ಸೋಮವಾರ, ಫೆಬ್ರವರಿ 10, 2014

ಸ್ತ್ರೀಪರ ನಿಲುವಿನ ಸಾರ್ವಕಾಲಿಕ ನಾಟಕ “ಹೆಜ್ಜೆಗಳು” :






 ಗಂಡಸರ ಕೈಗೊಂಬೆಯಾಗಿರುವ ಹೆಣ್ಣು ಜಾತಿಯೇ ಹುಚ್ಚರ ಜಾತಿ. ಹೆಣ್ಣಿಗೂ ಅವಳದೇ ಆದ ಮನಸ್ಸು ಮೈ ಇವೆ ಎಂದು ಯಾರೂ ಆಲೋಚಿಸುವುದಿಲ್ಲ. ಹೆಣ್ಣನ್ನು ಹೆಣ್ಣೆಂದು ಬಯಸುವವರು ಯಾರಿದ್ದಾರೆ? ಎಂದು ತಾರಾದೇವಿ ಇಡೀ ಪುರುಷಕುಲವನ್ನೇ ಪ್ರಶ್ನಿಸುತ್ತಾಳೆ. ಇದು ತಾರೆಯೊಬ್ಬಳ ಪ್ರಶ್ನೆಯಲ್ಲಾ. ಬಹುತೇಕ ಸ್ತ್ರೀಕುಲದ ಪ್ರಶ್ನೆಯಾಗಿದೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆ ಹೇಗೆ ಕೇವಲ ಪುರುಷರ ಪರಿಕರವಾಗಿ ಬಳಕೆಗೊಂಡು ತನ್ನ ಸ್ವಂತಿಕೆಯನ್ನೇ ಕಳೆದುಕೊಳ್ಳುತ್ತಾಳೆ ಎಂಬುದನ್ನು ಪುರಾಣ ಪರಿಕಲ್ಪನೆಯೊಂದಿಗೆ ಹೆಜ್ಜೆಗಳು ನಾಟಕ ಹೇಳುತ್ತದೆ.

ಡಾ.ಹೆಚ್.ಎಸ್.ವೆಂಕಟೇಶಮೂರ್ತಿಯವರು ರಚಿಸಿದ ಹೆಜ್ಜೆಗಳು ನಾಟಕವನ್ನು ಅಬ್ಬೂರು  ಜಯತೀರ್ಥರವರು ತಮ್ಮ ನಾಟ್ಯ ದರ್ಪಣ ರಂಗತಂಡದ ಕಲಾವಿದರಿಗೆ ನಿರ್ದೇಶಿಸಿದ್ದಾರೆ. ರವೀಂದ್ರ ಕಲಾಕ್ಷೇತ್ರ-50 ಸುವರ್ಣ ಸಂಭ್ರಮದಲ್ಲಿ ನಾಟಕ ಬೆಂಗಳೂರು ಆಯೋಜಿಸಿದ ಮೂರನೆಯ ಕಂತಿನ ನಾಟಕೋತ್ಸವದಲ್ಲಿ 2014, ಫೆಬ್ರವರಿ 10ರಂದು ಹೆಜ್ಜೆಗಳು ನಾಟಕವು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡಿತು.

