ಸುಮಾರು ಎರಡೂವರೆ ಸಾವಿರ ವರ್ಷಗಳಿಂದ ಜೀವಂತವಾಗಿದ್ದು, ಪ್ರಪಂಚದಾದ್ಯಂತ ಹಲವಾರು ಭಾಷೆಗೆ ಅನುವಾದಗೊಂಡು ಪ್ರದರ್ಶನಗೊಂಡ ನಾಟಕ ‘ದೊರೆ ಈಡಿಪಸ್’. ಕ್ರಿ.ಪೂ. ೪೫೦ರಲ್ಲಿ ಕವಿ ಸಾಫೋಕ್ಲಿಸ್ ರಚಿಸಿದ ‘ಈಡಿಪಸ್ ಟರನಸ್’ ಎನ್ನುವ ಗ್ರೀಕ್‌ನ ಈ ರುದ್ರ ನಾಟಕವನ್ನು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದು ಪಿ.ಲಂಕೇಶ. 1972ರಲ್ಲಿ ಲಂಕೇಶರವರು ‘ದೊರೆ ಈಡಿಪಸ್’ನ್ನು ಕನ್ನಡಕ್ಕೆ ಅನುವಾದಿಸಿದ್ದರು ಹಾಗೂ ‘ಸಂಕ್ರಾಂತಿ’ ನಾಟಕವನ್ನು ಬರೆದಿದ್ದರು. ಈ ಎರಡು ನಾಟಕಗಳ ಜೊತೆಗೆ ಕಂಬಾರರಿಂದ ಜೋಕುಮಾರಸ್ವಾಮಿ ಜಾನಪದ ನಾಟಕವನ್ನೂ ಲಂಕೇಶರು ಬರೆಸಿದರು.
ಈ ಮೂರೂ ನಾಟಕಗಳನ್ನು ಪ್ರದರ್ಶಿಸಲು ಉತ್ಸುಕತೆ ತೋರಿದ ಲಂಕೇಶರು
ಬಿ.ವಿ.ಕಾರಂತರಿಗೆ ನಿರ್ದೇಶಿಸಲು ಕೇಳಿಕೊಂಡರು. ‘ಪ್ರತಿಮಾ ನಾಟಕ ರಂಗ’ ಕ್ಕೆ ಕಾರಂತರು ಅದ್ಬುತವಾಗಿ ಈ ನಾಟಕಗಳನ್ನು ನಿರ್ದೇಶಿಸಿದರು. ಈಗಿನ ರವಿಂದ್ರ ಕಲಾಕ್ಷೇತ್ರದ ಹಿಂದಿರುವ ಸಂಸ ಬಯಲುಮಂದಿರವಿರುವ ಜಾಗದಲ್ಲಿರುವ ದೊಡ್ಡ ಕಂಬಗಳನ್ನು ನೋಡಿದ ಕಾರಂತರು ‘ದೊರೆ ಈಡಿಪಸ್’ ನಾಟಕವನ್ನು ಅಲ್ಲಿಯೇ ಪ್ರದರ್ಶಿಸಬೇಕೆಂದು ನಿಶ್ಚಯಿಸಿದರು. 1972ರಲ್ಲಿ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಆಯೋಜಿಸಲಾದ ‘ಬಯಲು ಉತ್ಸವ’ದಲ್ಲಿ ಈ ಮೂರೂ ನಾಟಕಗಳು ಪ್ರದರ್ಶನಗೊಂಡು ಕನ್ನಡ ರಂಗಭೂಮಿಗೆ ಹೊಸ ತಿರುವನ್ನೇ ಕೊಟ್ಟವು. ಅಂದಿನಿಂದ ಇಂದಿನವರೆಗೂ ಅನೇಕ ರಂಗ ನಿರ್ದೇಶಕರುಗಳು ‘ದೊರೆ ಈಡಿಪಸ್’ ನಾಟಕವನ್ನು ವಿಭಿನ್ನ ರೀತಿಯಲ್ಲಿ ಪ್ರದರ್ಶಿಸುತ್ತಲೇ ಬಂದಿದ್ದಾರೆ.
ಈಗ ಜೋಸೆಪ್ ಜಾನ್ರವರು ‘ದೊರೆ ಈಡಿಪಸ್’ ನಾಟಕವನ್ನು ‘ರಂಗದರ್ಶನ ಪ್ರದರ್ಶನ ಕಲಾಕೇಂದ್ರ’ದ ಕಲಾವಿದರಿಗೆ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ನಿದೇಶಿಸಿದ್ದಾರೆ. ‘ರಂಗದರ್ಶನ’ ಆಯೋಜಿಸಿದ ಮೂರು ದಿನಗಳ ‘ಕರ್ನಾಟಕ ರಂಗಕಲಾಮೇಳ ನಾಟಕೋತ್ಸವ’ದ ಮೊದಲ ದಿನದ ನಾಟಕವಾಗಿ ‘ದೊರೆ ಈಡಿಪಸ್’ 2014 ಫೆಬ್ರವರಿ 18 ರಂದು ಮಲ್ಲೇಶ್ವರಂನ ‘ಸೇವಾಸದನ’ದಲ್ಲಿ ಪ್ರದರ್ಶನಗೊಂಡಿತು.
