇ ಅದ್ಬುತ ಎನ್ನುವ ಭ್ರಮೆಯಲ್ಲಿದ್ದ ನಮಗೆ ನಾಟಕ ಎಂದರೆ ಹೀಗೂ ಉಂಟಾ? ಎನ್ನುವ ರೀತಿಯಲ್ಲಿ ವಿಭಿನ್ನ ನಾಟಕಗಳನ್ನು ತೋರಿಸಿದ್ದು ನಿಜಕ್ಕೂ ಅಭಿನಂದನೀಯವಾದದ್ದು.
  
   ಸಿಜಿಕೆ ರಾಷ್ಟ್ರೀಯ ನಾಟಕೋತ್ಸವದ ಮೊದಲ ನಾಟಕ ಮಲಯಾಳಂ ಭಾಷೆಯ ಮ್ಯಾಕ್ಬೆತ್. ಮೂಲ ಷೇಕ್ಸಪಿಯರ್ ನಾಟಕದ ಮ್ಯಾಕ್ಬೆತ್ ಹಾಗೂ ಲೇಡಿ ಮ್ಯಾಕ್ಬೆತ್ ಪಾತ್ರಗಳನ್ನೇ ಕೇಂದ್ರವಾಗಿಟ್ಟುಕೊಂಡು ಮನೋವೈಜ್ಞಾನಿಕ ನೆಲೆಯಲ್ಲಿ ನಾಟಕವನ್ನು ಕಟ್ಟಿಕೊಡುವ ಪ್ರಯತ್ನ ಅನನ್ಯವಾಗಿತ್ತು. ಆಧುನಿಕ ರಂಗತಂತ್ರಗಳನ್ನು ಬಳಸಿಕೊಂಡು ರಂಗದಂಗಳದಲ್ಲಿ ದೃಶ್ಯಕಾವ್ಯವೊಂದನ್ನು ಸೃಷ್ಟಿಸಲಾಯಿತು. ತನ್ನ ಶೈಲೀಕೃತ ಅಭಿನಯ, ಕಪ್ಪು-ಬಿಳಪು-ಕೆಂಪು ಬಣ್ಣಗಳ ರಂಗವಿನ್ಯಾಸ, ಬೆಳಕಿನ ವಿನ್ಯಾಸ ಹಾಗೂ ವಸ್ತ್ರವಿನ್ಯಾಸಗಳು ಪ್ರೇಕ್ಷಕರನ್ನು ಭ್ರಮಾಲೋಕಕ್ಕೆ ಕರೆದೊಯ್ದು ಅತೀಂದ್ರೀಯ ಅನುಭವವನ್ನು ಕಟ್ಟಿಕೊಟ್ಟವು. ನಾಟಕ ಸುಲಭಕ್ಕೆ ಅರ್ಥವಾಗದಿದ್ದರೂ ಅದು ಕೊಟ್ಟ ಅನುಭವ ಮಾತ್ರ ಬಹುದಿನಗಳ ಕಾಲ ಮನದಾಳದಲ್ಲಿ ಉಳಿಯುವಂತಹುದು. ದೃಶ್ಯಕಾವ್ಯದ ನಿರ್ದೇಶಕ ಎಂ.ಜಿ.ಜ್ಯೋತಿಷ್. ಅಭಿನಯಿಸಿದ ತಂಡ ಕೇರಳದ ತಿರುವನಂತಪುರದ ಅಭಿನಯ ಥೀಯಟರ್. ನಾಟಕದ ತಯಾರಿಯ ಹಿಂದೆ ಒಂದು ವರ್ಷದ ಶ್ರಮವಿದೆ.


