ಐದು ವರ್ಷಗಳ ಹಿಂದಿನ ಮಾತು. ಈಗ ಇದ್ದಕ್ಕಿದ್ದಂತೆ ನೆನಪಾಯಿತು. ಮರೆತೇ ಹೋಗಿದ್ದ ಆ ಘಟನೆ ಮತ್ತೆ ನನಗೆ ನೆನಪಾಗಲು ಒಬ್ಬ ರಂಗಕರ್ಮಿಯ ಹೃದಯ ಸ್ತಂಭನವಾಗಬೇಕಾಗಿತ್ತೇ? ಒಬ್ಬರ ಅಗಲಿಕೆ ಮರೆತ ಹಲವು ನೆನಪುಗಳನ್ನು ಮತ್ತೆ ತಾಜಾ ಮಾಡಬೇಕಾಗಿತ್ತೆ? ಗೊತ್ತಿಲ್ಲ....
ಆಗ ಕರ್ನಾಟಕ ನಾಟಕ ಅಕಾಡೆಮಿಗೆ ಕಪ್ಪಣ್ಣ ಅಧ್ಯಕ್ಷರಾಗಿದ್ದರು. ಹಲವಾರು ಉತ್ತಮ ಕೆಲಸಗಳ ಜೊತೆಗೆ ಒಂದಿಷ್ಟು ಎಡವಟ್ಟು ಕೆಲಸಗಳನ್ನೂ ಮಾಡುತ್ತಿದ್ದರು. ಆಗ ನಾನು “ರಂಗಭೂಮಿ ವಿಶ್ಲೇಷಣೆ” ಪತ್ರಿಕೆಯಲ್ಲಿ ‘ಕಪ್ಪಣ್ಣನಿಗೊಂದು ಪ್ರೇಮ ಪತ್ರ’ ಎಂದು ಲೇಖನ ಬರೆದಿದ್ದೆ. ಅದರ ಹಿಂದಿನ ಸಂಚಿಕೆಯಲ್ಲಿಯೂ ಅವರ ಕುರಿತು ಲೇಖನ ಪ್ರಕಟಿಸಿದ್ದೆ. ಅದೊಂದು ದಿನ ಇದ್ದಕ್ಕಿದ್ದಂತೆ ಮಧ್ಯರಾತ್ರಿ ನನ್ನ ಜಂಗಮವಾಣಿ ರಿಂಗಣಿಸಿತು. ಆಕಡೆಯ ಅಶರೀರವಾಣಿ ‘ನಾನು ಪರೇಶ್, ಗೊತ್ತಾಗಲಿಲ್ಲವೇ ಲೈಟಿಂಗ್ ಡಿಸೈನರ್ ಪರೇಶ ಕುಮಾರ್, ಗೊತ್ತಾಯ್ತು ಹೇಳಿ ಸರ್ ಎಂದಾಗ.....
“ನಿಮ್ಮ ಪತ್ರಿಕೆ ಓದಿದೆ. ನೀವು ಕಪ್ಪಣ್ಣನವರ ಬಗ್ಗೆ ಬರೆದದ್ದು ನೋಡಿದೆ. ಅದ್ಯಾಕೋ ಆತ್ಮಘಾತುಕ ಘಟನೆಯೊಂದನ್ನು ನಿಮ್ಮ ಹತ್ತಿರ ಹೇಳಿ ಹಗುರವಾಗಬೇಕಿದೆ. ತುಂಬಾ ವರ್ಷಗಳಿಂದ ನನ್ನ ಮನಃಸಾಕ್ಷಿ ನನ್ನನ್ನ ಕಾಡುತ್ತಿದೆ. ಒಂದತ್ತು ನಿಮಿಷ ಸಮಯವಿದೆಯಾ?”
ನನಗೆ ನಿಜಕ್ಕೂ ಅಚ್ಚರಿಯಾಯಿತು. ಹೀಗೆ ಎಷ್ಟೋ ವರ್ಷದ ಬಂಧುವಂತೆ ಮಾತಾಡುತ್ತಿರುವ ವ್ಯಕ್ತಿ, ಹೃದಯ ಹಗುರು ಮಾಡಿಕೊಳ್ಳುವಂತಹ ವಿಚಾರವನ್ನು ಹೇಳಬೇಕೆಂದಿರುವ ವ್ಯಕ್ತಿ ನನಗಂತೂ ಸಂಪೂರ್ಣ ಅಪರಿಚಿತ. ಎಂದೂ ಮುಖತಃ ಇಬ್ಬರೂ ಒಬ್ಬರನ್ನೊಬ್ಬರು ಬೇಟಿಯಾಗಿದ್ದೇ ಇಲ್ಲಾ. ಅವರ ಹೆಸರನ್ನೂ ಕೇಳಿದ್ದೆನಾದರೂ ಎಂದೂ ನೋಡಿರಲಿಲ್ಲ. ಅವರಿಗೂ ಸಹ ನನ್ನ ಪತ್ರಿಕೆಯ ಸಂಚಿಕೆಗಳ ಹೊರತು ನನ್ನ ಪರಿಚಯ ಇರಲೇ ಇಲ್ಲಾ. ಇಂತಾ ನಡುರಾತ್ರಿ, ಅಪರಿಚಿತರಾದ ನನಗಿಂತ ಹಿರಿಯರು ತಮ್ಮ ದುಗುಡವನ್ನು ಹೇಳಿಕೊಳ್ಳಲು ಪೋನ್ ಮಾಡಿದ್ದು ಆ ಕ್ಷಣದಲ್ಲಿ ವಿಸ್ಮಯವೆನಿಸಿತು. ‘ಪರವಾಗಿಲ್ಲ ಹೇಳಿ’ ಎಂದೆ. ಘಟನೆಯೊಂದನ್ನು ಪರೇಶರವರು ಬಿಚ್ಚಿಡತೊಡಗಿದರು.
