ಗುರುವಾರ, ಜನವರಿ 23, 2014

ಉಂಡ ಮನೆಗೆ ಎರಡು ಬಗೆದ ಕಪ್ಪಣ್ಣ : ಹತ್ತಿದ ಏಣಿ ಮರೆತ ಉಮಾಶ್ರೀ


ಕಪ್ಪಣ್ಣ, ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ, ವಿಶ್ರಾಂತ ಸರಕಾರಿ ಅಧಿಕಾರಿ, ಅವಿಶ್ರಾಂತ ರಂಗಕರ್ಮಿ, ಬೆಳಕಿನ ವಿನ್ಯಾಸಗಾರ, ಸಾಂಸ್ಕೃತಿಕ ಲೋಕದ ಸಮರ್ಥ ಸಂಘಟಕ ಎನ್ನುವುದೆಲ್ಲವೂ ಸತ್ಯ. ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಹಿಂದಿನ ಯಾವುದೇ ಅಧ್ಯಕ್ಷರೂ ಮಾಡದಂತಹ ಅಪರೂಪದ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು, ಹಲವಾರು ಸರಕಾರಿ ಜಾನಪದ ಜಾತ್ರೆ ಕಾರ್ಯಕ್ರಮಗಳ ನಾಯಕತ್ವ ವಹಿಸಿಕೊಂಡು ಯಶಸ್ವಿಗೊಳಿಸಿದ್ದರು. ನಟರಂಗ ರಂಗತಂಡದ ಮೂಲಕ ದಶಕಗಳ ಹಿಂದೆ ಕೆಲವು ಉತ್ತಮ ನಾಟಕಗಳನ್ನೂ ಆಡಿಸಿದ್ದರು.

ಕಪ್ಪಣ್ಣ
ಹಾಗೆಯೇ ಕಪ್ಪಣ್ಣ ಒಬ್ಬ ಪಕ್ಕಾ ರಂಗರಾಜಕಾರಣಿ, ಸಾಂಸ್ಕೃತಿಕ ದಲ್ಲಾಳಿ, ಶತ್ರು ಸಂಹಾರಿ, ಸರಕಾರಿ-ಅರೆ ಸರಕಾರಿ ಹಾಗೂ ಖಾಸಗಿ  ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಮುಖ ಗುತ್ತಿಗೆದಾರ, ರಂಗಭೂಮಿಯನ್ನು-ರಂಗಕರ್ಮಿಗಳನ್ನು ತನ್ನ ಸ್ವಾರ್ಥ ಸಾಧನೆಗೆ ಬಳಸಿಕೊಂಡು ಬೆಳದ ರಂಗಕರ್ಮಿ, ಬೇರೆಯವರನ್ನು ವಿಡಂಬಣೆ ಮಾಡುತ್ತಲೇ ಅಪಹಾಸ್ಯಕ್ಕೊಳಗಾಗುವ ವಿಧೂಷಕ, ಕೆಲವಾರು ಸೆಲಿಬ್ರಿಟಿಗಳಿಗೆ ಕುಡಿಸಿ, ಕಾಣಿಕೆ ಕೊಡಿಸಿ, ಆಸೆ ಆಮಿಷ ತೋರಿಸಿ ತನ್ನ ಹಿತಾಸಕ್ತಿಗಾಗಿ ಬಳಕೆ ಮಾಡಿಕೊಂಡ ಚಾಣಾಕ್ಷ.....ಹೀಗೆ ಇನ್ನೂ ಹಲವಾರು ಆರೋಪಗಳು ಕಪ್ಪಣ್ಣನವರ ಮೇಲಿವೆ. ಬಹುತೇಕ ರಂಗಕರ್ಮಿಗಳೂ ಖಾಸಗಿಯಾಗಿ ಇದನ್ನು ಒಪ್ಪುತ್ತಾರೆ.

ದೇವೇಗೌಡ-ಯಡಿಯೂರಪ್ಪನಂತವರು ಇಪ್ಪತ್ನಾಲ್ಕು ಗಂಟೆ ರಾಜಕೀಯ ಲೆಕ್ಕಾಚಾರದಲ್ಲೇ ಮುಳುಗಿರುತ್ತಾರೆಂಬುದು ಎಷ್ಟು ಸತ್ಯವೋ, ನಮ್ಮ ಕಪ್ಪಣ್ಣನವರೂ ಸಹ ದಿನದ ಇಪ್ಪತ್ನಾಲ್ಕು ಗಂಟೆ ಸಾಂಸ್ಕೃತಿಕ ರಾಜಕಾರಣದಲ್ಲಿ ಮುಳುಗೇಳುತ್ತಿರುತ್ತಾರೆಂಬುದೂ ಅಷ್ಟೇ ಸತ್ಯ. ಅದು ಅಕಾಡೆಮಿಗಳ ಅಧ್ಯಕ್ಷ-ಸದಸ್ಯರ ಆಯ್ಕೆ ಇರಬಹುದು, ರಂಗಾಯಣದ ರಂಗಸಮಾಜದ ಸದಸ್ಯರು ಹಾಗೂ ನಿರ್ದೇಶಕರ ಆಯ್ಕೆಯ ವಿಷಯವಿರಬಹುದು.. ಅಥವಾ ಯಾವುದೆ ಇಲಾಖಾ ಕೃಪಾಪೋಷಿತ ರಂಗತಂಡ ಹಮ್ಮಿಕೊಳ್ಳುವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ, ರಂಗೋತ್ಸವಗಳಿರಬಹುದು.... ಅಲ್ಲಿ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಕಪ್ಪಣ್ಣನವರ ಕಾಣದ ಕೈವಾಡ ಇದ್ದೇ ಇರುತ್ತದೆ. ಎಲ್ಲವನ್ನೂ ಎಲ್ಲರನ್ನೂ ತಮ್ಮ ಹಿತಾಸಕ್ತಿಗೆ ಪೂರಕವಾಗಿ ಬಳಸಿಕೊಳ್ಳುವಂತಹ ರಂಗರಾಜಕಾರಣದ ಚಾಣಾಕ್ಷ ನಡೆ ಕಪ್ಪಣ್ಣನವರಿಗೆ ಸಿದ್ದಿಸಿದೆ.   
      
ಎಲ್ಲಿ ಏನೇ ರಂಗಭೂಮಿಗೆ ಸಂಬಂಧಿಸಿದ ಪ್ರಮುಖ ಕಾರ್ಯಕ್ರಮಗಳು, ನಾಟಕೋತ್ಸವಗಳು, ವಿಚಾರಸಂಕಿರಣಗಳು ಇದ್ದಲ್ಲಿ ಅಲ್ಲಿ ಕಪ್ಪಣ್ಣ ಇರಲೇಬೇಕು. ಅವರ ಸಲಹೆ ಸೂಚನೆ ಮುಂದಾಳತ್ವವನ್ನು ಆಯೋಜಕರು ಒಪ್ಪಿಕೊಳ್ಳಲೇಬೇಕು. ಕನಿಷ್ಟ ಉದ್ಘಾಟನೆಗೋ ಭಾಷಣಕ್ಕೋ ಅವರನ್ನು ಆಹ್ವಾನಿಸಿ ವೇದಿಕೆಯನ್ನೊದಗಿಸಲೇಬೇಕು. ಹಾಗೇನಾದರೂ ಮಾಡದಿದ್ದಲ್ಲಿ ಕಪ್ಪಣ್ಣನ ಕೋಪಕ್ಕೆ ಬಲಿಯಾಗಲೇಬೇಕು, ಅವರನ್ನು ವಿರೋಧಿಸುವ ಸಾಹಸಕ್ಕೆ ಮುಂದಾದರೆ ಕಪ್ಪಣ್ಣನವರ ಸಾಂಸ್ಕೃತಿಕ ರಾಜಕೀಯಕ್ಕೆ ಈಡಾಗಲೇಬೇಕು. ಅವರಿಗೆ ಯಾರಾದರೂ ಅಪ್ಪಿತಪ್ಪಿ ನಾಯಕಸ್ಥಾನ ಕೊಡದೇ ಹೋದರೆ ಕಪ್ಪಣ್ಣ ಖಳನಾಯಕನಾಗಿಯಾದರೂ ಕಾಡದೇ ಬಿಡುವುದಿಲ್ಲ. ಮಾತಿಗೆ ಲೇಟೆಸ್ಟ್ ಉದಾಹರಣೆ ಕಪ್ಪಣ್ಣನವರ ಕೋಪಕ್ಕೆ ಬಲಿಯಾದ ಸಿಜಿಕೆ ರಾಷ್ಟ್ರೀಯ ನಾಟಕೋತ್ಸವ.


