ಮಂಗಳವಾರ, ಡಿಸೆಂಬರ್ 17, 2013

ರಂಗಭೀಷ್ಮ ಎ.ಎಸ್.ಮೂರ್ತಿಯವರಿಗೆ ರಂಗನಮನ :




 
                                                                            
 ಕನ್ನಡ ರಂಗಭೂಮಿಯ ಆಧಾರ ಸ್ಥಂಭವೊಂದು ಕಣ್ಮರೆಯಾಗಿ ಇಂದಿಗೆ ಒಂದು ವರ್ಷವಾಯಿತು. ಹವ್ಯಾಸಿ ರಂಗಭೂಮಿ ಮತ್ತು ಬೀದಿರಂಗಭೂಮಿಯ ಬೆಳವಣಿಗೆಗೆ  ಅಪಾರವಾದ  ಹಾಗೂ ವಿಭಿನ್ನವಾದ ಕೊಡುಗೆಂiiನ್ನು ನೀಡಿದ ಹಿರಿಯ ಜೀವ ಅಸ್ಥಂಗತವಾಗಿ ಒಂದು ವರ್ಷ ಕಳೆದರೂ ಅವರಿನ್ನು ನಮ್ಮ ನಡುವೆ ಇದ್ದಾರೆನ್ನುವ ಭಾವನೆ. ಲಲಿತಕಲಾ ಮಾಧ್ಯಮ, ಪ್ರದರ್ಶನಕಲೆ, ಶೃವ್ಯ ಮಾಧ್ಯಮ, ದೃಶ್ಯಮಾಧ್ಯಮ, ಅಕ್ಷರ ಮಾಧ್ಯಮ... ಹೀಗೆ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ರಂಗದಲ್ಲಿ  ವಿಶಿಷ್ಟ  ಪ್ರತಿಭೆಯನ್ನು ಮೆರೆದ .ಎಸ್.ಮೂರ್ತಿಗಳು (.ಎಸ್.ಎಂ) 2012 ಡಿಸೆಂಬರ್ 18ರಂದು ಚಿರನಿದ್ರೆಗೆ ಜಾರಿದ್ದರು.  83 ವರ್ಷಗಳ ಕಾಲ ತಮ್ಮ ಬಹುಮುಖಿ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿ ನೇಪತ್ಯಕ್ಕೆ ಸೇರಿಹೋದರು.


ಮೂರ್ತಿಗಳ ನಿರ್ಗಮನದಿಂದ ಸಾಂಸ್ಕೃತಿಕ ಕ್ಷೇತ್ರಕ್ಕೆ ಅಪಾರವಾದ ನಷ್ಟವಾಗಿದೆ, ರಂಗಭೂಮಿಯಲ್ಲಿ ಶೂನ್ಯ ಸೃಷ್ಟಿಯಾಗಿದೆ ಎಂಬ ಕಥಾಕಥಿತ ಕ್ಲೀಷೆಯ ಅತಿಶಯದ ಮಾತುಗಳನ್ನು ಮೀರಿ ನಿಂತವರು .ಎಸ್.ಎಂ. ಯಾಕೆಂದರೆ ಅವರ ಅಗಲಿಕೆಯಿಂದ ಸೃಷ್ಟಿಯಾಗಬಹುದಾಗಿದ್ದ ಶೂನ್ಯವನ್ನು ತುಂಬಲು ದೊಡ್ಡದಾದ ಶಿಷ್ಯ ಪಡೆಯನ್ನೇ ತರಬೇತುಗೊಳಿಸಿದ್ದ ಮೂರ್ತಿಗಳು ತಮ್ಮ ಕುಟುಂಬ ಪರಿವಾರವನ್ನು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಕ್ರೀಯಗೊಳಿಸಿದ್ದರು. ಅವರು ಕಟ್ಟಿ ಪೋಷಿಸಿ ಬೆಳೆಸಿದ ಚಿತ್ರಾ, ಅಭಿನಯ ತರಂಗ, ಕಲಾಮಂದಿರ, ಬಿಂಬ.... ಮುಂತಾದ ಸಾಂಸ್ಕೃತಿಕ ದ್ವೀಪ ಸಮೂಹಗಳು ಮೂರ್ತಿಯವರು ಇರುವಾಗಲೂ ಮತ್ತು ಈಗ ಇಲ್ಲದಾಗಿರುವಾಗಲೂ ಸಕ್ರೀಯವಾಗಿವೆ ಹಾಗೂ ನಿರಂತರ ಕಾರ್ಯಚಟುವಟಿಕೆಗಳನ್ನು ನಡೆಸುತ್ತಲೇ ಇರುತ್ತವೆ ಎಂಬುದೇ .ಎಸ್.ಎಂ ರವರ  ದೂರದೃಷ್ಟಿಗೆ ಸಾಕ್ಷಿ.  ಹಾಗಾಗಿ ಮೂರ್ತಿಯವರ ಅಗಲಿಕೆ ಆತ್ಮೀಯರಿಗೆ ದುಃಖವನ್ನು ತರಬಹುದೇ ಹೊರತು ನಷ್ಟವನ್ನಂತೂ ತರಲು ಸಾಧ್ಯವಿಲ್ಲ. ಶೂನ್ಯವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಅವರು  ತಮ್ಮ ನಿರ್ಗಮನಕ್ಕೆ ಮುಂಚೆಯೇ ತಾವು ಕಟ್ಟಿದ ಸಾಂಸ್ಕೃತಿಕ ದ್ವೀಪ ಸಾಮ್ರಾಜ್ಯಕ್ಕೆ ಉತ್ತರಾಧಿಕಾರಿಗಳನ್ನು ಸೃಷ್ಟಿಸಿ ಪ್ರತಿಯೊಬ್ಬರಿಗೂ ಒಂದೊಂದು  ಕೆಲಸವನ್ನು ವಹಿಸಿ, ದಶಕಗಳಿಂದ ಮೇಲ್ವಿಚಾರಣೆ ನಡೆಸಿ ಇನ್ನು ನನ್ನ ಕೆಲಸ ಮುಗಿಯಿತು, ನನಗೆ ಚಿರವಿಶ್ರಾಂತಿ ಬೇಕು ಎಂದುಕೊಂಡು ನಿರ್ಗಮಿಸಿದ ರಂಗಭೀಷ್ಮ  .ಎಸ್.ಮೂರ್ತಿಯವರಿಗೆ ರಂಗನಮನ.