‘ವಿಧಿ ಎಂಬುದು ಕೇವಲ ಪ್ರಜೆಗಳ ಬದುಕಲ್ಲಿ ಮಾತ್ರ ಆಟವಾಡುವುದಿಲ್ಲ, ಅದು ದೊರೆಗಳನ್ನೂ ಸಹ ಬಿಟ್ಟಿಲ’ ಎಂಬುದನ್ನು ಸಾಬೀತುಪಡಿಸುವ ‘ದೊರೆ ಈಡಿಪಸ್’ ನಾಟಕವು ಹುಟ್ಟಿನಿಂದ ಕೊನೆಯವರೆಗೂ ಈಡಿಪಸ್ನನ್ನು ಬಿಡದಂತೆ ಕಾಡಿ ಆತನ ಬದುಕನ್ನೇ ಬಲಿತೆಗೆದುಕೊಳ್ಳುತ್ತದೆ. ‘ತಂದೆಯನ್ನು ಕೊಂದು ತಾಯಿಯನ್ನು ಮದುವೆಯಾಗುತ್ತಾನೆ’ ಎನ್ನುವ ದೇವವಾಣಿಗೆ ಹೆದರಿದ ರಾಣಿ ಜೊಕಾಸ್ತಾ ಹೆತ್ತ ಮಗುವನ್ನು ಕೊಲ್ಲಲು ಕುರುಬನೊಬ್ಬನಿಗೆ ಕೊಡುತ್ತಾಳೆ. ಕುರುಬನಿಗೆ ಹುಟ್ಟಿದ ಕರುಣೆಯಿಂದಾಗಿ ಬೇರೆ ದೇಶದ ಪಾಲಿಬಸ್ ರಾಜನ ಅರಮನೆಯಲ್ಲಿ ಬೆಳೆದ ಈಡಿಪಸ್ ಮುಂದೆ ತನ್ನ ಸ್ವಂತ ತಂದೆಯೆಂದರಿಯದೇ ರಾಜ ಲೇಯಸ್ನನ್ನು ಕೊಂದು ಥೀಬ್ಸ್ ದೇಶದ ರಾಜನಾಗಿ ತನ್ನ ತಾಯಿಯನ್ನೇ ಮದುವೆಯಾಗಿ ಮಕ್ಕಳನ್ನು ಪಡೆಯುತ್ತಾನೆ. ತನ್ನ ಹುಟ್ಟಿನ ಗುಟ್ಟನ್ನು ದಾರ್ಶನಿಕನೊಬ್ಬನಿಂದ ತಿಳಿದ ಈಡಿಪಸ್ ಪ್ರಜೆಗಳಿಗೆ ಕೊಟ್ಟ ಮಾತಿನಂತೆ ರಾಜ್ಯಾಧಿಕಾರ ತೊರೆದು ತನ್ನ ಕಣ್ಣುಗಳನ್ನೇ ಕಿತ್ತುಕೊಳ್ಳುವುದರ ಮೂಲಕ ಪಶ್ಚಾತ್ತಾಪವನ್ನನುಭವಿಸುತ್ತಾನೆ. ಗಂಡನಿಂದ ಗಂಡನನ್ನು, ಮಗನಿಂದ ಮಕ್ಕಳನ್ನೂ ಪಡೆದ ಪಾಪಪ್ರಜ್ಞೆಯಿಂದಾಗಿ ರಾಣಿ ಜೊಕಾಸ್ತಾ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಹೀಗೊಂದು ದುರಂತ ರುದ್ರ ನಾಟಕವು ಪ್ರೇಕ್ಷಕರ ಎದೆಯೊಳಗೆ ಕರುಣಾರಸವನ್ನು ಹರಿಸಿ, ಮನಸ್ಸಲ್ಲಿ ನೈತಿಕ ಪ್ರಜ್ಞೆಯನ್ನು ಹುಟ್ಟಿಸಿ ಅಂತ್ಯವಾಗುತ್ತದೆ.
ಈಡಿಪಸ್‌ನ ದುರಂತದ ಬೀಜ ಆತನ ಹುಟ್ಟಿನಿಂದಲೇ ಆತನೊಳಗೇ ಇದ್ದು ಪರಿಸ್ಥಿತಿಗಳ ತಿರುವುಗಳಲ್ಲಿ ಬೆಳೆಯುತ್ತಾ ಸಾಗುತ್ತವೆ. ಮನುಷ್ಯನ ಪ್ರಜ್ಞೆಯ ಅಂತರಂಗವನ್ನು ಶೋಧಿಸಿ ಮನದಾಳಕ್ಕಿಳಿಯುವ ನಾಟಕವಿದು. ಭೂತ ವರ್ತಮಾನ ಭವಿಷ್ಯಗಳು ಒಂದಾಗುವ ಪರಿ ಈ ನಾಟಕದಲ್ಲಿದೆ. ವಿಧಿ ಹಾಗೂ ವಿಧಾತನ ಅಸೀಮ ಶಕ್ತಿ ಹಾಗೂ ಮನುಷ್ಯನ ಸೀಮಿತ ಸಾಮರ್ಥ್ಯಗಳ ನಡುವಿನ ಸೆನೆಸಾಟ ಈ ನಾಟಕದ ಕೇಂದ್ರ ಬಿಂದುವಾಗಿದೆ. ಆಸ್ತಿಕತೆಯ ನಂಬಿಕೆ ಹಾಗೂ ಮೂಢನಂಬಿಕೆಗಳಿಗೆ ಇಂಬುಕೊಡುವಂತಹ ಈ ನಾಟಕವು ವಿಧಿಯಾಟದ ಸಮರ್ಥನೆಗೆ ಪೂರಕವಾಗಿ ಮೂಡಿ ಬಂದಿದೆ. ದೇವರ ದೇವ ಅಪೋಲೋ ಯಾಕೆ ಮತ್ತು ಹೇಗೆ ಈಡಿಪಸ್ ಕುರಿತು ಭವಿಷ್ಯವಾಣಿ ಹೇಳಿದ? ಈಡಿಪಸ್‌ನ ಬದುಕಿನ ರಹಸ್ಯವನ್ನು ಭವಿಷ್ಯಕಾರ ಟೈರೀಸಿಯಸ್ ಹೇಗೆ ಗೊತ್ತಾಯಿತು? ಎನ್ನುವ ಮೂಲಭೂತ ಪ್ರಶ್ನೆಗಳಿಗೆ ಈ ನಾಟಕದಲ್ಲಿ ತಾರ್ಕಿಕ ಉತ್ತರಗಳಿಲ್ಲ.
