ಮಂಗಳವಾರ, ಜನವರಿ 14, 2014

ಅರ್ಥವಾಗದ ಅತೀಂದ್ರೀಯ ದೃಶ್ಯಕಾವ್ಯ “ಮ್ಯಾಕಬೆತ್”



  

                                                              
  ಶೇಕ್ಸಪೀಯರ್ ಪ್ರಸಿದ್ದ ನಾಟಕ ಮ್ಯಾಕ್ಬೆತ್ ಜಗತ್ತಿನಾದ್ಯಂತ ಹಲವಾರು ದೇಶ-ಭಾಷೆಗಳಲ್ಲಿ ಕಳೆದ   ಶತಮಾನಗಳಿಂದ ಪ್ರದರ್ಶನಗೊಳ್ಳುತ್ತಲೇ ಬಂದಿದೆ. ಬೇರೆ ಬೇರೆ ನಿರ್ದೇಶಕರ ದೃಷ್ಟಿಕೋನ ಮತ್ತು ಆಶಯಕ್ಕೆ ತಕ್ಕಂತೆ ತನ್ನ ರೂಪ-ಸ್ವರೂಪವನ್ನು ಕಾಲಕಾಲಕ್ಕೆ ಬದಲಾಯಿಸಿಕೊಳ್ಳುತ್ತಲೇ ತನ್ನ ನಿರಂತರತೆಯನ್ನು  ಕಾಪಾಡಿಕೊಳ್ಳುತ್ತ ಮುನ್ನಡೆದಿದೆ.  ಈಗ ಕೇರಳದ ರಂಗನಿರ್ದೇಶಕ ಎಂ.ಜಿ.ಜ್ಯೋತಿಷ್ ರವರ ನಿರ್ದೇಶನದಲ್ಲಿ ಮ್ಯಾಕ್ಬೆತ್ ನಾಟಕವು ತಿರುವಿನಂತಪುರದ ಅಭಿನಯ ಥೀಯಟರ್ ತಂಡದ ಕಲಾವಿದರಿಂದ ಪ್ರದರ್ಶನಗೊಂಡಿತು.

    ರಂಗನಿರಂತರ ರಂಗತಂಡವು ರಜತ ಮಹೋತ್ಸವದ ಅಂಗವಾಗಿ ಸಿಜಿಕೆ ನೆನಪಿನಲ್ಲಿ ಏರ್ಪಡಿಸಲಾಗಿರುವ ಸಿಜಿಕೆ ರಾಷ್ಟ್ರೀಯ ನಾಟಕೋತ್ಸವದಲ್ಲಿ 2014, ಜನವರಿ 12 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡ ಮಲಯಾಳಂ ಮ್ಯಾಕ್ಬೆತ್ ರಂಗದಂಗಳದಲ್ಲಿ ದೃಶ್ಯಕಾವ್ಯವನ್ನು ಸೃಷ್ಟಿಸಿತು. ಚಲಿಸುವ ಬಿತ್ತಿಚಿತ್ರವೊಂದು ರಂಗವೇದಿಕೆಯ ಮೇಲೆ ಅನಾವರಣಗೊಂಡಿತು.

    ಅಸಲಿಗೆ   ಪ್ರಯೋಗ  ಷೇಕ್ಸ್ಪಿಯರ್ ಮ್ಯಾಕ್ಬೆತ್ ಅಲ್ಲವೇ ಅಲ್ಲ. ಮ್ಯಾಕ್ಬೆತ್ ಪ್ರಮುಖ ಮೂರು ಪಾತ್ರಗಳನ್ನಿಟ್ಟುಕೊಂಡು ತಮ್ಮದೇ ಆದ ರೀತಿಯಲ್ಲಿ ನಿರ್ದೇಶಕರು ಮ್ಯಾಕ್ಬೆತ್ನ್ನು ಕಟ್ಟಿಕೊಟ್ಟಿದ್ದಾರೆ. ಹೀಗಾಗಿ ಇದಕ್ಕೆ ಜೋತಿಷ್ ಮ್ಯಾಕ್ಬೆತ್ ಎನ್ನಬಹುದಾಗಿದೆ. ಮ್ಯಾಕ್ಬೆತ್ ಹಾಗೂ ಆತನ ಹೆಂಡತಿ ಲೇಡಿ ಮ್ಯಾಕ್ಬೆತ್ ಮತ್ತು ಆತನ ಗೆಳೆಯ ಬ್ಯಾಂಗೋ ಮೂರೆ ಪಾತ್ರಗಳನ್ನಿಟ್ಟುಕೊಂಡು ಮನೋವೈಜ್ಞಾನಿಕವಾಗಿ ನೆಲೆಯಲ್ಲಿ ನಾಟಕವನ್ನು ವಿಶಿಷ್ಟವಾಗಿ ನಿರ್ದೇಶಿಸುವ ಪ್ರಯತ್ನ ಮಾಡಲಾಗಿದೆ



   ರಾಜ ಡೆಂಕನ್ನನ್ನು ಕೊಂದು ತನ್ನ ಗಂಡ ಮ್ಯಾಕ್ಬೆತ್ನನ್ನು ರಾಜನನ್ನಾಗಿಸಬೇಕು ಹಾಗೂ ತಾನು ರಾಣಿಯಾಗಿ ಮೆರೆಯಬೇಕು ಎಂದು ಶಡ್ಯಂತ್ರ ರಚಿಸಿದ ಲೇಡಿ ಮ್ಯಾಕ್ಬೆತ್ಳು ತನ್ನ ಮನೆಗೆ ಭೂಜನಕೂಟಕ್ಕೆ ರಾಜನನ್ನು ಆಹ್ವಾನಿಸಿ ಕೊಂದು ತನ್ನ ಆಶಯದಲ್ಲಿ ಯಶಸ್ವಿಯಾಗುತ್ತಾಳೆ. ಸಂದೇಹ ಪಟ್ಟ ಬ್ಯಾಂಕೋನನ್ನು ತನ್ನ ದಾರಿಯಿಂದ ದೂರಮಾಡುತ್ತಾಳೆ. ಆದರೆ ನಂತರ ಮ್ಯಾಕ್ಬೆತ್ಗೆ ಪಾಪಪ್ರಜ್ಞೆ ಕಾಡತೊಡಗುತ್ತದೆ. ಎಲ್ಲೆಲ್ಲೂ ಬ್ಯಾಂಕೋನ ರುಂಡ ಕಾಣತೊಡಗುತ್ತದೆ. ಇದರಿಂದಾಗಿ ಮ್ಯಾಕ್ಬೆತ್ ಭ್ರಮೆಗೊಳಗಾದರೆ ಲೇಡಿ ಮ್ಯಾಕ್ಬೆತ್ ದಿಗ್ಬ್ರಮೆಗೊಳಗಾಗುತ್ತಾಳೆ. ಕೊನೆಗೆ ಅಕೆ ಆತ್ಮಹತ್ಯೆಮಾಡಿಕೊಳ್ಳುತ್ತಾಳೆ. ಮ್ಯಾಕ್ಬೆತ್ ಕೊನೆಯಾಗುತ್ತಾನೆ. ಇದು ಜೋತಿಷ್ ಮ್ಯಾಕ್ಬೆತ್ ನಾಟಕದ ಸಂಕ್ಷಿಪ್ತ ಕಥೆ.

