ನಾಟಕಕಾರ ಡಿ.ಎಸ್.ಚೌಗಲೆ. |
ಸಿನೆಮಾರಂಗದಲ್ಲಿ ಹೇಗೆ ಸಿನೆಮಾ ನಿರ್ದೇಶಕರು, ನಿರ್ಮಾಪಕರು, ವಿತರಕರು, ಪ್ರದರ್ಶಕರು ಎಂಬ ವಲಯಗಳಿವೆಯೋ ಹಾಗೆಯೇ ಕನ್ನಡ ರಂಗಭೂಮಿಯಲ್ಲಿ ಕೂಡಾ ನಾಟಕ ನಿರ್ದೇಶಕರು, ನಿರ್ಮಾಪಕರು ಮತ್ತು ಆಯೋಜಕರು ಎಂಬ ವಲಯಗಳಿವೆ. ಸಿನೆಮಾ ಒಂದು ಉದ್ಯಮವಾಗಿದ್ದರಿಂದ, ಹಣ ಸಂಪಾದನೆಯೇ ಅಲ್ಲಿ ಆದ್ಯತೆಯಾಗಿದ್ದರಿಂದ ಒಬ್ಬರು ಇನ್ನೊಬ್ಬರನ್ನು ವಂಚಿಸಲು, ಶೋಷಿಸಲು ಪ್ರಯತ್ನಿಸುತ್ತಲೇ ಇರುತ್ತಾರೆ. ಆದರೆ ರಂಗಭೂಮಿ ಎಂದೂ ಉದ್ಯಮವೂ ಅಲ್ಲ, ಹಣವೇ ಇಲ್ಲಿ ಪ್ರಧಾನವೂ ಆಗಿರಲಿಲ್ಲ. ಕಲೆ ಮತ್ತು ಪ್ರತಿಭೆಯ ಅಭಿವ್ಯಕ್ತಿ ಮಾತ್ರ ರಂಗಕಲೆಯ ಮೂಲ ಆಶಯವಾಗಿತ್ತು. ಹಾಗೆ ಆಗಿರಬೇಕೆಂಬುದೇ ಎಲ್ಲರ ಬಯಕೆಯಾಗಿತ್ತು.
ಆದರೆ.... ಯಾವಾಗ ಸರಕಾರಿ ಸಂಸ್ಥೆಗಳಿಂದ ಪ್ರಾಯೋಜಕತ್ವ ಸಿಗಲು ಆರಂಭಿಸಿತೋ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆ ಯೋಜನೆ ಈ ಯೋಜನೆ ಕ್ರಿಯಾಯೋಜನೆಗಳು ರೂಪಗೊಂಡವೋ, ಸರಕಾರಿ ಅನುದಾನ ದೊರೆಯತೊಡಗಿತೋ ಆಗ ಸಾಂಸ್ಕೃತಿಕ ಪ್ರಾಜೆಕ್ಟಗಳು ನಾಯಿಕೊಡೆಯಂತೆ ಶುರುವಾದವು. ಎಲ್ಲಿ ಬೆಲ್ಲ ಇರುತ್ತದೋ ಅಲ್ಲಿ ನೊಣಗಳು ಮುತ್ತುವ ಹಾಗೆ ಎಲ್ಲಿ ಹಣ ಇರುತ್ತದೆಯೋ ಅಲ್ಲಿ ಜನಗಳು ಮುತ್ತದೆ ಇರುತ್ತಾರೆಯೇ? ಒಂದಲ್ಲ ಎರಡಲ್ಲಾ ಇನ್ನೂರೈವತ್ತು ಕೋಟಿಗೂ ಹೆಚ್ಚು ಹಣ ಪ್ರತಿ ವರ್ಷ ಸಂಸ್ಕೃತಿ ಇಲಾಖೆಗೆ ಸರಕಾರಿ ಬೊಕ್ಕಸದಿಂದ ಹಣ ಹರಿದುಬರತೊಡಗಿತು. ಅಲ್ಲಿಂದ ಹಲವು ಧಾರೆಗಳಲ್ಲಿ ಈ ಕಾಸು ಹಂಚಿಕೆಯಾಗತೊಡಗಿತು. ಕೊನೆಗೆ ಜಾತಿ ಆಧಾರದಲ್ಲಿ ಕೂಡಾ ಯೋಜನೆಗಳು ಆಯೋಜನೆಗೊಳ್ಳತೊಡಗಿದವು. ಇದರಿಂದಾಗಿ ಇಲಾಖೆಯ ಅಧಿಕಾರಿವರ್ಗ ಕಾಸು ಕೊಡುವ ದೇವರುಗಳಾದರು. ಎಲ್ಲಿ ದೇವರುಗಳಿರುತ್ತಾರೋ ಅಲ್ಲಿ ದಲ್ಲಾಳಿಗಳೂ ಇರಬೇಕಲ್ಲವೆ. ಹಲವಾರು ಸಾಂಸ್ಕೃತಿಕ ದಲ್ಲಾಳಿಗಳೂ ಹುಟ್ಟಿಕೊಂಡರು. ಕಾರ್ಯಕ್ರಮಗಳ ಗುತ್ತಿಗೆದಾರರು ಈ ಸರಕಾರಿ ದೇವರುಗಳಿಗೆ ನೈವೇದ್ಯಕೊಟ್ಟು ವರ ಪಡೆದುಕೊಳ್ಳತೊಡಗಿದರು.
ಯಾವ ರಂಗಭೂಮಿ ಜನರನ್ನು ಆಶ್ರಯಿಸಿ ಬದುಕಬೇಕಾಗಿತ್ತೋ, ಯಾವ ರಂಗಭೂಮಿ ಹವ್ಯಾಸಿ ಕಲಾವಿದರು ಹಾಗೂ ತಂತ್ರಜ್ಞರ ಕಲಾಭಿವ್ಯಕ್ತಿಯಿಂದ ಉಸಿರಾಡಬೇಕಾಗಿತ್ತೋ ಅಂತಹ ರಂಗಭೂಮಿ ಈಗ ರಾಜಾಶ್ರಿತವಾಗತೊಡಗಿತು. ಹಣದ ಬಲದ ಮೇಲೆ ಉಸಿರಾಡತೊಡಗಿತು. ಹವ್ಯಾಸಿ ರಂಗಭೂಮಿ ತನ್ನ ಸ್ವರೂಪದಲ್ಲಿ ಹವ್ಯಾಸಿ ಯಾದರೂ ಹಣಕಾಸಿನ ವಿಷಯದಲ್ಲಿ ವೃತ್ತಿರಂಗಭೂಮಿಯಾಯಿತು. ರಂಗಭೂಮಿಯ ಆಶಯ ಆದ್ಯತೆಗಳು ಬದಲಾಗತೊಡಗಿದವು.
ಈ ಮೊದಲು ಕಲಾ ಅಭಿವ್ಯಕ್ತಿಯ ಆಸೆಯಿಂದ, ಕಲಾವಿದರ ಒಳಗಡೆಯ ಒತ್ತಡದಿಂದ ರಂಗತಂಡವೊಂದು ಜನ್ಮತಾಳುತ್ತಿತ್ತು. ಯಾರೋ ಒಬ್ಬ ಅಥವಾ ಕೆಲವರು ಆ ತಂಡದ ನೇತೃತ್ವವನ್ನು ವಹಿಸಿಕೊಳ್ಳುತ್ತಿದ್ದರು. ಹಾಗೆ ಸಮಾನ ಮನಸ್ಕರನ್ನು ಕಲೆಹಾಕಿ ತಂಡವನ್ನು ಹುಟ್ಟುಹಾಕುವವ ಹೆಚ್ಚಾಗಿ ನಾಟಕ ನಿರ್ದೇಶಿಸುತ್ತಿದ್ದ. ಉಳಿದವರು ನಾಟಕದ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಿದ್ದರು. ತಮ್ಮದೇ ಉಳಿತಾಯದ ಹಣ ಹಾಕಿಕೊಂಡು, ತಮ್ಮ ಉಳಿದ ಸಮಯವನ್ನು ಬಳಸಿಕೊಂಡು ನಾಟಕವನ್ನು ಕಟ್ಟುತ್ತಿದ್ದರು, ರಂಗಮಂದಿರವನ್ನು ಬುಕ್ ಮಾಡುತ್ತಿದ್ದರು. ಶಕ್ತಿ ಮೀರಿ ಪ್ರೇಕ್ಷಕರನ್ನು ಕರೆತರಲು ತಂಡದ ಸದಸ್ಯರು-ಕಲಾವಿದರು ಪ್ರಯತ್ನಿಸುತ್ತಿದ್ದರು. ನಾಟಕವನ್ನು ಪೈಪೋಟಿಯ ಮೇಲೆ ಪ್ರದರ್ಶಿಸಿ ಖುಷಿಪಡುತ್ತಿದ್ದರು. ಇಡೀ ರಂಗತಂಡ ಒಂದು ಅವಿಭಕ್ತ ಕುಟುಂಬದ ರೀತಿಯಲ್ಲಿ ಕೆಲಸ ಮಾಡುತ್ತಿತ್ತು. ಎಲ್ಲರಲ್ಲೂ ಕಲಾಭಿವ್ಯಕ್ತಿಯೊಂದೇ ಆದರ್ಶವಾಗಿತ್ತು. ಅದು ಆಗಿನ ಕಾಲ.
