ಶನಿವಾರ, ನವೆಂಬರ್ 2, 2013

ಪ್ರಸನ್ನರವರ ಎರಡು ನಾಟಕೇತರ ಪುಸ್ತಕಗಳು :



ಪ್ರಸನ್ನರವರ ಎರಡು ನಾಟಕೇತರ ಪುಸ್ತಕಗಳು :


          ರಂಗನಿರ್ದೇಶಕ ಪ್ರಸನ್ನನವರು ಮತ್ತೆರಡು ಪುಸ್ತಕಗಳನ್ನು ಬರೆದಿದ್ದಾರೆ. ರಂಗಭೂಮಿಯ ಕುರಿತು ಕೃತಿ ಅಥವಾ ಹೊಸ ನಾಟಕವನ್ನು ಬರೆದಿದ್ದಾರೆಂದು ನಿಮ್ಮ ಊಹೆ ಆಗಿದ್ದರೆ ಅದು ತಪ್ಪು. ಒಂದು ಕೈಮಗ್ಗ ನೇಯ್ಗೆಯ ಕಥೆ  ಇನ್ನೊಂದು ದೇಸಿ ಆಹಾರ ಪದ್ಧತಿ ಇವು ಅವರ ಹೊಸ ಎರಡು ಪುಸ್ತಕಗಳು. 2013, ಅಕ್ಟೋಬರ 26 ರಂದು ನಾಟಕ ಅಕಾಡೆಮಿಯ ಚಾವಡಿಯಲ್ಲಿ ಎರಡೂ ಪುಸ್ತಕಗಳ ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮವನ್ನು ದೇಸಿ ಹಾಗೂ ಲೋಕಾಯಣ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ್ದವು

          ಉತ್ಪಾದನೆ, ವ್ಯಾಪಾರ, ಮಾರುಕಟ್ಟೆ ಅನ್ನೋದಿದೆಯಲ್ಲಾ ಅದು ಕಲಾವಿದನನ್ನ ಹಾಗೂ ಆತನೊಳಗಿನ ಕ್ರಿಯಾಶೀಲತೆಯನ್ನು ಹತ್ತಿಕ್ಕುವಂತಹುದು. ಉದ್ಯಮಿಗಳು ಕಲಾಪೋಷಕರಾಗಬಹುದೇ ಹೊರತು ಕಲಾವಿದರಾಗಿರೋದು ಅಪರೂಪ. ಆದರೆ ಪ್ರಸನ್ನನಂತಹ ರಂಗಕಲಾವಿದರು ಉದ್ಯಮಿಯಾಗಿ ಬದಲಾಗಿದ್ದು ರಂಗಭೂಮಿಗಾದ ನಷ್ಟ ಎನ್ನುವುದಂತೂ ಸುಳ್ಳಲ್ಲ.
          ಸ್ಥಾನಸ್ಲಾವಸ್ಕಿಯಂತಹ ಮಹಾನ್ ಕಲಾವಿದ ತನ್ನ ತಂದೆಯ ಅಪಾರವಾದ ಸಿರವಂತ ಉದ್ಯಮವನ್ನು ದಿಕ್ಕರಿಸಿ ಕಲೆಗಾಗಿ ತನ್ನ ಬದುಕನ್ನು  ಮುಡುಪಿಟ್ಟು ಶತಶತಮಾನಗಳ ಕಾಲ ಕಲಾರಂಗದಲ್ಲಿ ತನ್ನ  ಹೆಸರನ್ನು ಅಜರಾಮರಗೊಳಿಸಿದ. ಸಿರಿವಂತ ನ್ಯಾಯಾಧೀಶರ ಮಗನಾಗಿ ಭೂಗರ್ಭ ತಜ್ಞನಾಗಿ ಅಷ್ಟೈಶ್ವರ್ಯಗಳನ್ನು ಅನುಭವಿಸುತ್ತಾ ಇರಬಹುದಾಗಿದ್ದ ಕನ್ನಡದ ಕೈಲಾಸಂ ಅಪರೂಪದ ನಾಟಕಕಾರರಾಗಿ ಕನ್ನಡ ರಂಗಭೂಮಿ ಇರುವಷ್ಟೂ ದಿನ ತಮ್ಮ ಹೆಚ್ಚೆ ಗುರುತುಗಳನ್ನು ಮೂಡಿಸಿ ಹೋದರು. ಆದರೆ ಯಾವುದೇ ಉದ್ಯಮಿಯಾದವರು ಅವರೆಷ್ಟೇ ಪ್ರಮುಖರಾದರೂ ಇತಿಹಾಸದಲ್ಲಿ ಶತಮಾನಗಳ ತಮ್ಮ ಹೆಸರನ್ನು ಅಮರವಾಗಿಸಿದ್ದು ಅಪರೂಪ. ಕಲೆ ಎನ್ನುವುದು ಎಲ್ಲರಿಗೂ ಒಲಿಯುವಂತಹುದಲ್ಲ, ಕೆಲವರಿಗೆ ಮಾತ್ರ ಒಲಿದು ಬರುತ್ತದೆ. ಅಂತಹ ಅಪರೂಪದ ರಂಗನಿರ್ದೇಶಕರಲ್ಲಿ ಪ್ರಸನ್ನ ಪ್ರಮುಖರಾದವರು.