ಸಾಂಸ್ಕೃತಿಕ ಲೋಕದಲ್ಲಿ ವ್ಯಕ್ತಿಗತವಾಗಿ ಬೆಳೆದವರಿದ್ದಾರೆ, ವ್ಯಯಕ್ತಿಕವಾಗಿ ದೊಡ್ಡ ಹೆಸರನ್ನೂ ಮಾಡಿ ಮರೆಯಾದವರಿದ್ದಾರೆ. ರಂಗ ತಂಡ ಕಟ್ಟಿ ಉತ್ತಮ ನಾಟಕ ಕೊಟ್ಟವರೂ ಇದ್ದಾರೆ. ಆದರೆ.... .ಎಸ್.ಎಂ ರವರು ತಾವು ವಾಸಿಸುವ ನೆಲೆಯನ್ನೇ ರಂಗವೇದಿಕೆಯನ್ನಾಗಿಸಿದವರು, ಪತ್ನಿ, ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ... ಹೀಗೆ ತನ್ನ ಇಡೀ ಕುಟುಂಬ ಪರಿವಾರವನ್ನೇ ರಂಗಭೂಮಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡವರು, ಸಾಂಸ್ಕೃತಿಕ ಚಟುವಟಿಕೆಗಳನ್ನು ಪೂರ್ಣಾವಧಿಯಾಗಿ ನಿರ್ವಹಿಸಿದವರು ಹವ್ಯಾಸಿ ರಂಗಭೂಮಿಯ ಪರಂಪರೆಯಲ್ಲಿ .ಎಸ್.ಎಂ ಬಿಟ್ಟರೆ ಬೇರೊಬ್ಬರಿಲ್ಲ.



ರಂಗಭೂಮಿಯ ಹೆಸರೇಳಿಕೊಂಡು ಸರಕಾರಿ ಇಲಾಖೆಗಳ ಅನುದಾನವನ್ನು ಪಡೆದು  ಆಸ್ತಿಗಳಿಸಿದ ಅನೇಕರು ರಂಗಭೂಮಿಯಲ್ಲಿ ಈಗಲೂ ಸಕ್ರೀಯವಾಗಿದ್ದಾರೆ. ಹಣ ಮಾಡುವುದೇ ಅಂತಹ ಸಾಂಸ್ಕೃತಿಕ ದಲ್ಲಾಳಿಗಳ ಉದ್ದೇಶವಾಗಿದೆ. ಬಹುಷ: ಮನಸ್ಸು ಮಲಿನ ಮಾಡಿಕೊಂಡಿದ್ದರೆ ಮೂರ್ತಿಗಳು ತಮ್ಮ ವರ್ಚಸ್ಸನ್ನು, ಪತ್ರಕರ್ತನ ಲೇಖನಿಯ ತಾಕತ್ತನ್ನು ಹಣ ಮಾಡುವುದಕ್ಕೆ ಬಳಸಿಕೊಂಡಿದ್ದರೆ ಅಪಾರ ಸಂಪತ್ತನ್ನು ಕೂಡಿಟ್ಟು ಮನೆ ಮೇಲೆ ಮನೆಗಳನ್ನು ಕಟ್ಟಬಹುದಾಗಿತ್ತೇನೋ?. ಕಾರುಗಳಲ್ಲಿ ಕಾರುಬಾರು ಮಾಡಬಹುದಿತ್ತೇನೋ?. ಆದರೆ.... ರಂಗಕ್ರಿಯೆಯಿಂದ ಬಂದ ಹಣವನ್ನು ಮತ್ತೆ  ರಂಗಭೂಮಿಗೆ ತೊಡಗಿಸಿ ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದು  ಜೀವನವನ್ನು ಸಾರ್ಥಕವಾಗಿಸಿಕೊಂಡರು.  .ಎಸ್.ಎಂ  ರವರಿಗೆ ಓಡಿಸುವ ತಾಕತ್ತಿರುವವರೆಗೂ ಅಪ್ಪನ ಕಾಲದ ಪುರಾತನ ಬೈಕನ್ನೇ ಓಡಿಸುತ್ತಿದ್ದರು. ಕಾರ್ಯಕ್ರಮಗಳಿಗೆ, ಪ್ರೆಸ್ ಮೀಟ್ಗಳಿಗೆ ಹೋಗಬೇಕಾದಾಗ ಅವರಿವರನ್ನು ಡ್ರಾಪ್ ಕೇಳುತ್ತಿದ್ದರು. ಕೊನೆಕೊನೆಗೆ ಆಟೋದಲ್ಲೇ ಅವರ ಸಂಚಾರ ಸಾಗುತ್ತಿತ್ತು.

