ಗುರುವಾರ, ನವೆಂಬರ್ 7, 2013

ಮಾಂತ್ರಿಕ ನಿರೂಪಣೆಯ ‘ಕೈವಾರ ನಾರೇಯಣ’


ನಾಟಕ ವಿಮರ್ಶೆ :


                                                          





    
ಕನ್ನಡ ಹವ್ಯಾಸಿ ರಂಗಭೂಮಿಯ ರಂಗತಂತ್ರ ವ್ಯಾಕರಣವನ್ನೇ ಬದಲಾಯಿಸಿದ ನಾಟಕ ಕೈವಾರ ನಾರೇಯಣ. ಡಾ.ಕೆ.ವೈ.ನಾರಾಯಣಸ್ವಾಮಿಯವರು ರಚಿಸಿದ ನಾಟಕ ಹೊಸ ರೀತಿಯ ನಿರೂಪನಾ ಶೈಲಿಯಿಂದಾಗಿ ಗಮನ ಸೆಳೆಯುವಂತಹುದು. ಸಾಂಪ್ರದಾಯಿಕ ನಾಟಕ ರಚನೆಯ ಚೌಕಟ್ಟನ್ನು ಒಡೆದು ಹಾಕಿ ಹೊಸದಾದ ಪರಿಕಲ್ಪನೆಯೊಂದನ್ನು ಕಟ್ಟಿಕೊಡುವ ಪ್ರಯತ್ನ ನಾಟಕದಲ್ಲಿದೆ.
        ಭಾಗವತರು ರಂಗತಂಡವು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ ರಂಗಬೆಡಗು ಎನ್ನುವ ಕೆವೈಎನ್ ನಾಟಕಗಳ ಉತ್ಸವದಲ್ಲಿ,  ಈಶ.ಎಂ.ಸಿ.ಹಳ್ಳಿಯವರ ನಿರ್ದೇಶನದಲ್ಲಿ, ಶಿವಮೊಗ್ಗದ ರಂಗಬೆಳಗು ತಂಡದ ಕಲಾವಿದರಿಂದ ಕೈವಾರ ನಾರೇಯಣ ನಾಟಕವು ಜೂನ್ ೧೬ ರಂದು ಪ್ರದರ್ಶನಗೊಂಡು ಹೊಸ ರೀತಿಯ ಅನುಭವವನ್ನು ನೋಡುಗರಿಗೆ ನೀಡಿತು.    
        ಕೈವಾರ ನಾರೇಯಣಪ್ಪನವರು ಕ್ರಿ. ೧೭೨೬-೧೮೩೬ರ ಕಾಲಘಟ್ಟದಲ್ಲಿ ಬದುಕಿ ಸ್ವಪ್ರತಿಭೆಯಿಂದ ಬೆಳೆದ ಅನುಭಾವಿ. ’ಅಮರನಾರೇಯಣಎನ್ನುವ ಅಂಕಿತನಾಮದಲ್ಲಿ ಬರೆದ ಹಾಡು, ಕೀರ್ತನೆ, ಶತಕಗಳು ಹಾಗೂ ಕಾಲಜ್ಞಾನದಿಂದಾಗಿ ಅವರು ಆಂದ್ರ ಹಾಗೂ  ಕರ್ನಾಟಕದ ಗಡಿ ಭಾಗವಾದ ಚಿಕ್ಕಬಳ್ಳಾಪುರ / ಚಿಂತಾಮಣಿ ಪ್ರಾಂತ್ಯದಲ್ಲಿ ಕೈವಾರ ತಾತಯ್ಯ ಹೆಸರಲ್ಲಿ ತುಂಬಾ ಸುಪ್ರಸಿದ್ದರು. ದಂತಕಥೆಯಾದ ಸಂತನ ಸುತ್ತಲೂ ಪವಾಡಗಳ ಹುತ್ತ ಬೆಟ್ಟದ ಹಾಗೆ ಬೆಳೆದು ನಿಂತಿದೆ. ಜೂನ್ ೧೧ ತಾತಯ್ಯನವರು ಜೀವಸಮಾಧಿಯಾದ ದಿನ. ೧೭೮ ವರ್ಷಗಳಾದವು. ಅದೇ ಜೂನ್ ತಿಂಗಳಲ್ಲಿ ಅವರ ಕುರಿತ ನಾಟಕ ಪ್ರದರ್ಶನಗೊಳ್ಳುತ್ತಿರುವುದೊಂದು ವಿಶೇಷ.  

