ಮಂಗಳವಾರ, ಡಿಸೆಂಬರ್ 3, 2013

ಸಿನಮೀಯ ನಾಟಕ “ಮುಸ್ಸಂಜೆ ಕಥಾ ಪ್ರಸಂಗ”


ನಾಟಕ ವಿಮರ್ಶೆ :





ನಾಟಕವೊಂದಕ್ಕೆ ವ್ಯಾಪಾರಿ ಸಿನೆಮಾದ ಸೂತ್ರಗಳನ್ನು ಅಳವಡಿಸಿದರೆ ಹೇಗಿರುತ್ತದೆ?. ರೂಪಾಂತರ ರಂಗತಂಡ ಪ್ರಸ್ತುತಪಡಿಸಿದ ಮುಸ್ಸಂಜೆ ಕಥಾ ಪ್ರಸಂಗ ಹಾಗಿರುತ್ತದೆ. ಸಿನೆಮಾಕ್ಕೆ ಸೆನ್ಸಾರ್ ಮಂಡಳಿ ಎನ್ನುವ ಗುಮ್ಮನ ಹೆದರಿಕೆಯಾದರೂ ಇರುತ್ತದೆ. ನಾಟಕಕ್ಕೆ ಅದರ ಭಯವಿಲ್ಲವಲ್ಲ. ನಾಟಕದಲ್ಲಿ ಸಿನೆಮಾ ಹಾಡುಗಳಿವೆ, ಕಿಸ್ಸಿಂಗ್ ಸೀನ್ಗಳಿವೆ, ಒಂದು ರೇಪ್ ಸೀನ್ ಸ್ವಲ್ಪದರಲ್ಲೇ ಮಿಸ್ ಆಗಿದೆ, ಡಬಲ್ ಮೀನಿಂಗ್ ಡೈಲಾಗ್ಗಳಿವೆ, ಹೆಂಗಸರ ಹಿಂದೆ ನಾಯಿಗಳಂತೆ ಬಿದ್ದ ಗಂಡಸರ ಒಂದು ದೊಡ್ಡ ದಂಡೇ ಇದೆ... ಹೀಗಾಗಿ ಹಾಸ್ಯ ಅಪಹಾಸ್ಯ, ದೂಮಪಾನ, ಮಧ್ಯಪಾನ ಜೊತೆಗೆ ಪುಂಖಾನು ಪುಂಖವಾದ ಬೈಗುಳಗಳ ಸರಮಾಲೆಗಳು ನಾಟಕದಲ್ಲಿ ಮಿಲಿತಗೊಂಡು ಪಡ್ಡೆ ಹುಡುಗರೆದೆಯಲ್ಲಿ ಹಬ್ಬವನ್ನುಂಟುಮಾಡುವಂತೆ ನಾಟಕ ಮೂಡಿಬಂದಿದೆ. ಮಿಂಡ್ರಿ, ಮುಂಡೆ, ರಂಡೆ, ಲೌಡಿ, ಬೋಸಡೀಕೆ, ಬೋಸಡಿ, ಚಿನಾಲಿ, ಹಾಟಗಳ್ಳ ..... ಮುಂತಾದ ಡಿಸೈನ್ ಡಿಸೈನ್ ಬೈಗುಳುಗಳನ್ನು ಬೆಂಗಳೂರಿನಲ್ಲಿ ಕೇಳಿ ಆನಂದಿಸಬೇಕೆಂದರೆ ನಾಟಕವನ್ನು ಒಮ್ಮೆ ನೋಡಲೇಬೇಕು. ಮನುಷ್ಯರನ್ನು ಬಿಡಿ ದೇವರ ದೇವ ಶಿವನನ್ನೂ ಸಹ ಸೂಳೆಮಗಾ ಶಿವಾ ಎಂದು ಬೈಯುವ ದಾವಂತ ನಾಟಕದ್ದಾಗಿದೆ. (ನಮ್ಮ ದೇವರಿಗೇನಾದರೂ ಹೀಗೆ ಬೈದಿದ್ದರೆ ರಕ್ತಪಾತ ಆಗ್ತಿತ್ತು ಸಾರ್... ಎಂದು ಒಬ್ಬ ಮುಸ್ಲಿಂ ಯುವಕ ನಾಟಕದ ನಂತರ ಪ್ರತಿಕೃಯಿಸಿದ್ದು  ಹಿಂದೂಗಳ ಉದಾರತೆಗೆ ಸಾಕ್ಷಿಯಾಗಿತ್ತು)
          ಬಹುಷಃ ಇದೇ ರೀತಿಯಲ್ಲಿ ಸಿನೆಮಾ ತೆಗೆದಿದ್ದರೆ ಸೆನ್ಸಾರ್ ಮಂಡಳಿ ಬೈಗಳುಗಳನ್ನೆಲ್ಲಾ ಮ್ಯೂಟ್ ಮಾಡಿ ಬರೀ ಬೀಪ್ ಗಳನ್ನು ಕೇಳಬಹುದಾಗಿತ್ತು. ಆದರೆ ನಾಟಕದ ಪ್ರೇಕ್ಷಕರು ಒಂದು ರೀತಿಯಲ್ಲಿ ಅದೃಷ್ಟವಂತರು... ಬೀಪ್ ಮತ್ತು ಸೆನ್ಸಾರ್ ಕಟ್ಗಳಿಲ್ಲದೇ ಎಲ್ಲವನ್ನೂ ನೋಡುವ ಹಾಗೂ ಕೇಳುವ ಭಾಗ್ಯ ಪಡೆದಿದ್ದಾರೆ. ನಾಟಕದ ನಿರ್ದೇಶಕರೂ ಸಹ ಅಂತಹ ಸೌಭಾಗ್ಯವನ್ನು ಸಂಭ್ರಮದಿಂದ ಉಣಬಡಿಸಿದ್ದಾರೆ. ಊಟಕ್ಕೆ ಉಪ್ಪಿನಕಾಯಿಯ ಹಾಗೆ ಬೈಗಳು ಅಪರೂಪಕ್ಕಿದ್ದರೆ ಸಹಿಸಬಹುದಾಗಿತ್ತೇನೋ? ಆದರೆ ಉಪ್ಪಿನಕಾಯಿಯೇ ಊಟವಾದಂತೆ ಬೈಗುಳಗಳಿಲ್ಲದೇ ಸಂಭಾಷಣೆಗಳೇ ಇಲ್ಲವೇನೋ ಎನ್ನುವ ರೀತಿ ನಾಟಕ ಮೂಡಿಬಂದಿದೆ. ಅದೂ ಮಹಿಳೆಯರನ್ನು ಗುರಿಯಾಗಿರಿಸಿಕೊಂಡ ಬೈಗುಳಗಳು ಪುರುಷಾಹಾಂಕಾರಕ್ಕೆ ಸಾಕ್ಷಿಯಾಗಿವೆ.


