ಭಾನುವಾರ, ಫೆಬ್ರವರಿ 9, 2014

ನೋಡುಗರ ಮನಸ್ಸನ್ನು ಕಾಡುವ “ಕಾಡ್ಮನ್ಸ” :


                   
                          
ಕಾಡ್ಮನ್ಸ ತುಂಬಾ ವಿಚಿತ್ರವಾದ ಹಾಗೂ ವಿಶಿಷ್ಟವಾದ ಹೇಟ್ ಆಂಡ್ ಲವ್ ವಸ್ತುವುಳ್ಳ ನಾಟಕ. ಆಂಟನಿ ಚೆಕಾವ್ ಬರೆದ ಕಥೆಯನ್ನಾಧರಿಸಿ ಪರ್ವತವಾಣಿಯವರು ತುಂಬಾ ಹಿಂದೆಯೇ ರಂಗರೂಪಾಂತರಿಸಿದ್ದ   ನಾಟಕವನ್ನು ಬಿ.ಜಿ.ರಾಮಕೃಷ್ಣರವರು ಶಿವರಂಗ ತಂಡದ ಕಲಾವಿದರಿಗೆ ನಿರ್ದೇಶಿಸಿದ್ದಾರೆ. ರವೀಂದ್ರ ಕಲಾಕ್ಷೇತ್ರ-50 ಸುವರ್ಣ ಸಂಭ್ರಮದಲ್ಲಿ ನಾಟಕ ಬೆಂಗಳೂರು ಆಯೋಜಿಸಿದ ಮೂರನೆಯ ಕಂತಿನ ನಾಟಕೋತ್ಸವದಲ್ಲಿ 2014, ಫೆಬ್ರವರಿ 9ರಂದು ಕಾಡ್ಮನ್ಸ ನಾಟಕವು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡಿತು.

ನಾಟಕದಲ್ಲಿ ಇರೋದೆ ಮೂರು ಮುಖ್ಯ ಪಾತ್ರಗಳು. ಅದರಲ್ಲೂ ಪ್ರಮುಖವಾಗಿ ಎರಡೇ ಪಾತ್ರಗಳ ಮೂಲಕ ಇಡೀ ನಾಟಕವನ್ನು ಕಟ್ಟಲಾಗಿದೆ. ದಂಡಿಗೆ ಹೋದ ಗಂಡ ಸತ್ತ ಶೋಕದಲ್ಲಿರುವ ಸೌಭಾಗ್ಯ. ಮರುಮದುವೆಗೆ ಒತ್ತಾಯಿಸುವ ಮನೆಕೆಲಸದಾಳು ಲಕ್ಕಜ್ಜ. ಗಂಡನಿಗೆ ಕೊಟ್ಟ ಸಾಲದ ವಸೂಲಿಗೆ ಆಕೆಯ ಮನೆಗೆ ಬರುವ ಕಾಡಯ್ಯ. ಹಠಕ್ಕೆ ಬಿದ್ದು ಹಣ ವಸೂಲಿಗೆ ಪಟ್ಟಾಗಿ ನಿಂತ ಕಾಡಯ್ಯ ಬರುಬರುತ್ತಾ ಆಕೆಯ ರೂಪಕ್ಕೆ ಮನಸೋತು ಮೋಹಕ್ಕೆ ಒಳಗಾಗುತ್ತಾನೆ. ಆತನ ಒರಟುತನಕ್ಕಾಗಿ ಇನ್ನಿಲ್ಲದಂತೆ ದ್ವೇಷಿಸುವ ಸೌಭಾಗ್ಯ ಕೊನೆಗೆ ಆತನ ಮದುವೆ ಪ್ರಸ್ತಾಪವನ್ನು ಒಪ್ಪಿಕೊಳ್ಳುತ್ತಾಳೆ. ಇಬ್ಬರೂ ಒಂದಾಗುತ್ತಾರೆ. ನಾಟಕ ಮುಗಿಯುತ್ತದೆ.