ಚೌಗಲೆಯವರ ಚಿತ್ರಕಲೆ |
ಕಾಲ ಬದಲಾಗತೊಡಗಿತು. ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮೊದಲು ವಾರ್ಷಿಕವಾಗಿ ಇಪ್ಪತ್ತು ಕೋಟಿ ಕೊಡುತ್ತಿದ್ದುದು ಬರಬರುತ್ತಾ ಇನ್ನೂರೈವತ್ತು ಕೋಟಿ ಹೆಚ್ಚಿಸಿತು. ಸಂಸ್ಕೃತಿಯ ಭಾಗವೇ ಆದ ರಂಗಚಟುವಟಿಕೆಗಳಿಗೆ ಹಣ ಹರಿದು ಬರತೊಡಗಿತು. ಆಗ ರಂಗಸಂಬಂಧಗಳು ಬದಲಾಗತೊಡಗಿದವು. ರಂಗವ್ಯವಸ್ಥಾಪಕರೆಂಬುವವರು ಮುಂಚೂಣಿಗೆ ಬಂದರು. ಇವರಿಗೆ ಇಲಾಖೆಯಿಂದ ಹಣವನ್ನು ಹೇಗೆ ತೆಗೆದುಕೊಳ್ಳಬೇಕು, ಇಲಾಖೆಯ ಯಾವ್ಯಾವ ದೇವರುಗಳಿಗೆ ಎಷ್ಟೆಷ್ಟು ಕಾಯಿಕರ್ಪೂರ ಕೊಡಬೇಕು, ಎಷ್ಟು ಪ್ರಸಾದ ತಿನ್ನಿಸಬೇಕು, ಹೇಗೆ ಪ್ರಸನ್ನಗೊಳಿಸಿ ಹಣ ಪಡೆಯಬೇಕು ಎನ್ನುವ ಗುಟ್ಟು ತಿಳಿದುಹೋಯಿತು. ಮೊದಲು ತಮ್ಮ ತಂಡದ ನಾಟಕಕ್ಕೆ ಮಾತ್ರ ಇಲಾಖೆಯಿಂದ ಹಣ ತೆಗೆದುಕೊಳ್ಳುತ್ತಿದ್ದ ಕೆಲವರಿಗೆ ಪ್ರಾಜೆಕ್ಟ್ಗಳ ರುಚಿಹತ್ತಿತು. ಆಗ ಪ್ರಾಜೆಕ್ಟಗಳ ಹೆಸರಲ್ಲಿ ಶುರುವಾಗಿದ್ದೇ ನಾಟಕೋತ್ಸವಗಳು, ಪ್ರಶಸ್ತಿ ಪ್ರಧಾನ ಸಮಾರಂಭಗಳು. ಇಂತಹ ಪ್ರಾಜೆಕ್ಟಗಳಿಗೆ ಇಲಾಖೆಯೂ ಹೆಚ್ಚು ಪ್ರೋತ್ಸಾಹಿಸಿತು. ಅದರಲ್ಲಿ ಇಲಾಖೆಯ ದೇವರುಗಳಿಗೆ ಹೆಚ್ಚೆಚ್ಚು ಪ್ರಸಾದ ಸಿಗುತ್ತಿತ್ತು. ರಂಗವ್ಯವಸ್ಥಾಪಕರಿಗೂ ಲಕ್ಷಾಂತರ ರೂಪಾಯಿ ಸಿಗತೊಡಗಿತು.
ಈ ರಂಗೋತ್ಸವವನ್ನು ಆಯೋಜಿಸುವುದು ಬಹಳ ಸುಲಭ. ಇದಕ್ಕಾಗಿ ನಾಟಕ ನಿರ್ದೇಶಿಸಬೇಕಿಲ್ಲ, ನಿರ್ಮಿಸಬೇಕಿಲ್ಲ, ದೈಹಿಕ ಶ್ರಮ ಪಡಬೇಕಿಲ್ಲ, ಕಲಾವಿದರು-ತಂತ್ರಜ್ಞರನ್ನು ಸೇರಿಸಬೇಕಿಲ್ಲ, ಇಲಾಖೆಯ ದೇವರುಗಳನ್ನು ಒಲಿಸಿಕೊಳ್ಳುವ ಕಲೆ ಇದ್ದರೆ ಸಾಕು. ಮೂರು ಇಲ್ಲವೇ ಆರು ದಿನದ ಅವಧಿಯ ರಂಗೋತ್ಸವದ ಪ್ರಾಜೆಕ್ಟ ಒಂದನ್ನು ತಯಾರಿಸಿಕೊಂಡು ಇಲಾಖೆಗೆ ಹೋಗಿ ವಿವರಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಆಯುಕ್ತರಿಂದ ಅನುಮೋದನೆ ಪಡೆದುಕೊಳ್ಳಬೇಕು. ನಂತರ ಕಲಾಕ್ಷೇತ್ರವನ್ನೋ ಅಥವಾ ಯಾವುದಾದರೂ ರಂಗಮಂದಿರವನ್ನು ಬುಕ್ ಮಾಡಬೇಕು. ತದನಂತರ ಈಗಾಗಲೇ ಶ್ರಮಪಟ್ಟು ನಾಟಕವನ್ನು ನಿರ್ಮಿಸಿದ ರಂಗತಂಡಗಳ ಮುಖ್ಯಸ್ತರನ್ನು ಸಂಪರ್ಕಿಸಬೇಕು. ಹೀಗೆ ಮೂರು ದಿನಗಳ ನಾಟಕೋತ್ಸವವನ್ನು ಮಾಡುತ್ತಿದ್ದೇವೆ ನಿಮ್ಮ ನಾಟಕ ಪ್ರದರ್ಶಿಸಲು ಅದರಲ್ಲಿ ಅವಕಾಶಕೊಡುತ್ತೇವೆ. ಬನ್ನಿ ಎಂದು ಆಹ್ವಾನಿಸಬೇಕು. ನಾಟಕ ಪ್ರದರ್ಶಿಸಲು ವೇದಿಕೆ ಸಿಕ್ಕರೆ ಸಾಕು ಎಂದು ಹಂಬಲಿಸುವ ಅದೆಷ್ಟೋ ರಂಗತಂಡಗಳು ಖುಷಿಯಿಂದ ಒಪ್ಪಿಕೊಳ್ಳುತ್ತವೆ. ಆಗ ನಾಟಕವೊಂದಕ್ಕೆ ಅಂದಾಜು ಇಪ್ಪತ್ತು ಸಾವಿರ ಕೊಡುತ್ತೇವೆ ಎಂದು ಹೇಳಿ ಮೂರು ತಂಡಗಳನ್ನು ಒಪ್ಪಿಸಿಬಿಟ್ಟರೆ ಮುಗಿಯಿತು ನಮ್ಮ ಆಯೋಜಕರ ಕೆಲಸ. ಈ ಮೂರು ದಿನದ ನಾಟಕೋತ್ಸವಕ್ಕೆ ಮಾಡಲಾದ ಪ್ರಾಜೆಕ್ಟ ಮೂರು ಲಕ್ಷದ್ದಾಗಿರುತ್ತದೆ. ಒಟ್ಟು ಖರ್ಚು ಐವತ್ತು ಸಾವಿರವೂ ಆಗಿರುವುದಿಲ್ಲ. ಉಳಿದ ಹಣದಲ್ಲಿ ಇಲಾಖೆಯ ಹಿರಿ ಕಿರಿ ದೇವರುಗಳಿಗೆ ಮಾಮೂಲಿ ಕೊಟ್ಟು ನಂತರ ಉಳಿಯುವ ಲಕ್ಷಾಂತರ ಹಣ ಆಯೋಜಕರ ಜೇಬಿಗೆ ಸೇರುತ್ತದೆ. ಹೇಗಿದೆ ಐಡಿಯಾ. ಕೈ ಕೆಸರಾಗದೇ ಬಾಯಿ ಮೊಸರು ಮಾಡಿಕೊಳ್ಳುವುದು ಎಂದರೆ ಇದೇನಾ?
