ಅಂದು 2014, ಫೆಬ್ರವರಿ 20. ಗೋವಾದತ್ತು ಅಲ್ಲಾಡದೇ ಅಚೇತನವಾಗಿ ಮಲಗಿದ್ದರು. ಮೈಮೇಲೆ ಮಣಭಾರದ ತರಾವರಿ ಹೂಹಾರಗಳು. ಅಭಿನಯತರಂಗದ ಸಭಾಂಗಣದಲ್ಲಿ ಸೂತಕದ ಮೌನ. ಕೈಮುಗಿದು ಕಣ್ಮುಚ್ಚಿ ನಿಂತೆ. ಆ ನೀರವ ಮೌನದ ಸನ್ನಿವೇಶದಲ್ಲೂ ನನ್ನ ಮನಸ್ಸು ಎರಡು ದಶಕದ ಹಿಂದಕ್ಕೆ ಹಿಮ್ಮುಖವಾಗಿ ಓಡಿತು.
ದತ್ತುರವರು ನಿಶ್ಚಲವಾಗಿ ಈಗ ಮಲಗಿದ್ದ ಇದೇ ಸಭಾಂಗಣದಲ್ಲಿ ನಾನವರನ್ನು ಮೊಟ್ಟ ಮೊದಲ ಬಾರಿಗೆ ನೋಡಿದ್ದು. ಅದು 1994 ನೇ ಇಸ್ವಿ. ನನಗೆ ಮೊದಲಿನಿಂದಲೂ ನಾಟಕ -ಅಭಿನಯದಲ್ಲಿ ಆಸಕ್ತಿ. ಅದೇ ಸೆಳೆತ ನನ್ನನ್ನು ಅಭಿನಯ ತರಂಗದವರೆಗೂ ಎಳೆದೊಯ್ದಿತ್ತು. ಅಭಿನಯ ತರಂಗದಲ್ಲಿ ವಾರಾಂತ್ಯದ ಅಭಿನಯ ತರಗತಿಗಳು. ಬೆಂಗಳೂರಿನಲ್ಲಿ ನನ್ನಂತ ಹೊಟ್ಟೆಪಾಡಿನ ಕೆಲಸಮಾಡುವವರಿಗೆ ಹೇಳಿ ಮಾಡಿಸಿದಂತಹ ವಾರಾಂತ್ಯ ತರಗತಿಗಳು. ಮೊದಲ ದಿನ ಅಭ್ಯರ್ಥಿಗಳ ಸಂದರ್ಶನ. ಹರಸಾಹಸ ಮಾಡಿ ಕಲಾಮಂದಿರವನ್ನು ಹುಡುಕಿ ಹೊರಟಿದ್ದೆ. ಹನುಮಂತನಗರದ ೫ನೇ ಕ್ರಾಸ್ನ ಓಣಿಯೊಂದರಲ್ಲಿ ಹೋಗಿ ಸಿಗರೇಟು ಸೇದುತ್ತಿದ್ದ ಕರಿಬಿಳಿ ಮಿಶ್ರಿತ ಕುರುಚಲು ಗಡ್ಡದ ವ್ಯಕ್ತಿಯೊಬ್ಬರಿಗೆ ವಿಳಾಸ ಕೇಳಿದ್ದಿನ್ನೂ ನೆನಪಿದೆ. ’ಓಹೋ ಆಕ್ಟಿಂಗ್ ಕಲಿಯಬೇಕೋ ಹೀಗೆ ಈ ಗೇಟಲ್ಲಿ ಒಳಹೋಗಿ’ ಎಂದು ನನ್ನದೇ ಹೈಟಿನ ಆ ವ್ಯಕ್ತಿ ದಾರಿ ತೋರಿಸಿತು.
ಒಳ ಹೋದರೆ ನನ್ನಂತೆ ಅಭಿನಯ ಕಲಿಯಲು ಬಂದವರ ಒಂದು ದೊಡ್ಡ ಗುಂಪೆ ಅಲ್ಲಿತ್ತು. ಹಳ್ಳಿಯಿಂದ ಬಂದ ನನಗೆ ನಾಟಕ ಕಲಿಯಲು ಇಷ್ಟೊಂದು ಜನ ಬಂದಿದ್ದಾರೆ ಎನ್ನುವ ವಾಸ್ತವವೇ ಭ್ರಮೆಯಂತೆ ಗೋಚರಿಸಿತು. ಸ್ವಲ್ಪ ದಪ್ಪಗೆ, ಗುಂಡಗೆ ಇದ್ದ ಮಹಿಳೆಯೊಬ್ಬರು ಅರ್ಜಿ ಪಾರಂ ಕೊಟ್ಟರು. ತುಂಬಿದೆ. ಎಲ್ಲರೂ ಸರದಿಯಲ್ಲಿ ಬರಲು ತಿಳಿಸಿದರು. ಸಾಲಿನಲ್ಲಿ ನಿಂತೆ. ಮುಂದೆ ನಿಲ್ಲಲು ನೂಕು ನುಗ್ಗಲು. ಸರಿಯಾಗಿ ನಿಲ್ಲಿ, ಗದ್ದಲ ಮಾಡಬೇಡಿ, ಶಾಂತತೆ ಕಾಪಾಡಿ’ ಎಂದು ಹೇಳುತ್ತಾ ಜಬರ್ದಸ್ತು ಮಾಡುತ್ತಾ ಒಬ್ಬ ವ್ಯಕ್ತಿ ಬಂದರು. ನೋಡಿದರೆ... ಅದೇ ವ್ಯಕ್ತಿ. ಬೂದು ಬಣ್ಣದ ಕೂದಲುಗಳು, ಕುರುಚಲು ಗಡ್ಡ. ಕೈಯಲ್ಲಿ ಸಿಗರೇಟಿತ್ತು ಆದರೆ ಅದಕ್ಕೆ ಬೆಂಕಿ ಹಚ್ಚಿರಲಿಲ್ಲ.