ಇಲ್ಲಿ ಪ್ರೇಮದ ಇನ್ನೊಂದು ರೀತಿಯ ಆಯಾಮವನ್ನು ತೋರಿಸಲಾಗಿದೆ. ವಿಧುರ ಮತ್ತು ವಿಧವೆ ಇವರಿಬ್ಬರ ಪ್ರೇಮ ಮತ್ತು ಮರುವಿವಾಹವನ್ನು ಹೇಳುವ ನಾಟಕ ಆಗಿನ ಕಾಲದಲ್ಲಿ ಕ್ರಾಂತಿಕಾರಿ ಎನ್ನುವಂತಹ ವಿಚಾರವಾಗಿದೆ. ಬಹುಶಃ ರಾಜಮಹಾರಾಜರ ಕಾಲಘಟ್ಟದಲ್ಲಿ ನಡೆಯುವ ಸನ್ನಿವೇಶದಲ್ಲಿ ಇಂತಹುದನ್ನು ಆಲೋಚನೆ ಮಾಡುವುದೂ ಅಪರಾಧವೆನ್ನಿಸುವ ಮನೊಭಾವವಿತ್ತು. ಸತಿ ಸಹಗಮನ ಎನ್ನುವ ಅನಿಷ್ಟ ಪದ್ದತಿಯೂ ಜಾರಿಯಲ್ಲಿತ್ತು. ವಿಧವಾ ವಿವಾಹ ನಿಷಿದ್ದವಾಗಿತ್ತು  ಸೈನ್ಯದಲ್ಲಿದ್ದು ಕಾದಾಡಿ ಸತ್ತ ಯೋಧನೊಬ್ಬನ ಹೆಂಡತಿ ಹೀಗೆ ಪ್ರೇಮಕ್ಕೆ ಬಿದ್ದು ಮರುಮದುವೆಗೆ ಒಪ್ಪಿಕೊಳ್ಳುವ ನಿರ್ಧಾರವನ್ನು ಪುರಸ್ಕರಿಸುವ ಔದಾರ್ಯ ಆಗಿನ ಕಾಲದ ಸಮಾಜದಲ್ಲಿ ಎಲ್ಲಿತ್ತು? ಕಾಲದಲ್ಲಾದರೂ ಎಲ್ಲಿದೆ? ಚೆಕಾವ್ ದೇಶದಲ್ಲಿ ಕಾಲದಲ್ಲಿ ರೀತಿಯ ಸಂಬಂಧಗಳು ಹಾಗೂ ಸಂಗಾತಿ ಆಯ್ಕೆಯಲ್ಲಿ ಮುಕ್ತತೆ ಇರಬಹುದಾದರೂ ಭಾರತದಲ್ಲಿ ಸಾಧ್ಯವಿತ್ತು ಎಂದು ನಂಬುವುದೇ ಅಸಾಧ್ಯ. ಕಾಲಘಟ್ಟವನ್ನು ಮರೆತು ನಾಟಕವನ್ನು ನೋಡಿದರೆ ಮುರಿದ ಬದುಕನ್ನು ಮತ್ತೆ ಕಟ್ಟಿಕೊಳ್ಳುವಂತಹ, ಒಡೆದ ಮನಸ್ಸುಗಳನ್ನು ಒಂದಾಗಿಸಿಕೊಳ್ಳುವಂತಹ ಕಥಾನಕ ಸಮಕಾಲೀನವಾಗಿದೆ.



ಪ್ರೇಮ ಎನ್ನುವುದು ಎಂತಹ ವೈರುಧ್ಯಗಳನ್ನಾದರೂ ಒಂದು ಮಾಡುತ್ತದೆ ಎನ್ನುವುದಕ್ಕೆ ನಾಟಕವೇ ಸಾಕ್ಷಿ. ಸತ್ತ ಗಂಡನ ನೆನಪಿನಲ್ಲೇ ಬದುಕುವ ಸೌಭಾಗ್ಯ ತನ್ನ ಮನೆಯೊಳಗೆ ತನ್ನನ್ನು ಬಂಧಿಸಿಕೊಂಡಿರುತ್ತಾಳೆ. ಗಂಡನ ಅಕ್ರಮ ಸಂಬಂಧಗಳಿಂದಾಗಿ ನೊಂದು ಗಂಡಸರ ಮೇಲೆ ರೋಸಿ ಹೋಗಿರುತ್ತಾಳೆ. ಹಾಗೆಯೇ ಹೆಂಗಸರನ್ನು ಕಂಡರೆ ಕಾಡಯ್ಯನಿಗೆ ಸಿಟ್ಟು ನೆತ್ತಿಗೇರುತ್ತಿರುತ್ತದೆ. ಆತನಿಗೆ ಒಂಬತ್ತು ಜನ ಹೆಂಗಸರು ಕೈಕೊಟ್ಟಿರುತ್ತಾರೆ. ಪುರುಷ ದ್ವೇಷಿ ಹಾಗೂ ಸ್ತ್ರೀದ್ವೇಷಿಗಳು ಆಕಸ್ಮಿಕವಾಗಿ ಎದುರು ಬದುರಾದಾಗ ತಮ್ಮೆಲ್ಲಾ ದ್ವೇಷಗಳನ್ನು ವ್ಯಕ್ತಪಡಿಸುತ್ತಲೇ  ತಮಗರಿವಿಲ್ಲದಂತೆಯೇ ಪ್ರೀತಿಯ ಮೋಹಕ್ಕೆ ಒಳಗಾಗುತ್ತಾರೆ. ವೈರಿಗಳಾಗಿದ್ದವರು ಪ್ರೇಮಿಗಳಾಗುತ್ತಾರೆ. ತಮ್ಮ ಬದುಕಿನ ಕೊರತೆಗಳನ್ನು ನೀಗಿಕೊಳ್ಳುತ್ತಾರೆ. ಇಂತಹ ಪ್ರೇಮದ ಪರಿಯನ್ನು ನಾಟಕ ಬಲು ಸೊಗಸಾಗಿ ಸಾದರಪಡಿಸುತ್ತದೆ.