  ನಾಟಕದಲ್ಲಿ ಪಾತ್ರಗಳೇ ಇಲ್ಲ. ಅಲ್ಲಿರುವುದು ಕೇವಲ ಇಮೇಜಿಸ್. ಭ್ರಮಾತ್ಮಕ ಬಿಂಬಗಳ ಮೂಲಕ ಮನುಷ್ಯನೊಳಗಿನ ದುರಾಸೆ, ವಿಕ್ಷಿಪ್ತತೆ, ಕೊಲೆಪಾತಕತನ, ನಂಬಿಕೆದ್ರೋಹ... ಮುಂತಾದ ದೌರ್ಬಲ್ಯಗಳನ್ನು ಮನೋವೈಜ್ಞಾನಿಕವಾಗಿ ವಿಶ್ಲೇಷಿಸಲು ಪ್ರಯತ್ನಿಸಲಾಗಿದೆ. ಇಲ್ಲಿ ಬಿಳಿ ಬಣ್ಣದ ಮುಸುಕುದಾರಿ ಎಂಜಿಲ್ಗಳು ಒಳ್ಳೆಯತನದ ಸಂಕೇತವಾದರೆ, ಕಪ್ಪು ಬಣ್ಣದ ಮುಸುಕುದಾರಿ ಪಿಶಾಚಿಗಳು ಕೆಡುಕಿನ ಪ್ರತೀಕವಾಗಿವೆ. ಮನುಷ್ಯ ರೂಪದ ರಣಹದ್ದುಗಳು ದುರಾಸೆಯ ರೂಪಕವಾದರೆ, ಅರೆಬೆತ್ತಲೆ ವ್ಯಕ್ತಿಗಳು ಪ್ರಜ್ಞೆಯ ಪ್ರತಿರೂಪವಾಗಿವೆ. ಲೇಡಿ ಮ್ಯಾಕ್ಬೆತ್ ದುರಾಸೆಯ ಮೊತ್ತವಾದರೆ, ಮ್ಯಾಕ್ಬೆತ್ ಆಕೆಯ ದುರಾಸೆಯ ದಾಳಕ್ಕೆ ಸಿಕ್ಕು ದುರಂತಕ್ಕೊಳಗಾಗುತ್ತಾನೆ. ಮ್ಯಾಕ್ಬೆತ್ ಮತ್ತು ಲೇಡಿ ಮ್ಯಾಕ್ಬೆತ್ ಪಾತ್ರಗಳ ವಿಕ್ಷಿಪ್ತ ವ್ಯಕ್ತಿತ್ವ, ತಲ್ಲಣ, ತಳಮಳ, ಅಶಾಂತಿ, ಅತೃಪ್ತಿ, ಅಸಮಾಧಾನ, ಉದ್ವೇಗ, ಉನ್ಮಾದ, ಉದ್ರೇಕ, ಹಾಗೂ ತಪ್ಪಿತಸ್ತ ಮನೋಭಾವನೆಗಳನ್ನು ತೋರಿಸಲು ನಾಟಕದಾದ್ಯಂತ ಕನ್ನಡಿಗಳನ್ನು ಬಳಸಲಾಗಿದೆ. ಎರಡೂ ಪಾತ್ರವೆನ್ನುವ ಬಿಂಬಗಳ ಮಾನಸಿಕ ತುಮಲಗಳ ಪ್ರತಿಬಿಂಬಗಳನ್ನು ಕನ್ನಡಿಯ ಮೂಲಕ ನೋಡುಗರಿಗೆ ತೋರಿಸುವ ಪ್ರಯತ್ನ ಪ್ರತಿಮಾರೂಪಕವಾಗಿ ಅನನ್ಯವಾಗಿದೆ.

     ಎರಡೇ ಪ್ರಮುಖ ಪಾತ್ರಗಳನ್ನಿಟ್ಟುಕೊಂಡು ಇಡೀ ನಾಟಕವನ್ನು ಭ್ರಮಾತ್ಮಕ ದೃಶ್ಯಗಳ ಮೂಲಕ ಅನಾವರಣಗೊಳಿಸಿದ ರೀತಿ ಮಾತ್ರ ಮನಮೋಹಕ. ಸೆಟ್, ಕಾಸ್ಟೂಮ್ಸಗಳೆಲ್ಲವನ್ನೂ ಕಪ್ಪು-ಬಿಳಿ-ಕೆಂಪು ಬಣ್ಣಗಳಲ್ಲಿ ಸಂಯೋಜನೆ ಮಾಡಲಾಗಿದ್ದು, ನೀಲಿ ಮತ್ತು ಕೆಂಪು ಬಣ್ಣದ ಬೆಳಕನ್ನು ಬಳಸಿ ರಂಗದಂಗಳದಲ್ಲಿ ಬಣ್ಣಗಳನ್ನು ಚೆಲ್ಲಾಡಿದಂತಿದೆ. ಇದನ್ನು ನಾಟಕ ಎನ್ನುವುದಕ್ಕಿಂತಲೂ ಸೊಗಸಾದ ಅಸಂಗತ ಚಿತ್ರಕಲೆಯ ಅಭಿವ್ಯಕ್ತಿ ಎನ್ನಬಹುದಾಗಿದೆ. ಇಲ್ಲಿ ಮನಮೋಹಕ ಬೆಳಕಿನ ವಿನ್ಯಾಸವಿದೆ, ಅಮೂರ್ತವಾದ ಹಲವಾರು ಸಂಕೇತಗಳಿದ್ದಾವೆ, ತಳಮಳವನ್ನು ಹುಟ್ಟಿಸುವ ಹಿನ್ನಲೆ ಸಂಗೀತವಿದೆ, ಕೆಂಪು ಬಟ್ಟೆಯನ್ನು ಬಳಸಿ ರಕ್ತದ ಹೊಳೆಯನ್ನೇ ಹರಿಸಲಾಗಿದೆ, ಒಟ್ಟಾರೆಯಾಗಿ ಅದ್ಬುತ ಎನ್ನಬಹುದಾದ ಕಲ್ಪನಾ ಲೋಕವನ್ನೇ ರಂಗವೇದಿಕೆಯಲ್ಲಿ ಸೃಷ್ಟಿಸಲಾಗಿದೆ. ಇದೊಂದು ದೃಶ್ಯಕಾವ್ಯ ವೈಭವ ಎನ್ನುವುದರಲ್ಲಿ ಎರಡು ಮಾತಿಲ್ಲ.

