ಬುಧವಾರ, ಜನವರಿ 8, 2014

ಸೀತಾಂತರಾಳ ಏಕವ್ಯಕ್ತಿ ನಾಟಕ





     (ಸಂದರ್ಭ : ರಾಮನ ಆಜ್ಞೆಯಂತೆ ಲಕ್ಷ್ಮಣನು ಸೀತೆಯನ್ನು ದಟ್ಟವಾದ ಕಾಡಿನಲ್ಲಿ ಬಿಟ್ಟು ಹೊರಡುತ್ತಾನೆ. ದಿಕ್ಕು ಕಾಣದೆ ಕಾನನದಲ್ಲಿ ತಲ್ಲಣಿಸಿಹೋದ ತುಂಬು ಬಸುರಿ ಸೀತೆ ತನ್ನ ಬದುಕಿನ ಘಟನೆಗಳನ್ನು ನೆನೆಸಿಕೊಂಡು ದುಃಖಿಸುತ್ತಾಳೆ. )

      ಕೊನೆಗೂ ಹೊರಟೇ ಬಿಟ್ಟೆಯಾ ಲಕ್ಷ್ಮಣಾ, ಅಲ್ಲೂ ಇಲ್ಲದ, ಇಲ್ಲೂ ಒಲ್ಲದ, ಎಲ್ಲೂ ಸಲ್ಲದ ಅಭಾಗ್ಯ ಸೀತೆಯನ್ನು ತುದಿಮೊದಲಿಲ್ಲದ ಕಾನನದಲ್ಲಿ ಒಂಟಿಯಾಗಿ ಬಿಟ್ಟು ತೆರಳಿದೆಯಾ?...... ಆಹಾ! ಧುರ್ವಿದಿಯೇ..... ನಾನೆಂತಾ ನತದೃಷ್ಟವಂತೆ. ಎಲ್ಲರೂ ತಾಯಿಯ ಗರ್ಭದಿಂದ ಹುಟ್ಟು ಪಡೆದು ಹೊರಬಂದರೆ ನಾನೋ ಅಪ್ಪ ಅಮ್ಮಂದಿರ ಇರುವಿನ ಅರಿವೂ ತಿಳಿಯದೇ ಭೂಗರ್ಭದಿಂದ ಹೊರಬಿದ್ದವಳಲ್ಲವೇ?....ಹುಟ್ಟುತ್ತಲೇ ಅನಾಥೆ, ಅದಕ್ಕೆಂದೇ ಇರಬೇಕು ನನ್ನ ಬದುಕೊಂದು ದುರಂತಗಾತೆ..

          ಎಲ್ಲರ ಹಾಗೆ ಹುಟ್ಟು ನನ್ನ ಆಯ್ಕೆಯಾಗಿರಲಿಲ್ಲ. ಜನಕನ ಜತನತನದಲ್ಲಿ ಬೆಳೆದೆನಾದರೂ ಇಂತವರನ್ನೇ ಮದುವೆಯಾಗಬೇಕು ಎನ್ನುವ ಆಯ್ಕೆಯೂ ನನ್ನದಾಗಿರಲಿಲ್ಲ. ಆವತ್ತು ನನ್ನ ಸ್ವಯಂವರ. ದೂರದೂರದಿಂದ ಬಂದ ರಾಜಕುವರರ ಮುಂದೆ ಸಿಂಗರಿಸಿಕೊಂಡ ಬಲಿಪಶುವಿನ ಹಾಗೆ ಅಲಂಕರಿಸಿಕೊಂಡು ತಲೆತಗ್ಗಿಸಿ ನಿಂತ ನನ್ನ ಮನದೊಳಗೆ ಮಜ್ಜಿಗೆ ಕಡೆದಂತಹ ಸಂಕಟ. ಯಾರೆಂದರೆ ಯಾರೂ ನನ್ನ ಮನದಾಳದ ಭಾವನೆ ಕೇಳಲೇ ಇಲ್ಲಾ. ಯಾರೆಲ್ಲಾ ಹೋಗಲಿ ಸಾಕಿ ಬೆಳೆಸಿದ ನನ್ನ ಸಾಕುತಂದೆ ಜನಕ ಮಹಾರಾಜನಿಗೂ ಮದುವೆಯ ಕುರಿತು ಮಗಳನ್ನೊಂದು ಮಾತು ಕೇಳಬೇಕು ಎನ್ನುವುದೂ ಗೊತ್ತಾಗಲೇ ಇಲ್ಲ.

          ಎಲ್ಲರ ಗಮನ ಸೆಳೆದದ್ದು ಕೇವಲ ಶಿವಧನಸ್ಸು. ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ಕೊಡುವ ಹಾಗೆ ನಾನಿಲ್ಲಿ ಕೇವಲ ಪಾರಿತೋಷಕವಾಗಿದ್ದೆ. ತುಂಬಿದ ಸಭೆಯಲ್ಲಿ ದುಂಬಿಗಳ ಆಕ್ರಮಣಕ್ಕೊಳಗಾದ ಹೂವಾಗಿ ನಲುಗಿದ್ದೆ. ಪ್ರತಿಯೊಬ್ಬ ಅರಸರೂ ಸರದಿಯಂತೆ ಶಿವಧನಸ್ಸನ್ನು ಎತ್ತಲು ಪ್ರಯತ್ನಿಸಿದಾಗ ನನ್ನ ಅಂತರಂಗದ ಕಡಲಲ್ಲಿ ಚಂಡಮಾರುತವೇ ಏಳುತ್ತಿತ್ತು.  ಅವರು ತಮ್ಮ ಪ್ರಯತ್ನದಲ್ಲಿ ಒಬ್ಬೊಬ್ಬರೇ ವಿಫಲರಾದಾಗಲೆಲ್ಲಾ ಮಳೆಬಂದು ನಿಂತಂತಹ ಅನುಭವ. ಆಗ ನಗು ನಗುತ್ತಲೇ ಬಂದ ರಾಮ ಹೆದೆಯೇರಿಸಿ ಶಿವಧನಸ್ಸನ್ನು ಮುರಿದಾಗ ಕೆಲವರಿಗೆ ಸಂತಸ ಇನ್ನು ಕೆಲವರಿಗೆ ಸಂಕಟ. ನನಗಂತೂ ಕೈಯಲ್ಲಿರುವ ಹಾರವನ್ನು ಗೆದ್ದವನ ಕೊರಳಿಗೆ ಹಾಕುವುದನ್ನು ಹೊರತುಪಡಿಸಿ ಬೇರೆ ದಾರಿ ಇರಲೇ ಇಲ್ಲ. ಪಂದ್ಯ ಗೆದ್ದವನ ಹಿಂದೆ ಕುರುಬನನ್ನು ಹಿಂಬಾಲಿಸುವ ಕುರಿಮರಿಯ ಹಾಗೆ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಅಯೋಧ್ಯೆಗೆ ಹೊರಟೇ ಬಿಟ್ಟೆ.

          ಬೇಟೆಯಾಡಿ ಬಂದ ಬೇಟೆಗಾರನಿಗೆ ಸಿಗುವ ಸನ್ಮಾನ ಅಯೋಧ್ಯೆಯಲ್ಲಿ ಕಾಯುತ್ತಿತ್ತು. ಮುಂದೆ ಏನು ಎತ್ತ ಎಂದು ದಿಕ್ಕು ಕಾಣದೆ ನಿಂತ ಹರಿಣಿಯಂತೆ ಮನಸ್ಸು ಚಿತ್ರವಿಚಿತ್ರ ರೀತಿಯಲ್ಲಿ ತಳಮಳಿಸತೊಡಗಿತ್ತು. ಅಯೋಧ್ಯೆಯ ಸಮಸ್ತ ಪ್ರಜೆಗಳು ಅಭಿಮಾನದಿಂದ ರಾಮಲಕ್ಷ್ಮಣರನ್ನು ಸ್ವಾಗತಿಸಿದರಾದರೂ ಅವರೆಲ್ಲರ ಕಣ್ಣು ರಾಮನು ಗೆದ್ದು ತಂದ ಸುಂದರ ಪಾರಿತೋಷಕದ ಮೇಲೆ ಇತ್ತು. ಎಲ್ಲೆಡೆ ಸಂಭ್ರಮ ಸಂತಸ ವಿಜ್ರಂಭನೆ ವಿಪರೀತವಾಗಿತ್ತು. ಆದರೆ ನನ್ನ ಮನದೊಳಗೆ ತಳಮಳ ತಲ್ಲಣದ ಅಲೆಯೇ ಅಬ್ಬರಿಸುತ್ತಿತ್ತು.