ಪ್ರೇಮಕ್ಕೆ ಯಾವುದರ ಹಂಗಿಲ್ಲವೆನ್ನುವುದನ್ನು ಪ್ರೇಮ ಪ್ರಕರಣ ಸಾಬೀತುಪಡಿಸುತ್ತದೆ. ಯಾಕೆಂದರೆ ಕಾಡಯ್ಯ ಕೇವಲ ಒರಟ ಮಾತ್ರವಲ್ಲ, ಒಬ್ಬ ಅಸಡ್ಡಾಳಾದ ವ್ಯಕ್ತಿ. ವಿಚಿತ್ರವಾಗಿ ವರ್ತಿಸುವ ಸೈಕೋ ಮಾದರಿಯ ಮನುಷ್ಯ. ಹರೆದ ಅಂಗಿ, ಹೊಲಸು ಕೋಟು, ಹತ್ತಾರು ತೂತಾದ ಮಾಸಿದ ಛತ್ರಿಗಳನ್ನು ಬಳಸುವ ಹೊಲಸು ಮನುಷ್ಯ. ಆತ ಬಳಸುವ ಭಾಷೆ ಹಾಗೂ ನಡತೆ ಅನಾಗರೀಕವೆನ್ನಿಸುವಂತಹುದು. ನಡುಮಧ್ಯವಯಸ್ಸು ಮೀರಿದ, ನೋಡಲೂ ಕೆಟ್ಟದಾಗಿರುವ, ಮಾನ ಮರ್ಯಾದೆಗಳ ಅರಿವಿಲ್ಲದ ವಿಕ್ಷಪ್ತ ಮನುಷ್ಯ. ಇವನ ವ್ಯಕ್ತಿತ್ವಕ್ಕೆ ಸಂಪೂರ್ಣ ವಿರುದ್ಧವಾಗಿದ್ದವಳು ಸೌಭಾಗ್ಯ. ಸಿರಿವಂತ ಮನೆತನದವಳು, ರೂಪವಂತೆ, ಯೌವನವಂತೆ, ನಾಗರೀಕ ನುಡಿ-ನಡೆಯುಳ್ಳ ಮರ್ಯಾದಸ್ತಳು. ಇಬ್ಬರಿಗೂ ಯಾವುದರಲ್ಲೂ ಸಾಮ್ಯತೆ ಎನ್ನುವುದೇ ಇಲ್ಲ. ಇಂತಹುದರಲ್ಲಿ ಪ್ರೀತಿ ಆಗಲು ಸಾಧ್ಯವೇ? ಎನ್ನುವುದು ನೋಡುಗರ ಅಭಿಪ್ರಾಯ. ಆದರೆ ಸಾಧ್ಯವಿದೆ ಎನ್ನುವುದನ್ನು ನಾಟಕ ತೋರಿಸಿಕೊಡುತ್ತದೆ. ಯಾಕೆಂದರೆ ಇವರಿಬ್ಬರಲ್ಲಿ ಇರುವುದು ಒಂದೇ ಸಾಮ್ಯತೆ, ಅವರಿಬ್ಬರೂ ಬಾಳ ಸಂಗಾತಿಗಳನ್ನು ಕಳೆದುಕೊಂಡಿದ್ದಾರೆ ಮತ್ತು ಸಂಗಾತಿ ಬೇಕಾಗಿದ್ದಾರೆ. ಇದೇ ನಾಟಕದ ವಿಶೇಷತೆ.

