ಶನಿವಾರ, ಜನವರಿ 11, 2014

“ರಂಗಶಂಕರದ ಟಾಯ್ಲೆಟ್‌ನಲ್ಲಿ ಮಲ್ಲಿಗೆ ಪರಿಮಳ”: ಹೀಗೊಂದು ರಂಗಾನುಭವ


                                           

      ಥೂ! ಇದೆಂತಾ ಶೀರ್ಷಿಕೆ? ಯಾರಾದ್ರೂ ಟಾಯ್ಲೆಟ್ನಲ್ಲಿ ಮಲ್ಲಿಗೆ ಇಡ್ತಾರಾ? ಮಲವಿಸರ್ಜನೆ ಮಾಡುವಲ್ಲಿ ಮಲ್ಲಿಗೆಗೇನು ಕೆಲಸ? ಎಂಬ ಪ್ರಶ್ನೆಗಳು ನನ್ನನ್ನೂ ಕಾಡಿದ್ದುಂಟು. ಆದರೆ ಪತ್ರಕರ್ತ ಮಿತ್ರ ದಿಲಾವರ್ ಘಟನೆಯನ್ನು ವಿವರಿಸುವವರೆಗೂ ನನಗೂ ಇಂತಹ ಅಪ್ರಸ್ತುತ ಪ್ರಶ್ನೆಗಳು ಅಟಕಾಯಿಸಿದ್ದುಂಟು.

     ಅದೊಂದು ದಿನ ರಂಗಶಂಕರಕ್ಕೆ ದಿಲಾವರ್ ನೋಡಲು ಹೋಗಿದ್ದು ಡಾ.ಬಿ.ವಿ.ರಾಜಾರಾಂ ನಿರ್ದೇಶನದ ಮೈಸೂರು ಮಲ್ಲಿಗೆ ನಾಟಕವನ್ನು. ಕೆಎಸ್ ನರಸಿಂಹಸ್ವಾಮಿಯವರ ಬದುಕು ಹಾಗೂ ಭಾವಗೀತೆಗಳನ್ನಾಧರಿಸಿದ ನಾಟಕದ ತುಂಬಾ ಪಸರಿಸಿದ ಮಲ್ಲಿಗೆಯ ಘಮವನ್ನು ಸವಿದು ಹೊರಬಂದ ದಿಲಾವರ್ಗೆ ಪ್ರಕೃತಿ ಕರೆಯ ಎಮರ್ಜೆನ್ಸಿ. ಟಾಯ್ಲೆಟ್ ಹುಡುಕಿಕೊಂಡು ಹೋಗಿ ಮೂತ್ರಾನಂದದಲ್ಲಿ ಮೈಮರೆತಾಗ ಮೂಗಿಗೆಲ್ಲೋ ಮಲ್ಲಿಗೆಯ ಪರಿಮಳ. ಅರೆರೆ... ರಂಗವೇದಿಕೆಯಲ್ಲಿ ಮೈಸೂರು ಮಲ್ಲಿಗೆ ನಾಟಕವಾದರೆ ಇಲ್ಲಿ ಅದೂ ಟಾಯ್ಲೆಟ್ನಲ್ಲಿ ಮಲ್ಲಿಗೆಯ ಕಂಪು ಬರ್ತಿದೆಯಲ್ಲಾ ಎಂದು ಅಚ್ಚರಿಯಿಂದ ತಿರುಗಿ ನೋಡಿದರೆ ಅಲ್ಲಿ ಬೇಸಿನ್ ಪಕ್ಕದಲ್ಲಿ ದೊಡ್ಡ ತಾಮ್ರದ ಚೆಂಬು. ಅದರ ತುಂಬಾ ಆಗತಾನೇ ಅರಳಿದ ಅಸಲಿ ಮೈಸೂರು ಮಲ್ಲಿಗೆ ಹೂಗಳು.