          ಮಹಿಮಾಪುರ, ಕೊಂದವರ್ಯಾರು... ಮುಂತಾದ ಅಪರೂಪದ ನಾಟಕಗಳನ್ನು ಬರೆದು ನಿರ್ದೇಶಿಸಿದರು. ಸೀಮಾಪಾರ್, ದಂಗೆಯ ಮುಂಚಿನ ದಿನಗಳು, ಒಂದು ಲೋಕದ ಕಥೆ, ಹದ್ದು ಮೀರಿದ ಹಾದಿ, ಜಂಗಮದ ಬದುಕು... ಮುಂತಾದ ಮಹತ್ತರ ನಾಟಕಗಳನ್ನು ಯಾವುದೇ ಆಡಂಬರಗಳಿಲ್ಲದೇ ಕಟ್ಟಿಕೊಟ್ಟವರು. ರಂಗಾಯಣದ ನಿರ್ದೇಶಕರಾಗಿ ಪ್ರಸನ್ನ ರಂಗಾಯಣವನ್ನು ಕಟ್ಟಿದವರು. ಹೆಗ್ಗೋಡಿನಂತಹ ಪುಟ್ಟ ಹಳ್ಳಿಯಲ್ಲಿದ್ದುಕೊಂಡೇ ದೇಶದಾದ್ಯಂತ ತಮ್ಮ ರಂಗಕ್ರಿಯೆಗಳಿಂದ ಹೆಸರುವಾಸಿಯಾದವರು. ಇನ್ನೂ ಹಲವಾರು ನಾಟಕಗಳನ್ನು  ಕಟ್ಟುವ ತಾಕತ್ತು ಹಾಗೂ ವಿದ್ವತ್ತು ಎರಡೂ ಅವರಲ್ಲಿದೆ. ಆದರೆ ಯಾವಾಗ ದೇಸಿ ಅನ್ನೋದು ಅವರ ತಲೆಗೆ ಹೊಕ್ಕಿತೋ ಅವತ್ತಿನಿಂದ ರಂಗಭೂಮಿಯ ಕಡೆಗೆ ಒಲವು ಕಡಿಮೆಯಾಯಿತು.