ಸುಮಾರು ಐವತ್ತಕ್ಕಿಂತ ಹೆಚ್ಚು ಯುವಕರು ಅಲ್ಲಿದ್ದರು. ಐದಾರು ಜನ ಹುಡುಗಿಯರೂ ಬಂದಿದ್ದರು. ಒಂದಿಬ್ಬರು ವಯಸ್ಸಾದ ಆಂಟಿಯರೂ ಇದ್ದರು. ನನ್ನ ಸರದಿ ಇಪ್ಪತ್ತೋ ಇಪ್ಪತೈದನೆಯದೋ ಆಗಿತ್ತು. ಆತಂಕದಿಂದಲೇ ಅಭಿನಯ ತರಂಗದ ಹಾಲ್ ಒಳಗೆ ಹೊಕ್ಕೆ. ಅಲ್ಲಿ ಕುಳಿತಿದ್ದರು ಆಕಾಶವಾಣಿ ಈರಣ್ಣ. ನನ್ನ ಪಾಲಿನ ಗುರುದ್ರೋಣ ಎ.ಎಸ್. ಮೂರ್ತಿಗಳು ಅಲ್ಲಿದ್ದರು. ನಿಜಕ್ಕೂ ಖುಷಿಯಾಯ್ತು. ಅವರ ನಾಟಕದ ಕ್ಯಾಸೆಟ್ಗಳಲ್ಲಿ ಬರುವ ಚುಟುಕುಗಳನ್ನು ಕೇಳಿಯೇ ನಾನು ಚುಟುಕು ಕವಿತೆಗಳನ್ನು ಬರೆಯಲು ಕಲಿತಿದ್ದು. ಹಾಲ್ನ ನಡುವೆ ಕೋಲೊಂದನ್ನು ಇಟ್ಟಿದ್ದರು. ’ಕೋಲಲ್ಲದ ರೀತಿಯಲ್ಲಿ ಬಳಸು’ ಎಂದರು. ಪಿಳಪಿಳ ಕಣ್ಬಿಟ್ಟು ನೋಡಿದೆ. ನನ್ನ ಆತಂಕ ನೋಡಿದ ಕುರುಚಲು ಗಡ್ಡದ ವ್ಯಕ್ತಿ ನನಗೆ ಇನ್ನೊಮ್ಮೆ ವಿವರಿಸಿ ಹೇಳಿದರು. ನನಗನ್ನಿಸಿದ ಹಾಗೆ ಆ ಕೋಲನ್ನು ಛತ್ರಿಯನ್ನಾಗಿಯೋ, ಕತ್ತಿಯನ್ನಾಗಿಯೋ ಬಳಸಿದೆ. ಜೊತೆಗೆ ಆಗಿನ ನನ್ನ ಹದಿಹರೆಯದ ವಯಸ್ಸಿಗೆ ತಕ್ಕಂತೆ ಆ ಕೋಲನ್ನು ಎದುರಿಟ್ಟುಕೊಂಡು ಕೋಲನ್ನೇ ಪ್ರಿಯತಮೆ ಎಂದುಕೊಂಡು ಪ್ರಪೋಸಲ್ ಮಾಡುವ ಹಾಗೆ ನಟಿಸಿದೆ. ಮೊದಲು ಚಪ್ಪಾಳೆ ಹೊಡೆದದ್ದೇ ಕುರುಚಲು ಗಡ್ಡ. ಜೊತೆಗೆ ಆ ಗುಂಡಗಿನ ಮುಖದ ಮಹಿಳೆ. ’ನೀನು ಸಿಲೆಕ್ಟ್ ಆದೆ ಕಣಯ್ಯಾ, ಪ್ರತಿ ಭಾನುವಾರ ತಪ್ಪದೇ ಬಂದು ಬಿಡು ಒಳ್ಳೆ ನಟನಾಗ್ತೀಯಾ’ ಎಂದು ತಮ್ಮ ವಿಶೇಷ ಶೈಲಿಯಲ್ಲಿ ಮೂರ್ತಿಗಳು ಹೇಳಿ ನನ್ನಲ್ಲಿ ಆತ್ಮವಿಶ್ವಾಸವನ್ನು ತುಂಬಿದರು.
ಆ ನಂತರ ಹೊರಗೆ ನನ್ನ ಹಿಂದೆಯೇ ಬಂದ ಆ ವ್ಯಕ್ತಿ ’ಭೇಷ್ ಚೆನ್ನಾಗಿ ಮಾಡಿದೆ. ಎಲ್ಲರೂ ಕೋಲನ್ನು ನಿರ್ಜಿವ ವಸ್ತುವನ್ನಾಗಿ ಬಳಿಸಿದ್ದರು. ’ನೀನೊಬ್ಬ ಮಾತ್ರ ಅದನ್ನು ಜೀವಂತ ಹುಡುಗಿಯನ್ನಾಗಿ ಕಲ್ಪಿಸಿಕೊಂಡು ಅಭಿನಯಿಸಿದೆ. ಗುಡ್..." ಎಂದು ಬೆನ್ನು ತಟ್ಟಿ ಹೋದರು. ಆ ವ್ಯಕ್ತಿಯ ಬಗ್ಗೆ ಕುತೂಹಲ ಇಮ್ಮಡಿಸಿತು. ಅಲ್ಲಿದ್ದ ಯಾರನ್ನೋ ಕೇಳಿದೆ ’ಯಾರವರು? ಎಂದು. ನಾನು ಕೇಳಿದಾತ ಈಗಾಗಲೇ ಅಭಿನಯ ತರಂಗದಲ್ಲಿ ನಟನೆ ಕಲಿತಿದ್ದವ. ಈಗ ಟಿವಿ ದಾರವಾಹಿಗಳಲ್ಲಿ ಕಲಾವಿದನಾಗಿ ಹೆಸರಾಗಿರುವ ಸುಕುಮಾರ. ’ಅವರು ಗೋವಾದತ್ತು ಅಂತಾ, ಒಳಗೆ ಇದ್ದಾರಲ್ಲ ಎ.ಎಸ್.ಮೂರ್ತಿಯವರು ಅವರ ಅಳಿಯ’ ಎಂದು ಹೇಳಿದರು. ’ಹಾಗಾದರೆ ಒಳಗೆ ಇನ್ನೊಬ್ಬರಿದ್ದಾರಲ್ಲಾ ಗುಂಡಗಿನ ಮಹಿಳೆ ಅವರ್ಯಾರು?’ ಎಂದು ಮರುಪ್ರಶ್ನಿಸಿದೆ. ಅವರು ಗೌರಿದತ್ತು ಅಂತಾ ಗೋವಾದತ್ತುರವರ ಹೆಂಡತಿ ಹಾಗೂ ಎ.ಎಸ್.ಮೂರ್ತಿಗಳ ಮಗಳು’ ಎಂದುತ್ತರಿಸಿದ.
