ಮುನ್ನಾ ಹೋ ಮುನ್ನಿ ಹೋತೋ ಸುಖದುಃಖ ಖೈಸಾ
ಕಿಸಿಕೆ ನಾ ಪೈದಾ ಹೋ ಕೋಹಿ ಹಮಾರಾ ಜೈಸಾ.
ಖುಷಿಯೋಮೆ ಆಸೂ ನ ನಿಕಾಲ್
ಜುಗ್ ಜುಗ್ ಜಿಯೋ ಮೇರೆ ಲಾಲ್.
ಇದು ಯಾರದೋ ಮನೆಯಲ್ಲಿ ಮಗು ಹುಟ್ಟಿದ ಸಂದರ್ಭದಲ್ಲಿ ಬರುವ ಹಿಜಡಾಗಳು ಮಗುವನ್ನು ಹರಸುತ್ತಾ ಹಾಡುವ ಹಾಡು. ಇದರರ್ಥ ಇಷ್ಟೇ “ಮಗು ಗಂಡಾದಾಗ ಸಂತಸ ಹೆಣ್ಣಾದಾಗ ದುಃಖ ಹೇಗೆ? ಯಾರ ಮನೆಯಲ್ಲೂ ಹುಟ್ಟದಿರಲಿ ನಮ್ಮ ಹಾಗೆ. ಖುಷಿಯಲ್ಲಿ ಕಣ್ಣೀರು ಹಾಕದಿರು ದೀರ್ಘಕಾಲ ಬದುಕು ಮಗುವೇ.” ಎಂದು ಮನದುಂಬಿ ಹಾಡುತ್ತಾರೆ. ಇಲ್ಲಿ ಗಂಡು ಹೆಣ್ಣೆಂಬ ಬೇದ ಬೇಕಾಗಿಲ್ಲ ಎಂದು ಹೆತ್ತವರಿಗೆ ಬುದ್ದಿಹೇಳುತ್ತಲೇ, ಸದ್ಯ ನಮ್ಮ ಹಾಗೆ ಗಂಡೂ ಅಲ್ಲದ ಹೆಣ್ಣೂ ಅಲ್ಲದಂತೆ ಹುಟ್ಟಿಲ್ಲವಲ್ಲ ಎಂದು ಸಮಾಧಾನವನ್ನು ಹೇಳುತ್ತಾರೆ. ಅಳುವ ಕಂದನನ್ನೂ ಸಮಾಧಾನ ಪಡಿಸಿ ಆಶೀರ್ವದಿಸುತ್ತಾರೆ”. ಹಿಜಡಾಗಳ ಈ ಹಾಡು ಸಮಾಜದಲ್ಲಿ ಹೆಣ್ಣು ಸಂತಾನದ ಮೇಲಿರುವ ತಾರತಮ್ಯ ಹಾಗೂ ಹಿಜಡಾಗಳ ಕುರಿತಿರುವ ತಾತ್ಸಾರವನ್ನು ಏಕಕಾಲದಲ್ಲಿ ಈ ಹಾಡು ‘ಹಿಜಡಾ’ ನಾಟಕದಲ್ಲಿ ಪ್ರತಿದ್ವನಿಸುತ್ತದೆ.
ಬಲವಂತವಾಗಿ ಹಣ ವಸೂಲಿ ಮಾಡುವಂತಹ, ಇಲ್ಲವೇ ಲೈಂಗಿಕ ಕಾರ್ಯಕರ್ತರಾಗಿ ಕೆಲಸ ಮಾಡುವಂತಹ ಹಿಜಡಾಗಳನ್ನು ನೋಡಿದ್ದೇವೆ. ಹಲವಾರು ಬಾರಿ ಅವರ ಬಗ್ಗೆ ಬೇಸರವನ್ನೂ ವ್ಯಕ್ತಪಡಿಸಿದ್ದೇವೆ ಇಲ್ಲವೆ ಮುಜುಗರ ಹೊಂದಿ ನಿಂದಿಸಿದ್ದೇವೆ. ಆದರೆ... ಇತ್ತ ಗಂಡೂ ಅಲ್ಲದ ಅತ್ತ ಹೆಣ್ಣೂ ಅಲ್ಲದ ತ್ರಿಶಂಕು ಬದುಕನ್ನು ಸವೆಸುತ್ತಾ ನಮ್ಮ ನಡುವೆಯೇ ಇರುವ ನಪುಂಸಕ ಜನಾಂಗವೊಂದರ ಬದುಕಿನ ಬಗ್ಗೆ ಅರಿವು ಅಷ್ಟಕ್ಕಷ್ಟೇ. ಸಮಾಜ ನಿಷ್ಕೃಷ್ಠವೆಂದು ತಿಳಿದವರ, ಜನರ ಲೇವಡಿಗೊಳಗಾಗಿ ನಲುಗಿರುವ ಹಿಜಡಾಗಳ ಬದುಕನ್ನು ನಾಟಕವೊಂದರಲ್ಲಿ ಹಿಡಿದಿಡುವ ಪ್ರಯತ್ನ ಮರಾಠಿ ಭಾಷೆಯಲ್ಲಿ ಮಾಡಲಾಗಿದೆ. ಅದೇ ‘ಹಿಜಿಡಾ’ ರಂಗಪ್ರಯೋಗ. ಈ ನಾಟಕವನ್ನು ಸಾಗರ್
ಲೋಧಿ ರವರು ರಚಿಸಿ ನಿರ್ದೇಶಿಸಿದ್ದು, ಪುಣೆಯ ‘ಆಕಾಂಕ್ಷಾ ರಂಗಭೂಮಿ’ ರಂಗತಂಡದ ಕಲಾವಿದರು ಪ್ರಸ್ತುತಪಡಿಸಿದ್ದಾರೆ.