     ಮೂತ್ರಕ್ಕೆ ಬಂದವರೆಲ್ಲಾ ತಮ್ಮ ಕೆಲಸ ಮುಗಿಸಿಕೊಂಡು, ಅಪವಿತ್ರವಾದ ಕೈಗಳನ್ನು ತೊಳೆದುಕೊಂಡು, ತಮ್ಮೆರಡೂ ಬೆರಳುಗಳಿಂದ ಚೆಂಬಿನೊಳಗಿನ ಒಂದೆರಡು ಮಲ್ಲಿಗೆಯ ಮೊಗ್ಗುಗಳನ್ನು ಎತ್ತಿಕೊಂಡು, ಮೂಗೆಂಬ ವಾಸನೇಂದ್ರೀಯಕ್ಕೆ ಆಪೋಷನ ಮಾಡಿಕೊಂಡು ಪುನೀತರಾಗಿ ಹೋರಹೋಗುತ್ತಿದ್ದರು. ಶಿವಾಲಯದಲ್ಲಿ ಮಂಗಳಾರತಿಯ ಜೊತೆಗೆ ಪೂಜಾರಿ ಕೊಡುವ ಹೂಗಳನ್ನು ಜೋಪಾನವಾಗಿ ಎತ್ತಿಕೊಂಡು ಮುಡಿಗೇರಿಸುವ ಗರತಿಯರ ಹಾಗೆ ರಂಗಶಂಕರದ ಶೌಚಾಲಯದಿಂದ ಮಲ್ಲಿಗೆ ಹೂಗಳನ್ನೆತ್ತಿಕೊಂಡ ದಿಲಾವರ್ ಎಲ್ಲರ ಹಾಗೆ ಸುವಾಸನೆ ತೆಗೆದುಕೊಂಡು ಪಾವರಾಗಿದ್ದರೆ ವಿಕ್ಷಿಪ್ತ ಲೇಖನ ಬರೆಯುವ ಅಗತ್ಯವೇ ಇರಲಿಲ್ಲ.

       ಮೊದಲೆ ಪತ್ರಕರ್ತ. ಎಲ್ಲವನ್ನೂ ವಿಶ್ಲೇಷಣಾತ್ಮಕವಾಗಿ ನೋಡದಿದ್ದರೆ ಸಮಾಧಾನವಿರುವುದಿಲ್ಲ. ತಮ್ಮ ವೃತ್ತಿ ಜಾಯಮಾನ ಎಂದಾದರೂ ಬಿಡಲುಂಟೆ. ಅದ್ಯಾವುದೋ ಟಿವಿ ಚಾನೆಲ್ ಪ್ಯಾನೆಲ್ ಡಿಸ್ಕಶನ್ನಲ್ಲಿ ರಂಗಶಂಕರದ ಶೌಚಾಲಯದ ಮಲ್ಲಿಗೆಯ ವಿಷಯದ ವಾದವನ್ನು ದಿಲಾವರ್ ಮಂಡಿಸಿಬಿಟ್ಟರು. ಮಲ್ಲಿಗೆ ಅನ್ನೋದು ನಮ್ಮ ಪರಂಪರೆಯಲ್ಲಿ ದೇವರ ಅಡಿಗೆ ಇಲ್ಲವೇ ಮಹಿಳೆಯರ ಮುಡಿಗೆ ಶೋಭೆತರತಕ್ಕ ಒಂದು ಭಾವನಾತ್ಮಕ ರೂಪಕ. ಮಲ್ಲಿಗೆ ಅನ್ನುವುದು ಹೀಗೆ ಭಕ್ತಿಯ ಸಂಕೇತವೋ ಹಾಗೆಯೇ ಪ್ರೀತಿಯ ಪ್ರತೀಕವೂ ಆಗಿದೆ. ಆದರೆ ಅಂತಹ ಮಲ್ಲಿಗೆಯನ್ನು ಟಾಯ್ಲೆಟ್ನಲ್ಲಿ ಬಳಸಿದ್ದು ಅದೆಷ್ಟು ಸೂಕ್ತ? ಅದು ಡಿಯೋಡ್ರೆಂಟೂ ಅಲ್ಲಾ, ಸೇಂಟೂ ಅಲ್ಲಾ. ಆದರೂ ಅದನ್ನು ಶೌಚಾಲಯದಲ್ಲಿ ಬಳಸಿದ್ದು ಅದೆಷ್ಟು ಸರಿ? ಎನ್ನುವುದು ದಿಲಾವರ್ ವಾದ. ಇದಕ್ಕೆ ನಂತರ ರಂಗಶಂಕರದಿಂದ ಬಂದ ಪ್ರತಿವಾದ ಇನ್ನೂ ಅಚ್ಚರಿದಾಯಕ. ಅವತ್ತು ಯಾರೋ ತುಂಬಾ ಮಲ್ಲಿಗೆ ಹೂಗಳನ್ನು ತಂದು ಕೊಟ್ಟರು. ಅವುಗಳನ್ನು ಬಳಸಿ ಉಳಿದದ್ದನ್ನು ಶೌಚಾಲಯದ ದುರ್ವಾಸನೆ ಹೋಗಲು ಬಳಸಿದೆವು, ಇದರಲ್ಲೇನು ತಪ್ಪು?  ಎಂದು ರಂಗಶಂಕರದ ವ್ಯವಸ್ಥಾಪಕರು ಉತ್ತರಿಸಿದ್ದರು.