     ಆದರೆ..... ದೃಶ್ಯ ವೈಭವದಲ್ಲಿ ನಾಟಕ ಎಲ್ಲಿದೆ?, ನಟರೆಲ್ಲಿದ್ದಾರೆ? ಕಥೆ ಎಲ್ಲಿದೆ? ಕಥಾನಕತೆ ಹೇಗಿದೆ? ತರ್ಕ ಎಲ್ಲಿದೆ? ಅರ್ಥವೆಲ್ಲಿದೆ? ... ಇಂತಹ ಪ್ರಶ್ನೆಗಳಿಗೆ ಉತ್ತರ ಸುಲಭದಲ್ಲಿ ಸಿಕ್ಕುವುದೂ ಇಲ್ಲ. ನೋಡುಗರು ಅದೆಷ್ಟೇ ಆಲೋಚನೆ ಮಾಡಿದರೂ ಸಂಪೂರ್ಣವಾಗಿ ನಾಟಕ ದಕ್ಕುವುದೂ ಇಲ್ಲ.  ನಾಟಕ ಒಂದು ರೀತಿಯ ಅಮೂರ್ತ ಅನುಭವವನ್ನು ಕೊಡುತ್ತದಾದರೂ ಬಹುಸಂಖ್ಯಾತ ನೋಡುಗರಿಗೆ ಅರ್ಥವಾಗುವುದಿಲ್ಲ. ಕೇವಲ ಮಲಯಾಳಂ ಭಾಷೆಯಿಂದಾಗಿ ಸಮಸ್ಯೆ ಎನ್ನುವುದು ಖಂಡಿತಾ ಸತ್ಯವಲ್ಲ, ನಾಟಕದ ನಿರೂಪಣೆಯೇ ಹಾಗಿದೆ. ಎಲ್ಲಾ ಇಲ್ಲಿ ಅಸಂಗತವಾಗಿದೆ. ಸಂಕೇತ ಪ್ರತಿಮೆ ರೂಪಕಗಳ ಭಾರಕ್ಕೆ ನೋಡುಗ ಬೆರಗಾಗುತ್ತಾನೆಯೇ ಹೊರತು ಏನೇನೂ ಸ್ಪಷ್ಟವಾಗಿ ಅರ್ಥವಾಗದೇ  ಗೊಂದಲಕ್ಕೊಳಗಾಗುತ್ತಾನೆ

     ನಾಟಕವೊಂದನ್ನು ಕಥಾನಿರೂಪಣೆಯ ಮೂಲಕ, ಅಭಿನಯ ಕಲೆಯ ಮೂಲಕ ದೃಶ್ಯಗಳ ರೂಪದಲ್ಲಿ ತೋರಿಸುತ್ತಾ ಕಥಾನಕದ ಆಂತರಿಕ ಆಶಯವನ್ನು ಅಭಿವ್ಯಕ್ತಿಗೊಳಿಸುವುದು ಹಾಗೂ ಅದನ್ನು ಪ್ರೇಕ್ಷಕರಿಗೆ ಸಂವಹನಗೊಳಿಸುವುದು ರಂಗಭೂಮಿಯ ಪರಂಪರೆಯಾಗಿದೆ. ಪರಂಪರೆಯನ್ನು ಮುರಿದು ಕೇವಲ ರಂಗತಂತ್ರ ವೈಭವದ ಮೂಲಕ ನಾಟಕವನ್ನು ಕಟ್ಟಿಕೊಡುವ ಸಾಧ್ಯತೆಯನ್ನು ಸಾಕಾರಗೊಳಿಸಲು ನಾಟಕದಲ್ಲಿ ಪ್ರಯತ್ನಿಸಲಾಗಿದೆ. ನಾಟಕಕ್ಕೆ ಪೂರಕವಾಗಿ ರಂಗತಂತ್ರಗಳಿದ್ದರೆ ಪ್ರೇಕ್ಷಕರ ಸುಲಭ ಗ್ರಹಿಕೆಗೆ ಸಹಕಾರಿಯಾಗುತ್ತದೆ. ಆದರೆ ಯಾವಾಗ ರಂಗತಂತ್ರಗಳೇ ನಾಟಕದಾದ್ಯಂತ ವೈಭವೀಕರಿಸಲ್ಪಡುತ್ತಾವೋ ಆಗ ನಾಟಕವನ್ನು ಅರಗಿಸಿಕೊಳ್ಳುವುದು ಕಷ್ಟಸಾಧ್ಯವೆನಿಸುತ್ತದೆ ಎನ್ನುವುದಕ್ಕೆ ಜೋತಿಷ್ರವರ ಮ್ಯಾಕ್ಬೆತ್ ಉತ್ತಮ ಉದಾಹರಣೆ.

