ಬುಧವಾರ, ನವೆಂಬರ್ 6, 2013

ಅವ್ಯವಸ್ಥೆಯನ್ನು ಅನಾವರಣಗೊಳಿಸುವ ‘ಈ ಕೆಳಗಿನವರು’



ನಾಟಕ ವಿಮರ್ಶೆ :

  


         



    ನಾಗರೀಕ ಸಮಾಜ ಎಂದು ಹೆಮ್ಮೆಪಡುವ ಜನರ ನಡುವೆಯೇ ಅಸ್ತಿತ್ವದಲ್ಲಿರುವ ಅನಾಗರೀಕ ಪ್ರಪಂಚವೊಂದನ್ನು  ಅನಾವರಣಗೊಳಿಸುವ ಕೆಳಗಿನವರು ನಾಟಕ ನೋಡುಗರನ್ನು ಬೆಚ್ಚಿ ಬೀಳಿಸುತ್ತದೆ. ಸಮಾಜದ ಮೇಸ್ತರದಲ್ಲಿದ್ದವರಿಗೆ ನಿಷ್ಕೃಷ್ಟ ಲೋಕವೊಂದರ ದರ್ಶನ ಮಾಡಿಸುವ ಮೂಲಕ ವ್ಯವಸ್ಥೆಯ ಅವ್ಯವಸ್ಥೆಯನ್ನು ತೆರೆದಿಡುತ್ತದೆ. ಅನೇಕ ಸ್ಲಂಗಳನ್ನು ನೋಡಿದ್ದೇವೆ. ಕಡುಬಡವರ ಗಲ್ಲಿಗಳಲ್ಲಿ ಸುತ್ತಾಡಿದ್ದೇವೆ. ಬಡತನದ ಬಗ್ಗೆ ಭಾಷಣಗಳನ್ನು ಕೇಳಿದ್ದೇವೆ, ಮಾಧ್ಯಮಗಳಲ್ಲಿ ತಳ ಸಮುದಾಯದ ಬಗ್ಗೆ ವೀಕ್ಷಿಸಿದ್ದೇವೆ, ಆದರೆ ಮಾಡಲು ಕೆಲಸವಿಲ್ಲದೆ, ತಿನ್ನಲು ಕೂಳಿಲ್ಲದೆ, ಇರಲು ಸರಿಯಾದ ಸೂರಿಲ್ಲದೆ, ಉಡಲು ನೆಟ್ಟಗಿನ ಬಟ್ಟೆಗಳಿಲ್ಲದೇ, ಕನಿಷ್ಟ ಅಗತ್ಯಗಳೂ ಇಲ್ಲದೇ ಬದುಕುವ ಯಕಶ್ಚಿತ್ ಮನುಷ್ಯರ ದಿನನಿತ್ಯದ ಅನಾಥ ಬದುಕನ್ನು ನೇರವಾಗಿ ನೋಡಿ ಅನುಭವಿಸಬೇಕೆಂದಿದ್ದರೆ ಕೆಳಗಿನವರು ನಾಟಕವನ್ನೊಮ್ಮೆ ನೋಡಲೇಬೇಕು.
          ಅಲ್ಲಿ ಹೆಪ್ಪುಗಟ್ಟುವಷ್ಟು ನೋವಿದೆ, ತಲ್ಲಣಗೊಳಿಸುವಷ್ಟು ವಿಷಾದವಿದೆ, ಸಾವಿಗೂ ಸ್ಪಂದಿಸದಷ್ಟು ನಿಷ್ಕರುಣೆ ಇದೆ. ನೈತಿಕ ಪ್ರಜ್ಞೆಯನ್ನೂ ಮೀರಿದ ಅನೈತಿಕ ಸಂಬಂಧವಿದೆ, ಸ್ವಾರ್ಥತನವಿದೆ, ಕಳ್ಳತನವಿದೆ, ವಂಚಕತನವಿದೆ, ಕೊಲೆಪಾತಕತನವಿದೆ, ಸೂಳೆಗಾರಿಕೆ ಇದೆ, ಮಿತಿಮೀರಿದ ಕುಡುಕತನವಿದೆ, ಅಳತೆಗೆ ಸಿಕ್ಕದ ಕೆಡುಕುತನವೂ ಇದೆ. ಇವೆಲ್ಲಕ್ಕೂ ಕಾರಣವಾದ ಘನಘೋರ ಬಡತನವಿದೆ. ದಾರಿದ್ರ್ಯಕ್ಕೆ ಪ್ರೇರಕವಾಗಿ ನಿರುದ್ಯೋಗ, ಅನಕ್ಷರತೆ ಇದೆ. ಇವೆಲ್ಲಾ ವಿಷಾದಗಳನ್ನು ಮರೆಸಲು ವಿನೋದವೂ ಇದೆ. ಇವೆಲ್ಲವೂ ಸೇರಿ ಕೆಳಗಿನವರ ಲೋಕ ಸೃಷ್ಟಿಯಾಗಿದೆ. ನಾಳೆಯ ಬಗ್ಗೆ ಕನಿಷ್ಟ ಆಲೋಚನೆಯನ್ನೂ ಮಾಡದೇ, ಭೂತಕಾಲದ ಗಾಯಗಳನ್ನು ಕೆದಕಿಕೊಳ್ಳುತ್ತಾ ಅವಮಾನಕಾರಿ ವರ್ತಮಾನವನ್ನು ಹೇಗೋ ದೂಡುವ ಅಸಂಖ್ಯಾತ ಜನರಿರುವ ದೇಶಗಳ ದಟ್ಟದಾರಿದ್ರ್ಯದ ಪ್ರತೀಕವಾಗಿ ಕೆಳಗಿನವರು ನಾಟಕ ಮೂಡಿಬಂದಿದೆ.