 ರಂಗನಿರಂತರ ರಂಗಸಂಸ್ಥೆ ಬೆಳ್ಳಿಹಬ್ಬದ ಆಚರಣೆಯನ್ನು ಹಮ್ಮಿಕೊಂಡಿತ್ತು. 2014, ಜನವರಿ 11 ರಿಂದ 17 ರವರೆಗೆ ಸಿಜಿಕೆ ರಾಷ್ಟ್ರೀಯ ರಂಗೋತ್ಸವವನ್ನು ರಂಗಬೆಳದಿಂಗಳಿಗೆ ಬನ್ನಿ ಎನ್ನುವ ಹೆಸರಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿತ್ತು. ಸಿಜಿಕೆಯ ಗರಡಿಯಲ್ಲಿ ಬೆಳೆದ ಶಿಷ್ಯವರ್ಗ ಹಾಗೂ ಸಿಜಿಕೆ ಅಭಿಮಾನಿ ರಂಗಕರ್ಮಿಗಳು ಸೇರಿ ಅಪರೂಪದ ಏಳು ದಿನದ ಸಾಂಸ್ಕೃತಿಕ ಉತ್ಸವವನ್ನು  ವ್ಯವಸ್ಥಿತವಾಗಿ ನಡೆಸಿದರು. ನಾಟಕೋತ್ಸವಕ್ಕೆ ಪೂರ್ವಭಾವಿಯಾಗಿ ಅನೇಕ ಸಭೆಗಳನ್ನು ಕರೆಯಲಾಗಿತ್ತು. ಸಿಜಿಕೆ ಇದ್ದಾಗ ಪ್ರಮುಖವಾಗಿ ವಿರೋಧಿಸುತ್ತಿದ್ದ ಕಪ್ಪಣ್ಣನವರನ್ನು ನಾಟಕೋತ್ಸವದಿಂದ ಉದ್ದೇಶಪೂರ್ವಕವಾಗಿ ದೂರವೇ ಇಡಲಾಯಿತು. ಹಿಂದೆ ಕಪ್ಪಣ್ಣನವರ ನಾಯಕತ್ವದಲ್ಲಿ ನಡೆದ ಸರಕಾರಿ ಜಾನಪದ ಜಾತ್ರೆಯಲ್ಲಿ ತಿಂದುಂಡು ಗುಂಡಗಾದ ಕೆಲವರು ಈಗ ರಂಗನಿರಂತರದ ನಾಟಕೋತ್ಸವದಲ್ಲಿ ಭಾಗವಹಿಸಿದರು. ಆದರೆ ಕಪ್ಪಣ್ಣನವರಿಗೆ ಮಾತ್ರ ಆಹ್ವಾನವಿರಲಿಲ್ಲ. ಕಪ್ಪಣ್ಣ ಕೆರಳಲು ಇಷ್ಟು ಸಾಕಾಯಿತು.

ತಾನಿಲ್ಲದೆ ರಾಷ್ಟ್ರೀಯ ನಾಟಕೋತ್ಸವವೊಂದು ಅದು ಹೇಗೆ ಯಶಸ್ವಿಯಾಗುತ್ತದೆ ಎಂಬ ಭ್ರಮೆಯಲ್ಲಿದ್ದ ಕಪ್ಪಣ್ಣನವರಿಗೆ ರಂಗನಿರಂತರದ ಸಿದ್ಧತೆಗಳನ್ನು ನೋಡಿ ದಿಗಿಲಾಯಿತು. ಸಿಜಿಕೆ ಹೆಸರಲ್ಲಿ ಯುವ ರಂಗಕರ್ಮಿಗಳೆಲ್ಲಾ ಒಂದಾಗುತ್ತಿರುವುದನ್ನು ಮನಗಂಡು  ಸಣ್ಣ ಕರುಳಲ್ಲಿ ತಳಮಳ ಉಂಟಾಯಿತು. ತೆರೆಮರೆಯಲ್ಲಿ ನಾಟಕೋತ್ಸವಕ್ಕೆ ತಡೆಯೊಡ್ಡಲು ಪ್ರಯತ್ನಿಸಿದರಾದರೂ ಅದು ಸಾಧ್ಯವಾಗಲೇ ಇಲ್ಲಾ. ಯಾಕೆಂದರೆ ಸಿಜಿಕೆ ನಾಟಕೋತ್ಸವದ ಆಯೋಜನೆಗೆ ಶಶಿಧರ್ ಅಡಪ, ಸಿ.ಬಸವಲಿಂಗಯ್ಯನಂತ ರಂಗದಿಗ್ಗಜರೇ ಮುಂದಾಳತ್ವ ವಹಿಸಿದ್ದರು. ಡಿ.ಕೆ.ಚೌಟರವರು ಬೆನ್ನೆಲುಬಾಗಿ ನಿಂತಿದ್ದರು. ನೂರಾರು ರಂಗನಟರು, ರಂಗಸಂಘಟಕರು ನಾಟಕೋತ್ಸವದ ಯಶಸ್ಸಿಗೆ ಕಂಕಣಬದ್ದರಾಗಿ ದುಡಿಯತೊಡಗಿದರು. ಯಾವಾಗ ತನ್ನ ನಿಯಂತ್ರಣವನ್ನು ಮೀರಿ ಸಿಜಿಕೆ ನಾಟಕೋತ್ಸವ ಯಶಸ್ವಿಯಾಗುತ್ತದೆ ಎಂದು ಕಪ್ಪಣ್ಣನವರಿಗೆ ಮನವರಿಕೆಯಾಯಿತೋ, ಯಾವಾಗ ನೇಪತ್ಯದ ತಂತ್ರಗಾರಿಕೆ ವರ್ಕಔಟ್ ಆಗಲಿಲ್ಲವೋ ಆಗ ಕಪ್ಪಣ್ಣ ನೇರವಾಗಿ ಕಾರ್ಯಾಚರಣೆಗಿಳಿದರು. ಹೇಗಾದರೂ ಮಾಡಿ ನಾಟಕೋತ್ಸವಕ್ಕೆ ವಿಘ್ನ ತಂದಿಡಲು ಯೋಜನೆಯೊಂದನ್ನು ರೂಪಿಸಿದರು. ಕಪ್ಪಣ್ಣನನ್ನು ಎದುರು ಹಾಕಿಕೊಂಡು ರಂಗಭೂಮಿಯಲ್ಲಿ ಸುಲಭವಾಗಿ ಯಾವುದೇ ಪ್ರಮುಖ ಕಾರ್ಯಕ್ರಮಗಳನ್ನು ಮಾಡಲು ಅಸಾಧ್ಯ ಎನ್ನುವ ಸಂದೇಶವನ್ನು ಎಲ್ಲಾ ರಂಗಕರ್ಮಿಗಳಿಗೂ ತಲುಪಿಸಲು ಮಾಸ್ಟರ್ ಪ್ಲಾನೊಂದನ್ನು ಮಾಡಿದರು. ಅದುವೇ ಆಪರೇಶನ್ ಸುಗ್ಗಿ-ಹುಗ್ಗಿ,

