ಶುಕ್ರವಾರ, ಜನವರಿ 10, 2014

ಸಮಾಜದ ಕಣ್ತೆರೆಸುವ ನಾಟಕ “ಗಾಂಧಿ ಹೆಸರಲ್ಲಿ.....”






      ಸೃಷ್ಟಿ ದೃಶ್ಯಕಲಾ ಮಾಧ್ಯಮ ಅಕಾಡೆಮಿ ವಿದ್ಯಾರ್ಥಿಗಳು ಒಂದು ಉತ್ತಮ ನಾಟಕವನ್ನು ಪ್ರದರ್ಶಿಸಿದ್ದಾರೆ. ಶಶಿಕಾಂತ ಯಡಹಳ್ಳಿಯವರು ರಚಿಸಿ ನಿರ್ದೇಶಿಸಿದ ಗಾಂಧಿ ಹೆಸರಲ್ಲಿ... ಎಂಬ ನಾಟಕ 2014 ಹೊಸವರ್ಷದ ಮೊದಲ ದಿನದಂದು ನಯನ ರಂಗಮಂದಿರದಲ್ಲಿ ಪ್ರದರ್ಶನಗೊಂಡಿತು

          ಗಾಂಧಿ ಕುರಿತು ಹಲವಾರು ನಾಟಕಗಳು ಕನ್ನಡ ರಂಗಭೂಮಿಯಲ್ಲಿ ಪ್ರದರ್ಶನಗೊಂಡಿವೆ. ಬಹುತೇಕ ನಾಟಕಗಳಲ್ಲಿ ಗಾಂಧೀಜಿ ಬದುಕು-ಬರಹ ಮತ್ತು ವಿಚಾರಧಾರೆಗಳ ಕುರಿತು ಹೇಳಲಾಗಿದೆ. ಆದರೆ.. ಶಶಿಕಾಂತ ಯಡಹಳ್ಳಿಯವರ ಗಾಂಧಿ ಹಾದಿಯಲ್ಲಿ.. ನಾಟಕದಲ್ಲಿ ಗಾಂಧೀಜಿಯೂ ಇಲ್ಲಾ, ಅವರ ವಿಚಾರಧಾರೆಯೂ ಇಲ್ಲ. ಆದರೆ ಗಾಂಧಿವಾದ ಎನ್ನುವುದು ಹೇಗೆಲ್ಲಾ ದುರ್ಬಳಕೆಯಾಗುತ್ತಿದೆ, ಗಾಂಧಿವಾದದ ಹೆಸರಲ್ಲಿ ಲೂಟಿಕೋರರು ಹೇಗೆ ಪ್ರಚಾರ ಪಡೆಯುತ್ತಾರೆ ಹಾಗೂ ನಿಜವಾದ ಗಾಂಧಿವಾದಿಗಳು ಅದು ಹೇಗೆ ನಿರ್ಲಕ್ಷಕ್ಕೆ -ಶೋಷಣೆಗೆ ಒಳಗಾಗುತ್ತಾರೆ ಎನ್ನುವುದನ್ನು ನಾಟಕ ವಿಡಂಬನಾತ್ಮಕವಾಗಿ ತೋರಿಸುವಲ್ಲಿ ಯಶಸ್ವಿಯಾಗಿದೆ.

          ಕಳ್ಳನೊಬ್ಬ ಯಾರದೋ ಜೇಬು ಕತ್ತರಿಸುವುದನ್ನು ನೋಡಿದ ಗಾಂಧಿವಾದಿಯೊಬ್ಬ ಕಳ್ಳನನ್ನು ಹಿಡಿಯಲು ಮುಂದಾದಾಗ ಗಾಂಧಿವಾದಿಯ ಜೊತೆಗಾರರೇ ಅದನ್ನು  ತಡೆಯುತ್ತಾರೆ. ಮತ್ತೊಬ್ಬರ ವಿಷಯ ನಮಗ್ಯಾಕೆ ಬೇಕು ನಮ್ಮ ಜೇಬು ಸೇಫಾಗಿದೆಯಲ್ಲಾ ಸಾಕು ಎನ್ನುತ್ತಾರೆ. ಮತ್ತೊಬ್ಬರಿಗೆ ಅನ್ಯಾಯವಾದರೂ ಚಿಂತೆಯಿಲ್ಲ, ತಾನೊಬ್ಬ ಸುಖವಾಗಿದ್ದರೆ ಸಾಕು ಎನ್ನುವ ಸ್ವಾರ್ಥ ಭಾವನೆ ಹೆಚ್ಚಾಗಿರುವ ಪ್ರಸ್ತುತ ಸೆಲ್ಪ ಸೆಂಟ್ರಲೈಸ್ಡ್ ವ್ಯಕ್ತಿಗತ ವ್ಯವಸ್ಥೆಯನ್ನು ನಾಟಕ ತೆರೆದಿಡುತ್ತದೆ

          ಕಳ್ಳನನ್ನು ಗಾಂಧಿವಾದಿ ಹಿಡಿದಾಗ ತಿರುಗಿಬಿದ್ದ ಕಳ್ಳ ತಾನು ಕದ್ದ ಪರ್ಸನ್ನು ಗಾಂಧಿವಾದಿಯ ಟೋಪಿಯಲ್ಲಿಟ್ಟು ಗಾಂಧಿವಾದಿಯನ್ನೇ ಕಳ್ಳ ಎಂದು ಜನರ ಮುಂದೆ ಸಾಬೀತುಪಡಿಸುತ್ತಾನೆ. ಗಾಂಧಿವಾದಿಯ ಪರ್ಸನ್ನು ಕದ್ದು ಅದರಲ್ಲಿದ್ದ ಹಣವನ್ನು ಜನರಿಗೆ ಹಂಚಿ ಅವರ ವಿಶ್ವಾಸವನ್ನು ಗೆದ್ದು ಜನರ ಕಣ್ಣಲ್ಲಿ ನಾಯಕನಾಗುತ್ತಾನೆ. ಕೊನೆಗೆ ಗಾಂಧಿವಾದಿಯ ಬಟ್ಟೆಯನ್ನೂ ಬಿಚ್ಚಿಸಿ ಬೆತ್ತಲೆಗೊಳಿಸಿ ತಾನು ತೊಟ್ಟುಕೊಂಡು ಗಾಂಧಿವಾದಿಯಾಗುತ್ತಾನೆ. ಇದು ಇಂದಿನ ಪ್ರಸ್ತುತ ಸನ್ನಿವೇಶವನ್ನು ಸಂಕೇತಿಸುವಂತಿದೆ. ಜನತೆಯನ್ನು ಯಾಮಾರಿಸಲೆಂದೇ ಗಾಂಧೀಜಿಯ ಖಾದಿ ಹಾಗೂ ಗಾಂಧಿಟೋಪಿಯನ್ನು ಧರಿಸಿ ರಾಜಾರೋಷವಾಗಿ ಜನರನ್ನು ವ್ಯವಸ್ಥಿತವಾಗಿ  ಲೂಟಿ ಮಾಡುತ್ತಿರುವ ಈಗಿನ ರಾಜಕಾರಣಿಗಳನ್ನು ನಾಟಕದ ಕಳ್ಳನ ಪಾತ್ರವು ಪ್ರತಿನಿಧಿಸುತ್ತದೆ



      ಕಳ್ಳ ರಾಜಕಾರಣಿಯಾದಾಗ ಪೋಲಿಸ ವ್ಯವಸ್ಥೆ ಅದು ಹೇಗೆ ಆತನಿಗೆ ಬೆಂಗಾವಲಿಗೆ ನಿಲ್ಲುತ್ತದೆ ಎನ್ನುವುದನ್ನು ರೂಪಕವಾಗಿ ಹೇಳುವ ರೀತಿಯಲ್ಲಿ ಪೊಲೀಸ್ ಪಾತ್ರವೊಂದನ್ನು ಸೃಷ್ಟಿಸಲಾಗಿದೆ. ಯಾವ ಕಳ್ಳನನ್ನು ಹಿಡಿದು ಜೈಲಿಗಟ್ಟಬೇಕಾಗಿತ್ತೋ ಅಂತಹ ಕಳ್ಳ ಕೊಟ್ಟ ಕಾಸಿಗೆ ಆಸೆಬಿದ್ದ ಪೊಲೀಸನು ಅನ್ಯಾಯ ವಿರೋಧಿಸಿದ ಗಾಂಧಿವಾದಿಯನ್ನೇ ಕಳ್ಳನನ್ನಾಗಿಸಿ ಶಿಕ್ಷಿಸಿದ್ದು ಇಡೀ ನಮ್ಮ ವ್ಯವಸ್ಥೆಯನ್ನೇ ಲೇವಡಿ ಮಾಡಿದಂತೆ ಮೂಡಿಬಂದಿದೆ. ಕಳ್ಳ ರಾಜಕಾರಣಿ ಪ್ರತಿನಿಧಿಸುವ ಶಾಸಕಾಂಗ ಮತ್ತು ಭ್ರಷ್ಟ ಪೋಲಿಸ್ ಪ್ರತಿನಿಧಿಸುವ ಕಾರ್ಯಾಂಗ ಎರಡನ್ನೂ ರಂಗದಂಗಳದಲ್ಲಿ ಬೆತ್ತಲೆ ಮಾಡುವಂತಹ ಪ್ರಯತ್ನ ನಾಟಕದಲ್ಲಿ ಸೊಗಸಾಗಿ ಅನಾವರಣಗೊಂಡಿದೆ