ಹೋಗಲಿ... ರಂಗತಂಡಗಳಿಗೆ ಮಾತುಕೊಟ್ಟಷ್ಟಾದರೂ ಹಣ ಕೊಡುತ್ತಾರೆಯಾ? ಕೆಲವು ಬಾರಿ ಅದರಲ್ಲೂ ಯಾಮಾರಿಸುತ್ತಾರೆ. ಅಂತಹ ಹಲವು ಉದಾಹರಣೆಗಳಿವೆ. ಅದರಲ್ಲಿ ಇತ್ತೀಚೆಗೆ ನಡೆದ ಒಂದು ಘಟನೆ ಹೀಗಿದೆ.
ಕನ್ನಡದಲ್ಲಿ ಉತ್ತಮ ನಾಟಕಗಳಿಲ್ಲದಿದ್ದಾಗ ಮರಾಠಿಯಿಂದ ಕೆಲವು ಉತ್ತಮ ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡಿಕೊಟ್ಟವರು ಡಿ.ಎಸ್.ಚೌಗಲೆ. ಮೂಲಭೂತವಾಗಿ ಇವರು ಉತ್ತಮ ಚಿತ್ರಕಲಾವಿದರು. ಬೆಳಗಾವಿಯ ಕಾಲೇಜೊಂದರಲ್ಲಿ ಮೇಷ್ಟ್ರು. ತುಂಬಾ ಒಳ್ಳೆಯವರು. ತುಂಬಾ ಸೊಗಸಾಗಿ ಮಾತಾಡ್ತಾರೆ,
ಆದರೆ ಕೈ ಮಾತ್ರ ತುಂಬಾ ಹಿಡಿತ. ನಾಟಕಗಳನ್ನು ಅನುವಾದ ಮಾಡುತ್ತಲೇ ಸ್ವತಃ ನಾಟಕಗಳನ್ನೂ ಬರೆದರು. ಕಳೆದ ವರ್ಷ ಅವರಿಗೆ ತಾವು ಬರೆದ ನಾಟಕಗಳ ಉತ್ಸವವನ್ನು ಮಾಡಬೇಕು ಎನ್ನುವ ಬಯಕೆಯಾಯಿತು. ಬೇರೆ ಯಾರೂ ಮಾಡದಿದ್ದರಿಂದ ತಾವೇ ಅದರ ಮುಂದಾಳತ್ವ ವಹಿಸಿದರು. ಹಿಂದೆ ನಾಟಕ ಅಕಾಡೆಮಿಯ ಸದಸ್ಯರೂ ಆಗಿದ್ದರಿಂದ ಅವರಿಗೆ ಕೆಲವು ರಂಗಸಂಘಟಕರ ಪರಿಚಯವಿತ್ತು. ಅದರಲ್ಲಿ ರವಿಂದ್ರ ಸಿರಿವರ ಒಬ್ಬರು. ಈಗಾಗಲೇ ಸಿರಿವರ ತಮ್ಮ ಸಿರಿವರ ಪ್ರಕಾಶನದಿಂದ ಚೌಗಲೆಯವರ ನಾಟಕಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಿದ್ದರು. ಸರಿ, ಸಿರಿವರರನ್ನು ಸಂಪರ್ಕಿಸಿದ ಚೌಗಲೆ ತಮ್ಮ ನಾಟಕೋತ್ಸವದ ಕುರಿತು ಪ್ರಸ್ತಾಪಿಸಿದರು. ಸಿರಿವರ ಕೂಡಾ ಆಯಿತು ಮಾಡೋಣ ಎಂದರು.
ಬೆಳಗಾವಿ, ಧಾರವಾಡ, ಬೆಂಗಳೂರು ಹಾಗೂ ಚಾಮರಾಜನಗರಗಳಲ್ಲಿ ತಲಾ ಮೂರು ದಿನಗಳ ನಾಟಕೋತ್ಸವವನ್ನು ಮಾಡುವುದು ಎಂದು ಠರಾವಾಯಿತು. 2013, ನವೆಂಬರ್ 16ರಿಂದ 18ರವರೆಗೆ ಬೆಳಗಾಂನಲ್ಲಿ ಚೌಗಲೆ ನಾಟಕೋತ್ಸವಕ್ಕೆ ಮುಹೂರ್ತ ಫಿಕ್ಸ್ ಆಯಿತು. ನಂತರ ಧಾರವಾಡದ ರಂಗಕರ್ಮಿ ವಿಠಲ್ ಕೊಪ್ಪದರವರ ‘ರಂಗಪರಿಸರ’ ತಂಡದ ಜೊತೆ ಸೇರಿ ಧಾರವಾಡದಲ್ಲಿ ಡಿಸೆಂಬರ್ 17 ರಿಂದ 19ರವರೆಗೆ ರಂಗೋತ್ಸವ ಮಾಡುವ ನಿರ್ಧಾರವಾಯಿತು. ನಾಟಕೋತ್ಸವಕ್ಕೆ ‘ಚೌರಂಗೋತ್ಸವ’ ಎಂದು ಚೌಗಲೆಯವರು ನಾಮಕರಣ ಮಾಡಿದರು. ಸಿರಿವರ ಪ್ರತಿಷ್ಟಾನ ಪ್ರಮುಖವಾಗಿ ಈ ನಾಲ್ಕು ಕಡೆ ನಾಟಕೋತ್ಸವ ಆಯೋಜಿಸಬೇಕು, ಬೆಳಗಾವಿಯಲ್ಲಿ ಚೌಗಲೆಯವರೇ ಅಧ್ಯಕ್ಷರಾದ ‘ರಂಗಸಂಪದ’ ತಂಡ ಸಹಕರಿಸಬೇಕು, ಧಾರವಾಡದಲ್ಲಿ ‘ರಂಗಪರಿಸರ’ ರಂಗತಂಡ ಸಹಕಾರ ಕೊಡಬೇಕು. ಇಡೀ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಾಯೋಜಿಕತ್ವ ಪಡೆಯಬೇಕು ಎಂದು ನೀಲಿನಕ್ಷೆ ಸಿದ್ದವಾಯಿತು.