          ಪ್ರಸನ್ನನವರು ಹೆಗ್ಗೋಡಿನಲ್ಲಿ ಚರಕ  ಎನ್ನುವ ಸಂಸ್ಥೆಯನ್ನು ಹುಟ್ಟುಹಾಕಿ ಖಾದಿ ಬಟ್ಟೆಗಳನ್ನು , ಜುಬ್ಬಾ ಪೈಜಾಮ ಮುಂತಾದವುಗಳನ್ನು ಉತ್ಪಾದಿಸಲು ಆರಂಭಿಸಿದರು. ಗಾಂಧಿಗಿರಿಯನ್ನು ತಮ್ಮ ಆಲೋಚನಾ ಕ್ರಮದಲ್ಲಿ, ಬದುಕಿನಲ್ಲಿ ರೂಢಿಸಿಕೊಳ್ಳತೊಡಗಿದರು. ಯಂತ್ರಗಳನ್ನು ಕಳಚೋಣ ಬನ್ನಿ ಎನ್ನುವ ಆಂದೋಲನವನ್ನೇ ಶುರುಮಾಡಿದರು. ಹಲವಾರು ಗ್ರಾಮೀಣ ಮಹಿಳೆಯರಿಗೆ ಖಾಯಂ ಕೆಲಸವನ್ನು ಒದಗಿಸಿದರು. ಉತ್ಪಾದನೆ ಮಾಡಿದ್ದನ್ನು ಮಾರಾಟ ಮಾಡಲು ಬೆಂಗಳೂರು, ಧಾರವಾಡಗಳಲ್ಲಿ ದೇಸಿ ಮಳಿಗೆಗಳನ್ನು ತೆರೆದರು. ದೇಸಿತನವನ್ನು ತಮ್ಮ ಬರಹ ಬದುಕಿನಲ್ಲಿ ಅಳವಡಿಸಿಕೊಂಡರು. ಇದೆಲ್ಲಾ ನಿಜಕ್ಕೂ ಸಾರ್ಥಕವಾದ ಕೆಲಸ. ಆದರ್ಶದ ಕಾರ್ಯ ಎಂಬುದರಲ್ಲಿ ಯಾವುದೇ ಅನುಮಾನವೇ ಇಲ್ಲ. ಜಾಗತೀಕರಣದ ಸಂತೆಯಲ್ಲಿ ಸಂತನಂತೆ ಬದುಕು ಕಟ್ಟಿಕೊಳ್ಳತೊಡಗಿದರು. ಪ್ರವಾಹದ ಎದುರಾಗಿ ಈಸತೊಡಗಿದರು.
          ಆದರೆ.... ಎಲ್ಲಾ ದೇಸಿತನದ ದೇಸಗತಿಯಲ್ಲಿ ಪ್ರಸನ್ನ ರಂಗಭೂಮಿಯಿಂದ ಒಂದು ಅಂತರವನ್ನು ಕಾಪಾಡಿಕೊಂಡರು. ಹಲವಾರು ವರ್ಷಗಳಿಂದ ನಾಟಕ ನಿರ್ದೇಶಿಸುವುದನ್ನೇ ಬಿಟ್ಟರು. ಮೂರು ತಿಂಗಳ ಹಿಂದೆ ದು.ಸರಸ್ವತಿಯವರು ಪ್ರಸನ್ನರವರನ್ನು ಕಾಡಿ ಬೇಡಿ ಮೆಕ್ಕಾ ದಾರಿ ನಾಟಕವನ್ನು ನಿರ್ದೇಶಿಸಲು ದುಂಬಾಲು ಬಿದ್ದರು. ಅದು ಅಷ್ಟು ಸುಲಭವಾಗಿರಲಿಲ್ಲ. ಪ್ರಸನ್ನರವರು ಹೆಗ್ಗೊಡಿನಲ್ಲಿದ್ದರೆ ಹೆಗ್ಗೊಡಿಗೆ, ಬೆಂಗಳೂರಿನಲ್ಲಿದ್ದರೆ ಅಲ್ಲಿಗೆ, ಶಿಮ್ಲಾದಲ್ಲಿದ್ದರೆ ಶಿಮ್ಲಾಕ್ಕೆ ತಮ್ಮ ಇನ್ನಿಬ್ಬರು ಕಲಾವಿದರನ್ನು  ಕರೆದುಕೊಂಡು ಓಡಾಡಿದ ಸರಸ್ವತಿಯವರು ಕೊನೆಗೂ ಪ್ರಸನ್ನನವರ ಬಿಡುವಿನ ಸಮಯದ ಸದುಪಯೋಗ ಪಡೆದುಕೊಂಡು ಮೆಕ್ಕಾ ದಾರಿಗೆ ಒಂದು ದಿಕ್ಕು ದೆಸೆ ತೋರಿಸಿಕೊಂಡರು. ಅಂದರೆ ನಾಟಕವನ್ನೇ ಉಸಿರಾಗಿಸಿಕೊಂಡ ಎನ್ಎಸ್ಡಿ ಪದವೀದರ ಪ್ರತಿಭಾನ್ವಿತ ನಿರ್ದೇಶಕರಿಗೆ ಈಗ ಮೂರು ಪಾತ್ರಗಳ ಒಂದು ನಾಟಕವನ್ನು ಒಂದು ಕಡೆ ನೆಲೆನಿಂತು ಮಾಡಿಸಲೂ ಅಸಾಧ್ಯವೆಂದಮೇಲೆ   ಉದ್ಯಮದ ಗಮ್ಮತ್ತು ಎಷ್ಟಿರಬಹುದು.
