ಶನಿವಾರ, ನವೆಂಬರ್ 2, 2013

ಅಭಿವ್ಯಕ್ತಿ ಸ್ವಾತಂತ್ರ್ಯದ ಬಲೆಯಲ್ಲಿ ಗಿರೀಶ್ ಕಾರ್ನಾಡ್:



ಲೇಖನ :  
ಅಭಿವ್ಯಕ್ತಿ ಸ್ವಾತಂತ್ರ್ಯದ ಬಲೆಯಲ್ಲಿ ಗಿರೀಶ್ ಕಾರ್ನಾಡ್:



        ಎರಡನೇ ಮಹಾಯುದ್ಧ ಮುಗಿದ ನಂತರದ ವರ್ಷದಲ್ಲಿ ಹಲವಾರು ದೇಶಗಳು ಸ್ವತಂತ್ರವಾದವು. ಆಗ ಶ್ವಾನಗಳೆಲ್ಲಾ ಬೇಸರಗೊಂಡು ತಮ್ಮ ತಮ್ಮ ದೇಶಗಳನ್ನ ಬಿಟ್ಟು ಹೊರಬಂದು ಒಂದೆಡೆ ಸಭೆ ಸೇರಿದವಂತೆ. ಭಾರತ, ಪಾಕಿಸ್ತಾನ ಮುಂತಾದ ದೇಶಗಳ ಶ್ವಾನಗಳು ರಷಿಯಾದ ನಾಯಿಯನ್ನು ನೋಡಿ ಅಚ್ಚರಿಗೊಂಡು ಕೇಳಿದವಂತೆ. ನಾವೇನೋ ಹೊಟ್ಟೆಗೆ ಹಿಟ್ಟಿಲ್ಲದೇ, ಬಡತನವನ್ನು ಸಹಿಸಲಾರದೇ ದೇಶವನ್ನು ಬಿಟ್ಟು ಬಂದಿದ್ದೇವೆ. ನೋಡು ತಿನ್ನಲು ಕೂಳಿಲ್ಲದೇ ಎಷ್ಟೊಂದು ಬಡವಾಗಿದ್ದೇವೆ. ನಾವು ದೇಶ ಬಿಟ್ಟು ಬಂದಿದ್ದಕ್ಕೆ ಅರ್ಥ ಇದೆ. ಆದರೆ ನೀನು ಬೇಕಾದಷ್ಟು ತಿಂದುಂಡು ದಪ್ಪಗಾಗಿದ್ದೀಯಾ, ಕೂಳಿಗೇನೂ ಕೊರತೆ ಇಲ್ಲಾ ಅಂತಾ ನಿನ್ನ ನೋಡಿದರೆ ಅನ್ನಿಸುತ್ತದೆ. ಎಲ್ಲಾ ಅನೂಕೂಲ ಇದ್ದರೂ ಯಾಕೆ ನಿನ್ನ ದೇಶವನ್ನು ಬಿಟ್ಟು ಬಂದೆ ಹೇಳು ಅಂತಾ ರಷ್ಯಾ ದೇಶದ ಶ್ವಾನವನ್ನು ಇಲ್ಲಾ ಬಡದೇಶದ ನಾಯಿಗಳು ಒಕ್ಕೂರಲಿನಿಂದ ಒತ್ತಾಯಿಸಿದವಂತೆ. ನಮ್ಮ ದೇಶದಲ್ಲಿ ಯಾವುದಕ್ಕೂ ಕೊರತೆ ಇಲ್ಲವೇ ಇಲ್ಲಾ. ಸುಖವಾಗಿದ್ದೇವೆ. ಆದರೆ ನನಗೆ ಬೊಗಳಬೇಕೆಂಬ ಆಸೆ ಹತ್ತಿಕ್ಕಲಾರದೇ ದೇಶಾಂತರ ಬಂದೆ ಎಂದಿತಂತೆ ರಷ್ಯಾ ನಾಯಿ. ಎಲ್ಲಾ ನಾಯಿಗಳೂ ಮನಸೋ ಇಚ್ಚೆ ಬೊಗಳಿದವಂತೆ. ಬೊಗಳಿ ಬೊಗಳಿ ಜಗಳಕ್ಕೆ ಬಿದ್ದು ಕೊನೆಗೆ ಕಚ್ಚಾಡಿ ಸತ್ತವಂತೆ.
