‘ನಾಟಕ ಎಂಬುದು ಅವತ್ತೇ ಹುಟ್ಟಿ ಅವತ್ತೇ ಸಾಯುತ್ತದೆಂದು’ ಬರ್ನಾಡ್ ಷಾ ಹೇಳಿದರು. ‘ನಾಟಕವೊಂದು ತನ್ನ ಪ್ರದರ್ಶನದ ವೇಳೆ ಮಾತ್ರ ಜೀವಂತವಿರುತ್ತದೆ, ಪ್ರದರ್ಶನ ಮುಗಿದ ಮೇಲೆ ಸಾಯುತ್ತದೆ, ಮತ್ತೆ ಮತ್ತೊಂದು ಪ್ರದರ್ಶನವಾದಾಗ ಮರುಹುಟ್ಟು ಪಡೆಯುತ್ತದೆ’ ಎನ್ನುವುದು ಇದರ ಅರ್ಥ. ಆದರೆ ಅದು ಅರ್ಧಸತ್ಯ. ತಾಂತ್ರಿಕವಾಗಿ ನಾಟಕವೊಂದು ಪ್ರದರ್ಶನದ ನಂತರ ತೆರೆ ಎಳೆಯಬಹುದಾದರೂ ಅದು ಪ್ರೇಕ್ಷಕರ ಮನೋರಂಗದಲ್ಲಿ ಕೆಲವು ಕ್ಷಣ, ಕೆಲವು ದಿನ, ಕೆಲವು ಕಾಲ ಜೀವಂತವಾಗಿರುತ್ತದೆ. ಆದರೆ ಪರ್ಮನೆಂಟ್ ಆಗಿ ದಾಖಲಾಗುವುದಿಲ್ಲ. ಆ ನಂತರದ ಕಾಲಕ್ಕೆ, ಮುಂದಿನ ತಲೆಮಾರಿಗೆ, ಇಂತದೊಂದು ಅಪೂರ್ವ ನಾಟಕ ಆಯಿತು ಎಂದು ಹೇಳಲೂ ಎಲ್ಲೂ ನಾಟಕದ ಪ್ರಯೋಗವು ತನ್ನ ಸಾಕ್ಷಗಳನ್ನು ತನ್ನಷ್ಟಕ್ಕೆ ತಾನೇ ಇತಿಹಾಸದಲ್ಲಿ ದಾಖಲಿಸಿ ಹೋಗುವುದಿಲ್ಲ. ಅಷ್ಟರ ಮಟ್ಟಿಗೆ ನಾಟಕ ಪ್ರದರ್ಶನಗಳು ಅಲ್ಪಾಯುಗಳು.
ಆದರೆ.... ಈ ಅಲ್ಪಾಯು ನಾಟಕಗಳನ್ನು ದೀರ್ಘಾಯು ಮಾಡಲು, ರಂಗ ಇತಿಹಾಸದಲ್ಲಿ ರಂಗಕ್ರಿಯೆಗಳನ್ನು ದಾಖಲಿಸಲು, ನಾಟಕ ಪ್ರಯೋಗಗಳಿಗೆ ಪ್ರಚಾರ ಒದಗಿಸಲು ಅಕ್ಷರ ಮಾಧ್ಯಮ ಅತ್ಯಗತ್ಯವಾಗಿದೆ. ಈ ಕೆಲಸವನ್ನು ಪತ್ರಿಕೆಗಳು ಕಾಲಕಾಲಕ್ಕೆ ಮಾಡಬೇಕಾಗುತ್ತದೆ. ತುಂಬಾ ಶ್ರಮವಹಿಸಿ, ಹತ್ತಿಪ್ಪತ್ತು ನಟರನ್ನ ಸೇರಸಿ, ಮೂವತ್ತು ದಿನ ತಾಲಿಂ ಮಾಡಿ, ಹೇಗೋ ಹಣ ಹೊಂದಾಣಿಸಿಕೊಂಡು ಕೊನೆಗೊಂದು ದಿನ ರಂಗವೇದಿಕೆಯ ಮೇಲೆ ನಾಟಕಮಾಡಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರೆ
ತನ್ನ ಶ್ರಮ ಸಾರ್ಥಕವಾಯಿತು ಎನ್ನುವ ರಂಗಕರ್ಮಿಗಳು ಬೇಕಾದಷ್ಟಿದ್ದಾರೆ. ಆದರೆ ಹಾಗೆ ಪಟ್ಟ ಪರಿಶ್ರಮ ದಾಖಲಾಗಬೇಕು ಎನ್ನುವವರು ರಂಗಭೂಮಿಯಲ್ಲಿ ಕಡಿಮೆ ಜನ. ಸ್ವಯಂಪ್ರೇರಿತರಾಗಿ ರಂಗಕ್ರಿಯೆಗಳನ್ನು ದಾಖಲಿಸಬೇಕು ಎನ್ನುವ ಪತ್ರಿಕೆಗಳೂ ತುಂಬಾ ವಿರಳ. ಇಂತಹ ರಂಗಕ್ರಿಯೆಯನ್ನು ಸ್ವಯಂಪ್ರೇರಿತವಾಗಿ ದಾಖಲಿಸುವ ಸ್ತುತ್ಯಾರ್ಹ ಕೆಲಸವನ್ನು ದಶಕಗಳಿಂದ ಮಾಡಿಕೊಂಡು ಬರುತ್ತಿರುವ ಕನ್ನಡದ ಏಕೈಕ ವಾರಪತ್ರಿಕೆ ‘ಅಗ್ನಿ’.
