ಮಂಗಳವಾರ, ಫೆಬ್ರವರಿ 4, 2014

“ಅನಂತಮೂರ್ತಿಯವರ ರೋಗಿ ಪ್ರಕರಣ ಹಾಗೂ ರಂಗಕರ್ಮಿಗಳ ಪ್ರತಿಭಟನೆ”



                            



2014, ಫೆಬ್ರವರಿ 3,  ಬೆಂಗಳೂರಿನ ರಂಗಭೂಮಿಯ ಕೆಲವು ರಂಗಕರ್ಮಿಗಳು ಹಾಗೂ ಮಾಜಿ ಸಾಹಿತಿಗಳು ಟೌನ್ಹಾಲ್ ಮುಂದೆ ನಿಂತು ದಿಕ್ಕಾರ ಕೂಗಿದರು. ರಂಗಭೂಮಿಗೆ ಆದ ಅನ್ಯಾಯಕ್ಕೂ ಅಲ್ಲಾ, ರಂಗಕರ್ಮಿಗಳ ಮೇಲಾದ ಶೋಷಣೆಯನ್ನು ಪ್ರತಿಭಟಿಸಿಯೂ ಅಲ್ಲಾ. ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಯು.ಆರ್.ಅನಂತಮೂರ್ತಿಯವರಿಗಾದ ಅನ್ಯಾಯಕ್ಕೆ  ರಂಗದಿಗ್ಗಜರೆನ್ನಿಸಿಕೊಂಡವರು(?) ಬೀದಿಗಿಳಿದು ತಮ್ಮದೇ ರೀತಿಯಲ್ಲಿ ಪ್ರತಿಭಟಿಸಿದರು.


ಕಾರಣ ಇಷ್ಟೇ, ಕರ್ನಾಟಕದ ರಾಜ್ಯಪಾಲ ಹುದ್ದೆಯಲ್ಲಿರುವ ರಾಜಕಾರಣಿ ಎಚ್.ಆರ್.ಭಾರದ್ವಾಜ್ರವರು ಅನಂತಮೂರ್ತಿಯವರನ್ನು ಆತನೊಬ್ಬ ರೋಗಿ, ಅವರ ಮಾತಿಗೆ ಯಾವ ಮಾನ್ಯತೆ ಇದೆ’’ ಎಂದು ಅವಮಾನಿಸಿದ್ದು ಕೆಲವು ಮಾಜಿ ಹಾಲಿ ರಂಗಕರ್ಮಿಗಳಲ್ಲಿ ಇನ್ನಿಲ್ಲದಂತೆ ಬೇಸರವನ್ನು ತಂದಿತ್ತು. ಇಷ್ಟೊಂದು ತ್ವರಿತಗತಿಯಲ್ಲಿ ಅನಂತಮೂರ್ತಿಯವರ ಅವಮಾನಕ್ಕೆ ಸ್ಪಂದಿಸಿದ್ದು ತುಂಬಾ ಉತ್ತಮವಾದ ನಿಲುವು. ಅನ್ಯಾಯ ಅವಮಾನ ಎಲ್ಲೇ ಆಗಲಿ, ಯಾರಿಗೇ ಆಗಲಿ ಅದನ್ನು ಪ್ರತಿಭಟಿಸುವುದು ಮಾನವೀಯತೆಯ ಸಂಕೇತ. ಸಾಂಸ್ಕೃತಿಕ ಲೋಕ ಎಚ್ಚರದಲ್ಲಿದೆ ಎನ್ನುವುದರ ಪ್ರತೀಕ. ಪ್ರಗತಿಪರ ಸಂಘಟನೆಗಳ ಒಕ್ಕೂಟ, ಪ್ರಗತಿಪರ ಚಿಂತಕರ ವೇದಿಕೆ ಹಾಗೂ ಸಾಹಿತಿ ಕಲಾವಿದರ ವೇದಿಕೆಗಳು  ಇದ್ದಕ್ಕಿದ್ದಂತೆ ಚುರುಕಾದವು.  ಕಪ್ಪಣ್ಣ ಮತ್ತು ನಾಗರಾಜಮೂರ್ತಿಗಳು ಪ್ರತಿಭಟನೆಯನ್ನು ಉತ್ಸಾಹದಿಂದ ಆಯೋಜಿಸಿದ್ದು ಅವರಲ್ಲಿರುವ ಕಾಳಜಿಯನ್ನು ತೋರಿಸುವಂತಹುದು.

ಅನಂತಮೂರ್ತಿ ಕನ್ನಡದ ಸ್ವಾಭಿಮಾನದ ಸಂಕೇತ, ಕನ್ನಡ ಹೋರಾಟಗಳಲ್ಲಿ ಸಕ್ರೀಯರಾಗಿದ್ದಾರೆ. ಅವರನ್ನು ರೋಗಿ ಎಂದು ಕರೆದು ರಾಜ್ಯಪಾಲರು ನಾಡಿನ ಸಾಂಸ್ಕೃತಿಕ ಸ್ವಾಭಿಮಾನಕ್ಕೆ ಅವಮಾನ ಮಾಡಿದ್ದಾರೆ. ಹೀಗಾಗಿ ರಾಜ್ಯಪಾಲರು ಕೂಡಲೆ ಕ್ಷಮೆಕೇಳಬೇಕು ಎನ್ನುವುದು ಪ್ರತಿಭಟನಾ ನಿರತರ ಆಗ್ರಹವಾಗಿತ್ತು. ಜನವರಿ 30 ರಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ  ಉತ್ತರಿಸಿದ ರಾಜ್ಯಪಾಲರು ಅನಂತಮೂರ್ತಿ ಯಾರು? ಅವರು ಏನು ಅಲ್ಲ. ಅವರ ಜೊತೆಗೆ ವಾದ ಮಾಡುವ ಅವಶ್ಯಕತೆ ನನಗಿಲ್ಲ. ಅವರೊಬ್ಬ ರೋಗಿ ಎಂದು ಸಿಟ್ಟಿನಿಂದ ತಮ್ಮ ಅಸಹನೆಯನ್ನು ತೋರಿಸಿದರು. ಅನಂತಮೂರ್ತಿಯವರ ಮನೆಗೆ ಆರೋಗ್ಯ ವಿಚಾರಿಸಲೆಂದು ರಾಜ್ಯಪಾಲ ಭಾರದ್ವಾಜರು ಹೋಗಿದ್ದರು. ಆಗ ಅನಂತಮೂರ್ತಿ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿದ್ದರು. ರಾಜ್ಯಪಾಲರ ಅಹಂಗೆ ಅದು ದಕ್ಕೆ ಆಗಿತ್ತು. ಅದಕ್ಕೆ ಸುದ್ದಿಗಾರರಿಗೆ ರಾಜ್ಯಪಾಲರು ಅನಂತಮೂರ್ತಿ ಒಬ್ಬ ಹಿರಿಯ ಸಾಹಿತಿ ಮತ್ತು ವಿಶ್ರಾಂತ ಕುಲಪತಿ. ಅವರ ಆರೋಗ್ಯ ಸರಿಯಿಲ್ಲ ಎಂದು ಅನುಕಂಪದಿಂದ ಅವರ ಮನೆಗೆ ಬೇಟಿ ಕೊಟ್ಟಿದ್ದೆ. ಆದರೆ ರಾಜ್ಯಪಾಲರ ಪರಮಾಧಿಕಾರವನ್ನೇ ಅನಂತಮೂರ್ತಿ ಪ್ರಶ್ನಿಸುತ್ತಿದ್ದಾರೆ, ಡಯಾಲಿಸಸ್ಗೆ ಒಳಗಾದ ವ್ಯಕ್ತಿ ಜೊತೆಗೆ ನಾನು ವಾದ ಮಾಡಬೇಕೆ?