‘ರಂಗನಿರಂತರ’ ರಂಗತಂಡವು ರಜತ ಮಹೋತ್ಸವದ ಅಂಗವಾಗಿ ಸಿಜಿಕೆ ನೆನಪಿನಲ್ಲಿ ಏರ್ಪಡಿಸಲಾಗಿರುವ ‘ಸಿಜಿಕೆ ರಾಷ್ಟ್ರೀಯ ನಾಟಕೋತ್ಸವ’ದಲ್ಲಿ 2014, ಜನವರಿ 15ರಂದು ‘ರವೀಂದ್ರ ಕಲಾಕ್ಷೇತ್ರದ’ಲ್ಲಿ ಪ್ರದರ್ಶನಗೊಂಡ ಈ ಮರಾಠಿ ನಾಟಕ ‘ಹಿಜಡಾ’ ರಂಗದಂಗಳದಲ್ಲಿ ಬೇರೆಯದೇ ಆದ ಲೋಕವನ್ನು ಸೃಷ್ಟಿಸಿ ತೋರಿಸಿತು.
ದೇಹವೊಂದಾಗಿದ್ದರೆ ಮನಸ್ಸು-ಭಾವನೆಗಳೇ ಇನ್ನೊಂದು ರೀತಿಯಲ್ಲಿದ್ದು ಒಂದಕ್ಕೊಂದು ಸರಿಹೊಂದದಿದ್ದಾಗ ಅಸಾಧ್ಯವಾದ ಮಾನಸಿಕ ತಲ್ಲಣಗಳುಂಟಾಗುತ್ತವೆ. ಗಂಡು ದೇಹದಲ್ಲಿ ಹೆಣ್ಣಿನ ಭಾವನೆಗಳು ಇಲ್ಲವೇ ಹೆಣ್ಣು ದೇಹದಲ್ಲಿ ಗಂಡಿನ ಮನೋಕಾಮನೆಗಳು ಸೃಜಿಸಿದಾಗ ಉಂಟಾಗುವ ತಳಮಳಗಳು ಊಹಿಸಲಸಾಧ್ಯ. ಇಂತಹ ಪರಿಸ್ಥಿತಿಯಲ್ಲಿ ಕುಟುಂಬವರ್ಗದ ತಿರಸ್ಕಾರಕ್ಕೆ ಒಳಗಾಗಿ, ಸಮಾಜದಿಂದ ಬಹಿಷ್ಕಾರಕ್ಕೆ ಒಳಗಾಗಿ ಸಂಕಟಪಡುವ ಜೀವಿಗಳು ಹಿಜಡಾಗಳಾಗಿ ಪರಿವರ್ತನೆಗೊಳಗಾಗುತ್ತಾರೆ. ಇಂತಹ ಸಮಾಜ ಬಹಿಷ್ಕೃತ ಲೈಂಗಿಕ ಅಲ್ಪಸಂಖ್ಯಾತರು ಸೇರಿ ತಮ್ಮದೇ ಆದ ಹಿಜಡಾ ಸಮಾಜವನ್ನು ಕಟ್ಟಿಕೊಳ್ಳುತ್ತಾರೆ. ಇಂತಹ ಹಿಜಡಾ ಸಮಾಜ ಮಾನಸಿಕವಾಗಿ ನೊಂದು ಬಂದ ತಮ್ಮಂತವರನ್ನು ಹಿಜಡಾ ಸಮಾಜದ ಸದಸ್ಯರಾಗಿಸಿಕೊಂಡು ಸಲಹುತ್ತಾರೆ. ಸಮಾಜದ ಜನರೇ ಇಂತಹ ಹಿಜಡಾಗಳನ್ನು ಅಘೋಷಿತ ಬಹಿಷ್ಕಾರಕ್ಕೊಳಪಡಿಸಿ ಅವಮಾನಿಸಿದಾಗ ಹಿಜಡಾಗಳು ತಮ್ಮ ಬದುಕಿಗಾಗಿ ಅನಿವಾರ್ಯವಾಗಿ ಆಯ್ದುಕೊಂಡಿದ್ದು ಭಿಕ್ಷೆ ಬೇಡುವುದು ಇಲ್ಲವೇ ಪುರುಷರ ಲೈಂಗಿಕ ತೃಷೆಗೆ ತಮ್ಮನ್ನು ಒಡ್ಡಿಕೊಳ್ಳುವುದು.