       ಭ್ರಷ್ಟ ವ್ಯವಸ್ಥೆಯಲ್ಲಿ ಸತ್ಯ ಹೇಳುವುದು, ಅನ್ಯಾಯವನ್ನು ವಿರೋಧಿಸುವುದು ಅಪರಾಧವಾಗಿದೆ, ಯಾರು ನ್ಯಾಯದ ಪರವಾಗಿ ಇರುತ್ತಾರೋ ಅವರನ್ನೇ ಬಂಡವಾಳಶಾಹಿ ವ್ಯವಸ್ಥೆ ಟಾರ್ಗೆಟ್ ಮಾಡಿ ಸತಾಯಿಸಿ ಹೋರಾಟದ ಕಿಚ್ಚನ್ನು ತಣ್ಣಗಾಗಿಸುತ್ತದೆ ಎನ್ನುವುದು ಬಹುತೇಕ ಪ್ರಕರಣಗಳಲ್ಲಿ ಸಾಬೀತಾಗಿದೆ. ನಾಟಕದಲ್ಲೂ ಸಹ ಅನ್ಯಾಯ ವಿರೋಧಿಸಿದ ಗಾಂಧಿವಾದಿಯನ್ನು ಬಹಿರಂಗವಾಗಿ ಬೆತ್ತಲು ಮಾಡುವುದರ ಮೂಲಕ ಭ್ರಷ್ಟ ವ್ಯವಸ್ಥೆ ಅಟ್ಟಹಾಸ ಮೆರೆಯುತ್ತದೆ

          ವ್ಯವಸ್ಥೆಯ ಭಾಗವಾಗಿರುವ ಸಾಮಾನ್ಯ ಜನತೆಯನ್ನೂ ಸಹ ನಾಟಕ ವಿಶ್ಲೇಷಣೆಗೆ ಒಳಪಡಿಸುತ್ತದೆ. ಯಾರು ಕಳ್ಳ -ಯಾರು ಸಜ್ಜನ ಎನ್ನುವ ತಾರ್ಕಿಕ ಆಲೋಚನೆ ಮಾಡದ ಮಹಾ ಜನತೆ ಯಾರು ಆಸೆ ಆಮಿಷ ತೋರುತ್ತಾರೆ, ಯಾರು ಇಲ್ಲದ ಭರವಸೆಯನ್ನು ಕೊಡುತ್ತಾರೆ, ಯಾರು ಮಾತಿನ ಒರಸೆಯನ್ನು ಮಾರ್ಮಿಕವಾಗಿ ಬಳಸುತ್ತಾರೆ... ಅಂತವರನ್ನು ನಂಬುತ್ತಾರೆ. ಸತ್ಯ ಹೇಳುವವರನ್ನೇ ಸಂದೇಹದಿಂದ ನೋಡುತ್ತಾರೆ. ಹೀಗಾಗಿಯೇ ನಮ್ಮ ದೇಶ ಕಳೆದ ಆರು ದಶಕಗಳಿಂದ ಭ್ರಷ್ಟರ ಆಡಂಬೋಲವಾಗಿದೆ. ದುಷ್ಟರ ಆಡಳಿತದಲ್ಲಿದೆ. ಭ್ರಷ್ಟತೆ ಎನ್ನುವುದು ಆಳುವ ಅರಸರಿಂದ ಜನಸಾಮಾನ್ಯರ ವರೆಗೂ ಬೇರುಮಟ್ಟಕ್ಕೆ ಬಂದು ಮುಟ್ಟಿದೆ. ಇಂತಹ ಹಲವಾರು ರಾಜಕೀಯ ಹಾಗೂ ಸಾಮಾಜಿಕ ವ್ಯವಸ್ಥೆಗಳ ಸೂಕ್ಷ್ಮಗಳನ್ನು ಗಾಂಧಿ ಹೆಸರಲ್ಲಿ... ಎಂಬ ವೈಚಾರಿಕ ನಾಟಕ ಸಾಂಕೇತಿಕವಾಗಿ ತೋರಿಸುತ್ತದೆ.