ಮೂರ್ತಿಗಳು ಆಸ್ತಿ ಮಾಡಿಕೊಂಡಿಲ್ಲವೆಂದಲ್ಲ. ಅನೇಕ ಆಸ್ತಿಗಳಿವೆ. ಆದರೆ ಅವೆಲ್ಲಾ ರಂಗ ಸ್ಥಾವರಗಳು. ನಾಟಕ, ಬೀದಿನಾಟಕ ಪ್ರದರ್ಶನಕ್ಕೆಂದೇ ಚಿತ್ರಾ ತಂಡವನ್ನು ಕಟ್ಟಿ ಕಳೆದ ಆರು ದಶಕಗಳಿಂದ ನಾಡಿನಾಧ್ಯಂತ ಸಹಸ್ರಾರು  ನಾಟಕಗಳನ್ನಾಡಿಸಿದ್ದರು. ಅಭಿನಯ ತರಂಗ ರಂಗ ತರಬೇತಿ ಶಾಲೆಯನ್ನು ಕಳೆದ ಮೂರು ದಶಕಗಳಿಂದ ನಿರಂತರವಾಗಿ ನಡೆಸುತ್ತಾ ಸಹಸ್ರಾರು ಕಲಾವಿದರನ್ನು ತರಬೇತಿಗೊಳಿಸಿ ದೃಶ್ಯಮಾಧ್ಯಮಕ್ಕೆ ಅಗತ್ಯವಾದ ನುರಿತ ಕಲಾವಿದರ ಕೊರತೆಯನ್ನು ನೀಗಿಸಿದ್ದಾರೆ. ಪ್ರೇಮ್ ಎನ್ನುವ ಹೆಸರಲ್ಲಿ  ಪ್ರತಿ ವರ್ಷ ಕಾರ್ಯಾಗಾರವನ್ನು ನಡೆಸುತ್ತಾ ಸಿನೆಮಾ ನಟನೆ ಹಾಗೂ ತಂತ್ರಜ್ಞತೆ ಕುರಿತು ತರಬೇತಿಯನ್ನು ನೀಡುತ್ತಾ ಬಂದಿದ್ದಾರೆ. ಮೂರ್ತಿಯವರ ತಂದೆ ..ಸುಬ್ಬರಾವ್ರವರು ಕಟ್ಟಿದ್ದ ಕಲಾಮಂದಿರ ಚಿತ್ರಕಲಾ ಶಾಲೆಯನ್ನು ಪೋಷಿಸಿ ಬೆಳಸಿಕೊಂಡು ಬಂದಿದ್ದಾರೆ. ಮಕ್ಕಳಿಗಾಗಿಯೇ ಹನುಮಂತನಗರ ಬಿಂಬ (1990ರಿಂದ), ಹಾಗೂ ವಿಜಯನಗರ ಬಿಂಬ (1997 ರಿಂದ) ಎನ್ನುವ ವಾರಾಂತ್ಯದ ರಂಗತರಬೇತಿ ಶಾಲೆಗಳನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದ್ದಾರೆ.  ಇವೆಲ್ಲಾ ಮೂರ್ತಿಯವರು ಸಂಪಾದಿಸಿದ ಆಸ್ತಿಯಾದರೆ ಇದರಿಂದ ಪ್ರಯೋಜನ ಪಡೆದ ಸಹಸ್ರಾರು ಮಕ್ಕಳು, ಯುವಕರು ಇಂದು ಸಾಂಸ್ಕೃತಿಕ ಲೋಕದ ಸಂಪತ್ತುಗಳಾಗಿದ್ದಾರೆ.  ಪ್ರಕಾಶ ರೈ, ಬಿ.ಸುರೇಶ... ಮುಂತಾದ ಮೂರ್ತಿಯವರ ಶಿಷ್ಯರು  ಇಂದು ಸಿನೆಮಾ ಮಾಧ್ಯಮದಲ್ಲಿ ಹೆಸರುವಾಸಿಯಾಗಿದ್ದಾರೆ

ಎಲ್ಲರೂ ತಾವು ಸಂಪಾದಿಸಿದ ಸಂಪತ್ತನ್ನು ಸಾಯುವ ಮುನ್ನ ಮಕ್ಕಳಿಗೆ ಹಂಚಿಹೋಗುವುದು ಲೋಕಾರೂಡಿ. ಅದಕ್ಕೆ ಮೂರ್ತಿ ತಾತಾ ಕೂಡಾ ಹೊರತಲ್ಲ. ಎಲ್ಲರೂ ಮಕ್ಕಳಿಗೆ ಮನೆ, ಹಣ, ಜಮೀನು ಜಹಗೀರುಗಳನ್ನು ಪಾಲು ಮಾಡಿ ಹಂಚಿದರೆ  ನಮ್ಮ .ಎಸ್.ಎಂ ರವರು ತಾವು ಕಟ್ಟಿದ ಸಾಂಸ್ಕೃತಿಕ ದ್ವೀಪ ಸಮೂಹವನ್ನು ತಮ್ಮ ಕುಟುಂಬ ಪರಿವಾರದವರಿಗೆ ಹಂಚಿ ಹೋಗಿದ್ದಾರೆ. ತಂದೆಯವರಿಂದ ಬಳುವಳಿಯಾಗಿ ಬಂದ ಪಿತ್ರಾರ್ಜಿತ ಆಸ್ತಿಯಾದ ಕಲಾಮಂದಿರ ಚಿತ್ರಕಲಾ ಶಾಲೆಯ ನಿರ್ವಹಣೆಯನು ಏಕೈಕ ಪುತ್ರ ಪ್ರಕಾಶರವರಿಗೆ ವಹಿಸಿದರೆ, ಸ್ವಯಾರ್ಜಿತ ಆಸ್ತಿಗಳಾದ ಚಿತ್ರಾ ಮತ್ತು ಅಭಿನಯ ತರಂಗಗಳ ಉಸ್ತುವಾರಿ ಮಗಳು ಗೌರಿದತ್ತು ರವರದ್ದಾಗಿದೆ. ಹನುಮಂತನಗರ ಬಿಂಬ ಸಂಪೂರ್ಣ ಹೊಣೆ ಸೊಸೆ ವನಮಾಲಾ ಪ್ರಕಾಶರವರದ್ದು. ವಿಜಯನಗರ ಬಿಂಬದ ನಿರ್ವಹಣೆ ಇನ್ನೊಬ್ಬ ಮಗಳು ಶೋಭಾ ವೆಂಕಟೇಶ ಹಾಗೂ ಮೊಮ್ಮಕ್ಕಳಾದ ಸುಷ್ಮಾ, ಡಾ.ಕಷ್ಯಪ್ರವರದ್ದು.... ಹೀಗೆ ಹಂಚಲಾದ .ಎಸ್.ಎಂ ರವರ ಪಿತ್ರಾರ್ಜಿತ ಹಾಗೂ ಸ್ವಯಾರ್ಜಿತ ಆಸ್ತಿಗಳ್ಯಾವವೂ  ಸಂಪತ್ತನ್ನು ಗಳಿಸುವ ವ್ಯಾಪಾರಿ ಕಾಲೇಜುಗಳಾಗಿರದೇ ಸಾಂಸ್ಕೃತಿಕ ಹಿತಾಸಕ್ತಿಯನ್ನು ಹೊಂದಿರುವ ಸೃಜನಶೀಲ ಕೇಂದ್ರಗಳಾಗಿವೆ ಎಂಬುದು ಗಮನಾರ್ಹ.