ಇಡೀ ಸಮಾಜ ಲೈಂಗಿಕ ಅಲ್ಪಸಂಖ್ಯಾತರನ್ನು ಹಿಜಡಾಗಳು, ಚಕ್ಕಾಗಳು, ಶಿಖಂಡಿಗಳು... ಮುಂತಾದ ಪದಗಳಲ್ಲಿ ಕರೆದು ಅವಮಾನಿಸುತ್ತದೆ. ಬಹುತೇಕ ಜನತೆ ಇವರನ್ನು ವಿಕ್ಷಿಪ್ತವಾಗಿ ನೋಡುತ್ತಾ ಹೀನಾಯವಾಗಿ ಕಂಡು ಮಾನಸಿಕವಾಗಿ ಹಿಂಸಿಸಿದರೆ, ಕೆಲವು ಅತೃಪ್ತ ಪುರುಷರು ಹಿಜಡಾಗಳನ್ನು ದೈಹಿಕವಾಗಿ ಲೈಂಗಿಕ ಕಿರುಕುಳ ಕೊಟ್ಟು ಹಿಂಸಿಸುತ್ತಾರೆ. ಇಂತಹ ಪ್ರಕ್ಷುಬ್ದ ಸನ್ನಿವೇಶದಲ್ಲಿ ಹಿಜಡಾಗಳು ಇಡೀ ಸಮಾಜದ ವಿರುದ್ಧವೇ ತಮ್ಮದೇ ಆದ ರೀತಿಯಲ್ಲಿ ಪ್ರತಿಭಟಿಸುತ್ತಾರೆ. ಬಲವಂತದ ಹಣ ವಸೂಲಿ ಹಾಗೂ ವಿಕ್ಷಿಪ್ತ ಅನಾಗರಿಕ ನಡವಳಿಕೆಗಳನ್ನು ರೂಢಿಸಿಕೊಂಡು, ಅಮಾನವೀಯವಾಗಿ ನಡೆಸಿಕೊಂಡ ಜನರನ್ನು ಅಮಾನವೀಯತೆಯಿಂದಲೇ ಎದುರಿಸುತ್ತಾರೆ. ಇಂತಹ ಹಿಜಡಾಗಳ ಬದುಕು ಹಾಗೂ ಬವನೆಯನ್ನು ತೋರಿಸುವ ಪ್ರಯತ್ನವನ್ನು ಈ ಮರಾಠಿಯ ‘ಹಿಜಡಾ’ ನಾಟಕ ಮಾಡುತ್ತದೆ.
ಅದೊಂದು ಹಿಜಡಾ ಕುಟುಂಬ. ಎಲ್ಲೆಲ್ಲೋ ಹುಟ್ಟಿದ, ದೇಹ-ಭಾವ ಭಿನ್ನವಾಗಿರುವ, ಹೆತ್ತವರಿಗೆ ಬೇಡವಾಗಿ ಮನೆಬಿಟ್ಟು ಬಂದವರೆಲ್ಲಾ ಒಂದೆಡೆ ವಾಸಿಸುತ್ತಿರುತ್ತಾರೆ. ಆ ಕುಟುಂಬದ ಹಿರಿಯಳು ಪರಿದಾ ಎಂಬಾಕೆ ಎಲ್ಲರನ್ನೂ ಕಕ್ಕುಲತೆಯಿಂದ ನೋಡಿಕೊಳ್ಳುತ್ತಾಳೆ. ಹಾಗೆ ಆ ಮನೆಗೆ ಬಂದ ಡಿಂಪಲ್ ಎನ್ನುವಾತ ನಿರ್ವಾಣ ಮಾಡಿಸಿಕೊಂಡು ಹೆಣ್ಣಾಗಿ ಬದಲಾಗುತ್ತಾನೆ. (ಲಿಂಗಬದಲಾವಣೆಗೆ ನಿರ್ವಾಣ ಎನ್ನುತ್ತಾರೆ) ಕಿರಣ್ ಎಂಬ ಯುವಕನೊಳಗೆ ಹೆಣ್ಣಿನ ಗುಣವನ್ನು ಗುರುತಿಸಿದ ಡಿಂಪಲ್ ಆತನನ್ನು ಹಿಜಡಾ ಸಮಾಜಕ್ಕೆ ಸೇರಿಸಿಕೊಳ್ಳುತ್ತಾಳೆ. ಆ ಕಿರಣ್ ಕಾಲೇಜ್ ಬಿಟ್ಟು, ಸೀರೆ ಉಟ್ಟು ಹಿಜಡಾಗಳ ಜೊತೆಗೆ ಗುರುತಿಸಿಕೊಳ್ಳುತ್ತಾನೆ. ಆತನ ತಾಯಿಗೆ ಮಗನ ಅಸಲಿತನ ಗೊತ್ತಾಗಿ ಕಿರಣ್ ಮನೆ ತೊರೆದು ಹಿಜಡಾಗಳ ಜೊತೆಗೆ ಬಂದಿರುತ್ತಾನೆ. ಡಿಂಪಲ್‌ಳ ಗೆಳೆಯನೊಬ್ಬ ಆಕೆಯ ಮನಸ್ಸಿಗೆ ವಿರುದ್ದವಾಗಿ ಅತ್ಯಾಚಾರ ಮಾಡುತ್ತಾನೆ. ಕೊನೆಗೆ ಕಿರಣ್‌ಳ ತಾಯಿ ಮಗನನ್ನು ತನ್ನ ಮಗಳೆಂದು ಒಪ್ಪಿಕೊಂಡು ಮನೆಗೆ ಸೇರಿಸಿಕೊಳ್ಳುತ್ತಾಳೆ. ಹೀಗೆ...
