ಶುಕ್ರವಾರ, ಜನವರಿ 3, 2014

ಪೊಲೀಸ್ ದೌರ್ಜನ್ಯ ಅನಾವರಣಗೊಳಿಸುವ “ಆತಂಕವಾದಿಯ ಆಕಸ್ಮಿಕ ಸಾವು”:






        ರಂಗವೇದಿಕೆಯಲ್ಲಿ ರಂಗಪ್ರದರ್ಶನದ ಬದಲಾಗಿ ತಾಲಿಂ ನೋಡಬೇಕಾ? ಸಿನೆಮಾ ಶೂಟಿಂಗ್ ಪ್ರಕ್ರಿಯೆಯನ್ನು ವೀಕ್ಷಿಸಬೇಕಾ? ಬೇಕಾಬಿಟ್ಟಿ ಬೈಗಳುಗಳನ್ನು ಕೇಳಿ ಆನಂದಿಸಬೇಕಾ? ಪೊಲೀಸರ ಪೀಕಲಾಟಗಳನ್ನು ನೋಡಿ ನಗಬೇಕಾ? ಹಾಗಾದರೆ ತಪ್ಪದೇ ಆತಂಕವಾದಿಯ ಆಕಸ್ಮಿಕ ಸಾವು ನಾಟಕವನ್ನೊಮ್ಮೆ ನೋಡಲೇ ಬೇಕು. ನಾಟಕ ನಡೆಯುತ್ತಿರುವಾಗ ಪ್ರೇಕ್ಷಾಗ್ರಹದಲ್ಲಿ ಮೊಬೈಲ್ ರಿಂಗಣಿಸುತ್ತದೆ. ನಾಟಕದ ಪಾತ್ರದಾರಿ ತನ್ನ ಪಾತ್ರದಿಂದ ಹೊರಬಂದು ಮೊಬೈಲ್ನಲ್ಲಿ ಮಾತಾಡುವವನ ಜೊತೆಗೆ ಜಗಳಕ್ಕಿಳಿಯುತ್ತಾನೆ. ಇಬ್ಬರೂ ಬೈಗುಳಗಳ ವಿನಿಮಯ ಮಾಡಿಕೊಳ್ಳುತ್ತಾರೆ. ದೃಶ್ಯದಲ್ಲಿ ಅಭಿನಯಿಸಿದ ನಟರಿಗೆ ಸುಸ್ತಾಗುತ್ತದೆ. ಕೂಡಲೇ ಎಲ್ಲರೂ ತಮ್ಮ ಪಾತ್ರಗಳನ್ನು ಬದಿಗಿಟ್ಟು ರಂಗದ ಮೇಲೆಯೇ ನೀರು ಕುಡಿದು ವಿಶ್ರಮಿಸಿಕೊಂಡು ಮತ್ತೆ ನಾಟಕ ಮುಂದುವರೆಸುತ್ತಾರೆ. ಪಾತ್ರದಾರಿಯೊಬ್ಬನ ಮೀಸೆ ಕಿತ್ತುಬಂದಾಗ ನಾಟಕ ನಿಲ್ಲುತ್ತದೆ, ವೇದಿಕೆ ಮೇಲೆ ಮೇಕಪ್ ಮ್ಯಾನ್ ಬಂದು ಸರಿಮಾಡುತ್ತಾನೆ. ಬಹುಷಃ ಇಂತವುಗಳನ್ನು ತಾಲಿಂ ಕೊಠಡಿಗಳಲ್ಲಿ ಅಥವಾ ಸಿನೆಮಾ ಶೂಟಿಂಗ್ಗಳಲ್ಲಿ ನೋಡಲು ಸಾಧ್ಯ. ಆದರೆ ನಾಟಕ ಪ್ರದರ್ಶನಗೊಳ್ಳುವಾಗಲೂ ಇಂತಹ ಟೇಕ್ ಬ್ರೇಕ್ ಆಂಡ್ ಆಕ್ಷನ್ ಎನ್ನುವ ನಿರೂಪನೆ ಕನ್ನಡ ರಂಗಭೂಮಿಯಲ್ಲಿ ಹೊಸದು.