ನಮ್ಮ ಪುರಾಣಗಳು ಚಂದ್ರಗ್ರಹದ ಮೇಲೂ ಸೊಗಸಾಗಿ ಕತೆಕಟ್ಟಿವೆ. ಚಂದ್ರ ವಿದ್ಯಾರ್ಚನೆಗಾಗಿ ಆಚಾರ್ಯ ಬ್ರಹಸ್ಪತಿಯ ಆಶ್ರಮ ಸೇರುತ್ತಾನೆ. ಅಲ್ಲಿ ಆಚಾರ್ಯರ ಪತ್ನಿ ತಾರಾಳ ಮೋಹಕ್ಕೊಳಗಾಗುತ್ತಾನೆ. ಪತಿಯ ಪ್ರೀತಿಯಿಂದ ನಿರ್ಲಕ್ಷಕ್ಕೊಳಗಾದ ತಾರೆ ಚಂದ್ರನೊಂದಿಗೆ ಆಶ್ರಮ ತೊರೆದು ಹೋಗುತ್ತಾಳೆ. ಚಂದ್ರ ತಾರೆಯರಿಗೆ ಬುಧ ಎನ್ನುವ ಮಗ ಹುಟ್ಟುತ್ತಾನೆ. ತನ್ನ ಧರ್ಮಾಚರಣೆಗಳಿಗೆ ಹೆಂಡತಿ ಹಾಗೂ ಮಗ ಬೇಕೆಂದು ಬ್ರಹಸ್ಪತಿ ಬ್ರಹ್ಮನಿಗೆ ದೂರುಕೊಡುತ್ತಾನೆ. ಕೊನೆಗೆ ಬ್ರಹ್ಮ ವಿಚಾರಣೆ ನಡೆಸಿ ಇಬ್ಬರೂ ಬ್ರಹಸ್ಪತಿಗೆ ಸೇರಬೇಕು ಹಾಗೂ ಗುರುಪತ್ನಿಯನ್ನು ಮೋಹಿಸಿ ಅಪಹರಿಸಿದ್ದಕ್ಕೆ ಚಂದ್ರ ಅನಂತಕಾಲ ಶೂನ್ಯದಲ್ಲಿ ಹುಚ್ಚನಂತೆ ಪರಿಭ್ರಮಿಸಬೇಕು ಎಂದು ಶಿಕ್ಷೆ ವಿಧಿಸುತ್ತಾನೆ. ತಾರೆ ಗಂಡ ಹಾಗೂ ಪ್ರಿಯತಮ ಇಬ್ಬರನ್ನೂ ನಿರಾಕರಿಸಿ ತನ್ನ ಮಗುವಿನೊಂದಿಗೆ ಇರಲು ನಿರ್ಧರಿಸುತ್ತಾಳೆ. ಅಂದಿನಿಂದ ಇಂದಿನವರೆಗೂ ಚಂದ್ರ ಆಕಾಶದಲ್ಲಿ  ನೆಲೆಯಿಲ್ಲದೇ ಸುತ್ತುತ್ತಲೆ ಇದ್ದಾನೆ. ಹೀಗಿದೆ.. ಚಂದ್ರಗ್ರಹದ ಪರಿಭ್ರಮಣದ ಹಿಂದಿರುವ ಪೌರಾಣಿಕ ಪರಿಕಲ್ಪನೆಯ ಕಥೆ. ಕಲ್ಪನೆಯ ಕಥೆಯನ್ನು ಸ್ತ್ರೀವಾದಿ ವೈಚಾರಿಕ ನೆಲೆಗಟ್ಟಿನ ಮೇಲೆ ಡಾ.ಹೆಚ್.ಎಸ್.ವಿ ರವರು ಹೆಜ್ಜೆಗಳು ಎಂಬ ನಾಟಕವಾಗಿಸಿದ್ದಾರೆ.