“ಇದು ನಾಲ್ಕೂವರೆ ದಶಕದ ಹಿಂದಿನ ಮಾತು. ಆಗ ನಾನು ಕಪ್ಪಣ್ಣನವರ ಜೊತೆಗೆ ರಂಗಕೆಲಸಗಳಲ್ಲಿ ತೊಡಗಿಕೊಂಡಿದ್ದೆ. 1971 ರಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಬಿ.ವಿ.ಕಾರಂತರ ‘ಪಂಜರಶಾಲೆ’ ನಾಟಕ ಪ್ರದರ್ಶನವನ್ನು ಎಲ್.ಕೃಷ್ಣಪ್ಪ ಮತ್ತು ಆರ್. ನಾಗೇಶರವರು ಕಾರಂತರ ಆಶಯದಂತೆ ಆಯೋಜಿಸಿದ್ದರು. ಉಲ್ಲಾಳ ಶೀಲ್ಡ ನಾಟಕ ಸ್ಪರ್ಧೆಯ ನಡುವಿನ ಎರಡು ದಿನಗಳಲ್ಲಿ ಒಟ್ಟು ಐದು ಪಂಜರಶಾಲೆ ಪ್ರದರ್ಶನವೆಂದು ನಿರ್ಧರಿಸಲಾಗಿತ್ತು. ಆ ನಾಟಕ ಹೆಗ್ಗೋಡಿನಲ್ಲಿ ಯಶಸ್ವಿಯಾಗಿತ್ತು. ಬೆಂಗಳೂರಿನ ಪ್ರದರ್ಶನಕ್ಕೆ ಎಲ್.ಕೃಷ್ಣಪ್ಪ ಮತ್ತು ಆರ್. ನಾಗೇಶರವರು ಲೈಟಿಂಗ್ ಡಿಸೈನ್ ಮಾಡಬೇಕೆಂದು ನಿರ್ಧರಿಸಿಯಾಗಿತ್ತು. ಯಾಕೆಂದರೆ ಇವರೇ ಹೆಗ್ಗೋಡಿನಲ್ಲಾದ ಶೋಗೆ ಬೆಂಗಳೂರಿನಿಂದ ಲೈಟಿಂಗ್ಸಗಳನ್ನು ತೆಗೆದುಕೊಂಡು ಹೋಗಿ ಲೈಟಿಂಗ್ ಮಾಡಿದ್ದರು. ಆದರೆ ಬೆಂಗಳೂರಿನ ಶೋಗೆ ತಾನೇ ಲೈಟಿಂಗ್ ಮಾಡುತ್ತೇನೆಂದು ಕಪ್ಪಣ್ಣನವರು ಕೃಷ್ಣಪ್ಪನವರನ್ನು ಒತ್ತಾಯಿಸಿದರು. ಅವರು ‘ಸಾಧ್ಯವಿಲ್ಲ’ ಎಂದಾಗ ಕಾರಂತರನ್ನೇ ಕೇಳಿದರು. ಅಲ್ಲೂ ನಿರಾಶೆಗೊಂಡ ಕಪ್ಪಣ್ಣ ಕೆ.ವಿ.ಸುಬ್ಬಣ್ಣನವರನ್ನೂ ಕೇಳಿದರು. ಎಲ್ಲೂ ಒಪ್ಪಿಗೆ ಸಿಗದೇ ನಿರಾಶರಾದ ಕಪ್ಪಣ್ಣ ‘ಉಲ್ಲಾಳ ಶೀಲ್ಡ್ ಸ್ಪರ್ಧೆ’ಗೆಂದು ಈಗಾಗಲೇ ಕಟ್ಟಲಾಗಿದ್ದ ತಮ್ಮೆಲ್ಲಾ ಲೈಟಿಂಗ್ಸಗಳನ್ನು ಅಲ್ಲಿಂದ ಎರಡು ದಿನದ ಮಟ್ಟಿಗೆ ತೆರವುಗೊಳಿಸಲೇ ಬೇಕಾಗಿತ್ತು. ನಾಳೆ ಬೆಳಿಗ್ಗೆಯಾದರೆ ಪಂಜರಶಾಲೆ ನಾಟಕ. ರಾತ್ರಿ 9ಕ್ಕೆ ನಾಗೇಶ ಮತ್ತು ಕೃಷ್ಣಪ್ಪನವರು ಊಟ ಮಾಡಲು ಹೋಗಿ ಬರುವಷ್ಟರಲ್ಲಿ ಎಲ್ಲಾ ಲೈಟಿಂಗ್ಸಗಳನ್ನೂ ನಾನು ಬಿಚ್ಚಿ ಕೆಳಗಿಳಿಸಿದೆ. ಇಲ್ಲಿವರೆಗೂ ಎಲ್ಲಾ ಸರಿಯಾಗಿತ್ತು. ಅದರೆ ಆಗ ಕಪ್ಪಣ್ಣ ಹೇಳಿದ ಒಂದು ಕೆಲಸವನ್ನು ನಾನು ಮಾಡದೇ ಇದ್ದಿದ್ದರೆ ಈಗ ನನ್ನ ಆತ್ಮಸಾಕ್ಷಿ ಈಪರಿ ಕಾಡುತ್ತಿರಲಿಲ್ಲ” ಎಂದು ಹೇಳಿ ಪರೇಶಕುಮಾರ ನಿಟ್ಟುಸಿರಿಟ್ಟು ಮಾತು ಮುಂದುವರೆಸಿದರು.
