ಸೋಮವಾರ, ನವೆಂಬರ್ 18, 2013

ಚಲನಶೀಲ ನಾಟಕ ‘ಕಾರ್ವಾಲೋ’


ನಾಟಕ ವಿಮರ್ಶೆ :

   







ಪೂರ್ಣಚಂದ್ರ ತೇಜಸ್ವಿ
 ಕನ್ನಡಿಗರ ಹೆಮ್ಮೆಯ ಪ್ರತಿಭಾವಂತ ಲೇಖಕ ಪೂರ್ಣಚಂದ್ರ ತೇಜಸ್ವಿಯವರು ಬದುಕಿದ್ದರೆ ಈಗ ೭೫ ವರ್ಷ ತುಂಬುತ್ತಿತ್ತು. ಅವರ ೭೫ನೇ ವರ್ಷದ ಜನ್ಮದಿನಾಚರಣೆ ನೆನಪಿನಲ್ಲಿ ೨೦೧೩, ಸೆಪ್ಟೆಂಬರ್ ೮ರಿಂದ ಒಂದು ವಾರದ ಕಾಲ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕರ್ನಾಟಕ ಚಿತ್ರಕಲಾ ಪರಿಷತ್, ಭಾರತ ಯಾತ್ರಾ ಕೇಂದ್ರ, ವಿಸ್ಮಯ ಪ್ರತಿಷ್ಟಾನಗಳು ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಲಾಗಿದೆ. ಬಹುಮುಖಿ ಕಾರ್ಯಕ್ರಮದ ಭಾಗವಾಗಿ ತೇಜಸ್ವಿಯವರ ಕಾದಂಬರಿ ಕಾರ್ವಾಲೋವನ್ನು ರೂಪಾಂತರ ತಂಡವು ನಾಟಕವಾಗಿ ಅಭಿನಯಿಸುವ ಮೂಲಕ ಮಹಾಚೇತನಕ್ಕೆ ರಂಗನಮನವನ್ನು ಸಲ್ಲಿಸಿತು. ಕೆಎಸ್ಡಿಎಲ್ ಚಂದ್ರುರವರ ನಿರ್ದೇಶನದಲ್ಲಿ ಸೆಪ್ಟೆಂಬರ್ ೧೦ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡ ಕಾರ್ವಾಲೋ ನೋಡುಗರ ಗಮನ ಸೆಳೆಯಿತು.