          ರಶಿಯಾ ದೇಶದ ಮಹಾನ್ ಲೇಖಕ ಮ್ಯಾಕ್ಸಿಂ ಗಾರ್ಕಿ ದಿ ಲೋವರ್ ಡೆಪ್ತ್ ನಾಟಕವನ್ನು ೧೯ನೇ ಶತಮಾನದಲ್ಲಿ ಬರೆದು ಆಗಿನ ರಶಿಯಾ ದೇಶದ ಸಾಮಾಜಿಕ ಕಟುವಾಸ್ತವಿಕತೆಯನ್ನು ತೆರೆದಿಟ್ಟರು. ಕಾಲ ದೇಶವನ್ನು ಮೀರಿದ ಕೃತಿ ಈಗಲೂ ಎಲ್ಲಾ ದೇಶಗಳ ಬರ್ಬರ ಬದುಕಿನ ಸಂಕೇತವಾಗಿದೆ. ನಾಗರೀಕ ಸಮಾಜದ ಅನಾಗರೀಕ ವ್ಯವಸ್ಥೆಗೆ ಪ್ರತೀಕವಾಗಿದೆ. ಗಾರ್ಕಿಯ ನಾಟಕವನ್ನು ಬಿ.ಟಿ.ದೇಸಾಯಿಯವರು ಕೆಳಗಿನವರು ಎಂಬ ಹೆಸರಲ್ಲಿ ಕನ್ನಡಕ್ಕೆ  ಸೊಗಸಾಗಿ ರೂಪಾಂತರಿಸಿದ್ದಾರೆ. ರಾಷ್ಟ್ರೀಯ ನಾಟಕ ಶಾಲೆ (ಎನ್ಎಸ್ಡಿ) ಬೆಂಗಳೂರು ಅಧ್ಯಾಯ ಕೇಂದ್ರವು  ಪ್ರಸ್ತುತಪಡಿಸಿದ ನಾಟಕವನ್ನು ೨೦೧೩ ಸೆಪ್ಟಂಬರ್ ೨೦ ರಿಂದ ೨೨ ರವರೆಗೆ ಬೆಂಗಳೂರಿನ ಗುರುನಾನಕ್ ಭವನದಲ್ಲಿ ಪ್ರದರ್ಶಿಸಲಾಯಿತು. ಕರ್ನಾಟಕದ ಬೇರೆ ಬೇರೆ ಪ್ರದೇಶಗಳಿಂದ ನಟನೆಗೆ ೧೫ ಜನ ಹಾಗೂ  ನೇಪತ್ಯದ ಕೆಲಸಕ್ಕೆ ಜನರನ್ನು ಆಯ್ದು ಆರು ತಿಂಗಳಗಳ ಕಾಲ ತರಬೇತಿಯನ್ನು ಆಯೋಜಿಸಿದ ಚಿದಂಬರರಾವ್ ಜಂಬೆರವರು ಕೆಳಗಿನವರು ನಾಟಕವನ್ನು ಸಮರ್ಥವಾಗಿ ನಿರ್ದೇಶಿಸಿದ್ದಾರೆ

     ಸಾಂಪ್ರದಾಯಿಕವಾದ ಯಾವುದೇ ಚೌಕಟ್ಟಿಲ್ಲದ ನಾಟಕಕ್ಕೆ ಹೇಳಿಕೊಳ್ಳುವಂತಹ ಕಥೆಯೂ ಇಲ್ಲ. ಒಂದು ಹಳೆಯ ಶಿಥಿಲಗೊಂಡ ನೆಲಮಾಳಿಗೆ(ಛತ್ರ)ಯಲ್ಲಿ ನಡೆಯುವ ಘಟನೆಗಳ ಸರಮಾಲೆಯನ್ನು ಜೋಡಿಸಿ ಇಡೀ ನಾಟಕವನ್ನು ಕಟ್ಟಲಾಗಿದೆ. ಅಲ್ಲಿ ಸಮಾಜದಲ್ಲಿ ನಿರ್ಲಕ್ಷಿತವಾದ ಜನರ ಗುಂಪೊಂದು ಮನುಷ್ಯರ ಹಾಗೆ ಮಾತನಾಡುತ್ತಿದ್ದರೂ ಪ್ರಾಣಿಗಳ ಹಾಗೆ ಬದುಕುತ್ತಿರುತ್ತವೆ. ಕಳ್ಳತನ ಮಾಡುವ ವಾಸ್ಯನಿಗೆ ಛತ್ರದ ಮಾಲೀಕ ಕೃಷ್ಟಪ್ಪನ ಹೆಂಡತಿ ವಾಸಕ್ಕನ ಜೊತೆಗೆ ಅನೈತಿಕ ಸಂಬಂದದ ಜೊತೆಗೆ ಆಕೆಯ ತಂಗಿ ರತ್ನಾಳ ಮೇಲೂ ಆಸೆ. ವಾಸಕ್ಕ ದೊಡ್ಡ ಗಯ್ಯಾಳಿಯಾಗಿದ್ದು ವಾಸ್ಯನನ್ನು ತನ್ನ ಗಂಡನ ಕೊಲೆಗೆ ಪ್ರಚೋದಿಸುತ್ತಾಳೆ. ವೇಶ್ಯೆ ಸುಂದರಿಗೆ ಕಾದಂಬರಿ ಓದುವ ಹುಚ್ಚು. ಮಾಡಲೂ ಏನೂ ಕೆಲಸವಿಲ್ಲದ ಇನ್ನೂ ಹಲವಾರು ಜನ ಛತ್ರದಲ್ಲಿ ದಿನಬಾಡಿಗೆಯ ಲೆಕ್ಕದಲ್ಲಿ ಬದುಕುತ್ತಿರುತ್ತಾರೆ. ಆಗ ಲಕ್ಕಜ್ಜ ಎನ್ನುವ ಅಲೆಮಾರಿ ಸಂತನೊಬ್ಬ ಬಂದು ತನ್ನ ಮಾರ್ಮಿಕ ಮಾತುಗಳಿಂದ ಎಲ್ಲರಲ್ಲೂ ಆತ್ಮವಿಶ್ವಾಸವನ್ನು ತುಂಬುವ ಪ್ರಯತ್ನ ಮಾಡುತ್ತಾನೆ. ಕೊನೆಗೆ ರತ್ನಳನ್ನು ಕೃಷ್ಣಪ್ಪ  ಮತ್ತು ವಾಸಕ್ಕ ಸೇರಿ ವಾಸ್ಯಾನ ಸಹವಾಸ ಬಿಡು ಎಂದು ಹೊಡೆಯುತ್ತಾರೆ. ರತ್ನಳನ್ನು ಉಳಿಸುವ ಪ್ರಯತ್ನದಲ್ಲಿ ವಾಸ್ಯನಿಂದ ಕೃಷ್ಣಪ್ಪ ಸಾಯುತ್ತಾನೆ. ವಾಸ್ಯ ಕೊಲೆ ಆರೋಪದಲ್ಲಿ ಜೈಲು ಪಾಲಾಗುತ್ತಾನೆ.  ಲಕ್ಕಜ್ಜ ಛತ್ರ ತೊರೆಯುತ್ತಾನೆ. ನಾಟಕದ ಹುಚ್ಚಿರುವ ನಟ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಉಳಿದವರು ಸರಾಯಿ ಕುಡಿದು ಮೊದಲಿನ ಹಾಗೆಯೇ ಬದುಕುತ್ತಾರೆ. ಇಲ್ಲಿಗೆ ನಾಟಕವೇನೋ ಮುಗಿಯುತ್ತದೆ. ಆದರೆ ಪ್ರೇಕ್ಷಕರ ಮನಸ್ಸಲ್ಲಿ ಆಲೋಚನೆಗಳನ್ನು ಹುಟ್ಟುಹಾಕುತ್ತದೆ.