      ಇಡೀ ನಾಟಕವನ್ನು ನಿರೂಪಣೆಗೊಳಿಸಿದ ರೀತಿ ಬಲು ಸೊಗಸಾಗಿದೆ. ಗಾಂಧೀವಾದ, ಭ್ರಷ್ಟತೆ, ಕಲುಷಿತಗೊಂಡ ವ್ಯವಸ್ಥೆ... ಇಂತಹ ಗಂಭೀರವಾದ ಸಮಸ್ಯೆಗಳನ್ನು ವಿಡಂಬಣಾತ್ಮಕವಾಗಿ ಹೇಳುವ ನಿರ್ದೇಶಕರ ಜಾಣ್ಮೆ ಇಲ್ಲಿ ಎದ್ದು ಕಾಣುತ್ತದೆ. ರಂಜನೆಯ ಮೂಲಕ ಸತ್ಯದ ಅರಿವನ್ನು ಮಾಡಿಕೊಡುವುದರಲ್ಲಿ ಏಕಾಂಕ ನಾಟಕ ಯಶಸ್ವಿಯಾಗಿದೆ. ಸಂಭಾಷಣೆಗಳಲ್ಲಿ ಹರಿತತೆ ಇದೆ. ಸಾರ್.... ಏರೋಪ್ಲೇನ್ ಹತ್ತಿಸಿ ನೇರ ಅಮೇರಿಕಕ್ಕೆ ಕಳುಹಿಸಿ ಬಿಡಿ, ಅಲ್ಲಿ ಜಗದ ಕಳ್ಳರ ಗುರು ಬುಷ್, ಓಬಾಮಾರನ್ನು ಬೇಟಿಯಾಗಿ ಬರ್ತೇನೆ.. ಎಂದು ಕಳ್ಳ ಪೊಲೀಸನಿಗೆ ಹೇಳುವ ಮಾತಿನಲ್ಲಿ.... ಅಮೇರಿಕಾದ ಲೂಟಿಕೋರತನವನ್ನು ಬಹಿರಂಗಪಡಿಸಲಾಗುತ್ತದೆ. ರೀತಿಯ ಹಲವಾರು ಮಾರ್ಮಿಕ ಮಾತುಗಳನ್ನು  ಕಳ್ಳನ ಬಾಯಲ್ಲಿ ಹೇಳಿಸುತ್ತಾ ಕುಲಗೆಟ್ಟ ವ್ಯವಸ್ಥೆಯನ್ನು ವಿಮರ್ಶಿಸಲಾಗಿದೆ
 
