ಗುರುವಾರ, ಜನವರಿ 9, 2014

ವಿಶಿಷ್ಟವಾದ ಕಟ್ ಆಂಡ್ ಪೇಸ್ಟ್ ನಾಟಕ “ಸ್ವಪ್ನಸಿದ್ಧಿ” :



        ಕನ್ನಡ ರಂಗಭೂಮಿ ನಾಟಕಗಳ ಪ್ರಯೋಗಶಾಲೆಯಂತೆ ಬೆಳೆದುಬಂದಿದೆ. ಇಲ್ಲಿ ವಿಭಿನ್ನ ರೀತಿಯ ನಾಟಕಗಳು ಕಾಲಕಾಲಕ್ಕೆ ಮೈದಾಳುತ್ತವೆ. ಇನ್ನೇನು ಸಿದ್ದ ರಂಗಕೃತಿಗಳನ್ನೆಲ್ಲಾ ಆಡಿ ಮುಗಿಯಿತು ಎನ್ನುವುದರೊಳಗೆ ಸಾಹಿತ್ಯಕೃತಿಗಳು ನಾಟಕಗಳಾಗುತ್ತವೆ. ಇತಿಹಾಸ-ಪುರಾಣಗಳು ಮರುಹುಟ್ಟುಪಡೆಯುತ್ತವೆ. ಕೇವಲ ವಸ್ತು ವಿಷಯಗಳು ಮಾತ್ರವಲ್ಲ ವಿಶಿಷ್ಟವೆನಿಸುವ ನಿರೂಪಣಾ ಶೈಲಿಗಳಿಂದಾಗಿ ಕನ್ನಡ ರಂಗಭೂಮಿ ತನ್ನನ್ನು ತಾನು ನವೀಕರಿಸಿಕೊಳ್ಳುತ್ತಾ, ಸಮಕಾಲೀನತೆಗೆ ಸ್ಪಂದಿಸುತ್ತಾ, ಹೊಸ ಹೊಸ ಆಯಾಮಗಳನ್ನು ಪಡೆಯುತ್ತಾ ತನ್ನ ಪ್ರಸ್ತುತತೆಯನ್ನು ಉಳಿಸಿಕೊಳ್ಳುತ್ತಲೇ ಬಂದಿದೆ. ಮಾತಿಗೆ ಸಾಕ್ಷಿಯಾಗಿ ಮೂಡಿಬಂದಿರುವ ಇನ್ನೊಂದು ನಾಟಕ ಸ್ವಪ್ನಸಿದ್ಧಿ.

      ಕುವೆಂಪುರವರ ನಾಟಕಗಳನ್ನು ಪ್ರದರ್ಶಿಸುವುದು ಹಾಗೂ ಅವರ ಸಾಹಿತ್ಯಕ ಕೃತಿಗಳನ್ನು ನಾಟಕವಾಗಿಸುವುದು ಅಷ್ಟು ಸುಲಭದ್ದಲ್ಲ. ಅದಕ್ಕೆ ಅವರು ಬಳಸಿದ ಹಳಗನ್ನಡಭಾಷೆ ಪ್ರಮುಖ ಕಾರಣ. ಈಗಿನ ಕಲಾವಿದರಿಗೆ ಭಾಷೆಯನ್ನು ಕಲಿಸುವುದು ಹಾಗೂ ಪ್ರೇಕ್ಷಕರಿಗೆ ಸರಳವಾಗಿ ಅರ್ಥವಾಗುವಂತೆ ಮಾಡುವುದು ನಿರ್ದೇಶಕರಿಗೆ ಒಂದು ಸವಾಲಿನ ಕೆಲಸ. ಅದರಲ್ಲೂ ಕುವೆಂಪುರವರ ಕೆಲವು ನಾಟಕ ಹಾಗೂ ಕೃತಿಯನ್ನು ಸಮ್ಮಿಶ್ರಗೊಳಿಸಿ ಒಂದು ರಂಗಪ್ರಯೋಗವನ್ನು ಕಟ್ಟಿಕೊಡುವುದು ಸಾಹಸದ ಕೆಲಸ. ಅಂತಹ ಒಂದು ಸಾಧ್ಯತೆಗೆ ಡಾ.ಎಂ.ಬೈರೇಗೌಡರು ಪ್ರಯತ್ನಿಸಿದ್ದಾರೆ. ಕುವೆಂಪುರವರ ಮೇರುಕೃತಿ ರಾಮಾಯಣ ದರ್ಶನಂ ಹಾಗೂ ಅವರ ನಾಟಕಗಳಾದ ಜಲಗಾರ, ಶೂದ್ರ ತಪಸ್ವಿ, ಸ್ಮಶಾನ ಕುರುಕ್ಷೇತ್ರಗಳಿಂದ ಆಯ್ದ ಭಾಗಗಳನ್ನು ಕೇಂದ್ರೀಕರಿಸಿ ಸ್ವಪ್ನಸಿದ್ಧಿ ಎನ್ನುವ ನಾಟಕವನ್ನು ಬೈರೆಗೌಡರು ಸಿದ್ಧಪಡಿಸಿದ್ದಾರೆ.