ಎಲ್ಲಾ ಟ್ಯಾಬ್ಲ್ಯಾಡ್ ಮಾದರಿಯ ಕನ್ನಡ ವಾರಪತ್ತಿಕೆಗಳನ್ನು ಗಮನಿಸಿದರೆ, ರಾಜಕೀಯ ಮತ್ತು ಒಂದಿಷ್ಟು ಸಾಹಿತ್ಯಕ ಅಂಶಗಳಿಗೆ ಅತೀ ಹೆಚ್ಚು ಮಹತ್ವ ಕೊಡುತ್ತವೆ. ಸಾಂಸ್ಕೃತಿಕ ಕ್ಷೇತ್ರವೆಂದರೆ ಸಿನೆಮಾ ಮತ್ತು ಟಿವಿ ಮಾತ್ರ ಎಂದು ಆ ಪತ್ರಿಕೆಗಳು ತಿಳಿದಂತಿವೆ. ಪ್ರತಿ ವಾರ ಈ ಕ್ಷೇತ್ರಗಳಿಗೆ ಎರಡೆರಡು ಪೂರ್ತಿ ಪುಟಗಳನ್ನು ಮೀಸಲಿಡುತ್ತವೆ. ಆದರೆ ರಂಗಭೂಮಿಯನ್ನು ಸಂಪೂರ್ಣ ಮರೆತೇಬಿಟ್ಟಿವೆ. ಈ ಸಿನೆಮಾ ಮತ್ತು ಟಿವಿ ಎನ್ನುವ ದೃಶ್ಯಮಾಧ್ಯಮಗಳು ಸಮಾಜದ ವಿಕಾಸಕ್ಕಿಂತ ವಿಕೃತತೆಗೆ ಹೆಚ್ಚು ಬಳಕೆಯಾಗುತ್ತಿವೆ. ಟಿವಿ ಮಾಧ್ಯಮವಂತೂ ಬಹುರಾಷ್ಟೀಯ ಕಂಪನಿಗಳ ಸರಕು ಮಾರಾಟದ ಜಾಹೀರಾತುದಾರರ ಹಿಡಿತದಲ್ಲಿವೆ. ಮನ ಮತ್ತು ಮನೆ ಮುರಿಯುವ ಕೆಲಸವನ್ನು ದಾರಾವಾಹಿಗಳು ಬಹಳ ಪ್ರಜ್ಞಾಪೂರ್ವಕವಾಗಿ ಮಾಡುತ್ತಿವೆ. ಸಿನೆಮಾ ಎನ್ನುವುದು ಲೋಕಲ್ ಬಂಡವಾಳಶಾಹಿಗಳ ವ್ಯಾಪಾರೀ ಮನೋಭಾವಕ್ಕೆ ತಕ್ಕಂತೆ ನಿರ್ಮಿತವಾಗುತ್ತಿವೆ. ಈ ಮಾತಿಗೆ ಅಪವಾದಗಳಿಲ್ಲ ಎನ್ನುವಂತಿಲ್ಲ, ಆದರೆ ಅಂತವುಗಳ ಸಂಖ್ಯೆ ಬಲು ಕಡಿಮೆ.