ಆಗ ನೀನಾಸಂ ತನ್ನ ‘ತಿರುಗಾಟ’ದಲ್ಲಿ ಚೌಗಲೆಯವರ ಗಾಂಧಿ ವರ್ಸೆಸ್ ಗಾಂಧಿ ನಾಟಕವಾಡಿಸುತ್ತಿತ್ತು. ಹೀಗಾಗಿ ಅದೊಂದು ನಾಟಕ ಫಿಕ್ಸ ಆಯಿತು. ನಂತರ ಧಾರವಾಡದಲ್ಲಿ ಬೆಂಗಳೂರಿನ ವಿಶ್ವಾಲಯ ಎನ್ನುವ ಎನ್ಜಿಓ ಸಂಸ್ಥೆ ನಡೆಸುವ ‘ಜಂಗಮರಂಗ’ ಎನ್ನುವ ರೆಪರ್ಟರಿ ಮಾದರಿ ತಂಡ ಚೌಗಲೆಯವರ ‘ದಿಶಾಂತರ’ ನಾಟಕವನ್ನು ಈಗಾಗಲೇ ಸಿದ್ದಗೊಳಿಸಿ ಒಂದೆರಡು ಪ್ರದರ್ಶನ ಮಾಡಿತ್ತು. ಕೊನೆಗೂ ಬಾರ್ಗೆನ್ ಮಾಡಿ ಕೇವಲ ಹನ್ನೆರಡು ಸಾವಿರಕ್ಕೆ ನಾಟಕ ಪ್ರದರ್ಶಿಸಲು ದಿಶಾಂತರದ ನಿರ್ದೇಶಕ ಪ್ರದೀಪ್ ತಿಪಟೂರರನ್ನು ಚೌಗಲೆ ಒಪ್ಪಿಸಿದರು. ಇತ್ತೀಚೆಗೆ ‘ಊರ್ಧ್ವಸ್ತ್ವ’ ಎನ್ನುವ ಹೊಸ ನಾಟಕವನ್ನು ಚೌಗಲೆಯವರು ಬರೆದಿದ್ದರು. ಆ ನಾಟಕವನ್ನು ಆಡಿಸಬೇಕೆಂದುಕೊಂಡು ಅದಕ್ಕಾಗಿ ಸೂಕ್ತವಾದ ರಂಗತಂಡಕ್ಕೆ ತಲಾಷ್ ಮಾಡತೊಡಗಿದ ಚೌಗಲೆಯವರು ಪ್ರದೀಪ್ ತಿಪಟೂರರನ್ನು ಕೇಳಿದರು. ನೀನಾಸಂ ಪದವೀದರನಾದ ಪ್ರದೀಪ್ ಆಗಾಗಲೇ ಜಂಗಮರಂಗದಿಂದ ಭಿನ್ನಾಭಿಪ್ರಾಯ ಹೊಂದಿ ಹೊರಬಂದಿದ್ದರು. ಹೆಚ್ಚು ಕಡಿಮೆ ನಿರುದ್ಯೋಗಿಯಾಗಿದ್ದರು. ಚೌಗಲೆಯವರು ನಾಟಕ ಮಾಡಿಸಲು ಕೇಳಿದಾಗ ‘ನಾನೇನೋ ಆ ನಾಟಕ ನಿರ್ದೇಶಿಸಲು ಸಿದ್ದ ಆದರೆ ನನಗೆ ರಂಗತಂಡ ಎನ್ನುವುದಿಲ್ಲ ಹಾಗೂ ನನ್ನ ಹತ್ತಿರ ಈಗ ಅಷ್ಟು ಕಲಾವಿದರೂ ಇಲ್ಲ’ ಎಂದು ಪ್ರದೀಪ್ ಆಕಾಶ ನೋಡಿದರು. ‘ಸಾಗರದಲ್ಲಿ ಪ್ರತಿಭಾರವರ ಸ್ವಂದನ ಎನ್ನುವ ರಂಗತಂಡ ಕ್ರಿಯಾಶೀಲವಾಗಿದೆ. ಅವರನ್ನು ಒಪ್ಪಿಸಿದರೆ ನಾನು ಆ ತಂಡಕ್ಕೆ ನಾಟಕ ನಿದೇಶಿಸುತ್ತೇನೆ’ ಎಂದು ಪ್ರದೀಪ್ ಸಲಹೆ ಕೊಟ್ಟರು.
ಪ್ರತಿಭಾ, ಸಾಗರ |
ಹೆಗ್ಗೋಡಿಗೆ ಹೋಗಿದ್ದ ಚೌಗಲೆ ಅಲ್ಲಿಂದಲೇ ಪ್ರತಿಭಾರವರನ್ನು ಸಂಪರ್ಕಿಸಿದರು. ನಂತರ ಪ್ರತಿಭಾರವರ ಸಾಗರದ ಮನೆಗೆ ಹುಡುಕಿಕೊಂಡು ಹೋಗಿ ತಮ್ಮ ನಾಟಕ ನಿರ್ಮಾಣದ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು. “ಪ್ರದೀಪ್ ನಿರ್ದೇಶಿಸುತ್ತಾರೆ ನೀವು ನಿಮ್ಮ ರಂಗತಂಡದಿಂದ ನನ್ನ ನಾಟಕವನ್ನು ನಿರ್ಮಿಸಿ” ಎಂದು ಕೇಳಿಕೊಂಡರು. ‘ನಾಟಕ ನಿರ್ಮಿಸುವಷ್ಟು ಹಣ ನಮ್ಮಲಿಲ್ಲ, ನೀವು ಒಂದು ಪ್ರದರ್ಶನಕ್ಕೆ ಕೊಡುವ ಇಪ್ಪತ್ತು ಸಾವಿರ ಹಣ ನಿರ್ದೇಶಕರ ಸಂಭಾವಣೆಗೆ ಸಾಲದು, ಬೇರೆ ತಂಡವನ್ನು ನೋಡಿಕೊಳ್ಳಿ’ ಎಂದು ಪ್ರತಿಭಾ ತಮ್ಮ ಕಷ್ಟ ತೋಡಿಕೊಂಡರು. ‘ಅಯ್ಯೊ ಅದಕ್ಯಾಕ ಅಷ್ಟು ಚಿಂತಿ ಮಾಡ್ತೀರಿ ಬಿಡ್ರಿ, ನಿಮಗ ಬೆಳಗಾಂ ನಾಟಕಕ್ಕ ಇಪ್ಪತ್ತು ಸಾವಿರ ಕೊಡ್ತೀವಿ, ಇನ್ನೂ ಮೂರು ಕಡೆ ನಾಟಕೋತ್ಸವ ನಡಿಯೂದದ ಅದರ ಪ್ರತಿ ಪ್ರದರ್ಶನಕ್ಕೂ ಹಣ ಕೊಡ್ತೀವಿ. ಅದರ ಜೊತಿಗೆ ಇನ್ನೂ ಹತ್ತು ಕಡೆ ನಾಟಕ ಶೋ ಬುಕ್ ಮಾಡಿ ಕೊಡ್ತೀನಿ, ಸಾಕಲ್ಲಾ, ಈಗ ನಾಟಕ ಮಾಡಿಸ್ತೀರಲ್ಲಾ..” ಎಂದು ಬೆಳಗಾವಿಯ ಕನ್ನಡದಲ್ಲಿ ಚೌಗಲೆಯವರು ಆಶ್ವಾಸನೆ ಕೊಟ್ಟರು. ಸರಿ ‘ಹೇಗೂ ಹಾಕಿದ ಹಣ ವಾಪಸ್ ಬರುತ್ತದಲ್ಲಾ, ತಮ್ಮ ರಂಗತಂಡಕ್ಕೊಂದು ನಾಟಕ ಸಿಕ್ಕುತ್ತಲ್ಲಾ, ಏನೂ ಕೆಲಸವಿಲ್ಲದೆ ಸಂಕಷ್ಟದಲ್ಲಿರುವ ಪ್ರದೀಪ್ಗೆ ಕೆಲಸ ಕೊಟ್ಟಂತಾಗುತ್ತಲ್ಲಾ...’ ಎಂದು ಪ್ರತಿಭಾ ಒಪ್ಪಿಕೊಂಡರು.