                             ಜಗ ಸೋಜಿಗದ ಜಾಗ,
                             ಅರಿತವರಿಲ್ಲ ಆಳ ಅಗಲ ಆಯಾ,
                             ಎಲ್ಲಾ ಕಣ್ಚಿತ್ತ ಮಾಯಾ...
          ಬಸವರಾಜ ಸೂಳೇರಿಪಾಳ್ಯ ಬರೆದ ನಾಟಕದ ಶೀರ್ಷಿಕೆ ಗೀತೆ ಕಾರ್ವಾಲೋ ಆಶಯವನ್ನು ಕಟ್ಟಿಕೊಡುವ ಮೂಲಕ ನಾಟಕದಾದ್ಯಂತ ಪ್ರತಿದ್ವನಿಸಿ ಕೇಳುಗರಿಗೆ ಖುಷಿ ಕೊಡುತ್ತದೆ. ಜೀವ ವಿಕಾಸದ ರಹಸ್ಯವೊಂದನ್ನು ಬೇಧಿಸಲು ವಿಜ್ಞಾನಿ ಕಾರ್ವಾಲೋ ಮಾಡುವ ಪ್ರಯತ್ನ ಮತ್ತು ಪೂರಕವಾಗಿ ಹಲವು ದೃಶ್ಯಗಳು ರಂಗದ ಮೇಲೆ ಮೂಡುತ್ತಾ ಪ್ರೇಕ್ಷಕರಿಗೆ ಕಣ್ಚಿತ್ತ ಮಾಯೆಯನ್ನುಂಟು ಮಾಡುತ್ತವೆ.
          ನಾಟಕದ ನಾಯಕ ವಿಜ್ಞಾನಿ ಕಾರ್ವಾಲೋ ಅಲ್ಲಾ, ಕಥೆಗಾರ ಪೂರ್ಣಚಂದ್ರರೂ ಅಲ್ಲಾ, ಕೇವಲ ಯಕ್ಕಶ್ಚಿತ್ ಎನ್ನಬಹುದಾದ ಹಳ್ಳಿಗಾಡಿನ ಮುಗ್ದ ಅಶಿಕ್ಷಿತ ಯುವಕ ಮಂದಣ. ಸಮಾಜದ ಕನಿಷ್ಟ ಪಾತ್ರಗಳಿಗೂ ಗರಿಷ್ಟ ಮಹತ್ವವನ್ನು ಕೊಟ್ಟು ಪಾತ್ರ ಪೋಷಿಸುವುದು ತೇಜಸ್ವಿಯವರ ಹಿರಿಮೆ. ಓದಿದವರಿಗಿಂತಾ, ಬುದ್ದಿವಂತ ಕಥೆಗಾರರಿಗಿಂತ, ವಿಜ್ಞಾನಿಗಳಿಗಿಂತ ಹೆಚ್ಚಿನ ಪ್ರಾಯೋಗಿಕ ಅನುಭವ ಇರುವ ಮಂದಣ್ಣ ಕಾರ್ವಾಲೋ ನಾಟಕದ ಪ್ರಮುಖ ಪಾತ್ರವಾಗಿದ್ದಾನೆ. ಎಲ್ಲಾ ಜ್ಞಾನಕ್ಕಿಂತ ಜೀವನಾನುಭವ ಎನ್ನುವುದು ಬಹಳ ಮುಖ್ಯ ಎನ್ನುವುದನ್ನು ಮಂದಣ್ಣನ ಮೂಲಕ ಹೇಳಲು ತೇಜಸ್ವಿಯವರು ಪ್ರಯತ್ನಿಸಿದ್ದಾರೆ. ಮಂದಣ್ಣನನ್ನು ಪರಿಸರ ವಿಜ್ಞಾನಿ ಎಂದು ಘೋಷಿಸಿ ಸಮಾಜದಲ್ಲಿ ತುಚ್ಚೀಕರಣಗೊಂಡ ವ್ಯಕ್ತಿಯಲ್ಲೂ ಸಹ ಯಾವುದೋ ಒಂದು ಪ್ರತಿಭೆ ಅಂತರ್ಗತವಾಗಿ ಇರುತ್ತೆ ಎನ್ನುವುದು ತೇಜಸ್ವಿಯವರು ಸಮಾಜವನ್ನು ನೋಡುವ ಜನಪರ ದೃಷ್ಟಿಕೋನಕ್ಕೆ ಸಾಕ್ಷಿಯಾಗಿದೆ

      ಕಗ್ಗಾಡಿನ ಹಳ್ಳಿಯ ಮುಗ್ದ ಮಂದಣ್ಣನಿಗೆ ಮದುವೆಯಾಗುವ ಬಯಕೆ. ಆತ ಪ್ರೀತಿಸಿದ ಹುಡುಗಿ ರಾಮಿಯ ತಂದೆ ಕೆಲಸವಿಲ್ಲದವನಿಗೆ ಮಗಳನ್ನು ಕೊಡಲು ನಿರಾಕರಿಸುತ್ತಾನೆ. ತನಗೆ ಬೀ ಮ್ಯಾನ್ ಕೆಲಸ ಕೊಡಿಸಲು ಕತೆಗಾರ ಪೂರ್ಣಚಂದ್ರ ಹಾಗೂ ಕೀಟವಿಜ್ಞಾನಿ ಕಾರ್ವಾಲೋರವರಿಗೆ ಮಂದಣ್ಣ ದುಂಬಾಲು ಬೀಳುತ್ತಾನೆ. ಅವರಿಬ್ಬರ ಮಧ್ಯಸ್ತಿಕೆಯಲ್ಲಿ ಕೊನೆಗೂ ಮಂದಣ್ಣನ ಮದುವೆಯಾಗುತ್ತದೆ. ಮಂದಣ್ಣನ ಮಾವನ ಮನೆಯಲ್ಲಿ ಇಟ್ಟಿದ್ದ ಜೇನು ಕೆಟ್ಟು ಕೊಳೆತು ಹುಳಿಯಾಗಿ ಹೆಂಡದಂತಾಗಿರುತ್ತದೆ. ಕಳ್ಳಬಟ್ಟಿ ಸಾರಾಯಿ ಆರೋಪದಲ್ಲಿ ಪೋಲಿಸರು ಮಂದಣ್ಣನನ್ನು ಬಂಧಿಸುತ್ತಾರೆ. ಹಾರುವ ಓತಿಯ ಹುಡಿಕಾಟದಲ್ಲಿದ್ದ ಕಾರ್ವಾಲೋ ಕೋರ್ಟಿಗೆ ಹೋಗಿ ಸಾಕ್ಷಿ ಹೇಳಿ ಮಂದಣ್ಣನನ್ನು ಬಿಡುಗಡೆಗೊಳಿಸುತ್ತಾರೆ. ಮಂದಣ್ಣ ನಾರ್ವೆ ಕಾಡಲ್ಲಿ ಕಂಡ ಜಗತ್ತಿನಿಂದಲೇ ಸರ್ವನಾಶವಾಗಿ ಹೋಗಿದೆ ಎಂದುಕೊಂಡ ಹಾರುವ ಓತಿ (ಓತಿಕ್ಯಾತ) ಯನ್ನು ಕಂಡುಹಿಡಿಯಲು ಕತೆಗಾರ, ಕಾರ್ವಲೋ ಮತ್ತಿತರರು ಕಾಡಿಗೆ ಹೋಗುತ್ತಾರೆ. ಕೊನೆಗೂ ಹಾರುವ ಓತಿಯನ್ನು ನೋಡಿ ಪುಳಕಿತರಾಗಿ ಸಂಭ್ರಮಿಸುತ್ತಾರೆ. ಕತೆಗಾರ, ಕಾರ್ವಾಲೋ ಮತ್ತು ಮಂದಣ್ಣ ಮೂವರೂ ತಮ್ಮ ಪರಿಸರದಲ್ಲಿ ಕಂಡುಕೊಂಡ ವಿಸ್ಮಯ ಸಂಗತಿಗಳೇ ನಾಟಕದ ಕಥಾವಸ್ತುವಾಗಿದೆ.
          ಮದುವೆಯಾಗಲು ಮುಗ್ದ ಮಂದಣ್ಣ ಪಡುವ ಪರದಾಟಗಳು, ಸಹಾಯ ಮಾಡಲು ಹೋಗಿ ಸಿಕ್ಕಿಹಾಕಿಕೊಂಡ ಕತೆಗಾರನ ತಳಮಳಗಳು, ಅಳಿವಿನ ಅಂಚಿನಲ್ಲಿರುವ ಅಪರೂಪದ ಜೀವರಾಶಿಗಳ ಸಂಶೋಧನೆಗೆ ತೊಡಗುವ ವಿಜ್ಞಾನಿ ಕಾರ್ವಾಲೋರ ಆತಂಕಗಳು ಮತ್ತು ಹಂದಿ ತಿನ್ನುವ ಆಸೆ ಹೊತ್ತು ಧರ್ಮನಿಂದನೆಗೆ ಹೆದರುವ ಸಾಬಿ ಪ್ಯಾರನ ಧರ್ಮಸಂಕಟಗಳನ್ನು ಕಾರ್ವಾಲೋ ರಂಗ ಪ್ರಯೋಗ ಪ್ರೇಕ್ಷಕರ ಮುಂದೆ ವಿಡಂಬನಾತ್ಮಕವಾಗಿ ಅನಾವಾರಣ ಮಾಡುವಲ್ಲಿ  ಯಶಸ್ವಿಯಾಗಿದ್ದು ನಿರ್ದೇಶಕರ ಶ್ರಮ ಸಾರ್ಥಕವಾಗಿದೆ. ಆನಿಮೇಶನ್ ತಂತ್ರಜ್ಞಾನ ಬಳಸಿ  ಹಾರುವ ಓತಿಯನ್ನು ಸೃಷ್ಟಿಸಿ ಪ್ರೊಜೆಕ್ಟರ್ ಮೂಲಕ ಸೈಕ್ ಮೇಲೆ ಪ್ರದರ್ಶಿಸಿದ್ದು ನಾಟಕಕ್ಕೆ ವಿಶೇಷ ಮೆರುಗನ್ನು ಹಾಗೂ ಪ್ರೇಕ್ಷಕರಿಗೆ ರೋಮಾಂಚನಕಾರಿ ಅನುಭೂತಿಯನ್ನು ನೀಡುವಂತಿದೆ.