ಆಗಿನ ಕಾಲದಂತೆ ಮೂಢನಂಬಿಕೆಗಳನ್ನು ಹಾಗೂ ಭವಿಷ್ಯ ಜೋತಿಷ್ಯಗಳನ್ನು ನಂಬುವವರು ಈಗಲೂ ಬೇಕಾದಷ್ಟು ಜನರಿದ್ದಾರೆ. ಈ ಜೋತಿಷ್ಯವನ್ನು ನಂಬಿ ನಿಧಿಸಿಗುತ್ತದೆಂಬ ಆಸೆಗೆ ತಮ್ಮ ಸ್ವಂತ ಮಕ್ಕಳನ್ನು ಬಲಿ ಕೊಡುವ ಮೂಢರೂ ಇದ್ದಾರೆ. ಮೂಲಾ ನಕ್ಷತ್ರದಲ್ಲಿ ಹುಟ್ಟಿದ ಮಗು ಅಪಶಕುನವೆಂದು ನಂಬುವ ಜನತೆಗೇನೂ ಕೊರತೆಯಿಲ್ಲ. ಅಂದರೆ ಈ ‘ದೊರೆ ಈಡಿಪಸ್’ ನಾಟಕವು ಮೂಢನಂಬಿಕೆಗಳನ್ನು ಪ್ರಮೋಟ್ ಮಾಡುತ್ತಿದೆಯಾ? ಮನುಷ್ಯರು ವಿಧಿಯ ಕೈಗೊಂಬೆಯಾಗಿದ್ದು ಏನೇ ಮಾಡಿದರೂ ಹಣೆಬರಹವನ್ನು ಬದಲಾಯಿಸಲು ಸಾಧ್ಯವಿಲ್ಲ ಎನ್ನುವ ಮಿಥ್ನ್ನು ಸತ್ಯವೆಂದು ಈ ನಾಟಕ ಸಾಕ್ಷೀಕರಿಸುತ್ತಿದೆಯಾ? ಎರಡೂವರೆ ಸಾವಿರ ವರ್ಷಗಳ ಹಿಂದೆ ಈ ರೀತಿಯ ದೇವವಾಣಿ, ಭವಿಷ್ಯವಾಣಿ, ವಿಧಿನಿಯಮಗಳೆಂಬ ನಂಬಿಕೆಗಳು ಜನರಲ್ಲಿ ಇದ್ದವೆಂದರೆ ನಂಬಬಹುದು, ಆದರೆ ಈಗಲೂ ಆ ಪುರಾತನ ಮೌಢ್ಯಗಳನ್ನೇ ದೃಢ ಪಡಿಸುವಂತಹ ಈ ನಾಟಕವನ್ನು ನಿರ್ಮಿಸಿ ಜನರಲ್ಲಿರುವ ಮೂಢನಂಬಿಕೆಗಳಿಗೆ ಇಂಬುಕೊಡುವಂತಹ ಕೆಲಸವನ್ನು ಮಾಡುವುದು ಎಷ್ಟರ ಮಟ್ಟಿಗೆ ಸರಿ? ಎಂಬ ಪ್ರಶ್ನೆಗಳು ಕಾಡುತ್ತವೆ. ಹೀಗೆ.... ಈ ಎಲ್ಲಾ ತಾತ್ವಿಕ ಪ್ರಶ್ನೆಗಳನ್ನು ಬದಿಗಿಟ್ಟು, ದೈವದ ಅವಾಸ್ತವ ದೃಷ್ಟಿಕೋನವನ್ನು ಕೈಬಿಟ್ಟು, ರಾಜನೊಬ್ಬನ ವಾಸ್ತವದ ಪ್ರಾಮಾಣಿಕತೆ ಮತ್ತು ಪಶ್ಚಾತ್ತಾಪದ ಬಗ್ಗೆ ತಿಳಿದುಕೊಂಡರೆ ಈ ನಾಟಕದ ಯಶಸ್ಸಿಗೆ ಕಾರಣ ಅರ್ಥವಾಗುತ್ತದೆ.