  ತಿರುಪತಿ ವೆಂಕಟೇಶ್ವರನ ದೇವಸ್ಥಾನದಲ್ಲಿ ಪುರೋಹಿತರಿಂದ ಅವಮಾನಿತರಾದ ನಾರೇಯಣರವರು ಬ್ರಹ್ಮರಥ ಕದಲದಿರಲಿ ಎಂದು ಶಾಪಕೊಟ್ಟು ಹೊರಡುತ್ತಾರೆ. ಇದನ್ನು ತಿಳಿದು ಆತಂಕಗೊಂಡ ಚಂದ್ರಗಿರಿಯ ರಾಜ ತಾತಯ್ಯನವರನ್ನು ಹುಡುಕಿ ಕರೆತರಲು ತನ್ನ ಗುಪ್ತಚಾರರನ್ನು ಕಳುಹಿಸುತ್ತಾನೆ. ಹಾಗೆ ಹುಡುಕುತ್ತಾ ಬಂದ ಗುಪ್ತಚರರಿಗೆ ಆಗಾಗ ನಾರೇಯಣನ ಅನುಯಾಯಿಗಳು ಸಿಗುತ್ತಾರೆ. ಅದೇ ಸುಳಿವನ್ನು ಹಿಡಿದು ನಡೆವ ಅವರಿಗೆ ಬಳೆಗಾರ ನಾರೇಯಣ ಕೈವಾರ ತಾತಯ್ಯನಾದ ವೃತ್ತಾಂತ ಬಿಚ್ಚಿಕೊಳ್ಳುತ್ತಾ  ಸಾಗುವುದೇ ನಾಟಕದ ಒಂದೆಳೆ ಕಥೆ.
     ಜನಮಾನಸದಲ್ಲಿ ಅಚ್ಚಳಿಯದೇ ನಿಂತ ತಾತಯ್ಯನವರ ಜನಪ್ರೀಯತೆಯಿಂದ ಲಾಭಮಾಡಿಕೊಳ್ಳಲು ನೋಡಿದ ಪುರೋಹಿತಶಾಹಿಗಳು ತಾತಯ್ಯನವರಿಗೊಂದು ಮಠ ಕಟ್ಟಿ, ಅವರ ಸುತ್ತ ಪವಾಡಗಳನ್ನು ಹೆಣೆದರು. ಯಾವ ಪುರೋಹಿತಶಾಹಿಯನ್ನು ಕೈವಾರ ನಾರಾಯಣರವರು ವಿರೋಧಿಸಿ ಪ್ರತಿಭಟಿಸಿದ್ದರೋ ಅಂತಹ ವೈದಿಕಶಾಹಿಯೇ ಅವರನ್ನು ರಾಮಾನುಜಾಚಾರ್ಯರ ಅವತಾರ ಎಂದು ಆರೋಪಿಸಿ, ಅಬ್ರಾಹ್ಮಣ ಸಂತನಿಗೆ ಬ್ರಹ್ಮಜ್ಞಾನವನ್ನು ದಯಪಾಲಿಸಿ ಕುಲೀನರನ್ನಾಗಿಸಿ ಆರಾಧನೆಯ ಮೂರ್ತಿಯನ್ನಾಗಿಸಲು ಪ್ರಯತ್ನಿಸಿದ್ದನ್ನು ನಾಟಕ ಸೊಗಸಾಗಿ ಅನಾವರಣಗೊಳಿಸಿದೆ. ತಾತಯ್ಯನವರ ಕುರಿತು ಪ್ರಚಲಿತವಿರುವ ಪವಾಡಗಳ ಅತಿರೇಕಗಳೆಲ್ಲಾ ಸುಳ್ಳು, ಅದು ಪುರೋಹಿತಶಾಹಿಯ ಕುತಂತ್ರ ಎನ್ನುವುದನ್ನು ಸತ್ಯದ ತಲೆಯಮೇಲೆ ಹೊಡೆದಂತೆ ನಾಟಕದಲ್ಲಿ ತೋರಿಸಿದ್ದು ನಾಟಕಕಾರರ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.
      ಸ್ಥಳೀಯ ಜನರಾಡಳಿತದಲ್ಲಿದ್ದ ತಾತಯ್ಯನವರ ಸಮಾಧಿಯನ್ನು ತಮ್ಮ ಸುಪರ್ದಿಗೆ ಪಡೆದ ಕೆಳವರ್ಗದಿಂದ ಬಂದ ಶ್ರೀಮಂತ ಎಂ.ಎಸ್.ರಾಮಯ್ಯನವರು ಮಠ-ದೇವಸ್ಥಾನವನ್ನು ದೊಡ್ಡದಾಗಿ ಕಟ್ಟಿ, ಆರಾಧನಾ ಕೇಂದ್ರವನ್ನು  ವ್ಯಾಪಾರೀಕರಣಗೊಳಿಸಿ, ಪೂಜೆಗೆ ಅರ್ಚಕರನ್ನು ನಿಯಮಿಸಿ, ತಾತಯ್ಯನವರಿಗೇ ಜನಿವಾರವನ್ನು ತೊಡಿಸಿ ವೈದಿಕಸಂಸ್ಕೃತಿಯನ್ನು ಜಾರಿಗೆ ತಂದರು. ಕೈ.ಪು.