ನಾಟಕ ವಿಶ್ಲೇಷಣೆ
:
ಅದ್ಬುತ ದೃಶ್ಯವೈಭವ ಕಟ್ಟಿಕೊಡುವ “ಮಲೆಗಳಲಿ ಮದುಮಗಳು ’’ :
ಒಂದು ಸಾರ್ಥಕ ಪ್ರಯತ್ನ.
ಹ್ಯಾಟ್ಸ ಆಪ್ ಟು ಸಿ. ಬಸವಲಿಂಗಯ್ಯ. ಕನ್ನಡ ರಂಗಭೂಮಿಯಲ್ಲಿ ದಾಖಲೆಯೊಂದನ್ನ ಮಾಡಿ ತೊರಿಸಿದ್ದಾರೆ. ಕುವೆಂಪುರವರ “ಮಲೆಗಳಲಿ ಮದುಮಗಳು” ಎನ್ನುವ ಬ್ರಹತ್ ಕಾದಂಬರಿಯನ್ನು ದೃಶ್ಯಮಾಧ್ಯಮಕ್ಕಳವಡಿಸಿ ೮ ಗಂಟೆಗಳ ಸುದೀರ್ಘ ನಾಟಕವನ್ನು ನಿರ್ದೇಶಿಸಿ ರಂಗದಂಗಳದಲ್ಲಿ ವಿಸ್ಮಯ ಲೋಕವೊಂದನ್ನು ಸೃಷ್ಟಿಸಿದ್ದಾರೆ. ಅವರ ಮಹತ್ವಾಂಕಾಕ್ಷೆಯ ಕನಸು ನನಸಾಗಿದೆ. ಕನ್ನಡ ರಂಗರಸಿಕರ ಸೌಭಾಗ್ಯ, ಕುವೆಂಪುರವರ ಕಾದಂಬರಿಯನ್ನು ಕಣ್ಣಾರೆ ನೋಡುವ ಅವಕಾಶ ಒದಗಿಸಿಕೊಟ್ಟ ಬಸವಲಿಂಗಯ್ಯನವರಿಗೆ ಅಭಿನಂದನೆಗಳು.
೨ ವರ್ಷಗಳ ಹಿಂದೆ ಮೈಸೂರಿನ ರಂಗಾಯಣದಲ್ಲಿ ಅನುಭವಿ ವೃತ್ತಿಪರ ಕಲಾವಿದರಿಂದ ಇದೇ ನಾಟಕವನ್ನು ಪ್ರದರ್ಶಿಸಿ ಮೈಸೂರಿಗರನ್ನು ಬೆಚ್ಚಿ ಬೀಳಿಸಿ ಅಚ್ಚಳಿಯದ ನೆನಪುಗಳನ್ನು ಕೊಟ್ಟ ಬಸವಲಿಂಗಯ್ಯ ಮತ್ತೆ ಅದೇ ನಾಟಕವನ್ನು ರಾಜ್ಯ ರಾಜಧಾನಿ ಬೆಂಗಳೂರಿನ ಕಲಾಗ್ರಾಮದಲ್ಲಿ ಹೊಸ ಕಲಾವಿದರನ್ನು ಇಟ್ಟುಕೊಂಡು ಮರುಸೃಷ್ಟಿ ಮಾಡಿ ಅಚ್ಚರಿಯನ್ನು ಸೃಷ್ಟಿಸಿದರು. ೨೦೧೩, ಎಪ್ರಿಲ್ ೧೮ರಿಂದ ಜೂನ್ ೩ ರವರೆಗೆ ವಾರಕ್ಕೆ ೪ ಪ್ರದರ್ಶನಗಳಂತೆ ಒಟ್ಟು ೨೫ ಪ್ರದರ್ಶನಗಳನ್ನು ಸಹಸ್ರಾರು ಜನ ನೋಡಿ ಆನಂದಿಸಿದರು. ನಕ್ಕು ನಲಿದರು, ಖುಷಿಯಿಂದ ಕುಣಿದಾಡಿದರು.
ಏಳು ನೂರು ಪುಟಗಳ ಬ್ರಹತ್ ಕಾದಂಬರಿ, ನೂರೈವತ್ತಕ್ಕೂ ಹೆಚ್ಚು ಪಾತ್ರಗಳು, 36 ಹಾಡುಗಳು, ೭೦ ಜನ ಕಲಾವಿದರು, ೨೦ ಜನ ತಾಂತ್ರಿಕವರ್ಗ, ೧ ತಿಂಗಳು ಸತತ ರಿಹರ್ಸಲ್ಸ್, ೨ ತಿಂಗಳು ಪ್ರದರ್ಶನ, ೨೦ ಸಹಸ್ರ ಜನ ಪ್ರೇಕ್ಷಕರು, ೮ ಗಂಟೆಗಳ ಅಹೋರಾತ್ರಿ ಪ್ರದರ್ಶನ, ಒಂದೇ ನಾಟಕ ೪ ರಂಗಭೂಮಿಕೆಯಲ್ಲಿ ಪ್ರಯೋಗ, ೧ ಕೋಟಿ ನಾಟಕದ ಅಂದಾಜು ವೆಚ್ಚ...... ೨೦ ಲಕ್ಷದಷ್ಟು ಆದಾಯ.... ಹೀಗೆ ಎಲ್ಲವೂ ದಾಖಲೆಗಳೇ. ಇದು ಒಬ್ಬ ವ್ಯಕ್ತಿಯಿಂದ ಸಾಧ್ಯವಾಗದೇ ಇರಬಹುದು ಆದರೆ ವ್ಯಕ್ತಿಯೊಬ್ಬ ದೊಡ್ಡದಾಗಿ ಕನಸು ಕಂಡರೆ, ಅದನ್ನು ನನಸು ಮಾಡಲು ಮನಸ್ಸು ಮಾಡಿದರೆ ವಿಸ್ವಯಗಳನ್ನು ಸೃಷ್ಟಿಸಲು ಸಾಧ್ಯ ಎನ್ನುವುದಕ್ಕೆ
ಸಿ.ಬಸವಲಿಂಗಯ್ಯನವರ ಈ ರಂಗ ಸಾಹಸವೇ ಸಾಕ್ಷಿ. ಯಾಕೆಂದರೆ ಸರಕಾರಿ ಇಲಾಖೆಯನ್ನು, ಅಲ್ಲಿರುವ ಬುರಾಕ್ರಾಟ್ಸಗಳನ್ನು ಇಂತಹ ಮೆಘಾ ಈವೆಂಟ್ಗಳಿಗೆ ಹಣ ಹೂಡಲು ಒಪ್ಪಿಸುವುದೇ ಒಂದು ಸವಾಲು. ಒಪ್ಪಿಸಿದರೂ ಸರಕಾರಿ ರೂಲ್ಸ ಮತ್ತು ನಿಯಂತ್ರಣಗಳಿಗೆ ಒಳಪಟ್ಟು ಸಾಂಸ್ಕೃತಿಕ ಅಚ್ಚರಿ ಸೃಷ್ಟಿಸುವುದು ಇನ್ನೂ ಕಷ್ಟಸಾಧ್ಯ. ಆದರೆ ಇವರೆಡನ್ನೂ ನಿಭಾಯಿಸಿ ಇಲ್ಲಿವರೆಗೂ ಯಾರೂ ಮಾಡದಂತಹ ಅದ್ಬುತವೊಂದನ್ನು ಬಸವಲಿಂಗಯ್ಯನವರು ಮಾಡಿತೋರಿಸಿದ್ದಕ್ಕೆ ಕನ್ನಡ ರಂಗಭೂಮಿ ಸಂಭ್ರಮಿಸಲೇ ಬೇಕು.. ಈ ಕನಸುಗಾರ ನಿರ್ದೇಶಕರನ್ನು ತುಂಬು ಮನಸ್ಸಿನಿಂದ ಅಭಿನಂದಿಸಲೇಬೇಕು.
ಕುವೆಂಪುರವರು ೧೯೬೭ ರಲ್ಲಿ “ಮಲೆಗಳಲಿ ಮದುಮಗಳು” ಕಾದಂಬರಿಯನ್ನು ಬರೆದಾಗ ಸಾಹಿತ್ಯಲೋಕ ಬೆಕ್ಕಸ ಬೆರಗಾಗಿತ್ತು. ಸಾಂಪ್ರದಾಯಕ ಸಾಹಿತ್ಯದ ಹಾಗೂ ಸಾಹಿತ್ಯ ವಿಮರ್ಶೆಯ ಯಾವುದೇ ಮಾನದಂಡಗಳಿಗೂ ಒಗ್ಗದ ಈ ಕಾದಂಬರಿ ಹೊಸದೊಂದು ಸಾಹಿತ್ಯಕ ಆಯಾಮವನ್ನೇ ತೆರೆದಿಟ್ಟಿತ್ತು. ಮತ್ತೆ ಈಗ ಆಗಿದ್ದು ಅದೇ. ಕನ್ನಡ ರಂಗಭೂಮಿ ಕತಾಕಥಿತ ಚೌಕಟ್ಟಿನ ನಾಟಕಗಳ ಪೊರೆಯನ್ನು ಕಳಚಿಕೊಂಡಂತೆ “ಮಲೆಗಳಲಿ ಮದುಮಗಳು” ನಾಟಕ ಮೂಡಿ ಬಂದಿದೆ, ಮೊದಲೇ ನಿರ್ದಿಷ್ಟ ಮಾನದಂಡಗಳೇ ಇಲ್ಲದ ರಂಗವಿಮರ್ಶಾ ಪ್ರಕಾರಕ್ಕೆ ಯಾವ ಮಾನದಂಡಗಳನ್ನಿಟ್ಟುಕೊಂಡು ಈ ಮೇಘಾ ನಾಟಕವನ್ನು ವಿಮರ್ಶಿಸಬೇಕೆನ್ನುವುದೇ ಒಂದು ಸವಾಲಿನ ಕೆಲಸ.
ಬ್ರಹತ್ ಕಾದಂಬರಿಯೊಂದನ್ನು ರಂಗರೂಪ ಮಾಡುವುದು ಸುಲಭಸಾಧ್ಯವಲ್ಲ. ಮಲೆಗಳಲ್ಲಿ ಮದುಮಗಳು ಸಿದ್ದ ಕಥೆಯೂ ಅಲ್ಲ, ಒಂದು ಚೌಕಟ್ಟಿನಲ್ಲಿರಬಹುದಾದ ಕಾದಂಬರಿಯೂ ಅಲ್ಲ, ಸಾಂಪ್ರದಾಯಿಕ ಕಥಾನಕದ ನೆಲಗಟ್ಟು ಇಲ್ಲ. ಚಿತ್ತ ಬಂದತ್ತ ಹೊರಡುವ ಕಥಾನಕಕ್ಕೆ, ಚದುರಿದ ಚಿತ್ರಗಳ ಕಟ್ಟಿಕೊಡುವ ಕೌಶಲಕ್ಕೆ ಓದುಗ ದಿಗ್ಬ್ರಮೆಗೊಳಗಾಗುವುದರಲ್ಲಿ ಸಂದೇಹವಿಲ್ಲ. ಇದು ಒಬ್ಬ ವ್ಯಕ್ತಿಕೇಂದ್ರಿತ ಕಥೆಯಲ್ಲ, ಒಂದು ಕುಟುಂಬದ ವ್ಯಥೆಯೂ ಅಲ್ಲ, ಒಂದು ನಿರ್ದಿಷ್ಟ ಜಾತಿ, ಜನಾಂಗ, ಧರ್ಮ, ವರ್ಗಕ್ಕೆ ಸೇರಿದ ಕಥಾನಕವೂ ಇದಲ್ಲ. ಇಲ್ಲಿ ಎಲ್ಲವೂ ಇದೆ. ಪ್ರೀತಿ ದ್ವೇಷ, ಸ್ವಾರ್ಥ, ಈರ್ಶೆ, ಜಾತಿ ಧರ್ಮಗಳ ಅಸಮಾನತೆ, ಮೇಲುಕೀಳುಗಳ ಅಂತರ, ಆರ್ಥಿಕ ಸ್ಥಿತ್ಯಂತರಗಳೆಲ್ಲಾ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಅನಾವರಣಗೊಂಡಿದೆ. ಆದರೆ ಎಲ್ಲವೂ ಚದುರಿದ ಚಿತ್ರಗಳು. ಒಂದಕ್ಕೂ ಚೌಕಟ್ಟಿಲ್ಲ, ಕಥಾ ಹಂದರಕ್ಕೊಂದು ಚಂದದ ಮಂದಿರವಿಲ್ಲ, ಸಿದ್ದ ಕಥಾರೂಪದ ಹಂಗಿಲ್ಲ.
ಆದರೆ ಎಲ್ಲವನ್ನೂ ಮೀರಿದ, ಯಾವುದನ್ನೂ ಕೇಂದ್ರೀಕರಿಸದ, ಆದರೆ ಎಲ್ಲವನ್ನೂ ಒಳಗೊಂಡ ಅದ್ವುತ ದೃಶ್ಯ ವೈಭವವೊಂದು ‘ಮಲೆಗಳಲಿ ಮದುಮಗಳ’ಲ್ಲಿ ಮೂಡಿಬಂದಿದೆ. ಆರಂಭ ಮತ್ತು ಅಂತ್ಯ ಎನ್ನುವ ಪರಿಕಲ್ಪನೆಯನ್ನೇ ಬದಲಾಯಿಸಿದ ಕೃತಿ ಇದು.
