ಭಾನುವಾರ, ಜನವರಿ 5, 2014

ನಗೆಉಕ್ಕಿಸದ ನಗೆನಾಟಕ “ಮಹಾಪಿಸುಣಾರಿ”



         

          ನಾಟಕಗಳು ಕಾಲಬದಲಾದಂತೆ ಅಪ್ಡೇಟ್ ಆಗುತ್ತಿರಬೇಕು. ಯಾವುದೇ ನಾಟಕ ಎಷ್ಟೇ ಹಳೆಯದಾಗಿದ್ದರೂ ಕಾಲಕ್ಕೆ ತಕ್ಕಂತೆ ಅದು ಮಾರ್ಪಾಡು ಹೊಂದುತ್ತಲೇ ಇರಬೇಕು. ದಶಕಗಳ ಹಿಂದೆ ಸಲ್ಲಬಹುದಾಗಿದ್ದ ನಾಟಕದ ಕಥಾವಸ್ತುವನ್ನು ಪ್ರಸ್ತುತದಲ್ಲೂ ಯಥಾವತ್ತಾಗಿ ಪ್ರದರ್ಶಿಸಿದರೆ ಅದು ಯಶಸ್ವಿಯಾಗುವುದು ಕಷ್ಟಸಾಧ್ಯ. ಅದಕ್ಕೆ ಲೇಟೆಸ್ಟ್ ಉದಾಹರಣೆ ಮಹಾಪಿಸುಣಾರಿ ರಂಗಪ್ರಯೋಗ. ಚಂದ್ರಕುಮಾರ್ ಸಿಂಗ್ರವರು ನಾಟಕವನ್ನು ತಮ್ಮ ಬೆನಕ ಶೈಲೂಷರು ರಂಗತಂಡಕ್ಕೆ ನಿರ್ದೇಶಿಸಿದ್ದಾರೆ.

          ರವೀಂದ್ರ ಕಲಾಕ್ಷೇತ್ರ-50 ಸುವರ್ಣ ಸಂಭ್ರಮದಲ್ಲಿ ನಾಟಕ ಬೆಂಗಳೂರು ಆಯೋಜಿಸಿದ ಎರಡನೇ ಕಂತಿನ ನಾಟಕೋತ್ಸವದಲ್ಲಿ 2014, ಜನವರಿ 4ರಂದು ನಾಟಕವು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡಿತು. ರಾಜೇಂದ್ರ ಕಾರಂತರು ರಚಿಸಿದ ಮಹಾಪಿಸುಣಾರಿ ನಗೆ ನಾಟಕ ಹಲವು ವರ್ಷಗಳ ಹಿಂದೆ ಹಾಸ್ಯರಸಾಯಣವನ್ನು ಪ್ರೇಕ್ಷಕರಿಗೆ ಉಣಬಡಿಸುವಲ್ಲಿ ಯಶಸ್ವಿಯಾಗಿತ್ತು. ರಾಜೇಂದ್ರ ಕಾರಂತರೆ ಅದನ್ನು ನಿರ್ದೇಶಿಸಿದ್ದರು. ಆದರೆ ಅದೇ ನಾಟಕ ಈಗ ಮತ್ತೆ ಪ್ರದರ್ಶನಗೊಂಡಾಗ ನೋಡುಗರಲ್ಲಿ ಯಾವುದೇ ಸಂಚಲನವನ್ನುಂಟುಮಾಡುವಲ್ಲಿ ವಿಫಲವಾಯಿತು.

          ಇದಕ್ಕೆ ಪ್ರಮುಖ ಕಾರಣ ನಾಟಕದ ಕಥಾವಸ್ತು ಔಟ್ಆಪ್ ಡೇಟೆಡ್ ಆಗಿರುವುದು. ಹಾಗೂ ಈಗಿನ ಕಾಲಕ್ಕನುಗುಣವಾಗಿ ಅಪ್ಡೇಟ್ ಆಗದೇ ಇರುವುದು. ಈಗಾಗಲೇ ಹಲವಾರು ಸಿನೆಮಾಗಳಲ್ಲಿ ಮಾದರಿಯ ಕಥೆಯನ್ನು ಬೇಕಾದಷ್ಟು ತೋರಿಸಲಾಗಿದ್ದು ಇದು ಒಂದು ರೀತಿಯಲ್ಲಿ ಸವಕಲು ಸರಕಾಗಿದೆ. ಹೀಗೊಬ್ಬ ಮಹಾಜಿಪುಣ. ಅವನಿಗೊಬ್ಬಳು ಸುಂದರಿ ಮಗಳು. ಅವಳನ್ನು ಮೋಹಿಸಿ ಬಂದಾತ ಜಿಪುಣನನ್ನು ಹೊಗಳುತ್ತಾ ಅವಳೀಗಾಗಿ ಆಳಾಗಿ ದುಡಿಯುತ್ತಿರುತ್ತಾನೆ. ಇನ್ನೊಬ್ಬ ಮಗ ತಂದೆ ಗಳಿಸಿದ್ದನ್ನು ಹಾಳು ಮಾಡಲೆಂದೇ ಹುಟ್ಟಿದವ. ಕೊನೆಗೆ ಮಗನೇ ತಂದೆಗೆ ಬುದ್ದಿಕಲಿಸುತ್ತಾನೆ.....ಇದು ನಾಟಕದ ಒಂದೆಳೆ ಕಥೆ.