ಆದರೆ.... ರಂಗಭೂಮಿ ಎನ್ನುವುದು ಸಮಾಜದ ಕನ್ನಡಿಯಾಗಿ ಕೆಲಸ ಮಾಡುತ್ತದೆ. ಅದಿನ್ನೂ ವ್ಯಾಪಾರೋಧ್ಯಮವಾಗಿಲ್ಲ. ಆಗುವುದೂ ಬೇಕಾಗಿಲ್ಲ. ರಂಗಭೂಮಿ ಉಧ್ಯಮವಾಗಿಲ್ಲದಿರೋದಕ್ಕೆ ಪತ್ರಿಕೆಗಳು ಸಹ ಆ ಕಡೆಗೆ ಹೆಚ್ಚು ಗಮನ ಕೊಡುತ್ತಿಲ್ಲ. ಎಲ್ಲಿ ಹಣ ಇದೆ, ಎಲ್ಲಿ ಜನಪ್ರೀಯತೆ ಇದೆ, ಯಾವುದಕ್ಕೆ ಹೆಚ್ಚು ಪ್ರಚಾರ ಕೊಟ್ಟರೆ ಪತ್ರಿಕೆಯ ಪ್ರಸಾರಸಂಖ್ಯೆ ಹೆಚ್ಚಾಗುತ್ತz. ಎನ್ನುವ ಲೆಕ್ಕಾಚಾರಗಳು ಬಹುತೇಕ ಪತ್ರಿಕೆಯ ಆಂತರಿಕ ಆಶಯಗಳಾಗಿವೆ. ಆದರೆ ಸಾಂಸ್ಕೃತಿಕ ಜವಾಬ್ದಾರಿ ಇಟ್ಟುಕೊಂಡು, ಜಾಗತೀಕರಣದ ವಿಕೃತ ವಿದೇಶಿ ಸಂಸ್ಕೃತಿಗೆ ವಿರುದ್ಧವಾಗಿ ದೇಸಿ ಸಂಸ್ಕೃತಿಯನ್ನು ಬೆಳಸಬೇಕು ಎನ್ನುವ ಸಾಮಾಜಿಕ ಕಳಕಳಿ ಇದ್ದಿದ್ದರೆ ಹೀಗೆ ನಮ್ಮ ದೇಸಿ ಕಲೆ ಮತ್ತು ಸಂಸ್ಕೃತಿಯ ಪ್ರತೀಕವಾದ ರಂಗಭೂಮಿಯನ್ನು ಪತ್ರಿಕೆಗಳು ಇಷ್ಟೊಂದು ಅವಜ್ಞೆ
ಮಾಡುತ್ತಿರಲಿಲ್ಲ.
ಹೆಚ್ಚು ಪ್ರಚಾರದಲ್ಲಿರುವ ದಿನಪತ್ರಿಕೆಗಳು ರಂಗಕ್ರಿಯೆಗಳನ್ನು ತಮ್ಮ ವರದಿಗಾರಿಕೆಯ ಭಾಗವಾಗಿ ಪರಿಭಾವಿಸುತ್ತವೆ. ರಂಗಭೂಮಿ ಚಟುವಟಿಕೆಗಳಿಗಾಗಿಯೇ ಯಾವೊಂದು ಪತ್ರಿಕೆಯೂ ಯಾವೊಬ್ಬ ರಂಗ ಬರಹಗಾರನನ್ನೂ ಇಲ್ಲಿವರೆಗೂ ನಿಯಮಿಸಿಲ್ಲ. ಅಪರೂಪಕ್ಕೊಮ್ಮೆ ಪತ್ರಿಕಾ ವರದಿಗಾರನೇ ರಂಗವಿಮರ್ಶೆಗಳನ್ನು ವರದಿ ರೂಪದಲ್ಲಿ ಬರೆಯುತ್ತಾನೆ, ಅಂತವರಿಗೆ ಯಾವುದೇ ರೀತಿಯ ರಂಗಭೂಮಿಯ ಪ್ರಾಯೋಗಿಕ ಅನುಭವಗಳಿರುವುದಿಲ್ಲ. ಅಕಸ್ಮಾತ್ ರಂಗವಿಮರ್ಶಕರು ಬರೆದು ಕಳುಹಿಸಿದರೆ, ಅಂತಹ ರಂಗಲೇಖನಗಳನ್ನು ತಮಗಿಷ್ಟ ಬಂದ ಹಾಗೆ ಕತ್ತರಿಸಿ, ತಮ್ಮ ಕಾಲಂ ಸೈಜಿಗೆ ತಕ್ಕಂತೆ ಕುಬ್ಜಗೊಳಿಸಿ ಲೇಖನವನ್ನೇ ವಿಕೃತಗೊಳಿಸಿ ಪ್ರಕಟಿಸಿದ ಪ್ರಸಂಗಗಳಿಗೆ ನಾನೇ ಸಾಕ್ಷಿಯಾಗಿದ್ದೇನೆ. ಹೀಗಾಗಿ ರಂಗಕ್ರಿಯೆ ಸರಿಯಾಗಿ ದಾಖಲಾಗುವುದೇ ಇಲ್ಲಾ. ರಂಗಭೂಮಿಗೆ ಮೀಸಲಾದ ಬೆರಳೆಣಿಕೆಯಷ್ಟು ಪತ್ರಿಕೆಗಳಿದ್ದರೂ ಅವು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲೇ ಪರದಾಡುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ‘ಅಗ್ನಿ’ ಪತ್ರಿಕೆ ಕಳೆದ ಒಂದೂವರೆ ದಶಕದಲ್ಲಿ ರಂಗಚಟುವಟಿಕೆಗಳನ್ನು ನಿರಂತರವಾಗಿ
ದಾಖಲಿಸುತ್ತಾ ಬಂದಿರುವುದು ಸ್ಥುತ್ಯಾರ್ಹವಾಗಿದೆ.