    ಈ ಕಾರ್ವಾಲೋ ನಾಟಕ ಮೊದಲು ಪ್ರದರ್ಶನಗೊಂಡಿದ್ದು ೨೦೦೫, ಎಪ್ರಿಲ್ ೨೫ರಂದು. ಕರಿಬಸಯ್ಯ, ಈಶ್ವರದಲ್, ಪ್ರಸನ್ನಕುಮಾರ ಮುಂತಾದವರು ನಾಟಕದಲ್ಲಿ ಅಮೋಘವಾಗಿ ಅಭಿನಯಿಸಿದ್ದರು. ರಂಗವಿನ್ಯಾಸವಂತೂ ಅದ್ಬುತವಾಗಿ ಮೂಡಿ ಬಂದಿತ್ತು. ಆದರೆ ಈಗ ಬಹುತೇಕ ಪಾತ್ರವರ್ಗ ಬದಲಾಗಿದೆ. ಒಂದಿಬ್ಬರನ್ನು ಹೊರತುಪಡಿಸಿ ಎಲ್ಲರೂ ಹೊಸ ಕಲಾವಿದರು ಪಾತ್ರವಾಗಿದ್ದಾರೆ. ರಂಗವಿನ್ಯಾಸ ಅಗತ್ಯಕ್ಕೆ ತಕ್ಕಷ್ಟೇ ಸರಳಗೊಂಡಿದೆ, ರಿಹರ್ಸಲ್ಸ ಕೊರತೆ ಕಂಡುಬರುತ್ತದೆ. ಸಂತೆ ಹೊತ್ತಿಗೆ ಮೂರು ಮೊಳ ನೇಯ್ದು ತಂದಂತೆ ಅವಸರವಸರದಲ್ಲಿ ನಾಟಕ ಮರುನಿರ್ಮಾಣಗೊಂಡಂತಿದೆ. ಯಾವ ಕೋನದಲ್ಲಿ ನೋಡಿದರೂ ಇನ್ಸಪೆಕ್ಟರ್ ಪಾತ್ರ ಪೋಷಣೆ ಪೇಲರವವಾಗಿದೆ. ಪಾತ್ರ ಹಾಕಿದ ಪೋಲಿಸ್ ಕಾಸ್ಟೂಮ್ಸಗಳೋ ನಿರ್ದೇಶಕರಿಗೇ ಪ್ರೀತಿ. ಬೆಳಕಂತೂ (ಪ್ರಭಾಕರಬಾಬು) ನಿಧಾನಗತಿಯನ್ನು ಅಳವಡಿಸಿಕೊಂಡಿದೆ. ಪ್ರತಿ ದೃಶ್ಯ ಮುಗಿದು ನಟರೆಲ್ಲಾ ಸ್ಟಿಲ್ ಆಗಿ ಬೆಳಕು ಆರಲು ಕಾಯುತ್ತಿರುವಷ್ಟು ಆಭಾಸಕಾರಿಯಾಗಿದೆ. ನಿರ್ದೇಶಕರಿಗೆ ಏನಾಯಿತೋ ಏನೋ ಗೊತ್ತಿಲ್ಲಾ ಅಸಂವಿಧಾನಿಕ ಪೋಲಿ ಪದವನ್ನು (ಜನನಾಂಗವನ್ನು ಸಾಬರು ಕುಯ್ದುಕೊಳ್ಳುವ ದೇಸಿ ಶಬ್ದ) ಅನಗತ್ಯವಾಗಿ ಬಳಸಿ ರಂಗಭೂಮಿಯ ಶಿಷ್ಟತೆಯನ್ನು ಮುರಿದಿದ್ದಾರೆ. ನಾಟಕಕ್ಕೆ ಸೆನ್ಸಾರ್ ಇಲ್ಲಾ ಯಾಕೆಂದರೆ ಎಲ್ಲಾ ನಿರ್ದೇಶಕರು ಸ್ವಯಂ ಸೆನ್ಸಾರನ್ನು, ನೈತಿಕ ಪ್ರಜ್ಞೆಯನ್ನು ಅಳವಡಿಸಿಕೊಂಡಿರುತ್ತಾರೆ. ಚಂದ್ರುನಂತಹ ಸೆನ್ಸಿಟಿವ್ ನಿರ್ದೇಶಕರಿಂದ ಇದನ್ನು ನಿರೀಕ್ಷಿಸಿರಲಿಲ್ಲ. ಕೋರ್ಟ ದೃಶ್ಯದಲ್ಲಿ ಎಲ್ಲೂ ಗಲಾಟೆಯಾಗದಿದ್ದರೂ ನ್ಯಾಯಾಧೀಶ ಆರ್ಡರ್, ಆರ್ಡರ್ ಎನ್ನುವುದು ಅನಗತ್ಯವಾಗಿತ್ತು. ಇಲ್ಲವೇ ಗಲಾಟೆಯನ್ನಾದರೂ ಮಾಡಿಸಬೇಕಿತ್ತು.
          ಕಥೆಗಾರ ಪಾತ್ರಕ್ಕೆ ವಾದಿರಾಜ್ ನ್ಯಾಯವದಗಿಸಿದ್ದಾರೆ. ಆದರೆ ಪಾತ್ರಕ್ಕೆ ಮೇಕಪ್ನಲ್ಲಿ ಇನ್ನೊಂದಿಷ್ಟು ವಯಸ್ಸಾಗಿರುವಂತೆ ಮಾಡಿದ್ದರೆ ಪಾತ್ರ ಕಳೆಗಟ್ಟುತ್ತಿತ್ತು. ಕಾರ್ವಾಲೋ ಪಾತ್ರದಲ್ಲಿ ನರೇಂದ್ರಬಾಬು ಪರಕಾಯಪ್ರವೇಶ ಮಾಡಿದಂತೆ ಅಭಿನಯಿಸಿದ್ದಾರೆ. ಮಂದಣ್ಣನಾಗಿ ನಂಜುಂಡೇಗೌಡರು ನಟಿಸಿದ್ದಾರಾದರೂ ಪಾತ್ರಕ್ಕೆ ಬೇಕಾದ ಮುಗ್ದತೆಯನ್ನು ತೋರುವಲ್ಲಿ ಇನ್ನೂ ಶ್ರಮಿಸಬೇಕಿದೆ. ರಾಮಯ್ಯ ಹಾಗೂ ಕಲ್ಲಿದ್ದಲು ಕಾರ್ಮಿಕನ ಪಾತ್ರದಾರಿ ಹರೀಶ್ ತಮ್ಮ ವಿಚಿತ್ರ ಆಂಗಿಕಾಭಿನಯದಿಂದ ಎಲ್ಲರ ಗಮನ ಸೆಳೆದರು. ಇನ್ಸಪೆಕ್ಟರ್ ಪಾತ್ರದಾರಿ ಮಂಜೇಶ್ ಇನ್ನೂ ಪಾತ್ರವನ್ನು ಅರ್ಥಮಾಡಿಕೊಳ್ಳಬೇಕಾಗಿತ್ತು. ಒಟ್ಟಾರೆಯಾಗಿ ಹೊಸ ನಟರಿಗೆ ನಾಟಕದಲ್ಲಿ  ಅಭಿನಯಿಸುವುದೊಂದು ಸವಾಲಿನ ಕೆಲಸ. ವ್ಯಂಗ್ಯ ವಿಡಂಬನೆ ಮತ್ತು ಪಂಚ್ ಸಂಭಾಷಣೆಗಳೇ ನಾಟಕದ ಜೀವಾಳವಾಗಿದ್ದು ಸಮರ್ಥವಾಗಿ ಅಭಿನಯಿಸಿದಾಗ ಮಾತ್ರ  ನಾಟಕ ಕಳೆಗಟ್ಟಲು ಸಾಧ್ಯ. ಹಾಡು ಮತ್ತು ಸಂಗೀತ (ಚಿದಾನಂದ ಕುಲಕರ್ಣಿ) ಬ್ಲಾಕ್ ಔಟ್ನಲ್ಲಿ ನಾಟಕದ ಮೂಡ ಉಳಿಸುವಲ್ಲಿ ಸ್ಪಂದಿಸಿದವು. ಆದರೆ ಹಾಡಿನ ಚರಣದ ಪುನರಾವರ್ತನೆ ಅತಿ ಎನಿಸುವಂತಿತ್ತು

