ನೆಮ್ಮದಿಯಾಗಿ ನಾಟಕ ನೋಡೋದಕ್ಕೂ ಸಾಧ್ಯವಾಗ್ತಿಲ್ಲಾ? ಎಷ್ಟೇ ಪ್ರಯತ್ನ ಪಟ್ಟರೂ ಏಕಾಗ್ರತೆ ಬರುತ್ತಿಲ್ಲಾ? ಇದು ಒಬ್ಬಿಬ್ಬರ ಅನುಭವ ಅಲ್ಲಾ, ನಾಟಕ ನೋಡಲು ಬಂದ ಬಹುತೇಕ ಪ್ರೇಕ್ಷಕರ ಅನಿಸಿಕೆ. ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನಡೀತಾ ಇದ್ರೂ ಎಲ್ಲಿಂದಲೋ ಅಶರೀರವಾಣಿ, ವಿತ್ತವಿಚಿತ್ರ ದ್ವನಿಗಳ ಅಬ್ಬರ. ಅಸ್ಪಷ್ಟ ಹಾಡು ಸಂಗೀತಗಳ ತಾರಕ ಸ್ವರ. ನಾಟಕ ಮಾಡುವವರಿಗೂ ಹಾಗೂ ನೋಡುವವರಿಗೂ ಏನೋ ಒಂದು ಕಸಿವಿಸಿ. ತಥ್, ಅನಪೇಕ್ಷಿತ ಹಾಡು ಸೌಂಡಿನ ಮೂಲ ಹುಡುಕಿಕೊಂಡು ಹೋದರೆ ಕಲಾಕ್ಷೇತ್ರದಲ್ಲಿ ಹಿಂದಿರುವ ‘ಸಂಸ’ ಬಯಲು ರಂಗಮಂದಿರದಲ್ಲಿ ಬ್ಯಾಂಡು. ತಾರಕ ಸ್ವರದಲ್ಲಿ ಹಾಡು, ಕಿವಿಗೆ ಮಾರಕವೆನ್ನುವಷ್ಟು ಸಂಗೀತ....
ಒಂದಲ್ಲ ಎರಡಲ್ಲ ಒಂದೆರಡು ವಾರದಿಂದ ‘ಸಂಸದಲ್ಲಿ ಬ್ಯಾಂಡು, ಕಲಾಕ್ಷೇತ್ರದಲ್ಲಿ ಸೌಂಡು’ ನಿರಂತರ. ಪ್ರತಿದಿನ ಸಂಸದಲ್ಲಿ ಮೈಕಾಸುರನ ಅಬ್ಬರ, ಕಲಾಕ್ಷೇತ್ರದಲ್ಲಿ ನಾಟಕ ಆಡುವವರ ನೋಡುವವರ ಸ್ಥಿತಿ ಹರೋಹರ. ಆಸೆಯಿಂದ ನಾಟಕ ಮಾಡುವ ರಂಗತಂಡದವರ ಗೋಳಾಟ ಕೇಳೋರು ಯಾರು? ಆಸಕ್ತಿಯಿಂದ ಟಿಕೆಟ್ ಕೊಟ್ಟು ನಾಟಕ ನೋಡಲು ಬಂದ ಪ್ರೇಕ್ಷಕರ ಪರದಾಟಕ್ಕೆ ಪರಿಹಾರ ಕೊಡಿಸೋರು ಯಾರು?. ಕಲಾಕ್ಷೇತ್ರಕ್ಕೂ ಹಾಗೂ ‘ಸಂಸ’ ಬಯಲು ಮಂದಿರಕ್ಕೂ ನಡುವೆ ಇರೋದು ಒಂದು ದೊಡ್ಡ ರೋಲಿಂಗ್ ಶಟರ್ ಮಾತ್ರ. ಆ ಕಡೆ ಕೆಮ್ಮಿದರೆ ಈ ಕಡೆ ಕೇಳಿಸುತ್ತದೆ. ಇಂತಹುದರಲ್ಲಿ ಕಿವಿಗಳೇ ಕಿತ್ತುಹೋಗುವಷ್ಟು ಸೌಂಡ್ ಇಟ್ಟು ‘ಸಂಸ’ದಲ್ಲಿ ಕಾರ್ಯಕ್ರಮಗಳನ್ನು ಮಾಡಿದರೆ ಕಲಾಕ್ಷೇತ್ರದಲ್ಲಿ ನಾಟಕ ಆಡುತ್ತಿರುವವರ ಹಾಗೂ ನೋಡುತ್ತಿರುವವರ ಗತಿ ಏನು?