ದತ್ತುರವರ ಕುಟುಂಬ.
|
ಎಂತದೇ ಒತ್ತಡದ ಪರಿಸ್ಥಿತಿ ಬಂದರೂ ಒಂದು ವಾರವೂ ತಪ್ಪದೇ ಅಭಿನಯ ತರಂಗಕ್ಕೆ ಹೋಗುತ್ತಿದ್ದೆ. ಒಟ್ಟು ನಾವು ನಲವತ್ತು ವಿದ್ಯಾರ್ಥಿಗಳಿದ್ದೆವು. ಪ್ರತಿ ವಾರ ನಾನು ಒಳಗೆ ಕಾಲಿಟ್ಟೊಡನೇ ಮೊಟ್ಟ ಮೊದಲಿಗೆ ಕಾಣುವುದೇ ಗೋವಾದತ್ತುರವರನ್ನು. ಅವರ ಗತ್ತಿನ ಮಾತು, ಶಿಸ್ತಿನ ರೀತಿ ನನಗೆ ತುಂಬಾ ಇಷ್ಟವಾಗತೊಡಗಿದವು. ಮಾವನಿಗೆ ತಕ್ಕ ಅಳಿಯ ಅವರು. ತಮ್ಮ ಅನಿಸಿಕೆಯನ್ನು ನೇರವಾಗಿ ಹೇಳುತ್ತಿದ್ದರು. ಯಾರದೇ ಮುಲಾಜಿಲ್ಲದೇ ಇದ್ದದ್ದನ್ನು ಇದ್ದ ಹಾಗೇ ಹೇಳುವ ದತ್ತುರವರ ಗುಣ ನನಗೆ ಇಷ್ಟವಾಯಿತು. ಯಾಕೆಂದರೆ ನಾನೂ ಅದೇ ರೀತಿಯ ಖಂಡಿತವಾದಿಯಾಗಿದ್ದೆ. ಇಬ್ಬರದೂ ಒಂದೇ ರೀತಿಯ ಲೋಕವಿರೋಧಿ ಗುಣಗಳಾಗಿದ್ದರಿಂದಲೋ ಏನೋ ಬಹು ಬೇಗ ಆತ್ಮೀಯರಾದೆವು.
ಅಭಿನಯ ತರಂಗದಲ್ಲಿ ಮೊದಲ ಬಾರಿಗೆ ನಾನು ಬಣ್ಣ ಹಚ್ಚಿದ್ದೆ. ಅದು ಚಂದ್ರಕಾಂತ ಕೂಸನೂರರ ’ವಿದೂಷಕ’ ನಾಟಕ. ರಿಹರ್ಸಲ್ಸಗಳು ಚೆನ್ನಾಗೆ ನಡೆದಿದ್ದವು. ಆದರೆ ಪ್ರದರ್ಶನದ ದಿನ ಬೆಳಿಗ್ಗೆಯಿಂದಲೇ ಸಿಕ್ಕಾಪಟ್ಟೆ ಜ್ವರ. ಮೈಎಲ್ಲಾ ಸುಡುತ್ತಿತ್ತು. ಮೂಲೆಯೊಂದರಲ್ಲಿ ಸುಮ್ಮನೆ ಮುದುಡಿ ಕುಳಿತಿದ್ದೆ. ಇದು ಯಾರ ಗಮನಕ್ಕೆ ಬರದಿದ್ದರೂ ದತ್ತುರವರಿಗೆ ಗೊತ್ತಾಯಿತು. ಹತ್ತಿರ ಬಂದವರೇ ಮೈ ಮುಟ್ಟಿ ನೋಡಿದರು. ಅಯ್ಯೋ ರಾಮಾ.. ಎಷ್ಟೊಂದು ಜ್ವರ ಇದೆ.’ ಎಂದವರೆ ದುಡುದುಡು ಎಂದು ತಮ್ಮ ಮನೆಕಡೆಗೆ ಓಡಿದರು. ಒಂದೈದು ನಿಮಿಷಗಳಾಗಿರಬಹುದು. ಕೈಯಲ್ಲಿ ಕ್ರೋಸಿನ್ ಗುಳಿಗೆ ಜೊತೆಗೆ ಲೋಟದಲ್ಲಿ ನೀರು. ನನಗೆ ಕಣ್ಣಾಲಿಗಳು ತುಂಬಿ ಬಂದವು. ಹೆತ್ತವರನ್ನು ದೂರದೂರಿನಲ್ಲಿ ಬಿಟ್ಟು ಬಂದು ಅನಾಥರಂತೆ ಬೆಂಗಳೂರಿನಲ್ಲಿ ಬದುಕುತ್ತಿದ್ದ ನನಗೆ ಹೀಗೆ ಆತ್ಮೀಯತೆ ತೋರಿದವರೇ ಇರಲಿಲ್ಲ. ಮಾತ್ರೆ ತಿನ್ನಿಸಿ ನೀರು ಕುಡಿಸಿ "ಇಲ್ಲೇ ಸ್ವಲ್ಪ ಹೊತ್ತು ಮಲಗು, ನೀನಿವತ್ತು ನಾಟಕದಲ್ಲಿ ಚೆನ್ನಾಗಿ ನಟಿಸುತ್ತೀ" ಎಂದು ದೈರ್ಯ ಹೇಳಿದರು. ಮೊದಲೇ ಅದೊಂದು ತಲೆ ಬುಡವಿಲ್ಲದ ಅಸಂಗತ ನಾಟಕ. ಕಥೆಯೇ ಇಲ್ಲ. ಕೇವಲ ಅಭಿನಯವೊಂದೇ ಆ ನಾಟಕದ ಅನಿವಾರ್ಯ ಅಗತ್ಯತೆ. ನನಗೆ ನಂಬಲು ಸಾಧ್ಯವಾಗಿರಲಿಲ್ಲ ಹಾಗೆ ಅಂದು ಸಂಜೆ ನಾನು ಎಲ್ಲ ಸಂಕೋಚಗಳ ಬಿಟ್ಟು ದಿಟ್ಟವಾಗಿ ಅಭಿನಯಿಸಿದೆ. ಮೊಟ್ಟ ಮೊದಲು ಓಡಿ ಬಂದು ಅಪ್ಪಿಕೊಂಡು ಅಭಿನಂದಿಸಿದ್ದೇ ಗೋವಾದತ್ತುರವರು. ನಿಜಕ್ಕೂ ನನ್ನ ಕಣ್ಣಲ್ಲಿ ನೀರಾಡಿತು. ಚೆನ್ನಾಗಿ ಅಭಿನಯಿಸಿದ್ದಕ್ಕಲ್ಲ, ಹಾಗೆ ಅಭಿನಯಿಸುವ ನೈತಿಕ ಶಕ್ತಿಯನ್ನು ದತ್ತುರವರು ತುಂಬಿದ್ದಕ್ಕಾಗಿ. ಕಾಯಿಲೆ ಬಂದ ನನಗೆ ಆರೈಕೆ ಮಾಡಿದ್ದಕ್ಕಾಗಿ. ಇಷ್ಟೊಂದು ಮಾನವೀಯ ಗುಣವಿರುವ ಮನುಷ್ಯನನ್ನು ಬೆಂಗಳೂರಿನಲ್ಲಿ ನಾನು ನೋಡಿದ್ದೇ ಅದೇ ಮೊದಲು.
