ಸೋಮವಾರ, ನವೆಂಬರ್ 4, 2013

ಭಾರತ ರಂಗಯಾತ್ರೆಯಲ್ಲಿ ‘ಮಹಾದೇವಿ ಅಕ್ಕ’ :




ನಾಟಕ ವಿಮರ್ಶೆ :




          



    ತರಳಬಾಳು ಶ್ರೀಮಠದ ಸಂಸ್ಥಾಪಕರಾದ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ (1914-1992) ಶತಮಾನೋತ್ಸವದ ಆಚರಣೆಯ ಅಂಗವಾಗಿ ಅವರೇ ರಚಿಸಿದ್ದ  ಶರಣಸತಿ-ಲಿಂಗಪತಿ ಎನ್ನುವ ಕನ್ನಡ ನಾಟಕದ ಹಿಂದಿ ಅವತರಣಿಕೆ ಮೈ ಬಾವರಿ ಚೆನ್ನಕಿ 2013, ಅಕ್ಟೋಬರ್ 11 ರಂದು ಆರ್.ಟಿ.ನಗರದ ತರಳಬಾಳು ಕೇಂದ್ರದಲ್ಲಿ ಶ್ರೀಶ್ ದೋಬಾಲ್ರವರ ನಿರ್ದೇಶನದಲ್ಲಿ ಸಾನೇಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘ ಕಲಾವಿದರಿಂದ ಪ್ರದರ್ಶನಗೊಂಡಿತು. ನಾಟಕದ ಅನುವಾದ ಡಾ.ಅಬ್ದುಲ್ ಹಮೀದ್ರವರದು.
       ಅದು ಶಿವಶರಣೆ ಅಕ್ಕಮಾಹಾದೇವಿಯ ಆತ್ಮಕಥೆ. ಆಕೆ ಹುಟ್ಟಿನಿಂದ ಏಕ್ಯವಾಗುವವರೆಗಿನ ಪ್ರಮುಖ ಘಟನೆಗಳ ಜೊತೆಗೊಂದು ಪಯಣ. ಮಹಾದೇವಿ ಹುಟ್ಟಿದ್ದು, ಮರುಳಸಿದ್ದರು ಲಿಂಗದೀಕ್ಷೆ ಕೊಟ್ಟಿದ್ದು, ಚೆನ್ನಮಲ್ಲಿಕಾರ್ಜುನ ದೇವರನ್ನು ತನ್ನ ಗಂಡ ಎಂದಾಕೆ ನಂಬಿಕೊಂಡಿದ್ದು. ಕೌಶಿಕರಾಜ ಆಕೆಯನ್ನು ಮೆಚ್ಚಿದ್ದು. ಮೂರು ಶರತ್ತುಗಳೊಂದಿಗೆ ಅವನನ್ನು ವಿವಾಹವಾಗಿದ್ದು. ಆತ ಶರತ್ತುಗಳನ್ನು ಮುರಿದಾಗ ಬಟ್ಟೆಗಳನ್ನು ಬಿಸಾಕಿದ ಮಹಾದೇವಿ ಕೇಶವನ್ನು ಹೊದ್ದು ಕಲ್ಯಾಣದ ಅನುಭವ ಮಂಟಪ ಸೇರಿದ್ದು. ಅಲ್ಲಿ ಅಲ್ಲಮನ ಪರೀಕ್ಷೆಗಳಲ್ಲಿ ಪಾಸಾಗಿ ಶ್ರೀಶೈಲದತ್ತ ಚೆನ್ನಮಲ್ಲಿಕಾರ್ಜುನನ ಸನ್ನಿಧಿಗೆ ಪಯಣಿಸಿದ್ದು. ಕೊನೆಗೆ ಕದಳಿವನದಲಿ  ಐಕ್ಯಳಾಗಿದ್ದು. ಹೀಗೆ... ಅಕ್ಕನ ಬದುಕಿನ ಲೆಕ್ಕಗಳನ್ನು  ಘಟನೆಗಳ ಮೂಲಕ ನಾಟಕ ಹೇಳುತ್ತಾ ವಚನಗಳ ಜೊತೆಜೊತೆಗೆ ಸಾಗುತ್ತದೆ. 