ಸಮಕಾಲೀನ ಆಳುವ ದೊರೆಗಳ ಅಟ್ಟಹಾಸ ಮತ್ತು ಸರ್ವಾಧಿಕಾರದ ಗುಣಗಳನ್ನು ನೋಡಿ, ನಮ್ಮನ್ನಾಳುವವರ ಸುಳ್ಳು ಭರವಸೆ, ಕೊಟ್ಟ ಮಾತಿಗೆ ತಪ್ಪುವ ವರಸೆಗಳನ್ನೆಲ್ಲಾ ಅನುವಭವಿಸಿದ ಪ್ರೇಕ್ಷಕರಿಗೆ ‘ದೊರೆ ಈಡಿಪಸ್’ ಅಪ್ಯಾಯಮಾನನಾಗುತ್ತಾನೆ. ಈಡಿಪಸ್ ದೊರೆಯಾಗಿ ಸರ್ವಾಧಿಕಾರ ಹೊಂದಿದ್ದರೂ ಪ್ರಜೆಗಳ ಮಾತಿಗೆ ಮಿಡಿತವಾಗುತ್ತಾನೆ. ಅವರ ಕಷ್ಟಗಳಿಗೆ ದ್ವನಿಯಾಗುತ್ತಾನೆ. ಜನರ ಸಂಕಟಗಳಿಗೆ ಪರಿಹಾರ ಹುಡುಕಲು ಪ್ರಯತ್ನಿಸುತ್ತಾನೆ. ಪ್ರಜೆಗಳ ಸಮಸ್ಯೆಗೆ ತಾನರಿಯದೇ ಮಾಡಿದ ಪಾತಕವೇ ಕಾರಣ ಎಂದು ತಿಳಿದ ತಕ್ಷಣ ಜನರಿಗೆ ಕೊಟ್ಟ ಮಾತಿನಂತೆ ದೊರೆತನ ಬಿಟ್ಟು ತನ್ನ ಕಣ್ಣುಗಳನ್ನು ತಾನೇ ಕಿತ್ತುಕೊಂಡು ತನಗೆ ತಾನೇ ಶಿಕ್ಷೆ ವಿಧಿಸಿಕೊಳ್ಳುತ್ತಾನೆ. ಕೊಟ್ಟ ಮಾತಿಗೆ ಆದರ್ಶವಾಗುತ್ತಾನೆ. ಈ ರೀತಿಯ ಪಾಪ ಪ್ರಜ್ಞೆಯಿಂದ ಪಡುವ ಸಂಕಟ ಹಾಗೂ ಪ್ರಾಯಶ್ಚಿತ್ತಕ್ಕೆ ‘ಈಡಿಪಸ್ ಕಾಂಪ್ಲೆಕ್ಸ್’ ಎನ್ನುತ್ತಾರೆ.
ಆದರೆ ಈಗ ನಮ್ಮನ್ನಾಳುವ ಪ್ರಭುಗಳು ಗೊತ್ತಿದ್ದೂ ಮಾಡುವ ಪ್ರಜಾದ್ರೋಹಕ್ಕೆ, ಪಾತಕತನಕ್ಕೆ ಪಾಪಪ್ರಜ್ಞಾರಹಿತರಾಗಿರುತ್ತಾರೆ. ಕೊಟ್ಟ ಮಾತು ಮತ್ತು ಭರವಸೆಗಳನ್ನು ಮರುಕ್ಷಣವೇ ಮರೆತಿರುತ್ತಾರೆ. ಪ್ರಜಾಶೋಷಣೆ ಮತ್ತು ಸ್ವಾರ್ಥಪರ ನಿಲುವುಗಳು ಮಾತ್ರ ಪ್ರಜಾಪ್ರಭುತ್ವದಲ್ಲಿ ಆಳುವವರ ಗುರಿಯಾಗಿದ್ದು, ಈಡಿಪಸ್ ಕಾಂಪ್ಲೆಕ್ಸ್ ರೀತಿಯಲ್ಲಿ ಇವರಿಗೆ ಯಾವುದೇ ಕಾಂಪ್ಲೆಕ್ಸಗಳು ಬಾಧಿಸುವುದೇ ಇಲ್ಲ. ಯಾಕೆಂದರೆ ನಮ್ಮ ದೊರೆಗಳು ಓಟಿನ ನಾಟಕದ ಹೊರತಾಗಿ ಜನರ ಗೋಳಿಗೆ ತಮ್ಮ ಪಂಚೇಂದ್ರಿಯಗಳನ್ನು ಮುಚ್ಚಿಕೊಂಡಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ದೊರೆ ಈಡಿಪಸ್‌ನ ದುರಂತ ಬದುಕಿಗಾಗಿ ಮತ್ತು ಆತ ಉದ್ದೇಶಪೂರ್ವಕವಾಗಿ ಮಾಡದ ತಪ್ಪಿಗೆ ಪಡುವ ಪಶ್ಚಾತ್ತಾಪಗಳಿಗಾಗಿ ನೋಡುಗರು ಹರಿಸುವ ಎರಡು ಹನಿ ಕಣ್ಣೀರು ಈಡಿಪಸ್ ದೊರೆ ಮೇಲೆ ಕರುಣೆಯನ್ನುಕ್ಕಿಸಿ ಆತ ಅರಿಯದೇ ಮಾಡಿದ ತಪ್ಪುಗಳನ್ನು ತೊಳೆಯುವಂತೆ ‘ದೊರೆ ಈಡಿಪಸ್’ ನಾಟಕ ಪ್ರೇರೇಪಿಸುತ್ತದೆ. ದೊರೆಯೊಬ್ಬನ ಪ್ರಜಾಬದ್ದತೆ ಮತ್ತು ಪಶ್ಚಾತ್ತಾಪದಿಂದಾಗಿ ಈ ನಾಟಕ ಕಳೆದ ಇಪ್ಪತೈದು ಶತಮಾನಗಳಿಂದಲೂ ಜೀವಂತವಾಗಿದೆ.