ಇಂತಹ ಪ್ರೇಮಪ್ರಕರಣಗಳು ಈಗಲೂ ಘಟಿಸುತ್ತವೆ. ಆದರೆ ಇಂತಹ ಸಂಬಂಧಗಳನ್ನು ಸಮಾಜ ಮುಕ್ತ ಮನಸ್ಸಿನಿಂದ ಒಪ್ಪುವುದಿಲ್ಲ. ಯುವಕ ಯುವತಿಯರ ಪ್ರೀತಿ ಪ್ರೇಮವನ್ನೇ ಒಪ್ಪಿಕೊಳ್ಳದ ಸಮಾಜ ಇನ್ನು ವಿಧುರ ವಿಧವೆಯರ ಸಂಬಂಧವನ್ನು ಆದರಿಸಿ ಒಪ್ಪಿಕೊಳ್ಳಲು ಸಾಧ್ಯವೆ?.  ಅನ್ನ ಹಳಸಿತ್ತು, ನಾಯಿ ಹಸಿದಿತ್ತು ಎಂದು ಕೊಂಕು ನುಡಿಯಲಾಗುತ್ತದೆ. ಆದರೆ ನಾಟಕದ ಕತೃಗಳ ಮಾನವೀಯ ಕಳಕಳಿ ಅನನ್ಯವಾದದ್ದು. ನಾಟಕದಲ್ಲಿ ಬರುವ ಮನೆಯ ಆಳುಮಗ ಹಿರಿಯನಾಗಿದ್ದು ವಿಧವೆಯ ಮರುಮದುವೆಗೆ ಒತ್ತಾಯಿಸುತ್ತಾನೆ. ಯೋಗ್ಯನೋ ಅಯೋಗ್ಯನೋ ಒಟ್ಟಾರೆಯಾಗಿ ಆಕೆ ಒಬ್ಬನನ್ನು ಇಷ್ಟಪಟ್ಟದ್ದನ್ನು ಗಮನಿಸಿ ಖುಷಿಪಡುತ್ತಾನೆ. ಜೊತೆಗೆ ಕಾಡಯ್ಯನನ್ನು ಮನೆಯಿಂದ ಓಡಿಸಲೆಂದು ಬಂದ ಜನ ಅಲ್ಲಿ ನಡೆಯುವ ಪ್ರೇಮಪ್ರಕರಣವನ್ನು ನೋಡಿ ಸಂತಸಪಟ್ಟು ಮರಳುತ್ತಾರೆ. ಒಲಿದ ಮನಸುಗಳು ಒಂದಾಗಲಿ, ಅವರ ಬಾಳು ಚೆಂದಾಗಲಿ ಎನ್ನುವ ಆದರ್ಶವನ್ನು ನಾಟಕ ಅನಾವರಣಗೊಳಿಸುತ್ತದೆ


ನಾಟಕದಲ್ಲಿ ಯಾರೂ ಖಳನಾಯಕರಿಲ್ಲ. ಕೊರತೆಯನ್ನು ಬೆಳಕಿನ ನಿರ್ವಹಣೆ ತುಂಬಿದೆ. ನೋಡುಗರಿಗೆ ಅಸಾಧ್ಯ ಕಿರಿಕಿರಿಯನ್ನುಂಟುಮಾಡಿದೆ. ಬೆಳಕಿಗಿಂತ ನೆರಳೇ ಜಾಸ್ತಿಯಾಗಿ, ಪಾತ್ರಗಳ ಮುಖದ ಭಾವನೆಗಳೇ ನೋಡುಗರಿಗೆ ಸಂಪೂರ್ಣವಾಗಿ ದಕ್ಕದ ಹಾಗೆ ಮಾಡಿದೆ. ಒಂದು ಹಂತದಲ್ಲಂತೂ ಲಕ್ಕಜ್ಜನ ಪಾತ್ರವನ್ನು ಪೂರ್ಣ ಕತ್ತಲಲ್ಲೇ ನಿಲ್ಲಿಸಿಬಿಟ್ಟಿದೆ. ನಾಟಕದಲ್ಲಿ ಸೊಗಸಾದ ಕನಸಿನ ದೃಶ್ಯಗಳನ್ನು ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ, ಕೊನೆಗೆ ಪ್ರೇಮಿಗಳು ಒಂದಾಗುವ ದೃಶ್ಯ ಸುಂದರವಾಗಿ ಮೂಡಿಬಂದಿದೆ. ಆದರೆ ಸೊಗಸನ್ನು ಸವಿಯುವ ಭಾಗ್ಯವನ್ನು ಬೆಳಕು ಕಿತ್ತುಕೊಂಡಿದೆ. ಬೆಳಕಿನ ವಿನ್ಯಾಸದ ಮೇಲೆ ಇನ್ನೂ ಕೆಲಸಮಾಡಬೇಕಿದೆ.