      ಸಂಕೀರ್ಣ ನಾಟಕವನ್ನು ಎಂ.ಚನ್ನಕೇಶವಮೂರ್ತಿಯವರ ನೇತೃತ್ವದ ರಂಗದರ್ಶನ ತಂಡವು ನಿರ್ಮಿಸಿದೆ. ತಮ್ಮ ವಿಶಿಷ್ಟ ರಂಗಪ್ರಯೋಗಗಳ ಮೂಲಕ ಕನ್ನಡ ರಂಗಭೂಮಿಯಲ್ಲಿ ಗುರುತಿಸಿಕೊಂಡಿರುವ ಜೋಸೆಪ್ರವರು ನಾಟಕವನ್ನು ನಿರ್ದೇಶಿಸಿದ್ದಾರೆ. ರವೀಂದ್ರ ಕಲಾಕ್ಷೇತ್ರ-50 ಸುವರ್ಣ ಸಂಭ್ರಮದಲ್ಲಿ ನಾಟಕ ಬೆಂಗಳೂರು ಆಯೋಜಿಸಿದ ಎರಡನೇ ಕಂತಿನ ನಾಟಕೋತ್ಸವದಲ್ಲಿ 2014, ಜನವರಿ 9ರಂದು ಸ್ವಪ್ನಸಿದ್ಧಿ ನಾಟಕವು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡಿತು.




        ಇದೊಂದು ಪಕ್ಕಾ ಕಟ್ ಆಂಡ್ ಪೇಸ್ಟ್ ನಾಟಕ. ರಾಮಾಯಣ ಮತ್ತು ಮಹಾಭಾರತದ ಕುರಿತ ದೃಶ್ಯಗಳನ್ನು ಆಯ್ದು ಒಂದು ಗಂಟೆಯ ಅವಧಿಗೆ ನಾಟಕರೂಪದಲ್ಲಿ ಸಂಕಲಿಸಲಾಗಿದೆ. ಇಡೀ ನಾಟಕಕ್ಕೆ ಯಾವುದೇ ಒಂದು ನಿಶ್ಚಿತ ಚೌಕಟ್ಟಿಲ್ಲ, ಕಥೆಯ ಹಂದರವಿರಲಿ ಒಂದೆಳೆಯೂ ಇಲ್ಲ. ಕುವೆಂಪು ಕೃತಿಗಳನ್ನು ಓದದವರಿಗೆ ಹಾಗೂ ಮಹಾಕಾವ್ಯಗಳ ಕುರಿತು ಅರಿವಿಲ್ಲದ ಈಗಿನ ಜಾಗತೀಕರಣದ ಜನಾಂಗಕ್ಕೆ ನಾಟಕ ಸುಲಭಕ್ಕೆ ಅರ್ಥವಾಗುವುದೂ ಇಲ್ಲ. ಅರಿವಿದ್ದವರಿಗೂ ಸಂಪೂರ್ಣವಾಗಿ ದಕ್ಕುವುದಿಲ್ಲ. ಯಾಕೆಂದರೆ ನಾಟಕದ ಹೆಸರೆ ಸ್ವಪ್ನಸಿದ್ಧಿ.    
         