ಆದರೆ.... ಜೊಸೆಪ್ರವರು ಈಡಿಪಸ್ನನ್ನು ನಿರೂಪಿಸಿದ ರೀತಿಯೇ ಭಿನ್ನವಾಗಿದೆ. ಲಂಕೇಶರು ಅನುವಾದಿಸಿದ ನಾಟಕವನ್ನು ನಿರ್ದೇಶಕರು ತಮಗೆ ಬೇಕಾದಂತೆ ಎಡಿಟ್ ಮಾಡಿದ್ದಾರೆ. ಒಂದೂಮುಕ್ಕಾಲು ಗಂಟೆಯ ಕಾಲಾವಧಿಯ ನಾಟಕವನ್ನು ಒಂದು ಗಂಟೆಗೆ ಇಳಿಸಿದ್ದಾರೆ. ಇದರಿಂದಾಗಿ ಮೂಲ ನಾಟಕದ ಹಲವಾರು ಕಥಾ ಲಿಂಕ್ಗಳು ಬಿಟ್ಟುಹೋಗಿವೆ. ಉದಾಹರಣೆಗೆ...
ರಾಜನನ್ನು ಕೊಂದ ಈಡಿಪಸ್ ಆ ರಾಜ್ಯಕ್ಕೆ ಹೇಗೆ ರಾಜನಾದ ಎನ್ನುವ ಸಂದೇಹ ಕಾಡುತ್ತದೆ. ಮೂಲ ನಾಟಕದಲ್ಲಿ “ಜನರನ್ನು ಕಾಡುತ್ತಿದ್ದ ಸ್ಟಿಂಕ್ಸ್ ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ ಸ್ಪಿಂಕ್ಸನ್ನು ಓಡಿಸಿದ್ದರಿಂದ ಮೆಚ್ಚಿದ ಜನ ಖಾಲಿ ಇದ್ದ ರಾಜನ ಸ್ಥಾನದಲ್ಲಿ ಈಡಿಪಸ್ನನ್ನು ಕೂಡಿಸುತ್ತಾರೆ’. ಆದರೆ ಈ ಕುರಿತ ವಿವರಗಳು ಜೊಸೆಪ್ರವರ ನಾಟಕದಲ್ಲಿ ಸಮರ್ಪಕವಾಗಿಲ್ಲ. ರಾಣಿ ಆತ್ಮಹತ್ಯೆ ಮಾಡಿಕೊಂಡು ಸತ್ತಳು ಹಾಗೂ ಈಡಿಪಸ್ ಕಣ್ಣು ಕಿತ್ತುಕೊಂಡು ಕುರುಡನಾದ ಎಂದು ಘೋಷಿಸಿದ ನಂತರವೂ ಕುರುಡ ಈಡಿಪಸ್ ರಾಣಿಯ ಸೆರಗು ಹಿಡಿದುಕೊಂಡೇ ನಡೆದು ಹೋಗುವುದು ಅನಗತ್ಯ ಗೊಂದಲವನ್ನುಂಟುಮಾಡುವಂತಿದೆ. ಲಂಕೇಶರ ಈಡಿಪಸ್ ನಾಟಕದ ಯಶಸ್ಸಿಗೆ ಅದರಲ್ಲಿ ಬಳಸಲಾದ ಕಾವ್ಯಾತ್ಮಕ ಸಂಭಾಷನೆಗಳೂ ಪ್ರಮುಖವಾಗಿವೆ. ಆದರೆ ಜೊಸೆಪ್‌ರವರ ಈ ಈಡಿಪಸ್‌ನಲ್ಲಿ ಪೊಯೆಟಿಕ್ ಮಾತುಗಳು ತಮ್ಮ ತೀವ್ರತೆಯನ್ನು ಕಳೆದುಕೊಂಡಿವೆ.
