ನಾಟಕ : |
(ಪಾತ್ರಗಳು : ವ್ಯ= ವ್ಯಕ್ತಿ, ಸ=ಸಕಾರ, ನ=ನಕಾರ)
(ವ್ಯಕ್ತಿ ಎತ್ತರದ ಪೀಠವೊಂದರ ಮೇಲೆ ಪದ್ಮಾಸನ ಹಾಕಿ ಕಣ್ಮುಚ್ಚಿ ದ್ಯಾನಾಸಕ್ತನಾಗಿ ಕುಳಿತಿದ್ದಾನೆ. ಆತನ ಹಿಂದೆ ಸಕಾರ, ಸಕಾರದ ಹಿಂದೆ ನಕಾರ ಕುಳಿತಿವೆ. ಸಕಾರಕ್ಕೆ ಬಿಳಿ ಉಡುಗೆ ಹಾಗೂ ನಕಾರಕ್ಕೆ ಕರಿ ಉಡುಗೆ. ವ್ಯಕ್ತಿ ತನ್ನ ಕೈಗಳೆರಡನ್ನು ಎಡ ಬಲಕ್ಕೆ ಚಾಚಿ ನಂತರ ಮೇಲಕ್ಕೆತ್ತಿ ನಮಸ್ಕರಿಸುತ್ತಾನೆ. ಸಕಾರ-ನಕಾರಗಳೆರಡೂ ಸಹ ಹಿಂದಿನಿಂದ ಹಾಗೆ ಅನುಕರಣೆ ಮಾಡಿದರೂ ಮಡಿದರೂ ಕೈಗಳ ಚಲನೆಯಲ್ಲಿ ವ್ಯತ್ಯಾಸವಿದೆ. ಒಬ್ಬ ವ್ಯಕ್ತಿಗೆ ಆರು ಕೈಗಳಿರುವಂತೆ ಪ್ರೇಕ್ಷಕರಿಗೆ ತೋರುತ್ತದೆ. ಹಿನ್ನೆಲೆಯಲ್ಲಿ ‘ಓಂ’ಕಾರ ನಾದ)
(ಎಡಗಡೆ ಸಕಾರ ಮುಖ ತೋರಿಸಿ ದೊಡ್ಡದಾಗಿ ಬಾಯಿತೆರೆದು ನಕ್ಕರೆ, ಬಲಗಡೆ ನಕಾರ ಅದನ್ನೇ ಮಡುತ್ತಾನೆ. ಅದೇ ರೀತಿ ಎರಡೂ ಮುಖಗಳು ಮೂರುನಾಲ್ಕು ಬಾರಿ ಮಡುತ್ತವೆ. ಸಾವಕಾಶವಾಗಿ ಕಳ್ಳರ ಹಾಗೆ ಎದ್ದ ನಕಾರ ಎಡಗಡೆ ನಿಂತರೆ, ಸಕಾರ ಬಲಗಡೆ ನಿಲ್ಲುತ್ತದೆ. ಸಕಾರ ದ್ಯಾನಸ್ಥಿತಿಯಲ್ಲಿ ನಿಂತು ಶಾಂತ ರೀತಿಯ ನೃತ್ಯ ಮಡುತ್ತಾನೆ. (ಹಿನ್ನೆಲೆಯಲ್ಲಿ ಅದಕ್ಕೆ ಪೂರಕ ಸಂಗೀತ). ವ್ಯಕ್ತಿ ಆಗ ಕುಳಿತಲ್ಲೇ ಸಂತಸವನ್ನು ಅನುಭವಿಸುತ್ತಾನೆ. (ಸಾಧ್ಯವಾದರೆ ಸಕಾರ ಭರತನಾಟ್ಯ ನೃತ್ಯ ಮಾಡಬಹುದು). ನಂತರ ನಕಾರ ಪ್ರಳಯ ನೃತ್ಯ ಆರಂಬಿಸುತ್ತಾನೆ. (ಹಿನ್ನೆಲೆಯಲ್ಲಿ ರುದ್ರ ಸಂಗೀತ) ವ್ಯಕ್ತಿಯ ಮುಖದಲ್ಲಿ ತಳಮಳಗೊಳ್ಳುತ್ತಾನೆ, ಮೈಯಲ್ಲಿ ಬೆವರು ಸುರಿಯುತ್ತದೆ. ಹೀಗೆ ಎರಡೂ ಪಾತ್ರಗಳು ಜುಗಲ್ ಬಂದಿ ರೀತಿಯಲ್ಲಿ ಮನಮೋಹಕವಾಗಿ ನೃತ್ಯ ಮಡುತ್ತಿದ್ದರೆ ವ್ಯಕ್ತಿ ಸಂತಸ ಹಾಗೂ ತಲ್ಲಣಗಳನ್ನು ಅನುಭವಿಸುತ್ತಿರುತ್ತಾನೆ. ಕೊನೆಗೆ ನಕಾರದ ಕೈ ಮೇಲಾಗುತ್ತದೆ. ತಳಮಳ ಸಹಿಸಲಾಗದ ವ್ಯಕ್ತಿ ಕಣ್ಣು ಬಿಟ್ಟು ಕೂಗುತ್ತಾನೆ.
ವ್ಯಕ್ತಿ : ಸಾಕು ನಿಲ್ಲಿಸಿ!!
(ಸಂಗೀತ ಹಾಗೂ ನೃತ್ಯ ನಿಲ್ಲುತ್ತದೆ. ಸಾವಕಾಶವಾಗಿ ಕುತೂಹಲದಿಂದ ಎದ್ದು ನಿಂತ ವ್ಯಕ್ತಿ ಅಚ್ಚರಿಯಿಂದ ಒಂದೊಂದು ಸುತ್ತು ಇಬ್ಬರನ್ನು ಸುತ್ತಿ ಬಂದು ನಡುವೆ ನಿಂತು)
ವ್ಯಕ್ತಿ : ಯಾರು ನೀವು? ಹೀಗೇಕೆ ನನ್ನ ಏಕಾಗ್ರತೆ ಹಾಳು ಮಡುತ್ತೀದ್ದೀರಿ?
ಸಕಾರ : (ನಾಟಕೀಯವಾಗಿ) ನಾನು ನೀನೇ !
ನಕಾರ : (ಇನ್ನೂ ಹೆಚ್ಚು ನಾಟಕೀಯ ಶೈಲಿಯಲ್ಲಿ) ನೀನು ನಾನೇ!
ವ್ಯಕ್ತಿ : ಏನಿದು ಹುಚ್ಚಾಟ. ನಾನು ನೀನಾಗಲು. ನೀನು ನಾನಾಗಲು ಅದ್ದೇಗೆ ಸಾಧ್ಯ!
ಸಕಾರ : ಯಾಕೆ ಸಾಧ್ಯವಿಲ್ಲ? ಹಾಲು ಬೆಣ್ಣೆ ಒಂದೇ ಅಲ್ಲವೆ! ಹಾಗೇನೇ ನಾವು.
ವ್ಯಕ್ತಿ : ಬೆಣ್ಣೆ ! ... ಎಲ್ಲಿಂದ ಬರುತ್ತೆ.
ನಕಾರ : ರಿಲಾಯನ್ಸ ಮಾಲ್ನಿಂದ.
ಸಕಾರ : ಬಾಯ್ಮುಚ್ಚು ಅಧಿಕ ಪ್ರಸಂಗಿ. ನೀವು ಹೇಳಿ ಬೆಣ್ಣೆ ಎಲ್ಲಿಂದ ಬರುತ್ತೆ,
ವ್ಯಕ್ತಿ : ಮತ್ತೆಲ್ಲಿಂದ ಮಜ್ಜಿಗೆಯಿಂದ.
ಸಕಾರ : ವೆರಿ ಗುಡ್, ಮಜ್ಜಿಗೆ ಎಲ್ಲಿಂದ ಬರುತ್ತೆ.
ನಕಾರ : ನಿಮ್ಮಜ್ಜಿಯಿಂದ. ಅಜ್ಜಿ ತಾನೆ ಕಡಿಯೋದು ಮಜ್ಜಿಗೇನಾ
ಸಕಾರ : ಎಷ್ಟು ತಂಗೋತಿಯ
ನಕಾರ : ಏನಕ್ಕೆ.
ಸಕಾರ : ಮುಚ್ಕೊಂಡಿರೋಕೆ.
(ನಕಾರ ಬಾಯಿ ಬುಡ ಎರಡು ಮುಚ್ಕೊಳ್ಳುತ್ತಾನೆ)
ವ್ಯಕ್ತಿ : ಮಜ್ಜಿಗೆ ಎಲ್ಲಿಂದ ಬರುತ್ತೆ ಅಂದ್ರೆ... ಅಂದ್ರೆ... ಹಾಂ...ಮೊಸರಿನಿಂದ.
ಸಕಾರ : ವೆರಿ ವೆರಿ ಗುಡ್, ಜನರಲ್ ನಾಲೆಜ್ ಚೆನ್ನಾಗಿದೆ. ಹಾಗಾದರೆ ಈಗ ಹೇಳಿ ಮೊಸರೆಲ್ಲಿಂದ ಬರುತ್ತೆ.
ನಕಾರ : ಮ..ಮ...ಮೊಸರು...... (ಮಾತಾಡಲು ಹೊರಡುತ್ತಾನೆ, ಸಕಾರ ಬಾಯಿ ಮುಚ್ಚುತ್ತಾನೆ)
ವ್ಯಕ್ತಿ : ಹಾಲಿಗೆ ಹುಳಿ ಹಾಕಿದರೆ ಮೊಸರಾಗುತ್ತೆ.
ನಕಾರ : (ಬಾಯಿ ಬಿಡಿಸ್ಕೊಂಡು) ಅದೇ ಮತ್ತೆ, ಹಾಲಿಂದ ಹುಳಿ ಹಾಕಿದರೆ ಒಡೆದೋಗುತ್ತೆ.
ಸಕಾರ : ಥೂ, ಸುಮ್ಮನಿರಲೇ... ಹಾಲಿಂದ ಮೊಸರು.
ನಕಾರ : ಮೊಸರಿಂದ ಮಜ್ಜಿಗೆ,
ವ್ಯಕ್ತಿ : ಮಜ್ಜಿಗೆಯಿಂದ ಬೆಣ್ಣಿ.
ಸಕಾರ : ಹಾಂ, ಜಾಣಾ... ಅದಕ್ಕೆ ಹೇಳಿದ್ದು ನಾವು ಹಾಲು ಬೆಣ್ಣೆ ಇದ್ದಾಂಗೆ ಅಂತಾ...
ನಕಾರ : ನೀನಲ್ಲಯ್ಯ, ನಾನು ಇವನು ಹಾಲು ಬೆಣ್ಣೆ ಕಣಯ್ಯಾ
ಸಕಾರ : ಆದರೆ ನಾನು ನೀನು ಮಾತ್ರ ಎಣ್ಣೆ ಸೀಗೆಕಾಯಿ ಇದ್ದಂಗೆ....
ವ್ಯಕ್ತಿ : (ವ್ಯಂಗ್ಯವಾಗಿ) ಓಹೋ ಹಾಗೋ, ಹಾಗಾದರೆ ನಿಮ್ಮ ನಿಜ ನಾಮದೇಯವೇನೋ?
ಸಕಾರ : ಒಡಪ್ಪಿಟ್ಟು ಹೇಳಲೋ, ಇಲ್ಲಾ ಹಾಗೇ ಹೇಳಲೋ (ಈಗ ಸಣ್ಣಾಟದ ಶೈಲಿಯಲ್ಲಿ)
ವ್ಯಕ್ತಿ : (ಸಕಾರನಿಗೆ) ನೀನು ಅಲ್ಲಿ ಸುಮ್ನೆ ಕುತ್ಕೋ, ಮತಾಡಬೇಡ? (ನಕಾರನಿಗೆ) ಈಗ ನೀನು ಹೇಳು ನೀವಿಬ್ಬರೂ ಯಾರು? ಇಲ್ಲೇನು ಕೆಲಸ? ಯಾಕ ಬಂದೀರಿ? ನಿಮಗೇನು ಬೇಕು?
ನಕಾರ : ಸಾವಧಾನ. ಹೇಳ್ತೀನಿ. ನಾನು ಸರ್ವಾಂತರಯಮಿ ಎಲ್ಲಾ ಕಡೆನೂ ಇರತೇನಿ.