          ಚಲನಶೀಲತೆ ನಾಟಕದ ಬಹುಮುಖ್ಯ ದ್ರವ್ಯಗುಣ. ನಿಜವಾದ ಅರ್ಥದಲ್ಲಿ ಇದು ಜಂಗಮ ನಡಿಗೆ. ಯಾಕೆಂದರೆ ಹುಟ್ಟಿದೂರಿನಿಂದ ರಾಜ ಕೌಶಿಕನ ಅರಮನೆಗೆ, ಅಲ್ಲಿಂದ ಕಲ್ಯಾಣದ ಕಡೆಗೆ ಮಹಾದೇವಿಯದು ಏಕಾಂಗಿ ಸಂಚಾರ. ಅನುಭವ ಮಂಟಪದಿಂದ ಶ್ರೀಶೈಲದವರೆಗೆ ಪ್ರಯಾಸದ ಪ್ರಯಾಣ, ಅಲ್ಲಿಂದ ಅಂತಿಮ ಗುರಿ ಕದಳಿವನ. ಅಲ್ಲಿ ಚೆನ್ನಮಲ್ಲಿಕಾರ್ಜುನನಲ್ಲಿ ಐಕ್ಯಳಾಗುವವರೆಗೆ ಅಕ್ಕಮಹಾದೇವಿಯದು ಎಲ್ಲೂ ನೆಟ್ಟಗೆ ನೆಲೆ ನಿಲ್ಲದ ಚಲನೆ
      ಭಕ್ತಿರಸಕ್ಕೊಂದು ದೊಡ್ಡ ರೂಪಕ ಶರಣೆ. ಮೀರಾ ಹೇಗೆ ಕೃಷ್ಣನೇ ತನ್ನ ಸಂಗಾತಿ ಎಂದು ಕೃಷ್ಣನ ಭಜನೆಯಲ್ಲಿ  ಕಾಲಕಳೆದಳೋ ಅದಕ್ಕಿಂತ ಹೆಚ್ಚಾಗಿ ಅಕ್ಕಮಹಾದೇವಿ ಚೆನ್ನಮಲ್ಲಿಕಾರ್ಜುನ ಅಂದರೆ ಶಿವನನ್ನೇ ತನ್ನ ಗಂಡ ಎಂದು ಪರಿಭಾವಿಸಿಕೊಂಡು ಎಲ್ಲಾ ಕಷ್ಟಗಳನ್ನು  ಎದುರಿಸಿ ತನ್ನ ಅಂತಿಮ ಗುರಿ ಮುಟ್ಟಿದಳು. ಇದನ್ನು  ಭಕ್ತಿರಸದ ಪರಾಕಾಷ್ಟೆ ಎನ್ನಬೇಕೋ, ಮಾರ್ಕ್ಸ ಹೇಳಿದ ಹಾಗೆ ದೇವರು ಎನ್ನುವುದೊಂದು ಅಫೀಮಿನ ನಶಾ ಎಂದು ಹೇಳಬೇಕೋ, ಅಥವಾ ಪುರೋಹಿತಶಾಹಿ ಪರಿಕಲ್ಪನೆಗಳ ಪ್ರಕಾರ ಬದುಕು ನಶ್ವರ, ಶಾಶ್ವತವೊಂದೇ ಅದು ಈಶ್ವರ ಎನ್ನುವುದನ್ನು ಒಪ್ಪಿಕೊಳ್ಳಬೇಕೋ... ಎಂಬುದು ಅವರವರ ಭಾವಭಕುತಿಗೆ ಬಿಟ್ಟಿದ್ದು. ಅಲ್ಲಮನ ಹಾಗೆ ಅಕ್ಕಮಾಹಾದೇವಿಯ ಆಲೋಚನೆಗಳೇ ತುಂಬಾ ಸಂಕೀರ್ಣ. ಅವರಿಬ್ಬರ ಬದುಕಿನ ಪಯಣವಂತೂ ಇನ್ನೂ ವಿಕ್ಷಿಪ್ತ. ಆದರೆ ಇಬ್ಬರದೂ ಒಂದೇ ತತ್ವ ಅದು ಬೆತ್ತಲಾಗದೇ ಬಯಲು ಸಿಕ್ಕದಿಲ್ಲಿ, ಸನ್ಯಾಸ ಮತ್ತು ಆಧ್ಯಾತ್ಮಗಳು ಪುರುಷರಿಗಷ್ಟೇ ಅಲ್ಲ ಮಹಿಳೆಯೂ ಸಾಧಿಸಿ ತೋರಿಸಬಲ್ಲಳು ಎಂಬುದಕ್ಕೆ ಅಕ್ಕನ ಬದುಕೆ ಸಾಕ್ಷಿಯಾಗಿದೆ.                                 