ರವೀಂದ್ರ ಕಲಾಕ್ಷೇತ್ರಕ್ಕೆ 50 ವರ್ಷ ತುಂಬಿದ ಸಂದರ್ಭದಲ್ಲಿ ಸಂಭ್ರಮಾಚರಣೆ ಆಚರಿಸಲೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ 50 ಲಕ್ಷದಷ್ಟು ಹಣವನ್ನು ತೆಗೆದಿರಿಸಿತ್ತು. ಅದ್ದೂರಿಯಾಗಿ ಕಾರ್ಯಕ್ರಮ ಆಯೋಜಿಸಲೆಂದು ರಂಗಕರ್ಮಿಗಳ ಸಭೆಯನ್ನೂ ಕರೆಯಲಾಗಿತ್ತು. ಆದರೆ ಹಾಗೆ ನಡೆದ ಸಭೆಯಲ್ಲಿ ಕೇವಲ ರಂಗಭೂಮಿಯ ಹಿರಿಯತಲೆಗಳನ್ನು ಹಾಗೂ ರಂಗದಲ್ಲಾಳಿಗಳನ್ನು ಮಾತ್ರ ಕರೆಯಲಾಗಿತ್ತು. ಬಹುತೇಕ ರಂಗಕ್ರಿಯೆಯಿಂದ ರಿಟೈರ್ ಆದವರನ್ನೇ ಸಭೆಗೆ ಆಹ್ವಾನಿಸಲಾಗಿತ್ತು. ಹಲವು ಸಮಿತಿಗಳನ್ನು ಮಾಡಿ ಕಲಾಕ್ಷೇತ್ರದ ಸಂಭ್ರಮಾಚರಣೆಗೆ ಚಾಲನೆ ಕೊಡುವ ಪ್ರಯತ್ನವನ್ನು ಸಂಸ್ಕೃತಿ ಇಲಾಖೆ ಶುರುಮಾಡಿತು. ರಂಗಭೂಮಿಯಲ್ಲಿ ಸಕ್ರೀಯರಾಗಿರುವ ಯುವರಂಗಕರ್ಮಿಗಳನ್ನು ಕಡೆಗಣಿಸಿ ಕೇವಲ ಹಿರಿತಲೆಗಳನ್ನು ಮಾತ್ರ ಪರಿಗಣಿಸಿದ್ದಕ್ಕೆ ಕೆಲವರು ಸಂಸ್ಕೃತಿ ಇಲಾಖೆಯ ಅಧಿಕಾರಿಗಳ ತಾರತಮ್ಯತೆಯನ್ನು ಸಭೆಯಲ್ಲೇ ವಿರೋಧಿಸಿದರು. ಧರಣಿ ಮಾಡುವುದಾಗಿ ಬೆದರಿಸಿದರು. ಇದರಿಂದ ಮುಜುಗರಕ್ಕೀಡಾದ ಇಲಾಖೆಯ ಅಧಿಕಾರಿಗಳು ಇಲಾಖೆಯ ವತಿಯಿಂದ ಕಲಾಕ್ಷೇತ್ರದ ಸಂಭ್ರಮಾಚರಣೆ ಮಾಡುವ ಸಾಹಸವನ್ನೇ ಕೈಬಿಟ್ಟರು. ಈಗಾಗಲೇ ಸಂಸ್ಕೃತಿ ಇಲಾಖೆಯ ಮೇಲೆ ಲೋಕಾಯುಕ್ತದ ರೇಡಾಗಿತ್ತು. ಇಲಾಖೆಯ ಭ್ರಷ್ಟ ಅಧಿಕಾರಿಗಳು ಅಗ್ನಿಕುಂಡದಲ್ಲಿದ್ದಂತೆ ಬೇಯುತ್ತಿದ್ದರು. ಇಂತಹ ಸಂದರ್ಭದಲ್ಲಿ ಮತ್ತೊಂದು ವಿವಾದವನ್ನು ಮೈಮೇಲೆಳೆದುಕೊಳ್ಳಲು ಅವರಲ್ಲಿ ದೈರ್ಯವಿರಲಿಲ್ಲ. ಹಾಗಂತ ಕಲಾಕ್ಷೇತ್ರದ ಚಿನ್ನದ ಹಬ್ಬವನ್ನು ಆಚರಿಸದೇ ಇರುವ ಹಾಗೂ ಇಲ್ಲ. ಹೀಗಾಗಿ ಕಳೆದ ಆರು ವರ್ಷಗಳಿಂದ ನಾಟಕ ಬೆಂಗಳೂರು ಎನ್ನುವ ಹೆಸರಲ್ಲಿ ನಾಟಕೋತ್ಸವವನ್ನು ಆಯೋಜಿಸುತ್ತ ಬಂದವರ ಹೆಗಲಿಗೆ ಕಲಾಕ್ಷೇತ್ರದ ಗೋಲ್ಡನ್ ಜುಬಲಿ ಕಾರ್ಯಕ್ರಮವನ್ನು ವಹಿಸಿ ಇಲಾಖೆಯ ಅಧಿಕಾರಿಗಳು ನಿಟ್ಟುಸಿರಿಟ್ಟರು. ಆದರೆ ಸಂಭ್ರಮಾಚರಣೆಗೆಂದು ತೆಗೆದಿಟ್ಟಿದ್ದ ಹಣದಲ್ಲಿ ಬಹುಪಾಲು ಹಾಗೆ ಉಳಿದಿತ್ತು.

'ಸುಗ್ಗಿ ಹುಗ್ಗಿ' ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ
 2014 ಮಾರ್ಚ 31 ಕ್ಕೆ ಸಂಸ್ಕೃತಿ ಇಲಾಖೆಯ ಹಣಕಾಸಿನ ಲೆಕ್ಕಾಚಾರ ಚುಕ್ತಾ ಆಗುವ ಕೊನೆಯ ದಿನ. ಅಷ್ಟರಲ್ಲಿ ಬಿಡುಗಡೆಯಾದ ಹಣವನ್ನು ಖರ್ಚು ಮಾಡಲೇಬೇಕಾಗಿತ್ತು. ಇನ್ನೂ ಎರಡೂವರೆ ತಿಂಗಳಿದೆಯಲ್ಲಾ ಯಾವುದೋ ಕಾರ್ಯಕ್ರಮಕ್ಕೆಂದು ಖರ್ಚುಮಾಡಿದರಾಯಿತು ಎನ್ನುವ ಹಾಗೂ ಇರಲಿಲ್ಲ. ಯಾಕೆಂದರೆ ಯಾವಾಗ ಬೇಕಾದರೂ ಕೇಂದ್ರ ಸರಕಾರದ ಚುನಾವಣೆಗಳು ಘೋಷನೆಯಾಗಬಹುದಾಗಿತ್ತು. ಹಾಗೇನಾದರೂ ಆದರೆ ನೀತಿ ಸಂಹಿತೆ ಅಡ್ಡಬಂದು ಇಲಾಖೆಯ ಕೈಕಟ್ಟಿದಂತಾಗುತ್ತಿತ್ತು. ಹೇಗಾದರೂ ಮಾಡಿ ಹಣ ಖರ್ಚುಮಾಡಲೇ ಬೇಕಾದ ದಾವಂತಕ್ಕೆ ಇಲಾಖೆಯ ಆಯುಕ್ತರು ಬಿದ್ದಿದ್ದರು. ಹೀಗೆ ಅತೀ ಶೀಘ್ರವಾಗಿ ಹಣವನ್ನು ಖರ್ಚು ಮಾಡುವಂತಹ ಕಾರ್ಯಕ್ರಮ ರೂಪಿಸುವವರು ಯಾರಿದ್ದಾರೆಂದು ಹುಡುಕುತ್ತಿರುವಾಗ ಇಲಾಖೆಗೆ ನೆನಪಾಗಿದ್ದೆ ಜಾನಪದ ಜಾತ್ರೆ ಖ್ಯಾತಿಯ ಕಪ್ಪಣ್ಣ. ಹಿಂದೆ ಕೋಟ್ಯಾಂತರ ಹಣವನ್ನು ಒಂದೇ ದಿನದಲ್ಲಿ ಜಾತ್ರೆ ಮಾಡುವ ಮೂಲಕ ಹೇಗೆ ಉಡಿಸ್ ಮಾಡಬೇಕೆಂಬ ತಂತ್ರ ಕಪ್ಪಣ್ಣನವರಿಗೆ ಸಿದ್ದಿಸಿತ್ತು. ಹೇಗೂ ಹಳ್ಳಿ ಜನರ ಹಬ್ಬ ಸಂಕ್ರಾಂತಿ ಬಂದಿದೆ. ಅದರ ನೆಪದಲ್ಲಿ ಸುಗ್ಗಿ-ಹುಗ್ಗಿ ಹೆಸರಲ್ಲಿ ಅರ್ಜೆಂಟಾಗಿ ತುರುವೆಕೆರೆಯಲ್ಲಿ ಒಂದು ಜಾನಪದ ಜಾತ್ರೆಯನ್ನು ಆಯೋಜಿಸಬೇಕು ಹಾಗೂ ಜಾನಪದ ತಂಡಗಳ ಗುತ್ತಿಗೆದಾರರಂತಿರುವ ಕಪ್ಪಣ್ಣ ಅದನ್ನು ಸಂಘಟಿಸಬೇಕು ಎಂದು ಜನವರಿ ಮೊದಲ ವಾರದಲ್ಲಿ ತರಾತುರಿಯಲ್ಲಿ ನಿರ್ಧಾರವಾಯಿತು.

