ಬುಧವಾರ, ಡಿಸೆಂಬರ್ 4, 2013

ನಿರೂಪಣೆಯಲ್ಲಿ ಸೋತು ತಾಂತ್ರಿಕತೆಯಲ್ಲಿ ಗೆದ್ದ ‘ಉರುಗವ್ವ’


ನಾಟಕ ವಿಮರ್ಶೆ:


     
                                                                  

         



      
  
      ಅದೊಂದು ಊರು. ಅಲ್ಲಿ ಒಬ್ಬ ದುಷ್ಟ ಜಮೀನ್ದಾರ. ಊರಿನ ಎಲ್ಲಾ ರೈತರ ಭೂಮಿಯನ್ನು ಕುತಂತ್ರದಿಂದ ಇಲ್ಲವೆ ಬಲವಂತದಿಂದ ಕಿತ್ತುಕೊಳ್ಳುತ್ತಿರುತ್ತಾನೆ. ಯಾರೋ ಒಬ್ಬರು ಅದನ್ನು ಪ್ರತಿಭಟಿಸುತ್ತಾರೆ. ... ಇಂತಹ ಕತೆಗಳು, ನಾಟಕಗಳು, ಸಿನೆಮಾಗಳು ಅದೆಷ್ಟು ಬಂದಿಲ್ಲಾ. ಐವತ್ತರ ದಶಕದ ಹಳೆಯ ವಿಷಯವನ್ನು ಮತ್ತೆ ಹೊಸದಾಗಿ ಹೇಳುವ ಪ್ರಯತ್ನವನ್ನು ಉರಗವ್ವ ನಾಟಕ ಮಾಡುತ್ತದೆ. ಇದೇ ಮಾದರಿಯ ಕಥಾನಕಗಳಲ್ಲಿ ಕನಿಷ್ಟ ದುಷ್ಟ ಶಕ್ತಿಗಳಿಗೆ ಶಿಕ್ಷೆಯಾದರೂ ಅಗುತ್ತದೆಂಬ ಸಂದೇಶವಾದರೂ ಇರುತ್ತದೆ. ಆದರೆ ನಾಟಕದಲ್ಲಿ ಶೋಷಕನಿಗೆ ಶಿಕ್ಷೆಯೂ ಆಗೊಲ್ಲ, ವಿರೋಧಿಸಿದ ಶೋಷಿತೆಗೆ ಸಾವೂ ತಪ್ಪೊಲ್ಲ. ಇಂತಹ ಒಂದು ಸಮಕಾಲೀನವಲ್ಲದ ಅಪ್ರಸ್ತುತವೆನಿಸುವ ನಾಟಕವನ್ನು ಪ್ರಸ್ತುತಗೊಳಿಸಲಾಗಿದೆ

  ಬೆಸಗರಹಳ್ಳಿ ರಾಮಣ್ಣನವರು ದಶಕಗಳಷ್ಟು ಹಿಂದೆ ಬರೆದ ಉರಗವ್ವ ಕಥೆಯನ್ನು ಡಾ.ಬೇರೇಗೌಡರು ರಂಗರೂಪಾಂತರಿಸಿದ್ದು ಅಭಿಮನ್ಯು ಭೂಪತಿಯವರು ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟಿನ ಕಲಾವಿದರಿಗೆ ನಿರ್ದೇಶಿಸಿದ್ದಾರೆ. ರವೀಂದ್ರ ಕಲಾಕ್ಷೇತ್ರ-೫೦ ಸುವರ್ಣ ಸಂಭ್ರಮದ ಭಾಗವಾಗಿ ೨೦೧೩, ಡಿಸೆಂಬರ್ ರಂದು ಉರಗವ್ವ ನಾಟಕ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡಿತು

          ಆತ ಚಂದ್ರಶೆಟ್ಟಿ. ಹೊನ್ನಾಪುರದ ಜಮೀನ್ದಾರ. ತನ್ನ ಜಮೀನು ಕೊಡಲು ವಿರೋಧಿಸಿದ್ದಕ್ಕೆ ನಿಂಗನ ಮನೆಗೆ ಬೆಂಕಿ ಹಾಕಿ ಆತನ ಹೆಂಡತಿಯನ್ನು ಸಾಯಿಸುತ್ತಾನೆ. ವಿರಾವೇಶದಿಂದ ಪ್ರತಿಭಟಿಸಿದ್ದ ನಿಂಗ ಮುಂದೆ ನಡೆಯುವ ಎಲ್ಲಾ ಅನ್ಯಾಯಗಳಿಗೂ ಮೌನಸಾಕ್ಷಿಯಾಗುತ್ತಾನೆ. ಟೆನೆನ್ಸಿ ಆಕ್ಟನಲ್ಲಿ ಚನ್ನವ್ವನ ಹೊಲ ತನ್ನದೆನ್ನುತ್ತಾನೆ ಶೆಟ್ಟಿ. ಕಂದಾಯ ಇಲಾಖೆಯ ನೌಕರ ಪುಟ್ಟರಾಜುವಿನೊಂಡನೆ ಶಾಮೀಲಾಗಿ ಆಕೆಯ ಹೊಲದ ಪಹನಿ ತಿದ್ದುತ್ತಾನೆ. ಇದನ್ನು ಚೆನ್ನವ್ವ ವಿರೋಧಿಸುತ್ತಾಳೆ. ಪುಟ್ಟರಾಜನ ತಾಯಿ ಉರಗವ್ವ ಚೆನ್ನಿಗಾದ ಅನ್ಯಾಯ ಹಾಗೂ ಮಗ ಮಾಡುತ್ತಿರುವ ಜನದ್ರೋಹದ ಕೆಲಸಗಳ ವಿರುದ್ಧ ಉಪವಾಸ ಸತ್ಯಾಗ್ರಹ ಆರಂಭಿಸುತ್ತಾಳೆ.  ಜಮೀನಿನ ವಿಚಾರಣೆಗೆ ಖುದ್ದು ಡಿಸಿ ಹಳ್ಳಿಗೆ ಬರುತ್ತಾರೆ. ಊರ ಜನ ಶೆಟ್ಟಿಗೆ ಹೆದರಿ ಜಮೀನು ಚೆನ್ನಮ್ಮಳದೇ ಆದರೆ ಶೆಟ್ಟಿ ಅದನ್ನು ಸಾಗವಳಿ ಮಾಡುತ್ತಾನೆ ಎಂದೇ ಹೇಳುತ್ತಾರೆ. ಉರಗವ್ವ ಸತ್ಯಸಂಗತಿಯನ್ನು ಡಿಸಿ ಗೆ ಹೇಳುತ್ತಾಳೆ. ಕೊನೆಗೆ ತನ್ನ ತಾಯಿಯ ಸೆಂಟಿಮೆಂಟ್ಗೆ ಒಳಗಾದ ಪುಟ್ಟರಾಜ ಜಮೀನಿನ ಪಹನಿ ಪತ್ರ ತಿದ್ದಿದ್ದಾಗಿ ಒಪ್ಪಿಕೊಳ್ಳುತ್ತಾನೆ. ಶೆಟ್ಟಿಗೆ ಸೋಲಾಗುತ್ತದೆ. ಉರಗವ್ವ ಕೊನೆಯುಸಿರೆಳೆಯುತ್ತಾಳೆ. ಇಲ್ಲಿಗೆ ನಾಟಕವೂ ಮುಗಿಯುತ್ತದೆ


       ಇಡೀ ನಾಟಕ ಏನೋ ಹೇಳಲು ಹೋಗಿ ಏನನ್ನೂ ಹೇಳದಂತಾಗಿದೆ. ಯುವ ನಿರ್ದೇಶಕ ಅಭಿಮನ್ಯು ತಮ್ಮ ಹೆಸರಿಗೆ ತಕ್ಕ ಹಾಗೆ ಉರಗವ್ವ ನಾಟಕದ ಚಕ್ರವ್ಯೂಹದೊಳಗೆ ನುಗ್ಗುವ ಸಾಹಸ ತೋರಿಸಿದ್ದಾರಾದರೂ ಅದರಿಂದ ಹೇಗೆ ಹೊರಗೆ ಬರಬೇಕು ಎಂದರಿಯದೇ ಸೋತಿದ್ದಾರೆ. ಗ್ರಾಮದೇವತೆ ಉರಗವ್ವನಿಗೂ ನಾಟಕದ ತಾಯಿ ಉರಗವ್ವನಿಗೂ ಸಂಬಂಧವೇ ಇಲ್ಲವಾಗಿದೆ. ಊರನ್ನು ಕಾಪಾಡಬೇಕಾದ ದೇವಿ ಯಾರನ್ನೂ ಕಾಪಾಡುವುದಿಲ್ಲ, ಶೆಟ್ಟಿಯ ಶೋಷಣೆ ವಿರೋಧಿಸಿದ ತಾಯಿ ಉರಗವ್ವ ಶೆಟ್ಟಯನ್ನೇನು ಮಾಡಲು ಸಾಧ್ಯವಾಗಲೇ ಇಲ್ಲ. ತಾಯಿ ಸೆಂಟಿಮೆಂಟ್ ಒಂದೇ ನಾಟಕದ ಪ್ರಮುಖ ಅಂಶವಾಗಿದ್ದು ಉಳಿದಿದ್ದೆಲ್ಲಾ ಚರ್ವಿತ ಚರ್ವಣ. ಉರಗವ್ವಳ ಬಲಿದಾನದಿಂದ ತಾತ್ಕಾಲಿಕವಾಗಿ ಚೆನ್ನಮ್ಮನ ಜಮೀನು ಉಳಿಯಿತಾದರೂ ಕೊನೆಗೂ ಶೆಟ್ಟಿ ಬದಲಾಗಲಿಲ್ಲ ಊರವರಿಗೆ ಶೋಷಣೆಯಂತೂ ತಪ್ಪಲಿಲ್ಲ. ದುಷ್ಟನಿಗೆ ಶಿಕ್ಷೆಯೂ ಆಗಲಿಲ್ಲ. ಭೂಮಿ ಕಳೆದುಕೊಂಡವರಿಗೆ ಭೂಮಿ ದಕ್ಕಲಿಲ್ಲ. ಇಡೀ ನಾಟಕ ತೌಡು ಕುಟ್ಟಿ ಕೈತೊಳೆದುಕೊಂಡಿದೆ
 
   ಟೆನೆನ್ಸಿ ಆಕ್ಟ ಅನ್ನೋದೇ ನಾಟಕದಲ್ಲಿ ಗೊಂದಲಕಾರಿಯಾಗಿ ಮೂಡಿ ಬಂದಿದೆ. ಯಾಕೆಂದರೆ ಟೆನೆನ್ಸಿ ಆಕ್ಟ ಉಳುವವನಿಗೆ ಭೂಮಿ ಎಂದು ಹೇಳುವುದರ ಜೊತೆಗೆ ಒಬ್ಬನ ಹೆಸರಿಗೆ ಇಷ್ಟೇ ಭೂಮಿ ಇರಬೇಕು ಎನ್ನುವ ಭೂಮಿತಿ ಕಾಯಿದೆ ನಿರ್ಬಂಧವನ್ನೂ ಹಾಕಲಾಗಿದೆ. ಆದರೆ ಉಳುವವನೇ ಭೂಮಿಯ ಒಡೆಯ ಎನ್ನುವ ಕಾನೂನಿನ ದುರುಪಯೋಗ ಪಡೆದ ಶೆಟ್ಟಿ ಬಡ ರೈತರ ಜಮೀನನ್ನು ತಾನೇ ಸಾಗುವಳಿ ಮಾಡುತ್ತಿದ್ದೆ ಎಂದು ತನ್ನ ಹಕ್ಕನ್ನು ಪ್ರತಿಪಾದಿಸಿ ಕಾನೂನು ಪ್ರಕಾರವೇ  ಜಮೀನನ್ನು ತನ್ನದಾಗಿಸಿಕೊಳ್ಳುವ ಸಂಚನ್ನು ರೂಪಿಸುತ್ತಾನೆ. ಆದರೆ... ನಾಟಕ ಭೂಮಿತಿ ಕಾಯಿದೆ ಬಗ್ಗೆ ಜಾಣ ಕುರುಡನ್ನು ಪ್ರದರ್ಶಿಸುತ್ತದೆ. ಹೀಗಾಗಿ ಶೆಟ್ಟಿಯ ವಾದ ಅಪ್ರಸ್ತುತವಾಗಿದೆ. ಜಮೀನು ಚೆನ್ನಮ್ಮಳದೇ ಎಂದು ಅಕ್ಕಪಕ್ಕದ ಜಮೀನಿನವರು ಸಾಕ್ಷಿ ಹೀಳಿದ ಮೇಲೆ ಪಹನಿ ತಿದ್ದುವ ಅಗತ್ಯವೇ ಇರಲಿಲ್ಲ. ಶೆಟ್ಟಿ ಜಮೀನೆಂದು ಪಹಣಿ ತಿದ್ದಿದ್ದರೆ ಜಮೀನು ಶೆಟ್ಟಿಯದೇ ಆಗುತ್ತಿತ್ತು, ಆಗ ಟೆನೆನ್ಸಿ ಆಕ್ಟನ ಆದಾರದಲ್ಲಿ ಡಿಸಿ ಬಂದು ವಿಚಾರಿಸುವ ಅಗತ್ಯವೇ ಇರಲಿಲ್ಲ. ನಾಟಕವೊಂದನ್ನು ನಿರೂಪಿಸುವಾಗ ಇಂತಹ ಗೊಂದಲಕಾರಿ ಅನುಮಾನಗಳಿಗೆ ನಂಬಲಾರ್ಹ ಪರಿಹಾರಗಳನ್ನು ನಾಟಕದಲ್ಲಿ ಕೊಡುವುದು ಸೂಕ್ತ ಎನ್ನುವುದನ್ನು ಯುವ ನಿರ್ದೇಶಕ ಅಭಿಮನ್ಯು ಅರಿತಿದ್ದರೆ ಚೆನ್ನಾಗಿತ್ತು. 