ಲಕ್ಷ್ಮೀನರಸಿಂಹಶಾಸ್ತ್ರಿಗಳು ತಮ್ಮೆಲ್ಲಾ ಪುಸ್ತಕಗಳಲ್ಲಿ ತಾತಯ್ಯನವರ ಪವಾಡಗಳ ಅಂತೆ-ಕಂತೆಗಳನ್ನು ಬರೆದು ಜನರಲ್ಲಿ ಮೌಡ್ಯವನ್ನು ತುಂಬಿದರು. ಎರಡೂ ವ್ಯಕ್ತಿಗಳನ್ನು ನಾಟಕದಲ್ಲಿ ಹೆಸರು ಹೇಳದೇ ಲೇವಡಿ ಮಾಡಿ ವಾಸ್ತವಕ್ಕೆ  ನಾಟಕವನ್ನು ಹತ್ತಿರಗೊಳಿಸಲಾಗಿದೆ. ನಿಜದಲ್ಲಿ ತಾತಯ್ಯನವರಿಗೆ ವೈದಿಕ ಸಂಸ್ಕೃತಿಯ ಮೇಲೆ ವಿರೋಧವೇನಿರಲಿಲ್ಲ. ಹಾಗಿದ್ದಿದ್ದರೆ ಅವರು ವೆಂಕಟೇಶ್ವರನ ಆರಾಧಕರಾಗುತ್ತಿರಲಿಲ್ಲ, ಅಮರ ನಾರೇಯಣ ಎಂಬ ಅಂಕಿತನಾಮವನ್ನೂ ಇಟ್ಟುಕೊಳ್ಳುತ್ತಿರಲಿಲ್ಲ. ಆದರೆ ನಾಟಕದಾದ್ಯಂತ ತಾತಯ್ಯನವರು ಪುರೋಹಿತಶಾಹಿಯನ್ನು ವಿರೋಧಿಸಿದರು ಎಂದೇ ಬಿಂಬಿತವಾಗಿರುವುದು ವಿಪರ್ಯಾಸವಾಗಿದೆ.     
       ಕೈವಾರ ತಾತಯ್ಯನವರ ಕುರಿತ ಸುಳ್ಳುಗಳ ಕಂತೆಗಳನ್ನೇ ಕಟ್ಟಿಕೊಡುವ ಪುಸ್ತಕಗಳು ಬೇಕಾದಷ್ಟಿವೆ. (ಹೆಚ್ಚು ಪುಸ್ತಕಗಳನ್ನು ಕೈ.ಪು.ಲಕ್ಷ್ಮೀನರಸಿಂಹಶಾಸ್ತ್ರಿಗಳೇ  ಬರೆದಿದ್ದಾರೆ.) ಕೆಲವು ವರ್ಷ ಅಧ್ಯಯನ ಮಾಡಿದ ರಾಧಾಕೃಷ್ಣ ಪಲ್ಲಕ್ಕಿಯವರು ನಿರ್ದೇಶಿಸಿದ ಕೈವಾರ ತಾತಯ್ಯ ಎನ್ನುವ ಸಿನೆಮಾ ಕೂಡ ಬಂದಿದೆ. ಈಗ ಡಾ.ಕೆ.ವೈ.ಎನ್ ರವರು ನಾಟಕ ಕೂಡ ಪ್ರದರ್ಶನಗೊಳ್ಳುತ್ತಿದೆ. ಜೊತೆಗೆ ಕೈವಾರ ನಾರೇಯಣಪ್ಪನವರು ಬರೆದ ಕಾಲಜ್ಙಾನ, ಶ್ರೀ ಕೃಷ್ಣ ಚರಿತಾಮೃತ, ಅಮರನಾರೇಯಣ ಚರಿತ್ರೆ, ಭೀಮಲಿಂಗ ಶತಕ ಜೊತೆಗೆ ಹಲವಾರು ಕೀರ್ತನೆಗಳು ಅವರ ವಿಚಾರಧಾರೆಗೆ ಪ್ರತ್ಯಕ್ಷ ಸಾಕ್ಷಿಗಳಾಗಿವೆ. ಇದರೊಂದಿಗೆ ಜನಪದರ ಮೌಖಿಕ ಪರಂಪರೆಯೂ ಇದೆ.  ಎಲ್ಲವನ್ನೂ ಅಭ್ಯಾಸ ಮಾಡುತ್ತಾ ವಾಸ್ತವ ಸತ್ಯವನ್ನು ಹುಡುಕುತ್ತಾ ಹೋದರೆ ಇನ್ನೂ ಗೊಂದಲಗಳು ಸೃಷ್ಟಿಯಾಗುತ್ತವೆ. ಯಾವುದು ಸುಳ್ಳು ಯಾವುದು ಸತ್ಯ ಎನ್ನುವುದನ್ನು ನಿರ್ಧರಿಸುವುದೇ ಸಮಸ್ಯೆಯಾಗುತ್ತದೆ. ಸತ್ಯ ಮಿತ್ಯಗಳಲ್ಲಿ ನಿಜವನ್ನು ಹುಡುಕುವುದೇ  ಗೋಜಲಾಗಿದೆ ಎನ್ನುವಷ್ಟು ತಾತಯ್ಯನವರ ಕುರಿತು ದಂತಕಥೆಗಳು ವ್ಯಾಪಕವಾಗಿವೆ