ವಿಚಾರವನ್ನು ಸಂಸ್ಕೃತಿ ಇಲಾಖೆಯ ಮಂತ್ರಿಣಿ ಉಮಾಶ್ರೀಯವರಿಗೂ ತಿಳಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ತಮ್ಮ ಸಾಮರ್ಥ್ಯವನ್ನು ಉಮಾಶ್ರೀ ತೋರಿಸಬೇಕೆಂದುಕೊಂಡರು. ಯಾಕೆಂದರೆ ಉಮಾಶ್ರೀಯವರು ಹೇಳುವ ಯಾವುದೇ ಮಾತಿಗೂ ಸಿಎಂ ಕ್ಯಾರೇ ಅಂತಿರಲಿಲ್ಲ. ಅಕಾಡೆಮಿ ಅಧ್ಯಕ್ಷರ ಲಿಸ್ಟ್ ಪೈನಲ್ ಮಾಡಿ ಫೈಲ್ ಹಿಡಿದುಕೊಂಡು ಸಿಎಂ ಕಛೇರಿಗೆ ಅಲೆದಾಡಿದರೂ ಸಿದ್ದರಾಮಯ್ಯ ಸಹಿ ಹಾಕದೇ ಸತಾಯಿಸತೊಡಗಿದ್ದರು. ಹೀಗಾಗಿ ಹೇಗಾದರೂ ಮಾಡಿ ಮುಖ್ಯಮಂತ್ರಿಯ ಮನವೊಲಿಸಲು ಉಮಾಶ್ರೀ ಪ್ರಯತ್ನಿಸುತ್ತಿದ್ದರು. ಈಗ ಅಂತಹ ಒಂದು ಸಂದರ್ಭ ಒದಗಿ ಬಂದಿತ್ತು. ಆದರೆ ತುರುವೆಕೆರೆಯಲ್ಲಿ ಕಾರ್ಯಕ್ರಮವನ್ನು ನಡೆಸಲು ಅಲ್ಲಿಯ ಲೋಕಲ್ ಜನರಿಂದ ಬೆಂಬಲ ಸಿಗಲಿಲ್ಲ. ಎಲ್ಲವನ್ನೂ ಬೆಂಗಳೂರಿನಿಂದ ಕಂಟ್ರೋಲ್ ಮಾಡಲು ಕಷ್ಟಸಾಧ್ಯವಾಗಿತ್ತು. ತುರುವೆಕೆರೆ ಯಾಕೆ ಬೆಂಗಳೂರಿನಲ್ಲೆ ಮಾಡಿದರೆ ಹೆಚ್ಚು ಜನಪ್ರೀಯತೆ ಸಿಗುತ್ತದೆ ಎಂದು ಉಮಾಶ್ರೀಯವರಿಗೆ ಇಲಾಖೆ ಕಿವಿಯೂದಿತು. ಹಳ್ಳಿ ಹಬ್ಬವನ್ನು ಹಳ್ಳಿಯಲ್ಲಿ ಮಾಡುವುದನ್ನು ಬಿಟ್ಟು ಮೀಡಿಯಾ ಕವರೇಜ್ ಮತ್ತು ಜನಪ್ರೀಯತೆಗಾಗಿ ರಾಜಧಾನಿಯಲ್ಲಿ ಜಾನಪದ ಜಾತ್ರೆಯನ್ನು ಮಾಡಲು ನಿರ್ಧರಿಸಲಾಯಿತು. ಎಲ್ಲಿ ಮಾಡುವುದೆಂದುಕೊಂಡಾಗ ಸ್ವತಂತ್ರ ಉದ್ಯಾನವನದಲ್ಲಿ ಮಾಡುವ ಠರಾವಾಯಿತು.