          ಯಾಕೆ ಹೀಗೆ...? ಎಂದು ರಂಗರೂಪಕರ್ತರಾದ ಸೂಳೇರಿಪಾಳ್ಯರನ್ನು ಕೇಳಿದರೆ ಅರೆ ಇದರಲ್ಲಿ ನಂದೇನಿಲ್ಲಾ ಎಲ್ಲಾ ಲಂಕೇಶರ ಕಾದಂಬರಿಯಲ್ಲೇ ಇದೆಯಲ್ಲಾ ಅಂತಾರೆ. ನಿರ್ದೇಶಕರನ್ನು ಕೇಳಿದರೆ ಕಾದಂಬರಿಯಲ್ಲಿದ್ದುದನ್ನೇ ಯಥಾವತ್ತಾಗಿ ತೋರಿಸಲಾಗಿದೆ, ಸ್ವಲ್ಪ ರಸವತ್ತತೆ ಇರಲಿ ಎಂದು ಸಿನೆಮಾ ಹಾಡು ಹಾಗೂ ಶೈಲಿಯನ್ನು ಬಳಸಲಾಗಿದೆ ಅಷ್ಟೇ ಎನ್ನುತ್ತಾರೆ. ಯುವಕರನ್ನು ಕೇಳಿದರೆ ನಾಟಕ ಸೂಪರ್ ಸಿಕ್ಕಾಪಟ್ಟೆ ನಗಿಸುತ್ತೆ ಎಂದರೆ, ಹಿರಿಯ ಪ್ರೇಕ್ಷಕರು ಅಯ್ಯೋ ಪ್ಯಾಮಲಿ ಜೊತೆಗೆ ಕೂತು ನಾಟಕ ನೋಡೋದಕ್ಕೆ ಒಂಚೂರು ಮುಜುಗರ ಆಗುತ್ತೆ ಎಂದು ಅವಲತ್ತುಕೊಳ್ಳುತ್ತಾರೆ. ಕೆಲವು ಹಿರಿಯ ರಂಗನಿರ್ದೇಶಕರ ಅಭಿಪ್ರಾಯ ಕೇಳಿದರೆ ಲಂಕೇಶರ ನಾಟಕದ ನಿಜವಾದ ಆಶಯ ಹಾಸ್ಯದಲ್ಲಿ ಕೊಚ್ಚಿಹೋಗಿದೆ ಎಂದು ನಿಟ್ಟುಸಿರಿಡುತ್ತಾರೆ. ಬಹುಷಃ ಅಭಿಪ್ರಾಯಗಳೇ ಇಡೀ ನಾಟಕದ ವಿಶ್ಲೇಷಣೆಯಾಗಿದೆ. ಆದರೆ ಸಾಹಿತ್ಯ, ನಾಟಕ ಹಾಗೂ ಸಿನೆಮಾಗಳ ವ್ಯಾಕರಣಗಳೇ ಬೇರೆ ಬೇರೆ. ಅಕ್ಷರ ರೂಪದಲ್ಲಿರುವುದನ್ನೆಲ್ಲಾ ದೃಶ್ಯಮಾಧ್ಯಮಕ್ಕೆ ಅಳವಡಿಸಲು ಸಾಧ್ಯವಾಗುವುದಿಲ್ಲ. ಸಾಹಿತ್ಯದಲ್ಲಿ ಅಗತ್ಯವಾಗಿರುವುದು ನಾಟಕದಲ್ಲಿ ಅತಿರೇಕವಾಗುತ್ತದೆ. ಕಾದಂಬರಿಯಲ್ಲಿ ಗಂಡು ಹೆಣ್ಣು ಬಟ್ಟೆ ಬಿಚ್ಚಿ ಬೆತ್ತಲಾದರು ಎಂದು ಬರೆದಿದ್ದರೆ ನಾಟಕದಲ್ಲೂ ಬೆತ್ತಲಾಗಿ ತೊರಿಸಲು ಸಾಧ್ಯವಾಗುವುದಿಲ್ಲ. ಇನ್ನೂ ನಮ್ಮ ಸಮಾಜ ಅಷ್ಟೊಂದು ಮುಕ್ತವಾಗಿಲ್ಲ. ಅಂತಹ ಸಂದರ್ಭದಲ್ಲಿ  ಸಾಂಕೇತಿಕತೆ ಮುಖ್ಯವಾಗುತ್ತದೆಯೇ ಹೊರತು ಬರೆದದ್ದನ್ನು ಬರೆದ ಹಾಗೇ ತೋರಿಸುವುದು ನಮ್ಮ ಸಮಾಜಕ ಇತಿ ಮಿತಿಗೆ ಹೊಂದುವಂತುಹುದಲ್ಲ. ಬರಹದಲ್ಲಿ ವಾಚ್ಯವಾಗಿದ್ದನ್ನು ನಾಟಕದಲ್ಲಿ ಸೂಚ್ಯವಾಗಿಸುವುದೇ ನಿರ್ದೇಶಕನಿಗಿರುವ ಸವಾಲು. ಸೂಚ್ಯವಾಗಿರುವುದನ್ನೂ ವಾಚ್ಯವಾಗಿಸುವುದು ನಿರ್ದೇಶಕರ ಆಶಯವಾದಂತಿದೆ. ಅಂತಹ ಪ್ರಯತ್ನದಲ್ಲಿ ನಿರ್ದೇಶಕರು ಯಶಸ್ವಿಯೂ ಆಗಿದ್ದಾರೆ.