ನಾಟಕವೆಂದರೆ ಆರ್ಕೆಸ್ಟಾಗಳಂತಲ್ಲ. ಭಾಷಣಗಳನ್ನು ಮಾಡುವ ಕಾರ್ಯಕ್ರಮಗಳಂತೆಯೂ ಅಲ್ಲ. ನಾಟಕವೊಂದು ಯಶಸ್ವಿಯಾಗಬೇಕಾದರೆ ಪ್ರೇಕ್ಷಕರಲ್ಲಿ ಮೂಡ್ ಕ್ರಿಯೇಟ್ ಮಾಡಬೇಕಾಗುತ್ತದೆ. ದೃಶ್ಯಕ್ಕೆ ಪೂರಕವಾಗಿ ಮೂಡ್ ಹುಟ್ಟಿಸಬೇಕೆಂದರೆ ಹಿನ್ನೆಲೆ ಸಂಗೀತ, ಹಾಡು, ಸಂಭಾಷಣೆಗಳು ಬಹು ಮುಖ್ಯ ಪಾತ್ರವಹಿಸುತ್ತವೆ. ನಾಟಕಕ್ಕೆ ಸಂಬಂಧವಿಲ್ಲದ ಹಾಡು, ಸಂಗೀತ, ಭಾಷಣಗಳು ಹೊರಗಡೆಯಿಂದ ಕೇಳಿ ಬಂದರೆ ಪ್ರೇಕ್ಷಕರಿಗೆ ತಲ್ಲೀನತೆ ಸಾಧ್ಯವೆ? ಕಲಾವಿದರಿಗೆ ಪಾತ್ರದ ಆಳಕ್ಕಿಳಿದು ಅಭಿನಯಿಸಲು ಆಗುತ್ತದೆಯೇ? ದೃಶ್ಯಕ್ಕನುಗುಣವಾಗಿ ಮೂಡ್ ಹುಟ್ಟುತ್ತದೆಯೇ? ಸಾಧ್ಯವೇ ಇಲ್ಲ. ನಾಟಕ ಆಡುವವರ ಹಾಗೂ ನೋಡುವವರ ತಲ್ಲೀನತೆಗೆ ಭಂಗ ಬಂದರೆ ಇಡೀ ನಾಟಕ ತೋಪಾಗುತ್ತದೆ. ಹಣ ಕೊಟ್ಟು ನಾಟಕ ನೋಡಲು ಬಂದ ಪ್ರೇಕ್ಷಕರಿಗೆ ಅನ್ಯಾಯ ಮಾಡಿದಂತಾಗುತ್ತದೆ. ತಿಂಗಳಕ್ಕಿಂತ ಹೆಚ್ಚು ದಿನಗಳ ಕಾಲ ಹಲವರು ನಾಟಕವೊಂದನ್ನು ಕಟ್ಟಲು ಪಟ್ಟ ಶ್ರಮ ವ್ಯರ್ಥವಾಗುತ್ತದೆ.
ರವೀಂದ್ರ ಕಲಾಕ್ಷೇತ್ರ-50 ರ ಸುವರ್ಣ ಸಂಭ್ರಮದಲ್ಲಿ ‘ನಾಟಕ ಬೆಂಗಳೂರು’ ಆಯೋಜಿಸಿದ ಮೂರನೆಯ ಕಂತಿನ ನಾಟಕೋತ್ಸವವು 2014, ಫೆಬ್ರವರಿ 5ರಿಂದ 14ರವರೆಗೆ ನಡೆಯಿತು. ಈ ನಾಟಕೋತ್ಸವದಾದ್ಯಂತ ಹೆಚ್ಚು ಕಡಿಮೆ ಪ್ರತಿ ದಿನ ‘ಸಂಸ’ದಿಂದ ಹೊರಹೊಮ್ಮುತ್ತಿರುವ ಸದ್ದು ಕಲಾಕ್ಷೇತ್ರದ ಒಳಗೆ ಕುಳಿತು ನಾಟಕ ನೋಡುವ ಪ್ರೇಕ್ಷಕರನ್ನು ಗುದ್ದತೊಡಗಿತು. ನಾಟಕ ಆಡುವವರಿಗಂತೂ ವಿಚಿತ್ರ ತಳಮಳ. ಕೆಲವು ರಂಗತಂಡದವರು ಗೊಣಗುತ್ತಲೇ ನಾಟಕವಾಡಿದರು. ಇನ್ನು ಕೆಲವರು ನಾಟಕ ಬೆಂಗಳೂರು ಆಯೋಜಕರಿಗೆ ದೂರು ಹೇಳಿದರು. ಏನೇನೂ ಪ್ರಯೋಜನವಾಗಲೇ ಇಲ್ಲ. ‘ಸ್ವಲ್ಪ ಎಡ್ವಸ್ಟ್ ಮಾಡ್ಕೋಳ್ಳಿ’ ಎನ್ನುವ ಉತ್ತರವೇ ಬರತೊಡಗಿತು.