ಇತ್ತ ರವೀಂದ್ರ ಸಿರಿವರ ಇಡೀ ಚೌರಂಗೋತ್ಸವದ ಪ್ರೊಜೆಕ್ಟ ರಿಪೋರ್ಟನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಲ್ಲಿಸಿ ಅಪ್ರೂವಲ್ ಪಡೆದರು. ಅತ್ತ ಪ್ರತಿಭಾ 40 ದಿನಗಳ ಕಾಲ ಪ್ರದೀಪ್ರವರನ್ನು ಸಾಗರದ ತಮ್ಮ ಮನೆಯಲ್ಲೇ ಇರಿಸಿಕೊಂಡು ಪ್ರತಿ ದಿನ ಶ್ರಮ ಪಟ್ಟು ತಾಲಿಂ ಮಾಡಿಸಲು ಅನುಕೂಲ ಮಾಡಿಕೊಟ್ಟರು. ಒಟ್ಟಾರೆ ಪ್ರದೀಪ್ ರವರಿಗೆ ಗೌರವ ಧನವೂ ಸೇರಿ ಮೂವತ್ತು ಸಾವಿರಕ್ಕೂ ಮಿಕ್ಕಿ ಖರ್ಚಾಯಿತು. ಜೊತೆಗೆ ಇಡೀ ನಾಟಕ ನಿರ್ಮಾಣಕ್ಕೆ ಒಟ್ಟು ಎಂಬತ್ತು ಸಾವಿರ ಖರ್ಚಾಯಿತು. ಹಣಕಾಸಿನ ಮುಗ್ಗಟ್ಟು ಬಂದಾಗ ಪ್ರತಿಭಾ ತಮ್ಮ ಚಿನ್ನದ ಚೈನ್ ಅಡವಿಟ್ಟು ನಾಟಕದ ನಿರ್ಮಾಣವನ್ನು ಹೇಳಿದ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿದರು. ಸಾಗರದಿಂದ ಬೆಳಗಾವಿಗೆ ಇಡೀ ತಂಡ ನಾಟಕದ ಪ್ರಾಪರ್ಟಿಗಳ ಜೊತೆಗೆ ಹೋಗಿ ಬರುವ ಖರ್ಚು ಹನ್ನೆರಡು ಸಾವಿರದಷ್ಟಾಗಿತ್ತು. ಅದಕ್ಕೆ ಅಡ್ವಾನ್ಸ ಹಣ ಕೇಳಿದರೆ ಚೌಗಲೆಯವರು ‘ಅದಕ್ಕ ಚಿಂತಿನ ಮಾಡಬ್ಯಾಡ್ರೀ, ನಾಟಕ ಮಾಡಿದ ಕೂಡಲೇ ನಿಮ್ಮ ಕೈಗೆ ರೊಕ್ಕಾ ಕೊಟ್ಟ ಕಳಿಸ್ತೀವಿ, ನಿಮ್ಮದ ಖರ್ಚು ಹಾಕ್ಕೊಂಡು ಬಂದಬಿಡ್ರಲಾ’ ಅಂತಾ ಭರವಸೆ ಕೊಟ್ರು.
ಚೌಗಲೆಯವರ ಮಾತಿನ ಮೇಲೆ ಅಪಾರವಾದ ಭರವಸೆಯನ್ನಿಟ್ಟುಕೊಂಡು ಇಡೀ ತಂಡ ಬೆಳಗಾವಿಗೆ ಹೋಗಿ ಉತ್ಸಾಹದಿಂದ ನಾಟಕ ಮಾಡಿತು. ಆತಿಥ್ಯದಲ್ಲಾದ ವ್ಯತ್ಯಯ ಮತ್ತು ಕೆಲವು ಅವ್ಯವಸ್ಥೆಗಳ ನಡುವೆಯೂ ನಾಟಕವೊಂದನ್ನು ಪ್ರದರ್ಶಿಸಿದ ಖುಷಿಯಲ್ಲಿ ಪ್ರತಿಭಾ ಮತ್ತು ಅವರ ಸ್ಪಂದನ ತಂಡದ್ದಾಗಿತ್ತು. ನಾಟಕದ ನಂತರ ಹಣ ಕೇಳಿದರೆ, “ಅರೆ.. ಏನೋ ಸಮಸ್ಯೆಯಾಗಿದೆ, ಒಂದ ಕೆಲಸಾ ಮಾಡಿ, ಈಗ ನೀವು ವಾಪಸ್ ಹೋಗ್ರಿ, ಇನ್ನೆರಡು ದಿವಸದೊಳಗ ನಿಮಗ ಚೆಕ್ ಮೂಲಕ ಕೋರಿಯರ್ ಮಾಡಿ ಕಳಿಸ್ತೀವಿ. ಒಟ್ಟ ಚಿಂತಿ ಮಾಡಬ್ಯಾಡ್ರಿ..” ಎಂದು ಚೌಗಲೆ ಕಾಗೆ ಹಾರಿಸಿದರು. ಜೊತೆಗೆ ಹಣ ಕೊಡದೇ ಹಣ ತಲುಪಿದೆ ಎನ್ನುವಂತೆ ಓಚರ್ ಗಳಿಗೆ ಸಹಿ ಹಾಕಿಸಿಕೊಂಡರು. ಅದನ್ನೂ ಪ್ರತಿಭಾ ನಂಬಿದರು. ಸಂಘಟಕರಿಗೆ ನೂರು ತೊಂದರೆಗಳಿರ್ತಾವೆ, ಹೋಗಲಿ ಬಿಡು ಒಂದೆರಡು ದಿನದ ಮೇಲಾದ್ರೂ ಕಳಿಸ್ತಾರಲ್ಲಾ’ ಎಂದುಕೊಂಡು ಸಾಗರಕ್ಕೆ ತಮ್ಮ ತಂಡದವರ ಜೊತೆಗೆ ಮರಳಿದರು. ಆದರೆ ಎರಡು ದಿನ ಕಳೆದರೂ ಹಣ ಬರಲಿಲ್ಲ, ಮತ್ತೆ ಪೋನ್ ಮಾಡಿದರೆ ಚೌಗಲೆ ಪೋನ್ ಎತ್ತುತ್ತಿಲ್ಲ. ಹರಸಾಹಸ ಮಾಡಿ ಕಾಂಟ್ಯಾಕ್ಟ ಮಾಡಿದರೆ “ ನೀವೇನು ಚಿಂತಿ ಮಾಡಬ್ಯಾಡ್ರಿ, ನಿಮ್ಮ ರೊಕ್ಕ ಎಲ್ಲೂ ಹೋಗೂದಿಲ್ಲ, ಸಂಸ್ಕೃತಿ ಇಲಾಖೆಯಿಂದ ನಿಮ್ಮ ಮನಿಗೆ ಡೈರೆಕ್ಟಾಗಿ ಚೆಕ್ ಬರತೈತಿ, ಸ್ವಲ್ಪ ಕಾಯ್ರಲ್ಲಾ, ಎದುಕು ವರಿ ಮಾಡಬ್ಯಾಡ್ರಿ...” ಎಂದು ಪೋನ್ ಇಟ್ಟರು ಚೌಗಲೆ ಸಾಹೇಬರು.
ಪ್ರದೀಪ್ ತಿಪಟೂರ |
ವರಿ ಮಾಡ್ಕೋಬ್ಯಾಡ ಅಂದರೆ ಸುಮ್ಮನಿರೋದು ಹೇಗೆ, ಇನ್ನು ಸಂಗೀತದವರಿಗೆ, ಲೈಟಿಂಗ್ನವರಿಗೆ, ಬಸ್ನವರಿಗೆ ಬಾಕಿ ಹಣ ಕೊಡಬೇಕಿತ್ತು. ಹೇಗೂ ಆ ಇಪ್ಪತ್ತು ಸಾವಿರ ಬಂದರೆ ಈ ಬಾಕಿ ಹಣ ತೀರಿಸಬಹುದಾಗಿತ್ತು. ಯಾವಾಗ ಭರವಸೆ ಕೊಡುತ್ತಲೇ ಬಂದ ಚೌಗಲೆ ಆಕಾಶ ತೋರಿಸಿದರೋ ಆಗ ಪ್ರತಿಭಾ ಭೂಮಿಗಿಳಿದು ಹೋದರು. ಹೇಗೋ ಸಾಲ ಮಾಡಿ ಕೊಡುವವರಿಗೆಲ್ಲಾ ಕೊಟ್ಟು ನಿಟ್ಟುಸಿರುಬಿಟ್ಟರು. ನೀನಾಸಂನವರು ನಾಟಕದ ನಂತರ ಹಠಕ್ಕೆ ಬಿದ್ದು ಮಾತಾಡಿದಷ್ಟು ಹಣ ತೆಗೆದುಕೊಂಡು ಹೋಗಿದ್ದರು. ಅವರಿಗೆ ಸಬೂಬು ಹೇಳಲು ಸಾಧ್ಯವೇ ಇರಲಿಲ್ಲ. ಇನ್ನು ಜಂಗಮರಂಗದ ಪ್ರದೀಪ್ಗೂ ಹಣ ಕೊಡಲಿಲ್ಲ. ಒತ್ತಾಯ ಮಾಡಿದಾಗಲೆಲ್ಲಾ ಐನೂರು, ಸಾವಿರ ಹಣವನ್ನು ಚೌಗಲೆ ಕಂತು ಕಂತಿನಲ್ಲಿ ಕೊಡುತ್ತಾ ಹೋದರು. ‘ಹನ್ನೆರಡು ಸಾವಿರದಲ್ಲಿ ಇನ್ನೂ ಎರಡು ಸಾವಿರ ಬಾಕಿ ಬರಬೇಕು ಸಾರ್’ ಎಂದು ಪ್ರದೀಪ್ ನೊಂದು ನುಡಿಯುತ್ತಾರೆ.