     ವ್ಯಕ್ತಿಸ್ವಾತಂತ್ರ್ಯಕ್ಕೊಂದು ಬಹುದೊಡ್ಡ ಪ್ರೇರಣೆ ವೈರಾಗಿಣಿ. ತನಗಿಷ್ಟ ಇಲ್ಲದ್ದನ್ನು ಮಾಡಲು ಒಪ್ಪದ ಮನಸ್ಸು ಆಕೆಯದು. ರಾಜವೈಭೋಗಗಳನ್ನು ತ್ಯಜಿಸಿ, ಇಹದ ಅನುಕೂಲತೆಗಳಿಗೆ ಬೆನ್ನುಹಾಕಿ, ಇರುವುದೆಲ್ಲವ ಬಿಟ್ಟು ಇರದುದರ ಕಡೆಗೆ ಬೆತ್ತಲಾಗಿ ಏಕಾಂಗಿಯಾಗಿ ಹೊರಟ ಇಂತಹ ದಿಟ್ಟ ಮಹಿಳೆ ಬಹುಷಃ ಮನುಕುಲದ ಇತಿಹಾಸದಲ್ಲಿ ಅಕ್ಕಮಹಾದೇವಿಯನ್ನು ಬಿಟ್ಟರೆ ಬೇರ್ಯಾರೂ ಇಲ್ಲ. ಬಹುತೇಕ ಮಹಿಳೆಯರು ತಮ್ಮಿಚ್ಚೆಗಳನ್ನು ಕೊಂದುಕೊಂಡು ಜೀವನಪರ್ಯಂತ ಬೇರೆಯವರ ಇಚ್ಚೆಗನುಗುಣವಾಗಿ ಬದುಕು ಸವೆಸುವಂತಹ ನಮ್ಮ ಮನಕುಲದ ಪುರುಷ ಪ್ರಧಾನ ಚರಿತ್ರೆಯಲ್ಲಿ ಮೊಟ್ಟಮೊದಲ ಬಾರಿ ತನ್ನಿಚ್ಚೆಯಂತೆ ಬದುಕಿ, ತನಗನ್ನಿಸಿದ ಗುರಿ ಮುಟ್ಟಿ ಯಶಸ್ವಿಯಾದವಳು ಮಹಾದೇವಿಅಕ್ಕ. ಲಿಂಗವನ್ನೇ ಪತಿಯಾಗಿ ಸ್ವೀಕರಿಸಿ ಆರಾಧಿಸಿದ ಶರಣೆಸತಿ ಅಕ್ಕಮಹಾದೇವಿ ವ್ಯಕ್ತಿಗತ ಸ್ವಾತಂತ್ರ್ಯವನ್ನು ಎತ್ತಿಹಿಡಿದವಳು. ವ್ಯಕ್ತಿ ಸ್ವಾತಂತ್ರ್ಯದ ಜೊತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ಗಳಿಸಿಕೊಂಡು ವಚನಗಳ ಮೂಲಕ ತನ್ನ ಅನಿಸಿಕೆಗಳನ್ನು ಚರಿತ್ರೆಯಲ್ಲಿ ದಾಖಲಿಸಿದಳು. ಅಕ್ಕನ ಬದುಕಿನ ವಿಕ್ಷಿಪ್ತತೆಗಿಂತಲೂ ಅವಳ ವಚನಗಳು ವಿಶಿಷ್ಟವಾಗಿವೆ.  
          ಆದರೆ..... ಶರಣರ ಲಿಂಗನಿಷ್ಟೆಯನ್ನು ಬಲು ನಿಷ್ಟೆಯಿಂದ ಪರಿಪಾಲಿಸಿದ ಅಕ್ಕಮಹಾದೇವಿ ಅದ್ಯಾಕೆ ಶರಣರ ಕಾಯಕನಿಷ್ಟೆಯನ್ನು ನಿರಾಕರಿಸಿದಳು?. ಕಾಯಕದಲ್ಲಿ  ಕೈಲಾಸ ಕಾಣುವ ಬದಲು ಭ್ರಮೆಯೆಂಬ ಭ್ರಮರದ ಬೆನ್ನೇರಿ ಚೆನ್ನಮಲ್ಲಿಕಾರ್ಜುನನ್ನು ಹುಡುಕಿ ಹೊರಟಳು? ಬಸವಾದಿ ಶರಣರು ವಾಸ್ತವಕ್ಕೆ ಹತ್ತಿರವಾದ ಸಿದ್ದಾಂತವನ್ನು ಪ್ರತಿಪಾದಿಸಿದರು, ಅದು ಕಾಯಕ ಸಿದ್ದಾಂತ. ಆದರೆ ಅಕ್ಕಮಹಾದೇವಿಯದು ಅವಾಸ್ತವದ ಹುಡುಕಾಟ. ದೇಹವೇ ದೇಗುಲ ಎಂದು ಭೌತಿಕ ದೇಹಕ್ಕೆ ದೈವತ್ವವನ್ನು ಕೊಟ್ಟು ಗೌರವಿಸಿದವರು ಬಸವಣ್ಣ. ಆದರೆ ಅಮೇಧ್ಯದ ಮಡಕೆ, ಮೂತ್ರದ ಕುಡಿಕೆ, ಎಲುವಿನ ತಡಿಕೆ, ಕೀವಿನ ಹಡಿಕೆ, ಸುಡಲೀ ದೇಹವ, ಒಡಲುವಿಡಿದು ಕೆಡದಿರು ಮರುಳೆ ಎಂದು ದೇಹವನ್ನೇ ತುಚ್ಚೀಕರಿಸಿ ಆತ್ಮಸಾಕ್ಷಾತ್ಕಾರವೇ ಬದುಕಿನ ಗುರಿಯನ್ನಾಗಿಸಿಕೊಂಡವಳು ಮಹಾದೇವಿ. ನನಗೇಕಯ್ಯಾ? ಪ್ರಯೋಜನವೇನಯ್ಯಾ? ಹಂಗೇಕಯ್ಯಾ? ಎಂದು ಬಹುತೇಕ ವಚನಗಳಲ್ಲಿ ಭೌತಿಕವಾದ ಎಲ್ಲವನ್ನೂ ನಿರಾಕರಿಸುತ್ತಾಳೆ.  ಇದೆಲ್ಲವನ್ನೂ ಗಮನಿಸಿದರೆ, ಬಸವಣ್ಣನದು ಲೌಕಿಕ ತಾರ್ಕಿಕ ಸಿದ್ದಾಂತ, ಆದರೆ ಮಹಾದೇವಿ ಅಕ್ಕನದು ಅಲೌಕಿಕ ಅತಾರ್ಕಿಕ ಸಿದ್ದಾಂತ ಎಂದು ಅನ್ನಿಸದೇ ಇರದು. ಬಸವ ಸಾಮಾಜದ ಪ್ರವರ್ತಕನಾದರೆ ಅಕ್ಕ ಸಮಾಜಕ್ಕೆ ವಿಮುಖಳಾಗಿ ವ್ಯಯಕ್ತಿಕವಾದ ಆಂತರಿಕ ಆತ್ಮ ಸಾಧನೆಗೆ ಪ್ರತೀಕವಾಗಿದ್ದಾಳೆ. ಅಕ್ಕಮಹಾದೇವಿಯ ಬದುಕಿನ ನಾಟಕ ನೋಡಿದಾಗ ಎಲ್ಲಾ ಸಂದೇಹಗಳು ಕಾಡತೊಡಗುತ್ತವೆ.
          ಸರ್ವಸಂಗ ಪರಿತ್ಯಾಗಿನಿಯಾಗಿ ಲಿಂಗಸಂಗವನು ಬಯಸಿದ ಮಹಾದೇವಿ ಬದುಕು ನಿಜಕ್ಕೂ ವಿಚಿತ್ರ ಮತ್ತು ವಿಕ್ಷಿಪ್ತ. ಆಕೆಯ ವಚನಗಳ ಸಂಕೇತಿಕತೆಯನ್ನಾಧರಿಸಿ ಊಹಿಸಲಾದ ಬದುಕು ಹೇಳುವುದಕ್ಕೆ ಕೇಳುವುದಕ್ಕೆ ನೋಡುವುದಕ್ಕೆ ಚೆನ್ನ ಆದರೆ ಅನುಕರಿಸುವುದಕ್ಕೆ ಅಸಾಧ್ಯ. ಹೀಗಾಗಿ ಅಕ್ಕಮಹಾದೇವಿಯನ್ನು ನಾಟಕದಲ್ಲಿ ಕಟ್ಟಿಕೊಡಬೇಕಾದರೆ ಆಕೆಯ ಆತ್ಮಕಥೆಯ ಬದಲು ವಚನಗಳನ್ನೇ ಕೇಂದ್ರೀಕರಿಸಿದ್ದರೆ ಅನುಕರಣೀಯವಾಗಬಹುದಾಗಿತ್ತು. ಮಹಾದೇವಿಯ ಶಕ್ತಿ ಇರುವುದು ಆಕೆಯ ಬದುಕಿನ ಆಚರಣೆಗಳಲ್ಲಲ್ಲ  ಆಕೆಯ ವಿಚಾರಗಳಲ್ಲಿ. ಅಕ್ಕ ನಮಗೆ ದಕ್ಕುವುದು ಅನುಭಾವ ಮತ್ತು ಕಾವ್ಯಾಭಿವ್ಯಕ್ತಿಯಿಂದಾಗಿ. ಆದರೆ ನಾಟಕದಲ್ಲಿ ಅಕ್ಕನ ಆತ್ಮಕಥೆಯನ್ನು ಹೇಳುವ ಪ್ರಯತ್ನ ನಡೆದಿದೆ. ಪೂರಕವಾಗಿ ವಚನಗಳನ್ನು ಬಳಸಲಾಗಿದೆ         