ಸೌಭಾಗ್ಯ ಪಾತ್ರದಲ್ಲಿ ಕಲಾವತಿ ಅಭಿನಯ ತುಂಬಾ ಸೊಗಸಾಗಿ ಮೂಡಿಬಂದಿದ್ದು, ಪಾತ್ರೋಚಿತವಾಗಿ ಪ್ರಭುದ್ಧ ಅಭಿನಯವನ್ನು ನೀಡಿದ್ದಾರೆ. ಕಾಡಯ್ಯನಾಗಿ ಮುರುಡಯ್ಯ ತಮ್ಮ ಪ್ರತಿಭೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ, ಆದರೆ ನಾಟಕದಾದ್ಯಂತ ಅವರ ಮಾತಿನ ದಾಟಿ ಏಕತಾನತೆಯನ್ನುಂಟುಮಾಡುವಂತಿದೆ.  ಅವರ ಹಿಂದಿನ ನಾಟಕಗಳನ್ನು ನೋಡಿದರೆ ಮುರುಡಯ್ಯನವರ ಅಭಿನಯ ಮತ್ತು ಮಾತಿನ ಶೈಲಿಯಲ್ಲಿ ಯಾವುದೇ ಬದಲಾವಣೆ ಇದೆ ಎಂದು ಎನ್ನಿಸುವುದಿಲ್ಲ. ಕಳೆದ ತಿಂಗಳು ಪ್ರದರ್ಶನಗೊಂಡ ಮಿತ್ತಬೈಲು ಯಮನಕ್ಕ ನಾಟಕದ ತೆಂಪಯ್ಯನ ಪಾತ್ರದ ಮುಂದುವರಿಕೆ ಎಂಬಂತೆ ನಾಟಕದ ಕಾಡಯ್ಯನ ಪಾತ್ರ ಮೂಡಿಬಂದಿದೆ. ಮುರಡಯ್ಯ ಉತ್ತಮ ನಟ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಎಲ್ಲಾ ನಾಟಕಗಳಲ್ಲೂ ಒಂದೇ ರೀತಿಯ ಮಾತಿನ ಶೈಲಿಯನ್ನು ರೂಢಿಸಿಕೊಂಡರೆ ಅದು ಏಕತಾನತೆಯಾಗುತ್ತದೆ. ಪಾತ್ರಕ್ಕೆ ತಕ್ಕ ಹಾಗೆ ಅಭಿನಯದಲ್ಲಿ ಭಿನ್ನತೆಯನ್ನು ರೂಢಿಸಿಕೊಂಡರೆ ಮುರುಡಯ್ಯ ನಿಜಕ್ಕೂ ಅಸಾಧ್ಯ ತಾಕತ್ತಿರುವ ರಂಗನಟ. ಮೈಕೋ ಶಿವಣ್ಣನವರು ವಯೋವೃದ್ದ ಅಜ್ಜನ ಪ್ರತಿರೂಪದಂತೆ ನಟಿಸಿದ್ದು ಇರುವ ಮಿತವಾದ ಅವಕಾಶದಲ್ಲೇ ತಮ್ಮ ಅಭಿನಯ ಪ್ರತಿಭೆ ಸಾಬೀತುಪಡಿಸುವಂತೆ ನಟಿಸಿದ್ದಾರೆ. ಮೂವರು ಅನುಭವಸ್ತ ನಟರ ಸಾಮರ್ಥ್ಯವನ್ನು ನಿರ್ದೇಶಕರು ಸಮರ್ಥವಾಗಿ ಬಳಸಿಕೊಂಡು ನಟನಾಪ್ರಧಾನ ನಾಟಕವನ್ನು ಕಟ್ಟಿಕೊಟ್ಟಿದ್ದಾರೆ.

ನಾಟಕದಲ್ಲಿ ಕೆಲವು ತಾರ್ಕಿಕ ಸಮಸ್ಯೆಗಳಿವೆ. ರಾಜರ ಕಾಲಘಟ್ಟದ ನಾಟಕದಲ್ಲಿ ರೂಪಾಯಿಗಳು ಇದ್ದವಾ? ಇದ್ದವೆಂದುಕೊಂಡರೂ ಇಪ್ಪತೈದು ಸಾವಿರ ಆಗಿನ ಕಾಲದ ಹಣದ ಬೆಲೆಗೆ ಈಗಿನ ಕಾಲಕ್ಕೆ ಇಪ್ಪತೈದು ಲಕ್ಷ ದಾಟಬಹುದೇನೋ. ಅಷ್ಟೊಂದು ಮೊತ್ತದ ಹಣಕ್ಕೆ ಹತ್ತಿ ಬೀಜಗಳನ್ನು ಸಾಲವಾಗಿ ಸೈನಿಕನೊಬ್ಬ ತೆಗೆದುಕೊಂಡ ಎಂದರೆ ನಂಬಲು ಸಾಧ್ಯವಾ? ಹೋಗಲಿ ಕೊಟ್ಟಿರಬಹುದು ಎಂದುಕೊಳ್ಳೋಣ.  ಗಂಡ ಮಾಡಿದ ಸಾಲವನ್ನು ಕೇಳಿಕೊಂಡು ಯಾರೋ ಆಪರಿಚಿತರು ಮನೆಗೆ ಬಂದು ಹಣ ಕೊಡಿ ಎಂದು ಕೇಳಿದರೆ ತಕ್ಷಣ ಹಿಂದಿ ಮುಂದೆ ವಿಚಾರಿಸದೆ, ದಾಖಲೆಗಳನ್ನೂ ಪರಿಶೀಲಿಸದೆ ಯಾವುದಾದರೂ ಹೆಣ್ಣುಮಗಳು ಆಯ್ತು ಕೊಡ್ತೇನೆ ಎರಡು ದಿನ ಸಮಯಕೊಡಿ ಎಂದು ಒಪ್ಪಿಕೊಳ್ಳಲು ಸಾಧ್ಯವೇ? ಹರುಕು ಅಂಗಿಯ, ಮಾಸಿದ ಕೋಟಿನ ಕಂಗಾಲು ವ್ಯಕ್ತಿಯಂತಿರುವ ಕಾಡಯ್ಯ ತನಗೆ ನೂರು ಎಕರೆ ಜಮೀನಿದೆ, ಹದಿನೈದು ಎಕರೆ ನೀರಾವರಿ ಇದೆ ಎಂದೆಲ್ಲಾ ಹೇಳುತ್ತಾನೆ. ಅಷ್ಟೊಂದು ಸಿರಿವಂತ ವ್ಯಕ್ತಿ ಅದೆಷ್ಟೇ ಜಿಪುಣನಾದರೂ ರೀತಿ ದರಿದ್ರರಂತೆ ವೇಷ ತೊಟ್ಟಿರುವುದನ್ನು ಹೇಗೆ ನೋಡುಗರು ಒಪ್ಪಿಕೊಳ್ಳುವುದು? ಮುಂದಿನ ಪ್ರದರ್ಶನದಲ್ಲಿ ಬದಲಾಯಿಸಬಹುದಾದ ಸಣ್ಣ ಸಮಸ್ಯೆಗಳಿವು. ಬದಲಾಯಿಸಿಕೊಂಡರೆ ನೋಡುಗರ ಮನಸ್ಸಿನಲ್ಲಿ ಸಂದೇಹಗಳು ಬಾರದಂತೆ ನೋಡಿಕೊಳ್ಳಬಹುದಾಗಿದೆ.