ಅಭಿನಯತರಂಗದ ಕೊನೆಯ ಹಂತದಲ್ಲಿ ಪ್ರಾಯೋಗಿಕ ರಂಗಪ್ರಸಂಗಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಮಾಡಲೇಬೇಕಿತ್ತು. ನಾವೇ ನಾಟಕ ಬರೆದು, ನಿರ್ದೇಶಿಸಬೇಕಿತ್ತು. ಅದಕ್ಕಾಗಿ ಎಲ್ಲಾ ವಿದ್ಯಾರ್ಥಿಗಳಲ್ಲಿ ವಿಪರೀತ ಸ್ಪರ್ಧೆಗಳಿರುತ್ತಿದ್ದವು. ಆ ಟೆನ್ಶನ್ನ್ನು ಅನುಭವಿಸಿಯೇ ನೋಡಬೇಕು. ಮೂರು ದಿನಗಳ ಕಾಲ ಹಲವಾರು ನಾಟಕಗಳು ಪ್ರದರ್ಶನಗೊಂಡಿದ್ದವು. ಈ ಇಂಟರ್ನಲ್ ಸ್ಪರ್ಧೆಯಲ್ಲಿ ಯಾರಿಗೆ ಬಹುಮಾನಗಳು ಬರುತ್ತದೆಂಬ ಕುತೂಹಲ ನಮಗೆ. ಗೌರಿದತ್ತುರವರು ಎಷ್ಟೇ ಆತ್ಮೀಯರಾದರೂ ಬಾಯಿಬಿಡುತ್ತಿರಲಿಲ್ಲ. ಕಾಯ್ದು ನೋಡು ಎಂದೇ ಕುತೂಹಲವನ್ನು ಹೆಚ್ಚಿಸುತ್ತಿದ್ದರು. ಆದರೆ... ಗೋವಾದತ್ತು ಹಾಗಲ್ಲ. ಹಲಸಿನ ಹಣ್ಣಿನಂತಹ ವ್ಯಕ್ತಿ. ಮೇಲ್ನೋಟಕ್ಕೆ ಕಠೋರ, ಕೋಪಿಷ್ಟ ಎಂದು ಅನ್ನಿಸಿದರೂ ಮನಸ್ಸು ಮಾತ್ರ ಬಲು ಮೃದು. ದಂ ಎಳೆಯುತ್ತಿದ್ದ ದತ್ತುರವರ ಹತ್ತಿರ ಹೋಗಿ ಮೆತ್ತಗೆ ಹೋಗಿ ಕೇಳಿದೆ. ’ಸಾರ್ ನನ್ನ ನಾಟಕಕ್ಕೆ ಏನಾದರೂ ಪ್ರೈಸ್ ಬಂದಿದೆಯಾ?’ ಅಂತ. "ನಿನಗೆ ಬರದೇ ಇನ್ಯಾರಿಗೆ ಬರಬೇಕು ಎಡಹಳ್ಳಿ ತುಂಬಾ ಚೆನ್ನಾಗಿ ನಾಟಕ ಮಾಡ್ಸಿದ್ದೀಯಾ. ನಾಟಕ ಮಾಡ್ಸಿದ್ದಕ್ಕಿಂತಾ ನೀನು ಆ ನಾಟಕ ರಚಿಸಿದ ರೀತಿ ತುಂಬಾ ಚೆನ್ನಾಗಿದೆ. ಎಲ್ಲಾ ಜ್ಯೂರಿಗಳು ಅದನ್ನ ಮೆಚ್ಚಿದ್ದಾರೆ. ನಿನಗೆ ’ಬೆಸ್ಟ್ ಸ್ಕ್ರಿಪ್ಟ್’ ಪ್ರೈಸ್ ಬಂದಿದೆ. ಹೀಗೆ ಬರೀತಾ ಹೋಗು ಒಂದಿಲ್ಲೊಂದು ದಿನ ದೊಡ್ಡ ಬರಹಗಾರನಾಗ್ತೀಯಾ" ಎಂದು ಮತ್ತೊಮ್ಮೆ ಬೆನ್ನುತಟ್ಟಿದರು.