     ಇದರಲ್ಲಿ ರಂಗಶಂಕರದವರ ತಪ್ಪೇನೂ ಇಲ್ಲವೇ ಇಲ್ಲಾ. ಯಾಕೆಂದರೆ ಅಲ್ಲಿಯ ಸಂಸ್ಕೃತಿಯೇ ವಿದೇಶಿಮಯ. ಅವರಿಗೆ ದೇಸಿ ಮನಸುಗಳು, ಜನರ ಭಾವನೆಗಳು, ನೆಲದ ಭಾಷೆ ಒಂದೂ ಅರ್ಥವೇ ಆಗುವುದಿಲ್ಲ. ಯಾವುದನ್ನು ಯಾವುದಕ್ಕೆ ಬಳಸಬೇಕು ಎನ್ನುವ ಕನಿಷ್ಟ ಪರಿಜ್ಞಾನವಂತೂ ಇಲ್ಲವೇ ಇಲ್ಲ. ಅದಕ್ಕೆಂದೇ ಕನ್ನಡದ ಸಂಪನ್ಮೂಲಗಳನ್ನು ಬಳಸಿಕೊಂಡು ಇಂಗ್ಲೀಷ್ ರಂಗಭೂಮಿಯನ್ನು ಪ್ರಮೋಟ್ ಮಾಡುತ್ತಾರೆ. ಪ್ರೀತಿ ಹಾಗೂ ಭಕ್ತಿಯ ಸಂಕೇತವಾದ ಮಲ್ಲಿಗೆಯನ್ನು ಶೌಚಾಲಯದ ದುರ್ವಾಸನೆ ಕಳೆಯಲು ಉಪಯೋಗಿಸುತ್ತಾರೆ. ಟಾಯ್ಲೆಟ್ನಲ್ಲಿ ಮಲ್ಲಿಗೆ ಸಮಾಚಾರ ಕ್ಷುಲ್ಲಕವೆನ್ನಿಸಬಹುದಾದ ವಿಷಯವೆನ್ನಿಸಬಹುದು. ಆದರೆ ವಿಷಯವೇ ಅಲ್ಲಿನ ಸಂಸ್ಕೃತಿಗೊಂದು ಪುಟ್ಟ ಉದಾಹರಣೆಯೂ ಆಗಿದೆ