ಬೆಳಗಾವಿಯ ಚೌರಂಗೋತ್ಸವ ಮುಗಿದು ಧಾರವಾಡದಲ್ಲಿ ಡಿಸೆಂಬರ್ 17 ರಿಂದ ಮತ್ತೆ ಶುರುವಾಗಬೇಕಿತ್ತು. ಮತ್ತೆ ಪ್ರತಿಭಾಗೆ ಸಿರಿವರ ಮತ್ತು ಕೊಪ್ಪದರವರಿಂದ ಪೋನ್ ಮಾಡಿಸಿದ ಚೌಗಲೆ ನಾಟಕೋತ್ಸವದಲ್ಲಿ ನಾಟಕ ಪ್ರದರ್ಶನಮಾಡಲು ಕೇಳಿಕೊಂಡರು. ಅವರ ಎಲ್ಲಾ ಬಾಕಿಯನ್ನು ತೀರಿಸುವುದಾಗಿ ಮಾತು ಕೊಟ್ಟರು. ಮುಲಾಜಿಗೆ ಬಿದ್ದ ಪ್ರತಿಭಾ ‘ಆಯಿತು’ ಎಂದು ಮತ್ತೆ ನಾಟಕದ ರಿಹರ್ಸಲ್ಸ್ ಶುರು ಮಾಡಿಕೊಂಡರು. ರಂಗತಂಡವನ್ನು ಧಾರವಾಡಕ್ಕೆ ಕರೆದೊಯ್ಯಲು ಬಸ್ ನವರಿಗೆ ಅಡ್ವಾನ್ಸನ್ನು ಕೊಟ್ಟು ಬುಕ್ ಮಾಡಿದರು. ಆದರೆ ಇತ್ತ ಈಗಾಗಲೇ ತೊಂದರೆಗೊಳಗಾದ ಪ್ರದೀಪ್ ‘ದಿಶಾಂತರ’ ನಾಟಕ ಮಾಡಿಸಲು ಸಾಧ್ಯವೇ ಇಲ್ಲ ಎಂದು ನಿರಾಕರಿಸಿ ಬಿಟ್ಟರು. ಜಂಗಮರಂಗ ತಂಡದ ಆಂತರಿಕ ಸಮಸ್ಯೆಗಳು ಉಲ್ಬನಗೊಂಡು ಇಡೀ ತಂಡವನ್ನೇ ಬರಕಾಸ್ತು ಮಾಡಿದ ಪ್ರದೀಪ್ ಬೆಂಗಳೂರು ಸೇರಿಬಿಟ್ಟರು. ಆಗ ಚಿಂತೆಗೆ ಬಿದ್ದ ಚೌಗಲೆ ಮಂಡ್ಯ ರಮೇಶರವರನ್ನು ಸಂಪರ್ಕಿಸಿದರು. ಈ ಹಿಂದೆ ರಮೇಶ ಚೌಗಲೆಯವರ ಅನುವಾದಿತ ನಾಟಕ ಗಾಂಧಿ ಮತ್ತು ಅಂಬೇಡ್ಕರರನ್ನು ತಮ್ಮ ನಟನಾ ತಂಡಕ್ಕೆ ನಿರ್ದೇಶಿಸಿದ್ದರು. ಆದರೆ ಚೌಗಲೆಯವರ ಬಗ್ಗೆ ಚೆನ್ನಾಗಿ ಅರಿತಿದ್ದ ರಮೇಶ ಈ ಸಧ್ಯಕ್ಕೆ ಆಗೋದಿಲ್ಲ ನಮಗೆ ಬೇರೆ ನಾಟಕಗಳ ಪ್ರದರ್ಶನ ಮಾಡಬೇಕಿದೆ ಎಂದು ನಯವಾಗಿ ಜಾರಿಕೊಂಡರು. ಚೌರಂಗೋತ್ಸವ ಪೋಸ್ಟಪೋನ್ ಆಯಿತು. ಆದರೆ ಸ್ಪಂದನ ತಂಡಕ್ಕೆ ಅದನ್ನು ತಿಳಿಸುವ ವ್ಯವಧಾನ ಚೌಗಲೆಯವರಿಗೂ ಇರಲಿಲ್ಲ ಆ ಜವಾಬ್ದಾರಿಯನ್ನು ಹೊರಲು ಬೇರೆ ಆಯೋಜಕರೂ ಸಿದ್ದರಿರಲಿಲ್ಲ.
ಇನ್ನೇನು ‘ಸ್ಪಂದನ’ ರಂಗತಂಡ ನಾಳೆ ಧಾರವಾಡಕ್ಕೆ ಹೊರಡಬೇಕು ಎನ್ನುವಾಗ ಪ್ರತಿಭಾ ಪೋನ್ ಮಾಡಿದರೆ ‘ನಾಟಕೋತ್ಸವ ಈ ಸಧ್ಯಕ್ಕೆ ಕ್ಯಾನ್ಸಲ್ ಆಗಿದೆ, ಮುಂದೆ ಯಾವಾಗ ಮಾಡಲಾಗುತ್ತದೆಯೋ ಆಗ ತಿಳಿಸಲಾಗುವುದು’ ಎನ್ನುವ ಉತ್ತರ ಆಯೋಜಕರಿಂದ ಬಂತು. ರಂಗ ತಂಡದವರಿಗೆ ಹೇಗಾಗಬೇಡ ಹೇಳಿ. ಈ ನಾಟಕ ಮಾಡಿಸಿ ಒಂದು ಪೈಸೆಕೂಡಾ ಗಿಟ್ಟದೆ ಮೊದಲೇ ಆರ್ಥಿಕವಾಗಿ ತೊಂದರೆಗೊಳಗಾದ ಪ್ರತಿಭಾ ಕೊನೆವರೆಗೂ ಒಂದು ಮಾತು ಹೇಳದೇ ನಾಟಕೋತ್ಸವವನ್ನು ರದ್ದು ಮಾಡಿದ್ದು ತಿಳಿದು ವಿಪರೀತ ಬೇಸರಪಟ್ಟುಕೊಂಡರು . ರಂಗಭೂಮಿಯ ಮೇಲೆಯೇ ಜಿಗುಪ್ಸೆಪಟ್ಟುಕೊಂಡರು. ಮೋಸಹೋದೆ ಎಂದುಕೊಂಡು ವಿಪರೀತ ನೊಂದುಕೊಂಡರು. ಚೌರಂಗೋತ್ಸವದಲ್ಲಿ ತಿರುಪತಿ ಚೌರಕ್ಕೊಳಗಾದ ಮಹಿಳಾ ರಂಗಕರ್ಮಿ ಪ್ರತಿಭಾ ನಿಜಕ್ಕೂ ನಾಟಕಕಾರ ಹಾಗೂ ರಂಗಸಂಘಟಕರಿಂದ ಮೋಸಹೋಗಿದ್ದರು.