ವ್ಯಕ್ತಿ : (ನಾಟಕೀಯವಾಗಿ) ಊ ಹುಂ... ಹಾಗೇನು. (ಹಿರಣ್ಯಕಶುಪುವಿನ ಹಾಗೆ ಗದೆ ಹೊತ್ತು) ಈ ಕಂಬದಲ್ಲಿ
ನಕಾರ : ಅಲ್ಲಿಯೂ ಇದ್ದೇನೆ.
ವ್ಯಕ್ತಿ : ಆ ಪರದೆಯಲ್ಲಿ
ನಕಾರ : ಅಲ್ಲಿಯೂ ಇದ್ದೇನೆ ತಂದೆ.
ವ್ಯಕ್ತಿ : ಈ ನೆಲದಲ್ಲಿ, ಆ ಆಕಾಶದಲ್ಲಿ,
ನಕಾರ : ಅಲ್ಲಿಯೂ ಇದ್ದೇನೆ ದೊರೆ.
ವ್ಯಕ್ತಿ : ಈ ಟಿವಿಯಲ್ಲಿ.
ನಕಾರ : ಹೌದು ನನ್ನ ವಿಶ್ವರೂಪವನ್ನು ಈ ಟಿವಿಯಲ್ಲಿ ಸ್ಪಷ್ಟವಾಗಿ ನೋಡಬಹುದು ತಂದೆ.
ವ್ಯಕ್ತಿ : (ರಿಮೋಟು ಒತ್ತಿ) ಹಾಗಾದರೆ ಟಿವಿಯಲ್ಲಿ ಎಲ್ಲಿರುವೆ ತೋರಿಸು, ನೋಡೋಣ
ನಕಾರ : ನಿಮಗೆ ನೋಡುವ ಇಚ್ಚೆ ಇದ್ದರೆ ಇಗೋ ತೋರಿಸುತ್ತೇನೆ, ಟಿವಿ ಶುರುಮಡು.
(ಎತ್ತರದಲ್ಲಿ ದೊಡ್ಡದೆನ್ನುವ ಟಿವಿ ಪ್ರೆಂ ಇದೆ. ಅದರೊಳಗೆ ಕಪ್ಪು ಪರದೆ ಇದೆ. ವ್ಯಕ್ತಿ ಆನ್ ಮಡಿದ ತPಣ ಕ್ರೈಂ ಡೈರಿಯ ಫಲಕ, ನಂತರ ನಕಾರನ ಮುಖ, ವ್ಯಕ್ತಿ ಚಾನೆಲ್ ಚೆಂಚ್ ಮಡಿದಂತೆ ಬಾರ್ ಡಾನ್ಸ್, ಅಶ್ಲೀಲ ಹಾಡುಗಳು. ಪ್ರೊಜೆಕ್ಟರ್ ಮೂಲಕವೂ ತೋರಿಸಬಹುದು. ನಂತರ ಹಿನ್ನೆಲೆಯಲ್ಲಿ ರವಿ ಬೆಳೆಗೆರೆಯ ಮತುಗಳು. ಅದರ ಲೈವ್ ರೂಪ ವೇದಿಕೆಯ ಹಿಂಬಾಗದ ಸೈಕ್ ಮೇಲೆ ದೃಶ್ಯರೂಪ ತಾಳುತ್ತದೆ)
ಟಿವಿ ನಿರೂಪನೆ : ನಿಮಗೆಲ್ಲಾ ಇವತ್ತಿನ ಕ್ರೈಂ ಡೈರಿ ಸಂಚಿಕೆಗೆ ಸ್ವಾಗತ ಸುಸ್ವಾಗತ. ಇವತ್ತು ನಾನು ಒಂದು ಸೊಗಸಾದ ಮರ್ಡರ್ ಕಥೆ ಹೇಳ್ತೀನಿ ಕಣ್ರೀ. ಅದು ‘ಕುಡುಕ’ ಗಂಡನಿಂದ ಹೆಂಡತಿಯ ಮರ್ಡರ್. ಅವರಿಬ್ಬರೂ ಪ್ರೇಮಿಗಳಾದ್ದರು. ದಿನಾ ಬ್ರಿಗೆಡ್ ರೋಡಲ್ಲಿ ಸುತ್ತಿ, ಕಬ್ಬನ್ ಪಾಕ್ಲ್ಲಿ ಮುತ್ತಾಡಿ, ಲಾಲ್ಬಾಗ್ಲ್ಲಿ ತಿಕ್ಕಾಡಿ, ರಾತ್ರಿ ಕಣ್ಣಿಗೆ ಬಿದ್ದ ಹೋಟಲಲ್ಲಿ ಊಟ ಮಡಿ ತಮ್ಮ ತಮ್ಮ ಮನೆಗೆ ಸೇರ್ತಿದ್ದರು. ಅವಳಿಗೆ ಅವನನ್ನು ಕಂಡ್ರೆ ಲವ್ವು. ಇವನಿಗೆ ಅವಳನ್ನ ಕಂಡ್ರೆ ಲವ್ವೊ ಲವ್ವು. ಮನೆಯಲ್ಲಿ ವಿರೋಧ ಇದ್ರೂ ಮದುವೆ ಆಗ್ಬೇಕು ಅಂತ ಡಿಸೈಡ್ ಮಡಿದ್ರು . ಅವತ್ತು ಆ ಒಂದು ಡಿಸಿಜನ್ ತೊಗೊಳ್ದೆ ಹೋಗಿದ್ರೆ ಒಂದು ಅಮಯಕ ಜೀವದ ಕೊಲೆ ಆಗ್ತಿರಲಿಲ್ಲ.... ನೆತ್ತರು ಹರೀತಿರಲಿಲ್ಲ....
ಸಕಾರ : ಅಯ್ಯೋ ಮೊದಲು ಈ ದರಿದ್ರ ಟಿವಿ ಆಪ್ ಮಡು. ಕೊಲೆ ಗಿಲೇ ನೋಡಿದ್ರೆ ತಲೆಕೆಟ್ಟೋಗುತ್ತೆ.
(ರಿಮೋಟ್ ಕಿತ್ತುಕೊಂಡು ಟಿವಿಯನ್ನ ಆರಿಸ್ತಾನೆ)
ನಕಾರ : ಥೂ! ಎಂತಾ ಸೀನ್ ಮಿಸ್ ಮಡಿದೆಲ್ಲೊ, ಇನ್ನೇನು ಕೊಲೆ ಆಗಿಬಿಡ್ತಿತ್ತು. (ವ್ಯಕ್ತಿಯತ್ತ ತಿರುಗಿ). ಒಂದು ಬಾರಿ ನೋಡು. ಕೊಲೆ ಸೀನುಗಳು ಹಂಗೆಲ್ಲಾ ಎಲ್ಲಿ ಬೇಕಾದಲ್ಲಿ ನೋಡೋಕೆ ಸಿಗೋದಿಲ್ಲಾ. ಕೊಲೆ. ಕಗ್ಗೋಲೆ ಅದೂ ಹೆಂಡ್ತಿ ಕೊಲೆ. ಮೊಸಗಾತಿ ಕೊಲೆ.....
ಸಕಾರ : ಬೇಡಾಂದ್ರೆ ಬೇಡಾ, ಜೀವಹತ್ಯೆಯಂತಹ ಪಾಪಕೃತ್ಯ ನೋಡಬಾರದು.
(ವ್ಯಕ್ತಿಯನ್ನ ರಿಮೋಟ್ ಗಾಗಿ ಇಬ್ಬರೂ ಆ ಕಡೆ ಈಕಡೆ ಹಿಡಿದು ಎಳೆದಾಡುತ್ತಾ)
ನಕಾರ : ಕೊಲೆ ಕಗ್ಗೊಲೆ!
ಸಕಾರ : ಬೇಡಾಂದ್ರೆ ಬೇಡ, ನೋಡಬೇಡಾ.
ನಕಾರ : ಬೇಕು, ನೋಡಲೇ ಬೇಕು, ಥ್ರಿಲ್ ಬೇಕು...
(ವ್ಯಕ್ತಿ ಅವರಿಬ್ಬರ ಹಿಡಿತದಿಂದ ಬಿಡಿಸಿಕೊಂಡು. ಸಕಾರನನ್ನ ದೂರಕ್ಕೆ ತಳ್ಳಿ)
ವ್ಯಕ್ತಿ : ದೂರ ಸರಿ. ನಾನು ಆ ಕೊಲೆ ನೋಡಲೇಬೇಕು. (ಎಂದು ಟಿವಿ ಆನ್ ಮಡುತ್ತಾನೆ)
ಟಿವಿ ನಿರೂಪಕ: ವೀPಕರೆ ಈಗ ನೋಡಿ ಕೊಲೆಗಾರನೆ ಖುದ್ದು ಮತಾಡ್ತಿದ್ದಾನೆ.
(ಹೆಂಡತಿಯನ್ನ ಕೊಲೆ ಮಡಿದ ಆ ಕೊಲೆಗಾರ ಗಂಡ ಚಾಕುವನ್ನು ಕೈಲಿ ಹಿಡಿದುಕೊಂಡು)
ಹೌದು, ನಾನೇ ಆಕೆಯನ್ನು ಕತ್ತರಿಸಿ ಕೊಂದು ಪೀಸ್ ಪೀಸ್ ಮಡಿ ಮೋರಿಗೆಸೆದಿದ್ದು. ಮೋಸಗಾತಿ
ಅವಳು ನನ್ನ ಲವ್ ಮಾಡಿದ್ದೆಲ್ಲಾ ಬರೀ ನಾಟಕ, ದ್ರೋಹಿ, ಆಕೆಯನ್ನ ನಂಬಿ ನನ್ನ ಹೆತ್ತವರಿಂದ ದೂರಾದೆ, ಅವಳನ್ನ ಚೆನ್ನಾಗಿ ನೋಡ್ಕೋ ಬೇಕು ಅಂತಾ ಜೂಜಾಡಿ ಇದ್ದ ಆಸ್ತಿ ಕಳಕೊಂಡೆ. ಕೊನೆಗೂ ಮೋಸ ಮಡಿ ಇನ್ನೊಬ್ಬರ ಜೊತೆ ಚಕ್ಕಂದ ಆಡಿದ್ರೆ ಗಂಡಸಾದ ನಾನು ಸುಮ್ಮನೆ ಬಿಡ್ತೀನಾ, ಎಲ್ಲಾ ಮುಗಿತು. ಈಗ ಮನಸ್ಸಿಗೆ ಶಾಂತಿ ನೆಮ್ಮದಿ. ಜಗತ್ತಿನ ಎಲ್ಲಾ ಮೋಸಗಾರ ಹೆಂಗಸರು ಸತ್ತು ಹೋಗಲಿ. ನಂಬಿಕೆ ದ್ರೋಹಿ ಸ್ತ್ರೀ ಕುಲ ನಾಶವಾಗಲಿ... ನಾಶವಾಗಲಿ.
(ಇದ್ದಕ್ಕಿದಂತೆ ಟಿವಿ ಆಪ್ ಆಗುತ್ತದೆ.)
ವ್ಯಕ್ತಿ : ( ಉದ್ರೇಕಗೊಂಡು) ಛೇ ಟಿವಿ ಕೇಬಲ್ ಆಫೀಸಲ್ಲಿ ಕರೆಂಟ್ ಹೋಯ್ತು. ಆಹಾ! ಎಂತಾ ದೃಶ್ಯ.
ನಕಾರ : ನಿಜವಾದ ಗಂಡಸು ಅಂದ್ರೆ ಅವನು, ಎಷ್ಟು ಅಮೋಘವಾಗಿ ಕಲಾತ್ಮಕವಾಗಿ ಕೊಂದು ಬಿಟ್ಟ.
ಸಕಾರ : ಅದೆಲ್ಲಾ ನಂಬಬೇಡ, ಎಲ್ಲಾ ಹೆಂಗಸರೂ ಕೆಟ್ಟವರಲ್ಲ. ಸುಳ್ಳು ಬೊಗಳಬೇಡ ಬಾಯಿಮುಚ್ಚು.
ನಕಾರ : ಸರಿಯಪ್ಪಾ ಸುಮ್ಮನಾಗ್ತಿನಿ, ಆದರೆ ಒಂದೇ ಒಂದು ಕಂಡೀಷನ್ನು.
