ಶುಕ್ರವಾರ, ಫೆಬ್ರವರಿ 7, 2014

ರಾಜಕೀಯ ಅಂತರಂಗ ಅನಾವರಣಗೊಳಿಸುವ “ಸೂರ್ಯಾಸ್ತ”:







ಎಲ್ಲಾ ರಾಜಕೀಯ ನಾಟಕಗಳು ರಾಜಕಾರಣಿಗಳ ಬಹಿರಂಗ ತಂತ್ರ ಕುತಂತ್ರಗಳನ್ನು ತೋರಿಸಿದರೆ, ಸೂರ್ಯಾಸ್ತ ನಾಟಕವು ರಾಜಕಾರಣಿಯೊಬ್ಬನ ಮನೆಯೊಳಗಿನ ಅರಾಜಕ ಅಂತರಂಗವನ್ನು ಅನಾವರಣಗೊಳಿಸುತ್ತದೆ. ಮೂರು ತಲೆಮಾರುಗಳ ನಡುವಿನ ವೈಚಾರಿಕ ಅಂತರವನ್ನು ತೋರಿಸುತ್ತಲೇ ಇಡೀ ದೇಶದ ಪ್ರಸ್ತುತ ರಾಜಕೀಯ ಅಧೋಗತಿಗೆ ಕನ್ನಡಿಯಾಗಿ ನಾಟಕ ನಿರೂಪನೆಗೊಂಡಿದೆ.

ಮರಾಠಿಯಲ್ಲಿ ಜಯವಂತ ದಳವಿರವರು ರಚಿಸಿದ ಸೂರ್ಯಾಸ್ತ ನಾಟಕವನ್ನು ಶಾ.ಮಂ.ಕೃಷ್ಣರಾಯರು ಕನ್ನಡಕ್ಕೆ ಅನುವಾದಿಸಿದ್ದು, ಅರ್ಚನಾ ಶ್ಯಾಂ ರವರು ತಮ್ಮ ಅಂತರಂಗ ತಂಡಕ್ಕೆ ನಿರ್ದೇಶಿಸಿದ್ದಾರೆ. ರವೀಂದ್ರ ಕಲಾಕ್ಷೇತ್ರ-50 ಸುವರ್ಣ ಸಂಭ್ರಮದಲ್ಲಿ ನಾಟಕ ಬೆಂಗಳೂರು ಆಯೋಜಿಸಿದ ಮೂರನೆಯ ಕಂತಿನ ನಾಟಕೋತ್ಸವದಲ್ಲಿ 2014, ಫೆಬ್ರವರಿ 7ರಂದು ಸೂರ್ಯಾಸ್ತ ನಾಟಕವು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡಿತು.

ಆತ ಅಪ್ಪಾಜಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಗಾಂಧಿವಾದಿ. ಅನ್ಯಾಯದ ವಿರುದ್ದ ಹೋರಾಡುತ್ತಲೇ ಬದುಕುವವ. ಆತನ ಮಗ ಪ್ರತಾಪ್ ಮುಖ್ಯಮಂತ್ರಿ, ತನ್ನ ಸ್ವಾರ್ಥಕ್ಕಾಗಿ ಎಂತಾ ಹೀನ ಕೆಲಸವನ್ನಾದರೂ ಮಾಡುವವ. ಆತನ ಮೊಮ್ಮಗ ಬಾಬುರಾವ್ ಕುಡಿತ ಕುಣಿತ ಹಾದರದಲ್ಲಿ ಎಲ್ಲರನ್ನೂ ಮೀರಿಸುವವ. ಒಂದೇ ಮನೆಯ ಮೂರು ತಲೆಮಾರುಗಳು ನಮ್ಮ ಸಾಮಾಜಿಕ ವ್ಯವಸ್ಥೆಯ ಅವತಾರಗಳೇ ಆಗಿವೆ. ಗಾಂಧಿಯುಗದ ನೈತಿಕತೆಯ ಸಂಕೇತವಾಗಿ ಅಪ್ಪಾಜಿ ಇದ್ದರೆ, ಗಾಂಧಿನಂತರದ ನೀತಿಗೆಟ್ಟ ರಾಜೀಕೋರ ಮನಸ್ಥಿತಿಯ ರಾಜಕಾರಣಿಗಳಿಗೆ ಪ್ರತೀಕವಾಗಿ ಪ್ರತಾಪ್ ಪಾತ್ರ ಮೂಡಿಬಂದಿದೆ. ಆತನ ಮಗ ಬಾಬೂರಾವ್ ಈಗಿನ ನಡತೆಗೆಟ್ಟ ಬೇಜವಾಬ್ದಾರಿ ಅಧಿಕಾರಸ್ತರ ಮಕ್ಕಳ ಬಿಂದಾಸ್ ನಡತೆಗೆ ಸಾಕ್ಷಿಯಾಗಿದ್ದಾನೆ. ಹೀಗೆ ನೈತಿಕ, ನೀತಿಗೆಟ್ಟ ಮತ್ತು ನಡತೆಗೆಟ್ಟ ಮನಸ್ಥಿತಿಯ ಮೂರು ವಿಭಿನ್ನ ಪಾತ್ರಗಳನ್ನು ಒಂದೇ ಮನೆಯಲ್ಲಿ ಮುಖಾಮುಖಿಯಾಗಿಸಿ ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ವಿಶ್ಲೇಷಿಸುವ ಪ್ರಯತ್ನವನ್ನು ಸೂರ್ಯಾಸ್ತ ನಾಟಕ ಮಾಡುತ್ತದೆ.


ಮುಖ್ಯಮಂತ್ರಿ ಪ್ರತಾಪ್ ಜೊತೆಯಲ್ಲಿ ಇನ್ನೊಬ್ಬನಿದ್ದಾನೆ, ಆತ ಶಾಂತಾರಾಂ. ತನ್ನ ಮಗ ಶೇಖರನನ್ನು ಕಡೆಗಣಿಸಿ ಸೊಸೆಯನ್ನೇ ರಾಜಕಾರಣಿಗಳಿಗೆ ತಲೆಹಿಡಿಯುವ ನೀಚ. ಕೇವಲ ತನ್ನ ಅಧಿಕಾರ ಅಂತಸ್ತಿಗಾಗಿ ಅದೆಷ್ಟು ಅನೈತಿಕ ಮಟ್ಟಕ್ಕೆ ಪುಡಾರಿಗಳು ಇಳಿಯುತ್ತಾರೆಂಬುದಕ್ಕೆ ಉದಾಹರಣೆ ಶಾಂತಾರಾಂ. ಈತನಿಗೊಬ್ಬ ಸಹಾಯಕ ಚಂದ್ರಪ್ಪ ಒಬ್ಬ ದಲಿತ. ಒಳಗೊಳಗೆ ಆಕ್ರೋಶವನ್ನು ತುಂಬಿಕೊಂಡಿದ್ದರೂ ಅನಿವಾರ್ಯವಾಗಿ ಪರಿಸ್ಥಿತಿಯೊಂದಿಗೆ ರಾಜಿಯಾದವ. ಎಲ್ಲಾ ಅನೈತಿಕ ಅವ್ಯವಸ್ಥೆಯನ್ನು ನಿರಂತರವಾಗಿ ವಿರೋಧಿಸುವ ಅಪ್ಪಾಜಿ ನಾಟಕದ ನಿಜವಾದ ನಾಯಕ. ಉಳಿದವರೆಲ್ಲಾ ಖಳನಾಯಕರೇ. ಶೇಖರ ಮತ್ತು ಚಂದ್ರಪ್ಪ ಮಾತ್ರ ಅಸಹಾಯಕ ಪಾತ್ರಗಳು. ತನ್ನ ಮಗನ ಅಕ್ರಮಗಳ ವಿರುದ್ಧವೇ ಬಂಡಾಯವೆದ್ದು