ಅಗ್ನಿ ಶ್ರೀಧರ್ |
ರಾಜಕೀಯ, ಸಾಹಿತ್ಯಕ, ತಾತ್ವಿಕ ಮತ್ತು ಸಿನೆಮಾ ಲೇಖನಗಳ ಜೊತೆ ಜೊತೆಗೆ ರಂಗಭೂಮಿ ಕುರಿತಾದ ಲೇಖನಗಳಿಗೂ ಆದ್ಯತೆಯನ್ನು ಕೊಟ್ಟ ‘ಅಗ್ನಿ’ ಪತ್ರಿಕೆ ರಂಗಭೂಮಿಗೆ ತನ್ನದೇ ಆದ ರೀತಿಯಲ್ಲಿ ಕೊಡುಗೆಯನ್ನು ಕೊಡುತ್ತಲೇ ಬಂದಿದೆ. ಇದರಿಂದಾಗಿ ಈ ಪತ್ರಿಕೆ ಇತರ ಪತ್ರಿಕೆಗಳಿಗಿಂತ ಭಿನ್ನವಾಗಿದೆ. ಯಾಕೆಂದರೆ......
‘ಅಗ್ನಿ’ ಪತ್ರಿಕೆಯ ರಾಜಕೀಯ ನಿಲುವು ಒಲವುಗಳೇನೇ ಇರಲಿ,... ರಂಗಭೂಮಿಗೆ ಅನ್ಯಾಯವಾದಾಗಲೆಲ್ಲಾ ‘ಅಗ್ನಿ’ ಬೆಂಕಿ ಯಾಗಿದೆ, ರಂಗಾಯಣದ ಏಳುಬೀಳುಗಳನ್ನು ಪ್ರಕಟಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅವಗಡಗಳನ್ನು ಜನತೆಯ ಮುಂದಿಟ್ಟಿದೆ. ನಾಟಕ ಅಕಾಡೆಮಿಯ ಪ್ರಶಸ್ತಿ ಪ್ರಹಸನಗಳನ್ನು ಲೇವಡಿ ಮಾಡಿದೆ. ಸಾಂಸ್ಕೃತಿಕ ಲೋಕದ ದಲ್ಲಾಳಿಗಳ ದಗಲಬಾಜಿತನವನ್ನು ಬಯಲುಮಾಡಿದೆ, ರಂಗೋಪಜೀವಿಗಳ ರಂಗವಿರೋಧಿತನದ ಮುಖವಾಡಗಳನ್ನು
ತೆರೆದು ತೋರಿಸಿದೆ. ರಂಗಚಳುವಳಿಗಳನ್ನು ಬೆಂಬಲಿಸಿದೆ, ರಂಗಚಟುವಟಿಕೆಗಳನ್ನು
ನಿರಂತರವಾಗಿ ದಾಖಲಿಸಿದೆ. ಇದೆಲ್ಲಾ ‘ಅಗ್ನಿ’ ಪತ್ರಿಕೆ ಅಕ್ಷರ ಮಾಧ್ಯಮದ ಮೂಲಕ ರಂಗಭೂಮಿಗೆ ಕೊಟ್ಟ ಕೊಡುಗೆಯೇ ಆಗಿದೆ. ರಂಗಭೂಮಿ ಬೆಳವಣಿಗೆಗೆ ಪೂರಕವಾಗಿ ಕಾಲಕಾಲಕ್ಕೆ ಸ್ಪಂದಿಸುತ್ತಾ, ರಂಗವಿರೋಧಿತನಕ್ಕೆ ಪ್ರತಿಕ್ರಿಯಿಸುತ್ತಾ ಬಂದಿರುವುದು ‘ಅಗ್ನಿ’ಪತ್ರಿಕೆಯ ರಂಗಾಸಕ್ತಿಗೆ ಸಾಕ್ಷಿಯಾಗಿದೆ.