   ಎರಡನೇ ನಾಟಕ ಮಹಾಭಾರತವನ್ನು ಆಧರಿಸಿದ ಊರುಭಂಗಂ. ಬೆಂಗಾಲಿ ಭಾಷೆಯ ನಾಟಕವು ಮಹಾಭಾರತದ ಆಯ್ದ ಘಟನೆಗಳನ್ನು ಮರುಸೃಷ್ಟಿಸಿದ ರೀತಿ ನೋಡಿದವರೆಂದೂ ಮರೆಯಲಾಗದಂತಹುದು. ದೇಶದ ಹಲವಾರು ನೃತ್ಯಪ್ರಕಾರಗಳು, ಅಭಿನಯ ಶೈಲಿಗಳು ಹಾಗೂ ಕಲಾಪ್ರಕಾರಗಳನ್ನು ಬಳಸಿಕೊಂಡು ಮಹಾಭಾರತವನ್ನು ವಿಶಿಷ್ಟವಾಗಿ ಹೇಳುವ ಕ್ರಮ ನೋಡುಗರಲ್ಲಿ ಸಂಚಲನವನ್ನುಂಟುಮಾಡಿದ್ದಂತೂ ಸುಳ್ಳಲ್ಲ. ನಟರ ದೇಹಭಾಷೆಯನ್ನು ಪರಿಯಲ್ಲೂ ಬಳಸಬಹುದೆಂಬ ಪರಿಕಲ್ಟನೆಯನ್ನು ಹುಟ್ಟು ಹಾಕಿದ ಊರುಭಂಗಂ ರಂಗವೇದಿಕೆಯಲ್ಲಿ ದೃಶ್ಯಪವಾಡವನ್ನು ಸೃಷ್ಟಿಸಿತು. ಹಾಡು, ಸಂಗೀತ, ನೃತ್ಯ ಹಾಗೂ ಅಭಿನಯಗಳು ಮೋಡಿಯನ್ನುಂಟುಮಾಡಿದ ಪರಿಯನ್ನು ನೋಡಿಯೇ ಅನುಭವಿಸಬೇಕು. ಮಹಾಭಾರತವನ್ನು ಸಮರ್ಥವಾಗಿ ಕಟ್ಟಿಕೊಡುವಲ್ಲಿ ವಿಫಲವಾದರೂ ಸಹ ಮಹಾಕಾವ್ಯದ ಆಯ್ದ ಭಾಗಗಳನ್ನು ಸೃಜನಶೀಲವಾಗಿ ತೋರಿಸುತ್ತಾ, ಮರುವ್ಯಾಖ್ಯಾನ ಮಾಡುತ್ತಾ, ವಿಭಿನ್ನ ರೀತಿಯ ನರೇಟಿವ್ ಹಾಗೂ ಎಫಿಕ್ ಶೈಲಿಯನ್ನು ಅಳವಡಿಸಿಕೊಂಡು ನಾಟಕ ಪ್ರಸ್ತುತಗೊಂಡ ರೀತಿ ನೋಡುಗರ ನಯನಗಳಿಗೆ ಹಬ್ಬವನ್ನುಂಟುಮಾಡಿತು. ನಾಟಕದ ನಿರ್ದೇಶನ ಬಂಗಾಲಿ ಬಾಬು ಮನಿಷ್ ಮಿತ್ರ. ಅಭಿನಯಿಸಿದ ತಂಡ ಕಲ್ಕತ್ತಾದ ಕೋಯಿಷ್ಬ ಅರ್ಘ್ಯ. ನಾಟಕದ ಹಿಂದೆ ನಾಲ್ಕೂವರೆ ವರ್ಷದ ಪರಿಶ್ರಮವಿದೆ.