          ಇದು ರಷ್ಯಾದಲ್ಲಿ ಕಮ್ಯೂನಿಸ್ಟ್ ಆಡಳಿತ ಬಂದಾಗ ಮೇಲೆ ಹೇಳಿದ ಜೋಕ್ ವಿಶ್ವಾದ್ಯಂತ ತುಂಬಾ ಪ್ರಸಿದ್ಧಿಯನ್ನು ಪಡೆದಿತ್ತು. ಕಮ್ಯೂನಿಸ್ಟ್ ರಷಿಯಾದಲ್ಲಿ ಎಲ್ಲಾ ಇದೆ ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಮಾತ್ರ ಇಲ್ಲ. ನಾಯಿಗಳು ಬೊಗಳುವುದಕ್ಕೂ ಹೆದರಿಕೊಳ್ಳುತ್ತವೆ. ಬೇರೆ ದೇಶಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಬೇಕಾದಷ್ಟಿದೆ ಆದರೆ ಮೂಲಭೂತ ಅಗತ್ಯಗಳೇ ಸಮರ್ಪಕವಾಗಿಲ್ಲ ಎನ್ನುವುದನ್ನು  ಪರಿಣಾಮಕಾರಿಯಾಗಿ ಹೇಳುವ ಒಂದು ಪುಟ್ಟ ಜೋಕ್ ಹಲವಾರು ಅರ್ಥಗಳನ್ನು ಹೊರಹೊಮ್ಮಿಸುತ್ತದೆ.
          ಹೌದು, ಮನುಷ್ಯನಾದವನಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಅನ್ನೋದು ತುಂಬಾ ಅಗತ್ಯ. ಆದರೆ ಅದಕ್ಕೂ ಒಂದು ಇತಿ ಮಿತಿ ಇರಬೇಕು. ಒಬ್ಬರ ಅಭಿವ್ಯಕ್ತಿ ಸ್ವಾತಂತ್ರ್ಯ ಇನ್ನೊಬ್ಬನ ಸ್ವಾತಂತ್ರ್ಯವನ್ನು ಬಲಿತೆಗೆದುಕೊಳ್ಳುವಂತಿರಬಾರದು. ವ್ಯಯಕ್ತಿಕ ಅವಹೇಳನದ ಮಟ್ಟಕ್ಕೆ ಇಳಿಯಬಾರದು.  ಪ್ರಜಾಪ್ರಭುತ್ವ ಎನ್ನುವುದು ಅದರಲ್ಲೂ ಬಂಡವಾಳಶಾಹಿ ಪ್ರಜಾಪ್ರಭುತ್ವ ಎನ್ನುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅನುಕೂಲ ಮಾಡಿಕೊಟ್ಟಿದೆ. ಅದಕ್ಕೆ ಕಾರಣವೂ ಇದೆ. ಜನ ಹೊಟ್ಟೆಗಿಲ್ಲದೆ ಬದುಕಿಯಾರು, ಭ್ರಷ್ಟತೆಯನ್ನು ಸಹಿಸಿಯಾರು ಆದರೆ ಅನಗತ್ಯ ಮಾತನ್ನು ನಿರ್ಭಂದಿಸಿದರೆ ದಂಗೆಎದ್ದಾರು ಎಂದು ಆಳುವ ವರ್ಗಕ್ಕೆ ಚೆನ್ನಾಗಿ ಗೊತ್ತಿದೆ. ಯಾರು ಯಾರನ್ನು ಬೇಕಾದರು ಟೀಕಿಸಬಹುದು, ಅವಹೇಳನ ಮಾಡಬಹುದು, ಎದುರಾಳಿಗಳನ್ನು  ವ್ಯಯಕ್ತಿಕವಾಗಿ ಸಾರ್ವಜನಿಕವಾಗಿ  ನಿಂದಿಸಬಹುದು ಎನ್ನುವುದನ್ನು ತೋರಿಸಿಕೊಟ್ಟವರೇ ನಮ್ಮ ನಾಯಕ ಶಿಖಾಮಣಿಗಳು. ಚುನಾವಣೆ ಬಂದಾಗ ಪರನಿಂದನಾ ಪ್ರೇರಿತ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ತಾರಕಕ್ಕೇರುತ್ತದೆ. ನಾಯಕರೇ  ನಿಟ್ಟಿನಲ್ಲಿ ರಾಜಮಾರ್ಗ ಹಾಕಿಕೊಟ್ಟಾಗ ಇನ್ನು ಹಿಂಬಾಲಕರು ಸುಮ್ಮನಿರುತ್ತಾರಾ? ಆಳುವವರೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹೀಗೆ ಬೇಕಾಬಿಟ್ಟಿ ಬಳಸುವಾಗ ಇನ್ನು ಪ್ರಜೆಗಳು ಸುಮ್ಮನಿರುತ್ತಾರಾ? ಹೀಗಾಗಿ ಭಾರತದಂತ ದೇಶದಲ್ಲಿ ಪ್ರತಿದಿನ ಜಗಳ, ಪ್ರತಿ ಕ್ಷಣ ಅಸಮಾಧಾನ. ಪ್ರತಿಯೊಂದಕ್ಕೂ ಸಂಘರ್ಷ... ನಿರಂತರವಾಗಿದೆ ಎನ್ನುವುದಕ್ಕೆ ಸುದ್ದಿಮಾಧ್ಯಮಗಳೇ ದಿನನಿತ್ಯ ಸಾಕ್ಷಿಯಾಗಿವೆ.