          ಆಂತರಿಕ ತುಡಿತದಿಂದ ರಂಗಭೂಮಿಗೆ ಬಂದ ಅದೆಷ್ಟೋ ಜನ ಮುಂದೆ ಯಾವುಯಾವುದೋ ಉದ್ಯೋಗವನ್ನೋ ಉದ್ಯಮವನ್ನೋ ಅರಸಿ ಹೋಗುತ್ತಾರೆ. ಇನ್ನು ಕೆಲವರು ಟೀವಿ ಎಂಬ ಮಾಯಾ ಪೆಟ್ಟಿಗೆಯೊಳಗೆ ಐಕ್ಯರಾಗುತ್ತಾರೆ. ಮತ್ತೂ ಕೆಲವರಿದ್ದಾರೆ ಮಹಾಮಹಿಮರು ರಂಗೋಧ್ಯಮವನ್ನೇ ವೃತ್ತಿ ಮಾಡಿಕೊಂಡು ರಂಗಾವಲಂಬಿಗಳಾಗಿ ಸರಕಾರಿ ಇಲಾಖೆಗಳ ಖಜಾನೆಗೆ ಕನ್ನ ಹಾಕಿ ಹಣ ಮಾಡುತ್ತಿದ್ದಾರೆ. ಇದೇ ಎನ್ಎಸ್ಡಿ ಇಂದ ಬಂದ ಕೆಲವು ಬ್ರಹಸ್ಪತಿಗಳು ಸುಳ್ಳು ಲೆಕ್ಕ ತೋರಿಸಿ ಕೇಂದ್ರ ಸರಕಾರ ಹಾಗೂ ರಾಜ್ಯಸರಕಾರಗಳಿಂದ ಲಕ್ಷಾಂತರ ಹಣವನ್ನು ಲಪಟಾಯಿಸುತ್ತಿದ್ದಾರೆ.  ಇದಕ್ಕೆ ಬೇಕಾದಷ್ಟು ಉದಾಹರಣೆಗಳಿವೆ. ಸಂಬಂಧಿಸಿದ ಇಲಾಖೆಯ ವೆಬ್ಸೈಟಿಗೆ ಹೋದರೆ ಇಂತವರ ಜಾತಕವೇ ತೆರೆದುಕೊಳ್ಳುತ್ತದೆ. ಹಣ ಮಾಡಲೇ ಬೇಕೆಂದಿದ್ದರೆ ರೀತಿ ಬೇಕಾದಷ್ಟು ಅವಕಾಶಗಳಿದ್ದವು. ಪ್ರಸನ್ನನವರು ತಮ್ಮ ಹೆಸರು ಮತ್ತು ಡೆಲ್ಲಿಯಲ್ಲಿದ್ದ ವರ್ಚಸ್ಸನ್ನು ಬಳಸಿದ್ದರೆ ಒಂದು ರೆಪರ್ಟರಿಯನ್ನೇ ಕಟ್ಟಿ ಕೋಟ್ಯಾಂತರ ಹಣ ಅನುದಾನವನ್ನು ಪಡೆದು ಸುಖವಾಗಿರಬಹುದಾಗಿತ್ತು.  (ರೆಪರ್ಟರಿಯನ್ನು ಕಟ್ಟಿದ್ದರಾದರೂ ಅದ್ಯಾಕೋ ಗಟ್ಟಿಯಾಗಿ ನಿಲ್ಲಲಿಲ್ಲ)

          ಆದರೆ ಅದೇನಾಯಿತೋ ಗೊತ್ತಿಲ್ಲ. ಕಮ್ಯೂನಿಸ್ಟ ಪಕ್ಷದ ಕಲಾವಿಭಾಗವಾದ ಸಮುದಾಯ ಕಟ್ಟಿ ಬೆಳೆಸಿದ ಪ್ರಸನ್ನ ಇದ್ದಕ್ಕಿದ್ದಂತೆ ಗಾಂಧಿವಾದಿಯಾಗತೊಡಗಿದರು. ಗಾಂಧಿಯ ಖಾದಿಯತ್ತ ಆಕರ್ಷಿತರಾದರು. ದೇಸಿತನವನ್ನು ರೂಢಿಸಿಕೊಂಡರು, ಗಾಂಧೀಜಿಯ ಗ್ರಾಮಸ್ವರಾಜ್ಯ ಹಾಗೂ ಯಂತ್ರಗಳನ್ನು ಕಳಚುವ ಪರಿಕಲ್ಪನೆಗಳನ್ನು ಆಚರಣೆಗೆ ತಂದರು. ಒಂದು ರೀತಿಯಲ್ಲಿ ಹೆಗ್ಗೋಡಿನ ಗಾಂಧಿಯೇ ಆಗಿಬಿಟ್ಟರು. ಉದ್ಯಮ ದೇಸಿಯದಾಗಿರಲಿ ಪರದೇಸಿಯದಾಗಿರಲಿ ಅದು ಸಾಕಷ್ಟು ಸಮಯ ಮತ್ತು ಪರಿಶ್ರಮವನ್ನು ಬೇಡುತ್ತದೆ. ಎಲ್ಲಿ ಹಣ ಹೂಡಲಾಗಿದೆಯೋ, ಎಲ್ಲಿ ಕೆಲಸಗಾರರನ್ನು  ನಿಯಮಿಸಿಕೊಳ್ಳಲಾಗಿದೆಯೋ ಅಲ್ಲಿ ಹೆಚ್ಚು ನಿಗಾ ಇಡಬೇಕಾಗುತ್ತದೆ. ಸ್ವಲ್ಪ ನಿರ್ಲಕ್ಷ ಮಾಡಿದರೂ ಬಿಜಿನೆಸ್ ಗ್ಯಾರಂಟಿ ಲಾಸ್. ಹೀಗಾಗಿ ಪ್ರಸನ್ನನವರು ದೇಸಿ ಉತ್ಪಾದನೆ ಮತ್ತು ಮಾರಾಟದ ಸುಳಿಯಲ್ಲಿ ಸಿಕ್ಕು ಮತ್ತೆ ರಂಗಭೂಮಿಗೆ ಮರಳಿ ಬಾರದಷ್ಟು ಉದ್ಯಮದಲ್ಲಿ ಮುಳುಗಿದ್ದಾರೆ. ಅವರ ಉದ್ಯಮದಲ್ಲಾದ ಲಾಭ ನಾಟಕರಂಗದ ನಷ್ಟವಾಗಿದೆ.
          ರಂಗಭೂಮಿಯಲ್ಲಿದ್ದಾಗ ಹಲವು ನಾಟಕಗಳನ್ನು  ಬರೆದು ಪ್ರಕಟಿಸಿದ್ದ ಪ್ರಸನ್ನರವರು ನಟನೆಯ ಪಾಠಗಳು ಎನ್ನುವ ನಟರಿಗೆ ಅತ್ಯಗತ್ಯವಾದ ಪುಸ್ತಕವನ್ನು ಕನ್ನಡ ಹಾಗೂ ಇಂಗ್ಲೀಷ್ನಲ್ಲಿ ಬರೆದು ಪ್ರಕಟಿಸಿ ರಂಗಭೂಮಿಗೆ ಅತ್ಯತ್ತಮವಾದ ಕೊಡುಗೆಯನ್ನು ಕೊಟ್ಟಿದ್ದರು. ಆದರೆ ಈಗ ದೇಸಿ ಉದ್ಯಮದಲ್ಲಿರುವುದರಿಂದ ಅದಕ್ಕೆ ಸಂಬಂಧಿಸಿದ ಪುಸ್ತಕಗಳನ್ನೇ ಬರೆದು ಪ್ರಕಟಿಸುತ್ತಿದ್ದಾರೆ. ಅದರ ಭಾಗವಾಗಿಯೇ ಈಗ ಹೊರಬಂದದ್ದು ಕೈಮಗ್ಗ ನೇಯ್ಗೆಯ ಕಥೆ ಮತ್ತು ದೇಸಿ ಆಹಾರ ಪದ್ಧತಿ. ಆಯಾ ಕ್ಷೇತ್ರಗಳಿಗೆ ಇವು ಉತ್ತಮ ಕೃತಿಗಳಾಗಿರಬಹುದು. ಆದರೆ ರಂಗಭೂಮಿಗೆ ಇವುಗಳ ಅವಶ್ಯಕತೆ ಅಷ್ಟೀನೂ ಇಲ್ಲ. ಪುಸ್ತಕ ಓದಿ ಯಾರೂ ತಮ್ಮ ಆಹಾರ ಪದ್ದತಿಯನ್ನು ಬದಲಾಯಿಸಿಕೊಳ್ಳುವ ಸ್ಥಿತಿಯಲ್ಲಿ ಬಹುತೇಕ ಜನತೆ ಈಗ ಇಲ್ಲ. ಸರಿ ಬರೆದಿದ್ದಾರೆಂದ ಮೇಲೆ ಒಳ್ಳೆಯದು ಎನ್ನಬಹುದು.
