ಶನಿವಾರ, ಫೆಬ್ರವರಿ 15, 2014

ರಂಗದ ಮೇಲೆ ಮಾಂತ್ರಿಕತೆಯನ್ನು ಸೃಷ್ಟಿಸಿದ “ಲಕ್ಷಾಪತಿ ರಾಜನ ಕಥೆ”






ಜಾನಪದ ಕಥೆಗಳೆಂದರೆ ಹಾಗೆ, ಅಲ್ಲಿ ರಮ್ಯತೆ ಇದೆ, ಪ್ಯಾಂಟಸಿ ಕಲ್ಪನೆಗಳಿವೆ, ಸಾಹಸವಿದೆ, ವಿದ್ರೋಹಗಳಿವೆ, ಪ್ರೇಮವಿದೆ, ಕಾಮವೂ ಇದೆ. ದೇವರೇ ಬೇಕಾದಾಗ ಧರೆಗಿಳಿದು ಬರುತ್ತಾನೆ, ಬದುಕಿದ್ದವನು ಸಾಯುತ್ತಾನೆ, ಸತ್ತವನು ಬದುಕುತ್ತಾನೆ, ಪ್ರಾಣಿಗಳು ಮಾತಾಡುತ್ತವೆ, ಅಸಾಧ್ಯವೆನ್ನುವುದು ಸಾಧ್ಯವಾಗುತ್ತದೆ..... ಇವೆಲ್ಲವನ್ನೂ ಒಟ್ಟಾರೆ ಸೇರಿಸಿದರೆ ಲಕ್ಷಾಪತಿ ರಾಜನ ಕಥೆ ನಾಟಕವಾಗುತ್ತದೆ. ಅಂತಹ ಜಾನಪದ ಕಥೆಯೊಂದನ್ನು ಮುದೇನೂರು ಸಂಗಣ್ಣನವರು ಸಂಗ್ರಹಿಸಿದ್ದರು. ಎಂ.ಎಸ್. ನಾಗರಾಜ್ರವರು ನಾಟಕವಾಗಿಸಿದರು. ಬಿ.ಜಯಶ್ರೀಯವರು ತಮ್ಮ ಸ್ಪಂದನ ತಂಡಕ್ಕೆ ನಿರ್ದೇಶಿಸಿದರು.

ಸ್ಪಂದನ ತಂಡದ ಮಾಸ್ಟರ್ಪೀಸ್ ನಾಟಕವಾದ ಲಕ್ಷಾಪತಿ ರಾಜನ ಕಥೆ ಯು 1980 ಜನೆವರಿ 14ರಂದು ಮೊಟ್ಟ ಮೊದಲ ಪ್ರದರ್ಶನವಾಗಿದ್ದು,  ಈಗ 2014, ಫೆಬ್ರವರಿ 14ರಂದು ಪ್ರದರ್ಶನಗೊಂಡು ಸರಿಯಾಗಿ 24 ವರ್ಷದ ಮೇಲೆ ಒಂದು ತಿಂಗಳನ್ನು ಪೂರೈಸಿತು. ಎರಡೂವರೆ ದಶಕಗಳಲ್ಲಿ ಒಟ್ಟು ಸರಿ ಸುಮಾರು 400ರಷ್ಟು ಪ್ರಯೋಗಗಳನ್ನು ಕಂಡಿದ್ದು ನಾಟಕದ ಜನಪ್ರೀಯತೆಗೆ ಸಾಕ್ಷಿಯಾಗಿದೆ. ರವೀಂದ್ರ ಕಲಾಕ್ಷೇತ್ರ-50 ಸುವರ್ಣ ಸಂಭ್ರಮದಲ್ಲಿ ನಾಟಕ ಬೆಂಗಳೂರು ಆಯೋಜಿಸಿದ ಮೂರನೆಯ ಕಂತಿನ ನಾಟಕೋತ್ಸವದಲ್ಲಿ 2014, ಫೆಬ್ರವರಿ 14ರಂದು ಲಕ್ಷಾಪತಿ ರಾಜನ ಕಥೆ ನಾಟಕವು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡಿತು.