ಸಕಾರ : ಏನಪ್ಪಾ ಅದು ನಿನ್ನ ಕಂಡೀಷನ್ನು....
ನಕಾರ : ನಾನು ಯವ ಜಾಗದಲ್ಲಿ ಕೂಡ್ತೀನೋ ನೀನು ಅಲ್ಲಿ ಕೂತ್ಕೊಂಡು ತೋರಿಸ್ಬೇಕು. ಆಗದಿದ್ರೆ ನೀನೇ ಮುಚ್ಕೊಂಡಿರಬೇಕು
ಸಕಾರ : ನಿನಗಾಗೋದು ನನ್ನ ಕೈಲಾಗೊಲ್ವಾ, ಸರಿ ಕೂತ್ಕೊ.
ನಕಾರ : ನೀನು ಸ್ವಲ್ಪ ಕೆಳಗೆ ಕೂತ್ಕೋ ಮೊದಲು.
ಸಕಾರ : ಆಯ್ತು ಕೂತ್ಕೊಂಡೆ.
ನಕಾರ : (ಸಕಾರನೆ ಹೆಗಲ ಮೇಲೆ ಕಾಲುಹಾಕಿ ಕುತ್ಕೊಂಡು) ಈಗ ನಾನೆಲ್ಲಿ ಕೂತ್ಕೊಂಡಿದ್ದೀನೋ ನೀನು ಇಲ್ಲಿ ನಿನ್ನ ಹೆಗಲಮೇಲೆ ಕೂತ್ಕೊಂಡು ತೋರಿಸು ನೋಡೋಣ?
ಸಕಾರ : ಆತನನ್ನ ಕೆಳಕ್ಕೆ ಬಿಸಾಕಿ, ಈ ರೀತಿ ಯಾಮರಿಸಿನೇ ಯವಾಗಲೂ ನೀನೇ ಗೆಲ್ಲೋದು.
ನಕಾರ : ಹಾಗಾದ್ರೆ ಸುಮ್ನೇ ನಿಂತ್ಕೊಂಡು ಯಜಮನ್ರು ಹೇಳಿದಷ್ಟು ಕೇಳು.
ಸಕರ : ಆಯ್ತು ಕೇಳಿ ಯಜಮಾನ್ರೆ
ವ್ಯಕ್ತಿ : ಹಾಗಾದರೆ ನಿಜ ಹೇಳಿ ನೀವು ಯಾರು?
ಸಕಾರ : ಯಾವುದೇ ಉತ್ತಮ ಕೆಲಸವನ್ನು ಮಾಡಿಸುವ ಮಹಾತ್ಮರು
ನಕಾರ : ಎಂಥಾ ಮನೆಹಾಳು ಕೆಲಸ ಮಾಡ್ಸೋವಂತಹ ಪಾಪಾತ್ಮರು.
ವ್ಯಕ್ತಿ : ನಿಮ್ಮನ್ನ ಹೇಗೆ ನಂಬೋದು, ಮೊದಲು ನೀವು ಸುಳ್ಳಾಡುತ್ತಿಲ್ಲ ಎಂದಾದರೆ ಸಾಕ್ಷಿ ಸಮೇತ ನಿರೂಪಿಸಿ.
ಸಕಾರ : ಕ್ಷಣಾರ್ಧದಲ್ಲಿ ಬಿರ್ಲಾ ಮಂದಿರದಲ್ಲಿ ಹೋಗಿ ಭಜನೆ ಮಾಡಲೇನು?
ನಕಾರ : ಬೆಂಗಳೂರಿ ಬೀದಿಗಳಲ್ಲಿ ಬಾಂಬಾಗಿ ಸ್ಪೋಟಿಸಿ ನೂರಾರು ಹತ್ಯೆ ಮಾಡಲೇನು?
ಸಕಾರ : ಸಾಯುತ್ತಿರುವ ವ್ಯಕ್ತಿಗೆ ಚಿಕಿತ್ಸೆ ಕೊಡಿಸಿ ಬದುಕಿಸಲೇನು?
ನಕಾರ : ಬದುಕಿರುವ ವ್ಯಕ್ತಿಗೆ ಪಾಯ್ಸನ್ ಕೊಡಿಸಿ ಸಾಯಿಸಲೇನು?
ವ್ಯಕ್ತಿ : ಅಂ! ಅಂತಾದ್ದೇನೂ ಬೇಕಾಗಿಲ್ಲ. ಮುನಿಸಿಕೊಂಡು ತೌರಿಗೆ ಹೋದ ನನ್ನ ಹೆಂಡತಿ ಕರೆದು ತನ್ನಿ ಸಾಕು. ಆಕೆಯನ್ನು ನೋಡದೇ ತುಂಬಾ ದಿನಗಳಾಯ್ತು.
ಸಕಾರ : ಆಯ್ತು ಆಯ್ತು ಆದರೆ ಅದಕ್ಕಿಂತ ಮೊದಲು ಒಂದು ಮತು ಆಲೋಚಿಸಬೇಕಿದೆ.
(ವ್ಯಕ್ತಿ ಪ್ರಶ್ನಾರ್ಥಕವಾಗಿ ನೋಡುತ್ತಾನೆ)
ನಕಾರ : ನೋಡು ನಿನ್ನ ಹೆಂಡತಿ ಮೊದಲೇ ಅನುಮನದ ಪಿಶಾಚಿ, ಸಿಕ್ಕಾಪಟ್ಟೆ ತಲೆಹರಟೆ. ನಿನ್ನನ್ನ ಕೊಂದು ನಿನ್ನ ಆಸ್ತಿ ಹೊಡೆದು ತನ್ನ ಪ್ರಿಯಕರನ
ಜೊತೆ ಓಡಿಹೋಗಲು ಹವಣಿಸುತ್ತಿದ್ದಾಳೆ.
ವ್ಯಕ್ತಿ : ಹೌದೌದು ನೀನು ಹೇಳಿದ್ದು ಸರಿ, ಆಕೆ ಅಂತವಳೆ. ಆದರೆ ಇದೆಲ್ಲಾ ನಿನಗೆ ಹೇಗೆ ಗೊತ್ತು ?
ಸಕಾರ : ಹೋಗಲಿ ಅವಳನ್ನ ಅವಳ ಪಾಡಿಗೆ ಬಿಟ್ಟು ಬಿಡೋದು ವಾಸಿ.
ನಕಾರ : ಆಹಾ! ಅದೆಂಗಾಗುತ್ತೆ. ದ್ರೋಹಿಗಳನ್ನ ಸುಮ್ಮನೆ ಬಿಡಬಾರದು, ಚೆನ್ನಾಗಿ ಹಿಡಿದು ಬಾರಿಸಬೇಕು.
ಸಕಾರ : ಬಾರಿಸು ಬಾರಿಸು.... ಆಕೆ ಹೋಗಿ ದೈಹಿಕ ದೌರ್ಜನ್ಯ ಅಂತಾ ಕಂಪ್ಲೇಂಟ್ ಕೊಟ್ರೆ.
ವ್ಯಕ್ತಿ : ಪೋಲಿಸರು ಬಂದು ನನ್ನ ಆರೆಸ್ಟ್ ಮಾಡಿ ಬಿಟ್ರೆ.
ನಕಾರ : ಹೋಗಲಿ ವಿಷ ಹಾಕಿ ಆಕೆಯನ್ನ ಸಾಯಿಸಿಬಿಟ್ರೆ.
ಸಕಾರ : ಜನರಿಗೆ ಗೊತ್ತಾಗಿ ಮನಮಯದೆ ಹೋಗಿ ಬಿಟ್ರೆ.
ನಕಾರ : ಆಕೆ ಅಡುಗೆ ಮನೇಲಿದ್ದಾಗ ಗ್ಯಾಸ್ ಲೀಕ್ಮಡಿ ಬೆಂಕಿ ಹಾಕಿ ಬಿಟ್ರೆ
ಸಕಾರ : ಮನೆಯಲ್ಲಾ ಸ್ಪೋಟಗೊಂಡು ಯಜಮಾನ್ರ ಮೇಲೆ ಬಿದ್ದಬಿಟ್ರೆ.
ನಕಾರ : ಹೋಗಲಿ ಸೀಮೆಎಣ್ಣೆ ಹಾಕಿ ಸುಟ್ಟಬಿಟ್ರೆ.
ಸಕಾರ : ಸಂಕಟ ತಾಳಲಾರದೆ ಆಕೆ ಬಂದು ರಾಯರನ್ನ ತಬ್ಬಿ ಕೊಂಡುಬಿಟ್ರೆ.
ನಕಾರ : (ಸಕಾರದ ಮೇಲೆ ಸಿಟ್ಟಿಗೆದ್ದು) ಏ ಥೂ ಸುಮ್ಕಿರು, ಎಲ್ಲಾದಕ್ಕೂ ಏನಾದರೂಂದು ಹೇಳಿ ಎಲ್ಲಾ ಪ್ಲಾನ್ ಹಾಳು ಮಾಡ್ತಿಯಲ್ಲಾ, ಹೋಗು ಮೊದಲು ರೂಪ ಬದಾಲಾಯಿಸಿಕೊಂಡು ಅವರ ಹೆಂಡ್ತಿ ಆಗಿ ಬಾ.
ಸಕಾರ : ಅಷ್ಟೇ ತಾನೆ ಆಯಿತು ಇದೀಗ ರೂಪ ಬದಲಾಯಿಸುವೆ. ಎಲ್ಲಿ ಕಣ್ಮುಚ್ಚಿ
(ವ್ಯಕ್ತಿ ಕಣ್ಮುಚ್ಚುತ್ತಾನೆ. ನಕಾರ ವ್ಯಕ್ತಿ ಕಿವಿಯಲ್ಲಿ ಗುಟ್ಟಾಗಿ ಹೇಳುತ್ತಾನೆ..)
ನಕಾರ : ಏ... ಕಣ್ಬಿಡಿ ರಾಯ್ರೇ, ನಾನು ಹೇಳೋ ಮತು ಎಚ್ಚರದಿಂದ ಕೇಳಿ. ಇವತ್ತು ನೀವು ನಿಮ್ಮ ಹೆಂಡ್ತೀನ ಸಾಯಿಸದಿದ್ರೆ , ಆಕೆನೇ ಇಂದಿಲ್ಲಾ ನಾಳೆ ನಿಮ್ಮ ಊಟದಲ್ಲಿ ವಿಷ ಹಾಕಿ ಸಾಯಿಸೋದಂತೂ ಗ್ಯಾರಂಟಿ.
ವ್ಯಕ್ತಿ : ಹೌದೌದು... ಸಾಯಿಸ್ತಾಳೆ. ಅವ್ಳು ಯಾವುದಕ್ಕು ಹೇಸೋಳಲ್ಲಾ..
ನಕಾರ : ಒಂದು ಪ್ರಾಣ ಉಳಿಸೋಕೆ ಇನ್ನೊಬ್ಬರ ಜೀವ ತೆಗೆದರೆ ತಪ್ಪೇನಿಲ್ಲ.
ವ್ಯಕ್ತಿ : ಹೌದೌದು... ತಪ್ಪೇನಿಲ್ಲ.
ನಕಾರ : ಹಾಗಾದರೆ ಇಲ್ಲಿದೆ ನೋಡು ಚೂರಿ ತಗೋ, ಇದೂ ಚಿಕ್ಕದಾಯ್ತು, ಆ ಪಾಪಿ ಹೆಂಗಸಿನ ಕರಳು ಬಗೆದು ಜೀವ ತಗೆಯೋಕೆ ಇದು ಸಾಲೋದಿಲ್ಲ. ಅದಕ್ಕೆ ಮಚ್ಚೇ ಬೇಕು .
ವ್ಯಕ್ತಿ : ಅಲ್ಲಿದೆ ಮುಚ್ಚು.
ನಕಾರ : ಹಾಗಾದ್ರೆ ಎತ್ಕೊ ಅದನ್ನ. ಹೆಂಡತಿ ಬಂದ ತಕ್ಷಣ ಒಂದೇ ಏಟು, ಎರಡು ಎರಡು ಪೀಸು..
ಬಿಡಬೇಡ, ಎತ್ತು ಮಚ್ಚು, ಹಿಡಿದು ಕೊಚ್ಚು... ಶಂಡನಲ್ಲಾ ಗಂಡುಗಲಿ ನೀನು....