ಗೃಹಬಂಧನಕ್ಕೊಳಗಾಗುವ ಅಪ್ಪಾಜಿ ಅನ್ಯಾಯದ ವಿರುದ್ಧ ಜನಜಾಗೃತಿ ಮಾಡಲು ಸತತವಾಗಿ ಪ್ರಯತ್ನಿಸುತ್ತಲೇ ಇರುತ್ತಾನೆ. ಆದರೆ ಕೊನೆಗೊಮ್ಮೆ ಅಂತಹ ಪ್ರಯತ್ನದಲ್ಲಿರುವಾಗ ಶಾಂತಾರಾಂ ಅಪ್ಪಾಜಿಯನ್ನು ಮಹಡಿ ಮನೆಯ ಮೇಲಿಂದ ಕೆಳಕ್ಕೆ ತಳ್ಳಿ ಅಪ್ಪಾಜಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ಪುಕಾರೆಬ್ಬಿಸುತ್ತಾನೆ. ಅಲ್ಲಿಗೆ ಅನ್ಯಾಯದ ವಿರುದ್ಧ ಸಿಡಿದೇಳುತ್ತಿದ್ದ ದ್ವನಿಯೊಂದು ಮೌನವಾಗುತ್ತದೆ. ಗಾಂಧಿಗಿರಿಯ ಕೊನೆಯ ನಿರೀಕ್ಷೆ ಕೊನೆಯಾಗುತ್ತದೆ. ಕಗ್ಗತ್ತಲ ವ್ಯವಸ್ಥೆಯಲ್ಲಿ ಬದಲಾವಣೆಯ ಬೆಳಕಾದ ಅಪ್ಪಾಜಿಯ ಅಂತ್ಯವಾಗುತ್ತದೆ.  ಸೂರ್ಯಾಸ್ತ ನಾಟಕ ತೆರೆಕಾಣುತ್ತದೆ. ನೋಡುಗರಲ್ಲಿ ವಿಷಾದ ಹುಟ್ಟುತ್ತದೆ.

ರಿಯಾಲಿಸ್ಟಿಕ್ ಮಾದರಿಯ ನಾಟಕ ಹಲವಾರು ಸಮಸ್ಯೆಗಳನ್ನು ಏಕಕಾಲಕ್ಕೆ ಚರ್ಚಿಸುತ್ತದೆ. ಈರುಳ್ಳಿ ಬೆಲೆಯನ್ನು ಕೃತಕವಾಗಿ ನಿಯಂತ್ರಿಸಿ ಲಾಭ ಮಾಡಿಕೊಳ್ಳುವ ದಲ್ಲಾಳಿಗಳು ಹಾಗೂ ರಾಜಕಾರಣಿಗಳ ಕುತಂತ್ರವನ್ನು ಹೇಳುತ್ತದೆ. ಬೇರೆ ರಾಜ್ಯದಿಂದ ಕಳಪೆ ಬೀಜಗಳನ್ನು ತಂದು ರೈತರಿಗೆ ವಿತರಿಸಿ ರೈತರನ್ನು ಆತ್ಮಹತ್ಯೆಗೆ ದೂಡುವಂತಹ ರಾಜಕೀಯ ನೀಚತನವನ್ನು ಬಯಲು ಮಾಡುತ್ತದೆ. ಹೈಕಮಾಂಡ್ ಎನ್ನುವ ರಾಜಕೀಯ ವ್ಯವಸ್ಥೆ ಹೇಗೆ ಅಕ್ರಮಗಳಿಗೆ ಪ್ರೋತ್ಸಾಹಿಸಿ ಹಣವನ್ನು ಲೂಟಿಹೊಡೆಯುತ್ತದೆ ಎನ್ನುವುದನ್ನು ತೋರಿಸುತ್ತದೆ. ಸ್ವಾರ್ಥಕ್ಕಾಗಿ ತಮ್ಮ ಮನೆಯ ಸೊಸೆಯರನ್ನೂ ಹಾದರಕ್ಕೆ ಪ್ರೋತ್ಸಾಹಿಸುವ ರಾಜಕೀಯ ಪಿಂಪ್ಗಳ ಅನೈತಿಕತೆಯನ್ನೂ ಬಯಲು