 
          ತುಂಬಾ ಎಳತವೆನಿಸುವ ಕಥಾ ನಿರೂಪನೆ, ತುಂಬಾ ನಿಧಾನ ಗತಿಯಲ್ಲಿ ಸಾಗುವ ದೃಶ್ಯಗಳು, ದೀರ್ಘವೆನಿಸುವ ಬ್ಲಾಕೌಟ್ಗಳು, ಕಥೆ ಮುಂದಕ್ಕೆ ಸಾಗದೇ ಇದ್ದಲ್ಲೆ ಇದ್ದಂತ ಅನುಭವ..  ಹೊಸತನವಿಲ್ಲದ ಕುತೂಹಲ ಕೆರಳಿಸದ ಕಥಾನಕ..... ನಿರಾಶಾದಾಯಕ ಅಂತ್ಯ....  ಹೀಗೆ ಎಲ್ಲಾ ಸೇರಿ ಉರಗವ್ವ ನಾಟಕವು ನೋಡುಗರಿಗೆ ಬೋರ್ ಹೊಡಿಸುವಲ್ಲಿ ಸಫಲವಾಗಿದೆ.  ಆದರೆ ನಾಟಕದಾದ್ಯಂತ ಗಮನ ಸೆಳೆದಿದ್ದು ಬೆಳಕಿನ ವಿನ್ಯಾಸ ಹಾಗೂ ಸಂಗೀತ ಸಂಯೋಜನೆ. ಸೈಕ್ನ್ನು ಬಳಸಿ ಬೆಳಕಿನ ಬಣ್ಣಗಳನ್ನು ದೃಶ್ಯದ ಸಮಯ ಹಾಗೂ ಮೂಡಿಗೆ ತಕ್ಕಂತೆ ಸೊಗಸಾಗಿ ಬಳಸಿದ ಲೈಟಿಂಗ್ ಡಿಸೈನ್ ಮಹದೇವಸ್ವಾಮಿ ಕೌಶಲ್ಯವು ಗಮನಾರ್ಹವಾಗಿತ್ತು. ಹಿನ್ನೆಲೆ ಸಂಗೀತವೂ ಸಹ ನಾಟಕದ ಹೈಲೈಟ್. ನಾಟಕದಾದ್ಯಂತ ನೆರೋಡಾ, ಬೆಕ್ಟ್ ಮುಂತಾದವರ ಕವಿತೆಯ ಸಾಲುಗಳನ್ನು ಸಂದರ್ಭಕ್ಕೆ ತಕ್ಕಂತೆ ಆಗಾಗ ಹಿನ್ನೆಲೆಯಲ್ಲಿ ಹೇಳುತ್ತಿರುವುದು ಕೇಳಲು ಸೋಗಸಾಗಿದ್ದು ಕಾವ್ಯವನ್ನು ನಾಟಕಕ್ಕೆ ಕಸಿ ಮಾಡುವ ಪ್ರಯತ್ನ ವಿಶಿಷ್ಟವಾಗಿದೆ. ಆದರೆ ಕ್ಲಿಷ್ಟಕರವಾದ ಕವಿತೆಗಳು ಸಾಮಾನ್ಯ ಪ್ರೇಕ್ಷಕನಿಗೆ ಅರ್ಥವಾಗುವುದೂ ಇಲ್ಲಾ, ರೈತರ ಸಮಸ್ಯೆಗೆ ಬ್ರೆಕ್ಟ ಬರೆದ ಯುದ್ದದ ಕುರಿತ ಕವಿತೆ ಉತ್ತರವೂ ಆಗುವುದಿಲ್ಲ. ಕವಿತೆಗಳು ದೃಶ್ಯಕ್ಕೆ ಬ್ಲೆಂಡ್ ಆಗಲೇ ಇಲ್ಲಾ. ಅಮ್ಮಾ ನಿನ್ನ ಎದೆಯಾಳದಲ್ಲಿ..... ಭಾವಗೀತೆ ತಾಯಿಯ ಸೆಂಟಿಮೆಂಟ್ ದೃಶ್ಯಸೃಷ್ಟಿಯಲ್ಲಿ ಭಾವನಾತ್ಮಕವಾಗಿ ಮೂಡಿಬಂದಿತು. ತಾಯಿಯ ತಲ್ಲಣ ಹಾಗೂ ಪಾಪಿ ಮಗನ ತಳಮಳವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಯಿತು

ಅಭಿಮನ್ಯು ಭೂಪತಿ
          ಖಾಲಿ ವೇದಿಕೆಯನ್ನು ಪರಿಕರಗಳಿಂದ ತುಂಬಿಸಿ ದೃಶ್ಯದ ನಂತರ ಮತ್ತೆ ನಿರ್ವಾಣಗೊಳಿಸುವ ಬಿ.ವಿ.ಕಾರಂತರ ತಂತ್ರಗಾರಿಕೆ ನಾಟಕದಲ್ಲಿ ಚೆನ್ನಾಗಿ ಮೂಡಿಬಂದಿದೆ. ಕನಿಷ್ಟ ಸಾಂಕೇತಿಕ ಸೆಟ್ಗಳನ್ನು ಬಳಸಿ ದೃಶ್ಯಗಳನ್ನು ಕಟ್ಟಿಕೊಟ್ಟ ರೀತಿ ಸೊಗಸಾಗಿದೆ. ತಾಂತ್ರಿಕವಾಗಿ ಗೆದ್ದ ನಾಟಕ ಸೋತಿದ್ದೆ ಕಥಾ ನಿರೂಪಣೆಯಲ್ಲಿ.  ರಂಗಪೂರಕ ಅಂಶಗಳನ್ನು ಚೆನ್ನಾಗಿ ಬಳಸಿಕೊಂಡ ನಿರ್ದೇಶಕರು ಕಥೆಯ ಆಯ್ಕೆ, ಕಥಾನಕದ ನಿರೂಪನೆ, ದೃಶ್ಯ ಸಂಯೋಜನೆ, ಬದಲಾದ ಕಾಲಘಟ್ಟ, ಮತ್ತು ತಾತ್ವಿಕ ಹಾಗೂ ತಾರ್ಕಿಕ ಅಂಶಗಳತ್ತ ಗಮನ ಕೊಟ್ಟಿದ್ದರೆ ಗಮನಾರ್ಹ ನಾಟಕವನ್ನು ಕೊಡಬಹುದಾಗಿತ್ತು