“ ಲೈಟ್ಸಗಳನ್ನು ಕಟ್ಟುವ ಮುಖ್ಯ ಬಾರ್ನ್ನು ಬಿಚ್ಚಿ ಎಲ್ಲಾದರೂ ಯಾರ ಕಣ್ಣಿಗೂ ಬೀಳದಂತೆ ಬಚ್ಚಿಟ್ಟುಬಿಡು ಎಂದು ಕಪ್ಪಣ್ಣ ನನಗೆ ಆದೇಶಿಸಿದರು. ಅದು ಇಲ್ಲದಿದ್ದರೆ ಬೇರೆಯವರು ಲೈಟ್ಸಗಳನ್ನು ಕಟ್ಟೋದಾದರೂ ಹೇಗೆ? ಎಂದು ನಾನು ಪ್ರಶ್ನಿಸಿದೆ. ‘ನನಗೆ ಲೈಟಿಂಗ್ ಮಾಡಲು ಬಿಡಲಿಲ್ಲ ಎಂದ ಮೇಲೆ ಅವರೂ ಇಲ್ಲಿ ಮಾಡಕೂಡದು. ಅವರು ಅದು ಹೇಗೆ ನಾಟಕ ಮಾಡುತ್ತಾರೋ ನಾನು ನೋಡುತ್ತೇನೆಂದು’ ಕಪ್ಪಣ್ಣ ದ್ವೇಷದಿಂದ ಕುದಿಯುತ್ತಿದ್ದರು. ಆಕ್ಷಣಕ್ಕೆ ನನಗೇನೂ ತೋಚಲಿಲ್ಲ. ಲೈಟಿಂಗ್ ಬಾರನ್ನು ಮೆಲ್ಲನೇ ಬಿಚ್ಚಿ ಕಲಾಕ್ಷೇತ್ರದ ನೆತ್ತಿಯಲ್ಲಿರುವ ಆಂಗಲ್ಗಳ ನಡುವೆ ಬಚ್ಚಿಟ್ಟುಬಿಟ್ಟೆ. ಕಪ್ಪಣ್ಣ ಸಿಟ್ಟಿನಿಂದ ನನ್ನನ್ನೂ ತಮ್ಮ ಜೊತೆಗೆ ಕರೆದುಕೊಂಡು ಕಲಾಕ್ಷೇತ್ರದಿಂದ ಹೊರಟರು. ಆಮೇಲೆ ಬಂದ ಕೃಷ್ಣಪ್ಪ ತಮ್ಮ ಲೈಟಿಂಗ್ಗಳನ್ನು ಕಟ್ಟಲು ನೋಡಿದರೆ ಬಾರೇ ನಾಪತ್ತೆ. ಎಲ್ಲಿ ಹುಡುಕಿದರೂ ಸಿಗಲೇ ಇಲ್ಲಾ. ಯಾರು ಅದನ್ನು ನಾಪತ್ತೆ ಮಾಡಿದ್ದೆಂದು ಊಹಿಸಿದ ನಾಗೇಶ್ ಕಪ್ಪಣ್ಣನನ್ನು ಹುಡುಕಲು ತೊಡಗಿದರು. ಕೃಷ್ಣಪ್ಪ ಬೇರೆ ಮಾರ್ಗವನ್ನು ಹುಡುಕತೊಡಗಿದರು. ಕೊನೆಗೆ ಕರ್ಟನ್ಗಳನ್ನು ಸುತ್ತುವ ಅಡಿಕೆ ಮರವೊಂದನ್ನು ಬಿಚ್ಚಿಕೊಂಡು ಅದನ್ನೇ ಲೈಟಿಂಗ್ ಬಾರ್ ರೀತಿಯಲ್ಲಿ ಕಟ್ಟಿದ ಕೃಷ್ಣಪ್ಪ ಲೈಟಿಂಗ್ ಮಾಡಿಯೇ ಬಿಟ್ಟರು. ಕಪ್ಪಣ್ಣನನ್ನು ಹಿಡಿತರಿಸಿದ ನಾಗೇಶ ವಾಚಾಮಗೋಚರವಾಗಿ ಬೈಯುತ್ತಾ ನಿಂತರು. ನಾನೋ ಅಪರಾಧಿ ಪ್ರಜ್ಞೆಯಿಂದ ಮೈ ಹಿಡಿಯಾಗಿಸಿಕೊಂಡು ಕುಬ್ಜನಾಗಿ ನಿಂತಿದ್ದೆ. ಸಧ್ಯ ಹೇಗೋ ಮರುದಿನ ನಾಟಕ ಪ್ರದರ್ಶನ ಯಾವುದೇ ವಿಘ್ನಗಳಿಲ್ಲದೇ ಚೆನ್ನಾಗಿ ಆಯಿತು. ಆದರೆ ನನ್ನ ಮನಸ್ಸಿನಲ್ಲಿ ನನಗೆ ಕಳ್ಳತನ ಮಾಡಿದವನಂತೆ ಅಪರಾಧಿ ಪ್ರಜ್ಞೆ ಇಂದಿಗೂ ಕಾಡುತ್ತಿದೆ. ರಂಗದ್ರೋಹದ ಕೆಲಸ ಮಾಡಿದೆನೆಂದು ನನ್ನ ಮನಸ್ಸು ಆಗಾಗ ಚುಚ್ಚುತ್ತಿದೆ. ಕಪ್ಪಣ್ಣನವರ ಕುರಿತು ನೀವು ಬರೆದದ್ದೆನ್ನೆಲ್ಲಾ ಓದಿದ ಮೇಲೆ ನಿಮ್ಮ ಜೊತೆಗೆ ಕಪ್ಪಣ್ಣ ಆಗಿನ ಕಾಲಕ್ಕೆ ಮಾಡುತ್ತಿದ್ದ ರಂಗದ್ರೋಹವನ್ನು ಹಂಚಿಕೊಳ್ಳಬೇಕು ಅನ್ನಿಸಿತು. ಅದಕ್ಕೆ ಪೋನ್ ಮಾಡಿದೆ. ಈಗ ಒಂದಿಷ್ಟು ಮನಸ್ಸು ಹಗುರಾಯಿತು. ನಾಳೆ ನಿಮ್ಮ ಪತ್ರಿಕೆಗೆ ಐನೂರು ರೂಪಾಯಿ ಕಳುಹಿಸುತ್ತೇನೆ ಸಂಚಿಕೆಗಳನ್ನು ಮರೆಯದೇ ಕಳುಹಿಸಿ, ನಮಸ್ಕಾರ”