    ಪಿ.ಲಂಕೇಶರವರ ಸುಪ್ರಸಿದ್ದ ಕಾದಂಬರಿ ಮುಸ್ಸಂಜೆ ಕಥಾ ಪ್ರಸಂಗವನ್ನು ಅದೇ ಹೆಸರಿನಲ್ಲಿ ಬಸವರಾಜ ಸೂಳೇರಿಪಾಳ್ಯರವರು ರಂಗರೂಪಗೊಳಿಸಿದ್ದು, ಕೆಎಸ್ಡಿಎಲ್ ಚಂದ್ರುರವರು ತಮ್ಮ ರೂಪಾಂತರ ತಂಡದ ಕಲಾವಿದರಿಗೆ ನಿರ್ದೇಶಿಸಿದ್ದಾರೆ. 2005ರಲ್ಲಿ ಮೊದಲ ಪ್ರದರ್ಶನ ಕಂಡ ನಾಟಕವನ್ನು ರವೀಂದ್ರ ಕಲಾಕ್ಷೇತ್ರ-50 ಸುವರ್ಣ ಸಂಭ್ರಮ ರಂಗಉತ್ಸವದ ಮೊದಲ ನಾಟಕವಾಗಿ 2013 ಡಿಸೆಂಬರ್ 2ರಂದು ರವೀಂದ್ರ ಕಲಾಕ್ಚೇತ್ರದಲ್ಲಿ ಪ್ರದರ್ಶಿಸಲಾಯಿತು. ಜಾತಿಯೊಳಗಿನ ವೈಷಮ್ಯವು ಅದು ಹೇಗೆ ಒಂದು ಹಳ್ಳಿಯನ್ನೇ ಬಲಿತೆಗೆದುಕೊಂಡಿತು ಎಂಬುದನ್ನು ದೃಶ್ಯರೂಪದಲ್ಲಿ ತೋರಿಸುವ ಪ್ರಯತ್ನ ನಾಟಕದ್ದು.
          ಆಕೆ ಆನೆಬಡ್ಡಿ ರಂಗವ್ವ ಲಿಂಗಾಯತ ಜಾತಿಯವಳು. ಗಂಡ ಸತ್ತ ನಂತರ ತನ್ನ ಒಬ್ಬಳೇ ಮಗಳಾದ ಸಾವಂತ್ರಿಯ ಜೊತೆಗೆ ಊರ ಜನರ ನೀಚತನವನ್ನು ವಿರೋಧಿಸಿ ಗಯ್ಯಾಳಿಯಾಗಿ ಬದುಕುತ್ತಿರುತ್ತಾಳೆ. ಬದುಕಿಗಾಗಿ ಹಾಲು ಮಾರಿ ಬಂದ ಲಾಭದ ಹಣವನ್ನು ಊರಿನವರಿಗೆ ಬಡ್ಡಿಗೆ ಕೊಡುತ್ತಿರುತ್ತಾಳೆ. ಹಿಟ್ಟಿನ ಗಿರಣಿಯ ಭರಮಣ್ಣನಿಗೆ ಕೊಟ್ಟ ಸಾಲ ಹಾಗೂ ಬಡ್ಡಿಯನ್ನು ರಂಗಮ್ಮ ನಿರ್ದಾಕ್ಷಣ್ಯವಾಗಿ ವಸೂಲಿ ಮಾಡಿ ಆತನ ಸಿಟ್ಟಿಗೆ ಕಾರಣರಾಗುತ್ತಾಳೆ.  ಮಗಳು ಬ್ಯಾಡರ ಹುಡುಗ ಮಂಜನನ್ನು ಪ್ರೀತಿಸುತ್ತಾಳೆ. ಇದನ್ನೇ ಮುಂದಿಟ್ಟುಕೊಂಡು ಆತ ಲಿಂಗಾಯತ ಜಾತಿಯವರನ್ನು ರಂಗಮ್ಮನ ವಿರುದ್ಧ ಎತ್ತಿಕಟ್ಟುತ್ತಾನೆ. ಸಾವಂತ್ರಿಯನ್ನು ಕೆಣಕಲು ಹೋಗಿ ಏಟು ತಿಂದು ಅವಮಾನಿತನಾದ ಬೂಸಿ ಬಸ್ಯಾ ಹಾಗೂ ಇನ್ನಿಬ್ಬರನ್ನು ಸೇರಿಸಿಕೊಂಡು ರಂಗಮ್ಮನ ಮಗಳನ್ನು ಅಪಹರಿಸಿ ಅತ್ಯಾಚಾರ ಮಾಡಲು ಭರಮಣ್ಣ ಮಸಲತ್ತು ಮಾಡುತ್ತಾನೆ. ಆದರೆ ಸಾವಂತ್ರಿ ಎಂದು ತಿಳಿದು ರಂಗಮ್ಮನ ಮನೆಗೆ ಬಂದಿದ್ದ ಬ್ರಾಹ್ಮಣರ ಪ್ರೋಪೆಸರ್ ಹೆಂಡತಿ ಮಮತಾಜ್ಳನ್ನು ಅಪಹರಿಸಿ ಬೇಸ್ತು ಬೀಳುತ್ತಾರೆ. ಸಂಚಿನಲ್ಲಿ ಸಹಾಯಕ್ಕೆ ಬಂದ ಪೈಲ್ವಾನ್ ಶಿವಾಜಿಯ ಜೊತೆಗೆ ಭರಮಣ್ಣನ ಹೆಂಡತಿ ಓಡಿಹೋಗುತ್ತಾಳೆ. ರಂಗವ್ವ ತಮ್ಮ ಶಿವನಂಜನನ್ನೂ ಸಹ ತಮ್ಮ ಸಂಚಿನ ಭಾಗವಾಗಿಸಿದ ಭರಮಣ್ಣ ಮತ್ತು ದುಷ್ಟ ಕೂಟವು ಬ್ಯಾಡರ ಮಂಜ ಮತ್ತು ಸಾವಂತ್ರಿಯನ್ನು ಕಟ್ಟಿಹಾಕಿ ಹೊಡೆದು ಸಾಯಿಸಲು ಪ್ರಯತ್ನಿಸುತ್ತಾರೆ. ವಿಷಯ ತಿಳಿದು ರೌದ್ರಾವತಾರ ತಾಳಿ ಬಂದ ರಂಗವ್ವ ಕುಡುಗೋಲು ಹಿಡಿದು ಎಲ್ಲರನ್ನೂ ಎದುರಿಸಿ ನಿಂತು ಬ್ಯಾಡರ ಹುಡುಗನ ಜೊತೆಗೆ ತನ್ನ ಮಗಳ ಕತ್ತಿಗೆ ತಾಳಿ ಕಟ್ಟಿಸುತ್ತಾಳೆ. ಊರಲ್ಲಿ ಗಲಾಟೆಯಾಗಿ ಬೆಂಕಿ ಹತ್ತಿ ಉರಿಯುತ್ತದೆ. ಪೊಲೀಸರು ಭರಮಣ್ಣ ಮತ್ತು ಆತನ ಸಹವರ್ತಿಗಳನ್ನು ಬಂಧಿಸಿ ಎಳೆದೊಯ್ಯುತ್ತಾರೆ. ರಂಗಮ್ಮ ತನ್ನ ಮಗಳು ಹಾಗೂ ಅಳಿಯನ ಜೊತೆಗೆ ಊರು ತೊರೆಯುತ್ತಾಳೆ.  ಇಲ್ಲಿಗೆ ನಾಟಕ ಮುಗಿಯುತ್ತದೆ

   ಅನ್ಯಜಾತಿಯವನನ್ನು ಪ್ರೀತಿಸುವ ಎಳೆಯ ಜೀವಗಳಿಗೆ ಮೊಟ್ಟ ಮೊದಲ ಪ್ರತಿರೋಧ ಹೆತ್ತವರಿಂದ ಬಂದರೆ, ನಂತರ ವಿರೋಧಿಸಿ ಎದ್ದು ನಿಲ್ಲುವುದು ಜಾತಿ ಎಂಬ ಭೂತ. ಹೆತ್ತವರೊಪ್ಪಿದರೂ ಜಾತಿ ಜನ ಪ್ರತಿರೋಧ ಒಡ್ಡುವುದು ಸರ್ವೇಸಾಮಾನ್ಯ. ಜಾತಿ ಜನರ ವಿಕೃತ ಮನೋಭಾವ, ವಿಕಾರ ಸಂಕುಚಿತ ವಿಚಾರಗಳು ಮತ್ತು ಎಲ್ಲಕ್ಕಿಂತ ಜಾತಿ ದೊಡ್ಡದು ಎನ್ನುತ್ತಲೇ ಕೀಳು ಕೆಲಸಗಳನ್ನು ಮಾಡುವ ಜನಾಂಗವೊಂದನ್ನು ವಿರೋಧಿಸಿ ತನ್ನ ಮಗಳು ಪ್ರೀತಿಸಿದ ಬೇಡರ ಹುಡುಗನಿಗೆ ಮದುವೆ ಮಾಡಿಸುವ ದಿಟ್ಟ ನಿರ್ಧಾರ ಕೈಗೊಂಡ ವಿಧವೆ ರಂಗಮ್ಮ ಜಾತಿವಾದಿಗಳ ಮುಖವಾಡದ ಹಿಂದಿರುವ ವಿಕಾರತೆಯನ್ನು ಹಾಗೂ ದೊಡ್ಡ ಮಾತುಗಳ ಹಿಂದಿರುವ ಸಣ್ಣತನಗಳನ್ನು ಪ್ರೇಕ್ಷಕರ ಮುಂದೆ ಅನಾವರಣಗೊಳಿಸಿದೆ. ಅದಕ್ಕಿಂತ ಹೆಚ್ಚಾಗಿ ವ್ಯಕ್ತಿಗಳು ತಮ್ಮ ಸ್ವಾರ್ಥ ಸಾಧನೆಗೋ ಇಲ್ಲವೇ ದ್ವೇಷ ಸಾಧನೆಗೂ ಅದು ಹೇಗೆ ಜಾತಿಯನ್ನು ಬಳಸಿಕೊಳ್ಳುತ್ತಾರೆ ಹಾಗೂ ಜಾತಿಯ ಹೆಸರಲ್ಲಿ ಒಂದಾಗಿ ಶೋಷಣೆ ಮಾಡುತ್ತಾರೆ ಎನ್ನುವುದನ್ನು ನಾಟಕ ಬಲು ಮಾರ್ಮಿಕವಾಗಿ ತೋರಿಸುತ್ತದೆ. 