ಲೈಂಗಿಕ ಅಲ್ಪಸಂಖ್ಯಾತರ ಕುಟುಂಬವೊಂದರಲ್ಲಿ ನಡೆಯುವ ನೋವು-ನಲಿವು, ಸಂಭ್ರಮ-ಸಂಕಟಗಳನ್ನು ‘ಹಿಜಡಾ’ ನಾಟಕವು ಅನಾವರಣಗೊಳಿಸುತ್ತದೆ. ಹಿಜಡಾ ಕುಟುಂಬದ ಗುರು ಶಿಷ್ಯ ಪರಂಪರೆ, ಆಚರಣೆಗಳು, ನಂಬಿಕೆಗಳು ಹಾಗೂ ಮಾನವೀಯ ಸಂಬಂಧಗಳನ್ನು ನಾಟಕದಾದ್ಯಂತ ದೃಶ್ಯರೂಪದಲ್ಲಿ ಕಟ್ಟಿಕೊಡಲಾಗಿದೆ.
ಈ ನಾಟಕ ರಿಯಾಲಿಸ್ಟಿಕ್ ಆಗಿದ್ದು ಸಂಭಾಷಣೆಗೆ ಹೆಚ್ಚಿನ ಪ್ರಾಧಾನ್ಯತೆ ಕೊಡಲಾಗಿದೆ. ಹೀಗಾಗಿ ಮರಾಠಿ ಭಾಷೆ ಗೊತ್ತಿಲ್ಲದವರಿಗೆ ಪೂರ್ಣಪ್ರಮಾಣದಲ್ಲಿ ಮಾತಿನೊಳಗಿನ ಭಾವನಾತ್ಮಕತೆ ಅರ್ಥವಾಗದೇ ಹೋಯಿತು. ಭಾಷೆಯ ಗ್ರಹಿಕೆಯ ಕೊರತೆಯಿಂದಾಗಿ ಇಡೀ ರಂಗಪ್ರಯೋಗ ಅನ್ಯ ಭಾಷಿಕ ಪ್ರೇಕ್ಷಕರ ಮನಸ್ಸಿಗೆ ತೀವ್ರವಾಗಿ ಸಂವಹನ ಮಾಡುವಲ್ಲಿ ಸೋತಿತು. ಎಲ್ಲವನ್ನೂ ವಾಚ್ಯದಲ್ಲೇ ಹೇಳುವ ದಾವಂತದಲ್ಲಿ ನಿರ್ದೇಶಕರು ರಂಗಸೂಕ್ಷ್ಮಗಳನ್ನು ಮರೆತಿದ್ದಾರೆ. ಅಶ್ಲೀಲ ಭಾಷೆಯ ಬಳಕೆ ಪಡ್ಡೆಗಳಿಗೆ ಖುಷಿಕೊಟ್ಟರೆ, ಸಂಪ್ರದಾಯವಾದಿಗಳಿಗೆ ಹಾಗೂ ಕುಟುಂಬ ಪರಿವಾರ ಸಮೇತ ಬಂದ ಪ್ರೇಕ್ಷಕರಿಗೆ ಮುಜುಗರವನ್ನುಂಟುಮಾಡುವಂತಿವೆ. ಮರಾಠಿ ನಾಟಕದಲ್ಲಿ ಕೆಲವು ಕನ್ನಡದ ಅಶ್ಲೀಲ ಪದಗಳ ಬಳಕೆ ಅನಗತ್ಯವೆನಿಸುತ್ತದೆ. ಯಾವ ಪದಗಳನ್ನು ಮರಾಠಿಯಲ್ಲಿ ಸರಕಾರ ಬ್ಯಾನ್ ಮಾಡಿತ್ತೋ ಅವೆಲ್ಲವನ್ನೂ ಈ ಪ್ರಯೋಗದಲ್ಲಿ ಪುಂಕಾನುಪುಂಕವಾಗಿ ಬಳಸಲಾಗಿದೆ. ಮಹಾರಾಷ್ಟ್ರದಲ್ಲಿ ಇಂತಹ ವಯಸ್ಕರ ನಾಟಕಗಳಿಗೆ ಸಿನೆಮಾದ ಹಾಗೆ ‘ಎ’ ಸೆರ್ಟಿಫಿಕೆಟ್ ಕೊಟ್ಟು 18 ವರ್ಷದೊಳಗಿನವರಿಗೆ ನಾಟಕ ತೋರಿಸುವುದನ್ನು ನಿರ್ಬಂಧಿಸಲಾಗುತ್ತದೆ. ಆದರೆ ಕನ್ನಡದಲ್ಲಿ ಈ ಯಾವ ನಿರ್ಬಂಧವೂ ಇಲ್ಲದ್ದರಿಂದ ಮಕ್ಕಳಿಂದ ಯುವಕರವರೆಗೆ, ಮಹಿಳೆಯರಿಂದ ಮುದುಕರವರೆಗೆ ಎಲ್ಲರೂ ಈ ಅಸಂವಿಧಾನಿಕ ಅಶ್ಲೀಲ ಪದ ಹಾಗೂ ಕೆಲವು ನಟನೆಗಳನ್ನು ನೋಡಲೇ ಬೇಕಾದ ಅನಿವಾರ್ಯತೆಯನ್ನು ಈ ನಾಟಕ ಹುಟ್ಟಿಹಾಕಿತು.
ಈ ‘ಹಿಜಡಾ’ ನಾಟಕವು ಮಹಾರಾಷ್ಟ್ರದಲ್ಲಿ ಹಿಜಡಾ ಸಮಾಜದವರಿಂದಲೇ ವಿರೋಧಿಸಲ್ಪಟ್ಟಿತು. ಹಿಜಡಾಗಳನ್ನು ಅವಮಾನಿಸಲಾಗಿದೆ ಎಂದು ಹಿಜಡಾ ಸಮಾಜ ಸಿಟ್ಟಿಗೆದ್ದಿತ್ತು. ಹಿಜಡಾಗಳ ಶಾಪ ಎಂದೂ ಯಾರಿಗೂ ತಟ್ಟುವುದಿಲ್ಲ ಎನ್ನುವ ಈ ನಾಟಕದ ಪ್ರಮುಖ ಪಾತ್ರದ ಮಾತು ಆ ಸಮಾಜವನ್ನು ಕೆರಳಿಸಿತ್ತು. ಒಮ್ಮೆ ಹಿಜಡಾ ಆದವರು ಮರಳಿ ತಮ್ಮ ಮೂಲ ಮನೆಗೆ ಹೋಗಬಹುದು ಎನ್ನುವ ಈ ನಾಟಕದ ಆಶಯ ಹಿಜಡಾಗಳ ಬುಡವನ್ನೇ ಅಲ್ಲಾಡಿಸಿಬಿಟ್ಟಿತ್ತು. ಈ ಎಲ್ಲಾ ಕಾರಣಗಳಿಗಾಗಿ ನಿರ್ದೇಶಕರಿಗೆ ಬೆದರಿಕೆ ಒಡ್ಡಲಾಯಿತು, ಘೆರಾವ್ ಮಾಡಲಾಯಿತು ಹಾಗೂ ಪ್ರದರ್ಶನದ ಸಮಯದಲ್ಲಿ ಬಂದು ಗಲಾಟೆ ಮಾಡಲಾಯಿತು. ಕೊನೆಗೆ ಪೋಲೀಸ್ ರಕ್ಷಣೆಯಲ್ಲಿ ಈ ನಾಟಕವನ್ನು ಪುಣೆಯಲ್ಲಿ ಪ್ರದರ್ಶಿಸಲಾಯಿತು.