         ಹಣದ ಹಪಾಹಪಿಗೆ ಬಿದ್ದ ಸ್ವಾರ್ಥಿ ವ್ಯಕ್ತಿ ಅದು ಹೇಗೆ ಸಮಾಜದಿಂದ, ಕುಟುಂಬದ ಸದಸ್ಯರಿಂದ ದ್ವೇಷಿಸಲ್ಪಡುತ್ತಾನೆ ಹಾಗೂ ಕೊನೆಗೆ ಎಲ್ಲವನ್ನೂ ಎಲ್ಲರನ್ನೂ ಕಳೆದುಕೊಂಡು ಏಕಾಂಗಿಯಾಗುತ್ತಾನೆ ಎನ್ನುವುದನ್ನು ಹೇಳುವುದು ನಾಟಕದ ಆಶಯವಾಗಿದೆ. ನಾಟಕದಲ್ಲಿ ಪ್ರಮುಖ ವಿಷಯವೆಂದರೆ ಹಣ ಮತ್ತು ಪ್ರೀತಿ. ಜಿಪುಣನಿಗೆ ಹಣವೇ ಸರ್ವಸ್ವವಾದರೆ ಆತನ ಮಗ ಹಾಗೂ ಮಗಳಿಗೆ ಪ್ರೀತಿ ಪ್ರಮುಖವೆನಿಸುತ್ತದೆ. ವರದಕ್ಷಿಣೆಗಾಗಿ ತಾನೇ ಮದುವೆಯಾಗಲು ನಿರ್ಧರಿಸುವ ವೃದ್ಧ ಜಿಪುಣಾಗ್ರೇಸರ ವರದಕ್ಷಿಣೆ ಹಣವನ್ನುಳಿಸಲು ತನ್ನ ಮಗಳನ್ನು ಮುದುಕನೊಬ್ಬನಿಗೆ ಕೊಟ್ಟು ಮದುವೆ ಮಾಡಲು ನಿರ್ಧರಿಸುತ್ತಾನೆ. ಅಂದರೆ ಇಲ್ಲಿ ಹಣದ ಮುಂದೆ ಸಂಬಂಧಗಳು ಯಕ್ಕಶ್ಚಿತವೆನಿಸುತ್ತವೆ. ಆದರೆ ಕೊನೆಗೂ ಹಣದಾಹ ಸೋತು ಪ್ರೀತಿಸಿದ ಜೀವಗಳು ಒಂದಾಗುವ ಮೂಲಕ ಹಣಕ್ಕಿಂತ ಪ್ರೀತಿ ಪ್ರೇಮ ಸಂಬಂಧಗಳು ಮುಖ್ಯ ಎನ್ನುವುದನ್ನು ನಾಟಕ ಸಾಬೀತುಪಡಿಸುತ್ತದೆ.