ಸಾಮಾಜಿಕ ವ್ಯವಸ್ಥೆ ಹಾಗೂ ಸಮಕಾಲೀನ ಸಮಸ್ಯೆಗಳಿಗೆ ಅತಿಶಯವನ್ನು ಸೇರಿಸಿ ಕಥೆ ಕಟ್ಟುವಲ್ಲಿ ನಮ್ಮ ಜನಪದರು ನಿಸ್ಸೀಮರು. ಜನಪದರ ಅತಿಮಾನುಷ ಕಲ್ಪನೆ, ಪ್ಯಾಂಟಸಿಯ ಪರಿಕಲ್ಪನೆಗಳು ಎಲ್ಲಾ ಕಾಲಕ್ಕೂ ಸಲ್ಲುವಂತಿವೆ. ಮಿಥ್ಗಳನ್ನು ಸೃಷ್ಟಿಸುತ್ತಲೇ ನೈತಿಕ ಮೌಲ್ಯಗಳನ್ನು  ಕಟ್ಟುವುದು ಬಹುತೇಕ ಜಾನಪದ ಕಥೆಗಳ ಮುಖ್ಯ ಲಕ್ಷಣಗಳಾಗಿವೆ. ಸ್ಪೈಡರ್ ಮ್ಯಾನ್, ಪ್ಯಾಂಟಮ್ಗಳಂತಹ ಅತಿಮಾನುಷ ಜಾಗತಿಕ ಕತೆಗಳನ್ನು ಕೌತುಕದಿಂದ ನೋಡುವ ನಾವು ಅವುಗಳನ್ನು ಮೀರಿಸಿದ ಪ್ಯಾಂಟಸಿಯನ್ನು ನಮ್ಮ ಜಾನಪದ ಕಥೆಗಳಲ್ಲಿ ಗುರುತಿಸಬಹುದಾಗಿದೆ. ಲಕ್ಷಾಪತಿ ರಾಜನ ಕಥೆ ಯಲ್ಲಿ ಕೂಡಾ ಅವಾಸ್ತವಿಕ ದೃಶ್ಯಗಳ ಮೂಲಕ ವಾಸ್ತವಿಕ ನೈತಿಕ ಪ್ರಜ್ಞೆಯನ್ನು ನೋಡಬಹುದಾಗಿದೆ.

ಧರ್ಮಪುರಿ ರಾಜ ಧರ್ಮಶೇಖರ ಒಂದು ದಿನ ಊಳಿಗದ ಕುಲಾವತಿಯೊಂದಿಗೆ ಕೂಡಿದ್ದಕ್ಕೆ ಆಕೆ ಗರ್ಭವತಿಯಾಗುತ್ತಾಳೆ. ಇದನ್ನು ಕೇಳಿ ಸಿಟ್ಟಿಗೆದ್ದ ರಾಜ ಆಕೆಯನ್ನು ಪಟ್ಟಣದಿಂದ ಬಹಿಷ್ಕರಿಸುತ್ತಾನೆ. ಕೆಲವು ಜೋಗತಿ-ಜಂಗಮರ ಆಶ್ರಯದಲ್ಲಿ ಕುಲಾವತಿ ಲಕ್ಷಾಪತಿಗೆ ಜನ್ಮ ನೀಡುತ್ತಾಳೆ. ಆತ ಬೆಳದು ದೊಡ್ಡವನಾಗುತ್ತಾನೆ. ರಾಜನ ಮೂರು ಗಂಡು ಮಕ್ಕಳು ಪುಂಡರಾಗಿ ಅನಾಚಾರದಲ್ಲಿ ತೊಡಗುತ್ತಾರೆ. ಪಾಪ ಹೆಚ್ಚಾಗಿ ಮಳೆ ಬರದೆ ಬರ ಬೀಳುತ್ತದೆ. ಅದೆಷ್ಟೋ ಕೋಟೆಗಳಾಚೆ, ಬೆಟ್ಟಗುಡ್ಡಗಳಾಚೆ ಇರುವ ಮಳೆರತ್ನಗಳನ್ನು ತಂದಲ್ಲಿ ಮಳೆ ಬರುತ್ತದೆಂದು ಶಿವ ಹೇಳುತ್ತಾನೆ. ರತ್ನಗಳನ್ನು ತಂದವರಿಗೆ ರಾಜಪಟ್ಟ ಎಂದು ರಾಜ ಡಂಗೂರ ಸಾರಿಸುತ್ತಾನೆ. ಮೂರೂ ಪುಂಡ ಮಕ್ಕಳು ರತ್ನಗಳನ್ನು ತರಲು ಹೊರಡುತ್ತಾರೆ. ಲಕ್ಷಾಪತಿ ಕೂಡಾ ಕುಂಟು ಮರಿ ಕುದುರೆ ಹತ್ತಿ ಹೊರಡುತ್ತಾನೆ. ಪುಂಡ ಅಣ್ಣಂದಿರು ದಾರಿಯಲ್ಲಿ ಲಕ್ಷಾಪತಿಯನ್ನು ಮರದ ಮೇಲೆ ಕಟ್ಟಿ ಹಾಕಿ ಹೋಗುತ್ತಾರೆ. ಅಕ್ಕಿ ವ್ಯಾಪಾರಿಯ ಸಹಾಯದಿಂದ ವಿಮೋಚನೆಗೊಂಡ ಲಕ್ಷಾಪತಿ ಸಾಧು ಒಬ್ಬನ ಸಲಹೆ ಪಡೆದು ದುರ್ಗಮ ಗಮ್ಯವನ್ನು ಸೇರಿ ಮರದ ಮೇಲೆ ಮಲಗಿದ್ದ ಲಾಲಾವತಿಯ ಉಡಿಯೊಳಗಿಂದ ಮಳೆರತ್ನಗಳನ್ನು ತೆಗೆದುಕೊಳ್ಳುತ್ತಾನೆ. ಉತ್ತಮ ಜಾತಿಯವಳಾಗಿದ್ದರೆ ನನ್ನನ್ನು ಹುಡುಕಿ ಬಂದು ಮದುವೆಯಾಗು ಎಂದು ಓಲೆ ಬರೆದಿಡುತ್ತಾನೆ. ಸಾಧುವಿನ ಮಾತು ಮೀರಿ ಆಕೆಯ ಮುಖವನ್ನು ನೋಡಿ ಸುಟ್ಟುಕೊಂಡು ಸಾಯುತ್ತಾನೆ