      ೭೦ರ ದಶಕದ ಅಂತ್ಯದಲ್ಲಿ ಪ್ರಕಟಗೊಂಡ ತೇಜಸ್ವಿ ಅವರ ಕಾರ್ವಾಲೋ ಕಾದಂಬರಿ ತನ್ನ ವಿಭಿನ್ನ ವಸ್ತು-ವಿಷಯದಿಂದಾಗಿ ಕನ್ನಡ ಸಾಹಿತ್ಯದಲ್ಲಿ ಹೊಸ ಸಂವೇದನೆ ಯನ್ನುಂಟುಮಾಡಿತ್ತು. ವೈಜ್ಞಾನಿಕ ಎನ್ನಬಹುದಾದ ವಿಷಯವನ್ನು  ಇಷ್ಟೊಂದು ಸರಳವಾಗಿ ಹ್ಯೂಮರಸ್ ಆಗಿ ಹೇಳುವುದು ತೇಜಸ್ವಿಯವರಿಗೆ ಮಾತ್ರ ಸಾಧ್ಯ. ತೇಜಸ್ವಿಯವರ ಎಲ್ಲಾ ಕಥೆ ಮತ್ತು ಕಾದಂಬರಿಗಳಲ್ಲಿ ನಾಟಕೀಯ ತಿರುವುಗಳೆ ಹೆಚ್ಚಿರುವುದರಿಂದ ನಾಟಕವಾಗಿಸಲು ಸೂಕ್ತವಾಗಿವೆ. ಅಂತಹ ಮಹತ್ವದ ಮತ್ತು ಸಂಕೀರ್ಣವಾದ ಕಾದಂಬರಿಯನ್ನು ದೃಶ್ಯಮಾಧ್ಯಮಕ್ಕೆ .ನಾ.ರಾವ್ ಜಾದವ್ರವರು ಸಮರ್ಥವಾಗಿ ಅಳವಡಿಸಿದ್ದಾರೆ. ಕಾದಂಬರಿಯಲ್ಲಿ ಸಿದ್ದವಾದ ಕಥಾಹಂದರವಿಲ್ಲ. ಕೆಲವು ಘಟನೆಗಳ ಸರಮಾಲೆಗಳನ್ನು ವಿಡಂಬನಾತ್ಮಕವಾಗಿ ಪೋಣಿಸಲಾಗಿದೆ. ಅವು ನೋಡುಗರಲ್ಲಿ ಒಂಥರಾ ಖುಷಿ ಕೊಡುತ್ತವೆ. ಇಡೀ ನಾಟಕ ಎಲ್ಲೂ ನಿಂತಲ್ಲೆ ನಿಲ್ಲದೇ ದೃಶ್ಯದಿಂದ
ಕೆಎಸ್ಡಿಎಲ್ ಚಂದ್ರು
ದೃಶ್ಯಕ್ಕೆ ನಿರಂತರ ಚಲನೆಯಲ್ಲಿರುವುದರಿಂದ ಚಲನಶೀಲನೆಯೇ ಇಡೀ ನಾಟಕವನ್ನು ಮುನ್ನಡೆಸುತ್ತದೆ. ವಿಡಂಬನಾತ್ಮಕ ದೃಶ್ಯಗಳು ನೋಡುಗರಿಗೆ ಮಜಾಕೊಟ್ಟರೆ, ಪಂಚ್ ಸಂಭಾಷಣೆಗಳು ಕಚಗುಳಿ ಇಡುವಂತಿವೆ. ಇಡೀ ನಾಟಕ ಎಲ್ಲೂ ಬೋರ್ ಹೊಡಿಸದೇ ಪ್ರೇಕ್ಷಕರಿಗೆ ವಿಶಿಷ್ಟವಾದ ಅನುಭೂತಿಯನ್ನು ಕೊಡುವುದರಿಂದಾಗಿ ಕಾರ್ವಾಲೋ ತೇಜಸ್ವಿಯವರ ಗಮನಾರ್ಹ ನಾಟಕವಾಗಿದೆ

 
                                                                   -ಶಶಿಕಾಂತ ಯಡಹಳ್ಳಿ

    



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