        ಎಷ್ಟೊಂದು ದಟ್ಟವಾದ ಕಾಡಿದು. ದಾರಿದಿಕ್ಕುಗಳೇ ಇಲ್ಲದ ಅಭೇದ್ಯ ಅರಣ್ಯದಲ್ಲಿ ಒಂಟಿಯಾಗಿ ನಿಂತ ನನ್ನೊಡಲಲ್ಲಿ ಅದೇನೋ ಮಿಡಿನಾಗರ ಮಿಡಿದ ಅನುಭವ. ಅಮೂರ್ತ ಜೀವಕಣಗಳು ಉದರದಲ್ಲಿ ಉಯ್ಯಾಲೆಯಾಡಿದಂತೆ ಸಡಗರ. ಹೊರಗೆ ಮೈಕೊರೆಯುವ ಚಳಿ ಮೂಳೆಚಕ್ಕಳಗಳ ಕೊರೆಯುತ್ತಿದ್ದರೂ ಬಸಿರಲ್ಲಿ ಬಿಸಿಯುಸಿರು ಮೂಡಿದ ಹಾಗೆ ಬೆಚ್ಚಗಿನ ದಿವ್ಯಾನುಭವ. ನಾಳೆ ಹುಟ್ಟುವ ಸೂರ್ಯನ ಕಿರಣಗಳನ್ನು ನಾನು ಕಾಣುತ್ತೇನೋ ಇಲ್ಲವೋ ಗೊತ್ತಿಲ್ಲ. ನನಗೂ  ಸಾವಿಗೂ ನಡುವೆ ಇನ್ನೆಷ್ಟು ಕ್ಷಣಗಳ ಅಂತರ ಎನ್ನುವುದರ ಅರಿವೂ ನನಗಿಲ್ಲ. ಪತಿ ಎಂಬ ಪರದೈವವೇ ನನ್ನ ಕೈಬಿಟ್ಟು ಕಾಡಿನ ಪಾಲು ಮಾಡಿರುವಾಗ ಯಕಶ್ಷಿತ್ ಸಾವಿಗೆ ಹೆದರುವವಳೂ ನಾನಲ್ಲ. ಆದರೆ... ನಾನು ಸಾಯಬಾರದು. ಉದರದಲ್ಲಿ ಉದಯಿಸುತ್ತಿರುವ ಕರಳು ಬಳ್ಳಿಯ ಕುಡಿಗಳಿಗಾದರೂ ನಾನು ಬದುಕಲೇ ಬೇಕಾಗಿದೆ.  ಆದರೆ ಹೇಗೆ? ಬದುಕುವ ಭರವಸೆಯ ಎಲ್ಲ ಕಿಟಕಿ ಬಾಗಿಲುಗಳು ಮುಚ್ಚಿದ ಮೇಲೆ ಬೆಳಕಿನ ಕಿಂಡಿ ಹುಡುಕುವುದಾದರೂ ಹೇಗೆ? ಕಗ್ಗತ್ತ ಕಾಡಲ್ಲಿ ದಿಕ್ಕುಕಾನದೇ ಅಸಹಾಯಕಳಾಗಿ ನಿಂತ ನನ್ನ ಸಹಾಯಕ್ಕೆ ಬರುವವರು ಯಾರಿದ್ದಾರೆ?

          ಅಯ್ಯೋ ಎಂದು ಕಾಲುಜಾರಿ ಕಂದಕಕ್ಕೆ ಬಿದ್ದರೆ ಕೈಹಿಡಿದು ಮೇಲೆತ್ತುವವರಿಲ್ಲ. ಯಾರಾದರೂ ಕಾಪಾಡಿ ಎಂದು ಕೂಗಿದರೆ ಕೇಳಿಸಿಕೊಳ್ಳಲು ಸುತ್ತ ನೂರು ಹರದಾರಿ ನರಮನುಜರ ಸುಳಿವಿಲ್ಲ. ಅಮ್ಮಾ... ಎಂದು ನರಳಾಡಿದರೆ ಮಡಿಲಲ್ಲಿಟ್ಟುಕೊಂಡು ಸಾಂತ್ವನ ಹೇಳಲು ಹುಟ್ಟಿನಿಂದಲೇ ನನಗೆ ಹೆತ್ತಮ್ಮ ಎನ್ನುವವಳಿಲ್ಲ. ದೇವರೇ ರಕ್ಷಿಸು ಎಂದು ಕೂಗಿದರೆ ಕಾಡಿನಲ್ಲಿ ಅದ್ಯಾವ ದೇವರು ತಾನೆ ಬಂದು ಕಾಪಾಡಲು ಸಾಧ್ಯ? ನಂಬಿದ ನನ್ನ ದೇವರೇ ನನ್ನನ್ನು ದುಸ್ಥಿತಿಗೆ ತಳ್ಳಿ ನನ್ನ ಬದುಕನ್ನೆ ದುರಂತಕ್ಕೀಡುಮಾಡಿದಾಗ ಅದಾವ ದೇವರು ತಾನೆ ಕರುಣೆ ತೋರಲು ಸಾಧ್ಯ?

          ಅಯ್ಯೋ ರಾಮಾ ನಂಬಿದವರಿಗೆ ಇಂಬು ಕೊಡುವ ದೊರೆ ನೀನು, ನಿರಾಶ್ರಿತರಿಗೆ ರಕ್ಷಣೆ ಕೊಡುವ ದೇವರು ನೀನು, ಎಂದು ಎಲ್ಲರೂ ನಂಬಿದ್ದಾರೆ.  ಇಂತದೆ ಮಾತನ್ನು  ನಂಬಿ ಹಿಂದೆ ಮುಂದೆ ಆಲೋಚಿಸದೇ ನಿನ್ನ ಬೆಂಬತ್ತಿ ಬಂದ ಅಬಲೆಗೆ ಅದೆಂತಹ ಘನಘೋರ ಶಿಕ್ಷೆಕೊಟ್ಟೆ. ಹಿಂದೆ ಮುಂದೆ ಎಂದೆಂದೂ ಎಂತಹ ಕಟುಕರೂ ಮಾಡದಂತಹ  ಕೆಲಸವನ್ನು ನೀನು ಮಾಡಬಾರದಿತ್ತು ರಾಮಾ. ನಾನು ನಿನಗೆ ಹೊರೆಯಾಗಿದ್ದರೆ ತವರಿಗೆ ಕಳುಹಿಸಬೇಕಿತ್ತು...... ಇಲ್ಲವೇ ಯಾರಿಗೂ ಗೊತ್ತಾಗದಂತೆ ಶೂದ್ರ ಶಂಭೂಕನನ್ನು ಕೊಂದ ಹಾಗೆ ನನ್ನನ್ನು ಕೊಂದುಬಿಡಬೇಕಾಗಿತ್ತು. ಬೇರೆ ಸಮಯದಲ್ಲಾಗಿದ್ದರೆ ಕಾನನಕ್ಕಟ್ಟಿದ್ದರೂ ನನಗೆ ಬೇಸರವಿರಲಿಲ್ಲ. ಹೇಗಾದರೂ ಎಲ್ಲಾದರೂ ಬದುಕುತ್ತಿದ್ದೆ, ಅದಾಗದಿದ್ದರೆ ಸಾಯುತ್ತಿದ್ದೆ. ಆದರೆ.. ತುಂಬು ಬಸುರಿಯಾದ ಕಷ್ಟದ ಪರಿಸ್ಥಿತಿಯಲ್ಲಿ ಒಂಟಿ ಅಬಲೆಯಾದ ನನ್ನನ್ನು ಕಾಡುಪಾಲು ಮಾಡಬಾರದಿತ್ತು ರಾಮಾ. ಅಯ್ಯೋ.... ಅಮ್ಮಾ.... ಹೊಟ್ಟೆನೋವು.... ತಾಳಲಾರೆ.... ಸುಸ್ತಾಗ್ತಿದೆ, ಕಣ್ಣಿಗೆ ಕತ್ತಲೆ ಆವರಿಸುತ್ತಿದೆ. ನಾನೀಗ ಇಲ್ಲಿ ವಿಶ್ರಮಿಸಿಕೊಳ್ಳಲೇಬೇಕು. (ಕಲ್ಲಿನ ಬಂಡೆಯ ಮೇಲೆ ಕುಳಿತುಕೊಳ್ಳುತ್ತಾಳೆ.)