          ತಾರ್ಕಿಕ ನೆಲೆಯಲ್ಲಿ ಪ್ರಶ್ನಿಸುವುದು ಬೇರೆ, ಅತಾರ್ಕಿಕವಾಗಿ ನಿಂದಿಸುವುದು ಬೇರೆ. ಯಾವಾಗ ವ್ಯಯಕ್ತಿಕ ಅಭಿಪ್ರಾಯಗಳನ್ನು ಅತಾರ್ಕಿಕ ನೆಲೆಯಲ್ಲಿ ಸಾರ್ವತ್ರಿಕಗೊಳಿಸಲಾಗುತ್ತದೆಯೋ ಆಗೆಲ್ಲಾ ಅನಗತ್ಯ ಸಂಘರ್ಷ ಆರಂಭವಾಗುತ್ತದೆ. ಇದಕ್ಕೊಂದು ಪ್ರಸ್ತುತ ಉದಾಹರಣೆ ಗಿರೀಶ ಕಾರ್ನಾಡರು ಹುಟ್ಟು ಹಾಕಿದ ಅನಗತ್ಯ ವಿವಾದ. ಕಾರ್ನಾಡರ ಪ್ರತಿಭೆಯ ಬಗ್ಗೆ, ಅವರು ರಂಗಭೂಮಿಗೆ ಕೊಟ್ಟ ಅಪೂರ್ವ ನಾಟಕಗಳ ಬಗ್ಗೆ ಹಾಗೂ ಅವರಿಗೆ ದೊರಕಿದ ಜ್ಞಾನಪೀಠದ ಕುರಿತು ಕನ್ನಡಿಗರಿಗೆ ಅಪಾರವಾದ ಆದರವಿದೆ. ಆದರೆ ಅವರು ಆಗಾಗ ತೆಗೆಯುವ ಅನಗತ್ಯ ಖ್ಯಾತೆಗಳ ಬಗ್ಗೆ ಸಾರಸ್ವತ ಲೋಕದಲ್ಲೇ ಅಸಮಾಧಾನವಿದೆ

   ಹಿಂದೆ ನೊಬೆಲ್ ಪ್ರಶಸ್ತಿ ಪುರಸ್ಕೃತ ನೈಪಾಲ್ರವರನ್ನೂ ಸನ್ಮಾನ ಸಮಾರಂಭವೊಂದರಲ್ಲಿ ಕಾರ್ನಾಡರು ಅನಗತ್ಯವಾಗಿ ಟೀಕಿಸಿ ಅವಮಾನ ಮಾಡಿದ್ದರು. ರಂಗಶಂಕರದ ಮೂಲಕ ರಂಗಭೂಮಿಯಲ್ಲಿ ಕಾರ್ಪೋರೇಟ್ ಕಲ್ಚರನ್ನು ಪ್ರತಿಷ್ಠಾಪಿಸಿದರು, ರಾತ್ರಿ ನಡೆಯುವ ಬಾರ್ ಹಾಗೂ ನಂಗಾನಾಚ್ ಡಿಸ್ಕೋಥೆಕ್ಗಳನ್ನು  ಸಮರ್ಥಿಸಿ ಪ್ರತಿಭಟಿಸಿದರು,   
          ಸುಮ್ಮನಿರದೆ ಇರುವೆ ಬಿಟ್ಟುಕೊಂಡರೆಂಬಂತೆ ದೇಶವೇ ಗೌರವಿಸುವ ದಾರ್ಶನಿಕ ಸಾಹಿತಿ, ನಾಟಕಕಾರ ರಾಷ್ಟ್ರಕವಿ ರವೀಂದ್ರ ಟ್ಯಾಗೋರರ ಬಗ್ಗೆ ಅತ್ಯಂತ ಹಗುರವಾದ ಹೇಳಿಕೆಯನ್ನು ಕಾರ್ನಾಡರು ಸ್ಪೋಟಿಸಿದರು. ಕಳೆದ ವರ್ಷ ಜೈಪುರದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಟಾಗೋರರು ಮೂರನೇ ದರ್ಜೆ ನಾಟಕಕಾರ ಎಂದು ಸಾರ್ವಜನಿಕವಾಗಿ ತಮ್ಮ ವ್ಯಕ್ತಿಗತ ವೈಷಮ್ಯವನ್ನು ಹೊರಹಾಕಿದರು. ಇದು ದೇಶಾದ್ಯಂತ ವಿವಾದದ ಅಲೆ ಎಬ್ಬಿಸಿತ್ತು.
