ಗುರುವಾರ, ಫೆಬ್ರವರಿ 20, 2014

ಸಂಗತಗೊಂಡ ಅಸಂಗತ ನಾಟಕ ‘ಗಾಡೋ ನಿರೀಕ್ಷೆಯಲ್ಲಿ



                                               
ಮನುಷ್ಯನ ಅಭದ್ರತೆ, ಸಂಧಿಗ್ಧತೆ, ನಿಷ್ಕ್ರಿಯತೆಗಳನ್ನು ನಾಟಕದಲ್ಲಿ ಹೇಳುವಂತಹ ಪ್ರಯತ್ನಕ್ಕೆ ಅಸಂಗತ ನಾಟಕಗಳು ಎನ್ನುತ್ತಾರೆ.  ಜನರ ಬದುಕಿನ ಅರ್ಥಹೀನತೆ ಹಾಗೂ ಅತಾರ್ಕಿಕತೆಗಳು ಅಸಂಗತ ನಾಟಕಗಳ ಸ್ಥಾಯಿಭಾವವಾಗಿವೆ. ಇಂತಹ ನಾಟಕಗಳಲ್ಲಿ ಆಯ್ದುಕೊಂಡ ವಸ್ತು, ನಿರೂಪನಾ ಶೈಲಿ ಹಾಗೂ ರಚನಾ ತಂತ್ರಗಳಲ್ಲಿ ಅಸಂಗತತೆ ಪ್ರಾಮುಖ್ಯವಾಗಿರುತ್ತದೆ. ಹಿಂದಿನ ಎಲ್ಲ ರೀತಿಯ ನಾಟಕ ಪರಂಪರೆಗಳಿಗೆ ಭಿನ್ನವಾಗಿರುವುದು ಅಸಂಗತ ನಾಟಕ ಚಳುವಳಿ. ಐರ್ಲೆಂಡಿನ ಬೆಕೆಟ್ ಮತ್ತು ರುಮೇನಿಯದ ಆಯನೆಸ್ಕೋ ಅಸಂಗತ ನಾಟಕಗಳ ಹರಿಕಾರ ನಾಟಕಕಾರರು.

ಅರ್ಥರಹಿತ ಬದುಕಿನಲ್ಲಿ ಮಾನವನ ಅಸ್ತಿತ್ವದ ಪ್ರಶ್ನೆ ಕಾಡುತ್ತದೆ. ಮಾನವೀಯ ಮೌಲ್ಯಗಳು ಪತನಗೊಂಡ ಸಮಾಜದಲ್ಲಿ ಜನರ ನಿರ್ಭಾವುಕತೆ ಮತ್ತು ಏಕಾಂಗಿತನ ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ಅಸಂಗತ ನಾಟಕಗಳು ಹುಟ್ಟಿಕೊಳ್ಳುತ್ತವೆ. ಯುರೋಪಿನ ರಾಜಕೀಯ ಹಾಗೂ ಸಾಮಾಜಿಕ ಅದಪಃತನದ ಹಿನ್ನೆಲೆಯಲ್ಲಿ, ಮಹಾಯುದ್ಧ ಹಾಗೂ ಕ್ರೌರ್ಯಗಳು ನಿರಾಶಾದಾಯಕ ಸನ್ನಿವೇಶಗಳನ್ನು ಸೃಷ್ಟಿಸಿದ ಸಂದರ್ಭದಲ್ಲಿ, ಮನುಷ್ಯರ ನಂಬಿಕೆ, ಸಿದ್ದಾಂತ, ಸಂಬಂಧ, ನೈತಿಕತೆಗಳು ಛಿದ್ರಗೊಂಡಂತ ಪರಿಸ್ಥಿತಿಯಲ್ಲಿ ಅಸಂಗತ ನಾಟಕ ಪರಂಪರೆಯೊಂದು ಹುಟ್ಟಿತು. ಅಸಂಗತ ನಾಟಕಗಳ ಕೇಂದ್ರ ಪ್ಯಾರಿಸ್. ಇಂಗ್ಲೀಷ್ ಮಾತೃಭಾಷೆಯ ಐರ್ಲೆಂಡಿನ ಸಾಮ್ಯುಯಲ್ ಬೆಕೆಟ್ (1906-1980) ಸಹ ಪ್ರಾನ್ಸ್ನಲ್ಲಿ ನೆಲೆಸಿ ಪ್ರೆಂಚ್ ನಾಟಕಗಳನ್ನು ಬರೆದ. ದಾರಿಕಾಣದೇ ದಿಕ್ಕೇಡಿಯಾದ ಬದುಕಿನಲ್ಲಿ ಇರಲೇಬೇಕಾದ ಅನಿವಾರ್ಯತೆಗೊಳಗಾದ ಅಸಹಾಯಕ ಮನುಷ್ಯರ ಅಸಂಗತೆಗಳನ್ನು ಬೆಕೆಟ್ ತನ್ನ ನಾಟಕಗಳಲ್ಲಿ ಬರೆದಿದ್ದಾನೆ. ಮನುಷ್ಯನ ಅಸ್ತಿತ್ವ, ಬೆಕೆಟ್ ಅಸಂಗತ ನಾಟಕಗಳಲ್ಲಿ ಪ್ರಮುಖವಾದದ್ದು ವೇಟಿಂಗ್ ಫಾರ್ ಗಾಡೋ,