ಬಿ.ಜಿ.ರಾಮಕೃಷ್ಣರವರು
ಕಾಂತನಿಲ್ಲದ ಮೇಲೆ ಏಕಾಂತ ಯಾತಕೋ..., ಬಾ ಚಕೋರಿ ಚಂದ್ರಮಂಚಕೆ..., ಯಾವುದೀ ಪ್ರವಾಹವು..., ಮೌನ ತಬ್ಬಿತು ನೆಲವ.. ಇಂತಹ ಜನಪ್ರೀಯ ಭಾವಗೀತೆಗಳನ್ನು ಸಾಂದರ್ಭಿಕವಾಗಿ ಬಳಸಲಾಗಿದ್ದು ಅವು ನಾಟಕಕ್ಕೆ ಮೋಹಕತೆಯನ್ನು ತಂದುಕೊಟ್ಟು ಭಾವತೀವ್ರತೆಯನ್ನು ಹೆಚ್ಚಿಸಲು ಸಹಕಾರಿಯಾಗಿವೆ. ಕನಸಿನ ದೃಶ್ಯಗಳನ್ನು ಸೃಷ್ಟಿಸಿದ ನಿರ್ದೇಶಕರು ನಾಟಕದ ಮಾತಿನ ಏಕತಾನತೆಯನ್ನು ಮುರಿದು ನೋಡುಗರಲ್ಲಿ ಅನುಭೂತಿಯ ಹರಿವನ್ನು ಹೆಚ್ಚಿಸಿದ್ದಾರೆ. ಕಡ್ಡಿಪಟ್ಟಣವನ್ನು ಎಸೆದಾಡುತ್ತಾ ಎರಡು ಜೀವಗಳು ಮಾನಸಿಕವಾಗಿ ಹತ್ತಿರವಾಗುವ ದೃಶ್ಯ ನಿಜಕ್ಕೂ ಸೊಗಸಾಗಿತ್ತು. ನಾಟಕದ ಇತಿಮಿತಿಯಲ್ಲೇ ತಮ್ಮ ಕ್ರಿಯಾಶೀಲತೆಯನ್ನು ತೋರಿದ ಬಿ.ಜಿ.ರಾಮಕೃಷ್ಣರವರು ಹಳೆಯ ನಾಟಕವನ್ನು ಹೊಸದಾಗಿ ಕಟ್ಟಿಕೊಟ್ಟಿದ್ದು ಅಭಿನಂದನೀಯ.

ಕಳೆದ ಒಂದೆರಡು ವರ್ಷಗಳಿಂದ ರಂಗಭೂಮಿಯ ಚಟುವಟಿಕೆಗಳಿಂದ ತಾತ್ಕಾಲಿಕ ವಿಶ್ರಾಂತಿಯನ್ನು ಪಡೆದ ಮೈಕೋ ಶಿವಣ್ಣನವರು ಮತ್ತೆ ನಾಟಕದ ಮೂಲಕ ಕ್ರಿಯಾಶೀಲರಾಗಿದ್ದು, ತಮ್ಮ ಶಿವರಂಗ ರಂಗತಂಡದ ಮೂಲಕ ಕಾಡ್ಮನ್ಸ ನಾಟಕವನ್ನು ನಿರ್ಮಿಸಿದ್ದು ಸಂತಸಕರ ಸಂಗತಿ. ನಿಷ್ಟೆಯಿಂದ ನಾಟಕ ಮಾಡುವ ರಂಗತಂಡವೊಂದು ನಿಷ್ಕ್ರೀಯವಾದರೆ ರಂಗಭೂಮಿಗೆ ನಷ್ಟವೆನಿಸುತ್ತದೆ. ಅದೇ ರಂಗತಂಡವೊಂದು ಮತ್ತೆ ಹೊಸಹುರುಪಿನಿಂದ ನಾಟಕಗಳನ್ನು ನಿರ್ಮಿಸಿ ಪ್ರದರ್ಶಿಸತೊಡಗಿದರೆ ರಂಗಭೂಮಿಗೆ ಹೊಸ ಚೈತನ್ಯ ಮೂಡುತ್ತದೆ. ನಿಟ್ಟಿನಲ್ಲಿ ಶಿವಣ್ಣನವರ ಪುನರಾಗಮನ ಬೆಂಗಳೂರಿನ ರಂಗವಲಯದಲಿ ಸಂತಸ ತಂದಿದೆ.