ಹಿಜಡಾ ಸಮಾಜಕ್ಕೆ ತಮ್ಮ ಅಸ್ತಿತ್ವದ ಸಮಸ್ಯೆ ಹೀಗಾಗಿ ಪ್ರತಿಭಟನೆ ಸಹಜ. ಆದರೆ ಈ ನಾಟಕ ಹಿಜಡಾ ಸಮಾಜದ ಕುರಿತು ಸಮಾಜದಲ್ಲಿರುವ ಮೂಢ ನಂಬಿಕೆಯೊಂದನ್ನು ಒಡೆದು ಹಾಕಲು ಪ್ರಯತ್ನಿಸಿದೆ. ಹಿಜಡಾಗಳು ಶಾಪಕೊಟ್ಟರೆ ಅದು ಫಲಿಸುತ್ತೆ ಎನ್ನುವ ಭಯ ಹಾಗೂ ಆಶೀರ್ವದಿಸಿದರೆ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆಯ ಮೇಲೆ ಹಿಜಡಾಗಳ ಬದುಕು ನಿಂತಿದೆ. ಅವರನ್ನು ಮಂಗಳಮುಖಿಯರು ಎಂದು ಕನ್ನಡದಲ್ಲಿ ಕರೆದು ಈ ರೀತಿಯ ಮೂಢನಂಬಿಕೆಯನ್ನು ಗಟ್ಟಿಗೊಳಿಸಲಾಗಿದೆ. ಆದರೆ ಅದೆಲ್ಲಾ ಸುಳ್ಳು ಎನ್ನುವುದನ್ನು ಈ ನಾಟಕ ಹೇಳುತ್ತದೆ.
ಇಲ್ಲಿ ಹಿಜಡಾಗಳ ಕುರಿತು ಹೆತ್ತವರು ಹೊಂದಿರುವ ಕ್ರೂರತೆಯನ್ನು ಹಾಗೂ ಜೊತೆಗೆ ಮಾನವೀಯತೆಯನ್ನು ಕಟ್ಟಿಕೊಡಲಾಗಿದೆ. ಇಲ್ಲಿ ರೋಜಾ ಎನ್ನುವ ಹಿಜಡಾ ತನ್ನ ಎಲ್ಲಾ ಸಂಪಾದನೆಯನ್ನೂ ತನ್ನ ಕುಟುಂಬಕ್ಕೆ ಕಳುಹಿಸುತ್ತಿದ್ದರೂ ಅವಳ ಸಹೋದರರು ಅವಳ ಹಣವನ್ನು ಮಾತ್ರ ಬಯಸುತ್ತಾರೆಯೇ ಹೊರತು ಆಕೆಯನ್ನು ದೂರವೇ ಇಟ್ಟಿರುತ್ತಾರೆ. ಆಕೆಯ ತಂದೆ ಸತ್ತ ಹತ್ತು ದಿನಗಳ ನಂತರ ‘ತಂದೆ ಸತ್ತ. ಇನ್ನು ನಿನ್ನ ಸಂಬಂಧ ನಮಗೆ ಬೇಕಾಗಿಲ್ಲ. ಮನೆಗೆಂದೂ ಬರಬೇಡ’ ಎಂದು ರೋಜಾಳನ್ನು ದಿಕ್ಕರಿಸುತ್ತಾರೆ. ಇದು ಜೊತೆಯಲ್ಲಿ ಹುಟ್ಟಿದವರೇ ಹಿಜಡಾಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ರೀತಿ. ಈ ಸತ್ಯದ ಜೊತೆಗೆ ಇನ್ನೊಂದು ಆಶಾದಾಯಕ ಸನ್ನಿವೇಶವನ್ನೂ ಈ ನಾಟಕ ಸೃಷ್ಟಿಸುತ್ತದೆ. ಕಿರಣ್‌ನ ಹೆಣ್ಣಿನ ವರ್ತನೆ ನೋಡಿ ಮನೆಯಿಂದ ಹೊರಗಟ್ಟಿದ ತಾಯಿ ಕೊನೆಗೆ ಹೆಣ್ಣಿನ ವೇಶದಲ್ಲೇ ಬಂದ ಮಗ ಕಿರಣ್ನನ್ನು ಅಪ್ಪಿಕೊಳ್ಳುತ್ತಾಳೆ. ಮಗನನ್ನು ಮಗಳೆಂದು ಒಪ್ಪಿಕೊಳ್ಳುತ್ತಾಳೆ. ತಮ್ಮದಲ್ಲದ ತಪ್ಪಿಗೆ ಪರಿತಪಿಸುವ ಜೀವಗಳನ್ನು ಮನೆಯವರು ಮಾನವೀಯತೆಯಿಂದ ನೋಡಿಕೊಳ್ಳಬೇಕು ಎನ್ನುವ ಸದಾಶಯವನ್ನು ಈ ನಾಟಕ ತೋರಿಸುತ್ತದೆ.