ಕೇವಲ ನಟನಾಗಬೇಕು ಎಂದು ಅಭಿನಯತರಂಗಕ್ಕೆ ಬಂದ ನನ್ನೊಳಗೆ ನಿರ್ದೇಶಕನನ್ನು ಗುರುತಿಸಿ ಪ್ರೋತ್ಸಾಹಿಸಿದ್ದು ಎ.ಎಸ್.ಮೂರ್ತಿಗಳು ಹಾಗೂ ಗೌರಿದತ್ತುರವರು. ಆದರೆ ನನ್ನೊಳಗಿನ ಬರಹಗಾರನನ್ನು ಗಮನಿಸಿದ್ದು ಗೋವಾದತ್ತುರವರು. ನನ್ನೊಳಗೊಬ್ಬ ವಿಮರ್ಶಕನೂ ಇದ್ದಾನೆಂಬುದನ್ನು ಮೊದಲು ಗುರುತಿಸಿದ್ದು ಹಾಗೂ ಹಾಗೊಂದು ಅವಕಾಶವನ್ನು ಕೊಟ್ಟಿದ್ದು ಕೂಡಾ ಗೋವಾದತ್ತು ಸಾಹೇಬರೇ. ಅಭಿನಯ ತರಂಗದಲ್ಲಿ ಒಂದು ವರ್ಷದ ನಮ್ಮ ತರಬೇತಿ ಮುಗಿದಿತ್ತು. ಮುಂದಿನ ವರ್ಷದ ತರಗತಿಗಳು ಪ್ರಾರಂಭವಾಗಿದ್ದವು. ಆಗ ಎ.ಎಸ್.ಎಮ್ ರವರ ಮಗ ಪ್ರಕಾಶರವರು ಅದ್ಬುತ ಚಿತ್ರಕಲಾವಿದ ವ್ಯಾನ್ಗೋ ಜೀವನವನ್ನಾಧರಿಸಿ "ಸೂರ್ಯಕಾಂತಿ" ನಾಟಕವನ್ನು ನಿರ್ದೇಶಿಸಿದರು. ಆ ನಾಟಕಕ್ಕೆ ವಿಮರ್ಶೆ ಸ್ಪರ್ಧೆಯಲ್ಲಿ ಭಾಗವಹಿಸಿ, ಅತ್ಯುತ್ತಮ ವಿಮರ್ಶೆಗೆ ಪ್ರೇಮಾ ಕಾರಂತರು ಪ್ರಶಸ್ತಿ ಕೊಡುತ್ತಾರೆ’ ಎಂದು ಗೌರಿದತ್ತುರವರು ಹೇಳಿದರು. ಅಲ್ಲೇ ಇದ್ದ ಗೋವಾದತ್ತುರವರು ನನ್ನನ್ನು ಹೊರಗೆ ಕರೆದುಕೊಂಡು ಹೋಗಿ "ಈ ನಾಟಕಕ್ಕೆ ನೀನು ವಿಮರ್ಶೆ ಬರೆಯಲೇಬೇಕು ಹಾಗೂ ಪ್ರೈಸ್ ಪಡೆಯಲೇಬೇಕು" ಎಂದು ಒತ್ತಾಯಪೂರ್ವಕವಾಗಿ ಆದೇಶಿಸಿದರು. ನನಗೋ ದಿಗಿಲು. ಕವಿತೆ, ಲೇಖನಗಳನ್ನು ಹೇಳಿದರೆ ಬರೆಯಬಹುದಾಗಿತ್ತು. ಯಾಕೆಂದರೆ ಅದರಲ್ಲಿ ನನಗಾಗಲೇ ಅನುಭವವಿತ್ತು. ಆದರೆ ಎಂದೂ ವಿಮರ್ಶೆ ಬರೆದಿರಲಿಲ್ಲ. ಬರೆಯುವ ದಾವಂತವೂ ಇರಲಿಲ್ಲ. ಯಾಕೆಂದರೆ ಬೆಂಗಳೂರಿನ ರಂಗಲೋಕವನ್ನು ಆಗತಾನೆ ಕಣ್ಬಿಟ್ಟು ನೋಡುತ್ತಿದ್ದೆ. ವಿಮರ್ಶೆಯ ವ್ಯಾಕರಣಗಳೂ ಗೊತ್ತಿರಲಿಲ್ಲ. ಗೌರಿಮೆಡಂರವರ ಆಹ್ವಾನ ಹಾಗೂ ದತ್ತುರವರ ಆಗ್ರಹಕ್ಕೊಳಗಾಗಿ ’ಸೂರ್ಯಕಾಂತಿ’ ನಾಟಕವನ್ನು ತದೇಕಚಿತ್ತನಾಗಿ ನೋಡಿದೆ. ವಿದೇಯ ವಿದ್ಯಾಥಿಯಂತೆ ನಾಟಕ ನಡೆಯುತ್ತಿದ್ದಾಗ ಗ್ರಹಿಸಿದ್ದನ್ನ ನೋಟ್ ಮಾಡಿಕೊಳ್ಳತೊಡಗಿದೆ. ಕೊನೆಗೂ ನನ್ನೆಲ್ಲಾ ಬರವಣಿಗೆಯ ಅನುಭವ ಹಾಗೂ ಅಭಿನಯತರಂಗದ ಅನುಭವಗಳನ್ನೆಲ್ಲಾ ಉಪಯೋಗಿಸಿ ಆ ನಾಟಕಕ್ಕೆ ವಿಮರ್ಶೆಯೊಂದನ್ನು ಬರೆದು ನೀಟಾಗಿ ಟೈಪ್ ಮಾಡಿಸಿ ಕೊಟ್ಟೆ. ಹಾಗೂ ಅದನ್ನು ಮರೆತೂ ಬಿಟ್ಟೆ.
ದತ್ತು ದಂಪತಿಗಳ ಖಾಸಗಿ
ಪೋಟೋ
|
ಅದೊಂದು ದಿನ ಮುಂಜಾನೆ ಗೌರಿ ಮೆಡಂ ಪೋನ್ ಮಾಡಿದರು. ’ನಿಮಗೊಂದು ಸರಪ್ರೈಸ್ ಇದೆ ಸಂಜೆ ಅಭಿನಯತರಂಗದ ಫಂಕ್ಷನ್ಗೆ ತಪ್ಪದೆ ಬರಬೇಕು’ ಎಂದು ಆಜ್ಞಾಪಿಸಿದರು. ಕೆಲಸ ಕಾರ್ಯ ಮುಗಿಸಿ ಸಂಜೆ ಹೋದೆ. "ಎಷ್ಟೊಂದು ಲೇಟ್ ಎಡಹಳ್ಳಿ ಬೇಗ ಬರಬಾರದೇ, ಒಳಗೆ ಹೋಗು ಪಂಕ್ಷನ್ ಶುರುವಾಗಿದೆ" ಎಂದು ಗೋವಾದತ್ತು ಅವಸರಿಸಿದರು. ಇಡೀ ಹಾಲ್ ಕಿಕ್ಕಿರಿದು ತುಂಬಿತ್ತು. ವೇದಿಕೆಯ ಮೇಲೆ ಎ.ಎಸ್.ಮೂರ್ತಿಗಳು ಜೊತೆಗೆ ಬಾಕಿ ಅತಿಥಿಗಳು ಹಾಗೂ ನನ್ನ ಗಮನ ಸೆಳೆದಿದ್ದು ಪ್ರೇಮಾ ಕಾರಂತರು. ಈ ವರ್ಷದ ’ಬಿ.ವಿ.ಕಾರಂತರ ನೆನಪಿನ’ ವಿಮರ್ಶೆಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದವರು ’ಶಶಿಕಾಂತ ಯಡಹಳ್ಳಿ’ ಎಂದು ಗೌರಿಮೆಡಂ ಅನೌನ್ಸ ಮಾಡಿದಾಗ ಅಚ್ಚರಿಯಿಂದ ಮೇಲೆದ್ದ ನಾನು ಮೊದಲು ನೋಡಿದ್ದೇ ಗೋವಾದತ್ತುರವರ ಮುಖವನ್ನು. ಅವರು ನಗುತ್ತಾ ಬಿಗಿದ ಮುಷ್ಟಿಯಿಂದ ಹೆಬ್ಬೆರಳನ್ನು ಮೇಲಕ್ಕೆತ್ತಿ ’ಬೆಸ್ಟ ಆಪ್ ಲಕ್’ ಎಂದು ಮೌನದಲ್ಲೇ ಹೇಳಿದರು. ಪ್ರೇಮಾಕಾರಂತರೇ ಮೊಮೆಂಟೋವೊಂದನ್ನು ಕೊಟ್ಟು ಸಾವಿರ ರೂಪಾಯಿ ನಗದು ಬಹುಮಾನವನ್ನು ಕೊಟ್ಟರು.