‘ಅಗ್ನಿ’ ಪತ್ರಿಕೆ ಹಲವಾರು ಯುವ ರಂಗಬರಹಗಾರರಿಗೆ ವೇದಿಕೆಯಾಗಿದ್ದೊಂದು ವಿಶೇಷ. ಉದಾಹರಣೆಗೆ ನಾನು ಆಗೊಮ್ಮೆ ಈಗೊಮ್ಮೆ ರಂಗಲೇಖನಗಳನ್ನು, ರಂಗವಿಮರ್ಶೆಗಳನ್ನು ಬರೆಯುತ್ತಿದ್ದೆ. ಅದೂ ಅಪರೂಪಕ್ಕೆ ಯಾರಾದರೂ ಒತ್ತಾಯಿಸಿದಾಗ ಮಾತ್ರ. ಆದರೆ ‘ಅಗ್ನಿ’ ನನ್ನ ಬರಹಗಳಿಗೆ ನಿರಂತರವಾಗಿ ವೇದಿಕೆಯನ್ನೊದಗಿಸಿತು. ಪ್ರತಿ ವಾರ ರಂಗಚಟುವಟಿಕೆಗಳನ್ನು ಕುರಿತು ಬರೆಯುವ ಬಾಹ್ಯ ಒತ್ತಡವನ್ನು ಸೃಷ್ಟಿಸಿತು. ಬೆಂಗಳೂರಿನಂತಹ ಗೋಜಲಿನ ಮಹಾನಗರದಲ್ಲಿ ಬಾಹ್ಯ ಒತ್ತಡ ಮತ್ತು ಪ್ರಕಟಿಸುವ ಪರಿಕರಗಳು ಇಲ್ಲದಿದ್ದರೆ ನಿರಂತರವಾಗಿ ಬರೆಯುವುದು ಅಸಾಧ್ಯ. ಆಂತರಿಕ ಒತ್ತಡದಿಂದ ಬರೆಯಲು ರಂಗಲೇಖನಗಳು ಕಥೆ-ಕಾವ್ಯಪ್ರಕಾರಗಳಂತಲ್ಲ. ಹೀಗಾಗಿ ಪ್ರತಿವಾರ ‘ಅಗ್ನಿ’ಗೆ ರಂಗವಿಮರ್ಶೆ-ಲೇಖನ ಬರೆಯಬೇಕಾದ ಆದ್ಯತೆಯಿಂದಾಗಿ ನಾನು ಹೆಚ್ಚು ನಾಟಕಗಳನ್ನು ನೋಡುವಂತಾಯಿತು, ನೋಡಿದ ಉತ್ತಮ ನಾಟಕಗಳಿಗೆ ರಂಗವಿಮರ್ಶೆ ಬರೆಯುವಂತಾಯಿತು. ಹಾಗೆ ಬರೆಯಲು ‘ಅಗ್ನಿ’ ಪ್ರೇರೆಪಣೆಯನ್ನು ಕೊಟ್ಟಿತು. ವಾರದಿಂದ ವಾರಕ್ಕೆ, ಲೇಖನದಿಂದ ಲೇಖನಕ್ಕೆ
ನನ್ನ ಗ್ರಹಿಕೆಯ ಸಾಮರ್ಥ್ಯ ಮತ್ತು ಗ್ರಹಿಸಿದ್ದನ್ನು ಅಕ್ಷರಗಳಲ್ಲಿ ಬರೆಯುವ ಸಾಮರ್ಥ್ಯ ಹೆಚ್ಚಾಗತೊಡಗಿತು. ಕಳೆದೊಂದು ದಶಕದಿಂದ ‘ಅಗ್ನಿ’ಗೆ ರಂಗಲೇಖನಗಳನ್ನು ನಾನು ಬರೆಯುತ್ತಲೇ ಬಂದಿದ್ದೇನೆ. ಕೆಲವೊಮ್ಮೆ ನಿರಂತರವಾಗಿ ಬರೆದಿದ್ದೇನೆ, ಇನ್ನು ಕೆಲವೊಮ್ಮೆ ಅಪರೂಪಕ್ಕೊಮ್ಮೆ ಬರೆದಿದ್ದೇನೆ. ಕೇವಲ ರಂಗಕರ್ಮಿಯಾಗಿ ಇಲ್ಲವೇ ‘ಇಪ್ಟಾ’ ಸಾಂಸ್ಕೃತಿಕ ಸಂಘಟನೆಯ ಸಂಚಾಲಕನನ್ನಾಗಿ ಗುರುತಿಸುತ್ತಿದ್ದ ರಂಗಭೂಮಿ ನನ್ನನ್ನು ‘ರಂಗವಿಮರ್ಶಕ’ ಎಂದು ಗುರುತಿಸುವಂತಾದದ್ದಕ್ಕೆ ಮೂಲ ಕಾರಣ ‘ಅಗ್ನಿ’ ಪತ್ರಿಕೆ ಎಂಬುದು ಸುಳ್ಳಲ್ಲ. ‘ಅಗ್ನಿ’ ಪತ್ರಿಕೆಯಲ್ಲಿ ನಾನು ಬರೆದ ಲೇಖನಗಳನ್ನು ಓದಿದ ಹಲವಾರು ರಂಗಸಂಘಟನೆಗಳು ನನ್ನನ್ನು ವಿಚಾರಸಂಕಿರಣಗಳಿಗೆ ಆಹ್ವಾನಿಸಿ ಪ್ರಬಂಧ ಮಂಡನೆಗೆ ಅವಕಾಶಗಳನ್ನೊದಗಿಸಿಕೊಟ್ಟಿದ್ದು ನನ್ನ ಬರಹದ ಬದುಕಿನ ಬಹುದೊಡ್ಡ ಮಜಲುಗಳಾಗಿವೆ.