          (ಸಾವರಿಸಿಕೊಂಡು ಎದ್ದು ಮುಂದೆ ಹೆಜ್ಜೆ ಇಡುತ್ತಾ..)

          ನಿನಗೂ ಗೊತ್ತಲ್ಲವೇ ರಾಮಾ.... ನಾನೆಂದೂ ಅಯೋಧ್ಯೆಯ ಪಟ್ಟದರಾಣಿಯ ಅಧಿಕಾರಕ್ಕೆ ಆಸೆಪಟ್ಟವಳಲ್ಲ. ವಸ್ತ್ರ ವೈಡೂರ್ಯ ಆಭರಣದಾಡಂಬರಗಳಿಗೆ ಮಾರುಹೋದವಳಲ್ಲ, ವೈಭವದ ಶ್ರೀಮಂತಿಕೆಯ ಸಂಭ್ರಮಕ್ಕೆ ಮನಸೋತವಳೂ ಅಲ್ಲಾ. ಕೈ ಹಿಡಿದವಳ ಎಂದೂ ರಾಮ ಕೈಬಿಡಲಾರ ಎಂಬ ಅದಮ್ಯ ನಂಬಿಕೆಯೊಂದಿಗೆ ಜೊತೆ ಬಂದವಳು ನಾನು. ಸುಖ ಸುಪ್ಪತ್ತಿಕೆಗಳೇ ನನಗೆ ಆಧ್ಯತೆಗಳಾಗಿದ್ದರೆ ಅಂದು ಕೋದಂಡ ಕಾಡಿಗೆ ಹೋಗುವಾಗ ನಾನೇಕೆ ಅರಮನೆಯ ಅಷ್ಟೈಶ್ವರ್ಯಗಳನ್ನು ದಿಕ್ಕರಿಸಿ, ಪಿತಾಂಬರವ ಕಿತ್ತೆಸೆದು ನಾರುಮಡಿಯನ್ನುಟ್ಟು ರಾಮನನ್ನು ಹಿಂಬಾಲಿಸುತ್ತಿದ್ದೆ. ನನ್ನ ಪತಿಗಿಲ್ಲದ ಸುಖಸಂತಸಗಳು ನನಗೇಕೆಂದು ಇರುವುದೆಲ್ಲವ ಬಿಟ್ಟು ಇರದುದರತ್ತ ದಶರಥಪುತ್ರನ ಹಿಂದೆ ಹೆಜ್ಜೆಹಾಕಿದೆ. ಆದರೆ ಇದೆಂತಹ ವಿಪರ್ಯಾಸ ರಾಮಾ... ಇಂದು ನೀನು ಅರಮನೆಯಲ್ಲಿ ಬೆಚ್ಚಗಿರುವಾಗ ನಾನಿಲ್ಲಿ ಕಾಡಿನ ಹೂವಾಗಿ ಯಾರಿಗೂ ಬೇಡವಾಗಿ ಬಸಿರು ಭಾರವನ್ನು ಹೊತ್ತು ಗೊತ್ತುಗುರಿಯಿಲ್ಲದೇ ಗೊಂಡಾರಣ್ಯದಲ್ಲಿ ಅಲೆದಾಡುತ್ತಿರುವೆ.

          ಅಯ್ಯೋ.. ಹಸಿದ ಒಡಲೊಳಗೆ ಇದೆಂತಹ ಸಂಕಟ.... ದಣಿದ ದೇಹದೊಳಗೆ ಅದೆಂತಹುದೋ ದಾಹ... ನೀ....ರು, ನೀರು....., ಕುಡಿಯಲೊಂದಿಷ್ಟು ನೀರಾದರೂ ಸಿಕ್ಕಿದ್ದರೆ ಇನ್ನೊಂದಿಷ್ಟು ಗಳಿಗೆ ಬದುಕಬಹುದೇನೋ. ಚಿರನಿದ್ರೆಗೆ ಜಾರುವ ಮೊದಲು ಅನಾಥ ಅಭಾಗ್ಯಳ ಬದುಕಿನ ಬವನೆಗಳ ನೆನಪುಗಳನ್ನೊಮ್ಮೆ ತಿರುವಿ ಹಾಕಬಹುದೇನೋ.  ಹಾಂ... ಇಲ್ಲಿ ಉದುರಿಬಿದ್ದ ಎಲೆಗಳ ಮೇಲೆ ನೀರಿನ ಹನಿಗಳಿವೆ. ಒಂದಿಷ್ಟಾದರೂ ದಾಹ ಹಿಂಗಬಹುದು. ( ಎಲೆಗಳ ಮೇಲಿರುವ ನೀರನ್ನು ಕುಡಿಯುತ್ತಾಳೆ.)

          ಅತ್ತೆ ಕೈಕೇಯಿ ಹಿಡಿದ ಹಟಕ್ಕೆ ರಾಜ್ಯಪಟ್ಟವನ್ನು ರಾಮ ಕಳೆದುಕೊಂಡಾಗಲೂ ನನಗಂತಹ ದುಃಖವಾಗಲಿಲ್ಲ.
ಒಂದಲ್ಲಾ ಎರಡಲ್ಲಾ ಹದಿನಾಲ್ಕು ವರ್ಷಗಳ ಕಾಲ ಕಾಡಲ್ಲಿ ವನವಾಸಕ್ಕೆ ಹೋಗಬೇಕಾಗಿ ಬಂದಾಗಲೂ ನನಗೆ ದಿಗಿಲಾಗಲಿಲ್ಲ. ಏಕೆಂದರೆ ಜೊತೆಗೆ ರಾಮನಿದ್ದಾನಲ್ಲಾ ಎನ್ನುವ ಭರವಸೆವೊಂದೇ ಮೈಥಲಿಯ ಮನದಲ್ಲಿತ್ತು. ರಾವಣ ನನ್ನನ್ನು ಬಲವಂತದಿಂದ ಹೊತ್ತೊಯ್ದು ಅಶೋಕವನದಲ್ಲಿ ಒತ್ತೆಯಾಳಾಗಿರಿಸಿಕೊಂಡಾಗ ಆತಂಕವಾದರೂ ರಾಮ ಬಂದು ಕಾಪಾಡುತ್ತಾನೆನ್ನುವ ಅಧಮ್ಯ ನಂಬಿಕೆ ನನ್ನದಾಗಿತ್ತು. ರಾವಣನ ವಧೆಯ ನಂತರ ರಾಮನ ಮನದಲ್ಲಿ ಶಂಕೆ ಇದ್ದರೆ ಪರಿಹಾರವಾಗಲೆಂದು ನನ್ನ ಪಾತಿವೃತ್ಯವನ್ನು ಸಾಬೀತುಪಡಿಸಲು ನಾನು ಅಗ್ನಿ ಹಾಯುವಂತಹ ಸಂದರ್ಭದಲ್ಲಿ ನನಗೆ ಅತೀವ ದುಃಖವಾದರೂ ಸಹಿಸಿಕೊಂಡಿದ್ದೆ. ನಾನೇನೇ ಮಾಡಿದರೂ ಅದು ರಾಮನಿಗಾಗಿ ಎಂದುಕೊಂಡಿದ್ದೆ. ಆದರೆ..... ಯಾವಾಗ ನಾನು ನನ್ನ ಜೀವಕ್ಕಿಂತ ಹೆಚ್ಚು ನಂಬಿದ್ದ ರಾಮದೇವರೆ ನನ್ನ ಶೀಲವನ್ನು ಶಂಕಿಸಿ ಯಾವುದೋ ಅಗಸನ ಮಾತಿನ ನೆಪದಲ್ಲಿ ತುಂಬು ಬಸುರಿ ಪತ್ನಿಯನ್ನು ಗಡಿಪಾರು ಮಾಡಿ ಕಾಡಿನ ಪಾಲು ಮಾಡಿದನೋ ಆಗ ರಾಮನ ಮೇಲಿನ ನಂಬಿಕೆ ನೆಗೆದುಬಿದ್ದಿತು. ನನಗೀಗ ನನ್ನ ಮೇಲೇಯೇ ನಂಬಿಕೆ ಹೊರಟುಹೋಗಿದೆ.