        ರಂಗವ್ವನನ್ನು ಬಡ್ಡಿಯಾಡುವ ದುಷ್ಟ ಹೆಣ್ಣು. ಹಾಲಿಗೆ ನೀರು ಬೆರೆಸಿ ಮಾರುವ ಮೋಸಗಾತಿ ಎಂದು ಬಿಂಬಿಸುತ್ತಾ ಅವಳ ಬಾಯಲ್ಲಿ ಇಲ್ಲಸಲ್ಲದ ಬೈಗುಳಗಳನ್ನು ಹೇಳಿಸುವ ಮೂಲಕ ನಾಟಕದಲ್ಲಿ ಪಾತ್ರವನ್ನು ಖಳನಾಯಕಿಯನ್ನಾಗಿ ಮಾಡಲಾಗಿದೆ. ನಿಜವೇನೆಂದರೆ ಇಡೀ ನಾಟಕದ ನಾಯಕಿಯೇ ರಂಗವ್ವ. ಅವಳ ಸಂಕಟಗಳು ನೋಡುಗರಲ್ಲಿ ವಿಷಾದವನ್ನು ಹುಟ್ಟಿಸುವ ಬದಲು ಬರೀ ವಿಕೃತ ವಿನೋದವನ್ನು ಹೊರಹೊಮ್ಮಿಸಿದ್ದರೆ ಅದಕ್ಕೆ ಲಂಕೇಶರಂತೂ ಕಾರಣರಲ್ಲ. ಯಾಕೆಂದರೆ ಕಾದಂಬರಿಯನ್ನು ಓದುವಾಗ ರಂಗವ್ವಳ ಬಗ್ಗೆ ಒಂದು ರೀತಿಯ ಸಾಪ್ಟ್ ದೋರಣೆ ಓದುಗನ ಅನುಭವಕ್ಕೆ ಬರುತ್ತದೆ. ಆದರೆ ನಾಟಕದ ರಂಗವ್ವನ ಬಗ್ಗೆ ಒಳ್ಳೆಯ ಭಾವನೆ ಬರುವಂತಿಲ್ಲ. ಜಾತಿಯ ಜನರನ್ನು ಎದುರು ಹಾಕಿಕೊಂಡು, ತನ್ನ ಮಗಳ ಮಾನ ಹಾಗೂ ತನ್ನ ಮರ್ಯಾದೆಯನ್ನೂ ಕಾಪಾಡಿಕೊಂಡು ಜೊತೆಗೆ ಬದುಕಿನ ಬಂಡಿಯನ್ನೂ ಒಬ್ಬಂಟಿಯಾಗಿ ಎಳೆಯಬೇಕಾದ ಅನಿವಾರ್ಯತೆಗೆ ಬದ್ದವಾಗಿ ಆಕೆ ಗಯ್ಯಾಳಿತನವನ್ನು ನೀಚ ಗಂಡಸರ ವಿರುದ್ಧದ ಹೋರಾಟದಲ್ಲಿ ಗುರಾಣಿಯನ್ನಾಗಿಸಿಕೊಂಡಿರುತ್ತಾಳೆ. ಅವಳೆಂತಾ ಕೆಚ್ಚೆದೆಯ ಹೆಣ್ಣೆಂದರೆ ತನ್ನ ಇಡೀ ಜಾತಿಯನ್ನು ಎದುರು ಹಾಕಿಕೊಂಡು ತನ್ನ ಮಗಳಿಗೆ ಅಂತರ್ಜಾತಿಯ ವಿವಾಹ ಮಾಡುತ್ತಾಳೆ. ಜೊತೆಗೆ ಜಾತ್ಯಸ್ತರ ಮುಖವಾಡಗಳನ್ನು ಬಯಲುಗೊಳಿಸುತ್ತಾಳೆ.