ಆದರೆ ನಾಟಕೋತ್ಸವದ ಕೊನೆಯ ದಿನ ರಂಗಕರ್ಮಿಗಳ ಆಕ್ರೋಶ ಬುಗಿಲೆದ್ದಿತು. ಅವತ್ತು ಪ್ರೇಮಿಗಳ ದಿನ. ‘ಸಂಸ’ದಲ್ಲಿ ವಾಲೈಂಟೈನ್ ಡೇ ಸಂಭ್ರಮಕ್ಕೋಸ್ಕರ ಆರ್ಕೆಸ್ಟ್ರಾ ಏರ್ಪಾಡಾಗಿತ್ತು. ಇನ್ನೂ ಸಂಜೆ ಆರುವರೆಯಾಗಿರಲಿಲ್ಲ ಹಾಡು ಸಂಗೀತದಬ್ಬರ ಶುರುವಾಯಿತು. ಕಲಾಕ್ಷೇತ್ರದಲ್ಲಿ ಅಂದು ಬಿ.ಜಯಶ್ರೀರವರ ಸ್ಪಂದನ ರಂಗತಂಡದ ‘ಲಕ್ಷಾಪತಿ ರಾಜನ ಕಥೆ’ ನಾಟಕ ಪ್ರದರ್ಶನವಿತ್ತು. ಕಲಾವಿದರು ಪಾತ್ರವನ್ನು ತಮ್ಮೊಳಗೆ ಆಹ್ವಾನಿಸಿಕೊಳ್ಳುವ ಸಮಯ. ಏನೇ ಮಾಡಿದರೂ ಏಕಾಗ್ರತೆ ಮೂಡುತ್ತಿಲ್ಲ. ಜಯಶ್ರೀಯವರಿಗೆ ಸಹಿಸಲಾಗಲೇ ಇಲ್ಲ. ಈ ಅನಗತ್ಯ ಅಬ್ಬರದಲ್ಲಿ ನಾವು ಇಂದು ನಾಟಕ ಮಾಡಲು ಸಾಧ್ಯವಿಲ್ಲ ಎಂದು ಬಿಟ್ಟರು. ನಾಟಕೋತ್ಸವದ ಕೊನೆಯ ದಿನವೆಂದರೂ ಪ್ರಮುಖ ಆಯೋಜಕರು ಬಂದಿರಲೇ ಇಲ್ಲ. ಚಡ್ಡಿ ನಾಗೇಶ ಹಾಗೂ ಜಿಪಿಓ ಚಂದ್ರು ಮಾತ್ರ ನಾಟಕ ಆರಂಭಿಸಿ ನಿರ್ದೇಶಕರಿಗೆ ಬೊಕ್ಕೆ ಕೊಡಲು ಬಂದಿದ್ದರು. ‘ನಾಟಕ ಆಡಲು ಸಾಧ್ಯವಿಲ್ಲ’ ಎಂದು ಜಯಶ್ರೀರವರು ಹೇಳಿದ ಕೂಡಲೇ ಕೆಲವರು ಅವರ ಮನವೊಲಿಸತೊಡಗಿದರು. ಇನ್ನೊಂದಿಬ್ಬರು ‘ಸಂಸ’ ಗೆ ಹೋಗಿ ಆರ್ಕೆಸ್ಟ್ರಾ ವ್ಯವಸ್ಥಾಪಕರಿಗೆ ಒಂದಿಷ್ಟು ಸೌಂಡ್ ಕಡಿಮೆ ಮಾಡಲು ಮನವಿ ಮಾಡಿಕೊಂಡರು. ಅವರು ಆಯಿತು ಎಂದರಾದರೂ ಸದ್ದೇನು ಕಡಿಮೆಯಾಗಲೇ ಇಲ್ಲ. ಏಳು ಗಂಟೆಗೆ ಶುರುವಾಗಬೇಕಿದ್ದ ನಾಟಕ ಏಳುವರೆಯಾದರೂ ಶುರುವಾಗಲೇ ಇಲ್ಲ. ಕಪ್ಪಣ್ಣನವರ ಜೊತೆಗೆ ಜಯಶ್ರೀ ಒಂದೆರಡು ಸುತ್ತಿನ ಮಾತುಕತೆಯಾಡಿದರು. ಕೊನೆಗೆ ಒತ್ತಾಯಕ್ಕೆ ಕಟ್ಟುಬಿದ್ದ ಬಿ.ಜಯಶ್ರೀಯವರು ‘ನಾಟಕ ಮಾಡುತ್ತೇವೆ, ಆದರೆ ಅದಕ್ಕೂ ಮುಂಚೆ ವೇದಿಕೆಯ ಮೇಲೆ ಸಾಂಕೇತಿಕವಾದರೂ ಪ್ರತಿಭಟಿಸುತ್ತೇವೆ’ ಎಂದರು. ಜೊತೆಯಲ್ಲಿದ್ದ ಕಪ್ಪಣ್ಣ ತಲೆಅಲ್ಲಾಡಿಸಿದರು.