ಸುಬ್ಬಣ್ಣ ಹೆಗ್ಗಡೆಯವರಿಗೆ ಎರಡು ಗಂಡು ಹಾಗೂ ಒಬ್ಬ ಹೆಣ್ಣು ಮಗಳು. ಹಿರಿಯ ಮಗ ದೊಡ್ಡಣ್ಣ ಹೆಗ್ಗಡೆ ಜೀವನದಲ್ಲಿ ಜಿಗುಪ್ಸೆ ಹೊಂದಿ ಹೆಂಡತಿ ಮತ್ತು ಮಗನನ್ನು ಬಿಟ್ಟು ಸನ್ಯಾಸಿಯಾಗಿ ಹೋಗುತ್ತಾನೆ. ಜವಾಬ್ದಾರಿ ಇಲ್ಲದ ಕುರೂಪಿ ಕಿರಿಯ ಮಗ. ಅವಿವಾಹಿತೆ ಕೊನೆಯ ಮಗಳು. ಇಳಿವಯಸ್ಸಿನಲ್ಲಿ ಸುಬ್ಬಣ್ಣ ಹೆಗ್ಗಡೆ ಓಡಿಹೋದ ಮಗನನ್ನು ನೆನೆದು ಸಂಕಟಪಡುತ್ತಾರೆ. ಸುಬ್ಬಣ್ಣ ಹೆಗ್ಗಡೆಯವರ ಸೊಸೆಯ ಅಣ್ಣ ಮುಕುಂದಯ್ಯನು ವೆಂಕಟಪ್ಪ ನಾಯಕನ ಮಗಳು ಚಿನ್ನಮ್ಮಳನ್ನು
ಪ್ರೀತಿಸುತ್ತಾನೆ. ಇದಕ್ಕೆ ವೆಂಕಟಪ್ಪನ ವಿರೋಧವಿರುತ್ತದೆ.
ಚಿನ್ನಮ್ಮಳನ್ನು ಸಂಪರ್ಕಿಸಲು ದಲಿತ ಐತನ ಹೆಂಡತಿ ಪಿಂಚಲುಳನ್ನು ಮದ್ಯವರ್ತಿಯಾಗಿ ಮುಕುಂದಯ್ಯ ಬಳಸಿಕೊಳ್ಳುತ್ತಾನೆಂಬುದು ತಿಳಿಯದ ಊರಿನ ಜನ ಮುಕುಂದಯ್ಯ ಮತ್ತು ಪಿಂಚಲು ನಡುವೆ ಅನೈತಿಕ ಸಂಬಂಧ ಕಲ್ಪಿಸಿಕೊಳ್ಳುತ್ತಾರೆ. ಮುಕುಂದಯ್ಯನ ತಂಗಿಯ ಗಂಡ ದೇವಯ್ಯನಿಗೆ ಒಂದು ಮಗು ಇದ್ದರೂ ಆತ ಶೆಟ್ಟರ ಹುಡುಗಿ ಕಾವೇರಿ ಹಿಂದೆ ಬಿದ್ದಿರುತ್ತಾನೆ. ಪಾದ್ರಿಯೊಬ್ಬ ಬಂದು ದೇವಯ್ಯನ ಸಹಕಾರದಿಂದ ಊರಲ್ಲಿ ನೆಲೆಸಿ ಇಂಗ್ಲೀಷ್ ಶಾಲೆಯನ್ನು ತೆರೆದು ಧರ್ಮ ಪ್ರಚಾರಕ್ಕೆ ತೊಡಗುತ್ತಾನೆ. ಶಿಂಭಾವಿ ಊರಿನ ಆಳುಮಗ ಗುತ್ತಿ ತನ್ನ ಮಾವನ ಮಗಳಾದ ತಿಮ್ಮಿಯನ್ನು ಮದುವೆಯಾಗಬಯಸಿದ್ದರೂ ತಿಮ್ಮಿಯ ಅಪ್ಪ ತನ್ನ ಮಗಳನ್ನು ಬೇರೆಯವರ ಜೊತೆ ಎಂಗೇಜಮೆಂಟ್ ಮಾಡಿಬಿಡುತ್ತಾನೆ. ಕೊನೆಗೆ ತಿಮ್ಮಿಯ ತಾಯಿಯೇ ತನ್ನ ಮಗಳನ್ನು ಗುತ್ತಿಯ ಜೊತೆಗೆ ನಡುರಾತ್ರಿ ಓಡಿಸಿ ಕಳುಹಿಸಿಕೊಡುತ್ತಾಳೆ.
ಗುತ್ತಿಯು ಹುಲಿಯ ಎನ್ನುವ ನಾಯಿಯನ್ನು ಸಾಕಿದ್ದು ಸದಾ ನೆರಳಂತೆ ಅದು ಗುತ್ತಿಯ ಜೊತೆಗೆ ಇರುತ್ತದೆ. ಹುಲಿಯೊಂದರ ಜೊತೆಗೆ ಹೋರಾಡಿದ ಹುಲಿಯಾ ನಾಯಿ ಗುತ್ತಿ-ತಿಮ್ಮಿಯರನ್ನು ಕಾಪಾಡಿ ತನ್ನ ಒಂದು ಕಣ್ಣನ್ನೇ ಕಳೆದುಕೊಂಡಿರುತ್ತದೆ. ವೆಂಕಟನಾಯಕನು ವಿಧವೆ ನಾಗವ್ವಳನ್ನು ಆಕೆಯ ಅತ್ತೆ ನಾಗತ್ತೆಯ ಸಹಕಾರದೊಂದಿಗೆ ಮೋಸದಿಂದ ಕೂಡುತ್ತಾನೆ. ನಂತರ ಕೂಡಿಕೆ ಮಾಡಿಕೊಳ್ಳುತ್ತಾನೆ. ಶೇರೇಗಾರನೆಂಬ ಖಳನಾಯಕ ಶೆಟ್ಟರ ಅಂತಕ್ಕನ ಮಗಳು ಕಾವೇರಿಯನ್ನು ಮೋಸದಿಂದ ಕರೆದೊಯ್ದು ಸಾಬರ ಸಹಕಾರದಿಂದ ಅತ್ಯಾಚಾರ ಮಾಡುತ್ತಾನೆ. ಆಕೆ ಅವಮಾನ ತಾಳಲಾರದೇ ಬಾವಿಗೆ ಬಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಅವಳ ಸಾವಿನ ಆರೋಪ ಗುತ್ತಿಯನ್ನು ಸುತ್ತಿಕೊಳ್ಳುತ್ತದೆ. ಪೋಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪಾರಾದ ಗುತ್ತಿ ತಲೆಮರೆಸಿಕೊಳ್ಳುತ್ತಾನೆ. ಇತ್ತ ಪೋಲೀಸರು, ಅತ್ತ ತಿಮ್ಮಿಯ ಸಹೋದರರು ಗುತ್ತಿಯನ್ನು ಹುಡುಕತೊಡಗುತ್ತಾರೆ. ಸುಬ್ಬಣ್ಣ ಹೆಗ್ಗಡೆಯವರ
ಓಡಿಹೋದ ಮಗ ಹೆಣವಾಗಿ ಊರಿಗೆ ತರಲ್ಪಡುತ್ತಾನೆ. ವಿಷಯ ತಿಳಿದ ಸೊಸೆ ಕೂಡಾ ಗಂಡನ ಹೆಣದ ಜೊತೆಗೆ ಹೆಣವಾಗುತ್ತಾಳೆ. ವೆಂಕಟನಾಯಕನ ಮಗಳು ಚಿನ್ನಮ್ಮಳ ಮದುವೆ ನಿಶ್ಚಯವಾಗುತ್ತದೆ. ಮದುವೆಯ ಹಿಂದಿನ ರಾತ್ರಿ ಚಿನ್ನಮ್ಮ ಮುಕುಂದಯ್ಯನೊಂದಿಗೆ ಪರಾರಿಯಾಗುತ್ತಾಳೆ. ಆಘಾತಗೊಂಡ ವೆಂಕಟನಾಯಕ ಕೊನೆಯುಸಿರೆಳೆಯುತ್ತಾನೆ. ಪಾದ್ರಿಗಳು ತಮ್ಮ ಮತಾಂತರ ಕೆಲಸ ಮುಂದುವರೆಸುತ್ತಾರೆ. ದೇವಯ್ಯನು ಬಲವಂತದಿಂದ ಮತಾಂತರ ಹೊಂದಬಹುದಾದ ಸಾದ್ಯತೆಯನ್ನು ಮುಕುಂದಯ್ಯ ತಡೆಯುತ್ತಾನೆ. ಕೊನೆಗೆ ತಿಮ್ಮಿಯೊಂದಿಗೆ ಊರು ಬಿಟ್ಟ ಗುತ್ತಿ ನದಿಯೊಂದನ್ನು ತೆಪ್ಪದಲ್ಲಿ ದಾಟುವಾಗ ನಾಯಿ ತುಂಬಿ ಹರಿವ ನದಿಗೆ ಬಿದ್ದು ಅಸುನೀಗುತ್ತದೆ. ನಾಯಿ ಸತ್ತ ದುಃಖದಲ್ಲಿ ಗುತ್ತಿ ಗೋಳಾಡುತ್ತಾನೆ. ಕೊಟ್ಟಕೊನೆಗೆ “ಇಲ್ಲಿ ಯಾರೂ ಮುಖ್ಯರೂ ಅಲ್ಲ, ಯಾರೂ ಅಮುಖ್ಯರೂ ಅಲ್ಲ...” ಎನ್ನುವ ಘೋಷನೆಯೊಂದಿಗೆ ನಾಟಕ ಕೊನೆಯಾಗುತ್ತದೆ. ಕೊನೆಯವರೆಗೂ ನಕ್ಕು ನಗಿಸಿದ ನಾಟಕ ಕೊನೆಗೆ ಹುಲಿಯನ ಸಾವು ಹಾಗೂ ಗುತ್ತಿಯ ನೋವಿನ ಆಕ್ರಂದನ ಪ್ರೇಕ್ಷಕರ ಅಂತಃಕರಣವನ್ನು ಕಲಕಿಬಿಡುತ್ತದೆ. ಇಲ್ಲಿಗೆ ೮ ಗಂಟೆಯ ನಾಟಕ ಮುಕ್ತಾಯವಾಗುತ್ತದೆ.
ಹಲವಾರು ನಾಟಕಗಳ ತುಣುಕುಗಳನ್ನು ಇಲ್ಲವೇ ಹಲವು ಕಥೆಗಳ ದೃಶ್ಯಗಳನ್ನು ಕತ್ತರಿಸಿ ಮರುಜೋಡಿಸಿ ಕಟ್ ಆಂಡ್ ಪೇಸ್ಟ ಮಾದರಿಯ ನಾಟಕಗಳನ್ನು ಕಟ್ಟಿಕೊಡುವುದರಲ್ಲಿ ಪ್ರಸಿದ್ದರಾದ ಬಸವಲಿಂಗಯ್ಯನವರಿಗೆ ಕಟ್ ಆಂಡ್ ಪೇಸ್ಟ ಮಾದರಿಯ ಸಿದ್ದ ಕಥಾನಕವೊಂದು ಸಿಕ್ಕರೆ ಸುಮ್ಮನಿರುತ್ತಾರೆಯೇ? “ಮಲೆಗಳಲಿ ಮದುಮಗಳು” ಕಾದಂಬರಿಯು ಒಂದು ನಿರ್ದಿಷ್ಟ ಪ್ರದೇಶದಲ್ಲಿ ನಡೆವ ಕೆಲವು ಘಟನೆಗಳನ್ನು ಸೇರಿಸಿ ಮಾಡಿದ ಕಥೆಯಲ್ಲದ ಕಥಾನಕ. ಬಹುಷಃ ಬಸವಲಿಂಗಯ್ಯನಂತಹ ರಂಗ ನಿರ್ದೇಶಕರಿಗೆ ಹೇಳಿ ಮಾಡಿಸಿದಂತಹ ಕಾದಂಬರಿ ಇದು. ಇರುವುದನ್ನು ಕೆಡವಿ ಮರುಜೋಡಿಸುವುದು ಬಸವಲಿಂಗಯ್ಯನವರ ವಿಶೇಷತೆ. ಸಾಹಿತ್ಯಕ ಸಾಂಪ್ರದಾಯಿಕ ಬರವಣಿಗೆ ಹಾಗೂ ಕಥಾ ನಿರೂಪನೆಯನ್ನು ಮುರಿದು ಕಟ್ಟುವ ಕೆಲಸವನ್ನು ಕುವೆಂಪುರವರು ‘ಮಲೆಗಳಲಿ ಮದುಮಗಳು’ ಕಾದಂಬರಿಯಲ್ಲಿ ಮಾಡಿದ್ದರಿಂದ ಬಸವಲಿಂಗಯ್ಯನವರಿಗೆ ಟೇಲರ್ ಮೇಡ್ ಕೃತಿ ಸಿಕ್ಕಂತಾಗಿದೆ. ಆ ಕೃತಿಗೆ ಹಾಡು ಸಂಗೀತಗಳ ಒಗ್ಗರಣೆ ಹಾಕಿ ಸೊಗಸಾದ ರೀತಿಯಲ್ಲಿ ನಗೆರಸಪಾಕಮಾಡಿ ರಂಗರಸಿಕರಿಗೆ ಉಣಬಡಿಸಿದ್ದಾರೆ. ಕುವೆಂಪುರವರ ಕಾದಂಬರಿಯ ನಿಜವಾದ ಉದ್ದೇಶದ ಗೋರಿಯ ಮೇಲೆ ಮನರಂಜನಾ ಪ್ರಧಾನವಾದ ನಾಟಕವೊಂದನ್ನು ಕಟ್ಟಿಕೊಡುವಲ್ಲಿ ರಂಗರೂಪ ಮಾಡಿದ ಡಾ.ಕೆವೈಎನ್ ಮತ್ತು ನಿರ್ದೇಶಕ ಬಸವಲಿಂಗಯ್ಯನವರು ಯಶಸ್ವಿಯಾಗಿದ್ದಾರೆ.