 ದುಃಖದಿಂದಾಗಿ ಮರಿಕುದುರೆಯೂ ಸಾಯಲು ಪ್ರಯತ್ನಿಸಿದಾಗ ಶಿವ ಪ್ರತ್ಯಕ್ಷನಾಗಿ ಲಕ್ಷಾಪತಿಯನ್ನು ಬದುಕಿಸುತ್ತಾನೆ. ರತ್ನಗಳನ್ನು ತೆಗೆದುಕೊಂಡು ವಾಪಸ್ ಬರುವಾಗ ಪಗಡೆಯಲ್ಲಿ ಸೋತು ರಂಗಸಾಣಿಯೊಬ್ಬಳಲ್ಲಿ ಜೀತದಾಳಾಗಿ ದುಡಿಯುವ ಅಣ್ಣಂದಿರನ್ನು ನೋಡಿ ಮರುಕಪಡುತ್ತಾನೆ. ರಂಗಸಾಣಿಯ ಜೊತೆಗೆ ಪಗಡೆಯಾಡಿ ಗೆದ್ದು ಅಣ್ಣಂದಿರನ್ನು ಜೀತಮುಕ್ತರನ್ನಾಗಿಸುತ್ತಾನೆ. ಶಾಂಭವಿಯ ಗುಡಿಯಲ್ಲಿ ಮೂರು ಜನ ಅಣ್ಣಂದಿರು ಲಕ್ಷಾಪತಿಯನ್ನು ಕೊಂದು ರತ್ನಗಳನ್ನು ಎಗರಿಸಿಕೊಂಡು ಧರ್ಮಾಪುರಿಗೆ ಬರುತ್ತಾರೆ. ಅತ್ತ ಎಚ್ಚರಗೊಂಡ ಲಾಲಾವತಿ ಪತ್ರವನ್ನೋದಿ ಲಕ್ಷಾಪತಿಯನ್ನು ಹುಡುಕಿಕೊಂಡು ಬಂದು ಆತನ ಸಾವಿಗೆ ಪ್ರತಿಯಾಗಿ ತಾನೂ ಸಹ ಸಾಯಲು ಪ್ರಯತ್ನಿಸುತ್ತಾಳೆ. ಶಾಂಭವಿ ಪ್ರತ್ಯಕ್ಷಳಾಗಿ ಲಕ್ಷಾಪತಿಯನ್ನು ಬದುಕಿಸುತ್ತಾಳೆ. ಮರಿಕುದುರೆಯ ಮೇಲೆ ಲಾಲಾವತಿಯೊಂದಿಗೆ ಲಕ್ಷಾಪತಿಯು ರಾಜನಲ್ಲಿಗೆ ಬಂದು ಅಣ್ಣಂದಿರ ಮೋಸವನ್ನು ತಿಳಿಸುತ್ತಾನೆ. ಶಿವನು ಲಾಲಾವತಿಯ ಉಡಿಯೊಳಗೆ ಮಳೆರತ್ನಗಳನ್ನಿಟ್ಟು ಪವಿತ್ರಗೊಳಿಸುತ್ತಾನೆ. ಲಕ್ಷಾಪತಿಯ ವಿನಂತಿಯ ಮೇರೆಗೆ ರಾಜನು ತನ್ನ ಉದ್ಧಟ ಮಕ್ಕಳಿಗೆ ಕೊಟ್ಟ ಮರಣದಂಡನೆಯನ್ನು ರದ್ದುಗೊಳಿಸಿ ಕ್ಷಮಿಸುತ್ತಾನೆ. ಕೊನೆಗೆ ರಾಜನು ಲಕ್ಷಾಪತಿಯನ್ನು ತನ್ನ ಮಗನೆಂದು ಒಪ್ಪಿಕೊಂಡು ರಾಜನ ಪಟ್ಟಕಟ್ಟುತ್ತಾನೆ. ಶಿವನ ಆಶೀರ್ವಾದ ಪಡೆದು ಲಾಲಾವತಿಯನ್ನು ಲಕ್ಷಾಪತಿ ಮದುವೆಯಾಗಿ ಸುಖವಾಗಿರುತ್ತಾನೆಂಬಲ್ಲಿಗೆ ಲಕ್ಷಾಪತಿ ರಾಜನ ಕಥೆ ಸುಖಾಂತ್ಯವಾಗುತ್ತದೆ. ನಾಟಕ ಮುಗಿಯುತ್ತದೆ.