ಮೊಮ್ಮಗಳು ಪಲ್ಲವಿ ಸುಗಮ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದರೆ, ಇನ್ನೊಬ್ಬ ಮೊಮ್ಮಗಳು ಸುಷ್ಮಾ ನೃತ್ಯ ಸಂಯೋಜನೆಯಲ್ಲಿ ಹೆಸರುವಾಸಿ, ಹಲ್ಲಿನ ಡಾಕ್ಟರ್ ಆದ ಮೊಮ್ಮಗ ಡಾ. ಕಷ್ಯಪ್ ತಮ್ಮ ವೃತ್ತಿಗಿಂತ ಮಕ್ಕಳ ನಾಟಕ ಬರೆದು ಆಡಿಸಿದ್ದೇ ಹೆಚ್ಚು. ಹೀಗೆ ಮೂರ್ತಿಗಳ ಕುಟುಂಬದ ಪ್ರತಿಯೊಬ್ಬರೂ ಸಾಂಸ್ಕೃತಿಕವಾಗಿ ತೊಡಿಗಿಸಿಕೊಂಡಿದ್ದು ನಿಜಕ್ಕೂ ಅಚ್ದರಿಯ ಸಂಗತಿ. ಇದೆಲ್ಲದರ ಜೊತೆಗೆ .ಎಸ್.ಎಂ ರವರ ಸಾಂಸ್ಕೃತಿಕ ಸಾಹಸಗಳು ಮತ್ತು ರಂಗಭೂಮಿಗೆ ಕೊಟ್ಟ ಕೊಡುಗೆಗಳು ವಿಭಿನ್ನ ಮತ್ತು ವೈಶಿಷ್ಟ್ಯಪೂರ್ಣವಾಗಿವೆ....

.ಎಸ್. ಮೂರ್ತಿಯವರು ಹುಟ್ಟಿದ್ದು ಆಗಸ್ಟ್ 16, 1929,  ಶೈಕ್ಷಣಿಕವಾಗಿ ಓದಿದ್ದು ಕೇವಲ ಎಸ್ ಎಸ್ ಎಲ್ ಸಿ ಮಾತ್ರ. ಆದರೆ ಸಾಂಸ್ಕೃತಿಕವಾಗಿ ಸಾಧಿಸಿದ್ದು ಅಪಾರ. ಓದಿನ ನಂತರ ಕ್ಯಾಲಿಕೋ ಮಿಲ್ಸ್ ನಲ್ಲಿ 2 ವರ್ಷ ಕೆಲಸ. ಮೊಟ್ಟ ಮೊದಲು ಅಭಿನಯಿಸಿದ್ದು ಮಾಯಾವರ ನಾಟಕ. ಆಗ ಅಂಟಿಕೊಂಡ ನಾಟಕದ ಮಾಯೆ ಕೊನೆವರೆಗೂ ಅವರನ್ನು ಬಿಡಲೇ ಇಲ್ಲ. ಗೆಳೆಯರ ಗುಂಪು ಕಟ್ಟಿಕೊಂಡ ಮೂರ್ತಿಯವರು 1951 ರಲ್ಲಿ ತಮ್ಮದೇ ಚಿತ್ರಾ ನಾಟಕ ತಂಡ ಹುಟ್ಟು ಹಾಕಿದರು. ಮೊಟ್ಟ ಮೊದಲ ಬಾರಿಗೆ ಬರೀ ಬ್ರಾಂತಿ ನಾಟಕವನ್ನು ರಚಿಸಿ ಪ್ರದರ್ಶಿಸಿದರು. ಅವತ್ತಿಂದ ಶುರುವಾಯ್ತು ಮೂರ್ತಿಯವರ ಬೀದಿನಾಟಕಗಳ ಅಧ್ಯಾಯ. ನಾಟಕದಿಂದ ಗಳಿಸಿದ ನಟನಾನುಭವ ಮತ್ತು ಮಾತುಗಾರಿಕೆಯ ಫಲವಾಗಿ ಆಕಾಶವಾಣಿಯಲ್ಲಿ 1958ರಲ್ಲಿ ಕೆಲಸ ಸಿಕ್ಕಿತು. ನಂತರದ 25 ವರ್ಷಗಳ ಕಾಲ ಆಕಾಶವಾಣಿಯ ಒಂದು ಮಾತಿನ ಈರಣ್ಣನಾಗಿ ಮನೆ ಮನೆ ಮಾತಾದರು. ಆಕಾಶವಾಣಿಯಲ್ಲಿ ಕೆಲಸ ಮಾಡುವಾಗ ಬಿಸಿಲುಕುದುರೆ, ಮನೆ ಮಾತು, ಪತ್ತೇದಾರಿ ವೆಂಕಣ್ಣ, ಇಲಾಜ್ ಈರಣ್ಣ, ಮಿಸ್ಟರ್ ಎಕ್ಸ... ಮುಂತಾದ ರೇಡಿಯೋ ನಾಟಕಗಳನ್ನು ಬರೆದು ವಾಚಿಸಿ ಕೇಳುಗರ ಮನಸೆಳೆದರು. ಈರಣ್ಣ ಪಾತ್ರದಾರಿಯಾಗಿ ಒಂದು ಮಾತು ಕಾರ್ಯಕ್ರಮವಂತೂ ಮೂರ್ತಿಯವರಿಗೆ ಜನಪ್ರೀಯತೆಯನ್ನು ತಂದಿತು. ನೇರ ನಡೆನುಡಿಯ ಮೂರ್ತಿಯವರನ್ನು ಆಕಾಶವಾಣಿಯ ಅಧಿಕಾರಶಾಹಿಗಳಿಗೆ ಸಹಿಸಿಕೊಳ್ಳಲು ಆಗಲಿಲ್ಲ. ಅಮಾನತು ಮಾಡಿ ಮನೆಗೆ ಕಳುಹಿಸಿ ಉಪಕರಿಸಿದರು. ಆಕಾಶವಾಣಿಯ ಸರಕಾರಿ ಸೇವೆಯಲ್ಲಿಯೇ ಇದ್ದಿದ್ದರೆ ಮಟ್ಟದ ರಂಗಸಾಧನೆ ಮಾಡಲು ಮೂರ್ತಿಯವರಿಗೆ ಅವಕಾಶ ಸಿಗುತ್ತಿರಲಿಲ್ಲ. ಕೆಲಸಕ್ಕೆ ದೊಡ್ಡ ನಮಸ್ಕಾರ ಹೇಳಿ ಹೊರಬಂದನಂತರ ನೂರ್ಮಡಿ ಹುರುಪಿನಿಂದ ಮೂರ್ತಿಯವರು ಕಾರ್ಯೊನ್ಮುಖರಾದರು.