          ಇಂತಹ ವಿಶಿಷ್ಟ ಮಾದರಿಯ ನಿರೂಪಣಾ ಶೈಲಿಯ ನಾಟಕವನ್ನು ಸಂದೀಪ್ ಪೈ ರವರು ತಮ್ಮ ರಂಗಸಿರಿ ತಂಡದ ಕಲಾವಿದರಿಗೆ ನಿರ್ದೇಶಿಸಿದ್ದಾರೆ. ಆತಂಕವಾದಿಯ ಆಕಸ್ಮಿಕ ಸಾವು ನಾಟಕವು ರವೀಂದ್ರ ಕಲಾಕ್ಷೇತ್ರ-50 ಸುವರ್ಣ ಸಂಭ್ರಮದಲ್ಲಿ ನಾಟಕ ಬೆಂಗಳೂರು ಆಯೋಜಿಸಿದ ಎರಡನೇ ಕಂತಿನ ನಾಟಕೋತ್ಸವದಲ್ಲಿ 2014, ಜನವರಿ 3ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡಿತು.

          1969ರಲ್ಲಿ ಇಟಲಿಯ ಮಿಲಾನ್ ಪೊಲೀಸ್ ಠಾಣೆಯ ೪ನೇ ಮಹಡಿಯ ಕಿಟಕಿಯಿಂದ ಗ್ಯೂಸೆಪ್ ಫಿನೆಲ್ಲಿ ಎಂಬ ಅಮಾಯಕನನ್ನು ಪೊಲೀಸ್ ಅಧಿಕಾರಿಗಳು ಎಸೆದು ಸಾಯಿಸಿದ್ದರು. ಬ್ಯಾಂಕಲ್ಲಿ ಬಾಂಬಿಡುತ್ತಿದ್ದ ಎಂದು ಸುಳ್ಳು ಆರೋಪ ಮಾಡಿ ಕೇಸನ್ನು ಮುಚ್ಚಿಹಾಕಿದ್ದರು. ಸತ್ಯ ಘಟನೆಯನ್ನಾಧರಿಸಿ ದಾರಿಯೋ ಪೋ ಆಕ್ಸಿಡೆಂಟಲ್ ಡೆತ್ ಆಪ್ ಆನ್ ಅನಾರ್ಕಿಸ್ಟ್ ಎನ್ನುವ ಹೆಸರಲ್ಲಿ  ನಾಟಕವನ್ನು ರಚಿಸಿ ಸಾರ್ವಜನಿಕರಿಗೆ ಪೊಲೀಸ್ ದೌರ್ಜನ್ಯದ ಅರಿವು ಮೂಡಿಸಿದ್ದರು. 1970 ಡಿಸೆಂಬರ ೫ರಂದ ಇಟಲಿಯಲ್ಲಿ ಮೊದಲ ಪ್ರದರ್ಶನ ಕಂಡ ನಾಟಕ ನಂತರದ ನಾಲ್ಕು ದಶಕಗಳಲ್ಲಿ ಜಗತ್ತಿನಾದ್ಯಂತ 30 ಭಾಷೆಗಳಿಗೆ ಅನುವಾದಗೊಂಡು 40 ದೇಶಗಳಲ್ಲಿ ಪ್ರದರ್ಶನಗೊಂಡಿದೆ. ಎಸ್. ಸುರೇಂದ್ರನಾಥರವರು ಆತಂಕವಾದಿಯ ಆಕಸ್ಮಿಕ ಸಾವು ಎಂಬ ಹೆಸರಲ್ಲಿ ನಾಟಕವನ್ನು ಕನ್ನಡಕ್ಕೆ ರೂಪಾಂತರಿಸಿದ್ದಾರೆ.  ಬೇರೆ ಭಾಷೆಯ ಅನುವಾದ ಅನ್ನುವ ಅನುಮಾನ ಬಾರದ ಹಾಗೆ, ಕನ್ನಡದ್ದೇ ನಾಟಕ ಎನ್ನುವಷ್ಟರ ಮಟ್ಟಿಗೆ ನಾಟಕ ಮೂಡಿಬಂದಿದೆ.