ಸಿ.ಜಿ.ಕೃಷ್ಟಸ್ವಾಮಿ |
‘ಅಗ್ನಿ’ಗೆ
ರಂಗಭೂಮಿಯ ನಂಟನ್ನು ಅಂಟಿಸಿದವರು ಪ್ರಸಿದ್ದ ರಂಗಕರ್ಮಿ ಸಿ.ಜಿ.ಕೃಷ್ಟಸ್ವಾಮಿ (ಸಿಜಿಕೆ) ರವರು. ಅಗ್ನಿಯ ರೂವಾರಿ ಶ್ರೀಧರ್ ಹಾಗೂ ಅಗ್ನಿ ಬಳಗದ ಮಂಜುನಾಥ ಅದ್ದೆಯವರ ಜೊತೆಗೆ ಸತತ ಒಡನಾಟ ಹೊಂದಿದ ಸಿಜಿಕೆ ‘ಅಗ್ನಿ’ಪತ್ರಿಕೆಯಲ್ಲಿ ರಂಗಚಟುವಟಿಕೆಗಳಿಗೆ ಒಂದಿಷ್ಟು ಜಾಗ ಮೀಸಲಿಡಬೇಕೆಂದು ಆಶಿಸಿದರು. ಅವರ ಆಶಯಕ್ಕೆ ಪೂರಕವಾಗಿ ‘ಅಗ್ನಿ’ ರಂಗಭೂಮಿಗೆ ಸ್ಪಂದಿಸತೊಡಗಿತು. ನನಗೂ ‘ಅಗ್ನಿ’ಯ ನಂಟನ್ನು ಬೆಸೆದವರು ಸಿಜಿಕೆ. ಅದೇ ಸಮಯಕ್ಕೆ ನಾನು ರಂಗಲೇಖನಗಳನ್ನು ಬರೆಯುತ್ತಿದ್ದೆ. ‘ಅಗ್ನಿ’ ಪತ್ರಿಕೆಗೆ ರಂಗಲೇಖನಗಳನ್ನು ಬರೆಯಲು ಸಿಜಿಕೆ ನನ್ನನ್ನು ಪ್ರೇರೇಪಿಸಿದರು. ಜೊತೆಗೆ ನಾನು ಮತ್ತು ಅದ್ದೆ ಒಂದೇ ಕನ್ನಡ ಚಳುವಳಿಯ ಸಂಘಟನೆಯಿಂದ ಬಂದವರಾಗಿದ್ದರಿಂದ, ಆ ನಂತರವೂ ಕೆಲವು ಚಳುವಳಿಗಳಲ್ಲಿ ಜೊತೆಯಾಗಿ ಭಾಗವಹಿಸಿದ್ದರಿಂದ ಒಂದು ಹಂತದಲ್ಲಿ ಮಂಜುನಾಥ ಅದ್ದೆ ಕೂಡಾ ನನಗೆ ಬರೆಯಲಿಕ್ಕೆ ಮತ್ತು ಬರೆದುದನ್ನು ಪ್ರಕಟಿಸಲಿಕ್ಕೆ ಪ್ರೋತ್ಸಾಹಿಸಿದರು.