          ಆದರೆ ಇವೆರಡೂ ಪುಸ್ತಕಗಳು ರಂಗಭೂಮಿಗೆ ಹೊರತಾದಂತಹವು. ಆದರೂ ಇವುಗಳ ಬಿಡುಗಡೆಯನ್ನು ನಾಟಕ ಅಕಾಡೆಮಿಯ ಚಾವಡಿಯಲ್ಲಿ ಮಾಡುವ ಅಗತ್ಯವೇನಿತ್ತು? ರಂಗಕರ್ಮಿಗಳನ್ನು ಕರೆತಂದು ಸಂವಾದ ಮಾಡುವ ಉದ್ದೇಶವಾದರೂ ಏನು? ರಂಗಭೂಮಿಗೂ ರಂಗಕರ್ಮಿಗಳಿಗೂ ಹಾಗೂ ರಂಗೇತರ ಪುಸ್ತಕಗಳಿಗೂ ಎತ್ತನಿಂದೆತ್ತ ಸಂಬಂಧ?. ಯಾಕೆಂದರೆ ಪ್ರಸನ್ನನವರಿಗೆ ಈಗಲೂ ಹೆಚ್ಚು ಸಂಪರ್ಕವಿರುವುದು ರಂಗಭೂಮಿಯೊಂದೇ. ಪ್ರಸನ್ನ ಬೆರಳಲ್ಲಿ ತೋರಿಸಿದ್ದನ್ನು ತಲೆ ಮೇಲೆ ಹೊತ್ತುಕೊಂಡು ಮಾಡುವಂತಹ ಅವರ ಅಭಿಮಾನಿಗಳಿದ್ದಾರೆ. ಅಥವಾ ಪ್ರಸನ್ನನವರನ್ನು  ಮೆಚ್ಚಿಸಲೆಂದೇ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸುವವರಿದ್ದಾರೆ. ಅದರಂತೆ ದೇಸಿ ಸಂಸ್ಥೆಯ ಪ್ರಕಟನೆಗಳ ಬಿಡುಗಡೆಯ ನೊಗ ಹೊತ್ತವರು ಲೋಕಾಯನ ಎನ್ನುವ ಈಗಷ್ಟೇ ಹುಟ್ಟಿ ಕಣ್ಣು ಬಿಡುತ್ತಿರುವ ಸಂಸ್ಥೆ. ಆದರೆ ಇದರ ರೂವಾರಿಗಳಾದ ಶಶಿಧರ ಭಾರಿಘಾಟ ಮತ್ತು ಉಮಾಶಂಕರ ಇವರು ರಂಗಭೂಮಿಯ ಹಿರಿಯ ತಲೆಗಳು. ಇವರು ಪ್ರಸನ್ನನವರ ಮೇಲಿನ ಅಭಿಮಾನದಿಂದ ಪುಸ್ತಕ ಬಿಡುಗಡೆ ಮತ್ತು ಸಂವಾದವನ್ನು ಏರ್ಪಡಿಸಿದ್ದಾರೆ.