          ಅಲ್ಲಾ ರಾಮಾ... ಶಾಪದಿಂದ ಕಾಡಲ್ಲಿ ಕಲ್ಲಾಗಿ ಬಿದ್ದ ಅಹಲ್ಯೆಗೆ ಶಾಪವಿಮೋಚನೆ ಮಾಡಿ ಮರುಹುಟ್ಟು ಕೊಟ್ಟೆ. ನಿನಗಾಗಿ ಕಾಯ್ದು ಕುಳಿತ ಶಬರಿಗೆ ದರ್ಶನಭಾಗ್ಯ ಕೊಟ್ಟು ಮುಕ್ತಿ ದಯಪಾಲಿಸಿದೆ. ನಾನೂ ಅವರ ಹಾಗೆಯೇ ಹೆಣ್ಣಲ್ಲವೆ, ನಿನ್ನ ಜೊತೆಗೆ ಬದುಕು ಭಾವ ಜೀವ ಹಂಚಿಕೊಂಡವಳಲ್ಲವೇ... ನನಗ್ಯಾವ ಪಾಪಕ್ಕೆ ಹೀಗೆ ದೂರಮಾಡಿದೆ, ಅದ್ಯಾರ ಶಾಪಕ್ಕೆ ನಿನ್ನಿಂದ ಬೇರೆ ಮಾಡಿದೆ, ಅದೆಂತಹ ಕೋಪಕ್ಕೆ ನನಗೀ ರೀತಿಯ ಕಠೋರ ಶಿಕ್ಷೆ ಕೊಟ್ಟೆ.... ನನ್ನನ್ನು ಬಿಡು... ಇನ್ನೂ ಹುಟ್ಟದ ಕಂದನ ಮೇಲಾದರೂ ನಿನಗೆ ಕರುಣೆ ಬಾರದೇ ಹೋಯಿತೆ.

          ಪ್ರಜೆಯೊಬ್ಬನಿಗಾಗಿ ಪತ್ನಿಯನ್ನೇ ಕಾಡಿಗಟ್ಟಿದ ಪ್ರಜಾಪ್ರೀಯ ದೊರೆ ಎಂದು ಇತಿಹಾಸದಲ್ಲಿ ಹೆಸರಾಗುವ ಉಮೇದಿಗೆ ಬಿದ್ದೆಯಾ ರಾಮ. ಆದರೆ ಅದೇ ಇತಿಹಾಸ ಮುಂದೊಂದು ದಿನ ಶ್ರೀರಾಮಚಂದ್ರನನ್ನು ಪತ್ನಿಪೀಡಕ ಪತಿ, ನಂಬಿಕೆದ್ರೋಹಿ ಗಂಡ,  ಬ್ರೂಣಹತ್ಯಾ ಪ್ರೇರಕ ತಂದೆ, ಮಹಿಳಾ ವಿರೋಧಿ-ಅಮಾನವೀಯ ದೊರೆ ಎಂದೆಲ್ಲಾ ಕರೆಯಬಹುದೆನ್ನುವ ಆತಂಕ ನನ್ನದು.

          ಅಯ್ಯೋ.... ಹಗಲು ಮುಗಿದು ಇರುಳು ಕವಿಯುತ್ತಿದೆಯಲ್ಲಾ. ಬಾನಂಚಿನಲ್ಲಿ ಭಾಸ್ಕರನೇ ರಕ್ತಕಾರಿ ಸಾಯುತ್ತಿರುವಂತೆ ಭಾಸವಾಗುತ್ತಿದೆಯಲ್ಲಾ. ನನ್ನ ಬದುಕು ಬರುಬರುತ್ತಾ ಕತ್ತಲಾಗುತ್ತಿದೆಯಲ್ಲಾ, ದಶದಿಕ್ಕುಗಳಿಂದಲೂ ಸಾವು ನನಗಾಗಿ ಹೊಂಚುಹಾಕುತ್ತಿದೆಯಲ್ಲಾ. ಬದುಕೆಂಬ ಬಾನಲೆಗೆ ಸಿಕ್ಕ ನನ್ನ ಬದುಕಿನ ಬರವಸೆ ಬರಿದಾಗುತ್ತಿದೆಯಲ್ಲಾ. ಈಗ ನನಗಿರುವುದು ಎರಡೇ ದಾರಿ. ಒಂದು ಯಾವುದೋ ರೂಪದಲ್ಲಿ ಬರುವ ಸಾವಿಗಾಗಿ ಕಾಯುವುದು. ಇಲ್ಲವೇ ಸಾವು ತಾನಾಗಿ ಬರುವವರೆಗೂ ನನ್ನ ಜೀವನದ ಕರಾಳ ಪುಟಗಳನ್ನು ನೆನಪಿಸಿಕೊಳ್ಳುವುದು. ಏನಾದರಾಗಲಿ ಇಲ್ಲಿ ಕಲ್ಲಿನ ಮೇಲೆ ಕುಳಿತುಕೊಳ್ಳುತ್ತೇನೆ. ಮುಂದಾಗುವುದಕ್ಕೆ ಸಿದ್ದಳಾಗಿದ್ದೇನೆ. ಬೇರೆ ದಾರಿಯೇ ಇಲ್ಲವಲ್ಲ.

          (ಕಲ್ಲಿನ ಮೇಲೆ ಕುಳಿತು ಸ್ವಲ್ಪ ದಣಿವಾರಿಸಿಕೊಂಡು ಮತ್ತೆ ನೆನಪುಗಳ ಬುತ್ತಿ ಬಿಚ್ಚುತ್ತಾಳೆ ಸೀತೆ)

          ಹೆತ್ತವರ ಅರಿವಿಲ್ಲದ ಅನಾಥೆ ನಾನು, ಭೂಮಿಯಿಂದ ಹುಟ್ಟಿದವಳು ಎಂದು ಎಲ್ಲರಿಗೂ ಗೊತ್ತು.  ಆದರೆ.. ನೀನು ಸಹ ಅಷ್ಟೇ ರಾಮಾ? ನೀನು ಮರೆತಿರಬಹುದಾದ ನಿನ್ನ ಹುಟ್ಟಿನ ಗುಟ್ಟನ್ನು ಗಟ್ಟಿಯಾಗಿ ಹೇಳುತ್ತೇನೆ ಕೇಳು. ಅಪ್ಪ ಅಮ್ಮಂದಿರ ಆಲಿಂಗನದಾಚೆ ಯಜ್ಞ ಪುರುಷನ ಕೃಪೆಗೆ ಹುಟ್ಟಿದ ನೀನೂ ಒಂದು ರೀತಿಯಲ್ಲಿ ಅನಾಥನೆ. ನಮ್ಮಿಬ್ಬರನ್ನೂ ವಾರಸುದಾರರಿಲ್ಲದ ಇಬ್ಬರು ರಾಜರುಗಳು ಸಾಕಿ ಸಲುಹಿದರಷ್ಟೇ. ನಿನಗೆ ತಾಯಿಯಾದರೂ ಇದ್ದಾಳೆ, ಆದರೆ ನನಗೂ ಅವಳೂ ಇಲ್ಲ. ಅನಾಥನಿಗೆ ಮಾತ್ರ ಇನ್ನೊಬ್ಬ ಅನಾಥೆಯ ಸಂಕಟ ಅರ್ಥವಾಗುತ್ತದೆ ಎಂದುಕೊಂಡಿದ್ದೆ. ಆದರೆ ನೀನು ಮಾತ್ರ ಅದು ಹೇಗೋ ದಶರಥಪುತ್ರನಾಗಿ ಅಯೋಧ್ಯಯ ಸಿಂಹಾಸನಾಧೀಶ್ವರನಾಗಿಬಿಟ್ಟೆ. ಆದರೆ ನಾನು ಅನಾಥೆಯಾಗಿದ್ದವಳು ಪತಿತೆಯಾಗಿ ಅಬಲೆಯಾಗಿಬಿಟ್ಟೆ. ಯಾಕೆಂದರೆ ನೀನು ಪುರುಷ... ಆಳುವುದಕ್ಕೆಂದೇ ಹುಟ್ಟಿದವನು. ನಾನು ಸ್ತ್ರೀ ಶೋಷಣೆಗೊಳಗಾಗಲೆಂದೇ ಜನಿಸಿದವಳು.