ನಾಟಕವನ್ನು ಆಧರಿಸಿ ಕನ್ನಡದಲ್ಲಿ ಚಂದ್ರಕಾಂತ ಕುಸನೂರರು ವಿದೂಷಕ ನಾಟಕವನ್ನು ರಚಿಸಿದ್ದಾರೆ. ಈಗ ವೇಟಿಂಗ್ ಫಾರ್ ಗಾಡೋ ನಾಟಕವನ್ನು ಗಾಡೋ ನಿರೀಕ್ಷೆಯಲ್ಲಿ ಎನ್ನುವ ಹೆಸರಲ್ಲಿ ಕೆ.ಎಲ್.ಪ್ರಸನ್ನರವರು ಕನ್ನಡಕ್ಕೆ ಅನುವಾದಿಸಿದ್ದು ಮಂಜುನಾಥ ಬಡಿಗೇರರವರು ಬಾಷ್ (ಮೈಕೋ) ಲಲಿತಕಲಾ ಸಂಘ ಕಲಾವಿದರಿಗೆ ನಿರ್ದೇಶಿಸಿದ್ದಾರೆ. 2014, ಫೆಬ್ರವರಿ 10 ರಂದು ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ ನಾಟಕ ಪ್ರದರ್ಶನಗೊಂಡಿತು.