    ನಿಜಾರ್ಥದಲ್ಲಿ ನಾಟಕದಲ್ಲಿ ಪ್ರಸ್ತುತಗೊಂಡ ಅಕ್ಕಮಹಾದೇವಿಗೆ ಸಂಬಂಧಿಸಿದ ಆತ್ಮಕಥೆಯೇ ಅಂತೆಕಂತೆಗಳ ಸಂತೆ. ಯಾಕೆಂದರೆ ಮಹಾದೇವಿ ಹುಟ್ಟಿದ ಊರು, ಆಕೆಯ ಹೆತ್ತವರು ಯಾರು? ಎಂಬುದು ಗೊತ್ತಿಲ್ಲ.  ಆಕೆಯ ವಚನಗಳಲ್ಲಿ  ಅಕ್ಕನ ಹಿನ್ನೆಲೆ ಕುರಿತು ಸ್ಪಷ್ಟ ಕುರುಹುಗಳೂ ಇಲ್ಲ, ಕೌಶಿಕ ರಾಜನ ಪ್ರಸ್ತಾಪವೂ ಇಲ್ಲ. ವೈಯಕ್ತಿಕ ವಿಚಾರಗಳನ್ನು ಆಕೆ ಎಲ್ಲೂ ನೇರವಾಗಿ ಹೇಳಿಕೊಂಡಿಲ್ಲ. ಉಡಿತಡಿಯಲ್ಲಿ ಮಲ್ಲಿಕಾರ್ಜುನನ ಗುಡಿ ಇರುವುದರಿಂದ ಅದೇ ಅವಳೂರೆಂದು ಆಕೆಯ ನಂತರ ಬಂದ ಹರಿಹರಾದಿ ಕವಿಗಳು ಊಹಿಸಿದ್ದಾರೆ. ವಚನಗಳಲ್ಲಿಯ ಸಾಂಕೇತಿಕತೆಗಳನ್ನಿಟ್ಟುಕೊಂಡು ಅಕ್ಕನ ಹುಟ್ಟು, ಬೆಳವಣಿಗೆ, ಮದುವೆ ಮುಂತಾದ ಕುರಿತು ಕಥೆ ಕಟ್ಟಲಾಗಿದೆಯಾದರೂ ಯಾವುದೂ ಅಧಿಕೃತವಲ್ಲ. ವಚನಗಳನ್ನು ಹೊರತುಪಡಿಸಿ ಬೇರೆ ಸಾಕ್ಷಗಳಿಲ್ಲ. ಆಕೆ ಸಾಂಕೇತಿಕವಾಗಿ ಮಾನಸಿಕವಾಗಿ ಬೆತ್ತಳಾದಳೇ ಹೊರತು ನಿಜಾರ್ಥದಲ್ಲಿ ಅಲ್ಲ ಎನ್ನುವುದಕ್ಕೆ  ಅಕ್ಕ ತನ್ನ ವಚನದಲ್ಲಿ ಕಟ್ಟಿಕೊಂಬಡೆ ತಿಪ್ಪೆಯ ಮೇಲೆ ಅರಿವೆ ಉಂಟು ಎಂದು ಹೇಳುತ್ತಿರಲಿಲ್ಲ. ಮಾತು ನಾಟಕದಲ್ಲೂ ಬಂದಿದೆ. ಏನೇ ಆದರೂ ಅಕ್ಕಮಹಾದೇವಿಗೂ ಒಂದು ಕಥೆ ಕಟ್ಟಿ ಹೇಳಲಾಗುತ್ತದೆ. ಅದು ನಾಟಕವೂ ಆಗುತ್ತದೆ. ಬರುಬರುತ್ತಾ ಅವೆಲ್ಲಾ ಸತ್ಯವೆಂದು ಅನ್ನಿಸತೊಡಗುತ್ತದೆ. ಜನ ಅದನ್ನೇ ನಂಬಿಕೊಂಡು ಬಿಡುತ್ತಾರೆ.
         ನಾಟಕದ ವಸ್ತು ವಿಷಯದ ಸತ್ಯಾಸತ್ಯತೆಗಳನ್ನು ಬದಿಗಿಟ್ಟು ನಾಟಕ ಪ್ರಯೋಗಕ್ಕೆ ಬಂದರೆ..... ರೀತಿಯಲ್ಲಿ ನಾಟಕವನ್ನು ಮಾಡಿಸಲು ಉತ್ತರಾಖಾಂಡದಿಂದ ನಿರ್ದೇಶಕರನ್ನು ಕರೆಸಬೇಕಿತ್ತೆ?. ಏನೇನೂ ವಿಶೇಷತೆ ಇಲ್ಲದಂತಹ  ನಿಸ್ಸಾರವಾದ ನಾಟಕ ಕಟ್ಟಲು  ಶ್ರೀಶ್ ದೋಬಾಲ್ರವರೇ ಬೇಕಾಗಿತ್ತೆ? ಎಂಬ ಸಂದೇಹ ಕಾಡುತ್ತದೆ. ಎನ್ಎಸ್ಡಿ ಪದವೀಧರರೊಬ್ಬರು ನಾಟಕ ನಿರ್ದೇಶಿಸಿದ್ದಾರೆಂದರೆ ನೋಡುಗರಲ್ಲಿ ನಿರೀಕ್ಷೆಗಳು ಹೆಚ್ಚುತ್ತವೆ. ಆದರೆ ನಿರೀಕ್ಷೆಗಳೆಲ್ಲಾ ನಿರಾಶೆಯಾಗಿ ಬದಲಾಗಿದ್ದಂತೂ ಸುಳ್ಳಲ್ಲ. ನಾಟಕದಲ್ಲಿ ಹೇಳಿಕೊಳ್ಳುವಂತಹ ರಂಗತಂತ್ರಗಳೂ ಇಲ್ಲಾ, ಉತ್ತರಾಖಾಂಡದ ನಿರ್ದೇಶಕರಿಗೆ ಉತ್ತರ ಕರ್ನಾಟಕದ ಶರಣರು ಮತ್ತು ಶರಣ ಸಂಸ್ಕೃತಿ ಅರ್ಥವೂ ಆಗಿಲ್ಲಾ