ಕುವೆಂಪುರವರ ಕಾದಂಬರಿಯನ್ನು ಓದಿದಾಗ ಸಿಗುವ ಅನುಭವವೇ ಬೇರೆ, ಈ ನಾಟಕವನ್ನು ನೋಡಿದಾಗ ದಕ್ಕುವ ಅನುಭವವೇ ಬೇರೆ. ಕಾದಂಬರಿ ನೆನಪಿನಂತೆ ಕಾಡುತ್ತದೆ. ಓದಿದ ನಂತರ ಚಿಂತನೆಗೆ ಹಚ್ಚುತ್ತದೆ. ವಿಚಾರಕ್ಕೆ ಆಹ್ವಾನವನ್ನು ನೀಡುತ್ತದೆ. ಓದುತ್ತಾ ಹೋದಂತೆ ಆರ್ದತೆಯನ್ನು ಹುಟ್ಟಿಸುತ್ತದೆ. ಅಸಮಾನ ವ್ಯವಸ್ಥೆಯ ಆಯಾಮಗಳನ್ನು ತೆರೆದಿಡುತ್ತದೆ. ಆದರೆ ಆ ಕಾದಂಬರಿಯ ರಂಗರೂಪ ಹಾಸ್ಯಪ್ರಧಾನವಾಗಿದೆ. ಮನರಂಜನೆಯೇ ಇಲ್ಲಿ ಸ್ಥಾಯಿಭಾವವಾಗಿದ್ದು ಪ್ರೇಕ್ಷಕರನ್ನು ಹಿಡಿದಿಡುವುದೇ ನಾಟಕದ ಮೂಲ ಉದ್ದೇಶವೂ ಆಗಿದೆ. ಇದು ನಿರ್ದೇಶಕರ ಅನಿವಾರ್ಯತೆಯೂ ಆಗಿದೆ, ಇಲ್ಲವಾದಲ್ಲಿ ೮ ಗಂಟೆಗಳ ಕಾಲ ಅಹೋರಾತ್ರಿ ನೋಡುಗರನ್ನು ಹಿಡಿದಿಡಲು ಹೇಗೆ ಸಾಧ್ಯ? ವ್ಯಂಗ್ಯ ವಿಡಂಬಣೆ, ಆಂಗಿಕ ಚೇಷ್ಟೆ, ಹಾಡು ಕುಣಿತಗಳು, ದ್ವಂದ್ವಾರ್ಥಕ ಸನ್ನಿವೇಶ ಮತ್ತು ಸಂಭಾಷಣೆಗಳು ನೋಡುಗರಲ್ಲಿ ಕಚಗುಳಿಯನ್ನುಂಟು ಮಾಡಿದ್ದಂತೂ ಸತ್ಯ. ಕಾದಂಬರಿ ಓದದೇ ಇದ್ದವರಿಗೆ, ಓದಿದವರೂ ಅದನ್ನು ಮರೆತು ನಾಟಕ ನೋಡಿದರೆ
ಇಡೀ ರಂಗಪ್ರಯೋಗ ಬರಪೂರ್ ನಾನ್ಸ್ಟಾಪ್ ಮನರಂಜನೆಯನ್ನು ಕೊಡುತ್ತದೆ. ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತದೆ. ಹೀಗಾಗಿ ನಾಟಕ ಯಾರನ್ನೂ ತೀವ್ರವಾಗಿ ಕಾಡುವುದೂ ಇಲ್ಲ.... ಹೃದಯವನ್ನು ತಟ್ಟುವುದೂ ಇಲ್ಲಾ..... ರಂಜನೆಗೆ ಇಲ್ಲಿ ಯಾವುದೇ ಕೊರತೆ ಇಲ್ಲಾ.
ಕಳ್ಳ ಸ್ವಾಮಿಗಳನ್ನು ಲೇವಡಿ ಮಾಡಿವಂತಹ “ಸ್ವಾಮಿಗೋಳು ನಮ್ ಸ್ವಾಮಿಗೋಳು” ಹಾಡು ಮತ್ತು ದೃಶ್ಯೀಕರಣ, ಸಾಬರನ್ನು ನಾಟಕದಾದ್ಯಂತ ಲೇವಡಿ ಮಾಡಿದ್ದು, ಕೊನೆಗೆ ರೆವಿಡೆಂಟ್ ಪಾದ್ರಿ ಮಾಡುವ ‘ಸಂತೋಷ ಉಕ್ಕೇ ಉಕ್ಕುತೈತೆ...’ ಹಾಡು ಮತ್ತು ಆಂಗಿಕಾಭಿನಯ, ನೆಲದೊಳಗೆ ನೀರು ಕಂಡುಹಿಡಿಯಲು ಬಳಸುವ ಕಡ್ಡಿಯ ದೃಶ್ಯ.... ಇಂತಹ ಹಲವಾರು ದೃಶ್ಯಗಳು ನೋಡುಗರಲ್ಲಿ ಮಿಂಚಿನ ಸಂಚಾರವನ್ನುಂಟುಮಾಡಿ ನಗೆಬುಗ್ಗೆಯನ್ನು ಚಿಮ್ಮಿಸುವಂತಿವೆ. ಆದರೆ ಮೂಲ ಕಾದಂಬರಿಯ ಆಶಯ ನಿಜಕ್ಕೂ ಮನರಂಜನೆ ಅಲ್ಲವೇ ಅಲ್ಲ. ಇಡೀ ನಮ್ಮ ವ್ಯವಸ್ಥೆಯ ಅವ್ಯವಸ್ಥೆ, ಅಸಮಾನತೆ, ತಾರತಮ್ಯವನ್ನು ನವೀರಾದ ಹಾಸ್ಯಲೇಪನದೊಂದಿಗೆ ಓದುಗರಿಗೆ ತಲುಪಿಸುವುದೇ ಆಗಿದೆ. ಓದುಗರನ್ನು ಚಿಂತನೆಗೆ ಹಚ್ಚುವಲ್ಲಿ ಕಾದಂಬರಿ ಯಶಸ್ವಿಯಾದರೆ, ಪ್ರೇಕ್ಷಕರನ್ನು ರಂಜನೆ ಮಾಡುವುದರಲ್ಲಿ ನಾಟಕ ಸಫಲತೆ ಕಂಡಿದೆ.
ನಾಟಕ ಮನರಂಜನಾ ಮಾಧ್ಯಮವೆಂದು ನಿರ್ದೇಶಕರು ನಂಬಿಕೊಂಡಿದ್ದರಿಂದ
ಕುವೆಂಪುರವರ ಕಾದಂಬರಿಯ ಆಶಯಗಳನ್ನು ಪಕ್ಕಕ್ಕಿಟ್ಟಿದ್ದಾರೆ. ಈ ನಾಟಕದಲ್ಲಿ ಸಂಭಾಷಣೆಗಳ ಅಬ್ಬರದಲ್ಲಿ ಕಾದಂಬರಿಯೊಳಗಿನ ಮಾತಾಗುವ ಮೌನ ಕಾಣೆಯಾಗಿದೆ. ಕೇವಲ ಕಾದಂಬರಿಯೊಳಗಿನ ಪಾತ್ರಗಳು ಎದ್ದು ಬಂದು ಮಾಡುವ ಹಾಡು ಕುಣಿತ ಮಾತುಗಳನ್ನು ವೈಭವೀಕರಿಸಲಾಗಿದ್ದು, ನೋಡುಗರು ನಕ್ಕು ನಲಿದು ಖುಷಿಪಡುವ ದಿವ್ಯಾನುಭವಕ್ಕೆ ಈ ಅಹೋರಾತ್ರಿಯ ನಾಟಕ ಸಾಕ್ಷಿಯಾಗಿದೆ. ಕುವೆಂಪುರವರ ಚೇತನ ಕುಪ್ಪಳ್ಳಿಯ ಬೆಟ್ಟದೊಳಗೆ ಅಸಹನೆಯಿಂದ ಮಿಡಿಯುತ್ತಿದೆ. ಈ ರೀತಿ ಆಗಬಹುದೆಂದು ಎಂದೋ ಕಂಡುಕೊಂಡಿದ್ದ ಕುವೆಂಪುರವರು ‘ಶೂದ್ರತಪಸ್ವಿ’ನಾಟಕದ ಮುನ್ನುಡಿಯಲ್ಲಿ ಹೀಗೆ ಹೇಳಿದ್ದಾರೆ. “ಈ ನಾಟಕ ಆಡುವ ದೃಷ್ಟಿಕೋನದಿಂದ ನಿಷ್ಪ್ರಯೋಜಕ. ಇದನ್ನು ಕೃತಕಾಭಿನಯದಿಂದ ಪ್ರದರ್ಶಿಸಲು ಅಸಾಧ್ಯ. ಆದ್ದರಿಂದ ಕಲ್ಪನಾ ತಪಸ್ಸಾಧ್ಯವಾದ ಮನೋರಂಗಭೂಮಿಯಲ್ಲಿಯೇ ಇದನ್ನು ಸೃಷ್ಟಿಸಿ ದೃಷ್ಟಿಸಬೇಕು” ಎಂದು ಸ್ಪಷ್ಟವಾಗಿ ಬರೆದಿದ್ದಾರೆ. ಬಹುಷಃ ‘ಮಲೆಗಳಲಿ ಮದುಮಗಳು’ ಕಾದಂಬರಿಯನ್ನು ಓದಿ ನಂತರ ಈ ರಂಗಪ್ರಯೋಗವನ್ನು ನೋಡಿದವರಿಗೆ ಕುವೆಂಪುರವರ ದೂರದರ್ಶಿತ್ವದ ಮಾತುಗಳು ಅದೆಷ್ಟು ಸತ್ಯ ಎನ್ನುವುದು ಅರಿವಿಗೆ ಬರುತ್ತದೆ.
ಕಾದಂಬರಿಯನ್ನು ನಾಟಕಕ್ಕೆ ಹೋಲಿಸದೇ ಅರಿವಿಗಾಗಿ ಕಾದಂಬರಿಯನ್ನು ಮನೋರಂಗಭೂಮಿಕೆಯಲ್ಲಿ ಓದಿ, ಮನರಂಜನೆಗಾಗಿ ನಾಟಕವನ್ನು ರಂಗದಂಗಳದಲ್ಲಿ ನೋಡಿ ಕೃತಾರ್ಥರಾಗುವುದುತ್ತಮ. ‘ಒಂದು ಮಾಧ್ಯಮದ ಅನುಭವವನ್ನು ಇನ್ನೊಂದು ಮಾಧ್ಯಮದಲ್ಲಿ ಕಟ್ಟಿಕೊಡಲು ಸಾಧ್ಯವೂ ಇಲ್ಲ’ ಎಂಬುದು ಅನೇಕ ಸಂದರ್ಭಗಳಲ್ಲಿ ಸಾಬೀತಾಗಿದೆ. ಕುವೆಂಪುರವರ ಕಾನೂರು ಹೆಗ್ಗಡತಿ’ ಕಾದಂಬರಿಯನ್ನು ಗಿರೀಶ ಕಾರ್ನಾಡರು ಸಿನೆಮಾ ಮಾಡಿದಾಗಲೂ ಕಾದಂಬರಿಯ ಆಶಯಗಳನ್ನು ಹಾಗೂ ಅನುಭವವನ್ನು ಕಟ್ಟಿಕೊಡಲಾಗಲಿಲ್ಲ ಎಂಬ ವಿವಾದ ಎದ್ದಿತ್ತು. ತರಾಸುರವರ ನಾಗರಹಾವು ಕಾದಂಬರಿಯನ್ನು ಪುಟ್ಟಣ್ಣ ಕಣಗಾಲರವರು ಸಿನೆಮಾ ಮಾಡಿದಾಗ ಸ್ವತಃ ತರಾಸುರವರೇ ಅದೊಂದು ಕೆರೆಹಾವು ಎಂದು ಲೇವಡಿ ಮಾಡಿದ್ದರು. ಅಕ್ಷರಮಾಧ್ಯಮದ ಸಾಧ್ಯತೆಗಳೇ ಬೇರೆ, ದೃಶ್ಯಮಾಧ್ಯಮದ ಸಾಧ್ಯತೆಗಳೇ ಬೇರೆ. ಎರಡನ್ನೂ ಭಿನ್ನವಾಗಿಯೇ ಅನುಭವಿಸಿ ಸಾರ್ಥಕತೆ ಹೊಂದುವುದೇ ನಮ್ಮ ಮುಂದಿರುವ ಆಯ್ಕೆ.
ಆದರೆ ಮನರಂಜನೆಯ ಆಶಯವನ್ನೇ ಪ್ರಧಾನವಾಗಿಟ್ಟುಕೊಂಡ ‘ಮಲೆಗಳಲಿ ಮದುಮಗಳು’ ನಾಟಕ ಅದೆಂತಹ ಆವಾಂತರವನ್ನು ಸೃಷ್ಟಿಸಿತು ಎನ್ನುವುದನ್ನು ನೋಡಬಹುದಾಗಿದೆ. ಅಬ್ಬರದ ಸಂಭಾಷಣೆಗಳ ತೀವ್ರತೆಗೆ, ಹಾಸ್ಯಪ್ರಧಾನ ನಿರೂಪಣೆಯ ಅತಿರೇಕಕ್ಕೆ ಕಾದಂಬರಿಯ ಒಳನೋಟಗಳನ್ನು ಕಟ್ಟಿಕೊಡಬಹುದಾದ ಭಾವುಕ ಸನ್ನಿವೇಶಗಳು, ಕರುಣಾಜನಕ ದೃಶ್ಯಗಳು ಬಲಿಯಾಗಿಹೋದವು. ಲೇವಡಿಮಾಡುವ, ವಿಡಂಬನೆ ಮಾಡುವ, ದ್ವಂದ್ವಾರ್ಥ ಹುಟ್ಟಿಸುವ, ಕಚಗುಳಿ ಇಡುವಂತಹ ಸಂಭಾಷಣೆಗಳು ಜನರನ್ನು ಹಿಡಿದಿಡುವ ತಂತ್ರಗಾರಿಕೆಯಾಗಿ ಈ ನಾಟಕದಲ್ಲಿ ಯಶಸ್ವಿಯಾಗಿವೆಯಾದರೂ ಕಾದಂಬರಿಯ ಅಂತಃಸತ್ವವನ್ನು, ದಬ್ಬಾಳಿಕೆಗೊಳಗಾದವರ ದಾರುಣತೆಯನ್ನು ಕಟ್ಟಿಕೊಡುವಲ್ಲಿ ವಿಫಲವಾಗಿವೆ. ಆರಂಭದಿಂದಲೂ ಹುಟ್ಟಿಸಲಾದ ನಗುವಿನ ಅಲೆಗಳಲ್ಲಿ ಹೃದಯವಿದ್ರಾವಕ ದೃಶ್ಯಗಳು ಹುಟ್ಟಿಸಬಹುದಾದ ಆರ್ಧತೆ ಅದಃಪತನಗೊಂಡಿದೆ. ಉದಾಹರಣೆಗೆ, ತಂದೆ ತಾಯಿಯರ ಹೆಣದ ಮೇಲೆ ಮಗ ಗೋಳಾಡಿ ಅಳುತ್ತಿದ್ದರೆ ಜನ ಬಿದ್ದು ಬಿದ್ದು ನಗುತ್ತಿದ್ದರು. ದಲಿತನೊಬ್ಬನನ್ನು ಕಂಬಕ್ಕೆ ಕಟ್ಟಿ ಹೊಡೆಯುತ್ತಿದ್ದರೆ ಪ್ರೇಕ್ಷಕರ ಕೇಕೆ ನಗು ತಾರಕಕ್ಕೇರಿತ್ತು. ಸುಬ್ಬಣ್ಣ ಹೆಗಡೆ ನೊಂದುಕೊಳ್ಳುವಾಗ, ಕಾವೇರಿ ಮೇಲೆ ಅತ್ಯಾಚಾರ ನಡೆಯುವಾಗ.. ಹೀಗೆ ಹಲವಾರು ಮನಕಲಕುವ ದೃಶ್ಯಗಳು ಪ್ರೇಕ್ಷಕರಲ್ಲಿ ಕರುಣಾ ರಸವನ್ನು ಸ್ಪುರಿಸುವ ಬದಲಾಗಿ ಹಾಸ್ಯರಸವನ್ನು ನೂರ್ಮಡಿಗೊಳಿಸಿದ್ದು ಈ ನಾಟಕದ ನಕಾರಾತ್ಮಕ ಅಂಶವಾಗಿದೆ. ಹಾಸ್ಯದ ಹೊಳೆಯಲ್ಲಿ ನಾಟಕದ ಗಾಂಭಿರ್ಯತೆ ಕೊಚ್ಚಿಹೋಗಿದೆ. ಕಾದಂಬರಿಯ ಆಶಯ ಹೋಗಲಿ ಬಿಡಿ, ನಾಟಕದ ಆಶಯಕ್ಕೂ ಇದು ಮಾರಕವಾಗಿದೆ. ಹಾಗೆಯೇ ಮನರಂಜನೆಯೇ ಸ್ಥಾಯಿಭಾವವಾಗಿ ವಿಜ್ರಂಭಿಸಿದರೂ ನಾಟಕ ತನ್ನ ಟೆಂಪೋವನ್ನು ಕಳೆದುಕೊಳ್ಳುತ್ತದೆ ಎನ್ನುವುದಕ್ಕೆ ಈ ನಾಟಕವೇ ಸಾಕ್ಷೀಭೂತವಾಗಿದೆ.