  
     ಮೂರನೆಯ ನಾಟಕ ಮರಾಠಿ ಭಾಷೆಯ ಹಿಜಡಾ. ಇದೊಂದು ಲೈಂಗಿಕ ಅಲ್ಪಸಂಖ್ಯಾತರ ಬದುಕು-ಬವನೆಯನ್ನು ರಂಗದಂಗಳದಲ್ಲಿ ತೋರಿಸುವ ಪ್ರಯತ್ನ. ಪಕ್ಕಾ ರಿಯಲಿಸ್ಟಿಕ್ ನಾಟಕ. ರಂಗವಿನ್ಯಾಸ ಹಾಗೂ ಅಭಿನಯದಲ್ಲಿ ಇದ್ದದ್ದನ್ನು ಇದ್ದಹಾಗೆಯೇ ತೋರಿಸುವ ದಾವಂತ. ಗಂಡಾಗಿ ಹುಟ್ಟಿ ಹೆಣ್ಣಿನ ಭಾವನೆ ಹಾಗೂ ವರ್ತನೆಗಳನ್ನು ಹೊಂದಿರುವ, ಅತ್ತ ಗಂಡೂ ಅಲ್ಲದೆ ಇತ್ತ ಹೆಣ್ಣೂ ಅಲ್ಲದೆ ಅಪೂರ್ಣತೆಯ ಮಾನಸಿಕ ತೊಳಲಾಟ ಅನುಭವಿಸುತ್ತಿರುವ ಹಿಜಡಾಗಳ ದುರಂತ ಬದುಕಿನ ಮೇಲೆ ಬೆಳಕು ಚೆಲ್ಲುವ ಒಂದು ಸಾರ್ಥಕ ಪ್ರಯತ್ನ ನಾಟಕದ್ದಾಗಿದೆ. ಕುಟುಂಬದಿಂದ ಪರಿತ್ಯಕ್ತರಾಗಿ, ಸಮಾಜದಿಂದ ಬಹಿಷ್ಕೃತರಾಗಿ ತಮ್ಮ ಅಸ್ತಿತ್ವಕ್ಕಾಗಿ ಅವಮಾನವನ್ನೂ ಸಹಿಸಿಕೊಂಡು ನಿಷ್ಕೃಷ್ಟವಾಗಿ ಬದುಕುತ್ತಿರುವ ಶಾಪಗ್ರಸ್ತ ಹಿಜಡಾ ಜನಾಂಗದ ನೋವು ನಲಿವುಗಳನ್ನು ಮಾನವೀಯ ನೆಲೆಯಲ್ಲಿ ಹಿಜಡಾ ನಾಟಕವು ಕಟ್ಟಿಕೊಟ್ಟಿದೆ. ಹಿಜಡಾ ಜನಾಂಗದಿಂದಲೇ ಪ್ರತಿಭಟನೆಯನ್ನು ಎದುರಿಸಿದ ನಾಟಕವು ಅತಿಯಾದ ಅಶ್ಲೀಲ ಪದಗಳ ವ್ಯಾಪಕ ಬಳಕೆಯಿಂದಾಗಿ ಸಾಂಪ್ರದಾಯಿಕ ಪ್ರೇಕ್ಷಕರು ಹಾಗೂ ಕುಟಂಬ ಸಮೇತ ನಾಟಕ ನೋಡಲು ಬಂದ ನೋಡುಗರಲ್ಲಿ ಮುಜುಗರವನ್ನುಂಟುಮಾಡಿದ್ದಂತೂ ದಿಟ. ಸೆರ್ಟಿಫಿಕೇಟ್ ನಾಟಕವಾದ ಇದನ್ನು ೧೮ ವರ್ಷ ವಯೋಮಾನದೊಳಗಿನವರಿಗೆ ನಿರ್ಬಂಧಿಸುವುದು ಒಳಿತು. ನಾಟಕಕ್ಕೆ ಮಹಾರಾಷ್ಟ್ರದಲ್ಲಿ ಸೆನ್ಸಾರ್ಕಟ್ ಇದೆ. ಇದೆಲ್ಲವನ್ನೂ ಹೊರತು ಪಡಿಸಿ ಹಿಜಡಾ ಜನಾಂಗವನ್ನು ಸಕಾರಣವಾಗಿ ದ್ವೇಶಿಸುವವರಲ್ಲಿ ಹಿಜಡಾಗಳನ್ನು ಮಾನವೀಯ ನೆಲೆಯಲ್ಲಿ ನೋಡುವಂತೆ ಪ್ರೇರೇಪಿಸಿದ್ದು ನಾಟಕದ ಸಕಾರಾತ್ಮಕತೆಯಾಗಿದೆ. ನಿಜವಾದ ಹಿಜಡಾಗಳನ್ನು ಮೀರುಸುವಂತೆ ನಾಟಕದ ಕಲಾವಿದರು ಅಭಿನಯಿಸಿದ್ದಾರೆ.  ಹಿಜಡಾ ನಾಟಕದ ನಿರ್ದೇಶಕರು ಸಗೀರ್ ಲೋಧಿ. ಅಭಿನಯಿಸಿದ ರಂಗತಂಡ ಪೂಣೆಯ ಆಕಾಂಕ್ಷಾ. ನಾಟಕದ ಹಿಂದೆ ಮೂರು ವರ್ಷಗಳ ಶ್ರಮವಿದೆ.