    ಜಾಗತೀಕರಣ ಎನ್ನುವ ಜಾಗತಿಕ ಜನವಿರೋಧಿ ವ್ಯಾಪಾರಿ ಸಂಸ್ಕೃತಿಯು  ದೇಸಿ ಸಂಸ್ಕೃತಿಗಳನ್ನು ದ್ವಂಸಮಾಡುತ್ತಲೇ ಬೆಳೆಯುತ್ತದೆ. ದೇಸಿ ನಂಬಿಕೆಗಳನ್ನು ಬುಡಮೇಲು ಮಾಡುತ್ತಲೇ ತನ್ನ ಮಾಯಾಜಾಲವನ್ನು ವಿಸ್ತರಿಸುತ್ತದೆ. ಇದಕ್ಕೆ ಉದಾಹರಣೆ ಎಂದರೆ ವಿದೇಶಿ ಕಲ್ಚರಿನ ಆರಾಧಕರು ತಮ್ಮ ಪ್ರೊಡಕ್ಟಗಳ ಮೇಲೂ ದೇಸಿ ದೇವರುಗಳ ಚಿತ್ರಗಳನ್ನು ಬಳಸಿ ಮಾರಾಟ ತಂತ್ರಗಳನ್ನು ರಚಿಸುತ್ತಾರೆ. ಉದಾಹರಣೆಗೆ ಹೆಂಗಸರು ಹಾಕುವ ಒಳುಉಡುಪುಗಳ ಮೇಲೆ, ಅಷ್ಟೇ ಯಾಕೆ ಕಾಲಲ್ಲಿ ಮೆಟ್ಟುವ ಚಪ್ಪಲಿಗಳ ಮೇಲೂ ನಮ್ಮ ವಿಷ್ಣು, ಗಣೇಶ, ಶಿವ, ಲಕ್ಷ್ಮೀ... ಮುಂತಾದ ದೇವಾನು ದೇವತೆಗಳನ್ನು ಅಚ್ಚೊತ್ತಿದ್ದಾರೆ. ಇದು ದೇವರ ಕುರಿತು ವಿಮರ್ಶೆಯ ಪ್ರಶ್ನೆಯಲ್ಲಾ. ಆದರೆ ಯಾವುದೋ ಒಂದು ಪ್ರದೇಶದ ಜನತೆ ತಮ್ಮ ಸಂಸ್ಕೃತಿಯ ಭಾಗವಾಗಿ ಹಲವು ರೀತಿಯ ಭಾವನಾತ್ಮಕ ನಂಬಿಕೆಗಳನ್ನು  ಹೊಂದಿರುತ್ತವೆ. ನಂಬಿಕೆಗಳ ಕುರಿತು ಭಿನ್ನಾಭಿಪ್ರಾಯವಿದ್ದರೆ ಚರ್ಚಿಸಬಹುದಾಗಿದೆ.  ಆದರೆ ಯಾವಾಗ ಜನರ ನಂಬಿಕೆಗಳನ್ನೇ ತಮ್ಮ ಸರಕು ಮಾರಾಟಕ್ಕೆ ಬಳಸಿಕೊಳ್ಳಲಾಗುತ್ತದೆಯೋ ಆಗ ಆಯಾ ಜನಾಂಗದ ಭಾವನೆಗೆ ದಕ್ಕೆ ಬರುತ್ತದೆ. ಅಸಲಿಗೆ ಮೂಢನಂಬಿಕೆಗಳನ್ನು ವಿರೋಧಿಸಲೇಬೇಕು. ಆದರೆ ಎಲ್ಲಾ ರೀತಿಯ ನಂಬಿಕೆಗಳನ್ನು ನಂಬಲಾಗದಿದ್ದರೂ ಸಹ ಅದಕ್ಕೆ ಗೌರವವನ್ನು  ಕೊಡಲೇಬೇಕು. ಅದು ಕೇವಲ ನಂಬಿಕೆಗೆ ಕೊಡುವ ಗೌರವವಲ್ಲ, ಅದನ್ನು ನಂಬಿದ ಜನಕ್ಕೆ ಕೊಡುವ ಗೌರವವಾಗಿದೆ. ಯಾಕೆಂದರೆ ಅದು ಅವರವರ ವ್ಯಯಕ್ತಿಕ ವಿಚಾರ. ಆದರೆ ಯಾವುದೇ ನಂಬಿಕೆಗಳನ್ನು ವೈಚಾರಿಕವಾಗಿ ಸೂಕ್ತ ವೇದಿಕೆಗಳಲ್ಲಿ ಸಂವಾದಕ್ಕೆ ಒಳಪಡಿಸಬಹುದೇ ಹೊರತು ಹೀಗೆ ಸಾರ್ವತ್ರಿಕವಾಗಿ ಅವಮಾನಿಸುವುದು ಅವಿವೇಕವೆನ್ನಿಸಿಕೊಳ್ಳುತ್ತದೆ.

