ಚಿತ್ರದುರ್ಗಕೋಟೆಯ ಹಿಂದಿರುವ ಐತಿಹಾಸಿಕ
ಘಟನೆಗಳನ್ನಾಧರಿಸಿ ತರಾಸು ರವರು ಬರೆದ ಬ್ರಹತ್ ಕಾದಂಬರಿ ‘ದುರ್ಗಾಸ್ತಮಾನ’, ಒಟ್ಟು ಆರುನೂರಾ ಎಂಬತ್ತು ಪುಟಗಳ ಗ್ರಂಥವಿದು. ಇದನ್ನು ಓದುವುದೇ ಒಂದು ಸಾಹಸ. ಇನ್ನು ನಾಟಕಮಾಡುವುದು ಮಹಾಸಾಹಸ. ಈ ಕಾದಂಬರಿಯಲ್ಲಿ ಅನೇಕ ಪಾಳೆ ಪಟ್ಟುಗಳ ಅಂತರ್ಕಲಹದ ವಿವರಗಳು ಒಂದಕ್ಕೊಂದು ತಳುಕು ಹಾಕಿಕೊಂಡಿವೆ. ಅತ್ತ ಹೈದರ ಅಲಿ ಇತ್ತ ಮರಾಠರ ದೈತ್ಯಶಕ್ತಿಯ ಎದುರು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹರಸಾಹಸ ಮಾಡುವ ದುರ್ಗದ ಪಾಳೆಗಾರ ಮದಕರಿ ನಾಯಕರ ಕುರಿತ ವಿವರಗಳಿವೆ. ದ್ರೋಹ ವಿದ್ರೋಹ ವಿಶ್ವಾಸದ್ರೋಹಗಳ ಸರಮಾಲೆಯೇ ಇದೆ. ಇವೆಲ್ಲವನ್ನೂ ಅಕ್ಷರ ಮಾಧ್ಯಮದಲ್ಲಿ ಹಿಡಿದಿಡಬಹುದಾಗಿದೆ ಆದರೆ ರಂಗಮಾಧ್ಯಮದ ಇತಿ ಮಿತಿಗಳಲ್ಲಿ ‘ದುರ್ಗಾಸ್ತಮಾನ’ ಕಾದಂಬರಿಯನ್ನು ನಾಟಕವನ್ನಾಗಿಸುವುದು ಅಷ್ಟೊಂದು ಸುಲಭಸಾಧ್ಯವಲ್ಲ.
ಹಿಂದೊಮ್ಮೆ ಮೈಸೂರಿನ ಅಮರಕಲಾಸಂಘಕ್ಕೆ ಹೆಚ್.ಎಸ್.ಉಮೇಶರವರು ಹಾಗೂ ಚಿತ್ರದುರ್ಗದ ರಂಗತಂಡವೊಂದಕ್ಕೆ ಅಶೋಕ ಬಾದರದಿನ್ನಿಯವರು ಈ ‘ದುರ್ಗಾಸ್ತಮಾನ’ ಕಾದಂಬರಿಯನ್ನು ರಂಗರೂಪಗೊಳಿಸಿ ನಿರ್ದೇಶಿಸಿದ್ದರಾದರೂ ಹೆಚ್ಚು ಪ್ರಯೋಗಗಳಾಗಲಿಲ್ಲ. ಈಗ ಮತ್ತೆ ಅಂತಹ ಸಾಹಸವನ್ನು ಹೊಸಕೋಟೆಯ ‘ಜನಪದರು’ ರಂಗತಂಡ ಮಾಡಿದೆ. ತರಾಸುರವರ ಕಾದಂಬರಿಯನ್ನು ರಂಗರೂಪಕ್ಕೆ ತರಲು ವರ್ತೂರು ಸುರೇಶ್ ತುಂಬಾನೆ ಶ್ರಮಿಸಿದ್ದಾರೆ. ಇದನ್ನು ನಿರ್ದೇಶಿಸುವ ಸಾಹಸಕ್ಕೆ ತೊಡಗಿದ್ದು ಪ್ರಸಾದನ ತಜ್ಞ ರಾಮಕೃಷ್ಣ ಬೆಳ್ತೂರು. ರವೀಂದ್ರ ಕಲಾಕ್ಷೇತ್ರ-50 ರ ಸುವರ್ಣ ಸಂಭ್ರಮದಲಿ ನಾಟಕ ಬೆಂಗಳೂರು ಆಯೋಜಿಸಿದ ಮೂರನೆಯ ಕಂತಿನ ನಾಟಕೋತ್ಸವದಲ್ಲಿ 2014, ಫೆಬ್ರವರಿ 12ರಂದು ‘ದುರ್ಗಾಸ್ತಮಾನ’ ನಾಟಕವು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡಿತು.
ಹೆಚ್.ಎಸ್.ಉಮೇಶರವರು ದುರ್ಗಾಸ್ತಮಾನ ಕಾದಂಬರಿಯಲ್ಲಿ ಬರುವ ಮದಕರಿನಾಯಕನ ವ್ಯಯಕ್ತಿಕ ಬದುಕನ್ನು ಕೇಂದ್ರವಾಗಿಸಿಕೊಂಡು ನಾಟಕವನ್ನು ಪ್ರಸ್ತುತ ಪಡಿಸಿದ್ದರು, ಹಾಗೆಯೇ ಬಾದರದಿನ್ನಿಯವರು ‘ದುರ್ಗಾಸ್ತಮಾನ’ ಕಾದಂಬರಿಯನ್ನು ಸಮಗ್ರವಾಗಿ ಪರಿಗಣಿಸಿ ಸಂಕ್ಷಿಪ್ತವಾಗಿ ನಾಟಕದಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದರು. ಆದರೆ ರಾಮಕೃಷ್ಣ
ಬೆಳ್ತೂರರವರು ನಿರ್ದೇಶಿಸಿದ ಪ್ರಸ್ತುತ ನಾಟಕದಲ್ಲಿ ‘ದುರ್ಗಾಸ್ತಮಾನ’ ಕಾದಂಬರಿಯ ರಾಜಕೀಯ ಆಯಾಮಗಳನ್ನು ಕುರಿತು ಹೇಳುವ ಪ್ರಯತ್ನವನ್ನು ಮಾಡಲಾಗಿದೆ.
ಹಿರಿಯ ಮದಕರಿನಾಯಕ ಯುದ್ಧದಲ್ಲಿ ಮಡಿದ ಮೇಲೆ ಆತನ ಮಗ ಕಸ್ತೂರಿ ರಂಗಪ್ಪ ನಾಯಕ ಚಿತ್ರದುರ್ಗದ ಪಾಳೆಗಾರಿ ಪಟ್ಟಕ್ಕೆ ದೊರೆಯಾಗುತ್ತಾನೆ. ಆತನೂ ಯುದ್ದದಲ್ಲಿ ಮಡಿದ ಮೇಲೆ ದೊರೆಪಟ್ಟಕ್ಕೆ ಸಂತಾನ ಇಲ್ಲವಾಗುತ್ತದೆ. ಮದಕರಿನಾಯಕನ ಧರ್ಮಪತ್ನಿ ಓಬವ್ವ ನಾಗತಿಯು ಸಾಮಂತ ಪಾಳೆಗಾರ ಜಾನಕಲ್ ಬರಮಣ್ಣನಾಯಕನ ಮಗನನ್ನು ಉತ್ತರಾಧಿಕಾರಿಯಾಗಿ ಆಯ್ಕೆಮಾಡುತ್ತಾಳೆ. ಆತನೇ ಬಿಚ್ಚುಗತ್ತಿ ಮದಕರಿನಾಯಕ. ತನ್ನ ತಮ್ಮ ಪರಶುರಾಮನ ಜೊತೆಗೆ ಸೇರಿ ತನ್ನ ಪರಾಕ್ರಮ ಹಾಗೂ ಬುದ್ದಿಶಕ್ತಿಯಿಂದ ಅಕ್ಕಪಕ್ಕದ ಶತ್ರುಗಳನ್ನು ಮಟ್ಟಹಾಕುತ್ತಾನೆ. ಪ್ರಧಾನಿ ನರಸಪ್ಪನಾಯಕ ಮಾರ್ಗದರ್ಶನ ಮಾಡುತ್ತಾನೆ. ಅನಿವಾರ್ಯವಾಗಿ ಹೈದರಾಲಿಯೊಂದಿಗೆ ರಾಜಿಮಾಡಿಕೊಳ್ಳುತ್ತಾನಾದರೂ ಹೈದರನ ವಿಶ್ವಾಸದ್ರೋಹದಿಂದ ವಿಚಲಿತನಾಗಿ ಮರಾಠಿಗರ ಮೈತ್ರಿಯನ್ನು ಒಪ್ಪಿಕೊಳ್ಳುತ್ತಾನೆ. ಇದರಿಂದ ಕೆರಳಿದ ಹೈದರಾಲಿ ಮದಕರಿಯ ಕೋಟೆಗೆ ಲಗ್ಗೆ ಇಡುತ್ತಾನೆ. ಮರಾಠರು ಸಹಾಯಕ್ಕೆ ಬರದೇ ದ್ರೋಹ ಬಗೆಯುತ್ತಾರೆ. ಕೋಮುವಿಷಬೀಜ ಬಿತ್ತಿದ್ದರಿಂದಾಗಿ ದುರ್ಗದ ಮುಸ್ಲಿಮರು ಮದಕರಿಯ ವಿರುದ್ದವೇ ತಿರುಗಿ ಬೀಳುತ್ತಾರೆ. ಪ್ರಧಾನಿ ನಿವೃತ್ತನಾಗಿ ಮಾರ್ಗದರ್ಶನ ಕೊಡಲು ನಿರಾಕರಿಸುತ್ತಾನೆ. ಹೆಣ್ಣು ಕೊಟ್ಟ ಮಾವನೇ ಶತ್ರುಗಳ ಜೊತೆ ಸೇರಿಕೊಳ್ಳುತ್ತಾನೆ. ಹೀಗೆ ಎಲ್ಲಾ ದಿಕ್ಕಿನಿಂದಲೂ ವಿದ್ರೋಹಗಳಿಗೆ ಬಲಿಯಾದ ಮದಕರಿನಾಯಕ ಹೈದರನ ಸೈನ್ಯದ ವಿರುದ್ಧ ಹೋರಾಡುತ್ತಲೇ ಅಸುನೀಗುತ್ತಾನೆ. ಇಲ್ಲಿಗೆ ದುರ್ಗದ ಪಾಳೆಗಾರಿಕೆ ಕೊನೆಗೊಳ್ಳುತ್ತದೆ. ದುರ್ಗಾಸ್ತಮಾನವಾಗುತ್ತದೆ.
ಇದು ದುರ್ಗಾಸ್ತಮಾನ ನಾಟಕದ ಸಂಕ್ಷಿಪ್ತ ಕಥೆ. ನಾಟಕದಾದ್ಯಂತ ರಾಜಕೀಯ ಶಡ್ಯಂತ್ರಗಳು, ತಂತ್ರ-ಪ್ರತಿತಂತ್ರ-ಕುತಂತ್ರಗಳು ವಿಜ್ರಂಭಿಸುತ್ತವೆ. ಯದ್ದದಾಹವೊಂದೇ ಇಡೀ ನಾಟಕದ ಉದ್ದೇಶವಾದಂತಿದೆ. ಯಾವುದೇ ಸಾಮಾಜಿಕ ಆಶಯವನ್ನು ಹೇಳದ ಈ ನಾಟಕ ರಾಜರುಗಳ, ಪಾಳೆಗಾರರ ರಕ್ತಪಿಪಾಸುತನವನ್ನು ಬಯಲುಗೊಳಿಸುತ್ತದೆ. ಓಬವ್ವ ನಾಗತಿ ತನ್ನ ಗಂಡ ಸತ್ತ ನಂತರ ಹದಿಹರೆಯದ ಮಗನನ್ನು ಇಟ್ಟುಕೊಂಡು ಮಹಿಳೆಯರದೆ