          ಪುರುಷ ಕುಲದ ಆದರ್ಶದ ಉಮೇದಿನಲ್ಲಿ, ಹೆಣ್ಣನ್ನು ಆಳಬಯಸುವ ಹುಂಬು ಹುಮ್ಮಸ್ಸಿನಲ್ಲಿ, ಶಂಕೆ ಬಂದಾಗಲೆಲ್ಲಾ ಅಂಕೆಯಲ್ಲಿಟ್ಟುಕೊಳ್ಳ ಬಯಸುವ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಶತಮಾನಗಳಿಂದ ಸ್ತ್ರೀಕುಲ ನರಳಿಹೋಗಿದೆ ರಾಮಾ. ನೀನಾದರೂ ಅಹಲ್ಯೆಗೆ ಶಾಪವಿಮೋಚನೆ ಮಾಡಿದಂತೆ ಇಡೀ ಸ್ತ್ರೀಕುಲವನ್ನೇ ಶೋಷಣೆಯಿಂದ ಮುಕ್ತರನ್ನಾಗಿಸಿ ಪಾವನಗೊಳಿಸುತ್ತೀ ಎಂದು ಬಹಳವಾಗಿ ನಂಬಿದ್ದೆ ರಾಮಭದ್ರ. ಆದರೆ ಸ್ತ್ರೀ ಕುಲ ಹೋಗಲಿ ನಿನ್ನ ಮನೆಯ ಕುಲಸ್ತ್ರೀಯನ್ನೇ ನೀನು ಕಾಡಿಗಟ್ಟುತ್ತೀ ಎಂದು ನಾನು ಕನಸು ಮನಸಿನಲ್ಲೂ ಎಣಿಸಿರಲಿಲ್ಲಾ ರಘೋತ್ತಮಾ.

          ಮಹಾರಾಜ ದಶರಥ ನಿನ್ನ ಅಗಲಿಕೆ ತಾಳಲಾರದೇ ಮೃತ್ಯುವಿನ ಜೊತೆ ಸೆನೆಸಾಡುವಾಗ, ನಿನಗೆ ತಂದೆಯ ಜೀವಕ್ಕಿಂತ ಪಿತೃವಾಖ್ಯ ಪರಿಪಾಲನೆಯೇ ಮುಖ್ಯವಾಯಿತಲ್ಲವೇ ರಾಮಚಂದ್ರಾ. ಕೊನೆಗೂ ನಿನ್ನ ತಂದೆಯ ಸಾವಿಗೆ ನೀನೇ ಕಾರಣನಾದೆ, ಪಿತೃವಾಖ್ಯ ಪರಿಪಾಲಕನೆಂದು ಹೆಸರಾದೆಯಾದರೂ ನೀನು ಉತ್ತಮ ಮಗನಾಗಲೇ ಇಲ್ಲ. ಈಗ ನಿನ್ನ ವಂಶದ ಕುಡಿ ನನ್ನ ಉದರದಲ್ಲಿ ಉದಯಿಸುತ್ತಿರುವಾಗ ಲಾಲನೆ ಪಾಲನೆ ಮಾಡದೇ ನಿರ್ಧಾಕ್ಷಿಣ್ಯವಾಗಿ ನಿರಾಕರಿಸಿ ಕಾಡಿನ ಪಾಲು ಮಾಡಿದ ನೀನು ಉತ್ತಮ ತಂದೆಯೂ ಆಗಲಿಲ್ಲ. ನಿನ್ನನ್ನೆ ನಂಬಿ, ನಿನ್ನ ಕಷ್ಟಸುಖಗಳಲ್ಲಿ ಸಮಭಾಗಿಯಾದ ನಿನ್ನ ಅರ್ಧಾಂಗಿಯನ್ನು ಅರಣ್ಯಪಾಲು ಮಾಡಿ ಸಾವಿನ ಮನೆಗೆ ನೂಕಿದ ನೀನು ಉತ್ತಮ ಗಂಡನೂ ಆಗಲಿಲ್ಲ. ಏಕಪತ್ನೀವೃತಸ್ಥ ಎನ್ನಿಸಿಕೊಳ್ಳುವ ತವಕದಲ್ಲಿ ಪತ್ನಿಪರಿತ್ಯಾಜಕ ಎನ್ನುವ ಕಳಂಕವನ್ನೂ ಹೊತ್ತುಕೊಂಡೆಯಾ. ಮನೆಗೆ ಮಾರಿ ಊರಿಗೆ ಉಪಕಾರಿ ಎನ್ನುವ ಗಾದೆಯನ್ನು ಸತ್ಯಮಾಡಿಬಿಟ್ಟೆಯಲ್ಲಾ ರಾಮಾ. ನಿನ್ನ ಮನೆಯನ್ನು ನೀನೇ ಮುರಿದುಕೊಂಡು ರಾಮರಾಜ್ಯ ಕಟ್ಟುವ ನಿನ್ನ ಮಹದಾಸೆಗೆ ಧಿಕ್ಕಾರವಿರಲಿ. ನೀನು ಕಟ್ಟುತ್ತಿರುವ ರಾಮರಾಜ್ಯದಲ್ಲಿ ನಿನ್ನ ಹೆಂಡತಿ ಮಕ್ಕಳಿಗ್ಯಾಕೆ ಜಾಗವಿಲ್ಲ ಎನ್ನುವುದನ್ನಾದರೂ ಹೇಳುವ ಸೌಜನ್ಯವಿರಲಿ.

       ಎಲ್ಲದಕ್ಕೂ ಕಾರಣ ಸೀತೆಯ ಆಸೆ ಎಂದು ಆರೋಪಿಸಲಾಗಿದೆಯಲ್ಲಾ? ದುರಾಸೆಯಿಂದಲೇ ಸೀತಾಪಹರಣವಾಗಿ ಘನಘೋರ ಯುದ್ದಕ್ಕೆ ಕಾರಣವಾಯಿತು ಎನ್ನುವುದು ಎಲ್ಲರ ಅನಿಸಿಕೆಯಾಗಿದೆಯಲ್ಲಾ. ಹೇಗೂ ಸಾಯುತ್ತಿದ್ದೇನೆ. ನನ್ನ ಮೇಲಿರುವ ಗುರುತರ ಆರೋಪಗಳಿಗೆ ಕಾರಣಗಳನ್ನು ಹೇಳಿಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳುತ್ತೇನೆ. ಸುಂದರವಾದ ಬಂಗಾರದ ಜಿಂಕೆಯನ್ನು ನೋಡಿ ನಾನು ಮೋಹಿತಳಾಗಿದ್ದು ನಿಜ ರಾಮಾ. ನನಗೇನು ಗೊತ್ತು ಅದು ಮಾಯಾಜಿಂಕೆ ಎಂದು, ಜಿಂಕೆಯ ಹಿಂದೆ ಶತ್ರುಗಳ ಶಡ್ಯಂತ್ರ ಇದೆ ಎಂದು,  ಶಡ್ಯಂತ್ರಕ್ಕೆ ಕಾರಣ ನಾನಲ್ಲ ರಾಮಾ ಅದು ನೀನು ಮತ್ತು ನಿನ್ನ ತಮ್ಮನ ಆವೇಶದ ಅವಿವೇಕದ ಅನುಚಿತ ವರ್ತನೆ. ಅಂದು ಚಿತ್ರಕೂಟದಲ್ಲಿ ನಡೆದ ಘಟನೆಗೆ ನಾನೂ ಪ್ರತ್ಯಕ್ಷ ಸಾಕ್ಷಿಯಾಗಿದ್ದೆ.