          ಲಂಕೇಶರ ಕತೃತ್ವಶಕ್ತಿ ಇರುವುದು ಎಲ್ಲವನ್ನೂ ಒಡೆಯುವುದರಲ್ಲಿ. ಅವರ ಸಾಮರ್ಥ್ಯ ಇರುವುದು ಸಂದೇಹ ಪ್ರಜ್ಞೆಯಲ್ಲಿ. ಅವರು ಸೃಷ್ಟಿಸುವ ಯಾವ ಪಾತ್ರವೂ ಪರಿಪೂರ್ಣವಾಗಿರುವುದಿಲ್ಲ, ಕಪ್ಪು-ಬಿಳುಪು ವ್ಯಕ್ತಿತ್ವದ ಯಾವ ಪಾತ್ರಗಳನ್ನೂ ಅವರು ಎಂದೂ ಸೃಷ್ಟಿಸಲೇ ಇಲ್ಲ. ವ್ಯಕ್ತಿಗಳಲ್ಲಿರುವ ದೌರ್ಬಲ್ಯಗಳನ್ನು ತೋರಿಸುತ್ತಲೇ ಸಮಾಜವನ್ನು ವಿಶ್ಲೇಷಿಸುವ ಪರಿ ತುಂಬಾ ವಿಶಿಷ್ಟವಾದದ್ದು. ಬ್ರಾಹ್ಮಣೋ ಬ್ರಹ್ಮಾಂಡ ಪಾತಕಃ, ಜಂಗಮೋ ಜಗದ್ಘಾತಕಃ ಎನ್ನುವ ಸೂಕ್ತಿಯಂತೆ ಇಡೀ ನಾಟಕ ಜಂಗಮರು ಅಂದರೆ ವೀರಶೈವ ಜನಾಂಗದ ಸ್ವಾರ್ಥಿಗಳ ಕುತಂತ್ರವನ್ನು ಬಯಲುಗೊಳಿಸುವ ಜೊತೆ ಜೊತೆಗೆ ಉದಾರವಾದಿ ಬ್ರಾಹ್ಮಣರ ಕ್ರಾಂತಿಕಾರಿ ಮನೋಭಾವನೆಯ ಹಿಂದಿರುವ ಆಷಾಡಭೂತತನವನ್ನೂ ಬೆತ್ತಲುಗೊಳಿಸುತ್ತದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಜಾತಿ ಯಾವುದಾದರೇನು ಪುರುಷರು ಮಹಿಳೆಯರ ಮೇಲೆ ನಡೆಸುವ ನಿರಂತರ ಶೋಷಣೆಯನ್ನು, ಕೊಡುವ ಲೈಂಗಿಕ ಕಿರುಕುಳವನ್ನು ತೋರಿಸುವಲ್ಲಿ ನಾಟಕ ಸಫಲವಾಗಿದೆ. ವಿಧವೆಯಾದ ಒಂಟಿ ಮಹಿಳೆಯ ತಲ್ಲಣಗಳ ಪ್ರತಿರೂಪವಾದ ರಂಗಮ್ಮ ಎದುರಿಸುವ ತನ್ನದೇ ಜಾತಿಯವರ ವಿರೋಧ ಮತ್ತು ಪಿತೂರಿಗಳ ಒಟ್ಟಾರೆ ಮೊತ್ತವಾದ ರಂಗಪ್ರಯೋಗವು ಮಹಿಳೆಯನ್ನು ಸಾಮ, ಭೇದ, ದಂಡಾಧಿಗಳಿಂದ ತಮ್ಮ ಅಡಿಯಾಳಾಗಿಸುವ ಪುರುಷ ಪ್ರಧಾನ ಸಮಾಜದ ಆಂತರಿಕ ಆಸೆಗಳ ಕುತಂತ್ರವನ್ನು ಬಯಲುಗೊಳಿಸಿದೆ. ಹಾಗೂ ಹರೆಯದ ಹುಡುಗಿ ಸಾವಂತ್ರಿಯನ್ನು ಹೇಗಾದರೂ ಪಡೆಯಬೇಕು ಸಿಗಿದಿದ್ದರೆ ಬಲಾತ್ಕಾರ ಮಾಡಬೇಕು ಎನ್ನುವ ಪುರುಷ ಪ್ರಧಾನ ಸಮಾಜನ ವಿಕೃತ ಮನೋಭಾವಕ್ಕೆ ಕೈಗನ್ನಡಿಯಾಗಿ ನಾಟಕ ಮೂಡಿಬಂದಿದೆ. ತನ್ನ ಅಸಾಧ್ಯ ದೈರ್ಯದಿಂದ ಜಾತಿಯನ್ನು ವಿರೋಧಿಸಿ ಅಂತರ್ ಜಾತಿಯ ಮದುವೆ ಮಾಡಿಸಿ ಗೆದ್ದ ರಂಗಮ್ಮ ಕೊನೆಗೂ ಮನೆ-ಊರನ್ನೇ ತೊರೆಯುವುದು ಆಕೆಯ ಸೋಲು ಆಗಿದೆ. ಆಕೆಯ ಸೋಲು ಇಡೀ ಜಾತಿ ಸಮಾಜದ ಸೋಗಲಾಡಿತನದ ಸೋಲು ಆಗಿದೆ.  

     ಲಂಕೇಶರ ಮುಸ್ಸಂಜೆ.... ಕಾದಂಬರಿಯ ಆಂತರಿಕ ಸತ್ವವು ರಂಗರೂಪಾಂತರ ಮಾಡಿದ ಸೂಳೇರಿಪಾಳ್ಯರವರಿಗೂ ಅರ್ಥವಾಗಿಲ್ಲ ಹಾಗೂ ಕಾದಂಬರಿಯ ನಿಜವಾದ ಆಶಯ ರಂಗನಿರ್ದೇಶಕ ಚಂದ್ರುರವರಿಗೂ ದಕ್ಕಿಲ್ಲ. ಹೀಗಾಗಿ ನವೀರಾದ ವಿನೋದದ ಮೂಲಕ ವಿಷಾದವನ್ನು ಹೇಳುವ,  ಜಾತಿಯತೆ ಮತ್ತು ಪುರುಷ ಪಾರುಪತ್ಯವನ್ನು ವಿಡಂಬನಾತ್ಮಕವಾಗಿ ಹೇಳುವ ಲಂಕೇಶರ ಕಥೆಯನ್ನು ಹಾಸ್ಯ ಸಾಹಿತ್ಯ ಎಂದು ನಾಟಕದ ರೂವಾರಿಗಳು ತಪ್ಪಾಗಿ ಅರ್ಥೈಸಿಕೊಂಡಂತಿದೆ. ಹೀಗಾಗಿ ಬರಿ ಹಾಸ್ಯ ಅಪಹಾಸ್ಯ ಬೈಗುಳಗಳ ಅಬ್ಬರದಲ್ಲಿ ಲಂಕೇಶರ ಆಶಯ ಮರೆಯಾಗಿ ಹೋಗಿದೆ. ಹೀಗಾಗಿ ಇದು ಲಂಕೇಶರ ಸಾಮಾಜಿಕ ಬದ್ಧತೆ ಇರುವ ಕಾದಂಬರಿಯನ್ನು ಆದರಿಸಿ ಹಾಸ್ಯ ನಾಟಕವೊಂದನ್ನು ತಮಗಿಷ್ಟಬಂದಂತೆ ಸಿನೆಮೀಯ ಶೈಲಿಯಲ್ಲಿ ನಿರೂಪಿಸಲಾಗಿದೆ. ನಿಟ್ಟಿನಲ್ಲಿ ಮೂಲ ಲೇಖಕರಿಗೆ ಅನ್ಯಾಯ ಮಾಡಲಾಗಿದೆ ಎಂಬುದು ಕಾದಂಬರಿಯನ್ನು ಓದಿ ನಾಟಕ ನೋಡಿದವರ ಅನುಭವಕ್ಕೆ ಬಾರದೇ ಇರದು.     