ಕೊನೆಯವರೆಗೂ ಕಥೆಯಾಗಿಯೇ ತೆರೆದುಕೊಳ್ಳುವ ನಾಟಕವು ಕೊನೆಯ ಹಂತಕ್ಕೆ ಬಂದ ಹಾಗೆ ವೈಚಾರಿಕ ತಿರುವನ್ನು ಪಡೆಯುತ್ತದೆ. ತಾರೆ ಹಾಗೂ ಬುಧ ಯಾರಿಗೆ ಸೇರಬೇಕು?  ಎನ್ನುವುದೇ ಇಲ್ಲಿ ಪ್ರಮುಖ ಜಿಜ್ಞಾಸೆ. ಭೂಮಿ ಹಾಗೂ ಭೂಮಿಯಿಂದ ಬಂದ ಫಲ ಕ್ಷೇತ್ರಪತಿ ಅಂದರೆ ಭೂಮಾಲೀಕನಿಗೆ ಸೇರಬೇಕೋ ಅಥವಾ ಕೃಷಿಕನಾದವನಿಗೆ ಸೇರಬೇಕೋ? ಎನ್ನುವ ಪ್ರಶ್ನೆ ಬ್ರಹ್ಮನ ಮುಂದಿರುತ್ತದೆ. ಕರ್ಮಾನುಷ್ಟಾನಕ್ಕೆ ತಾರೆ ಬೇಕೆಂದೂ ಹಾಗೂ ತನ್ನ ಮಗ ತನಗೆ ದೊರೆಯಬೇಕೆಂದು ಬ್ರಹಸ್ಪತಿ ವಾದ ಮಂಡಿಸಿದರೆ, ಧರ್ಮದ ಹೆಸರಿನಲ್ಲಿ ಪ್ರೀತಿಯ ಕತ್ತು ಹಿಚುಕಿ ಕೊಲ್ಲುವುದು ಜೀವವಿರೋಧಿ, ಪ್ರೀತಿ ಎನ್ನುವುದು ಸಂಪಾದಿಸುವ ವಸ್ತು ಎಂದು ಚಂದ್ರ ತನ್ನ ಪ್ರತಿವಾದ ಮಂಡಿಸುತ್ತಾನೆ. ಇಬ್ಬರಲ್ಲಿ ಯಾರ ಮಗನಿಗೆ ಜನ್ಮ ಕೊಟ್ಟಿದ್ದೇನೆಂದು ನಿರ್ದಿಷ್ಟವಾಗಿ ಗೊತ್ತಿಲ್ಲದ ತಾರೆ ಬುಧ ನನ್ನ ಮಗ. ಬೀಜದ ಮೂಲ ಮಣ್ಣಿಗೂ ಗೊತ್ತಿಲ್ಲ. ನಾನು ಚಂದ್ರನ ಪ್ರೇಯಸಿಯೂ ಅಲ್ಲ, ಬ್ರಹಸ್ಪತಿಯ ಹೆಂಡತಿಯೂ ಅಲ್ಲ. ಕೇವಲ ಬುಧನ ತಾಯಿ ಮಾತ್ರ ಎಂದು ಸಮರ್ಥಿಸಿಕೊಳ್ಳುತ್ತಾಳೆ. ಈಗ ಬ್ರಹ್ಮನ ನ್ಯಾಯನಿರ್ಣಯ ಬಲು ಮಾರ್ಮಿಕವಾಗಿದೆ. ಮರದ ಹಕ್ಕು ಬೀಜದ್ದು, ಬೀಜದ ಗುಟ್ಟನ್ನು ಮರ ಮರೆಮಾಚಿದರೆ ಅದು ಮಾಲೀಕನ ಹಕ್ಕು. ಆದ್ದರಿಂದ ಬುಧ ಬ್ರಹಸ್ಪತಿಗೆ ಸೇರಬೇಕು. ವಿವಾಹದ ಚೌಕಟ್ಟಿನ ಆಚೆ ಪ್ರೀತಿ ಎಂಬುದು ಲಂಪಟತನ. ಆದ್ದರಿಂದ ತಾರೆ ಕೂಡಾ ತನ್ನ ಮಾಲೀಕನಿಗೆ ಮರಳಿ ದಕ್ಕಬೇಕು ಎಂದು ನಿರ್ಣಯಿಸಿ ಚಂದ್ರನಿಗೆ ಬ್ರಹ್ಮ ಶಿಕ್ಷೆ ವಿಧಿಸುತ್ತಾನೆ.