     ಅನೈತಿಕತೆ, ಕಳ್ಳತನ, ಹಾದರ, ಕುಡಿತಗಳನ್ನೇ ವೈಭವೀಕರಿಸುವ ಇಡೀ ನಾಟಕ ಯಾವುದೇ ರೀತಿಯ ನೈತಿಕತೆಯನ್ನು ಪ್ರತಿಪಾದಿಸಲು ಹೋಗುವುದಿಲ್ಲ. ಅದು ನಾಟಕದ ಉದ್ದೇಶವೂ ಅಲ್ಲ. ಶೋಷಕ ವ್ಯವಸ್ಥೆ ಹುಟ್ಟುಹಾಕಿರುವ ಅತ್ಯಂತ ಶೋಷಿತ ಜನರ ಕಂಗಾಲು ಬದುಕನ್ನು ಕಟುವಾಸ್ತವಗಳ ಜೊತೆಗೆ ತೋರಿಸುವುದೇ ಗಾರ್ಕಿಯ ಉದ್ದೇಶವಾಗಿದೆ. ಮಾನವೀಯ ಸಂಬಂಧಗಳೇ ಇಲ್ಲದೆ ಪ್ರಾಣಿಗಳಂತೆ ಬದುಕುವ ಜನರ ಬದುಕು ಬವಣೆಗಳನ್ನು ಹಾಸ್ಯಮಯವಾಗಿ ತೋರಿಸುವ ಪ್ರಯತ್ನ ನಾಟಕದಲ್ಲಿದೆ. ಚಾರ್ಲಿ ಚಾಪ್ಲಿನ್ ಸಿನೆಮಾಗಳ ಮಾದರಿಯಲ್ಲಿ ನೊಂದವರ ಜೀವನವನ್ನು ವಿನೋದದ ಮೂಲಕ ಹೇಳುವ ನಿಟ್ಟಿನಲ್ಲಿ ನಾಟಕ ಯಶಸ್ವಿಯಾಗಿದೆಯಾದರೂ ಚಾಪ್ಲಿನ್ ಸಿನೆಮಾಗಳು ಅಂತಿಮವಾಗಿ ಮೂಡಿಸುವ ವಿಷಾದವನ್ನು ಹುಟ್ಟಿಸುವಲ್ಲಿ ಕೆಳಗಿನವರು ವಿಫಲವಾಗಿದೆ. ಗಾರ್ಕಿ ಉದ್ದೇಶ ಹಾಸ್ಯ ಅಲ್ಲವೇ ಅಲ್ಲ, ಕಣ್ಣೆದುರೇ ದುರಂತ ಬದುಕನ್ನು ನೋಡುತ್ತಿದ್ದರೂ ಪ್ರೇಕ್ಷಕರಲ್ಲಿ ಯಾವುದೇ ರೀತಿಯ ವಿಷಾದವಾಗಲೀ, ಸಂಕಟವಾಗಲೀ ಹುಟ್ಟುವುದೇ ಇಲ್ಲ. ತಮ್ಮ ಅನಿಷ್ಟದ ಬದುಕನ್ನು ಪಾತ್ರಗಳು ಎಂಜಾಯ್ ಮಾಡಿರುವುದು, ಜೊತೆಗೆ ಪ್ರೇಕ್ಷಕರನ್ನೂ ನಕ್ಕು ನಲಿಯುವ ಕೆಲಸವನ್ನು ಪೈಪೋಟಿಯಲ್ಲಿ ಮಾಡಿರುವುದು ಗಾರ್ಕಿ ನಾಟಕದ ಮೂಲ ಉದ್ದೇಶಕ್ಕೆ ಅಪಚಾರಮಾಡಿದಂತಿದೆ.