          ಅರೆ ಇದೇನು ಎನ್ಎಸ್ಡಿ ನಿರ್ದೇಶಕರ ನಾಟಕದಂತಿದೆಯಲ್ಲಾ ಎಂದು ಸಂದೇಹ ಬಾರದೇ ಇರದು. ಯಾಕೆಂದರೆ ಬಹುತೇಕ ಮಾದರಿ ನಿರ್ದೇಶಕರು ಸಿದ್ದಸೂತ್ರವನ್ನು ಮುರಿದು ಕಟ್ಟಲು ಪ್ರಯತ್ನಿಸುತ್ತಾರೆ. ಇದು ಸ್ವಾಗತಾರ್ಹವಾದದ್ದೇ. ಇರುವುದನ್ನು ಮುರಿದು ಇನ್ನೂ ಅರ್ಥಪೂರ್ಣವಾಗಿ ಹೊಸದನ್ನು ಸೃಷ್ಟಿಸಿದರೆ ಅಭಿನಂದನೀಯವೇ.  ಆದರೆ... ಸುಲಭವಾಗಿ ಅರ್ಥವಾಗುವ ಕಥಾನಕವನ್ನು ಹಾಗೂ ನಿರೂಪಣಾ ಶೈಲಿಯನ್ನು ಒಡೆದು ಅಸಂಗತವಾಗಿ, ಅಮೂರ್ತವಾಗಿ, ಅನರ್ಥಕಾರಿಯಾಗಿ ಮರುಕಟ್ಟುವ ಕೆಲಸವನ್ನು ಉದ್ದೇಶಪೂರ್ವಕವಾಗಿ ಮಾಡುವುದನ್ನೇ ಕಲಾತ್ಮಕತೆ ಎಂದು ನಂಬಿಕೊಂಡಿದ್ದಾರೆ. ನಟರ ಮಾಧ್ಯಮವಾದ ರಂಗಭೂಮಿಯನ್ನು ಅತೀಕ್ರಿಯಾಶೀಲ ನಿರ್ದೇಶಕರು ಆಕ್ರಮಿಸಿಕೊಂಡು ತಮ್ಮ ಅತೀಂದ್ರೀಯ ದೃಶ್ಯ ಕಲ್ಪನೆಗಳ ಸೃಷ್ಟಿಯ ಮೂಲಕ ನಟನನ್ನು ಕೇವಲ ಪರಿಕರಗಳಾಗಿ ಬಳಸುತ್ತಾ ರಂಗತಂತ್ರಗಳ  ವೈಭವೀಕರಣದಲ್ಲಿ ರಂಗವೇದಿಕೆಯಾದ್ಯಂತ ನಿರ್ದೇಶಕನ ಕೌಶಲ್ಯವೇ ಕಾಣುವಂತೆ ಕಣ್ಕಟ್ಟು ಮಾಡಲು ಹವಣಿಸುತ್ತಾರೆ. ಜೊತೆಗೆ ಪ್ರೇಕ್ಷಕನ ಗ್ರಹಿಕೆಯ ಸಾಮರ್ಥ್ಯವನ್ನು ಮೀರಿ ನೋಡುಗರ ಮೆದುಳಿಗೆ ಕೈಹಾಕುತ್ತಾರೆ. ಇಂತಹ ಕೆಲಸವನ್ನು ಮ್ಯಾಕ್ಬೆತ್ ನಾಟಕದಲ್ಲಿ ಮಾಡಲಾಗಿದೆಯಾದರೂ ನಾಟಕದ ನಿರ್ದೇಶಕರು ನೇರವಾಗಿ ಎನ್ ಎಸ್ ಡಿ ಪದವೀದರರಲ್ಲದೇ ಹೋದರು ಬಸವಲಿಂಗಯ್ಯನಂತಹ ಎನ್ಎಸ್ಡಿ ನಿರ್ದೇಶಕರ ಗರಡಿಯಲ್ಲಿ ಪಳಗಿ ಇಂತಹ ಅತೀಂದ್ರೀಯ ಪಟ್ಟುಗಳನ್ನು ಕಲಿತವರು. ಈಗ ಎನ್ಎಸ್ಡಿಗಳನ್ನೇ ಮೀರಿಸುವಂತೆ ಷೇಕ್ಸ್ಪಿಯರ್ ಮ್ಯಾಕ್ಬೆತ್ ನಾಟಕವನ್ನು ಒಡೆದು ಹಾಕಿ ಕೇವಲ ರಂಗತಂತ್ರಗಾರಿಕೆಯ ಮೂಲಕ ವಿಕ್ಷಿಪ್ತವಾದ ರೀತಿಯಲ್ಲಿ ಸಂಕೇತಗಳ ಮೂಲಕ ಅತೀಂದ್ರೀಯ ನಾಟಕವನ್ನು ವಿಚಿತ್ರ ರೂಪದಲ್ಲಿ ನಿರ್ಮಿಸಿದ್ದಾರೆ.

    ಇಡೀ ನಾಟಕದಲ್ಲಿ ಪ್ರಮುಖವಾಗಿ ಇರೋದು ಎರಡೇ ಪಾತ್ರಗಳು. ಉಳಿದೆಲ್ಲಾ ಪಾತ್ರಗಳು ಕೇವಲ ಪರಿಕರಗಳ ರೀತಿಯಲ್ಲಿಯೇ ಬಳಸಲಾಗಿದೆ. ಯಾವ ಸಾಂಕೇತಿಕ ಪಾತ್ರಗಳಿಗೂ ಇಲ್ಲಿ ಅಸ್ತಿತ್ವವೇ ಇಲ್ಲ. ಎಲ್ಲಾ ಕಪೋಲ ಕಲ್ಪಿತ ಅಸಂಗತ ಪಾತ್ರಗಳು. ಕೆಲವು ಪಾತ್ರಗಳು ಹಾಗೆ ಬಂದು ಹೀಗೆ ಹೋಗುತ್ತವಷ್ಟೆ.  ಇನ್ನುಳಿದ ಎರಡರಲ್ಲಿ ಪ್ರಮುಖವಾದ ಮ್ಯಾಕ್ಬೆತ್ ಪಾತ್ರವೂ ಸಹ ಧರಶಾಹಿಯಾಗಿಯೇ ಶಿರವನ್ನಿಟ್ಟು ಮಾತಾಡುತ್ತದೆ. ಇರುವುದರಲ್ಲಿ ಲೇಡಿ ಮ್ಯಾಕ್ಬೆತ್ ಪಾತ್ರವೇ ಒಂದಿಷ್ಟು ಮುಖವೆತ್ತಿ ಮಾತಾಡಿದ್ದು, ಪಾತ್ರಕ್ಕೆ ಪೂರಕವಾಗಿ ಅಭಿನಯಿಸಿದ್ದು. ಹೀಗಾಗಿ ನಾಟಕಕ್ಕೆ ಜೋತಿಷ್ ಲೇಡಿ ಮ್ಯಾಕ್ಬೆತ್ ಎಂದು ಹೆಸರಿಡುವುದು ಸೂಕ್ತವೆನಿಸುತ್ತದೆ. ಹೀಗಾಗಿ ಇಲ್ಲಿ ಕಲಾವಿದರು ಮುಖ್ಯವಲ್ಲ, ಕಥೆ ಪ್ರಾಮುಖ್ಯವಲ್ಲ, ಪ್ರೇಕ್ಷಕರಂತೂ ಲೆಕ್ಕಕ್ಕೆ ಇಲ್ಲಾ....  ಕೇವಲ ಅಸಂಗತ ಸಂಕೇತಗಳು, ಅತೀಂದ್ರೀಯ ದೃಶ್ಯಗಳು ಹಾಗೂ ರಂಗತಂತ್ರಗಳ ಬಳಕೆಯನ್ನೇ ನಾಟಕ ಎಂದು ಕರೆಯಲಾಗಿದೆ.

