ಬೆಳಕನ್ನು ಬಂಧಿಸಿ ಧರ್ಮದ ಹೆಸರಲ್ಲಿ ಅಜ್ಞಾನವನ್ನು ಬೋಧಿಸುತ್ತಾ, ಜನಸಾಮಾನ್ಯರಲ್ಲಿ ಹುಟ್ಟಿಸಿದ ಮೌಢ್ಯತೆಗಳನ್ನು ಖಾಯಂಗೊಳಿಸಿ ಸತ್ಯವನ್ನು ತಿರುಚುವ ಪುರೋಹಿತಶಾಹಿಗಳು ಮತ್ತು ಪ್ರಜೆಗಳ ಮೌಢ್ಯದ ಬುನಾದಿ ಮೇಲೆಯೇ ರಾಜ್ಯಾಧಿಕಾರ ಅನುಭವಿಸುವ ಪ್ರಭುಗಳು ಸೇರಿ ಶತಶತಮಾನಗಳಿಂದ ಬೆಳಕಿನ ಬೇಟೆಯಾಡುತ್ತ ಬಂದಿರುವ ಶಡ್ಯಂತ್ರವನ್ನು ರಂಗದಂಗಳದಲ್ಲಿ ಬೆತ್ತಲೆಗೊಳಿಸುವ ಸಮಕಾಲೀನ ರಂಗಭೂಮಿಯ ಮಹತ್ತರ ಪ್ರಯೋಗವೇ ‘ಸೂರ್ಯಶಿಕಾರಿ’.
ಬೆಂಗಾಲಿಯಲ್ಲಿ ಉತ್ಪಲ್ದತ್ರವರು ರಚಿಸಿ, ದಿ.ಎಂ.ಪಿ.ಪ್ರಕಾಶರವರು ಕನ್ನಡಕ್ಕೆ ಅನುವಾದಿಸಿದ ಈ ನಾಟಕವನ್ನು ಮಾಲತೇಶ ಬಡಿಗೇರರವರು ‘ಸಮನ್ವಯ’ ತಂಡದ ಕಲಾವಿದರಿಗೆ ನಿರ್ದೇಶಿಸಿದ್ದಾರೆ. ರವೀಂದ್ರ ಕಲಾಕ್ಷೇತ್ರ-50 ರ ಸುವರ್ಣ ಸಂಭ್ರಮದಲ್ಲಿ ನಾಟಕ ಬೆಂಗಳೂರು ಆಯೋಜಿಸಿದ ಎರಡನೇ ಕಂತಿನ ನಾಟಕೋತ್ಸವದಲ್ಲಿ 2014, ಜನವರಿ 9ರಂದು ‘ಸೂರ್ಯಶಿಕಾರಿ’ ನಾಟಕವು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡಿತು. ಈ ನಾಟಕದ ಬಹುತೇಕ ಎಲ್ಲಾ ಕಲಾವಿದರು ಮೈಕೋ ಕಾರ್ಖಾನೆಯ ಕಾರ್ಮಿಕರೇ ಆಗಿದ್ದು ವೃತ್ತಿಪರ ಕಲಾವಿದರಂತೆ ನಟಿಸಿ ನಾಟಕವನ್ನು ಯಶಸ್ವಿಗೊಳಿಸಿದರು.