ಆಕಾಶವಾಣಿಗೆ ಪೂರಕವಾಗಿ ಕ್ಯಾಸೆಟ್ ಸಂಸ್ಕೃತಿ ಆರಂಭವಾಗಿತ್ತು. ಕೆಲಸ ಕಳೆದುಕೊಂಡು ಅತಂತ್ರವಾಗಿದ್ದ ಮೂರ್ತಿಗಳಿಗೆ ಹೇಗಾದರೂ ಬದುಕಿನ ಬಂಡಿ ಸಾಗಿಸಬೇಕಾಗಿತ್ತು. ಆಗ ಸಿನೆಮಾದಲ್ಲಿ ಹೆಸರುವಾಸಿ ಕಲಾವಿದರಾದ ಉಮಾಶ್ರೀ, ಮುಸರಿ ಕೃಷ್ಣಮೂರ್ತಿ, ದಿರೇಂದ್ರ ಗೋಪಾಲ್... ಮುಂತಾದವರನ್ನು ಕ್ಯಾಸಿಟ್ಟಿಗೊಬ್ಬರಂತೆ ಸಹಪಾತ್ರದಾರಿಯಾಗಿಸಿಕೊಂಡು ಒಟ್ಟು 11 ಕ್ಯಾಸೆಟ್ ಪ್ರಹಸನಗಳನ್ನು ರಚಿಸಿ, ನಿರ್ಮಿಸಿದರು. ಆಗೊಮ್ಮೆ ಅದೇನನ್ನಿಸಿತೋ ಏನೋ ಪುರುಷ ಲೇಖಕರಾದ ಮೂರ್ತಿಯವರು 1967ರಲ್ಲಿ ಲೇಖಕಿಯರ ಸಂಘವನ್ನು ಆರಂಭಿಸಿ ಅಸಂಘಟಿತ ಮಹಿಳಾ ಲೇಖಕಿಯರನ್ನು ಒಂದೇ ವೇದಿಕೆಗೆ ತರುವ ಪ್ರಯತ್ನ ಮಾಡಿದರು

ಆಗ ನಾಟಕಾಸಕ್ತ ಯುವಜನರಿಗೆ ತರಬೇತಿ ಕೊಡುವ ಯಾವ ಶಾಲೆಯೂ ಬೆಂಗಳೂರಿನಲ್ಲಿರಲಿಲ್ಲ. ಅಂತಹ ತರಬೇತಿಯ ಅಗತ್ಯತೆಯನ್ನು ಅರಿತ ಮೂರ್ತಿಯವರು 1981 ರಲ್ಲಿ ಅಭಿನಯ ತರಂಗ ಭಾನುವಾರದ ರಂಗ ಶಾಲೆಯನ್ನು ಆರಂಭಿಸಿದರು. ಇವತ್ತಿಗೂ ನಾಟಕ, ಟಿವಿ ಮತ್ತು ಸಿನೆಮಾ ಕ್ಷೇತ್ರಗಳಲ್ಲಿ ಅಭಿನಯ ತರಂಗದಲ್ಲಿ ತರಬೇತಾದವರು ಸಕ್ರೀಯರಾಗಿದ್ದಾರೆ. ಮೂರು ದಶಕ ಪೂರೈಸಿದ ರಂಗಶಾಲೆ ಇನ್ನೂ ಸಕ್ರೀಯವಾಗಿ ಮುಂದುವರೆಯುತ್ತಲೇ ಇದೆ.

ನಿರಂತರವಾಗಿ ಹೊಸತನಕ್ಕೆ ತುಡಿಯುವ ಮನಸ್ಸಿನ ಮೂರ್ತಿಯವರು ಪಪೆಟ್ ಲ್ಯಾಂಡ್ ಆರಂಭಿಸಿ ರಂಗಭೂಮಿಗೆ ಹೊಸ ಆಯಾಮವನ್ನೇ ಸೃಷ್ಟಿಸಿದರು. ಸೂತ್ರದ ಬೊಂಬೆಆಟದಲ್ಲಿ ನಾಟಕವನ್ನು ಪ್ರದರ್ಶಿಸಿದ ಕೀರ್ತಿ ಮೂರ್ತಿಯವರಿಗೆ ಸಲ್ಲಬೇಕು. ಗಿರೀಶ ಕಾರ್ನಾಡ್ ಮಾನಿಷಾದ, ಕಂಬಾರರ ಕಿಟ್ಟಿ ಕಥೆ, ಚಂಪಾರವರ ಟಿಂಗರ್ ಬುಡ್ಡಣ್ಣ, ಗಿರಡ್ಡಿ ಗೋವಿಂದರಾಜರವರ ಕನಸು...... ಹೀಗೆ ಹಲವಾರು ಪ್ರಮುಖ ನಾಟಕಗಳನ್ನು ಸೂತ್ರದ ಬೊಂಬೆ ಆಟ ಪ್ರಕಾರದ ಮೂಲಕ ಜನರಿಗೆ ತಲುಪಿಸಿದರು.  ಮೂಲಕ ಪಪೆಟ್ ಥಿಯೇಟರ್ ಹುಟ್ಟಿಗೆ ಕಾರಣರಾದರು. ಬೊಂಬೆ ಆಟದ ಜನಪ್ರೀಯತೆ ಹಾಗೂ ಮೂರ್ತಿಯವರ ಮಾತುಗಾರಿಕೆಯಿಂದಾಗಿ ದೂರದರ್ಶನ ಮಾಧ್ಯಮದಲ್ಲೂ ಜಿಗಿ ಜಿಗಿ ಬೊಂಬೆಯಾಟ ದಾರಾವಾಹಿಯಾಗಿ ಮೂಡಿಬಂದಿತು. ನಾಟಕವನ್ನು ಜಾನಪದ ದೃಶ್ಯಕಲೆಯ ಮೂಲಕ ಪ್ರಸ್ತುತಪಡಿಸಿದ ಪ್ರಯತ್ನ ತುಂಬಾ ವಿಶಿಷ್ಟವಾಗಿತ್ತು