ರಾಜ್ಯಪಾಲರು ಅನಂತಮೂರ್ತಿಯವರನ್ನು ಅವಮಾನಿಸಿದ್ದನ್ನು ಹಾಗೂ ಅವರ ಅನಾರೋಗ್ಯದ ಕುರಿತು ಮಾತಾಡಿದ್ದನ್ನು ವಿರೋಧಿಸಲೇ ಬೇಕು. ಆದರೆ... ನಿಜವಾಗಿ ಆಗಿದ್ದೇನು? ರಾಜ್ಯಪಾಲರ್ಯಾಕೆ ಅನಂತಮೂರ್ತಿಯವರನ್ನು ರೋಗಿ ಎಂದರು? ಅವರ ಮಾನ್ಯತೆಯನ್ನೇ ಅಮಾನ್ಯ ಮಾಡಿದರು? ಒಂದಿಷ್ಟು ಹಿನ್ನೆಲೆಯನ್ನು ಕೆದಕಿದರೆ ಒಂದು ಸ್ವಾರಸ್ಯಕರ ಒಳನೋಟ ಸಿಗುತ್ತದೆ.

ಡಾ.ಯು.ಆರ್.ಅನಂತಮೂರ್ತಿ
 ಕಾಂಗ್ರೆಸ್ ಸರಕಾರವು ಡಾವಣಗೆರೆ ವಿಶ್ವವಿದ್ಯಾಲಯಕ್ಕೆ ಕುಲಪತಿ ಹುದ್ದೆಗೆ ಅರ್ಹರನ್ನು ಶಿಪಾರಸ್ಸು ಮಾಡುವ ಶೋಧನಾ ಸಮಿತಿಯ ಅಧ್ಯಕ್ಷರನ್ನಾಗಿ ಅನಂತಮೂರ್ತಿಯವರನ್ನು ಆಯ್ಕೆ ಮಾಡಿತ್ತು. ಅಧ್ಯಕ್ಷರಾದವರು ಕುಲಪತಿಯಾಗಲು ಯೋಗ್ಯತೆ ಇರುವ ಮೂರು ಜನರ ಹೆಸರನ್ನು ರಾಜ್ಯಪಾಲರಿಗೆ ಸೂಚಿಸಬೇಕಿತ್ತು. ಮೂರು ಹೆಸರಲ್ಲಿ ಒಂದನ್ನು ರಾಜ್ಯಪಾಲರು ಆಯ್ಕೆ ಮಾಡಿ ಕುಲಪತಿಯಾಗಿ ನಿಯೋಜಿಸುತ್ತಿದ್ದರು. ಅನಂತಮೂರ್ತಿಯವರೂ ಸಹ ಎಲ್ಲಾ ರೀತಿಯಲ್ಲಿ ವಿಚಾರ ವಿಶ್ಲೇಷಣೆ ನಡೆಸಿ ಅಂತಿಮವಾಗಿ ಮೂರು ಜನರ ಹೆಸರನ್ನು ಕುಲಪತಿ ಸ್ಥಾನಕ್ಕೆ ಸೂಚಿಸಿದ್ದರು. ಅಲ್ಲಿಗೆ ತಮ್ಮ ಕೆಲಸ ಮುಗಿಯಿತೆಂದು ಸುಮ್ಮನಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ. ಹಾಗೆ ಆಯ್ಕೆಯಾದ ಮೂವರ ಪಟ್ಟಿಯಲ್ಲಿ ಮೊದಲಿರುವ ಹೆಸರಿನವರನ್ನೇ ಕುಲಪತಿಯನ್ನಾಗಿಸಬೇಕೆಂಬುದು ಅನಂತಮೂರ್ತಿಯವರ ಹಠ. ಪರಿಶಿಷ್ಟ ಜಾತಿಗೆ ಸೇರಿದ ಡಾ. ಎಲ್. ಗೋಮತಿದೇವಿಯವರನ್ನೆ ಕುಲಪತಿಗಳನ್ನಾಗಿಸಬೇಕೆಂಬುದು ಅನಂತಮೂರ್ತಿಯವರ ಉದ್ದೇಶವಾಗಿತ್ತು.  ಆದರೆ ರಾಜ್ಯಪಾಲರು ಮೂರನೇ ಹೆಸರನ್ನು ಆಯ್ಕೆ ಮಾಡಿಕೊಂಡರು. ಅದು ರಾಜ್ಯಪಾಲರಿಗೆ ಇರುವ ಸಂವಿಧಾನಬದ್ಧವಾದ ಅಧಿಕಾರ. ಶೋಧನಾ ಸಮಿತಿಯ ಆಯ್ಕೆ ಸೂಕ್ತವೆನ್ನಿಸದಿದ್ದರೆ ಅದನ್ನು ತಿರಸ್ಕರಿಸಿ ಮತ್ತೊಂದು ಪಟ್ಟಿಯನ್ನು ಸಲ್ಲಿಸಲು ಆದೇಶಿಸುವ ಅಧಿಕಾರ ರಾಜ್ಯಪಾಲರಿಗಿದೆ

 
 
ಎಚ್.ಆರ್.ಭಾರದ್ವಾಜ್
ಯಾವಾಗ ಅನಂತಮೂರ್ತಿಯವರು ತಮ್ಮ ಆರೋಗ್ಯ ವಿಚಾರಿಸಲು ಮನೆಗೆ ಬಂದ ರಾಜ್ಯಪಾಲರ ಅಧಿಕಾರವನ್ನೇ ಪ್ರಶ್ನಿಸಿದರೋ ಆಗ ರಾಜ್ಯಪಾಲರ ಸಹನೆ ಮಿತಿಮೀರಿತು. ನಂತರ ಬಸವಕಲ್ಯಾಣದಲ್ಲಾದ ಕಾರ್ಯಕ್ರಮವೊಂದರಲ್ಲಿ ಅನಂತಮೂರ್ತಿಗಳು ರಾಜಕಾರಣಿಗಳು ರಾಜ್ಯಪಾಲರಾದರೆ ಭ್ರಷ್ಟರಾಗುತ್ತಿದ್ದಾರೆ ಎಂದು ಭಾರದ್ವಾಜರನ್ನು ಸಾರ್ವಜನಿಕವಾಗಿ ನಿಂದಿಸಿದರು. ಇದರಿಂದ ರಾಜ್ಯಪಾಲರಿಗೆ ಉರಿಎದ್ದಿತು. ಸುದ್ದಿಗಾರರ ಮುಂದೆ ರೋಗಿ ಯಾದ ಅನಂತಮೂರ್ತಿಯವರು ತನ್ನ ಸರ್ವಭೌಮತ್ವವನ್ನು ಪ್ರಶ್ನಿಸಲು ಯಾವ ಮಾನ್ಯತೆ ಇದೆ ಎಂದು ಅನಂತಮೂರ್ತಿಯವರನ್ನು ಖಂಡಿಸಿದರು. ಮೂರು ಜನರನ್ನು ಸೂಚಿಸುವುದೊಂದೆ ಅನಂತಮೂರ್ತಿಯವರಿಗಿದ್ದ ಮಾನ್ಯತೆ. ಅದರ ನಂತರವೂ ಇಂತವರನ್ನೇ ಆಯ್ಕೆ ಮಾಡಬೇಕು ಎನ್ನುವುದು ಅನಂತಮೂರ್ತಿಯವರ ಅಧಿಕಾರವ್ಯಾಪ್ತಿಗೆ ಬರುವಂತಹುದಲ್ಲ. ಆದ್ದರಿಂದ ಅನಂತಮೂರ್ತಿಯವರ ಮಾತಿಗೆ ಯಾವ ಮಾನ್ಯತೆ ಇದೆ? ಎಂದು ರಾಜ್ಯಪಾಲರು ಪ್ರಶ್ನಿಸಿದರು. ಅದರ ಜೊತೆಗೆ ರೋಗಿ ಎನ್ನುವ ಮಾತನ್ನು ಸೇರಿಸಿದ್ದು ಅತ್ಯಂತ ಸಂವೇದನಾ ಶೀಲರಾದ ಕೆಲವೇ ಕೆಲವು ಸಾಹಿತಿಗಳನ್ನು ಹಾಗೂ ರಂಗಕರ್ಮಿಗಳನ್ನು ಕೆರಳಿಸಿತು. ಅನಂತಮೂರ್ತಿ ತಮ್ಮ ಅಧಿಕಾರವ್ಯಾಪ್ತಿಯನ್ನು ಮೀರಿ ವರ್ತಿಸಿದ್ದು ಅವರಿಗೆ ಮುಖ್ಯವೆನ್ನಿಸಲೇ ಇಲ್ಲ. ರೋಗಿ ಎನ್ನುವ ಪದ ಪ್ರತಿಭಟನೆಗೆ ಸ್ಪೂರ್ತಿಯಾಯಿತು.

 ರಾಜ್ಯಪಾಲರು ಉದ್ದೇಶಪೂರ್ವಕವಾಗಿ ರೀತಿ ಮಾತನಾಡಿಲ್ಲ, ಆತುರದಲ್ಲಿ ಇಂತಹ ಹೇಳಿಕೆ ನೀಡಿದ್ದಾರೆಂದೆನ್ನಿಸುತ್ತದೆ. ಆದಾಗ್ಯೂ ರಾಜ್ಯಪಾಲರು ಕ್ಷಮೆ ಕೇಳುವುದು ಸೂಕ್ತ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಚಿಂತಕ ಡಾ.ಮರಳಸಿದ್ದಪ್ಪನವರು ಬ್ಯಾಲನ್ಸ ಆಗಿ ಮಾತನಾಡಿದರು. ಆದರೆ ನಮ್ಮ ರಂಗಕರ್ಮಿ ನಾಗರಾಜಮೂರ್ತಿಯವರು ರಾಜ್ಯಪಾಲರು ಕೂಡಲೇ ಅನಂತಮೂರ್ತಿಯವರ ಕ್ಷಮೆಯನ್ನು ಕೇಳಲೇ ಬೇಕು, ಇಲ್ಲವಾದರೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ಮಾಡುವುದಾಗಿ ಆವೇಶದಿಂದ ಗುಡುಗಿದರು. ಅನಂತಮೂರ್ತಿಯವರು ಅನಾರೋಗ್ಯಪೀಡಿತರಾಗಿದ್ದೂ ಸತ್ಯ, ತಮ್ಮ ಮಾನ್ಯತೆಯನ್ನು ಮೀರಿ ನಡೆದದ್ದರಿಂದ ಯಾವ ಮಾನ್ಯತೆ ಇದೆ ಅವರಿಗೆ ಎಂದು ರಾಜ್ಯಪಾಲರಿಂದ ಅನ್ನಿಸಿಕೊಂಡಿದ್ದೂ ಸತ್ಯ. ಆದರೂ ಸಹ ರೋಗಿಗೆ ರೋಗಿ ಎನ್ನಬಾರದು, ಮಾನ್ಯತೆ ಇಲ್ಲದವರು ಮಾನ್ಯತೆಗೆ ಒತ್ತಾಯಿಸಿದರೂ ಮಾನ್ಯತೆ ಇಲ್ಲ ಎಂದು ಹೇಳಬಾರದು ಎಂದು ಅಪೇಕ್ಷಿಸುವುದು ಎಷ್ಟೊಂದು ಸರಿ?