      ಕೈವಾರ ನಾರೇಯಣಪ್ಪ ಎನ್ನುವವರು ೧೭ ನೇ ಶತಮಾನದಲ್ಲಿದ್ದರು. ಬಳೆ ವ್ಯಾಪಾರಿಯಾಗಿದ್ದ ಅವರು ಬದುಕಿನ ಕುಲುಮೆಯಲ್ಲಿ ಬೆಂದು ಅನುಭಾವಿಯಾದರು.  ತಮ್ಮ ಅನುಭಾವ, ವಿಚಾರ ಹಾಗೂ ಯೋಗಬಲದಿಂದ ಹಲವಾರು ಕೃತಿಗಳನ್ನು ಕನ್ನಡ ಹಾಗೂ ತೆಲಗು ಭಾಷೆಯಲ್ಲಿ ರಚಿಸಿದರು. ಕೀರ್ತನೆಗಳ ಮೂಲಕ ಜನಮಾನಸವನ್ನು ತಲುಪಿದರು. ಭವಿಷ್ಯವನ್ನು ಮೊದಲೇ ದಾಖಲಿಸುವ ಪ್ರಯತ್ನವನ್ನು ಕಾಲಜ್ಞಾನದಲ್ಲಿ ಮಾಡಿ ಪ್ರಸಿದ್ದರಾದರು ಹಾಗೂ ಮುಂದಿನ ಜನಾಂಗ ಅವರನ್ನು ಆರಾದ್ಯ ದೈವವನ್ನಾಗಿ ಆರಾಧಿಸತೊಡಗಿತು ಎಂಬುದು ನಂಬಬಹುದಾದ ವಾಸ್ತವ ಸತ್ಯ. ನಾಟಕದಲ್ಲಿ ತೋರಿಸಿದಂತೆ ತಾತಯ್ಯನವರೆಂದೂ ಶರಣರ ಹಾಗೆ ಪುರೋಹಿತಶಾಹಿಗಳನ್ನು ನೆರವಾಗಿ ವಿರೋಧಿಸಲಿಲ್ಲ. ಅರಿವಿನಿಂದ ಯಾರು ಬೇಕಾದರೂ ಬ್ರಹ್ಮಜ್ಞಾನವನ್ನು ಪಡೆಯಬಹುದು, ಹಾಗೆ ಬ್ರಹ್ಮಜ್ಞಾನವನ್ನು ಪಡೆದವನೇ ನಿಜವಾದ ಬ್ರಾಹ್ಮಣ ಎಂದು ಪ್ರತಿಪಾದಿಸಿದವರು. ಎಲ್ಲಾ ರೀತಿಯ ಜಾತಿ ಧರ್ಮಗಳ ಅಸಮಾನತೆಯನ್ನು ವಿರೋಧಿಸಿದರು. ನಾರಾಯಣ ಎಂದಾಗ ಬಿಗಿತಪ್ಪಿಹೋಯಿತು, ನಾರೇಯಣ ಎಂದಾಗ ಬೀಜಾಕ್ಷರವಾಯಿತು ಎಂದವರು.
          ವಾಸ್ತವ ಸತ್ಯವನ್ನು ಕಳೆದ ಎರಡು ಶತಕಗಳಿಂದ ಅವರವರ ಭಾವಕ್ಕೆ ಅವರವರ ಬಕುತಿಗೆ ತಕ್ಕಂತೆ ಎಲ್ಲಾ ಪ್ರಕಾಂಡ ಪಂಡಿತರು  ತಮ್ಮ ತಮ್ಮ ಹಿತಾಸಕ್ತಿಗನುಗುಣವಾಗಿ ಬದಲಾಯಿಸುತ್ತಾ ಬಂದರು. ಈಗ ಡಾ.ಕೆವೈಎನ್ ರವರ ಸರದಿ. ಅವರು ತಮ್ಮ ಪಾಂಡಿತ್ಯವನ್ನು ಬಳಸಿ ಅವೈಜ್ಞಾನಿಕ ಪವಾಡಗಳನ್ನು ಮತ್ತು ಹಳೆಯ ಮಿಥಗಳನ್ನು ಲೇವಡಿ ಮಾಡುತ್ತಾ  ಹೊಸ ಮಿಥಗಳನ್ನು  ನಾಟಕದಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ಪ್ರಜ್ಞಾಪೂರ್ವಕವಾಗಿ ಮಾಡಿದ್ದಾರೆ. ಕಟ್ಟುಕಥೆಗಳನ್ನು ನಿರಾಕರಿಸುತ್ತಾ ಹೊಸ ಕಥೆಯನ್ನು ಕಟ್ಟಿಕೊಡುವ ಚಾಣಾಕ್ಷತನ ಅದ್ಬುತವಾಗಿದೆ. ಪುರಾಣ/ ಐತಿಹಾಸಿಕ ಕಲ್ಪನೆಗಳನ್ನು ಒಡೆದು ಹೊಸ ಪುರಾಣ ಪರಿಕಲ್ಪನೆಗಳನ್ನು ಕಟ್ಟುವುದರಲ್ಲಿ ಕೆವೈಎನ್ರವರಿಗೆ ಕೆವೈಎನ್ರವರೇ ಸಾಟಿ.  