          ನಾಟಕದ ನಿರೂಪಣೆಯಲ್ಲಿ ಬೆರ್ಟೋಲ್ಟ್  ಬ್ರೆಕ್ಟ್ ಎಫಿಕ್ ಥೀಯೇಟರಿನ ಮಾದರಿಯನ್ನು  ಸ್ವಲ್ಪ ಜಾಸ್ತಿಯಾಗೇ ಅಳವಡಿಸಿಕೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ಪ್ರೇಕ್ಷಕರು ಭಾವತೀವ್ರತೆಗೆ ಒಳಗಾಗಿ ನಟನೆ ಅಥವಾ ನಾಟಕದಲ್ಲಿ ತಲ್ಲೀನರಾಗದಂತೆ ನೋಡಿಕೊಳ್ಳಬೇಕು ಹಾಗೂ ಇಡೀ ನಾಟಕವನ್ನು ಎಚ್ಚರದ ಸ್ಥಿತಿಯಲ್ಲಿ ನೋಡುಗರು ವೀಕ್ಷಿಸುತ್ತಾ ವಿಮರ್ಶಾತ್ಮಕವಾಗಿ ನಾಟಕವನ್ನು ಗ್ರಹಿಸಬೇಕು. ಎಚ್ಚರದ ಸ್ಥಿತಿಯಲ್ಲಿ ವಾಸ್ತವದ ದರ್ಶನವನ್ನು ನಾಟಕ ಮಾಡಿಕೊಡಬೇಕು ಎನ್ನುವ ಬ್ರೆಕ್ಟ್ ಥಿಯರಿ ಆಪ್ ಡಿಸ್ಟಿಂಕೇಶನ್ ಆಶಯಕ್ಕೆ ಪೂರಕವಾಗಿ ನಾಟಕ ಮೂಡಿಬಂದಿದೆ. ಹೀಗಾಗಿಯೇ ಆಗಾಗ ಪ್ರೇಕ್ಷಕರನ್ನು ಅಸಂಗತ ಘಟನೆಗಳಿಂದ ಎಚ್ಚರಿಸುತ್ತಾ, ನಟರು ಪಾತ್ರಗಳಿಂದ ಹೊರಬಂದು ಒಂದು ರಿಲೀಪ್ ತೆಗೆದುಕೊಳ್ಳುತ್ತಾರೆ. ಸ್ವಲ್ಪ ನಾಟಕ ತೋರಿಸಿ, ಒಂದು ಸಣ್ಣ ಗ್ಯಾಪ್ ಕೊಟ್ಟು, ಪ್ರೇಕ್ಷಕರನ್ನು ಮೂಡಿನಿಂದ ಹೊರತಂದು ಆಲೋಚನೆಗೆ ಪ್ರೇರೇಪಿಸಿ ಮತ್ತೆ ನಾಟಕವನ್ನು ಮುಂದುವರೆಸುವ ನಾಟಕದ ನಿರೂಪಣೆ ಸಾಂಪ್ರದಾಯಿಕ ರಂಗಮನಸ್ಥಿತಿಯ ಪ್ರೇಕ್ಷಕರಿಗೆ ವಿಭಿನ್ನ ಅನುಭವವನ್ನು ಕೊಟ್ಟಿತು.