ಆರಂಭದಲ್ಲಿ ಅದ್ಬುತ ರೇಂಜ್ನಲ್ಲಿ ಟೇಕ್ಆಪ್ ಆದ ನಾಟಕ ಸಮಯ ಕಳೆದಂತೆ ಆ ತೀವ್ರತೆಯನ್ನು ಕಳೆದುಕೊಳ್ಳತೊಡಗುತ್ತದೆ. ಮೊದಲನೇ ರಂಗಸ್ಥಳದಲ್ಲಿ ನಕ್ಕು ಸುಸ್ತಾದ ಪ್ರೇಕ್ಷಕ ಎರಡನೇ ರಂಗಸ್ಥಳಕ್ಕೆ ಬರುವ ಹೊತ್ತಿಗೆ ಒಂದಿಷ್ಟು ಮೆತ್ತಗಾಗುತ್ತಾನೆ. ೩ನೇ ರಂಗಸ್ಥಳಕ್ಕೆ ಬಂದಾಗಂತೂ ನಾಟಕ ಅನಗತ್ಯವಾಗಿ ಎಳೆತಗೊಂಡು ನೋಡುಗರ ಆಸಕ್ತಿ ಕ್ಷೀಣಿಸುತ್ತದೆ. ಕೊನೆಯ ರಂಗಸ್ಥಳಕ್ಕೆ ಬಂದಾಗ ನಾಟಕ ಪೂರ್ಣವಾಗಿ ಟೆಂಪೋ ಕಳೆದುಕೊಳ್ಳುತ್ತದೆ. ಇದಕ್ಕೆ ಹಾಸ್ಯರಸದ ಏಕತಾನತೆ, ಸುದೀರ್ಘ ಕಾಲಾವಧಿ, ಕಾಡುತ್ತಿರುವ ಆಕಳಿಕೆ ನಿದ್ದೆ, ರಂಗಸ್ಥಳದ ಆಸನಗಳ ಅವ್ಯವಸ್ಥೆ ಹಾಗೂ
ಅನಗತ್ಯವಾಗಿ ಕಥೆ ಎಳೆದಂತಾಗುವಿಕೆಗಳು ಕಾರಣವಾಗಿವೆ. ಇವೆಲ್ಲದರ ನಡುವೆಯೂ ನಟರ ವಿಶಿಷ್ಟವಾದ ಆಂಗಿಕಾಭಿನಯ, ಕಚಗುಳಿ ಇಟ್ಟು ಮುದನೀಡುವ ವಾಚಿಕಾಭಿನಯ, ಮಲೆನಾಡಿನ ವಿಶೇಷ ಶೈಲಿಯ ಆಹಾರ್ಯಾಭಿನಯಗಳು ಪ್ರೇಕ್ಷಕರನ್ನು ಸಂಪೂರ್ಣ ನಿದ್ರೆಗೆ ಜಾರದಂತೆ ತಡೆಯುವಲ್ಲಿ ಸಫಲವಾಗಿವೆ. ಆಗಾಗ ಬರುವ ಸ್ವಾಮಿಗೋಳು.... ರೀತಿಯ ಹಾಡು... ಕುಣಿತಗಳು ನಿದ್ದೆಗಡಲು ಸೇರಬಯಸುವ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿ ನಿದ್ದೆ ಬಾರದಂತೆ ಎಚ್ಚರಿಸಿ ನಾಟಕ ಬೋರಾಗದಂತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಇಡೀ ನಾಟಕದಲ್ಲಿ ಗಮನ ಸೆಳೆದ ಪ್ರಮುಖ ಪಾತ್ರ ಹುಲಿಯಾ ಎನ್ನುವ ಕಪ್ಪು ನಾಯಿ. ನಾಯಿ ಮತ್ತು ಮನುಷ್ಯ ಸಂಬಂಧಗಳ ಪರಾಕಾಷ್ಟೆ ಇಲ್ಲಿದೆ. ತನ್ನ ಒಡೆಯ ಗುತ್ತಿಯನ್ನು ಕಾಪಾಡಲು ಹುಲಿಯ ಜೊತೆಗೆ ಹೋರಾಡಿ ಒಂದು ಕಣ್ಣನ್ನು ನಾಯಿ ಕಳೆದುಕೊಂಡಾಗ ಗುತ್ತಿ ಗೋಳಾಡುವ ರೀತಿ ನೋಡುಗರಲ್ಲಿ ವೇದನೆಯನ್ನುಂಟುಮಾಡಿದರೆ, ಕೊನೆಗೆ ಕ್ಲೈಮಾಕ್ಸನಲ್ಲಿ ನಾಯಿಯನ್ನು ಬಿಟ್ಟು ಗುತ್ತಿ ತೆಪ್ಪ ಹತ್ತಬೇಕಾದಾಗ ಒಡೆಯನ ಅಗಲಿಕೆ ಸಹಿಸದ ಹುಲಿಯಾ ನಾಯಿ ನದಿಗೆ ಹಾರಿ ಈಜಲಾಗದೇ ಪ್ರಾಣ ಬಿಡುತ್ತದೆ. ಆ ನಂತರ ಗುತ್ತಿಯ ಗೋಳಾಟ ಕಂಡು ಇಡೀ ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ಪ್ರೇಕ್ಷಕರ ಕಣ್ಣುಗಳು ಹನಿಗೂಡುತ್ತವೆ. ನಾಟಕದಾದ್ಯಂತ ನಿರಂತರ ೮ ಗಂಟೆಗಳ ಕಾಲ ರಂಜನೆಯ ಮೂಡಲ್ಲಿದ್ದ ಜನತೆ ಕೊಟ್ಟಕೊನೆಗೆ ಹುಲಿಯನ ಸಾವು ಮತ್ತು ಗುತ್ತಿಯ ನೋವಿಗೆ ದ್ವನಿಯಾಗಿ ಕಂಬನಿತುಂಬಿದ ಕಣ್ಣುಗಳಿಂದ ಮನೆಗೆ ತೆರಳುತ್ತಾರೆ. ಮನುಷ್ಯ ಪಾತ್ರಗಳು ಸತ್ತರೂ, ಬಡವರ ನೆತ್ತರು ಹರಿದರೂ, ಕಣ್ಣಮುಂದೆಯೇ ಅತ್ಯಾಚಾರ ನಡೆದರೂ ಕನಿಕರ ಪಡದ ಪ್ರೇಕ್ಷಕರನ್ನು ಕೊನೆಗೂ ಕಣ್ಣೀರಾಗಿಸಿದ್ದು ಒಂದು ನಾಯಿಯ ಸಾವು ಎಂಬುದು ವಿಪರ್ಯಾಸಕ್ಕಿಂತಲೂ ಆ ಪಾತ್ರ ಸೃಷ್ಟಿಗೆ ಸಂದ ನ್ಯಾಯವಾಗಿದೆ.
‘ಮಲೆಗಳಲಿ ಮದುಮಗಳು’ ನಾಟಕದಲ್ಲಿ ಚದುರಿದ ಚಿತ್ರಗಳಂತಿರುವ ದೃಶ್ಯಗಳನ್ನು ನಿರೂಪಿಸಿರುವ ರೀತಿ ತುಂಬಾ ವಿಶಿಷ್ಟವಾಗಿದೆ. ಹೂಗಳನ್ನು ಕಟ್ಟಿ ಚಂದದ ಹಾರ ಮಾಡುವಲ್ಲಿ ದಾರ ವಹಿಸುವ ಮಹತ್ವದ ಪಾತ್ರದಂತೆ ಈ ನಾಟಕದಲ್ಲಿ ಒಂದು ಉಂಗುರ ಮಾಡುತ್ತದೆ. ಈ ಉಂಗುರ ಅನ್ನೋದು ಪ್ರೀತಿಯ ಸಂಕೇತ. ಆದರೆ ಅದು ವಿನಾಶದ ಸಂಕೇತವೂ ಆಗುತ್ತಾ? ಹೊಸ ಕಥೆಯ ಸೃಷ್ಟಿಗೂ ಕಾರಣವಾಗುತ್ತಾ?
ದುಷ್ಯಂತ ಕೊಟ್ಟ ನೆನಪಿನ ಉಂಗುರ ಶಕುಂತಲೆಯ ಬದುಕನ್ನೇ ಹಾಳುಮಾಡಿ ಹೊಸ ಕಥೆಯ ಹುಟ್ಟಿಗೆ ಕಾರಣವಾಯ್ತು. ಅದೇ ರೀತಿ ಈ “ಮಲೆಗಳಲಿ ಮದುಮಗಳು” ನಾಟಕದಲ್ಲಿ ಉಂಗುರವೇ ಪ್ರಧಾನ ಸಂವಹನ ಸಂಕೇತವಾಗಿ ಒಡಮೂಡಿ ವಿನಾಶಕ್ಕೂ ಹೊಸ ಹುಟ್ಟಿಗೂ ಕಾರಣವಾಗಿದೆ. ಅಲೆಮಾರಿ ಜೋಗಯ್ಯಗಳು, ಸುಡುಗಾಡು ಸಿದ್ದರು, ಬುಡುಬುಡುಕೆಯವರು, ಹೆಳವರು... ಹೀಗೆ ಕೈಯಿಂದ ಕೈಯಿಗೆ ಬದಲಾಗುವ ಉಂಗುರು ಕುವೆಂಪುರವರ ಕಾದಂಬರಿಯ ವಿವಿಧ ಆಯಾಮಗಳನ್ನ ಬಿಡಿಬಿಡಿಸಿ ಪ್ರೇಕ್ಷಕರ ಮುಂದೆ ಇಡುತ್ತದೆ. ಅದಕ್ಕೆ ಈ ಅಲೆಮಾರಿ ಸಾಂಸ್ಕೃತಿಕ ಸಂವಹನಕಾರರು ಬಾಯಾಗುತ್ತಾರೆ. ಕುವೆಂಪುರವರ “ಮಲೆಗಳಲಿ ಮದುಮಗಳು” ದೃಶ್ಯಗಳಾಗಿ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ.
ಇಡೀ ಕಾದಂಬರಿಯನ್ನು ನೋಡುವ ಕಣ್ಣಾಗಿ, ಹೇಳುವ ಬಾಯಾಗಿ, ತಲೆಮಾರುಗಳಿಂದ ತಲೆಮಾರಿಗೆ ಕಥಾನಕವೊಂದನ್ನು ದಾಟಿಸುವ ಮಾಧ್ಯಮವಾಗಿ ಅಲೆಮಾರಿ ಸಮುದಾಯವನ್ನು ಈ ನಾಟಕದಲ್ಲಿ ಪ್ರಮುಖವಾಗಿ ನಿರೂಪಕರಾಗಿ ಬಳಸಿದ್ದು ಅರ್ಥಪೂರ್ಣ ವಾಗಿದೆ.
ಜನಪದ ಕಥೆ ಕಾವ್ಯಗಳ ಸಂದೇಶವಾಹಕ ರಾಗಿರುವ ಅಲೆಮಾರಿಗಳು ನಿಜವಾಗಿಯೂ ನಮ್ಮ ಸಾಂಸ್ಕೃತಿಕ ರೂವಾರಿಗಳು. ಕಥೆಯನ್ನು ಕಟ್ಟಿದವರು, ಕಟ್ಟಿದ ಕಥೆಯನ್ನು ಬೆಳೆಸಿದವರು, ಉಳಿಸಿದವರು, ಪ್ರಚಾರ ಪಡಿಸಿದವರು. ಅನೇಕ ನಾಟಕಗಳಲ್ಲಿ ನಿರೂಪಕರಾಗಿ ಈ ಅಲೆಮಾರಿಗಳನ್ನು ಸಾಂಕೇತಿಕವಾಗಿ ಇಲ್ಲವೇ ಕಥೆಯ ದೃಶ್ಯಗಳಿಗೆ ಲಿಂಕ್ ಒದಗಿಸುವ ಕಥಾ ತಂತ್ರದ ಭಾಗವಾಗಿ ಹಲವಾರು ನಿರ್ದೇಶಕರು ಬಳಸಿದ್ದಾರೆ. ಆದರೆ ಇಷ್ಟೊಂದು ವ್ಯಾಪಕವಾಗಿ, ಕರ್ನಾಟಕದಲ್ಲಿರುವ ಬಹುತೇಕ ಅಲೆಮಾರಿ ಸಾಂಸ್ಕೃತಿಕ ಸಮುದಾಯವನ್ನು ಕಥೆ ಹೇಳುವ ಮಾಧ್ಯಮವಾಗಿ ಬಳಸಿದ್ದು ಬಹುಷಃ ಇದೇ ಮೊದಲನೆಯದು. ಮತ್ತು ೮ ಗಂಟೆಗಳ ಸುದೀರ್ಘ ನಾಟಕದ ನಿರೂಪನೆಗೆ ಇದು ಅತ್ಯಗತ್ಯವಾಗಿತ್ತು ಹಾಗೂ ಒಂದೇ ಸಮುದಾಯದವರು ನಿರೂಪಕರಾಗಿದ್ದರೆ ಅದು ಏಕತಾನತೆಗೆ ಕಾರಣವಾಗಿ ನಾಟಕ ಬೋರ್ ಹೊಡಿಸುವ ಸಾಧ್ಯತೆಯೇ ಹೆಚ್ಚಿತ್ತು. ಒಟ್ಟಾರೆಯಾಗಿ ಸಾಮಾಜಿಕ ಕಥೆಯನ್ನು ಜನಪದಗೊಳಿಸುವ ರೀತಿ ನಾಟಕದ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ.
ಈ ಉಂಗುರ “ಮಲೆಗಳಲಿ ಮದುಮಗಳು” ನಾಟಕದ ಕಥಾ ಪ್ರಸಾರದಲ್ಲಿ ಪ್ರಮುಖವಾದಂತೆ ಕೆಲವೊಂದು ಗೊಂದಲಗಳನ್ನು ಸೃಷ್ಟಿಸಿದ್ದು ಈ ನಾಟಕದ ಸೃಷ್ಟಿಕರ್ತರ ಗಮನಕ್ಕೆ ಬಂದಂತಿಲ್ಲ. ಬಹುಷಃ ಡಾ. ಕೆ.ವೈ.ನಾರಾಯಣಸ್ವಾಮಿಯವರು ರಂಗರೂಪ ಬರೆದಿರುವುದರಿಂದ ಗೊಂದಲಗಳಿಲ್ಲದಿದ್ದರೆ ಹೇಗೆ? ಗೊಂದಲಗಳನ್ನು ಸೃಷ್ಟಿಸಿ ಪ್ರೇಕ್ಷಕರನ್ನು ಕಕ್ಕಾಬಿಕ್ಕಿಯನ್ನಾಗಿಸುವುದರಲ್ಲಿ ಅವರು ಸಿದ್ದಹಸ್ತರು. ಅವರ ಬಹುತೇಕ ಎಲ್ಲಾ ನಾಟಕಗಳಲ್ಲೂ ಪಾಮರರಿಗೆ ಅರ್ಥವಾಗದ ಪಾಂಡಿತ್ಯದ ನಿಗೂಢತೆಗಳನ್ನು ಕಾಣಬಹುದಾಗಿದೆ. “ಮಲೆಗಳಲಿ ಮದುಮಗಳು” ನಾಟಕದಲ್ಲಿ ಕೂಡಾ ಈ ಚಿಕ್ಕಿನುಂಗುರ ಗೊಂದಲ ಸೃಷ್ಟಿಸಿ ಪಾಮರರಾದ ಪ್ರೇಕ್ಷಕರ ತಲೆಯಲ್ಲಿ ಸಂದೇಹಗಳನ್ನುಂಟು ಮಾಡಿದೆ. ಆದರೆ ಬಸವಲಿಂಗಯ್ಯನವರ
ದೃಶ್ಯ ವೈಭವದ ನಿರ್ದೇಶನ ಹಾಗೆ ಹುಟ್ಟಿಕೊಳ್ಳಬಹುದಾಗಿದ್ದ ಸಂದೇಹಗಳನ್ನು ಮರೆಮಾಚಿ ಭ್ರಮಾತ್ಮಕ ದೃಶ್ಯಲೋಕವನ್ನು ಸೃಷ್ಟಿಸಿ ಬಿಟ್ಟಿದೆ.
ಈ ನಾಟಕದಲ್ಲಿ ದೇವಯ್ಯ ತಾನು ಕಾಮಿಸಿದ ಶೆಟ್ಟರ ಹುಡುಗಿ ಕಾವೇರಿಗೆ ಉಂಗುರವೊಂದನ್ನು ಕೊಡುತ್ತಾನೆ. ಅದು ಯಾವ ಮಾಯದಲ್ಲೋ ಆ ಉಂಗುರ ಆಕೆಯ ಮನೆಯ ಅಂಗಳದಲ್ಲಿ ಬಿದ್ದಿರುತ್ತದೆ. ಅದು ಆಕೆಗೂ ಗೊತ್ತಿಲ್ಲ, ಪ್ರೇಕ್ಷಕರಿಗೂ ಗೊತ್ತುಮಾಡಿಕೊಟ್ಟಿಲ್ಲ. ಆದರೆ ಅದ್ಯಾವ ಮಾಯದಿಂದ ಶೇರೇಗಾರನಿಗೆ ಅದು ಗೊತ್ತಾಗುತ್ತೋ ಆ ನಾರಾಯಣನೇ ಬಲ್ಲ. ಆ ಶೇರೇಗಾರ ರಾತ್ರಿ ಹೊತ್ತಲ್ಲಿ ಬಂದು ಕರೆಕ್ಟಾಗಿ ಆಕೆಯ ಮನೆಯ ಅಂಗಳದಲ್ಲಿ ಉಂಗುರು ಹುಡುಕಿ ತೆಗೆದುಕೊಂಡು ಕಡ್ಡೀಸಾಬಿಗೆ ಮಾರುತ್ತಾನೆ. ಕಾವೇರಿ ಮೇಲೆ ಕಣ್ಣಿಟ್ಟಿದ್ದ ಶೇರೇಗಾರ ಆಕೆಯನ್ನು ಅನುಭೋಗಿಸಲು ಉಂಗುರವನ್ನು ಬಳಸಿಕೊಳ್ಳಲು ಪ್ಲಾನ್ ಮಾಡುತ್ತಾನೆ. ಕಾವೇರಿಯ ಟೀಶಾಪ್ನಲ್ಲಿ ಕೆಲಸಕ್ಕಿದ್ದ ಹುಡುಗನಿಗೆ ಅದ್ಯಾವ ಮಾಯದಲ್ಲಿ ಮಾಹಿತಿ ಸಿಗುತ್ತೋ ಗುರು ಬಸವಲಿಂಗನೇ ಬಲ್ಲ. “ಉಂಗುರ ಸಾಬಿ ಹತ್ತಿರ ಇದೆ. ಶೇರಾಗಾರನನ್ನು ಸರಿಮಾಡಿಕೊಂಡರೆ ಉಂಗುರ ವಾಪಸ್ ದೊರೆಯುತ್ತದೆ” ಎಂಬ ಮಾಹಿತಿಯನ್ನು ಆ ಹುಡುಗ ಕಾವೇರಿಗೆ ಮುಟ್ಟಿಸುತ್ತಾನೆ. ಬಹುಷಃ ಈ ಸಂದೇಶ ಮುಟ್ಟಿಸಲೆಂದೇ ಆ ಹುಡುಗನ ಪಾತ್ರ ಸೃಷ್ಟಿಸಿದಂತಿದೆ. ಆಮೇಲೆ ಉಂಗುರ ಕೊಂಡುಕೊಂಡಿದ್ದ ಸಾಬಿಯ ಹತ್ತಿರ ಉಂಗುರ ಪಡೆದುಕೊಳ್ಳುವುದನ್ನು ಬಿಟ್ಟು ಆ ಶೇರೇಗಾರ ಬೇರೆ ಸಾಬಿಗಳನ್ನು ಆ ಉಂಗುರ ತಂದು ಕೊಡಲು ಕೇಳಿಕೊಳ್ಳುತ್ತಾನೆ. ಉಂಗುರವನ್ನು ಮರಳಿ ಕೊಡಿಸುವುದಾಗಿ ಕಾವೇರಿಯನ್ನು ನಂಬಿಸಿದ ಶೇರೇಗಾರ ಉಪಾಯವಾಗಿ ಮಧ್ಯರಾತ್ರಿ ಅವಳನ್ನು ನಿರ್ಜನವಾದ ಮಿಷನರಿ ಶಾಲೆಗೆ ಕರೆದುಕೊಂಡು ಹೋಗಿ ಇನ್ನಿಬ್ಬರು ಸಾಬಿಗಳ ಜೊತೆ ಸೇರಿ ಕಾವೇರಿಯನ್ನು ಸಾಮೂಹಿಕ ಅತ್ಯಾಚಾರ ಮಾಡುತ್ತಾನೆ. ನಂತರ ಕಾವೇರಿ ಅವಮಾನ ತಾಳಲಾರದೆ ಭಾವಿಗೆ ಬಿದ್ದು ಸಾಯುತ್ತಾಳೆ.
ಅಲ್ಲಿವರೆಗೂ ಎಲ್ಲಿತ್ತೋ ಏನೋ ಆ ಉಂಗುರ ಕಾವೇರಿಯ ಶವದ ಬೆರಳಲ್ಲಿ ಪ್ರತ್ಯಕ್ಷವಾಗಿ ಬಿಡುತ್ತದೆ. ಕುರೂಪಿ ಕಿಟ್ಟಿಪ್ಪನನ್ನು ಮದುವೆ ಮಾಡಿಕೊಳ್ಳಲು ಹೇಳಿದ್ದಕ್ಕೆ ತನ್ನ ಮಗಳು ಸತ್ತಳು ಎಂದು ಗೋಳಾಡುತ್ತಿದ್ದ ಕಾವೇರಿಯ ತಾಯಿ ಅಂತವ್ವ ಆ ಉಂಗುರ ನೋಡಿದೊಡನೇ ಇದು ಸಾಬಿಯ ಕೈವಾಡ, ನನ್ನ ಮಗಳನ್ನು ಕೊಲೆ ಮಾಡಿದ್ದಾನೆಂದು ಅವಲತ್ತುಕೊಳ್ಳುತ್ತಾಳೆ. ಇಷ್ಟೆಲ್ಲಾ ನಡೆಯುವಾಗ ಆ ಕಡ್ಡಿಪುಡಿ ಸಾಬಿ ಅಲ್ಲೇ ಇರುತ್ತಾನೆ. ಅವನಿಗೂ ಆ ಉಂಗುರ ತನ್ನಲ್ಲಿದ್ದದ್ದೆಂದು ಯಾಕೆ ಗೊತ್ತಾಗಲಿಲ್ಲವೋ?
ಆತ ಅತ್ಯಾಚಾರದ ಸ್ಥಳದಲ್ಲಿ ಸಿಕ್ಕ ಲಾಟನ್
ತನ್ನದೆನ್ನುತ್ತಾನೆಯೇ ಹೊರತು ತನ್ನ ಬಳಿಯಿದ್ದ ಉಂಗುರು ಶವದ ಕೈಯಲ್ಲಿರೋದನ್ನ ಗುರುತಿಸುವಲ್ಲಿ ಜಾಣ ಕುರುಡನ್ನು ಪ್ರದರ್ಶಿಸುತ್ತಾನೆ. ಇಲ್ಲಿ ಕೆಲವು ಪ್ರಶ್ನೆಗಳು ಗೊಂದಲವಾಗಿ ಕಾಡುತ್ತವೆ. ಉಂಗುರವನ್ನು ಮಾರಿ ಹಣ ಪಡೆದ ಶೇರೇಕಾರ ನಂತರ ಅದನ್ನು ವಾಪಸ್ ಪಡೆಯಲು ಬೇರೆ ಸಾಬರನ್ನು ನಿಯಮಿಸಿದ್ದೇಕೆ? ಹೋಗಲಿ ಅತ್ಯಾಚಾರ ಮಾಡಿದ ನಂತರ ಇವರೇ ಆ ಬೆಲೆಬಾಳುವ ಉಂಗುರವನ್ನು ಕಾವೇರಿ ಬೆರಳಿಗೆ ತೊಡಿಸಿದರಾ? ಮೊದಲೇ ಕಾಸಿಗಾಗಿ ಏನನ್ನಾದರೂ ಮಾಡುವ ವ್ಯಾಪಾರಿ ಮನೋಭಾವದ ಆ ಸಾಬರು ಕಿಮ್ಮತ್ತಿನ ಉಂಗುರ ಸಿಕ್ಕರೆ ಬಿಡ್ತಾರೆಯೇ?
