ಬುಧವಾರ, ಫೆಬ್ರವರಿ 12, 2014

“ ಸದಾರಮಾ ನಾಟಕಂ” ದಲ್ಲಿ ಕಂಪನಿ ನಾಟಕ ವೈಭವ ಸೃಷ್ಟಿಸಿದ ರಂಗಾಯಣ


                               


ಮಾಸ್ಟರ್ ಹಿರಣ್ಣಯ್ಯನವರಿಗೆ 80 ವರ್ಷ ತುಂಬಿದ್ದರ ಆಚರಣೆಗಾಗಿ ಹಾಗೂ ಲಂಚಾವತಾರ ನಾಟಕದ ಮೊದಲ ಪ್ರದರ್ಶನವಾಗಿ 50 ವರ್ಷ ಆಗಿದ್ದರ ಸವಿನೆನಪಿಗಾಗಿ ಮಾಸ್ಟರಗೆ 80, ಲಂಚಕ್ಕೆ 50 ಸಂಭ್ರಮ ಎನ್ನುವ ನಾಟಕೋತ್ಸವ ಕಾರ್ಯಕ್ರಮವನ್ನು ಜಯನಗರದ ಹೆಚ್.ಎನ್.ಕಲಾಕ್ಷೇತ್ರದಲ್ಲಿ ಫೆಬ್ರವರಿ 10 ರಿಂದ 16 ವರೆಗೆ ಆಯೋಜಿಸಲಾಗಿದೆ.

ಗುಬ್ಬಿ ವೀರಣ್ಣ ನಾಟಕ ಕಂಪನಿಯ ಪ್ರಸಿದ್ಧ ನಾಟಕ ಸದಾರಮಾ ನಾಟಕಂ. ಬೆಳ್ಳಾವೆ ನರಹರಿಶಾಸ್ತ್ರಿಯವರು ರಚಿಸಿದ ನಾಟಕವನ್ನು ಮೈಸೂರಿನ ರಂಗಾಯಣವು  ಗುಬ್ಬಿ ಕಂಪನಿಯ ಹಾರ್ಮೊನಿಯಂ ಮೇಷ್ಟ್ರು ವೈ.ಎಂ.ಪುಟ್ಟಣ್ಣಯ್ಯನವರ ನಿರ್ದೇಶನದಲ್ಲಿ ಮರುನಿರ್ಮಿಸಿದೆ. ಈಗಾಗಲೇ ಮೂವತೈದು ಯಶಸ್ವಿ ಪ್ರದರ್ಶನಗಳಾಗಿದ್ದು ಮೂವತ್ತಾರನೆಯ ಪ್ರಯೋಗವನ್ನು 2014, ಫೆಬ್ರವರಿ 11 ರಂದು ಕೆ.ಹಿರಣ್ಣಯ್ಯಾಸ್ ಆರ್ಟ್ ಫೌಂಡೇಶನ್ ಆಯೋಜಿಸಿತ್ತು.

ಶೃಂಗಾರ, ಹಾಸ್ಯ, ಕರುಣ ರಸಗಳನ್ನು ಹದವಾಗಿ ರಸಪಾಕಮಾಡಿ ರಂಗರಸಿಕರಿಗೆ ಉಣಬಡಿಸಿದ್ದರಿಂದ ಸದಾರಮಾ.... ನಾಟಕ ಅತ್ಯಂತ ಜನಪ್ರೀಯವಾಗಿತ್ತು. ಗುಬ್ಬಿ ಕಂಪನಿ ಅಹೋರಾತ್ರಿ ಸರಿಸುಮಾರು ಏಳುಗಂಟೆಗಳ ಕಾಲ ನಾಟಕವನ್ನು ಪ್ರದರ್ಶಿಸುತ್ತಿತ್ತು. ಜನ ಅಷ್ಟೇ ಆಸಕ್ತಿಯಿಂದ ನಾಟಕವನ್ನು ನೋಡಿ ಖುಷಿಪಡುತ್ತಿದ್ದರು. ಆಗ ಬೇರೆ ಮನರಂಜನೆ ಮಾಧ್ಯಮಗಳಿರಲಿಲ್ಲ ಹಾಗೂ ಜಾಗತೀಕರಣದ ಒತ್ತಡಗಳೂ ಇರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಹೀಗಾಗಿ ನಾಲ್ಕು ಗಂಟೆ ಅವಧಿಗೆ ಸದಾರಮೆ ಕಡಿತ ಗೊಳಿಸಲಾಗಿದೆ. ಬೆಂಗಳೂರಿನ ಜನಕ್ಕೆ ಅದೂ ಕೂಡಾ ಸುದೀರ್ಘ ಅವಧಿಯೇ ಆಗಿದೆ. ಆದರೂ ನಾಟಕಕ್ಕೆ ಬಂದ ಬಹುತೇಕ ಪ್ರೇಕ್ಷಕರು ಕೊನೆವರೆಗೂ ನಾಟಕವನ್ನು ನೋಡಿದ್ದು ನಾಟಕ ಇನ್ನೂ ಉಳಿಸಿಕೊಂಡ ಜನಪ್ರೀಯತೆಗೆ ಸಾಕ್ಷಿಯಾಗಿದೆ.

ಆಧುನಿಕ ರಂಗಭೂಮಿಯ ಹಲವು ರಂಗತಂಡಗಳು ಸದಾರಮಾ... ನಾಟಕವನ್ನು ಆಧುನಿಕ ರಂಗತಂತ್ರಗಳ ಮೂಲಕ ಪ್ರಯೋಗಿಸಿವೆ. ಕೆ.ವಿ.ಸುಬ್ಬಣ್ಣನವರು ಮಿಸ್ ಸದಾರಮೆ ಹೆಸರಲ್ಲಿ ಇದೇ ನಾಟಕವನ್ನು ರೂಪಾಂತರಿಸಿದ್ದಾರೆ. ನೀನಾಸಂ ಸಹಿತ ಹಲವಾರು ರಂಗತಂಡಗಳು ನಾಟಕವನ್ನು ನಿರ್ಮಿಸಿವೆ. ಬಿ.ವಿ.ಕಾರಂತರೇ ರಂಗಾಯಣಕ್ಕೆ ಇಪ್ಪತ್ತೈದು ವರ್ಷಗಳ ಹಿಂದೆ ಮಿಸ್ ಸದಾರಮೆಯನ್ನು ನಿರ್ದೇಶಿಸಿದ್ದರು. ಏನೇ ಆದರೆ.... ಸದಾರಮೆಯನ್ನು ವೃತ್ತಿರಂಗಭೂಮಿ ಶೈಲಿಯಲ್ಲಿ ನೋಡುವುದೇ ಒಂದು ಸೊಗಸು. ಅಂತಹ ಸೊಗಸನ್ನು ಮತ್ತೆ ರಂಗಾಯಣ ವೃತ್ತಿನಿರತ ರೆಪರ್ಟರಿ ಮರುನಿರ್ಮಿಸಿದ್ದು ನೋಡುಗರಿಗೆ ಅದ್ಬುತ ಅನುಭವವನ್ನು ಕೊಡುವಂತಹುದು.