          ಪ್ರೇಕ್ಷಕರಲ್ಲಿ ಭಾವನೆಗಳನ್ನು ಪ್ರೇರೇಪಿಸದೆ ಬೌದ್ದಿಕ ನೆಲೆಯಲ್ಲಿ ನಾಟಕ ಸಂವಹನ ಮಾಡಬೇಕು ಎನ್ನುವ ಬ್ರೆಕ್ಟ ಥೀಯರಿ ಒಂದು ರೀತಿಯಲ್ಲಿ ಅದ್ಬುತವಾದ ಎಡಪಂಥೀಯ ಪರಿಕಲ್ಪನೆ. ಆದರೆ ಥೀಯರಿಯಲ್ಲಿ ಎಲ್ಲೂ ಬೈಗಳುಗಳನ್ನು ಪುಂಕಾನುಪುಂಕವಾಗಿ ಬಳಸಿ ಪ್ರೇಕ್ಷಕರಿಗೆ ಮುಜುಗರವನ್ನುಂಟು ಮಾಡಬೇಕು ಎಂಬುದಿಲ್ಲ. ನಾಟಕದಲ್ಲಿ ಪಾತ್ರಗಳು ಬಾಯಿಬಿಟ್ಟರೆ ಸೂ..ಮಗನೆ, ಬೋ..ಮಗನೆ, ಬೋಸಡೀಕೆ ಎನ್ನುವ ಬೈಗಳುಗಳೇ ಉದುರುತ್ತಿದ್ದವು. ಇವೆಲ್ಲಾ ಮಹಿಳೆಯರನ್ನು ತುಚ್ಚೀಕರಿಸುವಂತಹ ಪುರುಷಪ್ರಧಾನ ಬೈಗುಳಗಳಿವು ಎಂಬುದು ಅನುವಾದಕರಿಗೆ ಹಾಗೂ ನಿರ್ದೇಶಕರಿಗೆ ಅರ್ಥವಾಗಬೇಕಿತ್ತು. ಇವಿಷ್ಟೇ ಅಲ್ಲ ಮುಕುಳಿ, ಹೂಸು ಎನ್ನುವ ಪದಗಳು ನಾಟಕದಾದ್ಯಂತ ಅತಿರೇಕವಾಗಿ ಬಳಕೆಯಾಗಿವೆ. ಆಗಾಗ ಡಬಲ್ ಮೀನಿಂಗ್ ಡೈಲಾಗ್ಗಳು ಬೇರೆ. ಇಂತಹ ದೇಸಿ ಸಂಸ್ಕೃತ ಶಬ್ದಬಂಡಾರಗಳನ್ನು ಉದುರಿಸುವವರು ಕೆಳವರ್ಗದ ಪಾತ್ರಗಳೇನಲ್ಲಾ, ಎಸ್ಪಿ ಹಾಗೂ ಇನ್ಸಫೆಕ್ಟರ್ ಹುದ್ದೆಯಲ್ಲಿರುವ ದೊಡ್ಡ ಅಧಿಕಾರಿಗಳು ಮತ್ತು ನ್ಯಾಯಾಧೀಶರ ಗೆಟಪ್ನಲ್ಲಿರುವವರು ಪರಸ್ಟರ ಬೈದಾಡಿಕೊಳ್ಳುತ್ತವೆ ಎಂದರೆ ನಂಬಲೇಬೇಕು. ಜೊತೆಗೆ ನಾಟಕದಲ್ಲಿ ನಟಿಸಿದ ಬಹುತೇಕ ನಟರೂ ಸಹ ಐಟಿ-ಬಿಟಿಯಲ್ಲಿ ಕೆಲಸಕ್ಕಿರುವ ಕ್ರೀಮ್ ಲೇಯರಿನ ವರ್ಗದವರು. ನಿರೂಪಣೆಯಲ್ಲಿ ಬ್ರೆಕ್ಟ ಥೀಯರಿ ಅಳವಡಿಸಿಕೊಂಡವರಿಗೆ ಸೌಜನ್ಯ ಮೀರಿದ ಬೈಗುಳಗಳ ಬಳಕೆಯಲ್ಲಿ ಬ್ರೆಕ್ಟ್ನನ್ನೇ ಬ್ರೇಕ್ ಮಾಡಿದರು.