ಇಲ್ಲಿ ಬ್ರಹ್ಮನ ತೀರ್ಮಾಣ ಪಕ್ಷಪಾತತನದ್ದಾಗಿರುತ್ತದೆ. ಪುರುಷ ಪ್ರಧಾನ ವ್ಯವಸ್ಥೆಯ ಪರವಾಗಿರುತ್ತದೆ. ಆದ್ದರಿಂದ ಇಲ್ಲಿ ತಾರೆಯ ಅಭಿಪ್ರಾಯಕ್ಕಿಂತ ಆಕೆಯ ಮಾಲೀಕ ಯಾರು ಎನ್ನುವುದೇ ಮುಖ್ಯವಾಗುತ್ತದೆ. ಹೆಣ್ಣಿಗೆ ಸ್ವಯಂ ನಿರ್ಣಯದ ಆಯ್ಕೆಯನ್ನು ಇಲ್ಲಿ ನಿರ್ಲಕ್ಷಿಸಲಾಗುತ್ತದೆ. ಏಕಮುಖಿ ಪುರುಷ ಪಕ್ಷಪಾತಿ ನಿರ್ಣಯದಿಂದ ತಾರೆ ಕೆರಳುತ್ತಾಳೆ. ಗಂಡಸರ ಕೈಗೊಂಬೆಯಾಗಿರುವ ಹೆಣ್ಣು ಜಾತಿಯೇ ಹುಚ್ಚರ ಜಾತಿ. ಹೆಣ್ಣಿಗೂ ಅವಳದೇ ಆದ ಮನಸ್ಸು ಮೈ ಇವೆ ಎಂದು ಯಾರೂ ಆಲೋಚಿಸುವುದಿಲ್ಲ. ಹೆಣ್ಣನ್ನು ಹೆಣ್ಣೆಂದು ಬಯಸುವವರು ಯಾರಿದ್ದಾರೆ? ಎಂದು ಪ್ರಶ್ನಿಸುತ್ತಾಳೆ. ಸಾರ್ವಕಾಲಿಕ ಪ್ರಶ್ನೆಯೊಂದಿಗೆ ನಾಟಕ ಮುಗಿಯುತ್ತದೆ.


 ಶತಮಾನಗಳಿಂದ ಶೋಷಿತ ಸ್ತ್ರೀ ಕುಲ ಇದೆ ಪ್ರಶ್ನೆಯನ್ನು ಕಾಲಕಾಲಕ್ಕೆ ಕೇಳುತ್ತಲೇ ಬಂದಿದೆ. ಈಗಲೂ ಕೇಳುತ್ತಿದೆ. ಆದರೆ ಸಮರ್ಥ ಉತ್ತರ ಹಾಗೂ ಪರಿಹಾರ ಮಾತ್ರ ಸಿಗುತ್ತಿಲ್ಲ. ಯಾಕೆಂದರೆ ಆಗಿನಿಂದ ಈಗಲೂ ಪುರುಷಪ್ರಧಾನ ವ್ಯವಸ್ಥೆಯೇ ಮಹಿಳೆಯರನ್ನು ಅಂಕೆಯಲ್ಲಿಟ್ಟುಕೊಂಡಿದೆ. ಯಾರಾದರೂ ಒಬ್ಬ ಗಂಡಿನ ಆಶ್ರಯದಲ್ಲೆ ಹೆಣ್ಣು ಇರಲೇಬೇಕು ಇಲ್ಲವೇ ಸಾಯಬೇಕು ಎನ್ನುವ ಅಸಹಾಯಕ ಪರಿಸ್ಥಿತಿಯನ್ನು ಪುರುಷ ವ್ಯವಸ್ಥೆ ಸೃಷ್ಟಿಸಿದೆ. ಹೀಗಾಗಿ ಕೊಟ್ಯಾಂತರ ತಾರೆಯರು ಈಗಲೂ ಯಾರಯಾರದೋ ಮಾಲೀಕನ ಇಲ್ಲವೇ ಕೃಷಿಕನ ಭೂಮಿಯಾಗಿಯೇ ಬಳಕೆಯಾಗುತ್ತಿದ್ದಾರೆ. ಹೆಣ್ಣನ್ನು ಹೆಣ್ಣು ಎನ್ನುವುದಕ್ಕಿಂತಲೂ ತಮ್ಮ ಪರಿಕರ ಎಂದೇ ಪುರುಷ ಸಮಾಜ ಭಾವಿಸುತ್ತಿದೆ. ಹೀಗಾಗಿ ಹೆಜ್ಜೆಗಳು ನಾಟಕ ಎಲ್ಲಾ ಕಾಲಕ್ಕೂ ಪ್ರಸ್ತುತವೆನ್ನಿಸುವಂತಿದೆ. ಹೆಣ್ಣನ್ನು ತಮ್ಮ ಆಸ್ತಿ ಎಂದು ಪರಿಗಣಿಸುವ ಸಮಾಜ ಇರುವವರೆಗೂ ನಾಟಕ ಅಗತ್ಯವೆನಿಸುತ್ತದೆ.