(ಪ್ರತಿ ಮಾತಿಗೂ ವ್ಯಕ್ತಿ ವ್ಯಗ್ರನಾಗುತ್ತಾನೆ, ಮುಖದಲ್ಲಿ ಕ್ರೌರ್ಯ ತಾಂಡವವಾಡುತ್ತದೆ. ಹೋಗಿ ಮಚ್ಚೆತ್ತಿಕೊಳ್ಳುತ್ತಾ ಅದನ್ನು ಬೆನ್ನ ಹಿಂದೆ ಅವಿಸಿಕೊಳ್ಳುತ್ತಾನೆ. ಅಷ್ಟರಲ್ಲಿ ಸಕಾರ ಸಾವಾಕಾಶವಾಗಿ ಹೆಂಗಸಾಗಿ ಬದಲಾಗಿ ಬರುತ್ತಾನೆ.
ಹೆಂಡತಿ : (ನುಲಿಯುತ್ತಾ) ಹಲೋ ಡಾರ್ಲಿಂಗ್ ಹೇಗಿದ್ದೀಯ ?
ವ್ಯಕ್ತಿ : (ಕೋಪದಿಂದ) ಬದುಕಿದ್ದೀನಿ ಇನ್ನೂ ಸತ್ತಿಲ್ಲ. ಈಗ ಎಲ್ಲಿಂದ ಬರತಿದ್ದೀಯ? ಯಾವುದೋ ಬೈಕ್ ಸದ್ದಾಯಿತು. ಯಾವನ ಜೊತೆಗೆ ಬಂದೆ.
ಹೆಂಡತಿ : ತಾಯಿ ಮನೆಯಿಂದ ಬರತಿದ್ದೆ, ದಾರಿಯಲ್ಲಿ ರಮೇಶ ಸಿಕ್ಕಿದ ಅವನೇ ಡ್ರಾಪ್ ಮಡಿದ್ದು ಇಲ್ಲಿಗೆ.
ನಕಾರ : (ಕಿವಿಯಲ್ಲಿ) ನೋಡ್ದಾ. ಪ್ರೀಯತಮನ ಜೊತೆ ಲಲ್ಲೆ ಹೊಡೆದು ಬಂದಿದ್ದಾಳೆ. ನಿನ್ನ ಸಾಯಿಸೋಕೇನೋ ಪ್ಲಾನ್ ಹಾಕಿಕೊಂಡಿದ್ದಾಳೆ. ಬೇಗ ಕೆಲಸ ಮುಗಿಸಬೇಕು ಬೇಗ.
ವ್ಯಕ್ತಿ : (ಹಲ್ಲು ಕಡಿಯುತ್ತಾ) ಮಿಂಡನ ಜೊತೆ ಸರಸ ಆಡಿ ಗಂಡನ ಸಾಯಿಸೋಕೆ ಬಂದಿಏನೇ ಲೌಡಿ.
(ಎಂದವನೇ ಸಾಯಿಸಲು ಮಚ್ಚು ಎತ್ತುತ್ತಾನೆ. ಆಕೆ ಹೆದರಿಕೆಯಿಂದ ಚೀರುತ್ತಾಳೆ. ತಪ್ಪಿಸಿಕೊಂಡು ಸುತ್ತಲೂ ಓಡುತ್ತಾಳೆ.ವ್ಯಕ್ತಿ ಅಟ್ಟಾಡಿಸುತ್ತಾನೆ.)
ನಕಾರ : (ಗಹಗಹಿಸಿ ನಗುತ್ತಾ ವಿರಾಟ ನೃತ್ಯ ಮಡುತ್ತಾ) ಬಿಡಬೇಡ ಹಿಡಿ, ಹೊಡಿ, ಕೊಲ್ಲು..... ಹಿಡಿ, ಹೊಡಿ, ಕೊಲ್ಲು, ಹಿಡಿ ಹೊಡಿ ಕೊಲ್ಲು......
ಹಿನ್ನೆಲೆಯಲ್ಲಿ ಹಾಡು :
ಹಿಡಿ ಹೊಡಿ ಕೊಲ್ಲು
ಅಡಗಲಿ ವೈರಿಯ ಸೊಲ್ಲು.
ಹರಿಯಲಿ ರಕ್ತ ಭೂಮಿಯ ಸುತ್ತಾ
ಸುತ್ತಲೂ ಹಬ್ಬಲಿ ದ್ವೇಷದ ಹುತ್ತಾ.
(ತಪ್ಪಿಸಿಕೊಂಡ ಹೆಂಡತಿ ಸತ್ತವರಂತೆ ಚೀರುತ್ತಾ ಹಿಂಬದಿ ಓಡಿ ಹೋಗುತ್ತಾಳೆ. ಮತ್ತದೆ ರಂಗ ತಂತ್ರದ ಮೂಲಕ ಸಕಾರನಾಗಿ ಪ್ರತ್ಯಕ್ಷ) ವ್ಯಕ್ತಿ ಇನ್ನೂ ವ್ಯಗ್ರಗೊಂಡು
ವ್ಯಕ್ತಿ : (ಮಚ್ಚು ಬಿಸಾಡಿ) ಸಧ್ಯ ತೋಲಗಿತು ಶನಿ.
ಸಕಾರ : (ಪ್ರವೇಶಿಸಿ) ಅಂ ಏನು ಮಡಿದಿ, ಘೋರ ಅನ್ಯಾಯ. ನಿನ್ನ ಹೆಂಡತಿಯನ್ನು ನೀನೆ ಕೊಂದು ಹಾಕಿದೆಯಲ್ಲ. ಅಂ ಪಾಪಿ.
ವ್ಯಕ್ತಿ : ಹೌದಾ ಆಕೆ ಸತ್ತೇ ಹೋದಳಾ?
ಸಕಾರ : ಅನ್ಯಾಯವಾಗಿ ಹೆಂಡತಿಯನ್ನ ಕೊಂದೆಯಲ್ಲಾ.
ವ್ಯಕ್ತಿ : (ಪಶ್ಚಾತ್ತಾಪದಿಂದ) ಇಲ್ಲಾ. ನಾನು ಕೊಲೆ ಮಡಲಿಲ್ಲ . ಅವನು... ಅವನೇ ಹೇಳಿದ್ದು ಸಾಯ್ಸಿಬಿಡು ಅಂತ. ನಾನಲ್ಲ ... ನಂದೇನು ತಪ್ಪಿಲ್ಲ.
(ಅಷ್ಟರಲ್ಲಿ ಕಳ್ಳಹೆಜ್ಜೆ ಹಾಕುತ್ತಾ ನಕಾರ ಹಿಂದೆ ಅಡಗಿಕೊಳ್ಳಲು ಪ್ರಯತ್ನಿಸುತ್ತದೆ. ಅದನ್ನು ಸಕಾರ ನೋಡಿ ಕಿವಿ ಹಿಡಿದು ಎಳೆತರುತ್ತಾನೆ. ಅಲ್ಲಿವರೆಗೂ ವ್ಯಕ್ತಿ ಹುಚ್ಚನಂತೆ ಕೊಲೆಮಡಿಲ್ಲ ನಾನಲ್ಲ ಎನ್ನುತ್ತಲೇ ಇರುತ್ತಾನೆ)
ನಕಾರ : ಸಮಧಾನ, ಸಮಧಾನ. ನೀವು ಕೊಲೆ ಮಡಿಲ್ಲ ಅಂತ ನಾನು ಸಾಬೀತು ಮಡ್ತೀನಿ
ಸಕಾರ : ಮಾಡಿದ್ದು ಕೊಲೆ. ಮಹಾಪರಾಧ. ಅದು ಹೇಗೆ ಸಾಬೀತು ಮಾಡ್ತೀಯೋ ನಾನು ನೋಡ್ತೇನೆ?
ನಕಾರ : ಚಿಂತೆ ಮಾಡಬೇಡಿ ರಾಯ್ರೇ. ನಿಮ್ಮನ್ನ ಉಳಿಸೋದು ನನ್ನ ಕೆಲಸ.
ವ್ಯಕ್ತಿ : ಹೌದಾ. ನಿಜವಾಗಿಯೂ, ಹಾಗಾದ್ರೆ ಹೇಳು ನೀನ್ಯಾರು? ಈಗಲಾದರೂ ಹೇಳಿ ತೋಲಗು ನೀನ್ಯಾರು?
(ಎರಡು ಲಾಯರ್ ಕೋಟನ್ನು ತಂದು ಇಬ್ಬರೂ ಹಾಕಿಕೊಳ್ಳುತ್ತಾರೆ)
ನಕಾರ: ನಾನೀಗ ನಿಮ್ಮ ಪರವಾಗಿ ವಾದ ಮಡುವ ವಕೀಲ,
ವ್ಯಕ್ತಿ : ಹಾಗಾದ್ರೆ ಇವನ್ಯಾರು?
ಸಕಾರ : ನಿನ್ನ ವಿರುದ್ದ ವಕಾಲತ್ತು ವಹಿಸುವ ಲಾಯರ್.
ನಕಾರ : ನೀನೀಗ ಕೊಲೆ ಮಾಡಿದ ಆರೋಪಿ. ಬಾ ಇದೇ ಕಟಕಟೆ. ಇಲ್ಲಿ ಆರೋಪಿಗಳನ್ನ ನಿಲ್ಲಿಸಿ ವಿಚಾರಣೆ ಮಾಡಲಾಗುತ್ತದೆ.
ಸಕಾರ : ಈಗ ಕೋರ್ಟಿನ ಸಮಯ. ಹಾಗೆಂ ವಾದ ವಿವಾದದ ಸಮಯವೂ ಶುರು.
(ಅನುಮನಿಸುತ್ತಲೇ ಕಟಕಟೆಯಲ್ಲಿ ನಿಲ್ಲುತ್ತಾನೆ ವ್ಯಕ್ತಿ)
ಸಕಾರ : ಇವರ್ ಆನರ್, ಇಲ್ಲಿ ಈ ಕಟಕಟೆಯಲ್ಲಿ ನಿಂತಿರುವ ಆರೋಪಿ ಘನಘೋರ ಅಪರಾಧ ಮಡಿದ್ದಾನೆ. ಪ್ರೀತಿಸಿ ಮದುವೆಯಾದ ಹೆಂಡತಿಯನ್ನು ಮಚ್ಚಿನಿಂದ ಕತ್ತರಿಸಿ ಕೊಲೆ ಮಡಿದ್ದಾನೆ. ಇವನಿಗೆ ಕನಿಷ್ಟ ಎಂದರೂ ಗಲ್ಲು ಶಿಕ್ಷೆ ವಿಧಿಸಲೇ ಬೇಕು.
ನಕಾರ : ಐ ಆಬ್ಜೆಕ್ಟ ಇವರ್ ಆನರ್. ಆರೋಪ ಸಾಬೀತಾಗದೇ ಯಾರೂ ಕೊಲೆಗಾರ ಆಗೋಲ್ಲ. ಈತ ಈಗ ಆರೋಪಿ ಅಷ್ಟೇ. ವಾದವಿವಾದ ಕೇಳಿ ನಂತರ ನಿರಪರಾದಿsಯದ ನನ್ನ ಕಕ್ಷಿದಾರನಿಗೆ ನ್ಯಾಯವದಗಿಸಿಕೊಡಬೇಕಾಗಿ ವಿನಂತಿ.
ವ್ಯಕ್ತಿ : (ಅಸಹನೆಯಿಂದ) ಅಯ್ಯೋ! ನನ್ನಿಂದ ದೂರ ಎಲ್ಲಾದ್ರೂ ತೊಲಗಿ ಹೋಗಿ ನೀವಿಬ್ಬರು.
ಸಕಾರ : ನಾವೇನೋ ಹೋಗಲು ಸಿದ್ದ.
ನಕಾರ : ಆದರೆ ನಾವು ಗುಲಾಮರು, ನೀವು ನಮ್ಮ ಮಾಲೀಕರು, ನಿಮ್ಮನ್ನು ಬಿಟ್ಟು ಹೋಗುವ ಸ್ವಾತಂತ್ರ್ಯ ನಮಗಿಲ್ಲವಲ್ಲಾ.