ನಾಟಕದ ಪ್ರದರ್ಶನಕ್ಕೆ ಎರಡು ಪ್ರಮುಖ ವಿಘ್ನಗಳು ಎದುರಾದವು. ಮೊದಲನೆಯದು,  ರವೀಂದ್ರ ಕಲಾಕ್ಷೇತ್ರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಧ್ಯಾಹ್ನ ಮೂರರಿಂದ ಆರುಗಂಟೆಯವರೆಗಿನ ಅವಧಿಯಲ್ಲಿ ಬೇರೆ ಎರಡು ಕಾರ್ಯಕ್ರಮಗಳಿಗೆ ಬಾಡಿಗೆ ಕೊಟ್ಟಿದ್ದು. ಸಂಜೆ ಆರುಗಂಟೆಗೆ ಕಲಾಕ್ಷೇತ್ರವನ್ನು ಖಾಲಿ ಮಾಡಬೇಕಿದ್ದ ಕನ್ನಡಪರ ಸಂಘಟನೆಗಳು ಏಳಾದರೂ ಕಾರ್ಯಕ್ರಮ ನಿಲ್ಲಿಸಲಿಲ್ಲ. ಸಂಜೆ ಏಳಕ್ಕೆ ನಾಟಕ ನೋಡಲು ಬಂದ ಪ್ರೇಕ್ಷಕರು ಹೊರಗಡೆಗೆ ಮುಕ್ಕಾಲು ಗಂಟೆ ಕಾಯಬೇಕಾಯಿತು. ಒಳಗಡೆ ಸೆಟ್, ಲೈಟಿಂಗ್ ಹೊಂದಾಣಿಕೆ ಮಾಡಿಕೊಳ್ಳಲು ನಾಟಕ ತಂಡ ಪರದಾಡಬೇಕಾಯಿತು. ಕೆಲವು ಪ್ರೇಕ್ಷಕರು ಗೊಣಗುತ್ತಾ ವಾಪಸ್ ಹೊರಟುಹೋದರು. ನಾಟಕ ಏಳು ಮುಕ್ಕಾಲಿಗೆ ಆರಂಭವಾಯಿತು. ಕಲಾಕ್ಷೇತ್ರವನ್ನು ಬೆಳಿಗ್ಗೆ ಇಂದ ಮಧ್ಯಾಹ್ನ ಹಾಗೂ ಮಧ್ಯಾಹ್ನದಿಂದ ರಾತ್ರಿ ಮತ್ತು ರಾತ್ರಿಯಿಂದ ಬೆಳಿಗ್ಗೆ ವರೆಗೂ ಎಂದು ಮೂರು ಶೆಡ್ಯೂಲ್ನಲ್ಲಿ ಮಾತ್ರ ಕೊಡಲು ಅವಕಾಶವಿದೆ. ನಾಟಕ ಬೆಂಗಳೂರಿನವರು ಫೆಬ್ರವರಿ 9ರಂದು ಪೂರ್ತಿ ದಿನ ಕಲಾಕ್ಷೇತ್ರವನ್ನು ಅಧಿಕೃತವಾಗಿ ಬುಕ್ ಮಾಡಿದ್ದಾರೆ. ಬೆಳಿಗ್ಗೆ ನಾಟಕವನ್ನೂ ಪ್ರದರ್ಶಿಸಲಾಗಿದೆ. ಮಧ್ಯಾಹ್ನದ ನಂತರ ನಾಟಕ ತಂಡದವರು ಸ್ಟೇಜ್ ರಿಹರ್ಸಲ್ಗೆ ವೇದಿಕೆಗೆ ಹೋದರೆ ಆಘಾತ ಕಾದಿದೆ. ಅಲ್ಲಿ ಬೇರೆ ಕಾರ್ಯಕ್ರಮ ನಡೆಯುತ್ತಿದೆ. ಯಾಕೆ ಎಂದು ಕೇಳಿದರೆ ಒಂದೇ ಒಂದು ಗಂಟೆಯಲ್ಲಿ ಕಾರ್ಯಕ್ರಮ ಮುಗಿಸುತ್ತಾರೆ ಎಂದು ಕಲಾಕ್ಷೇತ್ರದ ಸಿಬ್ಬಂದಿಯ ಉತ್ತರ. ಆದರೆ ಅಸಲಿ ವಿಷಯವೇನೆಂದರೆ ಎರಡು ಕಾರ್ಯಕ್ರಮಗಳಿಗೆ ಅಕ್ರಮವಾಗಿ ಅನುಮತಿಯನ್ನು ಕೊಡಲಾಗಿದೆ. ಇದರಿಂದಾಗಿ ಒಂದು ನಾಟಕದ ಪ್ರದರ್ಶನಕ್ಕೆ ಸಮಸ್ಯೆಯಾಯಿತು. ಸ್ಟೇಜ್ ರಿಹರ್ಸಲ್ ಮಾಡಲಾಗಿಲಿಲ್ಲ, ಅವಸರದಲ್ಲಿ ಮಾಡಲಾದ ಲೈಟಿಂಗ್ ನಾಟಕದಾದ್ಯಂತ ಕಿರಿಕಿರಿಯನ್ನು ಕೊಟ್ಟಿತು. ಒಂದು ನಾಟಕ ಪ್ರದರ್ಶನಕ್ಕೆ ಭಂಗ ತಂದ ಕೀರ್ತಿ ರಂಗಭೂಮಿಯ ಅಗತ್ಯಗಳ ಅರಿವಿಲ್ಲದ ಸಂಸ್ಕೃತಿ ಇಲಾಖೆಯವರಿಗೆ ಸಲ್ಲಬೇಕು.