ಇದೇ ನಮ್ಮ ಅನಂತಮೂರ್ತಿಗಳು ಹಲವಾರು ಬಾರಿ ಸಹಸಾಹಿತಿಗಳಿಗೆ, ರಾಜಕಾರಣಿಗಳಿಗೆ ಬೇಕಾದಷ್ಟು ಮಾತಾಡಿದ್ದಾರೆ. ಇವರಿಂದ ಅನ್ನಿಸಿಕೊಂಡವರೆಲ್ಲಾ ಗುಂಪುಕಟ್ಟಿಕೊಂಡು ಪ್ರತಿಭಟನೆಗಿಳಿದಿದ್ದರೆ ಹೇಗೆ? ಅನಂತಮೂರ್ತಿಗಳಿಗೆ ನೋವಾಗಿದೆಯೋ ಇಲ್ಲೋ ಗೊತ್ತಿಲ್ಲಾ, ಆದರೆ ಕೆಲವು ಸಾಹಿತಿ ಕಲಾವಿದರಿಗಂತೂ ಸಿಕ್ಕಾಪಟ್ಟೆ ನೋವಾಗಿ ಬಿಟ್ಟಿದೆ.  ನೋವು ಬೀದಿಗೆ ಬಂದಿದೆ. ಇನ್ನೊಮ್ಮೆ ಅಪ್ಪಿತಪ್ಪಿಯೂ ಯಾವ ರಾಜಕಾರಣಿಯೂ ಯಾವುದೇ ಸಾಹಿತಿಗೂ ಏನೇನೂ ಅನ್ನಬಾರದು, ಅಂದರೆ ಸಾಂಕೇತಿಕ ಪ್ರತಿಭಟನೆಯನ್ನು ಎದುರಿಸಬೇಕು ಎನ್ನುವ ಎಚ್ಚರಿಕೆಯನ್ನು ಪ್ರತಿಭಟನೆ ಕೊಡುವಂತಿದೆ



ಆಯಿತು ಒಬ್ಬ ಸಾಹಿತಿಗೆ ಅದೂ ಜ್ಞಾನಪೀಠ ಪಡೆದ ಸಾಹಿತಿಗೆ ಅವಮಾನ ಆಗಿದ್ದನ್ನು ತಡೆದುಕೊಳ್ಳಲು ಸಾಧ್ಯವೇ ಇಲ್ಲ. ಕನ್ನಡದ ಸ್ವಾಭಿಮಾನದ ಸಂಕೇತಕ್ಕೆ ನೋವಾದದ್ದು ಇಡೀ ಸಾಹಿತ್ಯ ಹಾಗೂ ರಂಗಭೂಮಿಗೆ ಆದ ನೋವು ಎಂದುಕೊಳ್ಳೊಣ. ಆದರೆ ಇದೇ ಮಾನದಂಡ ಎಲ್ಲಾ ಸಾಹಿತಿ ಕಲಾವಿದರಿಗೆ ಅನ್ಯಾಯವಾದಾಗಲೂ ಅನ್ವಯಿಸಬೇಕಲ್ಲವೆ? ಬೇರೆ ಜ್ಞಾನಪೀಠಕ್ಕೂ ಅವಮಾನವಾದಾಗ ಈಗ ಪ್ರತಿಭಟನಾ ನಿರತರ ಸ್ವಾಭಿಮಾನ ಜಾಗೃತವಾಗಬೇಕಾಗಿತ್ತಲ್ಲವೇ? ಯಾಕೆ ಆಗಲಿಲ್ಲ.

ನಮ್ಮ ಕನ್ನಡ ರಂಗಭೂಮಿಯ ಅದ್ವಿತೀಯ ನಾಟಕಕಾರ ಜ್ಞಾನಪೀಠ ಪುರಸ್ಕೃತ ಗಿರೀಶ ಕಾರ್ನಾಡರಿಗೆ ನಾಟಕದ ಮೂಲಕ
ಗಿರೀಶ ಕಾರ್ನಾಡ
ಅವಮಾನ ಮಾಡಲಾಗಿತ್ತಲ್ಲಾ, ಯಾರೂ ಯಾಕೆ ಅದನ್ನು ಪ್ರಶ್ನಿಸಲಿಲ್ಲ. ರಂಗಶಂಕರದಲ್ಲಿ ನಾಟಕ ಮಾಡಿಸಿದ ಮಲಯಾಳಿ ನಿರ್ದೇಶಕನೊಬ್ಬ ಕಾರ್ನಾಡರು ಬರೆದದ್ದೆಲ್ಲಾ ಬುಲ್ ಶಿಟ್, ಕಾರ್ನಾಡರು ಒಬ್ಬ ಆತಂಕವಾದಿ, ಕಾರ್ನಾಡರು ಸತ್ತು ಹೋಗಿದ್ದಾರೆ... ಎಂದೆಲ್ಲಾ ಸಾರ್ವಜನಿಕವಾಗಿ ಅವಮಾನ ಮಾಡಿದಾಗ ನಮ್ಮ ರಂಗಕರ್ಮಿಗಳ್ಯಾರೂ ಗಟ್ಟಿಯಾಗಿ ಕೆಮ್ಮಲೂ ಇಲ್ಲಾ. ಇದೇ ಅನಂತಮೂರ್ತಿಯವರ ಹಾಗೆಯೇ ಕಾರ್ನಾಡರೂ ಕೆಲವರನ್ನು ನಿಂದಿಸಿ ಅದು ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಸಮರ್ಥಿಸಿಕೊಂಡಿದ್ದರು. ಇವರು ತೋರಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಇವರನ್ನು ವಿರೋಧಿಸುವವರು ತೋರಿದ್ದರು. ಆದರೂ ಅನಂತಮೂರ್ತಿಯವರ ಪರ ಬೀದಿಗಿಳಿದವರು ಕಾರ್ನಾಡ್ ಪರವಾಗಿಯೂ ಪ್ರತಿಭಟಿಸಬಹುದಾಗಿತ್ತಲ್ಲವೆ. ಕಾರ್ನಾಡರಿಗೆ ಅವಮಾನ ಮಾಡಿದವರಿಗೆ ಕ್ಷಮೆ ಕೋರಲು ಆಗ್ರಹಿಸಬೇಕಾಗಿತ್ತಲ್ಲವೆ? ಕಾರ್ನಾಡರು ಕನ್ನಡದ ಸ್ವಾಭಿಮಾನದ ಸಂಕೇತವಾಗಿರಲಿಲ್ಲವೇ?