 
ನಾಟಕಕ್ಕೆ ಆದಿಯೂ ಇಲ್ಲಾ, ಅಂತ್ಯವೂ ಇಲ್ಲ. ವಸ್ತುವೂ ಇಲ್ಲ, ವಿಷಯವೂ ಇಲ್ಲ. ಕ್ರಿಯೆಯೂ ಇಲ್ಲಾ, ಸೂಕ್ತ ಪ್ರತಿಕ್ರಿಯೆಯೂ ಇಲ್ಲ. ಪಾತ್ರಗಳಿವೆ ಆದರೆ ಅವುಗಳಿಗೆ ಯಾವ ದಾರಿಯೂ ಇಲ್ಲಾ ಗುರಿಯೂ ಇಲ್ಲ ಕನಿಷ್ಟ ನಿರ್ದಿಷ್ಟ ಅಸ್ತಿತ್ವವೇ ಇಲ್ಲ. ಅಸಂಗತ ಬದುಕನ್ನು ಅಸಂಬದ್ಧ ರೀತಿಯಲ್ಲಿ ನಿರೂಪಿಸುವ ನಾಟಕ ಸುಲಭಕ್ಕೆ ನೋಡುಗರಿಗೆ ಅರ್ಥವಾಗುವುದೂ ಇಲ್ಲ. ಒಂದು ಅರ್ಥವಾಗದ ಕನಸಿನಂತೆ, ಅನರ್ಥಕಾರಿ ಮನಸ್ಸಿನ ಅಸಂಬದ್ದ ಆಲೋಚನೆಯಂತೆ, ನಾಟಕ ಮೂಡಿಬಂದಿದೆ. ನಾಟಕದ ಉದ್ದೇಶವೂ ಅದೇ ಆಗಿದೆ.  ಬದುಕಿನ ಕೌರ್ಯವನ್ನು, ಅಸಾಂಗತ್ಯವನ್ನು, ಸಮಾಜದ ಅವನತಿಯನ್ನು, ಮನುಷ್ಯರ ಅಸ್ತಿತ್ವದ ನಿರರ್ಥಕತೆಯನ್ನು, ಬದುಕಿನ ಅರ್ಥರಹಿತತೆಯನ್ನು ಹೇಳುವುದೇ ಗಾಡೋ.... ನಾಟಕದ ಆಶಯವಾಗಿದೆ.

ಬೇವಾರ್ಸಿಗಳಾದ ಗೋಗೋ ಮತ್ತು ಆಲ್ಬರ್ಟ ಎನ್ನುವ ಇಬ್ಬರು ವ್ಯಕ್ತಿಗಳು ರಸ್ತೆ ಬದಿಯಲ್ಲಿ ಅನಗತ್ಯವಾಗಿ ಅಸಂಬಂಧವಾಗಿ ಮಾತಾಡುತ್ತಿರುತ್ತಾರೆ. ಪರಸ್ಟರ ಪ್ರೀತಿಸುತ್ತಾರೆ, ದ್ವೇಷಿಸುತ್ತಾರೆ, ಜಗಳವಾಡುತ್ತಾರೆ, ವಿಚಿತ್ರವಾಗಿ ವರ್ತಿಸುತ್ತಾರೆ. ಅವರಿಬ್ಬರ ಉದ್ದೇಶ ಒಂದೇ ಗಾಡೋನಿಗಾಗಿ ಕಾಯುವುದು. ನಂತರ ಪೊಜೋ ಎನ್ನುವ ಯಜಮಾನ ತನ್ನ ಗುಲಾಮನೊಂದಿಗೆ ಪ್ರವೇಶಿಸುತ್ತಾನೆ. ಬೇವಾರ್ಸಿಗಳ ಜೊತೆಗೆ ಮಾತಾಡುತ್ತಾನೆ. ತನ್ನ ಗುಲಾಮನಿಂದ ಎಲ್ಲಾ ರೀತಿಯ ಕೆಲಸಗಳನ್ನು ಮಾಡಿಸಿ ತನ್ನ ಶೋಷಕತೆಯನ್ನು ಪ್ರದರ್ಶಿಸಿ ನಿರ್ಗಮಿಸುತ್ತಾನೆ. ಕೊನೆಗೊಬ್ಬ ಹುಡುಗ ಬಂದು ಗಾಡೋ ನಾಳೆ ಬರುತ್ತಾನೆ ಎಂದು ಹೇಳಿದಾಗ ಇಬ್ಬರೂ ಹೊರಡುತ್ತಾರಾದರೂ ಅಲ್ಲಿಯೇ ಉಳಿಯುತ್ತಾರೆ. ಪೊಜೋ ಮತ್ತೆ ವಾಪಸ್ ಬರುತ್ತಾನೆ. ಈಗಾತ ಕುರುಡನಾಗಿದ್ದು ಬಂಧನದಿಂದ ಮುಕ್ತನಾದ ಗುಲಾಮನ ಮೇಲೆ ಅವಲಂಬಿತನಾಗಿರುತ್ತಾನೆ. ಇಬ್ಬರೂ ಹೋಗುತ್ತೇನೆನ್ನುತ್ತಾರೆ, ಹೋಗುವುದಿಲ್ಲ. ಕೊನೆಗೆ ಗಾಡೋ ಬರುವುದಿಲ್ಲ, ಇಬ್ಬರೂ ಕಾಯುವುದು ನಿಲ್ಲುವುದಿಲ್ಲ. ಹೀಗೆ ಸಾಗುವ ನಾಟಕದ ನಿಗೂಢತೆ ಮುಂದುವರೆಯುತ್ತದೆ. ಇದು ಗಾಡೋ... ನಾಟಕದ ಸಂಕ್ಷಿಪ್ತ ಕಥೆ. ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡು ನಿರಾಶೆಗೊಂಡವರ ವ್ಯಥೆ.