  ವೃತ್ತಿಕಂಪನಿ ಶೈಲಿಯ ರಂಗಪ್ರಯೋಗದ ಸೊಗಡೇ ಅಂತಹುದು. ರಂಗು ರಂಗಿನ ಥ್ರೀ ಡೈಮೆನ್ಶನ್ ಸೀನರಿಗಳು, ವಿಂಗ್ಸಗಳು, ಫ್ರಿಲ್ಗಳು....  ಕ್ಷಣಾರ್ಧದಲ್ಲಿ ಬದಲಾಗುವ ದೃಶ್ಯಗಳು.... ಪಾತ್ರದ ಪ್ರತಿಯೊಂದೂ ಚಲನವಲನಗಳಿಗೂ ಸ್ಪಂದಿಸುವ ಹಿನ್ನೆಲೆ ಸಂಗೀತ, ದೃಶ್ಯ ದೃಶ್ಯಕ್ಕೂ ನಟರು ನೇರವಾಗಿ ಮನಮುಟ್ಟುವಂತೆ ಹಾಡುವ ಹಾಡುಗಳು, ಹಾಡು ಸಂಗೀತಗಳಲ್ಲಿರುವ ಶೃತಿ, ಲಯ, ತಾಳ ಮೇಳಗಳ ಮೋಹಕತೆ.... ಬಣ್ಣಬಣ್ಣದ ಬೆಳಕಿನ ತಳಕು ಬಳಕು... ನಟರ ಓವರ್ ಆಕ್ಟಿಂಗ್ ಶೈಲಿಯ ನಟನೆ... ಎಲ್ಲಾ ಪ್ರಮುಖ ಪಾತ್ರಗಳೂ ರಂಗವೇದಿಕೆಯ ಮೇಲೆ ಸ್ವತಃ ಹಾಡುತ್ತಾ, ಕುಣಿಯುತ್ತಾ, ಸುದೀರ್ಘವಾದ ಸಂಭಾಷಣೆಗಳನ್ನು ಸಶಕ್ತವಾಗಿ ಹೇಳುತ್ತಾ, ಭಾವಪೂರ್ಣವಾಗಿ ಅಭಿನಯಿಸುವ ತಲ್ಲೀನತೆ..... ಹೀಗೆ ಎಲ್ಲವೂ  ಪ್ರೇಕ್ಷಕರ ಭಾವನೆಗಳ ತೀವ್ರತೆಯನ್ನು ಹೆಚ್ಚಿಸುವ ಪ್ರಯತ್ನಗಳು. ನೋಡುಗರಲ್ಲಿ ರಸಾನುಭವವನ್ನು ಕೊಡುವ ವರಸೆಗಳು. ಮರೆತು ಹೋದ ಕಂಪನಿ ನಾಟಕದ ಅನುಭವವನ್ನು ಮತ್ತೆ ದಕ್ಕಿಸಿಕೊಟ್ಟ ರಂಗಾಯಣಕ್ಕೆ ಅಭಿನಂದನೆಗಳು. ಕಂಪನಿ ನಾಟಕಗಳೆಂದರೆ ಹಳೆಯ ಪಳವಳಿಕೆ ಎಂದು ನಿರ್ಲಕ್ಷಿಸುವವರು ರಂಗಾಯಣದ ಸದಾರಮಾ.. ವನ್ನು ಒಮ್ಮೆ ನೋಡಲೇಬೇಕು.

ವೃತ್ತಿ ಕಂಪನಿಯ ಸದಾರಮಾ... ನಾಟಕದ ಮರುನಿರ್ಮಾಣದ ಬಗ್ಗೆ ರಂಗಾಯಣದ ನಿರ್ದೇಶಕರಾಗಿದ್ದ ಚಿದಂಬರರಾವ್ ಜಂಬೆರವರು ಮೊದಲು ಆಸಕ್ತಿ ತೋರಿಸಿದರು. ನಂತರ ರಂಗಾಯಣಕ್ಕೆ ಬಂದ ಬಿ.ಜಯಶ್ರೀರವರು ನಾಟಕದ ಬಗ್ಗೆ ಉತ್ಸಾಹ ತೋರಿದರಾದರೂ ಅವರು ಬಹಳ ದಿನ ರಂಗಾಯಣದಲ್ಲಿರಲಿಲ್ಲ. ನಂತರ ನಿರ್ದೇಶಕರಾಗಿ ಬಂದ ಲಿಂಗದೇವರು ಹಳಮನೆಯವರು ಸದಾರಮಾ ನಾಟಕವನ್ನು ನಿರ್ಮಿಸಲು ಬೇಕಾದ ಅನುಕೂಲತೆಗಳನ್ನು ಮಾಡಿಕೊಟ್ಟು ನಾಟಕ ನಿರ್ಮಿಸಿ ಪ್ರದರ್ಶನಗಳನ್ನೂ ಆರಂಭಿಸಿದರು. ಈಗ ರಂಗಾಯಣದ ನಿರ್ದೇಶಕರಾಗಿರುವ ಜನಾರ್ಧನ್ (ಜೆನ್ನಿ) ರವರು ನಾಟಕವನ್ನು ಕೈಬಿಡದೆ ಅವಕಾಶವಿದ್ದಲ್ಲೆಲ್ಲಾ ಪ್ರದರ್ಶನ ಕೊಡುತ್ತಿದ್ದು ನಾಡಿನ ಜನತೆಗೆ ಸದಾರಮಾ.. ದರ್ಶನ ಭಾಗ್ಯ ದೊರೆಯುತ್ತಿದೆ. ನಾಟಕಕ್ಕೆ ಸುಂದರವಾದ ಪರದೆಗಳ ಚಿತ್ರಗಳನ್ನು ರಚಿಸಿದ್ದು ಇಳಕಲ್ ಕೆ.ಅಮೀನ್ರವರು. ನಾಟಕದಲ್ಲಿ ಬಳಸಲಾದ ಒಟ್ಟು 17 ಹಾಡುಗಳಿಗೆ ಸಂಗೀತ ಸಂಗೀತ ಸಂಯೋಜನೆ ಮಾಡಿ ಹಾರ್ಮೋನಿಯಂ ನುಡಿಸಿದವರು ವೈ.ಎಂ.ಪುಟ್ಟಣ್ಣಯ್ಯನವರು.