          ನನಗೆ ಗೊತ್ತಿರುವಂತೆ ಇಲ್ಲಿವರೆಗೆ ಯಾರೂ ನಾಟಕ ಅಕಾಡೆಮಿಯ ಚಾವಡಿಯನ್ನು ರಂಗೇತರ ಚಟುವಟಿಕೆಗಳಿಗೆ ಬಳಸಿಲ್ಲ. ರವೀಂದ್ರ ಕಲಾಕ್ಷೇತ್ರ ಹಾಗೂ ನಯನದಲ್ಲಿ ಹಲವಾರು ರೀತಿಯ ಕಾರ್ಯಕ್ರಮಗಳಾಗುತ್ತವಾದರೂ ಕನ್ನಡ ರಂಗಭೂಮಿಗೆ ಇರೋದು ಒಂದೇ ಅಕಾಡೆಮಿ. ಅದು ರಂಗಭೂಮಿಗೆ ಮೀಸಲಾಗಿದೆ ಮತ್ತು ಇರಬೇಕು. ಆದರೆ ತಮ್ಮ ಪ್ರಭಾವವನ್ನು ಬಳಸಿದ ಲೋಕಾಯನದವರು ರಂಗಕರ್ಮಿಯ ರಂಗೇತರ ಕೆಲಸಕ್ಕೆ ಸಾತ್ ನೀಡಿದ್ದು ಬೇರೆಲ್ಲಾ ರೀತಿಯ ಕಾರ್ಯಕ್ರಮ ಆಯೋಜಕರಿಗೆ ಅಕಾಡೆಮಿಯ ಚಾವಡಿಯ ಬಾಗಿಲು ತೆರೆದಂತಾಯಿತು. ಕಪ್ಪಣ್ಣ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ರಂಗಕಾರ್ಯಕ್ರಮಗಳಿಗೆ ಪುಕ್ಕಟೆಯಾಗಿ ಚಾವಡಿಯನ್ನು ಕೊಡುವ ವ್ಯವಸ್ಥೆ ಮಾಡಿದ್ದರು. ನಂತರ ಬಂದ ರಾಜಾರಾಂ ಚಾವಡಿ ಬಳಸಲು ಒಂದು ದಿನಕ್ಕೆ ಒಂದು ಸಾವಿರ ರೂಪಾಯಿ ನಿಗಧಿ ಪಡಿಸಿದರು. ಈಗಲೂ ಅದೇ ವ್ಯವಸ್ಥೆ ಮುಂದುವರೆದಿದೆ. ಕೇವಲ ಒಂದು ಸಾವಿರ ಕಟ್ಟಿ ಇನ್ನು ಮುಂದೆ ಯಾರು ಬೇಕಾದರೂ ಯಾವ ಕಾರ್ಯಕ್ರಮಕ್ಕೆ ಬೇಕಾದರೂ ಅಕಾಡೆಮಿಯ ಪ್ರಾಂಗಣವನ್ನು ಬಳಸಿಕೊಳ್ಳಬಹುದೇನೋ?
          ಒಟ್ಟಾರೆಯಾಗಿ ನಾಟಕ ಅಕಾಡೆಮಿ ಮತ್ತು ಅದರ ಉಪಯೋಗಕ್ಕಿರುವ ಚಾವಡಿ ಎನ್ನುವ ಸಭಾಂಗಣ ರಂಗಕ್ರಿಯೆಗಳಿಗೇ ಮುಡಿಪಾಗಿರಬೇಕು ಎನ್ನುವುದೇ ಲೇಖನದ ಆಶಯ. ರಂಗೇತರ ಕೆಲಸಗಳಿಗೆ ರಂಗಭೂಮಿಯನ್ನು ಬಳಸುವುದು. ಹಾಗೂ ರಂಗಕರ್ಮಿ ಕಲಾವಿದರನ್ನು ಕರೆತಂದು ಸಂಬಂಧಿಸದ ವಿಷಯಗಳ ಬಗ್ಗೆ ಸಂವಾದ ಮಾಡುವುದು ನಿಜಕ್ಕೂ ಪ್ರಶ್ನಾರ್ಹ. ಮತ್ತೆ ಪ್ರಸನ್ನನವರು ತಮ್ಮ ಉದ್ಯಮದ ನಡುವೆ ಬಿಡುವು ಮಾಡಿಕೊಂಡು ನಾಟಕಗಳನ್ನು ನಿರ್ದೇಶಿಸಲಿ, ರಂಗಭೂಮಿಯನ್ನು ಕುರಿತು ಹಲವಾರು ಪುಸ್ತಕಗಳನ್ನು ಬರೆಯಲಿ  ಹಾಗೂ ಅವುಗಳನ್ನು ಅಕಾಡೆಮಿಯ ಚಾವಡಿಯಲ್ಲಿಯೇ ಬಿಡುಗಡೆ ಮಾಡಲಿ ಎನ್ನುವುದು ರಂಗಕರ್ಮಿಗಳ ಬಹುದಿನದ ಆಶಯವಾಗಿದೆ.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