‘ಈಡಿಪಸ್ ನಾಟಕವನ್ನು ಅರ್ಥೈಸಿಕೊಳ್ಳಬೇಕೆಂದರೆ ಆ ನಾಟಕವನ್ನು ಮೊದಲೇ ಓದಿಕೊಂಡು ಬರಬೇಕು’ ಎನ್ನುವ ಪ್ರತೀತಿ ಇದೆ. ಭಾರತೀಯ ಪರಂಪರೆಗೆ ಹೊರತಾದ ನಾಟಕವಿದು. ನಮ್ಮ ರಾಮಾಯಣ ಮಹಾಭಾರತಗಳಾದರೆ ಹಿಂದೆ ಮುಂದೆ ಗೊತ್ತಿಲ್ಲದಿದ್ದರೂ ಜನಸಾಮಾನ್ಯರಿಗೂ ಅರ್ಥವಾಗುತ್ತವೆ. ಆದರೆ ಈಡಿಪಸ್ನಂತಹ ಗ್ರೀಕ್ ನಾಟಕ ಅಷ್ಟು ಸುಲಭಕ್ಕೆ ದಕ್ಕುವಂತಹುದಲ್ಲ. ಅಂತಹುದರಲ್ಲಿ ಇರುವ ದೃಶ್ಯಗಳನ್ನೂ ಇನ್ನೂ ಸಂಕೀರ್ಣಗೊಳಿಸಿ ತೋರಿಸಿದರೆ, ನಾಟಕದ ಕಥಾನಕದ ಲಿಂಕ್ಗಳೇ ಬಿಟ್ಟುಹೋದರೆ ಸಾಮಾನ್ಯ ಪ್ರೇಕ್ಷಕನಿಗೆ ಅರ್ಥವಾಗುವುದಾದರೂ ಹೇಗೆ? ಕಥಾನಕದ ಅರ್ಥವಾಪ್ತಿಯನ್ನು ಪಕ್ಕಕ್ಕಿಟ್ಟು ನಾಟಕವನ್ನು ನೋಡಿದರೆ ಇಡೀ ನಾಟಕ ಒಂದು ರೀತಿಯಲ್ಲಿ ಮಾಡರ್ನ ಪೇಂಟಿಂಗ್ನಂತೆ ನಿರ್ಮಾಣವಾಗಿದೆ. ಪ್ರತಿ ದೃಶ್ಯ ಸಂಯೋಜನೆಯೂ ಪೊಟೋಗ್ರಾಫಿಕ್ ಪ್ರೇಮ್ನಂತಿದೆ. ನೋಡುವುದಕ್ಕೂ ಖುಷಿಕೊಡುತ್ತದೆ.
ಅದರಲ್ಲೂ ಜೋಸೆಫರವರ ನಿರೂಪನಾ ಶೈಲಿ ವಿಶೇಷವಾಗಿರುವಷ್ಟೇ ಸಂಕೀರ್ಣವೂ ಆಗಿದೆ. ಸುಮಾರು ಇಪ್ಪತ್ತಕ್ಕೂ ಹೆಚ್ಚು ಪಾತ್ರಗಳಿರುವ ಈ ನಾಟಕವನ್ನು ಕೇವಲ ಆರೇ ಪಾತ್ರಗಳ ಮೂಲಕ ಇಡೀ ಕ್ಲಿಷ್ಟಕರ ಕಥಾನಕವನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಇದು ನಿಜಕ್ಕೂ ಚಾಲೆಂಜಿಂಗ್. ಇರುವ ಆರು ಪಾತ್ರಗಳಲ್ಲಿ ಜೊಕಾಸ್ತಾ ಪಾತ್ರವನ್ನು ಹೊರತುಪಡಿಸಿ ಉಳಿದವರಿಗೆ ಇಂತದೇ ಖಚಿತ ಪಾತ್ರಗಳೆಂಬುದು ಇಲ್ಲ. ಮುಖವಾಡಗಳನ್ನು ತೊಟ್ಟ ಮೇಳದ ಗುಂಪು ಅಗತ್ಯವಾದಾಗ ಮುಖವಾಡ ಕಳಚಿಟ್ಟು ಪಾತ್ರವಾಗುತ್ತವೆ. ಮತ್ತೆ ಮುಖವಾಡ ಹಾಕಿಕೊಂಡು ಗುಂಪಾಗುತ್ತವೆ. ಈ ಮಾತಿಗೆ ಈಡಿಪಸ್ ಪಾತ್ರಕೂಡಾ ಹೊರತಾಗಿಲ್ಲ. ಒಬ್ಬ ಪಾತ್ರದಾರಿಯ ಮಾತುಗಳನ್ನು ಹಲವರು ಆಡುತ್ತಾರೆ. ಈ ರೀತಿಯ ರಂಗತಂತ್ರ ನಿಜಕ್ಕೂ ಅದ್ಬುತವೆನಿಸುತ್ತದೆ. ಒಂದು ಸಿದ್ದ ಮಾದರಿಯನ್ನು ಒಡೆದು ಹೊಸದಾಗಿ ಕಟ್ಟಿಕೊಡುವ ರೀತಿಯಿಂದಾಗಿ ಹಾಗೂ ಕಲಾತ್ಮಕ ದೃಶ್ಯ ಸಂಯೋಜನೆಗಳಿಂದಾಗಿ ಈ ನಾಟಕ ಗಮನಸೆಳೆಯುವಂತಿದೆ.
ಆದರೆ.... ಈ ‘ದೊರೆ ಈಡಿಪಸ್’ ಒಂದು ಪಕ್ಕಾ
ನಿರ್ದೇಶಕನ ನಾಟಕವಾಗಿದೆ. ಇಲ್ಲಿ ನಟರು ಕೇವಲ ಪರಿಕರಗಳಾಗಿ ಬಳಕೆಗೊಂಡಿದ್ದಾರೆ. ನಾಟಕದಾದ್ಯಂತ ನಿರ್ದೇಶಕ ತನ್ನ ಇರುವನ್ನು ಸಾಬೀತು ಪಡಿಸುತ್ತಾ ಹೋಗುತ್ತಾನೆ. ಜೊತೆಗೆ ಪಾತ್ರಗಳನ್ನು ಡೈಲ್ಯೂಟ್ ಮಾಡುತ್ತಾನೆ. ಇಲ್ಲಿ ನಟರ ಮೂಲಕ ದೃಶ್ಯಗಳನ್ನು ಕಟ್ಟಿಕೊಡುವ ಬದಲಾಗಿ ರಂಗತಂತ್ರಗಳ ಮೂಲಕ ದೃಶ್ಯಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಈ ತಂತ್ರ ಈ ನಾಟಕದ ಮಟ್ಟಿಗೆ ಯಶಸ್ವಿಯಾಗಿದೆಯಾದರೂ ನಾಟಕದ ಕಥೆಯನ್ನು, ಕಥೆಯೊಳಗಿನ ದೃಶ್ಯಗಳನ್ನು, ದೃಶ್ಯದೊಳಗಿನ ನಟರನ್ನು ಅವಜ್ಞೆಗೊಳಿಸಿದಂತಿದೆ.