ಸದಾರಮಾ... ನಾಟಕ ಇಷ್ಟೊಂದು ಜನಪ್ರೀಯವಾಗಲು ಕಾರಣವಾದರೂ ಏನು?. ಪೌರಾಣಿಕ, ಐತಿಹಾಸಿಕ, ಜನಪದೀಯ ಅಂಶಗಳನ್ನು ಹೊಂದಿರುವ ನಾಟಕ ಸಮಕಾಲೀನತೆಗೂ ಸ್ಪಂದಿಸುತ್ತದೆ. ಪೌರಾಣಿಕ ಕಾಲದ ರಾಜ ಮಂತ್ರಿಗಳೂ ಇದ್ದಾರೆ ಜೊತೆಗೆ ಧನಲೋಭಿಯಾದ ಶೆಟ್ಟಿ, ಲೂಟಿಕೋರ ಕಳ್ಳನಂತಹ ಪಾತ್ರಗಳೂ ಇವೆ. ಹಾಗೆಯೇ ಎಂತಹ ಪ್ರಕ್ಷುಬ್ಧ ಸನ್ನಿವೇಶವನ್ನು ಎದುರಿಸಿ ಪಾರಾಗುವ ದೈರ್ಯವಂತೆ ಸದಾರಮೆ ಪಾತ್ರವೂ ಇದೆ. ಇದೆಲ್ಲವನ್ನೂ ಮೀರಿ ಶುದ್ದ ಹಾಸ್ಯ ಸನ್ನಿವೇಶಗಳು ನೋಡುಗರನ್ನು ಹೊಟ್ಟೆ ಹುಣ್ಣಾಗುವಂತೆ ನಕ್ಕು ನಗಿಸಿ ರಂಜಿಸುತ್ತವೆ. ಮುಂದೇನಾಗುತ್ತದೆ ಎನ್ನುವ ಕುತೂಹಲ ನಾಟಕದಾದ್ಯಂತ ತನ್ನ ನಿರಂತರತೆಯನ್ನು ಕಾಪಾಡಿಕೊಂಡಿದೆ. ಹೆಣ್ಣಿನ ಹಿಂದೆ ಬಿದ್ದು ಮಣ್ಣುಮುಕ್ಕುವ ಕಾಮುಕ ಗಂಡು ಪಾತ್ರಗಳ ಪರದಾಟ ನೋಡುಗರಿಗೆ ಖುಷಿಕೊಡುತ್ತದೆ. ವಾಸ್ತವಕ್ಕಿಂತ ಪ್ಯಾಂಟಸಿಗಳೇ ಪ್ರತಿ ದೃಶ್ಯಗಳನ್ನು ಕಟ್ಟುತ್ತಾ ಸಾಗುತ್ತವೆ. ಹಾಗೆಯೇ ವೈಶ್ಯರ ಹಣದಾಸೆಯನ್ನು, ಬ್ರಾಹ್ಮಣರ ಭೋಜನಪ್ರೀಯತೆಯನ್ನು, ಕೆಲವು ಗಂಡಸರ ಸ್ತ್ರೀಲೋಲತನವನ್ನು ನಾಟಕ ಇನ್ನಿಲ್ಲದಂತೆ ಲೇವಡಿ ಮಾಡುತ್ತದೆ. ನೂರಿಪ್ಪತ್ತು ಕಂದಪದ್ಯಗಳಿರುವ ಸಂಗೀತ ಪ್ರಧಾನ ನಾಟಕವೂ ಇದಾಗಿದೆ..... ಹೀಗಾಗಿ ಸದಾರಮಾ.. ನಾಟಕ ಒಂದು ಕಾಲಘಟ್ಟಕ್ಕೆ ಸಲ್ಲದೆ, ಒಂದು ಕಾಲಕ್ಕೆ ನಿಲ್ಲದೇ ಎಲ್ಲಾ ಕಾಲಕ್ಕೂ ಸಲ್ಲುವಂತಾಗಿದೆ. ನಾಟಕದ ಆದಿಮೂರ್ತಿ ಹಾಗೂ ಕಳ್ಳನ ಪಾತ್ರಗಳಿಂದ ಗುಬ್ಬಿ ವೀರಣ್ಣನವರು ಹೆಸರುವಾಸಿಯಾದರು. ಹಾಗೂ ಸದಾರಮೆಯನ್ನೂ ಜನಪ್ರೀಯಗೊಳಿಸಿದರು. ಈಗ ರಂಗಾಯಣ ಅಂತಹ ಸ್ತುತ್ಯಾರ್ಹ ಪ್ರಯತ್ನ ಮಾಡುತ್ತಿದೆ.

ಸುಧೀರ್ಘ ನಾಟಕದ ಸಂಕ್ಷಿಪ್ತ ಕಥೆ ಹೀಗಿದೆ. ಇಂದ್ರಾವತಿ ರಾಜ್ಯದ ದೊರೆ ರಾಜಕಂಠೀರವನ ಮಗ ರಾಜಮಾರ್ತಾಂಡ ಮದುವೆಯನ್ನು ನಿರಾಕರಿಸಿ ವಿರಕ್ತನಾಗಿರುತ್ತಾನೆ. ಮಂತ್ರಿಯ ತಂತ್ರಗಾರಿಕೆಯಿಂದಾಗಿ ರಾಜಕುವರನು ಸದಾರಮೆಯ ಮೋಹಪಾಶಕ್ಕೊಳಗಾಗುತ್ತಾನೆ. ಸದಾರಮೆಯ ತಂದೆ ಬಂಗಾರಶೆಟ್ಟಿ ಹಾಗೂ ಅಣ್ಣ ಆದಿಮೂರ್ತಿ ಇಬ್ಬರೂ ರಾಜ್ಯವನ್ನು ಕೊಟ್ಟರೆ ಮಾತ್ರ ಮದುವೆ ಸಾಧ್ಯವೆಂದು ಪಟ್ಟು ಹಿಡಿಯುತ್ತಾರೆ. ರಾಜ ತನ್ನ ರಾಜ್ಯವನ್ನು ಶೆಟ್ಟಿಗೆ ಕೊಟ್ಟು ಸದಾರಮೆಯೊಂದಿಗೆ ಮಗನ ಮದುವೆ ಮಾಡಿ ವಾನುಪ್ರಸ್ಥಾಶ್ರಮಕ್ಕೆ ತೆರಳುತ್ತಾನೆ. ರಾಜನಾದ ಆದಿಮೂರ್ತಿ ತನ್ನ ತಂಗಿ ಸದಾರಮೆ ಹಾಗೂ ಆತನ ಗಂಡನನ್ನು ರಾಜ್ಯದಿಂದಲೇ ಹೊರಗಟ್ಟುತ್ತಾನೆ. ಸದಾರಮೆಯ ಸುಂದರ ಕರವಸ್ತ್ರವನ್ನು ಮಾರಲು ಇನ್ನೊಬ್ಬ ರಾಜ ಕಲಾಹಂಸನ ಅರಮನೆಗೆ ರಾಜಮಾರ್ತಾಂಡ ಬಂದು ಬಂಧನಕ್ಕೊಳಗಾಗುತ್ತಾನೆ. ಕಲಾಹಂಸನು ಸದಾರಮೆಯಲ್ಲಿ ಅನುರಕ್ತನಾಗುತ್ತಾನೆ. ಮೂರು ತಿಂಗಳು ಗೌರಿವೃತ ಮುಗಿದ ಮೇಲೆ ಮದುವೆಯಾಗುವೆನೆಂದು ನೆಪ ಹೇಳಿದ ಸದಾರಮೆ ಗಂಡನನ್ನು ಬಂಧನದಿಂದ ಮುಕ್ತಗೊಳಿಸುವಂತೆ ಮಾಡುತ್ತಾಳೆ. ನಂತರ ಕಳ್ಳನೊಬ್ಬ ಆಕೆಯನ್ನು ಅಪಹರಿಸುತ್ತಾನೆ. ಆತನಿಂದಲೂ ಉಪಾಯದಿಂದ ತಪ್ಪಿಸಿಕೊಳ್ಳುವ ಸದಾರಮೆ ತನ್ನ ಹಿಂದೆ ಬಿದ್ದ ಯಾವುದೋ ದೇಶದ ರಾಜಕುವರ ಮತ್ತು ಮಂತ್ರಿಕುವರನಿಗೂ ಚಳ್ಳೆಹಣ್ಣು ತಿನ್ನಿಸಿ ಗಂಡು ಉಡುಪಿನಲ್ಲಿ ಲೀಲಾವತಿ ರಾಣಿಯ ರಾಜ್ಯ ಸೇರುತ್ತಾಳೆ.