     ಯಾಕೆಂದರೆ ಉತ್ತರ ಭಾರತೀಯ ಐತಿಹಾಸಿಕ ಶೈಲಿಯ ಕಾಸ್ಟೂಮ್ಗಳನ್ನು  ನಾಟಕದ ಪಾತ್ರಗಳಿಗೆ ತೊಡಿಸಲಾಗಿದ್ದು ಆಭಾಸಕಾರಿಯಾಗಿದೆ. ನಾಟಕದ ಅಲ್ಲಮನ ವೇಷ ಗುಹೇಶ್ವರನಿಗೆ ಪ್ರೀತಿ. ಚಿಕ್ಕ ಚಿಕ್ಕ ದೃಶ್ಯಗಳು, ಅನೇಕ ಬ್ಲಾಕ್ಔಟ್ಗಳು ನಾಟಕದ ಓಟಕ್ಕೆ ಅಡೆತಡೆಯಾಗಿವೆ. ಮಹಾದೇವಿಯ ಮನೆಗೆ ಹೆಣ್ಣು ಕೇಳಲು ರಾಜಪರಿವಾರದವರು ಬರುವ  ಒಂದೇ ದೃಶ್ಯ ಎರಡು ಸಲ ರಿಪೀಟ್ ಮಾಡುವ ಅಗತ್ಯವೇ ಇರಲಿಲ್ಲ. ಮಹಾದೇವಿಯನ್ನು ಕೌಶಿಕ ರಾಜ ಮದುವೆಯಾಗುತ್ತಾನೆಂದು ತಿಳಿದ ಪಂಡಿತ ಮತ್ತು ಪೂಜಾರಿ ಆಕೆಯ ಮದುವೆ ಆಗದ ಹಾಗೆ ತಡೆಯಬೇಕು ಎಂದು ಹೇಳುತ್ತಾರೆ. ಆಮೇಲೆ ನಾಟಕದಿಂದ ಎರಡು ಪಾತ್ರಗಳೇ ಮಾಯವಾಗಿ ಒಂದು ಲಿಂಕ್ ತಪ್ಪಿದಂತಾಗಿದೆ.  ಇಲ್ಲವೇ ಅನಗತ್ಯವಾಗಿ ಪಂಡಿತರ ದೃಶ್ಯ ಸೃಷ್ಟಿಸಿದಂತಿದೆ. ರಾಜ ಯಾವುದೋ ಕಾಡಲ್ಲಿ ಕ್ರೂರ ಮೃಗಗಳ ಬೇಟೆಗೆ ಹೋದರೆ ಊರಲ್ಲಿರೋ ಬಾಲಕಿ ಮಹಾದೇವಿ ಇದ್ದಕ್ಕಿದ್ದಂತೆ ಕಾಡಿಗೆ ಹೋಗಿ ಹಾಡುತ್ತಿರುತ್ತಾಳೆ. ಅವಳ ಹಿಂದೆ ಅಕಾರಣವಾಗಿ ಪಂಡಿತ ಪೂಜಾರಿಗಳು ಬೆನ್ನತ್ತಿರುತ್ತಾರೆ. ಇದಕ್ಕೆ ನಾಟಕದಲ್ಲಿ ಯಾವ ಸಮರ್ಥನೆಗಳೂ ಇಲ್ಲ. ಮಹಾದೇವಿಗೆ ಮಾಮೂಲಿ ಎಲ್ಲರಿಗಿರುವಷ್ಟೇ ಕೂದಲು ಇರುತ್ತವೆ. ಆದರೆ ಕೌಶಿಕ ಸೀರೆ ಸೆಳೆದ ನಂತರ ಮೈಯೆಲ್ಲಾ ಕೂದಲಿರುವ ಬಟ್ಟೆ ಹಾಕಿ ಮಹಾದೇವಿ ಬರುತ್ತಾಳೆ. ಇದು ಕೃತಕವೆನಿಸುವಂತಿದೆ. ಮೊದಲೇ ಉದ್ದವಾದ ಕೂದಲು ಇರುವಂತೆ ನೋಡಿಕೊಳ್ಳಬೇಕಿತ್ತು. ಆಮೇಲೆ ಅದಕ್ಕಿನ್ನೊಂದಿಷ್ಟು ಸೇರಿಸಿ ಮೈತುಂಬಾ ಮಾಡಬಹುದಾಗಿತ್ತು. ನಾಟಕದ ದೃಶ್ಯಗಳ ಬ್ಲಾಕಿಂಗ್ ಅಂತೂ, ಅದರಲ್ಲೂ ಅನುಭವ ಮಂಟಪದ ಬ್ಲಾಕಿಂಗ್ ದೃಶ್ಯಗಳಿಗೆ ಪೂರಕವಾಗಿರದೇ ಮಾರಕವಾಗಿದೆ ಎನ್ನಿಸುತ್ತದೆ.  ಕಂಟಿನ್ಯೂಟಿ ಸಮಸ್ಯೆಗಳಂತೂ ನಾಟಕದಾದ್ಯಂತ ಢಾಳಾಗಿ ಕಾಣಿಸುವಂತಿವೆ.   