   ನಾಟಕದ ಸಶಕ್ತವಾದ ಪಾತ್ರ ಲಕ್ಕಜ್ಜನದು. ಇದು ನಿಜವಾಗಿಯೂ ಮ್ಯಾಕ್ಸಿಂ ಗಾರ್ಕಿಯೇ ಪಾತ್ರವಾಗಿದ್ದಾನೆನ್ನಿಸುತ್ತದೆ. ಆಕಸ್ಮಿಕವಾಗಿ ಬರುವ ಲಕ್ಕಜ್ಜ ಎಲ್ಲರಲ್ಲೂ ಆತ್ಮವಿಶ್ವಾಸವನ್ನು ತುಂಬುವ ಕೆಲಸ ಮಾಡುತ್ತಾನೆ. ಕ್ಷುಲ್ಲಕ ಜನರಲ್ಲಿ ಮನುಷ್ಯ ಸಂಬಂಧಗಳನ್ನು ಬೆಸೆಯುವ ಕೆಲಸ ಮಾಡುತ್ತಾನೆ. ಏನೇ ಆದರೂ ಲಕ್ಕಜ್ಜನ ಶ್ರಮ ವ್ಯರ್ಥವಾಗುತ್ತದೆ. ಯಥಾಸ್ಥಿತಿಯನ್ನು ಪ್ರತಿಪಾದಿಸುವ ನಾಟಕ ನಿರಾಶಾವಾದವನ್ನೂ ಹೇಳುತ್ತದಾ? ಹೀಗೊಂದು ಸಂದೇಹ ಬಾರದೇ ಇರದು. ತನ್ನ ಕುಡಿತ ಕುಣಿತ ನಾಟಕದ ಗುಂಗಿನಲ್ಲಿ ಖುಷಿಯನ್ನು ಹುಡುಕುತ್ತಿದ್ದ ನಟನ ಬದುಕಲ್ಲಿ ಲಕ್ಕಜ್ಜ ಬಂದು ನಿಜ ದರ್ಶನ ಮಾಡಿಸುತ್ತಾನೆ. ಆದರೆ ಸತ್ಯದ ಅರಿವಾದಾಗ ಪರಿವರ್ತನೆಗೊಳ್ಳುವ ಬದಲು ಪಾತ್ರ ಆತ್ಮಹತ್ಯೆ ಮಾಡಿಕೊಂಡು ಪಲಾಯನವಾದಿಯಾಗುತ್ತದೆ. ಬೇರೆಲ್ಲಾ ಪಾತ್ರಗಳೂ ಕೂಡಾ ಯಾವುದೇ ಬದಲಾವಣೆಗೆ ಸಿದ್ದರಾಗದೇ ಯಥಾಸ್ಥಿತಿಯನ್ನೇ ಕಾಯ್ದುಕೊಳ್ಳುತ್ತವೆ. ಬದಲಾವಣೆಯಾಗಲೀ ಆಶಾವಾದವಾಗಲೀ ನಾಟಕದ ಯಾವುದೇ ಪಾತ್ರಗಳಲ್ಲೂ ಕಂಡುಬರುವುದಿಲ್ಲ. ಪ್ರೇಕ್ಷಕರಿಗೂ ಕೂಡಾ ಒಂದು ಹಂತದಲ್ಲಿ ಏನೇ ಮಾಡಿದರೂ ಇವರ ಹಣೆಬರಹ ಇಷ್ಟೇ ಬಿಡು ಬರೀ ಕುಡಿತ, ಹಾದರ, ವಂಚನೆ ಬಿಟ್ಟು ಇವರು ಬದಲಾಗಲು ಸಾಧ್ಯವೇ ಇಲ್ಲಾ ಎಂದೆನಿಸಿಬಿಡುವ ಅಪಾಯವೇ ಹೆಚ್ಚಾಗಿದೆ.