          ಚಂದ್ರಕುಮಾರ ಸಿಂಗರವರು ಕನ್ನಡ ರಂಗಭೂಮಿಯ ಹಿರಿಯ ಖ್ಯಾತ ಬೆಳಕು ತಂತ್ರಜ್ಞರೆನ್ನುವುದರಲ್ಲಿ ಸಂದೇಹವಿಲ್ಲ. ಆದರೆ ರಂಗನಿರ್ದೇಶನ ಇನ್ನೂ ಅವರಿಗೆ ದಕ್ಕಿಲ್ಲ ಎನ್ನುವುದು ನಾಟಕ ನೋಡಿದವರಿಗೆ ಅನ್ನಿಸದೇ ಇರದು. ನಾಟಕದ ಆಯ್ಕೆ ಮತ್ತು ನಿರೂಪಣೆಯಲ್ಲಿ ಸೋತ ನಿರ್ದೇಶಕರು  ಪಾತ್ರಗಳ ಹಂಚಿಕೆಯಲ್ಲಾದರೂ ಇನ್ನಷ್ಟು ಕಾಳಜಿ ತೋರಿಸಬೇಕಾಗಿತ್ತು. ರಂಗಪ್ರಯೋಗದ ನಿರ್ಮಾಪಕರು ಎನ್ನುವ ಒಂದೇ ಕಾರಣಕ್ಕೆ ಟಿ.ಎಲ್.ಕೃಷ್ಣಮೂರ್ತಿಯವರಿಗೆ ಪ್ರಮುಖ ಪಾತ್ರವನ್ನು ಕೊಟ್ಟಿದ್ದಾರೆ. ಆದರೆ ಟಿಎಲ್ಕೆ ರವರ ಕೃತಕ ದೇಹಭಾಷೆ ಪಾತ್ರಕ್ಕೆ ಸೂಕ್ತವಾಗಿಲ್ಲ. ಅವರಿಗೆ ಪಾತ್ರದೊಳಗೆ ಪ್ರವೇಶವನ್ನೇ ಪಡೆಯಲಾಗಲಿಲ್ಲ. ಅಭಿನಯದ ಯಾವ ಪ್ರಕಾರಗಳಿಗೂ ಅವರು ನ್ಯಾಯವನ್ನೂ ಒದಗಿಸಲಿಲ್ಲ. ಜೊತೆಗೆ ಜಿಪುಣ ದೊಡ್ಡಣ್ಣನ ಇಪ್ಪತ್ತು ವರ್ಷದ ಮಗನ ಪ್ರೇಯಸಿಯಾಗಿ ನಲವತ್ತು ವರ್ಷ ಮೀರಿದ ಕಲಾವಿದೆಯನ್ನು ಆಯ್ಕೆ ಮಾಡಿದ್ದು ಪಾತ್ರೋಚಿತವಾಗಿಲ್ಲ. ಆಕೆಯನ್ನು ಕಾಲೇಜಿನ ಯುವತಿ ಎಂದು ಹೇಳುವುದನ್ನು ನಂಬಲು ಸಾಧ್ಯವಿಲ್ಲ. ಯಾವ ಆಂಗಲ್ನಲ್ಲಾಗಲಿ ಅಥವಾ ಅಭಿನಯದಲ್ಲಾಗಲಿ ಇನ್ಸಪೆಕ್ಟರ್ ಪಾತ್ರ ಸೂಕ್ತವೆನಿಸುವುದೇ ಇಲ್ಲ. ಗುಂಡಣ್ಣನಾಗಿ ಗೋಪಾಲಕೃಷ್ಣ, ಪರಮೇಶಿಯಾಗಿ ಶಿವಮಣಿಕಂಠ ಹಾಗೂ ಹನುಮೇಶಿ ಪಾತ್ರದಲ್ಲಿ ಸುಮನ್ ತಮ್ಮ ಪಾತ್ರಗಳಿಗೆ ನ್ಯಾಯವದಗಿಸಲು ಪ್ರಯತ್ನಿಸಿದ್ದಾರೆ