ಪ್ರತಿ ರಾತ್ರಿ ಒಬ್ಬೊಬ್ಬ ಗಂಡಸನ್ನು ಅರಮನೆಗೆ ಕರೆಸಿಕೊಂಡು ಕೊಲ್ಲುವ ಮೂಲಕ ತನ್ನ ಪುರುಷದ್ವೇಷವನ್ನು ಲೀಲಾವತಿ ತೋರಿಸುತ್ತಿರುತ್ತಾಳೆ. ಸದಾರಮೆ ತನ್ನ ಕತೆಯನ್ನು ಹೇಳಿ ಲೀಲಾವತಿಯನ್ನು ಮದುವೆಯಾದ ಹಾಗೆ ನಾಟಕವಾಡಿ ರಾಜ್ಯಕ್ಕೆ ರಾಜಳಾಗುತ್ತಾಳೆ. ತನ್ನ ಭಾವಚಿತ್ರವನ್ನು ರಾಜ್ಯದ ನಾಲ್ಕೂ ಹೆಬ್ಬಾಗಿಲಿನ ಅನ್ನಛತ್ರಗಳಲ್ಲಿ ತನ್ನ ಭಾವಚಿತ್ರವನ್ನಿರಿಸುತ್ತಾಳೆ. ಅದನ್ನು ನೋಡಿ ಕೋಪಗೊಂಡ ಕಲಹಂಸ, ಕಳ್ಳ, ರಾಜಮಂತ್ರಿ ಕುಮಾರರನ್ನು ಬಂಧಿಸಲಾಗುತ್ತದೆ. ತಮ್ಮ ಅರಾಜಕತೆಯಿಂದ ರಾಜ್ಯಕಳೆದುಕೊಂಡು ಬೀದಿಪಾಲಾದ ಸದಾರಮೆಯ ತಂದೆ ಹಾಗೂ ಅಣ್ಣ ಹಾಗೂ ಭಾವಚಿತ್ರ ನೋಡಿ ಶೋಕಗೊಂಡ ರಾಜಮಾರ್ತಾಂಡನನ್ನು ಸದಾರಮೆಯ ಬಳಿ ಕರೆದೊಯ್ಯಲಾಗುತ್ತದೆ. ಅಲ್ಲಿ ತನ್ನ ಅಸಲಿತನ ಹೇಳುವ ಸದಾರಮೆ ತನ್ನ ಗಂಡನನ್ನು ರಾಜ್ಯದ ರಾಜನನ್ನಾಗಿಸುತ್ತಾಳೆ. ತನಗೆ ಸಹಾಯ ಮಾಡಿದ ಲೀಲಾವತಿಯನ್ನು ತನ್ನ ಗಂಡನಿಗೆ ಮದುವೆ ಮಾಡುತ್ತಾಳೆ. ನಂತರ ಎಲ್ಲವೂ ಶುಭಂ.

ಹೆಣ್ಣು ಹೆತ್ತವರು ಮಗಳನ್ನು ಹೇಗೆ ಕೀಳಾಗಿ ಕಾಣುತ್ತಾರೆ ಎನ್ನುವುದಕ್ಕೆ ಸಾಕ್ಷಿ ಬಂಗಾರಶೆಟ್ಟಿ ವರ್ತನೆ. ಸದಾರಮೆ ಶ್ರೀಮಂತ ವರ್ತಕನ ಮನೆಯಲ್ಲಿ ಹುಟ್ಟಿದ್ದರೂ ಸಹ  ನಿರ್ಲಕ್ಷಕ್ಕೊಳಗಾಗಿ ಬೆಳೆದವಳು. ಯಾವುದಕ್ಕೂ ಸ್ವಾತಂತ್ರ್ಯ ಇಲ್ಲದವಳು. ಕೊನೆಗೆ ಮಾರಾಟದ ವಸ್ತುವೂ ಆದಳು.  ಅಪ್ಪ ಎನ್ನುವವ ಮಗಳನ್ನು ಒಂದು ಪ್ರಾಣಿ ಎನ್ನುವ ಹಾಗೆ ಪರಿಗಣಿಸುವುದು ಹಾಗೂ ವ್ಯಾಪಾರದ ಸರಕನ್ನಾಗಿಸುವುದು ಪುರುಷ ಪ್ರಧಾನತೆಯ ನಕಾರಾತ್ಮಕ ಗುಣವಾಗಿದೆ. ಮನೆಯ ಒಳಗೆ ನಿರ್ಲಕ್ಷಕ್ಕೊಳಗಾದ ಸದಾರಮೆಯನ್ನು ಹೊರಗಿನ ಜನ ಕಾಮಿಸಿದವರೇ ಹೆಚ್ಚು. ಕಳ್ಳನಿಂದ ಹಿಡಿದು ರಾಜನವರೆಗೆ ಎಲ್ಲರೂ ಅವಳನ್ನು ಬಯಸಿದವರೇ. ಮಹಿಳೆಯನ್ನು ಭೋಗದ ವಸ್ತು ಎಂದು ಪರಿಗಣಿಸುವ ಪುರುಷಪ್ರಧಾನ ವ್ಯವಸ್ಥೆಯ ಲಂಪಟತನವನ್ನೂ ನಾಟಕ ಅನಾವರಣಗೊಳಿಸುತ್ತದೆ.

ಪುರುಷ ಪ್ರಧಾನ ವ್ಯವಸ್ಥೆಯ ಅಟ್ಟಹಾಸವನ್ನು ಮಾತ್ರ ತೋರಿಸದೇ ಮಹಿಳೆಯೊಬ್ಬಳು ಬುದ್ದಿವಂತಳಾಗಿದ್ದರೆ ಅದು ಹೇಗೆ ವಿಕೃತ ಮನಸ್ಸಿನ ಗಂಡಸರಿಗೆ ಪಾಠ ಕಲಿಸಿ ಪಾರಾಗಬೇಕೆನ್ನುವುದನ್ನೂ ನಾಟಕ ತೋರಿಸುತ್ತದೆ. ಎಂತಹ ವಿಕ್ಷಿಪ್ತ ಸಂದರ್ಭದಲ್ಲಿಯೂ ಸಹ ದೃತಿಗೆಡದೇ ಸಂದರ್ಭವನ್ನು ಉಪಾಯವಾಗಿ ಹೇಗೆ ಎದುರಿಸಬೇಕು ಎನ್ನುವ ಪಾಠವನ್ನು ಶೋಷಣೆಗೊಳಗಾಗುವ ಮಹಿಳೆಯರಿಗೆ ಹೇಳಿಕೊಡುವಂತೆ ಸದಾರಮೆ ಪಾತ್ರ ಮಾದರಿಯದಾಗಿದೆ. ಇದೊಂದು ನಾಯಕಿ ಪ್ರಧಾನವಾದ ನಾಟಕ. ದಿಟ್ಟ ಮಹಿಳೆಯ ಯಶೋಗಾಥೆಯ ಕಥಾನಕ. ಈಗಲೂ ಮಹಿಳೆಯನ್ನು ಆಳಬಯಸುವ ಇಲ್ಲವೇ ಅನುಭವಿಸಬಯಸುವ ಪುರುಷರು ತುಂಬಿರುವ ಜಗತ್ತಿನಲ್ಲಿ ಮಹಿಳೆ ತನ್ನ ಅಸ್ತಿತ್ವ, ಸ್ವಾತಂತ್ರ್ಯ ಹಾಗೂ ಸ್ವಾವಲಂಬನೆಗಾಗಿ ದಿನನಿತ್ಯ ಹೋರಾಡುತ್ತಲೆ ಇರಬೇಕಾದ ಪರಿಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಸದಾರಮೆ ನಾಟಕ ಪ್ರಸ್ತುತವೆನ್ನಿಸುವಂತಿದೆ. ಶೋಷಿತ ಮಹಿಳೆಯರಿಗೆ ಧೈರ್ಯಹೇಳುವಂತಿದೆ.

ಆದರೆ... ಎಷ್ಟೇ ಆಗಲಿ ಪುರುಷ ಪ್ರಾಧಾನ್ಯತೆ ಮಹಿಳೆಯರಿಗೆ ಅಷ್ಟು ಸುಲಭವಾಗಿ ಯಜಮಾನಿಕೆ ಬಿಟ್ಟು ಕೊಡಲು ಸಾಧ್ಯವೇ ಇಲ್ಲ ಎನ್ನುವುದನ್ನು   ನಾಟಕದ ಕ್ಲೈಮ್ಯಾಕ್ಸನಲ್ಲಿ ತೋರಿಸಲಾಗಿದೆ. ಎಲ್ಲಾ ಸಂಕಷ್ಟಗಳನ್ನು ಎದುರಿಸಿ ತನ್ನ ಸ್ವಂತ ಬುದ್ದಿವಂತಿಕೆಯಿಂದ ಒಂದು ರಾಜ್ಯವನ್ನೂ ಸಂಪಾದಿಸಿದ ಸದಾರಮೆ ಕೊನೆಗೆ ರಾಜ್ಯಕ್ಕೆ ತನ್ನ ಗಂಡನನ್ನೇ ರಾಜನನ್ನಾಗಿಸುತ್ತಾಳೆ. ಅಷ್ಟೇ ಅಲ್ಲ ರಾಜ್ಯದ ರಾಜಕುಮಾರಿ ಲೀಲಾವತಿಯನ್ನೂ ತನ್ನ ಗಂಡನಿಗೆ ಮದುವೆ ಮಾಡಿಕೊಳ್ಳಲು ಹೇಳುತ್ತಾಳೆ. ದುರ್ಬಲ ರಾಜಮಾರ್ತಾಂಡ ಮಾತಿಗೂ ರಾಜ್ಯವನ್ನು ನೀನೇ ಸಂಪಾದಿಸಿದ್ದು ನೀನೇ ಆಳು ಎಂದೂ ಹೇಳುವುದಿಲ್ಲ. ಹೋಗಲಿ, ಕಳೆದುಹೋದ ಹೆಂಡತಿಗಾಗಿ ಅಷ್ಟೊಂದು ಹಂಬಲಿಸಿದ ಆತ ಇನ್ನೊಂದು ಮದುವೆ ಮಾಡಿಕೋ ಎಂದಾಗಲೂ ನಿರಾಕರಿಸದೆ ಸಂತಸದಿಂದ ಒಪ್ಪಿಕೊಳ್ಳುತ್ತಾನೆ. ಹೆಣ್ಣು ಅದೆಷ್ಟೇ ತ್ಯಾಗ ಬಲಿದಾನ ಮಾಡಿದರೂ, ಅದೆಷ್ಟೇ ನಿಷ್ಟೆಯನ್ನು ತೋರಿಸಿದರೂ ಕೊನೆಗೂ ಆಕೆ ಪುರುಷರ ಆಳ್ವಿಕೆಗೆ ಒಳಗಾಗಬೇಕಾದವಳೆ ಎನ್ನುವ ಪುರುಷ ವ್ಯವಸ್ಥೆಯ ಹಿಡನ್ ಅಜೆಂಡಾವನ್ನೇ ನಾಟಕವೂ ಎತ್ತಿ ಹಿಡಿಯುತ್ತದೆ. ಮಹಿಳಾಪರ ನಿಲುವನ್ನು ತಳೆಯುತ್ತಲೇ ಕೊನೆಗೆ ಪುರುಷ ಪ್ರಧಾನ್ಯತೆಗೆ ಮಾನ್ಯತೆಯನ್ನು ಕೊಡುವ ನಾಟಕ ಒಂದು ರೀತಿಯಲ್ಲಿ ಗಂಡಸರ ಸಾಮ್ರಾಜ್ಯದ ಭಾಗವಾಗಿಯೇ ಮೂಡಿಬಂದಿದೆ.

ಬೆಳ್ಳಾವೆಯವರು ನಾಟಕವನ್ನು ಕಟ್ಟಿದ ರೀತಿ ಬಲು ಮಜಬೂತಾಗಿದೆ. ಒಂದರ ನಂತರ ಒಂದು ಘಟನೆಗಳು ಒಂದಕ್ಕೊಂದು ಮಿಳಿತವಾಗಿ ನೋಡಿಸಿಕೊಂಡು ಹೋಗುತ್ತವೆ. ಆರಂಭದಿಂದ ನಾಟಕದ ಅರ್ಧ ಭಾಗ ಹಾಸ್ಯರಸ ಪ್ರಧಾನವಾಗಿದ್ದು ಪ್ರೇಕ್ಷಕರನ್ನು ನಗಿಸುತ್ತದೆ. ಯಾವಾಗ ಸದಾರಮೆ ಗಂಡನೊಂದಿಗೆ ಕಾಡಿಗೆ ತೆರಳುತ್ತಾಳೋ ಆಗಿನಿಂದ ಶೋಕ ಪರ್ವ ಶುರುವಾಗುತ್ತದೆ. ಅವರಿಬ್ಬರ ಅಗಲಿಕೆ ಹಾಗೂ ನಂತರದ ಘಟನೆಗಳು ನಾಟಕವನ್ನು ಗಂಭೀರಗೊಳಿಸುತ್ತಾ ಸಾಗುತ್ತದೆ. ನಡುವೆ ಕಳ್ಳನ ಆಗಮನದಿಂದ ಮತ್ತೆ ಕಳೆಗಟ್ಟುವ ಹಾಸ್ಯರಸ ತದನಂತರ ಮತ್ತೆ ತನ್ನ ಗಾಂಭೀರತೆಯನ್ನು ಉಳಿಸಿಕೊಂಡು ಕೊನೆಗೆ ಸುಖಾಂತ್ಯವಾಗುತ್ತದೆ. ಹಾಸ್ಯ ರಸವೇ ಸ್ಥಾಯಿಭಾವವಾಗಿದ್ದು ಶೃಂಗಾರ, ಕರುಣ, ಭಯಾನಕ ರಸಗಳು ಸಂಚಾರಿ ಭಾವಗಳಾಗಿವೆ. ಹೀಗಾಗಿ ನಾಟಕ ನೋಡುಗರಿಗೆ ಅಚ್ಚುಮೆಚ್ಚಾಗುತ್ತದೆ. ಜೊತೆಗೆ ಹಾಡು ಸಂಗೀತ ಕುಣಿತಗಳು ಪ್ರೇಕ್ಷಕರಿಗೆ ಹುಚ್ಚು ಹಿಡಿಸುವಷ್ಟು ಇಷ್ಟ ಆಗುತ್ತವೆ.