ಆದರೆ ಕಪ್ಪಣ್ಣನವರು ಅನಾಯಾಸವಾಗಿ ಒದಗಿ ಬಂದ ಸಂದರ್ಭವನ್ನು ತಮ್ಮನ್ನು ನಿರ್ಲಕ್ಷಿಸಿದವರ ವಿರುದ್ದ ಆಯುಧವಾಗಿ ಬಳಸಲು ನಿರ್ಧರಿಸಿದರು. ಸುಗ್ಗಿ-ಹುಗ್ಗಿ ಕಾರ್ಯಕ್ರಮವನ್ನು ಪ್ರೀಡಂ ಪಾರ್ಕ ಬದಲಾಗಿ ಕಲಾಕ್ಷೇತ್ರದ ಆವರಣದಲ್ಲೇ ಮಾಡುವುದು ಸೂಕ್ತ ಎಂದು ಇಲಾಖೆಯ ಅಧಿಕಾರಿಗಳನ್ನು ನಂಬಿಸಿದರು. ಈಗಾಗಲೇ ರವೀಂದ್ರ ಕಲಾಕ್ಷೇತ್ರದಲ್ಲಿ ಸಿಜಿಕೆ ರಾಷ್ಟ್ರೀಯ ನಾಟಕೋತ್ಸವೊಂದು ನಡೆಯುತ್ತಿದೆ. ರಂಗನಿರಂತರ ತಂಡದವರಿಂದ ಇಡೀ ಕಲಾಕ್ಷೇತ್ರದ ಆವರಣದಲ್ಲಿ ಸಾಂಸ್ಕೃತಿಕ ಹಬ್ಬದ ವಾತಾವರಣ ನಿರ್ಮಿಸಲಾಗಿದೆ. ಶಶಿಧರ್ ಅಡಪರವರು ಕಲಾಕ್ಷೇತ್ರದ ಆವರಣವನ್ನು ಸೆಟ್ ಹಾಗೂ ಪರಿಕರಗಳಿಂದ ಅದ್ದೂರಿಯಾಗಿ ಅಲಂಕರಿಸಿದ್ದಾರೆ. ಇಲಾಖೆಗೆ ಎಲ್ಲಾ ಖರ್ಚು ಉಳಿಯುತ್ತದೆ. ಕಲಾಕ್ಷೇತ್ರದ ಪಕ್ಕದಲ್ಲಿರುವ ಶಿಲ್ಪವನದಲ್ಲಿ ಸುಗ್ಗಿ-ಹುಗ್ಗಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಬಹುದು ಎಂದು ಕಪ್ಪಣ್ಣ ಇಲಾಖೆಯ ಆಯುಕ್ತರಿಗೆ ತಿದಿಊದಿದರು. ಇಲಾಖೆಯ ಅಧಿಕಾರಿಗಳಿಗೆ ಇದು ಅಪ್ಯಾಯಮಾನವಾಗಿ ಕಂಡಿತು. ಯಾರೋ ಖರ್ಚು ಮಾಡಿ ರೂಪಿಸಿದ ಸಾಂಸ್ಕೃತಿಕ ವಾತಾವರಣವನ್ನು ತಾವೇ ಮಾಡಿದ್ದೆಂದು ಲೆಕ್ಕದಲ್ಲಿ ತೋರಿಸಿ ಇಲಾಖೆಯ ಹಣವನ್ನು ಗುಳುಂ ಮಾಡಬಹುದಾದ ಸಾಧ್ಯತೆಯನ್ನು ಮನಗಂಡು ಕಪ್ಪಣ್ಣನವರ ಪ್ರಸ್ತಾಪವನ್ನು ಅಧಿಕಾರಿಗಳು ಅಲ್ಲಗಳೆಯಲಿಲ್ಲ. ಇಲಾಖೆಯ ಅಧಿಕಾರಿಗಳು ಉಮಾಶ್ರೀಯವರನ್ನು ಕನ್ವೀಯನ್ಸ ಮಾಡತೊಡಗಿದರು.  ತಾನು ಪೂರ್ವಾಶ್ರಮದಲ್ಲಿ ರಂಗನಟಿಯಾಗಿದ್ದು ಈಗ ಕಲಾಕ್ಷೇತ್ರದಲ್ಲೇ ಸುಗ್ಗಿ-ಹುಗ್ಗಿ ಕಾರ್ಯಕ್ರಮ ಏರ್ಪಡಿಸಿದರೆ ತನ್ನ ಸಾಮರ್ಥ್ಯ ರಂಗಭೂಮಿಯವರಿಗೆ ಗೊತ್ತಾಗುತ್ತದೆ ಎಂದುಕೊಂಡರು ಉಮಾಶ್ರೀ.  ಏನಾದರಾಗಲಿ ಮುಖ್ಯಮಂತ್ರಿಯವರನ್ನು ಮೆಚ್ಚಿಸಲೇಬೇಕು ಎನ್ನುವ ದಾವಂತಕ್ಕೆ ಬಿದ್ದ ಕಲ್ಚರಲ್ ಮಿನಿಸ್ಟ್ರಮ್ಮಾ ಅಧಿಕಾರಿಗಳ ಮಾತಿಗೆ ಒಪ್ಪಿ ಹಿಂದೆ ಮುಂದೆ ಆಲೋಚಿಸದೆ ಅನುಮತಿ ಇತ್ತರು

'ಸುಗ್ಗಿ ಹುಗ್ಗಿ' ಜಾನಪದ ಕಾರ್ಯಕ್ರಮದ  ಉದ್ಘಾಟನೆ

 ಒಂದೇ ಕಲ್ಲಿನಿಂದ ಹಲವು ಹಕ್ಕಿಗಳನ್ನು ಕಪ್ಪಣ್ಣ ಹೊಡೆದಿದ್ದರು. ಕನಿಷ್ಟ ಒಂದು ದಿನದ ಮಟ್ಟಿಗಾದರೂ ತಮ್ಮನ್ನು ನಿರ್ಲಕ್ಷಿಸಿ ಮಾಡುತ್ತಿರುವ ಸಿಜಿಕೆ ಪೆಸ್ಟಿವಲ್ಗೆ ಅಡೆತಡೆ ಒಡ್ಡಬೇಕು ಹಾಗೂ ಮೂಲಕ ತನ್ನನ್ನು ಎದುರಿಸಿ ರಂಗಭೂಮಿಯಲ್ಲಿ ಏನನ್ನಾದರೂ ಮಾಡಿದರೆ ಸರಿಹೋಗುವುದಿಲ್ಲ ಎನ್ನುವ ಆತಂಕವನ್ನು ರಂಗಕರ್ಮಿಗಳಲ್ಲಿ ಹುಟ್ಟಿಸಬೇಕು ಎನ್ನುವ ಕಪ್ಪಣ್ಣನವರ ಹುನ್ನಾರವಾಗಿತ್ತು. ಜೊತೆಗೆ ಸುಗ್ಗಿ-ಹುಗ್ಗಿ ಯನ್ನು ಯಶಸ್ವಿಗೊಳಿಸಿ ರಂಗಕರ್ಮಿಗಳಿಗೆ, ಇಲಾಖೆಯ ಅಧಿಕಾರಿಗಳಿಗೆ, ಸಂಸ್ಕೃತಿ ಮಂತ್ರಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ ತನ್ನ ಸಂಘಟನಾ ಸಾಮರ್ಥ್ಯವನ್ನು ಸಾಬೀತುಪಡಿಸಬೇಕು ಎನ್ನುವುದು ಕಪ್ಪಣ್ಣನವರ ಬಯಕೆಯಾಗಿತ್ತು. ಹಾಗೂ ದುರುದ್ದೇಶದಲ್ಲಿ ಅವರು ಯಶಸ್ವಿಯೂ ಆದರು.