ಗೊಳಿಸುತ್ತದೆ. ಪತ್ರಿಕಾರಂಗದಲ್ಲಿರುವವರು ಹಾಗೂ ಪೊಲೀಸ್ ಉನ್ನತಾಧಿಕಾರಿಗಳು ಹೇಗೆ ರಾಜಕೀಯದವರ ಆಮಿಷಕ್ಕೆ ಬಲಿಯಾಗಿ ಅಕ್ರಮಗಳಿಗೆ ಪ್ರೋತ್ಸಾಹಕರಾಗುತ್ತಾರೆ ಎನ್ನುವುದನ್ನೂ ಪರೋಕ್ಷವಾಗಿ ಹೇಳುತ್ತದೆ. ಒಟ್ಟಾರೆಯಾಗಿ ಆಳುವ ವರ್ಗಗಳು ಸುಖ ವಿಲಾಸದ ವಿಕೃತಿಯಲ್ಲಿ ಮುಳುಗಿ, ಜನರನ್ನು ಯಾವ ಯಾವ ರೀತಿಯಲ್ಲಿ ಶೋಷಿಸಿ ತಮ್ಮ ಸ್ವಾರ್ಥಗಳನ್ನು ಸಾಧಿಸುತ್ತವೆ ಎನ್ನುವುದನ್ನು ಬಲು ಮಾರ್ಮಿಕವಾಗಿ ರಂಗದಂಗಳದಲ್ಲಿ  ಅನಾವರಣಗೊಳಿಸುವಲ್ಲಿ ನಾಟಕ ಸಫಲವಾಗಿದೆ.

ಸೂರ್ಯಾಸ್ತದಲ್ಲಿ ಕೆಲವು ತರ್ಕಾತೀತ ಅಂಶಗಳೂ ಸೇರಿಕೊಂಡಿವೆ. ತನ್ನ ಮಗ ಮಾಡುವ ಹಾದರಗಳನ್ನು, ಹೆಣ್ಣಿನ ಶೋಷಣೆಯನ್ನು ತಾಯಿಯೇ ಸಮರ್ಥಿಸಿಕೊಳ್ಳುವುದು ಸರಿಯೇ?  ತನ್ನ ತಂದೆಯನ್ನು ಕೊಂದವ, ತನ್ನ ಅಕ್ಕನನ್ನು ಕೆಡಿಸಿ ಸಾಯಿಸಿದವನ ಮಗನ ಹತ್ತಿರವೇ ಗೊತ್ತಿದ್ದು ಯಾಕೆ ಚಂದ್ರಪ್ಪ ಚಾಕರಿ ಮಾಡಿಕೊಂಡಿದ್ದ? ಹೋಗಲಿ ಅದು ಆತನ ಅನಿವಾರ್ಯತೆ ಎಂದರೂ ಒಬ್ಬ ಹೊಲೆಯರ ಹುಡಗನನ್ನು ತನ್ನ ಮನೆ ಮಗನಂತೆ ಸಾಕುವ ಔದಾರ್ಯತೆ ನೀಚತನದ ಪರಮಾವಧಿಯಂತಿರುವ ಶಾಂತಾರಾಂನಿಂದ ಅಪೇಕ್ಷಿಸಲು ಸಾಧ್ಯವೆ? ತನ್ನ ಹೆಂಡತಿಯನ್ನು ತನ್ನ ಅಪ್ಪ ಶಾಂತಾರಾಂ ಅಧಿಕಾರಸ್ತರಿಗೆ ತಲೆಹಿಡಿಯುತ್ತಾನೆಂದು ಗೊತ್ತಾದರೂ ಮಗ ಶೇಖರ್ ಯಾಕೆ ಎಂದೂ ವಿರೋಧಿಸಿ ಅಪ್ಪನ ವಿರುದ್ದ ನೇರವಾಗಿ ತಿರುಗಿ ಬೀಳುವುದಿಲ್ಲ? ಸುಖ ಸಂಪತ್ತಿಗೆ ದುರ್ವಸನೆ ಇದೆ ಎಂದು ಕೆಟ್ಟ ಕೆಲಸಕ್ಕೆ ವಿರೋಧಿಸುತ್ತಿದ್ದ ಶಾಲಿನಿ ಇದ್ದಕ್ಕಿದ್ದಂತೆ ಅಂತಹುದಕ್ಕೆ ಒಪ್ಪಿಕೊಳ್ಳುವ ಹಿಂದಿರುವ ಬಲವಾದ ಕಾರಣವಾದರೂ ಏನು? ಮುಖ್ಯಮಂತ್ರಿಯ ಬಂಗಲೆ ಪಕ್ಕ ಸ್ಲಂ ಇರುತ್ತದೆಂಬುದನ್ನು ನಂಬಲು ಸಾಧ್ಯವೆ? ನಮ್ಮ ದೇಶದ ಯಾವುದೇ ರಾಜ್ಯದಲ್ಲಿ ಸ್ಲಂ ಪಕ್ಕ ಸಿಎಂ ಮನೆಯಿರುವ ಉದಾಹರಣೆ ಇದೆಯಾ? ಎಂತಹುದೇ ಗಾಂಧಿವಾದಿಯಾಗಿರಲಿ ಈಗಿನ ಕಾಲದಲ್ಲೂ ಚರಕ ಸುತ್ತಿ ನೂಲು ತೆಗೆಯಲು ಸಾಧ್ಯವಾ? ಅದರ ಅಗತ್ಯತೆ ಇದೆಯಾ? ಅಪ್ಪಾಜಿಯನ್ನು ಮಹಡಿಯಿಂದ ಕೆಳಕ್ಕೆ ತಳ್ಳಿದಾಗ ಒಂದೇ ಒಂದು ಚೀತ್ಕಾರವಾದರೂ ಬರಬೇಕಿತ್ತಲ್ಲವೇ? ಇಂತಹ ಅನೇಕ ಪ್ರಶ್ನೆಗಳು ನಾಟಕ ವೀಕ್ಷಿಸಿದ ನೋಡುಗರನ್ನು ಕಾಡುತ್ತವೆ. ಇವುಗಳಿಗೆಲ್ಲಾ ಸೂಕ್ತ ಸಕಾರಣಗಳನ್ನು ನಾಟಕದಲ್ಲಿ ಕೊಟ್ಟರೆ ಇಡೀ  ನಾಟಕ ಸಂದೇಹ ರಹಿತವಾಗಿ ಮೂಡಿ ಬರಬಹುದಾಗಿದೆ.


ರಿಯಲಿಸ್ಟಿಕ್ನಲ್ಲೂ ಸಾಂಕೇತಿಕತೆ ಬಳಸಿ ಮಾಡಲಾದ ರಂಗವಿನ್ಯಾಸ ಸೊಗಸಾಗಿ ಮೂಡಿಬಂದಿದೆ. ಮೊದಲ ಮಹಡಿಯ ಕಲ್ಪನೆ ಬರುವಂತೆ ಮಾಡಲು ರೇಲಿಂಗ್ ಬಳಸಿದ್ದು, ಹಿಂಭಾಗದಲ್ಲಿ ರಾಜಕೀಯ ನಡೆಯನ್ನು ತೋರಿಸುವಂತಹ ಚದುರಂಗದ ಭಿತ್ತಿಚಿತ್ರ ಬಳಸಿದ್ದು, ವಿಶಾಲವಾದ ಆಕ್ಟಿಂಗ್ ಏರಿಯಾ ಸ್ಪೇಸ್ ನಿರ್ಮಿಸಿದ್ದು ಉತ್ತಮ ಪರಿಕಲ್ಟನೆ. ಬೆಳಕನ್ನು ಬಳಸಿ ಸ್ಟೇಜನ್ನು ವಿಭಾಗಿಸಿಕೊಂಡಿದ್ದು, ಒಂದೇ ಸೆಟ್ ನಲ್ಲಿ ಎರಡು ಮನೆಗಳಿರುವಂತೆ ತೋರಿಸಿದ್ದು ವಿಶಿಷ್ಟವಾಗಿದೆ. ಬೆಳಕು ದೃಶ್ಯಗಳನ್ನು ಬೆಳಗಿದೆಯಾದರೂ ಅಂತಹ ವಿಶೇಷ ತಂತ್ರಗಳನ್ನೇನು ಬಳಸಿಲ್ಲ. ಬಹುಷಃ ರಿಯಲಿಸ್ಟಿಕ್ ನಾಟಕಗಳಲ್ಲಿ ಬೆಳಕಿನ ಮಾಂತ್ರಿಕತೆಗೆ ಅವಕಾಶಗಳೇ ಕಡಿಮೆ.