ಇಲ್ಲಿ ಇನ್ನೊಂದು ಮಜಾ ಇದೆ. ಕಾವೇರಿಯನ್ನು ಕಾಮಿಸಿದ ದೇವಯ್ಯನಿಗೆ ಉಂಗುರ ಕಳೆದ ವಿಷಯ ಗೊತ್ತೇ ಇರೋದಿಲ್ಲ, ಕಾವೇರಿ ಬೇರೆ ಯಾವ ಗುರುತರ ಆರೋಪಗಳನ್ನೂ ಮಾಡಿರೋದಿಲ್ಲ ಆದರೂ ಅಕಾರಣವಾಗಿ ಅವಳನ್ನು ದೂಷಿಸಿ ದೂರವಾಗುತ್ತಾನೆ. ಇನ್ನೊಂದು ಕಡೆ ಪೋಲೀಸರಿಗೆ ಅತ್ಯಾಚಾರದ ಸ್ಥಳದಲ್ಲಿ ಲಾಟೀನೊಂದು ಸಿಗುತ್ತದೆ. “ಅದು ತನ್ನದೆಂದೂ, ಶೇರೇಗಾರ ತೆಗೆದುಕೊಂಡು ಹೋಗಿದ್ದಾನೆಂದೂ” ಸಾಬಿ ಸಾಕ್ಷಿ ಹೇಳುತ್ತಾನೆ. ಆದರೆ ಪೋಲೀಸರು ಶೇರೇಗಾರನನ್ನು ಬಂಧಿಸುವುದನ್ನು ಬಿಟ್ಟು ಅತ್ಯಾಚಾರ ಮತ್ತು ಆತ್ಮಹತ್ಯೆ ಪ್ರಕರಣದಲ್ಲಿ ಎಲ್ಲೂ ಸಂಬಂದವಿಲ್ಲದ ಗುತ್ತಿಯನ್ನು ಬಂಧಿಸುತ್ತಾರೆ. ಯಾಕೆ? ನಂತರವೂ ಅತ್ಯಾಚಾರ ಮಾಡಿದ ಸಾಬಿಗಳನ್ನು ಬಂಧಿಸಿದ ಉಲ್ಲೇಖವೂ ಇಲ್ಲಾ, ಅಲ್ಲಿಯೇ ರಾಜಾರೋಷವಾಗಿ ಓಡಾಡಿಕೊಂಡಿದ್ದ ಶೇರೆಗಾರನ ಸಹವಾಸಕ್ಕೆ ಪೋಲೀಸರಾಗಲೀ, ಊರವರಾಗಲೀ ಹೋಗುವುದೂ ಇಲ್ಲಾ. ರೇಪ್ ಕೇಸಲ್ಲಿ ಯಾರಿಗೂ ಶಿಕ್ಷೆಯಾಗುವುದೂ ಇಲ್ಲಾ. ಕಾವೇರಿಗೆ ನ್ಯಾಯ ಸಿಗುವುದೂ ಇಲ್ಲಾ. ಕಥೆ ಹೇಳಿಸುವ ಉಂಗುರು ಯಾವ ಕಥೆ-ಉಪಕಥೆಯನ್ನೂ ಪೂರ್ಣ ಮಾಡುವುದಿಲ್ಲ. ಅದಕ್ಕೆ ಈ ನಾಟಕದ ಉಪಶೀರ್ಷಿಕೆ “ಇಲ್ಲಿ ಯಾರೂ ಮುಖ್ಯರೂ ಅಲ್ಲಾ, ಅಮುಖ್ಯರೂ ಅಲ್ಲಾ” ಅದಕ್ಕೆ ಪೂರಕವಾಗಿ ಹೇಳುವುದಾದರೆ “ಇಲ್ಲಿ ಯಾವುದೂ ಪೂರ್ಣವೂ ಅಲ್ಲಾ ಅಪೂರ್ಣವೇ ಎಲ್ಲಾ”.
ಮೊದಲೇ ಕಟ್ ಆಂಡ್ ಪೇಸ್ಟ್ ನಾಟಕಗಳನ್ನು ಮಾಡಿಸುವುದರಲ್ಲಿ ಸುಪ್ರಸಿದ್ದರಾದ ಬಸವಲಿಂಗಯ್ಯನವರು “ಮಲೆಗಳಲಿ ಮದುಮಗಳು” ನಾಟಕದಲ್ಲೂ ಅಪೂರ್ಣ ಘಟನೆಗಳನ್ನು ಕಟ್ ಮತ್ತು ಪೇಸ್ಟ್ ಮಾಡುತ್ತಲೇ ಸಾಗುತ್ತಾರೆ. ಕೆಲವೊಮ್ಮೆ ಲಿಂಕ್ಗಳೇ ಇರೋದಿಲ್ಲ. ಇನ್ನು ಕೆಲವೊಮ್ಮೆ ದೃಶ್ಯಗಳು ಕಥೆಗೆ ಪೂರಕವಾಗಿಯೂ ಇರೋದಿಲ್ಲ. ಆದರೆ ಈ ನಾಟಕದಲ್ಲಿ ತಾತ್ವಿಕ ಸಾಧ್ಯತೆಗಳತ್ತ ಗಮನಹರಿಸದೇ ಇದ್ದರೂ ತಾಂತ್ರಿಕ ಸಾಧ್ಯತೆಗಳನ್ನು ಸೊಗಸಾಗಿ ಬಳಸಿಕೊಂಡು ಕೊಲ್ಯಾಜ್ ಮಾದರಿಯಲ್ಲಿ ಮಲೆನಾಡಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಲೋಕವೊಂದನ್ನು ಕಟ್ಟಿಕೊಡುವಲ್ಲಿ ಬಸವಲಿಂಗಯ್ಯನವರು ಯಶಸ್ವಿಯಾಗಿದ್ದಾರೆ.
ಪರಿಣಾಮಕಾರಿಯಲ್ಲದ ರಂಗಸಂಗೀತ : ಇಡೀ ನಾಟಕವನ್ನು ಹಿಡಿದಿಡುವಲ್ಲಿ ಹಾಡು ಮತ್ತು ಸಂಗೀತಗಳ ಪಾತ್ರ ಬಹುಮುಖ್ಯ. ಒಂದಲ್ಲಾ ಎರಡಲ್ಲಾ ಒಟ್ಟಾರೆಯಾಗಿ ೩೬ ಹಾಡುಗಳನ್ನು ಸಂಯೋಜಿಸಲಾಗಿದೆ. ಕೆಲವು ದೃಶ್ಯದ ಜೊತೆಗೆ ಮಿಳಿತವಾಗಿದೆ. ಇನ್ನು ಕೆಲವು ಎಳೆತವಾಗಿವೆ. ಕೆಲವನ್ನು ಅನಗತ್ಯವಾಗಿ ತುರುಕಿದಂತಿದ್ದರೆ ಇನ್ನು ಕೆಲವು ಅಗತ್ಯ ಮೂಡ್ ಸೃಷ್ಟಿಗೆ ಪೂರಕವಾಗಿವೆ. ಕೆಲವು ಹಾಡುಗಳು ಕಾವ್ಯಮಯವಾಗಿದ್ದರೆ ಇನ್ನು ಹಲವು ಹಾಡುಗಳು ಗಪದ್ಯಮಯವಾಗಿವೆ. ಡಾ. ಕೆ.ವೈ.ಎನ್ ರವರು ರಚಿಸಿದ ಹಾಡುಗಳ ಬದಲು ಕುವೆಂಪುರವರ ಕವಿತೆಯ ಸಾಲುಗಳನ್ನೇ ಸಂದರ್ಭಕ್ಕೆ ತಕ್ಕಂತೆ ಬಳಸಿದ್ದರೆ ನಾಟಕ ದೃಶ್ಯಕಾವ್ಯವಾಗಿ ಒಡಮೂಡಬಹುದಾಗಿತ್ತು. ರಂಗಸಂಗೀತಕ್ಕೆ ತನ್ನದೇ ಆದ ಸೊಗಸಿದೆ. ವೃತ್ತಿ ಕಂಪನಿ ನಾಟಕಗಳಲ್ಲಿ ಹಾಡಿನ ಸಾಹಿತ್ಯ ಅರ್ಥವಾಗದಿದ್ದರೂ ಆ ರಂಗಸಂಗೀತದ ಲಯಕ್ಕೆ ಮಾರುಹೋದ ಜನತೆ ಕಂದ ಸೀಸ ಪದ್ಯಗಳಿಗೂ ಒನ್ಸ್ಮೋರ ಎನ್ನುತ್ತಿದ್ದರು. ರಂಗಸಂಗೀತ ಎಂದರೇನು ಎಂಬುದನ್ನ ಬಿ.ವಿ.ಕಾರಂತರು ತೋರಿಸಿಕೊಟ್ಟರು. ಆದರೆ ಸಿನೆಮಾ ಸಂಗೀತ ಮಾದರಿಯ ರಾಗಸಂಯೋಜನೆಯನ್ನು ಮಾಡಿದ ಹಂಸಲೇಖರವರಿಗೆ ರಂಗಸಂಗೀತದ ಗಂಧಗಾಳಿ ಗೊತ್ತಿಲ್ಲವೆಂಬುದು ಈ ನಾಟಕದ ಹಾಡುಗಳನ್ನು ಕೇಳಿದವರಿಗೆ ಅನ್ನಿಸದೇ ಇರದು. ಇದರಿಂದಾಗಿ ಯಾವುದೇ ಹಾಡುಗಳು ಕೇಳುಗರ ಮನಸ್ಸನ್ನು ತಟ್ಟಲೂ ಇಲ್ಲ, ಹೃದಯವನ್ನು ಮುಟ್ಟಲೂ ಇಲ್ಲ. ಮನೋಭೂಮಿಕೆಯಲ್ಲಿ ಮೂಡನ್ನು ಸೃಷ್ಟಿಸಲೂ ಇಲ್ಲಾ. ಕೊನೆಗೆ ಯಾವ ಹಾಡೂ ನೆನಪಿನಲ್ಲಿ ಉಳಿಯಲೂ ಇಲ್ಲಾ. ಕೇವಲ ಕಥೆಯ ನಿರೂಪಣೆಯ ಸಾಧನವಾಗಿ ಮತ್ತು ಕೆಲವೊಮ್ಮೆ ಪ್ರೇಕ್ಷಕರನ್ನು ಉದ್ರೇಕಿಸಲು ಹಾಡುಗಳು ಉಪಯೋಗಕ್ಕೆ ಬಂದವು. ಈ ಹಾಡು ಸಂಗೀತಕ್ಕಿಂತಲೂ ಅದಕ್ಕೆ ನಟರು ಅಭಿನಯಿಸಿದ ರೀತಿ ನಿಜಕ್ಕೂ ಅದ್ಬುತವೆನಿಸಿತು. ಈಗಲೂ ಬಿ.ವಿ.ಕಾರಂತರ ರಂಗಸಂಗೀತ ಕೇಳಿದಾಗ ದೊರಕುವ ಅನುಭೂತಿ ಈ ಚಿತ್ರಬ್ರಹ್ಮ ಹಂಸಲೇಖರ ಸಂಗೀತ ಸಂಯೋಜನೆಯಲ್ಲಿ ದೊರೆಯಲಿಲ್ಲ. ಲೈವ್ ಹಾಡು-ಸಂಗೀತಕ್ಕಿಂತಲೂ ದ್ವನಿಮುದ್ರಿತ ಸಂಗೀತ ಹಾಡುಗಳೇ ಹೆಚ್ಚಿಗಿದ್ದು ನಾಟಕದ ನಡೆಗೆ, ಪಾತ್ರಗಳ ಅಭಿನಯಕ್ಕೆ ಸಿಂಕ್ ಆಗುವಲ್ಲಿ ಸಮಸ್ಯೆ ಉಂಟಾಯಿತು. ಹಿನ್ನೆಲೆ ದ್ವನಿಗಳೂ ಆಭಾಸಕಾರಿ ಎನ್ನಿಸಿದವು. ದ್ವನಿಮುದ್ರಿತ ನಾಯಿ ಬೊಗಳಿದ ಸದ್ದು ಒಂದು ದಿಕ್ಕಿಗೆ ಕೇಳಿಸಿದರೆ ಇನ್ನೊಂದು ದಿಕ್ಕಿನಿಂದ ನಾಯಿ ಬರುತ್ತಿತ್ತು. ಮಲೆನಾಡಿನ ಮಳೆ ಗಾಳಿಯ ಸದ್ದನ್ನು, ರಾತ್ರಿ ಜೀರುಂಡೆಗಳ ಸದ್ದನ್ನು ಸಮರ್ಪಕವಾಗಿ ನಾಟಕದಲ್ಲಿ ಬಳಸಿದ್ದರೆ ಮಲೆನಾಡನ್ನು ಇನ್ನೂ ಪರಿಣಾಮಕಾರಿಯಾಗಿ ಕಟ್ಟಿಕೊಡಬಹುದಾಗಿತ್ತು.
ಮಲೆನಾಡಿನ ಸೊಗಸು ಕಟ್ಟಿಕೊಟ್ಟ ರಂಗಸಜ್ಜಿಕೆ : ೮ ಗಂಟೆಗಳ ಈ ಸುದೀರ್ಘ ನಾಟಕ ಕರೆಯಂಗಳ, ಬಯಲುರಂಗ, ಬಿದಿರುಮೇಳೆರಂಗ ಹಾಗೂ ಹೊಂಗೇರಂಗ ಎನ್ನುವ ಒಟ್ಟು ೪ ರಂಗಸ್ಥಳಗಳಲ್ಲಿ ಪ್ರದರ್ಶನಗೊಳ್ಳುತ್ತದೆ. ಕೆರೆಯಂಗಳದಲ್ಲಿ ಮಲೆನಾಡಿನ ಪರಿಸರವನ್ನು ಮರುಸ್ಥಾಪಿಸಲು ಶಶಿಧರ್ ಅಡಪ ತುಂಬಾ ಪರಿಶ್ರಮ ಪಟ್ಟಿದ್ದಾರೆ. ಈ ಸೆಟ್ ಇಡೀ ನಾಟಕದ ಪ್ರಮುಖ ಆಕರ್ಷಣೆಯಾಗಿತ್ತು. ದಿಬ್ಬದ ಮೇಲೆ ಸುಬ್ಬಣ್ಣ ಹೆಗ್ಗಡೆಯವರ ಮನೆ, ತಗ್ಗು ದಿಣ್ಣೆ, ಕೆರೆಯಂಗಳ, ನೇರವಾದ ಮತ್ತು ಇಳಿಜಾರಿನ ಮರದ ಸೇತುವೆಗಳು. ಅಲ್ಲಲ್ಲಿ ಅಡಿಕೆ ಮರಗಳು, ಬಿದಿರ ಜೋಪಡಿ, ಅಟ್ಟಳಿಕೆ, ವಿವಿಧ ಸ್ಥರಗಳಲ್ಲಿ ನೆಲದ ಸಿದ್ದತೆ.... ಹೀಗೆ ಮಲೆನಾಡಿನ ಪರಿಸರ ಬೆಂಗಳೂರಿಗರಲ್ಲಿ ವಿಸ್ಮಯ ಹುಟ್ಟಿಸಿತು. ಬಹುಷಃ ಇಷ್ಟೊಂದು ವಿಶಾಲವಾದ ಬಯಲು ರಂಗಸಜ್ಜಿಕೆಯನ್ನು ರಂಗಪ್ರೇಕ್ಷಕರು ನೋಡಿಯೇ ಇರಲಿಲ್ಲ. ಅಷ್ಟೊಂದು ದೊಡ್ಡದಾದ ಬಯಲುರಂಗದಂಗಳವನ್ನು ನಟರು ಬಳಸಿಕೊಂಡ ರೀತಿಯೂ ಬಹಳ ವಿಸ್ಮಯಕಾರಿ. ಎಲ್ಲವನ್ನೂ ದೊಡ್ಡದಾಗಿ ತೋರಿಸಬಯಸುವ ನಿರ್ದೇಶಕರು ಇಲ್ಲಿ ಚಿಕ್ಕಕ್ರಿಮಿಗಳಾದ ಜಿಗಣಿ ಹಾಗೂ ಸಗಣಿ ಹುಳುಗಳನ್ನು ಭಾರೀ ಗಾತ್ರದಲ್ಲಿ ಸೃಷ್ಟಿಸಿ ತೋರಿಸಿದ್ದು ಸೋಜಿಗದ ಸಂಗತಿ. ಬಯಲುರಂಗಸ್ಥಳದಲ್ಲಿ ಹಾಕಿದ ರಂಗಸಜ್ಜಿಕೆ ಇನ್ನೊಂದು ಬಗೆಯ ಲೋಕವನ್ನೇ ತೆರೆದಿರಿಸಿತ್ತು. ಹೊರಾಂಗಣದಿಂದ ಒಳಾಂಗಣಕ್ಕೆ ಬಂದಂತಹ ಅನುಭವ. ಹುಲಿಕಲ್ಲು ಗುಡ್ಡ. ವಿವೇಕಾನಂದರ ಭಾಷನದ ವೇದಿಕೆ, ಕಟ್ಟಿಗೆಯ ಅಟ್ಟನಿಗೆ, ನಾಟಕಕ್ಕಿಂತ ನಾಟಕದ ರಂಗಸಜ್ಜಿಕೆಯೇ ಮಜಬೂತಾಗಿತ್ತು. ಆದರೆ ಪ್ರೇಕ್ಷಾಗೃಹದ ಆಸನಗಳೇ ಅವ್ಯವಸ್ಥೆಯ ಆಗರವಾಗಿತ್ತು.