ಎರಡನೆಯದಾಗಿ, ಇದೇ ಇಲಾಖೆ ಇನ್ನೂ ಒಂದು ಯಡವಟ್ಟನ್ನು ಸೃಷ್ಟಿಸಿ ಕಳೆದ ನಾಲ್ಕು ದಿನದಿಂದ ಕಲಾಕ್ಷೇತ್ರದ ಒಳಗೆ ಪ್ರೇಕ್ಷಕರು ನೆಮ್ಮದಿಯಿಂದ ನಾಟಕ ನೋಡಲಾಗದಂತೆ ಮಾಡಿದ್ದಾರೆ. ಕಲಾಕ್ಷೇತ್ರದ ಹಿಂದೆ ಸಂಸ ರಂಗಮಂದಿರವಿದೆ. ಅಲ್ಲಿ ಆರ್ಕೆಸ್ಟಾಗಳಿಗೆ, ಹಾಡಿನ ಕಾರ್ಯಕ್ರಮಗಳಿಗೆ ಅನುಮತಿಯನ್ನು  ಕೊಡಲಾಗಿದೆ. ಜೋರಾಗಿ ಪವರ್ಪುಲ್ ಸ್ಪೀಕರಗಳನ್ನಿಟ್ಟುಕೊಂಡು ಹಾಡಿನ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಹಾಡು ಸಂಗೀತಗಳ ಅಬ್ಬರ ಕಲಾಕ್ಷೇತ್ರದಲ್ಲಿ ನಾಟಕ ಆಡುವವರಿಗೆ ಹಾಗೂ ನೋಡುವವರಿಗೆ ಏಕಾಗ್ರತೆ ಭಂಗಕ್ಕೆ  ಕಾರಣವಾಗಿದೆ. ಇದರಿಂದಾಗಿ ಟಿಕೆಟ್ ಪಡೆದು ನಾಟಕ ನೋಡಲು ಬರುವ ಪ್ರೇಕ್ಷಕರಿಗೆ ತುಂಬಾ ಕಿರಿಕಿರಿಯಾಗುತ್ತಿದೆ. ಆದರೆ ಕೇಳುವವರಾರು? ಸರಕಾರಿ ಇಲಾಖೆಯ ಬೆಕ್ಕಿಗೆ ಗಂಟೆ ಕಟ್ಟುವವರಾರು? ನಾಟಕ ಪ್ರದರ್ಶನಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ದ ಪ್ರತಿಭಟಿಸಬೇಕಾದದ್ದು ನಾಟಕ ಬೆಂಗಳೂರಿನ ಆಯೋಜಕರ ಕರ್ತವ್ಯ. ಸಂಸ್ಕೃತಿ ಇಲಾಖೆ ಪ್ರಾಯೋಜನೆ ಕೊಡುತ್ತದೆ ಎನ್ನುವ ಕಾರಣಕ್ಕೆ ಅದು ತಂದಿಡುವ ಸಂಕಷ್ಟಗಳನ್ನು ಸಹಿಸಿಕೊಂಡಿರುವುದು ಅಚ್ಚರಿಯ ವಿಷಯ. 

                                   -ಶಶಿಕಾಂತ ಯಡಹಳ್ಳಿ                   



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