          ಟಾಗೋರರ ನಾಟಕದ ಬಗ್ಗೆ ಅಸಮಾಧಾನವಿದ್ದರೆ ಅದನ್ನು ತಾರ್ಕಿಕವಾಗಿ ಒರಗೆ ಹಚ್ಚಿ ಸಾಕ್ಷಿ ಆಧಾರಗಳ ಸಮೇತ ಸಂಬಂಧಿಸಿದ ನಾಟಕಗಳ ಕುರಿತು ವಿಮರ್ಶೆ ಮಾಡಿದ್ದರೆ ಕಾರ್ನಾಡರ ನಿಲುವನ್ನು ಸ್ವಾಗತಿಸಬಹುದಾಗಿತ್ತು. ಹೋಗಲಿ ತಮ್ಮ ನಾಟಕಗಳು ವಿಶ್ವಶ್ರೇಷ್ಠ ನಾಟಕಗಳು ಎಂದು ತನ್ನಬನ್ನಿಸಿಕೊಂಡಿದ್ದರೂ ಸಹಿಸಿಕೊಳ್ಳಬಹುದಿತ್ತು. ಆದರೆ ಶ್ರೇಷ್ಟತೆಯ ವ್ಯಸನಕ್ಕೆ ಬಿದ್ದ ಕಾರ್ನಾಡರು ಯಾವಾಗ ಮತ್ತೊಬ್ಬ ನಾಟಕಕಾರನನ್ನು ಮೂರನೇ ದರ್ಜೆಗೆ ಹೋಲಿಸಿದರೋ ಆಗ ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗವೆನಿಸಿತು. ವಿರೋಧಿಗಳ ಕೈಗೆ ತಾವೇ ಟೀಕಾಸ್ತ್ರವನ್ನು ಕೊಟ್ಟು ತಮ್ಮ ಮೇಲೆ ಪ್ರಯೋಗ ಮಾಡಲು ಅನುವುಮಾಡಿಕೊಟ್ಟರು. ಇಂತಹುದನ್ನು ಕೋಮುವಾದಿಗಳು ಸಮರ್ಥವಾಗಿ ಬಳಸಿಕೊಂಡು ಕಾರ್ನಾಡರ ಜೊತೆಗೆ ಇತರೆ ಪ್ರಗತಿಪರ ಬುದ್ದಿ ಜೀವಿಗಳ ಮಾನ ಹರಾಜಿಗೆ ವೇದಿಕೆಗಳನ್ನು ಸಿದ್ಧಮಾಡಿಕೊಂಡರು. ಇಂತಹ ವಿವಾದಾತ್ಮಕ ಹೇಳಿಕೆಗಳಿಗಾಗಿ ಕಾಯುತ್ತಿರುವ ಸುದ್ದಿ ಮಾಧ್ಯಮಗಳು ಇದನ್ನೇ ರಾಷ್ಟ್ರೀಯ ಪ್ರಮುಖ ಸುದ್ದಿಯನ್ನಾಗಿಸಿ ಕಾರ್ನಾಡರ ವ್ಯಯಕ್ತಿಕ ಹೇಳಿಕೆಯನ್ನು ಸಾರ್ವತ್ರಿಕಗೊಳಿಸಿದವು. ಕಾರ್ನಾಡರ ವ್ಯಯಕ್ತಿಕ ಅಭಿಪ್ರಾಯವನ್ನೇ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಕೆಲವು ಸೋ ಕಾಲ್ಡ್ ಬುದ್ದಿಜೀವಿಗಳು ಸಮರ್ಥಿಸಿಕೊಂಡರು.