          ನಾಟಕದ ಸಂಕ್ಷಿಪ್ತ ಕಥೆ ಇಷ್ಟೇ. ಮೇಟ್ರೋ ರೈಲಿನ ಕಾರ್ಮಿಕ ಶಿವಪುತ್ರ ಎನ್ನುವವನನ್ನು ಗುಮಾನಿಯ ಮೇಲೆ ಪೊಲೀಸರು ಹೆಡ್ ಕ್ವಾರ್ಟರ್ಗೆ ವಿಚಾರಣೆಗಾಗಿ ತಂದು ಹಿಂಸಿಸುತ್ತಾರೆ. ೪ನೇ ಮಹಡಿಯ ಕಿಟಿಕಿಯಿಂದ ಕೆಳಗೆ ಬಿದ್ದು ಶಿವಪುತ್ರನ ಸಾವಾಗುತ್ತದೆ. ಅದನ್ನು ಆತಂಕವಾದಿಯ ಆತ್ಮಹತ್ಯೆ ಎಂದು ಪೊಲೀಸ ಅಧಿಕಾರಿಗಳು ವಾದಿಸುತ್ತಾರೆ. ನ್ಯಾಯಾಧೀಶರಿಂದ ವಿಚಾರಣೆಗೆ ಸರಕಾರ ಆಜ್ಞಾಪಿಸುತ್ತದೆ. ಇದನ್ನು ತಿಳಿದ ಜಾಣ ಹುಚ್ಚನೊಬ್ಬ  ನ್ಯಾಯಾಧೀಶರ ವೇಷದಲ್ಲಿ ಬಂದು ಪೊಲೀಸ್ ಅಧಿಕಾರಿಗಳನ್ನು ತನ್ನದೇ ಆದ ವಿಕ್ಷಿಪ್ತ ರೀತಿಯಲ್ಲಿ  ವಿಚಾರಣೆಗೊಳಪಡಿಸುತ್ತಾ ಪೊಲೀಸರ ದೌರ್ಜನ್ಯವನ್ನು ಬಯಲಿಗೆಳೆಯುತ್ತಾನೆ. ವರದಿಗಾಗಿ ಬಂದ ಟಿವಿ ರಿಪೋರ್ಟರ್ ಮುಂದೆ ಪೊಲೀಸರ ಅನ್ಯಾಯವನ್ನು ಬೆತ್ತಲು ಮಾಡುತ್ತಾನೆ. ಕೊನೆಗೆ ಅಧಿಕಾರಿಗಳನ್ನೆಲ್ಲಾ ಬಂಧಿಸಿ, ಕಛೇರಿಯಲ್ಲಿ ಬಾಂಬಿಟ್ಟು ಅನ್ಯಾಯ ಮಾಡಿದವರಿಗೆ ತನ್ನದೇ ರೀತಿಯಲ್ಲಿ ಶಿಕ್ಷೆ ಕೊಡುತ್ತಾನೆ.