ಯಾವಾಗ ಸಿಜಿಕೆ ನಾಟಕೋತ್ಸವಕ್ಕೆ ಪರ್ಯಾಯವಾಗಿ ಕಲಾಕ್ಷೇತ್ರದ ಆವರಣದೊಳಗೆ ಸುಗ್ಗಿ-ಹುಗ್ಗಿ ಜಾನಪದ ಕಾರ್ಯಕ್ರಮವನ್ನು  ಸಂಸ್ಕೃತಿ ಇಲಾಖೆ ಕಪ್ಪಣ್ಣನವರ ನಾಯಕತ್ವದಲ್ಲಿ ಹಮ್ಮಿಕೊಂಡಿತೋ ಆಗ ರಂಗನಿರಂತರ ದಲ್ಲಿ ಅಸಮಾಧಾನ ಹುಟ್ಟಿಕೊಂಡಿತು. ಕಪ್ಪಣ್ಣನವರ ತಂತ್ರಗಾರಿಕೆ ಬಹುತೇಕರಿಗೆ ಅರ್ಥವಾಯಿತು. ಕೂಡಲೇ ಇಲಾಖೆಯ ಮಿನಿಸ್ಟರ್ ಉಮಾಶ್ರೀಯವರನ್ನು ಶಶಿಧರ್ ಅಡಪ, ಬಸವಲಿಂಗಯ್ಯ  ಮತ್ತಿತರರು ಹೋಗಿ ತಮ್ಮ ಕಾರ್ಯಕ್ರಮಕ್ಕಾದ ಅನಾನುಕೂಲವನ್ನು ಹೇಳಿಕೊಂಡರು. ಸುಗ್ಗಿ-ಹುಗ್ಗಿಯನ್ನು ಪ್ರೀಡಂ ಪಾರ್ಕಗೆ ವರ್ಗಾಯಿಸಬೇಕು ಹಾಗೂ ಸಿಜಿಕೆ ನಾಟಕೋತ್ಸವದ ಸುಗಮತೆಗೆ ಭಂಗ ತರಬಾರದು ಎಂದು ಕೇಳಿಕೊಂಡರು. ರಂಗಭೂಮಿಯಿಂದಲೇ ಮೇಲೆ ಮೇಲೆರಿ ಹೋದ ಉಮಾಶ್ರೀಯವರಿಗೆ ರಂಗಭೂಮಿಯ ಮೇಲೆ ಅಪಾರ ಕಾಳಜಿ ಇದೆ, ಸಿಜಿಕೆ ಮೇಲೆ ಅನನ್ಯ  ಗೌರವವಿದೆ, ಅದರಿಂದಾಗಿ ಜಾನಪದ ಜಾತ್ರಾ ಕಾರ್ಯಕ್ರಮವನ್ನು ಬೇರೆ ಕಡೆಗೆ ಸ್ಥಳಾಂತರಿಸುತ್ತಾರೆ ಎನ್ನುವ ನಂಬಿಕೆ ರಂಗನಿರಂತರದ ರಂಗಕರ್ಮಿಗಳದ್ದಾಗಿತ್ತು.  ಅಯ್ಯೋ ಕಾರ್ಯಕ್ರಮಕ್ಕೆ ಖುದ್ದು ಸಿಎಂ ಬರ್ತಿದ್ದಾರೆ, ನಮ್ಮ ಪ್ರಿಸ್ಟೇಜ್ ಪ್ರಶ್ನೆ, ನೀವೇ ಒಂದು ದಿನ ಅಡ್ಜೆಸ್ಟ ಮಾಡಿಕೊಳ್ಳಿ ಎಂದು ಉಮಾಶ್ರೀಯವರು ರಂಗಕರ್ಮಿಗಳಿಗೆ ಕಿವಿಮಾತು ಹೇಳಿದಾಗ ನ್ಯಾಯ ಕೇಳಲು ಹೋದವರೆಲ್ಲಾ ದಿಗ್ಬ್ರಾಂತರಾದರು. ಉಮಾಶ್ರೀ ಈಗ ರಂಗಕಲಾವಿದೆಯಲ್ಲಾ ಕೇವಲ ರಾಜಕಾರಣಿ ಎನ್ನುವುದನ್ನು ಮರೆತಿದ್ದ ರಂಗಕರ್ಮಿಗಳಿಗೆ ಈಗ ಜ್ಞಾನೋದಯವಾಯಿತು. ಅಡಪರವರು ಮುಖ್ಯಮಂತ್ರಿಯವರ ಪತ್ರಿಕಾ ಪ್ರತಿನಿಧಿ ಅಮೀನ್ಮಟ್ಟುರವರ ಮೂಲಕ ಸಿದ್ದರಾಮಯ್ಯನವರಿಗೂ ಸುದ್ದಿ ಮುಟ್ಟಿಸಿದರಾದರೂ ಅದರಿಂದೇನೂ ಉಪಯೋಗ ಆಗಲೇ ಇಲ್ಲ. ರಂಗಭೂಮಿಯಿಂದ ಹೋದ ಮಂತ್ರಿಣಿಯೇ ರಂಗಹಿತಾಸಕ್ತಿಯನ್ನು ಮರೆತಿರುವಾಗ ಇನ್ನು ಮುಖ್ಯಮಂತ್ರಿ ನೆರವಿಗೆ ಬರುತ್ತಾರೆನ್ನುವುದು ನಂಬಲೂ ಸಾಧ್ಯವಿಲ್ಲ. ಅಂತೂ ಇಂತೂ ದಿನ ಬಂದೆ ಬಿಟ್ಟಿತು. 

'ಸುಗ್ಗಿ ಹುಗ್ಗಿ' ಯಲ್ಲಿ ರಾಗಿ ಬೀಸುತ್ತಿರುವ ಉಮಾಶ್ರೀ

ಅವತ್ತು ಸಂಕ್ರಾಂತಿ. ಜನವರಿ ಹದಿನೈದು. ಬೆಳಿಗ್ಗೆಯಿಂದಲೆ ಜಾನಪದ ಕಲಾವಿದರ ಡಾಂಡೂಂ ಸದ್ದು, ಕಲಾಕ್ಷೇತ್ರದ ಆವರಣದ ತುಂಬೆಲ್ಲಾ ತಮಟೆ, ಜಾಗಟೆ, ನಗಾರಿ, ಕಂಸಾಳೆಗಳ ಅರ್ಭಟ. ಕಲಾಕ್ಷೇತ್ರದ ಪುರುಷರ ವಿಶ್ರಾಂತಿ ಕೊಠಡಿಯಲ್ಲಿ ಬೆಳಿಗ್ಗೆ 11 ರಿಂದ ರಂಗನಿರಂತರ ಆಯೋಜಿಸಿದ್ದ ನಾಟಕ ಸಂವಾದ ಕಾರ್ಯಕ್ರಮ ನಡೆಸಲು ಆಗಲೆ ಇಲ್ಲ. ಕೊನೆಗೆ ಅನಿವಾರ್ಯವಾಗಿ ಮಹಿಳಾ ವಿಶ್ರಾಂತಿ ಕೊಠಡಿಗೆ ಸಂವಾದ ಕಾರ್ಯಕ್ರಮವನ್ನು ಸ್ಥಳಾಂತರ ಮಾಡಲಾಯಿತಾದರೂ ಶಬ್ದ ತೊಂದರೆ ತಪ್ಪಲೇ ಇಲ್ಲ. ಹಾಗೂ ಹೀಗೂ ಸಂವಾದ ಮಾಡಿ ಮುಗಿಸಲಾಯ್ತು. ಸಂಜೆ ಮತ್ತೆ ಕಲಾಕ್ಷೇತ್ರದ ಆವರಣದಲ್ಲಿ ಪೂರ್ವನಿಗಧಿಯಂತೆ ರಂಗನಿರಂತರ ಗೀಗಿಪದ, ಗಾಯನ ಕಾರ್ಯಕ್ರಮಗಳು ಆರಂಭಗೊಂಡವು. ಆದರೆ ಪಕ್ಕದಲ್ಲಿ ಕಪ್ಪಣ್ಣನವರ ಜಾನಪದ ಗಾಯನ ಕಾರ್ಯಕ್ರಮ. ಮುಖ್ಯಮಂತ್ರಿ ಸುಗ್ಗಿ-ಹುಗ್ಗಿಯ ಉದ್ಘಾಟನೆಗೆ ಸಂಜೆ ಬಂದಾಗಲಂತೂ ಪಕ್ಕದ ಜೆಸಿ ರಸ್ತೆಯ ಟ್ರಾಫಿಕ್ ಸದ್ದನ್ನೂ ಮೀರಿಸಿದಂತೆ ಸುಗ್ಗಿ-ಹುಗ್ಗಿ ಕಾರ್ಯಕ್ರಮದಲ್ಲಿ ಮೈಕಾಸುರನ ಅರ್ಭಟ. ಏನು ಮಾಡಬೇಕು ಎಂದು ತೋಚದೆ ಅನ ರಮೇಶ ವೇದಿಕೆಯನ್ನು ಹಾಡು ಹಾಡುತ್ತಿದ್ದ ಹಾಡುಗಾರರು ಹಾಡುವುದನ್ನು ನಿಲ್ಲಿಸಿ ಅಸಹಾಯಕರಾಗಿ ನೋಡತೊಡಗಿದರು. ಶಿಲ್ಪವನದ ಇತ್ತಕಡೆ ರಂಗಕರ್ಮಿಗಳು ಅಸಹಾಯಕರಾಗಿ ಕಿವಿಗೆ ಬೆರಳಿಟ್ಟುಕೊಂಡು ನಿಂತಿದ್ದರೆ, ಅದರ ಪಕ್ಕದ ವೇದಿಕೆಯ ಮೇಲೆ ಉಮಾಶ್ರೀಯವರು ಬೀಸುಕಲ್ಲು ಬೀಸುತ್ತಿದ್ದರು. ಏಳು ಗಂಟೆಗೆ ಸರಿಯಾಗಿ ಕಲಾಕ್ಷೇತ್ರದ ಒಳಗೆ ನಾಟಕ ಶುರುವಾಯಿತಾದರೂ ಶಿಲ್ಪವನದಲ್ಲಿ ಮೈಕಾಸುರನ ಹಾವಳಿ ನಿಲ್ಲಲಿಲ್ಲ. ಎಂಟುಕಾಲು ಗಂಟೆಯವರೆಗೂ ಸುಗ್ಗಿಯ ಕಾರ್ಯಕ್ರಮ ಮುಂದುವರೆದಿತ್ತು. ಹೊರ ರಾಜ್ಯದಿಂದ ಬಂದು ನಾಟಕ ಪ್ರದರ್ಶನ ಮಾಡುತ್ತಿದ್ದ ಕಲಾವಿದರಿಗೆ ಏಕಾಗ್ರತೆ ಭಂಗವಾದರೆ, ನಾಟಕ ನೋಡಲು ಬಂದ ಪ್ರೇಕ್ಷಕರಿಗೆ ಅನಗತ್ಯ ಕಿರಿಕಿರಿಯನ್ನುಂಟುಮಾಡಿತು.
 