“ನಾಟಕದ ಪ್ರದರ್ಶನಕ್ಕೆ ಅಡ್ಡಿಯನ್ನುಂಟುಮಾಡುತ್ತಿರುವ ಆರ್ಕೆಸ್ಟ್ರಾ ಕಾರ್ಯಕ್ರಮಗಳನ್ನು ವಿರೋಧಿಸಲೇಬೇಕು. ಕಲಾಕ್ಷೇತ್ರದಲ್ಲಿ ನಾಟಕ ಪ್ರದರ್ಶನಗಳಿದ್ದಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ‘ಸಂಸ’ ಬಯಲು ರಂಗಮಂದಿರವನ್ನು ಭಾರಿ ದ್ವನಿವರ್ಧಕಗಳನ್ನು ಬಳಸುವ ಆರ್ಕೆಸ್ಟ್ರಾದಂತಹ ಕಾರ್ಯಕ್ರಮಗಳಿಗೆ ಕೊಡಬಾರದು. ಪ್ರೇಕ್ಷಕರು, ರಂಗಕರ್ಮಿಗಳು ಇಲಾಖೆಯವರನ್ನು ಒತ್ತಾಯಿಸಬೇಕು. ಪತ್ರಕರ್ತರು ಬರವಣಿಗೆ ಮೂಲಕ ಸರಕಾರವನ್ನು ಎಚ್ಚರಿಸಬೇಕು. ಏನೇ ಆದರೂ ನಾಟಕ ಪ್ರದರ್ಶನಕ್ಕೆ ಯಾವುದೇ ರೀತಿಯ ವ್ಯತ್ಯಯ ಬರಬಾರದು. ಇಲಾಖೆಯಿಂದಾಗುವ ಈ ರೀತಿಯ ತೊಂದರೆಯನ್ನು ನಾವು ಕಲಾವಿದರು ಹಾಗೂ ರಂಗತಂಡ ವಿರೋದಿಸುತ್ತೇವೆ. ಹಾಗೂ ಈಗ ಸಾಂಕೇತಿಕವಾಗಿ ನಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತೇವೆ. ಹಾಗೂ ಪ್ರೇಕ್ಷಕರಿಗೆ ನಿರಾಶೆಯಾಗಬಾರದೆಂಬ ಕಾರಣದಿಂದ ನಮ್ಮ ನಾಟಕವನ್ನು ಪ್ರದರ್ಶಿಸುತ್ತೇವೆ” ಎಂದು ಬಿ.ಜಯಶ್ರೀ ತಮ್ಮ ಆತಂಕವನ್ನು ಹಾಗೂ ಆಕ್ರೋಶವನ್ನು ವ್ಯಕ್ತಪಡಿಸಿದರು.
ಜಯಶ್ರೀಯವರ ಆಕ್ರೋಶ ಅರ್ಥಪೂರ್ಣವಾಗಿತ್ತು. ಬೇರೆಲ್ಲಾ ರಂಗತಂಡಗಳು ‘ಸಂಸ’ ದಿಂದ ಬರುವ ಮೈಕಾಸುರನ ಹಾವಳಿಯನ್ನು ಅನಿವಾರ್ಯವಾಗಿ ತಾಳಿಕೊಂಡು ನಾಟಕವಾಡಿದ್ದವು. ಆದರೆ ಅವರೆಲ್ಲರ ದ್ವನಿಯಾಗಿ ಜಯಶ್ರೀ ಮಾತಾಡಿದರು. ಇದೆಲ್ಲಾ ಆಯೋಜಕರಿಗೆ ಗೊತ್ತಿಲ್ಲವೆಂದಿಲ್ಲ. ಆದರೆ ಅವರು ಇಲಾಖೆಯ ವಿರುದ್ಧ ಪ್ರತಿಭಟಿಸುವ ಸಾಹಸಕ್ಕೆ ಹೋಗಲೇ ಇಲ್ಲ. ರಂಗತಂಡಗಳು ತಮಗಾಗುತ್ತಿರುವ ತೊಂದರೆಗಾಗಿ ದೂರಿದರಾದರೂ ‘ಸ್ವಲ್ಪ ಎಡ್ಜಸ್ಟ್ ಮಾಡ್ಕೊಳ್ಳಿ’ ಎನ್ನುವ ಉತ್ತರ ಸಿಕ್ಕಿತೇ ಹೊರತು ಸಮಸ್ಯೆಗೆ ಪರಿಹಾರ ಸಿಗಲಿಲ್ಲ.