ರಂಗಭೂಮಿಯ ಮೇಲಾಣೆ ಮಾಡಿ ಹೇಳ್ತೇನೆ ಎಂದೂ ನಾನು ರಂಗವಿಮರ್ಶಕನಾಗ್ತೇನೆ ಎಂದುಕೊಂಡಿರಲೇ ಇಲ್ಲ. ದತ್ತು ದಂಪತಿಗಳು ನನ್ನೊಳಗಿಂದ ವಿಮರ್ಶಕನೊಬ್ಬನನ್ನು ಹೊರಗೆಳೆದುತಂದು ಬಹುಮಾನವನ್ನು ಕೊಟ್ಟು ರಂಗವಿಮರ್ಶೆಗೆ ಶ್ರೀಕಾರ ಹಾಕಿಬಿಟ್ಟಿದ್ದರು. ಮುಂದೆ ನನ್ನನ್ನು ತಿದ್ದಿ ತೀಡಿ ನನ್ನೊಳಗಿನ ಕಿಚ್ಚು ರೊಚ್ಚು ರೋಚಕತೆಗೆ ಎ.ಎಸ್.ಮೂರ್ತಿಗಳು ನೀರೆರೆದು ಬೆಳೆಸಿದರು. ಅಂದಿನಿಂದ ಇಂದಿನವರೆಗೂ ರಂಗವಿಮರ್ಶೆಗಳನ್ನು ನಿರಂತರವಾಗಿ ಬರೆಯುತ್ತಲೇ ಬಂದಿದ್ದೇನೆ. ಬರೆಯುತ್ತಲೇ ಇರುತ್ತೇನೆ. ಇದಕ್ಕೆ ಮೊದಲು ಪ್ರೇರಣೆಯನ್ನಿತ್ತ ಗೋವಾದತ್ತು, ಮೊದಲ ನಾಟಕದ ಅಭಿನಯವನ್ನು ಮೆಚ್ಚಿ ತಬ್ಬಿಕೊಂಡು ಗೋವಾದತ್ತು, ನನಗೆ ಕಾರಂತ್ ವಿಮರ್ಶಾ ಪ್ರಶಸ್ತಿ ಬಂದಾಗ ಸಂಭ್ರಮಿಸಿದ ಗೋವಾದತ್ತು ಈಗ ಅದೇ ಅಭಿನಯತರಂಗ ರಂಗಶಾಲೆಯ ಸಭಾಂಗಣದ ನಡುವೆ ನಿಶ್ಚಲವಾಗಿ ಮಲಗಿಬಿಟ್ಟಿದ್ದಾರೆ. ಈ ಎಲ್ಲಾ ಘಟನೆಗೆ ಸಾಕ್ಷಿಯಾಗಿ, ನನ್ನಂತ ನೂರಾರು ಹಳ್ಳಿ ಹುಡುಗರ ಪ್ರತಿಭೆಗೆ ಆಶ್ರಯಕೊಡುವ ಆಲದಮರವಾಗಿ ಅಭಿನಯತರಂಗ ಇನ್ನೂ ಹಾಗೇ ಇದೆ. ಆದರೆ ಪ್ರತಿಭೆಯನ್ನು ಗುರುತಿಸಿ, ಅವರಲ್ಲಿ ಸ್ಪೂರ್ತಿತುಂಬಿ ಕೈ ಹಿಡಿದು ನಡೆಸುವ ದೈತ್ಯಗುರು ಎ.ಎಸ್. ಮೂರ್ತಿಗಳು ಕಾಲವಶರಾಗಿ ಸರಿಯಾಗಿ ಹದಿನಾಲ್ಕು ತಿಂಗಳಾಯ್ತು, ಈಗ ಗೋವಾದತ್ತು ಚಿರನಿದ್ರೆಯಲ್ಲಿದ್ದಾರೆ. ಅಭಿನಯತರಂಗ ಒಂದು ರೀತಿಯಲ್ಲಿ ತಬ್ಬಲಿಯಾಗಿದೆ. ನನ್ನ ರಂಗತವರುಮನೆ ಇಂದು ಸೂತಕದ ನೋವಿನಲ್ಲಿದೆ. ಯಾವಾಗಲೂ ಯೌವನಿಗರಂತೆ ಪುಟಿಯುತ್ತಾ ಓಡಾಡುತ್ತಿದ್ದ ಹಿರಿಯ ಜೀವ ಇಂದು ಇಲ್ಲಿ ನೆಮ್ಮದಿಯಾಗಿ ಮಲಗಿದೆ.