       ಯಾಕೆ ಹೀಗೆ? ಎಂದು ನಿರ್ದೇಶಕರನ್ನೇ ಕೇಳಿದರೆ ಕಲಾವಿದರಿಗೆ ನಾಟಕದ ಕುರಿತು ವಿವರಿಸಬೇಕಾಗಿಲ್ಲ, ಅವರ ಕೆಲಸ ಹೇಳಿದಷ್ಟು ಮಾಡುವುದಷ್ಟೇ, ಸಾಮಾನ್ಯ ಪ್ರೇಕ್ಷಕರೆಂಬುವವರೇ ಅಪಾಯಕಾರಿ ಜನ, ಅವರಿಗಾಗಿ ನಾನು ನಾಟಕ ಮಾಡಿಲ್ಲ. ನನ್ನ ಪ್ರತಿಭೆಯ ಅಭಿವ್ಯಕ್ತಿಗಾಗಿ ನಾಟಕ ಮಾಡಿದ್ದೇನೆ, ಇಷ್ಟವಿದ್ದವರು ನೋಡಿಕೊಳ್ಳಲಿ, ಅವರವರ ಭಾವ-ಬುದ್ದಿಗೆ ತಕ್ಕಂತೆ ಅರ್ಥಮಾಡಿಕೊಳ್ಳಲಿ ಎಂದು ಉತ್ತರಿಸುತ್ತಾರೆ. ಉತ್ತರದಲ್ಲೇ ನಿರ್ದೇಶಕರ ಆಶಯ ಅನಾವರಣಗೊಳ್ಳುತ್ತದೆ. ಇಂತಹ ಅತಿ ಅಹಂಕಾರದಿಂದಾಗಿಯೇ ಇಂತಹ ವಿಕ್ಷಿಪ್ತ ನಾಟಕಗಳು ಹೆಚ್ಚು ಪ್ರೇಕ್ಷಕರನ್ನು ತಲುಪುವುದಿಲ್ಲ. ಕೇವಲ ಬುದ್ದಿಜೀವಿಗಳ ಅಥವಾ ಇವರಂತೆಯೇ ಅತೀಂದ್ರೀಯವಾಗಿ ಆಲೋಚಿಸುವ ಕೆಲವೇ ಕೆಲವು ರಂಗಜೀವಿಗಳನ್ನು ಮಾದರಿ ನಾಟಕಗಳು ಮೆಚ್ಚಿಸಬಹುದೇ ಹೊರತು ಎಲ್ಲಾ ರಂಗಾಸಕ್ತರನ್ನಲ್ಲ