ಯಾಕೆ ಹೀಗೆ? ಸಂಸ್ಕೃತಿ ಇಲಾಖೆಯ ಅಧಿಕಾರಿಗಳನ್ನು ಹಿಡಿದು ಕೇಳುವ, ಕೇಳದಿದ್ದರೆ ಪ್ರತಿಭಟಿಸುವ ತಾಕತ್ತನ್ನು ಈ ನಾಟಕೋತ್ಸವದ ಆಯೋಜಕರು ಕಳೆದುಕೊಂಡಿದ್ದಾರಾ? ಹೌದು. ಯಾಕೆಂದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳ ಮರ್ಜಿಯ ಮೇರೆಗೆ ನಾಟಕೋತ್ಸವಗಳು, ಕ್ರಿಯಾಯೋಜನೆಗಳು ಆಯೋಜಿಸಲ್ಪಡುತ್ತವೆ. ಬಹುತೇಕರು ಇಲಾಖೆಯ ಯೋಜನೆಗಳ ಫಲಾನುಭವಿಗಳೂ ಆಗಿದ್ದಾರೆ. ಯಾರು ತಮಗೆ ಅನುದಾನವನ್ನು ಕೊಡುತ್ತಾರೋ, ಯಾರು ತಮ್ಮ ಯೋಜನೆಗಳಿಗೆ ಪ್ರಾಯೋಜನೆಯನ್ನೊದಗಿಸುತ್ತಾರೋ, ಅಂತವರ ವಿರುದ್ಧ ಪ್ರತಿಭಟಿಸಲು ಎಂದಾದರೂ ಸಾಧ್ಯವಾ? ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಯಾರಾದರೂ ದೂರಮಾಡಿಕೊಳ್ಳುತ್ತಾರಾ? ಹಣಕಾಸಿನ ನೆರವು ಕೊಟ್ಟವರ ವಿರೋಧ ಕಟ್ಟಿಕೊಳ್ಳಲು ಆಗುತ್ತದೆಯಾ? ಸಾಧ್ಯವೇ ಇಲ್ಲ. ಅಕಸ್ಮಾತ್ ವಿರೋಧಿಸಿದರು ಎಂದುಕೊಳ್ಳೋಣ. ರಂಗಕರ್ಮಿಗಳನ್ನೆಲ್ಲಾ ಸೇರಿಸಿ ಬ್ರಹತ್ ಪ್ರತಿಭಟನೆ ಹಮ್ಮಿಕೊಂಡರೂ ಎಂದು ಭಾವಿಸೋಣ. ಅದರಿಂದ ಮುಂದೆ ಆಯೋಜಿಸುವ ಯಾವುದೇ ಕಾರ್ಯಕ್ರಮಗಳಿಗೆ ಅಧಿಕಾರಿಗಳ ಸಹಕಾರ ಸಿಗುವುದಿಲ್ಲ. ಎಂಟತ್ತು ದಿನಗಳಷ್ಟು ಕಾಲ ನಿರಂತರವಾಗಿ ಕಲಾಕ್ಷೇತ್ರ ದೊರಕುವುದಿಲ್ಲ. ಸರಕಾರಿ ಅನುದಾನ, ಹಣಕಾಸಿನ ಸಹಾಯ ಸುಲಭದಲ್ಲಿ ದೊರೆಯುವುದೂ ಇಲ್ಲ. ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಯಾರೂ ಪ್ರತಿಭಟಿಸಲು ಹೋಗಲಿಲ್ಲ. ನಾಟಕ ಆಡುವವರಿಗೆ ಹಾಗೂ ನೋಡುಗರಿಗೆ ತೊಂದರೆಯಂತೂ ತಪ್ಪಲಿಲ್ಲ.
ವಿಪರ್ಯಾಸವೆಂದರೆ ನಮ್ಮ ಕಪ್ಪಣ್ಣನವರು ರಂಗವೇದಿಕೆಯ ಮೇಲೆ ಅವತ್ತು ಜಯಶ್ರೀಯವರ ಜೊತೆಗೆ ಭಾಗವಹಿಸಿದ್ದರು. ಭಾಗವಹಿಸಬಾರದಂದೇನೂ ಇಲ್ಲ. ಆದರೆ ಅವರು ಆ ಹಕ್ಕನ್ನು ಈಗಾಗಲೇ ಕಳೆದುಕೊಂಡಿದ್ದಾರೆ. ಯಾಕೆಂದರೆ.....