ವ್ಯಕ್ತಿ : (ಆಜ್ಞಾಪಿಸುತ್ತಾನೆ) ಆಯಿತು ನಿಮಗೆ ಸ್ವತಂತ್ರ ಕೊಟ್ಟಿದ್ದೇನೆ. ಮೊದಲು ಇಲ್ಲಿಂದ ತೊಲಗಿ ಹೋಗಿ
ನಕಾರ : ಕೊಟ್ಟ ಕೊನೆಯದಾಗಿ ಂಚಿಸು.
ವ್ಯಕ್ತಿ : ಯೋಚಿಸಿ ನಿರ್ದಾರಕ್ಕೆ ಬಂದಿದ್ದೇನೆ. ನನಗೆ ನೆಮ್ಮದಿ ಬೇಕು.
ನಕಾರ : ನಾವೇನಾದರು ಹೋದರೆ ನಿನ್ನ ಅಸ್ತಿತ್ವವೇ \ಇರೋದಿಲ್ಲ,
ಸಕಾರ : ಅಸ್ತಿತ್ವ ಏನು ಮೆದುಳೇ ಇರೋದಿಲ್ಲ .
ವ್ಯಕ್ತಿ : ಅದಕ್ಕೆ ಮೆದುಳನ್ನು ನಾನು ಯವಾಗಲೂ ಭದ್ರವಾಗಿ ಟಿಜೋರಿಯಲ್ಲಿಟ್ಟುಕೊಂಡಿರತೇನೆ.
ನಕಾರ : ಯಕೆ ತಲೆಯಿಲ್ಲವೆ?
ವ್ಯಕ್ತಿ : ತಲೆ ಇದೆ, ಆದರೆ ಬುದ್ದಿ ಕದಿಯುವ ಕಳ್ಳರಿದ್ದಾರೆ.
ಸಕಾರ : ಹೌದೌದು ಎಲ್ಲೆಲ್ಲೂ ಇದ್ದಾರೆ. (ನಕಾರನತ್ತ ನೋಡುತ್ತಾ) ಬುದ್ದಿ ಕದೀತಾರೋ ಇಲ್ಲೋ ಗೊತ್ತಿಲ್ಲಾ, ಆದರೆ ಬುದ್ದಿ ಕೆಡಿಸೋರಂತೂ ಇದ್ದೇ ಇದ್ದಾರೆ.
ನಕಾರ : ಹಾಗಾದರೆ ನಾವು ಹೋಗುವ ಮುಂಚೆ ನಿನ್ನ ಕೊನೆಯ ಆಸೆ ಹೇಳು.
ವ್ಯಕ್ತಿ : ಕೊನೆಯ ಆಸೆ! ಯಕೆ. ನಾನೇನು ಸಾಯುತ್ತಿದ್ದೇನೆಂ? ನನ್ನನ್ನೇನು ಗಲ್ಲಿಗೇರಿಸುತ್ತಿದ್ದೀರಾ?
ಸಕಾರ : ಹಾಗೇನಿಲ್ಲ. ನಾವು ಹೋದ ಮೇಲೆ ಮೆದುಳು ಎಲ್ಲಿದ್ದರೂ ಕೆಲಸಕ್ಕೆ ಬರೊಲ್ಲ.
ನಕಾರ : ಮನಸ್ಸು ಸೂತಕದ ಮನೆಯಗುತ್ತದೆ.
ವ್ಯಕ್ತಿ : ಹೌದಾ ! ಹಾಗಾದರೆ ಕೇಳಿ, ನನ್ನ ಕೊನೆ ಆಸೆ ರಾಜಕಾರಣಿ ಆಗ್ಬೇಕೆಂಬುದು. ಮಡ್ತೀರಾ?
ನಕಾರ : ನೀನೇಕೆ
ರಾಜಕಾರಣಿಯಗಬೇಕು.
ವ್ಯಕ್ತಿ : ಸಿಕ್ಕಾಪಟ್ಟೆ ಹಣ ಲೂಟಿ ಹೊಡೆದು ನನ್ನ ಖಜಾನೆ ತುಂಬಿಸಬೇಕು.
ನಕಾರ : ವಾರೆವ್ವಾ! ಈಗ ಬಂದಾ ನೋಡಿ ದಾರಿಗೆ.
ಸಕಾರ : ಹೌದಾ! ನಿನ್ನ ಖಾಸಗಿ ಖಜಾನೆಗೆ ಕಾವಲುಗಾರರು ಯರು?
ವ್ಯಕ್ತಿ : ನನ್ನ ಹೆಂಡಿರು. ಮಕ್ಕಳು. ಅವರ ಸಂತಾನ. ಅಷ್ಟೇ ಅಲ್ಲ ನಾನು ಸಾಕಿದ ನಾಯಿಗಳು ಸಹ.
ನಕಾರ : ಯಾಕೆ? ನಿನ್ನ ಬೇನಾಮಿ ಸಂಸಾರ ಹಾಗೂ ಅಕ್ರಮ ಸಂತಾನಗಳಿಗೇನೂ ಇಲ್ಲವೇ?
ಸಕಾರ : ಲೇ ಸುಮ್ಮನಿರೋ, (ವ್ಯಕ್ತಿ ಕಡೆ ತಿರುಗಿ) ನಿಮ್ಮ ದಾಹಕ್ಕೆ ಮಿತಿ ಎಂಬುದು ಇಲ್ಲವೆ?
ವ್ಯಕ್ತಿ : ಮಿತಿ ಅನ್ನೋದು ಬೇಕಾ? ಮಿತಿ ಅನ್ನೋದಿದ್ರೆ ನಾನ್ಯಾಕೆ ರಾಜಕಾರಣಿ ಆಗಬೇಕು?
ನಕಾರ : ಕಿವಿಯಲ್ಲಿ ಕೇಳಿದ್ದು, ಕಣ್ಣಲ್ಲಿ ಕಂಡಿದ್ದು, ಮೂಗಿಂದ ಮೂಸಿದ್ದನ್ನೆಲ್ಲಾ ಖಜಾನೆ ತುಂಬಬೇಕು?
ಸಕಾರ : ಕಿವಿ, ಕಣ್ಣು, ಮೂಗು. ಇರಲು ರಾಜಕಾರಣಿಗಳೇನು ಮನುಷ್ಯರಾ?
ನಕಾರ : ಅವರಿಗಿರೋದು ಕೇವಲ ಬಾಯಿ. ರೋಡು ರಾಡು. ಅಣೆಕಟ್ಟು ಸಿಕ್ಕದ್ದೆನ್ನೆಲ್ಲಾ ನುಂಗೋಕೆ.
ವ್ಯಕ್ತಿ : ಹಾಗಾದ್ರೆ ರಾಜಕಾರಣಿಗಳು ಏನನ್ನು ತಿನ್ನುತ್ತಾರೆ.
ಸಕಾರ : ಮನುಷ್ಯರ ಹಸಿ ಮಾಂಸವನ್ನ.
ವ್ಯಕ್ತಿ : ಏನನ್ನು ಕುಡಿಯುತ್ತಾರೆ.
ನಕಾರ : ಬಡಜನರ ಬೆವರು ನೆತ್ತರನ್ನ.
ವ್ಯಕ್ತಿ : ಹಾಗಾದರೆ ಅವರು ನರ ರಾಕ್ಷಸರೇ
ನಕಾರ : ಅಲ್ಲ ಜನರ ಶ್ರಮ ದೋಚುವ ಲೂಟಿಕೋರರು.
ವ್ಯಕ್ತಿ : ನನಗೆ ನರ ರಾಕ್ಷಸನಾಗೋದು ಬೇಕಾಗಿಲ್ಲ. ದಯವಿಟ್ಟು ಹೇಳಿ ಯರು ನೀವು?
ಸಕಾರ : ಬೇರೆಯವರ ಸಮಾದಿ ನೋಡಿ ಕಣ್ಣಿರು ಸುರಿಸೋರು.
ನಕಾರ : ಬದುಕಿದವರಿಗೆ ಸಮಾದಿ ಕಟ್ಟಿ ರುದ್ರನೃತ್ಯ ಮಡೋರು.
ವ್ಯಕ್ತಿ : ಅಂ ಸಾಕು ನಿಮ್ಮ ಈ ಒಡಪಿನ ಮತು. ಹೇಳಿ ಯರು ನೀವು?
ಹೇಳದಿದ್ರೆ ನಿಮ್ಮನ್ನ ಕೊಂದು ಬಿಡ್ತೇನೆ? (ಮಚ್ಚು ಎತ್ತುತ್ತಾನೆ)
ಸಕಾರ : ನಮ್ಮನ್ನ ಕೊಲ್ಲೋಕೆ ಸಾಧ್ಯಾನೇ ಇಲ್ಲಾ.
ನಕಾರ : ನಾವಿಲ್ಲದೇ ನೀನು ಇರೋಕೆ ಆಗೋದೇ ಇಲ್ಲಾ.
ಸಕಾರ : ನಾನು ನೀನು ಇವನು ಎಲ್ಲಾ ಒಂದೇ.
ವ್ಯಕ್ತಿ : ಇಲ್ಲಾ ನಿಮ್ಮ ಮಾತು ನಾನು ನಂಬೋದಿಲ್ಲ. ನಿಮ್ಮನ್ನ ಸಾಯಿಸ್ತೇನೆ. ಸಾಯ್ರಿ... ನೀವು ನಾಶ ಆಗ್ರಿ...
(ಸಾಯಿಸಲು ಪ್ರಯತ್ನಿಸುತ್ತಾನೆ. ಆದರೆ ಆಗೋದಿಲ್ಲ. ಮಚ್ಚಿನೇಟು ಅವರನ್ನು ಏನೂ ಮಾಡೋದಿಲ್ಲ)
ಸಕಾರ : ವ್ಯರ್ಥ ಪ್ರಯತ್ನ ಮಾಡಬೇಡಾ... ನೀನಿರೋವರೆಗೂ ನಾವು ಅಮರರು. ಯಾಕೆಂದರೆ ನಾವು ಹೊರಗಿನವರಲ್ಲ.
ನಕಾರ : ನಾವು ನಿನ್ನೊಳಗೇ ಇರೋರು. ಕಷ್ಟ ಸುಖ ಹಂಚಿಕೊಳ್ಳುವವರು. ನಿನ್ನೆಲ್ಲಾ ನೋವು ನಲಿವಿಗೆ ಕಾರಣೀಕರ್ತರು.
ವ್ಯಕ್ತಿ : ಹೌದಾ? ನನಗೆ ನೆಮ್ಮದಿ ಬೇಕು. ಶಾಂತಿ ಬೇಕು. ಈ ಶನಿಗಳು ತೊಲಗಬೇಕು. ನಾನಿದ್ದರೆ ತಾನೇ ನೀವಿರೋದು. ನೀವ್ಯಾರು ಎಂದು ಹೇಳದಿದ್ದರೆ ನನ್ನನ್ನ ನಾನೇ ಸಾಯಿಸಿಕೊಳ್ತೇನೆ. (ಮಚ್ಚು ಎತ್ತಿ ಕತ್ತಿಗೆ ಹಿಡಿದುಕೊಳ್ಳುತ್ತಾನೆ.)
ಸಕಾರ : ನಿಲ್ಲು. ದುಡುಕಬೇಡ. ಹೇಳುತ್ತೇನೆ. ನಾವು ನಿನ್ನ ಒಳ ಮನಸುಗಳು. ನಾನು ಸಕಾರ. ಅಂದರೆ ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸುತ್ತೇನೆ. ನಿನಗೆ ಒಳ್ಳೆಯ ಮಾರ್ಗದಲ್ಲಿ ನಡೆಯುವಂತೆ ಸದಾ ಪ್ರೇರೇಪಿಸುತ್ತೇನೆ.
ನಕಾರ : ನಾನು ನಕಾರ. ನಕಾರಾತ್ಮಕವಾಗಿರೋದೆ ನನ್ನ ಜಾಯಮಾನ. ನಿನಗೆ ಕೆಟ್ಟ ಮಾರ್ಗದಲ್ಲಿ ನಡೆಯುವಂತೆ
ಪ್ರೇರೇಪಿಸುವುದೇ ನಾನು.