ಬಸವರಾಜ್ ಯಾವಾಗ ‘ಅಗ್ನಿ’ ಸಂಪಾದಕರಾಗಿ ಬಂದರೋ ನನ್ನ ರಂಗಲೇಖನಗಳ ಪ್ರಕಟಣೆಗೆ ತಾತ್ಕಾಲಿಕ ಅಡತಡೆ ಉಂಟಾಯಿತು. ಅವರಿಗೆ ರಂಗಭೂಮಿಯ ಗಂಧಗಾಳಿಯೂ ಗೊತ್ತಿರಲಿಲ್ಲ, ಜೊತೆಗೆ
ಆ ಕುರಿತು ತಿಳಿಹೇಳಲು ಸಿಜಿಕೆ ಯವರೂ ಇರಲಿಲ್ಲ, ಯಾರೋ ಹೇಳಿದ ಹೇಳಿಕೆ ಮಾತುಗಳನ್ನು ನಂಬಿ ನನ್ನ ರಂಗಲೇಖನಗಳ ಪ್ರಕಟಣೆಯನ್ನು ಬಸವರಾಜ್ ನಿಲ್ಲಿಸಿಬಿಟ್ಟರು. ಆಮೇಲೆ ನಾನೇ ‘ರಂಗಭೂಮಿ ವಿಶ್ಲೇಷಣೆ’ ರಂಗಪತ್ರಿಕೆಯನ್ನು ಶುರು ಮಾಡಿದೆ. ಮತ್ತೆ ನನ್ನ ರಂಗಲೇಖನಗಳು ಪ್ರಕಟವಾಗತೊಡಗಿದ್ದು ರಾಜಶೇಖರ್ ಹತಗುಂದಿಯವರು ‘ಅಗ್ನಿ’ಯ ಸಂಪಾದಕರಾದಾಗ. ಸಾಂಸ್ಕೃತಿಕ ಕ್ಷೇತ್ರದ ಬಗ್ಗೆ ಒಲವಿದ್ದ ಹತಗುಂದಿಯವರು ಸ್ವತಃ ರಂಗಚಟುವಟಿಕೆಗಳ ಕುರಿತು ಸಂಪಾದಕೀಯಗಳನ್ನು ಬರೆದರು, ರಂಗಭೂಮಿಗೆ ಆತಂಕಗಳು ಬಂದಾಗಲೆಲ್ಲಾ ತಮ್ಮ ಲೇಖನದ ಮೂಲಕ ಸೂಕ್ತವಾಗಿ ಪ್ರತಿಕ್ರಿಯಿಸಿದರು. ಜೊತೆಗೆ ನನ್ನ ರಂಗವಿಮರ್ಶೆಗಳನ್ನು ಪ್ರಕಟಿಸತೊಡಗಿದರು. ಅವರ ರಂಗಕಳಕಳಿ ದೊಡ್ಡದು. ಹೀಗಾಗಿ ರಂಗಲೇಖನಗಳು ‘ಅಗ್ನಿ’ಯ ಪ್ರತಿವಾರದ ಅಚ್ಚರಿಯ ಭಾಗವಾಗತೊಡಗಿದವು. ರಂಗಭೂಮಿಯ ಬೆಳವಣಿಗೆಗೆ ಪೂರಕವಾಗಿ ಪತ್ರಿಕೆ ಸ್ಪಂದಿಸತೊಡಗಿತು.
ಇನ್ನೊಂದು ವಿಷಯ ಇಲ್ಲಿ ಹೇಳಲೇಬೇಕು. ನಾನು ರಂಗಭೂಮಿಯ ಬೆಳವಣಿಗೆಯ ದೃಷ್ಟಿಯಿಂದ ಬಲು ನಿಷ್ಟುರವಾಗಿ ರಂಗವಿಮರ್ಶೆಗಳನ್ನು ಬರೆಯುತ್ತಿರುವುದರಿಂದ ಹಲವಾರು ಪತ್ರಿಕೆಗಳು ಅಂತಹ ಲೇಖನಗಳನ್ನು ಪ್ರಕಟಿಸಲು ಹಿಂದು ಮುಂದೆ ನೋಡುತ್ತಿದ್ದವು. ‘ಯಾರಿಗೂ ನೋವಾಗದಂತೆ ಬರೆಯಿರಿ’ ಎಂದೂ, ಕೇವಲ ಸಕಾರಾತ್ಮಕ ಅಂಶಗಳ ಕುರಿತು ಮಾತ್ರ ಬರೆಯಿರಿ ಎಂದೂ