          ಸುಂದರವಾದ ವೀರತೇಜಸ್ಸಿನ ಯುವಕರನ್ನು ಕಂಡು ಮೊಹಿತರಾಗುವ ಎಲ್ಲಾ ಹೆಣ್ಣುಗಳಂತೆ ಪಾಪ ಕಾಡುಕನ್ಯೆ ಶೂರ್ಪನಿಕೆಯೂ ರಾಮನನ್ನು ಮೋಹಿಸಿ ಪ್ರೇಮನಿವೇದನೆಯನ್ನು ಮಾಡಿಕೊಂಡಳು. ಏನಿದೆ ತಪ್ಪು ಇದರಲ್ಲಿ. ರಾಮನಿಂದ ನಿರಾಕರಿಸಲ್ಪಟ್ಟವಳು ಲಕ್ಷಣನನ್ನು ಮದುವೆಯಾಗು ಎಂದು ಬೇಡಿಕೊಂಡಳು. ಏನಿದೆ ಪಾಪ ಇದರಲ್ಲಿ. ಇಷ್ಟವಿಲ್ಲದಿದ್ದರೆ ಸಮಾಧಾನದಿಂದ ಸಮಜಾಯಿಸಿ ಹೇಳಿ ಕಳುಹಿಸಬೇಕಿತ್ತು. ಆದರೆ ವೀರ ಲಕ್ಷ್ಮಣನಿಗೆ ಪ್ರೇಮಬೇಡಿಬಂದ ಅಸಹಾಯಕ ಹೆಣ್ಣಿನ ಮೇಲೆ ತನ್ನ ಪೌರುಷ ತೋರುವ ಆತುರ. ಮುಂದಿನ ಪರಿಣಾಮಗಳ ಅರಿವಿಲ್ಲದೆ ಶೂರ್ಪನಿಕೆಯ ಕಿವಿ, ಮೂಗು ಮೊಲೆಗಳನ್ನು ತನ್ನ ಕತ್ತಿಯಿಂದ ಕೊಯ್ದು ಆಕೆಯ ಸ್ತ್ರೀತನಕ್ಕೆ ಅವಮಾನ ಮಾಡಿ ಕಳುಹಿಸಿದನಲ್ಲಾ ಆಗ ನನಗಂತೂ ತುಂಬಾ ನೋವಾಯಿತು. ಆರ್ಯಾ ಹೀಗೆ ಹೆಣ್ಣಿನ ಸ್ತ್ರೀತನದ ಮೇಲೆ ಹಲ್ಲೆ ಮಾಡಿದ್ದು ಸರಿಯಲ್ಲಾ ಎಂದು ನಾನು ರಾಮನನ್ನು ಕೇಳಿದೆ. ಆತ ನಕ್ಕು ಆಕೆ ರಾಕ್ಷಸ ಕನ್ಯೆ, ರಕ್ಕಸರಿಗೆ ಇಂತಹುದೇ ಶಿಕ್ಷೆಯಾಗಬೇಕು, ನಿನಗೆಲ್ಲಾ ತಿಳಿಯದು ಸುಮ್ಮನಿರು ಎಂದು ನನ್ನ ಬಾಯಿ ಮುಚ್ಚಿಸಿದನಾದರೂ ಹೆಣ್ಣಾದ ನನಗೆ ಇನ್ನೊಬ್ಬ ಹೆಣ್ಣಿಗಾದ ಅವಮಾನ ಸಹಿಸದಂತಾಯಿತು. ಆದರೆ ನಾನೇನು ಮಾಡುವ ಹಾಗಿರಲಿಲ್ಲ.

          ತನ್ನ ತಂಗಿಗಾದ ಅವಮಾನದಿಂದ ರೊಚ್ಚಿಗೆದ್ದ ರಾವಣ ಮಾರೀಚನ ಸಹಾಯದಿಂದ ಮಾಯಾಜಿಂಕೆಯ ಕುತಂತ್ರ ರಚಿಸಿದ. ಏನೂ ಅರಿಯದ ನಾನು ಜಿಂಕೆ ಬೇಕೆಂದೆ. ಅದರ ಬೆನ್ನಟ್ಟಿ ಹೋದ ರಾಮ ಅಯ್ಯೋ ಲಕ್ಷ್ಮಣಾ ಎಂದು ಸಾಯುವವರಂತೆ ಕಿರುಚಿದ್ದು ಕೇಳಿಸಿತು. ಅಯ್ಯೋ ನನ್ನ ಪತಿದೇವರಿಗೇನಾಯಿತೋ ಎಂದು ಆತಂಕದಿಂದ ಲಕ್ಷ್ಮಣನನ್ನು ಒತ್ತಾಯಪೂರ್ವಕ ಕಳುಹಿಸಿದೆ. ಆತ ರೇಖೆಯೊಂದನ್ನು ಎಳೆದು ಅದನ್ನು ದಾಟದಂತೆ ಹೇಳಿ ಹೋದ. ನನಗ್ಯಾಕೋ ಮನಸ್ಸಲ್ಲಿ ಇರಿಸುಮುರಿಸಾಯಿತು. ಶತಮಾನಗಳಿಂದ ಹೀಗೆಯೇ ರಕ್ಷಣೆಯ ಹೆಸರಲ್ಲಿ ಮಹಿಳೆಯರ ಸುತ್ತ ವೃತ್ತಗಳನ್ನೆಳೆಯುತ್ತಾ ಬಂಧನಕ್ಕೊಳಪಡಿಸಿ ಅಸಹಾಯಕಳನ್ನಾಗಿಸುವ ಪುರುಷರ ತಂತ್ರವಿದೆಂದು ಲಕ್ಷ್ಮಣರೇಖೆ ನೋಡಿದಾಗ ಭಾಸವಾಯಿತು. ಆಗಲೇ ರಾವಣ ಸನ್ಯಾಸಿ ವೇಷದಲ್ಲಿ ಭಿಕ್ಷೆಗೆ ಬಂದ. ರೇಖೆ ದಾಟಿ ಬಂದು ಭಿಕ್ಷೆ ನೀಡಲು ಕೇಳಿಕೊಂಡ. ನನಗೆ ಯತಿಗೆ ಭಿಕ್ಷೆ ನೀಡುವುದಕ್ಕಿಂತ ಪುರುಷ ರೇಖೆಗಳ ದಿಗ್ಬಂಧನವನ್ನು ದಾಟಬೇಕೆನಿಸಿತ್ತು. ಹುಚ್ಚು ದೈರ್ಯ ಮಾಡಿ ಗೆರೆಯನ್ನು ದಾಟಿಯೇ ಬಿಟ್ಟೆ. ಅದಕ್ಕಾಗೇ ಕಾಯುತ್ತಿದ್ದ ರಾವಣ ಅಪಹರಿಸಿಬಿಟ್ಟ. ತನ್ನ ತಂಗಿಗಾದ ಅವಮಾನಕ್ಕೆ ಬದಲಾಗಿ ಅನ್ಯಾಯ ಮಾಡಿದವನ ಪತ್ನಿಯನ್ನೇ ಅಪಹರಿಸಿ ಅಟ್ಟಹಾಸಗೈದ. ಅವಮಾನಕ್ಕೆ ಅವಮಾನಿಸುವುದೇ ಉತ್ತರ, ದ್ವೇಷಕ್ಕೆ ದ್ವೇಷವೇ ಪ್ರತ್ಯುತ್ತರ ಎನ್ನುವುದು ಪುರುಷರಿಗೆ ರಕ್ತಗತವಾಗಿದೆ. ಆದರೆ ಪುರುಷಹಂಕಾರದಲ್ಲಿ ಬಲಿಪಶುವಾಗುವುದು ಮಾತ್ರ ಸ್ತ್ರೀಯರೇ ಎನ್ನುವುದೊಂದು ವಿಪರ್ಯಾಸ. ನಾನೂ ಸಹ ಪುರುಷರ ಪೌರಷತ್ವದ ದುರಹಂಕಾರಕ್ಕೆ ಬಲಿಯಾಗಿ ಬಸವಳಿದುಹೋದೆ.