ಪಡೆ ಕಟ್ಟಿ ತನ್ನ ಸರಹದ್ದನ್ನು ಉಳಿಸಿಕೊಳ್ಳುತ್ತಾಳೆ. ಪಾಳೆಗಾರ ಪಟ್ಟದ ಉತ್ತರಾಧಿಕಾರಿಗೆ ಆಕೆ ಹೇಳುವ ಮಾತುಗಳು ಕ್ರೌರ್ಯದ ಅತಿಶಯವೆನ್ನುವಂತಿದೆ. “ಗೆಲ್ಲಬೇಕಾದರೆ ರಕ್ತ ಹರಿಯಲೇಬೇಕು, ರಕ್ತ ನೀರಿಗಿಂತ ಅಗ್ಗವಾಗಬೇಕು” ಎಂದು ಮದಕರಿಯನ್ನು ಪ್ರಚೋದಿಸುತ್ತಾಳೆ. “ಕಲ್ಲಿನ ಪೆಟ್ಟಿಗೆಯೊಳಗಿನ ಮಲ್ಲಿಗೆ ಹೂವಂತೆ ಮನುಷ್ಯತ್ವ ಇರಬೇಕು” ಎಂದೂ ಸಲಹೆ ಕೊಡುತ್ತಾಳೆ. ಅದರಂತೆಯೇ ಮದಕರಿ ನಡೆದುಕೊಳ್ಳುತ್ತಾನೆ. ರಕ್ತವನ್ನು ಹರಿಸುತ್ತಾನೆ. ವಿರೋಧಿಗಳನ್ನು ಕ್ರೂರವಾಗಿ ಶಿಕ್ಷಿಸುತ್ತಾನೆ. ಕೊನೆಗೆ ಯುದ್ದದಲ್ಲಿ ತನ್ನ ರಕ್ತವನ್ನೂ ಹರಿಸಿ ಕೊನೆಯುಸಿರೆಳೆಯುತ್ತಾನೆ. ರಕ್ತಕ್ಕೆ ರಕ್ತ ಎನ್ನುವ ಸಿದ್ದಾಂತದಿಂದ ಹಿಂಸೆಯನ್ನಲ್ಲದೇ ಬೇರೇನನ್ನೂ ಸಾಧಿಸಲು ಸಾಧ್ಯವಿಲ್ಲ ಎನ್ನುವುದನ್ನು ಈ ನಾಟಕ ಪರೋಕ್ಷವಾಗಿ ತೋರಿಸಿಕೊಡುತ್ತದೆ. ಆದರೆ ಪ್ರತ್ಯಕ್ಷವಾಗಿ ಹಿಂಸೆಯನ್ನೇ ವೈಭವೀಕರಿಸುತ್ತದೆ.
ನಾಟಕದ ಆರಂಭದಲ್ಲಿ ಬರುವ ಸೂತ್ರದಾರರು “ತರಾಸುರವರ ಬ್ರಹತ್ ಕಾದಂಬರಿಯ ಸಾಗರದಿಂದ ಕೆಲವೊಂದು ಮುತ್ತುಗಳನ್ನಾಯ್ದು ತಂದಿದ್ದೇವೆ. ಇವುಗಳು ಮುತ್ತುಗಳನ್ನಾಗಿಯಾದರೂ ಸ್ವೀಕರಿಸಿ ಇಲ್ಲವೇ ಉಪ್ಪಿನ ಹರಳುಗಳನ್ನಾಗಿಯಾದರೂ ತೆಗೆದುಕೊಂಡು ತಿನ್ನುವ ಅನ್ನಕ್ಕೆ ಬೆರೆಸಿಕೊಳ್ಳಿ” ಎಂದು ಪ್ರೇಕ್ಷಕರಲ್ಲಿ ನಿವೇದನೆಯನ್ನು ಮಾಡಿಕೊಳ್ಳುತ್ತಾನೆ. ಈ ನಾಟಕವನ್ನು ನೋಡಿದವರಿಗೆ ಉಪ್ಪಿನ ಹರಳುಗಳೂ ಸಹ ರುಚಿಸದೇ ಹೋಗಿದ್ದೊಂದು ವಿಪರ್ಯಾಸ. ನಾಟಕವನ್ನು ನೋಡಿದಂತೆಲ್ಲಾ ಮುತ್ತೂ ದಕ್ಕಲಿಲ್ಲ, ಉಪ್ಪಿನ ರುಚಿಯೂ ಸಿಕ್ಕಲಿಲ್ಲ ಎಲ್ಲಾ ಕೇವಲ ಸಪ್ಪೆಯೆನಿಸಿತು. ಇಡೀ ನಾಟಕ ಸಿಕ್ಕಾಪಟ್ಟೆ ಬೋರು ಹೊಡಿಸಿತು.