ನಾಟಕದಲ್ಲಿ ಬರುವ ಕಳ್ಳನ ಪಾತ್ರ ಚಿಕ್ಕದಾದರೂ ನೋಡುಗರಲ್ಲಿ ಮಿಂಚಿನ ಸಂಚಾರವನ್ನುಂಟುಮಾಡುತ್ತದೆ. ನಾಟಕ ಪೌರಾಣಿಕವಾದರೂ ಪಾತ್ರ ಮಾತ್ರ ಸಮಕಾಲೀನವಾಗಿಯೇ ವರ್ತಿಸುತ್ತದೆ. ಕಳ್ಳ ಇಂಗ್ಲಿಷ್ ಶಬ್ಧಗಳನ್ನು ಬಳಸುತ್ತಾನೆ, ಪ್ರಸ್ತುತ ಸಮಸ್ಯೆಗಳನ್ನು ಸಹ ಪ್ರಸ್ತಾಪಿಸುತ್ತಾನೆ. ಕಳ್ಳತನದ ಹಿರಿಮೆಯನ್ನು ಹೇಳುತ್ತಲೇ ಸಮಜವನ್ನು ವಿಶ್ಲೇಷಿಸುತ್ತಾನೆ. ತಾನು ಶೋಲೆ ಸಿನೆಮಾದ ಗಬ್ಬರ್ಖಾನ್ ತಮ್ಮ ಎನ್ನುತ್ತಾನೆ. ಕರ್ನಾಟಕ ಬಿಟ್ಟು ಎಲ್ಲೂ ಹೊಗೋದಿಲ್ಲ, ಯಾಕೆಂದರೆ ಕನ್ನಡಿಗರಿಗೆ ನಿದ್ದೆ ಜಾಸ್ತಿ, ಇಲ್ಲಿಯ ಗುಡ್ಡ ಬಟ್ಟ ಬೆಟ್ಟ ಕದ್ದೋಯ್ದರೂ ಯಾರಿಗೂ ಗೊತ್ತಾಗೊಲ್ಲ ಎಂದು ಕನ್ನಡಿಗರನ್ನು ಕಿಚಾಯಿಸುತ್ತಲೇ ಗಣಿಕಳ್ಳತನದ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸುತ್ತಾನೆ. ಹೀಗೆ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುತ್ತಲೇ ವ್ಯವಸ್ಥೆಯನ್ನು ಲೇವಡಿ ಮಾಡುತ್ತಾನೆ. ಹೀಗಾಗಿ ಕಳ್ಳನ ಪಾತ್ರ ಇಡೀ ನಾಟಕದಲ್ಲಿ ತನ್ನ ಸಮಕಾಲೀನ ಪ್ರಜ್ಞೆಯಿಂದಾಗಿ ಪ್ರಾಮುಖ್ಯತೆಯನ್ನು ಪಡೆಯುತ್ತದೆ ಹಾಗೂ ನೋಡುಗರ ಮನಸ್ಸಿನಲ್ಲಿ ನಿಲ್ಲುತ್ತದೆ.

ನಾಟಕದ ಅಭಿನಯ ವಿಭಾಗದ ಕುರಿತು ಯಾರೂ ದುಸರಾ ಮಾತಾಡುವ ಹಾಗೆಯೇ ಇಲ್ಲ. ರಂಗಾಯಣದ ಪ್ರತಿಭಾನ್ವಿತ ಅನುಭವಿ ಕಲಾವಿದರು ಕೇವಲ ಆಧುನಿಕ ನಾಟಕಗಳು ಮಾತ್ರವಲ್ಲ ಇಂತಹ ವೃತ್ತಿ ಕಂಪನಿ ನಾಟಕಗಳನ್ನೂ ಆಡಿ ತೋರಿಸಬಲ್ಲೆವು ಎಂಬುದನ್ನು ಸಾಬೀತು ಪಡಿಸಿದ್ದಾರೆ. ರಾಜಾಮಾರ್ತಾಂಡನಾಗಿ ಕೃಷ್ಣಕುಮಾರ್, ಮಂತ್ರಿಯಾಗಿ ಕೃಷ್ಣಪ್ರಸಾದ ತುಂಬಾ ಸೊಗಸಾಗಿ ಅಭಿನಯಿಸಿದ್ದಾರೆ. ಆದಿಮೂರ್ತಿಯಾಗಿ ರಾಮು ಹಾಗೂ ಬಂಗಾರಶೆಟ್ಟಿಯಾಗಿ ಜಗದೀಶ ಮನವಾರ್ತೆ ಇಬ್ಬರ ಕಾಮೆಡಿ ಕಾಂಬಿನೇಶನ್ ಅದ್ಬುತವಾಗಿ ವರ್ಕಔಟ್ ಆಗಿದೆ. ಸರೋಜ ಹೆಗಡೆ ಸದಾರಮೆಯಾಗಿ ಗಮನ ಸೆಳೆದರೆ, ಹುಲಗಪ್ಪ ಕಟ್ಟೀಮನಿಯವರ ಕಳ್ಳನ ಪಾತ್ರ ನಾಟಕದ ಹೈಲೈಟ್ ಆಗಿದೆ. ಕಲಹಂಸನಾಗಿ ಪ್ರಶಾಂತ್ ಹಿರೇಮಠ ಹಾಗೂ ಕಿವುಡು ಮಂಗಮ್ಮ ಪಾತ್ರದಲ್ಲಿ ಗೀತಾರವರ ಅಭಿನಯ ಪಾತ್ರೋಚಿತವಾಗಿತ್ತು. ನಾಟಕದ ಅರ್ಧಭಾಗದ ನಂತರ ಬೇಗ ಬೇಗ ನಾಟಕವನ್ನು ಮುಗಿಸುವ ಒತ್ತಡಕ್ಕೊಳಗಾದಂತಿರುವ ನಟರು ತುಂಬಾ ಅವಸರದಲ್ಲಿ ತಮ್ಮ ಮಾತು ನಟನೆ ಮುಗಿಸುವ ದಾವಂತದಲ್ಲಿದ್ದಂತೆ ಅನ್ನಿಸಿತು.