   ಈಗಾಗಲೇ ಜನಜನಿತವಾಗಿರುವ ಕಥೆಯನ್ನು ಇದ್ದಂತೆ ಹೇಳುವುದಾಗಿದ್ದರೆ ಅದರಲ್ಲೇನು ವಿಶೇಷ?. ನಾಟಕೀಯತೆಗಳಿರದಿದ್ದರೆ ನಾಟಕಯಾಕಾಗಬೇಕು?, ಅದಕ್ಕೆ ಎನ್ಎಸ್ಡಿ ನಿರ್ದೇಶಕರೇ ಯಾಕೆ ಬೇಕು? ಎನ್ನುವ ಪ್ರಶ್ನೆ ನೋಡುಗರನ್ನು ಕಾಡದಿರದು. ಸೆಟ್ನಲ್ಲಿ ಯಾವುದೇ ವಿಶೇಷವಿಲ್ಲ ಅನ್ನುವುದಕಿಂತಲೂ ಕದಳಿ ಮಾದರಿಯ ಪುಟ್ಟ ವೃಕ್ಷಗಳನ್ನು ಬಿಟ್ಟು ಸೆಟ್ ಎನ್ನುವುದೇ ಇರಲಿಲ್ಲ. ಮನೆಯಿರಲಿ  ಅರಮನೆಯಿರಲಿ ಬಯಲಿರಲಿ ಕಾಡಿರಲಿ ಅವೇ ವೃಕ್ಷಗಳು ಎಲ್ಲಾ ದೃಶ್ಯಗಳಲ್ಲೂ ಬಳಕೆಯಾಗಿ ಏಕತಾನತೆ ಸೃಷ್ಟಿಸಿದಂತಾಗಿದೆ. ರಂಗವೇದಿಕೆಯ ಬಳಕೆ ಸರಿಯಾಗಿ ಮಾಡಲಾಗಿಲ್ಲ. ಸ್ಟೇಜಿನ ಬಲಮಧ್ಯದಲ್ಲಿ ಘಟನೆ ನಡೀತಿದ್ದರೆ ವೇದಿಕೆಯಾದ್ಯಂತ ಬೆಳಕಿರುತ್ತದೆ, ಬೆಳಕಲ್ಲಿ ಹಿಂದಿನ ದೃಶ್ಯದಲ್ಲಿಲ್ಲದ ಮಂಚ ಕಾಣುತ್ತಿರುತ್ತದೆ.
     ಮಹಾದೇವಿ ಪಾತ್ರದಾರಿಯನ್ನು ಹೊರತು ಪಡಿಸಿ ಬೇರೆಲ್ಲಾ ಪಾತ್ರದಾರಿಗಳಿಗೆ ದೇಹಭಾಷೆಯನ್ನು ಬಳಸು ವುದನ್ನೂ ಹೇಳಿಕೊಟ್ಟಿಲ್ಲ, ಮೂಲಭೂತವಾಗಿ ಬೇಕಾದ ಎನರ್ಜಿಯೇ ನಟರಿಗಿರಲಿಲ್ಲ. ನಟರನ್ನು ತಯಾರಿ ಮಾಡುವಲ್ಲಿ, ಅವರ ಅಭಿನಯ ಪ್ರತಿಭೆಯನ್ನು ಬಳಸಿಕೊಳ್ಳುವುದರಲ್ಲಿ, ಗುಂಪು ಬಳಕೆಯಲ್ಲಿ,  ದೃಶ್ಯಗಳನ್ನು ಸಮರ್ಥವಾಗಿ ಕಟ್ಟಿಕೊಡುವಲ್ಲಿ ನಿರ್ದೇಶಕರು ಅಸಫಲ ರಾಗಿದ್ದಾರೆ. ನಾಟಕವನ್ನು ಅರ್ಥಮಾಡಿ ಕೊಳ್ಳುವುದರಲ್ಲಿ ಮತ್ತು ಅರ್ಥಮಾಡಿಸಿಕೊಡುವುದರಲ್ಲಿ ವಿಫಲರಾಗಿದ್ದಾರೆ. ಆದರೆ ಕಟ್ಟಕಡೆಗೆ ಅಕ್ಕಮಹಾದೇವಿ ಅನಂತ ಚೇತನದಲ್ಲಿ ಐಕ್ಯಳಾಗುವ ದೃಶ್ಯಮಾತ್ರ ಸೊಗಸಾಗಿ ಮೂಡಿಬಂದಿದೆ. ಬರೀ ಭಾಷೆಯ ಕಾರಣಕ್ಕೆ ಶ್ರೀಶ್ ದೋಬಾಲ್ ರನ್ನು ನಿರ್ದೇಶಕರನ್ನಾಗಿಸಲಾಗಿದೆ ಎಂದೆನಿಸುತ್ತದೆ. ಆದರೆ  