ಹೋಗಲಿ.... ಇನ್ನೊಬ್ಬ ಜ್ಞಾನಪೀಠ ಪುರಸ್ಕೃತರು ಹಾಗೂ ನಮ್ಮ ಕನ್ನಡ ರಂಗಭೂಮಿಯ ಹೆಮ್ಮೆಯ ನಾಟಕಕಾರ, ಕಲಾವಿದ,
ಚಂದ್ರಶೇಖರ್ ಕಂಬಾರ
ಸಾಹಿತಿ ಡಾ.ಚಂದ್ರಶೇಖರ್ ಕಂಬಾರರಿಗೆ ಜನವರಿ 27ರಂದು ಸಾರ್ವಜನಿಕವಾಗಿ ಸಿಕ್ಕಾಪಟ್ಟೆ ಅವಮಾನ ಮಾಡಲಾಯಿತು. ಡಬ್ಬಿಂಗ್ ಪರವಾಗಿ ಮಾತಾಡಿದ್ದಾರೆನ್ನುವ ಕಾರಣಕ್ಕೆ ಸಿನೆಮಾ ಸ್ಟಾರ್ ನಟನೊಬ್ಬ ಟಿವಿ ವಾಹಿನಿಯಲ್ಲಿ ಕಂಬಾರರನ್ನು ನಾಚಿಕೆ ಇಲ್ಲದವನು, ತಲೆಹಿಡುಕ... ಎಂದೆಲ್ಲಾ ಅವಾಚ್ಯ ಶಬ್ಧಗಳಿಂದ ಪದೇ ಪದೇ ನಿಂದಿಸಿದಾಗ ಯಾಕೆ ಒಬ್ಬಾನೊಬ್ಬ ಸಾಹಿತಿ, ಕಲಾವಿದ ರಂಗಕರ್ಮಿ ತಿರುಗಿಬೀಳಲಿಲ್ಲ. ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಪ್ರಗತಿಕರ ಚಿಂತಕರ ವೇದಿಕೆ ಬೀದಿಗಿಳಿದು ಪ್ರತಿಭಟಿಸಲಿಲ್ಲ. ಯಾಕೆ ಅನಂತಮೂರ್ತಿಯವರಿಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಕಂಬಾರರಿಗಿಲ್ಲವೆ. ಡಬ್ಬಿಂಗ್ ಪರವೋ ವಿರೋಧವೋ ತಮ್ಮ ಅನಿಸಿಕೆಯನ್ನು  ಹೇಳುವ ಕನಿಷ್ಟ ಅರ್ಹತೆಯೂ ಕಂಬಾರರಿಗಿಲ್ಲವೆ? ಸಿನೆಮಾದವರಿಂದಾದ ಅವಮಾನ ಕನ್ನಡ ರಂಗಭೂಮಿಗಾದ ಅವಮಾನ ಎನ್ನಿಸಲಿಲ್ಲವೆ? ಯಾಕೆ ಕಂಬಾರರು ಕನ್ನಡದ ಸ್ವಾಭಿಮಾನದ ಸಂಕೇತವೆನ್ನಿಸಲಿಲ್ಲವೆ?

ಸಾಹಿತಿಯೊಬ್ಬ ತನ್ನ ಸ್ವಯಂಕೃತ ಸಮಸ್ಯೆಯಿಂದಾಗಿ ರಾಜ್ಯಪಾಲರಿಂದ ರೋಗಿ ಅನ್ನಿಸಿಕೊಂಡರೆ ಎಲ್ಲಾ ಬಿಟ್ಟು ಪ್ರತಿಭಟಿಸಲು ಎದ್ದು ನಿಂತ ಕನ್ನಡ ರಂಗಭೂಮಿಯ ರಂಗಕರ್ಮಿಗಳಿಗೆ ಅಲ್ಲಿ ತಿಂಗಳಿಂದ ನೇಕಾರರಿಗಾಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ಪಾದಯಾತ್ರೆ ಮಾಡುತ್ತಿರುವ ರಂಗಕರ್ಮಿ ಪ್ರಸನ್ನ ಕಾಣಿಸುತ್ತಿಲ್ಲವೇ. ಹೆಗ್ಗೋಡಿನಲ್ಲಿ ಉಪವಾಸ ಕೂತ ಪ್ರಸನ್ನನವರಿಗೆ ಬೆಂಬಲಿಸಿ ಹಾಗೂ ಸರಕಾರದ ದೋರಣೆಯನ್ನು ವಿರೋಧಿಸಿ ರಂಗಕರ್ಮಿಗಳೆಲ್ಲಾ ಸೇರಿ ಪ್ರತಿಭಟಿಸಬೇಕು ಎಂದೂ ಅನ್ನಿಸಲಿಲ್ಲವೇ.