          ಎಂದಾದರೂ ಯಾವುದಾದರೂ ಕನಸು ಸ್ಪಷ್ಟವಾಗಿ ಸಿದ್ಧಿಸಲು ಸಾಧ್ಯವೆ? ಯಾವ ಕನಸುಗಳಿಗೇನು ಒಂದು ಕಾಲ, ದೇಶ, ಚೌಕಟ್ಟು, ಹಂದರ ಎನ್ನುವುದಿರುತ್ತದೆಯಾ? ಸಾಧ್ಯವಿಲ್ಲ ಎನ್ನುವುದಾದರೆ ಸ್ವಪ್ನಸಿದ್ಧಿ ನಾಟಕವೂ ಕೂಡಾ ಹೀಗೆ ಕಾಲಾತೀತವಾಗಿ ತ್ರೇತ್ರಾಯುಗ, ದ್ವಾಪರಯುಗ, ಕಲಿಯುಗ ಎನ್ನುವ ಕಲ್ಪಿತ ಯುಗಗಳಲ್ಲಿ ಪಯಣಿಸುತ್ತದೆ. ಯುಗದಿಂದ ಯುಗಕ್ಕೆ ದೃಶ್ಯಗಳು ಪಲ್ಲಟಗೊಳ್ಳುತ್ತವೆ. ಸ್ವಪ್ನಸಿದ್ಧಿ ನಾಟಕದಲ್ಲಿ ರಾಮ-ರಾವಣರು ಗೆಳೆಯರಾಗುತ್ತಾರೆ, ಸೀತೆ ರಾವಣನಿಗೆ ಹಾಲುಣಿಸಿದ ತಾಯಿಯಾಗುತ್ತಾಳೆ, ಶೂದ್ರ ಶಂಭೂಕ ರಾಮನಿಂದ ಹತ್ಯೆಯಾಗುವ ಬದಲು ಕರುಣೆಗೆ ಪಾತ್ರನಾಗುತ್ತಾನೆ. ಇಲ್ಲಿ ಶಿವಪುರಾಣವಿದೆ, ರಾಮಚರಿತೆಇದೆ, ಮಹಾಭಾರತದ ಕುರುಕ್ಷೇತ್ರವಿದೆ ಜೊತೆಗೆ ಕಲಿಯುಗದ ಪ್ರಸ್ತಾಪವೂ ಇದೆ. ಹೀಗೆ ಯುಗಾಂತರಗಳ ಕಾಲ್ಪನಿಕ ಕಥೆಗಳ ಜಲಕ್ಗಳನ್ನು ತೋರಿಸಲಾಗಿದೆ. ಎಲ್ಲೂ ಯಾವ ದೃಶ್ಯಗಳಿಗೂ ಸಂಬಂಧವೂ ಇಲ್ಲ, ಇಲ್ಲಿ ಎಲ್ಲವೂ ಅಪೂರ್ಣ ಯಾಕೆಂದರೆ ಇದು ಸ್ವಪ್ನಸಿದ್ಧಿ.  

    ನಾಟಕದ ಸ್ವಪ್ನಸದೃಶ ದೃಶ್ಯಗಳಲ್ಲಿ ಮಹಾಕಾವ್ಯಗಳ ಕೆಲವು ಪಾತ್ರಗಳು ಸಂವಹನ ಮಾಡುತ್ತವೆ. ಅಸಹಾಯಕ ಮಂಥರೆಯ ತಳಮಳ, ರಾವಣನ ತಲ್ಲಣ, ರಾವಣನ ಅಂತರಂಗ ಅನಾವರಣಗೊಳಿಸುವ ಅನಲೆ, ಪಾತ್ರಗಳ ಸ್ವಗತ. ಜೊತೆಗೆ ಜಲಗಾರನ ಕಾಯಕನಿಷ್ಠೆ, ಶೂದ್ರಶಂಭೂಕನ ತಪಸ್ಸಿದ್ದಿ, ಯುದ್ದಕೋರ ವ್ಯವಸ್ಥೆಯನ್ನು ದಿಕ್ಕರಿಸುವ ಸ್ಮಶಾನಕುರುಕ್ಷೇತ್ರ.... ಹೀಗೆ ಇಡೀ ನಾಟಕ ಹಲವು ತೇಪೆಗಳಿಂದ ಕಲಾತ್ಮಕವಾಗಿ ಹೊಲಿದ ಕೌದಿಯ ಹಾಗೆ ಒಟ್ಟಂದದಲ್ಲಿ ಕಾಣುತ್ತದೆ. ಹೀಗೆ ಅಂದಗಾಣಿಸುವಲ್ಲಿ ನಿರ್ದೇಶಕರ ಕೌಶಲ್ಯ ನಾಟಕದಾದ್ಯಂತ ಎದ್ದು ಕಾಣುತ್ತದೆ. ಕುವೆಂಪುರವರು  ತಮ್ಮ ಕೃತಿಗಳಲ್ಲಿ ಕಟ್ಟಿಕೊಟ್ಟ ದೃಶ್ಯಗಳನ್ನೆ ನಾಟಕದಲ್ಲಿ ಅಳವಡಿಸಲಾಗಿದೆ. ಅದರಲ್ಲಿ ಏನೂ ಬದಲಾವಣೆ ಇಲ್ಲ. ಆದರೆ ದೃಶ್ಯಗಳನ್ನು ಅಚ್ಚುಕಟ್ಟಾಗಿ ಪೋಣಿಸಿ ನಾಟಕವಾಗಿ ನಿರೂಪಿಸಿರುವ ರೀತಿ ಮಾತ್ರ ಗಮನಾರ್ಹ



