ಬುಧವಾರ, ಫೆಬ್ರವರಿ 5, 2014

ರಂಗದ ಮೇಲೆ ತೇಜಸ್ವಿರವರ “ಪರಿಸರದ ಕಥೆಗಳು”


                         


                             ಪರಿಸರ ಎಂದರೆ ಮರ-ಗಿಡ,
                             ಬೆಟ್ಟ-ಗುಡ್ಡ, ಪ್ರಾಣಿ-ಪಕ್ಷಿ ಅಷ್ಟೇ ಅಲ್ಲ
                             ಅದರೊಟ್ಟಿಗೆ ಅಖಂಡವಾದ ಜಗತ್ತು,
                             ಅದರೊಳಗಿನ ಮನುಷ್ಯರು, ಮತ್ತು
                             ಅವರ ಆಲೋಚನೆ ಕ್ರಮಗಳು.....
          ಎನ್ನುವುದನ್ನು ಸಾಬೀತು ಪಡಿಸುವ ನಾಟಕವೇ ತೇಜಸ್ವಿ ಪರಿಸರ ಕಥಾ ಪ್ರಸಂಗ.

ಪೂರ್ಣಚಂದ್ರ ತೇಜಸ್ವಿರವರ ಕಥೆಗಳು ಓದುಗರಿಗೆ ವಿಶಿಷ್ಟ ಅನುಭೂತಿಯನ್ನು ಕೊಡುತ್ತವೆ. ಅವರ ಪರಿಸರದ ಕಥೆಗಳಂತೂ ಕಚಗುಳಿ ಇಡುತ್ತವೆ. ತೇಜಸ್ವಿಯವರು ತಾವು ಅನುಭವಿಸಿದ ಘಟನೆಗಳನ್ನು ವಿಡಂಬನಾತ್ಮಕವಾಗಿ ಕಥಾನಕ ರೂಪದಲ್ಲಿ ನಿರೂಪಿಸಿರುವ ರೀತಿಯಿಂದಾಗಿ ಅವುಗಳು ನಾಟಕವಾಗಿಸಲು ಸೂಕ್ತವೆನಿಸುತ್ತವೆ. .ನಾ.ರಾವ್ ಜಾದವ್ರವರು ತೇಜಸ್ವಿಯವರ ಕೆಲವು ಪರಿಸರದ ಕಥೆಗಳನ್ನು ಆಯ್ದು ಒಂದು ಬಂಧದಲ್ಲಿ ನೇಯ್ದು ರಂಗರೂಪಾಂತರಿಸಿ ತಮ್ಮ ರಂಗವಿಸ್ಮಯ ತಂಡಕ್ಕೆ ನಿರ್ದೇಶಿಸಿದ್ದಾರೆ.

ರವೀಂದ್ರ ಕಲಾಕ್ಷೇತ್ರ-50 ಸುವರ್ಣ ಸಂಭ್ರಮದಲಿ  ನಾಟಕ ಬೆಂಗಳೂರು ಆಯೋಜಿಸಿದ ಮೂರನೆಯ ಕಂತಿನ ನಾಟಕೋತ್ಸವದಲ್ಲಿ 2014, ಫೆಬ್ರವರಿ 5ರಂದು ತೇಜಸ್ವಿ ಪರಿಸರ ಕಥಾ ಪ್ರಸಂಗ ನಾಟಕವು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡಿತು.

ನಾಟಕದಲ್ಲಿ ಬಿಡಿ ಬಿಡಿ ಘಟನೆಗಳನ್ನು ಒಂದರ ನಂತರ ಒಂದು ಬರುವ ಹಾಗೆ ನಿರೂಪಿಸಲಾಗಿದೆ. ಇಡೀ ನಾಟಕ ಒಂದು ಕಥೆಯನ್ನು ಹೇಳದೇ ಕಥೆಗಾರನೊಬ್ಬನ ಅನುಭವದ ಘಟನೆಗಳನ್ನು ಕಟ್ಟಿಕೊಡುತ್ತದೆ. ಹೀಗಾಗಿ ಇದನ್ನು ವಿಭಿನ್ನ ಘಟನೆಗಳ ಸಂಗಮ ಎಂದುಕೊಳ್ಳಬಹುದು. ಲೇಖಕನನ್ನು ಕೇಂದ್ರವಾಗಿಟ್ಟುಕೊಂಡು ಆತನ ಅನುಭವಕ್ಕೆ ದಕ್ಕುವ ಪಾತ್ರಗಳು ಸೃಷ್ಟಿಗೊಂಡಿವೆ. ನಾಟಕದಲ್ಲಿ ಬರುವ ಪಾತ್ರಗಳೆಲ್ಲಾ ದುಡಿಯುವ ವರ್ಗದವುಗಳು. ಕೆಳವರ್ಗದ ಜನರ ಜೀವನ, ನಂಬಿಕೆ, ಆಚರಣೆ, ತಾಪತ್ರಯಗಳನ್ನು ಹಾಸ್ಯರಸಾಯನದ ಮೂಲಕ ಮಾರ್ಮಿಕವಾಗಿ ತೋರಿಸುವ ಪ್ರಯತ್ನ ನಾಟಕದಲ್ಲಿದೆ.

 ಕೆಲಸ ಪೂರ್ಣಗೊಳಿಸದೇ ಹಣ ತೆಗೆದುಕೊಂಡು ಸತಾಯಿಸುವ ಗಾರೆ ಸೀನ, ನಾಯಿ ಕಿವಿ ಕಿತಾಪತಿಗೆ ತನ್ನದೇ ರೀತಿಯ ಪರಿಹಾರ ಕಂಡುಕೊಳ್ಳುವ ಪ್ಯಾರ, ತೋಟ ಕಾಯಲು ದೇವತೆ ಚೌಡಮ್ಮನಿಗೆ ಸಹಗುತ್ತಿಗೆ ಕೊಟ್ಟು ಮಲಗುವ ಮಾರ, ಮಂಗಗಳನ್ನು ಹಿಡಿದು ಬಿಡಲು ಹೋಗಿ ತಾನೆ ಬೋನಿನಲ್ಲಿ ಬಂಧಿಯಾಗಿ ಪರದಾಡುವ ಗಾಡ್ಲಿ, ಇಂತಹ ವಿಚಿತ್ರ ಜನರೊಂದಿಗೆ ಪಜೀತಿ ಪಡುವ ಲೇಖಕ. ಎಲ್ಲಾ ಪಾತ್ರಗಳು ಪಡುವ ಪರದಾಟವನ್ನು ನೋಡುವುದೇ ಒಂದು ರೀತಿಯಲ್ಲಿ ಖುಷಿ. ಇದು ಹಾಸ್ಯಕ್ಕಾಗಿ ಹಾಸ್ಯ ನಾಟಕವೂ ಅಲ್ಲ, ಹಾಸ್ಯಪ್ರಧಾನ ನಾಟಕವೂ ಅಲ್ಲ. ಆದರೆ... ಬದುಕಿನಲ್ಲಿ ನಡೆಯಬಹುದಾದ ಸಣ್ಣ ಪುಟ್ಟ ಘಟನೆಗಳನ್ನು ನವೀರಾದ ಹಾಸ್ಯದ ಮೂಲಕ ತೋರಿಸುವ ಕ್ರಮ ನಿಜಕ್ಕೂ ಸೊಗಸು.