ಇಲ್ಲಿ ಗಾಡೋ ಎಂದರೆ ಯಾರು? ದೇವರೇ... ಸಾವೇ... ವಿಧಿಯೇ..... ವಿಧಾತನೆ... ಗೊತ್ತಿಲ್ಲ. ಗೂಢತೆಯನ್ನು ಕೊನೆಯವರೆಗೂ ನಾಟಕ ಬಿಟ್ಟುಕೊಡುವುದೇ ಇಲ್ಲ. ಇಲ್ಲಿ ಕಾಯುವಿಕೆಯೊಂದೇ ಮುಖ್ಯವಾಗುತ್ತದೆ. ಅರ್ಥಹೀನ ವ್ಯರ್ಥ ಬದುಕಿನಲ್ಲಿ ನಿರಾಶೆಗೊಂಡು ಯಾವುದೋ ನಿರೀಕ್ಷೆಯಲ್ಲಿರುವ ಪಾತ್ರಗಳು ಕಾಯುವುದನ್ನೇ ಕಾಯಕವನ್ನಾಗಿಸಿಕೊಂಡಿವೆ. ಕೊನೆಗೂ ನಿರಾಶೆಯೊಂದೇ ಅವರಿಗೆ ದಕ್ಕುತ್ತದೆ. ಛಿದ್ರಗೊಂಡ ಬದುಕಿನಲ್ಲಿ ಕಳೆದುಕೊಂಡ ನಂಬಿಕೆಯನ್ನು ಯಾವುದೋ ಶಕ್ತಿಯ ನಿರೀಕ್ಷೆಯಲ್ಲಿ ಪಡೆದುಕೊಳ್ಳ ಬಯಸುವ ಅಸಹಾಯಕ ವ್ಯಕ್ತಿಗಳ ತಲ್ಲಣಗಳನ್ನು ನಾಟಕ ಅನಾವರಣಗೊಳಿಸುತ್ತದೆ.