ಕಳೆದ ತಿಂಗಳು ಕಲಾಕ್ಷೇತ್ರದಲ್ಲಿ ‘ಸಿಜಿಕೆ ನೆನಪಿನ ರಾಷ್ಟೀಯ ನಾಟಕೋತ್ಸವ’ ನಡೆಯಿತು. ಇದೇ ನಮ್ಮ ಕಪ್ಪಣ್ಣನವರು ಸಂಕ್ರಾಂತಿಯ ದಿನ ಕಲಾಕ್ಷೇತ್ರದ ಆವರಣದಲ್ಲಿರುವ ಶಿಲ್ಪವನದಲ್ಲಿ ‘ಸುಗ್ಗಿ ಹುಗ್ಗಿ’ ಎನ್ನುವ ಸರಕಾರಿ ಜಾನಪದ ಜಾತ್ರೆ ಕಾರ್ಯಕ್ರಮವೊಂದು ನಡೆಯುವಂತೆ ನೋಡಿಕೊಂಡು ಅದರ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಇದರ ಕುರಿತು ಈಗಾಗಲೇ ಲೇಖನವೊಂದರಲ್ಲಿ ವಿವರವಾಗಿ ಬರೆಯಲಾಗಿದೆ. ಕಲಾಕ್ಷೇತ್ರದಲ್ಲಿ ನಡೆಯುವ ನಾಟಕಕ್ಕೆ ತೊಂದರೆ ಯಾಗುತ್ತದೆ ಎಂದು ಗೊತ್ತಿದ್ದರೂ, ಶಶಿಧರ್ ಅಡಪ ಹಾಗೂ ಸಿ.ಬಸವಲಿಂಗಯ್ಯನವರು ಹೋಗಿ ಕೇಳಿಕೊಂಡರೂ ಯಾವುದನ್ನೂ ಲೆಕ್ಕಿಸದ ಕಪ್ಪಣ್ಣ ಹಠಕ್ಕೆ ಬಿದ್ದು ‘ಸುಗ್ಗಿ ಹುಗ್ಗಿ’ ಕಾರ್ಯಕ್ರಮವನ್ನು ನಡೆಸಿದರು. ಕೇರಳ ರಂಗತಂಡದ ‘ಹಿಜಡಾ’ ನಾಟಕ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಳ್ಳುತ್ತಿತ್ತು. ಅದೇ ಸಮಯಕ್ಕೆ ಶಿಲ್ಪವನದಲ್ಲಿ ಜಾನಪದ ಹಾಡು, ಸಂಗೀತ ಹಾಗೂ ಮಂತ್ರಿಗಳ ಭಾಷಣಗಳ ಅಬ್ಬರ ತಾರಕಕ್ಕೆರಿತು. ನಾಟಕ ನೋಡಲು ನೂರು ರೂಪಾಯಿ ಕೊಟ್ಟು ಬಂದ ಪ್ರೇಕ್ಷಕರಿಗೆ ಅಸಾಧ್ಯ ಕಿರುಕಳವನ್ನು ಕೊಟ್ಟಿತು. ಹೀಗೆ ನಾಟಕಕ್ಕೆ ತೊಂದರೆ ಕೊಟ್ಟ ಕಪ್ಪಣ್ಣ ಈಗ ತಾವು ಬೆಳಕು ನಿರ್ವಹಣೆ ಮಾಡುತ್ತಿರುವ ನಾಟಕಕ್ಕೆ ‘ಸಂಸ’ದಿಂದ ಬರುವ ಹಾಡು-ಸಂಗೀತದಿಂದ ತೊಂದರೆಯಾಗುತ್ತದೆ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದೊಂದು ವಿಪರ್ಯಾಸ.
ಹೋಗಲಿ.... ಹಿಂದೆ ತೊಂದರೆ ಕೊಟ್ಟಿದ್ದರಿಂದ ಕಪ್ಪಣ್ಣನವರಿಗೆ ಈಗ ಜ್ಞಾನೋದಯವಾಗಿ ಇನ್ನು ಮುಂದೆ ನಾಟಕಗಳಿಗೆ ತೊಂದರೆಯಾಗಬಾರದು ಎಂಬ ಸದಾಶಯದಿಂದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆಂದೇ ಭಾವಿಸೋಣ ಮತ್ತು ಹಾಗೆ ಆಗಲಿ ಎಂದು ಆಶಿಸೋಣ. ಅನಾರೋಗ್ಯ ಪೀಡಿತರಾಗಿದ್ದ ಅನಂತಮೂರ್ತಿಯವರಿಗೆ ರಾಜ್ಯಪಾಲ ‘ರೋಗಿ’ ಎಂದಿದ್ದಕ್ಕೆ ತಮ್ಮ ‘ಸಾಹಿತಿ ಮತ್ತು ಕಲಾವಿದರ’ ವೇದಿಕೆಯಿಂದ ಟೌನ್ ಹಾಲ್ ಮುಂದೆ ಫೆಬ್ರವರಿ ಮೂರ ರಂದು ಪ್ರತಿಭಟನೆಯನ್ನು ಕಪ್ಪಣ್ಣ ಆಯೋಜಿಸಿದ್ದರು. ತಮಗೆ ಸಂಬಂಧವಿಲ್ಲದ ಕ್ಷೇತ್ರದವರಿಗೆ, ತಮಗೆ ಸಂಬಂಧವಿಲ್ಲದ ಅನಗತ್ಯ ವಿಷಯಕ್ಕೆ ಧರಣಿಯನ್ನು ಆಯೋಜಿಸಿದ ಕಪ್ಪಣ್ಣನವರು ಈಗ ನಾಟಕ ಪ್ರದರ್ಶನಕ್ಕೆ ತೊಂದರೆಯಾಗುತ್ತಿರುವಾಗ ಯಾಕೆ ಟೌನ್ಹಾಲ್ ಮುಂದೆನೋ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮುಂದೆನೋ ಹೋಗಿ ಪ್ರತಿಭಟಿಸುತ್ತಿಲ್ಲ? ಅದು ಸಾಧ್ಯಾನೂ ಇಲ್ಲ? ಇಲಾಖೆಯ ವಿರುದ್ಧ ಪ್ರತಿಭಟಿಸಿ ತಮ್ಮ ಅನ್ನದ ಮೂಲವನ್ನೇ ಬಂದ್ ಮಾಡಿಕೊಳ್ಳುವಷ್ಟು ಕಪ್ಪಣ್ಣ ದಡ್ಡರಲ್ಲ.