ನಾಲ್ಕು ಎಪಿಸೋಡುಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಒಂದರ ನಂತರ ಒಂದರಂತೆ ರಾತ್ರಿ ಪೂರಾ ತೋರಿಸಿದರೆ ಏನಾಗುತ್ತದೆ? ಪ್ರೇಕ್ಷಕರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ, ಒಂದು ಆಸನದಿಂದ ಇನ್ನೊಂದು ಆಸನಕ್ಕೆ ಓಡಾಡುವುದನ್ನು ನೋಡುವುದೇ ಒಂದು ರೀತಿಯಲ್ಲಿ ನಾಟಕೀಯವಾಗಿರುತ್ತದೆ. ಒಂದು ರಂಗಸ್ಥಳದಲ್ಲಿ ಹೇಗೋ ಅನುಕೂಲಕರವಾದ ಸ್ಥಳ ಗಿಟ್ಟಿಸಿಕೊಂಡು ಬೆನ್ನಿಗಾಸರೆಇಲ್ಲದೇ ಬೆನ್ನುನೋವಿನ ಹಿತಾನುಭವವನ್ನು ಸಹಿಸಿಕೊಂಡು ನಾಟಕವನ್ನು ಒಂದು ಕಂತು ನೋಡಿದ ನಂತರ ಮತ್ತೆ ಇನ್ನೊಂದು ವೇದಿಕೆಗೆ ಸೀಟು ಹಿಡಿಯುವ ದಾವಂತಕ್ಕೆ ಓಡಬೇಕು. ಕೆಲವರು ಸಿಕ್ಕ ಖುರ್ಚಿಗಳನ್ನೇ ಎತ್ತಿಕೊಂಡು ಒಂದೆರಡು ಫರ್ಲಾಂಗ್ ಓಡಿಹೋಗಿ ಸ್ಥಳ ಹುಡುಕಿ ಕೂಡಬೇಕು. ಕೂಡಲು ಸರಿಯಾದ ಸ್ಥಳ ಸಿಗದಿದ್ದರೆ ನಿಂತೇ ನೋಡಬೇಕು. ಸೊಂಟನೋವು, ಕತ್ತುನೋವು, ಬೆನ್ನುನೋವುಗಳ ಸುಖಾನುಭವ(?)ಗಳ ಅನುಭೂತಿಯ ಜೊತೆಗೆ ದೃಶ್ಯಗಳು ಕಟ್ಟಿಕೊಡುವ ರಂಗಾನುಭೂತಿಯನ್ನು ಸವಿಯುವುದು ಪ್ರೇಕ್ಷಕರಿಗೊಂದು ಸವಾಲಿನ ಕೆಲಸವೇ ಆಗಿತ್ತು. ಮಹಿಳೆಯರು ಮತ್ತು ಮುದುಕರ ಪಾಡಂತೂ ಅಸಹನೀಯವೆನಿಸುತ್ತಿತ್ತು. ರಾತ್ರಿಯೆಲ್ಲಾ ನಿದ್ದೆಗೆಡಬೇಕು, ರಂಗಸ್ಥಳದಿಂದ ರಂಗಸ್ಥಳಕ್ಕೆ ಓಡಾಡಬೇಕು, ಆಗಾಗ ಸುರಿಯುವ ಮಳೆ, ಮೈಕೊರೆಯುವ ಚಳಿ, ದಾರಿಯಲ್ಲಿ ಹಾವು ಜಂತುಗಳ ಭಯ.. ಇನ್ನೇನೋ ವಿಚಿತ್ರ ಅನುಭವಗಳು. ಕೊನೆಯ ಹೊಂಗೆರಂಗ ರಂಗಸ್ಥಳವಂತೂ ಪ್ರೇಕ್ಷಕರ ಪಾಲಿಗೆ ಅಸಹನೀಯ ಅನುಭವ. ಇಲ್ಲಿ ಯಾರೂ ಮುಖ್ಯರಲ್ಲ ಎನ್ನುವುದೂ ಪ್ರೇಕ್ಷಕರಿಗೂ ಸರಿಯಾಗಿ ಅನ್ವಯವಾಯ್ತು. ಆದರೂ ನಾಟಕ ನೋಡಲೇಬೇಕೆಂಬ ಅದಮ್ಯ ಉತ್ಸಾಹ ಹಾಗೂ ಸಂಭಾಷಣೆಗಳಲ್ಲಿರುವ ಕಚಗುಳಿಯ ಹಿತಾನುಭವಗಳು ಆಸನದ ಆತಂಕವನ್ನು ಮರೆಯುವಂತೆ ಮಾಡಿದ್ದು ಈ ನಾಟಕದ ಯಶಸ್ಸಿಗೆ ಬಹುದೊಡ್ಡ ಮಾನದಂಡ. ಕೈ ಕೆಸರಾದರೆ ಬಾಯಿ ಮೊಸರು, ಮೈಕೈ ನೋವಾದರೆ ‘ಮಲೆಗಳಲಿ ಮದುಮಗಳು’ ಎನ್ನುವ ಗಾದೆ ಹೇಳಬಹುದಾಗಿದೆ.
೭೦ರಷ್ಟು ಜನ ಕಲಾವಿದರಿಗೆ ಅದೂ ಆಗಾಗ ಪಾತ್ರಗಳು ಬದಲಾಗುತ್ತಾ ಇರುವ ರೀತಿಗೆ ತಕ್ಕ ಹಾಗೆ ಪ್ರಸಾದನ ಮಾಡುವುದು ಸವಾಲಿನ ಕೆಲಸ. ತನ್ನ ೫ ಜನ ಸಹಾಯಕರೊಂದಿಗೆ ಪ್ರಸಾದನ ಪಟು ರಾಮಕೃಷ್ಣ ಬೆಳ್ತೂರ ತಮ್ಮ ಕೈಚಳಕವನ್ನು ನಾಟಕದುದ್ದಕ್ಕೂ ತೋರಿಸಿದ್ದಾರೆ. ವಸ್ತ್ರ ಮತ್ತು ಪರಿಕರಗಳನ್ನು ಆ ಕಾಲಘಟ್ಟ ಮತ್ತು ಪ್ರಾಂತ್ಯಕ್ಕೆ ಸೂಕ್ತವಾಗಿ ಹೊಂದಾಣಿಕೆಯಾಗುವಂತೆ ವಿನ್ಯಾಸಗೊಳಿಸಿದ ಪ್ರಮೋದ ಶಿಗ್ಗಾಂವ್ ಕೂಡಾ ನಾಟಕದ ಯಶಸ್ಸಿನಲ್ಲಿ ಸಮಪಾಲುದಾರರು. ಬೆಳಕು ಸಂಯೋಜನೆಯಂತೂ (ಪರೇಶಕುಮಾರ್ / ರವಿಮೋಹನ್) ಲೈಟ್ ಆಂಡ್ ಸೌಂಡ್ ಕಾರ್ಯಕ್ರಮದ ರೀತಿ ಪರಿಣಾಮಕಾರಿಯಾಗಿತ್ತು. ರಂಗಮಂಚದ ಹಲವಾರು ಮಜಲುಗಳಲ್ಲಿ ನಡೆಯುವ ದೃಶ್ಯಗಳನ್ನು ನೋಡುಗನ ಒಂದೇ ನೋಟಕ್ಕೆ ದಕ್ಕುವ ಹಾಗೆ ನೋಡಿಕೊಂಡ ಬೆಳಕು ಸನ್ನಿವೇಶಕ್ಕೆ ತಕ್ಕಂತೆ ಮೂಡ್ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ.
ಕಲಾವಿದರ ಬಗ್ಗೆ ಹೆಮ್ಮೆಯಿಂದ ಹೇಳಲೇಬೇಕಿದೆ. ೩ ತಿಂಗಳ ಕಾಲ ಮನೆ ಕುಟುಂಬ ಎಲ್ಲವನ್ನೂ ಮರೆತು ದಿನಕ್ಕೆ ೧೨ ಗಂಟೆಗಳಷ್ಟು ಕಾಲ ಶ್ರಮಿಸಿ ನಾಟಕವನ್ನೇ ಉಸಿರಾಡಿದ ಈ ಯುವ ಕಲಾವಿದರು ಅದ್ಬುತವೊಂದನ್ನು ರಂಗದಂಗಳದಲ್ಲಿ ಸೃಷ್ಟಿಸಿದ್ದಾರೆ. ವಾರಕ್ಕೆ ೪ ಪ್ರದರ್ಶನಗಳನ್ನು ನಿದ್ದೆಗೆಟ್ಟು ನಟಿಸಿದ ಇವರು ಕೊಟ್ಟ ಕೊನೆಯ ಮೂರು ಪ್ರದರ್ಶನಗಳನ್ನು ಮೂರೂ ದಿನ ನಿರಂತರವಾಗಿ ಅಭಿನಯಿಸಿ ತಮ್ಮ ರಂಗಬದ್ಧತೆಯನ್ನು ಸಾಬೀತುಮಾಡಿದರು. ಮೈಸೂರು ರಂಗಾಯಣದ ವೃತ್ತಿಪರ ನಟರನ್ನೂ ಮೀರಿಸಿ ಈ ಯುವ ಕಲಾವಿದರು ತಮ್ಮ ಪ್ರತಿಭೆಯನ್ನೆಲ್ಲಾ ಪಾತ್ರಗಳಿಗೆ ಧಾರೆ ಎರದಿದ್ದಾರೆ. ಸುಬ್ಬಣ್ಣ ಹೆಗ್ಗಡೆ (ರಾಜೇಶ ಕುಂದೂರು), ಗುತ್ತಿ (ವಿಕ್ರಮ್), ವೆಂಕಟಪ್ಪ ನಾಯಕ (ಸದಾನಂದ ಕಾಳೆ), ಐತ (ಸ್ವಾಮಿ), ದೇವಯ್ಯ (ಸಮೀರ್), ಪಾದ್ರಿ (ಪುನೀತ್), ಸಾಬಿ, ಶೇರೇಗಾರ (ವಿನಯ್ ಚೌವಾನ್), ಹುಲಿಯಾ ನಾಯಿ(ಅನಿಲ್), ಪಿಂಚಲು (ಅಕ್ಷತಾ), ತಿಮ್ಮಿ (ದಾಕ್ಷಾಯಿನಿ), ಕಾವೇರಿ (ರೂಪಾ), ಅಂತಕ್ಕ (ಸುಮಾ), ನಿರೂಪಕರಾಗಿ ಕೆಗ್ಗೆರೆ ಮಂಜು, ಮಧುಕಾಂತ, ಕುಮಾರ್, ಮಹೇಶ, ಕಾಂತರಾಜು.... ಮುಂತಾದ ಪಾತ್ರದಾರಿಗಳ ಅಭಿನಯದ ಸೊಗಸನ್ನು ನೋಡಿಯೇ ಸವಿಯಬೇಕು. ಅವರ ಸಂಭಾಷಣೆಯ ಟೈಮಿಂಗ್, ಪಂಚ್ ಮಾಡುವ ರೀತಿ, ಪಾದರಸದ ಚಲನೆಗಳು ರಂಗಸ್ಥಳದಲ್ಲಿ ರೋಮಾಂಚನವನ್ನುಂಟು ಮಾಡಿದ್ದಂತೂ ದಿಟ. ಮೈಸೂರಲ್ಲಿ ಈ ಹಿಂದೆ ಅತಿಥಿ ನಟರಾಗಿ ಇದೇ ನಾಟಕದಲ್ಲಿ ನಟಿಸಿದ್ದ ೨೪ ಕಲಾವಿದರು ಹಾಗೂ ಉಳಿದಂತೆ ಪ್ರತಿ ಜಿಲ್ಲೆಯಿಂದ ಕಲಾವಿದರನ್ನು ಆಯ್ದುಕೊಂಡಿದ್ದು ಹಾಗೂ ೬ ಜನ ಹಕ್ಕಿ-ಪಿಕ್ಕಿ ಜನಾಂಗದ ಹುಡುಗರು ಸಹ ನಟಿಸಿದ್ದು ಈ ನಾಟಕದ ವಿಶೇಷತೆಯಾಗಿದೆ. ಒಮ್ಮೆ ಒಬ್ಬ ಕಲಾವಿದನನ್ನು ಹಾವು ಕಚ್ಚಿತ್ತು ಆದರೂ ನಾಟಕ ಮುಂದುವರೆಯಿತು. ಹಾವು ಹಿಡಿಯಲೆಂದೇ ಒಬ್ಬನನ್ನು ನಿಯಮಿಸಲಾಗಿತ್ತು. ೮ ಹಾವುಗಳನ್ನು ಹಿಡಿದು ದೂರ ಬಿಡಲಾಗಿತ್ತು. ಹೀಗೆ ರಾತ್ರಿ ಹಾವುಗಳ ಭಯವನ್ನೂ ಲೆಕ್ಕಿಸದೇ ಮೊದಲಿಂದ ಕೊನೆಯ ಪ್ರದರ್ಶನದವರೆಗೂ ಅದೇ ರೀತಿಯ ಎನರ್ಜಿಯನ್ನು ಜೊತೆಗೆ ರಂಗಬದ್ಧತೆ ಮತ್ತು ಶಿಸ್ತನ್ನೂ ಇಟ್ಟುಕೊಂಡು ಅಭಿನಯಿಸಿದ ಕಲಾವಿದರನ್ನು ಅಭಿನಂದಿಸಲೇಬೇಕು.