ಬಸವ ಕಾಲದ ಶರಣ ಸಂಸ್ಕೃತಿಯ ಅರಿವಿದ್ದವರಿಗೆ ನಿರ್ದೇಶಿಸಲು ಅವಕಾಶಕೊಟ್ಟಿದ್ದರೆ ಬಹುಷಃ ಎಲ್ಲಾ ಅಸಮಂಜಸಗಳು ಆಗುತ್ತಿರಲಿಲ್ಲವೇನೋ. ಏನೇ ಆದರೂ ಹಿತ್ತಲ ಗಿಡ ಮದ್ದಲ್ಲ ಎಂದುಕೊಂಡರೆ ಹೀಗೆ ಆಗುವುದು ಅನ್ನಿಸುತ್ತದೆ.
        ನಾಟಕವನ್ನು ಸಹ್ಯವಗಿಸಿದ್ದು ಹಿನ್ನೆಲೆ ಸಂಗೀತ ಮತ್ತು ಹಾಡುಗಳು. ಅಕ್ಕಮಹಾದೇವಿಯ ವಚನಗಳು ದಾಕ್ಷಾಯಣಿಯವರ ಕಂಠದಲ್ಲಿ ಸುಶ್ರಾವ್ಯವಾಗಿ ಮೂಡಿ ಬಂದಿವೆ. ನಾಟಕ ಎಲ್ಲಾ ವಿಭಾಗಗಳಲ್ಲೂ ಸೋತರೂ ಹಾಡು ಸಂಗೀತ ವಿಭಾಗದಲ್ಲಿ  ಗೆದ್ದಿದೆ.
          ನಾಟಕ ಕೇವಲ ಒಂದೆರಡು ಪ್ರಯೋಗಗಳಲ್ಲಿ ಮುಗಿಯುತ್ತಿಲ್ಲ. ಭಾರತದಾದ್ಯಂತ 18 ರಾಜ್ಗಗಳಲ್ಲಿ 42ಕ್ಕೂ ಹೆಚ್ಚು ಪ್ರದರ್ಶನಗಳಾಗುತ್ತಿವೆ. ಸಾಣೆಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘದಿಂದ  ಶಿವ ದೇಶ ಸಂಚಾರ ಹೆಸರಲ್ಲಿ ಮಹತ್ತರವಾದ ರಂಗಯಾತ್ರೆಯನ್ನೇ ಡಾ.ಪಂಡಿತಾರಾಧ್ಯ ಸ್ವಾಮಿಗಳು ಹಮ್ಮಿಕೊಂಡಿದ್ದಾರೆ. ಆದರೆ ನಾಟಕವನ್ನು ಪರಿಷ್ಕರಿಸದೇ ಹೀಗೆ ಪ್ರದರ್ಶನಗೊಳಿಸಿದರೆ ಯಶಸ್ವಿಯಾಗುವುದು ಅಸಾಧ್ಯ. ಅಕ್ಕಮಹಾದೇವಿ ಬಗ್ಗೆ ಏನೇನು ಗೊತ್ತಿಲ್ಲದ ಹೊರರಾಜ್ಯದ ಪ್ರೇಕ್ಷಕರಿಗೆ ಮಹಾನ್ ಚೇತನವನ್ನು    ರೀತಿಯಾಗಿ ಪೇರಲವಾಗಿ ಹೇಳಿ ಅರ್ಥೈಸುವುದು  ಕಷ್ಟಸಾಧ್ಯ. ಪ್ರದರ್ಶನದಿಂದ ಪ್ರದರ್ಶನಕ್ಕೆ ಬದಲಾಗುವುದೇ ನಾಟಕದ ಗುಣ. ಹೀಗಾಗಿ ಬರುಬರುತ್ತಾ ಬದಲಾಗಬಹುದೇನೋ ಎಂದು ನಿರೀಕ್ಷಿಸಬಹುದು.
                                   -ಶಶಿಕಾಂತ ಯಡಹಳ್ಳ


         
         


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