          ಪರಸ್ತ್ರೀ ಅಪಹರಣದಿಂದಾಗಿ ನಡೆದ ಕದನದಲ್ಲಿ ರಾವಣನ ಸಕಲ ಸಾಮ್ರಾಜ್ಯವೇ ಅಳಿದುಹೋಗಿ ಆತನಿಗೆ ಮರಣದಂಡನೆಯೇ ಆಗಿಹೋಯಿತು. ಪರನಾರಿ ವಿರೂಪದಿಂದಾಗಿ ರಾಮನಿಗೆ ಪತ್ನೀವಿಯೋಗವೂ ಉಂಟಾಯಿತು. ಆದರೆ ಇದರಿಂದ ಅತೀ ಹೆಚ್ಚು ನಲುಗಿದವಳು ಮೈಥಲಿ. ಇತಿಹಾಸದ ಕಣ್ಣಲ್ಲಿ ರಾಮರಾವಣರ ಯುದ್ದಕ್ಕೆ ಕಾರಣಳಾದವಳು ಎಂಬ ಅಪಕೀರ್ತಿಯನ್ನು ಹೊತ್ತವಳು ವೈದೇಹಿ. ರಾಮನ ಸಾಮ್ರಾಜ್ಯವಾದಕ್ಕೆ, ಚಕ್ರವರ್ತಿಯ ಸಾಮ್ರಾಜ್ಯ ವಿಸ್ತರಣಾ ತಂತ್ರಕ್ಕೆ, ಕಾಡಿನ ಮೇಲೆ ನಾಡಿನವರು ಹಾಕಬಯಸುವ ಅಂಕುಶಕ್ಕೆ  ಕೇವಲ ನೆಪಮಾತ್ರ ಸೀತೆ. ಪುರುಷರ ಸಾಮ್ರಾಜ್ಯದಾಹದ ಚದುರಂಗದಾಟಕ್ಕೆ ಕೇವಲ ಒಂದು ದಾಳವಾಗಿ ಬಳಕೆಗೊಂಡವಳು ಪತಿತೆ.  ನಾನು ಒಂದು ಹೊನ್ನಜಿಂಕೆಗೆ ಆಸೆಪಟ್ಟಿದ್ದಕ್ಕೆ ರಾಮನಿಗೆ ದೊರೆತದ್ದು ಅನನ್ಯ ಅರಣ್ಯ ರಾಜ್ಯ. ನಾನು ಯಕ್ಕಶ್ಚಿತ್ ಒಂದು ಗೆರೆ ದಾಟಿದ್ದಕ್ಕೆ ರಾಮನಿಗೆ ದಕ್ಕಿದ್ದು ಅಗಣಿತ ರಾವಣ ಸಾಮ್ರಾಜ್ಯ. ಆದರೆ.... ಎಲ್ಲಾ ಅಪವಾದಗಳು ನನಗೆ, ಅರಸೊತ್ತಿಗೆ ರಾಮನಿಗೆ....ನೋಡಿ ಇದೆಂತಹ ವಿಪರ್ಯಾಸ.

      
         ಛೇ.. ಕತ್ತಲು ಗವ್ವೆನ್ನುತ್ತಿದೆ. ಸುತ್ತಲೂ ಜೀರುಂಡೆಗಳ ಸದ್ದು ತಾರಕಕ್ಕೇರಿದೆ. ಅದೆಲ್ಲೋ ಹಸಿದ ಹೆಬ್ಬುಲಿಯೊಂದು ಅಬ್ಬರಿಸುತ್ತಿದೆ. ನನ್ನ ಪುರುಷನಿಂದಲೇ ಪರಿತ್ಯಕ್ತಳಾದ ನನ್ನನ್ನು ಕರೆದೊಯ್ಯಲು ಬಂದ ಕಾಲಪುರುಷ ಇಲ್ಲೆಲ್ಲೋ ನನಗಾಗಿ ಹೊಂಚು ಹಾಕಿ ಕಾಯುತ್ತಿದ್ದಾನೆ. ಬದುಕಿನ ಸಂಗದಿಂದಲೇ ದೂರಾದವಳಿಗೆ ಜೀವದ ಹಂಗೇಕೆ? ನನ್ನನ್ನು ನಾನೇ ಪಂಚಭೂತಗಳಿಗೆ ಅರ್ಪಿಸಿಕೊಳ್ಳುತ್ತೇನೆ. ಬಾ ಕಾಡೇ ನಾಡಿನ ರಾಜರುಗಳು ನಿನ್ನನ್ನು ಆಕ್ರಮಿಸಿಕೊಂಡು ಮಾಡಿದ ಅನ್ಯಾಯಕ್ಕೆ ಬದಲಾಗಿ ನನ್ನ ಬಲಿಪಡೆದು ಸೇಡು ತೀರಿಸಿಕೋ. ಬನ್ನಿ ಕಾಡುವಾಸಿ ರಕ್ಕಸರೇ ನನ್ನ ಪತಿಯ ವಿಸ್ತರಣಾಂಕಾಂಕ್ಷೆಗೆ ನಿಮ್ಮ ಕುಲವೇ ಸರ್ವನಾಶವಾಗಿಹೋಗಿದೆ. ಅದಕ್ಕಾಗಿ ನಾನು ಕಾರಣವೆಂದು ಆರೋಪಿಸಲಾಗಿದೆ. ಬನ್ನಿ ನಿಮ್ಮ ಬದುಕಿನ ಸ್ವಾತಂತ್ರ್ಯ ಹರಣಕ್ಕೆ ಬದಲಾಗಿ ನನ್ನ ಜೀವಹರಣ ಮಾಡಿ ನಿಮ್ಮ ಕುಲದ ಸಂಹಾರಕ್ಕೆ ಪ್ರತಿಕಾರ ತೀರಿಸಿಕೊಳ್ಳಿ. ರಾಜರುಗಳ ಹಿತಾಸಕ್ತಿಗಾಗಿ ಚಕ್ರವರ್ತಿಗಳ ಯುದ್ದಾಂಕಾಂಕ್ಷೆಗಾಗಿ ನಿಮ್ಮ ಅಮೂಲ್ಯ ಜೀವವನ್ನು ಬಲಿಕೊಟ್ಟ ಲೆಕ್ಕವಿಲ್ಲದಷ್ಟು ಸೈನಿಕರ ಆತ್ಮಗಳೇ ಎಲ್ಲಿದ್ದೀರಿ ಬನ್ನಿ ನಿಮ್ಮ ಸಾವಿಗೆ ಬದಲಾಗಿ ನನ್ನ ಸಾವನ್ನು ಪಡೆದು ತೃಪ್ತರಾಗಿ. ಬನ್ನಿ ಪಂಚಭೂತಗಳೇ ನಿಮ್ಮ ತೆಕ್ಕೆಯೊಳಗೆ ಅಪ್ಪಿಕೊಂಡು ಬದುಕಿನ ಬವಣೆಗಳಿಂದ ನನ್ನನ್ನು ಮುಕ್ತಳನ್ನಾಗಿಸಿ.