          ಆದರೆ ಕಾರ್ನಾಡರ  ಬಾಲಿಶವಾದ ಹೇಳಿಕೆಗೆ ಮರ್ಮಾಘಾತವನ್ನು ಕೊಟ್ಟವರು ಪಾಂಡಿಚೇರಿಯ ರಂಗನಿರ್ದೇಶಕ ಕೌಮಾರಿನೋ ವಾಲವೇನ್. ಬೆಂಗಳೂರಿನ ರಂಗಶಂಕರದಲ್ಲಿ ೨೦೧೩, ಅಕ್ಟೋಬರ್ ೧೮ರಿಂದ ೨೭ರವರೆಗೆ ಕಾರ್ನಾಡರ ನಾಟಕೋತ್ವವನ್ನು ರಂಗಶಂಕರದ ಅರುಂಧತಿನಾಗ್ರವರು ಹಮ್ಮಿಕೊಂಡಿದ್ದರು. ನಾಟಕೋತ್ವದಲ್ಲಿ ಕಾರ್ನಾಡರ ಒಟ್ಟು ಎಂಟೂ ನಾಟಕಗಳು, ಅವರು ಅಭಿನಯಿಸಿದ ನಾಟಕಗಳ ಆಯ್ದ ಭಾಗಗಳು ಮತ್ತು ಅವರ ನಿರ್ದೇಶನದ ಕಾಡು ಸಿನೆಮಾ ಪ್ರದರ್ಶನಗೊಂಡವು. ಅವರ ನಾಟಕಗಳ ಕುರಿತು ಎರಡು ದಿನಗಳ ಕಾಲ ವಿಚಾರ ಸಂಕಿರಣವೂ ನಡೆಯಿತು. ಎಲ್ಲವೂ ಸೂಸೂತ್ರವಾಗಿ ಗಿರೀಶ್ ಕಾರ್ನಾಡರ ಖ್ಯಾತಿಗೆ ಪೂರಕವಾಗಿಯೇ ನಡೆಯಿತು. ಬಹುಪರಾಕ್ಗಳಿಗೇನೂ ಕೊರತೆ ಇರಲಿಲ್ಲ.  ಅವತ್ತು ಅಕ್ಟೋಬರ್ ೨೩. ಪಾಂಡಿಚೇರಿಯ ಇಂಡಿಯನ್ ಆಸ್ಟ್ರಮ್ ರಂಗತಂಡ ರಂಗಶಂಕರದ ಆಹ್ವಾನದ ಮೇರೆಗೆ ಕಾರ್ನಾಡರ ಡ್ರೀಮ್ಸ್ ಆಪ್ ಟಿಪ್ಪು ಸುಲ್ತಾನ್ ನಾಟಕವನ್ನು ಪ್ರದರ್ಶಿಸಿತು. 
ಕಾರ್ನಾಡರ ನಾಟಕದ ಮೂಲಕವೇ ಕಾರ್ನಾಡರ ಅತಿರೀಕದ ಅಭಿವ್ಯಕ್ತಿ ಸ್ವತಂತ್ರ್ಯಕ್ಕೆ  ಉತ್ತರ ಕೊಡಲು ನಾಟಕದ ನಿರ್ದೇಶಕ ಮೊದಲೇ ಪೂರ್ವತಯಾರಿ ಮಾಡಿಕೊಂಡೇ ಬಂದಿದ್ದರು. ನಾಟಕ ಕೊನೆವರೆಗೂ ನಾಟಕದ ಸ್ಕ್ರಿಪ್ಟ್ ನಲ್ಲಿರುವಂತೆಯೇ ನಡೆಯಿತು. ಆದರೆ ನಾಟಕದ ಕೊನೆಯ ೧೦ ನಿಮಿಷಗಳ ಒಂದು ದೃಶ್ಯವನ್ನು ನಿರ್ದೇಶಕರು ಹೆಚ್ಚುವರಿಯಾಗಿ ಸೃಷ್ಟಿಸಿದ್ದರು. ಅದನ್ನು ನೋಡುತ್ತಲೇ ಕಾರ್ನಾಡರ ಅಭಿಮಾನಿಗಳ ಹುಬ್ಬುಗಳು ಗಂಟಿಕ್ಕಿದವು. ಇಡೀ ರಂಗಮಂದಿರ ಅಚ್ಚರಿಗೊಂಡಿತು.
          ಇನ್ನೇನು ನಾಟಕದ ಕೊನೆಯ ಅಂಕ ಮುಗಿಯಬೇಕಿತ್ತು. ಇದ್ದಕ್ಕಿದ್ದಂತೆ ಮುಸುಕುದಾರಿ ಭಯೋತ್ಪಾದಕ ವೇಷದಾರಿಯೊಬ್ಬ ವೇದಿಕೆಗೆ ನುಗ್ಗಿಬಿಟ್ಟ. ದೇಶ ವಿರೋಧಿ ಸಂಭಾಷಣೆ ಹೇಳತೊಡಗಿದ. ನಿಜಕ್ಕೂ ಇದನ್ನು ನಿರೀಕ್ಷಿಸದ ಪ್ರೇಕ್ಷಕರು ಗಲಿಬಿಲಿಗೊಳಗಾದರು.   ಭಯೋತ್ಪಾದಕ ರಂಗವೇದಿಕೆಯ ಮೇಲೆ ಹತ್ಯೆಗೂ ಒಳಗಾದ. ಸಹ ಕಲಾವಿದನೊಬ್ಬ ಬಂದು ಭಯೋತ್ಪಾದಕನ ಮುಸುಕು ತೆಗೆದು ಹೇಳಿದ ಇವನು ಭಯೋತ್ಪಾದಕನಲ್ಲ ಗಿರೀಶ್ ಕಾರ್ನಾಡ್ ಎಂದು. ನೋಡುಗರಲ್ಲಿ ವಿದ್ಯುತ್ ಸಂಚಾರವಾದಂತಾಯಿತು. ಜೊತೆಗೆ ಗಿರೀಶ್ ಕಾರ್ನಾಡ್ ಸತ್ತರು ಎನ್ನುವ ಹಾಹಾಕಾರವೂ ಹಿನ್ನೆಲೆಯಲ್ಲಿ ಕೇಳಿಬಂತು.  