          ನಾಟಕ ಮಹಿಳಾ ವಿರೋಧಿಯಾ? ಎನ್ನುವ ಸಂದೇಹ ಬಾರದಿರುವುದಿಲ್ಲ. ಷೇಕ್ಸಪಿಯರನ ಮ್ಯಾಕ್ಬೆತ್ನಲ್ಲಿ ಲೇಡಿ ಮ್ಯಾಕ್ಬೆತ್  ಮ್ಯಾಕ್ಬೆತ್ ಚಕ್ರವರ್ತಿಯಾಗುವ ಕನಸಿಗೆ ಪ್ರೇರಕಳಾಗುತ್ತಾಳೆ. ಅಲ್ಲಿ ಮ್ಯಾಕ್ಬೆತ್ ತನ್ನ  ರಾಜನನ್ನೂ ಸೇರಿಸಿ ಹನ್ನೆರಡು ಕೊಲೆ ಮಾಡುತ್ತಾನೆ. ಮಾಡಿದ ಕೊಲೆಗಳು ಅದರಲ್ಲೂ ಗೆಳೆಯ ಬ್ಯಾಂಗೋನ ಕೊಲೆ ಅವನನ್ನು ಇನ್ನಿಲ್ಲದಂತೆ ಕಾಡಿ ಭ್ರ್ರಮೆಗೊಳಗಾಗುತ್ತಾನೆ. ಲೇಡಿಮ್ಯಾಕ್ಬೆತ್ ಕೊನೆವರೆಗೂ ಗಂಡನ ತಿಕ್ಕಲುತನಗಳನ್ನು ಸರಿಮಾಡಲು ನೋಡುತ್ತಾಳೆ. ಆದರೆ ಜೋತಿಷ್ರವರ ಮ್ಯಾಕ್ಬೆತ್ನಲ್ಲಿ ಲೇಡಿಮ್ಯಾಕ್ಬೆತ್ ಎನ್ನುವವಳು ನರರೂಪದ ರಕ್ಕಸಿಯಾಗಿ ಅವತರಿಸಿದ್ದಾಳೆ. ರಾಜನನ್ನು ತಾನೆ ಕೊಲೆಮಾಡುತ್ತಾಳೆ, ಬ್ಯಾಂಗೋನನ್ನು ಕೊನೆಗಾಣಿಸುತ್ತಾಳೆ. ರಕ್ತದ ಓಕಳಿಯನ್ನೇ ಹರಿಸುತ್ತಾಳೆ. ಗಂಡನನ್ನು ಇನ್ನಿಲ್ಲದಂತೆ ದುಷ್ಕೃತ್ಯಕ್ಕೆ ಪ್ರೇರೇಪಿಸುತ್ತಾಳೆ. ಆತ ವಿಫಲನಾದಾಗ ತಾನೇ ಕಾರ್ಯ ಪೂರೈಸುತ್ತಾಳೆ. ಒಟ್ಟಾರೆಯಾಗಿ ನಾಟಕದ ಎಲ್ಲಾ ದುಷ್ಕೃತ್ಯಗಳಿಗೂ ನೇರವಾಗಿ ಅತೀ ಉತ್ಸಾಹದಿಂದ ಭಾಗಿಯಾಗುತ್ತಾಳೆ. ಹೀಗಾಗಿ.... ಇಲ್ಲಿ ಮ್ಯಾಕ್ಬೆತ್ನನ್ನು ದುರಂತ ನಾಯಕನನ್ನಾಗಿಸಿ ಲೇಡಿಮ್ಯಾಕ್ಬೆತ್ಳನ್ನು ಖಳನಾಯಕಿಯನ್ನಾಗಿ ಚಿತ್ರಿಸಲಾಗಿದೆ. ಪುರುಷಪ್ರಧಾನ ಪರಿಕಲ್ಪನೆ ಎಂದರೆ ಇದೇನಾ? ಮುರಿದು ಕಟ್ಟುವುದು ಎಂದರೆ ಮಹಿಳೆಯನ್ನು ಕ್ರೂರಿಯನ್ನಾಗಿಸಿ ಪುರುಷನನ್ನು ನೋಡುಗರ ಕಣ್ಣಲ್ಲಿ ಕರುಣೆಯನ್ನುಂಟುಮಾಡುವಂತೆ ಚಿತ್ರಿಸುವುದಾ? ಮೂರು ಪಿಶಾಚಿಗಳ ಜೊತೆಗೆ ಲೇಡಿಮ್ಯಾಕ್ಬೆತ್ಳನ್ನೂ ಸಹ ಇನ್ನೊಂದು ನರಪಿಶಾಚಿ ಎನ್ನುವ ಹಾಗೆ ಅನಗತ್ಯವಾಗಿ ವೈಭವೀರಿಸಿದ್ದು ಪಾತ್ರಕ್ಕೆ ಮಾಡಿದ ಅನ್ಯಾಯವಲ್ಲವಾ? ಮೊದಲೇ ಷೇಕ್ಸಪಿಯರ್ ತನ್ನ ಎಲ್ಲಾ ದುರಂತ ನಾಟಕಗಳಲ್ಲಿ ಸ್ತ್ರೀಯರನ್ನು ನೀಚರು, ಹೀನ ಪ್ರವೃತ್ತಿಯವರು, ಸಂದೇಹಿಗಳು ಎಂದು ಚಿತ್ರಿಸಿದ್ದಾನೆ, ತನ್ನ ಸಾನೆಟ್ಟುಗಳಲ್ಲಿ ಹೆಣ್ಣು ಕುಲವನ್ನೇ ಜರಿದು ಜಾಲಾಡಿಸಿದ್ದಾನೆ. ಅಂತಹುದರಲ್ಲಿ ನಾಟಕದ ನಿರ್ದೇಶಕರು ಇನ್ನೂ ಹತ್ತು ಹೆಜ್ಜೆ ಮುಂದೆ ಹೋಗಿ ಲೇಡಿಮ್ಯಾಕ್ಬೆತ್ ಪಾತ್ರವನ್ನು  ಅತ್ಯಂತ ಕೆಟ್ಟ ಖಳನಾಯಕಿಯನ್ನಾಗಿ ಸೃಷ್ಟಿಸಿದ್ದು ಮಹಿಳಾ ದೃಷ್ಟಿಕೊನದಿಂದ ನೋಡಿದಾಗ ಅಪಚಾರ ಎನ್ನಿಸುತ್ತದೆ.

      ಲೇಡಿ ಮ್ಯಾಕಬೆತ್ ಪಾತ್ರದಲ್ಲಿ ಅಭಿಜಾ ಶಿವಾಕಲಾರವರ ಅಭಿನಯ, ಚಲನೆ, ಸಂಭಾಷಣೆ ಟೈಮಿಂಗ್ ಅನನ್ಯವಾಗಿತ್ತು. ಮ್ಯಾಕ್ಬೆತ್ ಪಾತ್ರಕ್ಕೆ ಡಿ.ರೆಘೋತ್ತಮನ್ ನಿರ್ದೇಶಕರು ಹೇಳಿದಷ್ಟು ಸ್ಪಂದಿಸಿದ್ದಾರಾದರೂ ಅವರ ಅಭಿನಯಕ್ಕೆ ಹೆಚ್ಚಿನ ಅವಕಾಶ ಇಲ್ಲವೇ ಇಲ್ಲ. ಅವರ ಭಾವತೀವ್ರತೆ ಅಭಿವ್ಯಕ್ತಿ ನೋಡುಗರಲ್ಲಿ ತಲ್ಲಣಗಳನ್ನುಂಟುಮಾಡಿತು. ನಾಟಕದಾದ್ಯಂತ ಇರುವ ಹಿನ್ನಲೆ ಸಂಗೀತ ಪಾತ್ರಗಳ ತಳಮಳ-ತುಡಿತಗಳಿಗೆ ಸ್ಪಂದಿಸಿದೆ. ಜ್ಯೂತಿಷ್ರವರ ಬೆಳಕಿನ ವಿನ್ಯಾಸವಂತೂ ಇಡೀ ನಾಟಕದ ಹೈಲೈಟ್. ಬಹುತೇಕ ಕೆಂಪು ಮತ್ತು ನೀಲಿ ಬಣ್ಣದ ಬೆಳಕನ್ನು ಬಳಸಿ ದೃಶ್ಯಕಾವ್ಯ ಸೃಷ್ಟಿ ಮಾಡಿದ್ದಾರೆ. ಬೆಳಕಿಗಿಂತ ಕತ್ತಲೆಯನ್ನೇ ಹೆಚ್ಚು ಬಳಸಿದ್ದರಿಂದ, ಕೆಂಪು ಬಣ್ಣದ ಬೆಳಕನ್ನು ರಕ್ತದ, ಕ್ರೌರ್ಯದ ಸಂಕೇತವಾಗಿ ಉಪಯೋಗಿಸಿದ್ದರಿಂದ ಭ್ರಮಾಲೋಕವನ್ನೇ ಕಟ್ಟಿಕೊಟ್ಟಂತಾಗಿದೆ. ನಾಟಕದಲ್ಲಿ ರಕ್ತವನ್ನೂ ಸಹ ಅಮೂರ್ತ ಪಾತ್ರವಾಗಿಸಿ ರಕ್ತವರ್ಣದ ಉದ್ದನೆಯ ಬಟ್ಟೆಯ ಚಲನೆಯ ಮೂಲಕ ರಕ್ತದ ಹರಿವನ್ನು ತೋರಿಸಿದ್ದು ನೋಡುಗರಲ್ಲಿ ದಿಗ್ಬ್ರಮೆಯನ್ನುಂಟುಮಾಡಿತು. ಬಣ್ಣ, ಬೆಳಕು, ಹಿನ್ನೆಲೆ ಸಂಗೀತ, ಪರಿಕರಗಳ ಬಳಕೆ ಹೀಗೆ ಎಲ್ಲಾ ರೀತಿಯ ರಂಗತಂತ್ರಗಳ ಬಳಕೆಯಲ್ಲಿ ನಿರ್ದೇಶಕರು ತಮ್ಮ ಕೌಶಲವನ್ನು ಮೆರೆದಿದ್ದಾರೆ. ಹಾಗೂ ನಾಟಕದಾದ್ಯಂತ ಎಲ್ಲಡೆಯೂ ತಮ್ಮ ಕಲಾತ್ಮಕತೆಯ ಇರುವನ್ನು  ತೋರಿಸುವಲ್ಲಿ  ಯಶಸ್ವಿಯಾಗಿದ್ದಾರೆ. ರಂಗತಾಂತ್ರಿಕ ಪ್ರಧಾನ ನಾಟಕವೊಂದನ್ನು ಕಟ್ಟಿಕೊಟ್ಟಿದ್ದಾರೆ. ತಾಂತ್ರಿಕವಾಗಿ ಶ್ರೀಮಂತವಾದ ನಾಟಕ ಶ್ರೀಸಾಮಾನ್ಯ ರಂಗಾಸಕ್ತ ಪ್ರೇಕ್ಷಕರಿಗೆ ಅರ್ಥಪೂರ್ಣವಾಗಿ ಸಂವಹನ ಮಾಡದೇ ಹೋಗಿದ್ದೊಂದು ವಿಪರ್ಯಾಸ. ಮನಸ್ಸಿಗೆ ಹಿಡಿಸಿದ ದೃಶ್ಯರೂಪಕ ಮೆದುಳಿಗೆ ದಕ್ಕಲಿಲ್ಲ ಎನ್ನುವುದೇ ನಾಟಕದ ದೌರ್ಬಲ್ಯ. ಅನುಭವಕ್ಕೆ ಸಿಕ್ಕ ನಾಟಕ ಅರ್ಥವಾಗದೇ ಹೋಯಿತಲ್ಲಾ ಎನ್ನುವುದೇ ಜ್ಯೋತಿಷ್ರವರ ಮ್ಯಾಕ್ಬೆತ್ ಕೊರತೆ.  
 