         ಬಹುತೇಕ ಹೊಸ ಯುವ ಕಲಾವಿದರನ್ನು ಆಯ್ದು ೯೦ ದಿನಗಳ ಕಾಲ ತರಬೇತಿ ಕೊಟ್ಟು, ೪೫ ದಿನಗಳ ಕಾಲ ದಿನಕ್ಕೆ ೧೨ ಗಂಟೆ ತಾಲಿಂ ನಡೆಸಿದ್ದರ ಫಲ ನಾಟಕದಾದ್ಯಂತ ಒಡಮೂಡಿ ಬಂದಿದೆ. ಮಾತಿನ ವರಸೆ ಮತ್ತು ದೇಹಭಾಷೆಗಳನ್ನು ಕಲಾವಿದರು ಸಮರ್ಥವಾಗಿ ಬಳಸಿದ್ದಾರೆ. ನಾಟಕದಲ್ಲಿ ಪ್ರಮುಖವಾದ ಗಮನ ಸೆಳೆಯುವುದು ಲಕ್ಕಜ್ಜನ ಪಾತ್ರದಾರಿ ಉಮೇಶ ಪಾಟೀಲ್. ೨೫ ವರ್ಷದ ಯುವಕ ೭೫ ವರ್ಷದ ಮುದುಕನ ಪಾತ್ರ ಮಾಡಿದ್ದು ಗಮನಾರ್ಹ. ಬೊಬ್ಬಣ್ಣನಾಗಿ ಮಾರಣ್ಣ, ವ್ಯಾಸ್ಯ ಪಾತ್ರದಾರಿ ಗಿರೀಶ, ವಾಸಕ್ಕಳಾಗಿ ಶಾಹಿರಾ, ಸಂಕಣ್ಣನಾಗಿ ಅನೂಪ ಶೂನ್ಯ, ಹನುಮಂತಪ್ಪನಾಗಿ ಪ್ರಶಾಂತ... ಮುಂತಾದವರು ತಮ್ಮ ತಮ್ಮ ಪಾತ್ರಕ್ಕೆ ನ್ಯಾಯವದಗಿಸಿದ್ದಾರೆ. ಇಡೀ ನಾಟಕ ನಿಂತಿರುವುದೇ ಅಭಿನಯದ ಮೇಲೆ, ಅದರಲ್ಲೂ ಮಾತಿನ ಮೇಲೆ. ಹೊಸ ನಟರುಗಳಿಂದ ಜಂಬೆರವರು ಅಭಿನಯ ಪ್ರತಿಭೆಯನ್ನು ಸಮರ್ಥವಾಗಿ ಹೊರತಂದಿದ್ದಾರೆ. ಆಗಾಗ ಬರುವ ಪಂಚ್ ಡೈಲಾಗ್ಗಳು ನಗು ಉಕ್ಕಿಸುವಂತಿದ್ದವು.
   ಇಡೀ ನಾಟಕದಲ್ಲಿ ಗಮನ ಸೆಳೆಯುವುದು ಅದರ ಚೆನ್ನಕೇಶವರ ರಂಗವಿನ್ಯಾಸ. ಕೆಳಗಿನವರು ಹೆಸರಿಗೆ ಅನ್ವರ್ಥವಾಗುವಂತೆ ಭೂಮಿ ಮಟ್ಟದಿಂದ ಕೆಳಮಟ್ಟದಲ್ಲಿರುವ ಹಾಗೆ ಸೆಟ್ ಡಿಸೈನ್ ಮಾಡಿದ್ದು ಅದ್ಬುತ ಕ್ರಿಯಾಶೀಲತೆಯಾಗಿದೆ. ಇಡೀ ಸೆಟ್ನಲ್ಲಿ ಬರುವ ಚಿಕ್ಕ ಪುಟ್ಟ ಪರಿಕರಗಳು, ನಗಣ್ಯ ವಸ್ತುಗಳು, ಇಕ್ಕಟ್ಟಿನ ಸ್ಲಂ ಕೋಣೆಗಳು, ಒಬ್ಬರ ಮೇಲೆ ಇನ್ನೊಬ್ಬರು ಮಲಗುವಂತಹ ಬಂಕರ್ ಕಾಟ್ಗಳು, ಮೇಲಿನಿಂದ ಕೆಳಗೆ ಇಳಿದು ಬರುವ ಮೆಟ್ಟಿಲುಗಳು, ಜೊತೆಗೆ ವಿಶಾಲ ವೆನ್ನಿಸುವ ಆಕ್ಟಿಂಗ ಜಾಗ..... ಎಲ್ಲವೂ ಕರಾರುವಕ್ಕಾಗಿತ್ತು. ಮಹಾನಗರದ ಯಾವುದೋ ಒಂದು ಸ್ಲಮ್ಮಿನ ಭಾಗವೊಂದನ್ನು ರಂಗವೇದಿಕೆಯ ಮೇಲೆ ಸೃಷ್ಟಿಸಿದಂತಿತ್ತು. ಅದಕ್ಕಿಂತಲೂ ಹೆಚ್ಚಾಗಿ ರಂಗಸಜ್ಜಿಕೆಯನ್ನು ಪ್ರತಿ ಪಾತ್ರಗಳು ಬಳಸಿದ ರೀತಿ ಅದ್ಬುತ. ಕೆಳದರ್ಜೆಯ ಜನರ ತೇಪೆ ಹಾಕಿದಂತಹ ಕಾಸ್ಟೂಮ್ಗಳು ಸಹ ಇಲ್ಲಿ ಕಲಾತ್ಮಕವಾಗಿ ಮೂಡಿಬಂದಿದ್ದೊಂದು ಸೋಜಿಗ. ಪ್ರತಿಯೊಂದು ಪಾತ್ರವನ್ನು ರೂಪಿಸುವಲ್ಲಿ ಶ್ರಮಿಸಿದ ಪ್ರಸಾಧನ ಕಲಾವಿದ ಪುರುಷೋತ್ತಮ ತಲವಾಟರವರ ಕೌಶಲ್ಯ ಅನನ್ಯ.