ಪೊಜೋ ಎನ್ನುವ ಶೋಷಕ ಮತ್ತು ಆತನ ಗುಲಾಮನ ಸನ್ನಿವೇಶ ಇಡೀ ನಾಟಕಕ್ಕೆ ವಿಶಿಷ್ಟ ತಿರುವನ್ನೂ ಹಾಗೂ ಅಸಂಗತ ನಾಟಕಕ್ಕೆ ಒಂದು ರೀತಿಯ ಸಂಗತವನ್ನು ಒದಗಿಸಿದಂತಿದೆ. ಅಸಮಾನ ವ್ಯವಸ್ಥೆಯಲ್ಲಿ ಶೋಷಕರ ಅಟ್ಟಹಾಸ ಮೇರೆ ಮೀರುತ್ತದೆ. ಯಾವು ಯಾವುದೋ ರೂಪದಲ್ಲಿ ಗುಲಾಮಗಿರಿ ಕೂಡಾ ಇದ್ದೇ ಇರುತ್ತದೆ. ಶೋಷಕತನದ ಅತಿರೇಕವನ್ನು ನಾಟಕ ಹೇಳುತ್ತದೆ. ಗುಲಾಮನೊಬ್ಬ ಯೋಚಿಸಲೂ ಮಾಲೀಕನ ಅಪ್ಪಣೆ ಪಡೆಯಬೇಕಾಗುತ್ತದೆ ಎನ್ನುವ ಪರಿಕಲ್ಪನೆಯೇ ವಿಚಿತ್ರ ಹಾಗೂ ವಿಶಿಷ್ಟವಾಗಿರುವಂತಹುದು. ಕೊನೆಗೆ ಸನ್ನಿವೇಶ ಬದಲಾದಾಗ ಗುಲಾಮಗಿರಿಯಿಂದ ಮುಕ್ತನಾದ ಗುಲಾಮನ ಮೇಲೆಯೇ ಮಾಲೀಕ ಅವಲಂಭಿಸಬೇಕಾಗುತ್ತದೆ. ಇದು ಬದಲಾದ ಪರಿಸ್ಥಿತಿಯನ್ನು ತೋರಿಸುತ್ತದೆ. ಜೊತೆಗೆ ಯಾವುದೂ ಶಾಶ್ವತವಲ್ಲ ಹಾಗೂ ಕಾಲ ಎಲ್ಲವನ್ನೂ ಬದಲಾಯಿಸುತ್ತದೆ ಎನ್ನುವುದನ್ನು ಪರೋಕ್ಷವಾಗಿ ನಾಟಕ ಹೇಳುತ್ತದೆ. ಇದಕ್ಕೆ ಪೂರಕವಾಗಿ ಸಿಕ್ಕ ಅವಕಾಶಗಳು ಅದಲು ಬದಲಾಗಿದ್ದರೆ ಅವನ ಜಾಗದಲ್ಲಿ ನಾನು, ನನ್ನ ಜಾಗದಲ್ಲಿ ಅವನು ಇರಬಹುದಾಗಿತ್ತು ಪೊಜೋ ಹೇಳುವ ಒಂದು ಮಾತು ಬಲು ಮಾರ್ಮಿಕವಾದುದಾಗಿದೆ. ಸಂಭಾಷಣಾ ಪ್ರಧಾನವಾದ ನಾಟಕದಲ್ಲಿ ಕೆಲವು ಸೊಗಸಾದ ಮಾತುಗಳಿವೆ. ಉದಾಹರಣೆಗೆ ಪ್ರಪಂಚದಲ್ಲಿ ಕಣ್ಣೀರು ನಿರಂತರ. ಒಬ್ಬ ಅಳು ನಿಲ್ಲಿಸಿದರೆ ಇನ್ನೊಬ್ಬ ಅಳುತ್ತಾನೆ. ಎಂದು ಪೊಜೋ ಹೇಳುತ್ತಾನೆ.
         