ಇದೇ ರೀತಿ ಬಿಜೆಪಿ ಸರಕಾರವಿದ್ದಾಗ ಧಾರವಾಡ ಮತ್ತು ಶಿವಮೊಗ್ಗ ರಂಗಾಯಣಗಳಿಗೆ ನಿರ್ದೇಶಕರನ್ನು ಆಯ್ಕೆ ಮಾಡಬೇಕಾಗಿತ್ತು. ಆಗ ರಂಗಸಮಾಜ ತಲಾ ಮೂರು ಮೂರು ಹೆಸರುಗಳನ್ನು ಸರಕಾರಕ್ಕೆ ಶಿಪಾರಸ್ಸು ಮಾಡಿತ್ತು. ಮೂವರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಸರಕಾರದ ಕೆಲಸವಾಗಿತ್ತು. ಅದು ರಂಗಾಯಣದ ಬೈಲಾದಲ್ಲೇ ಇದೆ. ಆದರೆ ಬೈಲಾವನ್ನು ಉಲ್ಲಂಘಿಸಿ, ರಂಗಸಮಾಜವನ್ನು ನಿರ್ಲಕ್ಷಿಸಿದ ಬಿಜೆಪಿ ಸರಕಾರ ಶಿವಮೊಗ್ಗಕ್ಕೆ ಆರ್ಎಸ್ಎಸ್ ಮೂಲದ ಹೋ.ನಾ.ಸತ್ಯರವರನ್ನು ನಿರ್ದೇಶಕರನ್ನಾಗಿ ನಿಯಮಿಸಿತು. ಹಾಗೆಯೇ ಧಾರವಾಡ ರಂಗಾಯಣಕ್ಕೆ ಸುಭಾಷ್ ನರೇಂದ್ರರವರನ್ನು ನಿರ್ದೇಶಕರನ್ನಾಗಿ ಹೇರಿತು. ಒಳಗುಟ್ಟು ಏನೆಂದರೆ ಆಗ ಮುಖ್ಯಮಂತ್ರಿಯಾಗಿದ್ದ  ಶೆಟ್ಟರ್ರವರ ಕ್ಲಾಸಮೆಂಟ್ ಆಗಿದ್ದವರು ನರೇಂದ್ರ. ರಂಗಾನುಭವಕ್ಕಿಂತಲೂ ಸ್ನೇಹ ಮಾತ್ರ ಅಲ್ಲಿ ನರೇಂದ್ರರವರನ್ನು ಧರವಾಡ ರಂಗಾಯಣದ ಗದ್ದಿಗೆ ಮೇಲೆ ಕೂಡಿಸಿತ್ತು.  ರಂಗಸಮಾಜವನ್ನೇ ದಿಕ್ಕರಿಸಿ ಕಾನೂನು ಬಾಹಿರವಾಗಿ ನಿರ್ದೇಶಕರನ್ನು ಆಯ್ಕೆ ಮಾಡಿದ ಕ್ರಮವನ್ನು ರಂಗಕರ್ಮಿಗಳು ವಿರೋಧಿಸಬೇಕಾಗಿತ್ತು. ಸಾಂಕೇತಿಕವಾಗಿಯಾದರೂ ಪ್ರತಿಭಟಿಸಬೇಕಾಗಿತ್ತು. ರಂಗಸಮಾಜ ಎನ್ನುವುದಾದರೂ ವಿರೋಧಿಸಬೇಕಿತ್ತು. ಆದರೆ ರಂಗಾಯಣಕ್ಕೂ ನಮಗೂ ಸಂಬಂಧವೇ ಇಲ್ಲಾ ಎನ್ನುವ ಹಾಗೆ ರಂಗಕರ್ಮಿಗಳು ಸರಕಾರದ ಲೋಪವನ್ನು ನಿರ್ಲಕ್ಷಿಸಿದರು. ನಂತರ ಎರಡೂ ರಂಗಾಯಣಗಳು ಯಾವುದೇ ದೃಷ್ಟಿಕೋನ ಇಲ್ಲದೇ ಅನನುಭವಿಗಳ ನಾಯಕತ್ವದಲ್ಲಿ ದಿಕ್ಕೇಡಿಗಳಾದವು.

ಧಾರವಾಡ ರಂಗಾಯಣಕ್ಕೆ ರಂಗಸಮಾಜದಿಂದ ನಾಮಿನೇಟ್ ಆಗಿದ್ದ ಗಂಗಾಧರಸ್ವಾಮಿ, ಪ್ರಕಾಶ ಗರುಡ ಮತ್ತು ಗೋಪಾಲಕೃಷ್ಣ ನಾಯರಿಯವರು ಕೋರ್ಟಿನಲ್ಲಿ ಚಾಲೆಂಜ್ ಮಾಡಿದರು. ಸರಕಾರದ ವಿರುದ್ಧ ಧಾವೆ ಹೂಡಿದರು. ಆದರೆ ನ್ಯಾಯಾಲಯ ಅದು ಮುಖ್ಯಮಂತ್ರಿಯ ಪರಮಾಧಿಕಾರ ಎಂದು ಜಜ್ಮೆಂಟ್ ನೀಡಿ ಕೇಸನ್ನು ಬರಕಾಸ್ತಮಾಡಿತು. ಆಗಲೂ ಸಹ ರಂಗಸಮಾಜವಾಗಲಿ, ರಂಗಕರ್ಮಿಗಳಾಗಲೀ ಮೂರು ಜನ ರಂಗಾಯಣಕ್ಕೆ ನಾಮಿನೇಟ್ ಆಗಿದ್ದ ರಂಗಕರ್ಮಿಗಳ ಸಹಾಯಕ್ಕೆ ಬರಲಿಲ್ಲ. ಸಣ್ಣ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿಲ್ಲ ಹಾಗೂ ಸರಕಾರದ ಮೇಲೆ ಒತ್ತಡವನ್ನೂ  ಹೇರಲಿಲ್ಲ. ಹೀಗಾಗಿ ಕೆಲವು ರಂಗಕರ್ಮಿಗಳಿಗೆ ಅನ್ಯಾಯವಾಯಿತು. ಹಲವು ಅವಕಾಶವಾದಿ ರಂಗಕರ್ಮಿಗಳ ಬಣ್ಣ ಬಯಲಾಯಿತು.