ಇಡೀ ನಾಟಕ ಲೋ ಬಜೆಟ್ ರಂಗಪ್ರಯೋಗವೆನಿಸಿತು. ನಿರ್ದೇಶಕರು ಎಲ್ಲಾ ವಿಭಾಗಗಳಲ್ಲೂ ಸಿಕ್ಕಾಪಟ್ಟೆ ರಾಜಿಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಾಣುವಂತಿತ್ತು. ರಂಗವಿನ್ಯಾಸ ಮತ್ತು ವಸ್ತ್ರವಿನ್ಯಾಸಗಳಲ್ಲಿ ಒಂಚೂರು ಶ್ರೀಮಂತಿಕೆ ಇರಲಿಲ್ಲ. ಮದಕರಿ ನಾಯಕನಿಗೆ ಹಾವು ಆಡಿಸುವವರು ಹಾಕಿಕೊಳ್ಳುವ ಲುಂಗಿಯ ಹಾಗಿರುವ ಸೀರೆಯ ತುಂಡನ್ನು ಉಡಿಸಿದ್ದು ಆಭಾಸಕಾರಿಯಾಗಿತ್ತು. ಬ್ಲಾಕಿಂಗ್ ಮತ್ತು ಮೂವಮೆಂಟ್ಗಳ ಸಂಯೋಜನೆಯತ್ತ ಇನ್ನೂ ಹೆಚ್ಚು ಗಮನಕೊಡಬೇಕಿತ್ತು. ಇಂತಹ ಐತಿಹಾಸಿಕ ನಾಟಕವನ್ನು ತೆಗೆದುಕೊಳ್ಳುವಾಗ ಭಾರಿ ಸಿದ್ದತೆಯ ಅಗತ್ಯತೆ ಬೇಕಾಗುತ್ತದೆ. ಆದರೆ ಇಲ್ಲಿ ಎಲ್ಲದಕ್ಕೂ ಕೊರತೆ ಕಂಡುಬಂದಿತು. ಇದನ್ನು ಪ್ರದರ್ಶನ ಎನ್ನುವುದಕ್ಕಿಂತಲೂ ರಿಹರ್ಸಲ್ ಎನ್ನುವುದು ಉತ್ತಮ.
ಅಂದರೆ ರಿಹರ್ಸಲ್ ಮಾದರಿಯಲ್ಲಿ ನಾಟಕವನ್ನು ರಂಗವೇದಿಕೆಯ ಮೇಲೆ ತೋರಿಸಿ ಪ್ರೇಕ್ಷಕರಿಂದ ಟಿಕೆಟ್ ಹಣ ಪಡೆಯುವುದು ಎಷ್ಟರ ಮಟ್ಟಿಗೆ ಸೂಕ್ತ ಎನ್ನವುದನ್ನು ಈ ನಾಟಕದ ರೂವಾರಿಗಳು ಯೋಚನೆ ಮಾಡಿಕೊಳ್ಳಬೇಕು.
ಅಭಿನಯದ ವಿಭಾಗದಲ್ಲಿ ಎಲ್ಲಾ ಪಾತ್ರದಾರಿಗಳಲ್ಲಿರುವ ಪ್ರತಿಭೆಯನ್ನು ಹೊರತೆಗೆಯಬಹುದಾಗಿತ್ತು. ಪಾತ್ರದ ಹಂಚಿಕೆಯಲ್ಲೇ ಹಲವು ರಾಜಿಗಳನ್ನು ಮಾಡಿಕೊಂಡಂತಿದೆ. ಮದಕರಿಯ ಪಾತ್ರದಾರಿ ಸುರೇಶ ವರ್ತೂರರು ತನ್ನ ಅಭಿನಯ ಹಾಗೂ ಗಾತ್ರದಲ್ಲಿ ಪಾತ್ರೋಚಿತವೆನಿಸಿದರಾದರೂ ಇಷ್ಟು ದೊಡ್ಡ ಹೊಟ್ಟೆಯ ವ್ಯಕ್ತಿ ವೀರ ಮದಕರಿಯಾಗಲು ಸಾಧ್ಯವಿಲ್ಲ. ಮಂತ್ರಿಯಾಗಿ ಶಿವಕುಮಾರ ನಟನೆ ತುಂಬಾ ಸಪ್ಪೆಎನಿಸಿತು. ಜಗದೀಶ ಕೆಂಗನಾಳ ಉತ್ತಮ ನಟನಾಗಿದ್ದರೂ ಅವರ ಪ್ರತಿಭೆಗೆ ತಕ್ಕ ಪಾತ್ರ ಕೊಡದೇ ಅಭಿನಯಕ್ಕೆ ಹೆಚ್ಚು ಅವಕಾಶವಿಲ್ಲದ ದಳವಾಯಿ ಪಾತ್ರ ಕೊಡಲಾಗಿತ್ತು. ಓಬವ್ವ ನಾಗತಿ ಮಾತು ಹಾಗೂ ಅಭಿನಯದಲ್ಲಿ ತುಂಬಾ ದುರ್ಬಲ ಎನ್ನಿಸಿದಳು. ಹೈದರಾಲಿ ಪಾತ್ರದಾರಿ ವೆಂಕಟಸ್ವಾಮಿಗೆ ಹೈದರಾಲಿ ಪಾತ್ರದ ಕುರಿತು ಪರಿಕಲ್ಪನೆಯೇ ಇಲ್ಲವಾಗಿದ್ದು ಬಪೂನ್ನಂತೆ ನಟಿಸಿ ಆ ಪಾತ್ರದ ಸೊಗಡನ್ನೇ ಹಾಳುಮಾಡಿದಂತೆನಿಸಿತು. ಇಂತಹ ನಾಟಕಗಳಿಗೆ ತಾಕತ್ತಿರುವ ನಟರ ಅಗತ್ಯತೆ ಇದೆ. ಅಂತವರು ಸಿಗದಿದ್ದರೆ ಸಿಕ್ಕವರನ್ನೇ ತರಬೇತಿಗೊಳಿಸಿ ತಯಾರಿಗೊಳಿಸುವ ತಾಕತ್ತನ್ನು ನಿರ್ದೇಶಕರು ಬೆಳೆಸಿಕೊಳ್ಳುವ ಅನಿವಾರ್ಯತೆ ಇದೆ.
ಸೈಕನ್ನು ಅತಿಯಾಗಿ ಬಳಸಿದ್ದರಿಂದ ಅದು ಉಂಟುಮಾಡಬೇಕಾದ ಪರಿಣಾಮದಲ್ಲಿ ವ್ಯತ್ಯಯವಾಯಿತು. ಬೆಳಕಿನ
ವಿನ್ಯಾಸದಲ್ಲಿ (ಮಂಜು ನಾರಾಯಣ) ಪರಿಣಿತಿಯ ಕೊರತೆ ಕಂಡುಬಂದಿತು. ನಟರು ಸಹ ಬೆಳಕು ಬಿಟ್ಟಲ್ಲಿ ಹೋಗಿ ನಟಿಸಬೇಕೆನ್ನುವ ಕನಿಷ್ಟ ವಿವೇಕವನ್ನು ಬೆಳೆಸಿಕೊಳ್ಳಬೇಕು. ಇಲ್ಲವೇ ನಿರ್ದೇಶಕರು ಹೇಳಿಕೊಡಬೇಕು. ರಾಮಕೃಷ್ಣ ಬೆಳ್ತೂರರು ಪ್ರಸಾದನ ಪಟುವಾಗಿದ್ದರಿಂದ ಎಲ್ಲಾ ವ್ಯಕ್ತಿಗಳನ್ನೂ ಪಾತ್ರವಾಗಿಸಿದ್ದಾರೆ. ಆದರೆ ರಂಗವಿನ್ಯಾಸ ಹಾಗೂ ವಸ್ತ್ರವಿನ್ಯಾಸದಲ್ಲಿ ತುಂಬಾ ರಾಜಿಮಾಡಿಕೊಂಡಿದ್ದಾರೆ. ಮಕ್ಕಳ ನಾಟಕಗಳನ್ನು ಸೊಗಸಾಗಿ ನಿರ್ದೇಶನ ಮಾಡಿ ಗೆದ್ದ ಬೆಳ್ತೂರು ದೊಡ್ಡವರ ನಾಟಕದ