ತಾತ್ವಿಕ ಭಿನ್ನಾಭಿಪ್ರಾಯಗಳನ್ನು, ಕಾದಂಬರಿಯ ಆಶಯಗಳನ್ನು ಬದಿಗಿಟ್ಟು ಸಾಮಾನ್ಯ ಪ್ರೇಕ್ಷಕರಾಗಿ ಈ ನಾಟಕವನ್ನು ನೋಡುವುದಾದರೆ ನಿಜಕ್ಕೂ ಅದ್ಬುತವಾದ ಪ್ರೊಡಕ್ಷನ್. ಪ್ರೇಕ್ಷಕರು ಕೊಡುವ ೧೦೦ ರೂ ಯಾವುದಕ್ಕೂ ಸಾಲದು ಅಷ್ಟೊಂದು ಖುಷಿಯನ್ನು ನಾಟಕ ಕೊಡುತ್ತದೆ. ನಿಜಕ್ಕೂ ಇದೊಂದು ಕನ್ನಡ ರಂಗಭೂಮಿಯಲ್ಲಿ ದಾಖಲಾರ್ಹ ನಾಟಕ. ಇಂತಹುದೊಂದು ಮೆಘಾ ನಾಟಕ ಯಶಸ್ವಿಯಾಗಿದ್ದಕ್ಕೆ ಇಡೀ ರಂಗಭೂಮಿ ಸಂಭ್ರಮಿಸಬೇಕಿತ್ತು. ಆದರೆ ಆ ಸಂಭ್ರಮಕ್ಕಿಂತ ಅಪಸ್ವರವೇ ಕೇಳಿಬರುತ್ತಿರುವುದು ವಿಪರ್ಯಾಸ. ಹಲವರ ಮೂಲ ಆಕ್ಷೇಪನೆ ಇರುವುದು ನಾಟಕದ ಆಶಯಕ್ಕಿಂತ ನಾಟಕಕ್ಕಾದ ಖರ್ಚಿನ ಬಗ್ಗೆ. ನಾಟಕದ ಬಿಗ್ ಬಜೆಟ್ ಬಗ್ಗೆ.
ಹೌದು! ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ಇಷ್ಟೊಂದು ಅದ್ದೂರಿ ಬಜೆಟ್ಟಿನ ನಾಟಕ ಎಲ್ಲೂ ನಡೆದಿರಲಿಲ್ಲ. ಒಂದು ಕಮರ್ಸಿಯಲ್ ಕನ್ನಡ ಸಿನೆಮಾಕ್ಕೆ ಆಗಬಹುದಾದಷ್ಟು ಖರ್ಚು ಇದಕ್ಕಾಗಿದೆ. ಈ ನಾಟಕದ ರಂಗಸಜ್ಜಿಕೆ ರಂಗಪರಿಕರಗಳಿಗೆ ಆದ ಖರ್ಚು ಹತ್ತಲ್ಲಾ ಇಪ್ಪತ್ತಲ್ಲಾ ಬರೊಬ್ಬರಿ ೭೦ ಲಕ್ಷ.
ಕಲಾವಿದರು, ತಂತ್ರಜ್ಞರ ಸಂಬಳ ಮತ್ತು ಇತರೆ ಖರ್ಚುಗಳು ೩೦ ಲಕ್ಷ ಎನ್ನಲಾಗಿದೆ. ಅಂದರೆ ಒಂದು ಕೋಟಿ ರೂಪಾಯಿಯ ದುಬಾರಿ ನಾಟಕ ಇದು. ಇಷ್ಟು ದೊಡ್ಡ ಬಜೆಟ್ಟಿನ ನಾಟಕವೊಂದು ನಿರ್ಮಾಣವಾಗಿದ್ದಕ್ಕೆ ಕನ್ನಡಿಗರು ಹೆಮ್ಮೆ ಪಡಬೇಕಲ್ಲವೇ? ಆದರೆ “ಸರಕಾರಿ ಹಣದ ಅಂದಾದುಂದಿ ಖರ್ಚು, ಹುಚ್ಚು ಮುಂಡೇ ಮದುವೇಲಿ ಉಂಡವನೇ ಬಸವಲಿಂಗಯ್ಯ...”ಎಂದೆಲ್ಲಾ ಅಪಸ್ವರಗಳು ಈ ನಾಟಕದ ನಿರ್ಮಾಣದ ಬಗ್ಗೆ ಕೇಳಿಬಂದವು. ದುಂದುಗಾರಿಕೆ, ಜನರ ಹಣದ ಅಪವ್ಯಯ, ಹುಚ್ಚುತನ ಎಂದೆಲ್ಲಾ ಬಿನ್ನಸ್ವರಗಳು ಆಲಾಪನೆ ಮಾಡಿದವು. ಆದರೆ ಇನ್ನೊಂದು
ಆಯಾಮವನ್ನೂ ನಾವು ಅರಿಯಬೇಕಿದೆ.
ಸರಕಾರದ ಸಂಸ್ಥೆಗಳಾದ ವಾರ್ತಾ ಮತ್ತು ಪ್ರಚಾರ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಪ್ರಾಯೋಜಿಸುವ ವಿಜಯನಗರ ವೈಭವ, ಕರ್ನಾಟಕ ವೈಭವ... ಮುಂತಾದ ಲೈಟ್ ಆಂಡ್ ಸೌಂಡ್ ಕಾರ್ಯಕ್ರಮಗಳಿಗೆ ಖರ್ಚಾಗುವ ಸರಕಾರದ ಹಣ ಒಂದೊಂದು ಪ್ರದರ್ಶನಕ್ಕೂ ೫೦ಲಕ್ಷದಿಂದ ೧ ಕೋಟಿ. ಆದರೆ ಆ ಕಾರ್ಯಕ್ರಮದ ಪ್ರದರ್ಶನದಿಂದ ವಾಪಸ್ ಬರುವ ಹಣ ಶೂನ್ಯ. ಈ ಹಿಂದೆ ಜಾನಪದ ಜಾತ್ರೆ ಎನ್ನುವ ಕಾರ್ಯಕ್ರಮವನ್ನು ಕಪ್ಪಣ್ಣನವರ ಮುಂದಾಳತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡಿತ್ತಲ್ಲ. ಅದರ ಒಟ್ಟು ಖರ್ಚು ಕೇಳಿದರೆ ಹುಚ್ಚು ಹಿಡಿಯುತ್ತದೆ. ಆ ಜಾತ್ರೆಯಲ್ಲಿ ದುಡಿದ ಸಂಚಾಲಕರುಗಳು ಬಂದ ಹಣದಲ್ಲಿ ಕಾರುಗಳನ್ನು ಕೊಂಡು ಓಡಾಡುತ್ತಿದ್ದಾರೆ. ಕಳೆದ ತಿಂಗಳು ಕಪ್ಪಣ್ಣ ಜಯಶ್ರೀ ಮುಂತಾದವರು ಹೋಗಿ ಸೂರತ್ಕುಂಡದಲ್ಲಿ ಜಾನಪದ ಜಾತ್ರೆ ಕಾರ್ಯಕ್ರಮ ನಡೆಸಿಕೊಟ್ಟರಲ್ಲ ಅದರ ಖರ್ಚು ೩ ಗಂಟೆ ಕಾರ್ಯಕ್ರಮಕ್ಕೆ
ಕೇವಲ ಮುಕ್ಕಾಲು ಕೋಟಿ. ಹೋಗಲಿ ಕ್ರಿಯಾಯೋಜನೆ ಹೆಸರಲ್ಲಿ ನಾಟಕೋತ್ಸವ, ಆ ಈ ಉತ್ಸವಗಳಿಗೆ ಇದೇ ಸಂಸ್ಕೃತಿ ಇಲಾಖೆ ಐದು, ಹತ್ತು, ಹದಿನೈದು ಲಕ್ಷಗಳಷ್ಟು ಹಣವನ್ನು ಪ್ರತಿ ವರ್ಷ ಕೆಲವು ತಂಡಗಳಿಗೆ ಕೊಡುತ್ತಲ್ಲಾ ಅದರಿಂದ ಇಲಾಖೆಗೆ ಬಂದ ಲಾಭ ಏನು? ಅಂತಹ ಕಾರ್ಯಕ್ರಮಗಳನ್ನು ಅದೆಷ್ಟು ಜನ ಪ್ರೇಕ್ಷಕರು ನೋಡಿ ಪಾವನರಾಗಿದ್ದಾರೆ. ಸಂಸ್ಕೃತಿ ಇಲಾಖೆ ಒಂದೊಂದು ಸಂಗೀತ ನೃತ್ಯ ಕಾರ್ಯಕ್ರಮಗಳಿಗೆ ಪ್ರಾಯೋಜಿಸುವ ಹಣ ಹತ್ತೆಂಟು ಲಕ್ಷ ರೂಪಾಯಿ. ಹೀಗೆ ವಾರ್ಷಿಕವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ೨೫೦ ಕೋಟಿ ಹಣವನ್ನು ಕಲೆ, ಸಂಸ್ಕೃತಿಯ ಉಳಿಸುವ ಮತ್ತು ಬೆಳೆಸುವ ಸಲುವಾಗಿ ಜನರ ಹಣವನ್ನು ಖರ್ಚು ಮಾಡುತ್ತದೆ. ಆದರೆ ಯಾವುದೇ ಪ್ರೊಜೆಕ್ಟನಿಂದಲೂ ಒಂದು ನಯಾಪೈಸೆ ವಾಪಸ್ ಇಲಾಖೆಗೆ ಬಂದ ಉದಾಹರಣೆಗಳಿಲ್ಲ. ಆದರೆ ೧ ಕೋಟಿ ವೆಚ್ಚದ ಈ “.... ಮದುಮಗಳು’ ನಾಟಕದ ಟಿಕೇಟ್ನಿಂದ ಬಂದ ಆದಾಯ ೨೦ಲಕ್ಷದಷ್ಟು. ಇಲಾಖೆಯ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಪುಕ್ಕಟೆ ಪಾಸ್ಗಳನ್ನು ಹಂಚಿ ಇನ್ನೂ ಬರಬಹುದಾಗಿದ್ದ ಆದಾಯವನ್ನು ಕಡಿತಗೊಳಿಸಿಕೊಂಡರು. ಇದಕ್ಕಿಂತಲೂ ಹೆಚ್ಚಾಗಿ ರಾಷ್ಟ್ರಕವಿ ಕುವೆಂಪುರವರ ಅದ್ಬುತ ಕಾದಂಬರಿಯ ರಂಗರೂಪವನ್ನು ಜನ ಸಾಗರೋಪಾದಿಯಲ್ಲಿ ಬಂದು ಚಳಿ ಮಳೆಯಲ್ಲಿ ಅಹೋರಾತ್ರಿ ನೋಡಿ ಖುಷಿಪಟ್ಟರು. ಇಲ್ಲಿ ಜನರ ಹಣ ಜನರಿಗಾಗಿಯೇ ಖರ್ಚು ಮಾಡಲಾಗಿದ್ದು ಸಾರ್ಥಕತೆಯನ್ನುಂಟುಮಾಡಿದೆ. ಜೊತೆಗೆ ನಿಂತ ನೀರಾಗಿರುವ, ಸರಕಾರಿ ಸಂಸ್ಥೆಯ ಹಣಕಾಸಿನ ಮೇಲೆಯೇ ಜೀವ ಹಿಡಿದುಕೊಂಡಂತಿರುವ ಬೆಂಗಳೂರಿನ ರಂಗಭೂಮಿಗೆ ಈ ನಾಟಕ ಹೊಸ ತಿರುವನ್ನುಂಟುಮಾಡುವ ಸಾಧ್ಯತೆ ಇದೆ. ಇದೇ ನಾಟಕವನ್ನು ಇನ್ನೂ ೧೦೦ ದಿನಗಳ ಕಾಲ ಪ್ರದರ್ಶಿಸಿದ್ದರೆ, ರಾಜ್ಯಾದ್ಯಂತ ಸರಿಯಾಗಿ ಪ್ರಚಾರ ಮಾಡಿದ್ದರೆ ಕಲಾಗ್ರಾಮ ಎನ್ನುವುದು ಪ್ರೇಕ್ಷಣೀಯ ಸ್ಥಳವಾಗುತ್ತಿತ್ತು. ಹೂಡಿದ ಹಣ ವಾಪಸ್ ಬರುತ್ತಿತ್ತು. ಆಡಿಕೊಳ್ಳುವವರ ಬಾಯನ್ನೂ ಮುಚ್ಚಿಸಬಹುದಿತ್ತು. ಮಲೆಮಗಳು ಲಕ್ಷಾಂತರ ಮಂದಿಯನ್ನು ದೃಶ್ಯರೂಪದಲ್ಲಿ ತಲುಪುತ್ತಿತ್ತು.
-ಶಶಿಕಾಂತ ಯಡಹಳ್ಳಿ
ಸಂತೋಷವಾಯಿತು ತಮ್ಮ ಲೇಖನ ಓದಿ.
ಪ್ರತ್ಯುತ್ತರಅಳಿಸಿ