…..ಹೀಗೆ ಪರೇಶರವರು ಹೇಳುವುದನ್ನೆಲ್ಲಾ ಹೇಳಿ ಪೋನ್ ಕಟ್ ಮಾಡಿದಾಗ ಸರಿಯಾಗಿ ರಾತ್ರಿ ಒಂದು ಗಂಟೆ. ಅವರ ಮನಸ್ಸೇನೋ ಹಗುರವಾಯಿತು ಆದರೆ ನನ್ನ ಮನಸ್ಸು ಭಾರವಾಗತೊಡಗಿತು. ಯಾಕೆಂದರೆ ಪರೇಶರವರು ಯಾವ ಘಟನೆಯ ಬಗ್ಗೆ ಹೇಳಿದ್ದರೋ ಅದು ನಡೆದಾಗ ನಾನಿನ್ನೂ ಹುಟ್ಟು ಒಂದು ವರ್ಷದ ಮಗುವಾಗಿದ್ದೆ. ಆಗ ತಾನೆ ಕಣ್ಣು ಬಿಟ್ಟು ಜಗತ್ತನ್ನು ನೋಡುತ್ತಿದ್ದೆ. ಈಗಲೂ ಕೂಡಾ ಈ ರೀತಿಯ ಆಗಿನ ಕಾಲದ ರಂಗಭೂಮಿಯ ನಕಾರಾತ್ಮಕ ಅಂಶಗಳನ್ನು ಕೇಳಿದಾಗ ಮನಸ್ಸಿಗೆ ಕಸಿವಿಸಿಯಾಗುತ್ತದೆ. ‘ನಿಮಗೆ ಅಗತ್ಯವೆನ್ನಿಸಿದರೆ ನಾನು ಹೇಳಿದ್ದನ್ನು ಮುಂದಿನ ಸಂಚಿಕೆಯಲ್ಲಿ ಬರೆಯಿರಿ’ ಎಂದು ಪರೇಶರವರು ಹೇಳದ್ದರಾದರೂ ನಾನು ಬರೆಯಲು ಹೋಗಿರಲಿಲ್ಲ. ಆಮೇಲೆ ಆ ಘಟನೆಯನ್ನೇ ಮರೆತು ಬಿಟ್ಟಿದ್ದೆ.
ಎಷ್ಟು ಅಚ್ಚರಿದಾಯಕವಾಗಿ ಪರೇಶಕುಮಾರರು ಅಂದು ಪೋನ್ ಮಾಡಿದ್ದರೋ, ಅದಕ್ಕಿಂತ ಆಘಾತಕಾರಿಯಾಗಿ ಅವರ ಸಾವಿನ ಸುದ್ದಿ 2014, ಫೆಬ್ರವರಿ 11 ರ ಬೆಳ್ಳಂಬೆಳಿಗ್ಗೆ ನನ್ನ ಅದೇ ಮೊಬೈಲ್ನಲ್ಲಿ ಸಂದೇಶ ರೂಪದಲ್ಲಿ ಬಂದಿತು. ಎಂದೋ ತನ್ನದಲ್ಲದ ಒಂದು ತಪ್ಪಿಗೆ ಜೀವನಪೂರ್ತಿ ಪಶ್ಚಾತ್ತಾಪ ಪಡುತ್ತಿದ್ದ ಆ ಹೃದಯವಂತನ ಹೃದಯವೇ ನಿಂತುಬಿಟ್ಟಿತ್ತು. ವೇದಿಕೆಗಳಿಗೆ ಬೆಳಕನ್ನು ಕೊಡುತ್ತಿದ್ದವರು ಇದ್ದಕ್ಕಿದ್ದಂತೆ ಎದ್ದು ಕತ್ತಲೆಯ ಲೋಕಕ್ಕೆ ನಡೆದುಬಿಟ್ಟಿದ್ದರು. ಎರಡು ತಿಂಗಳ ಹಿಂದೆ ತಾನೆ ಡಾ.ವಿಜಯಮ್ಮರವರ ಮೊಮ್ಮಗನ ಮದುವೆಯ ದಿನದ ಸಂಜೆ ಸಿಕ್ಕಿದ್ದರು. ತುಂಬಾ ಉತ್ಸಾಹದಿಂದಲೆ ಮಾತಾಡಿದ್ದರು. ಕಾಲಿನ ನರದ ಸಮಸ್ಯೆಯನ್ನು ಹೊರತು ಪಡಿಸಿ ಬೇರೇನೂ ಆರೋಗ್ಯದ ಸಮಸ್ಯೆ ಇಲ್ಲ ಎಂದೂ ಹೇಳಿದ್ದರು. ನಾನು ಪ್ರತಿ ಭಾನುವಾರ ಅಭಿನಯ ತರಗತಿಗಳನ್ನು ತೆಗೆದುಕೊಳ್ಳುತ್ತಿರುವ ‘ಭಾರತ್ ಸ್ಕೌಟ್ಸ ಮತ್ತು ಗೈಡ್ಸ’ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ರಂಗಮಂದಿರಕ್ಕೆ ಲೈಟಿಂಗ್ ಡಿಸೈನ್ ಮಾಡುತ್ತಿದ್ದುದು ಮುಗಿಯಿತಾ ಎಂದು ಕೇಳಿದಾಗ ‘ಇನ್ನೊಂದು ತಿಂಗಳಲ್ಲಿ ಮುಗಿಸುತ್ತೇನೆ’ ಎಂದು ಭರವಸೆ ಕೊಟ್ಟರು. ಆದರೆ......ಆ ಭರವಸೆ ಈಡೇರಲೇ ಇಲ್ಲ. ಇನ್ನೂ ರಂಗಮಂದಿರದ ಕೆಲಸ ಪೂರ್ತಿ ಮುಗಿದಿಲ್ಲ, ಬೆಳಕಿನ ವಿನ್ಯಾಸ ಕಂಪ್ಲೀಟ್ ಆಗಿಲ್ಲ ಅಷ್ಟರಲ್ಲೇ ಬೆಳಕಿನ ರೂವಾರಿಯೇ ಮಾಯವಾಗಿಬಿಟ್ಟರು. ಅವರಿಗಿನ್ನೂ ಆರವತ್ತುಮೂರರ ಹರೆಯ.