          ಕೇವಲ ಮೂರೇ ಪಾತ್ರಗಳನ್ನಿಟ್ಟುಕೊಂಡು, ಅದರಲ್ಲೂ ಎರಡೇ ಪಾತ್ರಗಳು ಪ್ರಮುಖವಾಗಿ ಮಹಾಕಾವ್ಯಗಳ ಕೆಲವು ದೃಶ್ಯಗಳನ್ನು ಕಟ್ಟಿಕೊಟ್ಟ ಪರಿಯನ್ನು ಅನುಭವಿಸಿಯೇ ನೋಡಬೇಕು. ನಾಟಕ ಸಂಪೂರ್ಣವಾಗಿ ನೋಡುಗರಿಗೆ ದಕ್ಕದೇ ಹೋದರೂ ನಾಟಕದ ನಿರೂಪಣಾ ಶೈಲಿ ಮಾತ್ರ ಗಮನಸೆಳೆಯುವಂತಿದೆ. ಇಬ್ಬರೇ ವ್ಯಕ್ತಿಗಳು ಸಾಂದರ್ಭಿಕವಾಗಿ ಸಾಂಕೇತಿಕ ವೇಷಗಳ ಬದಲಾವಣೆಯೊಂದಿಗೆ ಪಾತ್ರಗಳಾಗುವ ಪರಿಕಲ್ಪನೆ ತುಂಬಾ ಸೊಗಸಾಗಿ ಮೂಡಿಬಂದಿದೆ. ಆಡಂಬರವಿಲ್ಲದ ಉಡುಗೆ ತೊಡುಗೆ, ಸರಳವಾದ ವರ್ಣಾಲಂಕಾರ, ಅದ್ದೂರಿತನವಿಲ್ಲ ರಂಗವಿನ್ಯಾಸಗಳು.... ಅತೀ ಕಡಿಮೆ ಖರ್ಚಿನಲ್ಲಿ ಹೇಗೆ ಸೊಗಸಾದ ನಾಟಕ ಮಾಡಬಹುದು ಎನ್ನುವುದಕ್ಕೆ ಉದಾಹರಣೆ ನಾಟಕವಾಗಿದೆ.

          ಇಡೀ ನಾಟಕವನ್ನು ಗಮನಾರ್ಹವಾಗಿಸಿದ್ದು ನಟರ ದೇಹಭಾಷೆ ಹಾಗೂ ಸಂಭಾಷಣೆ. ಮೈಕೋ ಶಿವಶಂಕರ್ ಮತ್ತು ಸತೀಶ್ ಕುಮಾರ್ ಇಬ್ಬರೂ ಲೀಲಾಜಾಲವಾಗಿ ತಮ್ಮ ಪಾತ್ರಗಳಿಗೆ ಜೀವತುಂಬಿದ್ದಾರೆ.  ನಿರ್ದೇಶಕ ಜೋಸೆಪ್ರವರು ಅಭಿನಯದ ಮೇಲೆಯೆ ತಮ್ಮ ಗಮನ ಕೇಂದ್ರೀಕರಿಸಿದ್ದು ಕಲಾವಿದರ ಪ್ರತಿಭೆಯನ್ನು ಸಮರ್ಥವಾಗಿ ಹೊರತಂದು ನಾಟಕವನ್ನು ಗೆಲ್ಲಿಸಿದ್ದಾರೆ. ಯಾವುದೇ ರಂಗಪೂರಕ ಅನುಕೂಲತೆಗಳನ್ನು ಹೆಚ್ಚಾಗಿ ಬಳಸದೇ, ಪೂರಕವಾಗಿ ಮೂಡ್ ಸೃಷ್ಟಿಸಲು ಅಗತ್ಯವೆನಿಸುವ ಬೆಳಕು ವಿನ್ಯಾಸ (ಮಂಜುನಾರಾಯಣ)  ಹಾಗೂ ಹಾಡು-ಹಿನ್ನೆಲೆ ಸಂಗೀತಗಳನ್ನು ಮಾತ್ರ ಬಳಸಿ ಸಂಕೀರ್ಣವಾದ ನಾಟಕವನ್ನು ಸರಳವಾಗಿ ಕಟ್ಟಿಕೊಟ್ಟಿದ್ದಾರೆ. ಆದರೆ.. ಇಬ್ಬರೇ ಕಲಾವಿದರು ಕಲಾಕ್ಷೇತ್ರದ ದೊಡ್ಡ ವೇದಿಕೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ನಾಟಕ ಇಂಟಿಮೆಟ್ ಥೀಯಟರ್ಗೆ ಹೇಳಿಮಾಡಿಸಿದಂತಿದೆ. ದೊಡ್ಡ ರಂಗಮಂದಿರಕ್ಕೆ ಸೂಕ್ತವಾಗುವುದಿಲ್ಲ ಜೊತೆಗೆ ನಾಟಕದ ಕಾಲಾವಧಿಯೂ ಕೇವಲ ಒಂದು ಗಂಟೆಯದ್ದರಿಂದ ಪೂರ್ಣಪ್ರಮಾಣದ ನಾಟಕವೂ ಎನ್ನುವಂತಿಲ್ಲ. ಏಕವ್ಯಕ್ತಿ ಪ್ರಯೋಗಗಳಿದ್ದಂತೆ ನಾಟಕವನ್ನು ಹೆಚ್ಚು ಕಡಿಮೆ ದ್ವಿವ್ಯಕ್ತಿ ಪ್ರಯೋಗ ಎನ್ನಬಹುದಾಗಿದೆ.