ನೆನಪಿಸಿಕೊಳ್ಳುತ್ತಾ ಹೋದರೆ ಅಭಿನಯತರಂಗದಲ್ಲಿ ದತ್ತುರವರ ಜೊತೆಗಿನ ನೂರಾರು ನೆನಪುಗಳು ನನ್ನೊಂದಿಗೆ ತಳುಕುಹಾಕಿಕೊಂಡಿವೆ. ನಾಟಕ, ಟಿವಿಯಲ್ಲಿ ಅಭಿನಯಿಸುತ್ತಿದ್ದ ಗೋವಾದತ್ತುರವರು ನನಗೆ ಪ್ರೇರಕರಾಗಿದ್ದು ದೈತ್ಯ ಶಕ್ತಿಯ ರಂಗಸಂಘಟಕರಾಗಿ. ಅವರೆಂದೂ ನಮಗೆ ಅಭಿನಯದ ಪಾಠಗಳನ್ನು ಹೇಳಿಲ್ಲ. ಆದರೆ ಅವರು ಪಾಠ ತೆಗೆದುಕೊಂಡಾಗೆಲ್ಲಾ ರಂಗಶಿಸ್ತು, ರಂಗಸಂಯಮ, ರಂಗಸಂಘಟನೆಯ ಕುರಿತು ಹಲವಾರು ಮಾಹಿತಿಗಳನ್ನು ಕೊಡುತ್ತಿದ್ದರು. ಒಂದು ರೀತಿಯಲ್ಲಿ ನನಗೆ ರಂಗಗುರುಗಳೂ ಆಗಿದ್ದರು. ಆದರೆ ಈ ಗುರುವಿಗೆ ಗುರುವಾಗುವ ಅವಕಾಶವನ್ನೂ ಅವರು ನನಗೆ ಒದಗಿಸಿಕೊಟ್ಟಿದ್ದು ನನ್ನ ಭಾಗ್ಯ. ಅವರು ಟಿವಿ ಅಸೋಸಿಯೇಶನ್ಗೆ ಖಚಾಂಚಿಯಾಗಿದ್ದರು. ಅದರ ಲೆಕ್ಕಗಳನ್ನು ಬರೆದು ಬರೆದು ಸುಸ್ತಾಗಿದ್ದರು. ’ಯಾಕೆ ಸರ್ ಇಷ್ಟೊಂದು ಕಷ್ಟ ಪಡ್ತಿದ್ದೀರಾ, ಟ್ಯಾಲಿ ಅಂತಾ ಅಕೌಂಟಿಗ್ ಸಾಪ್ಟವೇರ್ ಇದೆ. ಅದನ್ನು ಬಳಸಿದರೆ ಈ ಬರೆಯುವ ಲೆಕ್ಕ ಮಾಡುವ ಗೋಜಿರುವುದಿಲ್ಲ’ ಎಂದು ಹೇಳಿದೆ. ಹೌದಾ! ನನಗೊತ್ತಿಲ್ಲ. ನೀನೇ ಕಲಿಸಿಕೊಡು’ ಎಂದರು. ಆಯ್ತು ಅಂದು ಬಂದೆ. ಆದರೆ ಮರುದಿನ ಪೋನ್ ಮಾಡಿದರು. ’ಎಂದಿನಿಂದ ಕಲಿಸಿಕೊಡುತ್ತೀರಿ’ ಎಂದು ಕೇಳಿದರು. ಟ್ಯಾಲಿ ಸಾಪ್ಟವೇರ್ ಹುಡುಕಿಕೊಂಡು ಬಂದು ನಿಮ್ಮ ಕಂಪ್ಯೂಟರನಲ್ಲಿ ಹಾಕುತ್ತೇನೆ. ಆ ಮೇಲೆ ಹೇಳಿಕೊಡುತ್ತೇನೆ’ ಎಂದುತ್ತರಿಸಿದೆ. ಆ ಭಾನುವಾರ ಹೋಗಿ ಸಾಪ್ಟವೇರ್ ಹಾಕಿ ಪಾಠ ಶುರುಮಾಡಿದೆ. ನನಗಚ್ಚರಿಯಾಗುವಂತೆ ಗೋವಾದತ್ತು ಕುತೂಹಲದ ವಿದ್ಯಾರ್ಥಿಯಂತೆ ಕೂತು ಪಾಠ ಕೇಳತೊಡಗಿದರು. ಅವರ ಕುತೂಹಲಕ್ಕಿಂತ ಈ ವಯಸ್ಸಿನಲ್ಲೂ ಅವರಲ್ಲಿರುವ ’ಬರ್ನಿಂಗ್ ಡಿಸೈರ್’ ನನಗೆ ಮಾದರಿಯೆನಿಸಿತು. ಗುರುವಿಗೆ ಪಾಠಹೇಳಿಕೊಡುವುದು ನಿಜಕ್ಕೂ ಮುಜುಗರ. ಅದನ್ನು ಬಾಯಿಬಿಟ್ಟು ಹೇಳಿದೆ. "ಅದೆಲ್ಲಾ ಸಂಕೋಚ ಬೇಕಾಗಿಲ್ಲ. ಇಲ್ಲಿ ನೀನೇ ಗುರು ನಾನೇ ಶಿಷ್ಯ. ನೀನು ಕಲಿಸಬೇಕು ನಾನು ಕಲಿಯಬೇಕು" ಎಂದು ಹೇಳಿದ ದತ್ತುರವರು ಒಂದೆ ದಿನದಲ್ಲಿ ಟ್ಯಾಲಿ ಅಕೌಂಟಿಗ್ ಸಾಪ್ಟವೇರ್ ಅಪರೇಟ್ ಮಾಡುವುದನ್ನು ಕಲಿತುಬಿಟ್ಟರು. ಬೇರೆಯವರಿಗೆ ಇದನ್ನೇ ನಾನು ಕನಿಷ್ಟ ಎಂದರೂ ಹದಿನೈದು ದಿನ ಟ್ರೇನಿಂಗ್ ಕೊಡಬೇಕಿತ್ತು. ಮುಂದೆಂದೂ ಅವರು ಲೆಕ್ಕದ ಪುಸ್ತಕದಲ್ಲಿ ಬರೆಯಲೇ ಇಲ್ಲ. ಎಲ್ಲಾ ಲೆಕ್ಕಗಳಿಗೂ ಕಂಪ್ಯೂಟರ್ ಗತಿಯಾಯ್ತು. ಸಿಕ್ಕಾಗೆಲ್ಲಾ ಗುರುಗಳೇ ಎಂದರೆ ಸಾಕು ’ನೀವು ನನ್ನ ಗುರು’ ಎಂದು ಕಿಚಾಯಿಸುತ್ತಿದ್ದರು.