ತಾತಯ್ಯನವರ ಕುರಿತ ಸಿಕ್ಕುಗಳನ್ನು ಬಿಡಿಸಿ ಸರಳೀಕರಿಸುವ ಬದಲು ಇನ್ನೂ ಬೇರೆ ಗೊಂದಲಗಳನ್ನು ಹುಟ್ಟಿಸುತ್ತಾರೆ, ಬೇರೆ ಬೇರೆ ಕಾಲಘಟ್ಟದ ದಾರ್ಶನಿಕರಾದ ವೇಮನ, ಶಿಶುನಾಳ ಶರೀಫರಂತ ಅನುಭಾವಿಗಳನ್ನು ಇಲ್ಲಿ ಕರೆತಂದು ಮುಖಾಮುಖಿಯಾಗಿಸುತ್ತಾರೆ. ಯಾವುಯಾವುದೋ ಕಾಲದ ಸನ್ನಿವೇಶಗಳನ್ನು ಹಿಂದಕ್ಕೋಡಿಸಿ, ಮುಂದಕ್ಕೆ ತಂದು, ಹಿಂದು ಮುಂದುಗಳನ್ನು ಸಮ್ಮಿಶ್ರಗೊಳಿಸಿ ದೃಶ್ಯಗಳನ್ನು ಕಟ್ಟಿಕೊಡುತ್ತಾರೆ. ಜನಸಾಮಾನ್ಯ ಪ್ರೇಕ್ಷಕನಿಗೆ ಕನ್ಪೂಸ್ ಮಾಡುತ್ತಾ ಕಾಲಾತೀತವಾಗಿ ಹಾಗೂ ಕಲಾತ್ಮಕವಾಗಿ ಕೈವಾರ ನಾರೇಯಣರನ್ನು ದೃಶ್ಯಗಳಲ್ಲಿ ಹಿಡಿದಿಡುವ ಪಾಂಡಿತ್ಯಕ್ಕೆ ಹ್ಯಾಟ್ಸ ಅಪ್ ಹೇಳಲೇಬೇಕು.
          ಆಲೋಚಿಸಿದಷ್ಟೂ ಗೋಜಲುಗಳನ್ನುಂಟು ಮಾಡಿಕೊಳ್ಳುವುದರ ಬದಲು, ತುಲನಾತ್ಮಕತೆಯನ್ನು ಬದಿಗಿಟ್ಟು, ಹಿಂದಿನ ಸತ್ಯ ಮಿಥ್ಯೆಗಳನ್ನು ಪ್ರಶ್ನಿಸದೇ ರಂಗದಂಗಳದಲ್ಲಿ ತೋರಿಸಲಾದ ತಾತಯ್ಯನ ಸುತ್ತ ಹೆಣೆದಿರುವ ವೃತ್ತಾಂತವನ್ನು ನಿಜವೆಂದೇ ತಾತ್ಕಾಲಿಕವಾಗಿ ನಂಬಿ, ವೃತ್ತಾಂತವನ್ನು ತೋರಿಸಲು ಬಳಸಲಾದ ನಿರೂಪನಾ ತಂತ್ರಗಳ ಮೂಲಕ ನಾಟಕವನ್ನು ಆಸ್ವಾದಿಸುವುದು ಉತ್ತಮ.
          ಕೈವಾರ ನಾರೇಯಣ ನಾಟಕದಲ್ಲಿ ಯಾವ ನಾಯಕ ನಾಯಕಿಯರಿಲ್ಲ. ಸೂತ್ರಬದ್ದ ಕಥೆಯೆಂಬುದೂ ಇಲ್ಲ. ಅಸಲಿಗೆ ಇಲ್ಲಿ ಕೈವಾರ ತಾತಯ್ಯನ ಪಾತ್ರವೂ ಬರುವುದಿಲ್ಲ. ಆದರೆ ತಾತಯ್ಯನಿಗಾಗಿ ಹುಡುಕುವ ಹಾಗೂ ಹುಡುಕಾಟದಲ್ಲಿ ಅವರ ಬದುಕು-ಬವಣೆ-ಸಾಧನೆಗಳನ್ನು ಹೇಳುವ ಪ್ರಯತ್ನ ಹಾಗೂ ಅದಕ್ಕಾಗಿ ಬಳಸಲಾದ ರಂಗತಂತ್ರ ನಿಜಕ್ಕೂ ವಿಶಿಷ್ಟವಾದದ್ದು.  ನಾಟಕ ಎಲ್ಲಿಯೂ ನಿಲ್ಲದೇ ಸದಾ ಚಲನಶೀಲತೆಯನ್ನು ಹೊಂದಿರುವುದರಿಂದ ನೋಡುಗರಿಗೆ ವಿಶೇಷ ಅನುಭವವನ್ನು ಕೊಡುತ್ತದೆ. ನಾಟಕದಾದ್ಯಂತ ತಾತಯ್ಯನನ್ನು ಹುಡುಕುವ ಕುತೂಹಲವನ್ನು ಕೊನೆಯವರೆಗೂ ಉಳಿಸಿಕೊಂಡು ಬಂದು ಕೊನೆಗೂ ತಾತಯ್ಯನವರ ದರ್ಶನವನ್ನೂ ಮಾಡಿಕೊಡದೇ ಪ್ರೇಕ್ಷಕರಿಗೆ ಶಾಕ್ ಕೊಟ್ಟಿರುವ ರೀತಿ ನಿಜಕ್ಕೂ ಅನನ್ಯ. ನೋಡುಗರ ಆಲೋಚನೆಯ ದಿಕ್ಕನ್ನೇ ಬದಲಾಯಿಸಿ ಊಹಾತೀತ ನೆಲೆಯಲ್ಲಿ ನಡೆಯುವ ನಾಟಕ ಕೊನೆಗೂ ಅಸಂಗತವಾಗಿ ಕೊನೆಯಾಗಿ ನಾಟಕದ ನಂತರವೂ ತಾತಯ್ಯನ ಹುಡುಕಾಟ ಪ್ರೇಕ್ಷಕರ ತಲೆಯಲ್ಲಿ ನಡೆಯುವಂತೆ ಮಾಡುವಲ್ಲಿ ನಾಟಕ ಸಫಲವಾಗಿದೆ.