ಅದರ ಜೊತೆಗೆ ಏನೋ ದುರ್ವಾಸನೆ ಬರ್ತಿದೆ... ಎನ್ನುವ ಮಾತು ಸಹಕಲಾವಿದರಿಂದ ಬಂತು. ಇಷ್ಟೆಲ್ಲಾ ಆದ ಮೇಲೆ ಶವವನ್ನು ಹುಡುಕಿ ಕೆಲವು ಕಾಗದಗಳನ್ನು ಹುಡುಕಿ ತೆಗೆದ ನಟನೊಬ್ಬ ಹೆಳಿದ ಮಾತು ಗಿರೀಶ್ ಕಾರ್ನಾಡರ ಮರ್ಮಕ್ಕೆ ತಾಕುವಂತಿತ್ತು. ಆತ ಕಾಗದ ಹಿಡಿದು ಹೇಳಿದ್ದು ಬುಲ್ಶಿಟ್ ಎಂದು. ಬರೀ ಹೇಳುವುದಲ್ಲ ಎಲ್ಲಾ ಕಾಗದಗಳನ್ನು ಹರಿದೆಸೆದು ಬಿಟ್ಟ. ಡಬಾರ್ ಎಂದು ಕಾರ್ನಾಡರ ಕೆನ್ನೆಗೆ ಯಾರೋ ಬಾರಿಸಿದಂತೆ ಕೆಲವರಿಗೆ ಭಾಸವಾಯಿತು

    ಒಂದಿಬ್ಬರು ಕಾರ್ನಾಡಾಭಿಮಾನಿಗಳು ಕಾರ್ನಾಡರಿಗೆ ಅವಮಾನಮಾಡಲಾಗಿದೆ ಎಂದು ರಂಗವೇದಿಕೆ ಏರಿ ಅಬ್ಬರಿಸಿದರು. ಇನ್ನು  ಕೆಲವರು ತಮ್ಮದೇ ರೀತಿಯಲ್ಲಿ ಪ್ರತಿಭಟಿಸಿದರು. ಇನ್ನೆಲ್ಲಿ ಗಲಾಟೆಯಾಗುತ್ತದೋ ಎಂದು ಆತಂಕಕ್ಕೊಳಗಾದ ರಂಗಶಂಕರದ ಆರುಂಧತಿನಾಗ್ ವೇದಿಕೆ ಏರಿ ನಾಟಕಕ್ಕೆ ಸೆನ್ಸಾರ್ ಇಲ್ಲಾ, ನಾಟಕದವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ, ಭಿನ್ನಾಭಿಪ್ರಾಯವಿದ್ದರೆ ಸಂಜೆ ಪ್ರದರ್ಶನದಲ್ಲಿ ನಾಟಕದ ನಿರ್ದೇಶಕರನ್ನೇ ಕೇಳಿ ಎಂದು ಹೇಳಿ ತಮ್ಮದೇ ರೀತಿಯಲ್ಲಿ ಕಾರ್ನಾಡರನ್ನು ಸಮರ್ಥಿಸಿಕೊಂಡರು. ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲಾ ಎಂದು ಹೇಳಿದ ಇದೇ ಆರುಂಧತಿಯವರು ನಂತರ ಕೆಲವರನ್ನು ರಂಗನಿರ್ದೇಶಕ ವಾಲವೇನ್ರವರ ಹತ್ತಿರ ಕಳುಹಿಸಿ ಸಂಜೆಯ ನಾಟಕ ಪ್ರದರ್ಶನದಲ್ಲಿ ಕೊನೆಯ ದೃಶ್ಯ ಕೈಬಿಡುವಂತೆ ಒತ್ತಾಯಿಸಲೂ ಪ್ರೇರೇಪಿಸಿದರು. ಪ್ರತಿಭಟನೆಕಾರರ ಒತ್ತಾಯಕ್ಕೆ ಮಣಿದು ಆಗೇನೋ ಆಯಿತು ಎಂದು ಒಪ್ಪಿಕೊಂಡ ವಾಲವೇನ್ ಸಂಜೆಯ ಮರುಪ್ರದರ್ಶನದಲ್ಲೂ  ದೃಶ್ಯವನ್ನು ಮುಂದುವರೆಸಿದರು. ಕಾರ್ನಾಡರ ಅಧಿಕಪ್ರಸಂಗತನಕ್ಕೆ ಉತ್ತರ ಕೊಡಬೇಕೆಂದೇ ಪೂರ್ವ ಸಿದ್ಧತೆ ಮಾಡಿಕೊಂಡು ಬಂದಿದ್ದ  ನಾಟಕದ ನಿರ್ದೇಶಕರು ತಮ್ಮ ಆಶಯದಲ್ಲಿ ಯಶಸ್ವಿಯಾದರು. ಒಬ್ಬ ನಾಟಕಕಾರರಾಗಿ ಕಾರ್ನಾಡರು ಸಾರ್ವತ್ರಿಕವಾಗಿ ಇನ್ನೊಬ್ಬ ವಿಶ್ವಪ್ರಸಿದ್ಧ ಕವಿ- ನಾಟಕಕಾರನಿಗೆ ಅವಮಾನ ಮಾಡಿದ್ದಕ್ಕೆ ಪ್ರತೀಕಾರವಾಗಿ ಇನ್ನೊಬ್ಬ ರಂಗನಿರ್ದೇಶಕ ತಮ್ಮ ನಾಟಕದ ಮೂಲಕ ಉತ್ತರವನ್ನು ಹೀಗೆ ಕೊಟ್ಟಿದ್ದು ರಂಗಭೂಮಿಯಲ್ಲೇ ವಿಶಿಷ್ಟವಾದದ್ದು.