          ಪಾತ್ರಗಳು ದಿಕ್ಕು ದೆಸೆ ಇಲ್ಲದೇ ಮನೆಯ ಸೆಟ್ನಲ್ಲಿ ಎಲ್ಲಿಂದ ಬೇಕಾದರೂ ಆಗಮಿಸುತ್ತವೆ. ಚಿತ್ತ ಬಂದತ್ತ ನಿರ್ಗಮಿಸುತ್ತವೆ. ಸ್ಟೇಜ್ ಬ್ಯಾಲನ್ಸಿಂಗ್ ಮತ್ತು ಬ್ಲಾಕಿಂಗ್ನತ್ತ ಇನ್ನೂ ಹೆಚ್ಚಿನ ಗಮನ ಕೊಡಬೇಕಿತ್ತು. ವೇದಿಕೆಯ ಹಿಂದೆ ಡೈನಿಂಗ್ಹಾಲ್ ಸೆಟ್ ಇದೆಯಾದರೂ ಅದು ಬಳಕೆಯಾಗಲೇ ಇಲ್ಲ. ಎಲ್ಲಾ ಪಾತ್ರಗಳೂ ವೇದಿಕೆಯ ಮುಂಬಾಗದಲ್ಲೇ ನಿಂತು ಅಭಿನಯಿಸಿದ್ದರಿಂದಾಗಿ ರಂಗಸಜ್ಜಿಕೆಯ ಸಮರ್ಥ ಉಪಯೋಗ ಮಾಡಲಾಗಿಲ್ಲ. ಮನೆಯ ಸೆಟ್ನಲ್ಲಿ ಹಿಂದೆ ಸೈಕ್ ಪರದೆ ತೋರಿಸುವ ಅಗತ್ಯವೂ ಇರಲಿಲ್ಲ. ಅಗತ್ಯ ಮೂಡ್ ಹುಟ್ಟಿಸಲು ಸಹಕಾರಿಯಾಗಬೇಕಾಗಿದ್ದ ಹಿನ್ನೆಲೆ ಸಂಗೀತ ಮತ್ತು ಬೆಳಕಿನ ವಿನ್ಯಾಸಕ್ಕೆ ನಾಟಕದಲ್ಲಿ ಏನೇನೂ ಕೆಲಸವೇ ಇಲ್ಲದಂತಾಗಿದೆ. ಕೇವಲ ಸಂಭಾಷಣೆಯತ್ತ ಮಾತ್ರ ಗಮನವನ್ನು ಕೇಂದ್ರೀಕರಿಸಿದ ನಾಟಕ ರಂಗತಂತ್ರಗಳ ಬಳಕೆಯನ್ನು ನಿರ್ಲಕ್ಷಿಸಿದೆ. ಹೀಗಾಗಿ ಇಡೀ ನಾಟಕ ಕಾಲೇಜಿನ ವಾರ್ಷಿಕೋತ್ಸವದ ನಾಟಕದ ಮಾದರಿಯಲ್ಲಿ ಪ್ರಸ್ತುತಗೊಂಡಂತೆನಿಸಿತು.

    
ಚಂದ್ರಕುಮಾರ್ ಸಿಂಗ್
     
ರಂಗವೇದಿಕೆಯನ್ನು ಸಮರ್ಥವಾಗಿ ಬಳಸಿಕೊಂಡಿದ್ದರೆ.... ದೀರ್ಘವೆನಿಸುವ 2 ಗಂಟೆಗಳ ನಾಟಕವನ್ನು ಇನ್ನೂ ಅರ್ಧ ಗಂಟೆಗಳಷ್ಟು ಎಡಿಟ್ ಮಾಡಿದ್ದರೆ.... ರಂಗತಂತ್ರಗಳನ್ನು ನಾಟಕಕ್ಕೆ ಸೂಕ್ತವಾಗಿ ಅಳವಡಿಸಿಕೊಂಡಿದ್ದರೆ.... ಹಿನ್ನೆಲೆ ಸಂಗೀತವನ್ನು ದೃಶ್ಯಗಳಿಗೆ ಪೂರಕವಾಗುವಂತೆ ಬಳಸಿದ್ದರೆ.... ಪಾತ್ರೋಚಿತವಾಗಿ ಪಾತ್ರದಾರಿಗಳನ್ನು ಆಯ್ದು ಅಭಿನಯವನ್ನು ಕಲಿಸಿಕೊಟ್ಟಿದ್ದರೆ.... ಸಂಭಾಷಣೆಗಳಲ್ಲಿರುವ ಪಂಚ್ ಟೈಮಿಂಗ್ ಟೆಕ್ನಿಕನ್ನು ನಟರಿಗೆ ಹೇಳಿಕೊಟ್ಟಿದ್ದರೆ...... ಅಪ್ರಸ್ತುತ ಕಥೆ ಮತ್ತು ನಿರೂಪಣೆಯನ್ನು ಪ್ರಸ್ತುತ ಕಾಲಕ್ಕೆ ತಕ್ಕಂತೆ ಬದಲಾಯಿಸಿದ್ದರೆ..... ಮಹಾಪಿಸುಣಾರಿ ನಾಟಕ ಯಶಸ್ವಿಯಾಗುತ್ತಿತ್ತು. ಪ್ರೇಕ್ಷಕರಿಗೆ ಭಾರೀ ಮನರಂಜನೆಯನ್ನು ಕೊಡಬಹುದಾಗಿತ್ತು. ಮುಂದಿನ ಮರುಪ್ರದರ್ಶನಗಳಲ್ಲಿ ಪ್ರಯತ್ನಿಸಬಹುದಾಗಿದೆ.

                                                      -ಶಶಿಕಾಂತ ಯಡಹಳ್ಳಿ

           
                

      


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