      ಪುರೋಹಿತಶಾಹಿಗಳ ಕುತಂತ್ರಗಳನ್ನು ನಾಟಕದಾದ್ಯಂತ ವಿಡಂಬಣೆ ಮಾಡುವುದು ಹಾಗೂ ಎಲ್ಲೂ ಇಲ್ಲದ, ಯಾರಿಗೂ ದಕ್ಕದ ತಾತಯ್ಯನನ್ನು ಹುಡುಕುತ್ತಲೇ ಆತನ ವಿವಿಧ ಆಯಾಮಗಳನ್ನು ಅನಾವರಣಗೊಳಿಸುತ್ತಾ ಸಾಗುವುದೇ ನಾಟಕದ ಆಶಯವಾಗಿದೆ. ಆಶಯವನ್ನು ರಂಗದಂಗಳದಲ್ಲಿ ದೃಶ್ಯಗಳ ಮೂಲಕ ಕಟ್ಟಿಕೊಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.
        ಆದಿ ಅಂತ್ಯಗಳಿಲ್ಲದ ವಿಚಿತ್ರ ನಾಟಕವನ್ನು ವಿಶಿಷ್ಟವಾಗಿ ಕಟ್ಟಿಕೊಡುವಲ್ಲಿ ನಿರ್ದೇಶಕರ ಪರಿಶ್ರಮ ನಾಟಕದಾದ್ಯಂತ ಗೋಚರವಾಗುತ್ತದೆ. ಜಿಲ್ಲಾ ಕೇಂದ್ರಗಳ ರಂಗತಂಡಗಳೂ ಸಹ ಬೆಂಗಳೂರಿನ ಕ್ರಿಯಾಶೀಲ ತಂಡಗಳಿಗಿಂತ ಯಾವುದರಲ್ಲೂ ಕಡಿಮೆಯಿಲ್ಲಾ ಎನ್ನುವ ರೀತಿಯಲ್ಲಿ ನಾಟಕ ಮೂಡಿಬಂದು ಬೆಂಗಳೂರಿನ ಪ್ರೇಕ್ಷಕರನ್ನು ವಿಸ್ಮಯಗೊಳಿಸಿತು. ಡೊಳ್ಳುಕುಣಿತ, ಯಕ್ಷಗಾನ.... ಮುಂತಾದ ಜನಪದ ಕಲೆಗಳ ಪ್ರದರ್ಶನ ಹಾಗೂ ಆಯಾ ವಾದ್ಯ ಪರಿಕರಗಳಿಂದಲೇ ಬ್ರಹ್ಮರಥವನ್ನು ಸೃಷ್ಟಿಸಿದ್ದು  ಅತ್ಯಂತ ಕ್ರಿಯಾಶೀಲವಾಗಿದೆ. ಮೂಲಕ ಶ್ರಮಸಂಸ್ಕೃತಿಯ ಬುನಾದಿಯ ಮೇಲೆ ವೈದಿಕ ಸಂಸ್ಕೃತಿ ಕಟ್ಟಲಾಗಿದೆ ಎಂಬುದನ್ನು ಸಾಂಕೇತಿಕವಾಗಿ ತೋರಿಸಿರುವ ನಾಟಕದ ಆರಂಭದ ದೃಶ್ಯವೇ ಅದ್ಬುತ ದೃಶ್ಯವೈಭವವನ್ನು ಸೃಷ್ಟಿಸಿತು.    ಹಿನ್ನೆಲೆಯಲ್ಲಿ  ಸ್ಥಿರವಾದ ವೃತ್ತಾಕಾರದ ಕಲಾಕೃತಿಯನ್ನು ಚಿಕ್ಕಪುಟ್ಟ ಮಾರ್ಪಾಡು ಗಳೊಂದಿಗೆ ನಾಟಕದ ಎಲ್ಲಾ ದೃಶ್ಯಗಳಿಗೂ ಹೊಂದಾಣಿಕೆಯಾಗುವಂತೆ ವಿನ್ಯಾಸ ಮಾಡಿರುವುದು ಅದ್ಬುತ ಪರಿಕಲ್ಪನೆ. ರಂಗ ವಿನ್ಯಾಸ, ರಂಗ ಪರಿಕರಗಳ ಸೃಷ್ಟಿ ಮತ್ತು ಬಳಕೆ ಇಡೀ ನಾಟಕವನ್ನು ಶ್ರೀಮಂತಗೊಳಿಸುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿದವು. ಪ್ರತಿ ಪಾತ್ರ, ಸನ್ನಿವೇಶಗಳಿಗೂ ಸಮರ್ಥವಾಗಿ ಸ್ಪಂದಿಸಿದ ಬೆಳಕು ನಾಟಕಕ್ಕೆ ಒಂದು ರೀತಿಯ ಮಾಂತ್ರಿಕ ಸಮ್ಮೋಹಕತೆಯನ್ನು ರೂಪಿಸಿತ್ತು. ಹಾಡು ಮತ್ತು ಸಂಗೀತ ನಾಟಕದ ಜೀವವೇ ಆಗಿದ್ದು ಕರಾರುವಕ್ಕಾಗಿ ಸಿಂಕ್ ಆಗಿ ನೋಡುಗರನ್ನು ಅಲ್ಲಾಡದಂತೆ ಹಿಡಿದು ಕೂಡಿಸಿದವು

        ಬಹುತೇಕ ವಿದ್ಯಾರ್ಥಿಗಳನ್ನೇ ಹೊಂದಿದ ನಟವರ್ಗ ಪ್ರತಿ ಪಾತ್ರಗಳನ್ನು ನಿರ್ವಹಿಸಿದ ರೀತಿ ಮೋಹಕ. ಗುಂಪಿನ ನಡುವೆಯೇ ಹಲವು ಬಾರಿ ಪ್ರಮುಖ ಪಾತ್ರವೊಂದು ಎದ್ದು ನಿಂತು ನೋಡುಗರಿಗೆ ಶಾಕ್ ಕೊಟ್ಟರೆ, ಕೆಲವೊಮ್ಮೆ ಪ್ರೇಕ್ಷಾಗ್ರಹದಿಂದಲೇ ಬರುವ ಪಾತ್ರಗಳು ಅಚ್ಚರಿಯನ್ನುಂಟುಮಾಡುತ್ತವೆ. ಪ್ರತಿಯೊಬ್ಬರೂ ತಮ್ಮ ತಮ್ಮ ಪಾತ್ರಗಳಿಗೆ ಜೀವತುಂಬಿ ಅಭಿನಯಿಸಿದ್ದು ಹಾಗೂ ಯುವಜನರೊಳಗಿರುವ ಅಭಿನಯ ಪ್ರತಿಭೆಯನ್ನು ಹೊರತಂದು ಪ್ರದರ್ಶನಯೋಗ್ಯಗೊಳಿಸಿದ ನಿರ್ದೇಶಕರ ಪರಿಶ್ರಮ ಅಭಿನಂದನಾರ್ಹ. ಬ್ರೆಕ್ಟನ ಡಿಸ್ಟನ್ಸ ಥಿಯರಿಯನ್ನು ಇಲ್ಲಿ ಸೊಗಸಾಗಿ ನಿರೂಪಿಸಲಾಗಿದೆ. ವಸ್ತ್ರ ವಿನ್ಯಾಸ ಪ್ರತಿ ಪಾತ್ರಕ್ಕೂ ಸೂಕ್ತವೆನಿಸಿದರೂ ಗುಂಪುಗಳಿಗೆ ಸಮವಸ್ತ್ರ ರೀತಿಯ ಒಂದೇ ಮಾದರಿ ಬಟ್ಟೆಗಳನ್ನು ತೊಡಿಸಿದ್ದು ಸೂಕ್ತವೆನ್ನಿಸಲಿಲ್ಲ.
          ಊರ ಗೌಡನಿಗೆ ಜನರ ಗುಂಪು ಉಗಿಯುವುದು, ದೂರ ರಾಜ್ಯದ ಗೂಡಚಾರರು ಸೈನಿಕರಂತೆ ಆಜ್ಞೆ ಮಾಡುವುದು, ಪುಂಕಾನುಪುಂಕವಾಗಿ ಇಂಗ್ಲೀಷ್ ಪದಗಳನ್ನು ಉದ್ದೇಶಪೂರ್ವಕವಾಗಿಯೇ ಬಳಸಿರುವುದು, ಗುಂಪುಗಳಿಗೆ ಒಂದೇ ರೀತಿಯ ಉಡುಪು ಹಾಕಿಸಿರುವುದು, ...ಜಾತಿ ಗಿಡ ಬೆಳದ್ರೂ.. ಅನ್ನೋ ಸಂಭಾಷಣೆ ಬೇರೆ ಬೇರೆ ಸಂದರ್ಭದಲ್ಲಿ ಪುನರಾವರ್ತನೆ ಯಾಗಿರುವುದು... ನಾಟಕದ ನಕಾರಾತ್ಮಕ ಅಂಶಗಳಾಗಿವೆ.   