ರಂಗಭೂಮಿಗೆ ಅನ್ಯಾಯವಾದಾಗ, ರಂಗಕರ್ಮಿಗಳಿಗೆ ತೊಂದರೆಯಾದಾಗ, ನಾಟಕಕಾರರಿಗೆ ತೀವ್ರ ಅವಮಾನವಾದಾಗ ಎಂದೂ ಪ್ರತಿಭಟಿಸದ ನಮ್ಮ ಸೋ ಕಾಲ್ಡ್ ರಂಗಕರ್ಮಿಗಳು ಅನಂತಮೂರ್ತಿಯವರಿಗೆ ಸಕಾರಣವಾಗಿ ರೋಗಿ ಅಂದಿದ್ದಕ್ಕೆ ಬೀದಿಗಿಳಿದು ಪ್ರತಿಭಟಿಸಿದರು. ಹಿಂದೆ ಮುಂದೆ ಏನೂ ಗೊತ್ತಿಲ್ಲದ ಡಾ.ಮರುಳಸಿದ್ದಪ್ಪ, ಡಾ.ವಿಜಯಮ್ಮನಂತಹ ಸೂಕ್ಷ್ಮ ಪ್ರಜ್ಞೆಯುಳ್ಳ ಹಲವರನ್ನು ದಿಕ್ಕುತಪ್ಪಿಸಿ ಪ್ರತಿಭಟನೆಗೆಳೆತಂದರು. ಇದರ ಹಿಂದಿರುವ ಹುನ್ನಾರವಾದರೂ ಏನು? ಪ್ರತಿಭಟನೆಯಿಂದ ಯಾರಿಗೆ ಏನಾಗಬೇಕಿದೆ?

ಉತ್ತರ ಬಹಳ ಮಾರ್ಮಿಕವಾಗಿದೆ. ಅದು ಸ್ವಾರ್ಥ ಸಾಧನೆ. ಕಪ್ಪಣ್ಣನಂತವರು ಸ್ವಾರ್ಥವಿಲ್ಲದಿದ್ದರೆ ಏನನ್ನೂ ಮಾಡುವುದಿಲ್ಲ. ಇಂತಹ ಕೆಲವರು ಪ್ರತಿಭಟನೆ ಆಯೋಜನೆ ಮಾಡುತ್ತಿದ್ದಾರೆಂದಮೇಲೆ ಏನೋ ಸ್ವಾರ್ಥ ಇರಲೇಬೇಕು. ಅದು ಏನು? ಅಧಿಕಾರದ ಹಪಾಹಪಿ ಇಲ್ಲವೇ ಅಧಿಕಾರಕ್ಕೆ ಹತ್ತಿರವಾಗುವ ತಂತ್ರ. ಸಿಎಂ ಸಿದ್ದರಾಮಯ್ಯನವರು ಮೊದಲಿನಿಂದ ಕೆಲವು ಸಾಹಿತಿಗಳನ್ನು ಬುದ್ಧಿಜೀವಿಗಳನ್ನು ಗೌರವಿಸುತ್ತಾರೆ. ವಿಚಾರವಾದಿಗಳ ಸಲಹೆ ಪಡೆಯುತ್ತಾರೆ. ಅವರು ಜೆಡಿಎಸ್ನಿಂದ ಹೊರಬಂದಾಗಲೂ ಇದೇ ಬುದ್ದಿಜೀವಿಗಳ ಸಲಹೆ ಪಡೆದು ಕಾಂಗ್ರೆಸ್ಗೆ ಹೋಗಿದ್ದರು. ಸಿಎಂ ಆದ ತಕ್ಷಣ ಮೊದಲು ಬೆಟ್ಟಿ ಯಾಗಿದ್ದೇ ಬುದ್ದಿ ಜೀವಿಗಳನ್ನು. ಕನ್ನಡಕ್ಕೊಂದು ಸಾಂಸ್ಕೃತಿಕ ನೀತಿಯನ್ನು ನಿರೂಪಿಸಲು ನಿಯಮಿಸಿದ್ದೂ ಬರುಗೂರು ಮತ್ತು ಇತರ ಬುದ್ದಿಜೀವಿಗಳನ್ನು. ಜೊತೆಗೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡುವ ತಂಡದ ಅಧ್ಯಕ್ಷತೆ ಕೊಟ್ಟಿದ್ದು ಅನಂತಮೂರ್ತಿಯವರಿಗೆ. ಹೀಗಾಗಿ ಅನಂತಮೂರ್ತಿ ಹೇಳಿದ್ದು ಸಿಎಂ ಹತ್ತಿರ ನಡೆಯುತ್ತದೆ. ಅವರ ಮಾತಿಗೆ ಕಿಮ್ಮತ್ತಿದೆ ಎಂದು ಯಾವಾಗ ಗೊತ್ತಾಯಿತೋ ನಮ್ಮ ಕೆಲವು ಅವಕಾಶವಾದಿ ರಂಗಕರ್ಮಿಗಳು ಅವರ ಹಿಂದೆ ಬಿದ್ದರು. ಹೊಗಳಲು ಶುರುಮಾಡಿದರು. ಮುಂದೆ ಬರುವ ಅಕಾಡೆಮಿಗಳ ಅಧ್ಯಕ್ಷರ ಹಾಗೂ ಸದಸ್ಯರ ಆಯ್ಕೆಯನ್ನು ತಮ್ಮ ಮೂಗಿನ ನೇರಕ್ಕೆ ಮಾಡಿಕೊಳ್ಳುವ ದಾವಂತ ಅವರದು. ತಮಗೆ ಅನುಕೂಲವಾದವರನ್ನು ಆಯ್ಕೆ ಮಾಡಿಸಿಕೊಂಡು ನಂತರ ವಾರ್ಷಿಕವಾಗಿ ನಡೆಯುವ ಪ್ರಶಸ್ತಿ ಆಯ್ಕೆ ಸಂದರ್ಭದಲ್ಲಿ ತಮಗಾಗದವರನ್ನು ದೂರವಿಟ್ಟು ತಮಗೆ ಬೇಕಾದವರಿಗೆ ಪ್ರಶಸ್ತಿ ಕೊಡಿಸುವ ದೂರದೃಷ್ಟಿ ಇವರದು.