ಉತ್ತರ ಕರ್ನಾಟಕದಲ್ಲಿ ಡಾ.ಸಿದ್ದನಗೌಡ ಪಾಟೀಲರು ಬೀದಿನಾಟಕಗಳನ್ನು ಪ್ರತಿಭಟನೆಯ ಮಾಧ್ಯಮವಾಗಿ ದುಡಿಸಿಗೊಂಡರೆ, ಬೆಂಗಳೂರಿನಲ್ಲಿ ಮೂರ್ತಿಗಳು ಯಾವುದೇ ಇಸಂಗಳ ಹಂಗಿಲ್ಲದೇ ಬೀದಿನಾಟಕಗಳ ಶಕೆಯನ್ನೇ ಆರಂಭಿಸಿದರು. ಮೂವತ್ತಕ್ಕೂ ಹೆಚ್ಚು ಬೀದಿನಾಟಕಗಳನ್ನು ರಚಿಸಿ ಚಿತ್ರಾ ತಂಡದ ಮೂಲಕ ನಾಡಿನಾದ್ಯಂತ ಸಾವಿರಾರು ಪ್ರದರ್ಶನಗಳನ್ನಿತ್ತು ಬೀದಿನಾಟಕದ ಪರಂಪರೆಯನ್ನೇ ಹುಟ್ಟು ಹಾಕಿದರು. ಮೂರ್ತಿಯವರ ಬೀದಿ ನಾಟಕದ ಯಶಸ್ಸಿನಿಂದ ಪ್ರೇರೇಪಿತರಾದ ಯಶವಂತ ಸರದೇಶಪಾಂಡೆಯಂತಹ ಹಲವಾರು ರಂಗೋಪಜೀವಿಗಳು ಬೀದಿ ನಾಟಕವೆಂಬ ಪ್ರತಿಭಟನೆಯ ಮಾಧ್ಯಮವನ್ನು ಪ್ರಚಾರ ಮಾಧ್ಯಮವಾಗಿ ಬಳಸಿಕೊಂಡು ಬೀದಿ ನಾಟಕದ ತೀವ್ರತೆಯನ್ನೇ ಕಡಿಮೆಗೊಳಿಸಿದರು. ಬಹುತೇಕ ಬೀದಿ ನಾಟಕಗಳಲ್ಲಿ ಸ್ವತಃ ಬೀದಿ ಬೀದಿಗಳಲ್ಲಿ ಅಭಿನಯಿಸಿದ .ಎಸ್.ಮೂರ್ತಿಗಳು ಏಡ್ಸ ರೋಗದ ವಿರುದ್ದ ಎಚ್ಚರ ಎಚ್ಚರ ಎನ್ನುವ ಬೀದಿ ನಾಟಕ ಬರೆದು ಆಡಿಸಿ ಜನರಲ್ಲಿ ಜಾಗೃತಿಯನ್ನುಂಟು ಮಾಡಿದರು. ಅವರ ಹುಚ್ಚ ಬೀದಿ ನಾಟಕ ಬಹು ಜನಪ್ರೀಯವಾಗಿತ್ತು. 



ಐವತೈದಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ ಮೂರ್ತಿಗಳು ನೂರಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದಾರೆ. ಅದರಲ್ಲಿ ಬಹುತೇಕ ನಾಟಕಗಳು ಹಾಸ್ಯ ಪ್ರಧಾನವಾದಂತಹವುಗಳು. ಮೂರ್ತಿಗಳಿಗೆ ಯಾರೂ ಮಾಡದ್ದನ್ನು ಮಾಡುವ ತುಡಿತ.  ಪಪೆಟ್ ನಾಟಕಗಳ ನಂತರ ಕವಿತೆಗಳಿಗೆ ರಂಗರೂಪ ಕೊಡುವ ಸಾಹಸ ಮಾಡಿದರು. ಕುವೆಂಪುರವರ ಕರಿ ಸಿದ್ದ ಕವಿತೆ, ರಾಮಾನುಜಂರವರ ಒಂದು ಅಂಗುಲ ಹುಳುವಿನ ಪರಕಾಯ ಪ್ರವೇಶ ಕಾವ್ಯ. ನಿಸಾರ ಅಹಮದರ ಒಂದೇ ಹಾಗೂ ಲಕ್ಷ್ಮೀನಾರಾಯಣ ಭಟ್ಟರ ಒಂದು ಮರದ ಸುತ್ತ..... ಹೀಗೆ ಪ್ರಸಿದ್ದ ಕವಿಗಳ ಕವಿತೆಗಳನ್ನು ರಂಗರೂಪಕ್ಕೆ ತಂದು ರಂಗಭೂಮಿಯ ಹರವನ್ನು ವಿಸ್ತರಿಸಿದರು

ವಯಸ್ಸಾದಂತೆಲ್ಲಾ ಮಕ್ಕಳ ಮೇಲೆ ಮೋಹ ಹೆಚ್ಚಾಗತೊಡಗಿತೋ ಏನೋ, 1990 ರಲ್ಲಿ ಚಿಕ್ಕ ಮಕ್ಕಳಿಗಾಗಿಯೇ ಬಿಂಬ ಎನ್ನುವ ಶನಿವಾರದ ಶಾಲೆಯನ್ನು ಆರಂಭಿಸಿದರು. ಪ್ರತಿ ಬೇಸಿಗೆಯಲ್ಲಿ ಮಕ್ಕಳ ನಾಟಕ ಶಿಬಿರ ಆಯೋಜಿಸಿದರು. 30ಕ್ಕೂ ಹೆಚ್ಚು ಮಕ್ಕಳ ನಾಟಕಗಳನ್ನು ರಚಿಸಿ ಶಿಬಿರದಲ್ಲಿ ತರಬೇತಾದ ಮಕ್ಕಳಿಂದ ನಾಟಕವಾಡಿಸಿದರು. ಮಕ್ಕಳ ಕಟಕಟೆಯಲ್ಲಿ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಲೋಕದ ದಿಗ್ಗಜರನ್ನು ತಂದು ನಿಲ್ಲಿಸಿ ಮಕ್ಕಳಿಂದ ಪ್ರಶ್ನಿಸಿದರು. 1997ರಲ್ಲಿ ವಿಜಯನಗರದಲ್ಲೂ ಬಿಂಬ ಮಕ್ಕಳ ರಂಗಶಾಲೆಯನ್ನು ಆರಂಭಿಸಿದರು. ಮಕ್ಕಳ ರಂಗಭೂಮಿಗೆ .ಎಸ್.ಎಂ ರವರ ಕೊಡುಗೆ ಪ್ರಶ್ನಾತೀತ