ನಿರ್ದೇಶನದಲ್ಲೂ ಅದೇ ಪ್ರತಿಭೆಯನ್ನು ತೋರಿಸಬೇಕಾಗಿತ್ತು. ಅದ್ಯಾಕೋ ಅವಸರಕ್ಕೆ ಬಿದ್ದು ‘ದುರ್ಗಾಸ್ತಮಾನ’ವನ್ನು ಅಸ್ತವ್ಯಸ್ತಗೊಳಿಸಿದ್ದಾರೆ. ಮೇಳದಲ್ಲಿ ಕೆಲವು ವಚನಗಳನ್ನು ಬಳಸಲಾಗಿದೆಯಾದರೂ ಅವುಗಳು ದೃಶ್ಯಕ್ಕೆ ಹೇಗೆ ಪೂರಕವಾಗಿವೆ ಎನ್ನುವುದು ತಿಳಿಯುತ್ತಿಲ್ಲ. ಸಂಗೀತ ಸಂಯೋಜನೆ ಮಾಡಿದ ರಾಜಪ್ಪ ಕೋಲಾರ್ ನಾಟಕದಾದ್ಯಂತ ಕೊಟ್ಟ ಆಲಾಪಗಳು ನಾಟಕದ ದೃಶ್ಯಕ್ಕೆ ಮೂಡ್ ಹುಟ್ಟಿಸುವ ಬದಲು ನಟರ ಮಾತುಗಳನ್ನೇ ನುಂಗಿ ಹಾಕಿ ಕೇಳುಗರಿಗೆ ಕಿರಿಕಿರಿಯನ್ನುಂಟುಮಾಡಿತು. ಹೋರಾಟದ ಸನ್ನಿವೇಶಗಳು ಹಾಗೂ ಯುದ್ದದ ದೃಶ್ಯಗಳಂತೂ ಆ ದುರ್ಗದ ಉತ್ಸವಮ್ಮನಿಗೇ ಪ್ರೀತಿಯಾಗಬೇಕಷ್ಟೇ. ರಂಗಪರಿಕರಗಳ ಬಳಕೆಯಂತೂ ತುಂಬಾ ಆಭಾಸಕಾರಿಯಾಗಿತ್ತು. ಯುದ್ದ ಮಾಡುವಾಗ ವೀರ ಮದಕರಿ ಒಂದೂಕಾಲು ಅಡಿಯ ತುಂಡುಕತ್ತಿಯನ್ನಿಟ್ಟುಕೊಂಡು ಯುದ್ದ ಮಾಡುವುದನ್ನು ಊಹಿಸಲೂ ಸಾಧ್ಯವಿಲ್ಲ. ಆ ತುಂಡು ಕತ್ತಿಯೋ ಒಂದೇ ಹೊಡೆತಕ್ಕೆ ಮನಿದು ಇನ್ನಷ್ಟು ಆಭಾಸವನ್ನು ಸೃಷ್ಟಿಸಿತು.
ಸುದೀರ್ಘ ಕಾದಂಬರಿಯನ್ನು ನಾಟಕವಾಗಿಸುವಾಗ ಹಲವಾರು ಲಿಂಕ್ಗಳು ಬಿಟ್ಟು ಹೋಗಿ ನೋಡುಗರಲ್ಲಿ ಗೊಂದಲವನ್ನು ಸೃಷ್ಟಿಸಿವೆ. ಉದಾಹರಣೆಗೆ ಚಿಗುರು ಮೀಸೆಯ ಯುವಕನಾಗಿದ್ದ ಮದಕರಿ ಮುಂದಿನ ದೃಶ್ಯದಲ್ಲಿ ಭಾರೀ ಗಾತ್ರದ ಮೀಸೆಹೊತ್ತ ಗಂಡಸಾಗುತ್ತಾನೆ. ಆದರೆ ಯುವಕನಾಗಿದ್ದಾಗ ಕೆಂಪಗೆ ಇದ್ದವನು ದೊಡ್ಡವನಾದಾಗ ಕರೀ ಬಣ್ಣದ ಮದಕರಿಯಾಗಿರುತ್ತಾನೆ. ಹೀಗಾಗಿ ನೋಡುಗರಲ್ಲಿ ಅವನ್ಯಾರು ಇವನ್ಯಾರು ಎನ್ನುವ ಗೊಂದಲ ಉಂಟಾಗುತ್ತದೆ. ಇನ್ನೂ ಹಲವಾರು ಮಿಸ್ಲಿಂಕ್ಗಳು ನಾಟಕವನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ವಿಫಲವಾಗುತ್ತವೆ.