ಅಯೋಧ್ಯೆಯ ಚಕ್ರವರ್ತಿ ಸಮುದ್ರಗುಪ್ತನ ಕಾಲದಲ್ಲಿ ಪುರೋಹಿತಶಾಹಿ ವರ್ಗವು ಧರ್ಮ ಮತ್ತು ದೇವರ ಹೆಸರಲ್ಲಿ ಆಳುವ ವರ್ಗದ ಹಿತಾಸಕ್ತಿಗಾಗಿ ಕಂದಾಚಾರ, ಮೂಡನಂಬಿಕೆಗಳನ್ನು ಸೃಷ್ಟಿಸಿದ್ದನ್ನು ಪ್ರಶ್ನಿಸಿದ್ದು ಬೌದ್ಧ ಧರ್ಮ. ಸ್ಥಾಪಿತ ಹುಸಿ ಧಾರ್ಮಿಕ ನಂಬಿಕೆಗಳನ್ನು ಸೈದ್ಧಾಂತಿಕವಾಗಿ ಸುಳ್ಳು ಎಂದು ಸಾಬೀತು ಪಡಿಸುವ ನಿರೀಶ್ವರವಾದಿ ಬೌದ್ಧಗುರು ಕಲ್ಲಣ ಮತ್ತು ಆತನ ಶಿಷ್ಯೆ ಇಂದ್ರಾಣಿ ಪ್ರಭುತ್ವದ ಕೆಂಗೆಣ್ಣಿಗೆ ಗುರಿಯಾಗುತ್ತಾರೆ. ‘ಭೂಮಿ ಚಪ್ಪಟೆಯಾಗಿಲ್ಲ ಗುಂಡಾಗಿದೆ’ ಎಂದು ಕಲ್ಲಣ ಸಾಬೀತು ಪಡಿಸಿದಾಗ, ಎಲ್ಲಿ ತಮ್ಮ ಧರ್ಮ ಶಾಸ್ತ್ರ ಪುರಾಣಗಳ ಸುಳ್ಳಿನ ಕಂತೆ ಬಯಲಾಗುತ್ತದೋ ಎಂದು ತಲ್ಲಣಗೊಂಡ ಪುರೋಹಿತಶಾಹಿ ವರ್ಗ ರಾಜನನ್ನು ಪ್ರಚೋದಿಸುತ್ತವೆ. ಶೂದ್ರ ಇಂದ್ರಾಣಿಯ ಮೇಲೆ ವೇದಾಧ್ಯಯನ ಮಾಡಿದ ಆರೋಪ ಹೊರೆಸಿ ಆನೆಕಾಲಲ್ಲಿ ಸಾಯಿಸುವ ಶಿಕ್ಷೆ ವಿಧಿಸಲಾಗುತ್ತದೆ. ಗುರು ಕಲ್ಲಣನ ನಾಲಿಗೆಯನ್ನೇ ಕತ್ತರಿಸಿ ಸತ್ಯದ ಸಮಾಧಿಯ ಮೇಲೆ ಸುಳ್ಳಿನ ಸರ್ವಾಧಿಕಾರಿ ಸಾಮ್ರಾಜ್ಯವನ್ನು ಖಾಯಂಗೊಳಿಸಲಾಗುತ್ತದೆ. ಪುರೋಹಿತಶಾಹಿಗಳ ಕುತಂತ್ರವನ್ನು, ಸಾಮ್ರಾಜ್ಯದಾಹಿ ಪ್ರಭುತ್ವದ ಹುನ್ನಾರುಗಳನ್ನು ಅನಾವರಣಗೊಳಿಸುತ್ತಲೇ ಶತಮಾನದ ಸುಳ್ಳುಗಳನ್ನು ಸಾಕ್ಷಿ ಪುರಾವೆ ಸಮೇತ ಸಾಬೀತು ಪಡಿಸಿ ಪ್ರೇಕ್ಷಕರಲ್ಲಿ ವಾಸ್ತವ ಪ್ರಜ್ಞೆಯನ್ನು ಹುಟ್ಟು ಹಾಕುವಲ್ಲಿ ಈ ರಂಗಪ್ರಯೋಗವು ಸಫಲವಾಗಿದೆ.