     ನಾಲ್ಕನೆಯ ನಾಟಕ ಹಿಂದಿ ಭಾಷೆಯ ಸೆವೆಂಟೀನ್ತ್ ಜುಲೈ, ಸಮಕಾಲೀನ ರಾಜಕೀಯ ಹಾಗೂ ಸಾಮಾಜಿಕ ವೈರುದ್ಯಗಳನ್ನು ತೋರಿಸುವ ರಿಯಾಲಿಸ್ಟಿಕ ಮಾದರಿಯ ನಾಟಕವಿದು. ಗುಜರಾತಿನಲ್ಲಿ ನಡೆದ ಮತೀಯವಾದಿಗಳ ಅಮಾನವೀಯ ಅಟ್ಟಹಾಸದ ಹಿನ್ನೆಲೆಯಲ್ಲಿ ಇಡೀ ವ್ಯವಸ್ಥೆ ಹೇಗೆ ಕೋಮುವಾದಿಯಾಗುತ್ತದೆ ಎಂಬುದನ್ನು ವಿಶ್ಲೇಷಿಸುವ ಪ್ರಯತ್ನ ನಾಟಕದಲ್ಲಿದೆ. ನ್ಯಾಯಾಂಗ ವ್ಯವಸ್ಥೆಯೊಳಗಿನ ಕೋಮುವಾದಿತನವನ್ನು ಲೇವಡಿ ಮಾಡುವ ರಂಗಪ್ರಯೋಗವು ಮತೀಯವಾದಿಗಳು ಹಾಗೂ ರಾಜಕಾರಣಿಗಳ ಹುನ್ನಾರಗಳನ್ನು ಬೆತ್ತಲೆಗೊಳಿಸುತ್ತದೆ. ಡ್ರ್ಯಾಗನ್ ಮಾದರಿಯ ಹಾವನ್ನೇ ಪ್ರೇಕ್ಷಾಂಗಣದಲ್ಲಿ ಹರಿದಾಡಿಸಿ ಅಚ್ಚರಿ ಹುಟ್ಟಿಸಿದ ನಿರ್ದೇಶಕರು ಹಿಂದೂ ಮುಸ್ಲಿಂ ಸೌಹಾರ್ದತೆಯ ಅನಿವಾರ್ಯತೆಯನ್ನು ಹೇಳುತ್ತಾರೆ. ಸೈದ್ದಾಂತಿಕ ಸಂವಾದ ನಾಟಕದ ಅಂತಸ್ಸತ್ವವಾಗಿದ್ದು ಮತೀಯ ಸಂಘರ್ಷ ಹಾಗೂ ಸ್ವಾರ್ಥ ರಾಜಕೀಯ ಅದು ಹೇಗೆ ಜನವಿರೋಧಿಯಾಗಿದೆ ಎನ್ನುವುದನ್ನು ವಿಡಂಬಣಾತ್ಮಕವಾಗಿ ತೋರಿಸುವ ಒಂದು ಸಾರ್ಥಕ ಪ್ರಯತ್ನ ಸೆವೆಂಟೀನ್ತ್ ಜುಲೈ ನಾಟಕದ್ದಾಗಿದೆ. ಗುಜರಾತ್ ಹತ್ಯಾಕಾಂಡ ಕುರಿತ ವಿಡಿಯೋ ತುಣುಕುಗಳು ಕೋಮುವಾದಿಗಳು ಉಂಟುಮಾಡಿದ ಅನಾಹುತಕ್ಕೆ ಸಾಕ್ಷಿಯಾಗಿ ನಾಟಕದಲ್ಲಿ ಬಳಕೆಯಾಗಿವೆ. ವೇದಿಕೆಯನ್ನು ಆಕ್ರಮಿಸಿದ ಸೆಟ್ಗಳು ಹಾಗೂ ಪಾತ್ರಗಳ ತಡೆರಹಿತ ವೇಗದ ಮಾತುಗಳು ನಾಟಕಕ್ಕೆ ಒಂದಿಷ್ಟು ಹಿನ್ನಡೆಯನ್ನುಂಟುಮಾಡಿವೆ. ಒಟ್ಟಾರೆಯಾಗಿ ರಂಗತಂತ್ರಗಳು ಮಾಂತ್ರಿಕತೆಯನ್ನು ಕಟ್ಟಿಕೊಡದಿದ್ದರೂ ಸಂಭಾಷಣಾ ಪ್ರಧಾನವಾದ ನಾಟಕವು ತನ್ನ ಸೈದ್ದಾಂತಿಕ ಆಶಯದಲ್ಲಿ ಯಶಸ್ವಿಯಾಗಿದೆ. ನಾಟಕವನ್ನು ರಚಿಸಿ ನಿರ್ದೇಶಿಸಿದ್ದು ಬೆಂಗಾಲಿ ಬಾಬು ಬಾಪಿ ಬೋಷ್. ಅಭಿನಯಿಸಿದ ತಂಡ ದೆಲ್ಲಿಯ ಸರ್ಕಲ್ ಥೀಯೇಟರ್ ಕಂಪನಿ. ನಾಟಕದ ಹಿಂದೆ ಮೂರು ವರ್ಷದ ಪರಿಶ್ರಮವಿದೆ. ನಾಟಕ ನಿರ್ಮಾಣದ ಒಟ್ಟು ಬಜೆಟ್ ಹನ್ನೊಂದು ಲಕ್ಷ ರೂಪಾಯಿಗಳು.

   
    ಕೊನೆಯ ನಾಟಕ ಕನ್ನಡದ ಮಿತ್ತಬೈಲ್ ಯಮುನಕ್ಕೆ. ಪಾಳೆಗಾರಿಕೆಯ ಹಿಂಸೆ ಮತ್ತು ಗಾಂಧಿಯ ಅಹಿಂಸೆಯನ್ನು ಮುಖಾಮುಖಿಯಾಗಿಸಿ ಕೊನೆಗೆ ಹಿಂಸೆಯ ನಿರರ್ಥಕತೆ ಹಾಗೂ ಅಹಿಂಸೆಯ ಸಾರ್ಥಕತೆಯನ್ನು ನಾಟಕ ತೋರಿಸುತ್ತದೆ. ಭೂಒಡೆತನಕ್ಕಾಗಿ ನಡೆಯುವ ತಂತ್ರಗಾರಿಕೆ, ಅದು ಹುಟ್ಟಿಸುವ ದ್ವೇಷ, ದ್ವೇಷ ಸೃಷ್ಟಿಸುವ ಹಿಂಸೆಗಳನ್ನು ಹಾಗೂ ಅದರಿಂದುಂಟಾದ ದುಷ್ಪರಿಣಾಮಗಳನ್ನು ಪರಿಣಾಮಕಾರಿಯಾಗಿ ನಾಟಕ ಕಟ್ಟಿಕೊಡುತ್ತದೆ. ಶತಮಾನಗಳಿಂದ ಪುರುಷರೇ ನೇರವಾಗಿ ಆಳುತ್ತಿದ್ದ ಜಮೀನ್ದಾರಿಕೆಯನ್ನು ನಾಟಕದಲ್ಲಿ ಮಹಿಳೆಯೊಬ್ಬಳು