ಕಥೆಯನ್ನು ಕಥಾನಕವಾಗಿಯೇ ನಾಟಕವಾಗಿಸಿದ್ದರೆ ಏನೂ ವಿಶೇಷವೆನ್ನಿಸುತ್ತಿರಲಿಲ್ಲ. ಅದಕ್ಕೆ ಇಷ್ಟೊಂದು ಜನಪ್ರೀಯತೆಯೂ ದಕ್ಕುತ್ತಿರಲಿಲ್ಲ. ನಾಟಕದ ಯಶಸ್ಸಿಗೆ ಕಾರಣವಾಗಿದ್ದು ಅದರ ನಿರೂಪಣಾ ಶೈಲಿ. ಹಾಡು, ಸಂಗೀತ, ಕುಣಿತ ಸಂಯೋಜನೆಗಳ ಮೂಲಕ ಇಡೀ ನಾಟಕವನ್ನು ಕಟ್ಟಿಕೊಟ್ಟ ರೀತಿಯಿಂದಾಗಿ ನಾಟಕ ಕಣ್ಚಿತ್ತಮಾಯೆಯನ್ನು ನೋಡುಗರಿಗೆ ಕಟ್ಟಿಕೊಟ್ಟಿದೆ. ಜೋಗಯ್ಯ-ಜೋಗತಿಗಳ ಮೇಳವನ್ನು ಹುಟ್ಟಿಹಾಕಿ ಸಂಗೀತಮಯ ರೂಪದಲ್ಲಿ ಇಡೀ ನಾಟಕ ನಿರೂಪನೆಗೊಂಡ ಬಗೆ ರಂಗದಂಗಳದಲ್ಲಿ ದೃಶ್ಯವೈಭವವನ್ನು ಸೃಷ್ಟಿಸಿದೆ. ಇಲ್ಲಿ ಕಥೆಗಿಂತಲೂ ಕಥೆ ಹೇಳುವಲ್ಲಿಯ ಮಾಂತ್ರಿಕತೆ ಅಚ್ಚರಿಯನ್ನು ಹುಟ್ಟಿಸಿದೆ. ಇಂತಹ ನಾಟಕಗಳು ತತ್ವ ತರ್ಕದೆಲ್ಲೆಗಳನ್ನೂ ಮೀರಿ ನೋಡುಗರನ್ನು ರಂಜಿಸುತ್ತವೆ. ರಂಗವೇದಿಕೆಯ ಮೇಲೆ ಒಂದು ಭ್ರಮಾಲೋಕವನ್ನೇ ಅನಾವರಣಗೊಳಿಸುತ್ತವೆ. ಇದರಿಂದಾಗಿ ಲಕ್ಷಾಪತಿ ರಾಜನ ಕಥೆ ನೋಡುಗರನ್ನು ಸೂಜಿಗಲ್ಲಂತೆ ಆಕರ್ಷಿಸುತ್ತದೆ. ಆಗಾಗ ದೃಶ್ಯಗಳಲ್ಲಿ ಬಳಸಲಾದ ಕಾಮೆಡಿ ಸೆನ್ ಮತ್ತು ಪಂಚ್ ಟೈಮಿಂಗ್ ಅಂತೂ ನೋಡುಗರಲ್ಲಿ ನಗೆಬುಗ್ಗೆಯನ್ನುಂಟು ಮಾಡುತ್ತವೆ.
 