      ಚಂದ್ರಶೆಟ್ಟಿ ಎನ್ನುವ ಖಳನಾಯಕನ ಪಾತ್ರಕ್ಕೆ ವಾಸುರವರ ದೇಹಗಾತ್ರ ಸೂಕ್ತವೆನ್ನಿಸದಿದ್ದರೂ ಅವರ ದೇಹಭಾಷೆ ಹಾಗೂ ದ್ವನಿಬಳಕೆ ಉತ್ತಮವಾಗಿತ್ತು. ನಿರಂತರವಾಗಿ ಬಾಟಲ್ ಹಿಡಿದು ಕುಡಿಯುವಂತಹ ಕುಡುಕನನ್ನು (ರಕ್ಷಿತ್) ಹಾಗೂ ಅಷ್ಟೆಲ್ಲಾ ಕುಡಿದರೂ ಒಂದಿಷ್ಟೂ ಓಲಾಡದ ಕುಡುಕನನ್ನು ನಾಟಕದಲ್ಲಿ ಮಾತ್ರ ನೋಡಲು ಸಾಧ್ಯ. ಉರಗವ್ವಳಾಗಿ ನಟಿಸಿದ ಆರುಂಧತಿ ಇನ್ನೂ ಅಭಿನಯದಲ್ಲಿ ಪಳಗಬೇಕಿದೆ. ಉಳಿದೆಲ್ಲಾ ಹೊಸ ನಟರೂ ನಿರ್ದೇಶಕ ಹೇಳಿಕೊಟ್ಟಿದ್ದನ್ನು ಮಾಡಿ ತೋರಿಸಲು ಪ್ರಯತ್ನಿಸಿದ್ದಾರಾದರೂ ಇನ್ನೂ ಮುಖದಲ್ಲಿ ಭಾವನೆಗಳನ್ನು ವ್ಯಕ್ತಪಡಿಸುವುದನ್ನು ರೂಢಿಸಿಕೊಳ್ಳಬೇಕಿದೆ. ನಿರ್ದೇಶಕರು, ನಟರು ಎಲ್ಲರೂ ರಂಗಭೂಮಿಗೆ ಹೊಸಬರಾಗಿದ್ದರಿಂದ ಇನ್ನೂ ಕಲಿಯಬೇಕಾದದ್ದು ಬೇಕಾದಷ್ಟಿದೆ. ಅಂತವರಿಗೆ ಅನುಭವಿ ರಂಗಕರ್ಮಿ ಡಾ.ಬೈರೇಗೌಡರು ಸೂಕ್ತ ಮಾರ್ಗದರ್ಶನ ಮಾಡಬೇಕಿದೆ. ನಾಟಕವೆನ್ನುವುದು ಬರೀ ಪ್ರದರ್ಶನವಲ್ಲ ಅದೊಂದು ಕಲಾದೃಶ್ಯಮಾಧ್ಯಮ ಎನ್ನುವುದನ್ನು ಯುವಕರಿಗೆ ಮನದಟ್ಟು ಮಾಡಬೇಕಿದೆ. ಆಗಲೇ ನಾಟಕ ಕಳೆಗಟ್ಟಲು ಸಾಧ್ಯ. ರಂಗವೇದಿಕೆಯಲ್ಲಿ ಕಲೆ ಅರಳಲು ಸಾಧ್ಯ.   

                                                  -ಶಶಿಕಾಂತ ಯಡಹಳ್ಳಿ




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