ಇಡೀ ನಾಟಕದಲ್ಲಿ ಜನಸಾಮಾನ್ಯರ ನಂಬಿಕೆ ಮತ್ತು ಮೂಡನಂಬಿಕೆಗಳನ್ನು ಮಾರ್ಮಿಕವಾಗಿ ತೋರಿಸಲಾಗಿದೆ. ಚಪ್ಪಲಿಗಳನ್ನು ಅದಲುಬದಲಾಗಿಟ್ಟರೆ ಅದು ದೆವ್ವದ ಚಪ್ಪಲಿಗಳೆಂದು ತಿಳಿದು ನಾಯಿಗಳು ಮುಟ್ಟುವುದಿಲ್ಲ ಎನ್ನುವುದು ಪ್ಯಾರನ ಸಿದ್ದಾಂತ, ಕೋತಿಗಳನ್ನು ಬೇರೆಯವರು ಕೊಂದರೆ ಪರವಾಗಿಲ್ಲ, ಕೋತಿಗಳು ಪರಸ್ಪರ ತಾವೆ ಕೊಂದುಕೊಳ್ಳುವಂತೆ ಪ್ರೇರೇಪಿಸಿದರೂ ಪರವಾಗಿಲ್ಲ, ಆದರೆ  ತಾನು ಮಾತ್ರ ಕೊಲ್ಲಬಾರದು ಯಾಕೆಂದರೆ ಕೋತಿಗಳು ಹನುಮಂತನ ಅವತಾರ ಎನ್ನುವುದು ಗಾಡ್ಲಿಯ ವೇದಾಂತ. ತೋಟದ ಮೂಲೆಯಲ್ಲಿರುವ ದೇವಿ ಚೌಡಮ್ಮನ ಮುಂದೆ ಅರಿಶಿನ ಕುಂಕುಮ ಚಿಲ್ಲರೆ ಕಾಸು ಹಾಕಿ ಯಾರಾದರೂ ಕಾಲಿಟ್ಟರೆ ಚೌಡಮ್ಮ ಶಾಪಕೊಡುತ್ತಾಳೆ ಎಂದು ನಂಬಿಸುವುದು ಮಾರನ ದಾವಂತ. ಎಲ್ಲಾ ಮೂಢನಂಬಿಕೆಗಳ ಪರಿಣಾಮಗಳನ್ನು ಅನುಭವಿಸುತ್ತಲೇ ಅವುಗಳ ಹಿಂದಿರುವ ತಂತ್ರಗಾರಿಕೆಯನ್ನು ಹೇಳುವ ಲೇಖಕ ದುಡಿಯುವ ವರ್ಗಗಳ ಮುಗ್ದತೆಯ ಹಿಂದಿರುವ ಮೌಡ್ಯವನ್ನು ಅನಾವರಣಗೊಳಿಸುತ್ತಾನೆ. ನಾಟಕದ ಉದ್ದೇಶವೂ ಅದೇ ಆಗಿದೆ

 ಮಾಸ್ಟರ್ ಹಿರಣ್ಣಯ್ಯನವರ ನಾಟಕಗಳಲ್ಲಿ ಅಕ್ಕಪಕ್ಕ ನಟರಿದ್ದರೂ ಅವರೆಲ್ಲಾ ನಗಣ್ಯರಾಗಿ ಹೇಗೆ ಹಿರಣ್ಣಯ್ಯರವರೊಬ್ಬರೇ  ನಾಟಕದಾದ್ಯಂತ ವಿಜ್ರಂಭಿಸುತ್ತಾರೋ ಹಾಗೆಯೇ ಪರಿಸರದ ಕಥಾಪ್ರಸಂಗದಲ್ಲೂ ಸಹ ಲೇಖಕ ತೇಜಸ್ವಿರವರ ಪಾತ್ರವನ್ನು ಮಾಡಿದ .ನಾ.ರಾವ್ ಜಾದವ್ರವರು ಇಡೀ ನಾಟಕದಾದ್ಯಂತ ಆವರಿಸಿಕೊಳ್ಳುತ್ತಾರೆ. ಕೇಂದ್ರ ಪಾತ್ರಕ್ಕೆ ಪೂರಕವಾಗಿ ಸಹಪಾತ್ರಗಳು ಬಂದು ಹೋಗುತ್ತವೆ. ಹೀಗಾಗಿ ಇದೊಂದು ಏಕ ಪಾತ್ರ ಕೇಂದ್ರಿತ ನಾಟಕವಾಗಿದೆ. ಬೇಕಾದಷ್ಟು ಪೂರಕ ಪಾತ್ರಗಳಿದ್ದರೂ ಅವುಗಳಿಗೆ ಪ್ರಾಮುಖ್ಯತೆ ಎನ್ನುವುದೇ ಇಲ್ಲ. ಜಾದವ್ರವರಿಲ್ಲದ ಯಾವ ದೃಶ್ಯವೂ ನಾಟಕದಲ್ಲಿಲ್ಲ. ಹೀಗಾಗಿ ತಮಗಾಗಿಯೇ ನಾಟಕವನ್ನು ಜಾದವ್ರವರು ಬರೆದು ನಿರ್ದೇಶಿಸಿಕೊಂಡಿದ್ದಾರಾ ಎನ್ನುವ ಸಂದೇಹ ಬಾರದಿರದು.