ಮೇಳದಲ್ಲಿರುವ ಜೋಗಯ್ಯ-ಜೋಗತಿಗಳು ಕಥೆ ನಿರೂಪಣೆಗೆ ಇಲ್ಲವೇ ಕೇವಲ ಹಾಡು ಕುಣಿತಕ್ಕೆ ಮಾತ್ರ ಮೀಸಲಾಗಿರದೇ ಪಾತ್ರಗಳಾಗಿಯೂ ಬದಲಾಗುತ್ತವೆ. ಮೇಳದವರು ಕಥೆ ಹೇಳುತ್ತಾ, ದೃಶ್ಯಕ್ಕೆ ಪೂರಕವಾಗಿ ಹಾಡುತ್ತಾ, ಹಾಡಿಗೆ ತಕ್ಕ ಸಂಗೀತವನ್ನೂ ಕೊಡುತ್ತಾ, ಸಂಗೀತಕ್ಕೆ ತಕ್ಕಹಾಗೆ ಹೆಜ್ಜೆಯನ್ನೂ ಹಾಕುತ್ತಾ, ನಾಟಕದ ಪಾತ್ರಗಳಾಗಿ ಅಭಿನಯಿಸುತ್ತಾ... ಬಹುಮುಖಿ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ. ರಂಗವೇದಿಕೆಯಲ್ಲಿ ಪಾದರಸದಂತೆ ಚಲಿಸುವ ಮೇಳದವರು ಪ್ರೇಕ್ಷಕರಲ್ಲಿ ಮಿಂಚಿನ ಸಂಚಾರವನ್ನು ಹರಿಸುತ್ತಾರೆ. ಹೀಗಾಗಿ ಅತ್ಯುತ್ತಮ ಜಾನಪದ ನಾಟಕಗಳಲ್ಲೊಂದಾಗಿ ಲಕ್ಷಾಪತಿ ರಾಜನ ಕಥೆ ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ದಾಖಲಾಗಿದೆ. ದಾಖಲಾರ್ಹ ಪ್ರದರ್ಶನಗಳನ್ನೂ ಕಂಡಿದೆ


  ನಾಟಕದ ಒಂದೇ ಒಂದು ಸಮಸ್ಯೆ ಏನೆಂದರೆ ಅತೀ ವೇಗವಾದ ಸಂಭಾಷಣೆ. ಮೇಳದ ಬಹುತೇಕ ಪಾತ್ರಗಳು ಪಾಜ್, ಪುಲ್ಸ್ಟಾಪ್ಗಳನ್ನು  ಲೆಕ್ಕಕ್ಕಿರಿಸದೆ ಮಾತಾಡುತ್ತಲೇ ಹೋಗುತ್ತವೆ. ಒಂದು ವಾಕ್ಯವನ್ನು ಕೇಳುಗರು ಅರ್ಥೈಸಿಕೊಳ್ಳುವ ಮುಂಚೆಯೇ ಇನ್ನೊಂದು ವಾಕ್ಯ ಕಿವಿಗಪ್ಪಳಿಸುತ್ತದೆ. ಹೀಗಾಗಿ ಕಥೆಯ ಸಂವಹನ ಸುಲಭಕ್ಕೆ ಅರ್ಥವಾಗುವುದಿಲ್ಲ. ಜೊತೆಗೆ ಪಾತ್ರಗಳು ಮಾತನಾಡುವಾಗ ಮೇಳಗಳ ಕೈಯಲ್ಲಿರುವ ಸಂಗೀತ ವಾದ್ಯಗಳು ಸುಮ್ಮನಿರದೇ ಬಾರಿಸುತ್ತಲೆ ಇರುತ್ತವೆ. ಇದರಿಂದಾಗಿ ಮಾತುಗಳನ್ನು ಸಂಗೀತ ನುಂಗಿ ಹಾಕಿ ಕೇಳುಗರಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಲೈವ್ ಹಾಡು ಮತ್ತು ಸಂಗೀತಗಳು ನಾಟಕದ ಆಕರ್ಷಣೆಯನ್ನು ಹೆಚ್ಚಿಸಿದ್ದಂತೂ ಸತ್ಯ. ಆದರೆ ಕೆಲವು ಹಾಡಿಗೆ ಹಾಕಿದ ಟ್ಯೂನ್ಗಳು ಎಲ್ಲೂ ಹಿಂದೆ ಕೇಳಿದ ಭಾವನೆ ಕೇಳುಗರಿಗುಂಟಾಗುತ್ತವೆ. ಯಾಕೆಂದರೆ ಅವು ಜೋಕುಮಾರಸ್ವಾಮಿ ನಾಟಕದ ಟ್ಯೂನ್ಗಳಾಗಿವೆ.