ಇಲ್ಲಿ ಹೆಣ್ಣಿನ ಚಂಚಲತೆಯನ್ನೂ ಸಹ ತಾರಾ ಪಾತ್ರದ ಮೂಲಕ ತೋರಿಸಲಾಗಿದೆ. ಬ್ರಹಸ್ಪತಿಯ ಆಶ್ರಮದಲ್ಲಿದ್ದಾಗ ಚಂದ್ರನನ್ನು ಪ್ರೀತಿಸುತ್ತಾಳೆ ತಾರೆ. ಆದರೆ ಚಂದ್ರನ ಜೊತೆಗೆ ಪ್ರತ್ಯೇಕವಾಗಿದ್ದಾಗ ಬ್ರಹಸ್ಪತಿ ಮತ್ತು ಆಶ್ರಮದ ಕುರಿತು ಚಿಂತಿಸುತ್ತಾಳೆ. ಕೊನೆಗೆ ಎಲ್ಲಿಯೂ ಸಲ್ಲದವಳಾಗುತ್ತಾಳೆ. ಪಶ್ಚಾತ್ತಾಪ ಎನ್ನುವುದು ಇಲ್ಲಿ ಸ್ಥಾಯಿಭಾವವಾಗಿದೆ. ದೇವರ್ಷಿಯ ಪಟ್ಟದ ಮಹತ್ವಾಂಕಾಂಕ್ಷೆಯಿಂದ ಎಲ್ಲವನ್ನೂ ಕಳೆದುಕೊಂಡೆ, ನಕ್ಷತ್ರಗಳನ್ನು ಕಣ್ಣತುಂಬಿಕೊಳ್ಳಲು ಹೋಗಿ ಮನೆಯ ಬೆಳಕನ್ನೇ ನಂದಿಸಿಕೊಂಡೆ ಎಂದು ಬ್ರಹಸ್ಪತಿ ಹೆಂಡತಿಯನ್ನು ನಿರ್ಲಕ್ಷಿಸಿ ಕಳೆದುಕೊಂಡಿದ್ದಕ್ಕೆ ಪಶ್ಚಾತ್ತಾಪ ಪಡುತ್ತಾನೆ. ವ್ಯವಸ್ಥೆಯೊಂದನ್ನು ತಿರಸ್ಕರಿಸಿ ಹೊರಬಂದರೂ ಇಬ್ಬರೂ ಪಾಪಪುಣ್ಯಗಳಲ್ಲಿ ನರಳುತ್ತಿರುವುದು ಉತ್ತರವಿಲ್ಲದ ಪ್ರಶ್ನೆ ಎಂದು ಚಂದ್ರ ಪಶ್ಚಾತ್ತಾಪದಿಂದ ತಲ್ಲಣಗೊಳ್ಳುತ್ತಾನೆ. ಚಂದ್ರ ತನ್ನ ಬದುಕಲ್ಲಿ ಬರಲೇಬಾರದಿತ್ತು ಎಂದು ತಾರೆ ಪಶ್ಚಾತ್ತಾಪದಿಂದ ಶೋಕಿಸುತ್ತಾಳೆ. ಇಲ್ಲಿ ಯಾವ ಪಾತ್ರವೂ ನೆಮ್ಮದಿಯಿಂದ ಇರುವುದಿಲ್ಲ. ಗಂಡಿಗೆ ಹೆಣ್ಣು ಮಾಯವಾಗಿ, ಹೆಣ್ಣಿಗೆ ಗಂಡು ಮಾಯವಾಗಿ ಕಾಡುತ್ತಲೇ ಇರುವ ಬದುಕಿನ ವೈಚಿತ್ರ್ಯಗಳನ್ನು ನಾಟಕ ಅನಾವರಣಗೊಳಿಸುತ್ತದೆ.
   