    ಸ್ವಪ್ನಸಿದ್ಧಿ ನಾಟಕವು ಕುವೆಂಪುರವರ ನಾಟಕಗಳ ಒಂದು ಟ್ರೇಲರ್ ಎನ್ನುಬಹುದಾದ ರೀತಿಯಲ್ಲಿ ಮೂಡಿಬಂದಿದೆ. ಒಂದಕ್ಕೊಂದು ಸಂಬಂಧವಿಲ್ಲದಂತಿರುವ, ವಿಭಿನ್ನ ಕಾಲ್ಪನಿಕ ಕಾಲಘಟ್ಟದ ಸಾಂಕೇತಿಕ ದೃಶ್ಯಗಳನ್ನು ಆಯ್ದು ವಿಶಿಷ್ಟ ನಿರೂಪಣಾ ಶೈಲಿಗೆ ಒಗ್ಗಿಸಿ ನಾಟಕವಲ್ಲದ ನಾಟಕವೊಂದನ್ನು ಕಟ್ಟಿಕೊಟ್ಟ ನಿರ್ದೇಶಕರು ಅಭಿನಂದನಾರ್ಹರು.



          ಚರ್ವಿತ ಚರ್ವಣ ನಾಟಕಗಳ ಪ್ರದರ್ಶನಗಳನ್ನು ಹೊರತುಪಡಿಸಿ ಇಂತಹ ಕೆಲವಾರು ವಿಚಿತ್ರ, ವಿಕ್ಷಿಪ್ತ, ವಿಶಿಷ್ಟ ರಂಗಪ್ರಯೋಗಗಳು ಕನ್ನಡ ರಂಗಭೂಮಿಯಲ್ಲಿ ಆಗುತ್ತಿರುವುದರಿಂದಲೇ ಭಾರತೀಯ ರಂಗಭೂಮಿಯ ಭೂಪಟದಲ್ಲಿ  ಕನ್ನಡ ರಂಗಭೂಮಿ ಎನ್ನುವುದು ಪ್ರಯೋಗಶೀಲ ರಂಗಭೂಮಿ ಎಂದು ಗುರುತಿಸಲ್ಪಟ್ಟಿದೆ. ಸಫಲತೆ-ವಿಫಲತೆಗಳಾಚೆಗೆ ನಿಂತು ನೋಡಿದರೆ ವಿಭಿನ್ನ ಪ್ರಯೋಗಗಳಿಂದಾಗಿಯೇ ಕನ್ನಡ ಹವ್ಯಾಸಿ ರಂಗಭೂಮಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತಲೇ ಇದೆ. ಜಾಗತೀಕರಣದ ವಿದ್ವಂಸಕ ಸಂಸ್ಕೃತಿಯ ಕಾಲಘಟ್ಟದಲ್ಲಿ ಇದು ಇಂದಿನ ಅಗತ್ಯವೂ ಆಗಿದೆ.        

                                              -ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