ಹಣ ವಸೂಲಿ ಮಾಡುವಾಗ ಹಿಜಡಾಗಳ ಗೂಂಡಾ ರೀತಿಯ ವರ್ತನೆ ಹಾಗೂ ದಂದಾ ಮಾಡುವಾಗ ಅವರು ತೋರುವ ಅನಾಗರಿಕ ನಡತೆ ಮತ್ತು ಅವರ ಅಸಹಜ ನಡುವಳಿಕೆಗಳನ್ನು ಈ ನಾಟಕದಲ್ಲಿ ಹೈಲೈಟ್ ಮಾಡಿ ತೋರಿಸಲಾಗಿದೆಯಾದರೂ ಇದಕ್ಕೆಲ್ಲಾ ಏನು ಕಾರಣ? ಯಾಕೆ ಈ ಜನಾಂಗ ಇಷ್ಟೊಂದು ಓವರ್ ರಿಯಾಕ್ಟ್ ಮಾಡುತ್ತದೆ? ಹಣ ವಸೂಲಿ ಮತ್ತು ವೇಶ್ಯಾವಾಟಿಕೆ ಬಿಟ್ಟರೆ ಇವರ ಬದುಕಿಗಿರುವ ಬೇರೆ ಪರ್ಯಾಯ ಸಾಧ್ಯತೆಗಳೇನು? ಇಂತಹ ಲೈಂಗಿಕ ಅಲ್ಪಸಂಖ್ಯಾತರ ಕುರಿತು ಸಮಾಜ ಮತ್ತು ಸರಕಾರದ ಜವಾಬ್ದಾರಿಗಳೇನು? ಎನ್ನುವ ಮೂಲಭೂತ ಪ್ರಶ್ನೆಗಳ ಕುರಿತು ಈ ನಾಟಕದಲ್ಲೆಲ್ಲೂ ಚರ್ಚಿಸುವುದಿಲ್ಲ. ಸಮಸ್ಯೆಯನ್ನು ಹೆಚ್ಚುಗಾರಿಕೆ ಮಾಡಿ ತೋರಿಸುವ ಉತ್ಸಾಹವನ್ನು ಅದಕ್ಕೆ ಪರಿಹಾರ ಸೂಚಿಸುವಲ್ಲಿ ನಿರ್ದೇಶಕರು ಸೋಲುತ್ತಾರೆ. ಇದ್ದದ್ದನ್ನು ಇದ್ದಂತೆ ತೋರಿಸಲು ಈ ನಾಟಕದ ಅಗತ್ಯವಾದರೂ ಏನು? ಒಂದು ಸಾಕ್ಷಚಿತ್ರ ಮಾಡಿ ತೋರಿಸಿದರಾಗುತ್ತಿತ್ತಲ್ಲ ಎನ್ನುವ ಪ್ರಶ್ನೆಯನ್ನು ಈ ನಾಟಕ ಪ್ರೇಕ್ಷಕರ ಮುಂದಿಡುತ್ತದೆ.
ಈ ನಾಟಕದ ತಯಾರಿಯ ಹಿಂದಿರುವ ಶ್ರಮ ದೊಡ್ಡದು. ಎರಡುವರೆ ವರ್ಷಗಳ ಕಾಲ ಅಧ್ಯಯನ ಮಾಡಿ ಹಲವು ರೀತಿಯಲ್ಲಿ ನಾಟಕದ ಪ್ಲಾಟ್ ಸಿದ್ದಮಾಡಿಕೊಳ್ಳಲಾಗಿದೆ. ಎಂಟು ಜನ ಪುರುಷರು ಎಪ್ಪತೈದು ದಿನಗಳ ಕಾಲ ಸೀರೆಉಟ್ಟೇ ಹಿಜಡಾಗಳಂತೆ ವರ್ತಿಸುತ್ತಾ ನಟನೆ ಕಲೆತಿದ್ದಾರೆ. ಈ ನಾಟಕ ನೋಡಿದ ಯಾರೇ ಆದರೂ ಅಲ್ಲಿರುವ ಎಲ್ಲಾ ನಟರನ್ನು ಹಿಜಡಾಗಳೇ ಎಂದುಕೊಳ್ಳುವಷ್ಟು ಸಹಜವಾಗಿ ಕಲಾವಿದರು ಅಭಿನಯಿಸಿದ್ದಾರೆ. ಕೇವಲ ಕಾಸ್ಟೂಮ್ಗಾಗಿಯೇ ಲಕ್ಷ ರೂಪಾಯಿ ಖರ್ಚುಮಾಡಲಾಗಿದೆ. ಈ ನಾಟಕದ ಒಟ್ಟಾರೆ ಬಜೆಟ್ ಐದು ಲಕ್ಷರೂಪಾಯಿಗಳು. ರಿಯಲಿಸ್ಟಿಕ್ ಸೆಟ್ ಅಂತೂ ಇಡೀ ರಂಗವೇದಿಕೆಯನ್ನು ಆಕ್ರಮಿಸಿದ್ದು ಮನೆಯೊಂದನ್ನೇ ಸೃಷ್ಟಿಸಲಾಗಿದೆ. ಆದರೆ ಈ ಸೆಟ್ ನಾಟಕಕ್ಕೆ ಭಾರವಾಗಿದ್ದು ಇನ್ನೂ ಎಪ್ಪತ್ತರ ದಶಕದ ಮಾದರಿಯಲ್ಲೇ ಸೆಟ್ ನಿರ್ಮಿಸಲಾಗಿದೆ. ಈ ರೀತಿಯ ಸೆಟ್ಗಳು ನಟರನ್ನು ಕುಬ್ಜಗೊಳಿಸಿ ವಿಜ್ರಂಭಿಸುತ್ತವೆ. ಹಾಗೂ ಅತೀ ಹೆಚ್ಚು ಖರ್ಚನ್ನೂ ಮಾಡಿಸುತ್ತವೆ. ಜೊತೆಗೆ ಮರುಪ್ರದರ್ಶನಗಳಾದಾಗ, ಅನ್ಯ ರಾಜ್ಯದಲ್ಲಿ ಪ್ರದರ್ಶನಗೊಳ್ಳುವಾಗ ಸೆಟ್ಗಳನ್ನು ಸಾಗಿಸುವುದೇ ಅತೀ ಪ್ರಯಾಸದ ಕೆಲಸವಾಗುತ್ತದೆ. ಆದರೂ ಇನ್ನೂ ಹಳೆಯ ಕಾಲ ರಿಯಾಲಿಸ್ಟಿಕ್ ತಂತ್ರಕ್ಕೆ ನಿರ್ದೇಶಕರು ಅಂಟಿಕೊಂಡಿರುವುದು ಅಚ್ಚರಿಯ ಸಂಗತಿ.