   ಕಲಾತ್ಮಕ ನಾಟಕದಲ್ಲಿ ಬಳಕೆಯಾದ ಕಾವ್ಯಾತ್ಮಕ ಸಂಭಾಷಣೆಗಳು ಪ್ರೇಕ್ಷಕರಲ್ಲಿ ಆಗಾಗ ಸಂಚಲನವನ್ನುಂಟುಮಾಡುವಂತಿವೆ. ಸತ್ಯಕ್ಕೆ ಸಾಕ್ಷಿಗಳಿರೊಲ್ಲ, ಸುಳ್ಳಿಗೆ ಸಾಕ್ಷಿಗಳು ಬೇಕು,.... ನಡಿಯೋ ದಾರಿಗಳೆಲ್ಲಾ ಸರಿದಾರಿನೇ ಆದರೆ ನಡಿಗೆ ಸರಿಯಾಗಿರಬೇಕಷ್ಟೇ.... ಹೀಗೆ ಹಲವಾರು ಮಾರ್ಮಿಕ ಮಾತುಗಳಿಗೆ ನೋಡುಗರಿಂದ ಚಪ್ಪಾಳೆಯ ಸ್ಪಂದನ, ಪ್ರೇಕ್ಷಾಗ್ರಹದ ತುಂಬಾ ರೋಮಾಂಚನ ಸಿಂಚನ. ಕವಿಗಳೆಲ್ಲಾ ನಾಟಕಕಾರರಾಗೋಕೆ ಸಾಧ್ಯವಿಲ್ಲ. ಆದರೆ ನಾಟಕಕಾರ ಕವಿಯೂ ಆಗಿದ್ದರೆ ಅದೆಷ್ಟು ಚೆಂದ ಎನ್ನುವುದಕ್ಕೆ ಸಾಕ್ಷಿ ನಾಟಕ.
ಡಾ.ಕೆವೈಎನ್
      ಕೈವಾರ ತಾತಯ್ಯನವರ ಕುರಿತ ನಿಜ ವಾಸ್ತವಗಳಿಗೆ ನಾಟಕವನ್ನು ಹೋಲಿಸಿ ನೋಡುವುದನ್ನು ಬಿಟ್ಟು, ಸಾಂಪ್ರದಾಯಿಕ ತಾತ್ವಿಕ ಆಲೋಚನಾ ಕ್ರಮವನ್ನು ಬದಿಗಿಟ್ಟು. ನಾಟಕದಲ್ಲಿ ಕಥಾನಕತೆಯನ್ನು ಹುಡುಕುವುದನ್ನು ದೂರವಿಟ್ಟು, ಯಾವುದೇ ಪೂರ್ವಗ್ರಹಗಳಿಲ್ಲದೇ ನಾಟಕವನ್ನು ಕೇವಲ ನಾಟಕವನ್ನಾಗಿ ನೋಡಿದರೆ ನಾರಾಯಣಸ್ವಾಮಿಯವರ ಕೈವಾರ ನಾರೇಯಣ ಎಂಬ ಆದಿ ಅಂತ್ಯವಿಲ್ಲದ ನಾಟಕ ಅನಂತ ಖುಷಿಯನ್ನು ಕೊಡುವುದರಲ್ಲಿ ಸಂದೇಹವಿಲ್ಲ. ಡಾ.ಕೆವೈಎನ್ ರವರ ನಾಟಕಗಳಲ್ಲಿ ಲಾಜಿಕ್ ಗಳನ್ನು ಹುಡುಕಿ ಏನೂ ಪ್ರಯೋಜನವಿಲ್ಲ, ಹುಡುಕಿದರೂ ಸಿಗುವುದಿಲ್ಲ. ಆದ್ದರಿಂದ ಅವರ ನಾಟಕಗಳು ಸೃಷ್ಟಿಸುವ ಮ್ಯಾಜಿಕ್ ಅಂದ್ರೆ ಮಾಂತ್ರಿಕತೆಯನ್ನು ಮಾತ್ರ ಅನುಭವಿಸಿ ಧನ್ಯತೆಯನ್ನು ಪಡೆಯುವುದರಲ್ಲೇ ಆನಂದವಿದೆ. ಅಂತಹ ಆನಂದವನ್ನು ಅನನ್ಯವಾಗಿ ಕೊಡುವಲ್ಲಿ ಕೈವಾರ ನಾರೇಯಣ ನಾಟಕ ಯಶಸ್ವಿಯಾಗಿದೆ. ಶಿವಮೊಗ್ಗ ತಂಡದ ಶ್ರಮ ಸಾರ್ಥಕವಾಗಿದೆ.

                                                                                       - ಶಶಿಕಾಂತ ಯಡಹಳ್ಳಿ
           
           
             












           


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