ಸಕಾರ : ನೀನು ತೆಗೆದುಕೊಳ್ಳುವ ಯಾವುದೇ ನಿರ್ಧಾರದಲ್ಲಿ, ನೀನು ಮಾಡುವ ಯಾವುದೇ ಕೆಲಸದಲ್ಲಿ ನಮ್ಮಿಬ್ಬರ ಪ್ರೇರೇಪಣೆ ಇದ್ದೇ ಇರುತ್ತದೆ. ತಪ್ಪು ಮಾಡದಂತೆ ನಾನು ಯಾವಾಗಲೂ ನಿನ್ನ ತಡೆಯುತ್ತಿರುತ್ತೇನೆ. ನನಗೆ ದ್ವೇಷ ಇರೋದು ಈ ನಕಾರನ ಮೇಲೆ. ಅವನೇ ನನಗೆ ಪರಮ ಶತ್ರು. ನನ್ನೆಲ್ಲಾ ಆಲೋಚನೆಗಳಿಗೆ ವ್ಯತಿರಿಕ್ತವಾಗಿ ನನ್ನನ್ನು ಉದ್ದೀಪನಗೊಳಿಸುತ್ತಾನೆ.
ನಕಾರ : ನೀನು ತಪ್ಪು ಮಾಡುವಂತೆ ನಾನು ನೋಡಿಕೊಳ್ಳುತ್ತೇನೆ. ಅದು ನನ್ನ ಕೆಲಸ. ಆದರೆ ಈ ಸಕಾರ ಯಾವಾಗಲೂ ನನ್ನ ಕೆಲಸದಲ್ಲಿ ಅಡ್ಡ ಗಾಲು ಹಾಕುತ್ತಾನೆ. ನಿನ್ನನ್ನು ಗೊಂದಲದಲ್ಲಿ ಬೀಳಿಸುತ್ತಾನೆ. ಇವನೋ ನನ್ನ ಅಜನ್ಮ ವೈರಿ. ಒಂದಿಲ್ಲಾ ಒಂದು ದಿನ ನಾನೇ ಇವನನ್ನ ಕೊಂದು ಬಿಡ್ತೇನೆ.
ಸಕಾರ : ನೀನೇನು ನನ್ನ ಕೊಲ್ಲೋದು, ನಿನ್ನ ಒಂದಿಲ್ಲೊಂದು ದಿನ ಪರಿವರ್ತನೆ ಮಾಡಿ ನನ್ನ ದಾರಿಗೆ ಬರೋ ತರ ಮಾಡ್ತೇನೆ.
ನಕಾರ : ನೀನೇನು ಮಾಡೋದು, ನೀನೊಬ್ಬ ಮೂರ್ಖ.
ಸಕಾರ : ನೀನೊಬ್ಬ ಶತಮೂರ್ಖ.
ನಕಾರ : ನನಗೆ ಶತಮುರ್ಖ ಅಂತಿಯೇನೋ, (ಸಕಾರನನ್ನು ಮಚ್ಚು ತೆಗೆದುಕೊಂಡು ಅಟ್ಟಿಸಿಕೊಂಡು ಹೋಗುತ್ತಾ) ಸಿಗಿವೆಂ ಕ್ಷಣದಲಿ ನಿನ್ನನಾಂ. ನೀ ಎಲ್ಲೆ ಹೋದರು ಬಿಡೆನು, ಸಿಗುವೆಂ ಕ್ಷಣದಲಿ ನಿನ್ನನಾಂ.... ನಿನ್ನನಾಂ....
ವ್ಯಕ್ತಿ : ಥೂ... ಅದ್ಯಾಕೆ ಹಿಂಗೆ ನಾಯಿಗಳ ಹಾಗೇ ಕಿತ್ತಾಡ್ತೀರಾ. ನಿಮಗೆ ಬುದ್ದಿ ಇಲ್ಲವಾ?
ಸಕಾರ : (ವ್ಯಕ್ತಿ ಹಿಂದೆ ಅಡಗಿಕೊಳ್ಳುತ್ತಾ) ನಿಮಗೆ ಬುದ್ದಿ ಹೇಳೋಕೆ ನಾನಿರೋದು ರಾಯರೇ. ಇವನ ಮಾತು ಕೇಳಿ ಹಾಳಾಗಬೇಡಿ. ನಿಮ್ಮನ್ನ ಈತ ಸರ್ವನಾಶಮಾಡಿಬಿಡ್ತಾನೆ.
ನಕಾರ : ಇನ್ನೊಂದು ಮಾತು ಮಾತಾಡಿದ್ರೂ ಸಾಯಿಸಿಬಿಡ್ತೀನಿ. ಇವನ ಮಾತು ನಂಬಬೇಡಿ. ನಾನು ಹೇಳೋದೆ ಸರಿ. ನಿನಗೆ ಶಾರ್ಟಕಟ್ನಲ್ಲಿ ಅತೀ ಬೇಗ ಹಣ ಮಾಡಬೇಕಾ?
ವ್ಯಕ್ತಿ : (ಆಸೆಯಿಂದ) ಹೌದೌದು. ನಾನು ಬೇಗ ಬೇಗ ದುಡ್ಡು ಮಾಡಬೇಕು. ಶ್ರೀಮಂತ ಆಗ್ಬೇಕು, ಕಾರು ಬಂಗಲೇ ಬೇಕು....
ನಕಾರ : ಹಾಗಾದರೆ ನಾನು ಹೇಳಿದ ಹಾಗೆ ಕೇಳು. ಇರೋ ಹಣ ಬಡ್ಡಿಗೆ ಬಿಡು, ರೇಸ್ಗೆ ಹೋಗು, ಇಸ್ಫೇಟ್ ಆಡು, ರಿಯಲ್ ಎಸ್ಟೇಟ್ ಶುರು ಮಾಡು, ಗಣಿಗಾರಿಕೆಯಲ್ಲಿ ಪಾಲುದಾರನಾಗು, ರೌಡಿಸಂ ಮಾಡು, ರಾಜಕೀಯಕ್ಕಿಳಿ.... ಕೋಟಿ ಕೋಟಿ ಸಂಪಾದಿಸು..... ಬೇಗ ಬೇಗ ಶ್ರೀಮಂತನಾಗು...
ವ್ಯಕ್ತಿ : ಇದೆಲ್ಲಾ ಮಾಡೋಕೆ ಮೊದಲು ಕೈಯಲ್ಲೊಂದಿಷ್ಟು ಕಾಸು ಬೇಕಲ್ಲಾ....
ನಕಾರ : ಅದಕ್ಕೇನಂತೆ.... ಕೊಟ್ಟಿ ದಾಖಲೆ ಸೃಷ್ಟಿ ಮಾಡಿ ಬ್ಯಾಂಕಿಗೆ ಕೊಟ್ಟು ಸಾಲಾ ತಗೋ, ಕಳ್ಳತನ ಮಾಡು, ಸುಳ್ಳು ಹೇಳು, ಮೋಸ ಮಾಡು, ದರೋಡೆ ಮಾಡು ಇಲ್ಲವೆ ಮಾಡ್ಸು, ಕೊಲೆ ಮಾಡಿಸೋ ಸುಪಾರಿ ತಗೋ... ಏನಾದರೂ ಮಾಡು ಒಟ್ಟಿನಲ್ಲಿ ಹಣ ಮಾಡು... ಅದಕ್ಕೆ ಏನೇನು ಐಡಿಯಾ ಬೇಕೋ ನನ್ನ ಕೇಳು ನಾನು ಕೊಡ್ತೀನಿ... ನಿನ್ನ ಸುಖದ ಸುಪ್ಪತ್ತಿಗೇಲಿ ತೇಲಿಸ್ತೇನೆ.
ಸಕಾರ : ಇವನ ಮಾತು ಕೇಳಬೇಡಾ, ದಾರಿತಪ್ಪಿಸ್ತಾನೆ. ಶಾರ್ಟಕಟ್ ಅಂತಾ ಹೋದರೆ ಜೈಲೆ ಗತಿ.
ನಕಾರ : ಸುಮ್ಕಿರಯ್ಯಾ, ಮಿಕಾ ಈಗ ಹಳ್ಳಕ್ಕೆ ಬೀಳ್ತಿದೆ. (ವ್ಯಕ್ತಿ ಕಡೆಗೆ ತಿರುಗಿ) ನಿನಗೆ ಹೆಂಡತಿ ಇಂದ ಸುಖ ಇಲ್ಲವಾ. ವಿವಾಹ ಬಾಹಿರ ಸುಖ ಬೇಕೆ ನಾನು ಮಾರ್ಗ ತೋರಿಸುತ್ತೇನೆ. ಮಸಾಜ್ ಸೆಂಟರ್ಗೆ ಹೋಗು, ಎಂಜಿ ರೋಡಲ್ಲಿ ರಾತ್ರಿ ಸಾಲಾಗಿ ರಾತ್ರಿ ರಾಣಿಯರು ನಿಂತಿರ್ತಾರೆ ಹೋಗಿ ಯಾರನ್ನು ಬೇಕೋ ಸಿಲೆಕ್ಟ ಮಾಡ್ಕೋ, ಡಿಸ್ಕೋತೆಕ್ಗೆ ಹೋಗು ಮಜಾಮಾಡು, ನಂಗಾನಾಚ್ಗೆ ಹೋಗು ಥ್ರಿಲ್ ಅನುಭವಿಸು. ಯಾರಾದ್ರೂ ಅಸಾಯಕ ಹೆಂಗಸರು ಸಿಕ್ರೆ ಬಿಡ್ಬೇಡಾ, ಬಣ್ಣದ ಮಾತಾಡು ಬರ್ತಾರೆ, ಕಾಳು ಹಾಕು ಬಲೆಗೆ ಬೀಳ್ತಾರೆ..... ಮನುಷ್ಯಾ ಹುಟ್ಟೋದೊಮ್ಮೆ ಸಾಯೋದೊಮ್ಮೆ, ಅಷ್ಟರೊಳಗೆ ಮಜಾ ಮಾಡ್ಬೇಕು ದೊರೆ... ಎಲ್ಲಾ ಅನುಭವಿಸಬೇಕು......
ವ್ಯಕ್ತಿ : ನೀನು ಹೇಳೋದರಲ್ಲು ಪಾಯಿಂಟ್ ಐತೆ. ಸುಖ ಬೇಕು, ಮಜಾ ತಗೋಬೇಕು, ಮೋಜು ಮಾಡಬೇಕು...
ಕುಡಿಬೇಕು, ಕುಣಿಬೇಕು... ಹುಡುಗೀರು ಬೇಕು.... (ಕುಣಿಯುತ್ತಾ ಸಕಾರನನ್ನ ತಬ್ಬಿಕೊಳ್ಳೋಕೆ ಹೋಗ್ತಾನೆ)
ಸಕಾರ : (ಬಿಡಿಸಿಕೊಂಡು) ಹಾದರ ಮಾಡಿ ಸಿಕ್ಕಾಕೊಂಡ್ರೆ ಮಾನ ಮರ್ಯಾದೆ ಹೋಗೊದಿಲ್ವಾ, ಪೋಲೀಸ್ ಕೇಸ್ ಆಗುತ್ತಲ್ಲಾ, ಟಿವಿ ಚಾನೆಲ್ನಲ್ಲಿ ಬರುತ್ತಲ್ಲಾ ... ಆಗೇನು ಮಾಡ್ತಿ....
ವ್ಯಕ್ತಿ : ಹೌದಲ್ಲಾ.... ನೀ ಹೇಳೋದರಲ್ಲು ಪಾಯಿಂಟ್ ಐತೆ. ಇರೋ ಗೌರವ ಮಣ್ಣು ಪಾಲಾಗುತ್ತಲ್ಲಾ. ಏನ್ಮಾಡೋದು. ಈನೇನ್ಮಾಡೋದು...
ನಕಾರ : ನಿತ್ಯಾನಂದ, ಸುಖಾರಾಂನಂತಹ ಸ್ವಾಮಿಗಳು ಮರ್ಯಾದೆಗೆ ಹೆದರಿದ್ರೆ ಮಜಾಮಾಡೋಕೆ ಆಗ್ತಿತ್ತಾ. ಸುಮ್ಮನಿದ್ರೆ ಸುಖಾ ಸಿಗುತ್ತಾ. ರಿಸ್ಕ ತಗೋಬೇಕು. ಮಾನಾ ಮುಖ್ಯಾನೋ ಇಲ್ಲಾ ಮಜಾ ಮುಖ್ಯಾನೋ, ನಿರ್ಧಾರ ಮಾಡು.....