ಮುನ್ನೆಡೆಸುವ ಮೂಲಕ ಶೋಷಕ ವ್ಯವಸ್ಥೆಯಲ್ಲಿ ಮಹಿಳಾ ಪ್ರಧಾನ್ಯತೆಯನ್ನು ಮೆರೆಯುವ ಪ್ರಯತ್ನ ನಾಟಕದಲ್ಲಿದೆ. ದ್ವೇಷ ಎಲ್ಲವನ್ನೂ ಎಲ್ಲರನ್ನೂ ಸುಟ್ಟು ಹಾಕುತ್ತಾ ತಾನು ಮಾತ್ರ ಬದುಕೇ ಇರುತ್ತದೆ.... ಹಿಂಸೆ ಹಿಂಸೆಯನ್ನು ಜಯಿಸುವುದಿಲ್ಲ, ದಾರಿ ಒಳ್ಳೆಯದಾದರೆ ಗುರಿಯೂ ಒಳ್ಳೆಯದಾಗಿರುತ್ತದೆ ಎಂದು ನಾಟಕದ ಗಾಂಧಿವಾದಿ ಸುಬ್ಬಣ್ಣ ಹೇಳುವ ಮಾತುಗಳು ಮಿತ್ತಬೈಲ್ ಯಮುನಕ್ಕೆ ನಾಟಕದ ಪ್ರಮುಖ ಆಶಯವಾಗಿದೆ. ಡಾ.ಡಿ.ಕೆ.ಚೌಟರವರು ತುಳು ಭಾಷೆಯಲ್ಲಿ ಬರೆದ ಕಾದಂಬರಿಯನ್ನು ಬಸವರಾಜ ಸೂಳೇರಿಪಾಳ್ಯರವರು ರಂಗರೂಪಕ್ಕಿಳಿಸಿದ್ದಾರೆ. ನಾಟಕದ ರಂಗವಿನ್ಯಾಸ ಮತ್ತು ನಿರ್ದೇಶನ ಪ್ರಮೋದ್ ಶಿಗ್ಗಾಂವ್ರವರದ್ದು. ಅಭಿನಯಿಸಿದ ರಂಗತಂಡ ರಂಗನಿರಂತರ.

  ಹೀಗೆ... ಐದು ವಿಭಿನ್ನ ನಾಟಕಗಳನ್ನು ವಿಶಿಷ್ಟವಾಗಿ ಪ್ರದರ್ಶಿಸಿದ್ದು ರಾಷ್ಟ್ರೀಯ ನಾಟಕೋತ್ಸವದ ವಿಶೇಷತೆಯಾಗಿದೆ. ಎಲ್ಲಾ ನಾಟಕಗಳ ಆಂತರ್ಯವೊಂದೇ ಅದು ಮಾನವೀಯತೆಯ ಹುಡುಕಾಟ. ಹಿಂಸೆಯ ವಿವಿಧ ಆಯಾಮಗಳ ಅನಾವರಣ ಹಾಗೂ ಅಹಿಂಸೆಯ ಅಗತ್ಯತೆಯನ್ನು ಎಲ್ಲಾ ನಾಟಕಗಳೂ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಹೇಳುತ್ತವೆ. ಹಾಗೂ ತಮ್ಮ ಆಶಯಗಳಲ್ಲಿ ಎಲ್ಲಾ ನಾಟಕಗಳೂ ಯಶಸ್ವಿಯಾಗಿವೆ.