ಮೊಟ್ಟ ಮೊದಲ ಬಾರಿಗೆ ವಿಡಿಯೋ ಮ್ಯಾಗಜೈನ್ ಶುರುಮಾಡಿದರು. ಮೂರು ವರ್ಷಗಳ ಕಾಲ ಬೀದಿ ರಂಗ ಪತ್ರಿಕೆಯನ್ನು ಮುನ್ನಡೆಸಿದರು. ಹದಿನಾರು ಚಲನಚಿತ್ರಗಳಲ್ಲಿ ಅಭಿನಯಿಸಿದರು. 10 ಕ್ಕೂ ಹೆಚ್ಚು ದಾರಾವಾಹಿಗಳಲ್ಲಿ ನಟಿಸಿದರು. ಶಂಖನಾದ, ಸಂಧರ್ಬ, ಡ್ರೈವರ್ ಹನಮಂತು, ಕುರಿದೊಡ್ಡಿ ಕುರುಕ್ಷೇತ್ರ... ಹೀಗೆ ಹಲವು ಸಿನೆಮಾಗಳಿಗೆ ಸಂಭಾಷಣೆಯನ್ನೂ ಬರೆದರು. ಚಲನಚಿತ್ರಗಳಲ್ಲಿ ಅಭಿನಯಿಸಲು ಬಯಸುವವರಿಗಾಗಿ ಪ್ರೇಮ್ ಎನ್ನುವ ಕಾರ್ಯಾಗಾರವನ್ನು 2003 ರಿಂದ ಪ್ರತಿ ವರ್ಷ ನಡೆಸುತ್ತಾ ಬಂದರು. ಹಲವಾರು ಪತ್ರಿಕೆಗಳಿಗೆ ನಿಯಮಿತವಾಗಿ ಅಂಕಣಗಳನ್ನ ಬರೆದರು. ಸಿನೆಮಾ ಪತ್ರಕರ್ತರಾಗಿ ಇಳಿವಯಸ್ಸಿನಲ್ಲಿಯೂ ಹದಿಹರೆಯದವರನ್ನು ನಾಚುವ ಹಾಗೆ ಸಿನೆಮಾ ಪತ್ರಿಕಾಗೋಷ್ಟಿಗಳಿಗೆ ಹಾಜಾರಾಗಿ ಸಿನೆಮಾ ಕುರಿತು ಪ್ರತಿ ವಾರ ವಿಮರ್ಶೆಗಳನ್ನು ಬರೆದರು. ಹಲವಾರು ಲೇಖನಗಳನ್ನು ಬರೆದರು, ಪುಸ್ತಕಗಳನ್ನು ಪ್ರಕಟಿಸಿದರು. ಹಲವಾರು ಜನಪರ ಪ್ರತಿಭಟನೆಗಳಲ್ಲಿ ಪಾಲ್ಗೊಂಡರು