      ಹೀಗೆಯೇ..... ಮಲ್ಲಿಗೆಯ ಕುರಿತು ಕನ್ನಡಿಗರು ಭಾವನಾತ್ಮಕ ನಂಬಿಕೆಯನ್ನು ಬೆಳೆಸಿಕೊಂಡಿದ್ದಾರೆ. ಮಲ್ಲಿಗೆ ಕೇವಲ ಒಂದು ಹೂವಾಗದೇ ಪ್ರೀತಿಯ ಪ್ರತೀಕವಾಗಿದೆ. ಕೆಎಸ್ ನರಸಿಂಹಸ್ವಾಮಿಗಳಂತೂ ತಮ್ಮ ಮೈಸೂರು ಮಲ್ಲಿಗೆ ಕಾವ್ಯಸಂಕಲನದಲ್ಲಿ ಮಲ್ಲಿಗೆಗೆ ಅಮೂರ್ತ ಭಾವಗಳನ್ನು ಸೃಷ್ಟಿಸಿ ಓದುವ ಮನಸುಗಳಲ್ಲಿ ಮುದವನ್ನುಂಟುಮಾಡಿದ್ದಾರೆ.  ಕವಿಗಳ ಕುರಿತ ಮೈಸೂರು ಮಲ್ಲಿಗೆ ನಾಟಕದ ಪ್ರದರ್ಶನದಂದೇ ಮಲ್ಲಿಗೆಯನ್ನು ಶೌಚಾಲಯದಲ್ಲಿ ಬಳಸಿದ್ದು ಇನ್ನೂ ಸ್ವಲ್ಪ ಹೆಚ್ಚು ಮುಜುಗರವೆನಿಸುತ್ತದೆ. ಇದೊಂದು ರೀತಿಯಲ್ಲಿ ದೇಸಿ ಸಂಸ್ಕೃತಿಯ ಮೇಲೆ ವಿದೇಶಿ ದಾಳಿಯ ಅತೀ ಸಣ್ಣ ರೂಪಕವೆನಿಸುತ್ತದೆ.  ಮಲ್ಲಿಗೆಯನ್ನು ಎಲ್ಲಿ ಬಳಸಬೇಕಾಗಿತ್ತೋ ಅಲ್ಲಿ ಬಳಸದೆ, ಎಲ್ಲಿ ಬಳಸಬಾರದಿತ್ತೋ ಅಲ್ಲಿ ಬಳಸಿದ್ದಕ್ಕೆ ದಿಲಾವರ್ನಂತಹ ಸೂಕ್ಷ್ಮ ಪ್ರಜ್ಙೆಯ ಮನಸುಗಳು ತಲ್ಲಣಗೊಳ್ಳುತ್ತವೆ. ಅವಕಾಶಸಿಕ್ಕಾಗ  ಸಾಂಕೇತಿಕವಾದರೂ ಪ್ರತಿಭಟಿಸುತ್ತವೆ.

       ವಸ್ತು ವಿಷಯಗಳು ಚಿಕ್ಕದೋ ದೊಡ್ಡದೋ ಅನ್ನುವುದಕ್ಕಿಂತ ವಿದೇಶಿ ಸಂಸ್ಕೃತಿಯ ಅನುಕರಣೆಯ ದಾವಂತಕ್ಕೆ ಬಿದ್ದಿರುವ ರಂಗಶಂಕರದ ನೇತಾರರು ನೆಲದ ಭಾಷೆ ಹಾಗೂ ಭಾವನೆಗಳಿಗೆ ಸ್ಪಂದಿಸುವುದುತ್ತಮ. ಕನ್ನಡ ರಂಗಭೂಮಿಗೆ ಹೆಚ್ಚು ಆದ್ಯತೆ ಕೊಡುವುದು ಅಪೇಕ್ಷಣೀಯ. ರಂಗಶಂಕರದಲ್ಲಿ ದೇಸಿ ಸಂಸೃತಿ ಎನ್ನುವುದು ಕೇವಲ ತೋರುಂಬ ಲಾಭವಾಗದೇ ಅಂತರಂಗದ ಬಯಕೆಯಾದಾಗ, ನಿಜವಾದ ಆಚರಣೆಯಾದಾಗ ಮಣ್ಣಿನ ಋಣ ತೀರಿಸಲು ಸಾಧ್ಯ. ಕನ್ನಡಿಗರ ಔದಾರ್ಯಕ್ಕೆ ಗೌರವಕೊಡಲು ಸಾಧ್ಯ. ಅದನ್ನು ಕನ್ನಡದ ಜನ ಅಪೇಕ್ಷಿಸುತ್ತಾರೆ. ಹೀಗೇಯೇ ನೆಲಮೂಲ ಸಂಸೃತಿಯನ್ನು ಉಪೇಕ್ಷಿಸಿದರೆ ಒಂದಿಲ್ಲೊಂದು ದಿನ ಉಗ್ರವಾಗಿ ಪ್ರತಿಭಟಿಸುತ್ತಾರೆ. 

                                                 -ಶಶಿಕಾಂತ ಯಡಹಳ್ಳಿ   


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