ಹರ್ಷರವರ ಅಪ್ಪಾಜಿ ಪಾತ್ರದ ಅಭಿನಯ ನೋಡುಗರ ಮನಮುಟ್ಟುವಂತಿತ್ತು. ಶಾಂತಾರಾಂ ಪಾತ್ರದಲ್ಲಿ ಶ್ರೀಹರ್ಷರವರ ಸ್ಪಷ್ಟ ಮಾತು ಹಾಗೂ ದಿಟ್ಟ ನಟನೆ ನಾಟಕಕ್ಕೆ ಕಳೆತಂದುಕೊಟ್ಟಿತು. ಬಾಬುರಾವ ಆಗಿ ದೀಪಕ್, ಚಂದ್ರಪ್ಪನಾಗಿ ಅಭಯ್ ಹರ್ಷ, ಶಾಲಿನಿಯಾಗಿ ರಾಧಾ ತಮ್ಮ ಪಾತ್ರಗಳಿಗೆ ಪೂರಕವಾಗಿ ನಟಿಸಿದ್ದಾರೆ. ಸರೋಜಾ ಪಾತ್ರದ ರಮ್ಯ ಇನ್ನೂ ನಟನೆ ಕಲಿಯಬೇಕಿದೆ. ಪ್ರತಾಪ್ರವರು ಸ್ವಲ್ಪ ಸಪ್ಪೆ ಎನಿಸುತ್ತಾರೆ, ಇನ್ನೂ ಮುಖ್ಯಮಂತ್ರಿಯ ಗತ್ತುಗಾರಿಕೆ ರೂಢಿಸಿಕೊಳ್ಳಬೇಕಿದೆ. ರಾಮಕೃಷ್ಣ ಕನ್ನರಪಾಡಿಯವರ ಪ್ರಸಾದನ ಕೌಶಲಕ್ಕೆ ಎರಡು ಮಾತಿಲ್ಲ. ಹಿಂದಿನ ನಾಟಕಗಳಿಗೆ ಹೋಲಿಸಿದರೆ ಅರ್ಚನಾ ಶ್ಯಾಂ ರವರು ನಿರ್ದೇಶನದಲ್ಲಿ ಪಳಗಿದ್ದಾರೆ. ಬ್ಲಾಕಿಂಗ್ ಹಾಗೂ ಮೂವಮೆಂಟ್ ಸಂಯೋಜನೆಯಲ್ಲಿ ಸಂಯಮ ಸಾಧಿಸಿದ್ದಾರೆ. ಕನ್ನಡ ರಂಗಭೂಮಿಗೆ ಇನ್ನೊಬ್ಬ ಮಹಿಳಾ ನಿರ್ದೇಶಕಿ ದೊರಕಿದಂತಾಗಿದೆ.  