ಇಂತಹ ಸಂದರ್ಭದಲ್ಲಿ ನಮಗೆ ಸಿಜಿಕೆಯವರ ಪ್ರಸ್ತುತತೆ ಕಾಡುವುದು. ಅಕಸ್ಮಾತ್ ಸಿಜಿಕೆ ಇದ್ದಿದ್ದರೆ ಹೀಗೆ ರಂಗಕ್ರಿಯೆಗೆ ಪರ್ಯಾಯವಾಗಿ ಸರಕಾರಿ ಕಾರ್ಯಕ್ರಮ ಮಾಡಲು ಬಿಡುತ್ತಲೆ ಇರಲಿಲ್ಲ. ಇಲಾಖೆಯ ಅಧಿಕಾರಿಯಿಂದ ಹಿಡಿದು ಮುಖ್ಯಮಂತ್ರಿಯವರೆಗೆ ಸಂಪರ್ಕಿಸಿ ತಮ್ಮ ಪ್ರತಿಭಟನೆ ತೋರುತ್ತಿದ್ದರು. ಅದಕ್ಕೂ ಸರಕಾರಿ ಆಡಳಿತ ಮಣಿಯದಿದ್ದರೆ ತನ್ನ ರಂಗಬಳಗವನ್ನೆಲ್ಲಾ ಸೇರಿಸಿಕೊಂಡು ಸರಕಾರಿ ಸುಗ್ಗಿಯ ಮುಂದೆಯೋ ಇಲ್ಲವೇ ಕಲಾಕ್ಷೇತ್ರದ ಮುಂದೆಯೋ ಧರಣಿ ಕುಳಿತುಕೊಳ್ಳುತ್ತಿದ್ದರು. ಅವರ ತಾಕತ್ತೇ ಹಾಗಿತ್ತು. ಆದರೆ ಈಗ ಅವರಿಲ್ಲ. ಅವರದೆ ನೆನಪಿನ ರಾಷ್ಟ್ರೀಯ ರಂಗೋತ್ಸವಕ್ಕೆ ಬಂದ ಒಂದು ದಿನದ ವಿಘ್ನವನ್ನು  ಪರಿಹರಿಸಲು ಯಾರಿಂದಲೂ ಆಗಲೇ ಇಲ್ಲ. ರಂಗಭೂಮಿಯ ಹೊರಗಿನವರು ರಂಗವಿರೋಧಿ ಕೆಲಸ ಮಾಡಿದ್ದರೆ ಹೇಗೋ ರಂಗಕರ್ಮಿಗಳೆಲ್ಲಾ ಸೇರಿ ವಿರೋಧಿಸಬಹುದಾಗಿತ್ತು. ಆದರೆ ಈಗ ರಂಗಕರ್ಮಿ ಎನ್ನಿಸಿಕೊಂಡ ಕಪ್ಪಣ್ಣನವರೇ ರಂಗದ್ರೋಹದ ತಂತ್ರವನ್ನು ರೂಪಿಸಿದ್ದಾರೆ. ರಂಗಭೂಮಿಯಿಂದಲೇ ಹೋಗಿ ಜನಪ್ರೀಯತೆಯನ್ನು ಗಳಿಸಿ ಮಂತ್ರಿಣಿಯಾದ ಉಮಾಶ್ರೀಯವರೇ ರಂಗದ್ರೋಹದ ಕೆಲಸಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಇಂತಹ ಸಂದರ್ಭದಲ್ಲಿ ಗಾಲಿಬ್ ಶಾಯರಿಯ ಸಾಲೊಂದು ನೆನಪಾಗುತ್ತದೆ. ಅಪನೋನೆ ಮುಜೆ ಧೋಖಾ ದಿಯಾ, ಗೈರೋಮೆ ಕಹಾ ದಮ್ ತಾ...  ಅಂದರೆ ನಮ್ಮವರೇ ನಮಗೆ ಮೋಸ ಮಾಡಿದರು ಬೇರೆಯವರಲ್ಲಿ ಅಂತಹ ತಾಕತ್ತೆಲ್ಲಿತ್ತು.. ಎಂದು ಗಾಲಿಬ್ ಹೇಳಿದ್ದು ಸಂದರ್ಭಕ್ಕೆ ಸೂಕ್ತವೆನ್ನಿಸುತ್ತದೆ.