      ಕಲೆಗಾಗಿ ಕಲೆ ಎನ್ನುವ ರಾಜಾಶ್ರಿತ ಪರಿಕಲ್ಪನೆ ಈಗ ಸಂಪೂರ್ಣವಾಗಿ ಬದಲಾಗಿ ಜನರಿಗಾಗಿ ಕಲೆ ಎನ್ನುವುದು ಜನಪ್ರೀಯವಾಗಿದೆ. ಅದು ಪ್ರಸ್ತುತ ಅಗತ್ಯವೂ ಆಗಿದೆ. ಆದರೆ ಕೇವಲ ಕಲಾತ್ಮಕತೆ ಮಾತ್ರ ಮುಖ್ಯ, ಜನರಿಗೆ ತಲುಪಿಸುವುದು ಅನಗತ್ಯ ಎನ್ನುವ ಜೊತೆಗೆ ಜನಸಾಮಾನ್ಯರೇ ಅಪಾಯಕಾರಿ ಎನ್ನುವ ಮನೋಭಾವವಿರುವ ಜೋತಿಷ್ರವರಂತಹ ಶ್ರೇಷ್ಟತೆಯ ವ್ಯಸನವನ್ನು ಮೈಗೂಡಿಸಿಕೊಂಡವರಿಗೆ ಯಾರು ಏನೂ ಹೇಳಿದರೂ ಪ್ರಯೋಜನವಿಲ್ಲ ಎನ್ನುವುದು ನಾಟಕದ ಮರುದಿನ ನಡೆದ ನಾಟಕ ಕುರಿತ ಸಂವಾದದಲ್ಲಿ ಸ್ಪಷ್ಟವಾಯಿತು.

ಎಂ.ಜಿ.ಜ್ಯೋತಿಷ್
        ನಾಟಕ ನೋಡಲು ತುಂಬಾ ಸೊಗಸಾಗಿದೆ, ಸೆಟ್-ಲೈಟಿಂಗ್-ಬಣ್ಣ-ಪರಿಕರ-ಸಂಕೇತಗಳು ಸಕತ್ತಾಗಿವೆ, ಆದರೆ ನಾಟಕ ಏನು ಎನ್ನುವುದರ ತಲೆಬುಡ ಅರ್ಥವಾಗಲೇ ಇಲ್ಲ, ಎನ್ನುವುದು ಮ್ಯಾಕ್ಬೆತ್ ನಾಟಕ ನೋಡಿಬಂದ ಬಹುತೇಕ ಪ್ರೇಕ್ಷಕರ ಒಂದೆಳೆ ವಿಮರ್ಶೆಯಾಗಿತ್ತು. ಅಂದರೆ ನಾಟಕ ಅಮೂರ್ಥ ಅನುಭವವನ್ನು ಕಟ್ಟಿಕೊಡುತ್ತದೆಯೇ ಹೊರತು ನೋಡುಗರ ತರ್ಕಕ್ಕೆ ನಿಲುಕುವುದಿಲ್ಲ, ಅರ್ಥಕ್ಕೆ ದಕ್ಕುವುದಿಲ್ಲ. ಒಂದರ್ಥದಲ್ಲಿ ನಾಟಕ ನಾಟಕವೇ ಅಲ್ಲ, ಕೇವಲ ಸರಕಾರಿ ಪ್ರಾಯೋಜಿತ ಲೈಟ್ ಆಂಡ್ ಸೌಂಡ್ ಕಾರ್ಯಕ್ರಮದ ಕಲಾತ್ಮಕ ಪ್ರದರ್ಶನದಂತಿರುವುದಂತೂ ಸುಳ್ಳಲ್ಲ. ಏನೇ ಆದರೂ ರಂಗತಂತ್ರಗಳು ನಾಟಕದ ಕಥಾನಕಕ್ಕೆ ಪೂರಕವಾಗಿರಬೇಕೆ ಹೊರತು ರಂಗತಂತ್ರಗಳೇ ನಾಟಕವಾಗುವುದರಿಂದ ಜನರಿಂದ ವಿಮುಖವಾಗುತ್ತವೆ. ಇಂತಹ ಕಲೆಗಾಗಿ ಕಲೆ ಎನ್ನುವ ಶೋಪೀಸ್ ನಾಟಕಗಳಿಗೆ ಭವಿಷ್ಯವೂ ಇಲ್ಲ. ನಟರನ್ನು ಹಾಗೂ ಪ್ರೇಕ್ಷಕರನ್ನು ನಿರ್ಲಕ್ಷಿಸಿದ ಯಾವುದೇ ರೀತಿಯ ಪ್ರಯತ್ನಗಳು ರಂಗಭೂಮಿಯಲ್ಲಿ ಇಲ್ಲಿವರೆಗೂ ಯಶಸ್ವಿಯಾಗಿಲ್ಲ. ಆಗುವುದೂ ಇಲ್ಲ.