ಪರೇಶರವರು ಹೈಲಿ ಕ್ವಾಲಿಪೈಡ್ ರಂಗಕರ್ಮಿ. ಸಮಾಜಶಾಸ್ತ್ರದಲ್ಲಿ ಡಾಕ್ಟರೇಟ ಮಾಡಿದವರು. ಬೆಂಗಳೂರು-ಮೈಸೂರು ಯುನಿವರ್ಸಿಟಿಗಳಲ್ಲಿ ಸಮಾಜಶಾಸ್ತ್ರ ವಿಭಾಗದ ಪ್ರೊಫೆಸರ್ ಆಗಿದ್ದವರು. ಬಹುತೇಕ ಪ್ರೋಪೆಸರ್ಗಳಂತೆ ಯುಜಿಸಿ ಸ್ಕೇಲ್ ಪಡೆದು, ತಿಂಗಳಿಗೆ ಲಕ್ಷಕ್ಕೂ ಮೀರಿ ಸಂಬಳವನ್ನು ಎಣಿಸಿಕೊಂಡು ಹಾಯಾಗಿ ಕುಟುಂಬ ಪರಿವಾರವನ್ನು ನೋಡಿಕೊಳ್ಳುತ್ತಾ ಇರಬಹುದಾಗಿತ್ತು. ಆದರೆ ಡಾ.ಪರೇಶರ ರಂಗತುಡಿತ ಅದಕ್ಕೆ ಅನುಮತಿ ನೀಡಲಿಲ್ಲ. ಪಾಠ ಹೇಳಿ ಉಳಿದ ಸಮಯವನ್ನು ರಂಗಭೂಮಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದರು. ಮೈಸೂರಿನಲ್ಲಿದ್ದಾಗಲೂ ರಾಮಕೃಷ್ಣ ಆಶ್ರಮದ ಆಶ್ರಯದಲ್ಲಿ ನಡೆಯುತ್ತಿದ್ದ ನಾಟಕ ಚಟುವಟಿಕೆಗಳಲ್ಲಿ ತೀವ್ರವಾಗಿ ತೊಡಗಿಸಿಕೊಂಡರು. ಆ ಆಶ್ರಮದ ಎಲ್ಲಾ ನಾಟಕಗಳಿಗೆ ಬೆಳಕಿನ ವಿನ್ಯಾಸ ಪರೇಶರವರದೇ ಆಗಿರುತ್ತಿತ್ತು. ಮೈಸೂರಿನ ಸುತ್ತೂರು ಮಠದ ಬಹುತೇಕ ಕಟ್ಟಡಗಳಿಗೆ, ರಂಗಮಂದಿರಗಳಿಗೆ ಪರೇಶರವರೇ ಲೈಟಿಂಗ್ ಡಿಸೈನ್ ಮಾಡಿಕೊಟ್ಟರು. ಬನಶಂಕರಿಯಲ್ಲಿರುವ ಜೆಎಸ್ಎಸ್ ಕಾಲೇಜಿನ ಭವ್ಯ ರಂಗಮಂದಿರದ ಲೈಟಿಂಗ್ ಡಿಸೈನಿಂಗ್ ಸಹ ಪರೇಶರವರದೆ. ಅಷ್ಟಕ್ಕೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ಇಡೀ ರಾಜ್ಯಾದ್ಯಂತ ಹಲವಾರು ರಂಗಮಂದಿರಗಳಿಗೆ ಸ್ವತಃ ಹೋಗಿ ಲೈಟಿಂಗ್ ಡಿಸೈನ್ ತಯಾರಿಸಿ ಬೆಳಕಿನ ಪರಿಕರಗಳನ್ನು ಇನ್ಸ್ಟಾಲ್ ಮಾಡಿ ಕೊಡುತ್ತಿದ್ದರು. ಬೆಂಗಳೂರಿನ ಉದಯಭಾನು ಕಲಾಸಂಘ ಹಾಗೂ ತುಮಕೂರಿನ ಗುಬ್ಬಿ ವೀರಣ್ಣ ಮಂದಿರಗಳ ಸ್ಟೇಜ್ ಮತ್ತು ಬೆಳಕಿನ ವಿನ್ಯಾಸವನ್ನೂ ಸಹ ಪರೇಶರವರೇ ಮಾಡಿದ್ದು. ಯಾವುದೇ ರಂಗಮಂದಿರವಿರಲಿ ಅದರ ಕಟ್ಟಡದ ವಿನ್ಯಾಸದಿಂದ ಹಿಡಿದು ಪೈನಲ್ ಬೆಳಕಿನ ವಿನ್ಯಾಸದವರೆಗೂ ಪರೇಶರವರು ಸಕ್ರೀಯರಾಗಿ ತೊಡಗಿಸಿಕೊಳ್ಳುತ್ತಿದ್ದರು.
ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜಿನ ದೀಪ ಮತ್ತು ಬೆಳಕಿನ ವಿನ್ಯಾಸವನ್ನು ಮಾಡಿದ್ದೂ ಸಹ ಪರೇಶರವರೇ. ಆ ಮೆಡಿಕಲ್ ಕಾಲೇಜು ಕೆಲವು ಹಳ್ಳಿಗಳನ್ನು ದತ್ತು ತೆಗೆದುಕೊಂಡಿತ್ತು. ಆ ಹಳ್ಳಿಗಳಲ್ಲಿ ನೈರ್ಮಲ್ಯ ಮತ್ತು ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಬೀದಿನಾಟಕಗಳನ್ನು ಪರೇಶ ಆಯೋಜಿಸುತ್ತಿದ್ದರು. ಎ.ಎಸ್.ಮೂರ್ತಿಯವರ ಚಿತ್ರಾ ತಂಡವನ್ನು ಕುರಿ ತುಂಬುವ ವ್ಯಾನಲ್ಲಿ ಕರೆದುಕೊಂಡು ಹೋಗಿ ಹಳ್ಳಿ ಹಳ್ಳಿಗಳ ಬೀದಿಗಳಲ್ಲಿ ಬೀದಿನಾಟಕಗಳನ್ನು ಆಡಿಸುವ ವ್ಯವಸ್ಥೆಯನ್ನು ಪರೇಶ ಮಾಡುತ್ತಿದ್ದುದನ್ನು ಈಗಲೂ ಡಾ.ವಿಜಯಮ್ಮನವರು ನೆನಪಿಸಿಕೊಳ್ಳುತ್ತಾರೆ.
ಮೈಸೂರಿನ ರಂಗಾಯಣಕ್ಕೆ ಪ್ರಸನ್ನನವರು ನಿರ್ದೇಶಕರಾದಾಗ ರಂಗಾಯಣದ ಭೌತಿಕ ಸ್ವರೂಪವನ್ನೇ ಬದಲಾಯಿಸುವ ಯೋಜನೆ ರೂಪಿಸಿದಾಗ ಅಲ್ಲಿಯ ಒಳಾಂಗಣ ಹಾಗೂ ಹೊರಾಂಗಣದ ರಂಗಮಂದಿರಗಳ ಬೆಳಕಿನ ಡಿಸೈನ್ ಮಾಡಿದ್ದು ಪರೇಶರವರು. ಮೈಸೂರು ರಂಗಾಯಣದ ಮಹತ್ವಾಂಕಾಂಕ್ಷಿ ಪ್ರಜೆಕ್ಟ್ ಆದ ಎಂಟು ಗಂಟೆಗಳ ‘ಮಲೆಗಳಲ್ಲಿ ಮದುಮಗಳು’ ನಾಟಕದ ಸಂಪೂರ್ಣ ಲೈಟಿಂಗ್ ಡಿಸೈನಿಂಗ್ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತ ಪರೇಶರವರು ಅದನ್ನು ಯಶಸ್ವಿಯಾಗಿ ನಿರ್ವಹಿಸಿದರು.
ಪರೇಶರವರು ಒಂದು ರೀತಿಯಲ್ಲಿ ಹೈಪ್ರೊಪೈಲ್ ಲೈಟ್ ಡಿಸೈನರ್ ಆಗಿ ಬೆಳೆದರು. ದೇಶ ವಿದೇಶಗಳ ಕಲ್ಚರಲ್ ಎಕ್ಸಚೇಂಜ್ ಕಾರ್ಯಕ್ರಮಗಳು ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಆದಾಗಲೆಲ್ಲಾ ಪರೇಶರವರೇ ಆ ಎಲ್ಲಾ ಕಾರ್ಯಕ್ರಮಗಳಿಗೆ ಲೈಟಿಂಗ್ ಡಿಸೈನ್ ಮಾಡುತ್ತಿದ್ದರು. ಹಾಗಂತ ರಂಗಭೂಮಿಯನ್ನೂ ಮರೆಯಲಿಲ್ಲ. ಯಾವ ರಂಗತಂಡದವರು ಕರೆದರೂ ಹೋಗಿ ನಾಟಕಕ್ಕೆ ಬೆಳಕಿನ ವಿನ್ಯಾಸವನ್ನೂ ಮಾಡಿ ನಿರ್ವಹಣೆಯನ್ನೂ ಮಾಡುತ್ತಿದ್ದರು. ಇಲ್ಲಿವರೆಗೂ ಸರಿಸುಮಾರು ಏಳುನೂರಕ್ಕೂ ಹೆಚ್ಚು ನಾಟಕಗಳಿಗೆ ಲೈಟಿಂಗ್ ಮಾಡಿದ್ದಾರೆ.