ನಾವು ಶಾಲೆಯಲ್ಲಿ ಕಲಿತ ಚರಿತ್ರೆ ಸಾರುತ್ತದೆ ಗುಪ್ತರಯುಗ ಸುವರ್ಣಯುಗವೆಂದು. ಆದರೆ ಈ ಐತಿಹಾಸಿಕ ಹಸಿ ಸುಳ್ಳಿನ ಮುಖವಾಡವನ್ನು ಕಿತ್ತೆಸೆದು, ನಗ್ನ ಸತ್ಯಗಳನ್ನು ದೃಶ್ಯಗಳ ಮೂಲಕ ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ‘ಸೂರ್ಯಶಿಕಾರಿ’ ನಾಟಕವು ನೋಡುಗರನ್ನು ಬೆಚ್ಚಿಬೀಳಿಸುತ್ತಾ ಚರಿತ್ರೆಯನ್ನು ವೈಭವೀಕರಿಸುವಲ್ಲಿಯಾದ ಪ್ರಮಾದವನ್ನು ಪ್ರಸ್ತುತ ಪಡಿಸುವಂತಿದೆ. ದುಡಿಯುವ ವರ್ಗದವರ ಗುಲಾಮಿತನವನ್ನು ಖಾಯಂಗೊಳಿಸಲು ಧರ್ಮವನ್ನು ಬಳಸಿ ಮೌಢ್ಯವನ್ನು ಬೆಳೆಸಿ ಮನುಕುಲಕ್ಕೆ ಅಪಚಾರ ಮಾಡಿದ ಆಳುವ ವರ್ಗಗಳ ಅಮಾನವೀಯತೆಯ ಮರುಸೃಷ್ಟಿಯನ್ನು ರಂಗದ ಮೇಲೆ ಕಂಡ ಪ್ರೇಕ್ಷಕರಿಗೆ ದಿಗಿಲಾಗಿದ್ದರಂತೂ ದಿಟ.
ಸುವರ್ಣಯುಗದಲ್ಲಿ ವಿಜ್ರಂಭಿಸಿದ ಅಧಿಕಾರಶಾಹಿಯ ಭ್ರಷ್ಟಾಚಾರ, ಆಳುವ ವರ್ಗಗಳ ಸ್ತ್ರೀಲೋಲುಪತನ, ಪುರೋಹಿತಶಾಹಿಯ ಪ್ರತಿಗಾಮಿತನ ಹಾಗೂ ಪ್ರಭುತ್ವದ ಹಿಂಸಾಪ್ರವೃತ್ತಿಯನ್ನು ಎತ್ತಿತೋರಿಸುವ ಮೂಲಕ ಈ ರಂಗಪ್ರಯೋಗವು ‘ಆಗಿನ ರಾಜಪ್ರಭುತ್ವಕ್ಕೂ ಈಗಿನ ಪ್ರಜಾಪ್ರಭುತ್ವಕ್ಕೂ ಅಂತಹ ವ್ಯತ್ಯಾಸವೇನೂ ಇಲ್ಲ. ಹಾಗೂ ಯಾವುದೇ ರೀತಿಯ ಬಹುಜನ ವಿರೋಧಿ ಅಸಮಾನ ವ್ಯವಸ್ಥೆಯಲ್ಲಿ ಆಳುವ ವರ್ಗಗಳಿಂದ ದುಡಿಯುವ ವರ್ಗಗಳ ಮೇಲೆ ಮಾಡುವ ನಿರಂತರ ಶೋಷಣೆಯನ್ನು ಬಿಟ್ಟು ಬೇರೇನೂ ನಿರೀಕ್ಷಿಸಲು ಸಾಧ್ಯವೇ ಇಲ್ಲ’ ಎನ್ನುವುದನ್ನು ಈ ನಾಟಕ ಮನದಟ್ಟು ಮಾಡಿಕೊಡುತ್ತದೆ. ಜನವಿರೋಧಿ ಕಾನೂನುಗಳನ್ನು, ರೂಢಿಗತ ಸಂಪ್ರದಾಯಗಳನ್ನು, ಮೂಢನಂಬಿಕೆಗಳನ್ನು ಹಾಗೂ ಅಸಮಾನ ವ್ಯವಸ್ಥೆಯನ್ನು ಯಾರು ವಿರೋಧಿಸುತ್ತಾರೋ ಅವರನ್ನು ಹೆದರಿಸಿ, ಬೆದರಿಸಿ ಅದೂ ಆಗದಿದ್ದರೆ ಆಸೆ ಆಮಿಷಗಳಿಂದ ಕೊಂಡುಕೊಳ್ಳಲು ಇಲ್ಲವೆ ರಾಜಿ ಮಾಡಿಕೊಳ್ಳಲು ಪ್ರಯತ್ನಿಸುವ ಪ್ರಭುತ್ವವು, ಇನ್ನೂ ಪ್ರತಿರೋಧ ಎದುರಾದರೆ ಹಿಂಸಾಪೂರ್ವಕವಾಗಿ ವಿರೋಧವನ್ನು ನಾಶಮಾಡುವಂತಹ ಮಹತ್ಕಾರ್ಯಗಳಿಂದಲೇ ಇವತ್ತಿನವರೆಗೂ ಶೋಷಕ ವ್ಯವಸ್ಥೆಗಳು ಅಸ್ತಿತ್ವದಲ್ಲಿವೆ ಎಂಬುದಕ್ಕೆ ಪುರಾಣ, ಇತಿಹಾಸ ಹಾಗೂ ವರ್ತಮಾನ ಕಾಲದಲ್ಲಿ ಹಲವಾರು ಪುರಾವೆಗಳು ಸಿಗುತ್ತವೆ. ಅಂತಹ ಜನವಿರೋಧಿ ಪ್ರಭುತ್ವಗಳ ಮಾದರಿ ಎಂಬಂತೆ ‘ಸೂರ್ಯಶಿಕಾರಿ’ ನಾಟಕ ಪ್ರಸ್ತುತಗೊಂಡಿದೆ. ಇಂತಹ ಸಾರ್ವಕಾಲಿಕ ಸತ್ಯವನ್ನು ಹೇಳುವಂತಹ ನಾಟಕವನ್ನು ಮಾಲತೇಶ ಬಡಿಗೇರರವರು ಸಮರ್ಥವಾಗಿ ನಿರ್ದೇಶಿಸಿದ್ದಾರೆ.
ವಿಜ್ಞಾನ ಮತ್ತು ಧರ್ಮದ ನಡುವಿನ ಸಂಘರ್ಷ ಈ ನಾಟಕದ ಮೂಲ ಆಶಯವಾಗಿದ್ದು, ಪ್ರೀತಿಯ ಪರಾಕಾಷ್ಟೆಯನ್ನೂ ಸಹ ‘ಸೂರ್ಯಶಿಕಾರಿ’ ಅನಾವರಣಗೊಳಿಸುತ್ತದೆ. ಗುಪ್ತರಯುಗದಲ್ಲಿ ಮನುಷ್ಯರನ್ನು ಪ್ರಾಣಿಗಳಂತೆ ಕೊಂಡುಕೊಳ್ಳುವುದು ಮತ್ತು ಮಾರುವುದು ಸಂಪ್ರದಾಯವಾಗಿತ್ತು. ಈ ಗುಲಾಮತನವನ್ನೇ ಮೂಲವಾಗಿಟ್ಟುಕೊಂಡು ಹಲವು ಗುಲಾಮರ ಗುಂಪನ್ನು ಸೃಷ್ಟಿಸಿದ ನಿರ್ದೇಶಕರು ಪ್ರತಿ ದೃಶ್ಯದಲ್ಲೂ ವಿಭಿನ್ನವಾಗಿ ಅವರನ್ನು ಬಳಸುತ್ತಾ ಅತ್ಯಂತ ಮಾರ್ಮಿಕವಾಗಿ ನಾಟಕವನ್ನು ಕಟ್ಟಿಕೊಟ್ಟಿದ್ದಾರೆ. ಗುಲಾಮರನ್ನೇ ರಥದ ಕುದುರೆಗಳನ್ನಾಗಿಸಿ ಸೂರ್ಯಶಿಕಾರಿಗೆ ಹೊರಟ ಸಮುದ್ರಗುಪ್ತನನ್ನು ತೋರಿಸಿದ ರೀತಿಯಂತೂ ಈ ನಾಟಕದ ಹೈಲೈಟ್.