ನಾಟಕದ ನಿರೂಪನೆ ಕ್ರಮ ಚೆನ್ನಾಗಿದೆ. ಇಡೀ ನಾಟಕವನ್ನು ನಾಟಕವಾಗಿಯೇ ಪ್ರಸ್ತುತ ಪಡೆಸಲಾಗಿದೆ. ಅಂದರೆ ಸೂತ್ರದಾರರು ನಾಟಕ ತೋರಿಸಲು ಬರುತ್ತಾರೆ. ನಾಟಕದ ನಡುವೆಯೂ ಸೂತ್ರದಾರ ಪ್ರವೇಶಿಸುತ್ತಾನೆ. ಕೊನೆಗೆ ಸೂತ್ರದಾರನೇ ಬ್ರಹ್ಮನ ಪಾತ್ರವನ್ನೂ ಮಾಡುತ್ತಾನೆ. ಬ್ರೆಕ್ಟ್ ಥೀಯರಿಯನ್ನು ಅಳವಡಿಸಿಕೊಂಡು ನಾಟಕವನ್ನು ಕಟ್ಟಲಾಗಿದೆ. ಇದು ಪ್ರೇಕ್ಷಕರು ನಾಟಕದ ಭಾವಲೋಕದಲ್ಲಿ ಕಳೆದುಹೋಗದೆ ಎಚ್ಚರದ ಸ್ಥಿತಿಯಲ್ಲಿಡುವಂತೆ ಮಾಡುತ್ತದೆ. ಇದೇ ಕೆಲಸವನ್ನು ಹಾಡು ಸಂಗೀತಗಳೂ ಮಾಡಿವೆ.


 ನಾಟಕದಾದ್ಯಂತ ಸಂದರ್ಭೊಚಿತವಾಗಿ ಹಾಡುಗಳನ್ನು ಸೊಗಸಾಗಿ ಬಳಸಲಾಗಿದೆ. ಹೆಚ್.ಎಸ್.ವಿರವರು ಬರೆದ ಎಲ್ಲಾ ಹಾಡುಗಳೂ ಅರ್ಥಪೂರ್ಣವಾಗಿವೆ. ಕಾಡು ಕನರುತಿದೆ ಬೇಕೆ ಬೇಕು ವಸಂತಕಾಲ, ತೊರೆಯು ಮೊರೆಯುತಿದೆ ಬೇಕೆ ಬೇಕು ತರಂಗ ಮಾಲಾ..,  ಅಡಿಯಾ ಇಟ್ಟರೆ ಕೆಳಗೆ ಕೆಸರು..., ಹೀಗೆ ನಾಟಕದಾದ್ಯಂತ ಹಲವಾರು ಹಾಡುಗಳಿವೆ. ಹಾಡಿಗಾಗಿ ನಾಟಕವೋ ಅಥವಾ ನಾಟಕಕ್ಕಾಗಿ ಹಾಡುಗಳೋ ಎಂದು ಸಂದೇಹ ಬರುವಷ್ಟು ಸುದೀರ್ಘವಾಗಿವೆ. ನಾಟಕದ ಕಥೆಯೊಳಗಿನ ತಲ್ಲೀಣತೆಯನ್ನು ಹಾಡುಗಳಿಗೆ ಪ್ರೇಕ್ಷಕರು ಬದಲಾಯಿಸಬೇಕಾಗುತ್ತದೆ. ಇದರಿಂದಾಗಿ ಹಾಡುಗಳೇ ನಾಟಕಕ್ಕೆ ಭಾರವೆನಿಸುವಂತಿವೆ. ಹಾಡು ಸಂಗೀತದ ಜೊತೆಗೆ ನೃತ್ಯಸಂಯೋಜನೆಗಳಿದ್ದರೆ ಎಷ್ಟೇ ಹಾಡುಗಳಿದ್ದರೂ ಬೇಸರವಾಗಲಿಕ್ಕಿಲ್ಲ. ಆದರೆ ಪ್ರತಿಯೊಂದು ದೃಶ್ಯ ಮುಗಿದ ಕೂಡಲೇ ಒಂದು ಸಂಪೂರ್ಣ ಹಾಡನ್ನು ಕೇಳಿಸುವುದು ನಾಟಕದ ದೃಷ್ಟಿಯಿಂದ ಸರಿಯಲ್ಲ. ಆಗಾಗ ಒಂದೊಂದು ಚರಣಗಳನ್ನು ಹಾಡಿದರೆ ಅಡ್ಡಿಯಿಲ್ಲ.