ಆದರೆ... ಪಾತ್ರ ಹಂಚಿಕೆಯಲ್ಲಿ ವಯೋಮಾನದ ಕುರಿತು ನಿರ್ದೇಶಕರು ಗಮನ ಹರಿಸಬೇಕಿತ್ತು. ಇಪ್ಪತೈದು ವರ್ಷಗಳ ಹಿಂದೆ ಕಾರಂತರು ಮಿಸ್ ಸದಾರಮೆ ನಾಟಕ ನಿರ್ದೇಶಿಸಿದ್ದಾಗ ಸದಾರಮೆ ಪಾತ್ರ ಮಾಡಿದ ಸರೋಜ ಹೆಗಡೆಯವರೇ ಕಾಲು ಶತಮಾನದ ನಂತರ ನಡೆದ ಸದಾರಮಾ.. ನಾಟಕದಲ್ಲೂ ಅದೇ ಸದಾರಮೆಯ ಪಾತ್ರ ಮಾಡಿರುವುದು ಪಾತ್ರದ ವಯಸ್ಸಿನ ದೃಷ್ಟಿಯಿಂದ ಆಭಾಸಕಾರಿಯಾಗಿದೆ. ಇಷ್ಟು ವಯಸ್ಸಾದ, ಭೌತಿಕವಾಗಿ ಅಂಕಲ್ ಆಂಟಿ ರೀತಿಯಲ್ಲಿ ಕಾಣಿಸುವವರನ್ನು ಅದು ಹೇಗೆ ಹದಿಹರೆಯದ ಪ್ರೇಮಿಗಳು ಎಂದು ಪ್ರೇಕ್ಷಕರು ಒಪ್ಪಿಕೊಳ್ಳಬೇಕು. ಬಂಗಾರಶೆಟ್ಟಿ ಮತ್ತು ಆದಿಮೂರ್ತಿ ನಾಟಕದಲ್ಲಿ ಅಪ್ಪ ಮಗ. ಆದರೆ ವಯಸ್ಸಿನಲ್ಲಿ ಇಬ್ಬರೂ ಹೆಚ್ಚು ಕಡಿಮೆ ಒಂದೇ ಸಮಕಾಲಿನರು. ಅದು ಹೇಗೆ ನೋಡುಗರು ಇಬ್ಬರನ್ನೂ ತಂದೆ ಮಗ ಎಂದು ತಿಳಿದುಕೊಳ್ಳಬೇಕು?. ವಯಸ್ಸಲ್ಲಿ ಐವತ್ತರ ಸಮೀಪವಿರುವ ಕಲಾವಿದೆಯೊಬ್ಬರನ್ನು ರಾಜಕುಮಾರಿ ಲೀಲಾವತಿ ಎಂದು ಹೇಗೆ ಕಲ್ಪಿಸಿಕೊಳ್ಳಬೇಕು? ಮೇಕಪ್ ಮತ್ತು ಕಾಸ್ಟೂಮ್ಗಳು ನಿಜವಾದ ವಯಸ್ಸನ್ನು ಮುಚ್ಚಿಡಲು ಸಾಧ್ಯವೆ? ರಂಗಾಯಣದ ಕಲಾವಿದರಿಗೆ ವಯಸ್ಸಾಯಿತು ಎನ್ನುವುದು ಆರೋಪವಲ್ಲ. ಆದರೆ ಪಾತ್ರೋಚಿತ ವಯೋಮಾನದವರನ್ನು ಆಯಾ ಪಾತ್ರಕ್ಕೆ ಆಯ್ಕೆ ಮಾಡುವುದು ಸೂಕ್ತವೆನಿಸುತ್ತದೆ. ಆದರೆ ಇರುವವರನ್ನೇ ಬಳಸಿಕೊಳ್ಳಬೇಕಾದದ್ದು ರಂಗಾಯಣದ ಅನಿವಾರ್ಯತೆಯಾಗಿದೆ. ಅದನ್ನು ಮೀರುವ ದಾರ್ಶೆಯನ್ನು ನಿರ್ದೇಶಕರು ತೋರಬೇಕಾಗಿದೆ. ಇಲ್ಲವಾದರೆ ರಂಗಾಯಣದಲ್ಲಿ ಇನ್ನೂ ಹತ್ತು ವರ್ಷಗಳ ನಂತರವೂ ಇದೇ ನಾಟಕದ ಸದಾರಮೆಯನ್ನೇ ನೋಡಬೇಕಾಗುತ್ತದೆ. ಕಲಾವಿದರಿಗೆ ವಯಸ್ಸಾಗುತ್ತದೆ ಅದು ಪ್ರಕೃತಿ ಧರ್ಮ. ಆದರೆ ನಾಟಕದ ಪಾತ್ರಗಳ ವಯಸ್ಸನ್ನು ಬದಲಾಯಿಸಲು ಸಾಧ್ಯವಿಲ್ಲವಲ್ಲ. ಹೀಗಾಗಿ ಪಾತ್ರೋಚಿತ ವಯೋಮಾನದ ಆಯ್ಕೆಯೊಂದೇ ಸಮಸ್ಯೆಗೆ ಪರಿಹಾರವಾಗಬಲ್ಲುದು.

ಬಂಗಾರುಶೆಟ್ಟಿ ಮತ್ತು ಆದಿಮೂರ್ತಿಗಳ ತೆಲುಗು ಸಂಭಾಷಣೆ ನಾಟಕದಲ್ಲಿ ಅತಿಯಾದಂತೆನಿಸಿತು. ಕನ್ನಡ ತೆಲುಗು ಮಿಶ್ರ ಭಾಷಿಕ ಪ್ರದೇಶಗಳಲ್ಲಿ ಇದು ಸೂಕ್ತ. ಆದರೆ ತೆಲುಗಿನ ಗಂಧಗಾಳಿ ಗೊತ್ತಿಲ್ಲದವರಿಗೆ ಎರಡೂ ಪಾತ್ರಗಳ ಮಾತು ಅರ್ಥವಾಗದೇ ಹೋಯಿತು. ಕನ್ನಡ ಮಾತಾಡುತ್ತಲೇ ಆಗಾಗ ಸಾಂಕೇತಿಕವಾಗಿ ತೆಲುಗು ಶಬ್ದ ಬಳಸಿದ್ದರೆ ಚೆನ್ನಾಗಿತ್ತು. ಆದರೆ ತೆಲುಗು ಮಾತಾಡುತ್ತಲೇ ಆಗಾಗ ಕನ್ನಡ ಶಬ್ದ ಬಳಸಿದ್ದು ಅರ್ಥವಾಗದೇ ಹೋಯಿತು. ಗುಬ್ಬಿ ವೀರಣ್ಣನವರ ಕಾಲದಲ್ಲಿ ಕರ್ನಾಟಕ ಆಂದ್ರ ಗಡಿಗಳಲ್ಲಿ ನಾಟಕದ ಕ್ಯಾಂಪ್ ಹಾಕಿದಾಗ ರೀತಿಯ ತೆಲುಗು ಭಾಷಾ ಬಳಕೆ ಅನಿವಾರ್ಯವಾಗಿತ್ತು. ಇದರಿಂದಾಗಿ ತೆಲುಗು ಭಾಷೆಯವರನ್ನೂ ಸಹ ಕನ್ನಡ ನಾಟಕಕ್ಕೆ ಕರೆತರಲು ಸಾಧ್ಯವಾಗುತ್ತಿತ್ತು. ಆದರೆ ಬೆಂಗಳೂರಿನ ಕನ್ನಡಿಗರೇ ಹೆಚ್ಚಾಗಿರುವ ಪ್ರದೇಶದಲ್ಲಿ ತೆಲುಗು ಭಾಷೆಯನ್ನೇ ಎರಡು ಪಾತ್ರಗಳು ಹೆಚ್ಚಾಗಿ ಬಳಸಿದ್ದನ್ನು ಬದಲಾಯಿಸಿ ಹೆಚ್ಚು ಕನ್ನಡ ಪದಗಳನ್ನೇ ಬಳಸಿದ್ದರೆ ಸೂಕ್ತವಾಗುತ್ತಿತ್ತು, ನೋಡಲು ಬಂದ ಕನ್ನಡಿಗರಿಗೆ ಸಂಪೂರ್ಣ ಅರ್ಥವಾಗುತ್ತಿತ್ತು.

ಪುಟ್ಟಣ್ಣಯ್ಯನವರು
ಹಾಡು ಮತ್ತು ಸಂಗೀತ ನಾಟಕದ ಜೀವಾಳವಾಗಿವೆ. ಹದಿನೇಳು ಹಾಡುಗಳನ್ನು ಪುಟ್ಟಣ್ಣಯ್ಯನವರು ಮರುಸಂಯೋಜಿಸಿದ್ದಾರೆ. ಎಲ್ಲಾ ಹಾಡುಗಳು ಗುಬ್ಬಿ ವೀರಣ್ಣನವರ ಕಾಲದ ಸದಾರಮೆಯನ್ನು ಮತ್ತೆ ನೆನಪಿಗೆ ತರುವಂತಿದ್ದವು. ಪ್ರತಿಯೊಬ್ಬ ನಟರೂ ಸ್ವತಃ ಹಾಡಿ ಕುಣಿದಿದ್ದು ನಾಟಕದ ವಿಶೇಷ. ಯಾಕೆಂದರೆ ಆಧುನಿಕ ನಾಟಕಗಳಲ್ಲಿ ಹಾಡಿನ ಮೇಳ ಬೇರೆಯೇ ಇರುತ್ತದೆ. ಹಾಡುವವರು ಒಬ್ಬರಾದರೆ ಅದಕ್ಕೆ ಪೂರಕವಾಗಿ ಅಭಿನಯಿಸುವವರು ಇನ್ನೊಬ್ಬರಾಗಿರುತ್ತಾರೆ. ಆದರೆ ಇಲ್ಲಿ ಎಲ್ಲಾ ಲೈವ್. ಎಲ್ಲಾ ನಟರು ಹಾಡುಗಳನ್ನು ಕಲಿತು ಎಲ್ಲಿಯೂ ಆಭಾಸವಾಗದಂತೆ ಹಾಡಿ ಕುಣಿದು ರಂಜಿಸಿರುವುದು ರಂಗಾಯಣದ ನಟರ ಹಿರಿಮೆಯಾಗಿದೆ.
 