          ಇಡೀ ನಾಟಕ ಸಂಭಾಷನಾ ಪ್ರಧಾನವಾಗಿದೆ. ನಾಟಕಕ್ಕೆ ಕಥೆ ಇಲ್ಲದ್ದರಿಂದ, ಪಾತ್ರಗಳು ಬರ್ತಾವೆ ಮಾತಾಡ್ತಾವೆ ಹೋಗ್ತಾವೆ. ನಾಟಕದಾದ್ಯಂತ ಉತ್ತರ ಕರ್ನಾಟಕದ ಭಾಷೆ ಬಳಕೆಯಾಗಿದೆ. ಭಾಗದ ಕಲಾವಿದರನ್ನು ಹೊರತು ಪಡಿಸಿ ಬೇರೆ ನಟರಿಗೆ ಭಾಷೆಯ ಮೇಲೆ ಪ್ರಭುತ್ವ ಬಾರದಿರುವುದರಿಂದ ಸಂಭಾಷನೆಯ ಸೊಗಡು ಅಲ್ಲಲ್ಲಿ ಆಭಾಸವೆನಿಸುತ್ತದೆ. ನಾಕಾನೆ ಎಂಟಾನೆ ಕಾಲದಲ್ಲಿ, ಸ್ವಾತಂತ್ರ್ಯ ಪೂರ್ವದ ಕಾಲಘಟ್ಟದಲ್ಲಿ ನಡೆಯುವ ನಾಟಕದೊಳಗಿನ ಅನಕ್ಷರಸ್ತ ಪಾತ್ರಗಳೂ ಸಹ ಆಗಾಗ ಇಂಗ್ಲೀಷ್ ಶಬ್ದಗಳನ್ನು ಬಳಸುವುದು ಅಸಮಂಜಸವೆನ್ನಿಸುತ್ತದೆ. ಪಾತ್ರಗಳು ಬಳಸುವ ಭಾಷೆಗೂ ಹಾಗೂ ವೇಷಗಳಿಗೂ ಯಾವ ಸಂಬಂಧವೂ ಇಲ್ಲ. ಉತ್ತರ ಕರ್ನಾಟಕದಲ್ಲಿ ನಾಟಕದ ಗಂಡು ಪಾತ್ರಗಳ ಹಾಗೆ ಯಾರೂ ಕಾಸ್ಟೂಮ್ಸ ಹಾಕಿಕೊಳ್ಳುವುದಿಲ್ಲ. ಅಸಂಬದ್ದತೆಯನ್ನು ತಪ್ಪಿಸಲು, ನಗರದ ಸ್ಲಂನಲ್ಲಿ ನಡೆಯುವ  ಘಟನೆಗಳುಳ್ಳ ನಾಟಕದಲ್ಲಿ ನಗರದ ಭಾಷೆ ಬಳಸಿದರೂ ನಾಟಕಕ್ಕೆ ಏನೂ ಅಪಚಾರವಾಗುತ್ತಿರಲಿಲ್ಲ.
          ಬಾಡಿಗೆಗೆ ಕೊಟ್ಟ ಮನೆ ಮಾಲೀಕನನ್ನು ಒಂಚೂರು ಮರ್ಯಾದೆ ಕೊಡದೇ ಆತನ ಎದುರೇ ನಿಂದಿಸುವ ಪಾತ್ರಗಳು, ಅತಿ ಎನಿಸುವ ಗೌರಮ್ಮ ಪಾತ್ರದ ಕೆಮ್ಮು, ಮಹಿಳೆಯರ ಬ್ಲೌಸ್ ಧರಿಸಿ ಬರುವ ಪೊಲೀಸು, ಭಾಷೆಗೂ ವೇಷಕ್ಕೂ ಸಂಬಂಧ ಇಲ್ಲದಿರುವುದು, ಅನಗತ್ಯವಾಗಿ ಇಂಗ್ಲೀಷ ಪದಗಳ ಬಳಕೆ, ಅತಿಯಾದ ವಿನೋದದಲ್ಲಿ ಮರೆಯಾಗಿ ಹೋದ ವಿಷಾದ, ಎರಡೂವರೆ ಗಂಟೆಯಷ್ಟು ಸುದೀರ್ಘವಾದ ಕಾಲಾವಧಿ...... ಇವು ನಾಟಕದ ನಕಾರಾತ್ಮಕ ಅಂಶಗಳಾಗಿವೆ.