ಬಿ.ಜಯಶ್ರೀಯವರಿಗೆ ಇದೆಲ್ಲಾ ಗೊತ್ತಿಲ್ಲ. ಗೊತ್ತಿದ್ದರೂ ಅವರದು ಆ ಕ್ಷಣದ ಆಕ್ರೋಶವಷ್ಟೆ. ಅವರು ಹೀಗೆ ಪ್ರತಿಭಟಿಸುವ ಅಗತ್ಯವೇ ಇಲ್ಲ. ನೇರವಾಗಿ ಸಂಸ್ಕೃತಿ ಮಂತ್ರಿಗಳು ಇಲ್ಲವೇ ಮುಖ್ಯಮಂತ್ರಿಗಳ ಜೊತೆಗೆ ಮಾತನಾಡಿ ‘ಸಂಸ’ವನ್ನು ಆರ್ಕೆಸ್ಟ್ರಾಗಳಿಗೆ ಬಾಡಿಗೆ ಕೊಡುವುದನ್ನು ನಿಲ್ಲಿಸುವಂತೆ ಮಾಡಲು ಜಯಶ್ರೀಯವರಿಗೆ ಸಾಧ್ಯ. ಯಾಕೆಂದರೆ ಅವರು ಕೇಂದ್ರ ಸರಕಾರದ ಸಚಿವರು. ಕೇಂದ್ರ ಸರಕಾರದಲ್ಲಿರುವ ಕಾಂಗ್ರೆಸ್ ಸರಕರವೇ ಕರ್ನಾಟಕದಲ್ಲಿ ಆಡಳಿತ ಮಾಡುತ್ತಿದೆ. ಬಿ.ಜಯಶ್ರೀಯವರ ಒಂದೇ ಒಂದು ಪೋನ್ ಪ್ರತಿಭಟನೆಗಳಿಂದಾಗದ ಕೆಲಸವನ್ನು ಮಾಡಿಬಿಡಬಲ್ಲುದು. ಇಲಾಖೆಯ ಆಯುಕ್ತರ ಮೇಲೆ ಒತ್ತಡ ತರಬಲ್ಲುದು. ಕೈಯಲ್ಲಿ ಅಧಿಕಾರವಿದ್ದೂ ಅದನ್ನು ಸಮರ್ಥವಾಗಿ ಬಳಸಲಾಗದೇ ಸಾಂಕೇತಿ ಪ್ರತಿಭಟನೆ ಮಾಡುತ್ತೇನೆ ಎನ್ನುವವರಿಗೆ ಏನೆನ್ನಬೇಕು ಹೇಳಿ. ಕೇವಲ ಕ್ಷಣಿಕವಾಗಿ ಸ್ಮಶಾನ ವೈರಾಗ್ಯಕ್ಕೊಳಗಾದವರಂತೆ ನಾಲ್ಕು ಮಾತುಗಳಲ್ಲಿ ಪ್ರತಿಭಟನೆ ಸಲ್ಲಿಸಿ ಮಾರನೆಯ ದಿನ ಮರೆತುಬಿಟ್ಟರು. ಅವತ್ತಿಗೆ ನಾಟಕೋತ್ಸವದ ಮೂರನೆಯ ಕಂತೂ ಮುಗಿದಿತ್ತು. ಸಮಸ್ಯೆಯೊಂದು ಪರಿಹಾರ ಕಾಣದೇ ಹೋಯಿತು. ಈಗಲೂ ಪ್ರತ್ಯೇಕವಾಗಿ ನಾಟಕ ಮಾಡುವವರಿಗೆ ಆಗಾಗ ಸಂಸದಲ್ಲಿ ಮೊಳಗುವ ಶಬ್ದಾಸುರನ ಕಾಟದಿಂದ ಮುಕ್ತಿ ಎಂಬುದಿಲ್ಲ.