ಕೆಲ ಪತ್ರಿಕೆಗಳ ಸಂಪಾದಕರು ನನಗೆ ಎಚ್ಚರಿಕೆ ಕೊಟ್ಟಿದ್ದು ಇದೆ. ಆದರೆ ‘ಅಗ್ನಿ’ ಪತ್ರಿಕೆ ಮಾತ್ರ ರಂಗನಿಷ್ಠೆಯಿಂದ ನಿಷ್ಟುರವಾಗಿ ಬರಿದದ್ದನ್ನೂ ಪ್ರಕಟಿಸಿದೆ. ಈ ನಿಟ್ಟಿನಲ್ಲಿ ‘ಅಗ್ನಿ’ ಕೇವಲ ಪತ್ರಿಕೆಯಲ್ಲ ಪ್ರತಿಭಟನೆಯ ಅಸ್ತ್ರವಾಗಿದೆ. ಕೆಲವು ರಂಗಕರ್ಮಿಗಳು ನನ್ನ ಲೇಖನಗಳ ಬಗ್ಗೆ ತಮ್ಮ ಅಸಹನೆಯನ್ನು ‘ಅಗ್ನಿ’ಗೆ ತಿಳಿಸಿದರೂ ಪತ್ರಿಕೆ ನನ್ನ ಬೆನ್ನಿಗೆ ನಿಂತಿತು. ಯಾಕೆಂದರೆ ಪತ್ರಿಕೆಯ ಬೆನ್ನಿಗೆ ಸಿಜಿಕೆ ಯಂತಹ ರಂಗದಿಗ್ಗಜ ನಿಂತಿದ್ದರು, ಸಿಜಿಕೆ ಸಾಯುವ ಒಂದು ವಾರ ಮುಂಚಿನವರೆಗೂ ನನ್ನೆಲ್ಲಾ ರಂಗಲೇಖನಗಳನ್ನು ‘ಅಗ್ನಿ’ಯಲ್ಲಿ ಓದಿ ಬೆನ್ನುತಟ್ಟಿದರು, “ಹೀಗೇನೇ ನೇರವಾಗಿ ನಿಷ್ಟುರವಾಗಿ ಬರಿ, ಕೇವಲ ಹೊಗಳಿಕೆಯ ಲೇಖನಗಳಿಂದ ರಂಗಭೂಮಿ ಉದ್ದಾರ ಆಗೊಲ್ಲ, ರಂಗಪ್ರಯೋಗಗಳ ನ್ಯೂನ್ಯತೆಗಳನ್ನು ತೋರಿಸಿದಾಗ, ಅವುಗಳನ್ನು ಸಂಬಂಧಪಟ್ಟವರು ತಿದ್ದಿಕೊಂಡಾಗ ಮಾತ್ರ ರಂಗಭೂಮಿ ಸಕಾರಾತ್ಮಕವಾಗಿ ಬೆಳೆಯಲು ಸಾಧ್ಯ” ಎಂದು ಸಿಜಿಕೆ ಸಿಕ್ಕಾಗೆಲ್ಲಾ ಹೇಳುತ್ತಾ ನನಗೆ ಹುಮ್ಮಸ್ಸನ್ನು
ಕೊಡುತ್ತಿದ್ದರು.
ಈಗ ‘ಅಗ್ನಿ’ಗೆ ೧೫ರ ಹರೆಯ, ಈ ಪತ್ರಿಕೆ ಒಂದೂವರೆ ದಶಕದಲ್ಲಿ ಸಮಾಜದ ಎಲಾ ಆತಂಕಗಳಿಗೆ ದಿಟ್ಟವಾಗಿ ಪ್ರತಿಕ್ರಿಯಿಸುತ್ತಾ ಬಂದಿದೆ. ಸಾಂಸ್ಕೃತಿಕ ಬಿಕ್ಕಟ್ಟುಗಳಿಗೆ
ಉತ್ತರಿಸಿದೆ, ಜಾಗತೀಕರಣ, ಕೋಮುವಾದ, ಭ್ರಷ್ಟಾಚಾರಗಳಿಗೆ ವಿರುದ್ದವಾಗಿ ಅಕ್ಷರ ಚಳುವಳಿಯನ್ನೇ ಮುನ್ನೆಡೆಸಿದೆ. ರಂಗವಿರೋಧಿತನವನ್ನು ಪ್ರಶ್ನಿಸಿದೆ, ಕನ್ನಡ ರಂಗಭೂಮಿ ಚಟುವಟಿಕೆಗಳನ್ನು ದಾಖಲಿಸುವ ಮೂಲಕ ರಂಗಬೆಳವಣಿಗೆಗೆ ಪರೋಕ್ಷವಾಗಿ ಸಹಕರಿಸಿದೆ. ಯುವ ಬರಹಗಾರರನ್ನು ಪ್ರೋತ್ಸಾಹಿಸಿ ವೇದಿಕೆಯನ್ನೊದಗಿಸಿದೆ. ಈ ಪ್ರತಿಭಟನೆಯ ಅಸ್ತ್ರ ಎಂದೂ ಮೊನಚು ಕಳೆದುಕೊಳ್ಳದಿರಲಿ, ತನ್ನ ಸಾಮಾಜಿಕ ಜವಾಬ್ದಾರಿಯ ಜೊತೆಗೆ ಸಾಂಸ್ಕೃತಿಕ ಹೊಣೆಗಾರಿಕೆಗೂ ಹೆಚ್ಚಿನ ಆದ್ಯತೆ ಕೊಡಲಿ ಎಂದು ಆಶಿಸುತ್ತಾ ೧೫ ವರ್ಷ ತುಂಬಿದ ಈ ಸುಸಂದರ್ಭದಲ್ಲಿ ರಂಗಭೂಮಿಯ ಪರವಾಗಿ “ಅಗ್ನಿ’ಗೆ ವಂದನೆಗಳು ಅಭಿನಂದನೆಗಳು.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