ತಮ್ಮನ್ನು ತಾವೇ ನಿರ್ದೇಶಿಸಿಕೊಳ್ಳುವ ದಾವಂತದಲ್ಲಿ ಕೆಲವು ರಂಗತಂತ್ರಗಳನ್ನು ಸಮರ್ಪಕವಾಗಿ ಬಳಸುವ ನಿಟ್ಟಿನಲ್ಲಿ ಜಾದವ್ರವರು ಗಮನ ಕೊಟ್ಟಂತಿಲ್ಲ. ಬ್ಲಾಕಿಂಗ್ ಮತ್ತು  ಮೂವಮೆಂಟ್ಗಳಲ್ಲಿ ಇನ್ನೂ ಕೆಲಸ ಮಾಡಬೇಕಾಗಿತ್ತು. ಹತ್ತಡಿ ಅಂತರದಲ್ಲಿ ಕುಳಿತೇ ಲೇಖಕ ಮತ್ತು ಗಾಡ್ಲಿ ಪಾತ್ರ ಸುದೀರ್ಘವಾಗಿ ಸಂಭಾಷಿಸುವುದು, ಹಲವು ಪಾತ್ರಗಳು ಲೈನಾಗಿ ನಿಂತು ಚಲನರಹಿತವಾಗಿ ಮಾತಾಡುವುದು ಸರಿ ಎನ್ನಿಸುವಂತಿಲ್ಲ. ಹೀಗಾದಾಗ ಒಂದು ರೀತಿಯಲ್ಲಿ ರೇಡಿಯೋ ನಾಟಕವಾಗುವ ಅಪಾಯವೇ ಹೆಚ್ಚು.

ಇಡೀ ನಾಟಕ ಮಾತಿನ ಮೇಲೆ ನಿಂತಿದೆ. ನಟನೆಗೆ ಅವಕಾಶವೇ ಇಲ್ಲದಷ್ಟು ಮಾತುಗಳು. ಅದರಲ್ಲೂ ಮುಕ್ಕಾಲು ಪಾಲು ಮಾತುಗಳನ್ನಾಡಿದ್ದು ಜಾದವ್ರವರೇ. ಒಂದು ಪಾತ್ರ ಒಂದೇ ರೀತಿ ನಾಟಕದಾದ್ಯಂತ ಮಾತಾಡಿದರೆ ಏಕತಾನತೆ ಎನ್ನಿಸುತ್ತದೆ. ದ್ವನಿಯ ಬಳಕೆಯ ಗುಟ್ಟುಗಳನ್ನು ಅರಿತಿರುವ ಜಾದವ್ರವರು ಸಮರ್ಥವಾಗಿ ಭಾಷೆಯ ಬಳಕೆಯ ಸಾಧ್ಯತೆಗಳನ್ನು ಬಳಸಿದ್ದರೆ ಏಕತಾನತೆಯನ್ನು ನಿವಾರಿಸಿ ಕೊಳ್ಳಬಹುದಾಗಿತ್ತು. ಲೇಖಕ ಪಾತ್ರ ಮಿಕ್ಕೆಲ್ಲಾ ಪಾತ್ರದಾರಿಗಳನ್ನು ಬಾರಯ್ಯಾ ಹೋಗಯ್ಯಾ ಎಂದು ಏಕವಚನದಲ್ಲಿ ಮಾತಾಡಿಸುವುದು ಅಸಮಂಜಸವೆನ್ನಿಸುತ್ತದೆ. ತನ್ನ ಆಳುಗಳಿಗಾದರೆ ಹಾಗೆ ಕರೆಯಲಿ, ಆದರೆ ಹಾದಿಯಲ್ಲಿ ಹೋಗುವ ಅಪರಿಚಿತ ಪಾತ್ರಗಳನ್ನೂ ಹಾಗೇ ಕೂಲಿಗಳನ್ನು ಕರೆಯುವ ಹಾಗೆ ಕರೆದು ಮರ್ಯಾದೆ ಕನಿಷ್ಟ ಮರ್ಯಾದೆ ಕೊಡದೇ ಮಾತನಾಡಿಸುವುದು ಪಾತ್ರೋಚಿತ ಎನ್ನಿಸುವುದಿಲ್ಲ.  ಲೇಖಕ ಎಂದ ಕೂಡಲೇ ಯಾರು ಬೇಕಾದವರನ್ನು ಹೇಗೆ ಬೇಕಾದ ಹಾಗೆ ಕರೆಯಬಹುದು ಎನ್ನುವುದು ಸರಿಎನ್ನಿಸುವುದಿಲ್ಲ. ಬಹುಷಃ ನಿರ್ದೇಶಕರೇ ಪಾತ್ರದಾರಿಯಾದರೆ ಸಮಸ್ಯೆ ತೋರುತ್ತದೆ. ಯಾಕೆಂದರೆ ಅವರಿಗೆ ಬೇರೆಯವರನ್ನು ತಿದ್ದುವುದು ತಿಳಿಯುತ್ತದೆಯೇ ಹೊರತು ತಮ್ಮನ್ನು ತಾವು ತಿದ್ದುವುದು ಕಷ್ಟವಾಗುತ್ತದೆ. ತಾವು ಮಾಡುವುದೇ ಸರಿ ಎನ್ನುವ ಭಾವನೆಯೂ ಬರುತ್ತದೆ. ಇದನ್ನು ಮೀರಿ ಜಾದವ್ರವರು ಪಾತ್ರೋಚಿತವಾಗಿ ಅಭಿನಯಿಸಿದರೆ ನಾಟಕ ವಾಸ್ತವಕ್ಕೆ ಹತ್ತಿರವೆನ್ನಿಸುತ್ತದೆ.