ಅಭಿನಯದಲ್ಲಿ ಅಂತಹ ವಿಶೇಷತೆ ಏನಿಲ್ಲ. ಚಂದ್ರನಾಗಿ ಶ್ರೀಕಾಂತ್ ಹಾಗೂ ತಾರೆಯಾಗಿ ಸುಧಾ ಪ್ರಸನ್ನರವರು ತಮ್ಮ ಪಾತ್ರದ ಅಗತ್ಯಕ್ಕೆ ತಕ್ಕಷ್ಟು ನಟಿಸಿದ್ದಾರೆ. ಆದರೆ ನಿರ್ದೇಶಕರು ಇಲ್ಲಿ ಪಾತ್ರದ ಔಚಿತ್ಯಗಳನ್ನು ಅರಿತಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಯಾಕೆಂದರೆ ಚಂದ್ರನ ಪ್ರೇಮವನ್ನು ಗುರುಪತ್ನಿಗೆ ಶಶಕ ತಿಳಿಸಬೇಕಾದಾಗ ಏರಿದ ದ್ವನಿಯಲ್ಲಿ ಆಕೆಯನ್ನು ನಿಂದಿಸುವ ರೀತಿಯಲ್ಲಿ ಮಾತಾಡುವುದು ಆಭಾಸಕಾರಿಎನಿಸುತ್ತದೆ. ಒಬ್ಬ ಶಿಷ್ಯ ಗುರುಮಾತೆಯೊಂದಿಗೆ ಮಾತಾಡುವಾಗ ಇರಬೇಕಾದ ವಿನಯವಂತಿಕೆ ಇಲ್ಲಿ ಬೇಕಾಗಿತ್ತು. ಅದೇ ರೀತಿ ಚಂದ್ರ ಖಳನಾಯಕನಂತೆ ಗುರುಪತ್ನಿಗೆ ತನ್ನ ಪ್ರೇಮನಿವೇದನೆ ಮಾಡಿಕೊಳ್ಳುವ ಅಗತ್ಯವಿರಲಿಲ್ಲ. ಹೇಳುವ ಮಾತುಗಳನ್ನೇ ಪ್ರೀತಿಯಿಂದ ಹೇಳಬಹುದಾಗಿತ್ತು. ಕೊನೆಯವರೆಗೂ ತಾರೆಯೊಂದಿಗೆ ಅದೇ ವಿಲನ್ ಮಾದರಿಯಲ್ಲೇ ಚಂದ್ರನ ಪಾತ್ರ ವರ್ತಿಸುವುದು ಅಸಮಂಜಸವೆನ್ನಿಸುತ್ತದೆ. ಬ್ರಹಸ್ಪತಿ ನಾಟಕದಲ್ಲಿ ಮಹರ್ಷಿಎನ್ನುವುದಕ್ಕಿಂತಲೂ ಯಾವುದೋ ಗುಡಿಯ ಅರ್ಚಕನ ಹಾಗೆ ಕಾಣುತ್ತಾನೆ.  ಚಂದ್ರನ ಜೊತೆಗೆ ಅರಣ್ಯದಲ್ಲಿರುವ ತಾರೆ ರೇಷ್ಮೆ ಸೀರೆ ರವಿಕೆ ತೊಟ್ಟಿದ್ದು ಆಭಾಸಕಾರಿಯಾಗಿದೆ.