ಊರ್ದಸ್ತ್ವ ನಾಟಕದಲ್ಲಿ ಪ್ರತಿಭಾ ಸಾಗರ್
|
ಈಗಲೂ ಬೆಳಗಾಂ ಪ್ರದರ್ಶನದ ಹಣ ಒಂದೇ ಒಂದು ನೈಯಾಪೈಸೆಯೂ ಬಂದಿಲ್ಲ. ಹತ್ತು ಪ್ರದರ್ಶನಗಳನ್ನು ಫಿಕ್ಸ ಮಾಡಿಕೊಡ್ತೇನೆಂದು ಮಾತುಕೊಟ್ಟ ಚೌಗಲೆ ಒಂದೇ ಒಂದು ಪ್ರದರ್ಶನವನ್ನೂ ಕೊಡಿಸಲಿಲ್ಲ. ‘ಯಾಕೆ ಚೌಗಲೇ ಸಾಹೇಬರೆ?’ ಎಂದು ಕೇಳಿದರೆ ‘ಸಂಸ್ಕೃತಿ ಇಲಾಖೆಯಿಂದ ಹಣ ಇಂದಲ್ಲಾ ನಾಳೆ ಬಂದೇ ಬರುತ್ತದೆ, ಈಗಾಗಲೇ ನಾಲ್ಕು ಶೋಗಳನ್ನು ಕೊಡಿಸಿದ್ದೇನೆ..” ಎಂದು ಕೇಳಿದವರ ಕಿವಿಮೇಲೆಯೇ ಹೂವು ಇಡಲು ಪ್ರಯತ್ನಿಸುತ್ತಾರೆ.
ರಂಗಭೂಮಿಯಲ್ಲಿ ಮಹಿಳೆಯರು ರಂಗತಂಡಕಟ್ಟಿ ರಂಗಭೂಮಿಯ ಚಟುವಟಿಕೆಗಳನ್ನು ನಿರಂತರವಾಗಿ ಮಾಡುತ್ತಿರುವುದೇ ಅಪರೂಪ. ಅಂತಹುದರಲ್ಲಿ ಸಾಗರದಂತಹ ಸಣ್ಣ ಪಟ್ಟಣದಲ್ಲಿದ್ದುಕೊಂಡು ನಾಟಕದ ಸೆಳೆತಕ್ಕೊಳಗಾಗಿ ವಕೀಲಿ ವೃತ್ತಿಯನ್ನೇ ಬಿಟ್ಟ ಪ್ರತಿಭಾ ರವರು ನಿರಂತರವಾಗಿ ಕಳೆದ ಹತ್ತು ವರ್ಷಗಳಿಂದ ‘ಸ್ಪಂದನ’ ರಂಗತಂಡ ಕಟ್ಟಿಕೊಂಡು ನಾಟಕಗಳನ್ನು ನಿರ್ಮಿಸುತ್ತಿದ್ದಾರೆ. ರಾಜ್ಯಾದ್ಯಂತ ಹಲವಾರು ಕಡೆ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಪ್ರತಿ ಬೇಸಿಗೆಯಲ್ಲಿ ನೂರಾರು ಮಕ್ಕಳಿಗೆ ಅಭಿನಯ ಶಿಭಿರಗಳನ್ನು ನಡೆಸುತ್ತಿದ್ದಾರೆ. ಉಡುಪಿ ನಾಟಕ ಸ್ಪರ್ಧೆಗಳಲ್ಲಿ ಪ್ರತಿವರ್ಷ ಒಂದಿಲ್ಲೊಂದು ಬಹುಮಾನ ಪಡೆಯುತ್ತಿದ್ದಾರೆ. ನಟಿಯಾಗಿ, ನಿರ್ದೇಶಕಿಯಾಗಿ, ರಂಗಸಂಘಟಕಿಯಾಗಿ, ಹಾಡುಗಾರಳೂ ಆಗಿ ರಂಗಭೂಮಿಯಲ್ಲಿ ಕ್ರಿಯಾಶೀಲರಾಗಿದ್ದಾರೆ. ಇಂತವರ ರಂಗಬದ್ಧತೆಯನ್ನು ಗುರುತಿಸಿ ಬೇರೆಲ್ಲಾ ರಂಗಕರ್ಮಿಗಳು ಪ್ರೋತ್ಸಾಹಿಸಬೇಕು. ಆದರೆ ಅವರ ಉತ್ಸಾಹವನ್ನು ಕುಗ್ಗಿಸುವಂತಹ ಕೆಲಸವನ್ನು ಚೌಗಲೆಯಂತವರು ಮಾಡಕೂಡದು. ಅವರು ಒಂದು ನಾಟಕ ಬರೆಯದಿದ್ದರೂ ರಂಗಭೂಮಿಗೆ ನಷ್ಟವಿಲ್ಲ ಇನ್ನ್ಯಾರೋ ಬರೆಯುತ್ತಾರೆ. ಆದರೆ ಪ್ರತಿಭಾರಂತಹ ಉತ್ಸಾಹಿಗಳು ಬೇಸರಗೊಂಡು ರಂಗಚಟುವಟಿಕೆ ನಿಲ್ಲಿಸಿದರೆ, ಸ್ಪಂದನ ರಂಗತಂಡದ ಕಾರ್ಯಚಟುವಟಿಕೆ ನಿಂತರೆ ನಿಜಕ್ಕೂ ರಂಗಭೂಮಿಗೆ ಒಂದು ನಷ್ಟವೇ. ಅದೂ ಸಾಗರದಂತಹ ಪಟ್ಟಣದ ರಂಗಕ್ಷೇತ್ರಕ್ಕಂತೂ ಅಪಾರ ನಷ್ಟ. ಎಲ್ಲಾ ಕ್ಷೇತ್ರಗಳಲ್ಲೂ ಮಹಳೆ ಶೋಷಿತಳಾಗಿದ್ದಾಳೆ. ರಂಗಭೂಮಿಯಲ್ಲಿ ಹಾಗೆ ಆಗದೇ ಇರಲಿ ಎನ್ನುವುದು ನಮ್ಮೆಲ್ಲರ ಆಶಯವಾಗಿದೆ.
ಮತ್ತೆ ಈ ಲೇಖನದ ಆರಂಭದ ವಿಷಯಕ್ಕೆ ಬಂದರೆ ವೃತ್ತಿಪರ ರಂಗಸಂಘಟಕರು ಎನ್ನುವವರು ಇತರೆ ರಂಗತಂಡಗಳನ್ನು ತಮ್ಮ ಆದಾಯದ ಪರಿಕರವಾಗಿ ಮಾತ್ರ ಉಪಯೋಗಿಸಿಕೊಳ್ಳುತ್ತಾರೆ. ಕೆಲವೊಂದು ಪ್ರಾಮಾಣಿಕ ರಂಗಸಂಘಟಕರೂ ಇದ್ದಾರೆ ಅವರ ಬಗ್ಗೆ ಎರಡು ಮಾತಿಲ್ಲ. ಅವರೂ ಸಂಸ್ಕೃತಿ ಇಲಾಖೆಯಿಂದ ಹಣ ಪಡೆಯುತ್ತಾರೆ. ಅದೂ ತಪ್ಪಲ್ಲ. ಹಾಗೆ ತೆಗೆದುಕೊಂಡ ಹಣವನ್ನು ಉದ್ದೇಶಿತ ಕಾರ್ಯಕ್ರಮಕ್ಕೆ ಖರ್ಚುಮಾಡುತ್ತಾರೆ. ಕಳೆದ ತಿಂಗಳು ಸಿಜಿಕೆ ರಾಷ್ಟ್ರೀಯ ರಂಗೋತ್ಸವ ಆಯೋಜಿಸಿದ ‘ರಂಗನಿರಂತರ’ ತಂಡ ರಂಗಬದ್ಧತೆಗೆ ಒಂದು ಮಾದರಿಯಾಗಿದೆ. ಆದರೆ ಅಂತವರ ಸಂಖ್ಯೆ ತುಂಬಾ ಕಡಿಮೆ ಇದೆ. ಮತ್ತೆ ಕೆಲವರು ಹಣ ಮಾಡುವುದಕ್ಕೆಂದೇ ಪ್ರಾಜೆಕ್ಟಗಳನ್ನು ಆಯೋಜಿಸುತ್ತಾರೆ. ರಂಗತಂಡಗಳನ್ನು ಶೋಷಿಸಿ ಕಾಸು ಮಾಡುವ ತಂತ್ರ ಕುತಂತ್ರಗಳನ್ನು ಹೆಣೆಯುತ್ತಾರೆ. ರಂಗಬದ್ದತೆಯಿಂದ ನಾಟಕ ಕಟ್ಟುವವರು ಇಂತಹ ಸಾಂಸ್ಕೃತಿಕ ಗುತ್ತಿಗೆದಾರರಿಂದ ಮೋಸಕ್ಕೊಳಗಾಗುತ್ತಾರೆ. ಇಂತಹ ಹಲವಾರು ಉದಾಹರಣೆಗಳನ್ನು ಹರಿಕತೆ ಮಾಡಿ ಹೇಳಬಹುದಾಗಿದೆ. ಈಗ ಹೇಳಿ ರಂಗಭೂಮಿ ಎನ್ನುವುದು ಯಾರಿಂದ ಹಾಳಾಗುತ್ತಿದೆ? ರಂಗಭೂಮಿಯ ಹೆಸರನ್ನು ಹೇಳಿಕೊಂಡು ಯಾರು ತಮ್ಮ ಸ್ವಾರ್ಥ ಸಾಧನೆ ಮಾಡಿಕೊಳ್ಳುತ್ತಿದ್ದಾರೆ? ರಂಗರಾಜಕಾರಣಕ್ಕೆ ಅದು ಹೇಗೆ ಅಮಾಯಕ ರಂಗಕರ್ಮಿಗಳು ಬಲಿಯಾಗುತ್ತಿದ್ದಾರೆನ್ನುವುದನ್ನು ಸಾರ್ವಜನಿಕರಿಗೆ ತೋರಿಸಿ ಕೊಡವ ಒಂದು ಪ್ರಯತ್ನವೇ ಈ ಲೇಖನ.