ಇದೇ ಮಾದರಿಯ ನಾಟಕವನ್ನು ರೇವತಿಯವರ ‘ಬದುಕು ಬಯಲು’ ಕಾದಂಬರಿ ಆಧರಿಸಿ ಅದೇ ಹೆಸರಿನಲ್ಲಿ ನೀನಾಸಂನ ಎಂ.ಗಣೇಶ ಮೇಸ್ಟ್ರು ತಮ್ಮ ‘ಜನಮನದಾಟ’ ರೆಪರ್ಟರಿಗೆ ನಿರ್ದೇಶಿಸಿ ಕರ್ನಾಟದಾದ್ಯಂತ ಪ್ರದರ್ಶಿಸಿದ್ದರು. ಸಾಂಕೇತಿಕ ಸೆಟ್ಗಳು, ಅಶ್ಲೀಲವೆನ್ನಿಸದ ದೃಶ್ಯಗಳು, ಸರಳವಾದ ನಿರೂಪನೆಯಲ್ಲಿ ಸೊಗಸಾಗಿ ಯಶಸ್ವಿ ನಾಟಕವನ್ನು ಕಟ್ಟಿಕೊಟ್ಟಿದ್ದರು. ಆದರೆ ಈ ಮರಾಠಿ ನಾಟಕ ಯಾಕೋ ತುಂಬಾ ವಾಚ್ಯ ಹಾಗೂ ಅವಾಚ್ಯವಾಗಿದ್ದು ಪ್ರೇಕ್ಷಕರಿಗೆ ದಕ್ಕಲಿಲ್ಲ. ಅಂತಹ ತೀವ್ರವಾದ ಅನುಭವವನ್ನು ಕಟ್ಟಿಕೊಡಲಿಲ್ಲ.
‘ಸಲಿಂಗಕಾಮ ಒಂದು ಅಪರಾಧ’ ಎಂದು ಸುಪ್ರೀಂ ಕೋರ್ಟ ಅಮಾನವೀಯ ತೀರ್ಪು ಕೊಟ್ಟಿರುವ ಪ್ರಸ್ತುತ ಸನ್ನಿವೇಶದಲ್ಲಿ ಈ ‘ಹಿಜಡಾ’ ನಾಟಕ ಆ ತೀರ್ಪಿಗೆ ಪ್ರತಿಭಟನೆ ಎನ್ನುವಂತೆ ಮೂಡಿಬಂದಿದೆ. ಸುಪ್ರೀಂ ಕೋರ್ಟನ ಆದೇಶವನ್ನೇನಾದರೂ ಕಟ್ಟುನಿಟ್ಟಾಗಿ ಜಾರಿ ಮಾಡಿದರೆ ಬಹುತೇಕ ಹಿಜಡಾಗಳು ಜೈಲಿನಲ್ಲಿರಬೇಕಾಗುತ್ತದೆ. ಸಲಿಂಗಕಾಮಕ್ಕೆ ಬಳಕೆಯಾಗುವ ಹಿಜಡಾ ಜನಾಂಗದ ಬದುಕಿನ ಅನಿವಾರ್ಯತೆಗಳನ್ನು ಈ ನಾಟಕ ಕಟ್ಟಿಕೊಡುತ್ತಾ ಅವರನ್ನೂ ಸಹ ಮಾನವೀಯತೆಯಿಂದ ನೋಡುವಂತೆ ಪ್ರೇರೇಪಿಸುವಲ್ಲಿ ಒಂದಿಷ್ಟು ಯಶಸ್ವಿಯಾಗಿದೆ.
- ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