       ಅಭಿನಯ ಶಾಲೆಯ ವಿದ್ಯಾರ್ಥಿಗಳು ಅನುಭವಸ್ತ ನಟರಂತೆ ಅಭಿನಯಿಸಿದ್ದಾರೆ. ಕಳ್ಳನಾಗಿ ಪ್ರಶಾಂತ ಅಭಿನಯ ಚೆನ್ನಾಗಿತ್ತು ಆದರೆ ಮಾತುಗಳ ನಡುವೆ ಪಾಜ್ಗಳನ್ನು ಕೊಟ್ಟಿದ್ದರೆ ಇನ್ನೂ ಸೊಗಸಾಗಿರುತ್ತಿತ್ತು.  ಗಾಂಧಿವಾದಿಯಾಗಿ ಎನ್. ನಾರಾಯಣ್ರವರು ಪಕ್ಕಾ ಪಾತ್ರೋಚಿತವಾಗಿ ಅಭಿನಯಿಸಿದರು. ಎಲ್ಲರನ್ನೂ ರಂಜಿಸಿದ್ದು ಪೊಲೀಸ್ ಪಾತ್ರದ ಶಂಕರನಾರಾಯಣರವರ ನಟನೆ. ಅವರು ತಮ್ಮ ಡೊಳ್ಳು ಹೊಟ್ಟೆಯನ್ನು ಬಳಸಿಕೊಂಡು ಅಭಿನಯಿಸಿದ್ದು ಪೊಲೀಸ ವ್ಯವಸ್ಥೆಯ ಲಂಚಬಾಕತನಕ್ಕೆ ಸಾಕ್ಷಿಯಾಗಿತ್ತು. ಗುಂಪು ನಿರ್ವಹಣೆಯಲ್ಲಿ  ಇನ್ನೂ ಸ್ವಲ್ಪ ಶಿಸ್ತು ಅಗತ್ಯವಿತ್ತು. ವಿಡಂಬಣೆ, ಸಂಭಾಷಣೆ ಮತ್ತು ನಟನೆ  ಯಲ್ಲಿ ಗೆದ್ದ ನಾಟಕ ಸೊತಿದ್ದು ಬೆಳಕಿನ ವಿನ್ಯಾಸದಲ್ಲಿ. ಆರಂಭದಿಂದ ಒಂದೇ ರೀತಿಯ ಬೆಳಕಿನ ವಿನ್ಯಾಸವನ್ನು  ದೃಶ್ಯದ ಮೂಡಿಗೆ ತಕ್ಕಂತೆ ಬದಲಾವಣೆ ಮಾಡಿದ್ದರೆ, ಪೂರಕವಾಗಿ ಹಿನ್ನೆಲೆ ಸಂಗೀತವನ್ನು ಬಳಸಿದ್ದರೆ ನಾಟಕ ನಿಜಕ್ಕೂ ಇನ್ನೂ ಸೊಗಸಾಗಿ ಮೂಡಿ ಬರುತ್ತಿತ್ತು.  ಬೆಳಕು ಹಾಗೂ ಸಂಗೀತದ ಕೊರತೆಯ ನಡುವೆಯೂ ಇಡೀ ನಾಟಕ ಸಫಲವಾಗಿದ್ದು ತನ್ನ ವಿಡಂಬನಾತ್ಮಕ ನಿರೂಪಣೆಯಿಂದ.

          ಒಟ್ಟಾರೆಯಾಗಿ ಇಡೀ ನಾಟಕ ಗಾಂಧಿವಾದದ ಸೋಲು ಮತ್ತು ಭ್ರಷ್ಟ ವ್ಯವಸ್ಥೆಯ ಗೆಲುವನ್ನು  ಹೇಳುತ್ತದೆ. ಗಾಂಧಿವಾದದ ದುರುಪಯೋಗದ ಕುರಿತು ವಿಶ್ಲೇಷಿಸುತ್ತದೆ. ಜೊತೆಗೆ ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ಅವ್ಯವಸ್ಥೆಯನ್ನು ಅನಾವರಣಗೊಳಿಸುತ್ತದೆ.   ನೋಡುಗರಲ್ಲಿ ಗಾಂಧಿವಾದಿಗಳ ಬಗ್ಗೆ ಕರುಣೆಯನ್ನೂ ಹಾಗೂ ಕಳ್ಳ ರಾಜಕಾರಣಿಗಳು ಹಾಗು ಭ್ರಷ್ಟ ಪೊಲೀಸ್ ವ್ಯವಸ್ಥೆಯ ಮೇಲೆ ಆಕ್ರೋಶವನ್ನು ನೋಡುಗರಲ್ಲಿ ಹುಟ್ಟು ಹಾಕುವಲ್ಲಿ ಗಾಂಧಿ ಹೆಸರಲ್ಲಿ... ನಾಟಕ ಯಶಸ್ವಿಯಾಗಿದೆ. ಜನತೆಯಲ್ಲಿ ಜಾಗೃತೆ ಮೂಡಿಸುವಂತಹ ಇಂತಹ ನಾಟಕಗಳು ಸಧ್ಯದ ಅಗತ್ಯವೂ ಆಗಿದೆ
 


-ಜಗದೀಶ ಕೆಂಗನಾಳ, ಶಿಕ್ಷಕರು, ಹೊಸಕೋಟೆ    
           
     


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