ಎಲ್ಲರಿಗೂ ಕಲಾಕ್ಷೇತ್ರ ಸಿಗುವುದಿಲ್ಲ. ಅಂತವರಿಗಾಗಿ ಪರ್ಯಾಯವಾಗಿ ‘ಸಂಸ’ ಬಯಲು ರಂಗ ಮಂದಿರವನ್ನು ನಿರ್ಮಿಸಲಾಯಿತು. ಅದಕ್ಕೂ ಸಹ ರಂಗಕರ್ಮಿಗಳ ತೀವ್ರ ಒತ್ತಾಯ ಒತ್ತಡ ಕಾರಣವಾಗಿತ್ತು. ರಂಗಮಂದಿರ ಎಂದ ಮೇಲೆ ಅದನ್ನು ರಂಗಭೂಮಿ ಚಟುವಟಿಕೆಗಳಿಗೆ ಕೊಡಬೇಕಾದದ್ದು ನ್ಯಾಯಯುತವಾದದ್ದು. ಆದರೆ ಯಾರೇ ಬಂದು ಕೇಳಿದರೂ ಹಿಂದೆ ಮುಂದೆ ಆಲೋಚನೆ ಮಾಡದೆ, ಬೇರೆ ನಾಟಕ ಪ್ರದರ್ಶನಗಳಿಗೆ ಅಸಾಧ್ಯ ತೊಂದರೆಯಾಗುತ್ತದೆ ಎನ್ನುವುದನ್ನು ಆಲೋಚನೆ ಮಾಡದೇ ಬಾಡಿಗೆ ಕೊಡುತ್ತಿರುವ ಇಲಾಖೆಯ ಅಧಿಕಾರಿಗಳಿಗೆ ಒಂದಿಷ್ಟಾದರೂ ರಂಗಭೂಮಿಯ ಬಗ್ಗೆ ಕಾಳಜಿ ಇದೆಯಾ? ರಂಗೇತರ ಚಟುವಟಿಕೆಗಳಿಗೆ ಸಂಸವನ್ನು ಕೊಡುತ್ತಿರುವುದನ್ನು ಹಾಗೂ ರಂಗ ಪ್ರದರ್ಶನಗಳಿಗೆ ತೊಂದರೆಯಾಗುತ್ತಿರುವುದನ್ನು ನೋಡಿಕೊಂಡು ರಂಗಕರ್ಮಿಗಳು ಯಾಕೆ ಸುಮ್ಮನಿದ್ದಾರೆ? ಅನಗತ್ಯ ವಿಚಾರಗಳಿಗೆ ಪ್ರತಿಭಟನೆ ಮಾಡುವ ಸೋ ಕಾಲ್ಡ್ ರಂಗರಾಜಕೀಯ ನಾಯಕರುಗಳು ಯಾಕೆ ಸಂಸ ವನ್ನು ರಂಗ ಚಟುವಟಿಕೆಗಳಿಗೆ ಮಾತ್ರ ಬಳಸಬೇಕು ಎಂದು ಒತ್ತಾಯಿಸುತ್ತಿಲ್ಲ? ಉತ್ತರಗಳನ್ನು ಹುಡುಕಿದಷ್ಟೂ ಒಳಸುಳಿಗಳು ಕ್ಲಿಷ್ಟವಾಗುತ್ತಾ ಹೋಗುತ್ತವೆ. ಪ್ರಶ್ನೆಗಳಿಗೆ ಪ್ರಶ್ನೆಗಳೇ ಉತ್ತರವಾಗುತ್ತವೆ. ‘ಸಂಸ’ದಲ್ಲಿ ಬ್ಯಾಂಡುಗಳು ಬಂದಾಗಬೇಕು, ಕಲಾಕ್ಷೇತ್ರದಲ್ಲಿ ಹೊರಗಿನಿಂದ ಅನಗತ್ಯ ಸೌಂಡು ಒಳಬರಬಾರದು. ಹೀಗೆಂದು ಇಲಾಖೆಯನ್ನು, ಸರಕಾರವನ್ನು ರಂಗಕರ್ಮಿಗಳು ಒಂದಾಗಿ ಒತ್ತಾಯಿಸಬೇಕಾಗಿದೆ. ಸಂಸ’ವನ್ನು ರಂಗಭೂಮಿಗಾಗಿಯೇ ಉಳಿಸಿಕೊಳ್ಳಬೇಕಿದೆ. ಕಲಾಕ್ಷೇತ್ರದಲ್ಲಿ ನಿರಾತಂಕವಾಗಿ ನಾಟಕಗಳು ಪ್ರದರ್ಶನಗೊಳ್ಳಬೇಕಿದೆ. ಇಲ್ಲವಾದರೆ ‘ಸಂಸ’ ಬಯಲು ಆರ್ಕೆಸ್ಟ್ರಾ ಮಂದಿರ ಎಂದು ಹೆಸರು ಬದಲಾಯಿಸಬೇಕಾಗುತ್ತದೆ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