ಒಂದಾ ಎರಡಾ ಮೂರ್ತಿಯವರ ಸಾಹಸಗಳು, ಒಬ್ಬ ಕ್ರಿಯಾಶೀಲ ವ್ಯಕ್ತಿ ಮೂರು ಜನ್ಮದಲ್ಲಿ ಮಾಡಬಹುದಾದ ಕೆಲಸಗಳನ್ನು ಒಂದೇ ಜೀವಿತಾವಧಿಯಲ್ಲಿ ಮಾಡಿ ತೋರಿಸಿ ಬೆರಗು ಹುಟ್ಟಿಸಿದರು. ಸದಾ ಹೊಸತನಕ್ಕಾಗಿ ತುಡಿದರು, ರಂಗಭೂಮಿಗಾಗಿ ಅಹೋರಾತ್ರಿ ದುಡಿದರು. ಇಷ್ಟೆಲ್ಲಾ ಮಾಡಿದರೂ..... ತಮ್ಮ ಜೀವನವನ್ನೇ ಸಾಂಸ್ಕೃತಿಕ ಕ್ಷೇತ್ರಕ್ಕಾಗಿ ಮುಡುಪಾಗಿಟ್ಟರೂ ....
ಬ್ರಾಹ್ಮಣನೆಂಬ ಶ್ರೇಷ್ಟತೆಯ ಬ್ರ್ಯಾಂಡ ಬೆನ್ನಿಗಿದ್ದರೂ..... ಯಾಕೆ ಪ್ರಮುಖ ಪ್ರಶಸ್ತಿಗಳು, ರಾಷ್ಟ್ರ ಮಟ್ಟದ ಪುರಸ್ಕಾರಗಳು, ನಾಟಕ ಅಕಾಡೆಮಿಯ ಅಧ್ಯಕ್ಷಗಿರಿಯಂತಹ ಹುದ್ದೆಗಳು  .ಎಸ್.ಎಂ ರವರಿಗೆ ದೊರೆಯಲಿಲ್ಲ. 1994 ರಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ಹಾಗೂ 1999 ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗಳನ್ನು ಹೊರತು ಪಡಿಸಿ ಸರಕಾರಿ ಸಂಸ್ಥೆಗಳು ಯಾಕೆ ಮೂರ್ತಿಯವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಿಲ್ಲ?. ಯಾಕೆಂದರೆ ಖಂಡಿತವಾದಿ ಲೋಕವಿರೋದಿ ಎನ್ನುವ ಮಾತು ಮೂರ್ತಿಯವರ ವಿಷಯದಲ್ಲಿ ಸತ್ಯವಾಯಿತು. ಸದಾ ವಿಡಂಬನೆಯನ್ನೇ ತಮ್ಮ ಮಾತಿನ, ನಾಟಕದ, ಬರವಣಿಗೆಯ ಸ್ಥಾಯಭಾವವನ್ನಾಗಿಸಿಕೊಂಡಿದ್ದ .ಎಸ್.ಎಂ ರವರ ನಿಷ್ಠುರ ಮಾತುಗಳು, ಲೇವಡಿಯ ಪ್ರತಿಕಿಯೆಗಳು, ಎದುರಿದ್ದವರ ಕಾಲೆಳೆಯುವ-ಎದುರಾಳಿಗಳ ತಪ್ಪುಗಳನ್ನು ಕೊಂಕು ಮಾತುಗಳಿಂದ ಎತ್ತಿ ತೋರಿಸುವ ಗುಣಗಳು ಹಲವಾರು ನಾಜುಕಯ್ಯಗಳಿಗೆ ಇಷ್ಟವಾಗುತ್ತಿರಲಿಲ್ಲ. ಅವರ ನೇರ ವಿಮರ್ಶೆಗಳನ್ನು ಜೀರ್ಣಿಸಿಕೊಳ್ಳುವ ಸಕಾರಾತ್ಮಕ ಮನೋಭಾವ ಅದೆಷ್ಟೋ ಜನಕ್ಕೆ ಇರಲೇ ಇಲ್ಲ. ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳು ಹಾಗೂ ಅದರ ತಾತ್ಕಾಲಿಕ ಯಜಮಾನರುಗಳಿಗೆ .ಎಸ್.ಎಂ ರವರ ನೇರನುಡಿ ಅಪತ್ಯವಾಗುತ್ತಿತ್ತು. ಬುದ್ದಿಜೀವಗಳು ಮೂರ್ತಿಯವರಿಂದ ಪರಿಪೂರ್ಣತೆಯನ್ನು, ಬರವಣಿಗೆಯಲ್ಲಿ ಮೆಚುರಿಟಿಯನ್ನು, ಮಾತಿನಲ್ಲಿ ನಾಜೂಕುತನವನ್ನು ಬಯಸಿದರೆ ಮೂರ್ತಿಯವರು ಅಪೂರ್ಣರಾಗಿರಲು, ಇಮ್ಮೆಚುರ್ಡಾಗಿರಲು, ಒರಟರಾಗಿರಲು ಆಶಿಸುತ್ತಿದ್ದರು. ಇದು ಅವರ ಶಕ್ತಿ ಹಾಗೂ ದೌರ್ಬಲ್ಯ ಎರಡೂ ಆಗಿತ್ತು.  ಗುಣಗಳೇ ಅವರನ್ನು ಕೊನೆಯ ಕ್ಷಣದವರೆಗೂ ಜೀವಂತವಾಗಿಟ್ಟದ್ದವು

ಒಳಗೊಂದು ಹೊರಗೊಂದು ಎನ್ನುವ ಗೋಸುಂಬೆತನ ಗೊತ್ತಿಲ್ಲದ ಮೂರ್ತಿಯವರು ಅನ್ನಿಸಿದ್ದನ್ನು ನುಡಿದರು, ನುಡಿದಂತೆಯೇ ಬರೆದರು, ಬರೆದಂತೆ ನಡೆದರು. ಅಂತರಂಗದಲ್ಲಿ ಬ್ರಾಹ್ಮಣ್ಯವನ್ನು ಕಾಪಿಟ್ಟುಕೊಂಡರೂ ಬಹಿರಂಗದಲ್ಲಿ ಅದನ್ನು ಮುರಿಯುವ ಪ್ರಯತ್ನವನ್ನು ಮಾಡಿದರು. ತಮ್ಮ ಮೂಗಿನ ನೇರಕ್ಕೆ ಜಗತ್ತು ಇರಬೇಕು ಎಂದೂ ಬಯಸಿದರು. ಎಲ್ಲವನೂ ಎಲ್ಲರನ್ನೂ ನಿಷ್ಠುರವಾಗಿ ವಿಮರ್ಶಿಸಿದರು ಆದರೆ ತಮ್ಮ ಮೇಲೆ ವಿಮರ್ಶೆ ಬಂದಾಗ ಸಹಿಸದಾದರು. ತಾವೂ ಬೆಳೆದರು, ತಮ್ಮ ಕುಟುಂಬ ಪರಿವಾರವನ್ನೂ ಸಾಂಸ್ಕೃತಿಕವಾಗಿ ಬೆಳೆಸಿದರು ಜೊತೆಗೆ ಅಪಾರ ಕಲಾವಿದ-ತಂತ್ರಜ್ಞರನ್ನೂ ಬೆಳೆಸಿದರು. ಇಂತಹ ಬಹುಪ್ರತಿಭೆಯ, ವರ್ಣಮಯ ವ್ಯಕ್ತಿತ್ವದ, ವಿಶಿಷ್ಟ ಖಯಾಲಿಯ, ವಿಚಿತ್ರ ಹಠದ ಮತ್ತೊಬ್ಬ .ಎಸ್.ಮೂರ್ತಿ ಬರಲು ಸಾಧ್ಯವೇ ಇಲ್ಲ. ಬಂದರೂ ನಮ್ಮ ವ್ಯವಸ್ಥೆ ಬದುಕಲು ಬಿಡೋದು ಇಲ್ಲ. ವ್ಯಯಕ್ತಿಕ ದೌರ್ಬಲ್ಯಗಳನ್ನು ಹೊರತು ಪಡಿಸಿದರೆ  .ಎಸ್.ಎಂ ರವರ ಸಾಧನೆ ನಿಜಕ್ಕೂ ಅನುಕರಣೀಯ, ಆದರ್ಶಮಯ. ಯಾರೇನೇ ಅಂದರೂ ಮೂರ್ತಿಗಳ ರಂಗಬದ್ದತೆ ಪ್ರಶ್ನಾತೀತ.



                                                                  -ಶಶಿಕಾಂತ ಯಡಹಳ್ಳಿ





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