ದೃಶ್ಯಗಳ ಅತಾರ್ಕಿಕ ನಡೆ ರೀತಿಯ ಪ್ಯಾಂಟಸಿ ನಾಟಕಗಳ ಅಂತಸತ್ವವಾಗಿವೆ. ಆದರೆ ಕೆಲವೊಂದು ಬದಲಾಯಿಸಬಹುದಾದ ಚಿಕ್ಕಪುಟ್ಟ ಮಿಸ್ಟೇಕ್ಸಗಳೂ ನಾಟಕದಲ್ಲಿವೆ. ಲಕ್ಷಾಪತಿ ನಾಟಕದಲ್ಲಿ ರಾಜನಲ್ಲವೇ ಅಲ್ಲ. ಕೊಟ್ಟ ಕೊನೆಗೆ ರಾಜಪಟ್ಟಕ್ಕೇರುತ್ತಾನೆ. ಆದರೆ ನಾಟಕದಲ್ಲಿ ಹಲವಾರು ಬಾರಿ ಲಕ್ಷಾಪತಿ ರಾಜ ಎಂದೇ ಕರೆಯಲಾಗುತ್ತದೆ. ಕುದುರೆಯು ರಾಜನೆಂದು ಕರೆಯುವುದನ್ನು ನಿರ್ಲಕ್ಷಿಸಿದರೂ ಲಾಲಾವತಿ ಕೂಡಾ ಹಾಗೆ ಕರೆಯುತ್ತಾಳೆ. ಅಸಲಿಗೆ ಇದು ಲಕ್ಷಾಪತಿ ರಾಜನ ಕಥೆಯೇ ಅಲ್ಲ. ಯಾಕೆಂದರೆ ಕಥೆ ನಡೆಯುವಾಗ ಲಕ್ಷಾಪತಿ ರಾಜನಾಗಿರೋದೇ ಇಲ್ಲ. ರಾಜನೊಬ್ಬನ ಒಂದು ದಿನದ ಆಸೆಗೆ ಹುಟ್ಟದವ ಆತ. ಬೇಕಾದರೆ ರಾಜಕುಮಾರ ಎನ್ನಬಹುದೇನೋ. ರಾಜ ಎಂದು ಕರೆಯುವ ಅಗತ್ಯವೇ ಇಲ್ಲ.  ಲಕ್ಷಾಪತಿಗೆ ನಾಮಕರಣ ಮಾಡಿದ ದಾಸಯ್ಯ ಹನ್ನೆರಡು ವರ್ಷದವನಾದ ನಂತರ ನಿನ್ನ ಮಗ ನಿನಗೆ ದಕ್ಕುವುದಿಲ್ಲ ಎಂದು ಭವಿಷ್ಯ ಹೇಳುತ್ತಾನೆ. ಆದರೆ ಮೀಸೆಬಂದ ಯುವಕನಾಗಿದ್ದರೂ ಲಕ್ಷಾಪತಿ ತಾಯಿಯ ಜೊತೆಗೆ ಇರುತ್ತಾನೆ. ಹನ್ನೆರಡರ ಬದಲು ಇಪ್ಪತೈದು ವರ್ಷದ ನಂತರ ಎಂದು ಬದಲಾಯಿಸಿಕೊಂಡರೆ ಸೂಕ್ತವೆನ್ನಿಸುತ್ತದೆ. ಅಣ್ಣಂದಿರು ಲಕ್ಷಾಪತಿಯನ್ನು ಕೊಂದ ಆರು ತಿಂಗಳ ಮೇಲೆ ಲಾಲಾವತಿ ಬಂದಳು ಎಂದು ಜೋಗಯ್ಯಗಳು ಹೇಳುತ್ತಾರೆ. ಸತ್ತವನ ದೇಹ ಆರು ತಿಂಗಳಷ್ಟು ಕಾಲ ಅಲ್ಲಿ ಹಾಗೆಯೇ ಇತ್ತಾ ಎನ್ನುವ ಅಪ್ರಸ್ತುತ ಪ್ರಶ್ನೆಗಿಂತಲೂ, ಆರುತಿಂಗಳೊಳಗೆ ಮಳೆರತ್ನವನ್ನು ತರದಿದ್ದರೆ ಉರಿಶಾಪ ಎಂದು ಶಿವ ಹೇಳಿರುತ್ತಾನೆ. ಹೀಗಾಗಿ ಆರುತಿಂಗಳ ನಂತರ ಅನ್ನುವುದನ್ನು ಕೈಬಿಡುವುದುತ್ತಮ. ಇಂತಹ ಕೆಲವು ಅನಗತ್ಯ ಪ್ರಸ್ತಾಪಗಳು ನಾಟಕದಲ್ಲಿ ಆಗಾಗ ಬರುತ್ತವೆ. ಅವುಗಳೆಲ್ಲವನ್ನೂ ಸರಿಮಾಡಿದರೆ ನೋಡುಗರಲ್ಲಿ ಅನಗತ್ಯ ಸಂದೇಹಗಳೇಳದಂತೆ ನೋಡಿಕೊಳ್ಳಬಹುದಾಗಿದೆ