ಉಮಾಶ್ರಿಯವರನ್ನಿಟ್ಟುಕೊಂಡು ರಂಗರಾಜಕೀಯ ಮಾಡಬೇಕೆಂದು ರಂಗಭೂಮಿಯ ಗುತ್ತಿಗೆದಾರರು ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ಇಲ್ಲಿವರೆಗೂ ಅಕಾಡೆಮಿಗಳ ಅಧ್ಯಕ್ಷರ ಪಟ್ಟಿಗೆ ಸಹಿ ಹಾಕಿಸುವ ಕೆಲಸ ಆರು ತಿಂಗಳಿಂದ ಸಂಸ್ಕೃತಿ ಇಲಾಖೆಯ ಮಂತ್ರಿಣಿಗೆ ಆಗುತ್ತಿಲ್ಲ. ಸಿಎಂ ಅದಕ್ಕೆ ಅವಕಾಶ ಕೊಡುತ್ತಿಲ್ಲ. ಯಾವಾಗ ಉಮಾಶ್ರೀಯವರಿಂದ ತಮ್ಮ ಕೆಲಸ ಆಗುವುದಿಲ್ಲ ಎಂದು ಗೊತ್ತಾಯಿತೋ ಆಗ ಸಿಎಂಗೆ ಹತ್ತಿರವಾದ ಅನಂತಮೂರ್ತಿಯವರು ಸರಿಯಾದ ವ್ಯಕ್ತಿ ಎಂಬುದನ್ನು ಸಾಂಸ್ಕೃತಿಕ ಸಂಘಟಕರು ಕಂಡುಕೊಂಡರು. ಅವರಿಗೆ ಹತ್ತಿರವಾಗಲು ಪ್ರಯತ್ನಿಸತೊಡಗಿದರು. ಅವರ ಕೆಲಸಕ್ಕೆ ಪೂರಕವೆನ್ನುವಂತೆ ರಾಜ್ಯಪಾಲರ ರೋಗಿ ಪ್ರಕರಣ ಸಿಕ್ಕಿತು. ಇನ್ನೇಕೆ ತಡ ಎಂದುಕೊಂಡು ಮೂಲೆಗುಂಪಾಗಿದ್ದ ಬ್ಯಾನರಗಳನ್ನು ಸಿದ್ದಗೊಳಿಸಿ ಮೂರೇ ದಿನದಲ್ಲಿ ಅನಂತಮೂರ್ತಿಗಳ ಪರವಾಗಿ ಪ್ರತಿಭಟನೆಯನ್ನು ಆಯೋಜಿಸಿದರು. ಕಪ್ಪಣ್ಣ, ನಾಗರಾಜಮೂರ್ತಿ ಮತ್ತು ಇನ್ನೂ ಕೆಲವು ಕಪ್ಪಣ್ಣನಿಂದ ಹಿಂದೆ ಫಲಾನುಭವಿಯಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಏನೂ ಗೊತ್ತಿಲ್ಲದ ಹಲವು ಜನ ಸಾಹಿತಿ ಕಲಾವಿದರು ರಾಜಕಾರಣಿಯಿಂದ ಸಾಹಿತಿಗೆ ಅವಮಾನವಾಗಿದೆ ಎಂದುಕೊಂಡು ಪ್ರತಿಭಟನೆಯಲ್ಲಿ ಸೇರಿದ್ದರು. ನಾಗರಾಜಮೂರ್ತಿಯವರು ರಾಜ್ಯವ್ಯಾಪಿ ಹೋರಾಟ ಹಮ್ಮಿಕೊಳ್ಳುವುದಾಗಿ ಗುಡುಗಿದರು. ಘೋಷಣೆಗಳನ್ನು ಕೂಗಿದರು. ವಾಹಿನಿಗಳ ಕ್ಯಾಮಾರಾಗಳ ಮುಂದೆ ಪೋಸ್ ಕೊಟ್ಟರು. ಅನಂತಮೂರ್ತಿಯವರು ಎಲ್ಲೇ ಇದ್ದರೂ ಟಿವಿ ಮೂಲಕವಾದರೂ ತಮ್ಮ ಉಗ್ರ ಹೋರಾಟವನ್ನು ನೋಡಬೇಕು. ಭಾವಪರವಶರಾಗಿ ತಮ್ಮ ಕೃಪಾಕಟಾಕ್ಷವನ್ನು ಬೀರಬೇಕು. ಮುಂದೆ ತಮ್ಮ ಬೇಳೆ ಅನಂತಮೂರ್ತಿಯವರ ಆಶೀರ್ವಾದದಿಂದ ಬೇಯಬೇಕು....ಎನ್ನುವುದು ಪ್ರತಿಭಟನೆಯ ಹಿಂದಿರುವ ಹಿಡನ್ ಅಜೆಂಡಾ.

ಇದಕ್ಕೆ  ರಂಗರಾಜಕೀಯ ಎನ್ನುವುದು. ಇಂದಿನದಲ್ಲ ಮುಂದಾಗುವುದರ ಮೇಲೆ ಗಮನ ಇಟ್ಟುಕೊಂಡು ಎಲ್ಲೆಲ್ಲಿ ಏನೇನು ಮಾಡಿದರೆ ತಮ್ಮ ಸ್ವಾರ್ಥ ಸಾಧನೆ ಸಾಧ್ಯವಾಗುತ್ತದೆ ಎನ್ನುವುದನ್ನು ಖರಾರುವಕ್ಕಾಗಿ ಗುರುತಿಸಿ ಅದಕ್ಕಾಗಿ ಪ್ರಯತ್ನಿಸುವ ಹಿಂದಿರುವ ರಹಸ್ಯ ಕೆಲವರಿಗೆ ಮಾತ್ರ ಗೊತ್ತು. ಆದರೆ ಹಲವಾರು ಜನ ಸಾಹಿತಿ ಕಲಾವಿದರು ಬೆರಳೆಣಿಕೆಯಷ್ಟು ಸಾಂಸ್ಕೃತಿಕ ರಾಜಕಾರಣಿಗಳು ಆಡುವ ಪ್ರತಿಭಟನೆಯ ಆಟಕ್ಕೆ ಕಾಯಿಗಳಾಗುತ್ತಾರೆ ಎನ್ನುವುದೇ ವಿಪರ್ಯಾಸ. 

                                                          -ಶಶಿಕಾಂತ ಯಡಹಳ್ಳಿ      
    
         
                      
             
               


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