ನಾಟಕದ ಪರದೆಗಳಂತೆಯೇ ಪಾತ್ರಗಳ ವಸ್ತ್ರವಿನ್ಯಾಸ ಶ್ರೀಮಂತವಾಗಿ ಮೂಡಿಬಂದಿವೆ. ರಾಜಾ ಮಾರ್ತಾಂಡನನ್ನು ಹೊರತು ಪಡಿಸಿ ಎಲ್ಲಾ ಪಾತ್ರಗಳ ಮೇಕಪ್ ಸೂಕ್ತವಾಗಿದೆ. ಆದರೆ ರಾಜಕುಮಾರನ ಮೇಕಪ್ ಮಾತ್ರ ಹಾಸ್ಯಪಾತ್ರದಾರಿಯಂತೆ ಮೂಡಿ ಬಂದು ಪಾತ್ರದ ಗಾಂಭೀರ್ಯತೆಯನ್ನು ಕುಂಟಿತಗೊಳಿಸಿದೆ. ಕೆಲವು ದೃಶ್ಯಗಳಿಗೂ ಅದರ ಹಿಂದೆ ಬಳಸಿದ ಸೀನರಿಗಳಿಗೂ ಸಂಬಂಧವೇ ಇರಲಿಲ್ಲ. ಕಾಡಿನ ದೃಶ್ಯ ಬಂದಾಗ ಪಾರ್ಕಿನ ಸೀನರಿ ಇರುತ್ತಿತ್ತು. ಶೆಟ್ಟಿಯ ಮನೆಯ ದೃಶ್ಯದ ಹಿಂದೆಯೂ ವನದ ದೃಶ್ಯವೇ ಕಾಣುತ್ತಿತ್ತು. ವೃತ್ತಿ ಕಂಪನಿಗಳಲ್ಲಿರುವ ಸೀನರಿಗಳ ಮಹತ್ವದ ಅರಿವು ಇಲ್ಲಿ ಇಲ್ಲದೇ ಹೋಗಿದ್ದೊಂದು ವಿಪರ್ಯಾಸ. ಜೊತೆಗೆ ರಸ್ತೆ ಸೀನರಿ ಪರದೆಯ ನಿರ್ವಹಣೆ ತುಂಬಾ ಬೇಜವಾಬ್ದಾರಿಯಿಂದ ಕೂಡಿತ್ತು. ಇನ್ನೂ ಹಿಂದಿನ ದೃಶ್ಯ ಪೂರ್ತಿಯಾಗಿರುತ್ತಿರಲಿಲ್ಲ, ಪಾತ್ರಗಳ  ಮಾತಿನ್ನೂ ಪೂರ್ಣಗೊಂಡಿರುವುದಿಲ್ಲ ಅಷ್ಟರಲ್ಲೆ ರಸ್ತೆ ಪರದೆ ಇಳಿಸಲಾಗುತ್ತಿತ್ತು. ಅದೂ ಕೂಡಾ ಅಲ್ಲಿ ಇಲ್ಲಿ ಸಿಕ್ಕಾಕಿಕೊಂಡು ಸರಿಯಾಗಿ ಬೀಳದೇ ಅಡಚನೆಯನ್ನುಂಟುಮಾಡಿತು. ಆಧುನಿಕ ನಾಟಕ ಪ್ರಯೋಗಗಳಲ್ಲಿ ರಂಗಾಯಣ ವಹಿಸುತ್ತಿದ್ದ ರಂಗಶಿಸ್ತಿಗೆ ಇಲ್ಲಿ ಕೊರತೆ ಕಾಣಿಸಿತು.  ಎಲ್ಲಿ ಬೆಂಗಳೂರಿನ ಜನ 9 ಗಂಟೆಯ ಮೇಲೆ ರಂಗಮಂದಿರದಿಂದ ಎದ್ದು ಹೊರಡುತ್ತಾರೋ ಎನ್ನುವ ಆತಂಕದಿಂದಾಗಿ, ಎಲ್ಲರೂ ನಾಟಕವನ್ನು ಅರ್ಜೆಂಟಾಗಿ ಮುಗಿಸಬೇಕು ಎನ್ನುವ ಆತುರದಲ್ಲಿದ್ದಂತೆ ಭಾಸವಾಯಿತು. ಇದರಿಂದಾಗಿ ನಾಟಕದ ಪರ್ಪಾರಮನ್ಸ ಮೇಲೆ ವ್ಯತಿರಿಕ್ತ ಪರಿಣಾಮವುಂಟಾಯಿತು.

ವೇದಿಕೆಯ ಎತ್ತರ ಇನ್ನೊಂದು ಸಮಸ್ಯೆಯನ್ನುಂಟುಮಾಡಿತು. ವೇದಿಕೆಯ ಮುಂಭಾಗದ ಪ್ರೇಕ್ಷಕರಿಗೆ ಎಲ್ಲಾ ನಟರ ಮೊನಕಾಲಿನವರೆಗೂ ಏನೂ ಕಾಣಿಸುತ್ತಲೇ ಇರಲಿಲ್ಲ. ಮೊದಲೇ ಹೆಚ್.ಎನ್.ಕಲಾಕ್ಷೇತ್ರದ ವೇದಿಕೆ ಎತ್ತರದ್ದು, ಅದರ ಮೇಲೆ ಮುಕ್ಕಾಲು ಅಡಿ ಅಡ್ಡ ಪರದೆಯನ್ನು ಜೋಡಿಸಿ ಇನ್ನೂ ಎತ್ತರಗೊಳಿಸಿದ್ದರಿಂದ ಪ್ರೇಕ್ಷಕರು ನಟರ ಮುಕ್ಕಾಲು ಭಾಗವನ್ನು ಮಾತ್ರ ನೋಡಬೇಕಾಯಿತು.

ಏನೇ ನ್ಯೂನ್ಯತೆಗಳಿರಲಿ, ಕಂಪನಿ ನಾಟಕದ ವೈಭವವನ್ನು ಮತ್ತೆ ಸೃಷ್ಟಿಸಿ ತೋರಿಸಿದ ರಂಗಾಯಣ ಹಾಗೂ ಸದಾರಮಾ.. ನಾಟಕದ ನಿರ್ಮಾಣಕ್ಕೆ  ಶ್ರಮಿಸಿದ ಎಲ್ಲರೂ ಅಭಿನಂದನಾರ್ಹರು. 

                                      -ಶಶಿಕಾಂತ ಯಡಹಳ್ಳಿ                             
           
                



1 ಕಾಮೆಂಟ್‌:

  1. ನಿಮ್ಮ ಬರವಣೆಗಿಂದ ನನಗೆ ಸದಾರಮೆ ನಾಟಕದ ಬಗ್ಗೆ ತಿಳಿಯಲು ಅವಕಾಶ ಮಾಡಿಕೊಟ್ಟಂಥಹ ನಿಮಗೆ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