ಕೊನೆಯದಾಗಿ, ಸಾಗರದ ಪ್ರತಿಭಾ ಈಗಲೂ ಕಣ್ಣೀರಾಗುತ್ತಾ ಒಬ್ಬ ರಂಗಸಂಘಟಕರನ್ನು ನೆನೆಪಿಸಿಕೊಳ್ಳುತ್ತಿರುತ್ತಾರೆ. ಆತ ಗೆಳೆಯರ ಬಳಗದ ಶ್ರೀನಿವಾಸ. ಬೇರೆ ರಂಗಕರ್ಮಿಗಳು ಹೀಗೆ ಮೋಸಮಾಡಿದಾಗಲೆಲ್ಲಾ ಶ್ರೀನಿವಾಸ ಪ್ರತಿಭಾಳ ಕಣ್ಣಮುಂದೆ ಬರುತ್ತಾರಂತೆ. ಅದಮ್ಯ ಉತ್ಸಾಹದ ರಂಗಬದ್ದತೆಯಿರುವ ರಂಗಸಂಘಟಕ ವಿ. ಶ್ರೀನಿವಾಸ ವರ್ಷಗಳ ಹಿಂದೆ ರೈಲು ಅಪಘಾತದಲ್ಲಿ ತೀರಿಹೋದ. ಮೂರು ವರ್ಷಗಳ ಹಿಂದೆ ಪ್ರೇಮಾ ಕಾರಂತರ ನೆನಪಿನಲ್ಲಿ ಗೆಳೆಯರ ರಂಗ ಬಳಗದ ವತಿಯಿಂದ ರಂಗಶಂಕರದಲ್ಲಿ ಶ್ರೀನಿವಾಸರವರು ನಾಟಕೋತ್ಸವವೊಂದನ್ನು ಆಯೋಜಿಸಿದ್ದರು. ಸಾಗರದ ‘ಸ್ಪಂದನ’ ತಂಡದ ‘ಕರಿಭಂಟ’ ನಾಟಕವನ್ನು ಆಹ್ವಾನಿಸಿ ನಾಟಕೋತ್ಸವದಲ್ಲಿ ಅವಕಾಶ ಮಾಡಿಕೊಟ್ಟಿದರು. ನಾಟಕ ಪ್ರದರ್ಶನಕ್ಕೆ ಒಟ್ಟು ಊಟ ವಸತಿ ಎಲ್ಲಾ ಸೇರಿ ಇಪ್ಪತೈದು ಸಾವಿರ ಹಣವನ್ನು ಸಂಸ್ಕೃತಿ ಇಲಾಖೆಯಿಂದ ಕೊಡಿಸುತ್ತೇನೆ ಎಂದು ಶ್ರೀನಿವಾಸ ಪ್ರತಿಭಾರವರಿಗೆ ಮಾತುಕೊಟ್ಟ. ಆದರೆ ತಾನೇ ತನ್ನ ಸ್ವಂತ ಖರ್ಚಲ್ಲಿ ಬಂದ ರಂಗತಂಡದವರಿಗೆಲ್ಲಾ ಊಟ ವಸತಿಯ ವ್ಯವಸ್ಥೆ ಮಾಡಿದ ಶ್ರೀನಿವಾಸ ಕೇವಲ ಒಂದೇ ತಿಂಗಳಲ್ಲಿ ಇಲಾಖೆಯ ಅಧಿಕಾರಿಗಳ ಹಿಂದೆ ಬಿದ್ದು ಚೆಕ್ ಪಡೆದು ಪ್ರತಿಭಾರವರಿಗೆ ಕಳುಹಿಸಿಕೊಟ್ಟ. ಚೆಕ್ ನೋಡಿ ಪ್ರತಿಭಾಗೆ ಅಚ್ಚರಿ. ಯಾಕೆಂದರೆ ಮಾತಾಡಿದ್ದು ಇಪ್ಪತೈದು, ಅದರಲ್ಲಿ ಊಟ ವಸತಿಗೆ ಐದು ಸಾವಿರ ಖರ್ಚು ಮಾಡಿದ್ದರೂ ಇಪ್ಪತ್ತು ಸಾವಿರ ಹಣ ಬರಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದ ಪ್ರತಿಭಾ ಕೈಗೆ ಸಿಕ್ಕಿದ್ದು ಮೂವತ್ತು ಸಾವಿರ ರೂಪಾಯಿಯ ಚೆಕ್. ಇಲಾಖೆಯ ಅಧಿಕಾರಿಗಳ ಜೊತೆಗೆ ಬಡಿದಾಡಿ ಮೂವತ್ತು ಸಾವಿರ ಮೊತ್ತಕ್ಕೆ ಚೆಕ್ ಬರೆಯಿಸಿದ್ದ ಶ್ರೀನಿವಾಸನನ್ನು ಯಾಕೆ ಹೀಗೆ? ಎಂದು ಕೇಳಿದರೆ “ತುಂಬಾ ಶ್ರಮ ಪಟ್ಟು ಉತ್ತಮ ನಾಟಕ ಪ್ರದರ್ಶಿಸಿದ್ದಾರೆ. ರಂಗತಂಡಕ್ಕೆ ಹೆಚ್ಚು ಸರಕಾರಿ ಹಣ ಸಿಕ್ಕರೆ ಸಿಗಲಿ ಬಿಡು, ಅದರಿಂದ ಅವರು ಇನ್ನೊಂದು ನಾಟಕ ಮಾಡ್ತಾರೆ” ಎಂದು ದೊಡ್ಡ ಮೀಸೆ ಹುರಿಮಾಡುತ್ತಾ ನಕ್ಕುಬಿಟ್ಟ. ಈಗ ಶ್ರೀನಿವಾಸನಂತಹ ರಂಗಸಂಘಟಕರು ಎಲ್ಲಿದ್ದಾರೆ? ಇದ್ದ ಒಬ್ಬ ಶ್ರೀನಿವಾಸ ಕಾಲನ ಕರೆಗೆ ಓಗೊಟ್ಟು ಆಕಾಲ ಮೃತ್ಯುವಿಗೆ ತುತ್ತಾಗಿ ಹೋರಟೇ ಬಿಟ್ಟ. ರಂಗಭೂಮಿಯಲ್ಲಿ ಈಗ ಸಾಂಸ್ಕೃತಿಕ ದಲ್ಲಾಳಿಗಳದೇ ಸಾಮ್ರಾಜ್ಯ.
ಕೆಲವು ಜನ ಮೆರೆಯಲು
ಹಲವು ಜನರ ಕಣ್ಣೀರು.
ಯಾರಯಾರದೋ ಶ್ರಮ
ಇನ್ಯಾರದೋ ಹೆಸರು.
ವೇದಿಕೆಯಲಿ ಮೈಮರೆತವರಿಗೆ
ನೇಪತ್ಯದವರು ಕಾಣರು.
ಹುಚ್ಚು ಮುಂಡೆ ಮದುವೇಲಿ
ಉಂಡವರೇ ದೇವರು.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