          ಅಯ್ಯೋ... ಹೊಟ್ಟೆಯೊಳಗೆ ಚಿಟ್ಟೆ ಹಾರಾಡಿದಂತಾಗುತ್ತಿದೆ. ಅಮ್ಮಾ.... ನೋವು..... ತಾಳಲಾರೆ... ಉದರದೊಳಗೆ ನನ್ನ ಕಂದಮ್ಮ ನನಗೆ ಏನೋ ಹೇಳುವಂತಿದೆ. ಕೈಕಾಲುಗಳನ್ನಾಡಿಸುತ್ತಿದೆ. ನನಗೆ ಸಾಯಬೇಕೆಂಬಾಸೆ ಯಾಕೆಂದರೆ ಬೇರೆ ದಾರಿಯಿಲ್ಲ. ಆದರೆ ನನ್ನ ಕರುಳ ಕುಡಿಗೆ ಬದುಕಬೇಕೆಂಬಾಸೆ. ನನಗೋ ಮತ್ತೆ ನನ್ನ ಹೆತ್ತತಾಯಿ ಭೂದೇವಿಯ ಮಡಿಲಿಗೆ ಮರಳಬೇಕೆಂಬ ಬಯಕೆ. ಆದರೆ ನನ್ನೊಳಗಿನ ಹಸಿಗೂಸಿಗೆ ತಾಯಿಯ ಒಡಲಿಂದ ಆಕೆಯ ಮಡಿಲು ಸೇರುವಾಸೆ. ಸುತ್ತಲೂ ಸಾವು ಕಾಯುತ್ತಿದೆ ಆದರೆ ನನ್ನ ಉದರದೊಳಗೆ ಬದುಕೊಂಡು ಅರಳುತ್ತಿದೆ. ಇದೆಂತಾ ಉಭಯ ಸಂಕಟ. ನನಗಾಗಿ ಸಾಯಲಾ? ಇಲ್ಲಾ ನನ್ನ ಕಂದನಿಗಾಗಿ ಬದುಕಲಾ? .... ಇಲ್ಲಾ ನಾನು ನನಗಾಗಿ ಅಲ್ಲದಿದ್ದರೂ ನನ್ನ ಕೂಸಿಗಾದರೂ ಬದುಕಲೇ ಬೇಕು. ಬದುಕುತ್ತೇನೆ. ತಂದೆ ಮಾಡಿದ ನಿರಾಕರಣೆಗೆ ಮಗುವೇಕೆ ಬಲಿಯಾಗಬೇಕು. ತಾಯಿಯ ನಿರಾಸಕ್ತಿಗೆ ಕೂಸೆಕೆ ಸಾಯಬೇಕು. ತಂದೆಯಾದವನು ತನ್ನ ಕರ್ತವ್ಯದಿಂದ ವಿಮುಖನಾದರೆ ತಾಯಿಯಾದ ನಾನೇಕೆ ನನ್ನ ತಾಯ್ತನವನ್ನು ಬಲಿಕೊಡಬೇಕು. ಕ್ಷಮಿಸಿ ಪಂಚಭೂತಗಳೇ ನಾನು ನಿರ್ಧಾರವನ್ನು ಬದಲಿಸಿದ್ದೇನೆ. ನನಗಾಗಿ ಅಲ್ಲಾ, ಇನ್ನೂ ಹುಟ್ಟದ ಮಗುವಿಗಾಗಿ. ಹೇಗಾದರೂ ಹೆತ್ತು ಹೊತ್ತು ಸಾಕಿ ಮಗು ತನ್ನ ಕಾಲಮೇಲೆ ನಿಂತ ಮೇಲೆ ಸತ್ಯವಾಗಿಯೂ ನನ್ನನ್ನು ನಾನೇ ನನ್ನ ಹೆತ್ತ ಭೂದೇವಿಗೆ ಅರ್ಪಿಸಿಕೊಳ್ಳುತ್ತೇನೆ. ಕಾಲಪುರುಷನೇ ಅಲ್ಲಿವರೆಗೂ ನನಗೆ ಸಮಯಾವಕಾಶ ಕೊಡು. ನನಗಾಗಿ ಅಲ್ಲ ನನ್ನ ಮಗುವಿನ ಮೇಲೆ ಕರುಣೆಯಿಟ್ಟು ನನಗೊಂದಿಷ್ಟು ಸಮಯ ಕೊಡು. ಅಂದಕಾರದ ಕಗ್ಗತ್ತಲೆಯಲ್ಲಿ ಬದುಕಿನ ಭರವಸೆಗೊಂದು ಬೆಳಕಿನ ಕಿರಣಕೊಡು.

         ಅದೋ ಸಾವಕಾಶವಾಗಿ ಮೂಡನದಲ್ಲಿ ಬೆಳಕು ಮೂಡುತ್ತಿದೆ. ರಾತ್ರಿ ಕಳೆದ ಮೇಲೆ ಹಗಲು ಬರಲೇಬೇಕಲ್ಲವೆ. ನಂಬಿದವರು ನನ್ನ ನಡುನೀರಿನಲ್ಲಿ ಕೈಬಿಟ್ಟರೂ ಬರುವ ನಾಳೆಗಳಲ್ಲಾದರೂ ಭರವಸೆ ಹೊಂದಬೇಕಲ್ಲವೇ. ನಾನು ಬದುಕುತ್ತೇನೆ.... ನನ್ನ ಮಗುವಿಗಾಗಿ ಬದುಕುತ್ತೇನೆ.... ನನ್ನ ಕರುಳ ಕುಡಿ ಚಿಗುರುವುದಕ್ಕಾಗಿಯಾದರೂ ಜೀವದಿಂದಿರುತ್ತೇನೆ. ತಲೆ ಸುತ್ತುತ್ತಿದೆ. ಅತ್ತ ಬೆಳಕು ಮೂಡುತ್ತಿದ್ದರೂ ಇತ್ತ ನನ್ನ ಸುತ್ತ ಕತ್ತಲು ಕವಿಯುತ್ತಿದೆ. ಅಯ್ಯೋ ಕಣ್ಣು ಮಂಜಾಗುತ್ತಿದೆ. ಅದೇನದು ಅಲ್ಲಿ ದೂರದಲ್ಲಿ ಯಾವುದೋ ಮನುಷ್ಯಾಕೃತಿ ಕಾಣುತ್ತಿದೆಯಲ್ಲಾ. ನನ್ನತ್ತಲೇ ಬರುತ್ತಿರುವಂತಿದೆ. ಸ್ಪಷ್ಟವಾಗಿ ಏನೂ ಕಾಣುತ್ತಿಲ್ಲ. ಎಲ್ಲಾ ಅಸ್ಪಷ್ಟ. ಹೌದು.. ನಾರುಮುಡಿಯನ್ನುಟ್ಟುಕೊಂಡು ಉದ್ದನೆಯ ಗಡ್ಡಗಳನ್ನು ಬಿಟ್ಟುಕೊಂಡು, ಕೈಯಲ್ಲಿ ಕಮಂಡಲಗಳನ್ನು ಹಿಡಿದುಕೊಂಡು ವೃದ್ದ ಸನ್ಯಾಸಿ... ನನ್ನತ್ತಲೇ ಬರುತ್ತಿದ್ದಾರೆ. ಪ್ರಕೃತಿಯೇ ನಿನಗೆ ಅನಂತ ಧನ್ಯವಾದಗಳು. ಸಂಕಷ್ಟದಲ್ಲಿ ಸಾಯುತ್ತಿದ್ದ ನನ್ನತ್ತ ಯಾವುದೋ ಒಂದು ಸಹಾಯ ಹಸ್ತವನ್ನು ಕಳುಹಿಸಿದೆಯಲ್ಲಾ. ಬೆಳಕೆ ನಿನಗೆ ಅಭಿನಂದನೆಗಳು ಕಗ್ಗತ್ತಲ ದಾರಿಯಲ್ಲಿ ನನಗೆ ದಾರಿತೋರಲು ಬಂದೆಯಲ್ಲಾ....

          ಅದ್ಯಾಕೊ ಸುತ್ತಲು ಮತ್ತೆ ಕತ್ತಲಾವರಿಸುತ್ತಿದೆ. ತಲೆ ಸುತ್ತುತ್ತಿದೆ. ಕಣ್ಣು ಮಂಜಾಗುತ್ತಿದೆ.  ರಾಮಾ..... ನೀನಿಲ್ಲದಿದ್ದರೂ ಚಿಂತೆಯಿಲ್ಲ ನಿನ್ನ ನಾಮದ ಬಲವಾದರೂ ಇರಲೀ..... ರಾಮಾ....ರಾಮಾ.......

          (ಕುಸಿದು ಕೆಳಕ್ಕೆ ಬೀಳುತ್ತಾಳೆ)

                                                                   -ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