ಅರ್ಚನಾ ಶ್ಯಾಂ
ನಾಟಕದ ನಿರ್ದೇಶಕಿ ಮಹಿಳೆಯಾಗಿದ್ದರಿಂದ ಒಂದಿಷ್ಟು ಮಹಿಳಾಪರ ನಿಲುವು ತಳೆಯಬೇಕಿತ್ತು. ಪುರುಷ ಪ್ರಧಾನ ವ್ಯವಸ್ಥೆಯಲಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಹೇಳುವ ದಾವಂತದಲ್ಲಿ ನಾಟಕದ ಎಲ್ಲಾ ಮಹಿಳಾ ಪಾತ್ರಗಳನ್ನೂ ವ್ಯತಿರಿಕ್ತವಾಗಿ ತೋರಿಸಲಾಗಿದೆ. ನ್ಯಾಯಕ್ಕಾಗಿ ಹೋರಾಡುವ ಗಂಡನನ್ನೇ ಹೀಯಾಳಿಸಿ ಮಗನ ಅನೈತಿಕತೆಗೆ ಸಪೋರ್ಟ ಮಾಡುವಂತಹ ತಾಯಿ, ಗಂಡನ ಕೆಟ್ಟ ಕೆಲಸಗಳಿಗೆ ಕುಮ್ಮಕ್ಕು ಕೊಡುವಂತಹ ಹೆಂಡತಿ, ಗಂಡನನ್ನು ನಿರ್ಲಕ್ಷಿಸಿ ಅತ್ತ ಮಾವರ ಒತ್ತಡದಿಂದ ಅನೈತಿಕ ಮಾರ್ಗ ಹಿಡಿಯುವ ಸೊಸೆ. ಹೀಗೆ ನಾಟಕದ ಮೂರು ಪ್ರಮುಖ ಮಹಿಳಾ ಪಾತ್ರಗಳೂ ಸಹ ಗಂಡಸರ ಶೋಷಣೆಗೆ ಪೂರಕವಾಗಿ ಮೂಡಿಬಂದಿವೆ. ಇದೆಲ್ಲಾ ಮೂಲ ನಾಟಕದಲ್ಲಿದ್ದರೂ ಸಹ ಮಹಿಳಾ ನಿರ್ದೇಶಕಿ ತಮ್ಮ ವಿವೇಚನೆಯನ್ನು ಬಳಸಿದ್ದರೆ ಕನಿಷ್ಟ ತಾಯಿ ಪಾತ್ರದಲ್ಲಾದರೂ ಒಂದಿಷ್ಟು ಮಹಿಳಾ ಪರ ನಿಲುವನ್ನು ತೋರಿಸಬೇಕಿತ್ತು. ಆದರ್ಶ ತಾಯಿ ಅಲ್ಲದಿದ್ದರೂ ಮಗನ ಅನೈತಿಕತೆಯನ್ನು ಸಾಂಕೇತಿಕವಾದರೂ ಖಂಡಿಸುವಂತಾದರೂ ತಾಯಿ ಪಾತ್ರವನ್ನು ನಿರೂಪಿಸಿದ್ದರೆ ಚೆನ್ನಾಗಿತ್ತು.  ಈಗಿನ ಟಿವಿ ಸೀರಿಯಲ್ಗಳಲ್ಲಿ ಹೆಣ್ಣುಗಳನ್ನು ಖಳನಾಯಕಿಯರನ್ನಾಗಿ ಸಾದರಪಡಿಸುವ ಹಾಗೆ ನಾಟಕದ ಎಲ್ಲಾ ಮಹಿಳಾ ಪಾತ್ರಗಳನ್ನು ಖಳರನ್ನಾಗಿ ಸೃಷ್ಟಿಸುವ ಅಗತ್ಯವಿರಲಿಲ್ಲ. ಮಹಿಳಾ ನಿರ್ದೇಶಕಿಯಾದವರಿಗೆ ತಮ್ಮ ನಾಟಕಗಳಲ್ಲಿ ಯಾವುದೋ ರೀತಿಯಲ್ಲಿ ಸ್ತ್ರೀ ಸಂವೇದನೆ ತೋರಿಸುವುದು ಹಾಗೂ ಮಹಿಳಾ ಪರ ನಿಲುವು ತಳೆಯುವುದು ಪುರುಷ ಪಾರುಪತ್ಯಕ್ಕೆ ಉತ್ತರವಾಗಬಲ್ಲುದು. ನಿಟ್ಟಿನಲ್ಲಿ ಅರ್ಚನಾ ಶ್ಯಾಂ ರವರು ಆಲೋಚಿಸುವುದುತ್ತಮ.


                                              -ಶಶಿಕಾಂತ ಯಡಹಳ್ಳಿ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