          ಟಾಗೋರರನ್ನು ಮೂರನೇ ದರ್ಜೆಯ  ನಾಟಕಕಾರನೆಂದು ಸಾರ್ವಜನಿಕವಾಗಿ ನಿಂದಿಸಿದ  ಕಾರ್ನಾಡರನ್ನು ವೈಚಾರಿಕ ಭಯೋತ್ಪಾದಕ, ಅವರ ಬರವಣಿಗೆಯಲ್ಲಿ ಬರೀ ದುರ್ವಾಸನೆಯೇ ಬರ್ತಿದೆ, ಕಾರ್ನಾಡರು ಸತ್ತೇ ಹೋಗಿದ್ದಾರೆ, ಅವರು ಬರೆದಿದ್ದೆಲ್ಲಾ ದನದ ಸೆಗಣಿ ಎಂದು ನಾಟಕದ ದೃಶ್ಯದಲ್ಲಿ ತೋರಿಸುವ ಮೂಲಕ ವಾಲವೇನ್ರವರು ಇಟ್ಟಿಗೆ ಏಟಿಗೆ ಉತ್ತರವನ್ನು ಕಲ್ಲಿನಿಂದ ಕೊಟ್ಟಿದ್ದಾರೆ. ಟಾಗೋರರನ್ನು ಮೂರನೇ ದರ್ಜೆಯ ನಾಟಕಕಾರ ಎಂದು ಹೇಳುವುದು ಕಾರ್ನಾಡರ ಅಭಿವ್ಯಕ್ತಿ ಸ್ವಾತಂತ್ರ್ಯ ಅನ್ನುವುದಾದರೆ ಕಾರ್ನಾಡರ ನಾಟಕಗಳನ್ನು ಬುಲ್ಶಿಟ್ ಎನ್ನುವುದು ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ನಾಟಕದ ಪ್ರದರ್ಶನದ ನಂತರ ಕೌಮಾರಿನೋ ಮಾಲವೇನ್ ಕೊಟ್ಟ ದಿಟ್ಟ ಉತ್ತರ ಕಾರ್ನಾಡರು ಹಾಗೂ ಅವರ ಸಮರ್ಥಕರು ಮುಟ್ಟಿನೋಡಿಕೊಳ್ಳುವಂತಿತ್ತು. ಅದಕ್ಕಿಂತ ಹೆಚ್ಚಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದಕ್ಕೆ ಕೊಟ್ಟ ವ್ಯಾಖ್ಯಾನವೂ ಇದಾಗಿತ್ತು
  ಈ ಇಬ್ಬರೂ ಮಾಡಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗವೇ. ಕಾರ್ನಾಡರು ಅನಗತ್ಯವಾಗಿ ಟಾಗೋರರನ್ನು ನಿಂದಿಸಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮಾಡಿದ್ದರೆ, ಅನಗತ್ಯವಾಗಿ ನಾಟಕದ ಸ್ಕ್ರಿಪ್ಟ್ಗೆ ಸಂಬಂಧವಿಲ್ಲದ ದೃಶ್ಯವನ್ನು ಜೋಡಿಸಿ ಪ್ರದರ್ಶಿಸಿದ ರಂಗನಿರ್ದೇಶಕ ಕೌಮಾರಿನೋ ವಾಲವೇನ್ರವರೂ ಸಾಂಸ್ಕೃತಿಕ ಸೇಡಿಗೆ ಬಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಮಾಷೆಯ ವಿಷಯವನ್ನಾಗಿಸಿದ್ದಾರೆ.  