ಚಿದಂಬರರಾವ್ ಜಂಬೆ
          ಅದ್ಬುತವಾದ ಸೆಟ್, ಕಲಾತ್ಮಕವಾದ ಕಾಸ್ಟೂಮ್ಸ, ವಿಶಿಷ್ಟವಾದ ಬ್ಲಾಕಿಂಗ್, ಎಂಟ್ರಿ, ಎಕ್ಸಿಟ್ ಮತ್ತು ಮೂವಮೆಂಟ್ಸ, ಕಲಾವಿದರ ಲವಲವಿಕೆಯ ಅಭಿನಯ ಹಾಗೂ ಪಂಚ್ ಮಾತುಗಳು, ಪೂರಕವಾದ ಬೆಳಕು ಸಂಯೋಜನೆ, ಮತ್ತು ಚುರುಕಾದ ಉತ್ತರ ಕರ್ನಾಟಕ ಭಾಷೆಯ ಮಾರ್ಮಿಕವಾದ ಸಂಭಾಷನೆಗಳು ನಾಟಕದ ಸಕಾರಾತ್ಮಕ ಅಂಶಗಳಾಗಿವೆ.  ಕಥೆ ಇಲ್ಲದ ನಾಟಕವನ್ನೂ ಎಲ್ಲೂ ಬೋರಾಗದಂತೆ ಕಟ್ಟಿ ಕೊಟ್ಟ ಚಿದಂಬರರಾವ್ ಜಂಬೆಯವರಿಗೆ ಅಭಿನಂದನೆಗಳು.  
                   ಗೂಡು ಗೂಡು... ಗೂಡಿನೊಳಗಿನ ಮಾಡು ನೋಡಣ್ಣ,
                   ಮಾಡಿನೊಳಗೆ ಆಡುತಿರುವ ಗಿಳಿಯ ನೋಡಣ್ಣ....
          ಬಸವರಾಜ ಸಬರದರು ಬರೆದ ಹಾಡು ಸೊಗಸಾಗಿದೆ. ನಾಟಕದ ಕೊನೆಗೆ ಎಲ್ಲಾ ಕಲಾವಿದರೂ ಸೇರಿ ಇದನ್ನು ಹಾಡುತ್ತಾರೆ. ಅಲ್ಲಿವರೆಗೂ ಗೂಡು, ಗೂಡಿನೊಳಗಿನ ಗೋಳು, ಗೋಳಿನೊಳಗಿನ ಪಾಡು ನೋಡಿದ ಪ್ರೇಕ್ಷಕರಿಗೆ ಮಾಡಿನೊಳಗೆ ಆಡುತಿರುವ ಗಿಳಿ ಮಾತ್ರ ಅನುಭವಕ್ಕೆ ಬರುವುದೇ ಇಲ್ಲ. ಕಥಾನಕದ ಕೊರತೆಯಿಂದಾಗಿ ನಾಟಕವನ್ನು ಸರಳವಾಗಿ ಅರ್ಥೈಸಿಕೊಳ್ಳುವುದು ಸಾಧ್ಯವಿಲ್ಲ. ಎನಿದು ತಳಾ ಬುಡಾ ಒಂದೂ ತಿಳಿವಲ್ದು ಎಂದು ನಾಟಕದ ಪಾತ್ರವೊಂದು ಹೇಳುತ್ತದೆ. ಬಹುಷಃ ಸಾಮಾನ್ಯ ಪ್ರೇಕ್ಷಕರು ನಾಟಕದ ನಂತರ ಕೇಳುವ ಪ್ರಶ್ನೆಯೂ ಅದೇ ಆಗಿದೆ. ನಾಟಕ ಪೂರಾ ನಿರೂಪನೆ ಇಲ್ಲದ ಸ್ಲಂ ಕುರಿತ ಸಾಕ್ಷಚಿತ್ರವೊಂದನ್ನು ನೋಡಿದ ಅನುಭವವಾಗುತ್ತದೆ.

                                                                      -ಶಶಿಕಾಂತ ಯಡಹಳ್ಳಿ


 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