ಈ ನಾಟಕದಲ್ಲಿ ಎಲ್ಲವನ್ನೂ ಮಿತಿಗೊಳಿಸಲಾಗಿದೆ. ಸರಳ ಹಾಗೂ ಅಗತ್ಯವಿರುವಷ್ಟೇ ಕಾಸ್ಟೂಮ್ಸಗಳನ್ನು ಬಳಸಲಾಗಿದೆ. ಬೆಳಕು (ಮುಸ್ತಪಾ) ದೃಶ್ಯವನ್ನು ಬೆಳಗಲು ಅಗತ್ಯವಿರುವುದಕ್ಕಿಂತಲೂ ಕಡಿಮೆ ಇದೆ. ಹೀಗಾಗಿ ಹಲವು ಸಲ ನಟರ ಮುಖದ ಭಾವನೆಗಳೇ ನಸುಕತ್ತಲೆಯಲ್ಲಿ ಕಾಣದಾಗಿದೆ. ಪ್ರಸಾಧನ ಎನ್ನುವುದಂತೂ ಯಾವ ಪಾತ್ರದ ಮುಖದ ಮೇಲೂ ಕಾಣಲೇ ಇಲ್ಲ. ಹಿನ್ನೆಲೆ ಸಂಗೀತ ಇದೆಯಾದರೂ ಮೂಡ್ ಹುಟ್ಟಿಸಲು ಸಹಕಾರಿಯಾಗಲಿಲ್ಲ. ಕನಿಷ್ಟ ರಂಗ ಪರಿಕರಗಳನ್ನು ಬಳಸಲಾಗಿದೆ. ಕತ್ತಿ ಇರಬಹುದಾದ ಕೈಗಳಲಿ ಕೋಲಿದೆ. ಮುಖ ಇರಬಹುದಾದ ಪಾತ್ರಗಳಲಿ ಮುಖವಾಡವಿದೆ. ನಾಲ್ಕು ಚಿಕ್ಕ ಬಾಕ್ಸ ಹಾಗೂ ಒಂದು ದೊಡ್ಡ ಬಾಕ್ಸ ಬಿಟ್ಟರೆ ಬೇರೆ ರಂಗ ವಿನ್ಯಾಸ ಎನ್ನುವುದೇನೂ ಇಲ್ಲವೇ ಇಲ್ಲ. ಈ ಎಲ್ಲಾ ಮಿತಿಗಳನ್ನೇ ಬಳಸಿಕೊಂಡು, ನಟರನ್ನೇ ಪರಿಕರಗಳನ್ನಾಗಿಸಿಕೊಂಡು ಸೊಗಸಾಗಿ ದೃಶ್ಯ ಸಂಯೋಜನೆ ಮಾಡಲಾಗಿದೆ.
ಈಡಿಪಸ್ ಪಾತ್ರದಲ್ಲಿ ಮೈಕೋ ಶಿವಶಂಕರ್ ತಮ್ಮೆಲ್ಲಾ ಶ್ರಮವನ್ನು ಧಾರೆಯೆರೆದಿದ್ದಾರೆ. ಸತೀಶ್ ತಮಗೆ
ಸಿಕ್ಕಷ್ಟೇ ಅಭಿನಯದ ಅವಕಾಶವನ್ನು ಸೊಗಸಾಗಿ ನಿರ್ವಹಿಸಿದ್ದಾರೆ. ಗುಂಪಿನಲ್ಲಿರುವ ಒಂದಿಬ್ಬರು ನಟರು ನಟನೆ ಹಾಗೂ ಸಂಭಾಷಣೆಯಲ್ಲಿ ಇನ್ನೂ ಹಿಡಿತ ಸಾಧಿಸಬೇಕಿದೆ. ಜೊಕಾಸ್ತಾ ಪಾತ್ರದಲ್ಲಿ ನಟಿಸಿದ ರೇಣುಕಾ ಇನ್ನೂ ನಟನೆಯಲ್ಲಿ ಪಳಗಬೇಕಿದೆ. ಜೊಕಾಸ್ತಾ ಪಾತ್ರಕ್ಕೆ ಪಾತ್ರೋಚಿತ ಮೇಕಪ್ ಬೇಕಿತ್ತು. ಯಾಕೆಂದರೆ ಆಕೆ ಈಡಿಪಸ್ಗೆ ಕೇವಲ ಹೆಂಡತಿ ಮಾತ್ರವಲ್ಲ ತಾಯಿಯೂ ಆಗಿದ್ದಾಳೆ. ತಾಯಿ ಮಗನ ನಡುವಿನ ವಯಸ್ಸಿನ ಬೇಧವನ್ನಾದರೂ ತೋರಿಸಬೇಕಾಗಿತ್ತು. ಆದರೆ ಈಡಿಪಸ್ ಪಾತ್ರದಾರಿಯ ಮಗಳ ಮಯಸ್ಸಿನಂತೆ ಕಾಣುವ ಹುಡುಗಿಗೆ ಆತನ ತಾಯಿಯಾಗಿಸಿದ್ದು ಆಭಾಸಕಾರಿಯಾಗಿದೆ. ಜೊತೆಗೆ ಹೆಂಡತಿಯಾದವಳು ರಾಜನಿಗೆ ಮರ್ಯಾದೆಯನ್ನು ಕೊಡದೇ ನಾಚಿಕೆಯಾಗಬೇಕು ಎಂದು ಹೀಯಾಳಿಸುವುದು ಪಾತ್ರೋಚಿತವೆನ್ನಿಸುವಂತಿಲ್ಲ.