ವ್ಯಕ್ತಿ : ಏನು ಮಾಡ್ಲಿ, ನನಗೆ ಎಲ್ಲಾ ಮಾಡೋ ಆಸೆ,.... ಸುಖಾ ಪಡೋ ಆಸೆ.... ಆದರೆ ರಿಸ್ಕ ಇದೆಯಲ್ಲಾ....
ನಕಾರ : ಸುಖಾ ಇಂಪಾರ್ಟಂಟಾ ಇಲ್ಲಾ ಸುಮ್ಮನೆ ಸನ್ಯಾಸಿ ತರ ಎಲ್ಲಾ ಬಿಟ್ಟು ಇರೋದು ಇಂಪಾರ್ಟಂಟಾ..... ಬೇಗಾ ಡಿಸಿಜನ್ ತಗೋ..... ಆಸೆ ಬಂದಾಗ ತೀರಿಸ್ಕೊಂಡಬಿಡಬೇಕು. ಗಾಳಿ ಬಂದಾಗ ತೂರ್ಕೊಂಡ ಬಿಡಬೇಕು. ಅವಕಾಶ ಇದ್ದಾಗ ಬಳಸಿಕೊಂಡ ಬಿಡಬೇಕು.....
ಸಕಾರ : ಹೌದು ಡಿಸಿಜನ್ ನೀನೆ ತಗೋಬೇಕು. ಆಸೆಯೇ ದುಃಖಕ್ಕೆ ಮೂಲ ಅಂತ ಬುದ್ದ ಹೇಳಿಲ್ವಾ.... ದುರಾಸೆ ಇಂದಾ ದೂರಾ ಇರು.... ನಕಾರದ ಮಾತು ಕೇಳಬೇಡಾ.... ತೊಂದರೆಗೆ ಬೀಳಬೇಡಾ.......
ನಕಾರ : ನಷಾ ಬೇಕು... ಸುಖಾ ಬೇಕು...... ಸಾಲವನ್ನು ಮಾಡಿಯಾದರೂ ತುಪ್ಪವನುಂಡು ತೇಗು ಅಂತಾ ಚಾರ್ವಾಕರೇ ಹೇಳಿದ್ದಾರೆ....
ವ್ಯಕ್ತಿ : ಅಯ್ಯೋ! ಎನು ಮಾಡಲಿ..... ಸುಖ... ಸುಖದ ಜೊತೆಗೆ ದುಃಖ....., ಮಜಾ... ಮಜದ ಜೊತೆಗೆ ಸಜಾ....., ರಿಲೀಪು.... ಅದರ ಜೊತೆಗೆ ರಿಸ್ಕು...... , ಏನಮಾಡ್ಲೀ, ಯಾರು ಹೇಳಿದ್ದನ್ನ ಕೇಳಲಿ.... ಹಾಂ...... ನನಗೆ ನೆಮ್ಮದಿ ಬೇಕು..... ತೊಲಗಿ ಹೋಗಿ ನೀವಿಬ್ಬರೂ..... ಶಾಂತಿ ಬೇಕು..... ಇಲ್ಲಿಂದ ಮರೆಯಾಗಿ ಹೋಗಿ.....
ಸಕಾರ : ನೆಮ್ಮದಿ ಬೇಕು ಅಂದರೆ ನೀನು ಇವನನ್ನ ಸಾಯಿಸಲೇಬೇಕು.....
ನಕಾರ : ನಿನಗೆ ನಿರಂತರ ಸುಖ, ನಷಾ, ಉನ್ಮಾದ ಬೇಕು ಅಂದರೆ ಇವನನ್ನ ಮೊದಲು ನಾಶ ಮಾಡಬೇಕು.
ವ್ಯಕ್ತಿ : ನಿಮಗೆ ಸಾವೇ ಇಲ್ಲಾ ಅಂತಾ ನೀವೆ ಹೇಳಿದ್ರಲ್ಲಾ. ನಿಮ್ಮನ್ನ ಸಾಯಿಸ್ಬೇಕು ಅಂದ್ರೆ ನಾನು ಸಾಯಬೇಕಲ್ವಾ.
ಸಕಾರ : ಛೇ... ಆತ್ಮಹತ್ಯೆ ಮಹಾಪಾಪ. ನೀನು ನಮ್ಮಿಬ್ಬರಲ್ಲಿ ಒಬ್ಬರನ್ನ ಸಾಯಿಸಬಹುದು. ಇಲ್ಲವೇ ಬಂಧನದಲ್ಲಿರಿಸಬಹುದು.
ನಕಾರ : ಹೌದು.... ಮೊದಲು ಆ ಕೆಲಸ ಮಾಡು. ಇವನನ್ನು ಕಟ್ಟಿ ಹಾಕು. ಇಲ್ಲವೇ ಸಾಯಿಸು.... ನಿನಗೆ ನಾನು ಕನಸಿನ ಲೋಕವನ್ನು ತೋರಿಸುತ್ತೇನೆ. ನಷಾ ಲೋಕದಲ್ಲಿ ವಿಹರಿಸುವ ಹಾಗೆ ಮಾಡುತ್ತೇನೆ.
ಸಕಾರ : ನಾವಿಬ್ಬರೂ ಅದೆಷ್ಟೇ ನಿನ್ನನ್ನು ಒಳ್ಳೆದಕ್ಕೋ ಕೆಟ್ಟದ್ದಕ್ಕೂ ಪ್ರಚೋದಿಸಿದರೂ ಅಂತಿಮ ನಿರ್ಧಾರ ನಿನ್ನದೇ. ನೀನು ತೆಗೆದುಕೊಳ್ಳುವ ನಿರ್ಣಯಕ್ಕೆ ನಾವು ಬದ್ದರಾಗಿರುತ್ತೇವೆ. ನೀನೆ ನಮ್ಮ ಸುಪ್ರೀಮೋ, ನೀನೆ ನನ್ಮ ಹೈಕಮಾಂಡ್. ನೀನೆ ನಮ್ಮ ನ್ಯಾಯಾಧೀಶ.
ವ್ಯಕ್ತಿ : ಓಹೋ... ಈಗ ಅರ್ಥ ಆಯಿತು. ನಿಮ್ಮಿಬ್ಬರನ್ನು ಕಂಟ್ರೋಲ್ ಮಾಡುವ ರಿಮೋಟ್ ನನ್ನ ಹತ್ತಿರ ಇದೆ ಅಂತಾ ಗೊತ್ತಾಯ್ತು. ಆದರೆ ಏನು ಮಾಡೋದು. ವ್ಯಯಕ್ತಿಕವಾಗಿ ನನಗೆ ಈ ನಕಾರನನ್ನ ಕಂಡರೆ ತುಂಬಾ ಮಮಕಾರ.
ನಕಾರ : ನೋಡಿದೆಯಾ... ನನಗೆ ಗೊತ್ತು ನೀನು ನನ್ನನ್ನೆ ಆಯ್ದುಕೊಳ್ಳುತ್ತೀ ಎಂದು.
ವ್ಯಕ್ತಿ : ಆದರೆ ಸಾಮಾಜಿಕವಾಗಿ ನನ್ನ ಗೌರವ ಉಳಿಸಿಕೊಳ್ಳಲು ನನಗೆ ಈ ಸಕಾರನ ಅಗತ್ಯವಿದೆ.
ಸಕಾರ : ಅಂದರೆ ಒಳಗೊಂದು ಹೊರಗೊಂದು....
ನಕಾರ : ಅಂತರಂಗದಲ್ಲೊಂದು ಬಹಿರಂಗದಲ್ಲೊಂದು...
ವ್ಯಕ್ತಿ : ಹೌದು ಬಹುತೇಕ ಜನರು ಈಗ ಬದುಕುತ್ತಿರೋದೆ ಹೀಗೆ,,, ಬೇಕಾದರೆ ಇಲ್ಲಿರುವ ಎಲ್ಲರ ಮನಸ್ಸನ್ನು ಹೊಕ್ಕು ನೋಡಿ.... ನಿಮ್ಮ ನಿಮ್ಮ ಆತ್ಮಸಾಕ್ಷಿಯನ್ನು ಕೇಳಿ ನೋಡಿ......
ನಕಾರ : ಹೊರಗೆ ಮಾತಾಡೋದೆ ಒಂದು... ಮನಸ್ಸಲ್ಲಿ ಅಂದುಕೊಳ್ಳೋದೆ ಮತ್ತೊಂದು....
ಸಕಾರ : ಆಡೋದೆ ಒಂದು ಮಾಡೋದೆ ಇನ್ನೊಂದು....
ನಕಾರ : ಬರಿಯೋದೆ ಒಂದು... ಬದುಕೋದೆ ಬೇರೊಂದು...
ವ್ಯಕ್ತಿ : ಹೇಳೋದು ವೇದಾಂತ.... ತಿನ್ನೋದು ಬದನೆಕಾಯಿ....
ಸಕಾರ : ಈ ಪ್ರವಚನ ಉಪದೇಶ ಇರೋದೆಲ್ಲಾ ಬೇರಯವರಿಗೆ ಹೇಳೋಕೆ...
ನಕಾರ : ಬದನೆಕಾಯಿ ಇರೋದೆ ತಿನ್ನೊದಿಕ್ಕೆ.
ಸಕಾರ : ಎಲ್ಲಾ ಮುಖವಾಡ.....
ನಕಾರ : ಹೌದು ಮುಖವಾಡದ ಮೇಲೆ ಮತ್ತೊಂದು ಮುಖವಾಡ.
ಸಕಾರ : ಕ್ಷಣಕ್ಕೊಂದು ದಿನಕ್ಕೊಂದು ಬದಲಾಗುವ ಬಣ್ಣ ಬಣ್ಣದ ಮುಖವಾಡ.
ವ್ಯಕ್ತಿ : ಈ ಊಸರವಳ್ಳಿಯ ಬದುಕು.... ಇನ್ನು ಸಾಕು..... ನೆಮ್ಮದಿಯ ಜೀವನ ನನಗೆ ಬೇಕು....
ಸಕಾರ : ಏನೇ ಮಾಡು.. ಅದೆಷ್ಟೇ ಹಣ ಗಳಿಸು, ಅದೆಷ್ಟೇ ಸಾಧನೆ ಮಾಡು... ಎಲ್ಲದರ ಅಂತಿಮ ಗುರಿ ನೆಮ್ಮದಿ.
ನಕಾರ : ಆ ನೆಮ್ಮದಿಯನ್ನು ನಷೆಯಲ್ಲಿ ಮೋಜಿನಲ್ಲಿ ಅಕ್ರಮ ಸಂಪಾದನೆಯಲ್ಲಿ ಸಾಧಿಸಬಹುದು.
ಸಕಾರ : ಭ್ರಮೆಯಲ್ಲಿ ತಾತ್ಕಾಲಿಕ ನೆಮ್ಮದಿ ಸಿಗಬಹುದೇನೋ, ಸಾರ್ವಕಾಲಿಕ ನೆಮ್ಮದಿ ಬೇಕಾದರೆ...
ವ್ಯಕ್ತಿ : ಹೇಳು... ಸಾರ್ವಕಾಲಿಕ ನೆಮ್ಮದಿ ಬೇಕಾದರೆ ನಾನು ಏನು ಮಾಡಬೇಕು?
ಸಕರ : ಮೊದಲು ಈ ದುರಾತ್ಮನನ್ನು ಬಂಧಿಸಿಡಬೇಲಕು, ಇನ್ನೂ ತಾಕತ್ತಿದ್ದರೆ ಸಾಯಿಸಿಬಿಡಬೇಕು.....
ನಕಾರ : ಏ... ನನ್ನನ್ನು ಅಷ್ಟು ಸುಲಭಕ್ಕೆ ಸಾಯಿಸಲು ಸಾಧ್ಯವಿಲ್ಲವೋ ಮೂರ್ಖ. ಎಂತೆಂತವರೋ ಅದಕ್ಕೆ ಪ್ರಯತ್ನಿಸಿ ಸೋಲನ್ನೊಪ್ಪಿ ಕೊನೆಗೆ ನನಗೆ ಶರಣಾಗತರಾಗಿದ್ದಾರೆ.
ಸಕರ : ಯಾಕೆ ಬುದ್ದ, ಬಸವ, ಅಲ್ಲಮನಂತವರು ನಿನ್ನನ್ನು ಕೊಂದು ಬದುಕಲಿಲ್ಲವೇ....