ಆಗಿನ್ನೂ ಹವ್ಯಾಸಿ ರಂಗಭೂಮಿ ಕಣ್ಣುಬಿಡುತ್ತಿತ್ತು. ಇನ್ನೂ ಸಮುದಾಯ ಹುಟ್ಟಿರಲಿಲ್ಲ. ಎನ್ಎಸ್ಡಿಯಲ್ಲಿ ಓದುತ್ತಿದ್ದ ಪ್ರಸನ್ನರವರು ರಜೆಯಲ್ಲಿ ಬೆಂಗಳೂರಿಗೆ ಆಗಾಗ ಬರುತ್ತಿದ್ದರು. ಬಂದಾಗೆಲ್ಲಾ ಡಾ.ವಿಜಯಮ್ಮನವರ ಮನೆಯಲ್ಲಿ ರಂಗಭೂಮಿ ಕುರಿತ ಚರ್ಚೆಗಳಾಗುತ್ತಿದ್ದವು. ಆಗ ಪ್ರಸನ್ನ, ವಿಜಯಮ್ಮಾ, ಎ.ಎಸ್.ಮೂರ್ತಿಗಳು ಹಾಗೂ ಪರೇಶ ಜೊತೆಸೇರಿ ನಾಟಕ ಪ್ರದರ್ಶನದ ಯೋಜನೆ ರೂಪಿಸುತ್ತಿದ್ದರು. ಪ್ರಸನ್ನನವರು ಮಾಡಿಸುವ ನಾಟಕಕ್ಕೆ ಬೆನ್ನೆಲುಬಾಗಿ ಪರೇಶ ನಿಂತು ಕೆಲಸ ಮಾಡುತ್ತಿದ್ದರು. ಪ್ರಸನ್ನನವರ ರಂಗಪ್ರಯೋಗಗಳ ಹಿಂದೆ ಯಾವಾಗಲೂ ಪರೇಶರವರ ಶ್ರಮ ಇದ್ದೇ ಇರುತ್ತಿತ್ತು. ಈಗ ಪ್ರಸನ್ನನವರ ಸೌತ್ ಎಂಡ್ ಸರ್ಕಲ್ನಲ್ಲಿರುವ ‘ದೇಸಿ’ ಮಳಿಗೆಗೆ ತಮ್ಮ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದೂ ಸಹ ಪರೇಶರವರೇ. ಮೊದಲಿಂದ ಕೊನೆಯುಸಿರಿರುವವರೆಗೂ ಪ್ರಸನ್ನನವರನ್ನು ವಿಮರ್ಶಿಸುತ್ತಲೇ ಅವರ ರಂಗಚಟುವಟಿಕೆಗಳಿಗೆ ಬೆಂಬಲವಾಗಿ ನಿಂತವರು ಡಾ.ಪರೇಶ ಕುಮಾರರವರು.
ರಂಗಭೂಮಿಯ ಇನ್ನೊಬ್ಬ ಪ್ರತಿಭಾವಂತ ಬೆಳಕಿನ ವಿನ್ಯಾಸಕರಾದ ವಿ.ರಾಮಮೂರ್ತಿರವರಿಗೂ ಪರೇಶರವರಿಗೂ ಯಾವಾಗಲೂ ವೃತ್ತಿ ಸಂಬಂಧ ಭಿನ್ನಾಭಿಪ್ರಾಯಗಳಿರುತ್ತಿದ್ದವು. ಇಬ್ಬರೂ ಪೈಪೋಟಿಯ ಮೇಲೆ ಲೈಟಿಂಗ್ ಮಾಡುತ್ತಿದ್ದರು. ರಾಮಮೂರ್ತಿಯವರಿಗಿಂತಲೂ ಆಧುನಿಕ ರೀತಿಯಲ್ಲಿ ಹಾಗೂ ಕಡಿಮೆ ಖರ್ಚಿನಲ್ಲಿ ಲೈಟಿಂಗನ್ನು ಪರೇಶ ಡಿಸೈನ್ ಮಾಡಿ ರಂಗತಂಡಗಳಿಗೆ ಅಷ್ಟರ ಮಟ್ಟಿಗೆ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತಿದ್ದರು. ಯಾವತ್ತೂ ಯಾವ ರಂಗತಂಡವನ್ನೂ ಕಟ್ಟದೇ, ಯಾವ ರಂಗತಂಡದ ಜೊತೆಗೂ ಗುರುತಿಸಿಕೊಳ್ಳದೇ ಸ್ವತಂತ್ರವಾಗಿ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವುದು ಪರೇಶರವರ ಜಾಯಮಾನವಾಗಿತ್ತು. ಇನ್ನೊಂದು ವಿಶೇಷವೇನೆಂದರೆ ರಂಗಭೂಮಿಯ ಕುರಿತು
ಯಾವುದೇ ರೀತಿಯ ಅಕಾಡೆಮಿಕ್ ತರಬೇತಿ ಪಡೆಯದೇ ಕೇವಲ ಸ್ವಂತ ಆಸಕ್ತಿ
ಹಾಗೂ ಶ್ರಮದಿಂದ ಬೆಳಕಿನ ವಿನ್ಯಾಸದಂತಹ ತಾಂತ್ರಿಕ ಕೌಶಲವನ್ನು ಪರೇಶರವರು ಸಾಧಿಸಿದ್ದರು. ಒಂದು ರೀತಿಯಲ್ಲಿ ಏಕಲವ್ಯ ಪ್ರತಿಭೆ ಅವರದು.