ಪ್ರಸ್ತುತ ಕನ್ನಡ ರಂಗಭೂಮಿಯಲ್ಲಿ ವಿಭಿನ್ನವಾಗಿ ನಾಟಕವನ್ನು ಕಟ್ಟಿಕೊಡುವ ಕೆಲವೇ ಕೆಲವು ನಿರ್ದೇಶಕರುಗಳಲ್ಲಿ ಜೋಸೆಫ್ ಜಾನ್ ಒಬ್ಬರು. ಇವರ ಸೃಜನಶೀಲತೆಗೆ ಎರಡು ಮಾತಿಲ್ಲ. ನಾಟಕಗಳಲ್ಲಿ ಪ್ರಯೋಗಶೀಲತೆಗೆ ಜೋಸೆಫ್ರವರ ಮೊದಲ ಆದ್ಯತೆ. ಯಾವುದೇ ನಾಟಕವನ್ನು ತೆಗೆದುಕೊಳ್ಳಲಿ ಅಲ್ಲಿ ತಮ್ಮ ಛಾಪನ್ನು ಮೂಡಿಸುತ್ತಾರೆ. ವಿಭಿನ್ನ ರೀತಿಯಲ್ಲಿ ಆಲೋಚಿಸುತ್ತಾರೆ. ನೀನಾಸಂ ರಂಗತರಬೇತಿಯ ಸಕಲ ಪಟ್ಟುಗಳನ್ನು ಅರಗಿಸಿಕೊಂಡು ತಮ್ಮದೆ ಆದ ನಿರ್ದೇಶನ ಶೈಲಿಯನ್ನು ರೂಢಿಸಿಕೊಂಡಿದ್ದಾರೆ. ಒಂದಕ್ಕಿಂತ ಒಂದು ವಿಭಿನ್ನ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಆದರೆ ಅದ್ಯಾಕೋ ‘ದೊರೆ ಈಡಿಪಸ್’ ಅವರಿಗೆ ದಕ್ಕಿಲ್ಲ. ರಂಗತಂತ್ರಗಳಲ್ಲಿ ಗೆದ್ದರಾದರೂ ಈಡಿಪಸ್ನನ್ನು ನೋಡುಗರಿಗೆ ಸಂವಹನ ಮಾಡಿಸಲು ಅವರಿಗೆ ಸಾಧ್ಯವಾಗಿಲ್ಲ. ಕಥಾನಕವನ್ನು ನಿರ್ಲಕ್ಷಿಸಿ ಕೇವಲ ವಿಭಿನ್ನ ನಿರೂಪನಾ ಶೈಲಿಯಿಂದ ಮಾತ್ರ ನಾಟಕವನ್ನು ಪ್ರೇಕ್ಷಕರಿಗೆ ತಲುಪಿಸುವುದು ಅಸಾಧ್ಯವೆನ್ನುವುದನ್ನು ಈ ನಾಟಕ ತೋರಿಸಿಕೊಟ್ಟಿದೆ. ಇಡೀ ನಾಟಕ ಕಣ್ಣಿಗೆ ಆನಂದವನ್ನುಂಟು ಮಾಡುತ್ತದೆಯೇ ಹೊರತು ನೋಡುಗರ ಅಂತರಂಗಕ್ಕಿಳಿದು ಅನುಭೂತಿಯನ್ನು ಕೊಡುವುದಿಲ್ಲ. ಈ ಈಡಿಪಸ್ ಕೇವಲ ಮೆದುಳಿಗೆ ತಲುಪುತ್ತಾನೆಯೇ ಹೊರತು ಹೃದಯಕ್ಕಿಳಿಯುವುದಿಲ್ಲ. ಯಾವ ನಾಟಕವು ಪ್ರೇಕ್ಷಕನಲ್ಲಿ ರಸೋತ್ಪಾದನೆಯನ್ನುಂಟು ಮಾಡುವುದಿಲ್ಲವೋ ಅದು ಗೆಲ್ಲುವುದಿಲ್ಲ. ಹೀಗಾಗಿ ‘ದೊರೆ ಈಡಿಪಸ್’ ನಾಟಕ ನೋಡುಗರನ್ನು ಕಾಡುವುದಿಲ್ಲ, ಆರ್ಧತೆಯನ್ನು ಹುಟ್ಟಿಸುವುದಿಲ್ಲ, ಕೊನೆಗೆ ದುರಂತ ಅಂತ್ಯ ಕಂಡ ಈಡಿಪಸ್‌ನ ಮೇಲೆ ಕನಿಷ್ಟ ಅನುಕಂಪವನ್ನೂ ಸೃಷ್ಟಿಸುವುದಿಲ್ಲ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