     ರಂಗಚಟುವಟಿಕೆಗಳು ಚಳುವಳಿಯಾಗಬೇಕು ಎನ್ನುವುದು ಸಿಜಿಕೆಯವರ ಆಶಯವಾಗಿತ್ತು. ಅವರ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ರಂಗನಿರಂತರ ಆಯೋಜಿಸಿದ ಏಳು ದಿನಗಳ ರಂಗಬೆಳದಿಂಗಳಿಗೆ ಬನ್ನಿ ಎನ್ನುವ ಸಿಜಿಕೆ ರಾಷ್ಟ್ರೀಯ ನಾಟಕೋತ್ಸವ ರಂಗಚಳುವಳಿಗೆ ಮುನ್ನುಡಿ ಬರೆದಂತಿದೆ. ಎಲ್ಲಾ ಆಯಾಮಗಳಲ್ಲೂ ನಾಟಕೋತ್ಸವ ಯಶಸ್ವಿಯಾಗಿದೆ. ಸರಕಾರಿ ಇಲಾಖೆ, ಅಕಾಡೆಮಿಗಳು ಮಾಡದಂತಹ ಕೆಲಸವನ್ನು ರಂಗನಿರಂತರ ವ್ಯವಸ್ಥಿತವಾಗಿ ಆಯೋಜಿಸಿದೆ. ಕಾಟಾಚಾರಕ್ಕೋ, ಇಲಾಖೆಯ ಸಂಪನ್ಮೂಲ ಕಬಳಿಕೆಗೋ ನಾಟಕೋತ್ಸವವನ್ನು ಹಮ್ಮಿಕೊಳ್ಳುವ ಕೆಲವು ವೃತ್ತಪರ ಸಂಘಟಕರಿಗೆ ನಾಟಕೋತ್ಸವ ಮಾದರಿಯಾಗಿದೆ. ಸಾಂಸ್ಕೃತಿಕ ದಲ್ಲಾಳಿಗಳನ್ನು, ರಂಗರಾಜಕಾರಣಿಗಳನ್ನು ದೂರವಿಟ್ಟು ಬಹುತೇಕ ಸ್ವಾರ್ಥರಹಿತ ರಂಗಕರ್ಮಿಗಳನ್ನು ಜೊತೆಸೇರಿಸಿಕೊಂಡು ಇಡೀ ನಾಟಕೋತ್ಸವವನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಿದ್ದು ಕನ್ನಡ ರಂಗಭೂಮಿಯಲ್ಲಿ ನಿಜಕ್ಕೂ ಆಶಾದಾಯಕ ಬೆಳವಣಿಗೆಯಾಗಿದೆ. ಹೊಸ ಮನ್ವಂತರಕ್ಕೆ ನಾಂದಿಯಾಗಿದೆ. ಸಿಜಿಕೆ ಕಂಡ ಕನಸಿನ ರಂಗಭೂಮಿ ನನಸಾಗುವ ಲಕ್ಷಣಗಳು ಆರಂಭವಾಗಿವೆ. ಸಿಜಿಕೆ ಹುಟ್ಟುಹಾಕಿದ ರಂಗತರಂಗಗಳು ರಂಗುಪಡೆದುಕೊಂಡು ರಂಗದಂಗಳದಲ್ಲಿ ವಿಸ್ಮಯ ಹುಟ್ಟಿಸುವ ಕಾಲ ಸನ್ನಿಹಿತವಾಗಿದೆ. ಸಿಜಿಕೆ ಹಾಗೂ ಅವರು ಕಟ್ಟಿಹೋದ ರಂಗಕರ್ಮಿ ಕಲಾವಿದರ ರಂಗಪಡೆಗೆ ರಂಗನಮನ
 
 -ಶಶಿಕಾಂತ ಯಡಹಳ್ಳಿ,  131, ದೊಮ್ಮಲೂರು, ಬೆಂಗಳೂರು. ಮೊ: 9844025119
 
               




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