          ನಾಟಕದಲ್ಲಿ ಆಗಾಗ ಕೆಲವು ಗೊಂದಲಗಳು ಪ್ರೇಕ್ಷಕರಿಗೆ ಕಿರಿಕಿರಿಯನ್ನುಂಟು ಮಾಡಿದವು. ಸೀರೆಯೊಂದನ್ನು ಪ್ರಿಯತಮೆಗೆ ಕಾಣಿಕೆ ಕೊಡಬೇಕಿದ್ದ ಬೇಡರ ಮಂಜ ಅದನ್ನು ಮರೆತು ಬಂದು ಆಮೇಲೆ ಕೊಡುತ್ತೇನೆನ್ನುತ್ತಾನಾದರೂ ಕೊಡದೇ ಇರುವ ಸೀರೆ ಸಮೇತ ಸಾವಂತ್ರಿ ಮನೆಗೆ ಬರುವುದು ಅಭಾಸಕಾರಿಯಾಗಿದೆ. ತಾಳಿ ಕಟ್ಟಿಸುವ ಸಮಯಕ್ಕೆ ಸರಿಯಾಗಿ ರಂಗಮ್ಮನ ಜೊತೆಗೆ ಇರಬೇಕಾಗಿದ್ದ ತಾಳಿ ಇಟ್ಟಿರುವ ಎಲೆ ಚೀಲವೇ ಇರದೇ ಎಲ್ಲಾ ನಟರೂ ಪರದಾಡಬೇಕಾಯಿತು.  ನಾಟಕದ ಕೊನೆಗೆ ರಂಗಮ್ಮ ತನ್ನ ಮಗಳು ಹಾಗೂ ಅಳಿಯನ ಜೊತೆಗೆ ಮನೆ ಬಿಟ್ಟು ಹೊರಗೆ ಹೋಗುವಾಗ ಮನೆಯ ಬಾಗಿಲ ಚೌಕಟ್ಟೇ ಮಾಯ. ನಟರ ಬೇಜವಾಬ್ದಾರಿತನದಿಂದ ಘಟಿಸಿದ ಇಂತಹ ಕೆಲವು ಆಕಸ್ಮಿಕ ಅವಘಡಗಳನ್ನು ನಿರ್ದೇಶಕರು ಸ್ಟೇಜ್ ತಾಲಿಂಗಳ ಮೂಲಕ ತಡೆಯಬಹುದಾಗಿತ್ತು. ಕ್ಲೈಮ್ಯಾಕ್ಸನಲ್ಲಿ ಎಲ್ಲಾ ದುಷ್ಟ ಕೂಟದ ಗುಂಪು ಪ್ರೇಕ್ಷಕರ ಎದುರಲ್ಲಿದ್ದಾಗ ಊರಿಗೆ ಬೆಂಕಿ ಹಾಕಿ ದೊಂಬಿ ಎಬ್ಬಿಸಿದವರು ಯಾರು? ಭರಮಣ್ಣನ ಗ್ಯಾಂಗ ಬೆಂಕಿ ಹಾಕಿಲ್ಲವಾದರೆ ಅವರನ್ನ್ಯಾಕೆ ಪೋಲೀಸರು ಬಂಧಿಸಿ ಕರೆದೊಯ್ದರು? ಎನ್ನುವುದಕ್ಕೆ ಸಮರ್ಥವಾದ ಉತ್ತರಗಳು ನಾಟಕದಲ್ಲಿಲ್ಲ.