ನಕಾರ : ಅವರು ಸಾಧಕರು.... ಆದರೆ ಇವನಂತವರಿಗೆ ಅದೆಲ್ಲಾ ಸಾಧ್ಯವೇ ಇಲ್ಲಾ....
ವ್ಯಕ್ತಿ : ಯಾಕೆ ಸಾಧ್ಯವಿಲ್ಲ... ನನಗೆ ನಿರಂತರ ನೆಮ್ಮದಿ ಬೇಕು.... ಅದಕ್ಕಾಗಿ ಏನು ಬೇಕಾದರೂ ಮಾಡಬಲ್ಲೆ...
ನಕಾರ : ಕಾಮ ಕ್ರೋಧ ಲಾಭ ಮಧ ಮೋಹ ಮತ್ಸರಾದಿ ಅರಿಷಡ್ವರ್ಗಗಳನ್ನು ಬಿಡಬಲ್ಲೆಯಾ?.....
ವ್ಯಕ್ತಿ : ಸಾಧ್ಯವಾಗಬಹುದೆನೋ.....
ಸಕಾರ : ನಿನ್ನ ಅಹಂಕಾರವನ್ನು, ಶ್ರೇಷ್ಟತೆಯ ವ್ಯಸನವನ್ನು ಬಿಟ್ಟಿರಬಲ್ಲೆಯಾ?
ವ್ಯಕ್ತಿ : ಪ್ರಯತ್ನಿಸಬಲ್ಲೆ....
ಸಕರ : ಹಾಗಾದರೆ ಮೊದಲು ಈ ಮುಖವಾಡಗಳನ್ನು ತೆಗೆದುಹಾಕು.... (ಅಲ್ಲಿ ಟೇಬಲ್ ಮೇಲಿರುವ ವಿವಿಧ ರೀತಿಯ ಮುಖವಾಡಗಳನ್ನು ತೆರೆದು ತೋರಿಸುತ್ತಾನೆ)
ವ್ಯಕ್ತಿ : (ತೆಗೆದು ಹಾಕಲು ಪ್ರಯತ್ನಿಸುತ್ತಾನೆ ಸಾಧ್ಯವಾಗುವುದಿಲ್ಲ)
ಸಕಾರ : ಅದು ಅಷ್ಟೊಂದು ಸುಲಭವಲ್ಲ. ಬದುಕಿನಾಧ್ಯಂತ ನಿನ್ನ ಭಾಗವಾಗಿರುವ ಮುಖವಾಡಗಳನ್ನು ತಕ್ಷಣ ತೆಗೆದೊಗೆಯಲು ಸಾಧ್ಯವೇ ಇಲ್ಲ. ಈ ನಕಾರನನ್ನು ನಿರ್ಬಂಧಿಸದೇ ಇದು ಅಸಾಧ್ಯ.
ನಕಾರ : (ಕೈಯಲ್ಲಿ ಮುಖವಾಡ ಹಿಡಿದು) ಅದಕ್ಕಿಂತಲೂ ಬಣ್ಣ ಬಣ್ಣದ ಚೆಂದನೆಯ ಮುಖವಾಡಗಳನ್ನು ನಾನು ಒದಗಿಸುತ್ತೇನೆ. ಗಳಿಗೆಗೊಂದು ಬದಲಾಯಿಸುತ್ತಾ ಸುಖಿಸಬಹುದು.
ವ್ಯಕ್ತಿ : (ವ್ಯಕ್ತಿ ನಕಾರನ ಕೈಲಿರುವ ಮುಖವಾಡದತ್ತ ಆಕರ್ಷಿತನಾಗಿ ಆಸೆಯಿಂದ ಹೆಜ್ಜೆ ಮುಂದಡಿಯಿಡುತ್ತಾನೆ.)
(ಹಿಂದಿನಿಂದ ಗದ್ದಲ ಗೌಜು ಹಿಂಸಾತ್ಮಕ ವೆನಿಸುವ ಸಂಗೀತ ಕೇಳಿಬರುತ್ತದೆ)
ಸಕಾರ : ಬೇಡಾ
ಆ ತಪ್ಪು ಮಾಡಬೇಡಾ, ಭ್ರಮೆಯನ್ನು ಬಿಡು, ಇತ್ತ ಬಾ ನಾನು ನಿನಗೆ ನೆಮ್ಮದಿಯ ಮಾರ್ಗವನ್ನು ತೋರಿಸುತ್ತೇನೆ. (ಕೈಯಲ್ಲಿ ಬುದ್ದನ ಮೂರ್ತಿಯನ್ನು ಹಿಡಿದು ಕರೆಯುತ್ತಾನೆ)
ವ್ಯಕ್ತಿ : (ವ್ಯಕ್ತಿ ಸಕಾರನ ಕೈಲಿರುವ ಬುದ್ಧನತ್ತ ಆಕರ್ಷಿತನಾಗಿ ಆಸೆಯಿಂದ ಹೆಜ್ಜೆ ಮುಂದಡಿಯಿಡುತ್ತಾನೆ.)
(ಹಿಂದಿನಿಂದ ಹಿತವಾದ ಸಂಗೀತ ಕೇಳಿಬರುತ್ತದೆ)
ನಕಾರ : ಒಂದು ಕೈಯಲ್ಲಿ ಹಣದ ಬಂಡಲ್ಲು, ಬ್ರ್ಯಾಂಡಿ ಬಾಟೆಲ್ಲು, ಇನ್ನೊಂದು ಕೈಯಲ್ಲಿ ಸುಂದರ ಹುಡುಗಿಯ ಪೋಟೋ ಹಿಡಿದು) ನೋಡಿಲ್ಲಿ.... ಇಲ್ಲಿದೆ ನೀನು ಕಾಣಬಯಸುವ ಸ್ವರ್ಗಕ್ಕೆ ಮೆಟ್ಟಿಲು. ಬಾ ತೆಗೆದುಕೋ....
ವ್ಯಕ್ತಿ : (ವ್ಯಕ್ತಿ ನಕಾರನ ಕೈಲಿರುವ ವಸ್ತುಗಳತ್ತ ಆಕರ್ಷಿತನಾಗಿ ಆಸೆಯಿಂದ ಜೊಲ್ಲು ಸುರಿಸುತ್ತಾ ಹೆಜ್ಜೆ ಮುಂದಡಿಯಿಡುತ್ತಾನೆ.) (ಹಿಂದಿನಿಂದ ಮಳೆ ಬಿರುಗಾಳಿಯ ಹಿನ್ನೆಲೆ ಸಂಗೀತ ಕೇಳಿಬರುತ್ತದೆ)
ಸಕಾರ : ಕ್ಷಣಿಕ ಆಕರ್ಷಣೆಗೊಳಗಾಗಿ ನೆಮ್ಮದಿ ಕಳೆದುಕೊಳ್ಳಬೇಡಾ... ಇತ್ತ ಬಾ ನಿನಗೆ ದಿವ್ಯವಾದ ನೆಮ್ಮದಿಯ ನೆಲೆಯನ್ನು ತೋರಿಸುತ್ತೇನೆ..... (ಸಕಾರನ ಇನ್ನೊಂದು ಕೈಯಲ್ಲಿ ದೀಪವೊಂದು ಬೆಳಗುತ್ತಿರುತ್ತದೆ )
ವ್ಯಕ್ತಿ : (ವ್ಯಕ್ತಿ ಸಕಾರನ ಕೈಲಿರುವ ದೀಪದತ್ತ ಆಕರ್ಷಿತನಾಗಿ ಆಸೆಯಿಂದ ಅವನ ಕಡೆ ಹೆಜ್ಜೆ ಇಡುತ್ತಾನೆ.)
(ಹಿಂದಿನಿಂದ ಅಹ್ಲಾದಕರ ಹಿನ್ನಲೆ ಸಂಗೀತ ಕೇಳಿಬರುತ್ತದೆ)
ಸಕಾರ : ಮೊದಲು ನಕಾರನನ್ನು ಕೊಂದು ಹಾಕು. ನೀನು ಮಹಾತ್ಮನಾಗುತ್ತೀಯಾ.
ವ್ಯಕ್ತಿ : ನಕಾರನತ್ತ ಹೆಜ್ಜೆ ಹಾಕುತ್ತಾನೆ. (ಹಿನ್ನೆಲೆಯಲ್ಲಿ ಮರಣ ಮೃದಂಗ ಸಂಗೀತ)
ನಕಾರ : ನನ್ನ ಕೊಂದು ಏನು ಸಾಧಿಸುವೆ, ಸಕಾರನನ್ನು ಕೊಲ್ಲು ನಾನು ನಿನಗೆ ಸುಖದ ನೆಲೆಗಳನ್ನು ತೋರಿಸುತ್ತೇನೆ. ಅವನನ್ನು ಸಾಯಿಸಿಬಿಡು ಸುಖವಾಗಿರತೀಯಾ.
ವ್ಯಕ್ತಿ : ಸಕಾರನತ್ತ ಹೆಜ್ಜೆ ಹಾಕುತ್ತಾನೆ. (ಹಿನ್ನೆಲೆಯಲ್ಲಿ ಮಧುರ ಸಂಗೀತ)
(ವ್ಯಕ್ತಿಯು ಸಕಾರನ ಕೈಯಿಂದ ಬುದ್ದನ ಮೂರ್ತಿಯನ್ನು ಹಾಗೂ ದೀಪವನ್ನು ತೆಗೆದುಕೊಳ್ಳುತ್ತಾನೆ. ಮತ್ತೆ ಮರಳಿ ಪೀಠದಲ್ಲಿ ಹೋಗಿ ಮುಂದೆ ಬುದ್ಧನ ಮೂರ್ತಿಯನ್ನುಟ್ಟು ಜೊತೆಗೆ ದೀಪವನ್ನಿಟ್ಟು ಪಕ್ಕದಲ್ಲಿರುವ ಮುಖವಾಡಗಳನ್ನೆಲ್ಲಾ ದೀಪದಲ್ಲಿ ಸುಡುತ್ತಾನೆ. ನಂತರ ಅದನ್ನೇ ನೋಡುತ್ತಾ ದ್ಯಾನಾಸಕ್ತನಾಗಿ ಕುಳಿತುಕೊಳ್ಳುತ್ತಾನೆ.)
ಸಕಾರ : (ಸಂತಸದಿಂದ ಆನಂದದ ನೃತ್ಯ ಮಾಡತೊಡಗುತ್ತಾನೆ.)
ನಕಾರ : (ಸಿಟ್ಟಿನ ಮರಣಮೃದಂಗ ನೃತ್ಯ ಮಾಡತೊಡಗುತ್ತಾನೆ. ಇಬ್ಬರ ನೃತ್ಯದ ಜುಗಲ್ಬಂಧಿ ಶುರುವಾಗುತ್ತದೆ.)
ವ್ಯಕ್ತಿ : (ವ್ಯಕ್ತಿ ಶಾಂತವಾಗಿ ನೆಮ್ಮದಿಯಾಗಿ ಕುಳಿತುಕೊಳ್ಳುತ್ತಾನೆ. ಮುಖದಲ್ಲಿ ಆನಂದ ಉಕ್ಕಿ ಬರುವಂತಿರುತ್ತದೆ.)
ನಕಾರ : (ವ್ಯಕ್ತಿಯ ಸುತ್ತಲೂ ನೃತ್ಯ ಮಾಡಿ ಸುಸ್ತಾಗಿ ನಿರಾಶೆಗೊಂಡ ನಕಾರ ಸಾವಕಾಶವಾಗಿ ಕುಸಿದು ವ್ಯಕ್ತಿಯ ಹಿಂದೆ ಹೋಗಿ ಕಾಣದಂತಾಗುತ್ತದೆ.)
ಸಕಾರ : (ಸಕಾರ ವ್ಯಕ್ತಿಯ ಹಿಂದೆ ಬಸವಣ್ಣನವರ ಹಾಗೆ ನಿಲ್ಲುತ್ತಾನೆ. ವಚನ ಹೇಳತೊಡಗುತ್ತಾನೆ)
ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ
ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬನ್ನಿಸ ಬೇಡ, ಇದಿರು ಹಳಿಯಲು ಬೇಡ
ಇದೆ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ದಿ
ಇದೇ ನಮ್ಮ ಕೂಡಲಸಂಗಮದೇವನೊಲಿಯುವ ಪರಿ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