 ಅದೇ ತಾನೆ ಹುಟ್ಟಿದ ಮಗುವಿನಿಂದ ಹಿಡಿದು ಅದು ದೊಡ್ಡದಾಗುವವರೆಗೆ, ಮಗುವಿಲ್ಲದೇ ಮಗುವಿನ ಅಸ್ತಿತ್ವದ ಕಲ್ಪನೆಯನ್ನು ಮೈಮ್ ಮೂಲಕ ತೋರಿಸುವ ಬಿ.ಜಯಶ್ರೀರವರ ನಟನಾ ಸಾಮರ್ಥ್ಯ ಅನನ್ಯವಾಗಿದೆ. ಬಿ.ಜಯಶ್ರೀಯವರು ವಯಸ್ಸಿನಲ್ಲೂ ಸಹ ಮಾಡುವ ಹಾಡಿನ ಮೋಡಿಗೆ ಮರುಳಾಗದವರಾರು? ನಾಟಕದ ಮೊದಲಿಂದ ಕೊನೆಯವರೆಗೂ ಅದೇ ಎನರ್ಜಿಯನ್ನಿಟ್ಟುಕೊಂಡು ಜಯಶ್ರೀಯವರು ಹಾಡುತ್ತಾರೆ, ಕುಣಿಯುತ್ತಾರೆ, ವೇದಿಕೆಯಾದ್ಯಂತ ಪಾದರಸದಂತೆ ಸಹಕಲಾವಿದರೊಂದಿಗೆ ಹರಿದಾಡುತ್ತಾರೆ. ಕನ್ನಡ ರಂಗಭೂಮಿಯಲ್ಲಿ ಬಹುಪ್ರತಿಭೆಯ ಜಯಶ್ರೀರವರಿಗೆ ಜಯಶ್ರೀರವರೇ ಸರಿಸಾಟಿ ಎನ್ನುವುದನ್ನು ನಾಟಕದಲ್ಲಿ ಸಾಕ್ಷೀಕರಿಸಿದ್ದಾರೆ. ಆಗಾಗ ಸಹ ಕಲಾವಿದರು ತಪ್ಪಾಗಿ ಮಾತಾಡಿದರೆ ನಡುವೆ ಪ್ರವೇಶಿಸುವ ಜಯಶ್ರೀಯವರು ತಪ್ಪು ಮಾತುಗಳನ್ನು ಸರಿ ಮಾಡುವ ರೀತಿಯಿಂದಾಗಿ  ಅವರ ರಂಗಶಿಸ್ತು ಮತ್ತು ರಂಗಜವಾಬ್ದಾರಿ ಗೋಚರಿಸುತ್ತದೆ. ರಮೇಶ ಪಂಡಿತರಾದಿಯಾಗಿ ಮೇಳದಲ್ಲಿರುವ ಎಲ್ಲಾ ಕಲಾವಿದರೂ ಪೈಪೋಟಿಗೆ ಬಿದ್ದಂತೆ ನಟಿಸಿ ನಾಟಕಕ್ಕೆ ಸೊಗಸನ್ನು ತಂದುಕೊಟ್ಟಿದ್ದಾರೆ.