ಜಾದವ್ರವರನ್ನು ಹೊರತುಪಡಿಸಿ ಮಿಕ್ಕೆಲ್ಲಾ ಪಾತ್ರದಾರಿಗಳು ಮೊಟ್ಟ ಮೊದಲ ಸಲ ನಟಿಸಿದವರು. ಇನ್ನೂ ನಟನೆಯಲ್ಲಿ ಪಳಗಬೇಕಿದೆ. ಮಾತಿನ ಪಟ್ಟುಗಳನ್ನು ರೂಢಿಸಿಕೊಳ್ಳಬೇಕಿದೆ. ಪ್ರದರ್ಶನದಿಂದ ಪ್ರದರ್ಶನಕ್ಕೆ ತಮ್ಮ ಸಾಮಥ್ಯವನ್ನು ಹೆಚ್ಚಿಸಿಕೊಳ್ಳಬೇಕಿದೆ.  ನಟನೆಯ ಗಂಧಗಾಳಿ ಗೊತ್ತಿಲ್ಲದವರನ್ನೂ ಕಲೆಹಾಕಿ ತರಬೇತುಗೊಳಿಸಿ ನಾಟಕ ಕಟ್ಟಿಕೊಟ್ಟ ಜಾದವ್ ಅಭಿನಂದನಾರ್ಹರು.
   
ಹೇಳಿಕೊಳ್ಳುವಂತಹ ಸೆಟ್ ಪ್ರಾಪರ್ಟಿಗಳು ಇಲ್ಲದ್ದರಿಂದ, ದೃಶ್ಯವೈಭವ ಕಟ್ಟಿಕೊಡಲು   ನಾಟಕದಲ್ಲಿ ಅವಕಾಶಗಳು ಇಲ್ಲದ್ದರಿಂದ, ಇಡೀ ವೇದಿಕೆ ಬರಿದಾದಂತೆನಿಸಿತು. ಕಲಾಕ್ಷೇತ್ರದಂತಹ ವಿಶಾಲ ವೇದಿಕೆಯಲ್ಲಿ ನಾಟಕ ಮಾಡುವುದಕ್ಕಿಂತಲೂ ಆಪ್ತರಂಗಮಂದಿರದಲ್ಲಿ ಪ್ರದರ್ಶಿಸಿದರೆ ಉತ್ತಮ. ಸಂಭಾಷಣಾ ಪ್ರಧಾನ ನಾಟಕಕ್ಕೆ ಹಾಡಿನ ಅಗತ್ಯವಿರಲಿಲ್ಲ. ಆದರೂ ಬ್ಲಾಕ್ಔಟ್ಗಳಲ್ಲಿ ನಾಟಕದ ಶೀರ್ಷಿಕೆಯನ್ನೇ ಹಾಡಾಗಿ ಪುನರಾವರ್ತಿಸಿರುವುದು ಏಕತಾನತೆಗೆ ಕಾರಣವಾಯಿತೇ ಹೊರತು ನಾಟಕಕ್ಕೆ ಏನೂ ಪ್ರಯೋಜನವಾಗಲಿಲ್ಲ. ಪ್ರಭಾಕರ ಬಾಬುರವರ ವಿನ್ಯಾಸದ ಬೆಳಕು ದೃಶ್ಯಗಳನ್ನು ಕಾಣಿಸಲು ಬೇಕಾದಷ್ಟಿತ್ತು ಆದರೆ ದೃಶ್ಯ ಮುಗಿದು ಪಾತ್ರಗಳು ಸ್ಟಿಲ್ ಆದ ಬಳಿಕ ನಿಧಾನವಾಗಿ ಬೆಳಕು ಪೇಡ್ ಔಟ್ ಆಗುವುದು ಆಭಾಸಕಾರಿ ಎಣಿಸುವಂತಿತ್ತು.