          ನಾಟಕದ ಕಥೆ ಇಷ್ಟೇ ಆದರೂ ಇಡೀ ನಾಟಕ ನಮ್ಮ ಪೊಲೀಸ್ ವ್ಯವಸ್ಥೆಯನ್ನು ವಿಡಂಬಣಾತ್ಮಕವಾಗಿ ವಿಶ್ಲೇಷಿಸುವಂತಿದೆ. ನಟನೆಯ ತೆವಲಿರುವ ಅರೆಹುಚ್ಚನೊಬ್ಬನ ಮೂಲಕ ಆತಂಕವಾದಿಯ ಸಾವಿನ ವಿಚಾರಣೆಯನ್ನು ಮಾಡುವ ನಾಟಕ ಗಂಭೀರವಾದ ವಿಷಯವನ್ನು ಹಾಸ್ಯರಸ ಪ್ರಧಾನವಾಗಿ ನಿರೂಪಿಸುತ್ತದೆ. ಆದರೆ ಹಾಸ್ಯವೇ ಅತಿರೇಕವಾಗಿ ನಾಟಕದ ನಿಜವಾದ ಆಶಯ ಗೌಣವಾದಂತಿದೆ. ಪ್ರತಿಯೊಂದು ಪಾತ್ರಕ್ಕೂ ತನ್ನದೇ ಆದ ಘನತೆ ಗಾಂಭೀರ್ಯ ಇರುತ್ತದೆ. ಆದರೆ ಹಾಸ್ಯಕ್ಕಾಗಿ ಹಾಸ್ಯವನ್ನುಂಟುಮಾಡುವ ದಾವಂತದಲ್ಲಿ ಪೊಲೀಸನೊಬ್ಬ ಇನ್ಸಫೆಕ್ಟರ್ಗೆ ಬೈಯುತ್ತಾನೆ. ಇನ್ಸಫೆಕ್ಟರ್ ಎಸ್ಪಿ ಗೆ ಬೈಯುತ್ತಾನೆ, ಎಸ್ಪಿ ನ್ಯಾಯಾಧೀಶನನ್ನು ತೆಗಳುತ್ತಾನೆ... ಅದೂ ಅಸಭ್ಯವೆನಿಸುವ ಪದಗಳಿಂದ. ಪಾತ್ರೋಚಿತವಾದ ನಟನೆಯನ್ನು ಬದಿಗಿಟ್ಟು ಕಾಮೆಡಿ ಪಾತ್ರಗಳನ್ನು ವೈಭವೀಕರಿಸಿದ್ದರಿಂದ ನಾಟಕದ ಉದ್ದೇಶವೇ ಮೂಲೆಗುಂಪಾದಂತಿದೆ. ಕೊನೆಗೆ ವಿಷಾದ ಹುಟ್ಟಿಸಬೇಕಾದ ವಿಷಯಗಳು ವಿನೋದದಲ್ಲಿ ಮರೆಯಾಗಿಹೋಗಿದೆ.

          ಅನಗತ್ಯ ಹಾಸ್ಯದ ಅತಿರೇಕಗಳನ್ನು, ಮುಜಗರಕರ ಬೈಗುಳಗಳನ್ನು, ಅಸಂಗತ ಅತಾರ್ಕಿಕ ವಿಚಾರಗಳನ್ನು ಪಕ್ಕಕ್ಕಿಟ್ಟು ಕೇವಲ ಮನರಂಜನಾತ್ಮಕವಾಗಿ ನೋಡಿದರೆ ಇಡೀ ನಾಟಕ ನೋಡುಗರನ್ನು ನಗಿಸುವುದರಲ್ಲಿ ಯಶಸ್ವಿಯಾಗಿದೆ.

          ನಟರೆಲ್ಲಾ ಪೈಪೋಟಿಗೆ ಬಿದ್ದು ಅಭಿನಯಿಸಿದ್ದಾರೆ. ನಿರ್ದೇಶಕರು ನಟರ ದೇಹಭಾಷೆಯನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಎಸ್ಪಿ ಗಲಗಲಿಯಾಗಿ ರಾಜೀವ್, ಇನ್ಸಫೆಕ್ಟರ್ ಪಾಂಡು ಪಾತ್ರದಲ್ಲಿ ಅನೂಪ್ ಕುಮಾರ್, ಬಾಂಬ್ ಇನ್ಸಪೆಕ್ಟರ ದೇವರು ಪಾತ್ರದಲ್ಲಿ ಅಭಿಜಿತ್.... ಉತ್ತಮ ಅಭಿನಯವನ್ನು ನೀಡಿದ್ದಾರೆ. ನಾಟಕದ ನಿರ್ದೇಶಕ ಸಂದೀಪ್ ಪೈ ಎರಡು ಬಗೆಯ ಪೊಲೀಸ್ ಪಾತ್ರದ ಅಭಿನಯದಲ್ಲೂ ಗಮನಸೆಳೆಯುತ್ತಾರೆ. ನಟರೆಲ್ಲರ ಸಂಭಾಷಣೆಯನ್ನು ಪಂಚ್ ಮಾಡುವ ರೀತಿ ಹಾಗೂ ಟೈಮಿಂಗ್ ಅತ್ಯುತ್ತಮವಾಗಿ ವರ್ಕಔಟ್ ಆಗಿದೆ.