ಕಲಾವಿದರ ಆಗಮನ ನಿರ್ಗಮನ, ಮೂವಮೆಂಟ್, ದೃಶ್ಯ ಸಂಯೋಜನೆ ತುಂಬಾ ಖರಾರುವಕ್ಕಾಗಿತ್ತು. ಆದರೆ ಕೆಲವೊಮ್ಮೆ ಕೆಲವು ನಟರು ತಿಳಿಯದೇ ಇನ್ನೊಬ್ಬ ನಟರ ಎದುರು ಬಂದು ಮಾಸ್ಕ್ ಮಾಡಿದ್ದು ಮಾತ್ರ ಆಭಾಸಕಾರಿಯಾಗಿತ್ತು. ಸಮುದ್ರಗುಪ್ತನಾಗಿ ಸೋಮಶೇಖರ್ ಅಭಿನಯ ಪಾತ್ರೋಚಿತವಾಗಿತ್ತು. ಇಂದ್ರಾಣಿಯಾಗಿ ಛಾಯಾ ಭಾರ್ಗವಿ, ಹಯಗ್ರೀವನಾಗಿ ದಿನೇಶ್ ತಮ್ಮ ಪಾತ್ರಗಳಿಗೆ ಜೀವದುಂಬಿ ಅಭಿನಯಿಸಿದರು. ಕಲ್ಲಣನಾಗಿ ದತ್ತಾತ್ರೇಯ, ಗೋಹಿಲನಾಗಿ ಅವಿನಾಶ್...
ಹೀಗೆ ಎಲ್ಲಾ ನಟರೂ ತಮ್ಮ ಶಕ್ತಿ ಮೀರಿ ಅಭಿನಯಿಸಿದ್ದಾರೆ. ಗುಂಪು ನಿರ್ವಹಣೆ ತುಂಬಾ ಸೊಗಸಾಗಿತ್ತು. ಆದರೆ ಇನ್ನೂ ಸ್ವಲ್ಪ ರಂಗ ಶಿಸ್ತನ್ನು ಕೆಲವು ಕಲಾವಿದರು ಪಾಲಿಸಬೇಕಿತ್ತು.
ಪುಟ್ಟಯ್ಯನವರ ಬೆಳಕಿನ ನಿರ್ವಹಣೆ ಹಾಗೂ ಪ್ರಕಾಶ್ ಜೈನ್ರವರ ಸಂಗೀತ ನಾಟಕಕ್ಕೆ ಅಗತ್ಯವಾದ ಮೂಡನ್ನು ವದಗಿಸಿದರೆ, ಮಾಲತೇಶ ಬಡಿಗೇರರ ಪ್ರಸಾಧನ ಹಾಗೂ ಛಾಯಾ ಬಡಿಗೇರರ ವಸ್ತ್ರವಿನ್ಯಾಸ ನಾಟಕದ ಪ್ರತಿ ಪಾತ್ರಗಳ ಶ್ರೀಮಂತಿಕೆಯನ್ನು ಹೆಚ್ಚಿಸಿತ್ತು. ಮಾಲತೇಶ ಬಡಿಗೇರ ರಂಗವಿನ್ಯಾಸ, ನಿರ್ದೇಶನ ಹಾಗೂ ಪ್ರಸಾಧನ ಈ ಮೂರು ವಿಭಾಗದಲ್ಲಿಯೂ ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಿದ್ದಾರೆ. ಮೈಕೋ ಕಾರ್ಖಾನೆಯ ಕಾರ್ಮಿಕರನ್ನು ನಟನೆಗೆ ಬಳಸಿಕೊಂಡು, ಬಹುತೇಕ ಹೊಸ ನಟರಿಗೆ ಅಭಿನಯವನ್ನು ಹೇಳಿಕೊಟ್ಟು ಅಭಿನಯ ಪ್ರಧಾನ ನಾಟಕವನ್ನು ಪೂರಕ ರಂಗತಂತ್ರಗಳ ಸಹಾಯದಿಂದ ನಿರ್ಮಿಸಿಕೊಟ್ಟ ಮಾಲತೇಶ ನಿಜಕ್ಕೂ ಅಭಿನಂದನಾರ್ಹರು.