ನಾಟಕದಲ್ಲಿ ಹೇಳಿಕೊಳ್ಳುವಂತಹ ಸೆಟ್ಗಳಿಲ್ಲ. ಹಿಂದೆ ದೈತ್ಯಾಕಾರದ ಮರವೊಂದರ ಬುಡ ಹಾಗೂ ಮೇಲೆ ಪೊಟರೆಯುಳ್ಳ ಎಲೆಕೊಂಬೆಗಳನ್ನು ಸೂಚಿಸುವ ಬಿತ್ತಿಚಿತ್ರ ಮಾತ್ರ ನಾಟಕದಲ್ಲಿ ಬಳಸಲಾದ ಏಕಮಾತ್ರ ಸೆಟ್ ಆಗಿದೆ. ಅರಮನೆ ಇರಲಿ, ಬೀದಿ ಇರಲಿ ಯಾವುದೇ ದೃಶ್ಯವಿರಲಿ ಇದೇ ಸೆಟ್ನ್ನು ಸ್ತಾಯಿಯಾಗಿ ಬಳಸಲಾಗಿದೆ. ಆದರೆ ಲಕ್ಷಾಪತಿ ಮರವನ್ನು ಹತ್ತುವಾಗ ಮತ್ತು ಇಳಿಯುವಾಗ ಮರವನ್ನೇ ಇಳಿಸಿ ಏರಿಸಿ ನಿಜವಾಗಿಯೂ ವ್ಯಕ್ತಿ ಮರವೇರಿ ಇಳಿಯುವಂತಹ ದೃಶ್ಯವನ್ನು ಸೃಷ್ಟಿಸಿದ್ದು ನೋಡುಗರಿಗೆ ಮರಮಾಶ್ಚರ್ಯವನ್ನುಂಟು ಮಾಡುತ್ತದೆ. ಸೆಟ್ಗಳ ಕೊರತೆಯನ್ನೂ ಮೀರಿ ಎಲ್ಲಾ ಕಲಾವಿದರೂ ಇಡೀ ವೇದಿಕೆಯನ್ನು ಬಳಸಿಕೊಳ್ಳುವ ರೀತಿ ಮಾತ್ರ ತುಂಬಾ ಸೊಗಸಾಗಿದೆ. ಜೋಗಯ್ಯಗಳಿಗೆ ತೊಡಿಸಲಾದ ವಸ್ತ್ರವಿನ್ಯಾಸ ಎಕ್ಸ್ಟ್ರಾ ಆರ್ಡಿನರಿ. ಎಲ್ಲಾ ಪಾತ್ರಗಳ ಕಾಸ್ಟೂಮ್ಸ, ಅವರು ಬಳಸುವ ರಂಗಪರಿಕರಗಳು, ಸಂಗೀತದ ಉಪಕರಣಗಳು ನಾಟಕದಾದ್ಯಂತ ಬಣ್ಣದ ಚಿತ್ತಾರ ಬಿಡಿಸಿದಂತಿವೆ. ಶ್ರೀನಿವಾಸ. ಜಿ. ಕಪ್ಪಣ್ಣನವರ ಬೆಳಕಿನ ವಿನ್ಯಾಸ ಹಾಗೂ ನಿರ್ವಹಣೆಯೂ ನಾಟಕದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಯಾರು ಏನೇ ಹೇಳಿದರೂ ಕಪ್ಪಣ್ಣ ಉತ್ತಮ ಬೆಳಕಿನ ತಂತ್ರಜ್ಞ ಎನ್ನುವುದನ್ನು ನಿರಾಕರಿಸಲು ಸಾಧ್ಯವೇ ಇಲ್ಲ ಎನ್ನುವುದನ್ನು ನಾಟಕದ ಬೆಳಕಿನ ಮಾಂತ್ರಿಕತೆ ಸಾಬೀತು ಪಡಿಸುವಂತಿದೆ.
  
ನಾಟಕದಲ್ಲಿ ಮಳೆ ರತ್ನಗಳನ್ನು ತರುವ ಪ್ರೊಸೆಸ್ನ್ನು ಚೆನ್ನಾಗಿ ತೋರಿಸಲಾಗಿದೆ. ಆದರೆ ಅದನ್ನು ತಂದ ಉದ್ದೇಶ ಈಡೇರಿತಾ? ಅದರಿಂದ ಮಳೆ ಬಂದು ಬರ ನೀಗಿತಾ? ಎನ್ನುವುದನ್ನು ಅವಜ್ಞೆ ಮಾಡಲಾಗಿದೆ. ಕೊನೆಗೆ ಶಿವನ ಮೂಲಕವಾದರೂ ಇಲ್ಲವೇ ಮೇಳದವರ ಮೂಲಕವಾದರೂ ಮಳೆಯ ಪ್ರಸ್ತಾಪ ಬರಬೇಕಿತ್ತು. ಲಕ್ಷಾಪತಿಯನ್ನು ರಾಜನನ್ನಾಗಿಸುವ ದಾವಂತದಲ್ಲಿ  ಮಳೆರತ್ನಗಳ ಪ್ರಯೋಜನವನ್ನು ಸಾದರಪಡಿಸದೇ ಹೋಗಿ ಪ್ರೇಕ್ಷಕರ ಊಹೆಗೆ ಬಿಡಲಾಗಿದೆ. ಎಲ್ಲಾ ತಾತ್ವಿಕ ನ್ಯೂನ್ಯತೆಗಳನ್ನೂ ಮೀರಿ ನಾಟಕ ನೋಡುಗರಲ್ಲಿ ಮಾಂತ್ರಿಕತೆಯನ್ನು ಸೃಷ್ಟಿಸಿದೆ. ದೃಶ್ಯಕಲೆಯ ಸಾಧ್ಯತೆಗಳನ್ನು ತೋರಿಸಿದೆ. ಇದರಿಂದಾಗಿಯೇ ಕಾಲು ಶತಮಾನದಲ್ಲಿ ನಾಲ್ಕು ಶತಕಗಳಷ್ಟು ಪ್ರದರ್ಶನಗಳನ್ನು ಸ್ಪಂದನ ರಂಗತಂಡ ಪೂರೈಸಿದೆ.   

                                      -ಶಶಿಕಾಂತ ಯಡಹಳ್ಳಿ  

    


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