ಇಷ್ಟಕ್ಕೂ ಸುಗ್ಗಿ ಹುಗ್ಗಿ ಕಾರ್ಯಕ್ರಮ ಮಾಡಿದ್ದಾದರೂ ಯಾವ ಪುರುಷಾರ್ಥಕ್ಕೆ. ಮೊದಲನೆಯದಾಗಿ, ವರ್ಷಾನುಗಂಟಲೇ ಶ್ರಮ ವಹಿಸಿ ಅಂದಗೊಳಿಸಿದ ಶಿಲ್ಪವನದಲ್ಲಿ ಕುಣಿತಗಳ ಕಾರ್ಯಕ್ರಮ ನಡೆಸಿದ್ದೇ ತಪ್ಪು. ಯಾಕೆಂದರೆ ಶಿಲ್ಪವನದೊಳಗೆ ಅಂದಕ್ಕಾಗಿ ಬೆಳೆಸಿದ ಹಸಿರು ಹುಲ್ಲು ಹಾಸಿಗೆ ಜನರ ಕಾಲಿಗೆ ಸಿಕ್ಕಿ ಅಪ್ಪಚ್ಚಿಯಾಗಿ ಹೋಗಿತ್ತು. ಎರಡನೆಯದಾಗಿ, ಸಂಕ್ರಾಂತಿ ಹಳ್ಳಿಗರ ಹಬ್ಬ. ಮೆಟ್ರೋ ನಗರದಲ್ಲಿ ಅದನ್ನು ಆಯೋಜಿಸಿದ್ದೇ ತಪ್ಪು. ಬೆಳಿಗ್ಗೆಯಿಂದ ನಡೆದ ಜಾನಪದ ಹಾಡು ಕುಣಿತಗಳನ್ನು ನೋಡಲು ಬೆಂಗಳೂರಿಗರು ಬರಲೇ ಇಲ್ಲ. ಶಿಲ್ಪವನದ ತುಂಬಾ ಕೇವಲ ಕಾರ್ಯಕ್ರಮ ಕೊಡಲು ಬಂದ ಕಲಾವಿದರೆ ತುಂಬಿಕೊಂಡಿದ್ದರು. ಆಯೋಜಿಸಲೇ ಬೇಕೆಂದಿದ್ದರೆ ಲಾಲಭಾಗನಲ್ಲೂ ಇಲ್ಲವೇ ಕಬ್ಬನ್ಪಾರ್ಕನಲ್ಲೋ ಆಯೋಜಿಸಿದ್ದರೆ ಕನಿಷ್ಟ ಪಾರ್ಕಗೆ ಬಂದ ಜನರಾದರೂ ಜಾನಪದ ಕಲೆಗಳನ್ನು ವೀಕ್ಷಿಸುತ್ತಿದ್ದರು. ಆದರೆ ಹಠಕ್ಕೆ ಬಿದ್ದು,  ಅತ್ಯಂತ ಯಶಸ್ವಿಯಾದ ರಂಗೋತ್ಸವವನ್ನು ಹಾಳುಮಾಡಲೆಂದೂ ಅಥವಾ ಸಂಸ್ಕೃತಿ ಇಲಾಖೆಯಲ್ಲಿ ಬಾಕಿ ಉಳಿದ ಹಣಕ್ಕೆ ಶೀಘ್ರದಲ್ಲಿ ಕಡತಗಳಲ್ಲಿ ದಾರಿಕಾಣಿಸಲೆಂದೋ ಆಯೋಜಿಸಲಾದ ಸುಗ್ಗಿ-ಹುಗ್ಗಿ ಎನ್ನುವ ಸರಕಾರಿ ಕಾರ್ಯಕ್ರಮ ಜನರ ಭಾಗವಹಿಸುವಿಕೆ ಇಲ್ಲದೇ ಪ್ಲಾಪ್ ಶೋ ಆಯಿತು. ಜನರ ತೆರಿಗೆ ಹಣ ಹೇಗೆ ಅನಗತ್ಯವಾಗಿ ಪೋಲುಮಾಡಲಾಗುತ್ತದೆ ಎನ್ನುವುದಕ್ಕೆ ಸರಕಾರಿ ಸಾಂಸ್ಕೃತಿಕ ಜಾನಪದ ಕಾರ್ಯಕ್ರಮ ಸಾಕ್ಷಿಯಾಯಿತು

'ಸುಗ್ಗಿ ಹುಗ್ಗಿ' ಯಲ್ಲಿ ಜಾಣಪದ ಕಲಾವಿದರೆ ಪ್ರೇಕ್ಷಕರು

ಅಂದು ಕಲಾಕ್ಷೇತ್ರ ಸಾಂಸ್ಕೃತಿಕವಾಗಿ ಇಬ್ಬಾಗವಾದಂತೆ ಕಾಣುತ್ತಿತ್ತು. ಮನಸುಗಳು ಒಡೆದಂತೆನಿಸುತ್ತಿತ್ತು. ಒಂದು ಕಡೆ ರಂಗಕರ್ಮಿಗಳ ನಾಟಕೋತ್ಸವದ ಸಂಭ್ರಮವಾದರೆ ಪಕ್ಕದಲ್ಲೆ ಸಂಸ್ಕೃತಿ ಇಲಾಖೆಯ ಸುಗ್ಗಿ-ಹುಗ್ಗಿ ಕಾರ್ಯಕ್ರಮದ ಅರ್ಭಟ. ರಂಗಕರ್ಮಿಗಳೆನಿಸಿಕೊಂಡವರಾರೂ ಸುಗ್ಗಿಯಲ್ಲಿ ಭಾಗವಹಿಸಲೇ ಇಲ್ಲ. ಕಪ್ಪಣ್ಣನ ಜೊತೆಗೆ ಯಾವೊಬ್ಬ ರಂಗಕರ್ಮಿಯೂ  ರಂಗವಿರೋಧಿ ಕೆಲಸದಲ್ಲಿ ಗುರುತಿಸಿಕೊಳ್ಳಲಿಲ್ಲ. ರಂಗಕರ್ಮಿಗಳ ಮನಸ್ಸಿನೊಳಗೆ ಏನೋ ಅಸಮಾಧಾನವಾದರೆ, ಕಪ್ಪಣ್ಣನ ಮನಸ್ಸಲ್ಲಿ ಹೇಗೆ ರಂಗೋತ್ಸವಕ್ಕೆ ಭಂಗ ತಂದೆ ಎನ್ನುವ ಸಮಾಧಾನ. ಕೇವಲ ರಂಗಭೂಮಿ ಮತ್ತು ಜಾನಪದ ಗಾಯನ ಎರಡರಲ್ಲೂ ಹಾಡಿನ ಮೂಲಕ ಗುರುತಿಸಿಕೊಂಡ ಕೆಲವು ಕಲಾವಿದರಿಗೆ ಮಾತ್ರ
ಕಪ್ಪಣ್ಣ
ಧರ್ಮಸಂಕಟ. ಆದರೂ ಇಲಾಖೆ ಕಾರ್ಯಕ್ರಮ ಅಂತವರಿಗೆ ಅನ್ನದ ಮೂಲವಾಗಿತ್ತು. ಅದಕ್ಕಾಗಿ ಸರಕಾರಿ ಸುಗ್ಗಿಯಲ್ಲಿ ಸೇರಿಕೊಂಡು ಹುಗ್ಗಿ ಉಣ್ಣಲು ಕುಳಿತರು. ಇತ್ತ ಕಡೆ ರಂಗನಿರಂತರದ ಕಾರ್ಯಕರ್ತರು ನಾಟಕೋತ್ಸವಕ್ಕೆ ಬಂದವರಿಗೆಲ್ಲಾ ಎಳ್ಳು ಬೆಲ್ಲ ಹಂಚುತ್ತಲೇ ಇದ್ದರು. ಅಂತೂ ಇಂತೂ ಕಪ್ಪಣ್ಣ ತಮ್ಮ ಹಿತಾಸಕ್ತಿಯಲ್ಲಿ ಗೆದ್ದರಾದರೂ ರಂಗಕರ್ಮಿಗಳ ಕಣ್ಣಲ್ಲಿ ತೀರಾ ಕೆಳಗೆ ಬಿದ್ದರು. ಅವರು ಸರಕಾರಿ ಇಲಾಖೆಯ ಜೊತೆಗೆ ಸೇರಿ ಬೆಲ್ಲ ಮೆದ್ದರಾದರೂ ತಮ್ಮನ್ನು ಬೆಳೆಸಿದ ರಂಗಭೂಮಿಗೆ ಬೇವು ತಿನ್ನಿಸಲು ಪ್ರಯತ್ನಿಸಿ ಸಂಕ್ರಾಂತಿಯನ್ನು ಆಚರಿಸಿದರು. ಹತ್ತಿದ ಏಣಿಯನ್ನೆ ಒದೆದರು, ಉಂಡ ಅನ್ನಕ್ಕೆ ದ್ರೋಹಬಗೆದರು, ಉಂಡ ಮನೆಯ ಗಳ ಹಿರಿದು ಸುಗ್ಗಿ ಮಾಡಿ ಹುಗ್ಗಿ ಉಂಡರು. ಸಿಜಿಕೆ ಮಾತ್ರ ಕಲಾಕ್ಷೇತ್ರದ ಪ್ರವೇಶದ್ವಾರದಲ್ಲಿ ಕಂಚಿನ ಮೂರ್ತಿಯಾಗಿ ರಂಗವಿದ್ರೋಹವನ್ನು ನೋಡಲಾಗದೇ ಪ್ರತಿಭಟಿಸಲಾಗದೆ ಮೌನವಾಗಿ ಕುಳಿತಿದ್ದರು.      

                                          -ಶಶಿಕಾಂತ ಯಡಹಳ್ಳಿ  
         
                         


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