ಎರಡೂವರೆ ಗಂಟೆಯ ಈ ಸುದೀರ್ಘ ನಾಟಕವನ್ನು ಎಡಿಟ್ ಮಾಡಿದರೆ, ಯುದ್ದದ ದೃಶ್ಯಗಳನ್ನು ನೇರವಾಗಿ ತೋರಿಸುವ ಬದಲು ಸೈಕ್‌ನ ಹಿಂದೆ ನೆರಳು ಬೆಳಕಿನಲ್ಲಿ ತೋರಿಸಿದ್ದರೆ. ಪಾತ್ರೋಚಿತವಾಗಿ ನಟರನ್ನು ಆಯ್ಕೆ ಮಾಡಿ ತರಬೇತಿಗೊಳಿಸಿದ್ದರೆ, ರಂಗವಿನ್ಯಾಸವನ್ನು ದೃಶ್ಯಕ್ಕೆ ಪೂರಕವಾಗಿ ಮರುವಿನ್ಯಾಸ ಗೊಳಿಸಿದ್ದರೆ, ಪಾತ್ರಕ್ಕೆ ಪೂರಕವಾದ ವಸ್ತ್ರವಿನ್ಯಾಸವನ್ನು ಮಾಡಿದ್ದರೆ, ಬೆಳಕನ್ನು ಸಮರ್ಥವಾಗಿ ಬಳಸಿಕೊಂಡಿದ್ದರೆ, ಯುದ್ದದಾಹವನ್ನು ಹೇಳುವ ಈ ನಾಟಕದ ಸ್ಕ್ರಿಪ್ಟಲ್ಲಿ ಒಂದಿಷ್ಟು ಸಾಮಾಜಿಕ ಕಳಕಳಿಯ ಅಂಶಗಳನ್ನು ಸೇರಿಸಿದ್ದರೆ, ಹಿಂಸೆಯ ಅನಿವಾರ್ಯತೆ ಮತ್ತು ಯುದ್ದದ ನಿರರ್ಥಕತೆಯನ್ನು ನಾಟಕದಲ್ಲಿ ತಿಳಿಸಿದ್ದರೆ. ನಾಟಕದ ನಿರೂಪನಾ ಶೈಲಿಯಲಿ ಇನ್ನಷ್ಟು ಬದಲಾವಣೆ ಮಾಡಿಕೊಂಡಿದ್ದರೆ. ಮಿಸ್ ಆದ ಕಥಾನಕದ ಲಿಂಕ್ಗಳಿಗೆ ಮಾತಿನಲ್ಲಾದರು ಸ್ಪಷ್ಟತೆಗಳನ್ನು ಕೊಟ್ಟಿದ್ದರೆ, ರಂಗಶಿಸ್ತನ್ನು ನಾಟಕದಾದ್ಯಂತ ಪರಿಪಾಲಿಸಿದ್ದರೆ,...... ಒಟ್ಟಾರೆಯಾಗಿ ಮೊದಲಿಂದ ಕೊನೆಯವರೆಗೂ ಇಡೀ ನಾಟಕವನ್ನು ಸೃಜನಶೀಲವಾಗಿ ಮರು ನಿರ್ಮಿಸಿದರೆ ‘ದುರ್ಗಾಸ್ತಮಾನದ’ ನಿರ್ಮಾತೃ ತರಾಸುರವರಿಗೆ ಗೌರವಕೊಟ್ಟಂತಾಗುತ್ತದೆ. ವೀರ ಮದಕರಿನಾಯಕನಿಗೆ ನ್ಯಾಯವೊದಗಿಸಿದಂತಾಗುತ್ತದೆ. ಇಲ್ಲವಾದರೆ ಈ ನಾಟಕ ಹತ್ತರಲ್ಲಿ ಹನ್ನೊಂದನೆಯದಾಗಿ ಅಸ್ತಮಾನವಾಗುತ್ತದೆ. ಹಲವಾರು ಜನರ ಶ್ರಮ ಹಾಳು ಸುರಿವ ದುರ್ಗಕ್ಕೆ ಕಲ್ಲು ಹೊತ್ತಂತಾಗುತ್ತದೆ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