ನಾಟಕ ಮುಗಿದ ನಂತರ ಕಥೆಗಾರ ಮತ್ತೆ ಬರುತ್ತೇನೆಂದು ಹೊರಟುಹೋದ ಎನ್ನುವ ಹಾಡಿನ ಸಾಲು ಶೋಕಗೀತೆಯಂತೆ ಕೇಳಿಸಲಾಗಿದೆ. ಕಥೆಗಾರ ಕಥೆ ಮುಗಿಸಿದ್ದರಲ್ಲಿ, ಮತ್ತೆ ಇನ್ನೊಂದು ಕಥೆ ಹೇಳಲು ಬರುತ್ತೇನೆ ಎಂದು ಹೋದಲ್ಲಿ, ಶೋಕ ಎಲ್ಲಿಂದ ಬಂತು. ಶೋಕದ ಸನ್ನಿವೇಶವೇ ಇಲ್ಲದಿದ್ದರೂ ಯಾಕೆ ಶೋಕ ಗೀತೆ? ಕೊಟ್ಟ ಕೊನೆಗೆ ನಾಟಕದ ಎಲ್ಲಾ ಪಾತ್ರಗಳು ಹಣತೆಯನ್ನು ಹೊತ್ತು ತಂದು ವೇದಿಕೆಯ ಮುಂಭಾಗದಲ್ಲಿಡುತ್ತವೆ. ಅದಕ್ಕೂ ನಾಟಕಕ್ಕೂ ಸಾಂಕೇತಿಕವಾಗಿಯಾದರೂ ಯಾವುದೇ ಸಂಬಂಧವಿಲ್ಲ. ನಾಟಕಕ್ಕೆ ಪೂರಕವಲ್ಲದ ಹಣತೆ ದೃಶ್ಯವೇ ಅನಗತ್ಯವಾಗಿತ್ತು.

ಒಟ್ಟಾರೆಯಾಗಿ ನಾಟಕವನ್ನು ಇನ್ನೊಮ್ಮೆ ಮರುಪರಿಶೀಲಿಸಿ ಅನಗತ್ಯವೆನ್ನಿಸುವುದನ್ನೆಲ್ಲಾ ಕೈಬಿಟ್ಟು ಮರು ನಿರ್ಮಿಸಿದರೆ ಉತ್ತಮ ನಾಟಕವನ್ನು ಕೊಡಬಹುದಾಗಿದೆ. ಈಗ ಇರುವಂತೆಯೇ ಪ್ರದರ್ಶಿಸಿದರೆ ಹತ್ತರಲ್ಲಿ ಹನ್ನೊಂದನೆಯದಾಗುತ್ತದಷ್ಟೆ. ಸೂಕ್ಷ್ಮ ಪ್ರಜ್ಞೆಯ ರಂಗಕರ್ಮಿ .ನಾ.ರಾವ್ ಜಾದವ್ರವರು ಇದನ್ನು ಅರ್ಥ ಮಾಡಿಕೊಂಡರೆ ಉತ್ತಮ ಯಶಸ್ವಿ  ನಾಟಕಗಳನ್ನು ಕೊಡಬಹುದಾಗಿದೆ.

                                      -ಶಶಿಕಾಂತ ಯಡಹಳ್ಳಿ                 
               


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