ಅಸಂಗತ ನಾಟಕಗಳಲ್ಲಿ ಮಾತಿಗಿಂತ ಮೌನವೇ ಹೆಚ್ಚು ಮುಖ್ಯವೆನಿಸುತ್ತದೆ. ಆದರೆ ಮಂಜುನಾಥ ಬಡಿಗೇರರ ನಾಟಕದಲ್ಲಿ ಮಾತು ಮಾತು ಮಾತೇ ನಿರರ್ಗಳವಾಗಿ ಹರಿದು ಮೌನಕ್ಕೆ ಮಹತ್ವವಿಲ್ಲದಂತಿದೆ. ಮೊದಲೇ ನಾಟಕ ಅಸಂಗತ, ಸುಲಭಕ್ಕೆ ಅರ್ಥವಾಗುವುದಿಲ್ಲ. ಅಂತುಹುದರಲ್ಲಿ ಮಾತಿನ ಮಳೆ ಸುರಿಸಿದರೆ ಕೇಳುಗನ ಗ್ರಹಿಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಶಬ್ದದ ನಡುವಿನ ನಿಶ್ಯಬ್ದವನ್ನು ಬಳಸಿದ್ದರೆ   ಒಂದಿಷ್ಟು ಮೂಡನ್ನು ಸೃಷ್ಟಿಸಬಹುದಾಗಿತ್ತು. ಭಾಷೆಯನ್ನು ಹೊರತು ಪಡಿಸಿ ಪಾತ್ರಗಳ ಹೆಸರು, ವೇಶ ಎಲ್ಲವೂ ವಿದೇಶಿಮಯವಾಗಿವೆ. ಹೀಗಾಗಿ ನೋಡುಗರಿಗೆ ಇದು ಯಾವುದೋ ದೇಶದ ನಾಟಕವೆನಿಸುತ್ತದೆ. ಭಾಷೆಗೆ ತಕ್ಕ ವೇಶ, ವೇಶಕ್ಕೆ ತಕ್ಕ ಹೆಸರು ಬದಲಾಯಿಸಿ ನೆಲದ ಸೊಗಡಿಗೆ ತಕ್ಕಂತೆ ಹೊಂದಾಣಿಕೆ ಮಾಡಿದ್ದರೆ ನೋಡುಗರಿಗೆ ನಮ್ಮದೆನ್ನುವ ಆಪ್ತ ಭಾವ ಉಂಟಾಗುತ್ತಿತ್ತು. ಯಾಕೆಂದರೆ ದೇಶ ಯಾವುದಾದರೇನು ದರಿದ್ರರ ಸ್ಥಿತಿ ಹೀಗೇನೆ, ಸ್ಥಳ ಯಾವುದಾದರೇನು ಶೋಷಕ ಮನಸ್ಥಿತಿ ಒಂದೇನೇ.
         
ಖಾಲಿ ವೇದಿಕೆಯಲ್ಲಿ ಒಂಟಿ ಬೋಳು ಮರವನ್ನು ಹೊರತು ಪಡಿಸಿ ಯಾವುದೇ ಸೆಟ್ ಪ್ರಾಪರ್ಟಿಗಳಿಲ್ಲ. ಬದುಕಿನ ಬರಡುತನವನ್ನು ಸಾಂಕೇತಿಕವಾಗಿ ಬೋಳು ಮರ ಸೂಚಿಸುವಂತಿದೆ. ನಟರು ತಮ್ಮ ಅಭಿನಯ ಸಾಮರ್ಥ್ಯದ ಮೂಲಕವೇ ಇಡೀ ನಾಟಕವನ್ನು ಕಟ್ಟಿಕೊಟ್ಟಿದ್ದಾರೆ. ಪೊಜೋ ಮತ್ತು ಗುಲಾಮನ ಪಾತ್ರಪೋಷಣೆ ತುಂಬಾ ಮಜಬೂತಾಗಿದೆ. ನಟರ ಮೇಲೆ ನಿರ್ದೇಶಕರು ತುಂಬಾ ಕೆಲಸ ಮಾಡಿದ್ದಾರೆ. ಪಾತ್ರದ ಪ್ರತಿ ಚಲನೆಗಳು ಕರಾರುವಕ್ಕಾಗಿವೆ.
 
ರವೀಂದ್ರ ಪೂಜಾರರ ಬೆಳಕಿನ ವಿನ್ಯಾಸ ತುಂಬಾ ಸೊಗಸಾಗಿದೆಯಾದರೂ ಬೆಳಕಿನ ಮಾಂತ್ರಿಕತೆಯನ್ನು ಸೃಷ್ಟಿಸಲು ನಾಟಕದಲ್ಲಿ ಹೆಚ್ಚು ಅವಕಾಶವಿಲ್ಲ.  ಎರಡೂ ಪಾತ್ರಗಳು ತಲೆಯ ಮೇಲೆ ವಿದೇಶಿ ಟೋಪಿ ಹಾಕಿರುವುದರಿಂದ ಅದರ ನೆರಳು ನಟರ ಮುಖದ ಮೇಲೆ ಬಿದ್ದು ಕೆಲವೊಮ್ಮೆ ಮುಖದ ಭಾವನೆಗಳೇ ಕಾಣದಂತಾಯಿತು.