ರಂಗವಿನ್ಯಾಸದಲ್ಲೂ ವಿಶೇಷವೇನಿಲ್ಲ. ಹಿಂದೆ ಒಂದೆರಡು ಪ್ಲಾಟ್ಪಾರಂಗಳು ಹಾಗೂ ಎಡ ಬಲಕ್ಕೆ ಒಂದೊಂದು ಬಿದಿರಿನ ಸ್ಟೂಲ್ಗಳು ಮತ್ತು ಎಡಪಾರ್ಶ್ವದಲ್ಲಿ ಕಿಟಕಿಯಂತಹ ಸೆಟ್ ಮಾಡಲಾಗಿದೆ. ಇವೆಲ್ಲವೂ ದೃಶ್ಯಗಳು ಬದಲಾದರೂ ನಾಟಕದಾದ್ಯಂತ ಇರುತ್ತವೆ. ಕಿಟಕಿಯ ಉಪಯೋಗ ಒಂದೇ ಒಂದು ಬಾರಿ ಬಂದರೂ ನಾಟಕದಾದ್ಯಂತ ಆಶ್ರಮ, ಕಾಡು, ರಸ್ತೆ... ಹೀಗೆ ಬೇರೆ ಬೇರೆ ದೃಶ್ಯಗಳಿದ್ದಾಗಲೂ ಅದನ್ನು ಖಾಯಂ ಆಗಿ ಇಡಬೇಕಾದ ಅಗತ್ಯವೇ ಇರಲಿಲ್ಲ. ರಂಗವಿನ್ಯಾಸ, ಕಾಸ್ಟೂಮ್ ಹಾಗೂ ಅಭಿನಯದ ಮೇಲೆ ನಿರ್ದೇಶಕರು ಇನ್ನೂ ತಮ್ಮ ಕ್ರಿಯಾಶೀಲತೆಯನ್ನು ತೋರಿಸಬೇಕಾಗಿದೆ. ನಾಟಕದಾದ್ಯಂತ ಬೆಳಕಿನ ವಿನ್ಯಾಸಕ್ಕೆ (ವಿಜಯಭಾರ್ಗವ) ಬೇಕಾದಷ್ಟು ಅವಕಾಶಗಳಿವೆ. ಆದರೆ ಬೆಳಕಿನ ಮಾಂತ್ರಿಕತೆಯನ್ನು ಬಳಸದೇ ಕೇವಲ ದೃಶ್ಯಗಳನ್ನು ಬೆಳಗಲು ಮಾತ್ರ ಬೆಳಕು ಉಪಯೋಗಕ್ಕೆ ಬಂದಂತಿದೆ.

ಕಾವ್ಯಾತ್ಮಕ ಸಂಭಾಷಣೆಗಳು, ಅರ್ಥಪೂರ್ಣವಾದ ಹಾಡುಗಳು, ವೈಚಾರಿಕ ಪ್ರಖರತೆ ಇರುವ ಕಥಾನಕ ನಾಟಕದ ಯಶಸ್ಸಿಗೆ ಕಾರಣವಾಗಿವೆ. ನಟರನ್ನೂ ಪಾತ್ರಕ್ಕೆ ತಕ್ಕಹಾಗೆ ತರಬೇತುಗೊಳಿಸಿ, ರಂಗತಂತ್ರಗಳನ್ನು ಸರಿಯಾಗಿ ಬಳಸಿಕೊಂಡಿದ್ದರೆ ಅತ್ಯುತ್ತಮ ನಾಟಕವನ್ನು ಕೊಡಬಹುದಾಗಿದೆ. ಪುರುಷ ಪ್ರಧಾನ ವ್ಯವಸ್ಥೆಯ ಶೋಷಕ ಗುಣವನ್ನು ತೋರಿಸುತ್ತಲೇ ಸ್ತ್ರೀಪರ ನಿಲುವನ್ನು ಹೊಂದಿರುವ ನಾಟಕ ಪೌರಾಣಿಕ ವಸ್ತುವನ್ನು ಹೊಂದಿರುವ ಸಾರ್ವಕಾಲಿಕ ರಂಗಪ್ರಯೋಗವಾಗಿದೆ.   

                                             -ಶಶಿಕಾಂತ ಯಡಹಳ್ಳಿ
  
         
               


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