ಮಾಲತೇಶ |
ಆದರೆ.... ಇಂತಹ ಉತ್ತಮ ನಾಟಕಕ್ಕೆ ಪ್ರೇಕ್ಷಕರ ಕೊರತೆ ಉಂಟಾಗಿದ್ದೊಂದು ವಿಪರ್ಯಾಸ. ರಂಗವೇದಿಕೆಯ ಮೇಲೆ ಸುಮಾರು ಇಪ್ಪತ್ತೈದು ಕಲಾವಿದರು ನಾಟಕವನ್ನು ಆಡುತ್ತಿದ್ದರೆ ಅದನ್ನು ನೋಡುತ್ತಿದ್ದವರ ಸಂಖ್ಯೆ ನಲವತ್ತನ್ನೂ ದಾಟಿರಲಿಲ್ಲ. ಯಾಕೆಂದರೆ ಈ ನಾಟಕ ಪ್ರದರ್ಶನವನ್ನು ನಾಟಕ ಬೆಂಗಳೂರಿನ ಆಯೋಜಕರು ಬೆಳಿಗ್ಗೆ ಹನ್ನೊಂದು ಗಂಟೆಗೆ ನಿಗಧಿಪಡಿಸಿದ್ದಾರೆ. ಆ ಸಮಯದಲ್ಲಿ ಅದೂ ಬೆಂಗಳೂರಿನಲ್ಲಿ ಯಾವ ಪ್ರೇಕ್ಷಕರು ಬಂದು ನಾಟಕ ನೋಡಲು ಸಾಧ್ಯ ಹೇಳಿ? ಉತ್ತಮ ನಾಟಕವೊಂದು ಹೆಚ್ಚು ಜನ ಪ್ರೇಕ್ಷಕರನ್ನು ತಲುಪದೇ ಹೋದ ಬೇಸರ ಈ ನಾಟಕದ ಕಲಾವಿದರು ಹಾಗೂ ನಿರ್ದೇಶಕರದು. ಪ್ರಾಯೋಜಕರಿಗೆ ನಾಟಕವೊಂದು ಲೆಕ್ಕದಲ್ಲಿ ಆದರೆ ಸಾಕು ಅನ್ನುವ ಮನೋಭಾವವಿದ್ದಂತಿತ್ತು. ಅಲ್ಲಿ ನಾಟಕ ನಡೆಯುತ್ತಿದ್ದರೆ ಯಾವೊಬ್ಬ ‘ನಾಟಕ ಬೆಂಗಳೂರು’ ನಾಟಕೋತ್ಸವದ ಆಯೋಜಕರು ಹಾಗೂ ರವೀಂದ್ರ ಕಲಾಕ್ಷೇತ್ರದ ಸುವರ್ಣ ಸಂಭ್ರಮ-50 ರ ಪ್ರಾಯೋಜಕರಾದ ಸಂಸ್ಕೃತಿ ಇಲಾಖೆಯ ಪ್ರತಿನಿಧಿಗಳು ಅಕ್ಕಪಕ್ಕದಲ್ಲೂ ಸುಳಿಯಲಿಲ್ಲ. ಸೂಕ್ತ ಪ್ರಚಾರದ ಕೊರತೆ, ಅವೇಳೆಯಲ್ಲಿ ಮಾಡಲಾದ ಪ್ರದರ್ಶನದಿಂದಾಗಿ ಯಶಸ್ವಿ ನಾಟಕವೊಂದು ಪ್ರೇಕ್ಷಕರ ಕೊರತೆಯಿಂದಾಗಿ ನಿರಾಸೆಯಲ್ಲಿ ಕೊನೆಯಾಯಿತು.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