ಇದೇ ಆತ್ಮೀಯತೆಯಿಂದ ಅವರಿಗೆ ಯಾವಾಗಲೂ ಹೇಳುತ್ತಿದ್ದೆ "ಸಾರ್ ದಯವಿಟ್ಟು ಈ ಸಿಗರೇಟನ್ನು ಬಿಟ್ಟುಬಿಡಿ. ಅದನ್ನು ನೀವು ಸುಟ್ಟಷ್ಟೂ ಅದು ನಿಮ್ಮನ್ನು ಸುಡುತ್ತದೆ" ಎಂದು. "ಅಯ್ಯೋ ಬಿಡ್ರಿ, ಎಷ್ಟು ವರ್ಷದಿಂದ ದೂಮಪಾನ ಮಾಡ್ತಿದ್ದೇನೆ ಇಲ್ಲಿವರೆಗೂ ಏನೂ ಆಗಿಲ್ಲ. ಗುಂಡಗಲ್ಲಿನ ಹಾಗಿದ್ದೇನೆ" ಎಂದು ಅತಿಯಾದ ಆತ್ಮವಿಶ್ವಾಸದಿಂದ ಹೇಳ್ತಿದ್ದರು. ಕಳೆದೊಂದು ವರ್ಷದವರೆಗೂ ಗುಂಡುಕಲ್ಲಿನಂತೆ ಆರೋಗ್ಯವಾಗಿಯೇ ಇದ್ದಂತಿದ್ದ ದತ್ತುರವರು ಈ ವರ್ಷದ ಆರಂಭದಿಂದ ಅನಾರೋಗ್ಯಕ್ಕೆ ತುತ್ತಾದರು. ಕೇವಲ ಆತ್ಮವಿಶ್ವಾಸ ಆರೋಗ್ಯ ಕಾಪಾಡಲು ಸಾಧ್ಯವೇ ಇಲ್ಲ. ಇಷ್ಟು ದಿನ ಮಾಡಿದ ದೂಮಪಾನ ಮತ್ತು ಮಧ್ಯಪಾನಗಳ ಇಫೆಕ್ಟ್ ಈಗ ಕಾಣಿಸತೊಡಗಿತು. ಕಳೆದೊಂದು ವಾರದಿಂದ ನ್ಯೂಮೋನಿಯಾ ವ್ಯಾಧಿ ಕಾಡತೊಡಗಿತು. ಗುಂಡುಕಲ್ಲಿಗೆ ಒಳಗಿಂದೊಳಗೇ ಗೆದ್ದಲಿಡಿದಿತ್ತು. ದಿನದಿಂದ ದಿನಕ್ಕೆ ಆರೋಗ್ಯ ಹದಗೆಟ್ಟಿತು. ಕೊನೆಗೊಮ್ಮೆ ಫೆಬ್ರುವರಿ ಇಪ್ಪತ್ತರ ನಡುಮಧ್ಯರಾತ್ರಿ ಎರಡೂವರೆಗಂಟೆಗೆ ಹೃದಯವಂತ ದತ್ತು ಸಾಹೇಬರ ಹೃದಯನಿಂತೇ ಬಿಟ್ಟಿತು.
ನನ್ನಂತ ಹಲವಾರು ಯುವಕರಿಗೆ ರಂಗಭೂಮಿಯಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಳೆಯಲು ಕಾರಣೀಕರ್ತರಾಗಿದ್ದ ದತ್ತುರವರ ಅನರೀಕ್ಷಿತ ನಿರ್ಗಮನ ಅಗಲಿಕೆಯ ನೋವನ್ನುಂಟುಮಾಡಿತು. ಅಭಿನಯತರಂಗದ ಹೊಣೆಯನ್ನು ಗೌರಿದತ್ತುರವರ ಮೇಲೆ ಸಂಪೂರ್ಣವಾಗಿ ವಹಿಸಿ ಹೋದರು ಎ.ಎಸ್.ಮೂರ್ತಿಗಳು. ಆ ಹೊಣೆಯಲ್ಲಿ ಒಂದಿಷ್ಟನ್ನು ಗೋವಾದತ್ತುರವರು ಶೇರ್ ಮಾಡಿಕೊಳ್ಳುತ್ತಿದ್ದರು. ಈಗ ದತ್ತುರವರ ನಿರ್ಗಮನದಿಂದ ಅಭಿನಯತರಂಗ ಹಾಗು ಚಿತ್ರಾ ತಂಡಗಳ ಜವಾಬ್ದಾರಿಯನ್ನು ಗೌರಿದತ್ತುರವರು ಒಬ್ಬರೇ ನಿಭಾಯಿಸಬೇಕಾಗಿದೆ. ಆ ಸಾಮರ್ಥ್ಯ ಗೌರಿಮೆಡಂಗೆ ಇದೆಯಾದರೂ ಗೋವಾದತ್ತುರವರನ್ನು ಅಭಿನಯತರಂಗ ತುಂಬಾ ಮಿಸ್ ಮಾಡಿಕೊಳ್ಳುತ್ತದೆ. ಯಾಕೆಂದರೆ ಅಭಿನಯ ತರಂಗದ ಎರಡನೇ ಆಧಾರಸ್ಥಂಭ ಉರುಳಿಬಿದ್ದು ಮಲಗಿದೆ. ನೆನಪುಗಳಿಗೇನು ಬರವಿಲ್ಲ. ಮೊಗೆದಷ್ಟು ಒರತೆಯಾಗುತ್ತವೆ. ಗೋವಾದತ್ತುರವರ ಅಂತಿಮ ವಿಧಾಯದ ಸಮಯದಲ್ಲಿ ಅವರೊಂದಿಗಿನ ನೆನಪಿನ ಬುತ್ತಿ ಬಿಚ್ಚಿಟ್ಟುಕೊಂಡು ಯಾರಿಗೆ ಹಂಚಲಿ ಎಂದು ಬರೆಯುತ್ತಾ ಕುಳಿತಿದ್ದೇನೆ. ದತ್ತು ಸಾಹೇಬರಿಗೆ ನುಡಿನಮನಗಳನ್ನು ಅವರ ನೆನಪುಗಳನ್ನು ಮೆಲಕು ಹಾಕುತ್ತಾ ಅರ್ಪಿಸುತ್ತಿರುವೆ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