 
          ಶಶಿಧರ್ ಅಡಪರ ರಂಗವಿನ್ಯಾಸದಲ್ಲಿ ವಿಶೇಷವೆಂಬುದೇನೂ ಇರಲಿಲ್ಲ. ಸಂದೀಪ್.ಎನ್ ರವರ ಬೆಳಕಿನ ವಿನ್ಯಾಸಕ್ಕೆ ಹೆಚ್ಚು ಕೆಲಸವೇ ಇಲ್ಲ. ಇಸ್ತ್ರೀ ಕಾಣದ ಪೊಲೀಸ್ ಉಡುಪು ಸರಿಯಾಗಿ ಪಾತ್ರಕ್ಕೆ ಒಪ್ಪಲೇ ಇಲ್ಲ. ರಾಮಕೃಷ್ಣ ಕನ್ನರಪಾಡಿಯವರ ಪ್ರಸಾದನ ಕೌಶಲ್ಯ ಮಾತ್ರ ವ್ಯಕ್ತಿಗಳನ್ನು ಪಕ್ಕಾ ಪಾತ್ರಗಳನ್ನಾಗಿ ಮಾರ್ಪಾಡು ಮಾಡುವಲ್ಲಿ ಸಫಲವಾಗಿದ್ದಂತೂ ಸುಳ್ಳಲ್ಲ.

   
ದಾರಿಯೋ ಪೋ
      
ಒಟ್ಟಾರೆಯಾಗಿ ನಾಟಕ ತುಂಬಾ ಶಿಸ್ತುಬದ್ದವಾಗಿ ಮೂಡಿಬಂದಿದೆ. ಎಲ್ಲಾ ಯುವಕರ ಶ್ರಮ ಹಾಗೂ ಯುವ ರಂಗನಿರ್ದೇಶಕ ಸಂದೀಪ್ ಪೈರವರ ಪರಿಶ್ರಮ ನಾಟಕದಾದ್ಯಂತ ಎದ್ದು ಕಾಣುತ್ತದೆ. ಆತಂಕವಾದಿಯ ಆಕಸ್ಮಿಕ ಸಾವು ತನ್ನ ಆಶಯವನ್ನು ಪ್ರೇಕ್ಷಕರಿಗೆ ಸಂವಹನ ಮಾಡುವಲ್ಲಿ ಯಶಸ್ವಿಯಾಗದಿದ್ದರೂ ನೋಡುಗರ ಮನರಂಜಿಸುವಲ್ಲಿ ಯಶಸ್ವಿಯಾಗಿದೆ. ಹಾಸ್ಯಕ್ಕಿಂತ ಆಶಯಕ್ಕೆ ಹೆಚ್ಚು ಒತ್ತುಕೊಟ್ಟಿದ್ದರೆ ನಾಟಕ ತನ್ನ ಆಂತರಿಕ ಉದ್ದೇಶದಲ್ಲಿ ಸಫಲವಾಗುವುದರಲ್ಲಿ ಸಂದೇಹವಿಲ್ಲ.  




                                       -ಶಶಿಕಾಂತ ಯಡಹಳ್ಳಿ                      
               


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