          ಬೆಳಕಿನ ರೂವಾರಿ (ಪ್ರಭಾಕರ ಬಾಬು) ಬಾರಿ ಅರ್ಜೆಂಟ್ನಲ್ಲಿದ್ದಂತಿತ್ತು. ಇನ್ನೂ ಸೆಟ್ ಹೊಂದಾಣಿಕೆ ಮಾಡಿಕೊಳ್ಳುತ್ತಿರುವಾಗಲೇ ಬೆಳಕು ಬಿಡುವುದು ಹಾಗೂ ಯಾವಾಗ ಬೆಳಕು ಬೇಕಾಗಿತ್ತೋ ಆಗ ಬೆಳಕೇ ಬಿಡದಿರುವುದು ನೋಡುಗರಿಗೆ ಕಿರಿಕಿರಿಯನ್ನುಂಟು ಮಾಡಿದ್ದಂತೂ ಸುಳ್ಳಲ್ಲ. ಪ್ರಸಾದನ ಪ್ರತಿ ವ್ಯಕ್ತಿಗಳನ್ನು ಪಾತ್ರಗಳಾಗಿ ರೂಪಿಸುವಲ್ಲಿ ಮಹತ್ತರ ಪಾತ್ರವಹಿಸಿತು. ಸ್ಥಿರವಾದ ಸೆಟ್ ಸೊಗಸಾಗಿತ್ತಾದರೂ ಕೆಲವೊಮ್ಮೆ ಎರಡೂ ವಿಭಾಗಗಳಲ್ಲಿ ಒಂದೇ ದೃಶ್ಯ ನಡೆಯುವುದು ಇನ್ನೊಂದಿಷ್ಟು ಗೊಂದಲವನ್ನು ಹೆಚ್ಚಿಸಿತು


     ಅಭಿನಯದಲ್ಲಿ ಕಲಾವಿದರು ಗೆದ್ದಿದ್ದಾರೆ. ರಂಗವ್ವಳ ಪಾತ್ರವನ್ನು ಸ್ವಕಾಯಪ್ರವೇಶ ಮಾಡಿಕೊಂಡು ನಟಿಸಿರುವ ಹನುಮಕ್ಕ ಆಂಗಿಕಾಭಿನಯದಲ್ಲಿ ಉತ್ತಮವಾಗಿ ನಟಿಸಿದ್ದಾರೆ ಆದರೆ ಆಗಾಗ ಕಂಪನಿ ನಾಟಕ ಶೈಲಿಯ ಮಾತಿನ ದಾಟಿ ಅಸಹಜತೆಯನ್ನುಂಟು ಮಾಡಿದೆ. ಸಾವಂತ್ರಿಯಾಗಿ ಸಿತಾರ ನಟನೆ ಮನಮೋಹಕ, ಬರಮಣ್ಣ ಪಾತ್ರಕ್ಕೆ ಹೇಳಿ ಮಾಡಿಸಿದಂತಹ ಅಭಿನಯ ರಾಮಚಂದ್ರರವರದು. ಬೂಸಿ ಬಸ್ಯಾನಾಗಿ ಹರೀಶ್ ಮತ್ತು ಇಕ್ಬಾಲ್ನಾಗಿ ಸಿದ್ದರಾಮ ಕೊಪ್ಪರ್ ಇಬ್ಬರೂ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು. ನಾಟಕದಾದ್ಯಂತ ಪ್ರೇಕ್ಷಕರನ್ನು ನಗಿಸುವುದನ್ನೇ ನಿರ್ದೇಶಕರು ತಮ್ಮ ದೋರಣೆಯಾಗಿಸಿಕೊಂಡಿದ್ದರಿಂದ ಎಲ್ಲಾ ನಟರು ಅದಕ್ಕೆ ಪೂರಕವಾಗಿ ತಮ್ಮ ಅಭಿನಯ ಕೊಡುಗೆಯನ್ನು ಕೊಟ್ಟು ನಿರ್ದೇಶಕರ ಆಶಯಕ್ಕೆ ಸ್ಪಂದಿಸಿದ್ದಾರೆ.
          ಯಾವ ದೇಶದ ಗಾಳಿ, ಯಾವ ದ್ವೇಷದ ಗಾಳಿ
          ಯಾವ ದಿಕ್ಕಿಂದ ಬಂದು ನನ್ನೂರ ಹೊಕ್ಕಿತೋ
           ಯಾವ ಜಾತಿಯ ಬೆಂಕಿ, ಯಾವ ನೀತಿಯ ಬೆಂಕಿ ನನ್ನೂರ ಸುಟ್ಟಿತೋ.. 
 ಎನ್ನುವ ನಾಟಕದ ಕೊಟ್ಟಕೊನೆಯ ಹಾಡು ಇಡೀ ನಾಟಕದ ಆಶಯಕ್ಕೆ ಬೆನ್ನುಡಿಯಾಗಿದೆ. ಆದರೆ ಬರೀ ಹಾಸ್ಯರಸದಲ್ಲಿ ಮಿಂದೆದ್ದ , ಬೈಗುಳಗಳನ್ನು ಕೇಳಿ ಪರಮಾನಂದ ಹೊಂದಿದ ಕೆಲವಾರು ಯುವ ಪ್ರೇಕ್ಷಕರ ಮಸ್ತಕದಲ್ಲಿ ಹಾಡಿನ ಅರ್ಥವೂ ನೆಲೆ ನಿಲ್ಲದೇ ಹೋಗಿದ್ದೊಂದು ವಿಪರ್ಯಾಸ.

                                               -ಶಶಿಕಾಂತ ಯಡಹಳ್ಳಿ   




1 ಕಾಮೆಂಟ್‌:

  1. ಶಿವನನ್ನೂ ಸಹ ‘ಸೂಳೆಮಗಾ ಶಿವಾ’ ಎಂದು ಬೈಯುವ ದಾವಂತ ಈ ನಾಟಕದ್ದಾಗಿದೆ. ನಮ್ಮ ದೇವರಿಗೇನಾದರೂ ಹೀಗೆ ಬೈದಿದ್ದರೆ ರಕ್ತಪಾತ ಆಗ್ತಿತ್ತು ಸಾರ್... ಎಂದು ಒಬ್ಬ ಮುಸ್ಲಿಂ ಯುವಕ ನಾಟಕದ ನಂತರ ಪ್ರತಿಕೃಯಿಸಿದ್ದು ಹಿಂದೂಗಳ ಉದಾರತೆಗೆ ಸಾಕ್ಷಿಯಾಗಿತ್ತು...... heege nammadu udarathe ennutha namma kailagadathankke, shanthipriyaru ennuva sticker antisikondu estu dina badukuvudu.

    ಪ್ರತ್ಯುತ್ತರಅಳಿಸಿ