      ನಾಟಕದ ತಾಂತ್ರಿಕ ವೈಭವ ಯಾರಿಗೆ ಉಪಯೋಗವಾಯ್ತೋ ಇಲ್ಲವೋ ಗೊತ್ತಿಲ್ಲ. ಆದರೆ.. ಇನ್ನೊಬ್ಬ ಎನ್ಎಸ್ಡಿ ಡೈರೆಕ್ಟರ್ಗಂತೂ ತಮ್ಮ ಪ್ರತಿಭೆ ಸಾಬೀತು ಪಡಿಸುವಲ್ಲಿ ಸಂಪೂರ್ಣ ಉಪಯೋಗವಾಯಿತು. ರವೀಂದ್ರ ಕಲಾಕ್ಷೇತ್ರದ ಸುವರ್ಣ ಸಂಭ್ರಮದಲ್ಲಿ ಆಯೋಜಿಸಲಾದ ನಾಟಕೋತ್ಸವದಲ್ಲಿ  ಜನವರಿ ರಂದು ಮಾರನಾಯಕ ನಾಟಕ ಪ್ರದರ್ಶನಗೊಂಡಿತ್ತು. ನಾಟಕದ ರಂಗತಂತ್ರಗಳು ನೋಡುಗರನ್ನು ಸೆಳೆದಿದ್ದವು. ಆದರೆ ಯಾವಾಗ ಮಲೆಯಾಳಂ ಮ್ಯಾಕ್ಬೆತ್ ನಾಟಕವನ್ನು ಮಾರನಾಯಕ ನಾಟಕ ನೋಡಿದವರು ವೀಕ್ಷಿಸಿದರೋ ಆಗ ಮಾರನಾಯಕ ನಾಟಕದ ರಂಗತಂತ್ರಗಳ ಮೂಲ ತಿಳಿದು ಹೋಯಿತು. ಷೇಕ್ಸಪಿಯರ್ ಮ್ಯಾಕ್ಬೆತ್ ನ್ನು ಹೆಚ್.ಎಸ್.ಶಿವಪ್ರಕಾಶ್ರವರು ಕನ್ನಡದಲ್ಲಿ ಮಾರನಾಯಕ ಹೆಸರಲ್ಲಿ ರೂಪಾಂತರಿಸಿದ್ದಾರೆ. ನಾಟಕವನ್ನು ಎನ್ಎಸ್ಡಿ ಡೈರೆಕ್ಟರ್ ಸುರೇಶ ಆನಗಳ್ಳಿ ನಿರ್ದೇಶಿಸಿದ್ದಾರೆ. ಮಾರನಾಯಕ ನಾಟಕದಲ್ಲಿ ಬಳಸಲಾದ ಬಹುತೇಕ ರಂಗತಂತ್ರಗಳನ್ನು ಜೋತಿಷರವರ ಮ್ಯಾಕ್ಬೆತ್ನಿಂದ ನಕಲು ಮಾಡಲಾಗಿದೆ. ಕನ್ನಡಿ ಬಳಕೆಯ ರಂಗತಂತ್ರವಂತೂ ಡಿಟೋ ಡಿಟೋ. ಆನಗಳ್ಳಿಯವರ ಯರವಲು ಪ್ರತಿಭೆಯ ಮೂಲ ಏನು ಎಂದು ಈಗ ಅರ್ಥವಾಯಿತು. ಯಾಕೆ ಹೀಗೆ? ಎಂದು ಇನ್ನೊಬ್ಬ ಎನ್ಎಸ್ಡಿ ಡೈರೆಕ್ಟರ್ ಸಿ.ಬಸವಲಿಂಗಯ್ಯನವರನ್ನು ಕೇಳಿದರೆ ಮೊದಲಿನಿಂದ ಅವರು ಇದನ್ನೇ ಮಾಡಿದ್ದು. ದೆಹಲಿ ಎನ್ಎಸ್ಡಿಯಲ್ಲಿ ಹೊಸ ನಾಟಕವೊಂದು ಬಂದರೆ ಅದರ ರಂಗತಂತ್ರಗಳನ್ನು ನಕಲು ಮಾಡಿ ಇಲ್ಲಿ  ಇನ್ನೊಂದು ನಾಟಕವನ್ನು  ಮಾಡಿಸಲಾಗುವುದು. ಅದಕ್ಕೆ ಮಾರನಾಯಕ ಇತ್ತೀಚಿನ ಉದಾಹರಣೆ ಅಷ್ಟೇ ಎಂದು ಆನಗಳ್ಳಿಯವರ ರಂಗತಂತ್ರ ಕಳ್ಳತನಕ್ಕೆ ಪುರಾವೆಗಳನ್ನು ಒದಗಿಸಿದರು. ನಕಲು ಸಂಸ್ಕೃತಿಯಿಂದಾಗಿಯೇ ರಂಗನಿರ್ದೇಶಕರಾದವರ ಬಣ್ಣವನ್ನು ಜೋತಿಷ್ರವರ ನಾಟಕ ಪ್ರೇಕ್ಷಕರ ಮುಂದೆ ಬಯಲುಗೊಳಿಸುವಲ್ಲಿ ಯಶಸ್ವಿಯಾಯಿತು.  

                                                                  -ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