ರೀತಿ ಅನಗತ್ಯವಾಗಿ ತೌಡು ಕುಟ್ಟುವುದರಿಂದ, ಒಬ್ಬರ ಮೇಲೆ ಇನ್ನೊಬ್ಬರು ಕೆಸರೆರಚುವುದರಿಂದ ಯಾವುದೇ ಹೊಸ ವಿಚಾರವೂ ಹುಟ್ಟುವುದಿಲ್ಲ. ಅನಗತ್ಯ ಚರ್ಚೆ, ಅತಾರ್ಕಿಕ ವಾದವಿವಾದ, ಅನುಕೂಲಸಿಂಧು ಸಂಘರ್ಷಗಳು ಉದ್ಭವವಾಗಿ ಸಮಾಜದ ನಿಜವಾದ ಸಮಸ್ಯೆಗಳು ಗೌಣವಾಗುತ್ತವೆ. ಸಮಸ್ಯೆಗಳಿಂದ ಜನರ ಆಕ್ರೋಶವನ್ನು ಬೇರೆಡೆಗೆ ತಿರುಗಿಸಬಯಸುವ ಆಳುವ ಸರಕಾರಗಳಿಗೆ, ಸುದ್ಧಿಗಾಗಿ ಹಸಿದು ಕುಳಿತಿರುವ ಸುದ್ದಿ ಮಾಧ್ಯಮಗಳಿಗೆ, ಸಮಾಜವನ್ನು ಒಡೆಯಲು ಸದಾ ಸನ್ನದ್ಧವಾದ ಸಮಾಜವಿರೋಧಿ ಶಕ್ತಿಗಳಿಗೆ... ವಾದವಿವಾದಗಳಿಂದ  ಲಾಭವಾಗುತ್ತದೆಯೇ ಹೊರತು ರಂಗಭೂಮಿಗಾಗಲೀ, ಸಾಹಿತ್ಯಲೋಕಕ್ಕಾಗಲೀ, ಜನರಿಗಾಗಲೀ ಇಂತಹ ನಕಾರಾತ್ಮಕ ಅಭಿವ್ಯಕ್ತಿ ಸ್ವಾತಂತ್ರ್ಯಗಳಿಂದ ಯಾವುದೇ ಅನುಕೂಲಗಳಿಲ್ಲ. ಸಮಾಜದ ಓರೆಕೊರೆಗಳನ್ನು ತಿದ್ದುವ, ಜನರನ್ನು ಜಾಗೃತಗೊಳಿಸುವ ಗುರುತರವಾದ ಜವಾಬ್ದಾರಿ ಇರುವ ರಂಗಮಾಧ್ಯಮದ ಪ್ರತಿಭಾವಂತರೇ ಹೀಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಒಬ್ಬರಿಗೊಬ್ಬರು ಮಸಿಬಳಿಯುವ, ನಿಂದಿಸುವ ಕೆಲಸಕ್ಕಿಳಿದು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಮರೆತು ನಡೆಯುವುದು ಸಾಂಸ್ಕೃತಿಕ ಲೋಕದ ವಿಪರ್ಯಾಸವಾಗಿದೆ. ರಾಜಕೀಯದಲ್ಲಿ ಇಂತಹ ಕೆಸರೆರಚಾಟಗಳಾದರೆ ನೋಡಿ ನಕ್ಕು ಅವಿವೇಕಿಗಳು ಎಂದು ಬೈದು ಸುಮ್ಮನಾಗಬಹುದಾಗಿತ್ತು. ಆದರೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಆಗುವ ಇಂತಹ ಬೆಳವಣಿಗೆಗಳು ನಕಾರಾತ್ಮಕ ಪರಿಣಾಮಗಳನ್ನುಂಟುಮಾಡುತ್ತವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಕಲ್ಪನೆ ಅಪಹಾಸ್ಯಕ್ಕೀಡಾಗುತ್ತದೆ. ಇದೆಲ್ಲಾ ಗಿರೀಶ್ ಕಾರ್ನಾಡರಂತ ಜ್ಞಾನಪೀಠಾಧಿಪತಿಗಳಿಗೆ ಬೇಕಿತ್ತಾ? ಅಥವಾ ಕ್ರಿಯಾಶೀಲತೆಯ ಸರಕು ಮುಗಿದ ಮೇಲೂ ಸದಾ ಸುದ್ದಿಯಲ್ಲಿರುವ ಶ್ರೇಷ್ಠತೆಯ ವ್ಯಸನವಾ?


-ಶಶಿಕಾಂತ ಯಡಹಳ್ಳಿ


         


         
         


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