ಮಂಜುನಾಥ ಬಡಿಗೇರ
ನನಗೆ ಚಿಕ್ಕದಾಗುವ ಬೂಟು ಇಲ್ಲೇ ಇರಲಿ. ನಾಳೆ ಇನ್ನೊಬ್ಬ ಬರುತ್ತಾನೆ ಚಿಕ್ಕ ಕಾಲಿನವನು, ಗಾಡೋನಿಗಾಗಿ ಕಾಯುವವನು ಎಂದು ಗೋಗೋ ಹೇಳುವ ಮೂಲಕ ಗಾಡೋನಿಗಾಗಿ ಕಾಯುವುದು ನಿರಂತರ ಎಂಬುದನ್ನು ಹೇಳುತ್ತಾನೆ. ವಾಸ್ತವದಲ್ಲಿ ಕಾಯುವಿಕೆ ಎನ್ನುವುದು ಸತ್ಯವೂ ಆಗಿದೆ. ಆದಿ ಅನಾದಿ ಕಾಲದಿಂದ ಎಂದೂ ಬಾರದ ದೇವರ ಮೇಲೆ ನಂಬಿಕೆಯನ್ನಿಟ್ಟು ಕೊಟ್ಯಾಂತರ ಜನ ಆಸ್ತಿಕರು ಪ್ರತಿ ದಿನ ಕಾಯುತ್ತಲೇ ಇರುತ್ತಾರೆ. ದೇವರು ಬಂದಾನು, ಸುಖ ಸಂತೋಷ ತಂದಾನು, ಸಂಕಷ್ಟಗಳನ್ನು ದೂರಮಾಡಿಯಾನು ಎಂದು. ಅದೇ ನಂಬಿಕೆಯ ಮೇಲೆಯೇ ಬದುಕಿನ ಸಂಕಷ್ಟದ ಸಾಗರವನ್ನು ಅಪಾರ ಸಹನೆಯಿಂದ ಸಾಗಿಸುತ್ತಿದ್ದಾರೆ. ಕೇವಲ ನಿರೀಕ್ಷೆಯೊಂದೇ ಅವರ ನಂಬಿಕೆಯಾಗಿದೆ.  ಆದರೆ ಎಂದೂ ದೇವರು ಬರುವುದಿಲ್ಲ, ಆತನ ಅಸ್ತಿತ್ವವೇ ಅನುಮಾನದಲ್ಲಿದೆ. ಆದರೂ ತಲೆಮಾರುಗಳಿಂದ ಕಾಯುವಿಕೆ ನಿಂತಿಲ್ಲ. ಇಲ್ಲಿವರೆಗೂ ಎಂದೂ ಎಲ್ಲೂ ಗಾಡೋ ಬಂದೇ ಇಲ್ಲ. ಬರುವುದೂ ಇಲ್ಲ. ಗಾಡೋನ ನಿರೀಕ್ಷೆ ಮಾತ್ರ ನಿಂತಿಲ್ಲ. ನಿಲ್ಲುವುದೂ ಇಲ್ಲ. ಎಲ್ಲಿವರೆಗೂ ನಮ್ಮ ನಾಡಿನಲ್ಲಿ ಶೋಷಣೆ, ಅಸಮಾನತೆ, ದಾರಿದ್ರ್ಯ ಮತ್ತು ಅಭದ್ರತೆ ಇರುತ್ತದೆಯೋ ಅಲ್ಲಿವರೆಗೂ ಗಾಡೋನ ನಿರೀಕ್ಷೆಯ ಅಸಂಗತ ನಾಟಕ ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುವುದೂ ಇಲ್ಲ. 

                                                 -ಶಶಿಕಾಂತ ಯಡಹಳ್ಳಿ  



       


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