ಪ್ರಾಧ್ಯಾಪಕ ವೃತ್ತಿಗಿಂತಲೂ ಪರೇಶರವರು ಹೆಚ್ಚು ತೊಡಗಿಕೊಂಡಿದ್ದೇ ಪ್ರವೃತ್ತಿಯಲ್ಲಿ. ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿದರಾದರೂ ಬೆಳಕಿನ ವಿನ್ಯಾಸದ ಕೆಲಸದಲ್ಲಿ ಸಕ್ರೀಯರಾಗಿದ್ದರು. ವಿಶ್ರಾಂತಿ ಪಡೆಯಬೇಕಾದ ಸಮಯದಲ್ಲಿ ಅವಿಶ್ರಾಂತವಾಗಿ ದುಡಿದದ್ದಕ್ಕೋ ಏನೋ ಅವರ ಹೃದಯದ ಮೇಲೆ ಹೆಚ್ಚು ಒತ್ತಡ ಬಿದ್ದಿತು. ಕಳೆದ ವರ್ಷ ಅನಾರೋಗ್ಯ ತೀವ್ರವಾಗಿ ಕಾಡಿದ್ದರಿಂದ ಓಕಾರ್ಡಗೆ ಎಡ್ಮಿಟ್ ಮಾಡಿ ಫೇಸ್ಮೇಕರ್ ಅಳವಡಿಸಲಾಗಿತ್ತು. ಜೊತೆಗೆ ಕಾಲಿನ ನರದ ಸಮಸ್ಯೆ ಬೇರೆ ತೀವ್ರವಾಗಿ ಕಾಡತೊಡಗಿತ್ತು. ಏನೇ ಆದರೂ ತಮ್ಮ ಕೆಲಸವನ್ನು ಮಾತ್ರ ನಿಲ್ಲಿಸಲೇ ಇಲ್ಲ. ಸಾವು ಬರುವ ಹಿಂದಿನ ದಿನದ ಸಂಜೆ ಕೂಡಾ ಸ್ನೇಹಿತರ ಮದುವೆ ಮನೆಗೆ ಹೋಗಿ ಸಂಭ್ರಮಿಸಿ ಬಂದಿದ್ದಾರೆ. ‘ಎಷ್ಟು ಸಾರಿ ಸಿಗ್ನಲ್ ಕೊಟ್ಟರೂ ಈ ಮನುಷ್ಯ ತನ್ನ ಕೆಲಸವನ್ನು ಬಿಡಲಾರ, ತನಗೆ ಸ್ವಲ್ಪ ರೆಸ್ಟ್ ಕೂಡಾ ಕೊಡಲಾರ, ಸಾಕಿನ್ನು ನನ್ನನ್ನು ದುಡಿಸಿಕೊಂಡಿದ್ದು’ ಎಂದುಕೊಂಡ ಹೃದಯ ಕೊನೆಗೂ ತನ್ನ ಕೆಲಸವನ್ನು ನಿಲ್ಲಿಸಿ ಬಿಟ್ಟಿತು.
“ನಮ್ಮ ಮನೆ ಮಗ ಇದ್ದ ಹಾಗೆ ಪರೇಶ ಇದ್ದ. ನಮ್ಮ ಕುಟುಂಬದ ಸುಖ ದುಃಖಗಳಿಗೆಲ್ಲಾ ಆಗುತ್ತಿದ್ದ. ಅತ್ಯಂತ ಮಾನವೀಯ ತುಡಿತ ಇರುವಂತಹ ವ್ಯಕ್ತಿ. ರಂಗಭೂಮಿಯ ಕೆಲಸ ಎಂದರೆ ಯಾವುದೇ ವ್ಯಯಕ್ತಿಕ ಕೆಲಸವಿದ್ದರೂ ಬಿಟ್ಟು ಬಂದು ಮಾಡುವಷ್ಟು ರಂಗಬದ್ಧತೆಯನ್ನು ಹೊಂದಿದ್ದ. ಅಂತಹ ಕ್ರಿಯಾಶೀಲ ಮನುಷ್ಯ ಹೊರಟುಬಿಟ್ಟ, ಇದನ್ನು ನೋಡಿಕೊಂಡು ನಾನಿನ್ನೂ ಇದ್ದೇನೆ..” ಎಂದು ಕಣ್ಣೀರಾಗುತ್ತಾರೆ ವಿಜಯಮ್ಮ.
ರಂಗಭೂಮಿಯಿಂದ ನಿಷ್ಕ್ರೀಯರಾದವರು, ತುಂಬಾ ವಯಸ್ಸಾದವರು ನಿರ್ಗಮಿಸಿದರೆ ಅಷ್ಟೊಂದು ಬೇಸರವಾಗುವುದಿಲ್ಲ. ಆದರೆ ಇನ್ನೂ ಕ್ರಿಯಾಶೀಲವಾಗಿದ್ದ ವ್ಯಕ್ತಿ,
ರಂಗಭೂಮಿಗಾಗಿ ಸದಾ ತುಡಿಯುತ್ತಿರುವ ಜೀವ ನಿರ್ಗಮಿಸಿದರೆ ನಿಜಕ್ಕೂ ನೋವಾಗುತ್ತದೆ. ರಂಗಭೂಮಿಗಾಗಿ ದುಡಿದ, ಮಾನವೀಯ ಕಳಕಳಿಯ ಡಾ.ಪರೇಶ ಕುಮಾರರಿಗೆ ರಂಗನಮನ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